Connect with us

ದಿನದ ಸುದ್ದಿ

ಮಾನವೀಯತೆ ಇಲ್ಲದ ಪ್ರಜಾತಂತ್ರದಲ್ಲಿ ನಾವು..?

Published

on

  • ನಾ ದಿವಾಕರ

73 ವರ್ಷದ ಸ್ವತಂತ್ರ ಆಡಳಿತದಲ್ಲಿ ಭಾರತ ಬಹುತೇಕ ಎರಡು ವರ್ಷಗಳ ಸರ್ವಾಧಿಕಾರವನ್ನು ಕಂಡಿದೆ, 1975ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ. ತುರ್ತುಪರಿಸ್ಥಿತಿಯ ನಂತರದ 45 ವರ್ಷಗಳಲ್ಲಿ ಭಾರತ ಮತ್ತೊಮ್ಮೆ ಸರ್ವಾಧಿಕಾರವನ್ನು ಕಂಡಿಲ್ಲವಾದರೂ, ಪ್ರಜಾತಂತ್ರದ ಮೂಲ ಮೌಲ್ಯಗಳನ್ನು ಕಳೆದುಕೊಳ್ಳುತ್ತಲೇ ಬರುತ್ತಿದೆ.

ಭಾರತದ ಸಂವಿಧಾನ ಪ್ರಜೆಗಳಿಗೆ ನೀಡುವ ಹಕ್ಕುಗಳನ್ನು ಪ್ರಜಾತಂತ್ರದ ಚೌಕಟ್ಟಿನಲ್ಲಿಯೇ ದಮನಿಸುವ, ಹತ್ತಿಕ್ಕುವ ಮತ್ತು ನಿರಾಕರಿಸುವ ಪ್ರವೃತ್ತಿಯನ್ನು ಈ 45 ವರ್ಷಗಳಲ್ಲಿ ಗಮನಿಸುತ್ತಲೇ ಬಂದಿದ್ದೇವೆ. ಕಳೆದ ಐದು ವರ್ಷಗಳಲ್ಲಿ ಇದು ಸಾಂವಿಧಾನಿಕವಾಗಿ ಸ್ವೀಕೃತ ಎನಿಸುವಷ್ಟು ಮಟ್ಟಿಗೆ ಹೆಚ್ಚಾಗುತ್ತಿದೆ.

1980ರ ದಶಕದಲ್ಲಿ ಮಾನವ ಹಕ್ಕು ಚಳುವಳಿಗಳು ಪ್ರವರ್ಧಮಾನಕ್ಕೆ ಬಂದ ನಂತರ ಭಾರತದ ಆಳುವ ವರ್ಗಗಳಲ್ಲಿ ಸಂಚಲನ ಉಂಟಾಗಿತ್ತು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಭಾರತದಲ್ಲಿ ಮಾನವ ಹಕ್ಕುಗಳ ರಕ್ಷಣೆಯ ಬಗ್ಗೆ ಹೆಚ್ಚಿನ ಪ್ರಜ್ಞೆ ಮೂಡಿತ್ತು. ನಂತರದ ದಿನಗಳಲ್ಲಿ ಪ್ರಜಾತಂತ್ರದ ರಕ್ಷಣೆಗೆ ಮೂಲ ಮಂತ್ರ ಇರುವುದೇ ಮಾನವ ಹಕ್ಕುಗಳ ರಕ್ಷಣೆಯಲ್ಲಿ ಎನ್ನುವ ಜಾಗೃತಿ ಮೂಡಿತ್ತು. ಈ ಸಂದರ್ಭದಲ್ಲಿ ಅಧಿಕಾರ ಕೇಂದ್ರಗಳು ಮತ್ತು ಆಡಳಿತ ವ್ಯವಸ್ಥೆ ಮಾನವ ಹಕ್ಕುಗಳ ಕಾರ್ಯಕರ್ತರನ್ನು, ಸಂಘಟನೆಗಳನ್ನು ಅಮೆರಿಕದ ಏಜೆಂಟರು ಎಂದೇ ಪರಿಗಣಿಸುತ್ತಿದ್ದವು.

ಪ್ರಜಾತಂತ್ರ ಮೌಲ್ಯಗಳನ್ನು ಎತ್ತಿಹಿಡಿಯುವ ದನಿಗಳೂ ಇದೇ ಸಂದರ್ಭದಲ್ಲೇ ಜಾಗೃತವಾಗಿದ್ದವು. ದೇಶಾದ್ಯಂತ ರಾಜಕೀಯ ಆಂದೋಲನಗಳಷ್ಟೇ ಅಲ್ಲದೆ, ಸಾಂಸ್ಕೃತಿಕ ಲೋಕದಲ್ಲಿ, ಸಾಹಿತ್ಯ , ನಾಟಕ, ಸಿನಿಮಾ, ಕಾವ್ಯ ಹೀಗೆ ಎಲ್ಲ ವಲಯಗಳಲ್ಲೂ ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಬೃಹತ್ ಜನಾಂದೋಲನಕ್ಕೆ ಭಾರತ ಸಾಕ್ಷಿಯಾಗಿತ್ತು. 1970 ಮತ್ತು 80ರ ದಶಕದಲ್ಲಿ , ತುರ್ತುಪರಿಸ್ಥಿತಿಯ ನಂತರದ ಬದಲಾದ ಆಡಳಿತ ಧೋರಣೆಯ ಹಿನ್ನೆಲೆಯಲ್ಲೇ, ಮಾನವ ಹಕ್ಕುಗಳ ಹೋರಾಟವೂ ಹೊಸ ಆಯಾಮ ಪಡೆದುಕೊಂಡಿದ್ದನ್ನು ಸೂಕ್ಷ್ಮವಾಗಿ ಗಮನಿಸಬೇಕು.

ಏಕೆಂದರೆ ಮಾನವ ಹಕ್ಕುಗಳ ರಕ್ಷಣೆ ಒಂದು ಬೃಹತ್ ಜನಾಂದೋಲನವಾಗಿ ರೂಪುಗೊಳ್ಳಲಿಲ್ಲ. ಪಿಯುಸಿಎಲ್, ಪಿಯುಡಿಆರ್ ಮುಂತಾದ ಸಂಘಟನೆಗಳು ದೇಶಾದ್ಯಂತ ತಮ್ಮ ನೆಲೆ ಕಂಡುಕೊಂಡರೂ, ಎಲ್ಲ ರಾಜ್ಯಗಳಲ್ಲಿ ಪ್ರಾತಿನಿಧ್ಯ ಹೊಂದಿದ್ದರೂ, ಒಂದು ಸಮೂಹ ಚಳುವಳಿಯಂತೆ ರೂಪುಗೊಳ್ಳಲು ಸಾಧ್ಯವಾಗಲಿಲ್ಲ.

ಈ ಸಂದರ್ಭದಲ್ಲಿ ರೂಪುಗೊಂಡ ದಲಿತ ಚಳುವಳಿಗಳು, ಮಹಿಳಾ ಅಂದೋಲನಗಳು ಮತ್ತು ರಾಜಕೀಯ ಹೋರಾಟಗಳು ಮಾನವ ಹಕ್ಕುಗಳನ್ನು ತಮ್ಮ ಹೋರಾಟದ ಒಂದು ಭಾಗವಾಗಿ ಪರಿಗಣಿಸಿದ್ದರೂ, ಮಾನವ ಹಕ್ಕು ರಕ್ಷಣೆಗೆ ಒಂದು ರಾಜಕೀಯ ಸ್ವರೂಪ ನೀಡಲು ಮುಂದಾಗಲಿಲ್ಲ.

ಹಾಗಾಗಿ ಎಲ್ಲ ಚಳುವಳಿಗಳಲ್ಲೂ ಮಾನವ ಹಕ್ಕು ರಕ್ಷಣೆ ಒಂದು ಕಾರ್ಯಸೂಚಿಯಾಗಿ ಬಳಕೆಯಾಗಿತ್ತೇ ಹೊರತು, ಸೈದ್ಧಾಂತಿಕ ತಳಹದಿಯಾಗಿ ರೂಪುಗೊಳ್ಳಲಿಲ್ಲ. ಮಾನವ ಹಕ್ಕುಗಳ ಪರಿಕಲ್ಪನೆ ಎಲ್ಲ ರಾಜಕೀಯ ಮತ್ತು ಸಾಮಾಜಿಕ ಆಂದೋಲನಗಳಲ್ಲಿ ಅಂತರ್ಗತವಾಗಿದ್ದರೂ, ಅಧಿಕಾರ ರಾಜಕಾರಣದ ನೆಲೆಯಲ್ಲಿ ಈ ಪರಿಕಲ್ಪನೆಯೇ ಸಾಪೇಕ್ಷ ನೆಲೆ ಪಡೆಯುವುದನ್ನೂ ಕಂಡಿದ್ದೇವೆ.

ಇಂದು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಕವಿ, ಲೇಖಕ, ಸಾಮಾಜಿಕ ಕಾರ್ಯಕರ್ತ ವರವರರಾವ್ ಈ ಸಾಪೇಕ್ಷತೆಗೆ ಬಲಿಯಾಗುತ್ತಿರುವವರಲ್ಲಿ ಒಬ್ಬರು. ಈ ನಿಟ್ಟಿನಲ್ಲಿ ನೋಡಿದಾಗ ವರವರರಾವ್ ಏಕಾಂಗಿಯಾಗಿ ಕಾಣುವುದಿಲ್ಲ. ಅವರೊಂದಿಗೆ ಪ್ರೊಫೆಸರ್ ಸಾಯಿಬಾಬಾ ಇದ್ದಾರೆ.

ಬದಲಾದ ಭಾರತದಲ್ಲಿ ಇನ್ನೂ ಹೆಚ್ಚು ಕಾರ್ಯಕರ್ತರು ಇವರುಗಳೊಡನೆ ಅನುಭವಿಸುವ ಸಾಧ್ಯತೆಗಳೂ ಇವೆ. ಪ್ರಭುತ್ವ ಪ್ರತಿರೋಧದ ದನಿಗಳನ್ನು ಹತ್ತಿಕ್ಕಲು ಬಳಸಬಹುದಾದ ಎಲ್ಲ ಅಸ್ತ್ರಗಳನ್ನೂ ಇಂದು ಭಾರತದಲ್ಲಿ ಪ್ರಯೋಗಿಸಲಾಗುತ್ತಿದೆ. ಅಧಿಕಾರ ರಾಜಕಾರಣ ಮತ್ತು ಅಧಿಪತ್ಯ ರಾಜಕಾರಣದಲ್ಲಿ ಇಂತಹ ಕ್ರೌರ್ಯಗಳೂ ಸ್ವೀಕೃತವಾಗುವಂತೆ ಸಮೂಹ ಸನ್ನಿ ಸೃಷ್ಟಿಸಲಾಗುತ್ತದೆ.

ಈ ಸಮೂಹ ಸನ್ನಿಗೆ ಮತೀಯವಾದ, ಜಾತಿವಾದ, ಪ್ರಾದೇಶಿಕತೆ, ಭೌಗೋಳಿಕ ದೇಶದ ಪರಿಕಲ್ಪನೆ ಮತ್ತು ದೇಶಭಕ್ತಿ-ಪ್ರೇಮ ಮುಂತಾದ ಅತಿ ಭಾವುಕ ಕಲ್ಪನೆಗಳು ಇವೆಲ್ಲವೂ ನೆರವಾಗುತ್ತವೆ. ಕಳೆದ 50 ವರ್ಷದಲ್ಲಿ ಭಾರತದ ರಾಜಕೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಭಾರತದ ಪ್ರಭುತ್ವ ಮಾನವ ಹಕ್ಕುಗಳಿಗೆ ಎಂದೂ ಸಹ ಮಾನ್ಯತೆ ನೀಡಿಲ್ಲ.

ಸರ್ಕಾರಗಳು ಬದಲಾಗಿವೆ. ಪಕ್ಷಗಳು ಬದಲಾಗಿವೆ. ಹೊಸ ಪಕ್ಷಗಳು ಉದಯಿಸಿವೆ ಆದರೆ ಪ್ರಭುತ್ವದ ಧೋರಣೆಯನ್ನು ಪ್ರಶ್ನಿಸುವ ಯಾವುದೇ ರಾಜಕೀಯ ಪಕ್ಷವನ್ನು ಗುರುತಿಸಲಾಗುವುದಿಲ್ಲ. ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ಕಾರ್ಯಕರ್ತರ, ನಾಯಕರ ಹಿತಾಸಕ್ತಿಗಾಗಿ ಮಾನವ ಹಕ್ಕುಗಳ ಸಂಹಿತೆಗಳನ್ನು ಬಳಸಿಕೊಳ್ಳುತ್ತವೆಯೇ ಹೊರತು, ದೇಶದ ಸಾಮಾನ್ಯ ಜನತೆಯ ಸಾಂವಿಧಾನಿಕ, ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗೆ ಕಟಿಬದ್ಧವಾಗಿಲ್ಲ ಎನ್ನುವುದು ಸ್ಪಷ್ಟ.

ಭಾರತದ ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾವುದೇ ಆಡಳಿತಾರೂಢ ಪಕ್ಷವೂ ಸಹ ಮಾನವ ಹಕ್ಕು ಉಲ್ಲಂಘನೆಯ ಆರೋಪದಿಂದ ಮುಕ್ತವಾಗಿಲ್ಲ ಎನ್ನುವುದೂ ಗಮನಾರ್ಹ ಸಂಗತಿ. ಮಾನವ ಹಕ್ಕುಗಳ ಪರಿಕಲ್ಪನೆ ಮೂಲತಃ ಪ್ರಜೆಗಳ ಸಾಂವಿಧಾನಿಕ ಹಕ್ಕುಗಳಿಗೆ ಸಂಬಂಧಿಸಿದ್ದು ಮತ್ತು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಈ ಹಕ್ಕುಗಳು ಮತ್ತಷ್ಟು ಮಾನ್ಯತೆ ಪಡೆಯುತ್ತವೆ.

ಅಂತಾರಾಷ್ಟ್ರೀಯ ಸಂಹಿತೆಗಳ ಅನುಸಾರ ಪ್ರತಿಯೊಬ್ಬ ಪ್ರಜೆಯ ಜೀವಿಸುವ ಹಕ್ಕನ್ನು ರಕ್ಷಿಸುವುದು ಪ್ರಭುತ್ವದ ಕರ್ತವ್ಯವಾಗಿರುತ್ತದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳ ಬದುಕುವ ಹಕ್ಕು ಕಸಿದುಕೊಳ್ಳುವ ಹಕ್ಕು ಪ್ರಭುತ್ವಕ್ಕೆ ಇರುವುದಿಲ್ಲ. ಹಾಗಾಗಿಯೇ ವಿಶ್ವದ ಬಹುಪಾಲು ರಾಷ್ಟ್ರಗಳು ಮರಣದಂಡನೆಯಂತಹ ಜೀವ ವಿರೋಧಿ ಶಿಕ್ಷೆಯನ್ನು ಬಹಿಷ್ಕರಿಸಿವೆ. ಆದರೆ ಭಾರತ ಇದಕ್ಕೆ ಹೊರತಾಗಿದೆ.

ದುರಂತ ಎಂದರೆ ಭಾರತದಲ್ಲಿ ಯಾವುದೇ ರಾಜಕೀಯ ಪಕ್ಷವೂ ಈ ಕುರಿತು ಯೋಚಿಸಿಯೂ ಇಲ್ಲ. ಅಪರಾಧ, ದಂಡನೆ ಮತ್ತು ಶಿಕ್ಷೆ ಈ ಮೂರು ವಿದ್ಯಮಾನಗಳ ನಡುವೆ ಮಾನವ ಹಕ್ಕುಗಳನ್ನು ರಕ್ಷಿಸುವ ನೈತಿಕ ಹೊಣೆಗಾರಿಗೆ ಆಡಳಿತ ವ್ಯವಸ್ಥೆಯ ಮೇಲಿರುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಶಾಹಿಗಳಿಂದ ಉಂಟಾಗಬಹುದಾದ ಕಾರ್ಯಾಂಗದ ಪ್ರಮಾದಗಳನ್ನು ಶಾಸಕಾಂಗವು ಸರಿಪಡಿಸಬೇಕಾಗುತ್ತದೆ.

ಒಂದು ವೇಳೆ ಶಾಸಕಾಂಗವೂ ಪ್ರಜೆಗಳ ಹಕ್ಕುಗಳನ್ನು ಕಸಿಯಲು ವಾಮ ಮಾರ್ಗಗಳನ್ನು ಅನುಸರಿಸಿದರೆ ನ್ಯಾಯಾಂಗ ತನ್ನ ಸಾಂವಿಧಾನಿಕ ಹೊಣೆಯನ್ನು ನಿಭಾಯಿಸಬೇಕಾಗುತ್ತದೆ. ಇದು ಭಾರತದ ಸಂವಿಧಾನದ ಮೂಲ ಮಂತ್ರವೂ ಆಗಿದೆ. ಸರ್ವೋಚ್ಚ ನ್ಯಾಯಾಲಯ ಈ ನಿಟ್ಟಿನಲ್ಲಿ ಹಲವಾರು ಸಂದರ್ಭಗಳಲ್ಲಿ ತನ್ನ ಮೇರು ಸ್ಥಾನವನ್ನು ಸಾರ್ಥಕಪಡಿಸಿಕೊಂಡಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಶೋಷಣೆಗೊಳಗಾದ, ನ್ಯಾಯವಂಚಿತರಾದ, ಅವಕಾಶವಂಚಿತರಾದ ಜನಸಮುದಾಯಗಳಿಗೆ ನ್ಯಾಯ ದೊರಕಿಸುವಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯ ಯಶಸ್ವಿಯಾಗಿದೆ.

ಆದರೆ ಪ್ರಸ್ತುತ ಸಂದರ್ಭದಲ್ಲಿ ಇವೆಲ್ಲವೂ ಗತ ಇತಿಹಾಸದಂತೆ ಕಾಣುತ್ತಿದೆ. 1975ರ ತುರ್ತುಪರಿಸ್ಥಿಯ ನಂತರ ಭಾರತೀಯ ಪ್ರಭುತ್ವದಲ್ಲಿ ಉಂಟಾದ ಮನ್ವಂತರ ಪ್ರಕ್ರಿಯೆಯನ್ನು ಈ ಹಿನ್ನೆಲೆಯಲ್ಲೇ ನಿಷ್ಕರ್ಷೆ ಮಾಡಬೇಕಾಗುತ್ತದೆ. ಜನಾಂದೋಲನಗಳನ್ನು ಹತ್ತಿಕ್ಕಲು, ಪ್ರಜೆಗಳ ಆಕ್ರೋಶದ ದನಿಗಳನ್ನು ದಮನಿಸಲು, ನಾಗರಿಕ ಸಮಾಜದ ಪ್ರತಿರೋಧವನ್ನು ಮಣಿಸಲು ಪ್ರಭುತ್ವ ಬಳಸುತ್ತಿರುವ ಎಲ್ಲ ಕರಾಳ ಶಾಸನಗಳಿಗೂ ಶಿಲಾನ್ಯಾಸ ಮಾಡಿದ್ದು ಶ್ರೀಮತಿ ಇಂದಿರಾಗಾಂಧಿ ಮತ್ತು ಅವರು ಹೇರಿದ ತುರ್ತುಪರಿಸ್ಥಿತಿ ಎನ್ನುವುದು ಚಾರಿತ್ರಿಕ ಸತ್ಯ. ಇಂದು ಭಾರತದ ಸಾರ್ವಭೌಮ ಪ್ರಜೆಗಳು ಉಸಿರುಗಟ್ಟುವ ವಾತಾವರಣದಲ್ಲಿ ಬದುಕವಂತಾಗಿದ್ದರೆ, ಪ್ರತಿರೋಧ ವ್ಯಕ್ತಪಡಿಸಲೂ ಹಿಂಜರಿಯುವಂತಹ ಸನ್ನಿವೇಶ ಉಂಟಾಗಿದ್ದರೆ ಇದರ ಮೂಲವನ್ನು ತುರ್ತುಪರಿಸ್ಥಿತಿಯಲ್ಲಿ ಗುರುತಿಸಬಹುದು.

45 ವರ್ಷಗಳ ಹಿಂದಿನ ತುರ್ತುಪರಿಸ್ಥಿತಿಯನ್ನು ನೆನೆಯುತ್ತಾ, ಅಂದಿನ ತಮ್ಮ ಹೋರಾಟ, ಸೆರೆವಾಸ, ಚಿತ್ರಹಿಂಸೆಗೊಳಪಟ್ಟ ಸನ್ನಿವೇಶಗಳನ್ನು ರಸವತ್ತಾಗಿ ಬಣ್ಣಿಸುತ್ತಾ, ಪ್ರಜಾತಂತ್ರ ಮತ್ತು ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಉಪನ್ಯಾಸ ನೀಡುವ ಪ್ರತಿಯೊಂದು ರಾಜಕೀಯ ಪಕ್ಷವೂ, ಪ್ರತಿಯೊಬ್ಬ ರಾಜಕೀಯ ನಾಯಕನೂ ಒಮ್ಮೆ ಈ 45 ವರ್ಷಗಳಲ್ಲಿ ಭಾರತದ ಶ್ರೇಷ್ಠ ಸಂವಿಧಾನದ ಚೌಕಟ್ಟಿನಲ್ಲೇ ಜಾರಿಗೊಳಿಸುವ ಕರಾಳ ಶಾಸನಗಳತ್ತ ಗಮನಹರಿಸಿದರೆ ನಾಚಿ ತಲೆತಗ್ಗಿಸಬೇಕಾಗುತ್ತದೆ.

ತುರ್ತುಪರಿಸ್ಥಿತಿಯಲ್ಲಿ ಜಾರ್ಜ್ ಫರ್ನಾಂಡಿಸ್ ಮುಂತಾದ ನಾಯಕರು ಅನುಭವಿಸಿದ ಚಿತ್ರಹಿಂಸೆಯನ್ನು ಇಂದಿನ ವರವರರಾವ್ ಅವರ ಪರಿಸ್ಥಿತಿಗೆ ಮುಖಾಮುಖಿಯಾಗಿಸಿ ನೋಡಲು ಆತ್ಮಸಾಕ್ಷಿಯೂ ಇರಬೇಕು, ಆತ್ಮಸ್ಥೈರ್ಯವೂ ಬೇಕಲ್ಲವೇ ? ಬಹುಶಃ ನ್ಯಾಯಾಂಗವೂ ಇಲ್ಲಿ ನಿಷ್ಕರ್ಷೆಗೊಳಗಾಗಬೇಕಿದೆ.

1980ರ ನಂತರ ಭಾರತ ತನ್ನ ಸಮಾಜವಾದಿ ಧೋರಣೆಯನ್ನು ಕೈಬಿಟ್ಟು ನವ ಉದಾರವಾದಿ ಆರ್ಥಿಕ ನೀತಿಗಳನ್ನು ಅನುಸರಿಸಲು ಆರಂಭಿಸಿದ ನಂತರ, ಭಾರತದ ಪ್ರಭುತ್ವದ ಧೋರಣೆಯೂ ಹಂತಹಂತವಾಗಿ ಬದಲಾಗುತ್ತಿರುವುದನ್ನು ಗಮನಿಸಬೇಕಿದೆ. ಇದೇ ಸಂದರ್ಭದಲ್ಲಿ ದೇಶದಲ್ಲಿ ಉಲ್ಬಣಿಸಿದ ಸಿಖ್ ಪ್ರತ್ಯೇಕತಾವಾದ, ಕಾಶ್ಮೀರದ ಉಗ್ರವಾದ ಮತ್ತು ಪ್ರತ್ಯೇಕತಾವಾದ, ಹಿಂದೂ ಮೂಲಭೂತವಾದ ಮತ್ತು ಈ ಮೂರೂ ವಿದ್ಯಮಾನಗಳ ನಡುವೆ ದೇಶದಲ್ಲಿ ತಾರಕಕ್ಕೇರಿದ ಮತೀಯ ಮೂಲಭೂತವಾದ ಆಡಳಿತ ವ್ಯವಸ್ಥೆಯ ಕರಾಳ ಶಾಸನಗಳಿಗೆ ಮಾನ್ಯತೆ ದೊರೆಯಲು ನೆರವಾಗಿದ್ದನ್ನೂ ಅಲ್ಲಗಳೆಯುವಂತಿಲ್ಲ. ಈ ಸಂದರ್ಭದಲ್ಲೇ “ ಅನ್ಯರ ” ಪರಿಕಲ್ಪನೆಗೂ ಸಾರ್ವತ್ರಿಕ ಮಾನ್ಯತೆ ದೊರೆತಿತ್ತು. ಪ್ರಭುತ್ವದ ದಮನಕಾರಿ ನೀತಿಗಳಿಗೆ ಈ ಪರಿಕಲ್ಪನೆ ಪುಷ್ಟಿ ನೀಡಿತ್ತು. ಸಾವು, ಚಿತ್ರಹಿಂಸೆ ಮತ್ತು ಶಿಕ್ಷೆ ಮೂರೂ ಸಹ ಸಾಪೇಕ್ಷ ನೆಲೆಯಲ್ಲಿ ಮಾನ್ಯತೆ ಪಡೆದುಬಿಟ್ಟವು.

ಈ ಮಾನ್ಯತೆಗಾಗಿಯೇ ಭಾರತದ ಪ್ರಭುತ್ವ ಮತ್ತು ಆಡಳಿತಾರೂಢ ರಾಜಕೀಯ ಪಕ್ಷಗಳು ಹಲವಾರು ಭೂತದ ನೆಲೆಗಳನ್ನೂ ಸೃಷ್ಟಿಸಿವೆ. ಈ ನೆಲೆಗಳಲ್ಲಿ ಪ್ರಧಾನವಾಗಿ ಕಾಣುವುದು 1967ರ ನಕ್ಸಲ್‍ಬಾರಿ ಚಳುವಳಿ ಮತ್ತು ಅದರಿಂದ ದೇಶಾದ್ಯಂತ ಉಗಮಿಸಿದ ನೂರಾರು ಹೋರಾಟಗಳು.

ನವ ಉದಾರವಾದ- ಮತೀಯವಾದ ಮತ್ತು ಅಧಿಪತ್ಯ ರಾಜಕಾರಣವನ್ನು ಪ್ರಶ್ನಿಸುವ, ದೇಶದ ಶ್ರಮಜೀವಿಗಳ, ಅವಕಾಶವಂಚಿತರ, ಶೋಷಿತ ಸಮುದಾಯಗಳ ಮತ್ತು ದುರ್ಬಲ ವರ್ಗಗಳ ಮೂಲಭೂತ ಹಕ್ಕುಗಳಿಗಾಗಿ, ಜೀವಿಸುವ ಹಕ್ಕುಗಳಿಗಾಗಿ ಹೋರಾಡುವ ಮತ್ತು ಆಡಳಿತವ್ಯವಸ್ಥೆಯ ಜನವಿರೋಧಿ ನೀತಿಗಳಿಗೆ ಪ್ರತಿರೋಧ ವ್ಯಕ್ತಪಡಿಸುವ ಎಲ್ಲ ದನಿಗಳನ್ನೂ ಈ ಒಂದು ಚಳುವಳಿಯ ಚೌಕಟ್ಟಿನಲ್ಲೇ ನಿಷ್ಕರ್ಷೆ ಮಾಡುವ ಮೂಲಕ, ದನಿಗಳನ್ನು ದಮನಿಸುವ ನೀತಿಗಳಿಗೆ ಸಾರ್ವಜನಿಕ ಮಾನ್ಯತೆ ಪಡೆಯುವಲ್ಲಿ ಆಳುವ ವರ್ಗಗಳು ಯಶಸ್ವಿಯಾಗಿದ್ದವು. ಈ ಸಮೂಹ ಸನ್ನಿಯನ್ನು ಸೃಷ್ಟಿಸಲು ಕಾಶ್ಮೀರದ ಉಗ್ರವಾದ, ಭಯೋತ್ಪಾದನೆ ಮತ್ತು ಹಿಂದುತ್ವ ರಾಜಕಾರಣ ನೆರವಾಗಿದ್ದವು.

1990ರ ನಂತರದಲ್ಲಿ ಭಾರತದ ಜನತಂತ್ರದಲ್ಲಿ ಎರಡು ಚಿಂತನಾವಾಹಿನಿಗಳು ಸ್ಪಷ್ಟವಾಗಿ ಉಗಮಿಸಿದವು. ನವ ಉದಾರವಾದ, ಜಾಗತೀಕರಣ, ಹಣಕಾಸು ಬಂಡವಾಳದ ಅಧಿಪತ್ಯ , ಸಾಂಸ್ಕೃತಿಕ ಮತೀಯ ರಾಜಕಾರಣ ಮತ್ತು ಪ್ರಾದೇಶಿಕ ಹಾಗೂ ಜಾತಿ ರಾಜಕಾರಣ ಈ ಎಲ್ಲವನ್ನೂ ಪ್ರತಿನಿಧಿಸುವ ಒಂದು ವರ್ಗ ಅಧಿಕಾರ ರಾಜಕಾರಣಕ್ಕೆ ಸ್ಪಷ್ಟ ತಳಪಾಯ ನಿರ್ಮಿಸುವಲ್ಲಿ ಯಶಸ್ವಿಯಾದವು.

ಈ ಆಳುವ ವರ್ಗಗಳಿಗೆ ಒತ್ತಾಸೆಯಾಗಿ ನಿಂತಿದ್ದು ಮಾರುಕಟ್ಟೆ ಶಕ್ತಿಗಳು ಮತ್ತು ಭಾರತದ ಕಾರ್ಪೋರೇಟ್ ವಲಯ. 1998ರ ನಂತರದ ಎಲ್ಲ ಚುನಾವಣೆಗಳಲ್ಲೂ ಕಾರ್ಪೋರೇಟ್-ಮಾರುಕಟ್ಟೆ ಶಕ್ತಿಗಳ ಪ್ರಭಾವವನ್ನು ಈ ಹಿನ್ನೆಲೆಯಲ್ಲಿ ಗ್ರಹಿಸಬಹುದು. ಬಂಡವಾಳ ವ್ಯವಸ್ಥೆಯ ಶೋಷಕ ನೆಲೆಗಳನ್ನು ಗಟ್ಟಿಗೊಳಿಸಲು ಜನಾಂದೋಲನಗಳನ್ನು ಹತ್ತಿಕ್ಕುವ ಕರಾಳ ಶಾಸನಗಳೂ ಆಳುವ ವರ್ಗಗಳ ಪ್ರತಿನಿಧಿಗಳಲ್ಲಿ ಮಾನ್ಯತೆ ಪಡೆದಿದ್ದವು.

1970-80ರ ದಶಕದಲ್ಲಿ ದೇಶದ ದುಡಿಯುವ ವರ್ಗಗಳೊಡನೆ, ಶ್ರಮಜೀವಿಗಳೊಡನೆ, ಶೋಷಿತ-ಅವಕಾಶವಂಚಿತ ಜನಸಮುದಾಯಗಳೊಡನೆ ಗುರುತಿಸಿಕೊಳ್ಳುತ್ತಿದ್ದ ರಾಜಕೀಯ ಪಕ್ಷಗಳು ಕ್ರಮೇಣ ಈ ಜನಸಮುದಾಯಗಳನ್ನು ತಮ್ಮ ಅಧಿಕಾರ ರಾಜಕಾರಣದ ವಿಸ್ತರಣೆಯ ಕಾಲಾಳುಗಳನ್ನಾಗಿ ಬಳಸಿಕೊಂಡಿದ್ದನ್ನೂ ಗಮನಿಸಬಹುದು. ಈ ಸಂದರ್ಭದಲ್ಲೇ ಅಸಂಖ್ಯಾತ ಜನಾಂದೋಲನಗಳು ನಿಷ್ಕ್ರಿಯವಾಗತೊಡಗಿದವು.

ದಲಿತ ಸಂಘಟನೆಗಳನ್ನೂ ಸೇರಿದಂತೆ ಹಲವು ಚಳುವಳಿಗಳು ಯಾವುದೋ ಒಂದು ರಾಜಕೀಯ ಪಕ್ಷದ ಬಾಲಂಗೋಚಿಗಳಾದವು. ಕಾರ್ಮಿಕ ಸಂಘಟನೆಗಳು ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಮರೆತು ಸ್ವ ಹಿತಾಸಕ್ತಿ ರಕ್ಷಣೆಯ ಗುಂಪುಗಳಾದವು. ರಾಜಕೀಯೇತರ ಚಳುವಳಿಗಳ ಮೂಲಕ ಶೋಷಿತರ ಪರ ದನಿ ಎತ್ತಿದ್ದ ಹಲವಾರು ಸಂಘಟನೆಗಳು ಆಡಳಿತ ವ್ಯವಸ್ಥೆಯ ಕೆಂಗಣ್ಣಿಗೆ ಗುರಿಯಾದವು.
ಈ ವಿಘಟನೆಯ ಫಲವನ್ನು ಜನಾಂದೋಲನಗಳ ನಿಷ್ಕ್ರಿಯತೆಯಲ್ಲಿ ಕಾಣುತ್ತಿದ್ದೇವೆ.

ಕಳೆದ ಆರು ವರ್ಷಗಳಲ್ಲಿ ಕಾರ್ಪೋರೇಟ್-ಮಾರುಕಟ್ಟೆಯ ಶಕ್ತಿಗಳು ದೇಶದ ಆಡಳಿತ ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುವಂತೆಯೇ, ಭಾರತದ ಆಳುವ ವರ್ಗಗಳು ಜನಸಾಮಾನ್ಯರ ಪ್ರತಿರೋಧದ ದನಿಗಳನ್ನು ಹತ್ತಿಕ್ಕಲು ಸಂವಿಧಾನದ ಚೌಕಟ್ಟಿನಲ್ಲೇ ಕರಾಳ ಶಾಸನಗಳನ್ನು ರೂಪಿಸುತ್ತಿವೆ. ಈ ಜನವಿರೋಧಿ ನೀತಿಗಳನ್ನು ವಿರೋಧಿಸುವ ದನಿಗಳನ್ನು ಶಾಶ್ವತವಾಗಿ ಅಡಗಿಸುವ ದುಷ್ಟ ಧೋರಣೆಯನ್ನೂ ಕಾಣುತ್ತಿದ್ದೇವೆ. ಆನಂದ್ ತೇಲ್ತುಂಬ್ಡೆ, ಸುಧಾ ಭರದ್ವಾಜ್, ಸಾಯಿಬಾಬಾ, ಗೌತಮ್ ನವಲಖಾ ಮತ್ತು ವರವರರಾವ್ ಮತ್ತು ಅಸಂಖ್ಯಾತ ಹೋರಾಟಗಾರರು ಈ ದುಷ್ಟ ನೀತಿಗೆ ಬಲಿಯಾಗುತ್ತಿದ್ದಾರೆ.

ರಾಜಕೀಯ ವಲಯದಲ್ಲಿ ಜಾಗೃತವಾಗಿದ್ದ ತಾತ್ವಿಕ-ಸೈದ್ಧಾಂತಿಕ ನೆಲೆಗಳೆಲ್ಲವೂ ಪ್ರಭುತ್ವದ ಚೌಕಟ್ಟಿನಲ್ಲಿ ಬಂದಿಯಾಗಿರುವ ಸಂದರ್ಭದಲ್ಲಿ ಇಂದು ದೇಶದ ಬಹುಸಂಖ್ಯಾತ ಜನತೆ ತಮ್ಮ ಹಕ್ಕುಗಳಿಗಾಗಿ, ಜೀವನೋಪಾಯಕ್ಕಾಗಿ, ಬದುಕುವ ಅವಕಾಶಕ್ಕಾಗಿ ನಿರಂತರ ಹೋರಾಟ ನಡೆಸಬೇಕಾದ ಸನ್ನಿವೇಶವನ್ನು ಎದುರಿಸುತ್ತಿದೆ.

ಹೋರಾಟದ ನೆಲೆಗಳ ಪುನರುತ್ಥಾನದೊಂದಿಗೇ ಅಧಿಕಾರ ರಾಜಕಾರಣದ ಕಾಲಾಳುಗಳಾಗಿರುವ ಅಸಂಖ್ಯಾತ ಶೋಷಿತರನ್ನು ಮತ್ತೊಮ್ಮೆ ಪ್ರತಿರೋಧದ ನೆಲೆಯಲ್ಲಿ ಸಂಘಟಿಸುವ ಹೊಣೆಗಾರಿಕೆ ಜನಾಂದೋಲನಗಳ ಮೇಲಿದೆ. ಶೋಷಣೆಯ ವಿಭಿನ್ನ ಆಯಾಮಗಳನ್ನು ಸಾಪೇಕ್ಷ ನೆಲೆಯಲ್ಲಿ ನೋಡುವ ಧೋರಣೆಯಿಂದ ಜನಾಂದೋಲನಗಳು ಹೊರಬರಬೇಕಿದೆ.

ಸಾವು ಬದುಕಿನ ನಡುವೆ ಸೆಣಸುತ್ತಿರುವ ಕವಿ ವರವರರಾವ್ ಈ ಸಂದರ್ಭದಲ್ಲಿ ಪ್ರಭುತ್ವ ವಿರೋಧಿ ನೆಲೆಯ ಸಂಕೇತವಾಗಿ ಕಾಣುತ್ತಾರೆ. ತೇಲ್ತುಂಬ್ಡೆ , ಸಾಯಿಬಾಬಾ ಮತ್ತಿತರರು ಈ ಸಾಂಕೇತಿಕ ನೆಲೆಯ ಪ್ರತಿನಿಧಿಗಳಾಗಿ ಕಾಣುತ್ತಾರೆ. ಹೋರಾಟದ ನೆಲೆಗಳು ಕರಾಳ ಶಾಸನಗಳ ದಾಳಿಯಿಂದ ನಿಷ್ಕ್ರಿಯವಾಗುತ್ತಿರುವ ದುರಂತ ಸನ್ನಿವೇಶವನ್ನು ಕಾಣುತ್ತಿದ್ದೇವೆ.

ಹಾಗಾಗಿಯೇ ದೇಶದ ಕೈಗಾರಿಕಾ ನೀತಿ, ಕಾರ್ಮಿಕ ನೀತಿ, ಕೃಷಿ ನೀತಿ ಮತ್ತು ಹಣಕಾಸು ನೀತಿ ಎಲ್ಲವೂ ಕಾರ್ಪೋರೇಟ್-ಮಾರುಕಟ್ಟೆ ಶಕ್ತಿಗಳ ಅಣತಿಯಂತೆ ಬದಲಾಗುತ್ತಿವೆ. ಸಮಸ್ತ ರಾಜಕೀಯ ವರ್ಗ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದೆ. ಶ್ರಮಜೀವಿ ವರ್ಗಗಳು ತಮ್ಮ ಮೂಲ ನೆಲೆಯನ್ನೇ ಕಳೆದುಕೊಂಡು ಗತಕಾಲದ ಜೀತಪದ್ಧತಿಗೆ ಒಳಗಾಗುವ ಸನ್ನಿವೇಶವನ್ನು ಎದುರಿಸುತ್ತಿದ್ದೇವೆ.

ಕೃಷಿ ಭೂಮಿ, ಬ್ಯಾಂಕಿಂಗ್ ವ್ಯವಸ್ಥೆ, ವಿಮಾ ವಲಯ, ಕಲ್ಲಿದ್ದಲು ನಿಕ್ಷೇಪಗಳು, ವಿಮಾನಯಾನ, ರೈಲು ಮಾರ್ಗಗಳು, ಗಣಿಗಾರಿಕೆ, ಸಾರ್ವಜನಿಕ ಸಾರಿಗೆ, ಸಾರ್ವಜನಿಕ ಉದ್ದಿಮೆಗಳು, ಕೈಗಾರಿಕಾ ವಲಯ , ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರ ಎಲ್ಲವೂ ಖಾಸಗೀಕರಣಕ್ಕೊಳಗಾಗುತ್ತಿರುವ ಸಂದರ್ಭದಲ್ಲೂ ರಾಜಕೀಯ ಪಕ್ಷಗಳು ಅಧಿಕಾರ ರಾಜಕಾರಣದ ಚೌಕಟ್ಟಿನಿಂದ ಹೊರಬರಲಾಗದೆ, ಪ್ರಭುತ್ವದ ದಮನಕಾರಿ ಆಡಳಿತ ನೀತಿಗಳಿಗೆ ಪೂರಕವಾಗಿ ವರ್ತಿಸುತ್ತಿರುವುದು ಸ್ಪಷ್ಟವಾಗುತ್ತಿದೆ. ವರವರರಾವ್, ತೇಲ್ತುಂಬ್ಡೆ ಮುಂತಾದ ಸಾಮಾಜಿಕ ಕಳಕಳಿಯುಳ್ಳ ಹೋರಾಟಗಾರರು ಅನಾಥರಂತೆ ಕಾಣುತ್ತಿದ್ದರೆ ಅದಕ್ಕೆ ಕಾರಣ ರಾಜಕೀಯ ಪಕ್ಷಗಳು ಈ ನೆಲೆಯಲ್ಲಿ ಪ್ರಜ್ಞಾಶೂನ್ಯವಾಗಿರುವುದು.

ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಇಂದು ಭಾರತದ ಶೋಷಿತ ದುಡಿಯುವ ವರ್ಗಗಳು ತಮ್ಮ ಅಳಿವು ಉಳಿವಿನ ಸಂಘರ್ಷಕ್ಕೆ ಸಜ್ಜಾಗಬೇಕಿದೆ. ಕಾರ್ಪೋರೇಟ್ ಅಧಿಪತ್ಯಕ್ಕೆ ಶರಣಾಗುತ್ತಿರುವ ರಾಜಕೀಯ ನೆಲೆಗಳಿಂದ ಭಿನ್ನವಾದ ಜನಾಂದೋಲನದ ನೆಲೆಯನ್ನು ಬಲಪಡಿಸುವ ತುರ್ತು ನಮ್ಮ ಮುಂದಿದೆ. ಮಾನವೀಯ ಮೌಲ್ಯಗಳನ್ನೇ ಕಳೆದುಕೊಂಡಿರುವ ಒಂದು ಆಡಳಿತ ವ್ಯವಸ್ಥೆಯಲ್ಲಿ ಈ ದೇಶದ ಬಹುಸಂಖ್ಯಾತ ಜನತೆ ತಮ್ಮ ಬದುಕು ರೂಪಿಸಿಕೊಳ್ಳಬೇಕಿದೆ.

ಪ್ರತಿಯೊಂದು ಪ್ರತಿರೋಧದ ದನಿಯನ್ನೂ ಶಾಶ್ವತವಾಗಿ ದಮನಿಸುವ ಪ್ರಭುತ್ವದ ನೀತಿಯ ನಡುವೆಯೇ, ಶೋಷಿತರ ಹಕ್ಕುಗಳಿಗಾಗಿ ಹೋರಾಡಬೇಕಿದೆ. ಪ್ರಭುತ್ವ ಮತ್ತು ಪ್ರಜೆಗಳ ನಡುವೆ ಒಂದು ಕಾಲಘಟ್ಟದಲ್ಲಿ ಶೋಷಿತರ ಬೆಂಗಾವಲಿನಂತಿದ್ದ ಕೆಲವು ರಾಜಕೀಯ ನೆಲೆಗಳು ಇಂದು ಮರೆಯಾಗಿವೆ. ಶೋಷಿತರ ದನಿಗೆ ದನಿಯಾಗುವ ಬದಲು, ತಮ್ಮ ಅಸ್ತಿತ್ವ ಕಾಪಾಡಿಕೊಳ್ಳಲು ಶೋಷಿತರ ದನಿಯನ್ನು ಅಸ್ತ್ರದಂತೆ ಬಳಸಿಕೊಳ್ಳುವ ರಾಜಕೀಯ ಪಕ್ಷಗಳ ಮತ್ತು ನಾಯಕರ ವಿಶ್ವಾಸ ದ್ರೋಹದ ವಿರುದ್ಧ ಶೋಷಿತ ಸಮುದಾಯಗಳು ಹೋರಾಡಬೇಕಿದೆ.

ಜನತಂತ್ರದ ಉಳಿವಿಗಾಗಿ, ಗಣತಂತ್ರದ ಉಳಿವಿಗಾಗಿ ಮತ್ತು ಪ್ರಜಾಸತ್ತಾತ್ಮಕ ಸಾಂವಿಧಾನಿಕ ಮೌಲ್ಯಗಳ ಉಳಿವಿಗಾಗಿ ಹೊಸ ನೆಲೆಗಳನ್ನು ಸೃಷ್ಟಿಸಬೇಕಾದ ಅನಿವಾರ್ಯತೆ ಎದುರಾಗಿದೆ. ವರವರರಾವ್ ಈ ಅನಿವಾರ್ಯತೆಯನ್ನು ಪ್ರತಿನಿಧಿಸುವ ಒಂದು ಕ್ಷೀಣ ದನಿಯಾಗಿ ನಮ್ಮ ನಡುವೆ ಉಸಿರಾಡುತ್ತಿದ್ದಾರೆ. “ ದೇಶವೆಂದರೆ ಮಣ್ಣಲ್ಲವೋ ಮನುಜರು ” ಈ ಘೋಷ ವಾಕ್ಯ ನಮ್ಮೊಳಗಿನ ಮಾನವೀಯತೆಯನ್ನು ಜಾಗೃತಿಗೊಳಿಸಿದರೆ ಬಹುಶಃ ನಾವು ವಿಶ್ವಮಾನವತೆಯನ್ನು ಸಾಧಿಸಲು, ಕಾರ್ಪೋರೇಟ್-ಮಾರುಕಟ್ಟೆ ರಾಜಕಾರಣದ ಅಮಾನುಷ ವ್ಯವಸ್ಥೆಯ ವಿರುದ್ಧ ಹೋರಾಡಲು ಸಜ್ಜಾಗಬಹುದು. ಇದು ಜನಾಂದೋಲನಗಳ ಮುಂದಿರುವ ಬೃಹತ್ ಸವಾಲು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಆಡಳಿತದಲ್ಲಿ ಪಾರದರ್ಶಕತೆಗೆ ಚಿತ್ರೀಕರಣ ಮಾಡಿ ಸಭೆ; ಮೆಚ್ಚುಗೆ ವ್ಯಕ್ತ

Published

on

ಸುದ್ದಿದಿನ,ಬಳ್ಳಾರಿ : ರೈತರು ಹಾಗೂ ಪ್ರಾಧಿಕಾರದ ಸಹಯೋಗದೊಂದಿಗೆ 50:50 ಅನುಪಾತದಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿ ಪಡಿಸುತ್ತಿರುವ 101.98 ಎಕರೆ ನಿವೇಶನ ಯೋಜನೆಗೆ ಕಲಂ19(1) ಅನ್ವಯ ಅಂತಿಮ ಅಧಿಸೂಚನೆ ಹೊರಡಿಸುವಿಕೆ ಹಾಗೂ ನಂತರ ಟೆಂಡರ್ ಕರೆಯುವುದಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಕೈಗೊಳ್ಳುವಂತೆ ನಗರಾಭಿವೃದ್ಧಿ ಸಚಿವ ಭೈರತಿ‌ ಬಸವರಾಜ ಅವರು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಿಗೆ ಸೂಚಿಸಿದರು.

ಬೆಂಗಳೂರಿನಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್ ಅವರು ನಗರಾಭಿವೃದ್ಧಿ ‌ಸಚಿವ ಭೈರತಿ‌ ಬಸವರಾಜ ಅವರನ್ನು ಸೋಮವಾರ ಭೇಟಿಯಾದ ಸಂದರ್ಭದಲ್ಲಿ ನಡೆದ ಚರ್ಚೆ ಸಂದರ್ಭದಲ್ಲಿ ಅವರು ಈ ಸೂಚನೆ ನೀಡಿದರು.ಬಳ್ಳಾರಿ ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಬುಡಾ ರೂಪಿಸಿರುವ ವಿವಿಧ ಯೋಜನೆಗಳ‌ ಮಾಹಿತಿಯನ್ನು ಆಲಿಸಿದರು.

ಬುಡಾದಲ್ಲಿ ಖಾಲಿ ಇರುವ 2 ಸಹಾಯಕ ಅಭಿಯಂತರ ಹುದ್ದೆಗಳು, 1 ಕಿರಿಯ ಸಹಾಯಕ ಅಭಿಯಂತರ ಹಾಗೂ ನಗರ ಯೋಜನೆಯ ಜಂಟಿ ನಿರ್ದೇಶಕ ಹುದ್ದೆಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಿ ಎಂದರು. ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಯೋಜನೆಯಲ್ಲಿ ಶೇ 5 ರಷ್ಟು ಪತ್ರಕರ್ತರಿಗೆ ಮೀಸಲಿಡುವ ಬಗ್ಗೆ ಅಧಿಸೂಚನೆ ಹೊರಡಿಸುವಂತೆ ಇಲಾಖೆಯ ಸಲು ಕಾರ್ಯದರ್ಶಿಗೆ ಸೂಚನೆ ನೀಡಿದರು.

ಬುಡಾ ವ್ಯಾಪ್ತಿಯಲ್ಲಿ ಬರುವ ಟೌನ್ ಸರ್ವೆ ನಂಬರ್, ಕಂದಾಯ ಸರ್ವೇ ನಂಬರ್ ಕುರಿತು ನನ್ನ ಅಧ್ಯಕ್ಷತೆಯಲ್ಲಿ ಸಭೆಯ ದಿನಾಂಕವನ್ನು ನಿಗದಿಪಡಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು. ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಬುಡಾ ಸಾಮಾನ್ಯ ಸಭೆಯನ್ನು ವಿಡಿಯೋ ಮತ್ತು ಆಡಿಯೋ ಚಿತ್ರೀಕರಣ ಮಾಡಿ ಸಭೆ ನಡೆಸಿದ್ದಕ್ಕೆ ಸಚಿವ ಭೈರತಿ ಬಸವರಾಜು ಅವರು ಅಭಿನಂದಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಸತಿ ಶಾಲೆಗಳಲ್ಲಿ ಖಾಲಿ ಉಳಿದ ಸೀಟುಗಳಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : 2020-21 ನೇ ಶೈಕ್ಷಣಿಕ ಸಾಲಿನಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು ಇದರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಂತ ಕಟ್ಟಡ ಹೊಂದಿರುವ ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ/ಶ್ರೀಮತಿ ಇಂದಿರಾಗಾಂಧಿ/ಡಾ.ಬಿ.ಆರ್.ಅಂಬೇಡ್ಕರ್/ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ ಪ್ರತಿಭಾನ್ವಿತ ವಸತಿ ಶಾಲೆ, ಮಾಯಕೊಂಡ ವಸತಿ ಶಾಲೆಗಳಲ್ಲಿ 7,8 ಮತ್ತು 9ಏ ತರಗತಿಯಲ್ಲಿ ಖಾಲಿ ಉಳಿದಿರುವ ಸೀಟುಗಳಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ/ಪ್ರ.ವರ್ಗ-1 ವಿದ್ಯಾರ್ಥಿಗಳಿಗೆ ರೂ.2.50 ಲಕ್ಷ ಮತ್ತು 2ಎ, 3ಎ, 3ಬಿ ವಿದ್ಯಾರ್ಥಿಗಳಿಗೆ ರೂ.1.00 ಲಕ್ಷ ಆದಾಯ ಮಿತಿ ಇರುತ್ತದೆ. ಆಯಾ ಜಿಲ್ಲೆಯ ವಿದ್ಯಾರ್ಥಿಗಳು ತಮ್ಮ ತಮ್ಮ ಜಿಲ್ಲೆ ವಸತಿ ಶಾಲೆಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಡಿ.1 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದ್ದು ವಿದ್ಯಾರ್ಥಿಗಳು ತಮ್ಮ ಹತ್ತಿರದ ವಸತಿ ಶಾಲೆಗೆ ಭೇಟಿ ನೀಡಿ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಅಲ್ಲಿಯೇ ಸಲ್ಲಿಸಬಹುದಾಗಿದ್ದು, ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶಿವಾನಂದ ಕುಂಬಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

‘ಬದುಕು ಬೆತ್ತಲಾದಾಗ’ ಒಂದು ರೋಚಕ ಕಥಾನಕ ಕಾದಂಬರಿ ; ಪುಸ್ತಕ ನಿಮ್ಮದಾಗಿಸಿಕೊಂಡು ಓದಿ

Published

on

  • ಶಾಹುಲ್ ಕಾಸಿಮ್

ನುಷ್ಯನ ಜೀವನದಲ್ಲಿ ಕಾಲೇಜು ಜೀವನ ಅತ್ಯಂತ ಮಹತ್ವದ ಘಟ್ಟ.ವಿಧ್ಯಾಭ್ಯಾಸ ಪೂರ್ತಿಗೊಳಿಸಿ ಜೀವನದ ದಿಕ್ಕನ್ನು‌ ಬದಲಿಸಬೇಕಾದ ವಿದ್ಯಾರ್ಥಿಗಳಿಬ್ಬರು ಪ್ರೀತಿಯ‌ ಬಲೆಗೆ ಬಿದ್ದು ಕೆಟ್ಟ ಚಟಗಳ ದಾಸರಾಗಿ ಜೀನವನ್ನೇ ಕೊನೆಗೊಳಿಸಿದ ಅತ್ಯಂತ ರೋಚನೀಯ‌ ಕಥೆಗಳನ್ನು ಲೇಖಕರು “ಬದುಕು ಬೆತ್ತಲಾದಾಗ” ಎಂಬ ಪುಸ್ತಕದಲ್ಲಿ ಬೆತ್ತಲುಗೊಳಿಸಿದ್ದಾರೆ.

ತಂದೆ‌ ತಾಯಿಯ‌ ಮಾತನ್ನು ‌ಕಡೆಗಣಿಸಿ ಪ್ರಿಯಕರನ ಹಿಂದೆ ಜೋತು ಬಿದ್ದ ಪ್ರಿಯತಮೆ ತನ್ನ ಗಂಡನಾದವನಿಂದ ಜೀವನದಲ್ಲಿ ಅನುಭವಿಸಿದ ನೋವನ್ನು,ಹಿಂಸೆಯನ್ನು ಲೇಖಕರು ಕಣ್ಣಿನಲ್ಲಿ ಕಣ್ಣೀರು ಬರುವಂತೆ ಕಟ್ಟಿ ಕೊಟ್ಟಿದ್ದಾರೆ.‌
ಪ್ರೀತಿಯ‌ ಎದುರು ತಂದೆ ‌ತಾಯಿಯ ಹಿರಿಯರ ಮಾತುಗಳನ್ನು ತೊಟ್ಟಿಗೆ‌‌ ಎಸೆದು ಪ್ರೀತಿಯೇ ಪ್ರಪಂಚವೆಂದು ನಂಬುವ ಜೋಡಿಗಳಿಗೆ‌ ಕೆಲವೊಂದು ಜೀವನಪಾಠಗಳು ಈ ಪುಸ್ತಕದಲ್ಲಿ ಅಡಗಿದೆ.

ಮೋಜು ಮಸ್ತಿ,ಕಾಮದ ಸುಖ‌ದಲ್ಲಿ ಜೀವನ ಸಾಗಿಸಿದ ಕಥಾ ನಾಯಕ ಜೈಲಿನಲ್ಲಿ ಅನುಭವಿಸಿದ ಕೊನೆಯ ದಿನಗಳು, ಅಸಭ್ಯರಿಗೆ‌ ಸಮಾಜ ಕೊಡುವ ಗೌರವವನನ್ನು‌, ಗಂಡನಿಂದ ಬೇರ್ಪಟ್ಟ‌‌ ಸುಂದರಿ ‌ಹೆಣ್ಣನ್ನು ಭೋಗ ತೀರಿಸುವ ಯಂತ್ರವನ್ನಾಗಿಸಿ ಆಕೆಯಿಂದ ಪಡೆಯಬೇಕಾದೆಲ್ಲವನ್ನು ಪಡೆದು ಕೊನೆಯ ಗಳಿಗೆಯಲ್ಲಿ ಆಕೆಯನ್ನು ಕೈ ಬಿಟ್ಟ ಗಂಡಿನ ಕ್ರೌರ್ಯವನ್ನು ಪುಸ್ತಕ ಬಿಚ್ಚಿಟ್ಟಿದೆ.ಕಾದಂಬರಿ ಓದುತ್ತಾ ‌ಹೋದಂತೆ ನಿಜ ಜೀವನದಲ್ಲಿ ಗತಿಸಿದ ಕೆಲವೊಂದು ಘಟನೆಗಳನ್ನು ನೆನಪಿಸುವಂತೆ ಮಾಡುತ್ತದೆ.

ಒಟ್ಟಾರೆ ಈ ಕಾದಂಬರಿ ನಿಜ ಜೀವನದ ‌ವಾಸ್ತವತೆಯನ್ನು‌ ತೆರೆದಿಟ್ಟು,ಸರಿ ತಪ್ಪುಗಳ ಆಯ್ಕೆಯನ್ನು ಓದುಗರಿಗೆ‌ ತಿಳಿಯಪಡಿಸುತ್ತೆ. ಕಷ್ಟ‌‌ಪಟ್ಟು‌ ಗಳಿಸಿದ ಯಶಸ್ಸು ಕದ್ದು ಗೆದ್ದ ಯಶಸ್ಸುಗಳ‌ ನಡುವಿನ ವ್ಯತ್ಯಾಸ ವನ್ನು ಸೂಚಿಸುತ್ತದೆ.ಒಟ್ಟು‌ 186 ಪುಟಗಳ‌ 24 ಅಧ್ಯಾಯಗಳು ಓದುಗನಿಗೆ ಆಯಾಸರಹಿತವು ಮತ್ತಷ್ಟು ‌ಪುಟಗಳ ಹುಡುಕಾಟ ನಡೆಸದೆ ಇರದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending