Connect with us

ದಿನದ ಸುದ್ದಿ

ಬಾಣಲೆಯಿಂದ ಬೆಂಕಿಗೆ : ಕೊರೊನಾ ರಣವೈದ್ಯ ಬೆಳಕಿಗೆ

Published

on

ಚಿತ್ರ: ಛತ್ತೀಸಗಢದ ಅರಣ್ಯದ ಮಧ್ಯೆ ಅದಾನಿ ಕಂಪನಿಯ ಕಲ್ಲಿದ್ದಲ ಗಣಿಗಾರಿಕೆಯ ದೃಶ್ಯ | ಕೃಪೆ :qz.com
  • ನಾಗೇಶ್ ಹೆಗಡೆ

ಕೊರೊನಾಮಾರಿ ಬರುವ ಮೊದಲು ಭಾರತದ ನದಿಗಳೆಲ್ಲ ಕೊಳಕು ಕೂಪಗಳಾಗಿದ್ದವು. ವಾಯುಮಾಲಿನ್ಯ ದಟ್ಟವಾಗಿತ್ತು. ಟ್ರಾಫಿಕ್ ಗದ್ದಲ ಅತಿಯಾಗಿತ್ತು. ಕಾರ್ಖಾನೆಗಳು, ಗಣಿಗಳು ಲಂಗುಲಗಾಮಿಲ್ಲದೇ ನಿಸರ್ಗ ಸಂಪತ್ತನ್ನು, ಕಾರ್ಮಿಕರನ್ನು ಶೋಷಣೆ ಮಾಡುತ್ತಿದ್ದವು. ಕೊರೊನಾ ಬಂದಮೇಲೆ ಎಲ್ಲಕಡೆ ಶಾಂತಿ ನೆಲೆಸಿತ್ತು. ಲಾಕ್ಡೌನ್ ಎಂಬ ಹಠಾತ್ ಎಡವಟ್ಟಿನಿಂದಾಗಿ ಅದೆಷ್ಟೊ ಲಕ್ಷ ಕಾರ್ಮಿಕರು ನೆಲೆತಪ್ಪಿ ಗುಳೆ ಹೊರಟು, ಘನಘೋರ ಸಂಕಷ್ಟಗಳಿಗೆ ತುತ್ತಾಗಿದ್ದನ್ನು ಬಿಟ್ಟರೆ , ಅಭಿವೃದ್ಧಿಯ ಭರಾಟೆಯಿಂದ ನಲುಗಿದ್ದ ನೆಲ-ನೀರು-ಗಾಳಿ-ವನ್ಯಜೀವ ಎಲ್ಲವೂ ತುಸು ಉಸಿರಾಡತೊಡಗಿದವು.

ಕೊರೊನಾ ನಂತರ ಹೊಸ ಭಾರತ ಉದಯಿಸಲಿದೆ ಎಂದು ನಮ್ಮಲ್ಲಿ ಅನೇಕರು ಸಣ್ಣ ಆಸೆಯನ್ನಿಟ್ಟುಕೊಂಡಿದ್ದರು. ಆದರೆ ಈಗಿನ ಸರಕಾರ ರಣವೈದ್ಯದ ವೈಖರಿ ನೋಡಿದರೆ, ಕಾಯಿಲೆಯ ನೆಪದಲ್ಲಿ ದುರ್ಬಲರನ್ನು (ಅಂದರೆ ಉದ್ಯೋಗ ಕಳಕೊಂಡವರನ್ನು, ನಡೆನಡೆದು ಸುಸ್ತಾದವರನ್ನು, ಹಸಿದವರನ್ನು) ಕಂದಕಕ್ಕೆ ದೂಡಿ ಮಣ್ಣು ಮುಚ್ಚಲು ಹೊರಟಂತೆ ಕಾಣುತ್ತದೆ. ನಮ್ಮಲ್ಲಿ ಹಕ್ಕಿಜ್ವರ ಬಂತೆಂದು ಹ್ಯಾಚರಿಯ ಸಾವಿರಾರು ಕೋಳಿಗಳನ್ನು ಕಂದಕಕ್ಕೆ ಹಾಕಿ ಮಣ್ಣು ಮುಚ್ಚಿದ ಹಾಗೆ.

(ಇಲ್ಲೊಂದು ಕ್ರೂರ ವ್ಯಂಗವಿದೆ: ಪ್ರಧಾನಿ ಮೋದಿಯವರು ಘೋಷಿಸಿದ 20 ಲಕ್ಷ ಕೋಟಿಯಲ್ಲಿ ಯಾವಯಾವ ಬಾಬ್ತಿಗೆ ಎಷ್ಟೆಷ್ಟು ಎಂಬುದನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಲ್ಕು ಟ್ರಾಂಚ್‌ (tranche)ಗಳಲ್ಲಿ ಹಂಚಿದ್ದಾರೆ. ನಾಲ್ಕನೆಯ ಕಂತಿನಲ್ಲಂತೂ ಗಣಿಗಾರಿಕೆ ವಿಸ್ತರಣೆಗೆ, ರಕ್ಷಣಾ ಉತ್ಪಾದನೆ, ವಿಮಾನಯಾನ, ಬಾಹ್ಯಾಕಾಶ ಸಾಹಸಕ್ಕೆ ಇತ್ಯಾದಿಯಂತೆ.

ಟ್ರಾಂಚ್ ಎಂದರೆ ಹೋಳು ಅಥವಾ ಭಾಗ. ಆದರೆ ನೀವು ಗೂಗಲ್ ಕನ್ನಡ ನಿಘಂಟಿನಲ್ಲಿ ಅದರ ಅರ್ಥವನ್ನು ಹುಡುಕಿದರೆ ಟ್ರಾಂಚ್ ಎಂದರೆ ‘ಕಂದಕ’ trench ಎಂಬ ತಪ್ಪು ಅರ್ಥವಿದೆ, ಬೇಕಿದ್ದರೆ ನೋಡಿ. ನಿಜಕ್ಕೂ 40 ಕೋಟಿ ಜನರನ್ನು ಕಂದಕಕ್ಕೆ ಬೀಳಿಸಿ ತಪ್ಪನ್ನೇ ಸರಿಯೆಂದು, trancheನ್ನೇ trench ಎಂದು ತೋರಿಸುವ ಹುನ್ನಾರವೆ?.)

ಹಳ್ಳಿಯ ಜನರು ಹಳ್ಳಿಗೇ ಮರಳಿ ವಲಸೆ ಬಂದಾಗ ಎಷ್ಟೊಂದು ವಿಧಗಳಲ್ಲಿ ಅವರಿಗೆ ನೆರವಾಗಲು ಸಾಧ್ಯವಿತ್ತು. ಅದರ ಕೆಲವು ಯಶಸ್ವೀ ಉದಾಹರಣೆಗಳು ನಮ್ಮಲ್ಲಿವೆ: ಮಹಾರಾಷ್ಟ್ರದಲ್ಲಿ ಹೀವ್ಡೆ ಬಝಾರ್ ಎಂಬ ಗ್ರಾಮವಿದೆ. ನಮ್ಮ ಕೋಲಾರದ ಯಾವುದೇ ಊರಿನ ಹಾಗೆ ಬರೀ 430 ಮಿ.ಮೀ. ಮಳೆ ಬೀಳುವ ಹಳ್ಳಿ.

1980ರ ದಶಕದಲ್ಲಿ ಬಹಳಷ್ಟು ಜನ ದಿಕ್ಕೆಟ್ಟು ಉದ್ಯೋಗ ಹುಡುಕಿ ಮುಂಬೈಗೋ ಪುಣೆಗೋ ಹೋದರು. ಆ ಊರಿನ ಪುಣ್ಯಾತ್ಮನೊಬ್ಬ ಸರಪಂಚನೆಂದು ಆಯ್ಕೆಯಾದ. ಮಳೆಕೊಯ್ಲು ಮಾಡಿಸಿದ. ಗಿಡಮರ ನೆಡಿಸಿದ. ಅಂತರ್ಜಲ ಹೆಚ್ಚಿತು. ಊರು ನಳನಳಿಸಿತು. ಕೃಷಿ, ಕುರಿಸಾಕಣೆ, ಡೇರಿ ಎಲ್ಲಕ್ಕೂ ಚೈತನ್ಯ ಬಂತು.

ಗುಳೆ ಹೋದವರು ಮರಳಿ ಬಂದರು. ಇಂದು ಆ ಊರಲ್ಲಿ (ನಂಬಿ ಇದನ್ನು) ಬಡತನದ ರೇಖೆಗಿಂತ ಕೆಳಗಿದ್ದ 135 ಕುಟುಂಬಗಳು ಮೇಲೆದ್ದು ಬಂದಿವೆ, 60 ಜನರು ದಶಲಕ್ಷಾಧೀಶರಾಗಿದ್ದಾರೆ. ಸರಕಾರಿ ಇಲಾಖೆಗಳ ಅಧಿಕಾರಿಗಳಿಗೆ ಈ ಊರೇ ಈಗ ಪ್ರವಾಸೀ ತಾಣವಾಗಿದೆ. ಬೇಕಿದ್ದರೆ Hewre Bazar ಎಂದು ಅಂತರಜಾಲದಲ್ಲಿ ಹುಡುಕಿ ನೋಡಿ.
ನಗರಮುಖೀ ವಲಸೆಯನ್ನು ಹೀಗೆ ಹಿಮ್ಮೊಗ ತಿರುಗಿಸಲು ಸಾಧ್ಯವೆಂದು ಮೊದಲು ತೋರಿಸಿದವರು ಅಣ್ಣಾ ಹಜಾರೆ ಮತ್ತು ರಾಜೇಂದ್ರ ಸಿಂಗ್.

ತಮ್ಮ ಊರಿನ ನೀರು, ನೆಲ, ಗಾಳಿ, ಬೆಳಕನ್ನೇ ಸಂಪತ್ತನ್ನಾಗಿ ಬಳಸಿಕೊಂಡು ಗ್ರಾಮದ ಸಮೃದ್ಧಿಗೆ ಕಾರಣರಾದ ಬೇರೆ ನೂರಾರು ಜನರ ಉದಾಹರಣೆಗಳು ನಮ್ಮಲ್ಲಿವೆ. ಕೊಯಮತ್ತೂರಿನ ಸಮೀಪದ ಒಡಂತ್ತುರೈ ಗ್ರಾಮ ತನ್ನ ಬಿಸಿಲಿನಿಂದ ಬರುವ ವಿದ್ಯುತ್ತನ್ನೇ ಮಾರಾಟ ಮಾಡುತ್ತ ಗ್ರಾಮಪಂಚಾಯತನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದೆ.

ಕಳೆದ ನಾಲ್ಕು ವರ್ಷಗಳಿಂದ ಆಮಿರ್ ಖಾನ್ ಆರಂಭಿಸಿದ ವಾಟರ್ ಕಪ್ ಮಳೆಕೊಯ್ಲಿನ ಸ್ಪರ್ಧೆಯಿಂದಾಗಿ ಮಹಾರಾಷ್ಟ್ರದಲ್ಲಿ ಅನೇಕ ಹಳ್ಳಿಗಳಲ್ಲಿ ಜಲ ಸಂವರ್ಧನೆ ಆಗಿದ್ದು, ಊರು ಬಿಟ್ಟು ಹೋದವರು ಮರಳಿ ಬರುತ್ತಿದ್ದಾರೆ. ಟ್ಯಾಂಕರ್ ನೀರನ್ನೇ ಆಧರಿಸಿದ್ದ ಬರಪೀಡಿತ ಹಳ್ಳಿಗಳು ಈಗ ತಮ್ಮ ಬಳಿಯ ಹೆಚ್ಚುವರಿ ನೀರನ್ನು ನಗರಕ್ಕೂ ಪೂರೈಸಲು ಮುಂದಾಗಿವೆ. ಇಂಧನ ವನಗಳನ್ನು ಸೃಷ್ಟಿಸಿ ನಗರಗಳಿಗೆ ಬಯೊಡೀಸೆಲ್ಲನ್ನೂ ಒದಗಿಸುವ ಕನಸು ಕಾಣುತ್ತಿದ್ದಾರೆ.

ಇಂಥ ಸ್ವಾವಲಂಬಿ ಗ್ರಾಮಗಳ ಒಂದು ಉದಾಹರಣೆಯೂ ಸರಕಾರದ ಗಮನಕ್ಕೆ ಬರಲೇ ಇಲ್ಲವೆ? ಗ್ರಾಮೀಣ ಜಲಸಂಪತ್ತನ್ನು ಹೆಚ್ಚಿಸುವ ಸರಳ ವಿಧಾನ ಅದಕ್ಕೆ ಗೊತ್ತೇ ಇಲ್ಲವೆ?
ಸರಕಾರ ಮನಸ್ಸು ಮಾಡಿದರೆ, ತಾಲ್ಲೂಕು ಮಟ್ಟದಲ್ಲೇ ಉತ್ತಮ ಗುಣಮಟ್ಟದ ಸಾಬೂನು, ಟೂಥ್ಪೇಸ್ಟ್, ಸೊಳ್ಳೆಪರದೆ, ಸೊಳ್ಳೆಬತ್ತಿ, ಶಾಂಪೂ, ಸುಗಂಧ ತೈಲ, ಪೇಯ, ಪ್ಯಾರಾಸಿಟೆಮಾಲ್, ಆಯುರ್ವೇದ ಔಷಧಗಳು, ಅಷ್ಟೇಕೆ ಗ್ರಾಮಗಳಿಗೆ ಬೇಕಾದ ಪ್ಲಾಸ್ಟಿಕ್ ಚಪ್ಪಲಿಗಳಿಂದ ಹಿಡಿದು ಕೃಷಿ ಸಲಕರಣೆ, ರಸಗೊಬ್ಬರಗಳ ಉತ್ಪಾದನೆಗೆ ಪ್ರೋತ್ಸಾಹ ನೀಡಬಹುದಿತ್ತು.

ಇವನ್ನೆಲ್ಲ ಬೃಹತ್, ನಗರಕೇಂದ್ರಿತ ಉದ್ಯಮಗಳ ಮುಷ್ಟಿಯಿಂದ ತಪ್ಪಿಸಿ ತಾಲ್ಲೂಕು ಮಟ್ಟಕ್ಕೆ ತಂದು ಸ್ಥಳೀಯರಿಗೆ ಉದ್ಯೋಗ ಸಿಗುವಂತೆ ಮಾಡಿ, ವಾಣಿಜ್ಯ ರಂಗದ ಅಸಲೀ ಸ್ವಾವಲಂಬನೆ ಸಾಧಿಸಬಹುದಿತ್ತು. ಅದರ ಬದಲಿಗೆ ಖನಿಜ ಮತ್ತು ಕಲ್ಲಿದ್ದಲ ಗಣಿಗಾರಿಕೆಗೆ ಹೆಬ್ಬಾಗಿಲು ತೆರೆಯಲಿದೆ.

ಕಲ್ಲಿದ್ದಲು ಎಂಬುದೇ ಮಹಾ ವಿಷವೃತ್ತ. ನಮ್ಮ ಎಲ್ಲ ಕಲ್ಲಿದ್ದಲ ನಿಕ್ಷೇಪಗಳೂ ಛತ್ತೀಸಗಢ, ಝಾರ್ಖಂಡ್, ಬಿಹಾರ್‌ನ ದಟ್ಟ ಅರಣ್ಯಗಳಲ್ಲಿವೆ. ಅಲ್ಲಿ ಆದಿವಾಸಿಗಳೂ ಮೂಲನಿವಾಸಿಗಳೂ ಇದ್ದಾರೆ. ಅವರನ್ನೆಲ್ಲ ಗುಡಿಸಿ ಒತ್ತಿ, ಜೀವಲೋಕವನ್ನು ಧ್ವಂಸ ಮಾಡಿ, ತೆರೆದ ಗಣಿಗಳ ಮೂಲಕ ಕಲ್ಲಿದ್ದಲನ್ನು ಸ್ಫೋಟಿಸಿ, (ಚಿತ್ರವನ್ನು ಗಮನಿಸಿ) ನೂರಾರು ಉಷ್ಣವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಿದರೆ ಹೊಮ್ಮುವ ಕಾರ್ಬನ್ ಡೈಆಕ್ಸೈಡ್‌ ಇಡೀ ಜಗತ್ತಿಗೇ ಮಾರಕ.

ಹಾರುಬೂದಿ, ಸೆಕೆ ಹೆಚ್ಚಳ, ಜಲಮಾಲಿನ್ಯ ಒಂದಲ್ಲ, ಎರಡಲ್ಲ. ಅಲ್ಲಿಂದ ಪಡೆದ ವಿದ್ಯುತ್ತು ನಗರಗಳ ಮಾಲ್‌ಗಳಿಗೆ.ಮತ್ತು ತರಾವರಿ ಯಂತ್ರಗಳಿಗೆ, ಕೊಳ್ಳುಬಾಕ ಶೋಕಿ ವಸ್ತುಗಳ ಉತ್ಪಾದನೆಗೆ ಹೋಗುತ್ತದೆ. ಅದರ ಲಾಭವೆಲ್ಲ ತಿರ್ಗಾ ಕೋಟ್ಯಧೀಶ ಉದ್ಯಮಿಗಳಿಗೆ.

ನಿಸರ್ಗ ಸಂಪತ್ತನ್ನು ಹೀಗೆ ಲೂಟಿ ಮಾಡಲು ದೊಡ್ಡ ಕಂಪನಿಗಳಿಗೆ ಅನುವು ಮಾಡಿಕೊಡಲೆಂದೇ ತೆರಿಗೆದಾರರ 50 ಸಾವಿರ ಕೋಟಿ ಮೀಸಲಿಡುವುದಾಗಿ ಸರಕಾರ ಘೋಷಿಸಿದೆ. ಅದಕ್ಕೆಂದು ಪರಿಸರ ಸಂರಕ್ಷಣೆಯ ಬಿಗಿ ಕಾನೂನುಗಳನ್ನು ಸಡಿಲ ಮಾಡುವ ಸಿದ್ಧತೆ ಆಗಲೇ ನಡೆದಿದೆ.

ನಿಸರ್ಗದ ದುರಂತ ಕತೆ ಹೀಗೆ. ಹಾಗಿದ್ದರೆ ಮನುಷ್ಯರ ಕತೆ? ಈ ರಣವೈದ್ಯ ಮಾಡಿದರೆ 40 ಕೋಟಿ ಬಡ, ಕಡುಬಡವರ ಹಾಗು ಆದಿವಾಸಿಗಳ ಸ್ಥಿತಿಗತಿ ಉತ್ತಮಗೊಂಡೀತೆ? ಅದೂ ಇಲ್ಲ.
ಮೂಲ ನಿವಾಸಿಗಳಿಗೆ ಅರಣ್ಯಾಧಾರಿತ ಉದ್ಯೋಗ ಕೊಡಲೆಂದು 6000 ಕೋಟಿ ಮೀಸಲಿದೆಯಂತೆ. ಅದರ ಕತೆ ಕೇಳಿ. ಅದು ಖಾಸಗಿಯ ಕಂಪನಿಗಳ ಜಂಟಿ ಯೋಜನೆಯಂತೆ. ಅಂದರೆ ಅರಣ್ಯಗಳಿಗೂ ಕೋಟ್ಯಧೀಶರು ಲಗ್ಗೆ ಇಡಲಿದ್ದಾರೆ. ಮೂಲನಿವಾಸಿಗಳ ಜಮೀನನ್ನು ಮುಗಿಸಿದ ನಂತರ ಮುಂದೇನು ಆದೀತೆಂದು ನಾವು ಊಹಿಸಬಹುದು.

ಆದಿವಾಸಿಗಳ ಕಲ್ಯಾಣವೇ ಮುಖ್ಯ ಗುರಿಯಾಗಿದ್ದಿದ್ದರೆ ಈಗಿರುವ ನರೇಗಾ ಸ್ಕೀಮನ್ನೇ ಸುಧಾರಿಸಿ ಅವರಿಗೂ ವಿಸ್ತರಿಸಬಹುದಿತ್ತು. ಗಿಡ ನೆಡುವ, ಬೇಲಿ ಕಂದಕಗಳಂಥ ಭದ್ರತಾ ಕೆಲಸವನ್ನು ಅವರೇ ಮಾಡಬಹುದಿತ್ತು. ಹಳ್ಳಿಗಳಲ್ಲೂ ನರೇಗಾ ದುಡಿಮೆಯ ಅವಧಿಯನ್ನು ಈಗಿನ 100 ದಿನಗಳ ಬದಲು 200-300 ಅಥವಾ ಅಗತ್ಯವಿದ್ದಷ್ಟು ದಿನಗಳಿಗೆ ವಿಸ್ತರಿಬಹುದಿತ್ತು. ಅದರತ್ತ ಆದ್ಯತೆಯೇ ಇಲ್ಲ.

ಅಷ್ಟೊಂದು ಜನರು ಹಳ್ಳಿಗಳಿಗೆ ಹಿಂದಿರುಗಿದ್ದಾರೆ. ಅವರಿಂದ ಎಷ್ಟೊಂದು ಗ್ರಾಮೀಣ ಅಭಿವೃದ್ಧಿಯ ಕೆಲಸ ಮಾಡಿಸಬಹುದಿತ್ತು. ಹಳ್ಳಿಗಳಿಗೆ ಹಿಂದಿರುಗಿದ ಆ ನತದೃಷ್ಟರಿಗೆ ಯಾವ ನೆರವೂ ಇಲ್ಲ. ನಗರ ನಿರ್ಮಾಣದಲ್ಲಿ ತೊಡಗಿದ್ದ ಅವರಲ್ಲಿ ಅನೇಕರು ಹಿಂದೆಲ್ಲ ಚುನಾವಣೆ ಬಂದಾಗ ತಮ್ಮದೇ ಖರ್ಚಿನಲ್ಲಿ ಊರಿಗೆ ಹೋಗಿ ಮತ ಹಾಕಿ ಈ ಸರಕಾರವನ್ನು ನಿಲ್ಲಿಸಿದವರು. ಪ್ರಧಾನಿಯವರ ಒಂದು ಅವಸರದ ಲಾಕ್‌ಡೌನ್‌ ಘೋಷಣೆಯಿಂದಾಗಿ ಇಡೀ ಜಗತ್ತೇ ಕಂಬನಿ ಮಿಡಿಯುವಂಥ ದುರ್ದೆಸೆಗೆ ಈಡಾದವರು. ಅವರ ಕೈ ಹಿಡಿಯುವ ಬದಲು ಬಹುಕೋಟ್ಯಧೀಶರ ಕೈ ಹಿಡಿಯಲು ಸರಕಾರ ಹೊರಟಿದೆ.

ದೇಶದ 20 ಕೋಟಿ ಮಹಿಳೆಯರ ಜನ್‌ಧನ್ ಖಾತೆಗೆ ತಿಂಗಳಿಗೆ 500 ರೂ. ಜೊತೆಗೆ 80 ಕೋಟಿ ಜನರಿಗೆ 6 ಕಿಲೊ ಧಾನ್ಯವನ್ನು ಮೂರು ತಿಂಗಳ ಅವಧಿಗೆ ಕೊಡುವುದಾಗಿ ಸರಕಾರ ಮಾರ್ಚ್‌ನಲ್ಲಿ ಹೇಳಿತ್ತು. ಅದನ್ನು ಇನ್ನೂ ಮೂರು ತಿಂಗಳಿಗೆ ವಿಸ್ತರಿಸಬಹುದಿತ್ತು. ಈ ತೀರಾ ಜುಜುಬಿ ಸಹಾಯದ ಮೊತ್ತವನ್ನು ಹೆಚ್ಚಿಸಬಹುದಿತ್ತು. ಹೆಚ್ಚಿಸುವುದು ಹಾಗಿರಲಿ, ಸರಕಾರದ್ದೇ ದಾಖಲೆಗಳ ಪ್ರಕಾರ ಈ ನೆರವೂ ಶೇ. 25ರಷ್ಟು ಜನರಿಗೆ ಮಾತ್ರ ತಲುಪಿದೆ. ಕೇವಲ 110 ಲಕ್ಷ ಟನ್ ಧಾನ್ಯ ಮಾತ್ರ ವಿತರಣೆಯಾಗಿದೆ.

ಹಾಗೆಂದು ನಮ್ಮ ದೇಶ ಅಷ್ಟೊಂದು ದರಿದ್ರ ಸ್ಥಿತಿಯಲ್ಲೇನೂ ಇಲ್ಲ. ತಜ್ಞರ ಲೆಕ್ಕಾಚಾರದ ಪ್ರಕಾರ ಕೆಲಸ ಕಳೆದುಕೊಂಡವರಿಗೆ ತಿಂಗಳಿಗೆ 7 ಸಾವಿರ ನಗದು ಮತ್ತು ದೇಶದ ಶೇ. 80ರಷ್ಟು ಜನಕ್ಕೆ ತಿಂಗಳಿಗೆ ಹತ್ತು ಕಿಲೊ ಧಾನ್ಯದಂತೆ ಆರು ತಿಂಗಳವರೆಗೆ ಉಚಿತವಾಗಿ ಕೊಟ್ಟಿದ್ದರೂ ನಮ್ಮ ಜಿಡಿಪಿಯ ಕೇವಲ 3%ರಷ್ಟು ವೆಚ್ಚವಾಗುತ್ತಿತ್ತು. ಅದನ್ನಂತೂ ಮಾಡಲಿಲ್ಲ. ತನ್ನ ಬಹುತೇಕ ವೈಫಲ್ಯಗಳಿಗೆ ರಾಜ್ಯಗಳನ್ನು ದೂರುವುದನ್ನು ಬಿಟ್ಟು ಸರಕಾರ ಏನನ್ನೂ ಮಾಡಲಿಲ್ಲ. ರಾಜ್ಯಗಳಿಗೂ ಸಿಗಬೇಕಾದ ಧನಸಹಾಯವನ್ನು ಪೂರ್ತಿ ನೀಡಲಿಲ್ಲ.

ಈಗ ಟ್ರಾಂಚ್ 3ರ ಕತೆ ಕೇಳಿ.
ಸಣ್ಣ ಮತ್ತು ಮಧ್ಯಮ ಉದ್ಯಮ(MSME)ಗಳು ಚೇತರಿಸಿಕೊಳ್ಳಲೆಂದು 3.7 ಲಕ್ಷ ಕೋಟಿ ಸಾಲ ಕೊಡುವುದಾಗಿ ಸರಕಾರ ಹೇಳಿದೆ. ಅದು ಆಮೇಲಾಗಲಿ, ಈವರೆಗೆ ಸಂದಾಯವಾಗಬೇಕಿದ್ದ 5 ಲಕ್ಷ ಕೋಟಿ ಬಾಕಿ ಹಣವನ್ನು ಮೊದಲು ಕೊಡ್ರಪ್ಪಾ ಎಂದು MSME ಗಳು ಕೇಳುತ್ತಿವೆ. ಅದಂತೂ ಬಾಕಿ ಇದೆ. ಈ ಹೊಸ ಸಾಲವನ್ನು ಪಡೆದು ಉತ್ಪಾದನೆ ಆರಂಭಿಸೋಣವೆಂದರೆ ಕಾರ್ಮಿಕರು ಎಲ್ಲಿದ್ದಾರೆ? ಅಂದಾಜು 12 ಕೋಟಿ ಕಾರ್ಮಿಕರು ಕೆಲಸ ಕಳೆದುಕೊಂಡು ತಂತಮ್ಮ ಹಳ್ಳಿಗಳಿಗೆ ಹೋಗಿದ್ದಾರೆ.

ಅವರು ಮರಳಿ ಬಾರದಂತೆ ಮಾಡಲು ಹೊಸ ಕಾರ್ಮಿಕ ನೀತಿಗಳನ್ನು ಜಾರಿಗೆ ತರಲು ಸರಕಾರ ಹೊರಟಿದೆ. ಕೆಲಸಗಾರರ ಹಕ್ಕುಗಳನ್ನೇ ಮೊಟಕುಗೊಳಿಸಿ ಅವರ ದುಡಿಮೆಯ ಅವಧಿಯನ್ನು 50% ಜಾಸ್ತಿ ಮಾಡುತ್ತಾರಂತೆ. ಸರಿ, ಕಾರ್ಮಿಕರು ಹೇಗೋ ಬಂದು ಉತ್ಪಾದನೆ ಆರಂಭಿಸಿದರೂ ಫ್ಯಾಕ್ಟರಿಯ ಉತ್ಪನ್ನಗಳನ್ನು ಖರೀದಿಸಲು ಜನರ ಬಳಿ ಹಣ ಎಲ್ಲಿದೆ? ಅದಕ್ಕೆ ಈಗ ಟ್ರಾಂಚ್‌ 4ನ್ನು ಹಣಕಾಸು ಸಚಿವೆ ಘೋಷಣೆ ಮಾಡಿದೆ.

ಹಣದ ಚಲಾವಣೆ ಹೆಚ್ಚಿಸಲೆಂದೇ ಎಗ್ಗಿಲ್ಲದ ಗಣಿಗಾರಿಕೆ, ಹೊಸ ವಿಮಾನ ನಿಲ್ದಾಣ ನಿರ್ಮಾಣ, ರಕ್ಷಣಾ ಸಾಮಗ್ರಿ ಉತ್ಪಾದನೆ, ಬಾಹ್ಯಾಕಾಶ ಎಲ್ಲವನ್ನೂ ಖಾಸಗಿ ಕಂಪನಿಗಳಿಗೆ ವಹಿಸುತ್ತಾರಂತೆ. ಲಾಕ್‌ಡೌನ್‌ ಸಡಿಲವಾಗುವ ಮೊದಲೇ ದೇಶದ ಹಿತಾಸಕ್ತಿಯನ್ನು ಕಾಯಬೇಕಿದ್ದ ನಿಯಮಗಳನ್ನೇ ಸಡಿಲ ಮಾಡಲಾಗುತ್ತಿದೆ.

ಅದಕ್ಕೇ, ‘ವಲಸಿಗರಿಗೆ ಮನೆ ತಲುಪಲು ಸಾಧ್ಯವಾಗುತ್ತಿಲ್ಲ; ಬಾಹ್ಯಾಕಾಶಕ್ಕೆ ಹೋಗಲು ಧನಿಕರಿಗೆ ಅನುಕೂಲ ಮಾಡುತ್ತಾರಂತೆ’ ಎಂದು ಜೈರಾಮ್ ರಮೇಶ್ ಕುಟುಕಿದ್ದಾರೆ. ಯಾರೆಷ್ಟೇ ಕುಟಕಿದರೂ ಪ್ರಭುತ್ವಕ್ಕೆ ವಂದಿಮಾಗಧರ ಮತ್ತು ಬಹುಕೋಟ್ಯಧೀಶರ ಭೋಪರಾಕ್ ಮಾತ್ರ ಕೇಳಿಸುತ್ತದೆ. ಕಂದಕಕ್ಕೆ ಕುಸಿದವರ ಆಕ್ರಂದನ ಮಾತ್ರ ಕೇಳಿಸುತ್ತಿಲ್ಲ.

ಅರಣ್ಯವಾಸಿಗಳನ್ನು ಹೊರಗಟ್ಟುವ ಗಣಿಗುತ್ತಿಗೆದಾರರ ಷಡ್ಯಂತ್ರದ ವಿರುದ್ಧ ಆದಿವಾಸಿಗಳ ಒಂದು ಸೊಗಸಾದ ಪ್ರತಿಭಟನಾ ಲಾವಣಿಯನ್ನು ಈ ಕೊಂಡಿಯಲ್ಲಿದೆ: ಕ್ಲಿಕ್ ಮಾಡಿ ನೋನೋಡಿ

https://www.youtube.com/watch?v=sFmsl7KrZn8

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಧರ್ಮದ ಹೆಸರಿನಲ್ಲಿ ಬಿಜೆಪಿಗರು ಅಮಾಯಕರ ರಕ್ತ ಹರಿಸುತ್ತಿದ್ದಾರೆ : ಸಿದ್ದರಾಮಯ್ಯ ಆಕ್ರೋಶ

Published

on

ಸುದ್ದಿದಿನ, ಮೈಸೂರು : ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಉಪಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ನೀಡಿದ್ದ ದೊಡ್ಡ ಮೊತ್ತದ ಹಣವನ್ನು ಎನ್.ಆರ್ ಸಂತೋಷ್ ಹಾಗೂ ಸಿ.ಪಿ ಯೋಗೀಶ್ವರ್ ಲಪಟಾಯಿಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಣ ನೀಡಿದವರು ಯಾರು? ಎಷ್ಟು ಹಣ ನೀಡಿದ್ದರು? ಅದು ಬ್ಲಾಕ್ ಮನಿಯೋ? ವೈಟ್ ಮನಿಯೋ? ಎಂಬ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದರು.

ಮೈಸೂರಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಎಸ್ ಯಡಿಯೂರಪ್ಪ ಇದುವರೆಗೆ ನಾನು ಕಂಡ ಅತ್ಯಂತ ಅಸಮರ್ಥ ಮುಖ್ಯಮಂತ್ರಿ. ಸರ್ಕಾರ ರಚನೆಯಾಗಿ ಒಂದೂವರೆ ವರ್ಷ ಕಳೆದರೂ ಇನ್ನೂ ಸಚಿವ ಸಂಪುಟ ವಿಸ್ತರಣೆ ಪೂರ್ಣಗೊಂಡಿಲ್ಲ, ಒಂದೇ ಒಂದು ಜನಪರ ಯೋಜನೆ ಈ ವರೆಗೆ ಜಾರಿಗೆ ಬಂದಿಲ್ಲ. ಒಟ್ಟಿನಲ್ಲಿ ರಾಜ್ಯದಲ್ಲಿ ಸರ್ಕಾರವೇ ಇಲ್ಲದಂತ ಪರಿಸ್ಥಿತಿಯಿದೆ‌ ಎಂದರು.

ಇಂದು ಮೈಸೂರಿನಲ್ಲಿ ಪ್ರಗತಿಪರ ಚಿಂತಕರು, ಸಮಾಜವಾದಿ, ಜಾತ್ಯಾತೀತ ಚಿಂತನೆಯ ಬರಹಗಾರರ ಜೊತೆ ಚರ್ಚೆ ಮಾಡಿದ್ದೇನೆ. ದೇಶದಲ್ಲಿ ಕೋಮುವಾದಿಗಳು ಅಧಿಕಾರಕ್ಕೆ ಬಂದಿರುವುದರಿಂದ ಕೆಳವರ್ಗದ ಜನರು ಜೀವನ ನಡೆಸಲು ಹೆಣಗಾಡುವಂತಹ ಸ್ಥಿತಿ ನಿರ್ಮಾಣವಾಗಿದೆ, ಹಾಗಾಗಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕೆಂಬ ಆಶಯ ವ್ಯಕ್ತವಾಗಿದೆ ಎಂದು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಬಿಜೆಪಿ ಸರ್ಕಾರವಿದೆ. ಕುರುಬ ಸಮುದಾಯವನ್ನು ಎಸ್.ಟಿ ಗೆ ಸೇರಿಸಲು ಬಿಜೆಪಿಗೆ ನೈಜ ಕಾಳಜಿಯಿದ್ದರೆ ರಾಜ್ಯ ಸರ್ಕಾರದ ಸಂಪುಟ ಸಭೆಯಲ್ಲಿ ನಿರ್ಧರಿಸಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಿದರೆ ಸಾಕು, ಸಮಾವೇಶ, ಪಾದಯಾತ್ರೆಗಳನ್ನು ಮಾಡುವ ಅಗತ್ಯವೇ ಬೀಳುವುದಿಲ್ಲ ಅಭಿಪ್ರಾಯ ಪಟ್ಟರು.

ಸಂವಿಧಾನದ ಆಶಯಗಳಾದ ಸಹಬಾಳ್ವೆ ಹಾಗೂ ಸೋದರತ್ವಗಳನ್ನು ಪಾಲಿಸುವವರು ನಾವು, ಧರ್ಮದ ಹೆಸರಿನಲ್ಲಿ ಅಮಾಯಕರ ರಕ್ತ ಹರಿಸುವವರು ಬಿಜೆಪಿಯವರು. ಯಾರದ್ದು ಐಸಿಸ್ ಉಗ್ರರ ಮನಸ್ಥಿತಿ ಎಂದು ಜನರೇ ನಿರ್ಧರಿಸಬೇಕು ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮೋದಿ ಸರ್ಕಾರದ ಮೂರು ರೈತ ವಿರೋಧಿ ಮರಣಶಾಸನಗಳು

Published

on

  • ಶಿವಸುಂದರ್

ಭಾರತದ ರೈತಾಪಿಯನ್ನು ಕಳೆದ 70 ವರ್ಷಗಳಿಂದ ಬಂಧನದಲ್ಲಿಟ್ಟಿದ್ದ ಎಲ್ಲಾ ಸಂಕೋಲೆಗಳಿಂದ ಬಿಡುಗಡೆ ಮಾಡಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದ ಮುಸುಕನ್ನು ಹೊದ್ದಿದ್ದ, ಆದರೆ ಆದರೆ ರೈತ ಬದುಕನ್ನು ಬಾಣಲೆಯಿಂದ ಬೆಂಕಿಗೆ ತಳ್ಳುವಂತ ಮೂರು ರೈತ ವಿರೋಧಿ ಸುಗ್ರೀವಾಜ್ನೆಗಳಿಗೆ ಕಳೆದ ವಾರ ಮೋದಿ ಸರ್ಕಾರ ಅತ್ಯಂತ ಅಪ್ರಜಾತಾಂತ್ರಿಕವಾಗಿ ಸದನದ ಎರಡೂ ಮನೆಗಳಲ್ಲಿ ಅನುಮೋದನೆ ದಕ್ಕಿಸಿಕೊಂಡಿದೆ. ಲೋಕಸಭೆಯಲ್ಲಿ ಸಾಮ, ದಾನ, ಬೇಧದ ಉಪಾಯಗಳನ್ನು ಬಳಸಿದರೆ ರಾಜ್ಯಸಭೆಯಲ್ಲಂತೂ ದಂಡೋಪಾಯವನ್ನೂ ಬಳಸಿದೆ.

ಇನ್ನು ನಮ್ಮ ರಾಷ್ಟ್ರಪತಿಯವರಂತೂ ಹೇಗೂ ಮೋದಿ ಸರ್ಕಾರದ ನೀತಿಗಳಿಗೆ ಮಧ್ಯರಾತ್ರಿಯಲ್ಲೂ ನಿದ್ದೆಗಣ್ಣಿನಲ್ಲಿ ಸಹಿಹಾಕಲು ಸಿದ್ದರಿದ್ದೇ ಇರುತ್ತಾರೆ. ಆದ್ದರಿಂದ ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತ್ಯಂತ ಕರಾಳ ರೈತ ವಿರೋಧಿ ಕಾಯಿದೆಗಳನ್ನು ಜಾರಿ ಮಾಡಿದ ಕೀರ್ತಿಯೂ ಸಹ ಮೋದಿ ಸರ್ಕಾರಕ್ಕೆ ದಕ್ಕಲಿದೆ.

ಹಾಗೆ ನೋಡಿದರೆ ಸರ್ಕಾರ ಹೇಳುವ ಪ್ರಕಾರ ಈ ಮಸೂದೆಗಳು ರೈತ ಪರವಾಗಿದ್ದಲ್ಲಿ ಎರಡೂ ಸದನಗಳಲ್ಲಿ ಚರ್ಚೆ ಮಾಡಿ ವಿರೋಧ ಪಕ್ಷಗಳನ್ನು ಬಯಲುಗೊಳಿಸಿ ಇಡೀ ರಾಷ್ಟ್ರಕ್ಕೆ ತಮ್ಮ ಸದಿಂಗಿತವನ್ನು ಸಾಬೀತುಪಡಿಸಬಹುದಾಗಿತ್ತು, ಸರ್ಕಾರ ಅಂತಹ ಯಾವುದೇ ಪ್ರಜಾತಾಂತ್ರಿಕ ಪ್ರಕ್ರಿಯೆಗಳಿಗೂ ಮುಂದಾಗದೆ ಕೋವಿಡ್ ಸಂದರ್ಭವನ್ನು ಬಳಸಿಕೊಂಡು ಪ್ರಜಾತಂತ್ರಕ್ಕೆ ಮಾಸ್ಕ್ ತೊಡಿಸಿ ಈ ಮರಣಶಾಸನಗಳನ್ನು ಜಾರಿ ಮಾಡಿರುವುದು ಸರ್ಕಾರದ ದುಷ್ಟ ಉದ್ದೇಶಗಳಿಗೆ ಒಂದು ಮಹತ್ವದ ಪುರಾವೆಯೇ ಆಗಿದೆ.

ಈ ಮೂರೂ ಶಾಸನಗಳ ಮೇಲ್ನೋಟದ ಓದು ಅನುಮಾನವನ್ನು ಹುಟ್ಟಿಸಿದರೆ ಮಸೂದೆಯ ಪೂರ್ಣ ವಿವರಗಳು ಆತಂಕವನ್ನೇ ಹುಟ್ಟಿಸುತ್ತದೆ. ಮೋದಿ ಸರ್ಕಾರದ ರಾಜಕೀಯಕ್ಕೆ ತಕ್ಕನಾಗಿ ಈ ಮಸೂದೆಗಳ ಒಳತಿರುಳಿಗೆ ತದ್ವಿರುದ್ಧವಾದ ಅರ್ಥವನ್ನು ಸ್ಪುರಿಸುವ ಹೆಸರುಗಳನ್ನು ಈ ಮೂರೂ ಮಸೂದೆಗಳಿಗೆ ಇಡಲಾಗಿದೆ.

ಸರಳವಾಗಿ ಆ ಮೂರು ಮಸೂದೆಗಳನ್ನುAPMC ಯನ್ನು ಬದಿಗೆ ಸರಿಸುವ ಕಾಯಿದೆ .ಕಾಂಟ್ರಾಕ್ಟ್ ಫಾರ್ಮಿಂಗ್ ಜಾರಿ ಮಾಡುವ ಕಾಯಿದೆ.ಬೃಹತ್ ಕೃಷಿ ಕಂಪನಿಗಳಿಗೆ ನಮ್ಮ ದೇಶದ ಆಹಾರ ಸರಕುಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳಲು ಅವಕಾಶ ಕೊಡುವ ಕಾಯಿದೆ ಎಂದು ಹೇಳಬಹುದು.

01. APMC ಯನ್ನು ಮೂಲೆಗುಂಪು ಮಾಡುವ ಮಸೂದೆ

ಸರ್ಕಾರದ ಪರಿಭಾಷೆಯಲ್ಲಿ ಈ ಮಸೂದೆಗೆ Farmers Produce Trade and Commerce (Promotion And Facilitation) Bill 2020 ಎಂದು ಕರೆಯಲಾಗುತ್ತದೆ. ಅಂದರೆ ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯಗಳಿಗೆ ಉತ್ತೇಜನ ಮತ್ತು ಸೌಕರ್ಯ ಕಲ್ಪಿಸಿ ಕೊಡುವ ಮಸೂದೆ ಎಂದರ್ಥ.

ಮೇಲ್ನೋಟಕ್ಕೆ ರೈತಪರ ಧ್ವನಿಯಲ್ಲಿರುವ ಈ ಮಸೂದೆಯು ನಿಜಕ್ಕೂ ರೈತರ ಉತ್ಪನ್ನಗಳ ವಾಣಿಜ್ಯದಲ್ಲಿ ರೈತರಿಗೆ ಸೌಕರ್ಯವನ್ನೂ ಉತ್ತೇಜನವನ್ನೂ ನೀಡಲಿದೆಯೇ?

ರೈತರು ತಮ್ಮ ಉತ್ಪನ್ನಗಳನ್ನು ಮಾರಾಟಮಾಡಲು ಹಾಗೂ ಖಚಿತವಾದ ಆದಾಯವನ್ನು ಖಾತರಿ ಮಾಡುವ ಸಲುವಾಗಿಯೇ ರೈತರು, ಮಧ್ಯವರ್ತಿ ದಲ್ಲಾಳಿಗಳೂ ಹಾಗೂ ವ್ಯಾಪಾರಿಗಳನ್ನು ಒಳಗೊಂಡ APMC- ಕೃಷಿ ಉತ್ಪನ್ನ ಮಾರಾಟ ಸಮಿತಿಗಳು ರೂಪುಗೊಂಡವು. ಸರ್ಕಾರವು ಈ APMC ಹಾಗೂ ಮಂಡಿಗಳ ಮೂಲಕ ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು (MSP)ಯನ್ನು ಕೊಟ್ಟು ಅವರ ಸರಕುಗಳನ್ನು ಖರೀದಿಸುತ್ತಿತ್ತು.

ಹಾಗೆ ರೈತರಿಂದ ಖರೀದಿಸಿದ ಧಾನ್ಯಗಳ ಮೂಲಕವೇ ದೇಶಾದ್ಯಂತ ಬಡಜನರಿಗೆ ರಿಯಾಯತಿ ದರದಲ್ಲಿ ಆಹಾರ ಧಾನ್ಯಗಳನ್ಜು ಸರಬರಾಜು ಮಾಡಿ ಈ ದೇಶದ ಜನರ ಆಹಾರ ಭದ್ರತೆಯನ್ನು ಖಾತರಿಗೊಳಿಸುತ್ತಿತ್ತು. 2013ರಲ್ಲಿ ಜಾರಿಗೆ ಬಂದ ಆಹಾರ ಭದ್ರತಾ ಕಾಯಿದೆಯ ನಂತರ ಈ ದೇಶದ 80 ಕೋಟಿಗೂ ಹೆಚ್ಚು ಜನರಿಗೆ ರಿಯಾಯತಿ ದರದಲ್ಲಿ ಆಹಾರ ಧಾನ್ಯಗಳು ಸಿಗುತ್ತಿರುವುದಕ್ಕೆ ಈ ವ್ಯವಸ್ಥೆಯೇ ಕಾರಣ. APMC ಹಾಗೂ MSP ವ್ಯವಸ್ಥೆಯ ಕಾರಣದಿಂದಾಗಿಯೇ ಈ ದೇಶದ ಕೋಟ್ಯಾಂತರ ರೈತರ ಆದಾಯ ಸುನಿಶ್ಚಿತವಾಗಿತ್ತು. ಆದರೆ ಈ ವ್ಯವಸ್ಥೆಯಲ್ಲಿ ರೈತರಿಗೆ ಹಲವಾರು ತೊಂದರೆಗಳಿರುವುದು ನಿಜ.

APMC ಯಲ್ಲಿ ರೈತರಿಗಿಂತ ವ್ಯಾಪಾರಿಗಳು ಮತ್ತು ದಲಾಳಿಗಳು ಸಶಕ್ತರಾಗಿದ್ದಾರೆ. ಅವರುಗಳಿಂದ ರೈತರಿಗೆ ತೂಕದಲ್ಲಿ, ಪ್ರಮಾಣದಲ್ಲಿ ಹಾಗೂ ಬೆಲೆಯ ಪಾವತಿಯಲ್ಲಿ ಹಲವಾರು ಬಾರಿ ಮೋಸವಾಗುತ್ತಿದೆ. ಹಾಗೆಯೇ MSP ವ್ಯವಸ್ಥೆಯು ಪಂಜಾಬ್, ಹರ್ಯಾಣ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಒರಿಸ್ಸಾ ದಂತ ರಾಜ್ಯಗಳನ್ನು ಬಿಟ್ಟರೆ ಎಲಾ ರಾಜ್ಯಗಳ ರೈತರಿಗೂ ಸರಿಸಮನಾಗಿಯೂ ಒದಗುತ್ತಿಲ್ಲ ಹಾಗೂ ಅಕ್ಕಿ, ಗೋಧಿ ಹಾಗೂ ಇನ್ನಿತರ ಇಪ್ಪತ್ತು ರೈತೋತ್ಪನ್ನಗಳನ್ನು ಬಿಟ್ಟರೆ ಬಿಟ್ಟರೆ ರೈತ ಬೆಳೆಯುವ ಎಲ್ಲಾ ಬೆಳೆಗಳು MSP ಅಡಿ ಬರುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ MSP ಲೆಕ್ಕಾಚಾರದಲ್ಲೇ ರೈತರ ಎಲ್ಲಾ ವೆಚ್ಚಗಳನ್ನೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ದೇಶದ ರೈತರೆಲ್ಲಾ ಸ್ವಾಮಿನಾಥನ್ ಸಮಿತಿ ವರದಿಯನ್ನು ಜಾರಿ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ.

ಹೀಗೆ ಈಗಿರುವ APMC ಹಾಗೂ MSP ವ್ಯವಸ್ಥೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಹೀಗಾಗಿ ಈವ್ಯವಸ್ಥೆಯಲ್ಲಿ ರೈತಪರ ಸುಧಾರಣೆಗಳ ಅಗತ್ಯವಿದ್ದದ್ದು ನಿಜ. ಹಾಗಿದ್ದಲ್ಲಿ ಮೋದಿ ಸರ್ಕಾರ ತಂದಿರುವ ಈ ಹೊಸ ಮಸೂದೆ/ಕಾಯಿದೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕೊಡುತ್ತದೆಯೇ?

-ಮೋದಿ ಸರ್ಕಾರದ ಈ ಕಾಯಿದೆ APMC ಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವ ಬದಲು ಅದನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಿ ಅದರ ಜಾಗದಲ್ಲಿ ರೈತರಿಗೆ ಯಾವ ಪಾತ್ರವೂ ಇಲ್ಲದ ದೊಡ್ದದೊಡ್ಡ ಬಂಡವಾಳಶಾಹಿಗಳ ಒಡೆತನ ಮತ್ತು ನಿಯಂತ್ರಣದಲ್ಲಿರುವ ಖಾಸಗಿ ಮಂಡಿಗಳು ಮತ್ತು ಖಾಸಗಿ APMC ಗಳ ಸ್ಥಾಪನಗೆ ಅವಕಾಶ ಮಾಡಿಕೊಡುತ್ತದೆ.

-ಹಾಲಿ ಇರುವ APMC ಯಲ್ಲಿ ನಡೆಯುವ ವ್ಯವಹಾರಗಳ ಮೇಲೆ ಕೊಳ್ಳುವವರ ಹಾಗೂ ಮಾರುವವರ ಮೇಲೆ ಸರ್ಕಾರ ತೆರಿಗೆಯನ್ನು ಮತ್ತು ಶುಲ್ಕವನ್ನು ವಿಧಿಸುತ್ತಿತ್ತು. ಆದರೆ ಈ ಹೊಸ ಕಾಯಿದೆಯು ಖಾಸಗಿ ಮಂಡಿಗಳಲ್ಲಿ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸುತ್ತದೆ. ಆ ಮೂಲಕ ಖಾಸಗಿ ಮಂಡಿಗಳಿಗೆ ಉತ್ತೇಜನ ಕೊಡುತ್ತಾ ಹಾಲಿ ಇರುವ APMC ಯಿಂದಲೂ ವ್ಯಾಪಾರಿಗಳು ಹಾಗೂ ಮಾರಾಟಗಾರು ಖಾಸಗಿ ಮಂಡಿಯತ್ತ ಆಕರ್ಷಿತರಾಗಿ ಹಳೆಯ APMCನಿಧಾನವಾಗಿ ಸಾವನ್ನಪ್ಪುವಂತೆ ಮಾಡುತ್ತವೆ.

-ಎಲ್ಲಕ್ಕಿಂತ ಮುಖ್ಯವಾದ ವಿಷಯವೇನೆಂದರೆ APMC ಇಲ್ಲವಾದರೆ ರೈತರಿಗೆ MSP ದರಗಳು ದಕ್ಕುತ್ತವೆಯೇ ಎಂಬುದು. ವಾಸ್ತವವಾಗಿ ಪ್ರಧಾನಿಗಳು ಪದೇ ಪದೇ MSP ರದ್ದು ಮಾಡುವುದಿಲ್ಲ ಎಂದು ಹೇಳುತ್ತಿರುವುದರಲ್ಲಿ ಅರ್ಧ ಸತ್ಯ ಮಾತ್ರ ಇದೆ. ಹಾಲಿ ಅಸ್ಥಿತ್ವದಲ್ಲಿರುವ APMC ಗಳಲ್ಲಿ MSP ರದ್ದು ಮಾಡಲಾಗುವುದು ಎಂಬ ನಿಯಮವೇನೂ ಕಾಯಿದೆಯಲ್ಲಿಲ್ಲ ಎಂಬುದು ನಿಜ.

ಆದರೆ ಹೊಸದಾಗಿ ಅಸ್ಥಿತ್ವಕ್ಕೆ ಬರಲಿರುವ ಖಾಸಗಿ ಮಂಡಿಗಳಲ್ಲಿ MSP ಯನ್ನು ಖಾತರಿಪಡಿಸುವ ನಿಯಮವೂ ಕಾಯಿದೆಯಲ್ಲಿಲ್ಲ ಎಂಬುದನ್ನು ಪ್ರಧಾನಿಯವರು ರೈತರಿಂದ ಮುಚ್ಚಿಡುತ್ತಿದ್ದಾರೆ.

ಹಾಗೂ ಈ ಹೊಸ ಕಾಯಿದೆಯಿಂದಾಗಿ ಹಳೆಯ APMC ಗಳು ನಿಧಾನವಾಗಿ ರದ್ದಾಗಿ ಕೆಲವು ವರ್ಷಗಳ ನಂತರ ಬಹುಪಾಲು ಖಾಸಗಿ ಮಂಡಿಗಳ ಕಾರ್ಟೆಲ್‌ಗಳೇ ಉಳಿದುಕೊಳ್ಳುವುದರಿಂದ ಸರ್ಕಾರವ ಕಾಲಕ್ರಮೇಣ MSP ಹೊಣೆಗಾರಿಕೆಯಿಂದ ಮುಕ್ತವಾಗಲಿದೆ ಎಮ್ಬುದರಲ್ಲಿ ಯಾವುದೇ ಸಂದೇಹವಿಲ್ಲ.

-ಪ್ರಾರಂಭದಲ್ಲಿ ದೊಡ್ಡ ಕೃಷಿ ಉದ್ದಿಮೆದಾರರು ನಡೆಸುವ ಮಂಡಿಗಳಲ್ಲಿ ರೈತರಿಗೆ ಸ್ವಲ್ಪ ಹೆಚ್ಚಿನ ದರ ದೊರೆತರೂ ಎಲ್ಲಾ ಉದ್ದಿಮೆಗಳಲ್ಲಿ ನಡೆಯುವಂತೆ ಈ ಕ್ಷೇತ್ರದಲ್ಲೂ ಬೃಹತ್ ಕಾರ್ಪೊರೇಟು ಉದ್ದಿಮೆಗಳೇ ಬಹಳ ಬೇಗ ಏಕಸ್ವಾಮ್ಯ ಸಾಧಿಸುತ್ತಾರೆ.

ಈ ವ್ಯವಹಾರಕ್ಕೆ ಈಗಾಗಲೇ ಅಂಬಾನಿ. ಆದಾನಿ ಹಾಗೂ ವಿಶ್ವದ ಅತಿದೊಡ್ಡ ಬಹುರಾಷ್ಟ್ರೀಯ ಕಂಪನಿಗಳೂ ದಾಳಿ ಇಡಲು ಸಿದ್ಧವಾಗುತ್ತಿವೆ. ಇಂಥಾ ದೊಡ್ಡ ಉದ್ದಿಮೆಗಳ ಮುಂದೆ ಸಣ್ಣಪುಟ್ಟವರ ಮಂಡಿಗಳು ಉಳಿಯಲು ಸಾಧ್ಯವೇ ಇಲ್ಲ. ಅಂಬಾನಿಯ ಜಿಯೋ ಮೊಬೈಲ್ ಕ್ಷೇತ್ರದಲ್ಲಿ ಏಕಸ್ವಾಮ್ಯ ಸಾಧಿಸಿದ ನಂತರ ಟೆಲಿಕಾಂ ಕ್ಷೇತ್ರದಲ್ಲಿ ನಡೆಯುತ್ತಿರುವುದನ್ನು ನೆನಪಿಸಿಕೊಳ್ಳೋಣ.

ದೊಡ್ಡ ಬಂಡವಾಳಿಗರು ತಮ್ಮ ನಡುವೆ ಕಾರ್ಟೆಲ್ಲುಗಳನ್ನು ಮಾಡಿಕೊಂಡು ದರದ ಯಾವ ಲಾಭವೂ ರೈತರಿಗೆ ಸಿಗದಂತೆ ಮಾಡುತ್ತಾರೆ. ಆಗ ರೈತರು ಬೇರೆ ಯಾವುದೇ ಆಯ್ಕೆ ಇಲ್ಲದೆ ಇದೇ ಕಾರ್ಟೆಲ್ಲುಗಳಿಗೆ ಅವರು ವಿಧಿಸುವ ಬೆಲೆಗೆ ಮಾರಿಕೊಳ್ಳಬೇಕಾಗುತ್ತದೆ.

ಬಿಹಾರದಲ್ಲಿ 2006ರಲ್ಲೇ APMC ಗಳು ರದ್ದಾಗಿದ್ದು ಅಲ್ಲಿ ಯಾವುದೇ ಖಾಸಗಿ ಮಂಡಿಗಳು ರೈತರಿಗೆ ಸ್ಪರ್ಧಾತ್ಮ ದರಗಳನ್ನು ನೀಡುತ್ತಿಲ್ಲ. ವಾಸ್ತವದಲ್ಲಿ ಅಲ್ಲಿನ ರೈತರಿಗೆ ಬಹಳಷ್ಟು ಬಾರಿ ಇತರ ರಾಜ್ಯಗಳ ರೈತರಿಗೆ ಸಿಗುತ್ತಿರುವ MSP ಯ ಮುಕ್ಕಾಲು ಪಾಲೂ ಸಿಗುತ್ತಿಲ್ಲ.

– APMC ಗಳೇ ಇಲ್ಲದಿರುವ ಸಂದರ್ಭದಲ್ಲಿ ಸರ್ಕಾರವು ಪಡಿತರ ವ್ಯವಸ್ಥೆಗಾಗಿ ಆಹಾರ ಖರೀದಿಯನ್ನು ನಿಲ್ಲಿಸುತ್ತದೆ.

ವಾಸ್ತವದಲ್ಲಿ 2015 ರಿಂದಲೂ ಮೋದಿ ಸರ್ಕಾರವು ಪಡಿತರ ಬಿಲ್ಲನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ತೊಡಗಿದೆ. 2016ರಲ್ಲಿ ಶಾಂತಕುಮಾರ ಸಮಿತಿಯೂ ಸಹ ಸರ್ಕಾರಕ್ಕೆ ಆಹಾರ ಪಡಿತರ ಸಬ್ಸೀಡಿಯನ್ನು ಶೇ. 50ರಷ್ಟು ಕಡಿತಗೊಳಿಸಬೇಕೆಂದು ಶಿಫಾರಸ್ಸು ಮಾಡಿತ್ತು. 2018 ಮತ್ತು 2020 ರಲ್ಲಿ ಸರ್ಕಾರದ ಕಾರ್ಯದರ್ಶಿಗಳ ಸಮಿತಿಯು ಪಡಿತರ ಸೌಲಭ್ಯವನ್ನು 80 ಕೋಟಿ ಜನರಿಂದ 20 ಕೋಟಿ ಜನರಿಗೆ ಇಳಿಸುವಂತೆ ಮತ್ತು ಪಡಿತರ ದರವನ್ನು ಎರಡು ಪಟ್ಟು ಹೆಚ್ಚಿಸುವಂತೆ ಶಿಫಾರಸ್ಸು ಮಾಡಿದೆ.

ಈ APMC ಮೂಲೆಗುಂಪು ಕಾಯಿದೆಯು ಸರ್ಕಾರದ ಈ ಉದ್ದೆಶವನ್ನು ಸುಲಭವಾಗಿ ಈಡೇರುವಂತೆ ಮಾಡಿ ದೇಶದ ಕೋಟ್ಯಾಂತರ ಬಡವರ ಬದುಕನ್ನು ಮತ್ತಷ್ಟು ದುರ್ಭರಗೊಳಿಸಲಿದೆ.

ಹೀಗೆ APMC ವ್ಯವಸ್ಥೆಯಲ್ಲಿರುವ ಲೋಪಗಳನ್ನು ಬಳಸಿಕೊಂಡು ಮೋದಿ ಸರ್ಕಾರ ಇಡೀ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆಯನ್ನು ಕಾರ್ಪೊರೇಟ್ ಧಣಿಗಳಿಗೆ ವಹಿಸಿ ರೈತರನ್ನು ಅವರ ಗುಲಾಮಗಿರಿಗೆ ದೂಡಲಿದೆ. ಇಂಥಾ ಕಾಯಿದೆಯನ್ನು ಬೆಂಬಲಿಸಲು ಸಾಧ್ಯವೇ?

2. ಕಾಂಟ್ರಾಕ್ಟ್ ಫಾರ್ಮಿಂಗ್ ಮಸೂದೆ

ರೈತ ಹಿಡುವಳಿಗಳು ಸಣ್ಣದಾಗುತ್ತಿರುವಂತೆ ಕೃಷಿ ಲಾಭದಾಯಕವಾಗುವುದಿಲ್ಲ ಮತ್ತು ಮಾರುಕಟ್ಟೆಯ ಏರುಪೇರುಗಳನ್ನು ಸಣ್ಣ ರೈತರು ತಡೆದುಕೊಳ್ಳಲು ಸಾಧ್ಯವಿಲ್ಲ ಎಂಬುದು ಈ ಕಾಯಿದೆ ತರಲು ಸರ್ಕಾರ ಮುಂದಿಡುತ್ತಿರುವ ಕಾರಣ. ಆದರೆ ಕಾಂಟ್ರಾಕ್ಟ್ ಫಾರ್ಮಿಂಗ್ ಈ ಸಮಸ್ಯೆಗೆ ಪರಿಹಾರವೇ?

ಮೋದಿ ಸರ್ಕಾರ ತರುತ್ತಿರುವ ಎರಡನೇ ಮರಣ ಶಾಸನವಾದ ಕಾಂಟ್ರಾಕ್ಟ್ ಫಾರ್ಮಿಂಗ್ ಶಾಸನದ ಮೂಲಕ ಸರ್ಕಾರವು ರೈತರ ಹಿಡುವಳಿಗಳನ್ನು ಬೃಹತ್ ಬಹುರಾಷ್ಟ್ರೀಯ ಕಂಪನಿಗಳಿಗೆ ಒಪ್ಪಂದದ ಆಧಾರದಲ್ಲಿ ಗುತ್ತಿಗೆಗೆ ಕೊಡಲು ಅನುವು ಮಾಡಿಕೊಡುತ್ತದೆ. ಮಸೂದೆಯ ನಿಜವಾದ ಅರ್ಥವನ್ನು ಬಚ್ಚಿಡಲು ಅದಕ್ಕೆ Farmers (Empowerment And Protection) Price Assurance And Farm Services ಎಂಬ ಉದ್ದನೆಯ ಮತ್ತು ತಪ್ಪು ಅರ್ಥವನ್ನು ಕೊಡುವ ಹೆಸರನ್ನು ಮೋದಿ ಸರ್ಕಾರ ಇಟ್ಟಿದೆ.

ಈ ಮಸೂದೆಯ ಪ್ರಕಾರ ರೈತಾಪಿ ಹಾಗು ದೊಡ್ಡ ಕಾರ್ಪೊರೇಟ್ ಕಂಪನಿಗಳು (ಸರ್ಕಾರದ ಭಾಷೆಯಲ್ಲಿ ಹೇಳುವುದಾದರೆ -Sponsores- ಪ್ರಾಯೋಜಕರು ) ಬೆಲೆ, ಗುಣಮಟ್ಟ ( Grade, Quality and Standards ) ಹಾಗು ಬೆಳೆಗಳ ಬಗ್ಗೆ ಪೂರ್ವಭಾವಿ ಒಪ್ಪಂದಕ್ಕೆ ಬರಬಹುದು.

ಹಾಗೂ ಆ ಒಪ್ಪಂದಗಳಿಗೆ ಸರ್ಕಾರ ರೂಪಿಸಿರುವ ಚೌಕಟ್ಟು ರೈತರ ಪರವಾಗಿದೆ ಮತ್ತು ಅವರನ್ನು ಸಬಲೀಕರಿಸುವುದಕ್ಕೆ ಪೂರಕವಾಗಿದೆ ಎಂದು ಸರ್ಕಾರದ ವಾದ.ಆದರೆ ಸರ್ಕಾರದ ಈ ಭರವಸೆ ಎಷ್ಟು ಸುಳ್ಳು ಎಂಬುದನ್ನು ಆ ಮಸೂದೆಯ ಕೆಳಗಿನ ಮೂರು ಅಂಶಗಳನ್ನು ಮಾತ್ರ ನೋಡಿದರೂ ಅರ್ಥವಾಗುತ್ತದೆ.

  • ಮಸೂದೆಯ 4ನೇ ಸೆಕ್ಷನ್ನಿನ 2ನೇ ಸಬ್ ಕ್ಲಾಸಿನ ಪ್ರಕಾರ :

ರೈತಾಪಿ ಹಾಗು ಪ್ರಾಯೋಜಕರು ಬೆಳೆಯ ಗುಣಮಟ್ಟದ ಬಗ್ಗೆ ಮಾಡಿಕೊಳ್ಳುವ ಒಪ್ಪಂದವು ಸರ್ಕಾರ ಅಥವಾ ಸರ್ಕಾರದಿಂದ ಗುರುತಿಸಲ್ಪಟ್ಟ “ಸ್ವತಂತ್ರ” ಏಜೆನ್ನಿಯು ನಿಗದಿ ಮಾಡುವ ಗುಣಮಟ್ಟವನ್ನು ಅಳವಡಿಸಿಕೊಳ್ಳಬೇಕು. ಮತ್ತು ಅದಕ್ಕೆ ಬದ್ಧವಾಗಿರಬೇಕು

  • ಎಲ್ಲಕ್ಕಿಂತ ಮುಖ್ಯವಾಗಿ ಮಸೂದೆಯ ಸೆಕ್ಷನ್ 6ರ ಸಬ್ ಕ್ಲಾಸ್ 2ರ ಪ್ರಕಾರ

ಪ್ರಾಯೋಜಕರು ರೈತರಿಂದ ಸರಕನ್ನು ಸ್ವೀಕರಿಸುವ ಮುನ್ನ ಸರಕಿನ ಗುಣಮಟ್ಟವು ಒಪ್ಪಂದದಲ್ಲಿ ಮಾಡಿಕೊಂಡ ಗುಣಮಟ್ಟಕ್ಕೆ ತಕ್ಕ ಹಾಗಿದೆಯೇ ಎಂದು ಪರಿಶೀಲಿಸಬೇಕು..ಒಂದು ವೇಳೆ ಪರಿಶೀಲಿಸದೆ ಒಪ್ಪಿಕೊಂಡರೆ ಆ ನಂತರ ಸರಕನ್ನು ತಿರಸ್ಕರಿಸುವಂತಿಲ್ಲ ಎಂದರ್ಥ.

ಕೊನೆಯ ಸಾಲಿನಲ್ಲಿ ರೈತಪರ ಧ್ವನಿ ಕಂಡುಬಂದರೂ ಒಟ್ಟಾರೆ ತಾತ್ಪರ್ಯವೇನು ?

ಒಂದು ವೇಳೆ ಸರಕು ಸ್ವೀಕರಿಸುವ ಮುನ್ನ ಗುಣಮಟ್ಟ ಪರಿಶೀಲಿಸಿದಾಗ ಒಪ್ಪಂದದ ಗುಣಮಟ್ಟಕ್ಕೆ ತಕ್ಕ ಹಾಗೆ ಸರಕಿಲ್ಲ ಎಂದರೆ ಡೆಲಿವರಿಯನ್ನು ತಿರಸ್ಕರಿಸಬಹುದು ಎನ್ನುವುದೇ ಈ ಸಬ್ ಕ್ಲಾಸಿನ ನಿಜವಾದ ತಾತ್ಪರ್ಯ.

ಆಗ ರೈತನಿಗೆ ಇರುವ ದಾರಿಗಳೇನು?

– ಮಸೂದೆಯ 13 ಮತ್ತು 14 ನೇ ಸೆಕ್ಷನ್ನಿನ ಪ್ರಕಾರ ಆಗ ರೈತ ತಾನು ಒಪ್ಪಂದ ಮಾಡಿಕೊಂಡ ಪ್ರಾಯೋಜಕ ದೈತ್ಯ ಕಂಪನಿಯ ಬಗ್ಗೆ ಆ ಪ್ರದೇಶದ ತಹಶೀಲ್ದಾರರಿಗೆ ದೂರು ಸಲ್ಲಿಸಬಹುದು .

ಆಗ ತಹಶೀಲ್ದಾರ್ ಪ್ರಾಯೋಜಕ, ರೈತ ಹಾಗು ಮೂರನೇ ವ್ಯಕ್ತಿಗಳು ಇರುವ ಒಂದು ಸಂಧಾನ ಸಮಿತಿ ಮಾಡುತ್ತಾರೆ. ಅದು 30 ದಿನಗಳೊಳಗೆ ಸಂಧಾನ ಕ್ಕೆ ಬರಬೇಕು.

ಅದು ಆಗದಿದ್ದಲ್ಲಿ ತಹಶೀಲ್ದಾರ್ ಮುಂದಿನ 30 ದಿನಗಳೊಳಗೆ ವ್ಯಾಜ್ಯ ಬಗೆಹರಿಸಬೇಕು. ಈ ತೀರ್ಮಾನವು ಸರಿ ಬರಲಿಲ್ಲವೆಂದರೆ ಡಿಸಿ ನೇತೃತ್ವದ ಮೇಲ್ಮನವಿ ಸಮಿತಿಗೆ ದೂರು ಸಲ್ಲಿಸಬಹುದು .ಅದು ಮುಂದಿನ 30 ದಿನಗಳಲ್ಲಿ ಏನು ತೀರ್ಮಾನ ಕೊಡುತ್ತದೋ ಅದು ಅಖೈರು.

ಎಲ್ಲಾ ಸರ್ಕಾರಗಳೂ ಮತ್ತು ಪಕ್ಷಗಳು ಬಹಿರಂಗವಾಗಿ ಮತ್ತು ಸ್ಪರ್ಧಾತ್ಮಕ ವಾಗಿ ಬಹುರಾಷ್ಟ್ರೀಯ ಕಂಪನಿಗಳ ಹಿತಾಸಕ್ತಿ ಗೆ ಪರವಾದ ನೀತಿಗಳನ್ನು ಘೋಷಿಸುತ್ತಿರುವಾಗ, ಅವರಡಿ ಕೆಲಸ ಮಾಡುವ ಅಧಿಕಾರಿಗಳ ಕೋರ್ಟುಗಳು ಕಂಪನಿಗಳ ವಿರುದ್ಧ ಸೊಲ್ಲೆತ್ತಬಲ್ಲವೇ?

ಜೊತೆಗೆ, ಈ ಇಡೀ ವ್ಯಾಜ್ಯದ ಅವಧಿಯಲ್ಲಿ ರೈತ ತನ್ನ ಸರಕನ್ನು ಬೇರೆಡೆ ಮಾರುವ ಹಾಗು ಇಲ್ಲ. ಸಂಗ್ರಹಿಸಿಟ್ಟುಕೊಳ್ಳಲು ಸಣ್ಣಪುಟ್ಟ ರೈತರಿಗೆ ಯಾವುದೇ ಸೌಕರ್ಯವೂ ಇರುವುದಿಲ್ಲ.

ನೂರು ದಿನಗಳ ಕಾಲ ಬೆಳೆದ ಬೆಳೆಗೆ ಹಣ ದಕ್ಕಲಿಲ್ಲವೆಂದರೆ ರೈತರಿಗೆ ನೇಣು ಹಾಕಿಕೊಳ್ಳುವುದು ಬಿಟ್ಟು ಬೇರೆ ಪರ್ಯಾಯವು ಇರುವುದಿಲ್ಲ.

ಮತ್ತೊಂದೆಡೆ ಲಕ್ಷ ಕೋಟಿ ವ್ಯವಹಾರ ನಡೆಸುವ ಕಂಪನಿಗಳಿಗೆ ಈ ವ್ಯಾಜ್ಯಗಳಿಂದ ಯಾವ ತೊಂದರೆಯೂ ಆಗುವುದಿಲ್ಲ.

ವಾಸ್ತವದಲ್ಲಿ ಸಣ್ಣ ಹಿಡುವಳಿಗಳ ಸಮಸ್ಯೆಗೆ ಸಹಕಾರಿ ಕೃಷಿ ಅಥವಾ ಅಂಬೇಡ್ಕರ್ ಹೇಳಿದಂತೆ ಕೃಷಿಯ ರಾಷ್ಟ್ರಿಕರಣ ನಿಜವಾದ ಪರಿಹಾರ. ಕೃಷಿಯ ಕಾರ್ಪೊರೇಟೀಕರಣವಲ್ಲ.

3.ಬೃಹತ್ ಕೃಷಿ ಕಂಪನಿಗಳಿಗೆ ನಮ್ಮ ದೇಶದ ಆಹಾರ ಸರಕುಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳಲು ಅವಕಾಶ ಕೊಡುವ ಕಾಯಿದೆ ಅರ್ಥಾತ್ ಅಗತ್ಯ ಸರಕುಗಳ ತಿದ್ದುಪಡಿ ಕಾಯಿದೆ. (Essential Commodities (Amendment) Act):

1955ರಲ್ಲಿ ಈ ಕಾಯಿದೆಯನ್ನು ಜಾರಿಗೆ ತಂದಾಗ ಅದರ ಹಿಂದಿದ್ದ ಉದ್ದೆಶ ಆಹಾರ ಧಾನ್ಯಗಳು ಹಾಗೂ ದೇಶವನ್ನು ಕಟ್ಟಲು ಅತ್ಯಗತ್ಯವಾಗಿರುವ ಕಲ್ಲಿದ್ದಲು, ಕಬ್ಬಿಣ ಇನ್ನಿತ್ಯಾದಿ ಸರಕುಗಳನ್ನು ದೊಡ್ದದೊಡ್ದ ವ್ಯಾಪಾರಿಗಳು ದುರುದ್ದೇಶಪೂರ್ವಕವಾಗಿ ಸಂಗ್ರಹಿಸಿಟ್ಟುಕೊಂಡು, ಕಾಳಸಂತೆ ಹಾಗೂ ಕಳ್ಳದಂಧೆಯನ್ನು ಮಾಡುತಾ ದೇಶದ ಆರ್ಥಿಕತೆಯನ್ನು ಹಳ್ಳ ಹಿಡಿಸಬಾರದೆಂಬುದಾಗಿತ್ತು.

ಸರ್ಕಾರದ ಪ್ರಕಾರ ಕೃಷಿಯ ಉತ್ಪಾದನೆ, ಮಾರಾಟ, ಸಾಗಾಟ, ಸಂಗ್ರಹ ಹಾಗೂ ಬೆಲೆ ನಿಗದಿ ಪ್ರಕ್ರಿಯೆಗಳಲ್ಲಿ ಸರ್ಕಾರದ ಮಧ್ಯಪ್ರವೆಶದಿಂದಾಗಿ ಈ ಬಾಬತ್ತುಗಳಲ್ಲಿ ವಿದೇಶಿ ಮತ್ತು ಖಾಸಗಿ ಬಂಡವಾಳ ಬರುತ್ತಿಲ್ಲ. ಆದ್ದರಿಂದ ಸರ್ಕಾರ ಈ ತಿದ್ದುಪಡಿ ಮಸೂದೆಯ ಮೂಲಕ ಆಹಾರ ಸರಕುಗಳ ಸಾಗಾಟ, ಸಂಗ್ರಹ ಇತ್ಯಾದಿಗಳಿಗಿದ್ದ ಮಿತಿಯನ್ನು ತೆಗೆದುಹಾಕುತ್ತದೆ. ಮತ್ತು ಆಹಾರ ಸಂಸ್ಕರಣೆ ಉದ್ಯಮಗಳಿಗಾಗಿ ಮತ್ತು ರಫ್ತುಗಳಿಗಾಗಿ ದೊಡ್ಡದೊಡ್ಡ ಅಗ್ರಿ ಬಿಸಿನೆಸ್ ಕಂಪನಿಗಳು ಎಷ್ಟು ಬೇಕಾದರೂ ಆಹಾರ ಸಂಗ್ರಹ ಮಾಡಿಟ್ಟುಕೊಳ್ಳಲು ಈ ಕಾಯಿದೆ ಅವಕಾಶ ಕಲ್ಪಿಸಿಕೊಡುತ್ತದೆ.

ಹಾಗಿದ್ದಲ್ಲಿ ದೊಡ್ಡ ದೊಡ್ಡ ಅಗ್ರಿ ಬಿಸಿನೆಸ್ ಕಂಪನಿಗಳು ಅಪಾರ ಆಹಾರ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸಿ ಬೆಲೆ ಹೆಚ್ಚಳವಾಗುವಂತೆ ಮಾಡುವುದಿಲ್ಲವೇ?

ಈ ಕಾಯಿದೆಯ ಪ್ರಕಾರ ಬೆಲೆಗಳಲ್ಲಿ ದುಪ್ಪಟ್ಟು ಹೆಚ್ಚಳ ಆದರೆ ಮಾತ್ರ ಹಾಗೂ ಯುದ್ಧ, ಬರ ಇನ್ನಿತ್ಯಾದಿ ವಿಶೇಷ ಸಂದರ್ಭಗಳಲ್ಲಿ ಮಾತ್ರ ಸರ್ಕಾರ ಮಧ್ಯಪ್ರವೇಶ ಮಾಡುತ್ತದಂತೆ!!

ಅಷ್ಟು ಮಾತ್ರವಲ್ಲ.. ಯುದ್ಧ, ಕ್ಷಾಮ ಬಂದಾಗಲೂ ಕೂಡ ಖಾಸಗಿ ಕಂಪನಿಗಳು ರಫ್ತಿಗಾಗಿ ಹಾಗೂ ಕೈಗಾರಿಕೋತ್ಪಾದನೆಗಾಗಿ ಮಾಡಿಕೊಂಡ ಸಂಗ್ರಹವನ್ನು ಮುಟ್ಟುವುದಿಲ್ಲ ಎಂಬ ಭರವಸೆಯನ್ನು ಈ ಕಾಯಿದೆ ಖುಲ್ಲಂಖುಲ್ಲಾ ನೀಡುತ್ತದೆ.

ಹೀಗೆ ಸಾರಾಂಶದಲ್ಲಿ ಈ ಮೂರೂ ಮಸೂದೆಗಳೂ ದೇಶದ ಹಿತಾಸಕ್ತಿಗಿಂತ ಜನರ ಕಲ್ಯಾಣಕ್ಕಿಂತ ಅಗ್ರಿ ಬಿಸಿನೆಸ್ ಕಂಪನಿಗಳಿಗೆ ಅವಕಾಶ ಮಾಡಿಕೊಡುವ ದೇಶದ್ರೋಹಿ ಮಸೂದೆಗಳೇ ಆಗಿವೆ. ಹೊಟ್ಟೆಗೆ ಅನ್ನ ತಿನ್ನುವ ಯಾರೇ ಆದರೂ ಈ ಮಸೂದೆಯನ್ನು ಬೆಂಬಲಿಸಲು ಸಾಧ್ಯವೇ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ : ಲೀಡ್‌ನಿಂದ 07 ದಿನಗಳ ನಾಯಕತ್ವ ಶಿಬಿರ ಆಯೋಜನೆ

Published

on

ಸುದ್ದಿದಿನ, ದಾವಣಗೆರೆ: ನಗರದ ದೇಶಪಾಂಡೆ ಫೌಂಡೇಶನ್‌ನ ಲೀರ‍್ಸ ಎಕ್ಸಲ್‌ರೇಟಿಂಗ ಡೆವಲೆಪಮೆಂಟ ಪ್ರೋಗ್ರಾಮ್ ಸಹಯೋಗದಲ್ಲಿ ವಿದ್ಯಾರ್ಥಿಗಳಲ್ಲಿ ನಾಯಕತ್ವ ಮನೋಭಾವನೆಯನ್ನು ಮೂಡಿಸಲು ಲೀಡ್ ಲೀಡರ್‌ಶಿಪ್ ಶಿಬಿರ-2020 ರ ವಿಶೇಷ ನಾಯಕತ್ವ ಶಿಬಿರವನ್ನು ಡಿಸೆಂಬರ್ ತಿಂಗಳಿನಲ್ಲಿ ರಾಜ್ಯದ ವಿವಿಧ ಜಿಲ್ಲೆಯ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಏಳು ದಿನಗಳ ವಿಶೇಷ ನಾಯಕತ್ವ ಶಿಬಿರವನ್ನು ಆಯೋಜಿಸಲಾಗಿದೆ.

ಈ ಶಿಬಿರದಲ್ಲಿ ನಾಯಕತ್ವ ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ, ಅಭಿವೃದ್ದಿ, ತಂಡದ ನಿರ್ವಹಣೆ, ಗುಂಪು ಚರ್ಚೆ, ಸಾರ್ವಜನಿಕ ಭಾಷಣ, ಪೇಂಟಿಂಗ್, ಕರಕುಶಲ ಮತ್ತು ಕ್ರಿಯಾತ್ಮಕ ಚಟುವಟಿಕೆ, ಸಮಯ ನಿರ್ವಹಣೆ, ಹಾಗೂ ವ್ಯಕ್ತಿತ್ವ ವಿಕಸನ ಕುರಿತ ವಿಷಯಗಳ ಮೇಲೆ ತರಬೇತಿ ನೀಡಲಾಗುದು.

ಆಸಕ್ತ ಕರ್ನಾಟಕದ ಪಿಯುಸಿ, ಪದವಿ ಮತ್ತು ಸ್ನಾತ್ತಕೋತ್ತರ ಪದವಿ ಪೂರೈಸುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಲುhttps://www.leadcampus.org/llp/ ಲಿಂಕ್ ಬಳಸಿ ರಿಜಿಸ್ಟರ್ ಮಾಡಿಕೊಳ್ಳಬಹುದು, ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಂಪರ್ಕ ಸಂಖ್ಯೆ- 9900035216, 9686654748 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending