Connect with us

ದಿನದ ಸುದ್ದಿ

ದಾವಣಗೆರೆ ವಿವಿ 7ನೇ ವಾರ್ಷಿಕ ಘಟಿಕೋತ್ಸವ :56 ಪಿಹೆಚ್‍ಡಿ-62 ಚಿನ್ನದ ಪದಕ

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆ ವಿಶ್ವವಿದ್ಯಾನಿಲಯದ 7ನೇ ವಾರ್ಷಿಕ ಘಟಿಕೋತ್ಸವ ಬುಧವಾರ ಇಲ್ಲಿನ ವಿವಿ ಕ್ಯಾಂಪಸ್‍ನ ಶಿವಗೊಂಗೋತ್ರಿ ಆವರಣದಲ್ಲಿ ಕೋವಿಡ್ ನಿಯಂತ್ರಣ ಮಾರ್ಗಸೂಚಿಯನ್ವಯ ಸರಳವಾಗಿ ನಡೆಯಿತು.

ಸಮಾರಂಭದಲ್ಲಿ 56 ಜನರಿಗೆ ಪಿಹೆಚ್‍ಡಿ ಪ್ರದಾನ ಮಾಡಲಾಯಿತು. 62 ಚಿನ್ನದ ಪದಕ ನೀಡಲಾಯಿತು. 8441 ವಿದ್ಯಾರ್ಥಿಗಳು ಸ್ನಾತಕ ಪದವಿ ಹಾಗೂ 1592 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆದರು.

ಗೌರವ ಡಾಕ್ಟರೇಟ್

ಈ ಬಾರಿ ದಾವಣಗೆರೆ ವಿಶ್ವವಿದ್ಯಾನಿಲಯ ವತಿಯಿಂದ ಒಬ್ಬರಿಗೆ ಮಾತ್ರ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದ್ದು ಕಲಬುರ್ಗಿಯ ಶರಣಬಸವೇಶ್ವರ ಅಪ್ಪ ಶೈಕ್ಷಣಿಕ ಸಂಸ್ಥೆಗಳ ಅಧ್ಯಕ್ಷರಾಗಿರುವ ಮಾತೋಶ್ರೀ ದಾಕ್ಷಾಯಿಣಿ ಅಪ್ಪ ಅವರಿಗೆ ಈ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. 30 ವರ್ಷದ ಸಾಮಾಜಿಕ ಸೇವೆ ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಲಾಯಿತು.

ವರ್ಚುವಲ್ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯ ಅತಿಥಿಗಳಾಗಿ ಘಟಿಕೋತ್ಸವದ ಮುಖ್ಯ ಭಾಷಣ ನೆರವೇರಿಸಿದ ವಿಕ್ರಮ್ ಸಾರಾಭಾಯಿ ಪ್ರೊಫೆಸರ್ ಹಾಗೂ ಇಸ್ರೋದ ಮಾಜಿ ಅಧ್ಯಕ್ಷರಾದ ಡಾ. ಎ.ಎಸ್. ಕಿರಣ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಕಲಿಕೆ ಕೇವಲ ಕಾಲೇಜು ಶಿಕ್ಷಣಕ್ಕೆ ಸೀಮಿತವಾಗಬಾರದು. ಕಲಿಕೆ ಎಂದಿಗೂ ಅಂತ್ಯವಾಗಿವುದಿಲ್ಲ. ಬದಲಾಗಿ ಅದೊಂದು ನಿರಂತರ ಪ್ರಕ್ರಿಯೆಯಾಗಿದ್ದು, ನಿರಂತರ ಕಲಿಕೆÀ ಸ್ಪರ್ಧಾತ್ಮಕ ಹಾಗೂ ವೇಗವಾಗಿ ಬದಲಾಗುವ ಪರಿಸ್ಥಿತಿಯಲ್ಲಿ ಮುನ್ನಡೆ ಸಾಧಿಸಲು ಸಹಕರಿಸುತ್ತದೆ ಎಂದು ಹೇಳಿದರು.

ಪ್ರತಿಭಾ ಕುಲವನ್ನು ರೂಪಿಸುವಲ್ಲಿ ಶೈಕ್ಷಣಿಕ ವಲಯದ ಪಾತ್ರ ತುಂಬಾ ದೊಡ್ಡದಿದೆ. ಇದರಿಂದಾಗಿ ದೇಶ ಎಲ್ಲಾ ವಲಯಗಳಲ್ಲಿ ಬೆಳೆಯಲು, ಸ್ಪರ್ಧಿಸಲು ಹಾಗೂ ಯಶಸ್ಸು ಗಳಿಸಲು ಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಳೆಯ ದಾರಿಯಲ್ಲಿ ಹೆಜ್ಜೆ ಹಾಕದೇ,ತಮ್ಮದೇ ಆದ ಹೊಸ ಪಥದಲ್ಲಿ ವೇಗವಾಗಿ ರೂಪಿಸಿಕೊಳ್ಳಬೇಕು. ಆ ಮೂಲಕ ತಂತ್ರಜ್ಞಾನವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕೋವಿಡ್ ನಿರ್ವಹಣೆಯಲ್ಲಿ ತಂತ್ರಜ್ಞಾನ ಮಹತ್ವಪೂರ್ಣವಾಗಿ ನೆರವಾಗಿದ್ದು, ಕೇವಲ ಆರೋಗ್ಯವಷ್ಟೇ ಅಲ್ಲದೆ, ದೈನಂದಿನ ಜೀವನಕ್ಕೂ ತಂತ್ರಜ್ಞಾನ ನೆರವಾಗಿರುವುದು ವಿಶೇಷವಾಗಿದೆ. ಕೊರೊನಾ ಹರಡುತ್ತಿರುವಂತೆಯೇ ತಂತ್ರಜ್ಞಾನ ಪರಿಹಾರಗಳು ಸೋಂಕು ನಿಗಾ ಹಾಗೂ ನಿಯಂತ್ರಣಕ್ಕೆ ನೆರವಾಗಿದೆ. ಇದರಿಂದಾಗಿ ಆರೋಗ್ಯ ವ್ಯವಸ್ಥೆ ಮೇಲಿನ ಹೊರೆ ಹಾಗೂ ಆರೋಗ್ಯ ವೃತ್ತಿಪರರ ಕಾರ್ಯ ನಿರ್ವಹಣೆಯ ಭಾರ ಕಡಿಮೆಯಾಗಿರುವುದು ವಿಶೇಷ ಎಂದು ಬಣ್ಣಿಸಿದರು.

ದೈಹಿಕ ಅಂತರ ಕಾಯ್ದುಕೊಳ್ಳಬೇಕಾದ ಈ ಸಂದರ್ಭದಲ್ಲಿ ವರ್ಚುಯಲ್ ಪ್ಲಾಟ್‍ಫಾರಂಗಳು, ವಿಡಿಯೋ ಕಾನ್ಫರೆನ್ಸ್ ಹಾಗೂ ಡಿಜಿಟಲ್ ನಿಗಾ ಅತ್ಯುಪಯುಕ್ತವಾಗಿವೆ. ವಿಶ್ವದೆಲ್ಲೆಡೆ ರೋಗಿಗಳಿಗೆ ದೂರದಿಂದಲೇ ಆರೋಗ್ಯ ಸೇವೆ ನೀಡುವುದು ಹೆಚ್ಚಾಗುತ್ತಿದೆ. ಟೆಲಿಮೆಡಿಸಿನ್ ದೂರದಲ್ಲಿರುವ ರೋಗಿಗಳ ನಿರ್ವಹಣೆ ಹಾಗೂ ಅವರ ಜೊತೆಗಿನ ಸಂವಾದಕ್ಕೆ ವೈದ್ಯರಿಗೆ ಸಹಾಯ ಮಾಡುತ್ತಿವೆ ಎಂದು ತಿಳಿಸಿದರು.

ಮೊಬೈಲ್ ಪಾವತಿ ತಂತ್ರಾಂಶಗಳು ಹಾಗೂ ಸಾಮಾಜಿಕ ಮಾಧ್ಯಮಗಳು ಕ್ಷಿಪ್ರವಾಗಿ ಜನರಿಂದ ಮಾಹಿತಿ ಪಡೆದುಕೊಳ್ಳುವ ಮೂಲಕ ಸಂವಹನಕ್ಕೆ ನೆರವಾಗುತ್ತಿವೆ. ವಿಮಾನ ನಿಲ್ದಾಣ ಹಾಗೂ ಇತರ ಪ್ರದೇಶಗಳಲ್ಲಿ ಅಳವಡಿಸಲಾಗುವ ಥರ್ಮಲ್ ಇಮೇಜಿಂಗ್ ಕ್ಯಾಮೆರಾಗಳಿಂದಾಗಿ ಜ್ವರದಿಂದ ಬಳಲುತ್ತಿರುವವರ ತ್ವರಿತ ಪತ್ತೆ ಸಾಧ್ಯವಾಗಿದೆ ಎಂದು ವಿವರಿಸಿದರು.

ಭಾರತದ ಬಾಹ್ಯಾಕಾಶ ಯೋಜನೆ ಆರಂಭದ ದಿನದಿಂದಲೂ ಉಪಗ್ರಹ ಸಂವಹನ, ಪ್ರಸಾರ, ಭೂ ಸರ್ವೇಕ್ಷಣೆ, ಬಾಹ್ಯಾಕಾಶ ವಿಜ್ಞಾನ ಅಧ್ಯಯನ, ಬಾಹ್ಯಾಕಾಶ ಸಾರಿಗೆ ವ್ಯವಸ್ಥೆಗಳು ಹಾಗೂ ಸಂಬಂಧಿತ ಯೋಜನೆಗಳು ವಿಶಿಷ್ಟತೆಗಳನ್ನು ರೂಢಿಸಿಕೊಂಡಿದೆ. ಭಾರತವು ಬಾಹ್ಯಾಕಾಶ ತಂತ್ರಜ್ಞಾನವನ್ನು ವಿಕೋಪ ನಿರ್ವಹಣೆ, ಬೆಸ್ತರಿಗೆ ನೆರವು ನೀಡುವಂತಹ ಜನ ಸಾಮಾನ್ಯರಿಗೆ ಉಪಯುಕ್ತ ಕ್ರಮಗಳಿಗೆ ಬಳಸುತ್ತಾ ಬಂದಿದೆ ಎಂದು ತಿಳಿಸಿದರು.

ವಿಡಿಯೋ ಕಾನ್ಫರೆನ್ಸ್ ಮೂಲಕ ದಾವಣಗೆರೆ ವಿವಿ ಕುಲಪತಿ ಪ್ರೊ.ಶರಣಪ್ಪ ಹಲಸೆ ಮಾತನಾಡಿ, ಕೋವಿಡ್ ನಿಯಂತ್ರಣ ಸಂಬಂಧ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಂತೆ ಸುರಕ್ಷತೆ, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸಮಾರಂಭವನ್ನು ಸರಳವಾಗಿ ಆಚರಿಸಲಾಗುತ್ತಿದೆ ಎಂದ ಅವರು, ಕಾರ್ಯಕ್ರಮದಲ್ಲಿ ಸ್ವರ್ಣ ಪದಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.

2018-19 ನೇ ಸಾಲಿನಲ್ಲಿ ಸ್ನಾತಕ ಪದವಿಯಲ್ಲಿ ಶೇ. 56.55 ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಶೇ. 82.87 ರಷ್ಟು ಫಲಿತಾಂಶ ಬಂದಿದೆ. ದಾವಣಗೆರೆ ವಿವಿ ಸ್ಥಾಪನೆ ನಂತರ ಹಲವಾರು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲಾಗಿದೆ. ಕರ್ನಾಟಕದ ಕಿರಿಯ ವಿಶ್ವವಿದ್ಯಾನಿಲಯಗಳಲ್ಲಿ ದಾವಣಗೆರೆ ವಿವಿ ಕೂಡ ಒಂದಾಗಿದ್ದು, ಒಟ್ಟು 251 ಎಕರೆ ಪ್ರದೇಶದಲ್ಲಿ ಹಸಿರು ವಾತಾವರಣದಲ್ಲಿರುವುದು ವಿಶೇಷವಾಗಿದೆ. ಹಾಗೂ ಇದು ಅಸ್ತಿತ್ವಕ್ಕೆ ಬಂದ ಪ್ರಥಮ ದಶಕದಲ್ಲಿಯೇ ಅಭಿವೃದ್ಧಿ ಪಥದತ್ತ ಸಾಗುತ್ತಿರುವುದು ಗಮನಾರ್ಹವಾಗಿದೆ ಎಂದು ಹೇಳಿದರು.

ವಿಜ್ಞಾನ, ಕಲಾ ಹಾಗೂ ವಾಣಿಜ್ಯ ನಿಕಾಯಗಳಡಿಯಲ್ಲಿ ಹಲವಾರು ಕೋರ್ಸ್ ಚಾಯ್ಸ್ ಬೆಸ್ಟ್ ಕ್ರೆಡಿಟ್ ಸಿಸ್ಟ್‍ಂ ಅಡಿ ಶಿಕ್ಷಣ ನೀಡಲಾಗುತ್ತಿದೆ. ಎಲ್ಲಾ ಕೋರ್ಸ್‍ಗಳಿಗೂ ಸಿಬಿಸಿಎಸ್ ಪರಿಚಯಿಸಲಾಗಿದೆ. ಎಲ್ಲಾ ವಿದ್ಯಾರ್ಥಿಗಳಿಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ನ್ಯಾಯ ಒದಗಿಸುವ ದಿಸೆಯಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದ್ದು, ಪ್ರತಿಯೊಂದು ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

56 ಜನರಿಗೆ ಪಿಹೆಚ್‍ಡಿ ಪ್ರದಾನ

03 ಮಹಿಳಾ ಹಾಗೂ 02 ಪುರುಷ ಅಭ್ಯರ್ಥಿಗಳು ಸೇರಿ ಒಟ್ಟು 05 ಜನ ಮಾಸ್ಟರ್ ಆಫ್ ಫಿಲಾಸಫಿ (ಎಂ.ಫಿಲ್) ಮತ್ತು 11 ಮಹಿಳಾ ಹಾಗೂ 45 ಪುರುಷ ಅಭ್ಯರ್ಥಿಗಳು ಸೇರಿ ಒಟ್ಟು 56 ಅಭ್ಯರ್ಥಿಗಳಿಗೆ ಡಾಕ್ಟರ್ ಆಫ್ ಫಿಲಾಸಫಿ (ಪಿ.ಎಚ್.ಡಿ) ಪದವಿ ಪ್ರದಾನ ಮಾಡಲಾಯಿತು.

ಕನ್ನಡ ವಿಭಾಗದ ವಿನಯವತಿಗೆ 4 ಚಿನ್ನದ ಪದಕ

ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ ವಿದ್ಯಾರ್ಥಿನಿಯರು ಸ್ವರ್ಣ ಪದಕಗಳ ಗಳಿಕೆಯಲ್ಲೂ ಪಾರಮ್ಯ ಮೆರೆದಿರುವುದು ವಿಶೇಷ. ಒಟ್ಟು 33 ವಿದ್ಯಾರ್ಥಿಗಳಲ್ಲಿ 27 ವಿದ್ಯಾರ್ಥಿನಿಯರು ಚಿನ್ನದ ಪದಕ ಗಳಿಸಿದ್ದಾರೆ. ದಾವಣಗೆರೆ ವಿವಿಯ ಸ್ನಾತಕೋತ್ತರ ಕನ್ನಡ ವಿಭಾಗದ ವಿನಯವತಿ ಕೆ.ಬಿ. ವಿದ್ಯಾರ್ಥಿನಿ ಅತೀ ಹೆಚ್ಚು ಅಂಕ ಪಡೆದು 4 ಸ್ವರ್ಣ ಪದಕಗಳನ್ನು ಪಡೆದರು.

62 ಚಿನ್ನದ ಪದಕ

2018-19 ನೇ ಸಾಲಿನಲ್ಲಿ 62 ಚಿನ್ನದ ಪದಕಗಳನ್ನು ನೀಡಲಾಗುತ್ತಿದ್ದು, ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಒಟ್ಟು 27 ಮಹಿಳಾ ವಿದ್ಯಾರ್ಥಿಗಳು ಹಾಗೂ 6 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 33 ವಿದ್ಯಾರ್ಥಿಗಳು 62 ಚಿನ್ನದ ಪದಕಗಳನ್ನು ಹಂಚಿಕೊಂಡರು.

10,033 ವಿದ್ಯಾರ್ಥಿಗಳಿಗೆ ಪದವಿ

ಸ್ನಾತಕ ಹಾಗೂ ಸ್ನಾತಕೋತ್ತರ ಸೇರಿದಂತೆ ಒಟ್ಟು 10,033 ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. ಬಿಎ, ಬಿಕಾಂ, ಬಿಬಿಎಂ ಸೇರಿದಂತೆ ವಿವಿಧ ಪದವಿ ವ್ಯಾಸಂಗದಲ್ಲಿ 2018-19 ನೇ ಸಾಲಿನಲ್ಲಿ 5408 ಮಹಿಳೆ, 3033-ಪುರುಷ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 8441 ವಿದ್ಯಾರ್ಥಿಗಳು ಸ್ನಾತಕ ಪದವಿ ಪಡೆದರು. ಎಂಎ, ಎಂಕಾಂ, ಎಂಎಸ್‍ಸಿ ಸೇರಿದಂತೆ ವಿವಿಧ ಸ್ನಾತಕೋತ್ತರ ಪದವಿ ವ್ಯಾಸಂಗದಲ್ಲಿ 1073 ಮಹಿಳೆ, 519 ಪುರುಷ ವಿದ್ಯಾರ್ಥಿಗಳು ಸೇರಿದಂತೆ 1592 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆದರು.

ದಾವಿವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಅವರ ಅನುಪಸ್ಥಿತಿಯಲ್ಲಿ ಪರೀಕ್ಷಾಂಗ ಕುಲಸಚಿವೆ ಪ್ರೊ.ಎಚ್.ಎಸ್.ಅನಿತಾ ಮತ್ತು ಹಣಕಾಸು ಅಧಿಕಾರಿ ಪ್ರೊ.ಗೋಪಾಲ ಎಂ. ಅಡವಿರಾವ್ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.

ಸಮಾರಂಭದಲ್ಲಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಡಾ. ರಾಮನಾಥ್, ವಿಜಯಲಕ್ಷ್ಮಿ, ಇನಾಯತ್ ಉಲ್ಲಾ, ಡಾ.ವಿ.ಕುಮಾರ್, ಕಲಾ ನಿಕಾಯದ ಡೀನ್ ಪ್ರೊ.ಕೆ.ಬಿ.ರಂಗಪ್ಪ, ವಾಣಿಜ್ಯ ನಿಕಾಯದ ಡೀನ್ ಪ್ರೊ.ಲಕ್ಷ್ಮಣ, ಶಿಕ್ಷಣ ನಿಕಾಯದ ಡೀನ್ ಡಾ.ವೆಂಕಟೇಶ್, ವಿಜ್ಞಾನ ನಿಕಾಯದ ಡೀನ್ ವಡ್ಲಪುಡಿ ಕುಮಾರ್ ಹಾಗೂ ವಿವಿಯ ಪ್ರಾಧ್ಯಾಪಕರು, ಸಿಬ್ಬಂದಿ ವರ್ಗದವರು ಸೇರಿದಂತೆ ಪೋಷಕರು ಪಾಲ್ಗೊಂಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending