Connect with us

ಲೈಫ್ ಸ್ಟೈಲ್

ಹಣೆಬರಹ ಪೂರ್ವ – ನಿಯೋಜಿತವೇ..?

Published

on

ದಾ ಸ್ವರ್ಗ ಹಾಗೂ ನರಕದ ಆಮಿಷ ಹಾಗೂ ಭಯಕ್ಕೆ ಒಳಗಾಗಿ ಅತೀವ ಧಾರ್ಮಿಕತೆಗೆ ಒಳಗಾದ ಮಂದಿ ಜನರಲ್ ಆಗಿ ಒಪ್ಪುವ ಕಾಮನ್ ಸಂಗತಿಯೆಂದರೆ “ಹಣೆಬರಹ”. ನಾವು ಇಲ್ಲಿ ಹುಟ್ಟಿದ್ದು ನೆಪ ಮಾತ್ರ , ಎಲ್ಲವೂ ಅವನಾಡಿಸಿದಂತೆ ಆಡುವ ಆಟ. ಹೀಗೆ ಸದಾ ಜೀವನದಲ್ಲಿ ಈ ರೀತಿಯ ಯೋಚನೆಯಲ್ಲೇ ಅಥವ ಜಿಗುಪ್ಸೆಯನ್ನೇ ತುಂಬಿ ಬದುಕುವ ಮಂದಿ ಎಲ್ಲವೂ ಪೂರ್ವನಿಯೋಜಿತಗೊಂಡಂತೆ ನಮ್ಮ ಬದುಕಿನಲ್ಲಿ ನಡೆಯುತ್ತದೆ ಅದನ್ನು ತಪ್ಪಿಸಲು ಹಣೆಬರಹ ಬರೆದವನಿಂದಲೂ ಸಾಧ್ಯವಿಲ್ಲ ಎಂದು ಬಹಳ ಗಟ್ಟಿಯಾಗಿ ನಂಬುತ್ತಾರೆ.

ಇದಕ್ಕಾಗಿ ಪುರಾಣದ ಪುಟಗಳಿಂದ ಒಂದೆರಡು ಉದಾಹರಣೆಯಾಗಿ ಕಥೆಗಳನ್ನೂ ಉಲ್ಲೇಖ ಮಾಡುತ್ತಾರೆ. ಎಲ್ಲವೂ ಪೂರ್ವನಿಯೋಜಿತ ಹಾಗೂ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ “ಹಣೆಬರಹ”ವನ್ನೇ ಒಂದು ಸುತ್ತು ಹಾಕಿಕೊಂಡು ಬರೋಣ.

ನನಗೆ ಒಳ್ಳೆಯದಾಗಲಿ, ಕುಟುಂಬಕ್ಕೆ ಶ್ರೇಯಸ್ಸಾಗಲಿ, ವಿಧ್ಯಾರ್ಥಿಗಳಿಗೆ ಶ್ರೇಯಸ್ಸಾಗಲಿ (ನಮ್ಮ ವಿಟ್ಲದಲ್ಲಿ ಈಗ ವಿಧ್ಯಾರ್ಥಿಗಳ ಕ್ಷೇಮಕ್ಕಾಗಿ ಕಾಲೇಜಿನಲ್ಲೇ ಹೋಮ ನಡೆಯುವ ತಯಾರಿ ನಡೆಯುತ್ತಿದೆ), ದೋಷ ಕಳೆಯಲಿ, ದುಡ್ಡು ಬರಲಿ, ಲಾಸ್ ಆಗದಿರಲಿ, ಆರೋಗ್ಯ ವೃದ್ಧಿಸಲಿ, ಅಯಸ್ಸು ವೃದ್ಧಿಸಲಿ, ಮರಣದ ದವಡೆಯಿಂದ ತಪ್ಪಿಸಿಕೊಳ್ಳಲಿ, ನನ್ನ ವೈರಿ ಸಾಯಲಿ ಅಥವಾ ಹಾಳಾಗಿ ಹೋಗಲಿ ಎಂದು ಹರಕೆ, ಇತ್ಯಾದಿ ಬೇಡಿಕೆಗಳನ್ನಿಟ್ಟು ವಿಧ ವಿಧ ಬಗೆಯ ಆಚರಣೆ, ಪೂಜೆ, ಆರಾಧನೆಗಳೆಲ್ಲಾ ನಡೆಯುತ್ತದೆ. ಇದರ ಜೊತೆಗೆ ಮನೆಗಳಲ್ಲಿ ಶಾಂತಿ ನೆಲಸಲಿ ಎಂದು ಹೋಮ ಕೂಡಾ ಸೇರ್ಪಡೆಗೊಳಿಸಬಹುದು.

ಎಲ್ಲವೂ ನಿಮ್ಮ ನಿಮ್ಮ ಧಾರ್ಮಿಕ ನಂಬಿಕೆ. ಅದರಲ್ಲಿ ಎರಡು ಮಾತಿಲ್ಲ, ಆದರೆ ಇಲ್ಲಿ ಪ್ರಶ್ನೆ ಏನೆಂದರೆ, ಈ ಎಲ್ಲಾ ಆಚರಣೆ, ಆರಾಧನೆ, ಪೂಜೆ ನಡೆಸುವ ಉದ್ದೇಶದ ಬಗ್ಗೆ? ಇದನ್ನೆಲ್ಲಾ ಮಾಡಿದರೆ ನಮಗೆ ಒಳ್ಳೆಯದಾಗುತ್ತದೆ ಅಥವಾ ಕೆಟ್ಟದಾಗುವುದು ಬೇಡ ಎಂಬುದೊಂದೇ ಉದ್ದೇಶವಲ್ಲವೆ? ಲೋಕಕಲ್ಯಾಣಕ್ಕಾಗಿ ಎಂಬ ಹಣೆಪಟ್ಟಿಹೊತ್ತು ನಡೆಸುವ ಆಚರಣೆಗಳಲ್ಲೂ ನಾನು, ನೀವು ಆ ಲೋಕದಲ್ಲಿ ಸೇರ್ಪಡೆಗೊಂಡಿದ್ದೇವೆ ಎಂಬುದೂ ಸತ್ಯವಲ್ಲವೆ?

ಈಗ ಹಣೆಬರಹಕ್ಕೆ ಬರೋಣ. ಎಲ್ಲವೂ ಪೂರ್ವನಿಯೋಜಿತ, ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ, ಅದು ಸೃಷ್ಟಿಕರ್ತನ ನಿಯಮ ಎನ್ನುವುದನ್ನೂ ನೀವು ನಂಬುವುದಾದರೆ, ಈ ಒಳ್ಳೆಯದಾಗಲಿ, ಕೆಟ್ಟದಾಗುವುದು ಬೇಡ ಎಂಬ ಆಸೆ, ಆತಂಕಕ್ಕೆ ಒಳಗಾಗಿ ಪೂಜೆ, ಆಚರಣೆ ನಡೆಸುವ ಅಗತ್ಯವಾದರೂ ಏನು? ನೀವು ಹುಟ್ಟಿದಾಗಲೇ ನಿಮ್ಮ ಸ್ಕ್ರಿಪ್ಟ್ ತಯಾರಾಗಿಯೇ ಬಂದಿದ್ದಲ್ಲವೆ? (ನನ್ನ ಪ್ರಕಾರವಲ್ಲ ನಿಮ್ಮ ಪ್ರಕಾರವೇ ಈ ಮಾತು). ಹಣೆಬರಹವನ್ನು ತಿದ್ದಲು, ಬದಲಾಯಿಸಲು ಸಾಧ್ಯವಿಲ್ಲವೆಂದರೆ ಈ ಪೂಜೆ, ಆಚರಣೆ, ಪ್ರಾರ್ಥನೆಗಳಿಂದ ನಿಮಗೆ ಒಳ್ಳೆಯದು ಹೇಗಾಗುತ್ತದೆ? ನಿಮಗೆ ಏನಾಗಬೇಕೋ ಅದು ಈಗಾಗಲೇ ಫಿಕ್ಸ್ ಆಗಿದೆ ಎಂದ ಮೇಲೆ ನಿಮಗೆ ಅನಗತ್ಯ ಚಿಂತೆ ಯಾಕೆ? ಈ ಗ್ರಹಣ ಸಂಧರ್ಭವನ್ನೂ ಸೇರಿಸಿಕೊಳ್ಳಿ, ಆ ರಾಶಿಯವನಿಗೆ ಹಾಗಾಗುತ್ತದೆ, ಈ ರಾಶಿ, ನಕ್ಷತ್ರದವನಿಗೆ ಹೀಗಾಗುತ್ತದೆ ಎಂದು ದೇವಸ್ಥಾನದಲ್ಲಿ ಕ್ಯೂ ನಿಂತು ನೂರೈವತ್ತರಿಂದ ಐನೂರು ಸಾವಿರದವರೆಗೂ ದುಡ್ಡು ಎಣಿಸಿ ಪೂಜೆ, ಅಭಿಷೇಕ ಮಾಡುವುದರಿಂದ ನಿಮ್ಮ ಹಣೆಬರಹ ಬದಲಾಗಿ ನಿಮಗೆ ಒಳ್ಳೆಯದಾಗುವು ದಾದರೂ ಹೇಗೆ?
ಒಂದೋ ಹಣೆಬರಹ ಅನ್ನೋದೇ ಸುಳ್ಳು. ಇಲ್ಲ ಹಣೆಬರಹ ಎಡಿಟ್ ಮಾಡುವುದು ಸಾಧ್ಯವಿಲ್ಲ, ಅಥವಾ ಎಡಿಟ್ ಮಾಡಬಹುದು.

ಈ ಮೂರರಲ್ಲಿ ಯಾವುದಾದರೂ ಒಂದು ನಿಲುವು ನಿಮ್ಮದಾಗಿರಬೇಕು. ನಿಮ್ಮ ನಂಬಿಕೆ ಪ್ರಕಾರ ಎಡಿಟಿಂಗ್ ಸಾಧ್ಯವೇ ಇಲ್ಲ. ಹಾಗಿದ್ದೂ ಈ ಎಡಿಟಿಂಗ್ ಮಾಡುವುದಕ್ಕೆ ಪೂಜೆ, ಅಭಿಷೇಕ ಎಲ್ಲಾ ಮಾಡೋ ಅಗತ್ಯವಾದರೂ ಏನು? ಇಲ್ಲಿ ನಿಮ್ಮ ಧಾರ್ಮಿಕ ನಂಬಿಕೆಗಳ ಬಗ್ಗೆ ತಕರಾರಿಲ್ಲ, ಆದರೆ ಪ್ರಶ್ನೆ, ನಿಮ್ಮಲ್ಲಿರುವ ಗೊಂದಲದ ಬಗ್ಗೆ ಅಥವಾ ದ್ವಂದ್ವ ನೀತಿಯ ಬಗ್ಗೆ. ಹಾಗೊಂದು ವೇಳೆ ದೇವರು ಮನಸ್ಸು ಮಾಡಿದರೆ ಹಣೆಬರಹ ಬದಲಾಗುತ್ತದೆ ಎನ್ನುವುದಾದರೆ ಅದನ್ನು ಅಪ್ರೋಚ್ ಮಾಡುವ ಬಗೆ ಹೇಗೆ?

ಹೀಗೆ ಪೂಜೆ, ಅಭಿಷೇಕ ಮಾಡುವುದರಿಂದ, ಅಂದರೆ ಥ್ರೂ ಪರ್ಟಿಕುಲರ್ ಪರ್ಸನ್ , ದೇವರಿಗೆ ಅವಹಾಲು ಸಲ್ಲಿಸುವುದರಿಂದ ನಿಮ್ಮ ಹಣೆಬರಹ ಎಡಿಟಿಂಗ್ ಮಾಡಬಹುದೇ? ಕನ್ಫರ್ಮ್ ಆಗುತ್ತದೆ ಎಂದಾದರೆ ದೇಶದಲ್ಲಿ ದಾರಿದ್ರ್ಯ ಅನ್ನೋದೇ ಇರಬಾರದಿತ್ತಲ್ಲವೇ? ಕಷ್ಟದಲ್ಲಿರುವವರ ಹಣೆಬರಹ ಎಡಿಟ್ ಮಾಡಿ ಅವರಿಗೂ ಒಂದು ನಿಮ್ಮದಿಯ ಬಾಳು ಕೊಡಬಹುದಿತ್ತಲ್ಲವೆ? ಒಬ್ಬ ಕಷ್ಟ ಅನಿಭವಿಸುವಾಗ ಒಂದೇ ಉಸಿರಲ್ಲಿ ಅದು ಅವನ ಹಣೆಬರಹ ಅಂತ ಷರಾ ಬರೆಯುವ ನೀವು ಅವನ ಹಣೆಬರಹವನ್ನು ತಿದ್ದಲು ಯಾಕೆ ಅಹವಾಲು ನೀಡಬಾರದು?

ಹಣೆಬರಹ ಎಂಬ ಭ್ರಮೆಯಲ್ಲಿ ತೇಲಾಡುವ ಮಂದಿ ಕನಿಷ್ಟ ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಿ. ನಿಮ್ಮ ನೆಮ್ಮದಿಯ ಬದುಕನ್ನು ನಂಬಿಕೆಯ ಹೆಸರಲ್ಲಿ ಕಿತ್ತು ತಿನ್ನುವ ಅನಾಗರಿಕ ಜನರ ಬಗ್ಗೆ ಜಾಗ್ರತರಾಗಿ. ಇದೆಲ್ಲಾ ಹಿಂದಿನಿಂದಲೂ ಬಂದದ್ದು ಎನ್ನುವವರಲ್ಲಿ ನನ್ನ ಚರ್ಚೆಯಿಲ್ಲ. ಆದರೆ ಕನಿಷ್ಟ ತಮ್ಮ ಬಗ್ಗೆಯಾದರೂ ಪ್ರಜ್ಞೆಯಿಂದ ಯೋಚಿಸುವ ಮಂದಿಗೆ ವಿಮರ್ಷೆ ಮಾಡಲು ಸಹಕಾರಿಯಾದರೆ ಅಷ್ಟೇ ಸಾಕು. ನನ್ನನ್ನು ವಿರೋಧಿಸಲು, ಅಥವಾ ಅನ್ಯಧರ್ಮೀಯರಿಗೆ ಕಾಂಪಿಟೇಷನ್ ಕೊಡಲೆಂದೇ ಮೌಢ್ಯಕ್ಕೆ ಶರಣಾಗುವವರ ಬಗ್ಗೆ ನನ್ನ ತಕರಾರಿಲ್ಲ. ಕೀಪ್ ಕಂಟಿನ್ಯೂ.

– ಭಾಸ್ಕರ್ ವಿಟ್ಲ
ಪ್ರಾಧ್ಯಾಪಕರು
ಮಾನಸಿಕ ತಜ್ಞರು

ದಿನದ ಸುದ್ದಿ

ಬಿತ್ತನೆ ಕಾಫಿ ಬೀಜಕ್ಕೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ಮಡಿಕೇರಿ : ಪ್ರಸಕ್ತ ವರ್ಷ (2020-21) ನೇ ಸಾಲಿನ “ಬಿತ್ತನೆ ಕಾಫಿ ಬೀಜ”ಕ್ಕೆ (Seed Coffee) ಆಸಕ್ತ ಕಾಫಿ ಬೆಳೆಗಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಬಿತ್ತನೆ ಬೀಜಕ್ಕೆ ಅರ್ಜಿ ಸಲ್ಲಿಸಲಿಚ್ಛಿಸುವ ಆಸಕ್ತ ಕಾಫಿ ಬೆಳೆಗಾರರು ಮಂಡಳಿಯ ಕಛೇರಿಯಲ್ಲಿ ದೊರೆಯುವ ಅರ್ಜಿಯನ್ನು ಭರ್ತಿ ಮಾಡಿ ಪ್ರತಿ ಕೆಜಿ ಬಿತ್ತನೆ ಬೀಜಕ್ಕೆ ರೂ.500 ನ್ನು ಮುಂಗಡವಾಗಿ ಪಾವತಿಸಿ ತಮ್ಮ ಹೆಸರನ್ನು ನೊಂದಾಯಿಸಬಹುದಾಗಿದೆ.

ಬಿತ್ತನೆ ಬೀಜಕ್ಕೆ ಅರ್ಜಿ ಸಲ್ಲಿಸಲಿಚ್ಛಿಸುವವರು ರೂ.500 ರಿಂದ ರೂ.2000 ದವರೆಗೆ ನಗದು ಅಥವಾ ಡಿಡಿ ಮುಖಾಂತರ ನೀಡಬಹುದು, ರೂ.2000 ಕ್ಕಿಂತ ಹೆಚ್ಚಿನ ಹಣವನ್ನು ಡಿಡಿ ಮುಖಾಂತರವೇ ನೀಡಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13 ನವೆಂಬರ್ ಆಗಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ಕಾಫಿ ಮಂಡಳಿ ಕಛೇರಿಗಳನ್ನು ಸಂಪರ್ಕಿಸುವಂತೆ ವಿರಾಜಪೇಟೆ ಕಾಫಿ ಮಂಡಳಿ ಉಪ ನಿರ್ದೇಶಕರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪ್ರಖ್ಯಾತ ನೇತ್ರತಜ್ಞ ಡಾ.ಎಂ.ಸಿ.ಮೋದಿ ಬಗ್ಗೆ ನಿಮಗೆಷ್ಟು ಗೊತ್ತು..!?

Published

on

  • ಸಂಗಮೇಶ ಎನ್ ಜವಾದಿ, ಕೊಡಂಬಲ

ಭಾರತದ ಪ್ರಖ್ಯಾತ ನೇತ್ರತಜ್ಞರಲ್ಲೊಬ್ಬರು,ಅವರ ಅರವತ್ತು ವರ್ಷಕ್ಕಿಂತ ಮೇಲ್ಪಟ್ಟ ವೃತ್ತಿ ಜೀವನದಲ್ಲಿ ಸುಮಾರು 7 ಲಕ್ಷಕ್ಕಿಂತ ಹೆಚ್ಚು ಜನರಿಗೆ ನೇತ್ರ ಶಸ್ತ್ರ ಚಿಕಿತ್ಸೆ ಮಾಡಿ ವೈದ್ಯ ಲೋಕದಲ್ಲಿ ಜಗತ್ತಪ್ರಸಿದ್ದಿ ಪಡೆದಿರುವ ಎಂ.ಸಿ.ಮೋದಿಯವರ ಸೇವೆ ಅಜರಾಮ ಮತ್ತು ಅನನ್ಯ ಎಂದೇ ಹೇಳಬೇಕಾಗುತ್ತದೆ.

ಅಂದು ಮುಂಬೈ ಒಂದರ ಸಭೆಯಲ್ಲಿ ಸೇರಿದ್ದ ಅನೇಕ ದೇಶಭಕ್ತ ಮಹನೀಯರ ಮಾತುಗಳಿಂದ ಪ್ರಭಾವಿತರಾಗಿ,ತಮಗಿದ್ದ ಸಾವಿರಾರು ರೂಪಾಯಿಗಳ ಆದಾಯದ ಮೂಲವಾಗಿದ್ದ ಖಾಸಗಿ ವೈದ್ಯ ವೃತ್ತಿಯನ್ನು ತೊರೆದು, ಬಿಡಿಗಾಸು ಪಡೆಯದೇ ಅಂಧರಿಗೆ ನೇತ್ರಚಿಕಿತ್ಸೆ ಮಾಡಲು ಸಂಕಲ್ಪಿಸಿ ಸಾವಿರಾರು ಜನರಿಗೆ ನೇತ್ರ ಶಸ್ತ್ರಚಿಕಿತ್ಸೆ ಮಾಡುವುದರೊಂದಿಗೆ ಜನಸಾಮಾನ್ಯರ ಪ್ರೀತಿ – ಸ್ನೇಹಕ್ಕೆ ಸಾಕ್ಷಿಯಾಗುವ ಮೂಲಕ ವಿಶ್ವ ಗಿನ್ನಿಸ್ ದಾಖಲೆ ಮಾಡಿದ ಈ ನಾಡಿನ ಧೀಮಂತ ವೈದ್ಯ ಲೋಕದ ವೈದ್ಯರಾದ ಮುರುಗಪ್ಪ ಚನ್ನವೀರಪ್ಪ ಮೋದಿಯವರು ಎಂದು ಹೆಮ್ಮೆಯಿಂದ ಹೇಳುತ್ತೇವೆ.

ಜನನ,ಕಾಯಕ ಜೀವನ

ಮುರಿಗೆಪ್ಪ ಚನ್ನವೀರಪ್ಪ ಮೋದಿಯವರು ಕರ್ನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆಯ ಬೀಳಗಿಯ ಗ್ರಾಮದ ಚನ್ನವೀರಪ್ಪ ಮತ್ತು ದುಂಡಮ್ಮ ದಂಪತಿಗಳ ಮಗನಾಗಿ ದಿನಾಂಕ 04-10-1916 ರಲ್ಲಿ ಜನಿಸಿದರು. ಜಮಖಂಡಿಯ ಪಿ ಬಿ ಶಾಲೆಯಲ್ಲಿ ಪ್ರಾಥಮಿಕ ,ಪ್ರೌಢ ಶಿಕ್ಷಣ ಪಡೆದು ನಂತರ ಬಡತನದ ನಡುವೆಯೂ ವಿದ್ಯಾರ್ಜನೆ ಮುಂದುವರೆಸಿ ಬೆಳಗಾವಿ ಆಯುರ್ವೇದ ಕಾಲೇಜಿನಲ್ಲಿ ಅಭ್ಯಾಸ ಮಾಡಿದರು.

ತದನಂತರ ಮತ್ತೆ ಕೆಬಿ‌ಎಚ್‌ಬಿ ಕಣ್ಣಿನ ಆಸ್ಪತ್ರೆ ಹಾಗೂ ರಾಮವಾಡಿ ಕಣ್ಣಿನ ಆಸ್ಪತ್ರೆಯಲ್ಲಿ ವೈದ್ಯ ಶಿಕ್ಷಣ ಪಡೆದರು.ಇದಲ್ಲದೆ ಮೋದಿಯವರು ಕೊಲಂಬಿಯಾ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿಗಳಿಸಿದರು.ನಂತರ ಬೆಳಗಾವಿಯಲ್ಲಿ ಅವರು ಕಾಯಕ ಜೀವನ ಆರಂಭಿಸಿ ದಾವಣಗೆರೆಯಲ್ಲಿ ನೆಲೆಸಿದರು.

1942 ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ ಮಹಾತ್ಮ ಗಾಂಧಿಯವರ ಭಾಷಣದಿಂದ ಪ್ರೇರಿತರಾಗಿ ಕೆಲವೇ ಸ್ವಯಂಸೇವಕರ ಜತೆ ಹಳ್ಳಿಗಳಿಗೆ ಹೋಗಿ ರೋಗಿಗಳಿಂದ ಹಣ ಪಡೆಯದೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದರು,ಮಾಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.

ಜೊತೆಗೆ ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಮತ್ತು ಇತರ ಹಲವಾರು ರಾಜ್ಯಗಳಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸಿ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಮಾಡಿರುತ್ತಾರೆ. ಕಣ್ಣಿನ ಪೊರೆ (ಕ್ಯಟರಾಕ್ಟ್) ತೆಗೆಯುವ ಶಸ್ತ್ರ ಚಿಕಿತ್ಸೆಯಲ್ಲಿ ಪರಿಣಿತಿ ಹೊಂದಿದ್ದ ಡಾ.ಮೋದಿಯವರು ಪ್ರತಿ ಗ್ರಾಮದಲ್ಲೂ ಶಾಲೆ, ಕಾಲೇಜುಗಳನ್ನು ತೆಗೆದುಕೊಂಡು ಅದನ್ನೇ ಚಿಕಿತ್ಸಾ ಕೇಂದ್ರವಾಗಿ ಪರಿವರ್ತಿಸಿ ಸತತವಾಗಿ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದರು.

ರಷ್ಯಾ ಮತ್ತು ಅಮೇರಿಕ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲೂ ಅವರು ಸೇವೆ ಸಲ್ಲಿಸಿ ಗೌರವಗಳಿಗೆ ಪಾತ್ರರಾಗಿದ್ದಾರೆ.ಇದಲ್ಲದೆ ದಾವಣಗೆರೆ, ಬೆಂಗಳೂರು ಮತ್ತು ಬೆಳಗಾವಿಗಳಲ್ಲಿ ಕಣ್ಣು ಚಿಕಿತ್ಸಾಲಯಗಳನ್ನು ಸ್ಥಾಪಿಸಿದ ಶ್ರೀಯುತರು ತಮ್ಮ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತ ಸೇವೆ ಒದಗಿಸುತ್ತಿದ್ದರು.

ಸಾಮೂಹಿಕ ನೇತ್ರ ಚಿಕಿತ್ಸೆ ಹಾಗೂ ಸಂಚಾರಿ ಘಟಕವನ್ನು ತೆರೆದ ಮೊದಲ ವೈದ್ಯ ಎಂಬ ಖ್ಯಾತಿಯನ್ನು ಗಳಿಸಿದ್ದ ಹಿರಿಮೆ ಇವರದು ಜೊತೆಗೆ ಮೋದಿಯವರು ತಮ್ಮ ಸ್ವಂತ ಹಣವನ್ನು ವ್ಯಯಿಸಿ ಬಡಜನರ ಸೇವೆ ಮಾಡುತ್ತಿದ್ದರು ಎಂಬುದು ನಾವ್ಯಾರೂ ಮರೆಯಬಾರದು.

ಇನ್ನು ಕಣ್ಣಿನ ಆರೋಗ್ಯದ ಕುರಿತು ಅವರ ಮನಸ್ಸು ಎಷ್ಟು ತುಡಿಯುತ್ತಿತ್ತೆಂದರೆ, ರೈಲಿನಲ್ಲಿ ಪ್ರಯಾಣ ಮಾಡುವಾಗಲೂ ಅಲ್ಲಿನ ಪ್ರಯಾಣಿಕರ ಕಣ್ಣುಗಳನ್ನು ಉಚಿತವಾಗಿ ಪರೀಕ್ಷಿಸಿ ಸಲಹೆ ನೀಡುತ್ತಿದ್ದರು ಎನ್ನುವುದು ಮರೆಯುವಂತಿಲ್ಲ.
ಡಾ. ಮೋದಿಯವರೇ ಹೇಳುತ್ತಿದ್ದ ಹಾಗೆ ಮೊದ ಮೊದಲು ರೋಗಿಗಳು ಇವರ ಶಿಬಿರಕ್ಕೆ ಬರಲು ಹಿಂಜರಿಯುತ್ತಿದ್ದರು.

ಆಪರೇಷನ್‌ ಪದ ಕೇಳಿ ಶಿಬಿರಕ್ಕೆ ಬಂದವರಲ್ಲಿ ಕೆಲವರು ಓಡಿ ಹೋಗುತ್ತಿದ್ದರು. ಆದರೆ ಕ್ರಮೇಣ ಶಸ್ತ್ರ ಚಿಕಿತ್ಸೆಗೊಳಗಾಗಿ ದೃಷ್ಟಿಯನ್ನು ಮತ್ತೆ ಪಡೆದವರನ್ನು ಕಂಡು ಶಿಬಿರಕ್ಕೆ ಬರುವವರು ಹೆಚ್ಚಾದರು. ಹೀಗೆ ಅವರ ಸೇವೆ ನಾಡಿನ ತುಂಬೆಲ್ಲ ಪಸರಿಸಿತ್ತು.

ಈ ಕಾರಣದಿಂದ ಅವರ ಸೇವೆಯನ್ನು ಗುರುತಿಸಿದ ಅಂದಿನ ಕರ್ನಾಟಕ ಸರ್ಕಾರ, ಏಕವ್ಯಕ್ತಿಯ ಯುದ್ಧ (one man’s war) ಎಂಬ ಒಂದು ಕಿರು ದೃಶ್ಯ ದಾಖಲೆಯನ್ನು ತಯಾರಿಸಿದ್ದು ವಿಶೇಷ ಹಾಗಾಗಿ ಅವರು ಮಾಡಿರುವ ಸೇವೆ ನಿಸ್ವಾರ್ಥ ಎಂಬುದು ಇದರಿಂದ ಗೊತ್ತಾಗುತ್ತದೆ.ಈ ಎಲ್ಲಾ ಕಾರಣಗಳಿಂದ ಲಕ್ಷಗಟ್ಟಲೆ ಅಂಧರಿಗೆ ದೃಷ್ಟಿ ನೀಡಿದ ಆ ಮಹಾನ್ ಚೇತನರ ಜ್ಞಾಪಕಾರ್ಥವಾಗಿ ದಾವಣಗೆರೆ ಹಾಗೂ ಬೆಂಗಳೂರಿನಲ್ಲಿ ಮೋದಿ ಕಣ್ಣಿನ ಆಸ್ಪತ್ರೆ ಎಂಬ ಹೆಸರಿನ ಆಸ್ಪತ್ರೆಯು ದಿನನಿತ್ಯ ನೂರಾರು ಜನರಿಗೆ ಸೇವೆ ನೀಡುವಲ್ಲಿ ನಿರಂತವಾಗಿದೆ.

ಗಾಂಧೀಜಿ ಪ್ರೇರಣೆ

ಭಾರತದಲ್ಲಿ ವ್ಯಾಪಕವಾಗಿ ಕಾಡುವ ಅಂಧತ್ವದ ನಿವಾರಣೆ ಇವರ ಬದುಕಿನ ಗುರಿಯಾಯಿತು. ಮಹಾತ್ಮ ಗಾಂಧಿಯವರ ಅರ್ಪಣಾಭಾವ, ಜನಸೇವೆ, ಪ್ರಭಾವ ಇವರ ಮೇಲೆ ಹೆಚ್ಚು ಪರಿಣಾಮ ಬೀರಿತು. ಸಮಾಜದ ಒಳಿತಿಗಾಗಿ ದುಡಿಯಲು ತಮ್ಮನ್ನು ತಾವು ಅರ್ಪಿಸಿಕೊಂಡರು. ವೈಯಕ್ತಿಕ ಸುಖ ಸಂತೋಷ ತ್ಯಜಿಸಿ, ತಮ್ಮ ಪ್ರತಿಭೆ ಮತ್ತು ಪರಿಣತಿಯನ್ನು ಜನಸಾಮಾನ್ಯರಿಗೆ ಮುಟ್ಟಿಸಲು ಕಣ್ಣಿಲ್ಲದವರಿಗೆ ಮೋದಿ ಬೆಳಕಾದರು ಬಂಧುಗಳೆ.

ವಿಶ್ವ ದಾಖಲೆ

ಮೋದಿಯವರು ತಿರುಪತಿಯಲ್ಲಿ ಒಂದೆ ದಿನದಲ್ಲಿ 833 ಶಸ್ತ್ರ ಚಿಕಿತ್ಸೆ ಮಾಡಿ ವಿಶ್ವ ದಾಖಲೆ ಸ್ಥಾಪಿಸಿದರು. ಒಟ್ಟಾರೆ 7 ಲಕ್ಷಕ್ಕೂ ಹೆಚ್ಚು ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇದನ್ನು ಗಿನ್ನಿಸ್ ದಾಖಲೆಗಳ ಪುಸ್ತಕದಲ್ಲಿ ಸೇರಿಸಲಾಗಿದೆ. ವೈದ್ಯಕೀಯ ವೃತ್ತಿಯಲ್ಲಿ ಮೋದಿಯವರ ಸಾಧನೆ ಅನುಪಮ ಮತ್ತು ಅದ್ವಿತೀಯ.

ಭಾರತದ ಬಹುತೇಕ ಪ್ರದೇಶದಲ್ಲಿ ಸಂಚರಿಸಿ, ದೃಷ್ಟಿಹೀನರಿಗೆ ದೃಷ್ಟಿ ಕೊಟ್ಟ ಖ್ಯಾತಿ ಇವರದು. ಸಂಚಾರಿ ನೇತ್ರ ಚಿಕಿತ್ಸಾಲಯವನ್ನು ಸ್ಥಾಪಿಸಿದ ಮೊದಲ ವ್ಯಕ್ತಿ. ಈಗ ಇದು ಬೃಹತ್ತಾಗಿ ಬೆಳೆದಿದೆ. ಸಾಮೂಹಿಕ, ಉಚಿತ ನೇತ್ರ ಚಿಕಿತ್ಸೆಯನ್ನು ಪ್ರಾರಂಭಿಸಿದವರಲ್ಲಿ ಇವರೇ ಮೊದಲಿಗರು. ಅಂಧತ್ವ ನಿವಾರಣೆಗೆ ಇವರು ಹಮ್ಮಿಕೊಂಡ ಆಂದೋಲನದಲ್ಲಿ 1993ರವರೆಗೆ 6,10,564 ಜನರ ಕಣ್ಣುಗಳ ಶಸ್ತ್ರ ಚಿಕಿತ್ಸೆಯನ್ನೂ, 1,21,18,630ಕ್ಕೂ ಹೆಚ್ಚಿನ ರೋಗಿಗಳ ಕಣ್ಣು ತಪಾಸಣೆಯನ್ನು ಇವರು ಮಾಡಿದ್ದಾರೆ.

ಒಂದೇ ದಿನದಲ್ಲಿ ತಿರುಪತಿಯಲ್ಲಿ 833 ಮಂದಿಗೆ ಮೋತಿಬಿಂದು ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿ ಗಿನ್ನೆಸ್ ದಾಖಲೆ ಸ್ಥಾಪಿಸಿದ್ದಾರೆ. ಈ ಹಿಂದೆ ಇಂಥ ದಾಖಲೆ ಕೆನಡದ ಆಂಟೇರಿಯೋದ ವೈದ್ಯ ಡಾ. ರಾಬರ್ಟ್ ಮ್ಯಾಕ್ಲ್ಯೂರ್ ಅವರ ಹೆಸರಿನಲ್ಲಿತ್ತು. ಈ ವೈದ್ಯ (1924-78) 20,424 ಶಸ್ತ್ರ ಚಿಕಿತ್ಸೆ ಮಾಡಿ ದಾಖಲೆ ಸ್ಥಾಪಿಸಿದ್ದ. ಡಾ. ಮೋದಿಯವರು ತಮ್ಮ ಜೀವಿತಾವಧಿಯಲ್ಲಿ ಕಣ್ಣಿನ ರೋಗಿಗಳನ್ನು ತಪಾಸಣೆ ಮಾಡಲು 46,120 ಹಳ್ಳಿಗಳನ್ನು ಸಂದರ್ಶಿಸಿದ್ದರು.

ಅಂಧರ ಬಾಳಿಗೆ ಬೆಳಕಾದರ ಡಾ.ಮೋದಿ: ಆಗಿನ ಕಾಲಕ್ಕೆ ಖ್ಯಾತ ನೇತ್ರ ವೈದ್ಯರೆಂದು ಹೆಸರು ಪಡೆದ ಮೋದಿಯವರ ಪ್ರೊಫೆಸರ್ ಆಗಿದ್ದ ಡಾ. ಡಿ.ಎಸ್. ಸರ್‍ದೇಸಾಯ್ ಅವರು ಪಾಟ್ನಾ ಮತ್ತು ಗುಜರಾತಿನಲ್ಲಿ ಹಮ್ಮಿಕೊಂಡಿದ್ದ ನೇತ್ರ ಚಿಕಿತ್ಸೆಯ ಶಿಬಿರದಲ್ಲಿ ಭಾಗವಹಿಸಲು ಮೋದಿಯವರನ್ನು ಆಹ್ವಾನಿಸಿದರು. ಗುರುವಿನ ಜೊತೆ ಕೈಜೋಡಿಸಿ ಸ್ವತಂತ್ರವಾಗಿ ಮೋದಿಯವರು 20 ಮಂದಿಯ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿ ಸೈ ಎನಿಸಿಕೊಂಡರು.

ಗ್ರಾಮೀಣ ಜನತೆಗೆ ಸೇವೆ ಮಾಡಲು ಅವರಿಗೆ ಇದು ಮತ್ತಷ್ಟು ಪ್ರೇರಕ ಶಕ್ತಿಯನ್ನು ಕೊಟ್ಟಿತು. ಇದರ ಹಿಂದೆಯೇ ಧಾರವಾಡ ಜಿಲ್ಲೆಯ ನರಗಲ್ ಹಳ್ಳಿಯಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆಯ ಶಿಬಿರವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಸ್ಥಳೀಯರಿಗೆ ಆಗ ಶಸ್ತ್ರ ಚಿಕಿತ್ಸೆಗೆ ತಮ್ಮನ್ನು ಒಡ್ಡಿಕೊಳ್ಳಲು ಇನ್ನೂ ಅಳುಕಿತ್ತು. ಇದನ್ನು ಮನಗಂಡ ಮೋದಿಯವರು ಶಸ್ತ್ರ ಚಿಕಿತ್ಸೆ ಮಾಡುವ ಮುನ್ನ ರೋಗಿಗಳನ್ನುದ್ದೇಶಿಸಿ ಅದು ಅಪಾಯಕಾರಿಯಲ್ಲ ಎಂದು ಮನವರಿಕೆ ಮಾಡಿಕೊಡಲು ದೀರ್ಘ ಪ್ರವಚನವನ್ನೇ ನೀಡುತ್ತಿದರು. ಇದರಿಂದ ಪ್ರೇರಿತರಾಗಿ ಕಣ್ಣಿನ ರೋಗಿಗಳು ಶಸ್ತ್ರ ಚಿಕಿತ್ಸೆಗೆ ಮುಂದಾಗುತ್ತಿದರು.

ಕೇವಲ ಎರಡೇ ಗಂಟೆಯಲ್ಲಿ 20 ಜನರಿಗೆ ಯಶಸ್ವಿಯಾಗಿ ಚಿಕಿತ್ಸೆ ಮಾಡಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.ಹೀಗೆ ಅಂಧರು ನನ್ನ ಬಳಿಗೆ ಬರಲು ಶಕ್ತರಲ್ಲ. ನಾನೇ ಅವರ ಬಳಿಗೆ ಹೋಗಬಾರದೇಕೆ? ಎಂದು ಯೋಚನೆ ಮಾಡುವ ಮೂಲಕ ಲಕ್ಷಾಂತರ ಅಂಧರ ಬಳಿಗೆ ತೆರಳಿ ಅವರ ಕಷ್ಟಕ್ಕೆ ಮಿಡಿದ ಹೃದಯ ಇವರದಾಗಿತ್ತು.ಇದಲ್ಲದೆ ತಮ್ಮ ಸುತ್ತ ತ್ಯಾಗಜೀವಿಗಳ ದೊಡ್ಡ ಗುಂಪನ್ನೇ ಬೆಳೆಸಿ, ಮಾನವೀಯ ಸೇವೆಗೆ ನಿಂತ ಮಹಾನ್ ವ್ಯಕ್ತಿ ಇವರು.

ಇಂಥವರು ಕೂಡ ತಮ್ಮ ಬದುಕಿನಲ್ಲಿ ಕೆಲವೊಂದು ಕಹಿ ಪ್ರಸಂಗಗಳನ್ನು ಎದುರಿಸಬೇಕಾಯಿತು. ಆಧುನಿಕ ಶಸ್ತ್ರ ಚಿಕಿತ್ಸಾ ವೈದ್ಯರು, ಡಾ. ಮೋದಿಯವರು ಕಳಪೆ ಪರಿಸರದಲ್ಲಿ ಶಸ್ತ್ರ ಕ್ರಿಯೆಯನ್ನು ನಡೆಸುತ್ತಾರೆಂದು ದೂರಿದ್ದರು. ಜೊತೆಗೆ ಮೋದಿಯವರ ವೈದ್ಯಕೀಯ ಹಿನ್ನೆಲೆ ಕೇವಲ ಎಲ್.ಐ.ಎಮ್. ಎಂದೂ ಇತರ ವೈದ್ಯರಿಗಿರುವಂತೆ ಎಲ್.ಸಿ.ಪಿ.ಎಸ್.(ಲೈಸೆನ್ಸಿಯೇಟ್ ಆಫ್ ದಿ ಕಾಲೇಜ್ ಆಫ್ ಫಿಸಿಷಿಯನ್ಸ್ ಅಂಡ್ ಸರ್ಜನ್ಸ್) ಅಲ್ಲವೆಂದೂ ಅವರು ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಲು ಅರ್ಹರಲ್ಲವೆಂದೂ ಆರೋಪಿಸಿದ್ದರು.

ಕರ್ನಾಟಕ ಸರ್ಕಾರ ಇಂಥ ಆರೋಪಗಳನ್ನು ಸ್ವೀಕರಿಸಲು ಸಿದ್ಧವಿರಲಿಲ್ಲ. ಕಣ್ಣಿನ ಶಸ್ತ್ರ ಚಿಕಿತ್ಸೆಯ ಯಾವುದೇ ಪರಿಣತರಿಗಿಂತ ಇವರು ತ್ವರಿತವಾಗಿ ಚಿಕಿತ್ಸೆ ನಡೆಸುತ್ತಾರೆಂಬುದನ್ನೂ ಒಪ್ಪಿಕೊಂಡಿತು. ಮೋದಿಯವರ ವೃತ್ತಿಪರ ವೈಶಿಷ್ಟ್ಯವೆಂದರೆ ಮೋತಿಬಿಂದು ಶಸ್ತ್ರ ಚಿಕಿತ್ಸೆಗೆ ಇವರು ತೆಗೆದುಕೊಳ್ಳುತ್ತಿದ್ದ ಸಮಯ ಕೇವಲ 14 ಸೆಕೆಂಡುಗಳು ಅಷ್ಟೇ ಆಗಿತ್ತು ಬಂಧುಗಳೆ.

ಗೌರವ ಪ್ರಶಸ್ತಿಗಳು

ಡಾ.ಮೋದಿಯವರ ಸೇವೆ ಮತ್ತು ಸಾಧನೆಗಳನ್ನು ಶ್ಲಾಘಿಸಿ ಕೇಂದ್ರ ಸರಕಾರದಿಂದ 1956 ರಲ್ಲಿ ಪದ್ಮಶ್ರೀ ಪ್ರಶಸ್ತಿ ಹಾಗೂ 1968 ರಲ್ಲಿ ಪದ್ಮಭೂಷಣ ಪ್ರಶಸ್ತಿ ಗೌರವಿಸಲಾಗಿದೆ.ಇನ್ನು ಮೈಸೂರು, ಕರ್ನಾಟಕ ಮತ್ತು ಪುಣೆ ವಿಶ್ವವಿದ್ಯಾಲಯಗಳು ಶ್ರೀಯುತರಿಗೆ ಗೌರವ ಡಾಕ್ಟರೇಟ್ ನೀಡಿವೆ.ಅಲ್ಲದೆ ನೈಟ್‌ ಆಫ್ ಬ್ಲೈಂಡ್, ಅಂಬಾಸೆಡರ್ ಆಫ್ ಗುಡ್ ವಿಲ್ ಪ್ರಶಸ್ತಿ ಹಾಗೂ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಿದೆ.ಇನ್ನ ಅಮೆರಿಕದ Spartanburg ನ ಮೇಯರ್ ಇವರಿಗೆ ಗೌರವ ಪೌರತ್ವ ನೀಡಿ ಗೌರವಿಸಿದ್ದಾರೆ.

ಜೊತೆಗೆ ಕರ್ನಾಟಕ ರಾಜ್ಯದ ವಿಧಾನ ಪರಿಷತ್ತಿನ ಸದಸ್ಯರಾಗಿ 1990 ರಲ್ಲಿ ನೇಮಕಗೊಂಡು ಸೇವೆ ಸಹ ಸಲ್ಲಿಸಿದ್ದಾರೆ ಎಂಬುದು ಮತ್ತೊಂದು ವಿಶೇಷ ಹಾಗೆ ಮೋದಿಯವರು ಎಲ್ಲಾ ಪ್ರಶಸ್ತಿ ಪುರಸ್ಕಾರಗಳಿಂದ ಬಂದ ಹಣವನ್ನು ಬಡವರಿಗಾಗಿ ವ್ಯಯಿಸಿದ್ದಾರೆ.ಹೀಗೆ ಹತ್ತು ಹಲವು ಸಂಘ,ಸಂಸ್ಥೆಗಳಿಂದ ಹಲವಾರು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿವೆ.

ಕೊನೆಯ ಮಾತು

ಸಾವಿರಾರು ಬಡವರಿಗೆ ಕಣ್ಣಿನ ದೃಷ್ಟಿ ನೀಡಿ ನೇತ್ರದಾನಿ ಎಂದೇ ಹೆಸರುವಾಸಿಯಾಗಿದ್ದ ಡಾ.ಎಂ.ಸಿ.ಮೋದಿಯವರು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಸೇರಿ ಹಲವಾರು ರಾಜ್ಯಗಳಲ್ಲಿ ದೃಷ್ಟಿದೋಷದ ಸಾವಿರಾರು ರೋಗಿಗಳಿಗೆ ದೃಷ್ಟಿ ನೀಡುವ ಮೂಲಕ ನೇತ್ರದಾನಿ ಎಂಬ ಬಿರುದು ಪಡೆದುಕೊಂಡಿದ್ದರು. ಜನ ಸೇವೆ ಮೂಲಕ ರಾಜ್ಯ ಹೊರರಾಜ್ಯಗಳಲ್ಲದೆ ದೇಶ ವಿದೇಶಗಳಲ್ಲೂ ಡಾ.ಎಂ.ಸಿ.ಮೋದಿ ಅವರು ಮನೆಮಾತಾಗಿದ್ದರು.

ಸಾಮೂಹಿಕ ನೇತ್ರ ಚಿಕಿತ್ಸಾ ಹಾಗೂ ಸಂಚಾರಿ ಘಟಕವನ್ನು ತೆರೆದ ಮೊದಲ ವೈದ್ಯ ಎಂಬ ಖ್ಯಾತಿಯನ್ನೂ ಕೂಡ ಗಳಿಸಿದ್ದ ಅವರು, ರೈಲಿನಲ್ಲಿ ಪ್ರಯಾಣಿಸುವಾಗಲೂ ಅಲ್ಲಿನ ಪ್ರಯಾಣಿಕರ ಕಣ್ಣುಗಳನ್ನು ಪರೀಕ್ಷಿಸುತ್ತಿದ್ದರು. ಡಾ. ಮೋದಿ ಸಾವಿನಲ್ಲೂ ಸಾರ್ಥಕತೆ ಪಡೆದವರು. ಅವರ ನಿಧನಾನಂತರ (11.11.2005) ಅವರ ಎರಡೂ ಕಣ್ಣಗಳನ್ನು ಅವರ ಕುಟುಂಬದವರು ಅಂಧರಿಗೆ ದಾನ ಮಾಡಿದರು.ಕಣ್ಣುಕೊಟ್ಟ ಅಣ್ಣ ಎಂಬ ಬಿರುದು ಈ ದೃಷ್ಟಿಯಿಂದಲೂ ಅವರ ಜೀವನ ಸಾರ್ಥಕವಾಯಿತು.

ಸುದ್ದಿದಿನ.ಕಾಂ | ವಾಟ್ಸಾಪ್ | 9980346243

Continue Reading

ದಿನದ ಸುದ್ದಿ

ದಾವಣಗೆರೆ ವಿವಿ ಯಲ್ಲಿ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಆರಂಭ : ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : ಸ್ಥಳೀಯ ಅಭ್ಯರ್ಥಿಗಳ ಅನುಕೂಲಕ್ಕಾಗಿ ಹಾಗೂ ಈ ಫ್ಯಾಷನ್ ಡಿಸೈನಿಂಗ್ ಕ್ಷೇತ್ರಕ್ಕೆ ವೃತ್ತಿ ಕೌಶಲ್ಯಗಳನ್ನು ಒಳಗೊಂಡ ಪದವೀಧರ ಅಭ್ಯರ್ಥಿಗಳನ್ನು ಸೃಷ್ಟಿಸುವ ಸದುದ್ದೇಶದಿಂದ ದಾವಣಗೆರೆ ವಿಶ್ವವಿದ್ಯಾನಿಲಯವು ಹೊಸ ಕೋರ್ಸ್‍ನ್ನು ಪ್ರಸಕ್ತ ಶೈಕ್ಷಣಿಕ ವರ್ಷ 2020-21 ರಿಂದ ಆರಂಭಿಸಲಾಗುತ್ತಿದ್ದು, ಅ.22 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ.

ಸ್ನಾತಕೋತ್ತರ ಎಂ.ಎಸ್ಸಿ ಫ್ಯಾಷನ್ ವಿನ್ಯಾಸ ಅಧ್ಯಯನ ವಿಭಾಗವು ಎರಡು ವರ್ಷದ (ನಾಲ್ಕು ಸೆಮಿಸ್ಟರ್) ಕೋರ್ಸ್ ಆಗಿದ್ದು, ಈ ಶೈಕ್ಷಣಿಕ ವರ್ಷದಲ್ಲಿ ಪ್ರವೇಶ ಪಡೆಯಬಹುದು. ಕೋರ್ಸ್‍ನ ಪ್ರವೇಶಾತಿಗಾಗಿ ಈಗಾಗಲೇ ವಿಶ್ವವಿದ್ಯಾನಿಲಯವು ಅಧಿಸೂಚನೆ ಹೊರಡಿಸಿದೆ.

ಕೋರ್ಸ್‍ನ ಉದ್ದೇಶ

ಫ್ಯಾಷನ್ ವಿನ್ಯಾಸದಲ್ಲಿ ವಿದ್ಯಾರ್ಥಿಗಳಿಗೆ ಸೃಜನಶಿಲತೆ ಮತ್ತು ಹೊಸತನವನ್ನು ಕಂಡುಕೊಳ್ಳುವುದು ಮತ್ತು ಫ್ಯಾಷನ್ ವಿನ್ಯಾಸದ ಪ್ರಕ್ರಿಯೆಯಲ್ಲಿ ಒಳಗೊಂಡಿರುವ ತಾಂತ್ರಿಕ ಅಂಶಗಳ ಬಗ್ಗೆ ಜ್ಞಾನವನ್ನು ನೀಡುವುದು ಈ ಕೋರ್ಸ್‍ನ ಮುಖ್ಯ ಉದ್ದೇಶವಾಗಿದೆ.

ಅರ್ಹತೆ

ಈ ಕೋರ್ಸ್ ವ್ಯಾಸಂಗ ಮಾಡಲಿಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ದೇಶದ ಯಾವುದೇ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಯಾವುದೇ ಪದವಿಯನ್ನು (ಬಿಎ, ಬಿಎಸ್‍ಸಿ, ಬಿಕಾಂ, ಬಿಬಿಎಂ, ಬಿಬಿಎ, ಬಿಇ ಇನ್ನಿತರೆ) ಹೊಂದಿರಬೇಕು.

ಕೋರ್ಸ್‍ನ ಮಹತ್ವ/ಉಪಯೋಗ

ಮಾರುಕಟ್ಟೆ ಆಧಾರಿತ ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ವಿನ್ಯಾಸಕಾರರ ಬೇಡಿಕೆ ಹೆಚ್ಚುತ್ತಿದೆ. ಮುಖ್ಯವಾಗಿ ಜನರು ಹೆಚ್ಚು- ಹೆಚ್ಚು ಫ್ಯಾಷನ್ ಪ್ರಜ್ಞೆಯನ್ನು ಪಡೆಯುತ್ತಿದ್ದಾರೆ. ಹೀಗಾಗಿ ಫ್ಯಾಷನ್ ವಿನ್ಯಾಸದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರೆ ಅನುಕೂಲವಿದೆ. ಫ್ಯಾಷನ್ ವಿನ್ಯಾಸ ಪದವೀಧರರನ್ನು ಪ್ರಸಿದ್ಧ ವಿನ್ಯಾಸಕಾರರು ಮಾತ್ರವಲ್ಲದೇ ಸ್ಥಳೀಯ ಸಗಟು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳಲ್ಲೂ ಬೇಡಿಕೆ ಇದೆ. ಅವರ ನೇಮಕಕ್ಕೆ ಆದ್ಯತೆ ನೀಡುತ್ತಿವೆ.

ಉದ್ಯೋಗಾವಕಾಶಗಳು

ಫ್ಯಾಷನ್ ಉದ್ಯಮಕ್ಕೆ ಸೇರಬಯಸುವ ಆಕಾಂಕ್ಷಿಗಳಿಗೆ ಮುಂದೆ ಸಾಕಷ್ಟು ಅವಕಾಶಗಳಿವೆ. ಕೋರ್ಸ್ ಮುಗಿದ ನಂತರ ಫ್ಯಾಷನ್ ವಿನ್ಯಾಸಕಾರರಾಗಿ ಹಾಗೂ ಕಾರ್ಪೋರೇಟ್ ಕಂಪನಿಗಳೊಂದಿಗೆ ಕೆಲಸ ಮಾಡಬಹುದು.

ಕ್ಯಾಂಪಸ್ ಆವರಣದಲ್ಲಿ ಅರ್ಜಿ ಮತ್ತು ಕೈಪಿಡಿ ದೊರೆಯುವುದು. ಅರ್ಜಿ ಸಲ್ಲಿಸಲು ಅ.22 ಕೊನೆಯ ದಿನವಾಗಿರುತ್ತದೆ. ಅ.27, 28 ನತ್ತಯ ಪ್ರವೇಶ ಪರೀಕ್ಷೆ (ತಾತ್ಕಾಲಿಕ) ನಡೆಯಲಿದ್ದು, ಕೌನ್ಸಲಿಂಗ್ ಪ್ರಕ್ರಿಯೆ ನ.02 ಮತ್ತು ನ.03 ಬೆಳಗ್ಗೆ 10.30 ಗಂಟೆಗೆ ನಡೆಯಲಿದೆ(ಮೆರಿಟ್ ಸೀಟುಗಳು: ಜನರಲ್ ಮೆರಿಟ್ (ತಾತ್ಕಾಲಿಕ), ನ.04 ಬೆಳಗ್ಗೆ 10.30 ಗಂಟೆಗೆ (ತಾತ್ಕಾಲಿಕ) ಓಪನ್ ಮೆರಿಟ್ ಪ್ರವೇಶಾತಿ ನಡೆಯಲಿದ್ದು ನ.05 ಖಾಲಿ ಉಳಿದ ಸೀಟುಗಳ ಮಾಹಿತಿ ಲಭ್ಯವಾಗುತ್ತದೆ.

ಈ ಕೋರ್ಸ್ ಸೇರಲಿಚ್ಚಿಸುವ ಅಭ್ಯರ್ಥಿಗಳು ಅರ್ಜಿ ಹಾಗೂ ಇನ್ನಿತರೇ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ವೆಬ್‍ಸೈಟ್https://davangereuniversity.ac.in ನೀಡಬಹುದಾಗಿದ್ದು ಸಂಯೋಜನಾಧಿಕಾರಿಗಳ ಮೊ.ನಂ.7892631239 ಗೆ ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending