Connect with us

ದಿನದ ಸುದ್ದಿ

ಕೊರೋನ ಕಾಲದಲ್ಲಿ ಹೃದಯವನ್ನು ಕಾಪಾಡಿ..!

Published

on

  • ಶ್ರೀನಿವಾಸ ಕಕ್ಕಿಲಾಯ

ಕೊರೋನ ಸೋಂಕಿನ ನೆಪದಲ್ಲಿ ಆಗಿರುವ ಸಮಸ್ಯೆಗಳಿಗೆ ಲೆಕ್ಕವಿಲ್ಲ. ಕೊರೋನ ಸೋಂಕಿಗೆ ಹೊರತಾದ ಇತರ ಸಮಸ್ಯೆಗಳನ್ನು ಹೊಂದಿರುವವರಿಗೆ, ಅದರಲ್ಲೂ, ಹೃದ್ರೋಗ, ಪಾರ್ಶ್ವವಾಯು, ಕ್ಯಾನ್ಸರ್ ಆದವರಿಗೆ, ತುರ್ತು ಸಮಸ್ಯೆಗಳಾದವರಿಗೆ ಹಾಗೂ ಗರ್ಭಿಣಿಯರಿಗೆ, ಕ್ಲಪ್ತ ಸಮಯದಲ್ಲಿ ಸೂಕ್ತ ಆರೋಗ್ಯ ಸೇವೆಗಳನ್ನು ಪಡೆಯುವುದಕ್ಕೆ ಬಹಳಷ್ಟು ಕಷ್ಟಗಳಾಗಿವೆ.

ಕೊರೋನ ಸೋಂಕನ್ನು ನಿಯಂತ್ರಿಸುವ ಹೆಸರಲ್ಲಿ ಅತಿ ಕಠಿಣ ದಿಗ್ಬಂಧನ ವಿಧಿಸಿದ್ದರಿಂದ ಜನರು ಆಸ್ಪತ್ರೆಗೆ ಹೋಗುವುದಕ್ಕೆ ಅಡ್ಡಿಗಳಾದವು. ಎಲ್ಲಾ ಆಸ್ಪತ್ರೆಗಳಲ್ಲೂ ಕೊರೋನ ಪೀಡಿತರಿಗೆ ಹೊರರೋಗಿ, ಒಳರೋಗಿ ಚಿಕಿತ್ಸೆ ನೀಡುವಂತೆ ಕಡ್ಡಾಯ ನಿಯಮಗಳನ್ನು ಮಾಡಿದ್ದರಿಂದ, ಅನ್ಯ ರೋಗಿಗಳ ಚಿಕಿತ್ಸೆಗೆ ಸಮಸ್ಯೆಗಳಾದವು.

ಕೊರೋನ ಬಗ್ಗೆ ವಿಪರೀತವಾದ ಭೀತಿಯನ್ನು ಹುಟ್ಟಿಸಿದ್ದರಿಂದ ಅನ್ಯ ಸಮಸ್ಯೆಗಳುಳ್ಳವರು ವೈದ್ಯರ ಬಳಿಗೆ, ಆಸ್ಪತ್ರೆಗಳಿಗೆ ಹೋಗುವುದಕ್ಕೆ ಅಂಜುವಂತೆ ಆಯಿತು. ಅನ್ಯ ರೋಗಗಳಿಗಾಗಿ ಆಸ್ಪತ್ರೆಗಳಿಗೆ ಬಂದವರೆಲ್ಲರಿಗೆ, ಹೆರಿಗೆಗಾಗಿ ಬಂದ ಎಲ್ಲಾ ಗರ್ಭಿಣಿಯರಿಗೆ ಕೊರೋನ ಲಕ್ಷಣಗಳಿಲ್ಲದಿದ್ದರೂ ಕಡ್ಡಾಯವಾಗಿ ಕೊರೋನ ಪರೀಕ್ಷೆ ಮಾಡಿ, ಆ ಬಳಿಕವೇ ಚಿಕಿತ್ಸೆ ನೀಡುವುದೆಂಬ ವ್ಯವಸ್ಥೆ ಮಾಡಿದ್ದು ಇನ್ನಷ್ಟು ಆತಂಕ, ಹೆದರಿಕೆ, ಗೊಂದಲಗಳಿಗೆ ಕಾರಣವಾಯಿತು.

ಕೊರೋನ ಒಂದೇ ಮಹಾವ್ಯಾಧಿ ಎಂಬಂತೆ ಎಲ್ಲವನ್ನೂ ಮುಚ್ಚಿ ಹಾಕಿದ ನಂತರದ ಈ ಆರು ತಿಂಗಳಲ್ಲಿ ಅನೇಕರು ತಮ್ಮ ಬಂಧುಮಿತ್ರರನ್ನು ಹೃದಯಾಘಾತದ ಕಾರಣಕ್ಕೆ ಕಳೆದುಕೊಂಡಿದ್ದಾರೆ. ಈ ಕೊರೋನ ಕಾಲದಲ್ಲಿ ಹೃದ್ರೋಗದ ಲಕ್ಷಣಗಳಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ 35% ಇಳಿಕೆಯಾಗಿದೆ.

ಆದರೆ ಹೃದ್ರೋಗಗಳಿಂದ ಸಾವುಂಟಾಗುವ ಪ್ರಮಾಣದಲ್ಲಿ 4% ಏರಿಕೆಯಾಗಿದೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕರೂ, ಹಿರಿಯ ಹೃದ್ರೋಗ ತಜ್ಞರೂ ಆಗಿರುವ ಡಾ|| ಸಿ.ಎನ್. ಮಂಜುನಾಥ್ ಹೇಳಿರುವುದು, ಇನ್ನೊಂದೆಡೆ, ಹಲವರು ತಮ್ಮ ಮನೆಗಳಲ್ಲೇ ಹೃದಯಾಘಾತದಿಂದ ಮೃತರಾದರು ಎಂಬ ವರದಿಗಳಾಗುತ್ತಿರುವುದು, ಹೃದ್ರೋಗದ ಲಕ್ಷಣಗಳಿರುವವರು ಆಸ್ಪತ್ರೆಗೆ ಹೋಗಲು ಹಿಂಜರಿಯುತ್ತಿದ್ದಾರೆ, ಅಥವಾ ಹೋಗಲು ಸಾಧ್ಯವಾಗುತ್ತಿಲ್ಲ, ಅಥವಾ ತೀರಾ ತಡವಾಗಿ ಹೋಗುತ್ತಿದ್ದಾರೆ ಎನ್ನುವುದನ್ನು ಸೂಚಿಸುತ್ತವೆ.

ಇದಲ್ಲದೆ, ಕೊರೋನ ಸೋಂಕು ಕೂಡ ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುತ್ತದೆ, ರಕ್ತವು ಹೆಪ್ಪುಗಟ್ಟುವುದನ್ನು ಪ್ರಚೋದಿಸುತ್ತದೆ. ಆದ್ದರಿಂದ ಅದಾಗಲೇ ರಕ್ತನಾಳಗಳಲ್ಲಿ ಸಮಸ್ಯೆಯಿದ್ದವರಿಗೆ ಕೊರೋನ ಸೋಂಕು ತಗಲಿದರೆ ಹೃದಯಾಘಾತವಾಗುವುದಕ್ಕೆ, ಹೃದಯದ ಸ್ನಾಯುಗಳಿಗೆ ಸಮಸ್ಯೆಯಾಗುವುದಕ್ಕೆ ಕಾರಣವಾಗಬಹುದು.

ಒಟ್ಟಿನಲ್ಲಿ, ಹೃದಯದ ರಕ್ತನಾಳಗಳಲ್ಲಿ ಸಮಸ್ಯೆಗಳಿರುವವರಿಗೆ ಈ ಕೊರೋನ ಸೋಂಕು ಕಷ್ಟಕರವಾಗಿ ಪರಿಣಮಿಸಿದೆ. ಆದ್ದರಿಂದ ಅವರೆಲ್ಲರೂ ವಿಶೇಷ ಎಚ್ಚರಿಕೆಗಳನ್ನು ವಹಿಸಬೇಕು, ರಕ್ತನಾಳಗಳ ಸಮಸ್ಯೆಯಿಂದ ಹೃದಯದ ಸ್ನಾಯುಗಳಿಗೆ ರಕ್ತ ಪೂರೈಕೆಯಲ್ಲಿ ಕೊರತೆಯಾಗುತ್ತಿರುವ ಯಾವುದೇ ಲಕ್ಷಣಗಳು ಗೋಚರಿಸಿದರೆ ತಕ್ಷಣವೇ ಅದಕ್ಕೆ ತಕ್ಕ ಪರೀಕ್ಷೆಗಳನ್ನು ಮತ್ತು ಚಿಕಿತ್ಸೆಯನ್ನು ಪಡೆಯಬೇಕು.

ವ್ಯಕ್ತಿಯು ಯಾವುದೇ ಕೆಲಸವನ್ನು ಮಾಡುವಾಗ ಹೃದಯದ ಸ್ನಾಯುಗಳಿಗೆ ಇನ್ನಷ್ಟು ರಕ್ತವು ಹರಿಯಬೇಕಾಗುತ್ತದೆ. ಹೃದಯದ ರಕ್ತನಾಳಗಳಲ್ಲಿ ಸಮಸ್ಯೆಯಾಗಿ, ಅವುಗಳಲ್ಲಿ ರಕ್ತಸಂಚಾರಕ್ಕೆ ಅಡ್ಡಿಯಾಗುತ್ತಿದ್ದರೆ ಹೆಚ್ಚುವರಿಯಾಗಿ ರಕ್ತವನ್ನು ಹರಿಯುವುದಕ್ಕೆ ಸಾಧ್ಯವಾಗುವುದಿಲ್ಲ.

ಆದ್ದರಿಂದ, ಹೃದಯದ ರಕ್ತನಾಳಗಳಲ್ಲಿ ಸಮಸ್ಯೆಯಿದ್ದವರು ಯಾವುದೇ ಕೆಲಸವನ್ನು ಹೆಚ್ಚು ಮಾಡತೊಡಗಿದಾಗ ಕಷ್ಟವೆನಿಸತೊಡಗುತ್ತದೆ. ಈ ಕಷ್ಟವು ಹಲವು ಬಗೆಯಲ್ಲಿ ವ್ಯಕ್ತವಾಗಬಹುದು. ಹೃದಯದ ಸಮಸ್ಯೆಯುಳ್ಳವರಿಗೆ ಎದೆ ನೋವುಂಟಾಗುತ್ತದೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆಯಾದರೂ ಅದು ಸಂಪೂರ್ಣ ಸತ್ಯವಲ್ಲ; ಹೃದ್ರೋಗವುಳ್ಳವರಿಗೆ ಎದೆ ನೋವು ಇಲ್ಲದಿರಬಹುದು, ಅದರ ಬದಲಿಗೆ ಇತರ ಲಕ್ಷಣಗಳಿರಬಹುದು, ಎದೆ ನೋವು ಹೃದ್ರೋಗವಲ್ಲದೆ ಇತರ ಹಲವು ಕಾರಣಗಳಿಂದಲೂ ಉಂಟಾಗಬಹುದು. ಹಾಗಾಗಿ, ಹೃದ್ರೋಗವು ಹೆಚ್ಚು ಸಾಮಾನ್ಯವಾಗುತ್ತಿರುವಾಗ, ಯುವಜನರಲ್ಲೂ ಕಾಣಿಸಿಕೊಳ್ಳುತ್ತಿರುವಾಗ, ಹೃದ್ರೋಗದ ಲಕ್ಷಣಗಳ ಬಗ್ಗೆ ಎಲ್ಲರಲ್ಲೂ ಸ್ಪಷ್ಟವಾದ ಅರಿವಿರುವುದು ಒಳ್ಳೆಯದು.

ಹೃದಯದ ರಕ್ತನಾಳಗಳ ಕಾಯಿಲೆಯಿದ್ದರೆ, ಹೃದ್ರೋಗದ ಸಮಸ್ಯೆಯಿದ್ದರೆ, ವ್ಯಕ್ತಿಯು ಶ್ರಮ ವಿನಿಯೋಗಿಸಿದಾಗ ಹೃದಯಕ್ಕೆ ಅದನ್ನು ನಿಭಾಯಿಸುವುದಕ್ಕೆ ಕಷ್ಟವಾಗುತ್ತದೆ, ಅದು ಬೇರೆ ಬೇರೆ ರೀತಿಗಳಲ್ಲಿ ಪ್ರಕಟಗೊಳ್ಳಬಹುದು. ವ್ಯಕ್ತಿಯು ನಿತ್ಯದಂತೆ ನಡೆದಾಡುವಾಗ, ಮೆಟ್ಟಲುಗಳನ್ನೇರುವಾಗ, ಕೆಲಸಗಳನ್ನು ಮಾಡುವಾಗ ಅಥವಾ ತುಂಬು ಊಟವನ್ನು ಮಾಡಿದಾಗ ದೇಹದ ಆಯಾ ಭಾಗಗಳಿಗೆ ಹೆಚ್ಚಿನ ರಕ್ತ ಪೂರೈಕೆಯ ಅಗತ್ಯವುಂಟಾಗುವುದರಿಂದ ಇಂಥ ಸಂದರ್ಭಗಳಲ್ಲಿ ಹೃದ್ರೋಗವನ್ನು ಸೂಚಿಸುವ ಲಕ್ಷಣಗಳು ಅನುಭವಕ್ಕೆ ಬರುತ್ತವೆ.

ಹೃದಯದ ಸ್ನಾಯುಗಳಲ್ಲಿ ನೋವನ್ನು ಗ್ರಹಿಸುವ ನರಗಳಿಲ್ಲದಿರುವುದರಿಂದ ನಮ್ಮ ಕೈಕಾಲುಗಳಿಗೆ ಗಾಯವಾದಾಗ ಉಂಟಾಗುವಂಥ ನೋವು ಹೃದಯದ ಸಮಸ್ಯೆಗಳಲ್ಲಿ ಉಂಟಾಗುವುದಿಲ್ಲ. ಬದಲಿಗೆ ಹೃದಯದ ಸುತ್ತುಮುತ್ತಲಿನ ಅಂಗಗಳಲ್ಲಿ ಬಗೆಬಗೆಯ ವೇದನೆಗಳು, ಅಥವಾ ‘ಕಷ್ಟಗಳು’, ಕಂಡುಬರಬಹುದು.

ನಡೆದಾಡುವಾಗ ಅಥವಾ ದುಡಿಯುವಾಗ ಅಥವಾ ತುಂಬು ಊಟ ಮಾಡಿದಾಗ ಕುತ್ತಿಗೆ ಅಥವಾ ಗಂಟಲು ಅಥವಾ ಎದೆ ಬಿಗಿದಂತಾಗುವುದು ಅಥವಾ ಭಾರವೆನಿಸುವುದು, ಎದೆ ಅಥವಾ ಗಂಟಲು ಅಥವಾ ಹೊಟ್ಟೆಯ ಮೇಲ್ಭಾಗದಲ್ಲಿ ಉಬ್ಬಿ ಬಂದಂತಾಗುವುದು (‘ಗ್ಯಾಸ್’ ತುಂಬಿದಂತಾಗುವುದು), ಎದೆ ಹಿಂಡಿದಂತಾಗುವುದು ಅಥವಾ ನೋವಾಗುವುದು (ಎದೆಯ ಎಡ, ಬಲ, ಮಧ್ಯ, ಎಲ್ಲೇ ಆಗಿರಬಹುದು), ಭುಜ, ತೋಳು, ದವಡೆ, ಕತ್ತಿನ ಬದಿಗಳು, ಬೆನ್ನಿನ ಮೇಲ್ಭಾಗಗಳಲ್ಲಿ ಸೆಳೆದಂತಾಗುವುದು ಅಥವಾ ನೋಯುವುದು, ಆಯಾಸವಾಗುವುದು, ಉಸಿರಾಡಲು ಕಷ್ಟವೆನಿಸುವುದು, ಎದೆ ಬಡಿತ ಹೆಚ್ಚುವುದು, ತಲೆ ಸುತ್ತುವುದು, ಇತ್ಯಾದಿಗಳೆಲ್ಲವೂ ಹೃದ್ರೋಗದ ಲಕ್ಷಣಗಳಾಗಿರಬಹುದು.

ಆದ್ದರಿಂದ ಯಾರಲ್ಲೇ ಆಗಲಿ, ಯಾವುದೇ ಶ್ರಮವುಳ್ಳ ಕೆಲಸಗಳಲ್ಲಿ ತೊಡಗಿದಾಗ ಹೊಕ್ಕಳಿಂದ ಮೇಲಕ್ಕೆ ಯಾವುದೇ ಅನುಭವಗಳಾದರೆ, ಮತ್ತು ಪ್ರತೀ ಬಾರಿ ಅದೇ ಕೆಲಸವನ್ನು ಮಾಡುವಾಗ ಆ ತೊಂದರೆಯು ಮರುಕಳಿಸುತ್ತಿದ್ದರೆ, ಅದನ್ನು ಹೃದ್ರೋಗದ ಸೂಚನೆಯೆಂದು ಪರಿಗಣಿಸುವುದೇ ಒಳ್ಳೆಯದು.

ಯಾವುದೇ ಶ್ರಮದ ಕೆಲಸವನ್ನು ಮಾಡುವಾಗ ಇಂತಹ ಲಕ್ಷಣಗಳುಳ್ಳವರು ಕೂಡಲೇ ತಜ್ಞ ವೈದ್ಯರನ್ನು ಕಾಣಲೇ ಬೇಕು ಮತ್ತು ಹೃದ್ರೋಗಕ್ಕೆ ಪರೀಕ್ಷೆಗಳನ್ನು ನಡೆಸುವಂತೆ ಒತ್ತಾಯಿಸಬೇಕು. ಕೆಲವೊಮ್ಮೆ ವೈದ್ಯರು ಕೂಡ ಈ ಲಕ್ಷಣಗಳನ್ನು ಲಘುವಾಗಿ ಪರಿಗಣಿಸಿ, ‘ಗ್ಯಾಸಿಗೋ’, ನೋವಿಗೋ ಮಾತ್ರೆಗಳನ್ನು ಕೊಟ್ಟು ಕಳುಹಿಸಬಹುದು, ಅದರಿಂದ ಹೃದ್ರೋಗದ ಪರೀಕ್ಷೆಗಳು ನಡೆಯದೆ ಸಮಸ್ಯೆಗಳಾಗಬಹುದು.

ಇಂಥ ಲಕ್ಷಣಗಳಿದ್ದವರು ಈ ಕೊರೋನ ಕಾಲದಲ್ಲಿ ಪರೀಕ್ಷೆಗೆ ಹೋಗಲು ಹಿಂಜರಿದಿರುವುದು, ವೈದ್ಯರು ಲಭ್ಯವಾಗದಿರುವುದು, ಹಾಗೊಮ್ಮೆ ದೊರೆತರೂ ಕೊರೋನ ಕಳೆಯಲಿ ಎಂದು ಮುಂದಕ್ಕೆ ಹಾಕಿರುವುದು, ಹೃದಯದ ಪರೀಕ್ಷೆಗೆ ಮುನ್ನ ಕೊರೋನ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದಾಗ ಒಪ್ಪದೆ ವಿಮುಖರಾಗಿರುವುದು ಎಲ್ಲವೂ ಘಟಿಸಿವೆ, ಅದರಿಂದ ಕೆಲವರಿಗೆ ಅಪಾಯಗಳಾಗಿರುವ ಸಾಧ್ಯತೆಗಳು ಇದ್ದೇ ಇವೆ.

ಆದ್ದರಿಂದ ಯಾರಿಗೇ ಆಗಲಿ, ಮೇಲೆ ಹೇಳಿದ ಲಕ್ಷಣಗಳಿದ್ದರೆ ಕೂಡಲೇ ಇಸಿಜಿ, ಅಥವಾ ಇನ್ನೂ ಒಳ್ಳೆಯದಾಗಿ, ಹೃದಯತಜ್ಞರನ್ನು ಕಂಡು ಟ್ರೆಡ್ ಮಿಲ್ ಪರೀಕ್ಷೆ ಇತ್ಯಾದಿ ಮಾಡಿಸಿಕೊಳ್ಳಬೇಕು, ಅದರಲ್ಲೇನಾದರೂ ಹೃದ್ರೋಗದ ಸೂಚನೆಗಳು ಕಂಡುಬಂದು ಇನ್ನಷ್ಟು ಉನ್ನತ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕೆಂದು ವೈದ್ಯರು ಹೇಳಿದರೆ ಹಿಂಜರಿಯದೆ ಮಾಡಿಸಿಕೊಳ್ಳಬೇಕು.

ಹೃದಯದ ರಕ್ತನಾಳಗಳ ಕಾಯಿಲೆಗೆ ನಮ್ಮ ಆಧುನಿಕ ಆಹಾರವೇ ಅತಿ ಮುಖ್ಯ ಕಾರಣವಾಗಿದೆ. ಅದರ ಜೊತೆಗೆ, ವ್ಯಾಯಾಮವಿಲ್ಲದ ಜೀವನ, ಧೂಮಪಾನ, ಮದ್ಯಪಾನಗಳು ಕೂಡ ಕಾರಣಗಳಾಗಿವೆ. ಸಕ್ಕರೆ, ಎಲ್ಲಾ ಸಿಹಿ ತಿನಿಸುಗಳು, ಹಣ್ಣು ಮತ್ತು ಹಣ್ಣಿನ ರಸಗಳು (ಹಣ್ಣು – ತರಕಾರಿ ಸೇವಿಸಿದರೆ ಒಳ್ಳೆಯದು ಎಂದೇ ಹೆಚ್ಚಿನ ವೈದ್ಯರು ಹೇಳುತ್ತಿರುತ್ತಾರೆ, ಆದರೆ ಹಣ್ಣು ಮತ್ತು ತರಕಾರಿ ಒಂದೇ ಅಲ್ಲ, ಬೇರೆ ಬೇರೆಯೇ ಆಗಿವೆ ಎಂಬುದನ್ನು ಗಮನಿಸಿ, ಹಣ್ಣು ಅಂದರೆ ಸಕ್ಕರೆ, ಅಷ್ಟೇ), ಸಂಸ್ಕರಿತ ತಿನಿಸುಗಳು (ಮೈದಾ, ಬ್ರೆಡ್ಡು, ಬಿಸ್ಕತ್ತು ಇತ್ಯಾದಿ), ರಿಫೈನ್ಡ್ ಎಣ್ಣೆ, ಕರಿದ ತಿನಿಸುಗಳು ಮತ್ತು ವಿಪರೀತ ಪ್ರಮಾಣದಲ್ಲಿ ಧಾನ್ಯಗಳ ಸೇವನೆ ಹೃದ್ರೋಗವೂ ಸೇರಿದಂತೆ ಎಲ್ಲಾ ಆಧುನಿಕ ರೋಗಗಳಿಗೆ ಮುಖ್ಯ ಕಾರಣಗಳಾಗಿವೆ. ಇವೆಲ್ಲವನ್ನು ತ್ಯಜಿಸಿ, ನಿಯತವಾಗಿ ವ್ಯಾಯಾಮ ಮಾಡಿದರೆ ಈ ರೋಗಗಳನ್ನು ದೂರವಿಡಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending