Connect with us

ಅಂತರಂಗ

ಹಳದಿ ಕನ್ನಡಕ ತೆಗೆದು ನೋಡೋಣವೇ..?

Published

on

  • ಹಿರಿಯೂರು ಪ್ರಕಾಶ್

ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚಾದಂತೆಲ್ಲಾ ಜನರಲ್ಲಿ ಪ್ರಜ್ಞಾವಂತಿಕೆ ಕೂಡಾ ಹೆಚ್ಚಾಗುತ್ತಿದೆ. ಜಗತ್ತಿನ ಸುದ್ದಿಗಳು ಅಂಗೈಯಲ್ಲೇ ಅರೆಕ್ಷಣದಲ್ಲಿ ನರ್ತಿಸುವುದರಿಂದ ಅವುಗಳ ಬಗೆಗಿನ ಕುತೂಹಲ, ಆಕರ್ಷಣೆ, ಸರಿ ತಪ್ಪುಗಳ ವಿಮರ್ಶೆ ಎಲ್ಲವೂ ಸಹಜವೆಂಬಂತೆ ಜರುಗುತ್ತಿವೆ.

ಹೀಗಾಗಿ ಫೇಸ್ ಬುಕ್, ವಾಟ್ಸಪ್, ಟ್ವೀಟ್, ಇನ್ಸ್ಟಾ ಗ್ರಾಂ… ಮುಂತಾದೆಲ್ಲೆಡೆ ಪರಸ್ಪರ ಪರಿಚಯ, ಚರ್ಚೆ, ವಾದ -ವಿವಾದ , ವಿಚಾರ -ವಿಮರ್ಶೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದನ್ನು ಕಾಣಬಹುದು. ಹೀಗಾಗಿ ಫೇಸ್ ಬುಕ್ ನಲ್ಲಿ ಅನೇಕ ವಿಚಾರಗಳ ಬಗೆಗೆ ಬರೆಯುವವರ ಸಂಖ್ಯೆ ಹೆಚ್ಚಾದಂತೆ, ಬರೆದದ್ದನ್ನು ವಿಮರ್ಶಿಸುವವರ ಸಂಖ್ಯೆಯೂ ಗಣನೀಯವಾಗಿ ಏರುತ್ತಿದೆ . ಅನೇಕ ವಿಷಯಗಳ ಮೇಲೆ ಸಾವಿರಾರು ಜನರ ಅಭಿರುಚಿ ಅಭಿಪ್ರಾಯಗಳು ಕ್ರೋಢೀಕರಣಗೊಂಡು ಒಂದು ಆರೋಗ್ಯಕರ ಚರ್ಚೆಗೆ ವೇದಿಕೆಗಳಾಗಿ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಇವು ರೂಪುಗೊಂಡಿವೆ. ಇದು ಸ್ವಾಗತಾರ್ಹ ಬೆಳವಣಿಗೆ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇದನ್ನೇ ಮತ್ತೊಂದು ಆಯಾಮದಿಂದ ನೋಡುವುದಾದರೆ, ಇಂದಿನ ಕಾಲಘಟ್ಟದಲ್ಲಿ ಒಂದು ವಿಚಾರದ ಬಗೆಗೆ ಆರೋಗ್ಯಕರ ಚರ್ಚೆಗಳು ನೆಡೆಯುವುದಕ್ಕಿಂತಲೂ ಹೆಚ್ಚಾಗಿ ತಮ್ಮ ಅಭಿಪ್ರಾಯಗಳಿಗೆ ಅಥವಾ ತಾವು ನಂಬಿದ ಸಿದ್ದಾಂತಗಳಿಗೆ ವಿರುದ್ಧವಾದ ವಿಚಾರವೇನಾದರೂ ಇದ್ದಲ್ಲಿ ಅದರ ಸಾಧಕ‌ ಭಾಧಕಗಳ ಅರ್ಥಪೂರ್ಣ ಚರ್ಚೆಗಿಂತ ಮಿಗಿಲಾಗಿ ಪೂರ್ವಾಗ್ರಹ ಪೀಡಿತವಾದ ವಿಷಯ ಮಂಡನೆಗಳು, ಜಾತಿ- ಮತ, ರಾಜಕೀಯ, ಪಕ್ಷ ಆಧಾರಿತ ದ್ವೇಷಪೂರಿತ ಪ್ರತಿಕ್ರಿಯೆಗಳು , ನಿಂದನೆ , ಆರೋಪ , ಪಕ್ಷಪಾತ ಎಲ್ಲವೂ ಒಟ್ಟೊಟ್ಟೊಗೇ ವಕ್ಕರಿಸಿಬಿಡುತ್ತವೆ. ಯಾರು ಹೆಚ್ಚು ಯಾವುದು ಶ್ರೇಷ್ಠ ಎನ್ನುವ ಅನಾರೋಗ್ಯಕರ ಮೇಲಾಟದಲ್ಲಿ ಮಾನವೀಯ ಮೂಲಗಳನ್ನೇ ಹೊಸಕಿ ಬಿಸುಡುವ ಹಂತಕ್ಕೆ ಹೋಗಿ ತಲುಪಿರುತ್ತದೆ.

ಅಪ್ಪಿತಪ್ಪಿ ಮೋದಿಯವರ ಸರ್ಕಾರದ ಉತ್ತಮ ಸಾಧನೆಯನ್ನು ಭ್ರಷ್ಟಾಚಾರ ಮುಕ್ತ ಆಡಳಿತವನ್ನು ದಿಟ್ಟ‌ ನಿರ್ಧಾರಗಳನ್ನು ಹೊಗಳಿದರೆ ನೀವು ಬಲಪಂಥೀಯ ಅಥವಾ ಹಿಂದೂವಾದಿಯಾಗಿ ಗೋಚರಿಸುತ್ತೀರ. ಅದೇ ರೀತಿ ಕಾಂಗ್ರೆಸ್‌ನ ಕೆಲವು ಹಿಂದಿನ ಸಾಧನೆಗಳನ್ನು ಮೆಚ್ಚಿ ಹೇಳಿದರೆ ನೀವು ಎಡ ಪಂಥೀಯನಾಗಿ ಅಪಹಾಸ್ಯಕ್ಕೀಡಾಗಿಬಿಡುತ್ತೀರ.

ಸ್ವಲ್ಪಮಟ್ಟಿಗೆ ಜಾತ್ಯಾತೀತತೆಯ ನೆರಳಲ್ಲಿ ಬರೆದರೆ ಬು(ಲ)ದ್ದಿಜೀವಿಯೆಂದೋ , ವಸ್ತುನಿಷ್ಠ ವಾಗಿ ವಿಮರ್ಶಿಸುವವ ಗಂಜಿಕಿರಾಕಿಯಾಗಿಯೋ ಕಂಗೊಳಿಸುವಂತೆ ಎಲ್ಲೆಡೆ ಅಸಹ್ಯಕರ ವಾಂತಿಯಾಗಿರುತ್ತದೆ. ತಮ್ಮ ಪಕ್ಷವನ್ನು ಹೊಗಳುವ ಸಿನಿಮಾ ನಟ ಅಥವಾ ನಟಿಯನ್ನು ಹಿಂದೆ ಮುಂದೆ ನೋಡದೆ ಆರಾಧಿಸುವ ಹಾಗೆ ಅವರು ಹಿಂಬಾಲಿಸುವ ಪಕ್ಷದ ತಪ್ಪುಗಳನ್ನು ಎತ್ತಿ ತೋರಿಸುವ ನಟ ನಟಿಯ ವಿರುದ್ಧ ಕೆಟ್ಟದಾಗಿ ಕಾಮೆಂಟ್ ಮಾಡೋದು….ತೀರಾ ಅಸಹ್ಯವಾಗಿ ಟ್ರೋಲ್ ಮಾಡುವುದು ನಿತ್ಯದ ಪ್ರಕ್ರಿಯೆಯಾಗಿದೆ.

ಯಾರಾದರೂ ಅಪರಾಧ ಮಾಡಿ ತಗಲಾಕಿಕೊಳ್ಳುವ ಮುನ್ನ ತಮ್ಮ ಪಕ್ಷದವರೆಂದು ರಾಜಾರೋಷವಾಗಿ ಹೇಳುತ್ತಿದ್ದವರು , ಅವರ ಅಪರಾಧ ಬಯಲಿಗೆ ಬಂದ ಕೂಡಲೇ ಅವರ ವರಸೆ ಬದಲಾಯಿಸಿ ಅವರನ್ನು ತಮ್ಮವರೆಂದು ಒಪ್ಪಿಕೊಳ್ಳಲು ತಯಾರಾಗದೇ ಅದನ್ನು ವಿರೋಧಿಗಳ ಹಣೆಗೆ ಕಟ್ಟುವ ಚಾಳಿ ಪರಸ್ಪರ ಕೆಸರೆರೆಚಾಟ ಮಾಮೂಲಿಯಾಗಿ ಬಿಟ್ಟಿದೆ.

ಕೆಲವರಂತೂ ಹೆತ್ತವರಿಗೆ ಹೆಗ್ಗಣ ಮುದ್ದು ಎಂಬಂತೆ ನೀವು ಏನೇ ಬರೆದರೂ ತಮ್ಮ ಪಕ್ಷಾಧಾರಿತ ಚೌಕಟ್ಟನ್ನು ಮೀರಿ ಹೊರಬರಲಾರರು. ಮತ್ತೇ ಕೆಲವರು ತಮ್ಮ ಧರ್ಮ ಅಥವಾ ಜಾತಿಯ ವ್ಯೂಹದಿಂದ ಆಚೆಗೆ ಏನನ್ನೂ ನೋಡುವ ಅರ್ಹತೆಯನ್ನೇ ಕಳೆದುಕೊಂಡುಬಿಟ್ಟಿರುತ್ತಾರೆ. ಬೇರೆಯವರ ಜಾತಿ ಹಾಗೂ ಧರ್ಮಗಳು ಇಂಥವರ ಕಣ್ಣಿಗೆ ಅಸಹ್ಯವಾಗಿಯೇ ಕಾಣುತ್ತವೆ.

ಉದಾಹರಣೆಗೆ ಒಂದಷ್ಟು ಜನಕ್ಕೆ ಮೋದಿಯವರನ್ನು ಹಿಂದೂಗಳನ್ನು ಕಂಡರೆ ನಖ‌ಶಿಖಾಂತ ಉರಿದುಕೊಂಡು ಹೀಯ್ಯಾಳಿಸದಿದ್ದರೆ ಸಮಾಧಾನವಿರೋದಿಲ್ಲ. ಮತ್ತೇ ಹಲವರಿಗೆ ಇಂದಿರಾ ನೆಹರೂ ಫ಼್ಯಾಮಿಲಿ ಕಂಡರೆ ಕೆಂಡದಂಥ ಕೋಪ. ಅವರ ಬಗ್ಗೆ ಒಂದೆರಡು ಒಳ್ಳೆಯ ಮಾತುಗಳನ್ನು ಹೇಳುವ ಹಾಗೇ ಇಲ್ಲ. ರಾಮನಿಗೆ ಬಾಬರ್ ಕಂಡರೆ ದ್ವೇಷದಂತೆ , ಬಾಬರ್ ಗೆ ರಾಮನನ್ನು ಕಂಡರೆ ಈರ್ಷ್ಯೆಯಂತೆ
ಅನ್ಯ ಧರ್ಮೀಯರ ಪ್ರತೀ ನಡೆಯಲ್ಲೂ ವಿವಾದ ಹುಡುಕುವ ಪ್ರಯತ್ನ ಮುಂದುವರೆಸುತ್ತಾ ಮಂದಿರ ಮಸೀದಿ ಗಳನ್ನು ವಾರ್ ಫ಼ೀಲ್ಡ್ ಮಾಡಿಕೊಂಡು ಬಿಟ್ಟಿರುತ್ತಾರೆ.

ಅನಗತ್ಯ ಪೋಸ್ಟ್ ಗಳಿಂದ ಸಾಮಾನ್ಯ‌ ಜನಜೀವನವನ್ನೇ ‌ಕಂಗೆಡಿಸಿಬಿಡುತ್ತಾರೆ. ಯಾವನೋ ಒಬ್ಬ ಒಂದು ಧರ್ಮದ ವಿಚಾರದಲ್ಲಿ ಅಯೋಗ್ಯತನದ ಕೆಲಸ ಮಾಡಿದರೆ, ಅಪರಾಧ ಮಾಡಿದರೆ ಅವನು ಮೊದಲು ಯಾವ ಪಾರ್ಟಿಯವನೆಂದು , ಯಾವ ಧರ್ಮಕ್ಕೆ ಸಂಘಟನೆಗೆ‌ ಸೇರಿದವನೆಂದು ‌ಅಳೆದು ತೂಗಿ ಪ್ರತಿಕ್ರಿಯಿಸುತ್ತಾರೆಯೇ ಹೊರತು ಅವನ‌ ಕುಕೃತ್ಯವನ್ನು ಮನಸಾರೆ ಖಂಡಿಸುವ ಹೃದಯ ವೈಶಾಲ್ಯತೆ ಇರುವುದಿಲ್ಲ.

ಅಂದರೆ ಧರ್ಮಾಂಧನೊಬ್ಬ ತನ್ನ ಜಾತಿ- ಧರ್ಮಕ್ಕೆ ಸೇರಿದವನಾಗಿ ಎಂತಹಾ ಹಲ್ಕಾ ಕೆಲಸ ಮಾಡಿದರೂ ಅವನನ್ನು‌ ನಿರ್ಲಜ್ಜವಾಗಿ ಸಮರ್ಥಿಸಿಕೊಳ್ಳುವ ಮನಸ್ಥಿತಿಯ ಮಹಾನುಭಾವರು ನಮ್ಮ‌ ನಡುವೆ‌ ಹೆಚ್ಚಾಗುತ್ತಿದ್ದಾರೆ . ಅವನ‌ ಜಾತಿ ಧರ್ಮ ಪಕ್ಷದ ಹಿನ್ನೆಲೆ ನೋಡದೇ ಕೇವಲ ಅವರ ತಪ್ಪು ತಪರಾಕಿಗಳನ್ನು‌ ನೀವು ವಸ್ತುನಿಷ್ಠ ವಾಗಿ ಬರೆದರೋ…ಅಲ್ಲಿಗೆ ನಿಮ್ಮ ಮೇಲೆ ಎಡ ಬಲ ಗಂಜಿ ಎಂಬಿತ್ಯಾದಿ ವಿಶೇಷಣಗಳ ಬಾಣಗಳಿಂದ ಇಲ್ಲ ಸಲ್ಲದ ಯುದ್ಧಕ್ಕೆ ರೆಡಿಯಾಗುವ ಮಹಾನ್ ಸರಸ್ವತಿ ಪುತ್ರರು ಸಾಮಾಜಿಕ ಜಾಲತಾಣಗಳ ಸೈನ್ಯದಲ್ಲಿ ಶಸ್ತ್ರ ಸಜ್ಜಿತರಾಗಿ ಕಾದುಕುಳಿತಿರುತ್ತಾರೆ.!!

ಯಾಕೆ ಹೀಗೆ…??? ಒಂದು‌ ವಿಷಯವನ್ನು ಅದರ ಸತ್ಯದ ಹಾಗೂ ವಾಸ್ತವದ ನೆರಳಲ್ಲೇ ನೋಡಿ ನೈಜತೆಯಿಂದ ಹೇಳುವ , ಬರೆಯುವ ಅಥವಾ ವಿಮರ್ಶಿಸುವ ಪರಿಸ್ಥಿತಿ ಸಾಮಾಜಿಕ ಜಾಲತಾಣದಲ್ಲಿ ಸಂಪೂರ್ಣವಾಗಿ ಕಾಣೆಯಾಗುತ್ತಿದೆಯೇ ? ವಾಸ್ತವಿಕ ನೆಲೆಗಟ್ಟಿನಲ್ಲಿ ಪ್ರಶ್ನಿಸುವುದು ಅಪರಾಧವಾಗಿ ಕಂಡುಬರುತ್ತಿದೆಯೇ ? ಎಲ್ಲವನ್ನೂ ನಮ್ಮ ನಮ್ಮ‌ ಮೂಗಿನ‌ ನೇರಕ್ಕೇ ನೋಡಿ ನಿರ್ಧರಿಸುವ ಪರಿಯೇ ಇಂದಿನ ಆದೇಶವೇ ? ವಿದ್ಯೆಗೂ ವಿವೇಕಕ್ಕೂ ಸಂಬಂಧವಿಲ್ಲದಂತೆ ವರ್ತಿಸುವ ರೀತಿಯಲ್ಲಿ ಮನುಷ್ಯನ ಕಾಮನ್ ಸೆನ್ಸ್ ಕಾಣೆಯಾಗುತ್ತಿರುವುದರ ಬಗ್ಗೆ ಯಃಕಿಂಚಿತ್ ಅಳುಕೂ, ಆತ್ಮವಿಮರ್ಶೆ ಇಲ್ಲವಾಗುತ್ತಿದೆಯೇ ?

ತಮಾಷೆ ಹಾಗೂ ವಿಪರ್ಯಾಸವೆಂದರೆ ಈ ಎಲ್ಲಾ ಉಲ್ಟಾ ಬೆಳವಣಿಗೆಗೆ ಅವಿದ್ಯಾವಂತರು ಕಾರಣರಲ್ಲ. ಅವರೆಲ್ಲಾ ಮೊದಲು ಹೇಗಿದ್ದರೋ ಈಗಲೂ ಅದೇ ಮುಗ್ದತೆ ಮತ್ತು ಅಮಾಯಕತನವನ್ನು ಉಳಿಸಿಕೊಂಡು ಬಂದಿದ್ದಾರೆ. ಆದರೆ ವಿದ್ಯಾವಂತರೆನ್ನುವ ಗುಂಪುಗಳ ನಡುವೆ ಈ ವೈಷಮ್ಯದ ಮೇಲಾಟ ದ್ವೇಷಮಯವಾಗಿ ಮಾರ್ದನಿಸುತ್ತಿರುವುದು ದೇಶದ ಭವಿಷ್ಯಕ್ಕೇ ಮಾರಕ. ಇನ್ನೂ ನೋವೆಂದರೆ ಇದರ ಗಂಭೀರತೆಯನ್ನು ಅರಿಯದೇ ಅದನ್ನು ಪೋಷಿಸುವ ಕೆಲಸ ಅವ್ಯಾಹತವಾಗಿ ನೆಡೆಯುತ್ತಿರುವುದು !

ಗೆಳೆಯರೇ, ಸಾಮಾಜಿಕ ಜಾಲತಾಣದಲ್ಲಿ ಯಾರು ಯಾರನ್ನೂ ಬದಲಾಯಿಸಲು ಅಥವಾ ಪ್ರಭಾವ ಬೀರಲು ಸಾಧ್ಯವಿಲ್ಲ . ಎಲ್ಲರೂ ಅವರವರ ನೇರಕ್ಕೆ ಸರಿಯೇ ! ಆದರೆ ಒಂದು ವಿಚಾರ ತನಗೆ ಇಷ್ಟವಾಗದಿದ್ದರೂ ಒಂದು ಆರೋಗ್ಯಕರ ಚರ್ಚೆಗೆ ಒಳಪಡುವ ಮನಸು‌ ಬಹಳಷ್ಟು ಜನರಿಗೆ ಇಲ್ಲವಾಗಿರುವುದು ಆತಂಕಕಾರಿ ಪ್ರವೃತ್ತಿ. ಈ ರೀತಿಯ ರೋಗಗ್ರಸ್ತ ಮನಸುಗಳಿಂದ ನರಳುವವರ ಭಯಾನಕ ಕೃತ್ಯಗಳ ಪರಿಣಾಮ ಸಮಾಜದ ಭಾವೈಕ್ಯತೆಯ ದೃಷ್ಟಿಯಿಂದ ತೀರಾ ಅಪಾಯಕಾರಿ.

ಈ ಎಲ್ಲದಕ್ಕೂ ಕಾರಣ – ಸಮಾಜದ ಇಡೀ ವ್ಯವಸ್ಥೆಯನ್ನು ಬಹುಪಾಲು ಜನ ಪೂರ್ವಾಗ್ರಹ ಪೀಡಿತರಾಗಿ, ಹುಟ್ಟುವ ಮುನ್ನ ಹೀಗೇ ಇಂತಹದೇ ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಗುಜರಾಯಿಸಿ ಹುಟ್ಟಿದವರಂತೆ ಭಾವಿಸಿ, ಹಳದಿ‌ ಕನ್ನಡಕ ಧರಿಸಿ ನೋಡುತ್ತಿರುವುದೇ ಆಗಿದೆ. ಆರೋಗ್ಯಕರ ಚರ್ಚೆಯ ತಕ್ಕಡಿಯಲ್ಲಿ ತೂಗಿದ ವಿಚಾರಗಳು ಎಲ್ಲರಲ್ಲೂ ಉತ್ಸಾಹ ಉಲ್ಲಾಸವನ್ನು‌ ಮೂಡಿಸುವಂತಿದ್ದರೂ ಅದನ್ನು ಮರೆತು ಜಾತಿ- ಧರ್ಮ, ಪಕ್ಷ, ಹುಸಿ ತತ್ವದ ಕುರುಡಲ್ಲಿ ವಾಸ್ತವವನ್ನು ಕಸದಂತೆ ಹೊಸೆದು ಬಿಸುಡುವ ದಾನವತೆ ಮೈಮೇಲೆ ಬಂದಂತಾಡುವ ಮನಸ್ಥಿತಿ ಮೆರೆಯುತ್ತಲಿದೆ.

ಮರೆಯುವ ಮುನ್ನ

ಕೇವಲ ಉನ್ನತ ವಿದ್ಯೆಯಿಂದ, ಹುದ್ದೆಯಿಂದ ನಾವು ದೊಡ್ಡವರಾಗುವುದಿಲ್ಲ. ನಾವು ಕಲಿತ ವಿದ್ಯೆ ನಮಲ್ಲಿನ ವಿವೇಕ‌, ಬುದ್ದಿ ಹಾಗೂ ಮುಖ್ಯವಾಗಿ ಸಾಮಾನ್ಯ ಜ್ಞಾನವನ್ನು ವೃದ್ದಿಗೊಳಿಸುವಂತಿದ್ದರೆ ಮಾತ್ರವೇ ವಿದ್ಯಾವಂತರಾಗಿದ್ದಕ್ಕೂ ಸಾರ್ಥಕ. ಇಲವಾದಲ್ಲಿ ಅದು ನಾಯಿ ಮೊಲೆಯಲ್ಲಿನ ಹಾಲಂತೆ ಸಮಾಜಕ್ಕೆ‌ ನಿಷ್ಪ್ರಯೋಜಕ. ನಮ್ಮಿಂದ ಮತ್ತೊಬ್ಬರಿಗೆ ಒಳ್ಳೆಯದಾಗದಿದ್ದರೂ ಪರವಾಗಿಲ್ಲ ಆದರೆ ಕೆಟ್ಟದ್ದನ್ನು ಬಯಸುವ, ಮಾಡುವ ಕೆಲಸ ಆಗದಿದ್ದರೆ ಅದೂ ಈ ಸಮಾಜಕ್ಕೆ ಮಾಡುವ ಉಪಕಾರದಂತೆ ! ದೀಪದಿಂದ ದೀಪ ಹಚ್ಚುವ ಕೆಲಸವಾಗಬೇಕೇ ವಿನಃ ಬೆಂಕಿ ಹಚ್ಚುವ ಕೃತ್ಯವಾಗಬಾರದು. ಸಾಮಾಜಿಕ ಜಾಲತಾಣಗಳು ತಂತ್ರಜ್ಞಾನ ಇವೆಲ್ಲವನ್ನೂ ಮನುಷ್ಯತ್ವದ ತತ್ವದಾಧರದಲ್ಲಿ ಆರೋಗ್ಯಕರ ರೀತಿಯಲ್ಲಿ‌ ಬಳಸಿದರೆ ಮಾತ್ರವೇ ನಾಡಿಗೆ ಕ್ಷೇಮ ! ಇಲ್ಲವಾದಲ್ಲಿ ಮುಂದೊಂದು ದಿನ ಅದರಿಂದ ಮಾನವೀಯ ಮೌಲ್ಯಗಳ ಕ್ಷಾಮ !

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಗೌರಿ ಮೇಡಂ ಜೊತೆ ಒಡನಾಟದ ನೆನಪುಗಳು

Published

on

  • ಹರ್ಷಕುಮಾರ್ ಕುಗ್ವೆ

ದು 2008ನೇ ಇಸವಿ. ಶಿವಮೊಗ್ಗದಲ್ಲಿ ವಿದ್ಯಾರ್ಥಿ ಸಂಘಟನೆಯಲ್ಲಿ ಪೂರ್ಣಾವಧಿ ಹೋರಾಟಗಾರನಾಗಿ ಕೆಲಸ ಮಾಡುತ್ತಿದ್ದ ನನಗೆ ಜೀವನದಲ್ಲಿ ದೊಡ್ಡ ಅನಾಹುತವೊಂದು ಎದುರಾಗಿತ್ತು. ನನ್ನ ಅವ್ವನಿಗೆ ದಿಢೀರ್ ಅನಾರೋಗ್ಯ ಕಾಣಿಸಿಕೊಂಡಿತ್ತು. ಅದುವರೆಗೆ ಸುಮಾರು ಹತ್ತು ಹನ್ನೆರಡು ವರ್ಷಗಳಿಂದ ಮನೆ, ಮಠ, ತಮ್ಮ, ತಂಗಿ, ಅಪ್ಪ, ಅಮ್ಮ ಎಲ್ಲರನ್ನೂ ಬಹುತೇಕ ತೊರೆದು ಸಮಾಜದಲ್ಲಿ ಬದಲಾವಣೆ ತರಬೇಕು ಎಂದುಕೊಂಡು ಕೆಲಸ ಮಾಡುತ್ತಿದ್ದ ನನ್ನ ಜಂಘಾಬಲ ಉಡುಗಿಸಿತ್ತು ಈ ಘಟನೆ.

ಅವ್ವನನ್ನು ಆಸ್ಪತ್ರೆಗೆ ಸೇರಿಸಿ ಒಂದು ವಾರ ಅಡ್ಮಿಟ್ ಮಾಡಿಕೊಂಡರೆ ಡಿಸ್ಚಾರ್ಜ್ ಮಾಡಿಸುವಾಗ ಕೈಯಲ್ಲಿ ನಯಾಪೈಸೆ ಕಾಸಿಲ್ಲ. ಮನೆಯಲ್ಲಿ ಸಹ ಇದೇ ಸ್ಥಿತಿ. ಅವ್ವನ ಅನಾರೋಗ್ಯಕ್ಕೂ ಒಂದು ರೀತಿಯಲ್ಲಿ ನಾನೇ ಕಾರಣನಾಗಿದ್ದೆ. ನನ್ನ ಬಗ್ಗೆ ದೊಡ್ಡ ಕನಸುಗಳಿಟ್ಟುಕೊಂಡಿದ್ದ ಅವ್ವ ಒಂದು ರೀತಿ ಭ್ರಮನಿರಸನಳಾಗಿ ಮಾನಸಿಕ ಆಘಾತಕ್ಕೊಳಗಾಗಿದ್ದಳು.

ಕೊನೆಗೆ ಆಸ್ಪತ್ರೆಗೆ ಕಟ್ಟಲು ಬೇಕಾಗಿದ್ದ 12 ಸಾವಿರ ರೂಪಾಯಿಗೆ ಶಿವಮೊಗ್ಗದ ಹಿರಿಯ ಕಿರಿಯ ಗೆಳೆಯರ ಬಳಿ ನಾಲ್ಕೈದು ದಿನ ಸೈಕಲ್ ಹೊಡೆದು ಸಾಲ ಮಾಡಿ ಮನೆಗೆ ಕರೆದುಕೊಂಡು ಹೋಗಿದ್ದೆ. ಅಮ್ಮ ಪೂರ್ತಿ ಹುಷಾರಾಗಬೇಕಾದರೆ ತಂಗಿ ಮದುವೆಯ ಜವಾಬ್ದಾರಿಯನ್ನು ನಾನೇ ಹೊತ್ತು ನೆರವೇರಿಸುವುದು ಒಂದೇ ದಾರಿ ಎಂದು ತೋರಿತು. ಆಗಲೇ ನನಗೆ “ಸಂಬಳ”ಕ್ಕಾಗಿ ಕೆಲಸವೊಂದನ್ನು ಮಾಡುವ ಅನಿವಾರ್ಯತೆ ಉಂಟಾಗಿದ್ದು.

ಆದರೆ ನನಗೆ ಕೆಲಸ ಯಾರು ಕೊಡುತ್ತಾರೆ? ನೆಟ್ಟಗೆ ಡಿಗ್ರಿ ಮುಗಿಸಿರಲಿಲ್ಲ, ಕಾನೂನು ಓದು ಪೂರ್ಣವಾಗಿರಲಿಲ್ಲ, ಏನು ಮಾಡುವುದು?

ಆಗ, ನನಗೂ ಒಂದು ದಾರಿ ಎಂದು ಕೈ ಹಿಡಿದಿದ್ದು ಬೇರೆ ಯಾರೂ ಅಲ್ಲ, ಗೌರಿ ಲಂಕೇಶ್. ಗೌರಿ ಲಂಕೇಶ್ ಪತ್ರಿಕೆಯಲ್ಲಿ ಅಂಕಣಕಾರರೂ, ಹಿರಿಯ ಸಂಗಾತಿಯೂ ಆದ ಶಿವಸುಂದರ್ ಅವರು ನನ್ನನ್ನು ಲಂಕೇಶ್ ಕಚೇರಿಗೆ ಬರಲು ತಿಳಿಸಿದರು. ಮರುದಿನ ಹೋದೆ. ಮತ್ತೊಬ್ಬ ಹಿರಿಯ ಮಿತ್ರರಾದ ಪಾರ್ವತೀಶ್ ಮತ್ತು ಗೌರಿ ಮೇಡಂ ನನ್ನನ್ನು ಕೂರಿಸಿಕೊಂಡು ನೀನು ನಮ್ಮ “ಗೈಡ್” ಪತ್ರಿಕೆಗೆ 15 ದಿನ ಇಲ್ಲಿದ್ದುಕೊಂಡು ಕೆಲಸ ಮಾಡು, ಉಳಿದ 15 ದಿನ ಶಿವಮೊಗ್ಗದಲ್ಲಿ ನಿನ್ನ ಇತರೆ ಕೆಲಸಗಳ ಜೊತೆಯಲ್ಲಿ ಲಂಕೇಶ್ ಪತ್ರಿಕೆಗೆ ಏನಾದರೂ ಬರಿ” ಎಂದರು.

ಹೀಗೆ ಶುರುವಾದದ್ದು ನನ್ನ ಪತ್ರಿಕೋದ್ಯಮದ ಜೀವನ. ನಂತರ ಒಂದೂವರೆ ವರ್ಷ ಈ ರೀತಿ ಕೆಲಸ ಮಾಡಿದೆ. ಈ ನಡುವೆ ಶಿವಮೊಗ್ಗದಲ್ಲಿದ್ದುಕೊಂಡೇ ಒಂದಷ್ಟು ಅನುವಾದ ಮತ್ತಿತರ ಕೆಲಸಗಳನ್ನು ಮಾಡಬಹುದು ಎಂದುಕೊಂಡು ಒಂದು ಕಂಪ್ಯೂಟರ್ ತರಲು ಯೋಚಿಸಿದೆ. ಆದರೆ ಅದಕ್ಕೂ ಸಾಕಷ್ಟು ಹಣವಿರಲಿಲ್ಲ. ಆಗ ಗೌರಿ ಮೇಡಂ ತಾವೇ ಒಂದು ಸಲಹೆ ನೀಡಿದರು.

ಇದಕ್ಕೆ ಅರ್ಧದಷ್ಟು ಹಣ ನಾನು ಕೊಡುತ್ತೇನೆ, ಮಿಕ್ಕ ಅರ್ಧ ಹಣ ಹೊಂದಿಸಿಕೋ. ನನಗೆ ಕೊಡಬೇಕಾದ ಹಣದಲ್ಲಿ ತಿಂಗಳಿಗೆ ಒಂದು ಸಾವಿರ ರೂಪಾಯಿಯನ್ನು ನಿನ್ನ ಸಂಬಳದಲ್ಲಿ ಕಟ್ ಮಾಡಿಕೊಳ್ಳುತ್ತೇವೆ ಎಂದರು. ಇದು ನನಗೆ ಬಹಳ ಸಹಕಾರಿಯಾದ ದಾರಿಯಾಗಿದ್ದರಿಂ “ಆಯ್ತು ಮೇಡಂ” ಎಂದೆ. ಅದರಂತೆ ಮರುದಿನವೇ ಲಂಕೇಶ್ ಕಚೇರಿಯಲ್ಲಿ ನನ್ನ ಸಹೋದ್ಯೋಗಿಯಾಗಿದ್ದ ಕುಮಾರ್ ಬುರಡಿಕಟ್ಟಿ ಜೊತೆಗೆ ಎಸ್ಪಿ ರೋಡಿಗೆ ಹೋಗಿ ಒಂದು ಕಂಪ್ಯೂಟರ್ ಖರೀದಿಸಿಕೊಂಡು ಶಿವಮೊಗ್ಗಕ್ಕೆ ತಂದೆ. ಇದು ನನ್ನಂತಹ ಒಬ್ಬ ಕಾರ್ಯಕರ್ತನಿಗೆ ಗೌರಿ ಮೇಡಂ ಬದುಕು ಕಟ್ಟಿಕೊಳ್ಳಲು ನೆರವಾದ ರೀತಿ.

ಎರಡು ವರ್ಷಗಳ ನಂತರ ಒಂದು ದಿನ ನನಗೆ ಅನಿರೀಕ್ಷಿತವಾಗಿ ಮತ್ತೊಂದು ಪತ್ರಿಕೆಯಲ್ಲಿ ಕೆಲಸ ಅವಕಾಶವೊಂದು ಹುಡುಕಿಕೊಂಡು ಬಂತು. ಸ್ವಲ್ಪ ಹೆಚ್ಚಿಗೆ ಸಂಬಳಕ್ಕಾಗಿ ಆ ಪೂರ್ಣಾವಧಿ ಕೆಲಸ ಮಾಡುವುದು ನನಗೆ ಅನಿವಾರ್ಯವೂ ಅನಿಸಿ “ಗೌರಿ ಲಂಕೇಶ್” ಮತ್ತು ಗೈಡ್ ತಂಡವನ್ನು ಬಿಟ್ಟು ಹೊರಡಬೇಕಾಯಿತು.

ಇದನ್ನು ಗೌರಿ ಮೇಡಂಗೆ ತಿಳಿಸಿದಾಗ ಅವರು ಕೊಂಚವೂ ಬೇಸರ ಮಾಡಿಕೊಳ್ಳಲಿಲ್ಲ. “ಏಯ್ ಮರಿ ಅಲ್ಲಿ ಆ ಪತ್ರಿಕೆ ಇನ್ಚಾರ್ಜ್ ಆಗಿರೋದು ನನ್ನ ಫ್ರೆಂಡೇ, ಬೇಕಾದರೆ ನಿನ್ನ ಬಗ್ಗೆ ನಾನೂ ರೆಕಮೆಂಡ್ ಮಾಡ್ತೀನಿ” ಅಂದರು. ಮಾತ್ರವಲ್ಲ ನನಗೆ ಲಂಕೇಶ್ ಪತ್ರಿಕೆಯಿಂದ ಒಂದು ಬಹಳ ಪಾಸಿಟಿವ್ ಆದ “ಅನುಭವ ಪತ್ರ”ವನ್ನೂ ಬರೆದು ಕೊಟ್ಟರು. ನನ್ನ ಹೃದಯ ತುಂಬಿ ಬಂತು. ಒಂದು ಕಡೆ ಅವರಿಗೆ ಕೈಕೊಟ್ಟು ಹೋಗುತ್ತಿದ್ದೇನೆ ಎಂಬ ಗಿಲ್ಟ್ ನನ್ನನ್ನು ಕಾಡುತ್ತಿತ್ತು. ಆದರೂ ಅನಿವಾರ್ಯ ಎನಿಸಿತ್ತು.

ಕೆಲವು ದಿನಗಳ ನಂತರ ಗೌರಿ ಮೇಡಂಗೆ ಒಂದು ಪರ್ಸನಲ್ ಪತ್ರ ಬರೆದೆ. ಸಾರಾಂಶದಲ್ಲಿ ಅವರಿಗೆ ಕೃತಜ್ಞತೆ ತಿಳಿಸಿ, ನಾನು ಲಂಕೇಶ್ ಪತ್ರಿಕೆಯ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ ಕಾರಣಕ್ಕಾಗಿ ಲಂಕೇಶ್ ಅವರನ್ನೂ ಓದಿಕೊಳ್ಳುವ ಅವಕಾಶ ಬಂತು. ಮತ್ತು ನಾನು ಇದುವರೆಗೆ ನನ್ನ ಸಾಮಾಜಿಕ ಜೀವನದಲ್ಲಿ ಕಲಿಯದ ಕೆಲವು ಸಂಗತಿಗಳನ್ನೂ ಲಂಕೇಶ್ ಅವರ ಓದಿನಿಂದ ತಿಳಿದಂತಾಗಿದೆ, ಎಲ್ಲದಕ್ಕೂ ನಿಮಗೆ ಋಣಿಯಾಗಿದ್ದೇನೆ ಎಂದು ಬರೆದೆ. ಆದರೆ ಗೌರಿ ಮೇಡಂ ಹತ್ರ ಪರ್ಸನಲ್ ಅನ್ನೋದೇನೂ ಇರಲಿಲ್ಲ.

ಅವರದನ್ನು ಸಹೋದ್ಯೋಗಿಗಳಿಗೂ ತೋರಿಸಿದ್ದರು. ಇದು ಯಾವ ಬಗೆಯಲ್ಲಿ ವ್ಯಾಖ್ಯಾನಿಸಲ್ಪಟ್ಟಿತ್ತು ಎಂದರೆ ನಾನು “ಕಾರ್ಲ್ ಮಾರ್ಕ್ಸ್ ಗಿಂತಲೂ ಲಂಕೇಶ‍್ ಅವರನ್ನು ಹೆಚ್ಚೆಂದು ನೋಡಿದ್ದೀನೆಂದು! ಯಾವಾಗ ಈ ಪತ್ರ ನನಗೆ ಬೂಮರ್ಯಾಂಗ್ ಆಯ್ತೋ ಅಂದಿನಿಂದ “ಸಾವಾಸ ಸಾಕಪ್ಪಾ” ಅಂತ ದೂರ ಇದ್ದುಬಿಟ್ಟೆ. ಇದಾದ ಕೆಲವು ಒಂದೆರಡು ವರ್ಷಗಳ ಕಾಲ ಮತ್ತೆ ನಾನು ಆ ಕಡೆ ಹೋದದ್ದೇ ಕಡಿಮೆ.

2016ರ ಜನವರಿ ತಿಂಗಳಲ್ಲಿ ಹೈದ್ರಾಬಾದ್ ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲನ ಡೆತ್ ನೋಟ್ ಒಂದು ವೈರಲ್ ಆಯಿತು.. ಅದು ಒಂದು ಬಗೆಯಲ್ಲಿ ಇಡೀ ದೇಶದ ಪ್ರಜ್ಞಾವಂತರಲ್ಲಿ ಒಂದು ಬಗೆಯ ವಿಷಾದ ಮತ್ತು ಸಂಚಲನವನ್ನು ಮೂಡಿಸಿತು. ಇದಾದ ಕೆಲವೇ ದಿನಗಳಲ್ಲಿ ಜೆ ಎನ್ ಯು ನಲ್ಲಿ ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್ ಮೇಲೆ “ದೇಶದ್ರೋಹಿ” ಆರೋಪ ಮಾಡಿ ದಾಳಿ ನಡೆಸಿದ ಘಟನೆ ಬಂತು.

ಈ ಹೊತ್ತಿನಲ್ಲಿ ನಾನು ಬೇರೊಂದು ವೃತ್ತಿಯಲ್ಲಿ ತೊಡಗಿದ್ದರೂ ನನ್ನೊಳಗಿನ ಹೋರಾಟಗಾರ ಚಡಪಡಿಸುತ್ತಿದ್ದ. ಆಗ ಒಂದು ದಿನ ಗೌರಿ ಮೇಡಂ ಫೋನು ಬಂತು. “ರೋಹಿತ್ ವೇಮುಲ ಮತ್ತು ಕನ್ನಯ್ಯ ಬಗ್ಗೆ ಒಂದು ಪುಸ್ತಕ ಮಾಡೋಣ, ನೀನೇ ಅದಕ್ಕೆ ಏನೇನು ಬೇಕೋ ರೆಡಿ ಮಾಡು, ಪ್ರಿಂಟ್ ಹಾಕಿಸುವ ಜವಾಬ್ದಾರಿ ನನ್ನದು” ಎಂದರು. ನಾನೂ ಮರು ಮಾತಿಲ್ಲದೇ “ಓಕೆ ಮೇಡಂ” ಅಂದೆ. ಹೀಗೆ ನನ್ನ ಸಂಪಾದಕತ್ವದಲ್ಲಿ ಗೌರಿ ಮೇಡಂ ಪ್ರಕಟಿಸಿದ ಪುಸ್ತಕ “ದೇಶ ಅಂದರೆ ಮನುಷ್ಯರು”
ನಂತರ ಸೆಪ್ಟೆಂಬರ್-ಅಕ್ಟೋಬರ್ ಹೊತ್ತಿಗೆ ಚಲೋ ಉಡುಪಿ ಆಂದೋಲನ ನಡೀತು, ಇದಾದ ನಂತರ ಚಲೋ ತುಮಕೂರು, ಚಲೋ ಗುಡಿಬಂಡೆ, ಚಲೋ ಮಡಿಕೇರಿ ಹೀಗೆ ಸಾಲು ಸಾಲು ಚಲೋಗಳು ನಡೆದವು.

ಈ ಅವಧಿಯುದ್ದಕ್ಕೂ ನನಗೆ ಗೌರಿ ಮೇಡಂ ಅವರಲ್ಲಿ ಕಂಡಿದ್ದು ನನಗಿಂತಲೂ ಹೆಚ್ಚಿನ ಬದ್ಧತೆ ಹೊಂದಿ ಒಬ್ಬ ಸಾಮಾಜಿಕ ಕಾರ್ಯಕರ್ತೆಯಾಗಿದ್ದ ಗೌರಿ ಲಂಕೇಶ್ ಅವರನ್ನು. ಅವರು ಜಿಗ್ನೇಶ್, ಕನ್ಹಯ್ಯ, ಉಮರ್ ಖಾಲಿದ್ ಇವರನ್ನೆಲ್ಲಾ ತಮ್ಮ ದತ್ತು ಪುತ್ರರು ಎಂದು ಕರೆದುಕೊಂಡು ಅವರಿಗೆಲ್ಲಾ ಪ್ರೀತಿ ಹಂಚುತ್ತಿದ್ದಾಗ ಬಹಳ ಖುಶಿಯಾಗುತ್ತಿತ್ತು.

ಒಮ್ಮೆ ಜಿಗ್ನೇಶ್ ಬಂದಿದ್ದಾಗ ಅವರನ್ನು ಬೀಳ್ಕೊಡುವ ಸಂದರ್ಭದಲ್ಲಿ ನಾನು ಮತ್ತು ಗೌರಿ ಮೇಡಂ ವಿಮಾನ ನಿಲ್ದಾಣದ ವರೆಗೆ ಹೋಗಿ ಬಿಟ್ಟು ಬಂದಿದ್ದೆವು. ಈ ಸಂದರ್ಭದಲ್ಲಿ ಹೊಟೆಲ್ ಒಂದರಲ್ಲಿ ಊಟ ಮಾಡುವಾಗ ತೆಗೆದುಕೊಂಡಿದ್ದ ಒಂದು ಫೋಟೋ ನೋಡಿದಾಗಲೆಲ್ಲಾ ದುಃಖವಾಗುತ್ತದೆ.

ಒಮ್ಮೆ ನಾನು ಫೇಸ್ಬುಕ್ಕಿನಲ್ಲಿ ನಮ್ಮೂರಿನ ವಿಶೇಷ ಅಡುಗೆಯಾದ ಕೋಳಿ-ಕಜ್ಜಾಯದ ಫೋಟೋ ಹಾಕಿದ್ದೆ. ಆಗ ಗೌರಿ ಮೇಡಂ ಬರೀ ಹೊಟ್ಟೆ ಉರಿಸ್ತೀರ, ನನ್ನನ್ನು ಎಂದಾದರೂ ಅಕ್ಕಾ ಬಾ ಅಂತ ಕರೆದಿದ್ದೀರಾ ಎಂದು ನನಗೂ, ಪ್ರಗತನಿಗೂ ಛೇಡಿಸಿದ್ದರು. ಇದಾದ ಕೆಲವು ತಿಂಗಳ ನಂತರ ಒಂದು ಕೇಸಿಗಾಗಿ ಗೌರಿ ಮೇಡಂ ಶಿವಮೊಗ್ಗಕ್ಕೆ ಬರುತ್ತಾರೆಂದು ಅವರ ವಕೀಲರಾಗಿದ್ದ ಶ್ರೀಪಾಲ್ ತಿಳಿಸಿದರು.

ಆ ದಿನ ನಾನು ಊರಿನಲ್ಲಿದ್ದೆ. ಕೋಳಿ ಕಜ್ಜಾಯ ರೆಡಿ ಮಾಡುವುದು ಎಂದು ಮನೆಯಲ್ಲಿ ಹೇಳಿ ಗೌರಿ ಮೇಡಂಗೆ ಫೋನ್ ಮಾಡಿದರೆ ಅವರು ಆ ದಿನ ಕೇಸಿಗೆ ಬಂದಿರಲೇ ಇಲ್ಲ. “ಇಲ್ಲ ಮರಿ, ಸಾರಿ, ಬೇರೊಂದು ಕೆಲಸ ತುರ್ತಾಗಿ ಬಂದು ಬರಲಾಗಲಿಲ್ಲ, ಮುಂದಿನ ಡೇಟಿಗೆ ಖಂಡಿತಾ ಬರುತ್ತೇನೆ, ಆಗ ಕೊಳಿ-ಕಜ್ಜಾಯ ಮಾಡಿಸುವಿಯಂತೆ” ಅಂದಿದ್ದರು. “ಆಯ್ತು ಮೇಡಂ” ಅಂದೆ. ಆದರೆ ಆ ಮತ್ತೊಂದು ಡೇಟ್ ಎಂದೂ ಬರಲೇ ಇಲ್ಲ!

2017ರ ಮಾರ್ಚ್ –ಏಪ್ರಿಲ್ ತಿಂಗಳು ಎಂದು ಕಾಣುತ್ತದೆ. ಡಾ.ಸಿ.ಎಸ್,ದ್ವಾರಕಾನಾಥ್ ಅವರ ಮಾರ್ಗದರ್ಶನದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಡಿ ಕೆಲಸ ಮಾಡುವ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಸಂಸ್ಥೆಗಾಗಿ ಅಲೆಮಾರಿ ಸಮುದಾಯಗಳ ಕುರಿತು ಒಂದು ಸಂಶೋಧನೆ ಮಾಡುವ ಅವಕಾಶ ಬಂದಿತ್ತು. ಇದು ನಡೆಯುತ್ತಿದ್ದ ಸಮಯದಲ್ಲಿ ಒಂದು ರಾತ್ರಿ 11 ಗಂಟೆಗೆ ಗೌರಿ ಮೇಡಂ ಒಂದು ದೊಡ್ಡ ಮೆಸೇಜ್ ಕಳಿಸಿದರು.

ಅದರಲ್ಲಿ ನನ್ನ ಕುರಿತು ಕೆಲವು ಆರೋಪಗಳಿದ್ದವು. ಆ ಸಂಶೋಧನೆ ಯೋಜನೆಯ ಕುರಿತು ಕೆಲವು ತಪ್ಪು ಮಾಹಿತಿಗಳಿಂದ ಕೂಡಿದ ಆರೋಪಗಳೂ ಇದ್ದವು. ನನಗೆ ಅದನ್ನು ನೋಡಿ ಮೇಡಂ ಹೀಗೆಲ್ಲಾ ಯೋಚಿಸುವುದಾ ಅನಿಸಿದರೂ, ಅವುಗಳಿಗೆ ಉತ್ತರಿಸುವುದು ನನ್ನ ಜವಾಬ್ದಾರಿ ಎಂದೆಣಿಸಿ ಅವರು ಬರೆದಿದ್ದ ಪ್ರತಿಯೊಂದು ಅಂಶಕ್ಕೂ ವಿವರಣೆಯನ್ನು ಬರೆದು ರಾತ್ರಿ 2 ಗಂಟೆಯ ಸುಮಾರಿಗೆ ಕಳಿಸಿದೆ. ಅದನ್ನು ಓದಿದ ಮೇಡಂ ನಿಜಕ್ಕೂ ಕನ್ವಿನ್ಸ್ ಆಗಿದ್ದರು. ಮೊದಲು ಬಹಳ ಬಿರುಸಿನಿಂದ ಶುರುವಾಗಿದ್ದ ಆ ಮೆಸೆಂಜರ್ ಮಾತುಕತೆ ಮುಗಿಯುವಾಗ ಪರಸ್ಪರ ಸಾರಿ ಕೇಳಿಕೊಳ್ಳುವಲ್ಲಿಗೆ ಸುಖಾಂತ್ಯ ಕಂಡಿತ್ತು.

ಗೌರಿ ಮೇಡಂ ಹತ್ಯೆಯಾಗುವ ಕೆಲವು ದಿನಗಳ ಮೊದಲು ಗೌರಿಯವರು ಇಷ್ಟಪಡುತ್ತಿದ್ದ ಕೆಲವಾರು ಪ್ರಗತಿಪರ ಶಕ್ತಿಗಳು ತಮ್ಮ ತಮ್ಮೊಳಗೆ ಕಚ್ಚಾಡುತ್ತಿದ್ದುದನ್ನು ಕಂಡು ತುಂಬಾ ಮನಸಿಗೆ ಹಚ್ಚಿಕೊಂಡಿದ್ದರು. ಆಗಷ್ಟೇ ಅವರು ಟ್ವಿಟರ್ ಅಕೌಂಟ್ ಮಾಡಿಕೊಂಡು ಟ್ವೀಟ್ ಮಾಡುತ್ತಿದ್ದರು. ಅದರಲ್ಲೂ ನಾವೆಲ್ಲಾ ಒಂದು ಉದ್ದೇಶಕ್ಕಾಗಿ ಕೆಲಸ ಮಾಡೋಣ, ನಮ್ಮ ನಮ್ಮಲ್ಲೇ ಕಚ್ಚಾಟ ಬೇಡ ಎಂದು ಕೋರಿಕೊಂಡಿದ್ದರು.

ಇದು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದ್ದ ಜಗಳಗಳ ಹಿನ್ನೆಲೆಯಲ್ಲೇ ಅವರು ಮಾಡಿದ್ದ ಟ್ವೀಟ್ ಆಗಿತ್ತು. ಆದರೆ ಇದನ್ನು ವಿಕೃತ ರೀತಿಯಲ್ಲಿ ಬಳಸಿಕೊಂಡಿದ್ದು ಕೆಲ ಬಲಪಂಥೀಯ ಪತ್ರಕರ್ತರಾಗಿದ್ದರು. ಈ ಸಂದರ್ಭದಲ್ಲಿ ನಾವು ಯಾರಾದರೂ ಸಿದ್ದರಾಮಯ್ಯ ಅವರ ಕುರಿತು ಏನಾದರೂ ವಿಮರ್ಶೆ ಬರೆದರೆ ಗೌರಿ ಮೇಡಂ ತುಂಬಾ ಸಿಡಿಮಿಡಿಯಾಗುತ್ತಿದ್ದರು. ಬಿಜೆಪಿ-ಸಂಘಪರಿವಾರವನ್ನು ಎದುರಿಸಲು ನಮಗೆ ಅನಿವಾರ್ಯವಾದ ಆಯ್ಕೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಎಂಬುದು ಅವರ ಗಟ್ಟಿ ನಂಬಿಕೆಯಾಗಿತ್ತು. ಈ ಕುರಿತು ಒಂದೆರಡು ಸಲ ನನಗೂ ಗೌರಿ ಮೇಡಂಗೂ ಫೇಸ್ಬುಕ್ಕಿನಲ್ಲಿ ಸಣ್ಣ ತಿಕ್ಕಾಟವೂ ಆಗಿತ್ತು. ಆದರೆ ಅದು ವೈಯಕ್ತಿಕ ಮಟ್ಟದಲ್ಲಂತೂ ಇರಲಿಲ್ಲ.

2017ರ ಸೆಪ್ಟೆಂಬರ್ 05ರಂದು ಗೌರಿ ಮೇಡಂ ಹತ್ಯೆ ಕನ್ಪರ್ಮ್ ಆದ ಕ್ಷಣದಲ್ಲಿ ಕುಸಿದು ಬಿದ್ದಂತಾಯಿತು. “ನಾನು ಗೌರಿ” ಎಂದು ಫೇಸ್ಬುಕ್ಕಿನಲ್ಲಿ ಒಂದು ವಾಕ್ಯವನ್ನು ಬರೆದು ಕೆಲವು ಗಂಟೆಗಳ ಕಾಲ ಸುಮ್ಮನೇ ಕುಳಿತುಬಿಟ್ಟೆ.
ತಾನಿರುವ ಕಾಲವನ್ನು, ಕಾಲದ ಬಿಕ್ಕಟ್ಟುಗಳನ್ನು ಸರಿಯಾಗಿ ಗ್ರಹಿಸಿಕೊಂಡು ಅದಕ್ಕೆ ತಕ್ಕಂತೆ ಪಕ್ಷ ಸಿದ್ಧಾಂತಗಳ ಗಡಿಗಳನ್ನು ಮೀರಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು ಎಂಬ ನಿಟ್ಟಿನಲ್ಲಿ ತನ್ನನ್ನು ತಾನು ತೇಯ್ದುಕೊಳ್ಳುತ್ತಿದ್ದರು ಗೌರಿ ಲಂಕೇಶ್.

ತಾನೊಬ್ಬ ಹೈಫೈ ಪತ್ರಕರ್ತೆಯಾಗುವ ಎಲ್ಲಾ ಅವಕಾಶಗಳನ್ನು ಬಿಟ್ಟು ತನಗೆ ಆತ್ಮತೃಪ್ತಿಯಾಗುವ ರೀತಿಯಲ್ಲಿ ಕನ್ನಡ ಪತ್ರಿಕೋದ್ಯಮವನ್ನೇ ಆರಿಸಿಕೊಂಡು, ಕೆಲವೇ ವರ್ಷಗಳಲ್ಲಿ ಅದ್ಭುತವಾಗಿ ವಿಶ್ಲೇಷಣೆ ನಡೆಸಿ ಬರೆಯುವ ಮಟ್ಟಿಗೆ ಒಬ್ಬ ಧೀಮಂತ ಪತ್ರಕರ್ತೆಯಾಗಿ ಬೆಳೆದಿದ್ದು ಗೌರಿ ಲಂಕೇಶ್. ಹೇಗೆ ಅವರಪ್ಪ ಲಂಕೇಶ್ ‘ಪ್ರಗತಿ ರಂಗ” ಕಟ್ಟಿಕೊಂಡು ರಾಜ್ಯವನ್ನೆಲ್ಲಾ ಸುತ್ತಿದ್ದರೋ ಹಾಗೆಯೇ ಗೌರಿ ಲಂಕೇಶ್ ಕೂಡಾ ನಾಡಿನ ಎಲ್ಲಾ ಜನಪರ ಶಕ್ತಿಗಳ ಕಣ್ಮಣಿಯಾಗಿ ಕೆಲಸ ಮಾಡುತ್ತಿದ್ದು. ಅವರೆಷ್ಟು ಸರಳತೆಯನ್ನು ಮೈಗೂಡಿಸಿಕೊಂಡಿದ್ದರು ಎಂದರೆ ಆಶ್ಚರ್ಯವಾಗುತ್ತದೆ.

ಗೌರಿ ಮೇಡಂ ಅವರು ಕೆಲಸ ಮಾಡುತ್ತಿದ್ದ ರೀತಿಯನ್ನು ಹತ್ತಿರದಿಂದ ನೋಡಿರುವ ನಾನು ಎಷ್ಟೋ ಸಲ ದಂಗಾಗಿದ್ದೇನೆ. ಗೈಡ್, ಲಂಕೇಶ್ ಪತ್ರಿಕೆ, ಹಲವಾರು ಪುಸ್ತಕಗಳ ಪ್ರಕಾಶನ ಇತ್ಯಾದಿ ಕೆಲಸಗಳನ್ನು ಅವರು ಅದ್ಯಾವ ಪರಿ ಮಾಡುತ್ತಿದ್ದರೆಂದರೆ ಕೆಲವೊಮ್ಮೆ ಹತ್ತಾರು ಗಂಟೆಗಳ ಕಾಲ ಎಡೆಬಿಡದೇ ಕೆಲಸ ಮಾಡುತ್ತಿದ್ದರು. ಕೆಲವೊಮ್ಮೆ ಎಲ್ಲಾ ಕೆಲಸವನ್ನೂ ಅವರೊಬ್ಬರೇ ಮಾಡಬೇಕಾದ ಪರಿಸ್ಥಿತಿ ಎದುರಾದಾಗಲೂ ತಾಳ್ಮೆಯಿಂದಲೇ ಎಲ್ಲವನ್ನೂ ನಿರ್ವಹಿಸುತ್ತಿದ್ದರು.

ಬಹುಶಃ ನಾನಾಗಲೀ, ಕುಮಾರ್ ಬುರಡಿಕಟ್ಟಿಯಾಗಲೀ ಲಂಕೇಶ್ ತೊರೆದು ಬೇರೆ ಕೆಲಸ ನೋಡಿಕೊಳ್ಳದೇ ಹೋಗಿದ್ದರೆ ಅವರ ಹೊರೆಯಲ್ಲಿ ಒಂದಷ್ಟು ನಾವೂ ಹೊತ್ತು ಅವರಿಗೆ ಒಂದಷ್ಟು ಹಗರುವಾಗುತ್ತಿತ್ತು ಎನಿಸುತ್ತದೆ. ಆದರೆ ಈಗ ಹಳಹಳಿಸಿ ಏನೂ ಪ್ರಯೋಜನವಿಲ್ಲ. ಅಂದಿನ ಪರಿಸ್ಥಿತಿಗಳೂ ಹಾಗಿರಲಿಲ್ಲ.
ಒಟ್ಟಿಗೇ ಕೆಲಸ ಮಾಡಿದ, ಒಟ್ಟಿಗೇ ಊಟ ಮಾಡಿದ, ಒಟ್ಟಿಗೇ ಶಟಲ್ ಆಡಿದ, ಒಟ್ಟಿಗೇ ಹೋರಾಟಗಳಲ್ಲಿ ಭಾಗಿಯಾದ ಗೌರಿ ಮೇಡಂ ಈಗಲೂ ಇರಬೇಕಿತ್ತು ಎಂದು ಅನಿಸುತ್ತಲೇ ಇರುತ್ತದೆ.

ನನಗೆ ನನ್ನ ಬದುಕಿನಲ್ಲಿ ಹೊಸ ದಾರಿಯೊಂದಕ್ಕೆ ಅಡಿಪಾಯ ಹಾಕಿಕೊಟ್ಟ ಅವರನ್ನು ಕೃತಜ್ಞತೆಯಿಂದ ನೆನೆಯದೇ ಇದ್ದರೆ ನನ್ನಷ್ಟು ಕೃತಘ್ನ ಯಾರೂ ಇರುವುದಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಈ ಸಮಯ

Published

on

ನಾವು ಚಿಕ್ಕವರಿದ್ದಾಗ ನಮ್ಮ ಅಪ್ಪ-ಅಮ್ಮ ನಾವು ಬೇಕೆನ್ನುವ ಆಟಿಕೆಗಳನ್ನು ಬಟ್ಟೆಗಳನ್ನು ಕೊಡಿಸುತ್ತಿದ್ದರು ನಾವು ಕೇಳುವ ಪ್ರತಿಯೊಂದನ್ನು ಇಲ್ಲ ಎನ್ನದೆ ಕೊಡಿಸುತ್ತಿದ್ದರು ನಾವು ಅವು ಸಿಕ್ಕಿತು ಎಂದು ಖುಷಿ ಪಡುವಾಗ ನಮ್ಮ ಖುಷಿಯನ್ನು ನೋಡುತ್ತಾ ನಮ್ಮ ತಂದೆ-ತಾಯಿ ಖುಷಿ ಪಡುತ್ತಿದ್ದರು. ಆದರೆ ಯಾರಾದರೂ ಖುಷಿನ ಕೊಂಡುಕೊಳ್ಳಲು ಸಾಧ್ಯವೇ?

ಯಾರೇ ಆಗಲಿ ಖಷಿಯನ್ನು ಎಲ್ಲಿಂದಲಾದರು ಕೊಂಡುಕೊಳ್ಳಲು ಸಾಧ್ಯವೇ ಎಂದು ನೋಡಿದಾಗ ಅದು ತುಂಬಾ ಅಸಾಧ್ಯವಾದುದಾಗಿದೆ. ಖುಷಿಯ ಬಗ್ಗೆ ದಲೈಲಾಮರವರು ಹೀಗೆ ಹೇಳಿದ್ದಾರೆ ಅದೇನೆಂದರೆ ಹ್ಯಾಪಿನೆಸ್ ಈಸ್ ನಾಟ್ ಸಮ್ಥಿಂಗ್ ರೆಡಿಮೇಡ್ ಇಫ್ ಕಮ್ಸ್ ಫ್ರಮ್ ಯುವರ್ ಓನ್ ಆಕ್ಷನ್ (happiness is not something readymade if comes from your own actions) ಎಂದು ಹೇಳುತ್ತಾರೆ ನಾವು ಮಾಡುವ ಕಾರ್ಯಗಳಿಂದ ನಮಗೆ ಖುಷಿ ಸಿಗುತ್ತದೆ ವಿನಃಹ ಕೊಂಡುಕೊಳ್ಳಲು ಸಾಧ್ಯವಿಲ್ಲ.

ನಾವು ಈ ಖುಷಿಯನ್ನು ಹೇಗೆ ಪಡೆಯುತ್ತೇವೆ?
Learn to enjoy little things ಅಷ್ಟೆ. ಮನುಷ್ಯ ಅಂದಮೇಲೆ ಒತ್ತಡ, ದುಃಖ, ಸಂಘರ್ಷ ಇದ್ದೇ ಇರುತ್ತದೆ ಯಾವ ವ್ಯಕ್ತಿಯಾಗಲಿ ನೋಡಲು ಎಷ್ಟೇ ಖುಷಿಯಿಂದ ಇದ್ದರೂ ಮುಖದಲ್ಲಿ ಖುಷಿ ಕಾಣಿಸಿದರು ಹೇಳಿಕೊಂಡರೂ ಆತ ಪ್ರಪಂಚದಿಂದ ರಹಸ್ಯವಾಗಿ ಒಂದಲ್ಲಾ ಒಂದು ನೋವು ದುಃಖವನ್ನು ಮುಚ್ಚಟ್ಟಿರುತ್ತಾನೆ.

ನಾವು ಈ ಆಧುನಿಕ ಜಗತ್ತಿನಲ್ಲಿ ದುಡಿಮೆಯ ಒತ್ತಡದಲ್ಲಿ ನಮಗಾಗಿ ಸ್ವಲ್ಪ ಸಮಯವನ್ನ ಕೊಡುವುದನ್ನ ಮರೆತುಬಿಡುತ್ತೇವೆ. ನಾವು ನಮ್ಮನ್ನ ನಾವು ಪ್ರತಿಸಿಕೊಳ್ಳುವಷ್ಟು ನಮ್ಮಲ್ಲಿ ಸಮಯ ಇಲ್ಲವೆಂದರೆ ನಾವು ಇತರರನ್ನು ಹೇಗೆತಾನೇ ಪ್ರೀತಿಸುತ್ತೇವೆ? ನಾವು ನಮಗೋಸ್ಕರ ಸಮಯ ನೀಡದಷ್ಟು ಬ್ಯುಸಿ (busy) ಆದರೆ ನಮ್ಮ ಪ್ರೀತಿ ಪಾತ್ರರಿಗೆ ಸಮಯ ನೀಡಲು ಹೇಗೆ ಸಾಧ್ಯ? ನಾವು ಖುಷಿ ನೆಮ್ಮದಿಯನ್ನು ಬೇಸಿಕ್ (basic) ಅಂಶಗಳಿಂದ ಪಡೆಯಬಹುದು ಎಂದುಕೊಂಡಿದ್ದರೆ ನಮ್ಮ ಜೀವನದಲ್ಲಿ ಯಾವುದೇ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯವಿಲ್ಲ.

ನಿಜ ಕಣ್ರಿ ನಾವು ಈ ಸೋಷಿಯಲ್ ಮೀಡಿಯಾಗಳಿಂದಲೇ ನಮ್ಮ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದೇವೆ WhatsApp, Facebook, Instagram, tiktok, gamesಗಳಂತ ಅಂತರ್ಜಾಲದ ಭಲೆಯಲ್ಲಿ ಸಿಲುಕಿಕೊಂಡಿರುವ ನಮ್ಮನ್ನು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಹಾಳು ಮಾಡುತ್ತಿರುವ ಸೋಷಿಯಲ್ ಮೀಡಿಯಾಗಳು.

ನಮ್ಮ ದಿನವು ಪ್ರಾರಂಭವಾಗುವುದು ಮೊಬೈಲ್ನಿಂದಲೇ ಮೊಬೈಲ್ ಸ್ರ್ಕೀನ್ ನೋಡಿಯೇ ನಮ್ಮ ದಿನ ನಿತ್ಯದ ಕಾರ್ಯಗಳು ಆರಂಭವಾಗುವುದು ನಾವು ಮೊಬೈಲ್ಗೆ ಅಷ್ಟೊಂದು ಅಡಿಕ್ಟ್ ಆಗಿಬಿಟ್ಟಿದ್ದೇವೆ.

ಖುಷಿ ಅನ್ನೋದು ನಾವು ಈ ಸೋಷಿಯಲ್ ಮೀಡಿಯಾಗಳಿಂದಾಗಲಿ ಐಷರಾಮಿ ಜೀವನದಿಂದಾಗಲಿ ಪಡೆಯಲು ಸಾಧ್ಯವಿಲ್ಲ. ನಾವು ನಮ್ಮ ಖುಷಿಯನ್ನು ಇರುವುದರಲ್ಲಿ ಇರುವವರ ಜೊತೆಗೆ ಕಾಣಲು ಬಿಡುತ್ತೇವೆ. ಬೇರೊಂದರಲ್ಲಿ ಹುಡುಕಲು ಹೊರಡುತ್ತೇವೆ. ಮನುಷ್ಯನ ಕೆಟ್ಟ ಗುಣವೋ ಸಹಜ ಗುಣವೋ ನಾ ಕಾಣೇ ಏಕೆಂದರೆ ತಮ್ಮನ್ನ ತಾವು ಯಾವಾಗಲು ಇತರರೊಂದಿಗೆ ಹೋಲಿಸಿಕೊಳ್ಳುತ್ತಾರೆ ಈ ಹೋಲಿಸಿಕೊಳ್ಳುವ ಗುಣವೇ ಮನುಷ್ಯನ ಖುಷಿ, ನೆಮ್ಮದಿಯನ್ನ ಹಾಳು ಮಾಡುತ್ತಾ ಬಂದಿದೆ.

ನಮ್ಮವರಿಗಾಗಿ, ನಮಗಾಗಿ, ನಮ್ಮವರಿಗೋಸ್ಕರ ಬದುಕುವುದಾದರೆ ಅವರಿಗಾಗಿ ಸ್ವಲ್ಪ ಸಮಯ ನೀಡಬೇಕಾಗುತ್ತದೆ. ದಿನದ ೨೪ ಗಂಟೆಗಳಲ್ಲೂ ನಾವು ಬ್ಯುಸಿ ಇರುವುದಿಲ್ಲ ಆದರೆ ಈ ಬ್ಯುಸಿ ಎನ್ನುವ ಉತ್ತರ ಕೊಡುವುದರಲ್ಲಿ ನಾವು ಬ್ಯುಲಸಿಯಾಗುತ್ತೇವೆ ಈ ರೀತಿಯ ಉತ್ತರ ಕೊಡುವುದನ್ನ ಮೊದಲು ನಾವು ನಿಲ್ಲಿಸಿದರೆ ಮುಂದೆ ಒಂದು ದಿನ ಸಾರಿ (sorry) ಎಂದು ಕೇಳಲು ಕೂಡ ನಮ್ಮ ಜೊತೆ ಯಾರು ಇರುವುದಿಲ್ಲ ನಮ್ಮವರಿಗೆ ಸಮಯ ನೀಡುವುದೆಂದರೆ ನಮ್ಮ ಆತ್ಮೀಯರಿಗೆ (ಅಪ್ಪ-ಅಮ್ಮ , ಮಕ್ಕಳು, ಅಕ್ಕ-ತಂಗಿ, ಅಣ್ಣ-ತಮ್ಮ, ಗೆಳಯ-ಗೆಳತಿ, ಗಂಡ-ಹೆಂಡತಿ) ಕೊನೆಗೆ ತಮಗಾಗಿ ಸ್ವಲ್ಪ ಸಮಯವನ್ನು ಕೊಡಲು ಅಭ್ಯಾಸವನ್ನು ಮಾಡಿಕೊಂಡರೆ ನಾವು ನಮ್ಮ ಜೀವನವನ್ನು ಸ್ವಲ್ಪ ತೃಪ್ತಿಯಿಂದ ಸಂತೋಷದಿಂದ ಕಳೆಯಲೂ ಬಹುದು ಹಾಗೆಯೇ ಕೊನೆಗೆ ನಮ್ಮ ಜೀವನವನ್ನು ತೃಪ್ತಿಯಿಂದ ಕಳೆದೆವು ಎಂಬ ಸಂತೃಪ್ತಿಯನ್ನಾದರು ಹೊಂದಬಹುದು.

ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್.
ಸಂಶೋಧನಾರ್ಥಿ
ಕನ್ನಡ ವಿಶ್ವವಿದ್ಯಾಲಯ ಹಂಪಿ
ಸಂಚಾರಿ: 9743930178

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ನುಡಿಯ ಒಡಲು -10 | ನುಡಿಯೆಂದರೆ ಅದೊಂದು ಅಂತಸ್ಥ ಸಾಮರ್ಥ್ಯವೇ ಹೊರತು ವರ್ತನೆಯಲ್ಲ

Published

on

  • ಡಾ.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ನುಡಿಯೆಂದರೆ ಅದೊಂದು ಅಂತಸ್ಥ ಸಾಮರ್ಥ್ಯವೇ ಹೊರತು ವರ್ತನೆಯಲ್ಲ. ನುಡಿ ಬಗೆಗಿನ ಇಂತಹದೊಂದು ಚಿಂತನೆ ನುಡಿಯರಿಮೆಯ ಚರಿತ್ರೆಯಲ್ಲಿಯೇ ಕ್ರಾಂತಿಕಾರಿ ಬೆಳವಣಿಗೆಯಾಗಿದೆ. ಇಂತಹ ಕ್ರಾಂತಿಯನ್ನು ಹುಟ್ಟು ಹಾಕಿದವರಲ್ಲಿ ಇಪ್ಪತ್ತನೇ ಶತಮಾನದಲ್ಲಿದ್ದ ಸ್ವಿಸ್ ನುಡಿಯರಿಗ ಫರ್ಡಿನಾಂಡ್ ಡಿ ಸಸ್ಯೂರ್ (26 ನವಂಬರ್1857–22 ಫೆಬ್ರವರಿ1913) ಮತ್ತು ಅದೇ ಇಪ್ಪತ್ತನೇ ಶತಮಾನದ ನಡುಗಾಲದಲ್ಲಿ ಕಾಣಿಸಿಕೊಂಡ ಅಮೇರಿಕದ ಮತ್ತೊಬ್ಬ ನುಡಿಯರಿಗ ನೋಮ್ ಚಾಮ್‍ಸ್ಕಿ (1907 -).

ಇವರಿಬ್ಬರನ್ನು ಹೊಸಕಾಲದ ನುಡಿಯರಿಮೆಯ ಹರಿಕಾರರೆಂದು ಹೇಳಬಹುದು. ಈ ಮಹಾನ್ ಚಿಂತಕರು ನುಡಿಯೆಂದರೆ ಅದೊಂದು ಅಂತಸ್ಥ ಸಾಮರ್ಥ್ಯವೇ ಹೊರತು ಅನುಕರಣೆಯಿಂದ ಕಲಿಯುವ ಬಗೆಯಲ್ಲ ಎಂಬ ಈ ಕ್ರಾಂತಿಕಾರಿ ಬೆಳವಣಿಗೆಗೆ ಕಾರಣವಾಗಿದ್ದಾರೆ.

ಮೇಲ್ನೋಟದಲ್ಲಿ ಇವರು ನುಡಿ ಕುರಿತು ಮಂಡಿಸುವ ತಿಳಿವಳಿಕೆಗಳು ಒಂದೇ ಬಗೆಯಲ್ಲಿ ಕಂಡರೂ, ಅವರಿಬ್ಬರು ಚರ್ಚಿಸುವ ನುಡಿ ಬಗೆಗಿನ ಚಿಂತನೆಗಳಲ್ಲಿ ತಾತ್ವಿಕ ವ್ಯತ್ಯಾಸಗಳಿವೆ. ಆ ತಾತ್ವಿಕ ವ್ಯತ್ಯಾಸಗಳನ್ನು ಗುರುತಿಸುವ ಗೊಡವೆಗೆ ಇಲ್ಲಿ ನಾನು ಹೋಗಲಾರೆ. (ನುಡಿಯ ಒಡಲು -08ರಲ್ಲಿ ಚಾಮ್ಸ್ಕಿಯ ನುಡಿ ಕುರಿತ ಚಿಂತನೆಗಳನ್ನು ಚರ್ಚಿಸಲಾಗಿದೆ) ಬದಲಾಗಿ ಸಸ್ಯೂರ್ ಅವರ ಚಿಂತನೆಗಳ ಸ್ವರೂಪವೆಂತಹದು ಎಂಬುದನ್ನು ಇಲ್ಲಿ ಚರ್ಚಿಸಲು ಯತ್ನಿಸುತ್ತೇನೆ.

ಫರ್ಡಿನಾಂಡ್ ಡಿ. ಸಸ್ಯೂರ್ ನುಡಿ ಹೇಗೆ ಒಂದು ಸಾಮರ್ಥ್ಯ ಎಂಬುದನ್ನು ತಿಳಿಸಲು ಕೆಲವು ಬಹುಮುಖ್ಯ ಅರಿಮೆ ಪದಗಳನ್ನು ಹುಟ್ಟು ಹಾಕಿದ್ದಾನೆ. ಇವನ ಪ್ರಕಾರ “ನುಡಿಯೆಂಬುದು ಸಂಕೇತ (ಚಿಹ್ನೆ)ಗಳ ವ್ಯವಸ್ಥೆ”. ಈ ಸಂಕೇತಗಳ ಸ್ವರೂಪ ಯಾದೃಚ್ಛಿಕವಾಗಿರುತ್ತದೆ (ಆರ್ಬಿಟ್ರರಿ). ಹಾಗೂ ಅವು ಸೂಚಕಗಳಾಗಿ ರೂಪುಗೊಳ್ಳವ ಬಗೆಗಳು ಯಾವಾಗಲೂ ರೇಖಾತ್ಮಕವಾಗಿರುತ್ತವೆ (ಲಿನಿಯರ್ ಆರ್ಡರ್). ಈ ನುಡಿ ಸಂಕೇತಗಳಿಗೆ ಎರಡು ಆಯಾಮಗಳಿರುತ್ತವೆ. ಅವುಗಳನ್ನು ಈ ಕೆಳಗಿನಂತೆ ತೋರಿಸಬಹುದು;

ಚಿತ್ರ-01

ಚಿತ್ರ-02

ಧ್ವನಿ ಸಂಕೇತಗಳಿಂದ ರೂಪುಗೊಳ್ಳುವ ಸೂಚಕ ಹಾಗೂ ಸೂಚಿತಗಳ ನಡವಿನ ನಂಟಸ್ತಿಕೆ ಒಂದು ಸಾಮಾಜಿಕ ಒಪ್ಪಂದವಷ್ಟೇ. ಎತ್ತುಗೆಗಾಗಿ ಮರ ಎಂಬ ಧ್ವನಿ ಸಂಕೇತಗಳ ರೂಪಕ್ಕೂ ಹಾಗೂ ಮರ ಎಂಬ ಅರ್ಥದ ನೆಲೆಗೂ ಯಾವುದೇ ಬಗೆಯ ನಂಟಸ್ತಿಕೆ ಇರುವುದಿಲ್ಲ. ಹಾಗಾಗಿ ಒಂದೇ ವಸ್ತು, ವಿಷಯವನ್ನು ಪ್ರತಿನಿಧಿಸುವಾಗಲೂ ಬೇರೆ ಬೇರೆ ನುಡಿ ಸಮುದಾಯಗಳು ತಮ್ಮದೇ ಧ್ವನಿರೂಪಗಳು ಹಾಗೂ ಅವುಗಳು ಸಂಯೋಜನೆಗೊಳ್ಳುವ ಬಗೆಗಳು ಬೇರೆ ಬೇರೆಯಾಗಿರುತ್ತವೆ.

ಕನ್ನಡದಲ್ಲಿ ಹುಡುಗ, ಇಂಗ್ಲಿಶಿನಲ್ಲಿ ಬಾಯ್, ಹಿಂದಿಯಲ್ಲಿ ಲಡಕಾ, ತಮಿಳಿನಲ್ಲಿ ಪೈಯನ್, ತೆಲುಗುನಲ್ಲಿ ಪಿಲ್ಲಡು/ಅಬ್ಬಾಯಿ ಮುಂತಾಗಿ ಹೇಳುತ್ತಾರೆ. ಎಲ್ಲ ನುಡಿಗಳು ಕೂಡ ಇಂತಹ ಸಂಕೇತ ವ್ಯವಸ್ಥೆಯಿಂದ ಕೂಡಿರುತ್ತವೆ. ಆ ಸಂಕೇತಗಳಲ್ಲಿ ಅಡಕವಾಗಿರುವ ಸೂಚಕ ಮತ್ತು ಸೂಚಿತಗಳ ರಾಚನಿಕ ವ್ಯವಸ್ಥೆ ಲಾಂಗ್ ಸ್ವರೂಪದಲ್ಲಿರುತ್ತದೆ.

ಇದೊಂದು ಅಂತಸ್ಥಗೊಂಡ ಸಾಮರ್ಥ್ಯ. ಈ ವಿನ್ಯಾಸವು ಯಾವಾಗಲೂ ಅಮೂರ್ತವಾಗಿರುತ್ತದೆ ಎಂಬುದು ಗಮನಾರ್ಹ. ಈ ಅಮೂರ್ತ ಸಾಮರ್ಥ್ಯವು ಪರೊಲ್‍ಯೆಂಬ ನುಡಿಯ ಮತ್ತೊಂದು ಸಾಧ್ಯತೆಯಿಂದ ವಾಸ್ತವಗೊಳ್ಳುತ್ತದೆ. ಅಂದರೆ ವ್ಯಕ್ತಿಗತ ಹಾಗೂ ಮಾತಿನ ಬಹಿರ್‍ರೂಪವನ್ನೇ ಪರೊಲ್ ಎಂದು ಹೇಳಲಾಗುತ್ತದೆ.

ಸಸ್ಯೂರ್‍ನ ಲಾಂಗ್ ಮತ್ತು ಪರೊಲ್ ಎಂಬ ಈ ಅರಿಮೆ ಪದಗಳನ್ನು ತಿಳಿಯುವುದರ ಮೂಲಕ ನುಡಿ ಹೇಗೆ ಒಂದು ಸಾಮರ್ಥ್ಯವೆಂಬುದನ್ನು ಇನ್ನಷ್ಟೂ ಹೆಚ್ಚು ಸಂಗತಿಗಳ ಮೂಲಕ ಅರಿಯಬಹುದು. ಆ ಎರಡೂ ಅರಿಮೆ ಪದಗಳು ನುಡಿಯ ಎರಡು ಬಹುಮುಖ್ಯ ನೆಲೆಗಳೆಂದು ಈ ಮೇಲೆ ಹೇಳಿದೆ. ಅವುಗಳನ್ನ ಒಂದು ಲಾಂಗ್ ಮತ್ತೊಂದನ್ನು ಪರೊಲ್ ಎಂದು ವಿಂಗಡಿಸಿ ನೋಡಬಹುದು. ಲಾಂಗ್‍ಯೆಂದರೆ ಅದೊಂದು ಸಾಮರ್ಥ್ಯ.

ನುಡಿಯ ಇಡೀ ವ್ಯವಸ್ಥೆಯನ್ನು ಅರಿಯುವ ಬಗೆಯೂ ಇದಾಗಿರುತ್ತದೆ. ಪರೊಲ್ ಲಾಂಗ್‍ನಿಂದ ಉತ್ಪಾದನೆಗೊಂಡ ಕ್ರಿಯೆ ಇಲ್ಲವೇ ದಿಟ ಮಾತಿನ ರೂಪವೆಂದು ಹೇಳಲಾಗಿದೆ. ಮಾನವರಲ್ಲಿ ಹಲವಾರು ಸಾಮರ್ಥ್ಯಗಳು ಇರುವ ಹಾಗೆಯೇ ನುಡಿ ಕೂಡ ಒಂದು ಸಾಮರ್ಥ್ಯ. ಈ ಸಾಮರ್ಥ್ಯ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಇರುತ್ತದೆ. ಕನ್ನಡವನ್ನು ಆಡುವರೆಲ್ಲರ ಸಾಮರ್ಥ್ಯ ಬೇರೆ ಬೇರೆಯಲ್ಲ. ಅವರಲ್ಲಿ ಅಂತಸ್ಥವಾಗಿರುವ ನುಡಿ ಸಾಮರ್ಥ್ಯದಲ್ಲಿ ಬಹುತೇಕ ಸಮಾನತೆ ಇರುತ್ತದೆ.

ಲೋಕದ ಬೇರೆ ಬೇರೆ ಸಮುದಾಯಗಳಲ್ಲಿ ಬೇರೆ ಬೇರೆ ನುಡಿ ಸಾಮರ್ಥ್ಯವಿರುತ್ತದೆ ದಿಟ. ಆದರೆ ಅವುಗಳು ಚೈನೀಸ್, ಜಪನೀಸ್, ತಮಿಳು ಹಾಗೂ ಕನ್ನಡ ಎಂದಿದ್ದು ಬೇರೆ ಬೇರೆ ಸಾಮರ್ಥ್ಯವನ್ನು ಹೊಂದಿದ್ದರೂ, ಆ ಎಲ್ಲ ನುಡಿಗಳು ಅಂತಸ್ಥ ನೆಲೆಯಲ್ಲಿ ಸಮಾನವಾದ ಸಾಮರ್ಥ್ಯವನ್ನು ಪಡೆದುಕೊಂಡಿರುತ್ತವೆ.

ಪರೊಲ್ ಎನ್ನುವುದು ವ್ಯಕ್ತಿಗತ ಅಭಿವ್ಯಕ್ತಿಯ ನುಡಿ ಬಳಕೆಯ ಲೋಕ ಮಾತ್ರವಲ್ಲ. ಅದು ಅಂತಹ ವ್ಯಕ್ತಿಗತ ಅಭಿವ್ಯಕ್ತಿಗೆ ಸಾರ್ವತ್ರಿಕ ನೆಲೆಯೊಂದು ಲಾಂಗ್‍ನಿಂದ ಹೇಗೆ ದೊರೆಯುತ್ತದೆ ಎಂಬುದು ಅತ್ಯಂತ ಮಹತ್ವದ ಸಂಗತಿಯನ್ನು ಅರಿಯುವ ಬಗೆಯಾಗಿದೆ. ಅಂದರೆ ಪರೊಲ್‍ನಂತಹ ಪರಿಣಾಮವನ್ನು ಅನುಭವಿಸಲು ಸಾಧ್ಯವಾಗುವುದೇ ನುಡಿಯೊಂದರ ಇಡೀ ರಚನೆ ಹಾಗೂ ಬಳಕೆಯ ನೆಲೆಗಳನ್ನು ಒಳಗೊಂಡಿರುವ ಲಾಂಗ್‍ನಿಂದ.

ನುಡಿಯ ಮೂರ್ತ ಪರಿಣಾಮಗಳು ಲಾಂಗ್ ಎಂಬ ಅಮೂರ್ತರೂಪದ ನುಡಿ ವ್ಯವಸ್ಥೆಯಿಂದ ಉತ್ಪಾದನೆಗೊಳ್ಳುತ್ತವೆ ಎಂಬುದು ಇದರಿಂದ ನಿಚ್ಚಳವಾಗುತ್ತದೆ. ಹಾಗಾಗಿ ಲಾಂಗ್ ಅನ್ನುವುದು ಸಮುದಾಯದ ನುಡಿಯೊಂದರ ಇಡೀ ಭಾಷಿಕ ವ್ಯವಸ್ಥೆ ಮಾತ್ರವಾಗಿರದೆ, ಅದೊಂದು ಸಾಮರ್ಥ್ಯವಾಗಿ ಮಾನವರಿಗೆ ದತ್ತವಾಗಿದೆ. ಚೆಸ್ ಆಟದ ಹೋಲಿಕೆಯ ಮೂಲಕ ಸಸ್ಯೂರ್ ಲಾಂಗ್-ಪರೊಲ್ ಎಂಬ ಡೈಕಾಟಮಿಯನ್ನು ಇನ್ನಷ್ಟೂ ಸುಳುವಾಗಿ ವಿವರಿಸುವ ಪ್ರಯತ್ನವನ್ನು ಮಾಡುತ್ತಾನೆ.

ಈ ಆಟದಲ್ಲಿ ಪಾಲ್ಗೊಳ್ಳುವ ಈರ್ವ ಆಟಗಾರರಿಗೆ ಚೆಸ್ ಆಟದ ಇಡೀ ವ್ಯವಸ್ಥೆಯು (ಲಾಂಗ್) ತಿಳದಿರಬೇಕು. ಆಟದಲ್ಲಿ ಆಟಗಾರನು ಮಾಡುವ ಪ್ರತೀ ನಿಯಮಗಳ ಆಯ್ಕೆ ಮತ್ತು ಆ ಸನ್ನಿವೇಶದಲ್ಲಿ ಅವನಿಗೆ ಎದುರಾಗುವ ತೊಡರುಗಳು, ಹಾಗೂ ತೋರುದಾರಿಗಳು ಲಾಂಗ್‍ನಿಂದ ಹೇಗೆ ನಿರ್ಧರಿಸಲ್ಪಟ್ಟಿರುತ್ತವೆ ಎಂಬುದು ಮನವರಿಕೆಯಾಗುತ್ತದೆ. ಈ ಆಟದ ಪ್ರಕ್ರಿಯೆಯಲ್ಲಿ ಆಟಗಾರನು ಆಯ್ಕೆ ಮಾಡಿಕೊಳ್ಳುವ ಬಿಡಿ ಬಿಡಿ ನಿಯಮಗಳ ಸ್ವರೂಪವೇ ಪರೊಲ್.

ಇಂತಹ ನಿಯಮಗಳನ್ನು ಬಳಸಲು ಬೇಕಾಗುವ ಸಾಮರ್ಥ್ಯ ಮತ್ತು ಚೆಸ್ ಆಟದ ಅಮೂರ್ತ ಸ್ವರೂಪದ ತಿಳಿವನ್ನು ಅರಿಯುವ ಬಗೆಯೇ ಲಾಂಗ್‍ಯೆಂದು ಹೇಳಬಹುದು. ಉಲಿ, ಪದ, ಸೊಲ್ಲುಗಳನ್ನು ಉತ್ಪಾದಿಸುವ ಹಾಗೂ ಅವುಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಮಾನವರಲ್ಲಿ ಅಂತಸ್ಥವಾಗಿರುತ್ತದೆ. ಹೀಗೆ ಅಂತಸ್ಥಗೊಂಡ ಸಾಮರ್ಥ್ಯವನ್ನೇ ಲಾಂಗ್‍ಯೆಂದು ಹೇಳಲಾಗುತ್ತದೆ. ಈ ಅಂತಸ್ಥ ಸಾಮರ್ಥ್ಯದ ಬಹಿರ್ ರೂಪಗಳೇ ಪರೊಲ್‍ಯೆಂದೂ ಹೇಳಲಾಗಿದೆ.

ನುಡಿಯಿಗರು ಹೇಗೆ ನುಡಿಯ ನಿಯಮಗಳನ್ನು ಅನುಸರಿಸುತ್ತಾರೆ, ಅಂತಹ ಬಗೆಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಸಸ್ಯೂರ್‍ನ ಈ ರೇಖಾತ್ಮಕ ನಂಟು ಮತ್ತು ಸಹಯೋಗಾತ್ಮಕ ನಂಟು ಎಂಬೀ ಅರಿಮೆ ಪದಗಳಿಂದ ಇನ್ನಷ್ಟೂ ನಿಚ್ಚಳಗೊಳಿಸಬಹುದು. ರಾಚನಿಕ ನಿಲುವುಗಳಲ್ಲಿ ಅಡಕವಾಗಿರುವ ನಿರ್ಬಂಧನೆಗಳು ಹಾಗೂ ಆಯ್ಕೆಯ ಅವಕಾಶಗಳು ಹೇಗಿರುತ್ತವೆ, ಮತ್ತು ಲಾಂಗ್ ಮತ್ತು ಪರೋಲ್‍ನಿಂದ ಅವುಗಳನ್ನು ಹೇಗೆ ನಿಭಾಯಿಸಿಕೊಳ್ಳುತ್ತೇವೆ ಎಂಬ ತಿಳಿವನ್ನು ಈ ಚಿತ್ರದ ಮೂಲಕ ಅರಿಯಲು ಯತ್ನಿಸೋಣ;

ಚಿತ್ರ-03

ಸಸ್ಯೂರ್‍ಗೆ ನುಡಿಯ ಸಂಕೀರ್ಣತೆಯ ಬಗೆಗೆ ಸಾಕಷ್ಟು ಅರಿವಿತ್ತು. ಅದಕ್ಕಾಗಿ ನುಡಿಯಲ್ಲಿ ಇಬ್ಬಗೆಯ ಕ್ರಿಯೆಗಳು ಹೇಗೆ ಒಟ್ಟೊಟ್ಟಿಗೆ ಬೇರೆ ಬೇರೆ ನೆಲೆಯಲ್ಲಿ ಕೆಲಸ ಮಾಡುತ್ತವೆ ಎಂಬುದನ್ನು ಜೋಡಿ ಪರಿಕಲ್ಪನೆಗಳ ಮೂಲಕ ತೋರಿಸಲು ಯತ್ನಿಸಿದ್ದಾನೆ. ಎತ್ತುಗೆಗಾಗಿ ಉಚ್ಚಾರಣೆ (ಆರ್ಟಿಕ್ಯೂಲೇಶನ್) ಮತ್ತು ಗ್ರಹಿಕೆ
(ಪರ್‍ಸೆಪ್ಶನ್), ರೂಪ/ಶಬ್ದ (ಸೌಂಡ್) ಮತ್ತು ಅರ್ಥ (ಮೀನಿಂಗ್), ವ್ಯಕ್ತಿ (ಇಂಡ್‍ಯ್ಯುಜಲ್) ಮತ್ತು ಸಮಾಜ (ಸೊಸೈಟಿ), ಗತ (ಪಾಸ್ಟ್) ಮತ್ತು ವರ್ತಮಾನ (ಪ್ರಸೆಂಟ್) ಎಂಬೆಲ್ಲ ಅರಿಮೆಯ ಪದಗಳ ಮೂಲಕ ನುಡಿಯ ಸಂಕೀರ್ಣತೆಯನ್ನು ಬಿಡಿಸಿ ನೋಡುವ ನೆಲೆಗಳನ್ನೂ ಅವನು ರೂಪಿಸಿದ್ದಾನೆ.
ನುಡಿಯನ್ನು ಅರಿಯಬೇಕೆಂದರೆ, ಅದರ ರಾಚನಿಕ ನೆಲೆಗಳನ್ನು ಅರಿಯಬೇಕು. ನುಡಿಯರಿಗನಿಗೆ ನುಡಿಯ ರಚನೆಯೇ ಅಧ್ಯಯನದ ಮುಖ್ಯ ವಸ್ತು ಆಗಬೇಕೆಂಬುದು ಕೂಡ ಸಸ್ಯೂರ್‍ನ ಉದ್ದೇಶವಾಗಿತ್ತು. ಅದಕ್ಕಾಗಿಯೇ ಅವನು ಲಾಂಗ್ ಮತ್ತು ಪರೊಲ್ ಅಂತಹ ಉಭಯ ಅರಿಮೆಯ ಪದಗಳ ನಡುವಣ ವೈಶಿಷ್ಟ್ಯವನ್ನು ಗುರುತಿಸಿದ್ದಾನೆ. ಲಾಂಗ್ ಅನ್ನುವುದು ಸಸ್ಯೂರ್‍ನ ಪ್ರಕಾರ ಒಂದು ಸಮಾಜಿಕ ಉತ್ಪನ್. ಇದೊಂದು ಅಮೂರ್ತ ಸ್ವರೂಪದ ರಾಚನಿಕ ವ್ಯವಸ್ಥೆ.

ನುಡಿ ಸಮುದಾಯದ ಎಲ್ಲ ನುಡಿಯಿಗರ ಮನಸ್ಸಿನಲ್ಲಿ ನುಡಿ (ಲಾಂಗ್) ಸಾಮರ್ಥ್ಯ ನೆಲೆಗೊಂಡಿರುತ್ತದೆ. ಈ ಸಾಮರ್ಥ್ಯದ ದಿಟ ರೂಪವೇ ಪರೊಲ್. ಇದನ್ನು ಸಸ್ಯೂರ್ ಎಕ್ಸ್ಯೂಶನ್ ಆಫ್ ಲಾಂಗ್‍ಯೆಂದು ಬಣ್ಣಿಸಿದ್ದಾನೆ. ಲಾಂಗ್ ಮತ್ತು ಪರೊಲ್‍ಗಳ ನಡುವಣ ವೈಶಿಷ್ಟ್ಯವನ್ನು ಗುರುತಿಸುವುದೆಂದರೆ, ಸಾಮಾಜಿಕ ರಚನೆಯಲ್ಲಿ ಅಂತರ್ಗತವಾಗಿರುವ ಭಿನ್ನತೆಗಳನ್ನು ಗುರುತಿಸಿದಂತೆ.

ಅಂದರೆ, ಲಾಂಗ್ ಮತ್ತು ಪರೊಲ್‍ಗಳನ್ನು ಬೇರ್ಪಡಿಸಿ ನೋಡುವುದೆಂದರೆ, ಯಾವುದು ಸಾಮಾಜಿಕ ಮತ್ತು ಯಾವುದು ವೈಯಕ್ತಿಕ, ಯಾವುದು ಪ್ರಧಾನ ಮತ್ತು ಯಾವುದು ಅಧೀನ ಎಂಬುದನ್ನೂ ಬೇರ್ಪಡಿಸಿ ನೋಡಲು ಸಾಧ್ಯವಾಗುತ್ತದೆ. ಆದರೆ ಸಸ್ಯೂರ್‍ಗೆ ಇದೆಲ್ಲವೂ ಆಕಸ್ಮಿಕವಾಗಿ ನುಡಿಯಲ್ಲಿ ಅಂತಸ್ಥವಾಗಿರುವ ಹಾಗೆ ಕಂಡಂತಿದೆ.

ಇದುವರಗೆ ಚರ್ಚಿಸಿದ ಸಸ್ಯೂರ್ ನುಡಿ ಬಗೆಗಿನ ಚಿಂತನೆಗಳು ನುಡಿಯೆಂಬುದು ಹೇಗ ಒಂದು ಸಾಮರ್ಥ್ಯವಾಗಿ ನುಡಿಯಿಗರಲ್ಲಿ ಅಂತಸ್ಥವಾಗಿರುತ್ತೆ, ಆ ಮೂಲಕ ಅವರು ನುಡಿಯ ಜೊತೆಗೆ ವ್ಯವಹರಿಸುತ್ತಾರೆ ಎಂಬುದನ್ನು ತಿಳಿದುಕೊಂಡಂತಾಯಿತು. ಈ ವಾದವನ್ನೇ ಬೇರೊಂದು ತಾತ್ವಿಕ ಚೌಕಟ್ಟಿನಿಂದ ಮಂಡಿಸಿದ ನೋಮ್ ಚಾಮ್‍ಸ್ಕಿಯ ಚಿಂತನೆಗಳೆಂತಹವು ಎಂಬುದನ್ನು ಈಗಾಗಲೇ ಹಿಂದಿನ ಅಂಕಣ 08ರಲ್ಲಿ ಚರ್ಚಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending