Connect with us

ಅಂತರಂಗ

ಅರಿಮೆಯ ಅರಿವಿರಲಿ – 59 : ಶಿಶುಗಣ್ಣಿನ ಒಳಗಣ್ಣು

Published

on

  • ಯೋಗೇಶ್ ಮಾಸ್ಟರ್

ಗುವನ್ನು ಮನೆಯಲ್ಲಿ ಪೋಷಿಸುವುದಾಗಲಿ, ಶಾಲೆಯಲ್ಲಿ ಶಿಕ್ಷಣ ನೀಡುವುದಾಗಲಿ ಅಥವಾ ಇನ್ನಾವುದೇ ಕಾರಣ ಮತ್ತು ತರಬೇತಿಗಳಿಗೆ ಮಗುವಿನ ಸಂಪರ್ಕದಲ್ಲಿ ವ್ಯವಹರಿಸುವವರಾಗಲಿ ಎರಡು ಸಾಮರ್ಥ್ಯವಿರಬೇಕು. ಒಂದು ಶಿಶುವಿನ ದೃಷ್ಟಿಯಲ್ಲಿ ನಾವು ಮತ್ತು ನಮ್ಮ ಕೆಲಸ ಹೇಗೆ ಕಾಣುತ್ತಿದೆ ಎಂದು ಗ್ರಹಿಸಲು ಸಾಧ್ಯವಾಗಬೇಕು.

ಹಾಗೆಯೇ ಮತ್ತೊಂದು ಸಾಮರ್ಥ್ಯ ಮಗುವಿಗೆ ದಾಟಿಸಬೇಕಾದ ವಿಷಯವನ್ನು ಅದು ಮೆಚ್ಚುವ ಹಾಗೆ ಮತ್ತು ಆನಂದಿಸುವ ಹಾಗೆ ರೂಪಿಸುವುದು.
ಮಗುವಿನ ವಯಸ್ಸು, ಮನಸ್ಸು, ಹಿನ್ನೆಲೆ, ನೈಸರ್ಗಿಕವಾಗಿ ಇರುವ ಸಾಮರ್ಥ್ಯ ಮತ್ತು ಗಳಿಸಿಕೊಂಡಿರುವ ಸಾಮರ್ಥ್ಯದ ಆಧಾರದ ಮೇಲೆ ನೀಡುವ ಸಂದೇಶವಾಗಲಿ, ಶಿಕ್ಷಣವಾಗಲಿ, ತರಬೇತಿಯಾಗಲಿ ಯೋಜಿತಗೊಳ್ಳಬೇಕು.

ಕಲಿಕೆಯೆಂಬ ಪ್ರಕ್ರಿಯೆ ನಿರಂತರವಾಗಿರುವ ಕಾರಣದಿಂದಾಗಿ, ಹಾಗೂ ಮಗುವಿನ ಬದುಕಿನುದ್ದಕ್ಕೂ ವಿಷಯಗಳು ಮತ್ತು ಕೌಶಲ್ಯಗಳು ಪರಸ್ಪರ ಬೆಸೆದುಕೊಂಡಿರುವ ಕೊಂಡಿಗಳಂತಿರುವ ಕಾರಣದಿಂದ ಅವರೇ ಅದನ್ನು ಗ್ರಹಿಸಿ, ಪ್ರಶಂಸಿಸಿ, ಆನಂದಿಸಿ ತಮ್ಮದಾಗಿಸಿಕೊಳ್ಳುವ ರೀತಿಯಲ್ಲಿ ನಾವು ಅವರಿಗೆ ಮುಟ್ಟಿಸುವ ವಿಷಯಗಳನ್ನು ರಚಿಸಿಕೊಳ್ಳಬೇಕು.

ಒಟ್ಟಾರೆ ಹೇಳುವುದಾದರೆ ಶಿಶುಗಣ್ಣು ನಮಗಿರಬೇಕು. ಶಿಶುವಿನ ಕಣ್ಣಲ್ಲಿ ನಮ್ಮ ಚಿತ್ರಣವು ಹೇಗಿರುತ್ತದೆ ಎಂಬ ಪರಿಕಲ್ಪನೆ ನಮಗೆ ಸ್ಪಷ್ಟವಾಗಿರಬೇಕು.

ದೊಡ್ಡ ಸಂಖ್ಯೆಯಲ್ಲಿ ಮಕ್ಕಳನ್ನು ಹೊಂದುವ ಶಾಲೆಗಳು, ವಿದ್ಯಾರ್ಥಿ ನಿಲಯಗಳು, ತರಬೇತಿ ಕೇಂದ್ರಗಳೆಲ್ಲವೂ ಶಿಶುವಿಹಾರಗಳಾಗಬೇಕು. ಹಾಗೂ ಮಕ್ಕಳೊಡನೆ ನಡೆಸುವ ವ್ಯವಹಾರಗಳಲ್ಲಿ ಯಾವುದೇ ರೀತಿ ಭಾಗಿಯಾಗುವ ಹಿರಿಯರಲ್ಲಿ ಈ ಶಿಶುಗಣ್ಣು ಅತ್ಯಂತ ನಿಚ್ಚಳವಾಗಿ ತೆರೆದಿರಬೇಕು. ಏಕೆಂದರೆ ಮಕ್ಕಳು ತಮ್ಮ ಎಳೆಗಣ್ಣಲ್ಲಿ ಗ್ರಹಿಸಿದ್ದು ಅವರ ವ್ಯಕ್ತಿತ್ವದ ಭಾಗವಾಗಿ, ಕೌಶಲ್ಯದ ಬುನಾದಿಯಾಗಿ, ಮನೋಭಾವದ ನೆಲೆಯಾಗಿ ಬೇರೂರುತ್ತದೆ. ಅವರ ವ್ಯಕ್ತಿತ್ವ ವಿಕಸನವೂ ಕೂಡಾ ಅದರಿಂದಲೇ ಆಗುತ್ತದೆ.

ವಸ್ತುಗಳನ್ನು, ವಿಷಯಗಳನ್ನು ಮತ್ತು ವ್ಯಕ್ತಿಗಳನ್ನು ನೋಡುವ ಬಗೆ ಎಂಬುದು ಸಾಧಾರಣ ವಿಚಾರವಲ್ಲ. ಬಹಳ ಮಹತ್ವದ್ದು ಮಾತ್ರವಲ್ಲದೇ ಅದು ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ, ಜೀವನ ಕ್ರಮಗಳನ್ನು ರೂಢಿಸಿಕೊಳ್ಳುವಲ್ಲಿ, ಸಂಕಲ್ಪಗಳನ್ನು ಮಾಡುವಲ್ಲಿ, ವಿವೇಚನೆಯಿಂದ ವಿಷಯಗಳನ್ನು ಸ್ವೀಕರಿಸುವಲ್ಲಿ ಅಥವಾ ತಿರಸ್ಕರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ನೋಡುವ ಬಗೆಯ ತರಬೇತಿ ಕೂಡಾ ಶಿಶುಗಣ್ಣಿಗೆ ಬೇಕು. ಏಕೆಂದರೆ ಅವರದು ಕಾಮಾಲೆ ಕಣ್ಣಾಗಬಾರದಲ್ಲ!

ಶಿಶುಮತಿ

ಮನಸ್ಸನ್ನು ಹದಗೊಳಿಸಬೇಕು, ಮತಿಗೆ ತಿದಿಯೊತ್ತಬೇಕು. ಮಗುವಿನ ಮನಸ್ಸು ಮತ್ತು ಮತಿಗಳ ವಿಷಯದಲ್ಲಿಯೂ ಕೂಡಾ ಅದೇ ಮಾಡಬೇಕಾಗಿರುವುದು. ಅದರ ಮನಸ್ಸಿಗೆ ಅಗತ್ಯದ ಭಾವನೆಗಳು ಹುಟ್ಟುವಂತೆ, ಅನುಭವಗಳು ದಕ್ಕುವಂತೆ, ದೃಷ್ಟಿಗಳು ಮೂಡುವಂತೆ, ಕನಸುಗಳು ಕಟ್ಟುವಂತೆ ಮಾಡಿದರೆ, ಅವುಗಳನ್ನು ಸಾಕಾರಗೊಳಿಸುವ ದಿಕ್ಕಿನಲ್ಲಿ ನಿರ್ವಹಿಸಲು ಬುದ್ಧಿಗೆ ತರಬೇತಿಯನ್ನು ನೀಡಬೇಕು. ಮನಕ್ಕೆ ಮತಿಯೊಂದು ಉಪಕರಣ. ಮತಿಯೆಂದರೆ ಬುದ್ಧಿಯೆಂಬ ಅರ್ಥದಲ್ಲಿ ಇಲ್ಲಿ ಬಳಸುತ್ತಿದ್ದೇನೆ.

ಮನಸ್ಸು ಉದಾತ್ತವಾದಂತೆ, ನೈತಿಕತೆಯನ್ನು ನೆಚ್ಚಿಕೊಂಡಂತೆ, ತನ್ನ ತಾನು ತಿಳಿದ ಮೇಲೆ, ತನ್ನ ಸಾಮರ್ಥ್ಯವನ್ನು ಸಾಕ್ಷಾತ್ಕರಿಸಿಕೊಂಡ ಮೇಲೆ ಬುದ್ಧಿಯನ್ನು ಸಾಣೆ ಹಿಡಿಯುವ ಕೆಲಸವನ್ನು ಮಾಡಬೇಕು. ಈ ಕೆಲಸವಾಗುವುದು ಕೌಶಲ್ಯಗಳನ್ನು ಬೆಳೆಸುವುದರ ಮೂಲಕ. ಶಿಸ್ತುಗಳನ್ನು ಅನುಸರಿಸುವುದರ ಮೂಲಕ. ಮಾಡುವ ಕೆಲಸಗಳಲ್ಲಿ ಕ್ರಮಗಳನ್ನು ಕಂಡುಕೊಳ್ಳುವುದರ ಮೂಲಕ, ಮೆದುಳಿಗೆ ಸಾಕಷ್ಟು ಕಸರತ್ತುಗಳನ್ನು ನೀಡಿ ಅದನ್ನು ಚುರುಕಾಗಿರಿಸಿಕೊಳ್ಳುವುದರ ಮೂಲಕ.

ಅಧ್ಯಯನದಲ್ಲಿ ಆಸಕ್ತಿ, ಕೌಶಲ್ಯಗಳಲ್ಲಿ ತರಬೇತಿ, ಜೀವನ ಕ್ರಮಗಳಲ್ಲಿ ಶಿಸ್ತು ಮತ್ತು ಕಲಿಕೆಯ ಪ್ರಕ್ರಿಯೆಗಳಲ್ಲಿ ನಿರಂತರತೆಯನ್ನು ಕಾಪಾಡಿಕೊಳ್ಳುವುದರ ಮೂಲಕ ಮಕ್ಕಳ ವೈಚಾರಿಕತೆಗೆ ಮತ್ತು ವೈಜ್ಞಾನಿಕ ಧೋರಣೆಗಳಿಗೆ ವಸ್ತುನಿಷ್ಟ ಮೌಲ್ಯಗಳನ್ನು ನೀಡಲು ಸಾಧ್ಯವಾಗುವುದು.

ಯಾವುದೇ ಸನ್ನಿವೇಶಗಳಲ್ಲಿ ಭಾವೋದ್ರೇಕಕ್ಕೆ ಒಳಗಾಗಿ ಬುದ್ಧಿಯನ್ನು ಬಲಿಗೊಡದೇ ಕೌಶಲ್ಯದಿಂದ ಅದನ್ನು ಸಮಚಿತ್ತದಿಂದ ಗಮನಿಸಿ ವರ್ತಿಸಲು, ಪ್ರವರ್ತಿಸಲು ಸಾಧ್ಯವಾಗುತ್ತದೆ. ಈ ಭಾವುಕತೆಯ ನಿರ್ವಹಣೆಯ ಕೌಶಲ್ಯವೂ ಕೂಡಾ ಜೀವನ ಕೌಶಲ್ಯದಂತೆ ತರಬೇತಿಯಿಂದ ಪಡೆಯಲು ಸಾಧ್ಯ. ಮನಸ್ಸಿನ ಮತ್ತು ದೇಹದ ಜಡತ್ವವನ್ನು ನೀಗಲು ಶಿಸ್ತು ಮತ್ತು ತರಬೇತಿ ಬೇಕು.

ಪ್ರತಿಭೆ, ಸಾಮರ್ಥ್ಯ, ತಿಳುವಳಿಕೆ, ಅಧ್ಯಯನ; ಇವೆಲ್ಲಾ ಇದ್ದರೂ ಕೂಡಾ ಕೌಶಲ್ಯವು ಇಲ್ಲದಿರುವ ಕಾರಣದಿಂದ ಎಷ್ಟೋ ಬಾರಿ ವ್ಯಕ್ತಿಗಳು ಅವುಗಳನ್ನು ಸಮರ್ಪಕವಾಗಿ ಬಳಸಲು, ಉಪಯುಕ್ತವನ್ನಾಗಿಸಿಕೊಳ್ಳಲು ಬರುವುದಿಲ್ಲ. ಇದಕ್ಕೆ ಬೇಕಾಗಿರುವುದು ಸೂಕ್ತ ತರಬೇತಿ. ತೊಡಕಾಗಿರುವಂತಹ ಅರಿಮೆಗಳನ್ನು ನಿವಾರಿಸಿಕೊಂಡು, ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡು, ಇತಿಮಿತಿಯನ್ನು ತಿಳಿದುಕೊಂಡು ಅದನ್ನು ದಾಟಿ ಗುರಿ ತಲುಪಲು ಬೇಕಾದ ಜಾಣ್ಮೆಯನ್ನು ಪಡೆದುಕೊಳ್ಳಲು ಮಕ್ಕಳಿಗೆ ತರಬೇತಿಯನ್ನು ನೀಡುವುದು ಮನೆಯಲ್ಲಿ ಪೋಷಕರದು, ಶಾಲೆಯಲ್ಲಿ ಶಿಕ್ಷಕರದು ಮತ್ತು ಇನ್ನುಳಿದಂತೆ ಸಮಾಜದಲ್ಲಿ ಎಲ್ಲಾ ಹಿರಿಯ ಸದಸ್ಯರದು.

ಶಿಶುಗಲಿಕೆ

ಶಿಕ್ಷಣ ಶಿಶುವಿಗೆ ಅಗತ್ಯ ಎಂದು ತಾತ್ವಿಕವಾಗಿ ನಂಬುವುದೇನೂ ನಮಗೆ ಸಾಲದು. ಏಕೆಂದರೆ ತಾಂತ್ರಿಕವಾಗಿ ಅದನ್ನು ಮಕ್ಕಳಿಗೆ ಮುಟ್ಟಿಸದಿದ್ದರೆ ಇಡೀ ಶಿಕ್ಷಣ ವ್ಯವಸ್ಥೆಯೇ ಕುಸಿಯುತ್ತದೆ. ಅನುಚಿತ ಮತ್ತು ಸಮರ್ಪಕ ಶಿಕ್ಷಣದ ವ್ಯವಸ್ಥೆಯಿಂದಾಗಿ ಸಮಾಜವು ಟೊಳ್ಳಾಗುತ್ತದೆ. ಈ ಎಚ್ಚರಿಕೆ ನಮಗಿರಬೇಕು.

ಕುಣಿಯಲಾರದವರು ನೆಲ ಡೊಂಕು ಅಂದಂತೆ ಶಿಕ್ಷಕರು ಮತ್ತು ಪೋಷಕರು ಸಾಮಾನ್ಯವಾಗಿ ಮಗುವಿಗೆ ಅದೆಷ್ಟು ಹೇಳಿಕೊಟ್ಟರೂ ಕಲಿಯಲಿಲ್ಲ ಗ್ರಹಿಸುತ್ತಿಲ್ಲ ಎಂದು ದೂರುತ್ತಿರುತ್ತಾರೆ. ಆದರೆ ಮಕ್ಕಳು ಯಂತ್ರಗಳ ಉತ್ಪಾದನೆಗಳಲ್ಲದ ಕಾರಣ ಅವರಿಗೆ ಬೋಧನಾ ಕ್ರಮಗಳಗಲ್ಲಿ, ಕಲಿಸುವ ತಂತ್ರಗಳಲ್ಲಿ ಸೂಕ್ತವಾದ ಮತ್ತು ಸಾಕಷ್ಟು ಬದಲಾವಣೆಗಳನ್ನು ತಂದುಕೊಳ್ಳುವುದು ಶಿಕ್ಷಕರ ಸಾಮರ್ಥ್ಯ.

ಕಲಿಯುವ ಮತ್ತು ಕಲಿಸುವ ವಿಧಾನಗಳಲ್ಲಿ ಸಾಕಷ್ಟು ಮೂಲಭೂತ ಸಮಸ್ಯೆಗಳಿವೆ. ಅವುಗಳನ್ನು ತಿಳಿದುಕೊಂಡು ಸರಿಪಡಿಸಿಕೊಳ್ಳದೇ ಹೋದರೆ ಪೆÇಳ್ಳು ವ್ಯಕ್ತಿತ್ವದ ಮತ್ತು ಟೊಳ್ಳು ವೃತ್ತಿಪರತೆಯ ವ್ಯಕ್ತಿಗಳನ್ನು ಮುಂದೆ ಕಾಣುತ್ತೇವೆ. ಜೊತೆಗೆ ಗಟ್ಟಿಯಾದ ಸಂಪನ್ಮೂಲ ವ್ಯಕ್ತಿಗಳನ್ನೇ ಕಾಣಲಾಗದಷ್ಟು ಅಪಾಯವನ್ನು ಎದುರಿಸಬೇಕಾಗುತ್ತದೆ.

ತಮ್ಮ ವಿಷಯದಲ್ಲಿ ತಾವೇ ಸ್ಪಷ್ಟತೆಯನ್ನು ಮತ್ತು ಸಾಮರ್ಥ್ಯವನ್ನು ಹೊಂದಿಲ್ಲದಂತ ಟೊಳ್ಳು ಸಂಪನ್ಮೂಲ ವ್ಯಕ್ತಿಗಳು ಮತ್ತು ಶಿಕ್ಷಕರು ಕ್ಷೇತ್ರದಲ್ಲಿ ಕೆಲಸಕ್ಕೆ ಇಳಿದರೆ, ಅವರಿಂದ ಕಲಿಕೆಯನ್ನು ಪಡೆಯುವವರೂ ಕೂಡಾ ಟೊಳ್ಳಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಮಕ್ಕಳ ಕಲಿಕೆಯ ವಿಷಯದಲ್ಲಿ ಸೂಕ್ತವಾದ ತಂತ್ರಗಳನ್ನು ಬಳಸುವ ವಿಷಯದಲ್ಲಿ ಪೋಷಕರೂ, ಶಿಕ್ಷಕರೂ ಮತ್ತು ಇತರ ತರಬೇತುದಾರರು ಪಳಗಬೇಕು. ಮಗುವಿಗೆ ಕಲಿಸುವುದು ಎಂದರೆ ಪಠ್ಯ ಮಾತ್ರವಲ್ಲದೆ, ನೈತಿಕತೆ, ಆರ್ಥಿಕ ಪ್ರಜ್ಞೆ, ಜೀವನ ಕೌಶಲ್ಯ, ಕಲೆ ಮತ್ತು ಸಾಂಸ್ಕೃತಿಕ ತರಬೇತಿ, ಸೃಜನಶೀಲತೆ; ಇತ್ಯಾದಿಗಳೆಲ್ಲಾ ಅಡಕವಾಗಿರುತ್ತದೆ.

ಅವೆಲ್ಲವೂ ಕೂಡಾ ಜೀವನದ ಸಾರ ಗ್ರಹಿಕೆಗೆ ಮತ್ತು ಬದುಕನ್ನು ಆನಂದಿಸಲು ಬೇಕಾದ ವಿಷಯಗಳೇ ಆಗಿರುತ್ತವೆ. ಹಾಗಾಗಿ ಮಕ್ಕಳಿಗೆ ಅವುಗಳಲ್ಲಿ ಆಸಕ್ತಿ ಕಳೆಯದಂತೆ, ಕಲಿಸುವವರ ದೌರ್ಬಲ್ಯದಿಂದ ಮತ್ತು ವೃತ್ತಿಪರತೆಯ ಕೊರತೆಯಿಂದ ಮಕ್ಕಳು ಆ ವಿಷಯಗಳಿಂದ ವಂಚಿತರಾಗರಂತೆ ನೋಡಿಕೊಳ್ಳುವ ಜವಾಬ್ದಾರಿ ಕುಟುಂಬದ್ದು, ಶಿಕ್ಷಣ ಸಂಸ್ಥೆಗಳದ್ದು ಮತ್ತು ಶಿಕ್ಷಣ ವ್ಯವಸ್ಥೆಯದ್ದು.

ಶಿಶುಪಾಲ

ಮಗುವಿನ ಲಾಲನೆ ಪಾಲನೆ ಮಕ್ಕಳಾಟವಲ್ಲ. ಅವರು ನೈಸರ್ಗಿಕವಾಗಿ ಪಶುವಿನಂತಿದ್ದು ಅವರನ್ನು ಮನುಷ್ಯನ ಸಾಮಾಜಿಕ ಜೀವನಕ್ಕೆ ಅಣಿ ಮಾಡುವ ಗುರುತರವಾದಂತಹ ಹೊಣೆಗಾರಿಕೆ ಹಿರಿಯರದು. ಅದರಲ್ಲೂ ಶಾರೀರಿಕ ಬೆಳವಣಿಗೆ, ಮಾನಸಿಕ ವಿಕಸನ, ಭಾವನಾತ್ಮಕ ಬೆಸುಗೆ, ಸಾಮಾಜಿಕ ಹೊಣೆಗಾರಿಕೆ, ನೈತಿಕ ಬದ್ಧತೆ, ಶೈಕ್ಷಣಿಕ ಪ್ರಗತಿ, ಬೌದ್ಧಿಕ ವಿಕಾಸ, ಜೀವನ ನಿರ್ವಹಣೆ; ಹೀಗೆ ಹಲವಾರು ಆಯಾಮಗಳಿಂದ ಮಗುವನ್ನು ಗಮನಿಸಿಕೊಂಡು ಸರ್ವತೋಮುಖ ಅಭಿವೃದ್ಧಿಗೆ ನಾವು ವಿವಿಧೋದ್ದೇಶ ಯೋಜನೆಗಳನ್ನೇ ಹಾಕಿಕೊಳ್ಳಬೇಕು.

ಸಾಮಾನ್ಯವಾಗಿ ಇವುಗಳಲ್ಲಿ ಯಾವುದೇ ಕೊರತೆಯಾದರೂ ಮಗುವು ವ್ಯಕ್ತಿಯಾಗಿ ರೂಪುಗೊಂಡಮೇಲೆ ಅಲ್ಪಮಟ್ಟಿಗಿನ ಎಡರುತೊಡರುಗಳನ್ನು ಎದುರಿಸುತ್ತದೆ. ಆಗ ಕುಟುಂಬವನ್ನು ದೂರುವುದು, ಶಿಕ್ಷಕರನ್ನು ಮತ್ತು ಶಿಕ್ಷಣ ಸಂಸ್ಥೆಗಳನ್ನು ದೂರುವುದು, ಮನೆಯವರು ತಮ್ಮ ಆರ್ಥಿಕತೆಯ ಅಥವಾ ಮತ್ತೇನೋ ಸಮಸ್ಯೆಯ ಕಾರಣಗಳನ್ನು ಹೇಳುವುದು. ನಮಗೆ ಆಗ ಅದು ಸರಿ ಇದ್ದಿದ್ದರೆ ಈಗ ನಾವು ಹೀಗೆ ಇರಬೇಕಿರಲಿಲ್ಲ ಎಂದು ವಯಸ್ಕರು ತಮ್ಮ ಮುಂದಿನ ಹೊಸ ಪೀಳಿಗೆಯ ಮುಂದೆ ಅವಲತ್ತುಕೊಳ್ಳುವುದು; ಹೀಗೆ ನಡೆಯುತ್ತಿರುತ್ತದೆ.

ಯಾವುದೇ ರಾಷ್ಟ್ರವಾಗಲಿ, ಸಮಾಜವಾಗಲಿ ಸಶಕ್ತವಾಗಿ ನಿರ್ಮಾಣವಾಗಬೇಕಾದಲ್ಲಿ ಆ ಹೊತ್ತಿನ ಸಮಸ್ಯೆಗಳಿಗೆ ಪರಿಹಾರ ಮತ್ತು ಅಗತ್ಯಗಳಿಗೆ ಸ್ಪಂದಿಸುವುದು ಎಷ್ಟು ಮುಖ್ಯವೋ, ಕನಿಷ್ಟಪಕ್ಷ ಮುಂದಿನ ಹದಿನೈದರಿಂದ ಇಪ್ಪತ್ತು ವರ್ಷಗಳಷ್ಟು ದೂರದೃಷ್ಟಿಯನ್ನು ಹೊಂದಿದ್ದು ಅದರ ಸಲುವಾಗಿ ದುಡಿಯಲು ಮತ್ತು ರಚನಾತ್ಮಕವಾಗಿ ತೊಡಗಲು ಪ್ರಸ್ತುತದಿನದಲ್ಲಿ ಕಾಲವನ್ನು ಮೀಸಲಿಡಬೇಕು. ಆಗ ಸಮಾಜವಾಗಲಿ, ದೇಶವಾಗಲಿ ಸಮರ್ಥವಾಗಿ ಮತ್ತು ಪ್ರಗತಿ ಹೊಂದಿರುವಂತಹ ಸ್ಥಿತಿಯನ್ನು ಕಾಣಲು ಸಾಧ್ಯ. ಆ ಹೊತ್ತಿನ ಊಟಕ್ಕೆ ಮೀನು ಕೊಡುವುದಕ್ಕಿಂತ ಮೀನು ಹಿಡಿಯುವುದನ್ನು ಹೇಳಿಕೊಡುವುದರಲ್ಲಿ ಮಗುವಿನ ಭವಿಷ್ಯದ ದೂರದೃಷ್ಟಿ ಇರುತ್ತದೆ.

ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಕುಟುಂಬ, ಸಾಮಾಜಿಕ ವ್ಯವಸ್ಥೆ ಮತ್ತು ಸರ್ಕಾರಗಳೆಲ್ಲವೂ ಒಟ್ಟಾಗಿ ದುಡಿದರೇನೇ ಈಗಿನ ಮತ್ತು ಮುಂದಿನ ಸಶಕ್ತ ಮತ್ತು ಸುಭದ್ರ ಬದುಕನ್ನು ವೈಯಕ್ತಿಕವಾಗಿಯೂ ಮತ್ತು ಸಾಮಾಜಿಕವಾಗಿಯೂ ಹೊಂದಲು ಸಾಧ್ಯ. ಸಧ್ಯದ ಆಗುಹೋಗುಗಳಷ್ಟೇ ಜೀವಪರ ಮತ್ತು ಸಮಾಜಮುಖಿಗಳಾಗಿರುವವರ ಕಾಳಜಿಯಲ್ಲ. ಅವರು ಮಕ್ಕಳ ಸಮಗ್ರ ಪಾಲನೆ ಪೋಷಣೆ ಮಾಡುವ ಮೂಲಕ ತಮ್ಮಂತೆಯೇ ಮುಂದೆ ಬರುವವರ ಬದುಕಿಗೆ ಜೀವನ ಕ್ಷೇತ್ರವನ್ನು ಹಸನು ಮಾಡಿಟ್ಟಿರಬೇಕು.

(ಮುಂದುವರೆಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಪ್ರೇಮ ವಿರಾಗಿಯ ಕಾತುರದ ಕವಿತೆಗಳು

Published

on

  • ಪರಶುರಾಮ್. ಎ

ಪ್ರೇಮ ವಿರಾಗಿಯ ನಡುಗತ್ತಲ ಕವಿತೆಗಳು” ಎಮ್.ಜಿ. ಕೃಷ್ಣಮೂರ್ತಿ ಇಂಡ್ಲವಾಡಿಯವರ ಪ್ರೇಮಿಯೊಬ್ಬನ ಕಾತುರದ ಕವಿತೆಗಳು. ಈ ಸಂಕಲನದಲ್ಲಿ ಒಟ್ಟು 53 ಕವನಗಳಿದ್ದು, ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಪಡೆದ ಕೃತಿಯಾಗಿದೆ. ಕೆ.ವೈ. ನಾರಾಯಣಸ್ವಾಮಿಯವರು ಮುನ್ನುಡಿ ಬರೆದು ಕವಿಗೆ ಮುನ್ಸೂಚನೆಯನ್ನು ಎಚ್ಚರಿಕೆಯನ್ನು ನೀಡಿದ್ದಾರೆ.

ಈ ಕವನ ಸಂಕಲನದ ಬಹುತೇಕ ಕವನಗಳು ಹೆಣ್ಣಿನ ಸ್ಪರ್ಶ ಮತ್ತು ದೈಹಿಕ ಸಾಮೀಪ್ಯದಿಂದ ಪ್ರಾಪ್ತವಾಗುವ ರೋಮಾಂಚನ ತಲ್ಲಣ ಮತ್ತು ಅನುಭವಗಳಿಂದ ತಾನು ಪಡೆದ ಹೊಸ ಅರಿವುಗಳನ್ನು ನಿರೂಪಿಸಿರುವ ರಚನೆಗಳೇ ಈ ಸಂಕಲನದ ತುಂಬಾ ತುಂಬಿಕೊಂಡಿವೆ ಎನ್ನುತ್ತಾ, ಪ್ರೇಮಿಯಾಗಿ ಗೆದ್ದಿರುವ ಹಾಗೇ ಕವಿಯಾಗಿ ಗೆಲ್ಲುವ ದಾರಿ ಗುರಿಯನ್ನು ಕ್ರಮಿಸಬೇಕು. ಕವಿಗೆ ತಾನು ಬರೆಯುತ್ತಿರುವ ಮಾತು ಒಂದು ಪರಂಪರೆ ಸಂಸ್ಕೃತಿಯ ಮುಂದುವರಿಕೆ ಎಂಬ ಎಚ್ಚರ ಮತ್ತು ಭಯಗಳಿರಬೇಕು ಎಂಬ ಎಚ್ಚರಿಕೆ ಸಹ ನೀಡಿದ್ದಾರೆ._

ಒಬ್ಬ ಪ್ರೇಮಿಗೆ ಇರಬಹುದಾದ ನೈಜ ಕಾತುರತೆ, ತುಡಿತಗಳು, ಭ್ರಮೆಗಳು, ಹುಚ್ಚುತನವೆಲ್ಲವೂ ಕವಿತೆಗಳ ಮೂಲಕ ಹೊರಹೊಮ್ಮಿದೆ. ಓದುಗರನ್ನು ಒಬ್ಬ ಪ್ರೇಮಿಯಾಗಿಸಲು ಅಣಿಗೊಳಿಸುವಂತಿದೆ ಈ ವಿರಾಗಿಯ ನಡುಗತ್ತಲ ಕವಿತೆಗಳು.

ಅವಳಿಗಾಗಿ one time story ಕವನದಲ್ಲಿ

ಪ್ರೇಮ ನಿವೇದನೆ ಅದೆಷ್ಟು ಕಷ್ಟ
ಮೈನಡುಗಿಸುವುದು
ಅವಳ ನೋಟ, ಮಾತು
ಅಪ್ಪಾ ಇನ್ನೇನು ಯಾವುದೊ ಸಿಡಿಲು
ಬಡಿಯುವ ಭಾಸ
ಇವೆಲ್ಲವುಗಳಿಂದ ಮೈದಡವಿ
ಮೇಲೇಳುವಷ್ಟರಲ್ಲಿ ಬಾಯಿಂದ ಮಾತೇ ಬಾರದು

ಎನ್ನುತ್ತಾ ಎಲ್ಲಾ ಪ್ರೇಮಿಯೊಳಗೆ ಇರಬಹುದಾದ ಹುಚ್ಚು ಭಯ, ಹುಸಿಭರವಸೆಯನ್ನು ನಂಬುತ್ತಲೇ ಕವನ ಬರೆದಿದ್ದಾರೆ. ಸಂಕಲನದ ಒಂದೊಂದು ಕವನದಲ್ಲಿ ಪ್ರೇಮಿಯೊಬ್ಬನ ಆತಂಕ, ತುಮುಲ, ನಗು, ಕಲ್ಪನಾ ಲೋಕದ ವಿಲಾಸಿಯಾಗಿ ತೇಲುವುದು ಕಾಣಬಹುದು.

“ನನ್ನಮ್ಮ” ಕವನದಲ್ಲಿ ತನ್ನ ತಾಯಿ ಕಂಡ ಜೀವನದ ಬೇಗುಧಿಯ ಜೊತೆಗೆ ಬದುಕಿನ ಸಂಘರ್ಷದಲ್ಲಿ ಸೆಣೆಸುತ್ತ ಸಂತಸವ ಲೆಕ್ಕವನ್ನಿಟ್ಟು ಮಕ್ಕಳ ಭವಿಷ್ಯದ ಒಳಿತಿಗಾಗಿ ಕಾಯುವ ತಾಳ್ಮೆ ಎದ್ದು ತೋರುತ್ತದೆ.

ಮನೆಯ ಗುಬ್ಬಿಮರಿಗಳ
ಗಿಡುಗ ಕದ್ದೊಯ್ಯದಂತೆ
ಹದ್ದಾಗಿ ಕಾಯುತ್ತಿರುವುದನ್ನು ಕವಿಯ ಕಣ್ಣಂಚಿನಿಂದಲೆ ಎಲ್ಲವನ್ನೂ ಗ್ರಹಿಸಬಹುದಾಗಿದೆ.

ಪುಸ್ತಕದ ಮುಖಪುಟ ವಿನ್ಯಾಸ ಹಾಗೂ ಒಳಪುಟದಲ್ಲಿನ ಚಂದ್ರು ಕನಸು, ದಿವಾಕರ ಕೆನ್ ರವರ ರೇಖಾಚಿತ್ರ ಕಲೆಗಳು ಪುಸ್ತಕಕ್ಕೆ ಮತ್ತಷ್ಟು ಮೆರುಗನ್ನು ಹೆಚ್ಚಿಸಿದೆ. ತಮ್ಮ ಪ್ರಥಮ ಪ್ರಯತ್ನದಲ್ಲಿಯೇ ಕೃಷ್ಣಮೂರ್ತಿಯವರು ಕವಿತೆಗಳಿಂದ ಗೆದ್ದಿದ್ದಾರೆ. ಪ್ರೇಮಿಯೊಬ್ಬ ಕಾಪಿಟ್ಟುಕೊಳ್ಳಲೆ ಬೇಕಾದ ಪುಸ್ತಕವಾಗಿ ಹೊರಹೊಮ್ಮಲಿದೆ ಈ ಪುಸ್ತಕ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ರವಿ ಬೆಳಗೆರೆ – ಸಂತಾಪ ಸೂಚಿಸುವ ಮುನ್ನ..!

Published

on

  • ನಾ ದಿವಾಕರ

ರೋಚಕತೆ ಸೃಜನಶೀಲತೆಯನ್ನುಕೊಲ್ಲುತ್ತದೆ. ಅತಿಯಾದ ರೋಚಕತೆ ವೈಚಾರಿಕತೆಯನ್ನೂ ಕೊಲ್ಲುತ್ತದೆ. ಅಕ್ಷರ ಕೃಷಿಯಲ್ಲಿ ತೊಡಗಿರುವ ಪ್ರತಿಯೊಬ್ಬರೂ ಇದನ್ನು ನೆನಪಿಡಬೇಕು. ಲೇಖನವಾಗಲಿ, ಕಾವ್ಯವೇ ಆಗಲಿ ಅಥವಾ ಒಂದು ಕಥನವೇ ಆಗಲೀ ಅವಶ್ಯಕತೆಯನ್ನು ಮೀರಿದ ರೋಚಕತೆಯಿಂದ ತನ್ನ ಅಂತಃಸತ್ವವನ್ನು ಕಳೆದುಕೊಂಡುಬಿಡುತ್ತದೆ.

ಪತ್ರಿಕೋದ್ಯಮವನ್ನು ತಮ್ಮ ವೃತ್ತಿ ಮತ್ತು ಪ್ರವೃತ್ತಿಯನ್ನಾಗಿ ಸ್ವೀಕರಿಸುವವರು ಇದನ್ನು ಮನಗಾಣದೆ ಹೋದರೆ ಏನಾಗುತ್ತದೆ ? ತಮ್ಮ ಬರವಣಿಗೆಯಿಂದಲೇ ಕರ್ನಾಟಕದಲ್ಲಿ ತಮ್ಮದೇ ಆದ ಪ್ರಭಾವಳಿಯನ್ನು ನಿರ್ಮಿಸಿಕೊಂಡು 25 ವರ್ಷಗಳ ನಿರಂತರ ಅಕ್ಷರ ಕೃಷಿ ನಡೆಸಿದ ರವಿಬೆಳಗೆರೆ ಈ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿ ಇಹಲೋಕ ತ್ಯಜಿಸಿದ್ದಾರೆ.

ಸಂತಾಪ ಸೂಚಿಸಲೂ ಹಿಂಜರಿಯುವಂತಹ ಮನಸುಗಳು ರವಿ ಬೆಳಗೆರೆಯವರ ಪತ್ರಿಕೋದ್ಯಮ ಸೃಷ್ಟಿಸಿದೆ, ಹಾಗೆಯೇ ಆರಾಧಿಸುವ ಮನಸುಗಳನ್ನೂ ಸೃಷ್ಟಿಸಿದೆ. ಇದು ವ್ಯಕ್ತಿಗತ ಅಭಿವ್ಯಕ್ತಿಗೆ ಸಂಬಂಧಿಸಿದ ವಿಚಾರ. ಸೈದ್ದಾಂತಿಕವಾಗಿ, ತಾತ್ವಿಕವಾಗಿ ರವಿಯ ಯಾವ ಸ್ವರೂಪವನ್ನೂ ಒಪ್ಪದವರೂ ಸಹ, ಅವರೊಡಗಿನ ಸುದೀರ್ಘ ಒಡನಾಟ ಮತ್ತು ಸ್ನೇಹದ ಹಿನ್ನೆಲೆಯಲ್ಲಿ ಅಗಲಿದ ಗೆಳೆಯನಿಗೆ ಭಾವಪೂರ್ಣ ಸಂತಾಪಗಳನ್ನು, ಕೆಲವು ಹೊಗಳಿಕೆಯ ಮಾತುಗಳೊಂದಿಗೆ ಹೇಳಿರುವುದೂ ಸಹ ಸಾಮಾಜಿಕ ತಾಣಗಳಲ್ಲಿ ಟೀಕೆ, ವಿಮರ್ಶೆಗೊಳಗಾಗಿದೆ.

ನಾವು ರವಿ ಬೆಳಗೆರೆಯವರನ್ನು ಒಬ್ಬ ವ್ಯಕ್ತಿಯಾಗಿ ನೋಡುವುದೇ ಬೇರೆ, ಮಾಧ್ಯಮ ಪ್ರತಿನಿಧಿಯಾಗಿ ನೋಡುವ ದೃಷ್ಟಿಯೇ ಬೇರೆಯಾಗಿದ್ದರೆ ಅಡ್ಡಿಯೇನಿಲ್ಲ. ಅದ್ಭುತ ಮಾತುಗಾರ, ಮೋಡಿ ಮಾಡುವಂತಹ ಸ್ನೇಹಮಯಿ, ಉತ್ತಮ ವಾಗ್ಮಿ ಮುಂತಾದ ಗುಣವಿಶೇಷಣಗಳ ನಡುವೆಯೇ ಮಾಧ್ಯಮ ಲೋಕದ ನೆಲೆಯಲ್ಲಿ ರವಿಬೆಳಗೆರೆಯನ್ನು ನಿಲ್ಲಿಸಿದಾಗ, ಅವರು ಅಪರಾಧಿಯಂತೆ ಕಟಕಟೆಯಲ್ಲಿ ನಿಲ್ಲಲೇಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ.

ಸಹಜವಾಗಿಯೇ ಹಾಯ್ ಬೆಂಗಳೂರು ಪತ್ರಿಕೆಯನ್ನು ಲಂಕೇಶ್ ಪತ್ರಿಕೆಗೆ ಮುಖಾಮುಖಿಯಾಗಿಸಿ ವಿಮರ್ಶೆಗೆ ಒಳಪಡಿಸಲಾಗುತ್ತದೆ. ಲಂಕೇಶ್ ಪತ್ರಿಕೆ ಕನ್ನಡದಲ್ಲಿ ಟ್ಯಾಬ್ಲಾಯ್ಡ್ ಪತ್ರಿಕೆಗೆ ಚಾಲನೆ ನೀಡಿದ್ದಷ್ಟೇ ಅಲ್ಲ, ಒಂದು ಸುದ್ದಿಪತ್ರಿಕೆಯ ಸಾಮಾಜಿಕ, ಸಾಂಸ್ಕೃತಿಕ ಮತ್ತುರಾಜಕೀಯ ಜವಾಬ್ದಾರಿಗಳನ್ನೂ ಅರಿತು ಹೆಜ್ಜೆ ಇಟ್ಟಿತ್ತು. ಲಂಕೇಶ್ ಪತ್ರಿಕೆ ಆರಂಭವಾದ ಕಾಲಘಟ್ಟದಲ್ಲಿ ನಾಗರಿಕ ಸಮಾಜದ ಸಾಮಾಜಿಕ ಕಳಕಳಿ, ಕಾಳಜಿ ಮತ್ತು ಸಾಂಸ್ಕೃತಿಕ ಒಳತೋಟಿಗಳು ಸಂಘರ್ಷದ ಪರಾಕಾಷ್ಠೆಯನ್ನು ತಲುಪಿದ್ದವು. ಜನಾಂದೋಲನಗಳು ಪರಿಪಕ್ವವಾಗಿ ನಂತರ ತನ್ನದೇ ಆದ ಸಮಸ್ಯೆಗಳಿಂದ ಕೆಲ ಕಾಲ ನೇಪಥ್ಯಕ್ಕೆ ಸರಿಯುವ ಒಂದು ಕಾಲಘಟ್ಟದಲ್ಲಿ ಲಂಕೇಶ್ ತಮ್ಮ ಪತ್ರಿಕೆಯ ಮೂಲಕ ಸಮಾಜೋ ಸಾಂಸ್ಕೃತಿಕ ಸಂವಾದ ಮತ್ತು ಸಂಕಥನಗಳಿಗೆ ಅವಕಾಶ ಕಲ್ಪಿಸಿದ್ದರು.

ಹಾಗಾಗಿ ಲಂಕೇಶ್ ಪತ್ರಿಕೆಯ ಓದುಗರ ಬಳಗ ವಿಶಿಷ್ಟವಾಗಿತ್ತು. ಆಗ ತಾನೇ ತಮ್ಮ ಸಾಮಾಜಿಕ ನೆಲೆ ಕಂಡುಕೊಳ್ಳುತ್ತಿದ್ದ ಆದರೆ ಪ್ರಭುತ್ವದೊಡನೆ ಸದಾ ಸಂಘರ್ಷದಲ್ಲಿರುವ ಅನಿವಾರ್ಯತೆಯನ್ನು ಎದುರಿಸುತ್ತಿದ್ದ ಒಂದು ಯುವ ಸಮುದಾಯಕ್ಕೆ ಭಾರತೀಯ ಸಮಾಜದಲ್ಲಿನ ಒಳನೋಟಗಳನ್ನು ಪರಿಚಯಿಸುವುದು ಮತ್ತು ಸಾರ್ವಜನಿಕ ಚರ್ಚೆಗೆ ಒಳಪಡಿಸುವುದು ಲಂಕೇಶರ ಗುರಿಯಾಗಿತ್ತು. ಹಾಗಾಗಿ ಸಾಂಪ್ರದಾಯಿಕ ಪತ್ರಿಕೋದ್ಯಮದಿಂದ ಭಿನ್ನವಾಗಿ ತಮ್ಮದೇ ಆದ ಮಾಧ್ಯಮ ಪರಿಭಾಷೆಯನ್ನು ಸೃಷ್ಟಿಸಿಕೊಂಡ ಲಂಕೇಶ್ ಅಂದಿನ ಯುವ ಪೀಳಿಗೆಯನ್ನು ಮತ್ತು ಹೋರಾಟ ನಿರತ ಜನತೆಯನ್ನು ಆಕರ್ಷಿಸಿದ್ದರು.

ಆದರೆ ರವಿ ಬೆಳಗೆರೆಯನ್ನು ಲಂಕೇಶರಿಗೆ ಮುಖಾಮುಖಿಯಾಗಿಸುವ ಮುನ್ನ ನಾವು ಯೋಚಿಸಬೇಕಿರುವುದು, ಲಂಕೇಶರ ಕಾಲಘಟ್ಟದ ಸಮಾಜೋ ಸಾಂಸ್ಕೃತಿಕ ಮತ್ತು ರಾಜಕೀಯ ಪಲ್ಲಟಗಳು. ಈ ಬೆಳವಣಿಗೆಗಳಿಗೆ ಸ್ಪಂದಿಸುವುದಷ್ಟೇ ಅಲ್ಲದೆ ಯುವ ಪೀಳಿಗೆಯಲ್ಲಿ ವಿಭಿನ್ನ ದೃಷ್ಟಿಕೋನವನ್ನು ಬಿತ್ತುವ ಕೆಲಸವನ್ನು ಲಂಕೇಶ್ ಮಾಡಿದ್ದು ಸ್ಪಷ್ಟ. ಈ ಕುರಿತು ಪ್ರಸ್ತುತ ಲೇಖನದಲ್ಲಿ ಹೆಚ್ಚಿನ ಸಂವಾದದ ಅವಶ್ಯಕತೆ ಇಲ್ಲ ಎಂದೆಣಿಸುತ್ತೇನೆ.

ಆದರೆ ರವಿಬೆಳಗೆರೆ 1995ರಲ್ಲಿ ತಮ್ಮ ಹಾಯ್ ಬೆಂಗಳೂರು ಪತ್ರಿಕೆಯನ್ನು ಆರಂಭಿಸಿದ ಸಂದರ್ಭವನ್ನೂ ಗಮನಿಸಬೇಕಾಗುತ್ತದೆ. 1989-90ರ ಸಾಂಸ್ಕೃತಿಕ ರಾಜಕಾರಣ, ಕಾಶ್ಮೀರ ಸಮಸ್ಯೆಯ ಉಲ್ಬಣ, ಮತೀಯ ರಾಜಕಾರಣ ಮತ್ತು ಜಾತಿ ರಾಜಕಾರಣದ ಗಟ್ಟಿ ನೆಲೆಗಳು , ಕ್ಷೀಣಿಸುತ್ತಿದ್ದ ಜನಾಂದೋಲನಗಳು ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ನವ ಉದಾರವಾದ ಮತ್ತು ಜಾಗತೀಕರಣ ಸೃಷ್ಟಿಸಿದ್ದ ಆಧುನಿಕೋತ್ತರ ಚಿಂತನೆಯ ನೆಲೆಗಳು ಒಂದು ಹೊಸ ಪೀಳಿಗೆಯ ದೃಷ್ಟಿಕೋನವನ್ನೇ ಬದಲಿಸುವ ನಿಟ್ಟಿನಲ್ಲಿ ಮುನ್ನಡೆದಿದ್ದವು.

ಆ ವೇಳೆಗಾಗಲೇ ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿಯನ್ನೂ ಸೇರಿದಂತೆ ಬಹಳಷ್ಟು ಜನಾಂದೋಲನಗಳು ವಿಘಟನೆಯತ್ತ ಸಾಗುತ್ತಿದ್ದುದೇ ಅಲ್ಲದೆ, ಅಯೋಧ್ಯೆ-ರಾಮಮಂದಿರ-ಕಾಶ್ಮೀರ ಮತ್ತು ಭಯೋತ್ಪಾದನೆಯ ಚೌಕಟ್ಟಿನಲ್ಲಿ ಸಾಮಾಜಿಕ ಕಾಳಜಿ, ಕಳಕಳಿ ಮತ್ತು ಸಮ ಸಮಾಜದ ಪರಿಕಲ್ಪನೆಗಳು ಶಿಥಿಲವಾಗುತ್ತಿದ್ದವು. ಈ ಸಂದರ್ಭದಲ್ಲಿ ತಮ್ಮ ಪತ್ರಿಕೆ ಆರಂಭಿಸಿದ ರವಿ ಬೆಳಗೆರೆ ಇಂದು ನಾವು ಕಾಣುತ್ತಿರುವ ವಾಟ್ಸಪ್ ವಿಶ್ವವಿದ್ಯಾಲಯದ ಬೌದ್ಧಿಕ ವಲಯಕ್ಕೆ ಬುನಾದಿ ಹಾಕಿದ್ದನ್ನು ಅವರ ಪ್ರತಿಯೊಂದು ಸಂಚಿಕೆಯಲ್ಲೂ , ಇಂದಿಗೂ ಗುರುತಿಸಬಹುದು.

ರೋಚಕತೆಯನ್ನೇ ಪ್ರಧಾನವಾಗಿಸಿ, ಗಂಭೀರ ಸುದ್ದಿಯನ್ನೂ ರೋಮಾಂಚಕಾರಿಯಾಗಿ ಬಿತ್ತರಿಸುವುದು, ತಾತ್ವಿಕ ನೆಲೆಗಳಲ್ಲಿ ನಿಷ್ಕರ್ಷೆಗೊಳಪಡಬೇಕಾದ, ನಿರ್ವಚಿಸಬೇಕಾದ ಸಮಾಜೋ ಸಾಂಸ್ಕೃತಿಕ ಸಮಸ್ಯೆಗಳನ್ನು ಆಧುನಿಕೋತ್ತರ ನೆಲೆಗಳನ್ನೂ ಮೀರಿದ ನವ ಉದಾರವಾದದ ನೆಲೆಯಲ್ಲಿ ಪ್ರಸ್ತುತಪಡಿಸುವುದು ರವಿ ಬೆಳಗೆರೆಯವ ಅಜೆಂಡಾ ಆಗಿತ್ತು ಎನ್ನುವುದನ್ನು ಅಲ್ಲಗಳೆಯಲಾಗದು.

ಆ ದಶಕದಲ್ಲಿ ಬಿತ್ತಲಾದ ಭಾರತದ ಸಾಂಸ್ಕೃತಿಕ ರಾಜಕಾರಣದ ಬೀಜಗಳು ಇಂದು ಫಲ ನೀಡುತ್ತಿದ್ದರೆ ಅದಕ್ಕೆ ರವಿಬೆಳಗೆರೆಯವರಂತಹ ಪತ್ರಿಕೋದ್ಯಮಿಗಳ ಕೊಡುಗೆಯೂ ಇದೆ ಎನ್ನುವುದನ್ನು ಒಪ್ಪಲೇಬೇಕಾಗುತ್ತದೆ. ಹಾಗಾಗಿಯೇ ಹಾಯ್ ಬೆಂಗಳೂರು ಪತ್ರಿಕೆ ವಿಕೃತ ಪರಿಭಾಷೆಯನ್ನೂ ತನ್ನದಾಗಿಸಿಕೊಂಡಿತ್ತು. ಇಲ್ಲಿ ರವಿ ಬೆಳಗೆರೆಯವರಿಗೆ ರೋಚಕತೆ ಮುಖ್ಯವಾಗಿತ್ತು. ಒಂದು ಇಡೀ ಪೀಳಿಗೆಯನ್ನು ಸಾಮಾಜಿಕ ಕಳಕಳಿಯುಳ್ಳ ಹೋರಾಟ, ಸಂಘರ್ಷದಿಂದ ವಿಮುಖರಾಗಿಸುವ ಸಮಾಜೋ ಸಾಂಸ್ಕೃತಿಕ ಮತ್ತು ರಾಜಕೀಯ ಪ್ರಯತ್ನಗಳಿಗೆ ತಮ್ಮ ಪತ್ರಿಕೆಯ ಮೂಲಕ ಸ್ಪಷ್ಟ ನೆಲೆ ಒದಗಿಸಿದ್ದು ರವಿ ಬೆಳಗೆರೆಯವರ ಸಾಧನೆ(?) ಎನ್ನಬಹುದೇನೋ.

ಹಾಗಾಗಿಯೇ ಅವರ ಭಾಷಾ ಪ್ರೌಢಿಮೆ ಮತ್ತು ವಾಕ್ ಪಟುತ್ವ ಸೃಜನಶೀಲತೆಯನ್ನು ಕಳೆದುಕೊಂಡು, ಸಂವೇದನಾಶೀಲತೆಯನ್ನೂ ಕಳೆದುಕೊಂಡು ಬೆತ್ತಲಾಗಿಬಿಟ್ಟಿತ್ತು. ಲಂಕೇಶರ ಟೀಕೆ ಟಿಪ್ಪಣಿಗೂ, ರವಿಬೆಳಗೆರೆಯ ಖಾಸ್ ಬಾತ್ ಗೂ ಇರುವ ವ್ಯತ್ಯಾಸವನ್ನು ಇಲ್ಲಿ ಗುರುತಿಸಬೇಕಾದ ಅನಿವಾರ್ಯತೆಯೂ ನಮಗಿದೆ. ಏಕೆಂದರೆ ಪತ್ರಿಕೋದ್ಯಮ ದೇಶದ ಸಾಮಾಜಿಕ-ಸಾಂಸ್ಕೃತಿಕ ಮತ್ತು ರಾಜಕೀಯ ಪಲ್ಲಟಗಳ ನಡುವೆಯೇ ಬೆಳೆಯುವ, ಬೆಳೆಯಬೇಕಾದ ಒಂದು ಮಾರ್ಗ. ಕನ್ನಡದ ಇಂದಿನ ಟಿವಿ ವಾಹಿನಿಗಳು ಮತ್ತು ಸುದ್ದಿಮನೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ರವಿ ಬೆಳಗೆರೆ ಮತ್ತು ಅವರ ಹಾಯ್ ಬೆಂಗಳೂರು ಈ ವಾಹಿನಿಗಳ ಪಾಲಿಗೆ ದ್ರೋಣಾಚಾರ್ಯರಂತೆ ಕಾಣಬಹುದು.

ಈ ಚೌಕಟ್ಟಿನಿಂದಾಚೆಗೆ ರವಿ ಹೊರಬರಲೇ ಇಲ್ಲ ಎನ್ನುವುದನ್ನು ಅವರ ಹಲವು ಕಾದಂಬರಿಗಳಲ್ಲೂ ಗುರುತಿಸಬಹುದು. ಭಾರತದಲ್ಲಿ ನೆಲೆಯೂರುತ್ತಿದ್ದ ಮತಾಂಧ ರಾಜಕಾರಣ ಮತ್ತು ಸಾಂಸ್ಕೃತಿಕ ರಾಜಕಾರಣದ ಬಹುಸಂಖ್ಯಾವಾದಕ್ಕೆ ಪೂರಕವಾಗಿಯೇ ತಮ್ಮ ಆಲೋಚನಾ ಕ್ರಮವನ್ನೂ ರೂಪಿಸಿಕೊಂಡಿದ್ದ ರವಿ ಬೆಳಗೆರೆ ತಮ್ಮ ಪತ್ರಿಕೆಗಳಲ್ಲಿ ಆಡಳಿತಾರೂಢ ಪಕ್ಷ ರಾಜಕಾರಣವನ್ನು ವಿಮರ್ಶಾತ್ಮಕವಾಗಿ ನೋಡಿದರೂ, ಪ್ರಭುತ್ವದ ಧೋರಣೆಯನ್ನು ಎಂದಿಗೂ ಪ್ರಶ್ನಿಸಿದಂತಿಲ್ಲ. ಶಿಥಿಲವಾಗಿದ್ದರೂ ತಮ್ಮ ಹೋರಾಟದ ನೆಲೆಗಳನ್ನು ವಿಸ್ತರಿಸುತ್ತಲೇ ನವ ಉದಾರವಾದ ಮತ್ತು ಮತೀಯ ರಾಜಕಾರಣದ ವಿರುದ್ಧ ಸಂಘರ್ಷದಲ್ಲಿ ತೊಡಗಿದ್ದ ಜನಸಮುದಾಯಗಳಿಗೆ ಹಾಯ್ ಬೆಂಗಳೂರು ಪತ್ರಿಕೆ ಒಂದು ಅಂಗುಲದಷ್ಟು ಜಾಗವನ್ನೂ ನೀಡಲಿಲ್ಲ.

ಹಾಗಾಗಿಯೇ ತಮ್ಮ ಕೃತಿಗಳಲ್ಲೂ ರವಿ ಬೆಳಗೆರೆ ಅಂದಿನ-ಇಂದಿನ ಸಾಂಸ್ಕೃತಿಕ ರಾಜಕಾರಣದ ಪ್ರವರ್ತಕರಾಗಿ ಕಾಣುತ್ತಾರೆಯೇ ಹೊರತು ಓರ್ವ ಪತ್ರಕರ್ತರಾಗಿ ಕಾಣುವುದಿಲ್ಲ. ಅವರು ಬಳಸಿದ ಪರಿಭಾಷೆಯೂ ಸಹ ಜನಸಾಮಾನ್ಯರಲ್ಲಿರುವ ಕನಿಷ್ಟ ಸಮೂಹ ಪ್ರಜ್ಞೆಯನ್ನು ಶಿಥಿಲಗೊಳಿಸುವ ನಿಟ್ಟಿನಲ್ಲೇ ರಚನೆಯಾಗಿದ್ದನ್ನೂ ಗಮನಿಸಬೇಕು. 1995ರ ನಂತರದಲ್ಲಿ ಮತ್ತು ಅದಕ್ಕೂ ಮುನ್ನ ಕರ್ನಾಟಕದಾದ್ಯಂತ ಆರಂಭವಾದ ಅನೇಕ ಟ್ಯಾಬ್ಲಾಯ್ಡ್ ಪತ್ರಿಕೆಗಳಿಗೆ ಲಂಕೇಶರಿಗಿಂತಲೂ ರವಿ ಬೆಳಗೆರೆ ಮಾದರಿಯಾಗಿದ್ದು ನಮ್ಮ ದುರಂತ. ಆದರೆ ಇದು ವಾಸ್ತವ.

ಆದ್ದರಿಂದಲೇ ಒಂದು ಪೀಳಿಗೆಯ ಬರಹಗಾರರು, ಯುವ ಹೋರಾಟಗಾರರು ಸಾಮಾಜಿಕ ತಾಣಗಳಲ್ಲಿ ರವಿ ಬೆಳಗೆರೆ ವಿರುದ್ಧತಮ್ಮ ಸಿಟ್ಟು, ಆಕ್ರೋಶ ಮತ್ತು ಪ್ರತಿರೋಧವನ್ನು ಹೊರಗೆಡಹುತ್ತಿದ್ದಾರೆ. ಸಾಂಸ್ಕೃತಿಕ ರಾಜಕಾರಣ ಮತ್ತು ಮತಾಂಧತೆ, ಇಸ್ಲಾಂ ವಿರೋಧಿ ಧೋರಣೆ ಮತ್ತು ಜಾತಿ ಶ್ರೇಷ್ಠತೆಯ ವಿರುದ್ಧ, ದಲಿತ ಸಮುದಾಯಗಳು ಎದುರಿಸುತ್ತಿರುವ ದೌರ್ಜನ್ಯಗಳ ವಿರುದ್ಧ ಹೋರಾಟದಲ್ಲಿ ತೊಡಗಿರುವ ಯುವ ಮನಸುಗಳಿಗೆ ರವಿಬೆಳಗೆರೆ ಓರ್ವ ಖಳನಾಯಕನಂತೆ ಕಂಡುಬಂದರೆ ಅಚ್ಚರಿಯೇನಿಲ್ಲ.

ಪತ್ರಿಕೋದ್ಯಮ ಮತ್ತು ಮಾಧ್ಯಮ ವಲಯ ಪ್ರಭುತ್ವದ ಬಾಲಂಗೋಚಿಗಳಂತೆ ಕಾರ್ಯ ನಿರ್ವಹಿಸುತ್ತಾ ಅವಕಾಶವಂಚಿತ, ಶೋಷಿತ ಸಮುದಾಯಗಳಿಗೆ ವಿಮುಖವಾಗುತ್ತಿರುವ ಸಂದರ್ಭದಲ್ಲಿ ಈ ಆಕ್ರೋಶ ಸಹಜವಾದದ್ದು. ಕರ್ನಾಟಕದ ಮಟ್ಟಿಗೆ ವಿದ್ಯುನ್ಮಾನ ಮಾಧ್ಯಮವನ್ನೂ ಸೇರಿದಂತೆ ಪತ್ರಿಕೋದ್ಯಮ ಇಂದು ಸಮಾಜಮುಖಿ-ಜನಮುಖಿ ಯುವಪೀಳಿಗೆಗೆ ಯಾವುದೇ ರೀತಿಯಲ್ಲೂ ಸಹಾಯಕವಾಗುತ್ತಿಲ್ಲ, ಮಾದರಿಯಾಗುವುದು ಸಾಧ್ಯವೂ ಇಲ್ಲ.

ಈ ವಿಕೃತ ಪರಂಪರೆಗೆ ಬುನಾದಿ ಹಾಕಿದವರಲ್ಲಿ ರವಿ ಬೆಳಗೆರೆ ಪ್ರಮುಖರು. ಬಹುಶಃ 1990ರ ದಶಕದ ಸಮಾಜೋ ಸಾಂಸ್ಕೃತಿಕ ಹಾಗೂ ರಾಜಕೀಯ ನೆಲೆಗಳೇ ಹಾಯ್ ಬೆಂಗಳೂರ್ ನಂತಹ ಪತ್ರಿಕೆಯನ್ನು, ರವಿ ಬೆಳಗೆರೆಯಂತಹ ಪತ್ರಿಕೋದ್ಯಮಿಯನ್ನು ಹುಟ್ಟುಹಾಕಿತ್ತು ಎನಿಸುತ್ತದೆ. ಒಬ್ಬ ವ್ಯಕ್ತಿಯಾಗಿ ರವಿ ಬೆಳಗೆರೆಯವರ ಸಾವಿಗೆ ಸಂತಾಪ ಸೂಚಿಸುತ್ತಲೇ ಒಬ್ಬ ಪತ್ರಿಕೋದ್ಯಮಿಯಾಗಿ ಅವರಲ್ಲಿ ಅಡಗಿದ್ದ ವಿಕೃತಿಗಳನ್ನು, ವಿಸ್ಮೃತಿಗಳನ್ನು ಹೊರಹಾಕಲು ಮುಂದಾಗಿರುವ ಯುವ ಮನಸುಗಳಿಗೆ ನಾವು ಸ್ಪಂದಿಸಬೇಕಾಗುತ್ತದೆ.

ರವಿ ಸರ್ ಹೋಗಿ ಬನ್ನಿ, ಬಂದರೂ ನಿಮ್ಮೊಳಗಿದ್ದ ಪತ್ರಿಕೋದ್ಯಮಿಯನ್ನು ಕಳಚಿಹಾಕಿ ಬನ್ನಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಅದೊಂದು ತಪ್ಪು ಮಾಡಿ ಮೆಟ್ಟು ಹೊತ್ತೆ ಅಂದಿದ್ದರು ರವಿ ಬೆಳಗೆರೆ..!

Published

on

  • ದೇಶಾದ್ರಿ ಹೊಸ್ಮನೆ, ಪತ್ರಕರ್ತರು

ಪತ್ರಕರ್ತ ರವಿ ಬೆಳಗೆರೆ ಈಗಿಲ್ಲ. ಆದರೆ ಅವರು ಪತ್ರಕರ್ತರಾಗಿ‌ ಮಾಡಿದ ಯಡವಟ್ಟುಗಳಲ್ಲಿ ನಟಿ ರೂಪಿಣಿ ಪ್ರಕರಣವೂ ಒಂದು. ಇದು ಆಕಸ್ಮಿಕವೋ, ಉದ್ದೇಶ ಪೂರ್ವಕವೋ, ಅಚಾತುರ್ಯವೋ ,ಗೊತ್ತಿಲ್ಲ.
ಆದರೆ ‘ಹಾಯ್ ಬೆಂಗಳೂರ್ ‘ಪತ್ರಿಕೆಯ ಮೂರು‌ ಪುಟಗಳಲ್ಲಿ ಮುದ್ರಣಗೊಂಡಿದ್ದ ರೂಪಿಣಿ ಕುರಿತ ಒಂದು ವರದಿ ದೊಡ್ಡ ತಲ್ಲಣ ಎಬ್ಬಿಸಿತು.ಕೊನೆಗೆ ರವಿ ಬೆಳಗೆರೆಯವರೇ ಸಾರಿ‌ಕೇಳಿ, ಮಾಡಿದ ತಪ್ಪಿಗೆ ಸಮಜಾಯಿಷಿ ನೀಡಬೇಕಾಗಿ ಬಂತು.

ರವಿ ಬೆಳೆಗೆರೆ ಹಾಗೇನೋ‌ ಮಾಡಿದರೂ ಸರಿ, ಆದರೆ ಆ ಪ್ರಕರಣದಲ್ಲಿ‌ ಒಂದೆಡೆ ರೂಪಿಣಿ ಸಮಾಜದ ಮುಂದೆ‌ ಈರಸು- ಮುರುಸು ಅನುಭವಿಸಿದರು. ಮತ್ತೊಂಡೆ ‘ಹಾಯ್ ಬೆಂಗಳೂರ್’ ಪತ್ರಿಕೆಯ ವರದಿಗಳ ಕ್ರೆಡೆಬಿಲಿಟಿಯನ್ನೇ‌ ಕುಗ್ಗಿಸಿದ್ದು ಹೌದು. ಈ ಪ್ರಕರಣ ದೊಡ್ಡ ಚರ್ಚೆಯಲ್ಲಿ ದ್ದಾಗ ರವಿ ಬೆಳಗೆರೆ ಒಮ್ಮೆ ಶಿವಮೊಗ್ಗಕ್ಕೆ ಬಂದಿದ್ದರು.‌ ನಾನಾಗ‌ ಪದವಿ ವಿದ್ಯಾರ್ಥಿ. ಜತೆಗೆ ಎಚ್ಚರಿಕೆ ಪತ್ರಿಕೆಯ ವರದಿಗಾರ ಕೂಡ.‌

ಕಾರ್ಯಕ್ರಮದ ಡಿಟೈಲ್ಸ್ ಅಷ್ಟಾಗಿ ನೆನಪಿಲ್ಲ. ಒಟ್ಟಿನಲ್ಲಿ ಮೂರು ದಿವಸಗಳ‌ ಸೆಮಿನಾರ್ ಅದು. ಮೂರನೇ ದಿನ‌ರವಿ ಬೆಳಗೆರೆ ಬಂದಿದ್ದರು. ಅದಕ್ಕೂ ಮೊದಲು‌ ತರಂಗ ವಾರ ಪತ್ರಿಕೆಯ ಆಗಿನ‌ ಸಂಪಾದಕ ಸಂತೋಷ್ ಕುಮಾರ್ ಗುಲ್ವಾಡಿ ಸೇರಿ ಹಲವರು ಬಂದು ಹೋಗಿದ್ದರು. ಕೊನೆ ದಿನದ‌ ಮಾತು ರವಿ ಬೆಳಗೆರೆ ಅವರದು. ರವಿ ಬೆಳಗೆರೆ ಭಾಷಣ ಅಂದ್ರೆ ಭಾರೀ‌ ಜನ ಸೇರುತ್ತಿದ್ದ ದಿನಗಳವು. ಪತ್ರಕರ್ತರಾಗಿ ಅಷ್ಟೊಂದು ತಾರಾ ವರ್ಚಸು ಅವರಿಗಿದ್ದ. ದಿನಗಳು.ಕುವೆಂಪು ರಂಗ‌ಮಂದಿರದಲ್ಲಿ ಕಾರ್ಯಕ್ರಮ ಆಯೋಜನೆ ಗೊಂಡಿತ್ತು.‌

ಸಂಜೆ‌‌ ಸಮಯ ಬೇರೆ, ರಂಗ‌ಮಂದಿರ ಕಿಕ್ಕಿರಿದಿತ್ತು. ಪತ್ರಕರ್ತನಾಗಿದ್ದರಿಂದ ವೇದಿಕೆಯ ಮುಂಭಾಗದ ಕುರ್ಚಿ ಯಲ್ಲೇ ಕೂರುವ ಅವಕಾಶ ಸಿಕ್ಕಿತ್ತು. ರವಿ ಬೆಳಗೆರೆಯವರ ಭಾಷಣ ಮುಗಿದು, ಪ್ರಶೋತ್ತರ ಶುರುವಾದಾಗ, ನಾನು ಕೇಳಿದ ಮೊದಲ ಪ್ರಶ್ನೆಯೇ ರೂಪಿಣಿ ಪ್ರಕರಣಕ್ಕೆ ಸಂಬಂಧಿಸಿದ್ದು. ಹಾಯ್ ಬೆಂಗಳೂರ್ ನಾನು ಕುತೂಹಲದಿಂದ ನೋಡುವ ಪತ್ರಿಕೆ. ಆದರೆ ರೂಪಿಣಿ ಪ್ರಕರಣದಲ್ಲಿ ದೊಡ್ಡದೊಂದು ಸುಳ್ಳು ಸುದ್ದಿ‌ಬರೆಯಿತು.

ಕೊನೆಗೆ ಕ್ಷಮೆ ಯಾಚಿಸಬೇಕಾಗಿ ಬಂತು. ಇದು ಯಾಕೆ ಹೀಗಾಯ್ತು? ಪತ್ರಿಕೆಯ ಕ್ರೆಡೆಬಿಲಿಟಿ ಬಗ್ಗೆ ನೀವು ಯೋಚಿಸಿರಲಿಲ್ಲವೇ? ನಾನು ಕೇಳಿದ ಈ ಪ್ರಶ್ನೆ ಗೆ ಕಿಂಚಿತ್ತು ಸಿಟ್ಟಾಗದೆ, ಉತ್ತರ ನೀಡಲು ನಿರಾಕರಿಸದೆ ನಗುತ್ತಲೇ ಎದ್ದು ನಿಂತು ಮೈಕ್ ಹಿಡಿದರು ರವಿ ಬೆಳಗೆರೆ. ‘ ಹೌದು, ಇದೊಂದು ವಿಚಾರದಲ್ಲಿ‌ನಾನು ತಪ್ಪು ಮಾಡಿ ಮೆಟ್ಟು ಹೊತ್ತೆ’ ಎಂದಷ್ಟೇ ಹೇಳಿ ಸುಮ್ಮನಾದರು‌. ರವಿ ಬೆಳೆಗೆರೆ ಹಾಗೆ ಹೇಳಿದ್ದು ಅವರ ದೊಡ್ಡತನ. ಈಗ ಅವರಿಲ್ಲ. ಹೇಗಾದ್ರೂ ಹೇಳಬಹುದು.‌

ಆದರೆ ಮಾಡಿದ್ದ ತಪ್ಪನ್ನು ಅವರು ಕಿಕ್ಕಿರಿದ ಜನ‌ಸಮೂಹದ ಮುಂದೆಯೇ ಒಪ್ಪಿಕೊಂಡರು.‌ ಹಾಗಿದ್ದ ಕಾರಣಕ್ಕಾಗಿಯೇ ಅವರು ಅಷ್ಟು ಎತ್ತರಕ್ಕೆ ಬೆಳೆದರು. ಆ ಘಟನೆಯಾಚೆ ನಾನವರನ್ನು ಯಾವತ್ತಿಗೂ ಮುಖಾ‌ಮುಖಿ ಭೇಟಿ ಮಾಡಿದವನಲ್ಲ. ಶೃಂಗೇಶ್ ಪರಿಚಯದ ಕಾರಣಕ್ಕೆ ‘ಹಾಯ್ ಬೆಂಗಳೂರ್’ ಕುತೂಹಲದ ವಾರ ಪತ್ರಿಕೆ ಆಗಿತ್ತು. ಪತ್ರಕರ್ತನಾಗಿದ್ದ ಕಾರಣಕ್ಕೆ ಅದನ್ನು ಕೊಂಡು ಓದುವ ಅಭ್ಯಾಸವೂ‌ ಇತ್ತು.ಹೀಗಿದ್ದೂ ರವಿಬೆಳಗೆರೆಯವರ ಬರಹ, ಬದುಕು ಎರಡರ ಬಗ್ಗೆಯೂ ನನ್ನ ತಕಾರಾರು ಇತ್ತು.

ನಾನು ಎಡ ಚಿಂತನೆಯ ಚಳುವಳಿಯ ಪ್ರಭಾವದಲ್ಲಿದಿದ್ದು ಅದಕ್ಕೆ ಕಾರಣ. ಹೀಗಿದ್ದು ಅವರ ಬರವಣಿಗೆಯ ಶಕ್ತಿ ನನ್ನಲ್ಲಿ ಅತೀ ದೊಡ್ಡ ಅಚ್ವರಿಗೆ ಕಾರಣವಾಗಿತ್ತು.‌ ಇತ್ತೀಚೆಗಷ್ಟೇ ಅಂದರೆ ಕಳೆದ ವರ್ಷದ ಅವರು ಬಿಗ್ ಬಾಸ್ ಗೆ ಹೋಗಿ ಬಂದಿದ್ದ ಸಂದರ್ಭ ಕನ್ನಡ‌ಪ್ರಭಕ್ಕೆ ಸಂದರ್ಶನ ನಡೆಸುವ ಅವಕಾಶ ಬಂತು.‌ ಲೇಖಕ ಹಾಗೂ ಕನ್ನಡ ಪ್ರಭದ ಸಾಪ್ತಾಹಿಕ ಸಂಪಾದಕ ಜೋಗಿ ಸರ್ ಆ ಅವಕಾಶ ಕೊಟ್ಟಿದ್ದರು.‌ಅವರೊಂದಿಗೆ ಹೋಗಿ ಒಂದಷ್ಟು ಹೊತ್ತು ಹರಟೆ ಹೊಡೆದು ಬಂದಿದ್ದೆ. ನಾನು ಅವರನ್ನು ಭೇಟಿ‌ಮಾಡಿದ್ದು ಅದೇ ಮೊದಲು ಮತ್ತು ಕೊನೆ.ಈಗ ರವಿ‌ಬೆಳೆಗೆರೆ ಇನ್ನಿಲ್ಲ ಎನ್ನುವುದು ತೀರಾ ನೋವು ತಂದಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending