Connect with us

ದಿನದ ಸುದ್ದಿ

ನುಡಿಯ ಒಡಲು – 14 | ನುಡಿ ವರ್ಸಸ್ ಒಳನುಡಿ

Published

on

  • ಡಾ. ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ನುಡಿ ಮತ್ತು ಒಳನುಡಿಗಳ ನಡುವಣ ಅಂತರಗಳನ್ನು ಗುರುತಿಸಲು ಎರಡು ಬಗೆಯ ಒರೆಗಲ್ಲುಗಳನ್ನು ಬಳಸುತ್ತಾರೆ. ಒಂದು ನುಡಿಯರಿಮೆಯ ನೆಲೆಗಟ್ಟನ್ನು ಪಡೆದಿದ್ದರೆ, ಮತ್ತೊಂದು ಸಾಮಾಜಿಕ ರಾಜಕೀಯ ನೆಲೆಗಳ ಮೇಲೆ ನಿರ್ಧಾರಗೊಳ್ಳುತ್ತದೆ. ಎತ್ತುಗೆಗಾಗಿ ನುಡಿಯರಿಮೆಯ ನೆಲೆಗಳನ್ನು ಇಲ್ಲೀಗ ನೋಡಬಹುದು;

1. ಪರಸ್ಪರ ಅರ್ಥಗ್ರಾಹ್ಯತೆಯ ಸಾಧ್ಯವೇ?

ಹೌದು? = ಒಳನುಡಿ

ಇಲ್ಲ? = ನುಡಿ

ಒಂದೇ ನುಡಿಯ ಬೇರೆ ಬೇರೆ ಬಗೆಗಳನ್ನು ಒಬ್ಬರಿಗೊಬ್ಬರು ಅರಿಯುವಂತಾದರೆ ಅದು ಒಳನುಡಿ. ಇಲ್ಲವಾದರೆ ಅವುಗಳನ್ನು ಬೇರೆ ಬೇರೆ ನುಡಿಗಳನ್ನಾಗಿ ಗುರುತಿಸಲಾಗುತ್ತದೆ. ಅಂದರೆ ಈ ಕೆಳಗಿನ ಸೂತ್ರದ ಮೂಲಕ ಇದನ್ನು ಇನ್ನೂ ನಿಚ್ಚಳವಾಗಿ ತಿಳಿಯಬಹುದು. ಉದಾ.ಗಳು;

1. ಧಾರವಾಡ ವರ್ಸಸ್ ಮೈಸೂರು ವರ್ಸಸ್ ಮಂಗಳೂರು ವರ್ಸಸ್ ಬೀದರ ವರ್ಸಸ್ ಚಾಮರಾಜ ನಗರ ವರ್ಸಸ್ ಬಳ್ಳಾರಿ = ಒಳನುಡಿಗಳು

2. ಬ್ರಿಟಿಶ್ ವರ್ಸಸ್ ಅಮೇರಿಕನ್ ವರ್ಸಸ್ ಐರಿಶ್ ವರ್ಸಸ್ ಆಸ್ಟ್ರೇಲಿಯಾ = ಒಳನುಡಿಗಳು

ಈ ಮೇಲಿನ ಎರಡೂ ಸನ್ನಿವೇಶದಲ್ಲಿ ಆಯಾ ಗುಂಪಿನ ಒಳನುಡಿಗಳಲ್ಲಿ ಪರಸ್ಪರ ಸಂವಹನ ಸಾಧ್ಯವಾಗುವುದರಿಂದ ಇವುಗಳ ನಡುವಣ ನಂಟಸ್ತಿಕೆಯನ್ನು ಅಖಂಡತೆಯ ತತ್ವದ ನೆಲೆಯಲ್ಲಿ ಕಾಣಬಹುದು. ಈ ಒಳನುಡಿಗಳ ರಾಚನಿಕ ಯಾವ ನಿಲುವುಗಳು ಒಂದನ್ನು ಇನ್ನೊಂದರಿಂದ ಹೇಗೆ ಬೇರ್ಪಡಿಸುತ್ತವೆ? ಈ ರಾಚನಿಕ ನೆಲೆಗಳು ಪ್ರಾದೇಶಿಕವಾಗಿ ಹೇಗೆ ಹರಡಿಕೊಂಡಿವೆ? ಹಾಗೂ ಪ್ರದೇಶ ಮತ್ತು ಒಳನುಡಿಗಳ ನಂಟಸ್ತಿಕೆಯ ಅಂತರ್ಸಂಬಂಧಗಳು ಯಾವ ಬಗೆಯವು? ಎಂಬೆಲ್ಲ ಸಂಗತಿಗಳನ್ನು ಲೆಕ್ಕಿಸದೆಯೂ, ಕೇವಲ ಪರಸ್ಪರ ಸಂವಹನ ಸಾಧ್ಯತೆಯ ಮಟ್ಟವನ್ನು ಗಮನದಲ್ಲಿಟ್ಟುಕೊಂಡು, ಒಳನುಡಿಗಳು ರೂಪುಗೊಳ್ಳುವ ಬಗೆಯನ್ನು ಇಲ್ಲಿ ಕಾಣಬಹುದು.

2. ಸಾಮಾಜಿಕ ಮತ್ತು ರಾಜಕೀಯ ನಿಲುವುಗಳು ಕಾರಣವಾದರೇ?

1. ನಾರ್ವೇ ವರ್ಸಸ್ ಸ್ವೀಡನ್ ವರ್ಸಸ್ ಡೆನಿಶ್ = ನುಡಿಗಳು (ಇಲ್ಲಿ ಪರಸ್ಪರ ಗ್ರಾಹ್ಯತೆ ಸಾಧ್ಯವಿದೆ).

2. ತುಳು ವರ್ಸಸ್ ಕೊಡವ ವರ್ಸಸ್ ಬಡಗ ವರ್ಸಸ್ ಕನ್ನಡ = ನುಡಿಗಳು (ಇಲ್ಲಿ ಪರಸ್ಪರ ಸಂವಹನ ಸಾಧ್ಯವಿಲ್ಲ).

3. ಕಾಂಟೀಸ್ ವರ್ಸಸ್ ಮಂಡೋರಿಯನ್ ವರ್ಸಸ್ ಹಕ್ಕ ವರ್ಸಸ್ ಹೊಕ್ಕ್‍ಯಿನ್ = ಒಳನುಡಿ (ಇಲ್ಲಿ ಪರಸ್ಪರ ಸಂವಹನಸಾಧ್ಯವಿಲ್ಲ, ಆದರೂ ಇವುಗಳನ್ನು ಚೈನಿಸ್ ನುಡಿಯ ಒಳನುಡಿಗಳೆಂದು ಗುರುತಿಸಿದ್ದಾರೆ).

4. ಡೆನಿಶ್ ವರ್ಸಸ್ ಸ್ವೀಡಿಶ್ = ನುಡಿಗಳು (ಡೆನಿಶ್ ನುಡಿಯಿಗರು ಸ್ವೀಡಿಶ್‍ನ್ನು ಅರಿತುಕೊಳ್ಳುತ್ತಾರೆ, ಆದರೆ ಸ್ವೀಡಿಶ್ ನುಡಿಯಿಗರು ಡೆನಿಶ್‍ನ್ನು ಅರಿತುಕೊಳ್ಳಲಾರರು ಹಾಗಾದರೆ ಇಂತಹ ನೆಲೆಯನ್ನು ಹೇಗೆ ಗುರುತಿಸುವುದು).

5. ಮರಾಠಿ ವರ್ಸಸ್ ಕೊಂಕಣಿ = ಒಳನುಡಿಗಳು (ಪರಸ್ಪರ ಸಂವಹನ ನಿರೀಕ್ಷಿತ ಮಟ್ಟದಲ್ಲಿಲ್ಲ).

6. ಬಡಗ ವರ್ಸಸ್ ಸೋಲಿಗ = ಒಳನುಡಿ (ಇವುಗಳ ನಡುವೆ ಪರಸ್ಪರ ಸಂವಹನ ಸಾಧ್ಯವಿಲ್ಲ. ಆದಾಗ್ಯೂ ಅವುಗಳನ್ನು ಕನ್ನಡದ ಒಳನುಡಿಗಳೆಂದು ಕರೆಯುತ್ತಾರೆ).

ಈ ಎರಡನೇ ಸನ್ನಿವೇಶದಲ್ಲಿ ನುಡಿ ಹಾಗೂ ಒಳನುಡಿಗಳ ನಡುವಣ ವ್ಯತ್ಯಾಸಗಳನ್ನು ಗುರುತಿಸಲು ಪರಸ್ಪರ ಅರ್ಥಗ್ರಾಹ್ಯ ತತ್ವವನ್ನೇ ಮುಖ್ಯ ಮಾನದಂಡವನ್ನಾಗಿ ಇಟ್ಟುಕೊಂಡಿಲ್ಲ ಎಂಬುದು ಇಲ್ಲಿ ನಿಚ್ಚಳವಾಗಿ ಕಾಣುತ್ತದೆ. ಈ ಕೆಳಗಿನ ಚಿತ್ರದ ಮೂಲಕ ಈ ತೊಡಕನ್ನು ಇನ್ನಷ್ಟು ವಿವರವಾಗಿ ನೋಡಬಹುದು;

ಚಿತ್ರ- 01

ಇವುಗಳ ಸಂವಹನದ ಗ್ರಹಿಕೆಯಲ್ಲಿ ಸಮಾನತೆಯಿಲ್ಲಿ. ಗ್ರಹಿಕೆಯಲ್ಲಿ ಇಂತಹ ಅಸಮಾನ ಮಟ್ಟವಿದ್ದರೂ, ಬೇರೆ ನುಡಿಯೆಂದು ಕರೆಯದೇ ಒಳನುಡಿಯೆಂದು ಗುರುತಿಸುವುದಕ್ಕೆ ಸಾಮಾಜಿಕ, ಚಾರಿತ್ರಿಕ, ಪ್ರಾದೇಶಿಕ ಮತ್ತು ರಾಜಕೀಯ ನಿಲುವುಗಳೇ ಕಾರಣ. ನುಡಿ ಮತ್ತು ಒಳನುಡಿಗಳ ನಡುವೆ ಯಾವುದೇ ಬಗೆಯ ಖಚಿತ ಭಿನ್ನತೆಗಳನ್ನು ಪಟ್ಟಿ ಮಾಡಲು ಸಾಧ್ಯವಿಲ್ಲ ಎಂಬ ಸಂಗತಿ ಈ ಚರ್ಚೆಗಳಿಂದಲೇ ಮನವರಿಕೆಯಾಗುತ್ತದೆ.

ಸಾಂಸ್ಕೃತಿಕ ಅಸಮಾನ ತತ್ವಗಳು, ರಾಜಕೀಯ ಮತ್ತು ಆರ್ಥಿಕ ರಚನೆಗಳು ಹಾಗೂ ಚಾರಿತ್ರಿಕವಾಗಿ ನೆಲೆನಿಂತಿರುವ ಅಧಿಕಾರ ಸಂಬಂಧಗಳೇ ನುಡಿ ಮತ್ತು ಒಳನುಡಿ ಎಂಬಂತಹ ಡೈಕಾಟಮಿಯನ್ನು ಹುಟ್ಟು ಹಾಕುತ್ತವೆ. ನುಡಿಯೆಂದರೆ ಅತ್ಯಂತ ಮೇಲು (ಸೂಪರ್‍ಆರ್ಡಿನೇಟ್) ಎಂದೋ, ಒಳನುಡಿಯೆಂದರೆ ಅತ್ಯಂತ ಕೀಳು (ಸಬ್‍ಆರ್ಡಿನೇಟ್) ಎಂದೋ ನಿರ್ವಚಿಸಲಾಗಿದೆ. ಒಳನುಡಿಗಳಿಗೆ ಅಂಟಿರುವ ಕೀಳು, ಅಧೀನ, ವಿರೂಪ ಮುಂತಾದಂತಹ ಕಳಂಕಗಳನ್ನು ತಪ್ಪಿಸಲು ಉಪಭಾಷೆ ಇಲ್ಲವೇ ಒಳನುಡಿ ಎಂದು ಕರೆಯುವ ಬದಲಾಗಿ ನುಡಿಬಗೆ (ಲಿಂಗ್ವಿಸ್ಟಿಕ್ ವೆರೈಟಿ) ಎಂದು ಗುರುತಿಸಬೇಕು ಎಂಬುದು ಹೊಸಕಾಲದ ಬಹುತೇಕ ಸಾಮಾಜಿಕ ನುಡಿಯರಿಗರ ನಿಲುವಾಗಿದೆ.

ಸಾಮಾಜಿಕವಾಗಿ ನೆಲೆ ನಿಂತಿರುವ ಅಸಮಾನತೆಗಳು, ನುಡಿಯ ಮೂಲಕ ಹೇಗೆ ಪ್ರತಿನಿಧಿಸುತ್ತವೆ ಎಂಬುದಕ್ಕೆ ಉಪಭಾಷೆ ಮತ್ತು ಒಳನುಡಿಗಳೇ ಸಾಕ್ಷಿಯಾಗಿವೆ. ಅದಕ್ಕಾಗಿ ಮೇಲು ನುಡಿ (ಮೇಲು ಜಾತಿ) ಹಾಗೂ ಕೀಳು ನುಡಿ (ಕೀಳು ಜಾತಿ)ಗಳು ತಲೆಯೆತ್ತಿವೆ. ಇಂತಹ ತರತಮ ನಿಲುವುಗಳನ್ನು ಮೊದಲು ಕಿತ್ತು ಹಾಕಬೇಕು. ಅದಕ್ಕಾಗಿ ಹೊಸ ನುಡಿಗಟ್ಟುಗಳನ್ನು ಬಳಸುವ ಅಗತ್ಯವಿದೆ. ಇವು ಕೇವಲ ಟೆಕ್ನಿಕಲ್ ಪದಗಳಾಗಿರದೇ, ಲೋಕವನ್ನು ನೋಡುವ ಕ್ರಮವನ್ನೇ ಬದಲಿಸುತ್ತವೆ.

ನುಡಿಬಗೆ ಎಂಬುದು ಸಿದ್ಧಮಾದರಿಯ ತಿಳಿವನ್ನೇ ಪಲ್ಲಟಗೊಳಿಸುವ ಬಗೆಯೆಂದೇ ಹೇಳಬೇಕಾಗುತ್ತದೆ. ನುಡಿಬಗೆ ಕೇವಲ ವ್ಯತ್ಯಾಸವನ್ನು ಸೂಚಿಸುವ ಪದ. ಅಂದರೆ ಒಂದು [ಅ] ಇನ್ನೊಂದಕ್ಕಿಂತ [ಆ] ಹೇಗೆ ಬೇರೆ ಎಂಬುದನ್ನು ಮಾತ್ರ ತೋರಿಸುತ್ತದೆ, ಹೊರತಾಗಿ ತರತಮ ನೆಲೆಗಳನ್ನಲ್ಲ. ಬಗೆ/ವ್ಯತ್ಯಾಸಗಳು (ಡಿಫರೆನ್ಸ್) ಸ್ವಾಯತ್ತ ಅಸ್ತಿತ್ವವನ್ನು ಕಾಣಿಸುತ್ತವೆ.

ಆದರೆ ತರತಮ ನಿಲುವುಗಳು ಒಂದು ಮೇಲು ಮತ್ತೊಂದು ಕೀಳು ಎಂಬ ಅಸಮಾನ ಡೈಕಾಟಮಿಯನ್ನು ಹುಟ್ಟು ಹಾಕುತ್ತವೆ. ಒಂದು ಮೇಲು ಮತ್ತೊಂದು ಕೀಳು ಎಂದು ಹೀಗೆ ಹೇಳುವುದಕ್ಕೆ ಯಾವ ಆಧಾರವೂ ಇಲ್ಲ. ನುಡಿಗಳನ್ನು ಕೇವಲ ಉಲಿ ಮತ್ತು ಪದಕೋಶಿಕ (ಲೆಕ್ಷಿಕಲ್) ನೆಲೆಯಲ್ಲಿ ಮಾತ್ರ ಬೇರ್ಪಡಿಸಿ ಅವುಗಳ ನಡುವೆ ತರಮತಗಳನ್ನು ಹುಟ್ಟಹಾಕಲಾಗಿದೆ.

ಲೋಕವನ್ನು ನೋಡುವ ಬಗೆಯಲ್ಲಿಯೇ ಅನನ್ಯತೆ ಮತ್ತು ವಿಶಿಷ್ಟತೆ ಇರುತ್ತದೆ. ಪ್ರತೀ ನುಡಿಯು ಹಲವು ಬಗೆಗಳಲ್ಲಿ ತನ್ನದೆಯಾದ ಇಂತಹ ವಿಶಿಷ್ಟತೆ ಹಾಗೂ ಅನನ್ಯತೆಯ ಗುರುತುಗಳನ್ನು ಇಟ್ಟುಕೊಂಡಿರುತ್ತದೆ. ಅವುಗಳ ವೈವಿಧ್ಯತೆ ಬಹುತೇಕ ಪದಕೋಶಿಕ ನೆಲೆಯಿಂದ ಕೂಡಿರುತ್ತದೆ. ಇಂತಹ ವೈವಿಧ್ಯತೆಗೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ಮಾನಸಿಕ ಕಾರಣಗಳಿರುತ್ತವೆ. ಆಯಾ ಪರಿಸರಕ್ಕೆ ಅನುಗುಣವಾಗಿ ನುಡಿ ಇಲ್ಲವೇ ಒಳನುಡಿಗಳ ಸ್ವರೂಪ ರೂಪುಗೊಂಡಿರುತ್ತವೆ.

ಹಾಗಾಗಿ ಮಾನವರ ಚಿಂತನೆಯ ಮಾದರಿ, ಗ್ರಹಿಕೆಯ ಬಗೆಗಳು ರೂಪುಗೊಳ್ಳುವುದು, ಅವರಲ್ಲಿ ಅಂತಸ್ಥವಾಗಿರುವ ನುಡಿ ಸಾಮಥ್ರ್ಯದಿಂದಲೇ ಎಂಬುದನ್ನು ಮರೆಯುವಂತಿಲ್ಲ. (ನುಡಿಯ) ಅಂತಸ್ಥ ಸಾಮಥ್ರ್ಯದಲ್ಲಿ ತರಮತಮ ಎಂಬದು ಇರುವುದಿಲ್ಲ. ಬದಲಾಗಿ ನುಡಿಗಳ ನಡುವಣ ಸಮಾನ ತತ್ವಗಳು ಹಾಗೂ ವಿಕಲ್ಪಗಳು ಮಾತ್ರವಿರುತ್ತವೆ. ಇವುಗಳ ಆಧಾರದ ಮೇಲೆ ನುಡಿಗಳನ್ನು ಬೇರ್ಪಡಿಸಿ ಬೇರೆ ಬೇರೆ ನುಡಿಗಳು ಹುಟಿಸಬಹುದು.

ಕೇವಲ ಹೊರಪದರ ರಚನೆಯನ್ನು ಮಾತ್ರ ಪರಿಗಣಿಸಿ, ನುಡಿಯ ಇಡೀ ರಾಚನಿಕ ಸ್ವರೂಪವನ್ನು ಅರಿಯಲು ಸಾಧ್ಯವಿಲ್ಲ. ಹಾಗಾಗಿ ಚಾಮ್‍ಸ್ಕಿ ಹೇಳುವ ನುಡಿಯ ಏಕರೂಪತೆ (ಲಿಂಗ್ವಿಸ್ಟಿಕ್ ಹೋಮಿಜಿನಿಟಿ) ಎನ್ನುವುದು ನುಡಿಯ ಹೊರಪದರ ರಾಚನಿಕ ವ್ಯವಸ್ಥೆಗೆ ಸಂಬಂಧಿಸಿದ್ದಲ್ಲ. ಅದು ಅಂತಸ್ಥ ಸಾಮರ್ಥ್ಯಕ್ಕೂ ಹಾಗೂ ಒಳಪದರ ರಚನೆಗೂ ಸಂಬಂಧಿಸಿದ್ದು. ಹಾಗಾಗಿ ಚಾಮ್‍ಸ್ಕಿ ಪ್ರಕಾರ ನುಡಿಯನ್ನು ಅರಿಯುವುದೆಂದರೆ, ಅದರ ಅಂತಸ್ಥ ಸಾಮಥ್ರ್ಯದ ರಾಚನಿಕ ಸ್ವರೂಪವನ್ನು ಅರಿಯುವುದಾಗಿದೆ.

ಅಂದರೆ ಈ ನುಡಿ ಮತ್ತು ಒಳನುಡಿ ಎಂಬ ನೆಲೆಗಳನ್ನು ಬೇರೆ ತಾತ್ವಿಕ ಚೌಕಟ್ಟಿನಿಂದ ಮರು ಕಟ್ಟಿಕೊಳ್ಳುವ ಅಗತ್ಯವಿದೆ. ಏಕೆಂದರೆ ನುಡಿಯ ರಚನೆ ಎಂಬುದು ಮಾನವರಲ್ಲಿ ಜನ್ಮಜಾತವಾಗಿ ಬಂದಿರುತ್ತದೆ. ಹೊರತು ಯಾವುದೇ ಸಾಮಾಜಿಕ ವಿಶಿಷ್ಟತೆ ಇಲ್ಲವೇ ರಾಜಕೀಯ ತೀರ್ಮಾನದಿಂದ ನಿರ್ಧಾರವಾಗುವಂತಹದಲ್ಲ. ಪ್ರತೀ ಮಾನವನ ಮೆದುಳಿನಲ್ಲಿ ಅವರು ರೂಢಿಸಿಕೊಳ್ಳುವ ನುಡಿಗೆ ಸಂಬಂಧಿಸಿದ ರಾಚನಿಕ ನಮೂನೆಗಳು ಮಾತ್ರವಿರುವುದಿಲ್ಲ. ಅವನು ಇಲ್ಲವೇ ಅವಳು ರೂಢಿಸಿಕೊಳ್ಳಬಹುದಾದ ಯಾವುದೇ ನುಡಿಗೆ ಹೊಂದಿಕೆಯಾಗುವ ರಾಚನಿಕ ನಮೂನೆಗಳು ಇರುತ್ತವೆ.

ನುಡಿ ಮತ್ತು ಒಳನುಡಿಗಳ ಕುರಿತ ನಿಲುವುಗಳು ಕೇವಲ ಸಾಮಾಜಿಕ ಇಲ್ಲವೇ ರಾಜಕೀಯ ಮಾನದಂಡಗಳಿಂದ ಮಾತ್ರ ರೂಪುಗೊಳ್ಳಲು ಸಾಧ್ಯವಿಲ್ಲ ಎಂಬುದು ಮಾತ್ರ ಖಚಿತವಾದರೂ, ಅವುಗಳು ಅಂತಹ ನೆಲೆಗಳಿಂದಲೇ ಹೆಚ್ಚು ಗಟ್ಟಿಗೊಂಡಿವೆ. ಪರಸ್ಪರ ಸಂವಹನ/ ಅರ್ಥಗ್ರಾಹ್ಯತೆಯ ಕುರಿತ ಕೇಳ್ವಿಯೇ ಇಲ್ಲಿ ಅಪ್ರಸ್ತುತವಾಗಿದೆ. ಏಕೆಂದರೆ ನುಡಿಗಳ ನಡುವಣ ವ್ಯತ್ಯಾಸಗಳು ವಿಕಲ್ಪಗಳ (ಪ್ಯಾರಮೀಟರ್ಸ್) ಮೂಲಕ ಕಾಣಿಸಿಕೊಂಡರೆ, ನುಡಿಗಳ ನಡುವಣ ಸಮಾನತೆಗಳು (ಪ್ರಿನ್ಸಿಪಲ್ಸ್) ತತ್ವಗಳ ಮೂಲಕ ನಿರ್ಧಾರವಾಗುತ್ತವೆ.

ಹಾಗಾಗಿ ನುಡಿ ಮತ್ತು ಒಳನುಡಿಗಳನ್ನು ಗುರುತಿಸುವುದೆಂದರೆ, ಅವುಗಳ ನುಡುವಣ ವಿಕಲ್ಪಗಳನ್ನು ಗುರುತಿಸುವುದೋ ಇಲ್ಲವೇ ಕೇವಲ ಹೊರಪದರ ರಚನೆಗಳಲ್ಲಿ ಕಾಣುವ ವ್ಯತ್ಯಾಸಗಳನ್ನು ಗುರುತಿಸುವುದೋ ಎಂಬ ಗೊಂದಲ ತಲೆಯೆತ್ತುತ್ತದೆ. ಹಾಗಾಗಿ ಪರಸ್ಪರ ಅರ್ಥಗ್ರಾಹ್ಯತೆಯ ತತ್ವ ಅಷ್ಟೊಂದು ಮಹತ್ವದ ಸಂಗತಿಯಾಗಿ ಕಾಣಲಾರದು.

ಜಾನ್ ಲಯನ್ಸ್ (1981) ಎಂಬ ನುಡಿಯರಿಗನ ಪ್ರಕಾರ ನುಡಿಗಳಲ್ಲಿ ಕೆಲವು ಮೇಲು, ಮತ್ತೆ ಕೆಲವು ಕೀಳು ಅನ್ನುವ ಮಾತು ಸೈದ್ಧಾಂತಿಕ ನುಡಿಯರಿಮೆಯಿಂದಾಗಲಿ ಇಲ್ಲವೇ ನುಡಿದತ್ತವನ್ನು ಕಲೆಹಾಕಿ ಆ ಮೂಲಕ ಸಂಶೋಧನೆಯನ್ನು ಮಾಡಿ ಸಾಬೀತುಗೊಳಿಸಿದ ಸಂಶೋಧನೆಯ ಫಲಿತವೆಂದಾಗಲಿ ಅಲ್ಲ. ಇದು ಇನ್ನೂ ಸಂಶೋಧನೆಗೆ ಒಳಪಟ್ಟು ಆ ಮೂಲಕ ನಿರ್ಧಾರಗೊಳ್ಳಬೇಕಾದ ಸಂಗತಿ ಇಲ್ಲವೇ ಇದನ್ನು ಒಂದು ಕಲ್ಪಿತ ಪ್ರಮೆಯೆಂದು ಗುರುತಿಸಬಹುದೇ ಹೊರತು ಬೇರೇನೂವಲ್ಲ.

ಹಾಗಾಗಿ ಹೊಸಕಾಲದ ವೈಚಾರಿಕ ನೆಲೆಯ ಮೇಲೆ ಹುಟ್ಟಿಕೊಂಡ ನಿಗಮನ ತರ್ಕ (ಡಿಡಕ್ಟಿವಿಜಮ್) ವಿಧಾನ ತತ್ವವನ್ನು ಚಾಮ್‍ಸ್ಕಿ ಪರಿಚಯಿಸಿದನು. ಇದರ ಪ್ರಕಾರವೂ ಕೂಡ ನುಡಿಗಳ ನಡುವಿನ ಯಾವುದೇ ಬಗೆಯ ತರತಮಗಳನ್ನು ಗುರುತಿಸುವುದು ಸಾಧ್ಯವಿಲ್ಲ. ಆದರೆ ಚಾಮ್‍ಸ್ಕಿಯ ಪ್ರಕಾರ ಮಾನವರ ನುಡಿಗಳಲ್ಲಿ ‘ಹೆಚ್ಚು ಸಜ್ಜಾದ, ಹೆಚ್ಚು ಅಣಿಯಾದ’ ನುಡಿಗಳು ಮತ್ತು ‘ಕಡಿಮೆ ಸಜ್ಜಾದ, ಕಡಿಮೆ ಅಣಿಯಾದ’ ನುಡಿಗಳೆಂದು ವಿಂಗಡಿಸಬಹುದು. ನುಡಿಗಳ ಬಗ್ಗೆ ಮತ್ಯಾವ ‘ಮೌಲ್ಯ ನಿರ್ಣಯ’ (ವ್ಯಾಲ್ಯೂ ಜೆಡ್ಜಮೆಂಟ್) ಮಾಡಲು ಸಾಧ್ಯ ಇಲ್ಲ. ಹಾಗೂ ಮತ್ಯಾವುದೆ ಮೌಲ್ಯ ನಿರ್ಣಯವೂ ಸಲ್ಲದು.

ಇಂಗ್ಲಿಶ್ ಇವತ್ತು ಲೋಕದಲ್ಲಿ ಪಡೆದಿರುವ ಜಾಗ ತನ್ನದೇ ಆದ ಅಭಿವ್ಯಕ್ತಿಯ ಬಲದಿಂದ ಅಲ್ಲ. ಇದೊಂದು ಚಾರಿತ್ರಿಕ ಬೆಳವಣಿಗೆಯ ಪರಿಣಾಮದಿಂದ ರೂಪುಗೊಂಡ ಆಟ ಎಂದು ಹೇಳಬಹುದು. ಚರಿತ್ರೆಯ ನಿಲುವುಗಳು ಇಂಗ್ಲಿಶ್‍ನ್ನು ಹೆಚ್ಚು ಹೆಚ್ಚು ಸಜ್ಜುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಸಂಸ್ಕೃತ ಇಲ್ಲವೇ ಬೇರಾವುದೇ ನುಡಿಗಳು ಈ ಜಾಗದಲ್ಲಿ ಇದ್ದಿದ್ದರೆ, ಈ ಮಟ್ಟಿನ ಮಹತ್ವವನ್ನು ಪಡೆದುಕೊಳ್ಳುತ್ತಿದ್ದವು ಎಂದು ಹೇಳುವುದು ದುಸ್ತರ. ಒಂದು ವೇಳೆ ಬೇರೆ ನುಡಿಗಳು ಬೆಳೆಯಬಹುದಿತ್ತೆಂದು ಅನ್ನಿಸಿದರೂ, ಇಂಗ್ಲಿಶ್ ಹಾಗೂ ಸಂಸ್ಕೃತದಷ್ಟು ಬಲಶಾಲಿಗಳಾಗಿ ರೂಪುಗೊಳ್ಳುತ್ತಿರಲಿಲ್ಲ ಎಂಬುದು ಗಮನಾರ್ಹ.

ಪರಸ್ಪರ ಅರ್ಥಗ್ರಾಹ್ಯತೆಯ ತತ್ವ: ತೊಡಕುಗಳು ಎಂತಹವು?

ಪರಸ್ಪರ ಅರ್ಥಗ್ರಾಹ್ಯತೆಯ ತತ್ವವನ್ನು ನುಡಿ ಹಾಗೂ ಒಳನುಡಿಗಳ ನಡುವೆ ಗಡಿಗೆರೆಗಳನ್ನು ಗುರುತಿಸಲು ಮಾನದಂಡವನ್ನಾಗಿ ಬಳಸುವಲ್ಲಿ ಸಾಕಷ್ಟು ಸಿಕ್ಕಲುಗಳಿವೆ. ಈಗಾಗಲೇ ಕೆಲವು ಸಿಕ್ಕುಗಳು ಮೇಲಿನ ಚರ್ಚೆಯಿಂದ ನಮ್ಮ ಗಮನಕ್ಕೆ ಬಂದಿವೆ. ಇವುಗಳಲ್ಲಿ ಅತ್ಯಂತ ಮುಖ್ಯವಾದ ತೊಡಕು ಏನೆಂದರೆ ಅರ್ಥದ ಮಟ್ಟ (ಪ್ರಮಾಣ)ದಲ್ಲಿ ವ್ಯತ್ಯಾಸಗಳಿವೆ. ಅಂದರೆ ಸ್ವೀಡಿಶ್ ನುಡಿಯಿಗರು ನಾರ್ವೇಯನ್ನು ಚನ್ನಾಗಿ ಅರಿಯಬಲ್ಲರು.

ಆದರೆ ನಾರ್ವೇ ನುಡಿಯಿಗರಿಗೆ ಸ್ವೀಡಿಶ್‍ನ್ನು ಅದೇ ಮಟ್ಟದಲ್ಲಿ ಅರಿಯಲು ಸಾಧ್ಯವಿಲ್ಲ. ಸ್ಕ್ಯಾಂಡಿನೆವಿಯನ್ನರಲ್ಲಿ ಪೂರ್ಣ ಪ್ರಮಾಣದ ಪರಸ್ಪರ ಸಂವಹನ ಸಾಧ್ಯವಿಲ್ಲದಿದ್ದರೂ, ಅವರಲ್ಲಿ ತಕ್ಕಮಟ್ಟಿಗಾದರೂ ಪರಸ್ಪರ ಸಂವಹನ ಇರುವುದನ್ನು ಕಾಣಬಹುದು. ಇಂತಹ ಸನ್ನಿವೇಶದಲ್ಲಿ ಕೆಲವು ರಿಯಾತಿಗಳು ಇದ್ದೇ ಇರುತ್ತವೆ. ಎತ್ತುಗೆಗಾಗಿ ನಿಧಾನವಾಗಿ ಮಾತನಾಡುವುದು, ಪದಗಳು ಇಲ್ಲವೇ ಉಲಿಗಳನ್ನು ಬಿಟ್ಟು ಉಚ್ಚರಿಸುವುದು, ಅರ್ಥ ಪಲ್ಲಟಗಳನ್ನು ಉಂಟುಮಾಡುವುದು ಮುಂತಾದವುಗಳನ್ನು ಕಾಣಬಹುದು.

ಆದರೆ ಜರ್ಮನ್ನಿನ ಒಳನುಡಿಗಳಲ್ಲಿ ಪರಸ್ಪರ ಸಂವಹನಕ್ಕೆ ಅವಕಾಶವೇ ಇಲ್ಲ. ಈ ಎರಡೂ ಸನ್ನಿವೇಶಗಳಲ್ಲಿ ಪರಸ್ಪರ ಅರ್ಥಗ್ರಾಹ್ಯತೆಯ ಮಟ್ಟದಲ್ಲಿ ಯಾವುದೇ ಸಮಾನತೆಯಿಲ್ಲ ಎಂಬುದು ಮಾತ್ರ ಎದ್ದು ಕಾಣುತ್ತದೆ. ನಮ್ಮ ಸಂದಂರ್ಭದಲ್ಲಿಯೂ ಇಂತಹ ತೊಡಕುಗಳಿವೆ. ಆದರೆ ಅವುಗಳನ್ನು ಬಿಡಿಸಿ ನೋಡುವ ಬಗೆಗಳು ಬೇರೆಯಾಗಿವೆ ಎಂದು ಕಾಣುತ್ತದೆ.

ಅಂದರೆ ಮಲೆಯಾಳಂ ನುಡಿಯಿಗರು ತಕ್ಕ ಮಟ್ಟಿಗೆ ತಮಿಳನ್ನು ಅರಿಯಬಲ್ಲವರಾದರೆ, ತಮಿಳು ನುಡಿಯಿಗರಿಗೆ ಮಲೆಯಾಳಂ ಅರಿತುಕೊಳ್ಳಲು ದುಸ್ತರವಾಗುತ್ತದೆ. ಹಾಗೂ ಬೀದರ ಕನ್ನಡದ ಆಡುಗರು ಕರ್ನಾಟಕದ ಎಲ್ಲ ವಲಯಗಳ ಕನ್ನಡವನ್ನು ಅರಿತುಕೊಳ್ಳಬಲ್ಲರು. ಆದರೆ ಅವರ ಕನ್ನಡವನ್ನು ಇತರ ಒಳನುಡಿಯಿಗರು ಅದೇ ಪ್ರಮಾಣದಲ್ಲಿ ಅರಿತುಕೊಳ್ಳಲಾರರು.

ಪರಸ್ಪರ ಅರ್ಥಗ್ರಾಹ್ಯತೆಯ ತತ್ವ ಬೇರೆಯೇ ಬಗೆಯ ಮಾನದಂಡಗಳನ್ನು ನೆಚ್ಚಿಕೊಂಡಿರುತ್ತೆಂದು ಕಾಣುತ್ತದೆ. ಅವುಗಳೆಂದರೆ ಬೇರೆ ಒಳನುಡಿಗಳಿಗೆ ಒಡ್ಡಿಕೊಳ್ಳುವ ಪ್ರಮಾಣ, ಶಿಕ್ಷಣದಲ್ಲಿ ಒಳನುಡಿಗಳಿಗೆ ಸಿಗುವ ಅವಕಾಶ ಇಲ್ಲವೇ ಬಳಕೆಯ ಪ್ರಮಾಣ ಹಾಗೂ ಬೇರೆ ಒಳನುಡಿ ಮತ್ತು ಆ ಒಳನುಡಿಯಿಗರನ್ನು ಒಪ್ಪುವ ಇಲ್ಲವೇ ತಾಳಿಕೊಳ್ಳುವ ಬಗೆಗಳನ್ನು ಕುರಿತಾಗಿರುತ್ತದೆ.

ಏಕೆಂದರೆ ಅಧಿಕಾರ ಸಂಬಂಧದ ಆವರಣದಲ್ಲಿರುವ ಒಳನುಡಿ ಮತ್ತು ಅವುಗಳ ಆಡುಗರು ಪ್ರಜ್ಞಾಪೂರಕವಾಗಿಯೇ ತಮ್ಮ ಒಳನುಡಿಗೆ ಹೊರತಾದ ಬೇರೊಂದು ಒಳನುಡಿಯನ್ನು ನಿರಾಕರಿಸುವ ಸಾಧ್ಯತೆಗಳಿರುತ್ತವೆ. ಕಾರಣ ‘ಎ’ ಒಳನುಡಿ ‘ಬಿ’ಕ್ಕಿಂತ ದೊಡ್ಡದು ಇಲ್ಲವೇ ಚಿಕ್ಕದು ಹಾಗೂ ‘ಎ’ ಒಳನುಡಿ ಮೇಲು ಇಲ್ಲವೇ ‘ಬಿ’ ಒಳನುಡಿ ಕೀಳು ಎಂಬ ನಿಲುವುಗಳು ಕೂಡ ಇಂತಹ ನಿರಾಕರಣೆಗೆ ಒತ್ತಾಸೆಯಾಗಿರುತ್ತವೆ.

ಹಾಗಾಗಿ ಈ ಪರಸ್ಪರ ಅರ್ಥಗ್ರಾಹ್ಯತೆಯ ತತ್ವಕ್ಕೆ ತಕ್ಕಮಟ್ಟಿನ ಪ್ರಾಮುಖ್ಯತೆ ಇದ್ದಂತೆ ಕಂಡರೂ, ಯಾವುದು ನುಡಿ, ಯಾವುದು ಒಳನುಡಿ ಹಾಗೂ ಯಾವುದು ಏನಲ್ಲ ಎಂಬುದನ್ನು ನಿರ್ಧರಿಸುವಲ್ಲಿ ಇದರಿಂದ ಯಾವುದೇ ಬಗೆಯ ಸಹಾಯ ಸಿಗುವುದಿಲ್ಲ. ಸ್ಕ್ಯಾಂಡಿನೆವಿಯನ್ ಹಾಗೂ ಜರ್ಮನ್ ನುಡಿಗಳ ಕುರಿತ ಚರ್ಚೆಗಳು ಇಂತಹ ಅಸಂಗತಗಳನ್ನು ಎತ್ತಿ ತೋರಿಸಿವೆ.

ನುಡಿ ತನ್ನನ್ನು ವಿವರಿಸಿಕೊಳ್ಳಲು ಬೇಕಾಗಿರುವ ಲಕ್ಷಣಗಳನ್ನು ತನ್ನ ಒಡಲಲ್ಲಿಯೇ ಇರಸಿಕೊಂಡಿದ್ದರೂ, ಅದು ಕೇವಲ ನುಡಿಯ (ಲಿಂಗ್ವಿಸ್ಟಿಕ್) ಕಲ್ಪನೆ ಮಾತ್ರವಾಗಿ ಉಳದಿಲ್ಲ. ಬದಲಾಗಿ ಸಾಂಸ್ಕೃತಿಕ, ರಾಜಕೀಯ ಕಲ್ಪನೆಯೂ ಆಗಿರುತ್ತದೆ ಎಂಬುದು ಗಮನಾರ್ಹ. ನಾರ್ವೇ, ಸ್ವೀಡಿಶ್, ಡೆನಿಶ್ ಹಾಗೂ ಜರ್ಮನ್ ನುಡಿಗಳ ಕುರಿತ ನಿಲುವುಗಳು ರಾಜಕೀಯ, ಪ್ರಾದೇಶಿಕ, ಸಾಮಾಜಿಕ, ಚಾರಿತ್ರಿಕ ಮತ್ತು ಸಾಂಸ್ಕೃತಿಕ ಪ್ರಭಾವಕ್ಕೆ ಒಳಗಾಗಿರುವುದು ಇಲ್ಲಿ ನಿಚ್ಚಳವಾಗಿ ಕಾಣುತ್ತದೆ.

ನುಡಿಯರಿಮೆಗೆ ಹೊರತಾದ ಇಂತಹ ತೀರ್ಮಾನಗಳೇ, ನುಡಿ ಮತ್ತು ಒಳನುಡಿಗಳನ್ನು ಪ್ರತ್ಯೇಕಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ. ಅಂದರೆ ನಾರ್ವೇ, ಸ್ವೀಡಿಶ್, ಡೆನಿಶ್ ನುಡಿಗಳಿಗೆ ತಮ್ಮದೇ ಆದ ಪ್ರಾದೇಶಿಕ ಸ್ವಾಯತ್ತತೆ, ರಾಷ್ಟ್ರ, ರಾಜಕೀಯ ಹಕ್ಕು, ವರ್ಣಮಾಲೆ, ಸೊಲ್ಲರಿಮೆ ಹಾಗೂ ಸಾಹಿತ್ಯಗಳು ಇರುವುದರಿಂದ, ಆಯಾ ನುಡಿಯಿಗರು ತಾವಾಡುವ ನುಡಿಗಳು ಬೇರೆ ಬೇರೆಯೆಂದು ನಂಬಿರುತ್ತಾರೆ.

ಆ ಕಾರಣಕ್ಕಾಗಿ ಇವು ಮೂರು ಬೇರೆ ನುಡಿಗಳಾಗಿ ನೆಲೆನಿಂತಿವೆ. ರಾಚನಿಕವಾಗಿ ಎಷ್ಟೇ ಹತ್ತಿರವಿದ್ದರೂ, ಹಿಂದಿ ಮತ್ತು ಉರ್ದು ಎರಡೂ ಬೇರೆ ಬೇರೆ ನುಡಿಗಳು. ಇಲ್ಲಿ ನುಡಿಯರಿಮೆಯ ಯಾವುದೇ ಸಮರ್ಥನೆಗಳಿಗೆ ಅವಕಾಶವಿಲ್ಲ. ಕರ್ನಾಟಕದಲ್ಲಿರುವ ತುಳು, ಕೊಂಕಣಿ, ಬ್ಯಾರಿ, ಉರ್ದು, ಕೊಡವ ಮುಂತಾದವುಗಳಿಗೆ ಇಂತಹ ಯಾವುದೇ ಸಾಂಸ್ಥಿಕ ಸ್ವಾಯತ್ತತೆ ಇಲ್ಲವೇ ಅಧಿಕಾರ ಇಲ್ಲದಿರುವುದರಿಂದ, ಇವುಗಳನ್ನು ಬಹುತೇಕ ಸನ್ನವೇಶದಲ್ಲಿ ಕೇವಲ ಒಳನುಡಿಗಳನ್ನಾಗಿ ಆರೋಪಿಸಲಾಗುತ್ತದೆ.

ಈ ಕಾರಣಗಳಿಂದಲೇ ‘ನುಡಿ’ ಎನ್ನುವುದು ನುಡಿಯರಿಮೆಯ ಪ್ರಕಾರವೂ ಒಂದು ನಾನ್‍ಟೆಕ್ನಿಕಲ್ ಪದವಾಗಿದೆ ಅಷ್ಟೇ. ನುಡಿ, ಒಳನುಡಿ, ಪರಸ್ಪರ ಅರ್ಥಗ್ರಾಹ್ಯತೆ ಮುಂತಾದ ವರ್ಣಾತ್ಮಕ ಅರಿಮೆ ಪದಗಳನ್ನು ಬಣ್ಣಿಸುವಾಗ ಅತ್ಯಂತ ನಿಗಾವಹಿಸಬೇಕಾಗುತ್ತದೆ.

ನುಡಿ ಹಾಗೂ ಒಳನುಡಿಗಳ ನುಡುವಣ ಅಂತರ್ಸಂಬಂಧಗಳು ಸಾಮಾಜಿಕ ಸ್ವರೂಪದ್ದಾಗಿರುತ್ತವೆ. ಹಾಗಾಗಿ ಇವುಗಳನ್ನು ಸ್ವಾಯತ್ತತೆ ವರ್ಸಸ್ ವೈವಿಧ್ಯತೆ ಎಂಬ ವಿರೋಧಾತ್ಮಕ ನೆಲೆಯಿಂದ ವ್ಯಾಖ್ಯಾನಿಸಬೇಕಾಗುತ್ತದೆ.

ಅಂದರೆ ಯಾವುದೇ ಒಂದು ಸ್ವಾಯತ್ತ ನುಡಿ ಇಲ್ಲವೇ ನುಡಿಬಗೆಯನ್ನು ವಿಶಿಷ್ಟವೆಂದೋ ಸ್ವತಂತ್ರವೆಂದೋ ಗ್ರಹಿಸಿದರೆ, ಎಷ್ಟೋ ನುಡಿಬಗೆಗಳು ವೈವಿಧ್ಯತೆಯನ್ನು, ಯಾವುದು ತನ್ನನ್ನು ಒಂದು ಸ್ವಾಯತ್ತ ನುಡಿಯೆಂದು ಗುರುತಿಸಿಕೊಂಡಿರುತ್ತದೆಯೋ, ಆ ನುಡಿಯಲ್ಲಿ ಸಮಾವೇಶಗೊಳಿಸಲಾಗುತ್ತದೆ.

ಅವುಗಳ ನಡುವಣ ಯಾವುದೇ ರಾಚನಿಕ ಸಾಮ್ಯ ಹಾಗೂ ವೈಸಮ್ಯಗಳನ್ನು ಲೆಕ್ಕಿಸದೇ ಇಂತಹ ನಿಲುವುಗಳನ್ನು ತಾಳುವ ಬಗೆ ಅದು ಹೇಗೆ ನುಡಿಯರಿಮೆಯ ನೆಲೆಯಾಗುತ್ತದೆ?. ಈ ವಿವರಗಳು ಪರಸ್ಪರ ಅರ್ಥಗ್ರಾಹ್ಯತೆ ತತ್ವದ ನೆಲೆಗಳನ್ನು ಇನ್ನಷ್ಟೂ ಜಟಿಲಗೊಳಿಸುತ್ತವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending