Connect with us

ದಿನದ ಸುದ್ದಿ

ಅಧ್ಯಕ್ಷ ಯಾರಾದರೇನ್ ಯುದ್ಧ ಸಂಸ್ಕೃತಿ ‘ಬಿಡೆನ್’..!

Published

on

  • ನಾ ದಿವಾಕರ

ಣಕಾಸು ಬಂಡವಾಳ ವ್ಯವಸ್ಥೆ ಮತ್ತು ನವ ಉದಾರವಾದದ ಪ್ರಪಂಚದಲ್ಲಿ ಪ್ರಜಾತಾಂತ್ರಿಕ ಚುನಾವಣೆಗಳು ಹೆಚ್ಚಿನ ಪ್ರಾಶಸ್ತ್ಯ, ಪ್ರಾಮುಖ್ಯತೆ ಪಡೆಯುತ್ತವೆ. ಸರ್ವಾಧಿಕಾರಿ ಆಡಳಿತ ಇರುವ ದೇಶಗಳಲ್ಲಿ ಈ ಪ್ರಶ್ನೆ ಉದ್ಭವಿಸುವುದಿಲ್ಲ.

ಆದರೆ ಪ್ರಜಾತಂತ್ರವನ್ನು ಒಪ್ಪಿಕೊಂಡಿರುವ ದೇಶಗಳಲ್ಲಿ ಚುನಾಯಿತವಾಗುವ ಸರ್ಕಾರಗಳು ಜಾಗತಿಕ ಬಂಡವಾಳ ಮತ್ತು ಮಾರುಕಟ್ಟೆಗೆ ಹೇಗೆ ಸ್ಪಂದಿಸುತ್ತವೆ ಎನ್ನುವ ಆತಂಕ ಭಾರತವನ್ನೂ ಸೇರಿದಂತೆ ಎಲ್ಲ ದೇಶಗಳಲ್ಲೂ ಕಂಡುಬರುತ್ತದೆ. ಕಾರಣ ಸ್ಪಷ್ಟ, ಸರ್ಕಾರ ಯಾವುದೇ ಜನವಿರೋಧಿ-ಬಂಡವಾಳಶಾಹಿ ಆರ್ಥಿಕ ನೀತಿಯನ್ನು ಜಾರಿಗೊಳಿಸಿದರೂ ಅದಕ್ಕೆ ಜನಮನ್ನಣೆ ಇದೆ ಎನ್ನುವ ಭ್ರಮೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇರುತ್ತದೆ. ಇಂದು ನವಂಬರ್ 8- ಅಮಾನ್ಯೀಕರಣದ ಕರಾಳ ಕ್ಷಣಗಳನ್ನು ನೆನೆಯುವ ದಿನ, 2016ರ ಈ ದಿನವೂ ಸಹ “ಜನಮನ್ನಣೆ”ಯ ನೆಲೆಯಲ್ಲೇ ಸ್ವೀಕೃತವಾಗಿದ್ದನ್ನು ಸ್ಮರಿಸಬಹುದು.

ಈಗ ಅಮೆರಿಕ ಅಧ್ಯಕ್ಷೀಯ ಚುನಾವಣೆ ಮುಗಿದಿದೆ. ಅಮೆರಿಕದ ಜನತೆ ರಿಪಬ್ಲಿಕನ್ ಟ್ರಂಪ್ ಅವರನ್ನು ತಿರಸ್ಕರಿಸಿ ಡೆಮಾಕ್ರಟ್ ಬಿಡನ್ ಅವರನ್ನು ಆಯ್ಕೆ ಮಾಡಿದ್ದಾರೆ. ಈ ಇಬ್ಬರು ನಾಯಕರ ನಡುವಿನ ಸ್ಪರ್ಧೆ ಅಮೆರಿಕದ ಜನತೆಯಲ್ಲಿ ಸೃಷ್ಟಿಸಿದ್ದಷ್ಟೇ ಆತಂಕ ಮತ್ತು ಕುತೂಹಲವನ್ನು ಭಾರತದ ಜನತೆಯಲ್ಲೂ ಸೃಷ್ಟಿಸಿತ್ತು. ಈ ಕುತೂಹಲಕ್ಕೆ ಎರಡು ಆಯಾಮಗಳಿವೆ.

ಭಾರತವನ್ನು ಆಳುತ್ತಿರುವ ಬಲಪಂಥೀಯರಿಗೆ, ಆಡಳಿತವನ್ನು ನಿಯಂತ್ರಿಸುತ್ತಿರುವ ಹಿಂದುತ್ವವಾದಿ-ಸಂಘಪರಿವಾರದವರಿಗೆ ಟ್ರಂಪ್ ಫ್ಯಾಸಿಸ್ಟ್ ಶಕ್ತಿಯ ಸಂಕೇತವಾಗಿ ಕಾಣುತ್ತಿದ್ದುದು ಸ್ಪಷ್ಟ. ಬಲಪಂಥೀಯವಾದ-ಮತಾಂಧತೆ-ಫ್ಯಾಸಿಸಂ ಮತ್ತು ನವ ಉದಾರವಾದ ಇವುಗಳ ಸಮ್ಮಿಲನ ಇಡೀ ವಿಶ್ವದ ಪ್ರಭುತ್ವ ನೆಲೆಗಳನ್ನು ಗಟ್ಟಿಗೊಳಿಸುತ್ತಿರುವ ಸಂದರ್ಭದಲ್ಲಿ ಟ್ರಂಪ್‍ನಂತಹ ದೊಡ್ಡಣ್ಣಗಳು ಸ್ವೀಕಾರಾರ್ಹರಾಗುತ್ತಾರೆ.

ಆದರೆ ಅಮೆರಿಕದ ಜನತೆ ಈ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಡೆಮಾಕ್ರಟ್ ಪಕ್ಷದ ಜೋ ಬಿಡೆನ್ ಅವರನ್ನು ಆಯ್ಕೆ ಮಾಡಿದ್ದಾರೆ. ಬಿಡೆನ್ ಆಯ್ಕೆಯಿಂದ ಅಮೆರಿಕದ ಆಂತರಿಕ ಆಡಳಿತ ವ್ಯವಸ್ಥೆಯಲ್ಲಿ ಕೊಂಚ ಬದಲಾವಣೆಗಳನ್ನು ಕಾಣಬಹುದು. ಟ್ರಂಪ್ ಸೋತಿದ್ದರೂ ಆಡಳಿತ ನೀತಿಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಪ್ರಾಶಸ್ತ್ಯ ಪಡೆಯುವ ಸೆನೇಟ್‍ಗಳಲ್ಲಿ ರಿಪಬ್ಲಿಕನ್ ಪಕ್ಷ ಈಗಲೂ ಬಲಿಷ್ಟವಾಗಿದೆ. ಭಾರತದಲ್ಲಿನ ಒಂದು ವರ್ಗದ ಜನತೆಗೆ ಬಿಡೆನ್ ಸ್ವೀಕಾರಾರ್ಹವಾಗುತ್ತಾರೆ.

ಇದಕ್ಕೆ ಕಾರಣ ಬಿಡೆನ್ ಆಯ್ಕೆಯಿಂದ ಯಾವುದೇ ಮಹತ್ತರ ಬದಲಾವಣೆಯಾಗುತ್ತದೆ, ಭಾರತಕ್ಕೆ ಒಳಿತಾಗುತ್ತದೆ ಎನ್ನುವುದಲ್ಲ. ಟ್ರಂಪ್‍ನ ಮಹಿಳಾ ವಿರೋಧಿ, ಇಸ್ಲಾಂ ವಿರೋಧಿ, ಜನಾಂಗೀಯ ದ್ವೇಷ ಧೋರಣೆಗಳು ಕೊನೆಗೊಳ್ಳಬಹುದು ಎನ್ನುವ ಒಂದು ನಂಬಿಕೆಯಷ್ಟೆ. ಈ ನಿರೀಕ್ಷೆಗಳು ಕೊಂಚಮಟ್ಟಿಗೆ ಸಹಜ ಎನಿಸಿದರೂ, ಕಳೆದ ಐದು ದಶಕಗಳ ಅಮೆರಿಕದ ರಾಜಕಾರಣವನ್ನು ಗಮನಿಸಿದರೆ ಇದು ಹುಸಿ ನಿರೀಕ್ಷೆಯಾಗುವ ಸಾಧ್ಯತೆಗಳೇ ಹೆಚ್ಚು.

ಏಕೆಂದರೆ ಅಮೆರಿಕ ಸೃಷ್ಟಿಸಿರುವ ಇಸ್ಲಾಮಿಕ್ ಭಯೋತ್ಪಾದನೆ ಎಂಬ ಪೆಡಂಭೂತ ಒಂದು ಪಕ್ಷದ ಸೃಷ್ಟಿಯಲ್ಲ , ಇದು ಸಾಮ್ರಾಜ್ಯಶಾಹಿ ವ್ಯವಸ್ಥೆ ತನ್ನ ನೆಲೆಯನ್ನು ಗಟ್ಟಿಗೊಳಿಸಿಕೊಳ್ಳಲು ಸೃಷ್ಟಿಸಿರುವ ಒಂದು ವಿದ್ಯಮಾನ. ಅದಕ್ಕೆ ಬಲಿಯಾಗಿರುವುದು ಇತರ ರಾಷ್ಟ್ರಗಳೇ ಹೊರತು ಅಮೆರಿಕ ಅಲ್ಲ. 9/11ರ ಒಂದು ಸಂದರ್ಭವನ್ನು ಬಿಟ್ಟರೆ ಅಮೆರಿಕ ಭಯೋತ್ಪಾದಕ ದಾಳಿಗಳಿಗೆ ತುತ್ತಾಗಿಲ್ಲ. ಆದರೆ ಅಮೆರಿಕದ ಸಾಮ್ರಾಜ್ಯಶಾಹಿ ದಾಹಕ್ಕೆ ಭಯೋತ್ಪಾದನೆ ಒಂದು ಪ್ರಬಲ ಅಸ್ತ್ರವಾಗಿ ಇತರ ರಾಷ್ಟ್ರಗಳ ಅಸಂಖ್ಯಾತ ಜನರ ಜೀವಹರಣ ಮಾಡಿದೆ. ಮತ್ತೊಂದೆಡೆ ಅಮೆರಿಕದ ಕಪ್ಪು ಜನಾಂಗದ ಜನರ ಮೇಲಿನ ದೌರ್ಜನ್ಯಗಳೂ ಸಹ ಯಾವುದೋ ಒಂದು ರೀತಿಯಲ್ಲಿ ನಡೆಯುತ್ತಲೇ ಇದೆ.

ಇತ್ತೀಚಿನ ಫ್ಲಾಯ್ಡ್ ಘಟನೆಯ ನಂತರ ನಡೆದ ಬ್ಲಾಕ್ ಲೈಫ್ ಮ್ಯಾಟರ್ಸ್ ಆಂದೋಲನ ಟ್ರಂಪ್ ಅವರ ಸೋಲಿಗೆ ಎಷ್ಟರ ಮಟ್ಟಿಗೆ ಕಾರಣವಾಗಿದೆ ಎಂದು ಸ್ಪಷ್ಟವಾಗಿಲ್ಲ. ಮಹಿಳೆಯರ ಬಗ್ಗೆ ತುಚ್ಚವಾಗಿ ಮಾತನಾಡಿ ಮಹಿಳಾ ಆಂದೋಲನಗಳ ಕೆಂಗಣ್ಣಿಗೆ ಗುರಿಯಾಗಿದ್ದ ಟ್ರಂಪ್‍ಗೆ ಅನೇಕ ರಾಜ್ಯಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಿದ್ದಾರೆ.

ಕಪ್ಪು ಜನಾಂಗದವರೂ ಸಹ ಹೆಚ್ಚಿನ ಬೆಂಬಲ ನೀಡಿದ್ದಾರೆ. ಆದಾಗ್ಯೂ ಟ್ರಂಪ್ ಈ ಬಾರಿ ನಿರೀಕ್ಷೆಗೂ ಮೀರಿ ಸೋಲನುಭವಿಸಿದ್ದರೆ ಅದಕ್ಕೆ ಕಾರಣ ಅವರ ದ್ವೇಷ ರಾಜಕಾರಣ, ಬಿಳಿಯರ ಶ್ರೇಷ್ಠತೆ ಮತ್ತು ಪಾರಮ್ಯವನ್ನು ಮೆರೆಯುವ ಅಹಮಿಕೆ, ಇಸ್ಲಾಂ ವಿರೋಧಿ ಧೋರಣೆ ಮತ್ತು ಗೊಂದಲಯ ವಿದೇಶಾಂಗ ನೀತಿ. ಕೊರೋನಾ ನಿಯಂತ್ರಣದಲ್ಲಿ ವಿಫಲವಾಗಿರುವುದೂ ಒಂದು ಕಾರಣ ಎನ್ನಲಾಗುತ್ತಿದೆ.

ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಅಮೆರಿಕ ಹೆಚ್ಚಿನ ಯುದ್ಧಗಳಲ್ಲಿ ತೊಡಗಿಲ್ಲ ಎನ್ನುವ ಪ್ರಶಂಸೆಯ ಮಾತುಗಳು ಸಹ ಕೇಳಿಬರುತ್ತಿವೆ. ಭಾರತದಲ್ಲೂ ಕೆಲವು ವಿಶ್ಲೇಷಕರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ 2017ರ ಜನವರಿಯಲ್ಲಿ ಅಧಿಕಾರಕ್ಕೆ ಬರುವ ಮುನ್ನ ಮಧ್ಯಪ್ರಾಚ್ಯ ದೇಶಗಳಿಂದ ಸೇನೆಯನ್ನು ಹಿಂಪಡೆಯುವ ಆಶ್ವಾಸನೆ ನೀಡಿದ್ದ ಟ್ರಂಪ್ ಸಿರಿಯಾ ಮೇಲೆ 52 ಬಾರಿ ಕ್ಷಿಪಣಿ ದಾಳಿ ನಡೆಸಿದ್ದಾರೆ. ವೆನೆಜುವೆಲಾದಲ್ಲಿ ಕ್ಷಿಪ್ರ ಕ್ರಾಂತಿಗೆ ಪ್ರಯತ್ನಿಸಿ ವಿಫಲವಾಗಿದ್ದಾರೆ.

ಆಫ್ಘಾನಿಸ್ಥಾನದಲ್ಲಿ ಅಮೆರಿಕದ ಡ್ರೋನ್ ದಾಳಿಗಳಿಂದ ನೂರಾರು ಸಾವುಗಳು ಸಂಭವಿಸಿವೆ. ದೊಡ್ಡ ಪ್ರಮಾಣದ ಯುದ್ಧಗಳು ಸಂಭವಿಸದಿರುವುದಕ್ಕೆ ಬಂಡವಾಳ ವ್ಯವಸ್ಥೆ ಎದುರಿಸುತ್ತಿರುವ ಮಾರುಕಟ್ಟೆ ಬಿಕ್ಕಟ್ಟುಗಳು ಕಾರಣ ಎನ್ನುವುದನ್ನೂ ಗಮನಿಸಬೇಕು. ಯುದ್ಧಗಳು ಬಂಡವಾಳ ಮತ್ತು ಭೌಗೋಳಿಕ ವಿಸ್ತರಣೆಯ ಒಂದು ಸಾಧನವಾಗಿರುವುದರಿಂದ ಅವಶ್ಯಕತೆ ಇದ್ದಾಗ ಮಾತ್ರವೇ ಸಂಭವಿಸುತ್ತದೆ. ಇದಕ್ಕೆ ಚೀನಾ ಸಹ ಹೊರತಲ್ಲ, ಭಾರತವೂ ಹೊರತಲ್ಲ.

ಹಾಗೆಂದ ಮಾತ್ರಕ್ಕೆ ಟ್ರಂಪ್ ಶಾಂತಿಪ್ರಿಯರೇನೂ ಆಗಿರಲಿಲ್ಲ. ಚೀನಾದೊಡನೆ ನಿರಂತರ ಸಂಘರ್ಷದಲ್ಲಿದ್ದ ಟ್ರಂಪ್ ಸರ್ಕಾರಕ್ಕೆ ಯುದ್ಧದ ಸನ್ನಿವೇಶ ಸೃಷ್ಟಿಸುವಷ್ಟು ಆರ್ಥಿಕ ಸ್ಥಿರತೆ ಇರಲಿಲ್ಲ. ಆದರೆ ಯಾವುದೇ ಸಂದರ್ಭದಲ್ಲಿ ಯುದ್ಧ ಸಂಭವಿಸಿದರೂ ನಿರ್ವಹಿಸುವ ನಿಟ್ಟಿನಲ್ಲಿ ಅಮೆರಿಕದ ಸೇನಾ ವಲಯ ಸಿದ್ಧತೆ ನಡೆಸಿಯೇ ಇತ್ತು.

ಈ ಅಸಹಾಯಕತೆಯಿಂದಲೇ ಟ್ರಂಪ್ ಆಡಳಿತ ಉತ್ತರ ಕೊರಿಯಾ ಮತ್ತು ಇರಾನ್ ನೊಡನೆ ಸ್ನೇಹ ಹಸ್ತ ಚಾಚುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಿತ್ತು. ಆದರೆ ಪ್ಯಾಲೆಸ್ಟೈನ್ ನಲ್ಲಿ ಇಸ್ರೇಲಿನ ಫ್ಯಾಸಿಸ್ಟ್ ಆಕ್ರಮಣಗಳಿಗೆ ಅಮೆರಿಕದ ನೀತಿ ಬದಲಾಗಿರಲಿಲ್ಲ. ಇದು ಸಾಧ್ಯವಾಗುವುದೂ ಇಲ್ಲ. ಏಕೆಂದರೆ ಕಳೆದ 70 ವರ್ಷಗಳಿಂದಲೂ ಅಮೆರಿಕದ ವಿದೇಶಾಂಗ ನೀತಿಯ ಕೆಲವು ಅಂಶಗಳು ಸಾಮ್ರಾಜ್ಯಶಾಹಿಯ ಚೌಕಟ್ಟಿನಿಂದ ಹೊರಬರಲು ಸಾಧ್ಯವಾಗಿಲ್ಲ.

ವಿಶ್ವದ ಸಮುದಾಯಗಳ ದೃಷ್ಟಿಯಲ್ಲಿ ಅಮೆರಿಕದಲ್ಲಿ ಸರ್ಕಾರಗಳು ಬದಲಾಗುವುದೆಂದರೆ ಹೆಚ್ಚಿನ ಆತಂಕ ಮೂಡಿಸುತ್ತವೆ. ಮತ್ತಾವ ದೇಶದ ಮೇಲೆ ಯುದ್ಧ ಸಾರಲಾಗುತ್ತದೆ, ಮತ್ತಾವ ದೇಶದಲ್ಲಿ ಭಯೋತ್ಪಾದನೆಯನ್ನು ಮಟ್ಟಹಾಕಲು ಸೇನೆಯನ್ನು ನಿಯೋಜಿಸಲಾಗುತ್ತದೆ, ಪ್ರಜಾತಂತ್ರ ಸ್ಥಾಪಿಸಲು ಮತ್ತು ವಿಶ್ವಶಾಂತಿಗಾಗಿ ಮತ್ತಾವ ಸಣ್ಣ ರಾಷ್ಟ್ರದ ಮೇಲೆ ಮಾರಣಾಂತಿಕ ಆಕ್ರಮಣ ನಡೆಸಲಾಗುತ್ತದೆ, ಹೀಗೆ ಹಲವು ಅನುಮಾನಗಳು ವಿಶ್ವ ಸಮುದಾಯವನ್ನು ಕಾಡುತ್ತಲೇ ಇರುತ್ತದೆ. ಇಲ್ಲಿ ಅಮೆರಿಕದ ರಿಪಬ್ಲಿಕನ್ ಮತ್ತು ಡೆಮಾಕ್ರಟ್ ಪಕ್ಷಗಳ ನಡುವೆ ವ್ಯತ್ಯಾಸವನ್ನೇನೂ ಕಾಣಲಾಗುವುದಿಲ್ಲ.

ವಿಶ್ವ ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಪಡೆದ ಬರಾಕ್ ಒಬಾಮ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅಮೆರಿಕ ಅತಿ ಹೆಚ್ಚು ಬಾಂಬ್ ದಾಳಿಗಳನ್ನು ನಡೆಸಿದ್ದುದನ್ನು ಸ್ಮರಿಸಬಹುದು. ಜಾರ್ಜ್ ಬುಷ್ ಅವರಿಗಿಂತಲೂ ಹೆಚ್ಚಿನ ಬಾಂಬ್ ದಾಳಿ ನಡೆಸಿರುವ ಕುಖ್ಯಾತಿ ಒಬಾಮಾ ಅವರಿಗೆ ಸಲ್ಲುತ್ತದೆ. ಡ್ರೋನ್‍ಗಳ ಮೂಲಕ ಸಣ್ಣಪುಟ್ಟ ರಾಷ್ಟ್ರಗಳ ಮೇಲೆ ದಾಳಿ ನಡೆಸುವ ಆಧುನಿಕ ಯುದ್ಧಪರಂಪರೆಗೆ ಒಬಾಮಾ ನಾಂದಿ ಹಾಡಿದ್ದರು. ಒಬಾಮಾ ಅವರ ಎರಡು ಅಧಿಕಾರಾವಧಿಯಲ್ಲಿ ಪಾಕಿಸ್ತಾನ, ಸೊಮಾಲಿಯಾ, ಯೆಮನ್ ಮುಂತಾದ ದೇಶಗಳ ಮೇಲೆ 563 ವೈಮಾನಿಕ ದಾಳಿ ನಡೆದಿದ್ದವು. ಈ ದೇಶಗಳಲ್ಲಿ ಕನಿಷ್ಟ 300 ರಿಂದ 800 ನಾಗರಿಕರು ಈ ದಾಳಿಗೆ ಬಲಿಯಾಗಿದ್ದರು.

ಆಫ್ಘಾನಿಸ್ತಾನ ಮತ್ತು ಇರಾಕ್‍ನಲ್ಲಿ ಅಮೆರಿಕದ ಪಡೆಗಳ ಸಂಖ್ಯೆಯನ್ನು ಒಬಾಮಾ ಕಡಿಮೆ ಮಾಡಿದರೂ ವಿಶ್ವದಾದ್ಯಂತ ನಡೆಸಿದ ವೈಮಾನಿಕ ದಾಳಿ, ಡ್ರೋನ್ ದಾಳಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದುದೂ ಸತ್ಯ. 2016ರಲ್ಲಿ ಅಮೆರಿಕದ ವಿಶೇಷ ಸೇನಾ ಕಾರ್ಯಪಡೆಗಳು ವಿಶ್ವದ ಶೇ 70 ರಷ್ಟು, ಅಂದರೆ 138 ರಾಷ್ಟ್ರಗಳಲ್ಲಿ ನೆಲೆ ಮಾಡಿದ್ದವು. 2016ರಲ್ಲೇ, ತಮ್ಮ ಅಧಿಕಾರದ ಕೊನೆಯ ವರ್ಷದಲ್ಲಿ, ಒಬಾಮಾ ಆಡಳಿತ 26171 ವೈಮಾನಿಕ ಬಾಂಬ್ ದಾಳಿ ನಡೆಸಿತ್ತು ಎಂದು ಅಲ್ಲಿನ ರಕ್ಷಣಾ ವಲಯದ ದಾಖಲೆಗಳು ಹೇಳುತ್ತವೆ. ಸಿರಿಯಾ ಮತ್ತು ಇರಾಕ್ ಈ ಬಾಂಬ್ ದಾಳಿಗೆ ಹೆಚ್ಚಾಗಿ ತುತ್ತಾದರೂ, ಆಫ್ಘಾನಿಸ್ತಾನ, ಲಿಬ್ಯಾ, ಯೆಮನ್, ಸೊಮಾಲಿಯಾ ಮತ್ತು ಪಾಕಿಸ್ತಾನದ ಜನತೆಯೂ ಇದರ ದುಷ್ಪರಿಣಾಮಗಳನ್ನು ಎದುರಿಸಬೇಕಾಯಿತು.

ಈ ಚಾರಿತ್ರಿಕ ಹಿನ್ನೆಲೆಯಲ್ಲಿ ನೋಡಿದಾಗ ಅಮೆರಿಕದ ಚುನಾವಣಾ ಫಲಿತಾಂಶಗಳು ನಮ್ಮೊಳಗೆ ಉಂಟುಮಾಡುವ ಉತ್ಸಾಹ ಮತ್ತು ಕುತೂಹಲ ಉತ್ಪ್ರೇಕ್ಷೆಯಿಂದ ಕೂಡಿರಬೇಕಿಲ್ಲ ಎನಿಸುತ್ತದೆ. ಆಂತರಿಕವಾಗಿ ಅಮೆರಿಕದ ಹೊಸ ಸರ್ಕಾರದ ನೀತಿಗಳು ಬದಲಾಗುತ್ತವೆ. ಕಪ್ಪು ಜನಾಂಗದ ಜನತೆ ಡೆಮಾಕ್ರಟ್ ಆಡಳಿತದಲ್ಲಿ ತಮ್ಮ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಕಂಡುಕೊಳ್ಳಬಹುದು.

ಟ್ರಂಪ್ ಅನುಸರಿಸಲು ಯೋಚಿಸಿದ್ದ “ ಅಮೆರಿಕ ಅಮೆರಿಕದ ಪ್ರಜೆಗಳಿಗಾಗಿ ” ಎನ್ನುವ ಧೋರಣೆ ಬದಲಾಗಬಹುದು. ವಿಶ್ವ ವಾಣಿಜ್ಯ ಸಂಸ್ಥೆಯ ನವ ಉದಾರವಾದ ಮತ್ತು ಜಾಗತೀಕರಣ ನೀತಿಗಳಿಗೆ ಬಿಡೆನ್ ಬದ್ಧತೆ ತೋರಬಹುದು. ಟ್ರಂಪ್ ಆಡಳಿತದಲ್ಲಿ ಅನುಸರಿಸಲಾಗಿದ್ದ ಮುಸ್ಲಿಂ ವಿರೋಧಿ ನೀತಿಗಳು, ಇಸ್ಲಾಂ ಭೀತಿ ಸೃಷ್ಟಿಸುವ ನೀತಿಗಳು ಬದಲಾಗಬಹುದು.

ಆದರೆ ಜಾಗತಿಕ ರಾಜಕಾರಣದಲ್ಲಿ ಇದಾವುದೂ ಪ್ರಭಾವ ಬೀರುವುದಿಲ್ಲ. ವಿಶ್ವದಾದ್ಯಂತ ಜನಸಾಮಾನ್ಯರಲ್ಲಿ , ಶ್ರಮಜೀವಿಗಳಲ್ಲಿ, ಶೋಷಿತರಲ್ಲಿ ಮತ್ತು ಸಾಮ್ರಾಜ್ಯಶಾಹಿಗಳ ದಾಳಿಗೆ ತುತ್ತಾದ ಸಣ್ಣಪುಟ್ಟ ರಾಷ್ಟ್ರಗಳಲ್ಲಿ ಇರುವ ಪ್ರಗತಿಪರ, ಫ್ಯಾಸಿಸ್ಟ್ ವಿರೋಧಿ ಮತ್ತು ಪ್ರಜಾತಂತ್ರವಾದಿಗಳು ಗಮನಿಸಬೇಕಾದ ಅಂಶವೆಂದರೆ ಅಮೆರಿಕದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಅಲ್ಲಿನ ಸಾಮ್ರಾಜ್ಯಶಾಹಿ ನೀತಿಗಳು ಬದಲಾಗುವುದಿಲ್ಲ, ವಿಸ್ತರಣಾವಾದ ಮತ್ತು ಸಂಪತ್ತಿನ ಮೇಲಿನ ನಿಯಂತ್ರಣದ ಹಪಹಪಿ ಕಡಿಮೆಯಾಗುವುದಿಲ್ಲ. ಅಮೆರಿಕ ವಿಶ್ವಶಾಂತಿಗಾಗಿ ಶ್ರಮಿಸುವ ಉದಾತ್ತ ಮಾತುಗಳನ್ನು ಆಡುತ್ತಲೇ ವಿಶ್ವದಾದ್ಯಂತ ಶಾಂತಿಯನ್ನು ಕದಡುವ ಯುದ್ಧಪರಂಪರೆಯನ್ನು ಪೋಷಿಸುತ್ತಲೇ ಬಂದಿದೆ.

ಇನ್ನು ಮುಂದೆಯೂ ಪೋಷಿಸುತ್ತಲೇ ಇರುತ್ತದೆ. ಆಂತರಿಕವಾಗಿ ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿಗಳಿಗೆ ಅನುಗುಣವಾಗಿ ಆಡಳಿತ ನಿಭಾಯಿಸುವ ಅಲ್ಲಿನ ಆಳುವ ವರ್ಗಗಳು ಬಾಹ್ಯ ಜಗತ್ತಿನಲ್ಲಿ ಅಮೆರಿಕದ ಬಂಡವಾಳಿಗರಿಗೆ ನೆಲೆ ಕಂಡುಕೊಳ್ಳಲು ಐಎಂಎಫ್, ವಿಶ್ವ ವಾಣಿಜ್ಯ ಸಂಸ್ಥೆ ಮುಂತಾದ ಆರ್ಥಿಕ ಅಸ್ತ್ರಗಳನ್ನು ಬಳಸುತ್ತಲೇ, ತೈಲ ಸಂಪತ್ತು, ಖನಿಜ ಸಂಪತ್ತು ಮತ್ತು ಅಗ್ಗದ ಶ್ರಮದ ಮೇಲೆ ತನ್ನ ಅಧಿಪತ್ಯ ಸಾಧಿಸಲು ತನ್ನ ಸೇನೆಯನ್ನೂ ಸಮರ್ಥವಾಗಿ ಬಳಸುತ್ತದೆ. ತಾಲಿಬಾನ್ ನಿಂದ ಐಸಿಸ್ ವರೆಗಿನ ಬೆಳವಣಿಗೆಗಳಿಗೆ ಈ ವಿಸ್ತರಣಾವಾದವೇ ಮೂಲ ಕಾರಣ ಎನ್ನುವುದನ್ನೂ ಗಮನಿಸಬೇಕಿದೆ.

ಹಣಕಾಸು ಬಂಡವಾಳ ಮತ್ತು ಬಂಡವಾಳಶಾಹಿ ವ್ಯವಸ್ಥೆ ಎದುರಿಸುತ್ತಿರುವ ಪ್ರಸ್ತುತ ಬಿಕ್ಕಟ್ಟಿನಿಂದ ಹೊರಬರಲು ಸಾಮ್ರಾಜ್ಯಶಾಹಿ ದೇಶಗಳು ಭಾರತವನ್ನೂ ಸೇರಿದಂತೆ ಹಲವು ರಾಷ್ಟ್ರಗಳನ್ನು ಚಿಮ್ಮು ಹಲಗೆಯಂತೆ ಬಳಸಿಕೊಳ್ಳುತ್ತವೆ. ಭಾರತದಲ್ಲೂ ಆಡಳಿತ ವ್ಯವಸ್ಥೆಯ ಮೇಲೆ ಬಹುಮಟ್ಟಿಗೆ ನಿಯಂತ್ರಣ ಸಾಧಿಸಿರುವ ಕಾರ್ಪೋರೇಟ್ ಹಿತಾಸಕ್ತಿಗಳು ಇದನ್ನು ಸ್ವಾಗತಿಸುತ್ತವೆ. ಅಮೆರಿಕ ವಿಶ್ವಶಾಂತಿಯ ಮಂತ್ರ ಜಪಿಸಿದರೆ ಭಾರತದ ಆಳುವ ವರ್ಗಗಳು ದೇಶಭಕ್ತಿಯ ಮಂತ್ರ ಜಪಿಸುತ್ತವೆ. ಎರಡೂ ಮಂತ್ರಗಳ ಮೂಲ ಇರುವುದು ಶ್ರಮಜೀವಿಗಳ ಶೋಷಣೆಯಲ್ಲಿ ಮತ್ತು ಸಂಪನ್ಮೂಲಗಳ ಲೂಟಿಯಲ್ಲಿ. ಈ ನಡುವೆ ಯುದ್ಧ ಸಂಭವಿಸಿದರೂ ಅದು ನಿಮಿತ್ತ ಮಾತ್ರ.

(ಕೆಲವು ಮಾಹಿತಿಗಳ ಆಕರ- ಪೀಪಲ್ಸ್ ರಿವ್ಯೂ ಮತ್ತಿತರ ಪತ್ರಿಕೆಗಳು)


ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending