Connect with us

ದಿನದ ಸುದ್ದಿ

ಮೆಡಿಕಲ್ ಮಾಫಿಯಾ : ರೋಗಿಯ ಜೀವಕ್ಕೆ ಬೆಲೆ ಇದೆಯಾ..?

Published

on

  • ನಾಗೇಶ್ ಹೆಗಡೆ 

ಖಾಸಗಿ ಆಸ್ಪತ್ರೆಗಳು ಈಗಿನ ಕೋವಿಡ್ ಸಂಕಟಕಾಲದಲ್ಲಿ ಅದೆಷ್ಟು ರೀತಿ ರೋಗಿಗಳ ಸುಲಿಗೆಯಲ್ಲಿ ತೊಡಗಿವೆ ಎಂಬುದರ ವರದಿ ದಿನದಿನವೂ ಬರುತ್ತಿದೆ. ಸರಕಾರಿ ನಿಗಾ ಇದ್ದರೂ ಕ್ಯಾರೇ ಇಲ್ಲದೆ ಇವು ಲಂಗು ಲಗಾಮಿಲ್ಲದಂತೆ ವಸೂಲಿ ದಂಧೆಗೆ ಇಳಿದಿವೆ. ಈ ಮಾಫಿಯಾಗಳ ಕುರಿತು ವಿವೇಕ್ ಬಿಂದ್ರ ಎರಡು ವರ್ಷಗಳ ಹಿಂದೆ ದನಿ ಎತ್ತಿ, ಹಿಂದಿಯಲ್ಲಿ ಕೂಗಾಡಿದ ವಿಡಿಯೊ ಇಲ್ಲಿದೆ.

ಹಿಂದೀ ಭಾಷೆ ಗೊತ್ತಿಲ್ಲದವರಿಗೆ ನಾಗೇಶ ಹೆಗಡೆ ಮಾಡಿದ ಅದರ ಅಜಮಾಸು ತರ್ಜುಮೆ ಇದು (ಆವರಣದಲ್ಲಿ ಕೊಟ್ಟ ಸಂಖ್ಯೆಗಳು ಈ ವಿಡಿಯೊದ ಕಾಲಕ್ರಮವನ್ನು ತೋರಿಸುತ್ತವೆ). ಕನ್ನಡದಲ್ಲಿ ಇಷ್ಟೇ ಗಟ್ಟಿ ದನಿಯಲ್ಲಿ ಗರ್ಜಿಸಬಲ್ಲ ಯಾರಾದರೂ ಇದ್ದರೆ ಈ ಮಾಹಿತಿಯನ್ನು ಬಳಸಿಕೊಂಡು ವಿಡಿಯೊ ಮಾಡಬಹುದು. ಹಿಂದೀ ಭಾಷೆ ಗೊತ್ತಿದ್ದವರು ಯುಟ್ಯೂಬಿನಲ್ಲಿ ಅಥವಾ ಗೂಗಲ್‌ನಲ್ಲಿ vivek bindra ಇವರ ಇನ್ನೂ ಅಬ್ಬರದ, ಇನ್ನೂ ರೋಚಕ ಉದ್ದೀಪನ ಉಪನ್ಯಾಸಗಳನ್ನು ನೋಡಬಹುದು. ಖಾಸಗಿ ಆಸ್ಪತ್ರೆಗಳ ತಮ್ಮ ಅನುಭವವನ್ನು ಇಲ್ಲಿ ಹಂಚಿಕೊಳ್ಳಬಹುದು.


(0.15: ಸೆಕೆಂಡು) ದೇಶದಲ್ಲಿ ಬಿಳಿಕೋಟಿನ ಲೂಟಿಖೋರರ, ಖೂನಿದಾರರ ಹಾವಳಿ ಅತಿಯಾಗಿದೆ. ಈ ಖಾಸಗಿ ಆಸ್ಪತ್ರೆಗಳೆಂಬ ದೋಚುದಾಣಗಳು (ಅವುಗಳ ಹೆಸರನ್ನು ಹೇಳುವುದಿಲ್ಲ ನಾನು) ದುಡ್ಡು ಮಾಡ್ಕೊಳ್ಳಿ, ಬೇಜಾರಿಲ್ಲ ಆದರೆ ಈ ರೀತಿ ಲೂಟಿಗೆ ಇಳಿಯಬೇಡಿ. ನಾನು ಬಿಸಿನೆಸ್ ಕೋಚಿಂಗ್ ಕೊಡ್ತೇನೆ; ಬಿಸಿನೆಸ್ ಹೇಗೆ ಮಾಡಬಾರದು ಅನ್ನೋದನ್ನು ಇಲ್ಲಿ ಹೇಳ್ತೇನೆ. ನಮ್ಮ ದೇಶದ ಡಾಕ್ಟರ್ಗಳಿಗೆ ದುಡ್ಡನ್ನು ಗಳಿಸುವ ಅಧಿಕಾರ ಇದೆ. ಒಪ್ಪೋಣ. ಅದನ್ನು ಖುಷಿಖುಷಿಯಿಂದ, ಜವಾಬ್ದಾರಿಯಿಂದ, ನೈತಿಕವಾಗಿ ಗಳಿಸಲು ಸಾಧ್ಯ ಇದೆ.

(1.00) ಆದರೆ ಇಲ್ಲ, ಇವರಿಗೆ ಅದೇನೂ ಬೇಕಾಗಿಲ್ಲ. ಇವರಿಗೆ ಡಯಗ್ನೋಸ್ಟಿಕ್ ಲ್ಯಾಬ್ನಿಂದಲೂ ಹಣ ಬೇಕು; ಅಂಬುಲೆನ್ಸ್ ಮೂಲಕ ರೆಫರೆನ್ಸ್ ಪೇಶಂಟ್ಗಳನ್ನು ಸೆಳೆದುಕೊಂಡು ಅಲ್ಲಿಂದಲೂ ಹಣ ನುಂಗುತ್ತಾರೆ. ನಿಮಗೆ ಗೊತ್ತಿರಬೇಕು- ಅಂಬುಲೆನ್ಸ್ ಡ್ರೈವರಿಗೆ ಹೇಳುತ್ತಾರೆ “ನೋಡಪ್ಪಾ ಪೇಶಂಟ್ ಗಳನ್ನು ನಮ್ಮಲ್ಲಿಗೇ ಕರ್ಕೊಂಡು ಬಾ, ಕಮೀಶನ್ ಕೊಡ್ತೇನೆ” ಎನ್ನುತ್ತಾರೆ. ಡ್ರೈವರು ಜಾಸ್ತಿ ಹಣ ಸಿಗುವ ರಾಂಗ್ ಡಾಕ್ಟರ್ ಬಳಿ ಒಯ್ಯುವಾಗ ದಾರಿಯಲ್ಲೇ ರೋಗಿ ಸಾಯಬಹುದು.

ಈ ಡಾಕ್ಟರ್ ಗಳಿಗೆ ಔಷಧ ಅಂಗಡಿಗಳಿಂದಲೂ ದುಡ್ಡು ಬೇಕು. ಇವರು ಔಷಧ ತಯಾರಿಸುವ ಕಂಪನಿಗಳನ್ನೂ ಲೂಟಿ ಮಾಡುತ್ತಾರೆ. ಕಂಪನಿಗಳಿಗೆ ಇವರು ಹೇಳುತ್ತಾರೆ: “ನನ್ನ ಮಗಳು ಮತ್ತು ಅವಳ ಗೆಳೆಯನಿಗೆ ನ್ಯೂಯಾರ್ಕಿಗೆ ಹೋಗುವುದಿದೆ. ಅಲ್ಲಿಂದ ನ್ಯೂಜೆರ್ಸಿ, ಅಲ್ಲಿಂದ ನ್ಯೂಝಿಲ್ಯಾಂಡ್ ಹೋಗಿ ವಾಪಸ್ ನ್ಯೂಡಿಲ್ಲಿಗೆ ಬರ್ತಾರೆ; ತುಸು ಅವರ ಖರ್ಚುವೆಚ್ಚ ನೋಡಿಕೊಳ್ಳಿ” ಎನ್ನುತ್ತಾರೆ. “ನನಗೆ ಈವೆಂಟ್ ಮಾಡೋದಿದೆ, ಖರ್ಚು ನೋಡಿಕೊಳ್ಳಿ…” ಈ ಡಾಕ್ಟರ್ ಗಳ ಬೇಡಿಕೆಗಳಿಗೆ ಮಿತಿಯೇ ಇಲ್ಲ. ಫಾರ್ಮಾ ಕಂಪನಿಗಳಿಂದ ಇವರಿಗೆ ಹಣ ಬೇಕು, ರೋಗಿಗಳಿಂದ ಹಣ ಬೇಕು; ಆಸ್ಪತ್ರೆಗಳಿಂದಲೂ ಹಣ ಬೇಕು…

(1.30) ಅಲ್ಲಾರೀ, ಹಣ ಸಂಪಾದನೆ ಮಾಡೀಪ್ಪ; ಆದರೆ ಯಾರದೋ ದೌರ್ಬಲ್ಯದ ಲಾಭ ಪಡೆಯಬೇಡಿ! ಆ ಫಾರ್ಮಾ ಕಂಪನಿ ತನಗೆ ಬಂದ ಎಲ್ಲ ಖರ್ಚನ್ನೂ ಔಷಧಕ್ಕೆ ಸೇರಿಸಿ, ಔಷಧದ ಬೆಲೆಯನ್ನು ಆಕಾಶಕ್ಕೇರಿಸಿ ರೋಗಿಗಳನ್ನು ಲೂಟಿ ಮಾಡುತ್ತಾರೆ. ಭಾರೀ ದೊಡ್ಡ ಸ್ಕ್ಯಾಂಡಲ್ ಇದು.

(1.45) ಇಂಥ ಲೂಟಿ ಮಾಡದೇ ಹಣ ಮಾಡುವ ‘ಸ್ಕೇಲೆಬಲ್ “ ವಿಧಾನವನ್ನು ನಾನು ಅದೆಷ್ಟೋ ಬಿಸಿನೆಸ್ ಕಂಪನಿಗಳಿಗೆ ತಿಳಿಸಿಕೊಟ್ಟಿದ್ದೇನೆ. ಆರೋಗ್ಯರಂಗದಲ್ಲೂ ಅಂತಹ ಮಾದರಿಗಳು ನಮ್ಮ ದೇಶದಲ್ಲಿ ಅದೆಷ್ಟೋ ಇವೆ.

(2.00) ಈಗ ನೋಡಿ: ಪ್ಯಾಥ್ ಲ್ಯಾಬ್ (ಡಯಗ್ನೋಸ್ಟಿಕ್ ಲ್ಯಾಬ್) ಆರಂಭಿಸುವ ವ್ಯಕ್ತಿ ತಾನು ತುಂಬ ಅಚ್ಚುಕಟ್ಟಾದ, ಅತ್ಯಾಧುನಿಕ ತಂತ್ರಜ್ಞಾನದ ಪ್ರಯೋಗಶಾಲೆಯನ್ನು ಸ್ಥಾಪಿಸುವ ಕನಸು ಕಾಣುತ್ತಾನೆ. ಆದರೆ ಪೇಶಂಟ್ಗಳು ತಾವಾಗಿ ಬರುವುದಿಲ್ಲ. ಆತ ಡಾಕ್ಟರ್ ಬಳಿ ಹೋಗಿ, ನಮ್ಮ ಲ್ಯಾಬಿಗೆ ರೋಗಿಗಳನ್ನು ಕಳಿಸಿ ಎನ್ನುತ್ತಾನೆ.

ಡಾಕ್ಟರ್ ಸುಮ್ನೆ ಕಳಿಸ್ತಾನಾ? “ನನಗೆ 50% ಕಮಿಶನ್ ಬೇಕು’’ ಎನ್ನುತ್ತಾನೆ. ಸೂಪರ್ ಸ್ಪೆಶಾಲಿಟಿ ಡಾಕ್ಟರಂತೂ 60% ಕಮಿಶನ್ ಹೊಡಿತಾನೆ. ಅಲ್ಲಿಗೆ ನೀವು ಲ್ಯಾಬಿಗೆ ಕೊಡುವ ಸ್ಯಾಂಪಲ್ಲಿನ ಸರಿಯಾದ ಪರೀಕ್ಷೆ ಕೂಡ ಆಗುವುದಿಲ್ಲ. ಬರೀ “ಬೇಸಿನ್ ಟೆಸ್ಟ್’’ ಮಾಡುತ್ತಾರೆ. ಬೇಸಿನ್ ಟೆಸ್ಟ್ ಎಂದರೆ, ನಿಮ್ಮ ತೋಳಿನಿಂದ ರಕ್ತ ತೆಗಿ ವಾಶ್ ಬೇಸಿನ್ ಗೆ ಸುರಿ…. ಇದು ಭಾರೀ ದೊಡ್ ಸ್ಕ್ಯಾಂಡಲ್.

(2.40) ಬಿಸಿನೆಸ್ ಗೊತ್ತಿಲ್ಲದ ಇಂಥ ದಡ್ಡಪಿಪಾಸುಗಳಿಂದಾಗಿ ನಮ್ಮ ದೇಶ ಎಂಥಾ ದುಃಸ್ಥಿತಿಯಲ್ಲಿದೆ ನೋಡಿ: ಅಂತರರಾಷ್ಟ್ರೀಯ ಆರೋಗ್ಯ ಸೂಚ್ಯಂಕದಲ್ಲಿ ನಮ್ಮ ದೇಶದ ಸ್ಥಾನ 154ರಷ್ಟು ಕೆಳಗಿದೆ. ಮೊದಲ 150 ಸ್ಥಾನಗಳಲ್ಲಿ ನಮಗೆ ಸ್ಥಾನವೇ ಇಲ್ಲ.

ನಾವು ಡಾಕ್ಟರನ್ನು ದೇವರ ಸಮಾನ ಎಂದು ನಂಬುತ್ತೇವೆ. ಡಾಕ್ಟರ್ ತನ್ನನ್ನು ದೇವರ ಸಮಾನ ಅಲ್ಲ; ಸಾಕ್ಷಾತ್ ದೇವನೇ ತಾನು ಎಂದುಕೊಂಡಿದ್ದಾನೆ. ತಾನೇ ಸರ್ವಶಕ್ತನೆಂದು ಲೂಟಿ ಮಾಡುತ್ತಾನೆ, ಪ್ರಾಣ ಹೀರುತ್ತಾನೆ.

(3.30) ಗೊತ್ತಾ ನಿಮಗೆ? ಹೈಟೆಕ್ ಆಸ್ಪತ್ರೆಗಳಲ್ಲಿ ‘ಸೇಲ್ಸ್ ರಿವ್ಯೂ’ ಮಾಡಲಾಗುತ್ತದೆ. ಡಾಕ್ಟರ್ ಗಳನ್ನು ಕೂರಿಸಿಕೊಂಡ ‘ಎಷ್ಟು ಲಾಭ ಬಂತು?’ ಎಂದು ನೋಡಲು ಮೀಟಿಂಗ್’ ನಡೆಸುತ್ತವೆ.
ಯಾವ ಡಾಕ್ಟರು ಎಷ್ಟು ಜಾಸ್ತಿ ರೋಗಿಗಳ ಅಡ್ಮಿಶನ್ ಮಾಡಿಸಿಕೊಳ್ಳುತ್ತಾನೊ ಅವನಿಗೆ ಜಾಸ್ತಿ ಕಮಿಶನ್ ಸಿಗುತ್ತದೆ. ಡಾಕ್ಟರ್ಗೆ ಹಬ್ಬವೋ ಹಬ್ಬ. ‘ಕರಿ, ಕರಿ ಅವನ್ನ, ಸೇರ್ಸು ಅವನ್ನ ವಾರ್ಡಿಗೆ’… ಅವರನ್ನ ಇವರನ್ನ ಎಲ್ಲರನ್ನೂ ಆಸ್ಪತ್ರೆಗೆ ಸೇರ್ಸು..

ಈ ಡಾಕ್ಟರುಗಳಿಗೆ ಆಸ್ಪತ್ರೆಯ ಮಾಲಿಕ ‘ಆಪರೇಶನ್ ಟಾರ್ಗೆಟ್’ ಕೊಡುತ್ತಾನೆ. “ನೀನು ಎಷ್ಟು ಆಪರೇಶನ್ ಮಾಡಿದೆ? ಎಷ್ಟು ಲ್ಯಾಬ್ ಟೆಸ್ಟ್ ಮಾಡಿಸಿದೆ?… ಮತ್ತೆ ಎಷ್ಟು ದಿನ ಏನೂ ಟ್ರೀಟ್ಮೆಂಟ್ ಇಲ್ಲದೆ ಬೆಡ್ ಮೇಲೆ ಖಾಲಿ ಮಲಗಿಸಿದೆ? ಎಷ್ಟು ಗಳಿಕೆ ಬಂತು ಆಸ್ಪತ್ರೆಗೆ? ಪ್ರೈವೇಟ್ ಬೆಡ್ ಎಷ್ಟಿತ್ತು? ಜನರಲ್ ವಾರ್ಡಿಗೆ ಎಷ್ಟು ರೋಗಿಗಳನ್ನು ಹಾಕಿದೆ?”

ಇದು ಪಕ್ಕಾ ಧಂಧೆ ಆಗಿಬಿಟ್ಟಿದೆ. ಇಂತಿಷ್ಟೇ ಪೇಶಂಟುಗಳ ಸುಲಿಗೆ ಮಾಡಬೇಕು ಎಂಬ ಟಾರ್ಗೆಟ್ ಕೊಟ್ಟಿರ್ತಾರೆ ಡಾಕ್ಟರಿಗೆ. ‘ನೀನು ಟಾರ್ಗೆಟ್ ದಾಟಿದರೆ ನಿನ್ನ ಪ್ರೊಮೋಶನ್ ಪಕ್ಕಾ’ ಎನ್ನುತ್ತಾರೆ. “…ನೀನು ಯಾವ ಔಷಧ ಶಿಫಾರಸು ಮಾಡ್ತೀಯ? ಅಲ್ಪವೆಚ್ಚದ್ದಾ? ಬೇಡ ಬೇಡ ಬೇಡ… ಆ ದುಬಾರಿ ಔಷಧವನ್ನೇ ತರಿಸು… ಕಂಪನಿಯಿಂದ ಕಮಿಷನ್ ಬರುವ ಔಷಧವನ್ನೇ ನೀನು ರೋಗಿಗೆ ಕೊಡಬೇಕು…’’

(4.00) ಒಂದು ಮಾತು ಹೇಳ್ತೀನಿ… ನಿಮ್ಮ ಚಿಕಿತ್ಸೆಯ ಅಸಲೀ ವೆಚ್ಚ ಒಟ್ಟೂ ಬಿಲ್ಲಿನ ಕೇವಲ ಹತ್ತೇ ಪರ್ಸೆಂಟ್ ಅಷ್ಟೆ. ಇನ್ನುಳಿದ 90 ಈ ಎಲ್ಲರ ಕಮೀಶನ್ನೇ ಆಗಿದೆ! ನಿಮ್ಮ ಬಿಲ್ ಎರಡು ಲಕ್ಷ ರೂಪಾಯಿ ಆಗಿದೆಯೆಂದರೆ, ಅದು 20 ಸಾವಿರ ಅಷ್ಟೆ ಆಗಬೇಕಿತ್ತು. ಈ ಇವರು ಇನ್ಶೂರನ್ಸ್ ಕಂಪನಿಗಳನ್ನೂ ಬಿಡುವುದಿಲ್ಲ. ಕಮೀಶನ್ ಕೊಡದಿದ್ದರೆ ಅಂಥ ವಿಮಾ ಕಂಪನಿಯ ಹೆಸರನ್ನೇ ಪ್ಯಾನೆಲ್ಲಿನಿಂದ ಕಿತ್ತು ಹಾಕುತ್ತಾರೆ. ಮಾಫಿಯಾ, ದೊಡ್ಡ ಮಾಫಿಯಾ ಇವರೆಲ್ಲ.

(4.30) ಈ ಡಾಕ್ಟರ್ ಗಳಿಗೂ ಟ್ರೇನಿಂಗ್ ಸಿಕ್ಕಿರುತ್ತದೆ. ಟ್ರೇನಿಂಗ್ ಏನೂ ಅಂದ್ರೆ, ಪೇಶಂಟ್ ಮೇಲೆ ಒತ್ತಾಯ ಹೇರಬೇಡಿ. ತುಸು ಹೆದರಿಸಿಬಿಡಿ… ಜಾಸ್ತಿಯಲ್ಲ, ತುಸುವೇ ಹೆದರಿಸಿಬಿಡಿ… ‘ನಾಳೆ ಇದೇ ದೊಡ್ಡದಾಗಿ ತೀರಾ ಕಾಂಪ್ಲಿಕೇಟ್ ಆಗಬಹದು… ಹೃದಯದ ಕಾಯಿಲೆ ಸೀರಿಯಸ್ ಇದೆ… ನಿಮ್ಮ ಬದುಕು, ನಿಮ್ಮ ಅಪ್ಪ ಅಮ್ಮ..’ ಎಲ್ಲವನ್ನೂ ಮೆಲ್ಲಗೆ ಹೇಳಿ, ‘ಇನ್ನುಳಿದಿದ್ದು ನಿಮ್ಮ ಆಯ್ಕೆ’ ಎಂದು ಬಿಡಿ ಸಾಕು. ಆತ ಹೆದರಿ ಕೈಜೋಡಿಸುತ್ತಾನೆ.. ‘ಒಳ್ಳೇದು ಡಾಕ್ಟರೆ ನೀವು ಹೇಳಿದ ಹಾಗೆ ದೊಡ್ಡ ..’ ಎಂದು ಕೈಜೋಡಿಸುತ್ತಾನೆ.
ಒಂದೇ ಏಟಿನಲ್ಲಿ ಇವರು ನಿಮ್ಮ ಇಡೀ ಬದುಕಿನಲ್ಲಿ ಉಳಿಸಿದ ಎಲ್ಲ ಹಣವನ್ನೂ ಸ್ವಾಹಾ ಮಾಡುತ್ತಾರೆ. ಸ್ವಲ್ಪವೂ ನಾಚಿಕೆಯಿಲ್ಲ ಇವರಿಗೆ.

(5.00) ನಿಮಗೆ ಗೊತ್ತೆ, 2010ರ ಮೊದಲು ನಮ್ಮ ದೇಶದಲ್ಲಿ ಸಿಝೇರಿಯನ್ ಹೆರಿಗೆಯ ಪ್ರಮಾಣ ಕೇವಲ ಶೇಕಡಾ ಎಂಟೂವರೆಯಷ್ಟಿತ್ತು. ಆಗೆಲ್ಲ ಗರ್ಭವತಿಗೆ ಅಥವಾ ಅವಳ ಮಗುವಿಗೆ ಅಪಾಯವಿದೆ ಎಂದಿದ್ದಾಗ ಮಾತ್ರ ಸಿಝೇರಿಯನ್ ಹೆರಿಗೆ ಮಾಡಿಸುತ್ತಿದ್ದರು. ಇಂದು ಈಗ ‘ರಿಸ್ಕ್ ಇದೇರೀ, ರಿಸ್ಕಿದೆ’ ಎಂದೆಲ್ಲ ಹೆದರಿಸಿ ಒಂದಲ್ಲ ಒಂದು ಸುಳ್ಳು ನೆಪ ಹೇಳಿ ಗರ್ಭಿಣಿಯ ಹೊಟ್ಟೆ ಕೊಯ್ದು ಶಿಶುವನ್ನು ಹೊರಕ್ಕೆ ತೆಗೆಯುತ್ತಾರೆ.

ನಗರಗಳಲ್ಲಿ ಸಿಝೇರಿಯನ್ ಶೇಕಡಾ 40ಕ್ಕೆ ಏರಿದೆ. ಟಾರ್ಗೆಟ್ ಕೊಟ್ಟಿದ್ದಾರಲ್ಲ! ಆ ಬಡಪಾಯಿ ಗರ್ಭಿಣಿ ಮತ್ತು ಅವಳ ಗಂಡ, “ನಾವು ನಾರ್ಮಲ್ ಡೆಲಿವರಿವರೆಗೆ ಕಾಯುತ್ತೇವೆ ಎಂದು ಹೇಳಿದರೆ ಮುಗೀತು. ಅವರೆದುರು ದೊಡ್ಡ ದೊಡ್ಡ ಮೆಡಿಕಲ್ ಶಬ್ದಗಳನ್ನು ಉದುರಿಸಿ, ಹೆದರಿಸಬೇಕು.

ಅರೇ! ಈ ಖಾಸಗಿಯ ಆಸ್ಪತ್ರೆಯ ಡಾಕ್ಟರುಗಳಿಗೆಲ್ಲ ಟಾರ್ಗೆಟ್ ಕೊಡಲಾಗಿದೆ. ಯಾರು ಜಾಸ್ತಿ ಸಿ-ಸೆಕ್ಷನ್ (ಸಿಝೇರಿಯನ್) ಮಾಡುತ್ತಾರೊ ಅವರಿಗೆ ಮುಂಬಡ್ತಿ ಕೊಡೋದು. ಇಡೀ ವೈದ್ಯಲೋಕವೇ ಧಂಧೆಗೆ ಇಳಿದಿದೆರೀ, ದಂಧೆಗೆ!

(6.00) ನಿಮಗೆ ನೆನಪಿರಬೇಕು, ಆತನಿಗೆ ಸಾಮಾನ್ಯ ವಾಂತಿಯಾಗಿತ್ತು ಅಷ್ಟೆ! ಎಳನೀರು ಅಥವಾ ಸಾಕಷ್ಟು ಬೆಲ್ಲದ ನೀರು (ಓಆರ್ಎಸ್) ಕೊಟ್ಟಿದ್ದರೆ ವಾಸಿ ಆಗುತ್ತಿತ್ತು. ಏನಾಯ್ತು… ಅಂದ್ರೆ ‘ನಿನ್ನ ಅಪೆಂಡಿಕ್ಸ್ ಊದಿದೆ, ಅದು ಬಿರಿದುಕೊಂಡಿದೆ’ ಎಂದು ಹೆದರಿಸಿ ಒಂದೂವರೆ ಲಕ್ಷ ಕಕ್ಕಿಸಿ ಆತನ ಹೊಟ್ಟೆಗೆ ಬ್ಲೇಡ್ ಹಾಕಿದ್ದು, ಹೊಲಿಗೆ ಹಾಕಿದ್ದು ಅಷ್ಟೆ. ಒಂದೂವರೆ ಲಕ್ಷ…

(6.10) ನಾನು ಬರೀ ನೆಗೆಟಿವ್ ಮಾತಾಡುತ್ತಿಲ್ಲ ಇಲ್ಲಿ. ಡಾ. ದೇವಿಶೆಟ್ಟಿ ಅನ್ನೋರು ಇದ್ದಾರೆ. ಅವರ ಬಗ್ಗೆ ಇಡೀ ದೇಶಕ್ಕೇ ಗೊತ್ತಿದೆ. ಪದ್ಮಶ್ರೀ, ಪದ್ಮಭೂಷಣ ಎಂದೆಲ್ಲ ಸಂಮಾನಿತರಾಗಿದ್ದಾರೆ. 23 ಆಸ್ಪತ್ರೆಗಳನ್ನು ಸ್ಥಾಪಿಸಿದ್ದಾರೆ. ಏಳು ಹಾರ್ಟ್ ಸೆಂಟರ್ ಗಳನ್ನು ಆರಂಭಿಸಿದ್ದಾರೆ. ಇವರು ಕಡಿಮೆ ಖರ್ಚಿನಲ್ಲಿ ಹೆಚ್ಚು ಹೆಚ್ಚು ಜನರಿಗೆ ಹಾರ್ಟ್ ಆಪರೇಶನ್ ಮಾಡುತ್ತಾರೆ.

ಇದಕ್ಕೆ ಇಕಾನಮಿ ಆಫ್ ಸ್ಕೇಲ್ ಎನ್ನುತ್ತಾರೆ. ಹೆನ್ರಿ ಫೋರ್ಡ್ ಮಾದರಿಯಲ್ಲಿ (ಅಂದರೆ, ಮೆಕ್ಯಾನಿಕ್ ನಿಂತಲ್ಲೇ ನಿಂತಿರುತ್ತಾನೆ, ಅರೆ ನಿರ್ಮಿತ ಕಾರುಗಳು ಆತನ ಎದುರು ಸಾಲಾಗಿ ಬರುತ್ತಿರುತ್ತವೆ. ಚಕ್ರ ಜೋಡಿಸುವವನು ಚಕ್ರ ಜೋಡಿಸುತ್ತಿರುತ್ತಾನೆ; ಗಾಜು ಕೂರಿಸುವವನು ಗಾಜು ಕೂರಿಸುತ್ತಾನೆ. ಮುಂದೆ ಮಡ್ಗಾರ್ಡ್… ಕಾರು ಇಡಿಯಾಗುತ್ತ ಹೋಗುತ್ತಿರುತ್ತದೆ).

(6.45) ಡಾಕ್ಟರ್ ದೇವಿಶೆಟ್ಟಿ ಅದೇರೀತಿ ತೆರೆದ ಹೃದಯದ ಶಸ್ತ್ರಚಿಕಿತ್ಸೆಯನ್ನು ಅಸೆಂಬ್ಲಿ ಲೈನ್ ಮಾದರಿಯಲ್ಲಿ ಮಾಡುತ್ತಾರೆ. ಬೇರೆ ಬೇರೆ ತಜ್ಞರು ಸಾಲಾಗಿ ನಿಂತಿರುತ್ತಾರೆ. ಪೇಶಂಟ್ ಮಲಗಿದ ಮಂಚವೇ ಸಾಗುತ್ತಿರುತ್ತದೆ.

ಒಬ್ಬ ಎಕ್ಸರೇ ತೆಗೀತಾನೆ, ಇನ್ನೊಬ್ಬ ಅನೆಸ್ತೀಶಿಯಾ ಕೊಡುತ್ತಾನೆ. ಮುಂದಿದ್ದವ ಸರ್ಜರಿ ಮಾಡುತ್ತಾನೆ. ನಂತರದವ ಹೊಲಿಗೆ ಹಾಕುತ್ತಾನೆ….. ಸರಸರ ಎಂದು ಅತ್ಯಂತ ವೇಗದಲ್ಲಿ ಸರ್ಜರಿ ದಾಖಲೆ ವೇಗದಲ್ಲಿ, ದಿನಕ್ಕೆ ಮುನ್ನೂರು ಮುನ್ನೂರು ಆಪರೇಶನ್ ಆಗುತ್ತಿರುತ್ತದೆ.

ಜಾಸ್ತಿ ಪೇಶಂಟ್ ಗಳಿಗೆ ಚಿಕಿತ್ಸೆ ಕೊಡುತ್ತ ಹೋದರೆ ಹಣದ ಸುರಿಮಳೆ ತಂತಾನೇ ಆಗುತ್ತಿರುತ್ತದೆ. ಯಾಕೆ ಪೇಶಂಟ್ ಗಳ ಲೂಟಿ ಮಾಡುತ್ತೀರಿ ? ಜಾಸ್ತಿ ಪೇಶಂಟ್ ಗಳು ಬರುತ್ತಿದ್ದರೆ ಜಾಸ್ತಿ ಆಪರೇಶನ್ ಮಾಡಿದರೆ ಹಣ ಹೇಗೂ ಬರುತ್ತದೆ ನಿಮಗೆ!

ನಿಮಗೆ ಗೊತ್ತೆ ಡಾ. ದೇವೀಶೆಟ್ಟಿ ಕಳೆದ ವರ್ಷ ಒಂದೂಮುಕ್ಕಾಲು ಕೋಟಿ ರೂಪಾಯಿಗಳನ್ನು ಗಳಿಸಿದ್ದಾರೆ. ಐಪಿಓದಲ್ಲಿ ಇವರ ಮೌಲ್ಯ ನೂರು ಕೋಟಿ ಡಾಲರ್ ! ಇವರ ಆಸ್ಪತ್ರೆಗಳಲ್ಲಿ 14 ಸಾವಿರ ಕೆಲಸಗಾರರಿದ್ದಾರೆ. ಅವರಂತೆ ವಾಲ್ಯೂಮ್ ಹೆಚ್ಚಿಸಿಕೊಂಡು ಹಣ ಮಾಡಿ, ಲೂಟಿಯಿಂದಲ್ಲ…

(7.45) ನಿಮಗೆ ಗೊತ್ತೆ? ಭಾರತದಲ್ಲಿ ನೈತಿಕವಾಗಿ ಆಸ್ಪತ್ರೆ ನಡೆಸುತ್ತಲೇ ಹಣ ಗಳಿಸುವುದು ತೀರ ಸುಲಭ. ಇಷ್ಟು ದೊಡ್ಡ ಜನಸಂಖ್ಯೆ, ಇಷ್ಟು ದೊಡ್ಡ ದೇಶ… ಇಷ್ಟು ದೊಡ್ಡ ಸಂಖ್ಯೆ! ಗೋವಿಂದಪ್ಪ ವೆಂಕಟಸ್ವಾಮಿ.. ಅರವಿಂದ್ ಐ ಕೇರ್ ಹಾಸ್ಪಿಟಲ್. ಇವರು ಮೆಕ್ಡೊನಾಲ್ಡ್ ಕಂಪನಿಯಿಂದ ಪಾಠ ಕಲಿತವರು. ಆತ ದಿನಕ್ಕೆ ನೂರು ಕೋಟಿ ಬರ್ಗರ್ ತಯಾರಿಸಿ ಮಾರುತ್ತಾನೆ.

ನಮ್ಮ ದೇಶ ಅಂದರೆ ಜಗತ್ತಿನಲ್ಲೇ ಅತಿ ಜಾಸ್ತಿ ಸಂಖ್ಯೆಯ ಅಂಧರಿದ್ದಾರೆ. ಅಮೆರಿಕದಲ್ಲಿ 2000 ಡಾಲರ್ಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡುವುದಾದರೆ ನಾನು ಹತ್ತೇ ಡಾಲರ್ ಗಳಲ್ಲಿ ಮಾಡುತ್ತೇನೆ ಎಂದವರು ಇವರು. ಇತರೆಲ್ಲ ಡಾಕ್ಟರ್ಗಳು ರೋಗಿಗಳ ನಗ, ನಾಣ್ಯ, ಆಸ್ತಿಪಾಸ್ತಿಯನ್ನು ಲೂಟಿ ಮಾಡಲು ನಿಂತಿರುವಾಗ ಈ ಗೋವಿಂದಪ್ಪ ವೆಂಕಟಸ್ವಾಮಿ ತಮ್ಮ ನಗ, ನಾಣ್ಯ ಆಸ್ತಿಪಾಸ್ತಿಯನ್ನು ಗಿರವಿ ಇಟ್ಟು ಅರವಿಂದ್ ಐ ಕೇರ್ ಆರಂಭಿಸಿದರು.

(8.30) ಅಥವಾ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಉದಾಹರಣೆ ನೋಡಿ: ಇವರು ಎರಡು ವಿಭಾಗಗಳನ್ನು ಮಾಡಿದ್ದಾರೆ. ಒಂದು ಕಡೆ ಅನುಕೂಲಸ್ಥರಿಗೆ ಜಾಸ್ತಿ ಶುಲ್ಕ ವಿಧಿಸುವುದು, ಇನ್ನೊಂದು ಕಡೆ ಅದೇ ಹಣದಿಂದ ಬಡ-ಮಧ್ಯಮ ವರ್ಗದವರಿಗೆ ಅತಿ ಕಡಿಮೆ ಅಥವಾ ಉಚಿತವಾಗಿ ವೈದ್ಯಸೇವೆ ಒದಗಿಸುವುದು.

ಭಾಳಾ ಅದ್ಭುತ ಕೆಲಸ ಮಾಡುತ್ತಿದ್ದಾರೆ. ಯಾವ ಕ್ಯಾನ್ಸರ್ ಔಷಧಿಗೆ ಒಂದು ಲಕ್ಷ ರೂಪಾಯಿ ಬೆಲೆ ಇದೆಯೊ ಅದನ್ನು (ಶುಷ್ರೂಷೆಗೆ ಬರುವವರ ಸಂಖ್ಯೆ ಹೆಚ್ಚಿಸುವ ಮೂಲಕ) ಒಂದು ಸಾವಿರ ರೂಪಾಯಿಗಳಿಗೆ ಒದಗಿಸುವ ವ್ಯವಸ್ಥೆ ಮಾಡುತ್ತಿದ್ದಾರೆ.

(9.00) ಇದು ಸಾಧ್ಯವಿದೆ, ಸಾಧ್ಯವಿದೆ. ಅದಕ್ಕೇ ನಾನು ಹೇಳೋದು, ಬಿಸಿನೆಸ್ ಮಾಡಲು ಸುಲಭ ಮಾರ್ಗಗಳಿವೆ. ಈ ಲೂಟಿಖೋರರಿಗೆ ಅದು ಗೊತ್ತಿಲ್ಲ. ಒಂದೇ ಸಾರಿ ಕತ್ತರಿಸು! ಒಂದೇ ಬಾರಿಗೆ ಲೂಟಿ ಮಾಡು…

(9.10) ನನ್ನದು ಒಂದೇ ಒಂದು ಚಿಕ್ಕ ವಿನಂತಿ ಇದೆ. ಈ ವಿಡಿಯೊವನ್ನು ಡೌನ್‌ಲೋಡ್ ಮಾಡಿ ಹಂಚಿ. ನಮ್ಮ ದೇಶದ ಎಂಟು ಲಕ್ಷ ಡಾಕ್ಟರ್‌ಗಳಿಗೆ ಸಂದೇಶ ತಲುಪುವಂತೆ ಮಾಡಿ. ದೇಶದ ಆರೋಗ್ಯ ಸಚಿವರಿಗೆ ಇದು ತಲುಪುವಂತೆ ಮಾಡಿ. ದನಿ ಎತ್ತಿ. ಇವೊತ್ತು ನನ್ನೊಂದಿಗೆ ನೀವು ದನಿ ಎತ್ತಿ ಕೂಗದಿದ್ದರೆ ನಾಳೆ ನಿಮ್ಮನ್ನೂ ಇವರು ಲೂಟಿ ಮಾಡುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಳೆಗಾಲದಲ್ಲೂ ಮನೆಗೆ ತಲುಪುತ್ತಿಲ್ಲ ಕುಡಿಯಲು ನೀರು

Published

on

ಸುದ್ದಿದಿನ, ದಾವಣಗೆರೆ: ನಗರ ಪಾಲಿಕೆಯಿಂದ ಕುಡಿಯುವ ನೀರಿನ ಸರಬರಾಜನ್ನು ಎಂಟರಿಂದ ಹತ್ತು ದಿನಕ್ಕೆ ಪೂರೈಸುತಿದ್ದು ನೀರಿನ ಸಮಸ್ಯೆಗೆ ಆಡಳಿತ ನಿರ್ಲಕ್ಷ ವಹಿಸಿದೆ ಎಂದು ಪಾಲಿಕೆಯ ಮಾಜಿ ಸದಸ್ಯ ದಿನೇಶ್ ಕೆ ಶೆಟ್ಟಿ ಆರೋಪಿಸಿದ್ದಾರೆ.

ನೀರನ್ನು ಶುದ್ಧೀಕರಿಸದೇ ಅಶುದ್ಧವಾದ ನೀರನ್ನೇ ಸರಬರಾಜು ಮಾಡಲಾಗುತಿದ್ದು ಇದರಿಂದ ಸಾಕಷ್ಟು ರೋಗ-ರುಜಿನಗಳು ಉಲ್ಬಣಗೊಳಿಸುತ್ತವೆ ಎಂದು ತಿಳಿಸಿರುತ್ತಾರೆ.
ಈ ಹಿಂದೆ ನಗರಪಾಲಿಕೆಯ ನೀರನ್ನು ಕುದಿಸಿ ಆರಿಸಿ ಉಪಯೋಗಿಸಿ ಎಂಬ ಹೇಳಿಕೆಯನ್ನು ನೀಡಲಾಗುತ್ತಿತ್ತು ಆದರೆ ಈಗಿನ ಪಾಲಿಕೆಯ ಆಡಳಿತ ಸೌಜನ್ಯಕ್ಕಾದರೂ ಜನತೆಗೆ ಮಾಹಿತಿ ನೀಡದೆ ಸಂಪೂರ್ಣ ನಿರ್ಲಕ್ಷ ವಹಿಸಿದೆ ಎಂದರು.

ಕೋವಿಡ್ ನೆಪದಲ್ಲಿ ನಗರದಲ್ಲಿ ಮಹಾನಗರಪಾಲಿಕೆ ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಪೂರ ಸಂಪೂರ್ಣ ವಿಫಲವಾಗಿದ್ದು ಸೀಲ್ ಡೌನ್ ನೆಪದಲ್ಲಿ ಮನೆಯೊಂದಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ನಗರದಲ್ಲಿ ಸ್ವಚ್ಛತೆ ಇಲ್ಲದೇ ರೋಗರುಜಿನಗಳು ಹೆಚ್ಚಾಗಿದ್ದು, ಕರೋನಾ ಡೆಂಗ್ಯು , ಹೆಚ್ ,1, ಎನ್,1. ಮುಂತಾದ ರೋಗಗಳು ಹರಡಲು ಸಹ ಇದಕ್ಕೆ ಕಾರಣ ಎಂದು ತಿಳಿಸಿದ್ದಾರೆ

ಪಾಲಿಕೆ ಆಡಳಿತ ನಡೆಸುವವರೇ ಆಗಲಿ ಅಧಿಕಾರಿಗಳಾಗಲಿ ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡದೆ ಕರೋನ ನೆಪ ಒಡ್ಡಿ ನಿರ್ಲಕ್ಷ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದಿನೇಶ್ ಅವರು ದೂರಿದ್ದಾರೆ.
ಜಿಲ್ಲಾಡಳಿತ ಕೂಡಲೇ ಮಹಾನಗರಪಾಲಿಕೆಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ನಗರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದರ ಜೊತೆಗೆ ಸಮರ್ಪಕವಾಗಿ ನೀರು ಸರಬರಾಜು ಮಾಡಲುಸ ಸೂಕ್ತ ಕ್ರಮ ಕೈಗೊಳ್ಳಲು ಅದೇಶಿಸಬೇಕೆಂದು ಒತ್ತಾಯಿದ್ದಾರೆ.

 

Continue Reading

ದಿನದ ಸುದ್ದಿ

ರೈಲುಗಳ ಸಂಚಾರಕ್ಕಿನ್ನು ಗೀನ್ ಸಿಗ್ನಲ್ ಇಲ್ಲ

Published

on

ಸುದ್ದಿದಿನ  ದಾವಣಗೆರೆ : ಭಾರತೀಯ ರೈಲ್ವೆ ಇಲಾಖೆಯ ಪ್ರಕಟಣೆ. ನವದೆಹಲಿ: ಕರೋನ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿರುವ ಪ್ರಯಾಣಿಕ ರೈಲುಗಳ ಸಂಚಾರವನ್ನು ಅನಿರ್ದಿಷ್ಟಾವಧಿಯವರಿಗೆ ಮುಂದುವರಿಸಲಾಗಿದೆ.

ಈಗಾಗಲೇ ದೇಶದಲ್ಲಿ ಸಂಚರಿಸುತ್ತಿರುವ 230 ವಿಶೇಷ ರೈಲುಗಳ ಸಂಚಾರ ಎಂದಿನಂತೆ ಮುಂದುವರೆಯಲಿದೆ, ರೈಲುಗಳಲ್ಲಿ ನ ಪ್ರಯಾಣಿಕರ ಸಂಖ್ಯೆಯನ್ನು ಗಮನಿಸಿ ಇದ್ದಲ್ಲಿ ಅಗತ್ಯವಿದ್ದಲ್ಲಿ ಹೆಚ್ಚುವರಿ ರೈಲುಗಳನ್ನು ಓಡಿಸಲಾಗುವುದು ಎಂದು ರೈಲ್ವೆ ಸಚಿವಾಲಯ ತಿಳಿಸಿದೆ, ದೇಶಾದ್ಯಂತ ಕರೊನಾ ಹರಡಿರುವ ಈ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ ತಿಂಗಳಿಂದ ಪ್ರಸ್ತುತ ಅವಧಿಯವರೆಗೆ ರೈಲ್ವೇ ಸೇವೆಯು ಸ್ಥಗಿತಗೊಂಡಿರುವ ಕಾರಣ ಬೊಕ್ಕಸಕ್ಕೆ 40 ಸಾವಿರ ಕೋಟಿಯಷ್ಟು ಹಣ ನಷ್ಟ ಆಗಿರುತ್ತದೆ,

ಈ ಹಿಂದಿನ ಆದೇಶದಂತೆ ಅಗಸ್ಟ್ 12ರವರೆಗೆ ಸ್ಥಗಿತಗೊಂಡಿರುವ ರೈಲ್ವೆ ಸಂಚಾರ ಸಾರ್ವಜನಿಕವಾಗಿ ಆದಷ್ಟು ಬೇಗನೆ ಮುಕ್ತಗೊಳ್ಳುವುದೋ ಕಾದುನೋಡಬೇಕು.

ಸುದ್ದಿದಿನ.ಕಾಂ| ವಾಟ್ಸಾಪ್| 9980346243

Continue Reading

ಅಸಾಮಾನ್ಯಳು

ಭಾರತದ ಕಿರಿಯ ಕವಿಯಿತ್ರಿ ‘ಮಾನ್ಯ ಹರ್ಷ’..!

Published

on

ಮಾನ್ಯ ಹರ್ಷ

ತ್ತು ವರ್ಷದ ಈ ಪುಟ್ಟ ಲೇಖಕಿ ಮಾನ್ಯ ಹರ್ಷ ಗೆ ಓದುವುದು ಬರೆಯುವುದು ಎಂದರೆ ತುಂಬಾ ಇಷ್ಟವಂತೆ. ಬೆಂಗಳೂರಿನ ಚಿತ್ರ ಮತ್ತು ಹರ್ಷ ದಂಪತಿಗಳ ಮಗಳಾದ ಮಾನ್ಯ ಹತ್ತು ವರ್ಷಕ್ಕೆ ಕನ್ನಡದಲ್ಲಿ ಪುಸ್ತಕ ಬರೆದು ಕನ್ನಡದ ಕಿರಿಯ ಲೇಖಕಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

ಈಕೆ ಬರೆದಿರುವ “ ನೀರಿನ ಪುಟಾಣಿ ಸಂರಕ್ಷಕರು ” ಮಕ್ಕಳ ಕಾದಂಬರಿಗೆ , ಇಂಡಿಯಾ ಬುಕ್ ಆಫ್ ರೆಕಾರ್ಡ್ ವತಿಯಿಂದ ” ಕನ್ನಡದಲ್ಲಿ ಪುಸ್ತಕ ಬರೆದಿರುವ ಕಿರಿಯ ಲೇಖಕಿ “ ಎಂಬ ಬಿರುದಿಗೆ ಪಾತ್ರಳಾಗಿದ್ದಾಳೆ ಮಾನ್ಯ.

ಬೆಂಗಳೂರಿನ ಬಿ.ಟಿ.ಎಮ್ ಬಡಾವಣೆ ಯ ವಿಬ್ಗಯಾರ್ ಶಾಲೆಯ ಐದನೇ ತರಗತಿಯಲ್ಲಿ ಓದುತ್ತಿರುವುದು ಮಾನ್ಯ ತಾನು ಅಪ್ಪಟ ಕನ್ನಡತಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ. ಚಿಕ್ಕ ವಯಸ್ಸಿನಲ್ಲೇ ಸಾಹಿತ್ಯ ಆಸಕ್ತಿ ಯನ್ನು ಬೆಳಸಿಕೊಂಡಿರುವ ಮಾನ್ಯ, ತನ್ನ ಅಜ್ಜಿಯ ಬಾಯಿಂದ ಕನ್ನಡ ಕಥೆ-ಕವನಗಳನ್ನು ಕೇಳಿ ಬೆಳೆದ ಹುಡುಗಿ. ಕನ್ನಡದಲ್ಲಿ ಪುಸ್ತಕ ಬರೆಯಲು ನನ್ನ ಅಜ್ಜಿಯೇ ನನಗೆ ಸ್ಫೂರ್ತಿ ಎನ್ನುತ್ತಾಳೆ ಮಾನ್ಯ.

ಈಗಾಗಲೇ ” ನೇಚರ್ ಅವರ್ ಫ್ಯೂಚರ್” ಪುಸ್ತಕ ಬರೆದು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಐದು ರೆಕಾರ್ಡ್ ಬುಕ್ಗಳಲ್ಲಿ ಹೆಸರು ಮಾಡಿರುವ ಈ ಪುಟ್ಟ ಲೇಖಕಿ, ವಜ್ರ ಬುಕ್ ಆಫ್ ರೆಕಾರ್ಡ್ ವತಿಯಿಂದ ” ಭಾರತದ ಕಿರಿಯ ಕವಿಯಿತ್ರಿ” ಎಂಬ ಬಿರುದನ್ನೂ ಮುಡಿಗೇರಿಸಿಕೊಂಡಿದ್ದಾಳೆ.

ನೀರಿನ ಪುಟಾಣಿ ಸಂರಕ್ಷಕರು” ಈಕೆಯ ಎರಡನೆಯ ಪುಸ್ತಕವಾಗಿದ್ದು , ಕನ್ನಡ ಮತ್ತು ಆಂಗ್ಲ ಭಾಷೆಗಳೆರಡರಲ್ಲೂ ಬರೆದಿದ್ದಾಳೆ.
ಆಂಗ್ಲ ಅವತರಣಿಕೆ ” ದಿ ವಾಟರ್ ಹೀರೋಸ್” ಮತ್ತು ಕನ್ನಡದಲ್ಲಿ ” ನೀರಿನ ಪುಟಾಣಿ ಸಂರಕ್ಷಕರು ” ಹೆಸರಲ್ಲಿ ರಚಿತವಾಗಿರುವ ಈ ಪುಸ್ತಕ ಸದ್ಯ ಕಾಡುತ್ತಿರುವ ನೀರಿನ ಕೊರತೆ ಮತ್ತು ಇದರ ಸಂರಕ್ಷಣೆಯ ತೀವ್ರತೆಯ ಮೇಲೆ ಬೆಳಕು ಚೆಲ್ಲುತ್ತದೆ.

ಈ ಪುಸ್ತಕ ಮಾರ್ಚ್ 22 ಕ್ಕೆ , ವಿಶ್ವ ಜಲ ದಿನದಂದು ಬಿಡುಗಡೆ ಆಗಬೇಕಿತ್ತು. ಆದ್ರೆ ವಿಶ್ವವನ್ನು ಕಾಡುತ್ತಿರುವ ಕರೋನ ಕಾಟದಿಂದಾಗಿ ಪುಸ್ತಕ ಬಿಡುಗಡೆ ತುಂಬಾ ಕಷ್ಟ ಆಯ್ತು. ಲಾಕ್ಡೌನ್ ನಡುವೆಯೂ ಪುಸ್ತಕವನ್ನು ಆನ್ಲೈನ್ ನಲ್ಲೇ ಬಿಡುಗಡೆ ಮಾಡಿದೆವು ಎಂದು ತಮ್ಮ ಅಳಲು ವ್ಯಕ್ತ ಪಡಿಸಿದರು.

ಪುಟ್ಟ ಲೇಖಕಿಯು, ದೈನಂದಿನ ಜೀವನದ ಸರಳ ನಿದರ್ಶನಗಳ ಮೂಲಕ ನೀರಿನ ಸಮಸ್ಯೆ ಯನ್ನು ಸ್ವಾರಸ್ಯಕರವಾಗಿ ನಿರೂಪಿಸಲು ಪ್ರಯತ್ನಿಸಿದ್ದಾರೆ.

ನೀರನ್ನು ಉಳಿಸಲು ಪ್ರತಿಯೊಬ್ಬರೂ ಅನುಸರಿಸಬೇಕಾದ ಅತ್ಯಂತ ಸರಳ ಮತ್ತು ಸುಲಭ ನಿಯಮಗಳನ್ನು ಈ ಪುಸ್ತಕ ಒಳಗೊಂಡಿದೆ.

ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು. ಚಿಕ್ಕ ವಯಸ್ಸಿನಲ್ಲೇ ಪ್ರಕೃತಿಯ ಬಗೆಗಿನ ಜವಾಬ್ದಾರಿ ಅರಿತ ಮಕ್ಕಳು ಹೇಗೆ ತಮ್ಮ ಪುಟ್ಟ ಕೈಗಳಿಂದ ದೊಡ್ಡ ಕೆಲಸ ಮಾಡಿ ತೋರಿಸುತ್ತಾರೆ ಎಂಬುದರ ಕಥಾಸಂಗಮವೇ ” ” ಪುಟಾಣಿ ಸಂರಕ್ಷಕರು ” .

ನೀರು ಪ್ರಕೃತಿಯ ಅಮೂಲ್ಯ ದ್ರವವಾಗಿದೆ. ನೀರು ಇಲ್ಲದೆ ಜೀವನವು ಅಸ್ತಿತ್ವದಲ್ಲಿಲ್ಲ. 3/4 ನೇ ಭಾಗದಷ್ಟು ಭೂಮಿಯ ಮೇಲ್ಮೈ ಜಲಮೂಲಗಳಿಂದ ಆವರಿಸಿದ್ದರೂ, ಈ ನೀರಿನ 97 ಪ್ರತಿಶತ ಉಪ್ಪು ನೀರಿನ ರೂಪದಲ್ಲಿ ಸಾಗರಗಳಲ್ಲಿದೆ, ಮತ್ತು ಮಾನವ ಬಳಕೆಗೆ ಅನರ್ಹವಾಗಿದೆ.

ಕೇವಲ 2.7% ಮಾತ್ರ ಶುದ್ದ ನೀರು ಇದ್ದು ಭ ಇದರಲ್ಲಿ ಸುಮಾರು 70% ರಷ್ಟು ನೀರು
ಹಿಮನದಿಗಳಾಗಿವೆ. ಅದರಲ್ಲಿ ಕೇವಲ 1% ಶುದ್ಧ ನೀರು ಲಭ್ಯವಿದ್ದು ಮಾನವ ಬಳಕೆಗೆ ಯೋಗ್ಯವಾಗಿದೆ. ಆದ್ದರಿಂದ ಈ ಅಮೂಲ್ಯವಾದ ಸಂಪನ್ಮೂಲವನ್ನು ಸಂರಕ್ಷಿಸುವುದು ಬಹಳ ಮುಖ್ಯ ಎಂದು ಸಾರಿ ಹೇಳುತ್ತಿದ್ದಾರೆ ಈ ಪುಟ್ಟ ಲೇಖಕಿ. ಈ ಪುಸ್ತಕವು ಪ್ರಕೃತಿ ತಾಯಿಗೆ ಅರ್ಪಿತವಾಗಿವೆ.

ವಿಶ್ವ ಜಲ ದಿನಾಚರಣೆ, ಮಾರ್ಚ್ 22, 2018 ರಂದು, ಮಾನ್ಯ , 38 ಮಕ್ಕಳು ಮತ್ತು 36 ಪೋಷಕರೊಂದಿಗೆ ನೀರು ಉಳಿಸಿ ಮೆರವಣಿಗೆ ಜಾತಾ ಹಮ್ಮಿಕೊಂಡಿದ್ದಳು. ದೊರೆಸಾನಿ ಅರಣ್ಯ ಪ್ರದೇಶ ದಿಂದ ಪ್ರಾರಂಭವಾದ ಜಾತಾ ಪುಟ್ಟನ್‌ಹಳ್ಳಿ ಕೆರೆ ಯಲ್ಲಿ ಸಸಿಗಳನ್ನು ನೆಡುವ ಮೂಲಕ ಕೊನೆಗೊಂಡಿತು. ಮಕ್ಕಳು ನೀರನ್ನು ಉಳಿಸುವ ವಾಗ್ದಾನ ಮಾಡಿದರು ಮತ್ತು ನೀರು ಸಂರಕ್ಷಣೆ ಬಗ್ಗೆ ಸ್ಥಳೀಯರಲ್ಲಿ ಜಾಗೃತಿ ಮೂಡಿಸಿದರು.

ಮನ್ಯಾ ಕನ್ನಡದಲ್ಲಿ ರಾಪ್ ಹಾಡನ್ನು ಬರೆದು ಹಾಡಿದ್ದಾರೆ. ಪ್ರಕೃತಿಯ ಸಂರಕ್ಷಣೆ ಬಗೆಗಿನ ಈ ರಾಪ್ ಸಂಗ ಸಾಮಾಜಿಕ ಮಾಧ್ಯಮ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ವಿಬ್ಗಿಯರ್ ಬಿಟಿಎಂ ಶಾಲೆಯ ವಿದ್ಯಾರ್ಥಿಗಳು ಹಾಡಿದ ಸ್ಟ್ರೈಕ್ ಆಫ್ ಪ್ಲಾಸ್ಟಿಕ್ ಗೀತೆಯ ಸಾಹಿತ್ಯವನ್ನೂ ಮಾನ್ಯಾ ಬರೆದಿದ್ದಾರೆ. ಇದೇ ಶಾಲೆಯ ಮ್ಯೂಸಿಕ್ ಸರ್ ಈ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದು , ದೊಡ್ಡ ಹಿಟ್ ಆಗಿದೆ.

ಭಾರತ ಕೇಂದ್ರ ಸರಕಾರ ಹಮ್ಮಿಕೊಂಡಿದ್ದ #WaterHeroes ಸ್ಪರ್ಧೆ ಯಲ್ಲಿ ಕೂಡ ಮಾನ್ಯಳ ನೀರಿನ ಹೋರಾಟ ಮತ್ತು ಕಳಕಳಿ ಗೆ ಪ್ರಶಸ್ತಿ ಬಂದಿದೆ.

UN -Water ನ ಫೇಸ್ ಬುಕ್ ಖಾತೆಯಲ್ಲಿ ಈ ಪುಟ್ಟ ಬಾಲೆಯ ನೀರಿನ ಹೋರಾಟ ಹಾಗೂ ನೀರಿನ ಸಂರಕ್ಷಣೆ ಕಳಕಳಿ ಬಗ್ಗೆ ಹಂಚಿಕೊಳ್ಳಲಾಗಿದೆ.

ಈ ಕಿರಿಯ ಕವಿಯಿತ್ರಿಯ ಕಿವಿಮಾತು

ನೀವು ಉಪದೇಶ ಮಾಡುವ ಮೊದಲು ಸ್ವಯಂ
ಅಭ್ಯಾಸ ಮಾಡಿ”.

ಅಪ್ರತಿಮ ಪ್ರತಿಭೆಯ ಈ ಪುಟ್ಟ ಬಾಲೆ ಹೆಚ್ಚು ಹೆಚ್ಚು ಪ್ರಶಸ್ತಿಗಳನ್ನು ಮುಡಿಗೇರಿಸಲಿ. ಮತ್ತಷ್ಟು
ಯಶಸ್ಸ ಈಕೆಯದಾಗಲಿ ಎಂದು ಹಾರೈಸೋಣ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending