Connect with us

ದಿನದ ಸುದ್ದಿ

ಯಾರ ವಿರುದ್ಧ ದನಿ ಎತ್ತಬೇಕು ಸಂಸದರೇ..?

Published

on

  • ನಾ ದಿವಾಕರ

ಮುಂಬಯಿಯಲ್ಲಿರುವ ಡಾ ಬಿ ಆರ್ ಅಂಬೇಡ್ಕರ್ ಅವರ ರಾಜಗೃಹದ ಮೇಲೆ ಇತ್ತೀಚೆಗೆ ನಡೆದ ಆಕ್ರಮಣ ಬದಲಾಗುತ್ತಿರುವ ಭಾರತದ ಸೂಚನೆಯನ್ನು ನೀಡುತ್ತಿದೆ. ಈ ಕುರಿತು ಸ್ವಲ್ಪ ತಡವಾದರೂ ಮೌನ ಮುರಿದಿರುವ ದಲಿತ ಪ್ರತಿನಿಧಿಗಳು ತಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಸಂಸದರಾದ ಸನ್ಮಾನ್ಯ ಶ್ರೀನಿವಾಸ ಪ್ರಸಾದ್ ಅವರು ಈ ದಾಳಿಯನ್ನು ಖಂಡಿಸಿದ್ದು “ ಅಂಬೇಡ್ಕರ್ ಮನೆ ಮೇಲೆ ಕಲ್ಲು ತೂರಿ ವಿಧ್ವಂಸಕ ಕೃತ್ಯ ಎಸಗಿರುವ ವಿಚಾರದಲ್ಲಿ ದಲಿತೇತರ ರಾಜಕಾರಣಿಗಳು ಮತ್ತು ಸಂಘ ಸಂಸ್ಥೆಗಳು ದನಿ ಎತ್ತದಿರುವುದು ಶೋಚನೀಯ ” (ಪ್ರವಾ 14-7-20) ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ದಲಿತರ ಮೇಲೆ ಯಾವುದೇ ರೀತಿಯ ದಾಳಿ ನಡೆದಾಗಲೂ ಈ ವಿಷಾದ ಇದ್ದೇ ಇರುತ್ತದೆ.

ಊನ, ಖೈರ್ಲಾಂಜಿ, ಕಂಬಾಲಪಲ್ಲಿ ನಡೆದಾಗಲೇ ಎಷ್ಟೋ ದಲಿತೇತರ ಸಂಘಟನೆಗಳು ಮೌನಕ್ಕೆ ಶರಣಾಗಿದ್ದವು. ಇಲ್ಲಿ ಯಾರು ಪ್ರತಿಭಟಿಸಬೇಕು ಎನ್ನುವುದಕ್ಕಿಂತಲೂ ಯಾವ ಶಕ್ತಿಗಳ ವಿರುದ್ಧ ದನಿ ಎತ್ತಬೇಕು ಎನ್ನುವುದು ಮುಖ್ಯವಾಗುತ್ತದೆ.

ಇದೇ ಪತ್ರಿಕಾಗೋಷ್ಠಿಯಲ್ಲಿ ಮಾನ್ಯ ಶ್ರೀನಿವಾಸ್ ಪ್ರಸಾದ್ ಅವರು ಈ ಕೃತ್ಯದ ಹಿಂದೆ ಕೆಲವು “ಕಿಡಿಗೇಡಿಗಳನ್ನು” ಗುರುತಿಸಿದ್ದಾರೆ. ಹಾಗಾಗಿ ದಲಿತ ಸಂಘಟನೆಗಳು ಪುರಾವೆ ಇಲ್ಲದೆ ಯಾರ ಮೇಲೂ ಆರೋಪ ಮಾಡಕೂಡದು, ರಾಜಕೀಯ ಬೆರೆಸಬಾರದು ಎಂದೂ ಹೇಳಿದ್ದಾರೆ. ಇದು ಸರಿಯೇ. ಈ ದೇಶದಲ್ಲಿ ಶಂಕಿತರನ್ನು ಗುರುತಿಸಲೂ ಅಸ್ಮಿತೆಗಳು ಮುಖ್ಯವಾಗುತ್ತವೆ.

ರಾಜಗೃಹದ ಮೇಲೆ ನಡೆದ ದಾಳಿಯಲ್ಲಿ ಅಲ್ಪಸಂಖ್ಯಾತರು ಯಾರಾದರೂ ಇದ್ದಿದ್ದರೆ “ ಪುರಾವೆ ಇಲ್ಲದೆ ಆರೋಪ ಮಾಡಕೂಡದು” ಎನ್ನುವ ಉಪದೇಶ ಬರುತ್ತಿರಲಿಲ್ಲ. ಶಂಕಿತರು, ಉಗ್ರರು, ಕಿಡಿಗೇಡಿಗಳು, ದುಷ್ಕರ್ಮಿಗಳು, ಮಾನಸಿಕ ಅಸ್ವಸ್ಥರು, ತಿಳಿಗೇಡಿಗಳು ಈ ಎಲ್ಲ ಪದಗಳೂ ಸಾಪೇಕ್ಷ ನೆಲೆಯಲ್ಲಿ ರಾಜಕೀಯ ಅನುಕೂಲತೆಗೆ ತಕ್ಕಂತೆ ಬಳಕೆಯಾಗುತ್ತಿರುವುದನ್ನು ದಶಕಗಳಿಂದ ಗಮನಿಸುತ್ತಲೇ ಬಂದಿದ್ದೇವೆ.

ಇರಲಿ, ರಾಜಗೃಹದ ಮೇಲೆ ದಾಳಿ ನಡೆಸಿದವರು ಯಾರು ಎನ್ನುವುದು ವ್ಯಕ್ತಿಗತ ಪ್ರಶ್ನೆ. ಅಪರಾಧಿಗಳಿಗೆ ಶಿಕ್ಷೆಯಾಗುವುದೋ ಇಲ್ಲವೋ ಕಾದು ನೋಡೋಣ. ಆದರೆ ರಾಜಗೃಹದ ಘಟನೆ ಏಕಾಏಕಿ ನಡೆದ ವಿಕ್ಷಿಪ್ತ ಘಟನೆ ಅಲ್ಲ ಎನ್ನುವುದು ಸಂಸದರ ಗಮನಕ್ಕೆ ಬರಬೇಕಿತ್ತಲ್ಲವೇ ? ದಲಿತೇತರ ರಾಜಕಾರಣಿಗಳು, ಸಂಘಟನೆಗಳು ಈ ಘಟನೆಯನ್ನು ಖಂಡಿಸಿಲ್ಲ , ನಿಜ.

ಇದೇನೂ ಅಚ್ಚರಿಯ ವಿಚಾರ ಅಲ್ಲ. ರಾಜಗೃಹ ಬಾಬ್ರಿ ಮಸೀದಿಯಂತೆ, ರಾಮಮಂದಿರಂತೆ ಮತಗಳಿಕೆಯ ಸ್ಥಾವರ ಅಲ್ಲ. ಅದು ದಲಿತ ಸಮುದಾಯದ ಅಸ್ಮಿತೆಯನ್ನು ಬಿಂಬಿಸುವ ಸ್ಥಾವರ. ಈ ಅಸ್ಮಿತೆಯ ಮೇಲೆ ದಾಳಿ ನಡೆದಾಗ ದಲಿತ ರಾಜಕಾರಣಿಗಳಾದರೂ ಎಲ್ಲಿದ್ದಾರೆ ? ಕರ್ನಾಟಕದ ದಲಿತ ಸಂಸದರ ಮತ್ತು ಶಾಸಕರ ಒಕ್ಕೊರಲ ದನಿ ಏಕೆ ಕೇಳಿಸಿಯೇ ಇಲ್ಲ.

ಈ ದಾಳಿ ಏಕೆ ನಡೆದಿದೆ, ಅಂಬೇಡ್ಕರ್, ಪೆರಿಯಾರ್ ಮೇಲೆ ಈ ರೀತಿಯ ದಾಳಿ ಏಕೆ ನಡೆಯುತ್ತಿದೆ ಎನ್ನುವುದು ನುರಿತ ರಾಜಕಾರಣಿಯಾದ ಮಾನ್ಯ ಶ್ರೀನಿವಾಸಪ್ರಸಾದ್ ಅವರಿಗೆ ತಿಳಿದಿರಬೇಕಲ್ಲವೇ ? ಈ ದೇಶದ ಮತೀಯ ಮೂಲಭೂತವಾದಿಗಳಿಗೆ ಪ್ರೇರಣೆ ನೀಡುವ ಒಂದು ಸಿದ್ಧಾಂತ ಮತ್ತು ತತ್ವವನ್ನು ಅಪ್ಪಿಕೊಂಡು, ಈ ಮತೀಯ ಶಕ್ತಿಗಳು ನಿರಂತರವಾಗಿ ಭಾರತದ ಶೋಷಿತ, ದಮನಿತ ಜನಸಮುದಾಯಗಳ ಮೇಲೆ ನಡೆಸುತ್ತಿರುವ ದಾಳಿಯನ್ನು “ಕಿಡಿಗೇಡಿಗಳ” ಕೃತ್ಯ ಎಂದು ಬಣ್ಣಿಸುವುದರ ಔಚಿತ್ಯವನ್ನು ಪ್ರಶ್ನಿಸಲೇಬೇಕಾಗುತ್ತದೆ.

ರಾಜಗೃಹದ ಮೇಲಿನ ದಾಳಿಗೂ, ತಮಿಳುನಾಡಿನಲ್ಲಿ ಪೆರಿಯಾರ್ ಅಂಬೇಡ್ಕರ್ ಗ್ರಂಥಾಲಯದ ಮೇಲೆ ನಡೆದ ದಾಳಿಗೂ, ಹಲವೆಡೆ ಅಂಬೇಡ್ಕರ್ ಪ್ರತಿಮೆಗಳ ಮೇಲೆ ನಡೆಯುತ್ತಿರುವ ದಾಳಿಗೂ ಮತ್ತು ಅಂಬೇಡ್ಕರ್ ಅವರ ಸಾಂವಿಧಾನಿಕ ಮೌಲ್ಯಗಳ ವಿರುದ್ಧ ಆಡಳಿತ ನೀತಿಗಳನ್ನು ಜಾರಿಗೊಳಿಸುತ್ತಿರುವುದಕ್ಕೂ ಪರಸ್ಪರ ಸಂಬಂಧ ಇರುವುದನ್ನು ಮಾನ್ಯ ಶ್ರೀನಿವಾಸ ಪ್ರಸಾದ್ ಅವರಿಗೆ ತಿಳಿಸಿ ಹೇಳಬೇಕಿಲ್ಲ. ಅಲ್ಲವೇ ?

ತಮ್ಮ ಅಂತರಂಗದ ಅವ್ಯಕ್ತ ಭಾವನೆಯನ್ನು ರಾಜಕೀಯ ಅನಿವಾರ್ಯಗಳಿಂದ ಅದುಮಿಟ್ಟು ಮಾತನಾಡುವುದು ಹಿರಿಯ ನಾಯಕರಿಗೆ ಶೋಭೆ ತರುವಂತಹುದಲ್ಲ . ಅಂಬೇಡ್ಕರ್ ಆರಾಧನೆಗೊಳಗಾದಷ್ಟೇ ದಾಳಿಗೂ ಒಳಗಾಗುತ್ತಿರುವುದನ್ನು ಕಳೆದ ಹಲವು ದಶಕಗಳಿಂದ ನೋಡುತ್ತಲೇ ಇದ್ದೇವೆ.

ಪ್ರತಿಯೊಬ್ಬ ದಲಿತ ವ್ಯಕ್ತಿಯ ಮೇಲೆ ನಡೆಯುವ ದೌರ್ಜನ್ಯ, ಅತ್ಯಾಚಾರ, ಹಲ್ಲೆ, ಆಕ್ರಮಣವೂ ಸಹ ಅಂಬೇಡ್ಕರ್ ಪ್ರತಿಪಾದಿಸಿದ ದಲಿತ ಅಸ್ಮಿತೆಯ ಮೇಲಿನ ದಾಳಿಯೇ ಅಲ್ಲವೇ ? ಇಂತಹ ಅಮಾನುಷ ದಾಳಿಗಳಿಗೆ ದಲಿತ ರಾಜಕಾರಣಿಗಳು ಹೇಗೆ ಸ್ಪಂದಿಸಿದ್ದಾರೆ ? ಇತ್ತೀಚಿನ ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ ನಿರಾಸೆ ಮೂಡುತ್ತದೆ. ಅಧಿಕಾರ ರಾಜಕಾರಣ ಮತ್ತು ರಾಜಕೀಯ ಅವಕಾಶವಾದ, ಅಸ್ಮಿತೆಗಳನ್ನು ನುಂಗಿ ವ್ಯಕ್ತಿಗತ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ನೆಲೆಗಳಾಗಿ ರೂಪುಗೊಂಡು ದಶಕಗಳೇ ಕಳೆದಿವೆ.

ಈ ರಾಜಕಾರಣದ ರಾಡಿಯಲ್ಲಿ ನಿಂತು ವಾಸ್ತವಕ್ಕೆ ಬೆನ್ನು ತಿರುಗಿಸಿ ಅನುಕಂಪದ ಮಾತುಗಳನ್ನಾಡುವುದು ಬೇಕಿಲ್ಲ. ಅಂಬೇಡ್ಕರ್ ಅವರಿಗಾಗಲೀ, ದಲಿತ ಸಮುದಾಯಗಳಿಗಾಗಲೀ ಅನುಕಂಪ, ಮರುಕ ಅಗತ್ಯವಿಲ್ಲ. ಇದು ಶತಮಾನಗಳಿಂದಲೂ ವ್ಯಕ್ತವಾಗುತ್ತಲೇ ಇದೆ. ಈಗ ಬೇಕಿರುವುದು ಸಾಮಾಜಿಕ ಘನತೆ.

ಅಂಬೇಡ್ಕರ್ ಅವರನ್ನು ಪ್ರತಿನಿಧಿಸುವ ಸ್ಥಾವರಗಳ ಮೇಲಿನ ದಾಳಿಗಳು ಈ ಘನತೆಯನ್ನು ಪ್ರಶ್ನಿಸುವ ಒಂದು ವಿಧಾನ ಎನ್ನುವುದನ್ನು ಹೇಳಬೇಕಿಲ್ಲ. ಇದು ಅಸ್ಮಿತೆಯ ಪ್ರಶ್ನೆ. ಅಸ್ತಿತ್ವದ ಪ್ರಶ್ನೆ. ದಲಿತ ಅಸ್ಮಿತೆಯನ್ನು ನುಂಗಿಹಾಕಿ ತನ್ನದೇ ಆದ ಸಾಮ್ರಾಜ್ಯವನ್ನು ನಿರ್ಮಿಸಲು ಸಜ್ಜಾಗುತ್ತಿರುವ ಮತೀಯ ಶಕ್ತಿಗಳ ಮಡಿಲಲ್ಲಿ ಕುಳಿತು ನ್ಯಾಯ ಕೇಳುವುದು, ತೋಳದ ಬೆನ್ನ ಮೇಲೇರಿ ಸಿಂಹದ ಬಳಿ ನ್ಯಾಯ ಕೇಳಿದಂತಾಗುವುದಿಲ್ಲವೇ ? ಸಂಸದರೇ ಯೋಚಿಸಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಟಿ.ನರಸೀಪುರ | ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ‌ ನೀತಿ ಖಂಡಿಸಿ ಭಾರತ ಪ್ರಜಾ ಸತ್ತಾತ್ಮಕ ಯುವ ಜನ ಫೆಡರೇಷನ್ ಪ್ರತಿಭಟನೆ

Published

on

ಸುದ್ದಿದಿನ,ಟಿ. ನರಸೀಪುರ: ಕೋವಿಡ್-19 ಲಾಕ್‍ಡೌನ್‍ನಿಂದಾಗಿ ದೇಶದ ಜನರ ಜೀವನ ತತ್ವಾರವಾಗಿದ್ದು, ಶ್ರೀಮಂತರು ಮತ್ತಷ್ಟು ಶ್ರೀಮಂತರಾದರೆ ಬಡವರು ಮತ್ತಷ್ಟು ಕಡು ಬಡವರಾಗುತ್ತಿದ್ದಾರೆಂದು ಭಾರತ ಪ್ರಜಾ ಸತ್ತಾತ್ಮಕ ಯುವ ಜನ ಫೆಡರೇಷನ್ ತಾಲ್ಲೂಕು ಅಧ್ಯಕ್ಷ ಆಲಗೂಡು ಸಿ. ಪುಟ್ಟಮಲ್ಲಯ್ಯ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ತಹಶಿಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಮಾತನಾಡಿ, ದೇಶದಲ್ಲಿ ಹಸಿವಿನ ಸೂಚಂಕ್ಯ 102ನೇ ಸ್ಥಾನದಲ್ಲಿದ್ದು, ಜನರು ಹಸಿವಿನಿಂದ ಪ್ರಾಣ ಬಿಡುವ ಸ್ಥಿತಿಗೆ ಬಂದಿದೆ. ಮಕ್ಕಳು-ಗರ್ಭಿಣಿ ಮಹಿಳೆಯರು ಪೌಷ್ಠಿಕಾಂಶದ ಕೊರತೆಯಿಂದ ಹಾಗೂ ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿರುವ ಸಂದರ್ಭದಲ್ಲಿ ಆಹಾರ, ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ, ಇಂಧನ ಬೆಲೆಗಳ ಏರಿಕೆ, ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ವಿದ್ಯುತ್ ಖಾಸಗೀಕರಣ ಮಸೂದೆಗಳ ತಿದ್ದುಪಡಿ, ಸಾರ್ವಜನಿಕರ ಲಾಭದಾಯಕ ಸರ್ಕಾರಿ ಉದ್ದಿಮೆಗಳ ಖಾಸಗೀಕರಣ, ಕಾರ್ಮಿಕರ ಮಸೂದೆ ತಿದ್ದುಪಡಿಯಿಂದಾಗಿ ನಿರುದ್ಯೋಗಿಗಳನ್ನು ಸೃಷ್ಟಿಮಾಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೀತಿಗಳನ್ನು ಖಂಡಿಸುವುದಾಗಿ ತಿಳಿಸಿದರು.

ಲಾಕ್‍ಡೌನ್ ಅವಧಿಯ ವೇತನವನ್ನು ಕಾರ್ಮಿಕರಿಗೆ ಪೂರ್ಣವಾಗಿ ಪಾವತಿಸಬೇಕು. ಆರ್ಥಿಕ ಹಿಂಜರಿತ ನೆಪದಲ್ಲಿ ಕಾರ್ಮಿಕರ ವಜಾ, ವರ್ಗಾವಣೆ, ವೇತನ ಒಪ್ಪಂದದಲ್ಲಿನ ಮುಂದೂಡಿಕೆ ಕ್ರಮಗಳನ್ನು ನಿರ್ಬಂಧಿಸಿ 2020-21ನೇ ಸಾಲಿನ ವ್ಯತ್ಯಾಸ ತುಟ್ಟಿ ಭತ್ಯೆ ಮುಂದೂಡಿಕೆ ಆದೇಶ ರದ್ದು ಮಾಡಬೇಕು.

ರಾಜ್ಯ ಸರ್ಕಾರ ಘೋಷಿಸಿರುವ 2202 ಕೋಟಿ ರೂ.ಗಳ ಪರಿಹಾರ ಅಸಂಘಟಿತ ವಲಯದ 5 ವಿಭಾಗಗಳಿಗೆ ಮಾತ್ರ ಸಂಬಂಧ ಪಟ್ಟಿದ್ದು, ಇನ್ನು 125ಕ್ಕೂ ಹೆಚ್ಚು ವಲಯಗಳ ಕೋಟ್ಯಾಂತರ ಅಸಂಘಟಿತ ಹಾಗೂ ಸ್ವಯಂ ಉದ್ಯೋಗಿ ಕಾರ್ಮಿಕರಿಗೆ ಲಾಕ್‍ಡೌನ್ ಅವಧಿಯ ಸಂಕಷ್ಟ ಪರಿಹಾರದ ಪ್ಯಾಕೇಜ್‍ನನ್ನು ಘೋಷಿಸುವುದರ ಜೊತೆಗೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ತಹಶಿಲ್ದಾರ್ ಮುಖಾಂತರ ಪ್ರಧಾನಮಂತ್ರಿಗಳಿಗೆ ಮನವಿಪತ್ರ ಕೊಡುತ್ತಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಎಸ್. ರವಿ, ನಾಗಮ್ಮ, ಮಂಜುಳ, ತಾರಾ, ರುಕ್ಮಿಣಿ, ಶುಭಾ, ಗೌರಮ್ಮ, ಉಮಾ, ಶಿವಮ್ಮ, ಪುಟ್ಟಮಾರಮ್ಮ, ನಾಗಮ್ಮ, ಮಹದೇವು, ಲಿಂಗಮಣಿ, ಪವಿತ್ರ, ಪ್ರೇಮ, ಲತಾ, ನಾಗಮ್ಮ ಇತರರು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಟಿ.ನರಸೀಪುರ | ರೈತ ವಿರೋಧಿ ಕಾಯ್ದೆ‌ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ

Published

on

ಸುದ್ದಿದಿನ,ಟಿ. ನರಸೀಪುರ: ಕೇಂದ್ರ ಸರ್ಕಾರದ ಎಪಿಎಂಸಿ, ವಿದ್ಯುತ್ ಖಾಸಗೀಕರಣ ಮತ್ತು ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಜಂಟಿಯಾಗಿ ರಸ್ತೆ ತಡೆ ಪ್ರತಿಭಟನೆ ನಡೆಸಿದರು.

ರಾಷ್ಟ್ರೀಯ ಹೆದ್ದಾರಿ 212 ಮೈಸೂರು ಮುಖ್ಯರಸ್ತೆಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಜಂಟಿಯಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗುತ್ತ ಮಾತನಾಡಿ, ರೈತಾಪಿ ಕೃಷಿಯನ್ನು ಸಂಪೂರ್ಣ ನಾಶ ಮಾಡಿ ಕಾರ್ಪೊರೇಟ್ ಬೇಸಾಯವನ್ನು ಬೆಂಬಲಿಸುವ ರೈತ ವಿರೋಧಿ ಸುಗ್ರೀವಾಜ್ಞೆಗಳಾದ ಭೂ ಸುಧಾರಣೆ, ಎಪಿಎಂಸಿ ತಿದ್ದುಪಡಿ, ವಿದ್ಯುತ್ ಖಾಸಗೀಕರಣ, ಕೈಗಾರಿಕ ಯಾಜ್ಯ ತಿದ್ದುಪಡಿಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಬಿಡಬೇಕು.

ಯಾವುದೇ ಕಾರಣಕ್ಕೂ ಅಂಗೀಕಾರವಾಗಬಾರದು. ಇಂದು ಮತ್ತು ನಾಳೆ ನಡೆಯುವ ಸದನದಲ್ಲಿ ಈ ತಿದ್ದುಪಡಿಗಳನ್ನು ಕೈಬಿಡದಿದ್ದರೆ ಮುಖ್ಯಮಂತ್ರಿಗಳನ್ನು ಖುರ್ಚಿಯಿಂದ ಕೆಳಗಿಳಿಸುವ ತನಕ ಈ ನಮ್ಮ ಹೋರಾಟ ಮುಂದುವರಿಯಲಿದೆ.

ರೈತರಿಗೆ ಅಚ್ಛೇ ದಿನ ಯಾವಾಗ…?
ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಎಲ್ಲಾ ಕಾರ್ಯಚಟುವಟಿಕೆಗಳು ಬಂದ್ ಆಗಿದ್ದವು. ಆದರೆ ರೈತಾಪಿ ವರ್ಗ ಕೈ ಕಟ್ಟಿ ಕೊರೊನಾಗೆ ಹೆದರಿ ಕೂರಲಿಲ್ಲ. ಹಾಗೊಂದು ವೇಳೆ ನಾವು ಕೈ ಕಟ್ಟಿ ಕೂತಿದ್ದರೆ ದೇಶದ ಹಾಗೂ ರಾಜ್ಯದ ಜನರ ಪರಿಸ್ಥಿತಿಯನ್ನು ಸರ್ಕಾರ ತುಸು ಅವಲೋಕಿಸಬೇಕು.

ಹೀಗಿರುವಾಗ ಅನ್ನ ನೀಡುವ ರೈತನಿಗೆ ಈ ರೀತಿಯಾಗಿ ಅನ್ಯಾಯ ಮಾಡುವುದು ಎಷ್ಟರ ಮಟ್ಟಿಗೆ ಸರಿ. ಪ್ರಧಾನಿ ಮೋದಿರವರು ಅಚ್ಛೇ ದಿನ ಬರುವುದು ಎಂದು ಹೇಳುತ್ತಾ ರೈತರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ.

ಇವರ ಈ ನೀತಿಗಳು ದಲ್ಲಾಳಿಗಳು ಹಾಗೂ ವ್ಯಾಪಾರಸ್ಥರಿಗೆ ಅನುಕೂಲವೇ ಹೊರತು ರೈತರಿಗಲ್ಲ. ಮೊಬೈಲ್‍ಗಳಿಗೆ ತಿಂಗಳಾಗುತ್ತಿದ್ದಂತೆ ಇಂತಿಷ್ಟು ಹಣ ನೀಡಿ ರೀಚಾರ್ಜ್ ಮಾಡಿಸಿದಂತೆ ಬೆಳೆಯುವ ಬೆಳೆಗೆ ನೀರು ಬಿಡಲು ಪಂಪ್‍ಸೆಟ್‍ಗಳಿಗೆ ಹಣ ನೀಡಿ ನೀರು ಪಡೆಯುವ ದುರ್ವಿದಿ ಎದುರಾಗಿದೆ. ಇದೆಯೇ ಪ್ರಧಾನ ಮಂತ್ರಿಗಳ ಅಚ್ಛೇ ದಿನ್…? ಇವರ ಸರ್ಕಾರ ಬರೀ ಶ್ರೀಮಂತರಿಗೆ ಮಾತ್ರ ಸೀಮಿತವೇ…?

ರಾಜ್ಯ ವ್ಯಾಪ್ತಿ ಇಂದು ಬಂದ್‍ಗೆ ಕರೆ ನೀಡಿದ್ದು, ಈ ಪ್ರತಿಭಟನೆಗೆ ಸರ್ಕಾರ ಬಗ್ಗದಿದ್ದರೆ ಸೆ:28 ಸೋಮವಾರ ನಡೆಯುವ ಬಂದ್ ಉಗ್ರ ರೂಪ ತಾಳುತ್ತದೆ. ಇದಕ್ಕೆ ಸರ್ಕಾರ ಅವಕಾಶ ನೀಡದೆ ಅನ್ನ ದಾತರ ರಕ್ಷಣೆ ಮಾಡಬೇಕು.

ರೈತ ವಿರೋಧಿ ಕಾಯ್ದೆಗಳನ್ನ ಹಿಂಪಡೆಯಬೇಕೆಂದು ಆಗ್ರಹಿಸಬೇಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಕುಮಾರಸ್ವಾಮಿ ಒತ್ತಾಯಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕುಸುಮ ರೋಗಿಗಳ ಸಂಕಷ್ಟಕ್ಕೆ ಧ್ವನಿಯಾಗಿದ್ದ ಗಾನ ಕೋಗಿಲೆ; ದಾವಣಗೆರೆಯ ಹಿಮೊಫಿಲಿಯಾ ಸೊಸೈಟಿಗೆ ಸಹಕಾರ ನೀಡಿದ್ದ ಎಸ್ಪಿಬಿ !

Published

on

ಸುದ್ದಿದಿನ,ದಾವಣಗೆರೆ: ಸಂಗೀತ ಲೋಕದ ದಿಗ್ಗಜರಾಗಿದ್ದ ಗಾನ ಕೋಗಿಲೆ ಎಸ್.ಪಿ.ಬಾಲಸುಬ್ರಮಣ್ಯಂ ಅವರದ್ದು ಮಾತೃ ಹೃದಯ. ಸಂಕಷ್ಟದಲ್ಲಿರುವ ಜನರ ಬಗ್ಗೆ ಅವರ ಹೃದಯ ಸದಾ ಮಿಡಿಯಿತ್ತಿತ್ತು. ಇದಕ್ಕೆ ಶ್ರೇಷ್ಠ ನಿದರ್ಶನ ಅವರು ಕುಸುಮ ರೋಗಿಗಳ ಪರವಾಗಿ ಧ್ವನಿಯಾಗಿ ನಾಡಿನಾದ್ಯಂತ ಹಾಡಿದ್ದರು.

ಹೌದು, ದಾವಣಗೆರೆಯ ಹಿಮೊಫಿಲಿಯಾ ಸೊಸೈಟಿಗೆ ಸಹಕಾರ ನೀಡಿದ್ದ ಎಸ್.ಪಿ.ಬಾಲಸುಬ್ರಮಣ್ಯಂ ಅವರು ಹಿಮೊಫಿಲಿಯಾ ರೋಗಿಗಳ ಪರವಾಗಿ ರಾಜ್ಯದ ವಿವಿಧೆಡೆ ಸಂಗೀತ ಕಾರ್ಯಕ್ರಮ ನಡೆಸಿ ಹಿಮೊಫೊಲಿಯಾ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವ ಮಹತ್ವದ ಹಾಗೂ ಮಾನವೀಯ ಕಾರ್ಯ ಮಾಡಿದ್ದರು.

ಹಿಮೊಫಿಲಿಯಾ ರೋಗಿಗಳ ಪರವಾಗಿ ದಾವಣಗೆರೆ, ಚಿತ್ರದುರ್ಗ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಸಂಗೀತ ಕಾರ್ಯಕ್ರಮ ನಡೆಸಿದ್ದ ಎಸ್.ಪಿ.ಬಾಲಸುಬ್ರಮಣ್ಯಂ ಅವರು ಹಿಮೊಫಿಲಿಯಾ ರೋಗಿಗಳ ಸಂಕಷ್ಟಕ್ಕೆ ಸ್ಪಂದಿಸುವಂತೆ ಮನವಿ ಮಾಡಿದ್ದರು.

ದಾವಣಗೆರೆಯ ಹಿಮೊಫಿಲಿಯಾ ಸೊಸೈಟಿ ಅಧ್ಯಕ್ಷ ಡಾ.ಸುರೇಶ್ ಹನಗವಾಡಿ ಅವರ ಕಾರ್ಯಕ್ಕೆ ಸಾಥ್ ನೀಡಿದ್ದ ಎಸ್.ಪಿ.ಬಾಲಸುಬ್ರಮಣ್ಯಂ ಅವರ ಮುಂದೆ ಹಲವು ಕನಸು ಹಾಗೂ ಯೋಜನೆಗಳಿದ್ದವು. ಎಸ್.ಪಿ.ಬಾಲಸುಬ್ರಮಣ್ಯಂ ಅವರ ಅಗಲಿಕೆಯಿಂದ ಕುಸುಮ ರೋಗಿಗಳು ಹಾಗೂ ದಾವಣಗೆರೆಯ ಹಿಮೊಫಿಲಿಯಾ ಸೊಸೈಟಿಗೆ ತೀವ್ರ ನೋವುಂಟು ಮಾಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending