Connect with us

ನೆಲದನಿ

ನೆಲದ ನಾದಧ್ವನಿ ಮೋರ್‍ಝಿಂಗ್ ಕಲಾವಿದ ಶಂಕ್ರಪ್ಪ ಬಾದಿಗಿ

Published

on

ನ್ನಡ ನಾಡು ಹಲವು ಸಂಸ್ಕøತಿ, ಕಲೆಗಳ ತವರೂರು. ಇಲ್ಲಿ ಅನಾದಿಕಾಲದಿಂದಲೂ ಹಲವಾರು ವಿಧವಾದ ಸಾಂಸ್ಕøತಿಕ ವೈಶಿಷ್ಟ್ಯತೆಯನ್ನು ಕಾಪಾಡಿಕೊಂಡು ಬರಲಾಗಿದೆ. ಇಲ್ಲಿನ ಕಲೆಯು ಈ ನಾಡಿನ ಹಿರಿಮೆಯನ್ನು ಜಗತ್ತಿನೆದುರು ಮೆರೆದಿರುವುದು ಕಂಡುಬರುತ್ತದೆ. ಕನ್ನಡ ನಾಡಿನಲ್ಲಿ ಜಾಗತೀಕರಣದಂಥ ಸಂದರ್ಭದಲ್ಲಿಯೂ ಕಲೆಗಳು ಜೀವಂತವಾಗಿರುವುದಕ್ಕೆ ಪ್ರಮುಖ ಕಾರಣವೆಂದರೆ, ಕಲೆಯೊಂದಿಗೆ ಭಾವನಾತ್ಮಕ ಭಾಂದವ್ಯವನ್ನು ರೂಪಿಸಿಕೊಂಡಿರುವ ಕಲಾವಿದನ ಶ್ರಮವಾಗಿದೆ. ಕಲೆಯನ್ನು ಕೇವಲ ಒಂದು ವ್ಯವಹಾರಿಕ ದೃಷ್ಟಿಯಿಂದ ನೋಡದೆ ಅದನ್ನು ತನ್ನ ಅಂತರಾಳದ ಕುಡಿಯಂಬಂತೆ ಪೋಷಿಸಿಕೊಂಡು ಬಂದಿರುವವನು ಕಲಾವಿದನಾಗಿದ್ದಾನೆ. ತಮ್ಮ ಬದುಕಿನ ಒಂದು ಭಾಗವಾಗಿ ಕಲೆಯನ್ನು ಮೈಗೊಡಿಸಿಕೊಂಡು ಬಂದಿರುವ ಕಲಾವಿದನು ಒಂದು ಕಲೆಯನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುವ ಹಂಬಲ ಹೊಂದಿರುತ್ತಾನೆ. ಕಲೆಯನ್ನೆ ಉಸಿರೆಂದುಕೊಂಡು, ಈ ಕಲೆಯ ಸಿಹಿಯನ್ನು ನಾಡಿನ ಜನತೆಗೆ ಉಣಬಡಿಸಿ ತಾವು ಮಾತ್ರ ಹಸಿದ ಹೊಟ್ಟೆಯಲ್ಲಿ ತೃಪ್ತಿಪಡುವಂತಹ ಎಷ್ಟೋ ಕಲಾವಿದರು ನಮ್ಮ ನಾಡಿನಲ್ಲಿ ಕಂಡುಬರುತ್ತಾರೆ. ಹೀಗೆ ಕಲೆಯ ಉಳಿವಿಗಾಗಿ ತನ್ನ ಬದುಕನ್ನೆ ಸಮರ್ಪಿಸಿಕೊಂಡಿರುವವರಲ್ಲಿ ಮೋರ್‍ಝಿಂಗ್ ನುಡಿಸುವ ಗಾರುಡಿಗ ಶಂಕ್ರಪ್ಪ ಬಾದಿಗಿಯವರು ಒಬ್ಬರಾಗಿದ್ದಾರೆ.

ಶಂಕ್ರಪ್ಪ ಬಾದಿಗಿಯವರು ಮೂಲತ `ಸುಡುಗಾಡು ಸಿದ್ಧ’ ಎಂಬ ಅಲೆಮಾರಿ ಜನಾಂಗದವರಾಗಿದ್ದು, ಬಳ್ಳಾರಿ ಜಿಲ್ಲೆ ಹೊಸಪೇಟೆಯ ಜಂಬುನಾಥನಹಳ್ಳಿ ಆಶ್ರಯ ಕಾಲೋನಿಯ ಟೆಂಟ್‍ಹೌಸ್‍ನಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. 63 ವರ್ಷದ ಶಂಕ್ರಪ್ಪ ಬಾದಿಗಿಯವರು ಮೂರು ಜನ ಗಂಡು ಮಕ್ಕಳನ್ನು ಹೊಂದಿದ್ದು, ತಮ್ಮ ಮಕ್ಕಳಿಗೆ ಸೂಕ್ತವಾದ ಶಿಕ್ಷಣವನ್ನು ದೊರಕಿಸಿ ಕೊಡಲು ಸಾಧ್ಯವಾಗದ ಕಾರಣ ಅವರನ್ನು ಕೂಲಿ, ವ್ಯಾಪಾರದಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಶಂಕ್ರಪ್ಪ ಬಾದಿಗಿಯವರು ತಮ್ಮ ತಂದೆಯಾದ ದುರುಗಪ್ಪ ಬಾದಿಗಿಯವರಿಂದ ಬಳುವಳಿಯಾಗಿ ಬಂದ ಮೋರ್‍ಝಿಂಗ್ ವಾದ್ಯ ನುಡಿಸುವ ಕಲೆಯನ್ನು ತಮ್ಮ ಸತತವಾದ ಪ್ರಯತ್ನದಿಂದ ಕರಗತಮಾಡಿಕೊಂಡು, ಮುವತ್ತು ವರ್ಷಗಳಿಂದಲೂ ಈ ಕಲೆಯ ಉಳಿವಿಗಾಗಿ ಅವಿರತ ಪರಿಶ್ರಮವನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ.

ಶಂಕ್ರಪ್ಪ ಬಾದಿಗಿಯವರ ತಂದೆಯಾದ ದುರುಗಪ್ಪ ಬಾದಿಗಿಯವರು ಮೈಸೂರು ಮಹಾರಾಜರ ಆಸ್ಥಾನದಲ್ಲಿ ಮೋರ್‍ಝಿಂಗ್ ವಾದ್ಯವನ್ನು ನುಡಿಸುತ್ತಿದ್ದು, ಮಹಾರಾಜರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದ್ದರು. ಈ ವಿಶೇಷ ಕಲೆಯನ್ನು ತಮ್ಮ ಮಗನಿಗೆ ಕರಗತಗೊಳಿಸಿ ಈ ಕಲೆಯನ್ನು ಮುಂದಿನ ಪೀಳಿಗೆಗೂ ಕಾಪಾಡಿಕೊಂಡು ಹೋಗುವಂತೆ ತರಬೇತಿ ನೀಡಿದ್ದಾರೆ. ತಂದೆಯಿಂದ ಭಕ್ತಿ-ಭಾವದಿಂದ ಕರಗತ ಮಾಡಿಕೊಂಡಿರುವ ಈ ಸಂಗೀತ ಕಲೆಯನ್ನು ಉಳಿಸುವ ಹಂಬಲ ಹೊತ್ತ ಶಂಕ್ರಪ್ಪ ಬಾದಿಗಿಯವರು ತಮ್ಮ ಬಡತನದ ಬದುಕನ್ನು ಲೆಕ್ಕಿಸದೆ ಒಂದು ತಂಡವನ್ನು ರಚಿಸಿಕೊಂಡು, ಅವರಿಗೆ ಈ ಕಲೆಯ ತರಬೇತಿ ನೀಡುವ ಮೂಲಕ ತಮ್ಮದೆ ಆದ ಸಾಂಸ್ಕøತಿಕ ವೇಶ ಭೂಷಣ ತಯಾರಿಸಿಕೊಂಡು ಹಲವಾರು ಸಭೆ-ಸಮಾರಂಭಗಳಲ್ಲಿ ಈ ಕಲೆಯ ಪ್ರದರ್ಶನ ನೀಡುತ್ತ ಬಂದಿದ್ದು, ಜನರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಕೆಲವು ನಿಮಿಷಗಳ ಕಾಲ ತಮ್ಮ ಉಸಿರನ್ನು ಬಿಗಿ ಹಿಡಿದು ಈ ವಾದ್ಯವನ್ನು ನುಡಿಸುವ ಪರಿಗೆ ಕೇಳುಗರು ಆಶ್ಚರ್ಯ ಚಕಿತರಾಗುವುದರ ಜೊತೆಗೆ, ಇದರಿಂದ ಹೊರ ಹೊಮ್ಮುವ ನಾದದ ಸ್ವರಕ್ಕೆ ರೋಮಾಂಚನಗೊಳ್ಳುತ್ತಾರೆ ಪುರಂದರದಾಸರ ಕೀರ್ತನೆಗಳು, ತತ್ವಪದಗಳು ಹಾಗೂ ದೇವರ ಶ್ಲೋಕಗಳನ್ನು ಹಾಡುವ ಮೂಲಕ ಈ ವಾದ್ಯವನ್ನು ನುಡಿಸುವ ಕ್ರಮವು ಎಂಥವರನ್ನು ಕ್ಷಣಕಾಲದವರೆಗೆ ಮಂತ್ರಮುಗ್ದರನ್ನಾಗಿಸುತ್ತದೆ.

ತಮ್ಮ ಜೀವದ ಹಂಗನ್ನು ತೊರೆದು ಉಸಿರು ಬಿಗಿ ಹಿಡಿದು ವಾದ್ಯ ನುಡಿಸುವ ಈ ಕ್ರಮವು ಅವರು ಈ ಕಲೆಯಲ್ಲಿ ಹೊಂದಿರುವ ನೈಪುಣ್ಯತೆಯ ಜೊತೆಗೆ, ಕಲೆಯೊಂದಿಗಿನ ಇವರ ಭಾಂವ್ಯವನ್ನು ಸೂಚಿಸುತ್ತದೆ. ಸಂಗೀತಾ ಪರಿಕರಗಳಲ್ಲಿ ಒಂದು ವಿಶಿಷ್ಟ ಪ್ರಕಾರವಾಗಿರುವುದು ಮೋರ್‍ಝಿಂಗ್. ಭಾರತದಲ್ಲಿ ಇದರ ಮೂಲವು ದಕ್ಷಿಣ ಭಾರತ, ರಾಜಸ್ಥಾನ, ಪಾಕಿಸ್ಥಾನದ ಸಿಂಧ್‍ಪ್ರಾಂತ್ಯ ಹಾಗೂ ನೇಪಾಳದಲ್ಲಿ ಇರುವುದಾಗಿ ತಿಳಿದು ಬರುತ್ತದೆ. ಈ ಸಾಧನವನ್ನು ಇಂಗ್ಲಿಷ್ ಭಾಷೆಯಲ್ಲಿ `ಜಾಹಾರ್ಪ್’ ಎಂದು, ರಾಜಸ್ಥಾನ ಭಾಷೆಯಲ್ಲಿ `ಮೋರ್‍ಝಿಂಗ್’ ಎಂದು ಕರ್ನಾಟಕದಲ್ಲಿ `ಬಾಯಿಬಿಲ್ಲು ನೀದಸ್ವರ’ ಎಂಬುದಾಗಿಯೂ ಕರೆಯಲಾಗುತ್ತದೆ. ಇದು ತ್ರಿಶೂಲಾಕಾರದ ಚಮಟಿಗೆಯಂತೆ ಇದ್ದು, ಉಕ್ಕಿನ ಲೋಹದಿಂದ ತಯಾರಿಸಲಾಗಿದೆ. ಇದರ ಗಾತ್ರವು 10 ರಿಂದ 20 ಸೆಂ.ಮೀ ಇರುತ್ತದೆ. ಅಂಗೈ ಮುಷ್ಟಿಯಲ್ಲಿ ಹಿಡಿಯಬಹುದಾದ ಈ ಸಾಧನದಿಂದ ಒಬ್ಬನೇ ಕಲಾವಿದನು ಲಯಬದ್ಧವಾದ ಸಪ್ತಸ್ವರಗಳನ್ನು ನುಡಿಸುತ್ತಾನೆ. ಈ ಸಾಧನವು ಉಕ್ಕಿನಿಂದ ತಯಾರಿಸಲ್ಪಟ್ಟ ಕಾರಣ ಇದನ್ನು ಪ್ರತಿದಿನ ಸ್ವಚ್ಚಗೊಳಿಸಬೇಕಾಗುತ್ತದೆ. ಇಲ್ಲದೆ ಹೋದರೆ ಇದು ತುಕ್ಕು ಹಿಡಿದು ಸ್ವರ ಹೊರ ಹೊಮ್ಮುವುದಿಲ್ಲ. ತಮಿಳುನಾಡಿನ ಚೆನೈನಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಬ್ರಿಟಿಷರು ಸಂಗ್ರಹಿಸುವ ಸಂಗೀತದ ಎಲ್ಲ ಪರಿಕರಗಳಲ್ಲಿ ಎರಡು ಮೋರ್‍ಝಿಂಗ್ ಸಾಧನೆಗಳು ಇವೆ. ಈ ವಸ್ತು ಸಂಗ್ರಹಾಲಯದಲ್ಲಿರುವ ಸಾಧನಗಳನ್ನು ಉಪಯೋಗಿಸದ ಕಾರಣ ತುಕ್ಕು ಹಿಡಿದು ಮೂಲೆಯಲ್ಲಿ ನಿರ್ಜಿವ ವಸ್ತುಗಳಂತೆ ಕುಳಿತಿವೆ. ಆದರೆ ಕರ್ನಾಟಕದಲ್ಲಿ ತನ್ನ ಜೀವಂತಿಕೆಯನ್ನು ಕಾಪಾಡಿಕೊಂಡಿರುವ ಮೋರ್‍ಝಿಂಗ್ ವಾದ್ಯವು ಶಂಕ್ರಪ್ಪ ಬಾದಿಗಿಯವರ ಪರಿಶ್ರಮದಿಂದ ತನ್ನ ಅಸ್ಮಿತೆಯನ್ನು ಕಾಪಾಡಿಕೊಂಡಿದೆ.

ಮೋರ್‍ಝಿಂಗ್ (ಬಾಯಿಬಿಲ್ಲು ನಾದಸ್ವರ) ಕಲೆಯನ್ನು ತನ್ನ ತಂದೆಯಿಂದ ಕಾಪಾಡಿಕೊಂಡು ಬಂದು, ಇದರಲ್ಲಿ ಪಾಂಡಿತ್ಯವನ್ನು ಗಳಿಸಿಕೊಂಡಿರುವ ಶಂಕ್ರಪ್ಪ ಬಾದಿಗಿಯವರು ಈ ಕಲೆಯು ಅವನತಿಯ ಹಂಚಿನಲ್ಲಿರುವ ಕಾರಣ ಇದರ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ. ಒಂದು ಕಡೆ ದಟ್ಟದಾರಿದ್ರ್ಯದ ಬಡತನದ ನೋವು ಇವರನ್ನು ಕಾಡಿದರೆ, ಮತ್ತೊಂದೆಡೆ ಈ ಕಲೆಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದು, ಇದನ್ನು ಮುಂದಿನ ಪೀಳಿಗೆಗೂ ಕಾಪಾಡಿಕೊಳ್ಳಬೇಕೆಂಬ ಹಂಬಲ ಇವರದಾಗಿದೆ. ಕರ್ನಾಟಕದ ಬಹುತೇಕ ಕಲಾವಿದರ ಬದುಕು ಬಡತನದ ಬವಣೆಯಲ್ಲಿ ಕಮರಿ ಹೋಗುತ್ತಿವೆ. ಇತ್ತೀಚಿಗೆ ಸರ್ಕಾರವು ಇಂತಹ ಕಲೆಯನ್ನು ಜೀವಂತಗೊಳಿಸಬೇಕೆಂಬ ದೃಷ್ಟಿಯಿಂದ ಅಪರೂಪದ ಕಲೆಗಳು ಹಾಗೂ ಕಲಾವಿದರನ್ನು ಗುರುತಿಸಿ ಸಹಾಯ ಧನ ನೀಡುವ ಮೂಲಕ ಕಲಾವಿದರಿಗೆ ಪ್ರೋತ್ಸಹ ನೀಡುವ ಕಾರ್ಯ ಮೈಗೊಡಿಸಿಕೊಂಡಿದೆ. ಆದರೆ ಶಂಕ್ರಪ್ಪನವರಿಗೆ ಕರ್ನಾಟಕದ ಸರ್ಕಾರದಿಂದ ಯಾವುದೇ ಸಹಾಯ ಧನವಾಗಲೀ ಲಭ್ಯವಾಗಿಲ್ಲ. ಇವರು ಅನಕ್ಷರತೆಯ ನಡುವೆಯೂ ಕೆಲವು ಅಧಿಕಾರಿಗಳನ್ನು ಕಾಡಿಬೇಡಿ `ಮಾಶಾಸನಕ್ಕೆ’ ಅರ್ಜಿಸಲ್ಲಿಸಿದರು ಕೂಡ ಇವರಿಗೆ ಸರ್ಕಾರದಿಂದ ಯಾವುದೇ ಅನುದಾನ ಬಂದಿರುವುದಿಲ್ಲ.ಕರ್ನಾಟಕದಲ್ಲಿ ಎಷ್ಟೋ ಕಲಾವಿದರು ಎಲೆಮರೆಯ ಕಾಯಿಯಂತೆ ಇದ್ದು ತಮ್ಮ ಕಲೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಇಂತಹ ಅಪರೂಪದ ಕಲೆಯ ಉಳಿವಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಬಡತನದ ಬೇಗೆಯಲ್ಲಿಯೂ ತಮ್ಮಲ್ಲಿರುವ ಕಲೆಯ ಪಾಂಡಿತ್ಯಕ್ಕೆ ಚ್ಯುತಿಯಾಗದ ರೀತಿಯಲ್ಲಿ ಅದನ್ನು ಪೋಷಿಸಿಕೊಂಡು ಬಂದಿದ್ದಾರೆ. ಅಂತಹವರ ಸಾಲಿನಲ್ಲಿ ಶಂಕ್ರಪ್ಪ ಬಾದಿಗಿಯವರು ಒಬ್ಬರಾಗಿದ್ದಾರೆ. ಇವರ ಸ್ಥಿತಿಯು ಇಬ್ಬಾಯಿಯ ಖಡ್ಗದ ನಡುವೆ ಸಿಕ್ಕಿಹಾಕಿಕೊಂಡಂತಿದೆ. ಒಂದು ಕಡೆ ಭಾವನಾತ್ಮಕ ಸಂಬಂಧವನ್ನು ಹೊಂದಿ ಉಳಿಸಿಕೊಂಡು ಬಂದಿರುವ ಕಲೆಯಾದರೆ, ಮತ್ತೊಂದೆಡೆ ಸಮಾಜದಲ್ಲಿ ಸ್ವಾತಂತ್ರವಾಗಿ ತನ್ನ ಕುಟುಂಬವನ್ನು ರೂಪಿಸಿಕೊಳ್ಳಬೇಕೆಂಬ ಹಂಬಲ. ಒಂದರ ಉಳಿಗಾಗಿ ಬೆನ್ನತ್ತಿ ಹೊರಟರೆ ಮತ್ತೊಂದು ಬೀದಿಪಾಲಾಗುವಂತಿದೆ. ಆದ್ದರಿಂದ ಶಂಕ್ರಪ್ಪನವರಿಗೆ ಕರ್ನಾಟಕದ ಭವ್ಯ ಸಾಂಸ್ಕಂತಿಕ ಪರಂಪರೆಗೆ ಸಾಕ್ಷಿಯಾಗಿರುವ ಕಲೆಯ ಉಳಿವಿಗಾಗಿ ಶ್ರಮಿಸಬೇಕೋ? ಕಲೆಯ ತೊರೆದು ತನ್ನ ಕೌಟುಂಬಿಕ ಜೀವನವನ್ನು ಸುಧಾರಿಸಿಕೊಳ್ಳಬೇಕೋ? ಎಂಬ ಪ್ರಶ್ನೆಯು ಅವರನ್ನು ಕಾಡುತ್ತಿದೆ. ಪ್ರಸ್ತುತದಲ್ಲಿ ಸರ್ಕಾರವು ಸಂಗೀತ ಕಲೆಗಳನ್ನು ಕಾಪಾಡುವ ಮತ್ತು ಅವುಗಳನ್ನು ಸಂರಕ್ಷಿಸುವ ಉದ್ದೇಶದಿಂದ ಪ್ರತ್ಯೇಕವಾಗಿ ಸಂಗೀತ ವಿಶ್ವವಿದ್ಯಾಲಯಗಳನ್ನು ಪ್ರಾರಂಬಿಸಿದೆ. ಇಂತಹ ವಿಶ್ವವಿದ್ಯಾಲಯಗಳು ಕೇವಲ ಅಕಡೆಮಿಕ್ ಆದ ಪಠ್ಯಕ್ರಮ ಆಧಾರಿತ ಸಂಗೀತ ಶಿಕ್ಷಣವನ್ನು ನೀಡುತ್ತಿವೆ. ಇಲ್ಲಿ ಈ ಅಕಡೆಮಿಕ್ ಪಠ್ಯಕ್ರಮದ ಜೊತೆಜೊತೆಯಲ್ಲಿಯೇ ವ್ಯಕ್ತಿಯ ಬದುಕಿನ ಜೊತೆಯಲ್ಲಿಯೆ ಬೆಳೆದು ಬಂದಿರುವ ಇಂತಹ ಜನಪದ ಸಂಗೀತ ಕಲೆಗಳನ್ನು ವಿಶ್ವವಿದ್ಯಾಲಯಗಳಲ್ಲಿ ಪರಿಚಯಿಸುವುದು ಅತ್ಯಂತ ಸೂಕ್ತವಾಗಿದೆ. ಈ ವಿಶ್ವವಿದ್ಯಾಲಯಗಳು ಅಳಿವಿನ ಅಂಚಿಗೆ ತಳಲ್ಪಟ್ಟಿರುವ ಕಲೆಗಳನ್ನು ಗುರುತಿಸಿ, ಇಂತಹ ಕಲಾವಿದರಿಂದ ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ಕಾರ್ಯಗಾರದಂತಹ ವಿಶೇಷ ಯೋಜನೆಗಳನ್ನು ರೂಪಿಸಿಕೊಳ್ಳುವುದರಿಂದ ಕಲೆಗೂ ಮತ್ತು ಕಲಾವಿದರಿಗೂ ಸೂಕ್ತ ನ್ಯಾಯ ಒದಗಿಸಿದಂತಾಗುತ್ತದೆ. ಅಕಡೆಮಿಕ್ ಜ್ಞಾನ ಶಿಸ್ತಿಗಿಂತಲೂ ಜೀವನದ ಅನುಭವದ ಮೂಲಕ ಪಡೆದ ಶಿಕ್ಷಣ ಹೆಚ್ಚು ಸಂವೇದನಾಶೀಲವಾಗಿರುತ್ತದೆ. ಇದರಿಂದ ಸಮಾಜದಲ್ಲಿ ಉತ್ತಮ ಪರಿಸರವನ್ನು ರೂಪಿಸಬಹುದಾಗಿದೆ. ಜಾಗತೀಕರಣದ ಭರಾಟೆಯಲ್ಲಿ ತಿರಸ್ಕøತಗೊಂಡಿರುವ ದೇಶಿ ಕಲೆಗಳಿಗೂ ಮತ್ತೆ ಜೀವ ನೀಡಿದಂತಾಗುತ್ತದೆ. ಇದರಿಂದ ಕರ್ನಾಟಕದ ಅದರಲ್ಲೂ ಭಾರತದ ಸಾಂಸ್ಕøತಿಕ ವೈಭವದ ಹಿರಿಮೆಯನ್ನು ಹೆಚ್ಚಿಸಿದ ಕೀರ್ತಿಯು ಲಭಿಸುತ್ತದೆ.ಶಂಕ್ರಪ್ಪ ಬಾದಗಿಯವರು ಅತ್ಯಂತ ಕಡುಬಡತನದಲ್ಲಿಯೂ ತಮ್ಮ ಕಲೆಯ ಉಳಿವಿಗಾಗಿ ಅವಿರತ ಹೋರಾಟ ನಡೆಸುತ್ತಿದ್ದಾರೆ. ಇವರಿಗೆ ನಾಡಿನ ಜನತೆ ಹಾಗೂ ವಿವಿಧ ವರ್ಗದ ಸಹಕಾರ ಅತ್ಯಂತ ಅಗತ್ಯವಾಗಿದೆ. ಸರ್ಕಾರ ಇಂತಹ ಪ್ರತಿಭೆಗಳಿಗೆ ಸೂಕ್ತ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದೆ ಆದರೆ ಈ ಕಲೆಯು ಜೀವಂತಿಕೆಯನ್ನು ಪಡೆಯುತ್ತದೆ. ಈ ಅಪರೂಪದ ದೇಶಿ ಕಲೆಯನ್ನು ನಾಡಿನ ಜನತೆಗೆ ಪರಿಚಯಿಸುವ ಆಸಕ್ತಿ ಉಳ್ಳವರು ಶಂಕ್ರಪ್ಪ ಬಾದಿಗಿಯವರನ್ನು ಸಂಪರ್ಕಿಸಿ ಅವರಿಗೆ ಸೂಕ್ತ ವೇದಿಕೆ ಒದಗಿಸಿಕೊಟ್ಟಿದ್ದೆ ಆದರೆ ಮುಕ್ತ ಮನಸ್ಸಿನಿಂದ ತಮ್ಮ ಕಲೆಯ ಪ್ರದರ್ಶನ ನೀಡುತ್ತಾರೆ. ಆಸಕ್ತಿ ಉಳ್ಳವರು ಶಂಕ್ರಪ್ಪ ಬಾದಿಗಿಯವರ ಮೊಬೈಲ್ ನಂಬರ್: 9741618957 ಗೆ ಸಂಪರ್ಕಿಸಬಹುದು. ಇದರಿಂದ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಕೀರ್ತಿಯು ಲಭಿಸುತ್ತದೆ. ಜೊತೆಗೆ ಅಳಿವಿನ ಅಂಚಿನಲ್ಲಿರುವ ಕಲೆಯನ್ನು ನಾಡಿನ ಜನತೆಗೆ ಪರಿಚಯಿಸಿದಂತಾಗುತ್ತದೆ. ಕಲೆಯನ್ನೆ ಉಸಿರಾಗಿಸಿಕೊಂಡು ನಿಸ್ವಾರ್ಥ ಸೇವೆಸಲ್ಲಿಸುತ್ತಿರುವ ಇವರ ಬದುಕು ಕಲೆಯ ಕಳೆಗೆ ಕಮರಿ ಹೋಗುತ್ತಿದೆ. ಇಂತಹ ಕಲಾವಿದನ ಬದುಕಿಗೆ ಕಲಾಸಕ್ತರು ಪ್ರೋತ್ಸಾಹ ನೀಡಿ ಇವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾಗಿದೆ. ಸರ್ಕಾರವು ಇಂತಹ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಬೇಕಾಗಿದೆ. ಇಂದು ಪ್ರಶಸ್ತಿಗಳು ರಾಜಕೀಯ ಒತ್ತಡದಿಂದ ಅನರ್ಹರ ಪಾಲಾಗುತ್ತಿವೆ. ಇದರಿಂದ ಪ್ರಶಸ್ತಿಗಳು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿವೆ. ಇದರ ಬದಲು ಸೂಕ್ತ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಗೌರವಿಸುವುದರಿಂದ ನಮ್ಮ ನಾಡಿನ ಕಲೆಗಳಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಇದರಿಂದ ಪ್ರಶಸ್ತಿಗಳಿಗೂ ಗೌರವ ಉಳಿಯುತ್ತದೆ.

ನೆಲದನಿ

ನುಡಿಯ ಒಡಲು – 22 | ವಚನ ಸಾಹಿತ್ಯ : ನುಡಿಯೊಳಗಾಗಿ ನಡೆ

Published

on

  • ಡಾ. ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ವಚನ ಸಾಹಿತ್ಯ ಕುರಿತು ಎಷ್ಟೋ ಸಾವಿರ ಪುಟಗಳ ಬರಹ ಈಗಾಗಲೇ ಬಂದಿದೆ. ಆ ಎಲ್ಲ ಬರಹವನ್ನು ಈಗ ಯಾವುದೇ ಬಗೆಯಲ್ಲಿ ಮತ್ತೆ ಇಲ್ಲಿ ಚರ್ಚಿಸುವ ಇರಾದೆ ನನ್ನದಲ್ಲ. ಇನ್ನೂ ಅದಕ್ಕೆ ಬದಲಾಗಿ ಏನೆಲ್ಲ ಬರೆಯಲು ಇಲ್ಲಿ ಅವಕಾಶವಿದೆ ಎಂಬುದನ್ನು ಮಾತ್ರ ಸೂಚಿಸಲು ಈ ಮಾತನ್ನು ಹೇಳಲಾಗಿದೆ. ಅಂದರೆ ಸಂಸ್ಕೃತಿಯೊಂದನ್ನು ಕುರಿತ ಇಲ್ಲವೇ ಆಯಾ ಸಂಸ್ಕೃತಿಯೊಳಗೆ ನಡೆದು ಹೋಗಿರುವ ಚಳವಳಿ, ಹೋರಾಟ, ಸಂಘರ್ಷಗಳನ್ನು ಕುರಿತು ಮತ್ತೆ ಮತ್ತೆ ಚಿಂತಿಸುವ ಜರೂರಿನ ಬಗೆಗೆ ವಾದಗಳು ಮುಂಚೂಣೆಗೆ ಬರುತ್ತವೆ.

ಇದಕ್ಕೆ ಬಲವಾದ ಕಾರಣಗಳಿರುತ್ತವೆ. ಅವುಗಳೆಂದರೆ, ಇಂತಹ ಚಳವಳಿಗಳು ಆಯಾ ಸಮುದಾಯಗಳ ಮೇಲೆ ಬೀರಿರುವ ಪರಿಣಾಮ, ಅದಕ್ಕೆ ಸಿಕ್ಕಿರುವ ಸಾಂಸ್ಕೃತಿಕ ಮಹತ್ವ, ಅದರಿಂದ ರೂಪುಗೊಳ್ಳುವ ಯಜಮಾನಿಕೆಯ ಪರ ಹಾಗೂ ವಿರೋಧ ನೆಲೆಗಳು ಎಂತಹವು ಎಂಬಿತ್ಯಾದಿ ಸಂಗತಿಗಳನ್ನು ಚರ್ಚಿಸಬೇಕಾಗುತ್ತದೆ. ಆದರೆ ಇಂತಹ ಚರ್ಚೆಗೆ ಯಾವುದೇ ರೀತಿಯ ಕೊನೆಯಿರುವುದಿಲ್ಲ ಎಂಬುದು ಮಾತ್ರ ಗಮನಾರ್ಹ. ಆದರೆ ಯಾವ ನೆಲೆಯಿಂದ? ಏನನ್ನು? ಯಾರಿಗಾಗಿ? ಇಂತಹ ಚರ್ಚೆಗಳನ್ನು ಬೆಳಸಬೇಕು ಎಂಬ ಕೇಳ್ವಿಯನ್ನು ಎದುರಿಗಿಟ್ಟುಕೊಂಡೇ ಈ ವಚನ ಸಾಹಿತ್ಯದ ಬಗೆಗೆ ಯೋಚಿಸಬೇಕಾಗಿದೆ. ಆದರೆ ಇದೇ ಸನ್ನಿವೇಶದಲ್ಲಿ ಈ ವಚನ ಚಳವಳಿಯು ಮಂಡಿಸುತ್ತಿರುವ ತಿಳಿವು ಎಂತಹದು ಎಂಬುದನ್ನು ಅರಿಯಲು ನಾವು ಅನುಸರಿಸುವ ವಿಧಾನಗಳು ಯಾವವು ಎಂಬುದನ್ನೂ ಈಗಲೇ ತೀರ್ಮಾನಿಸುವ ಅಗತ್ಯವಿದೆ.

ಇಂತಹ ವಿಧಾನಗಳು ಅನುಭವ ಹಾಗೂ ನುಡಿಯೊಳಗಿನ ನಡೆಗಳ ನಡುವಣ ನಂಟನ್ನು ಹೇಗೆ ರೂಪಿಸುತ್ತವೆ ಎಂಬುದನ್ನು ನೆಮ್ಮಿಕೊಂಡಿರುತ್ತವೆ.
ನುಡಿಯೊಳಗೆಯೇ ಸಂಸ್ಕೃತಿಗಳ ಚಹರೆಗಳು ಹೇಗೆ ಮೈಪಡೆದಿರುತ್ತವೆ. ಹಾಗೂ ಅವುಗಳು ನುಡಿಯ ಯಾವ ಆಯಾಮದಿಂದ ಇಂತಹವೊಂದು ನೆಲೆಯನ್ನು ತಲುಪಿರುತ್ತವೆ.

ಸಂಸ್ಕೃತಿಗಳು ಈಗಾಗಲೇ ಮೈಗೂಡಿಸಿಕೊಂಡಿರುವ ನಿಗದಿತ ಆಲೋಚನೆಯ ಮಾದರಿಗಳನ್ನು ಒಡೆದು ಕಟ್ಟಲು ಮತ್ತು ಅಂತಹ ಮಾದರಿಗಳಲ್ಲಿ ಸಾಂಸ್ಕೃತಿಕ ಪಲ್ಲಟವನ್ನುಂಟು ಮಾಡಲು, ಆಯಾ ಸಾಂಸ್ಕೃತಿಕ ಸಮೂಹಗಳನ್ನು ಪ್ರತಿನಿಧಿಸುವ ನುಡಿಯೊಂದು ತನ್ನೊಳಗೆಯೇ ಏನೆಲ್ಲ ನಡೆಗಳನ್ನು ನೆಲೆಗೊಳಿಸಬೇಕಾಗುತ್ತದೆ ಎಂಬುದನ್ನು ಅರಿಯಬೇಕಾಗಿರುವುದು ಇವತ್ತು ಅತ್ಯಂತ ಮಹತ್ವದ ಸಂಗತಿಯಾಗಿದೆ.

ಇಂತಹ ನಡೆಗಳು ಆಯಾ ಸಮುದಾಯಗಳ ಮೂಲ ತತ್ವಗಳನ್ನೇ ಬದಲಾಯಿಸುವ ಬಗೆಗಳಾಗಿರುತ್ತವೋ? ಇಲ್ಲವೇ ಅಂತಹ ಮೂಲತತ್ವಗಳಿಗೆ ಬದಲಿಯಾದ ತತ್ವಗಳನ್ನು ರೂಪಿಸುವ ಇರಾದೆಯನ್ನು ಹೊಂದಿರುತ್ತವೋ? ಎಂಬ ಮೆಥಾಡಾಲಜಿಯ ಇಕ್ಕಟ್ಟುಗಳನ್ನು ಕುರಿತು ಚರ್ಚಿಸಬೇಕಾಗುತ್ತದೆ. ಏಕೆಂದರೆ ಈ ಬದಲಾವಣೆ ಕೇವಲ ನುಡಿ ನಿರೂಪಣೆಗಳಲ್ಲಿ ಉಂಟಾಗುವ ಬದಲಾವಣೆ ಮಾತ್ರವಾಗದೇ, ಆಯಾ ಸಮೂಹಗಳ ಗ್ರಹಿಕೆ ಹಾಗೂ ಅಭಿವ್ಯಕ್ತಿಯ ಮಾದರಿಗಳನ್ನು ಹೊಸದಾಗಿ ಕಟ್ಟುವ ನಿಲುವುಗಳೇ ಆಗಿರುತ್ತವೆಂದು ಹೇಳಬೇಕಾಗುತ್ತದೆ.

ಕನ್ನಡ ಸಾಂಸ್ಕೃತಿಕ ಪರಂಪರೆಯಲ್ಲಿ ವಚನ ಸಾಹಿತ್ಯಕ್ಕೆ ಒಂದು ಹಿರಿಮೆಯ ಜಾಗವನ್ನು ಕೊಡಲಾಗಿದೆ. ಇದಕ್ಕೆ ಸಾಕಷ್ಟು ಕಾರಣಗಳಿವೆ. ಇಂತಹ ಕಾರಣಗಳನ್ನು ಕೇವಲ ಜಾತಿ, ಧರ್ಮ, ಸಾಮಾಜಿಕ ಸಮಾನತೆ, ಮಾತಿನ ಸ್ವಾತಂತ್ರ್ಯ, ಲಿಂಗ ಸಮಾನತೆಗೆ ಪೂರಕವಾದ ಭಾಷಿಕ ನಿರೂಪಣೆಗಳ ಆಧಾರದ ಮೇಲೆ ಇಲ್ಲವೇ ಎಷ್ಟು ಪ್ರತಿಶತದಲ್ಲಿ ಇಂತಹ ಸಂಗತಿಗಳು ವಚನ ಸಾಹಿತ್ಯದಲ್ಲಿ ಸಿಗುತ್ತವೆ ಅನ್ನುವ ಕಾರಣಕ್ಕೆ ಮಾತ್ರ ಇವತ್ತಿನ ಚರ್ಚೆಗಳನ್ನು ಸೀಮಿತಗೊಳಿ ನೋಡಲು ಸಾಧ್ಯವಿಲ್ಲ. ವಚನ ಸಾಹಿತ್ಯ ಆಂದೋಲನದ ಒಟ್ಟು ಕ್ರಿಯಾವರ್ತುಲದಲ್ಲಿ ಏನೆಲ್ಲ ಅಜೆಂಡಗಳು ಅಡಕವಾಗಿದ್ದವು ಅನ್ನುವ ಸಂಗತಿಯನ್ನೇ ಈ ಚರ್ಚೆಗಳು ಮರೆಮಾಚುತ್ತವೆ. ಹಾಗೂ ವಚನ ಚಳವಳಿ ಎಷ್ಟರಮಟ್ಟಿಗೆ ಸೋಲು ಇಲ್ಲವೇ ಗೆಲವು ಕಂಡಿದೆ ಎನ್ನುವ ಕಾರಣಕ್ಕಾಗಿಯೂ ವಚನ ಚಳವಳಿಗೆ ಈಗಾಗಲೇ ಕನ್ನಡ ಪರಂಪರೆಯಲ್ಲಿ ಸಿಕ್ಕಿರುವ ಈ ಜಾಗವನ್ನು ಯಾರಿಂದಲೂ ಕದಲಿಸಲು ಆಗುವುದಿಲ್ಲ.

ಏಕೆಂದರೆ ವಚನ ಸಾಹಿತ್ಯ ಪರಂಪರೆ ಪೂರ್ವವಾಸನೆಯ ಜಾಡನ್ನು ಬದಲಿಸಿಕೊಂಡು, ನಡೆ-ನುಡಿಗಳ ನಡುವಣ ನೈತಿಕತೆಯ ಹೊಂದಾಣಿಕೆಯನ್ನು ಮರುಮಂಡಿಸುವ ಅಭಿವ್ಯಕ್ತಿಯೇ ಈ ವಚನ ಸಾಹಿತ್ಯದ ಉದ್ದೇಶವಾಗಿದೆ.

ವಚನ, ಮಾತು ಹಾಗೂ ಭಾಷೆ ಈ ಮೂರು ಅರಿಮೆ ಪದಗಳು ಕನ್ನಡ ಸಂಸ್ಕೃತಿಯೊಳಗೆ ಒಂದು ಹೆಚ್ಚುಗಾರಿಕೆಯನ್ನು ಪಡೆದಿವೆ. ಅಂದರೆ ಈ ಮೂರು ಪದಗಳು ವ್ಯಕ್ತಿಗಳಿಗೆ ಇರುವ ಉತ್ತರದಾಯಿತ್ವ ಮತ್ತು ಹೊಣೆಗಾರಿಕೆಯನ್ನು ಸೂಚಿಸುತ್ತವೆ. ಪ್ರತಿ ಸಮುದಾಯದ ತಳಹದಿಯಾಗಿರುವುದು ಮಾತು. ಮಾತಿನ ನಂಬಿಕೆಗೆ ಮತ್ತು ಹೊಣೆಗಾರಿಕೆಗೆ ಬಿಕ್ಕಟ್ಟು ಎದುರಾದರೆ, ಇಡೀ ಸಾಮಾಜಿಕತೆ, ನೈತಿಕತೆ ಹಾಗೂ ತಾತ್ವಿಕತೆಗಳ ವಿನ್ಯಾಸಗಳ ಬಗೆಗೆ ಅಪನಂಬಿಕೆ ಮೂಡುತ್ತದೆ.

ಮಾತುಗಳು ಅಪಾರ್ಥದ ಮೂಲಗಳಾದರೆ ಇಡೀ ಬದುಕಿನ ಮುನ್ನೋಟವೇ ದಾರಿ ತಪ್ಪುತ್ತದೆ. ಹಾಗಾಗಿ ಮಾತನ್ನು ಒಂದು ಅಸ್ತ್ರವನ್ನಾಗಿ, ತಿಳಿವಿನ ನೆಲೆಯಾಗಿ ಮತ್ತು ಸಾಮಾಜಿಕ-ರಾಜಕೀಯ ಮೇಲಾಟದ ಮಾಧ್ಯಮವನ್ನಾಗಿ ರೂಪಿಸಲಾಗಿದೆ. ಮಾತನ್ನು ಶಾಪವನ್ನಾಗಿಯೂ, ಮಂತ್ರವನ್ನಾಗಿಯೂ ಬಳಸುತ್ತಲೇ ಬಂದಿದ್ದೇವೆ. ಹಾಗೂ ತಿಳುವಳಿಕೆಯ ಅನುಭವ ಮತ್ತು ಅನುಭವದ ತಿಳುವಳಿಕೆ ನಮಗೆ ದೊರಕುವುದು ಕೂಡ ಮಾತಿನ ಮೂಲಕವೇ.

ಅನುಭವ ಮತ್ತು ತಿಳಿವು ಎರಡೂ ಒಟ್ಟಿಗೆ ಮೂಡುವುದಿಲ್ಲ. ಒಂದು ಇನ್ನೊಂದನ್ನು ಅರಿಯುವುದಕ್ಕೆ ಭಾಷೆ ಹೇಗೆ ಪೂರಕವಾಗಿ ಕೆಲಸ ಮಾಡುತ್ತದೆ ಎನ್ನುವುದು ವಿಶೇಷ. ಆಲೋಚನೆಯ ಇಡೀ ಸ್ವರೂಪವು ಒಡಮೂಡುವುದು ಕೂಡ ನುಡಿಯೊಳಗೆ ಮಾತ್ರ. ಪ್ರತಿಯೊಂದು ಸಂಸ್ಕೃತಿಯು ವಿಕಾಸಗೊಳ್ಳುವಾಗ ತನ್ನದೇ ನುಡಿಯೊಂದನ್ನು ಗುರುತಿಸಿಕೊಳ್ಳುತ್ತದೆ. ಈ ನುಡಿಯ ಮೂಲಕವೇ ತನ್ನ ಬದುಕಿನ ಅಂತಸತ್ವವನ್ನು, ಬದುಕಿನ ಸಾಕ್ಷಾತ್ಕಾರವನ್ನು ಕಂಡರಿಸುವ ದಾರಿಗಳನ್ನು ಕಂಡುಕೊಳ್ಳುತ್ತದೆ.

ಪರಂಪರೆ ರೂಪುಗೊಳ್ಳುವಾಗ ಸಾಂಸ್ಕೃತಿಕ ಚಹರೆಗಳು ಮೈದಾಳುತ್ತವೆ. ಈ ಚಹರೆಗಳು ಬೇರೆ ಬೇರೆ ಸ್ವರೂಪದಲ್ಲಿ ಗೋಚರಿಸುತ್ತವೆ. ವಚನ ಸಾಹಿತ್ಯ ಕನ್ನಡನುಡಿ ಸಂಸ್ಕೃತಿಯನ್ನು ಪ್ರತಿನಿಧಿಸುವ ಚಹರೆಯಾಗಿದೆ. ಬದುಕಿನ ಎಲ್ಲ ವಿದ್ಯಮಾನಗಳು ನುಡಿಯೊಳಗೆ ಏರ್ಪಡುವ ಅರ್ಥಗಳ ಮೂಲಕ ನಮ್ಮೊಂದಿಗೆ ನಂಟನ್ನು ಪಡೆದುಕೊಳ್ಳುತ್ತವೆ. ವಾಸ್ತವವನ್ನು ನಿರ್ವಚಿಸುವ ನೆಲೆಗಳಿಗೂ ನಾವು ನುಡಿಯನ್ನು ಬಳಸಿಕೊಳ್ಳುತ್ತೇವೆ. ಒಟ್ಟಿನಲ್ಲಿ ನುಡಿಯ ಮೂಲಕವೇ ಬದುಕಿನ ಸತ್ಯವನ್ನು ಕಾಣುತ್ತೇವೆ ಎನ್ನುವ ನಂಬಿಕೆ ಬಲವಾಗಿದೆ.

ಈ ನಂಬಿಕೆಯನ್ನು ಸಾಬೀತುಪಡಿಸುವ ಪರಿಕರವಾಗಿ ವಚನಗಳನ್ನು ಪರಿಗಣಿಸಲಾಗಿದೆ. ಬದುಕಿನ ಸತ್ಯ ಮತ್ತು ಶಾಬ್ದಿಕ ಸತ್ಯಗಳ ನಡುವಣ ಹೊಂದಾಣಿಕೆಯನ್ನು ವಚನ ಸಾಹಿತ್ಯ ಗಟ್ಟಿಗೊಳಿಸಿದೆ. ಆದ್ದರಿಂದ ಮಾತು ಇಲ್ಲವೇ ನುಡಿಯನ್ನು ಕುರಿತ ವಚನಗಳನ್ನು ಮಾತ್ರವಷ್ಟೇ ಅಲ್ಲದೇ ಬದುಕಿನ ನಂಬಿಕೆ ಮತ್ತು ಅಪನಂಬಿಕೆಗಳ ಸ್ವರೂಪವನ್ನು ವಿವರಿಸುವುದಕ್ಕೂ ವಚನಗಳನ್ನು ಉಲ್ಲೇಖ ಮಾಡಲಾಗುತ್ತದೆ. ಬದುಕಿನ ಅರ್ಥಗಳನ್ನು ವಚನಗಳ ಭಾಷೆಯ ಮೂಲಕ ಸಾಕ್ಷಾತ್ಕಾರಗೊಳಿಸುವ ಬಗೆಯಂತೆ, ಭಾಷೆಯ ಸಾಕ್ಷಾತ್ಕಾರವನ್ನು ವಚನಗಳಲ್ಲಿ ಕಾಣುವುದನ್ನು ನೋಡುತ್ತೇವೆ. ಭಾಷೆಯನ್ನೇ ಇಲ್ಲಿ ಪ್ರಮಾಣವಾಗಿ ಗ್ರಹಿಸಲಾಗಿದೆ.

ಈ ಇಡೀ ತಾತ್ವಿಕ ವಿನ್ಯಾಸವನ್ನು ಭಾಷಾಶಾಸ್ತ್ರೀಯ ನೆಲೆಯಿಂದ ಅರಿಯಲು ನಮಗೆ ಸಾಕಷ್ಟು ಗೊಂದಲಗಳು ಎದುರಾಗುತ್ತವೆ. ಆದರೆ ಸಂಸ್ಕ್ರುತಿಯೊಳಗೆಯೇ ನೆಲೆಪಡೆಯುವ ವಿಚಾರ ಸ್ವರೂಪದ ಬಗೆಗಿನ ಚರ್ಚೆಗಳನ್ನು ತೀರಾ ಭಿನ್ನವಾಗಿ ನಿರ್ವಚಿಸಲಾಗಿದೆ. ಇದೊಂದು ರೀತಿಯಲ್ಲಿ ದೀಪ ಮತ್ತು ಬೆಳಕಿನ ಸಂಬಂಧವನ್ನು ಸೂಚಿಸುವಂತಿದೆ. ಅಂದರೆ ದೀಪದ ಬೆಳಕಿನಲ್ಲಿಯೇ ದೀಪವೂ ಕಾಣುವಂತೆ (ಕೆವಿಎನ್ ಅವರ ಮಾತು) ಭಾಷೆಯ ಬೆಳಕಿನಲ್ಲಿ ಸಂಸ್ಕ್ರುತಿ ಗೋಚರಿಸುತ್ತದೆ. ವಚನ ಮತ್ತು ಭಾಷೆಯ ಸಂಬಂಧವನ್ನು ಈ ರೂಪಕದ ಮೂಲಕ ನೋಡಿದರೆ ಸ್ಪಷ್ಟವಾಗುತ್ತದೆ.

ಆದ್ದರಿಂದ ವಚನ ಸಾಹಿತ್ಯ ಕೇವಲ ಸಾಹಿತ್ಯವಾಗಿ ಮಾತ್ರ ಕಾಣದೇ, ಅದೊಂದು ಸಮೂಹಗಳ ಬದುಕಿನ ಪ್ರಮಾಣ ಭಾಷೆಯಾಗಿ ಒಪ್ಪಿಗೆಯನ್ನು ಪಡೆದಿದೆ. ಜಾತಿ, ಲಿಂಗ ಹಾಗೂ ಆಹಾರಭೇದದ ವಿಷಮತೆಯ ತೀವ್ರತೆಯನ್ನು ಟೀಕಿಸುವ ವಚನಗಳು ನಮ್ಮ ಆತ್ಮವಿಶ್ವಾದ ಮಾತುಗಳಾಗಿ ಹಾಗೂ ಬದುಕಿನ ಸ್ಥಿರತೆಯನ್ನು ಕಲ್ಪಿಸುವ ಭರವಸೆಯ ಪ್ರಮಾಣದ ‘ಭಾಷೆಯಾಗಿಯೂ ಒಡಮೂಡಿವೆ. ವಚನ ಭಾಷೆಯಾಗುವಂತೆ, ಭಾಷೆಯೂ ವಚನವಾಗುತ್ತದೆ. ಈ ಆಗುವಿಕೆಯಲ್ಲಿ ವೈಚಾರಿಕ ನಿಲುಗಳನ್ನು ವಚನ ಸಾಹಿತ್ಯ ಹೇಗೆ ಅನುಸಂಧಾನಗೊಳ್ಳುತ್ತದೆ ಅನ್ನುವುದನ್ನು ಕಾಣಬಹುದು.

ನೈತಿಕ ವ್ಯಕ್ತಿತ್ವವನ್ನು ವಚನಗಳು ಪ್ರತಿನಿಧಿಸುತ್ತವೆ. ಧರ್ಮ ಮತ್ತು ನೀತಿ, ವ್ಯಕ್ತಿ ಮತ್ತು ನೈತಿಕತೆ, ಸಮೂಹ ಮತ್ತು ಲೋಕಾನುಭವ ಇವುಗಳು ಒಂದರಿಂದೊಂದು ಬೇರೆಯಲ್ಲ. ಈ ನಿಲುವು ವಚನಗಳಿಂದ ಒಡಮೂಡುವ ದಾರ್ಶಿನಿಕತೆಯಾಗಿದೆ. ಮಾತು ಬದುಕಿನ ಯಾವ ಆಯಾಮವನ್ನು ಶಾಶ್ವತಗೊಳಿಸುತ್ತದೆ ಎಂಬ ವಾಸ್ತವವನ್ನು ವಚನಗಳಲ್ಲಿ ಕಾಣುತ್ತೇವೆ. ಮಾತು ಮಾಣಿಕ್ಯ, ಮಾತು ಜೋತಿರ್ಲಿಂಗ, ಮಾತು ಸ್ಫಟಿಕವಾಗುವ ಪ್ರಕ್ರಿಯೆ ಶಬ್ದ ಮತ್ತು ಅರ್ಥಗಳ ನಡುವಣ ನಂಟನ್ನು ಬೆಸೆಯುವ ನೆಲೆ ಮಾತ್ರವಲ್ಲ. ಬದಲಾಗಿ ನಡೆ ಮತ್ತು ನುಡಿಗಳ ನಡುವೆ ಏರ್ಪಡುವ ಸತ್ಯದ ಸಾಕ್ಷಾತ್ಕಾರವಾಗಿದೆ.

ಅದಕ್ಕೆ ಅಲ್ಲಮನ ನಡೆಯಿಂದ ನುಡಿಗೆಟ್ಟು, ನುಡಿಯಿಂದ ನಡೆಗೆಟ್ಟು ಎಂಬೀ ಮಾತು ಜೋತಿರ್ಲಿಂಗವಾಗುವ ಪ್ರಕ್ರಿಯೆಯನ್ನು ಸೂಚಿಸುತ್ತದೆ. ವಚನಗಳಲ್ಲಿ ಮಾತು ಮತ್ತು ಅರ್ಥಗಳ ಗುರಿ ನಿಜಾನುಭವದ ದರ್ಶನವಾಗಿದೆ. ಅದಕ್ಕಾಗಿಯೇ ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ಶರಣ ನಡೆದರೆ ನಿರ್ಗಮನಿ, ನುಡಿದರೆ ನಿಶ್ಯಬ್ದ ಎಂಬೆಲ್ಲ ಮಾತುಗಳ ಪರಿಣಾಮವಾಗಿ ಭಾಷೆಯನ್ನು ಅರಿವಿನ ವಾಸ್ತವವನ್ನಾಗಿ ಪರಿವರ್ತಿಸುವ ಇರಾದೆಯನ್ನು ವಚನಗಳಲ್ಲಿ ಕಾಣುತ್ತೇವೆ.

ಹಾಗಾಗಿ ಅರಿವೇ ಗುರು ಎಂಬ ಮಾತು ಭಾಷೆಯ ಪರಧಿಯನ್ನು ಮೀರಿದ ನೆಲೆಯನ್ನು ಸೂಚಿಸುತ್ತದೆ. ಭಾಷೆಯ ಪರಧಿಯನ್ನು ಮೀರುವುದೆಂದರೆ, ಭಾಷೆಯನ್ನೇ ಮೀರುವುದೆಂದಲ್ಲ ಬದಲಾಗಿ ಮಾತನ್ನು ನಡೆಯಾಗಿ, ಆಲೋಚನೆಯಾಗಿ, ನೈತಿಕ ನೆಲೆಯನ್ನಾಗಿ ಅರಿಯುವ ಬಗೆಯಾಗಿದೆ. ಅಂದರೆ ವ್ಯಾಕರಣದ ಸಾಂಪ್ರದಾಯಿಕ ನಿಯಮಗಳ ಚೌಕಟ್ಟನ್ನು ಮೀರುವ ಬಗೆಯಾಗಿ ಇದನ್ನು ನೋಡಬೇಕು. ಅದಕ್ಕಾಗಿಯೇ ಶಬ್ದಸಂದಣಿಯ ಮಾತು ಸಯವಲ್ಲ ನೋಡಾ ಪ್ರಭು ಎಂಬ ಮಾತನ್ನು ಮುಕ್ತಾಯಕ್ಕ ಅಲ್ಲಮನಿಗೆ ಹೇಳುತ್ತಾಳೆ.

ಮಾತುಗಳು ಕೇವಲ ಭಾಷಿಕ ಸೂಚಕಗಳಾಗುವ ಅಪಾಯದ ಎಚ್ಚರವನ್ನು ಮುಕ್ತಾಯಕ್ಕನ ಈ ಮಾತುಗಳಲ್ಲಿ ಕಾಣುತ್ತೇವೆ. ಅಲ್ಲಮ, ಬಸವ, ಮುಕ್ತಾಯಕ್ಕ, ಅಕ್ಕ ಮೊದಲಾದವರ ವಚನಗಳನ್ನು ತಲಸ್ಪರ್ಶಿಯಾಗಿ ಓದಿದರೆ, ನುಡಿಯೊಳಗಣ ನಿಶ್ಯಬ್ದ ಹಾಗೂ ನುಡಿಯೊಳಗಣ ಅರ್ಥ ಇವುಗಳ ನಡುವಿನ ವ್ಯತ್ಯಾಸ ಭಾಷಿಕ ಸೂಕ್ಷ್ಮಗಳನ್ನೇ ಪ್ರತಿನಿಧಿಸುತ್ತವೆ ಎಂಬುದು ಗಮನಾರ್ಹ.

ಅನುಭಾವದ ಅಮೂರ್ತತೆಯನ್ನು ಮೀರಿ ಅನುಭವದ ವಿನ್ಯಾಸಗಳನ್ನು ಆಧರಿಸಿಕೊಂಡು ಸಮೂಹಗಳ ನಡೆ-ನುಡಿಗಳ ನಡುವಣ ನೈತಿಕತೆಯನ್ನು ನಿರೂಪಿಸುವ ಈ ವಚನ ಸಾಹಿತ್ಯ ವಿಮೋಚನೆಯ ಭಾಷೆಯಾಗಿದೆ. ಈ ವಿಮೋಚನೆ ಎನ್ನುವುದು ಭಾವ ಬಂಧನಗಳನ್ನು ಮಾತ್ರ ಮೀರುವುದಲ್ಲ. ವೇದ ಮತ್ತು ಆಗಮಗಳು ಸಾಮಾಜಿಕ-ಸಾಂಸ್ಕೃತಿಕವಾಗಿ ಹೇರಿದ ನಿರ್ಬಂಧಗಳನ್ನೂ ಮೀರುವ ಬಗೆಯಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ನೆಲದನಿ

ನುಡಿಯ ಒಡಲು – 21 | ಮಾತು ಮತ್ತು ನೋಟಗಳ ವಿಭಜನೆ: ಸಂಕಥನಾ ವಿಶ್ಲೇಷಣೆ

Published

on

  • ಡಾ. ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕ, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಮಾತು ಮತ್ತು ನೋಟಗಳ ನಡುವಣ ನಂಟನ್ನು ಕುರಿತು ಸಾಕಷ್ಟು ಚಿಂತನೆ, ಚರ್ಚೆಗಳು ಜಗತ್ತಿನಾದ್ಯಂತ ನಡೆಯುತ್ತಿವೆ. ಇವತ್ತಿಗೂ ಈ ಚರ್ಚೆಗಳು ಅತ್ಯಂತ ಪ್ರಸ್ತುತವಾಗಿಯೇ ಇರುತ್ತವೆ. ಕಾರಣವೇನಂದರೆ, ಮಾತನ್ನು ಕುರಿತು ನಡೆಯುತ್ತಿರುವ ಓದುಗಳು ಇವತ್ತಿಗೂ ನಿರಂತರವಾಗಿದ್ದರೂ, ಮಾತಿನ ಇಡೀ ಸ್ವರೂಪವನ್ನು ಅರಿಯಲು ನಮಗೆ ಸಾಧ್ಯವಾಗಿಲ್ಲ.

ಅದೇ ರೀತಿಯಾಗಿ ಮಾತು ಮತ್ತು ಲೋಕನೋಟಗಳ ನಡುವಣ ಸಂಬಂಧವನ್ನು ಕುರಿತು ಈಗಲೂ ನಡೆಯುತ್ತಿರುವ ಚರ್ಚೆಗಳಿಗೆ ಇನ್ನೂ ಯಾವುದೇ ಬಗೆಯ ನಿಚ್ಚಳವಾದ ತಾತ್ವಿಕ ವಿನ್ಯಾಸಗಳು ರೂಪುಗೊಂಡಿಲ್ಲ. ಹಾಗಾಗಿ ನುಡಿ, ಕಾಲ, ದೇಶ, ವ್ಯಕ್ತಿ ಮತ್ತು ಸಮೂಹಗಳ ನಡುವಿನ ಅಂತರ್ಸಂಬಂಧ ಗತಿತಾರ್ಕಿಕವಾದದ್ದು ಎಂದು ಕೆಲವು ಆಲೋಚನಾ ಕ್ರಮಗಳು ಹೇಳುತ್ತವೆ.

ಮತ್ತೆ ಇನ್ನೂ ಕೆಲವು ಮಾದರಿಗಳು ವಾದಿಸುವಂತೆ, ಈ ಸಂಬಂಧವು ಕೇವಲ ಭಾಷಿಕ ಕೇಂದ್ರಿತವಾದದ್ದು ಎಂದು ನಂಬುತ್ತವೆ. ಈ ಎರಡೂ ವಿನ್ಯಾಸಕ್ಕೆ ಹೊರತಾದ ಮಾದರಿಯೊಂದು ಇವತ್ತು ಅತ್ಯಂತ ಪ್ರಬಲವಾಗಿ ಬೆಳೆದಿದೆ. ಈ ಮಾದರಿಯ ಪ್ರಕಾರ ನುಡಿಯೆಂಬುದು ಮೂಲಭೂತವಾಗಿ ಗ್ರಹಿಕೆಗೆ ಸಂಬಂಧಿಸಿದ ವಿದ್ಯಮಾನ (ಕಾಗ್ನಿಟಿವ್ ಫಿನಾಮಿನಾನ್) ಆಗಿರುತ್ತದೆ. ಈ ತಿಳಿವಿನ ಪ್ರಕಾರ ನುಡಿ ಮತ್ತು ನೋಟಗಳ ನಡುವಣ ನಂಟಸ್ತಿಕೆ ವಿಶ್ವಾತ್ಮಕವಾದ ವಿನ್ಯಾಸವನ್ನು ಹೊಂದಿರುತ್ತದೆ ಎಂದಾಗುತ್ತದೆ.

ಅಂದರೇನಾಯ್ತು, ಕಾಲ, ದೇಶ ಹಾಗೂ ವ್ಯಕ್ತಿ ನೆಲೆಗಳಲ್ಲಿ ನುಡಿಯ ಮೂಲಕ ರೂಪುಗೊಳ್ಳುವ ಯಾವುದೇ ನೋಟಕ್ರಮವು ಕೂಡ ವಿಶ್ವಾತ್ಮಕ ಆಗಿರುತ್ತದೆ ಎಂದಾಯ್ತು. ಒಂದು ಪಕ್ಷ ಈ ನಿಲವೇ ದಿಟವಾಗಿದ್ದರೆ, ಮಾತು ಮತ್ತು ನೋಟಕ್ರಮಗಳ ನಡುವಿನ ವಿಭಜನೆ ಅತ್ಯಂತ ಸರಳವಾಗಿ ಕಾಣುತ್ತದೆ. ಅಂದರೆ ಮನುಷ್ಯನ ಗ್ರಹಿಕೆಯೆಂಬುದು ಜಗತ್ತಿನಾದ್ಯಂತ ಒಂದೇ ಬಗೆಯಲ್ಲಿ ನೆಲೆಪಡೆಯುತ್ತದೆ ಎಂದಾಗುತ್ತದೆ.

ಇಲ್ಲ ಈ ವಿಭಜನೆ ಇಷ್ಟೊಂದು ಸರಳವಾಗಿರಲು ಸಾಧ್ಯವಿಲ್ಲ ಎನ್ನುವುದನ್ನೂ ಇದೇ ಆಲೋಚನಾ ಕ್ರಮವೇ ತಿಳಿಸುತ್ತದೆ. ಅದೇನೆಂದರೆ, ವಿಶ್ವಾತ್ಮಕತೆ ಎಂಬುದು ಕೇವಲ ತತ್ವಗಳ (ಪ್ರಿನ್ಸಿಪಲ್ಸ್) ನೆಲೆಗೆ ಮಾತ್ರ ಸಂಬಂಧಿಸಿರುತ್ತದೆ ಹೊರತು ಅದು ವಿಕಲ್ಪಗಳಿಗೂ (ಪ್ಯಾರಮೀಟರ್ಸ್) ಸಂಬಂಧಿಸಲಾರದು ಎನ್ನುವ ತಿಳುವಳಿಕೆಯೂ ಕೂಡ ಈ ವಿನ್ಯಾಸದೊಳಗೆಯೇ ನಮಗೆ ದೊರೆಯುತ್ತದೆ.

ಅಂದರೆ ಮನುಷ್ಯ ಸಹಜವಾಗಿರುವ ಎಲ್ಲ ವಿದ್ಯಮಾನಗಳಲ್ಲಿಯೂ ಕೆಲವು ಸಮಾನವಾದ ರಚನೆಗಳು ಇರುವುದನ್ನು ಈ ತತ್ವಗಳು ತಿಳಿಸುತ್ತವೆ. ಆದರೆ ನುಡಿ, ಕಾಲ, ದೇಶ ಹಾಗೂ ವ್ಯಕ್ತಿಗಳ ನಡುವೇ ಪ್ರತ್ಯೇಕವಾದ, ವಿಶಿಷ್ಟವಾದ ಇಲ್ಲವೇ ದೇಶೀಯವಾದ ರಾಚನಿಕ ವಿನ್ಯಾಸಗಳು ಹೇಗೆ ಕಾರಣವಾಗುತ್ತವೆ ಎಂಬ ತಿಳುವಳಿಕೆಯನ್ನು ಈ ವಿಕಲ್ಪಗಳು ಮನವರಿಕೆ ಮಾಡುತ್ತವೆ. ಹಾಗಾಗಿ ನುಡಿ, ಆಲೋಚನೆ, ಸಂಸ್ಕೃತಿ, ವ್ಯಕ್ತಿ, ದೇಶ ಹಾಗೂ ಸಮಾಜಗಳ ನಡುವಣ ವಿಭಜನೆಯನ್ನು ಅರಿಯುವುದಕ್ಕೆ ನಮಗೆ ಮುಖ್ಯವಾಗಿ ಇಂತಹ ವಿಕಲ್ಪಗಳು ಸಹಾಯಕ್ಕೆ ಬರುತ್ತವೆ.

ನುಡಿ, ಮನಸ್ಸು ಹಾಗೂ ಸಮಾಜಗಳ ನಡುವಣ ನಂಟಸ್ತಿಕೆ ಎಷ್ಟೊಂದು ಸಂಕೀರ್ಣವಾದ ಸಂಗತಿ ಎಂಬುದನ್ನು ಈ ನಿಲುವುಗಳು ಸೂಚಿಸುತ್ತವೆ. ಮಾತು ಮತ್ತು ನೋಟಗಳ ನಡುವಣ ನಂಟಸ್ತಿಕೆ ಇವತ್ತು ಕೇವಲ ಸಾಮಾಜಿಕ ವರ್ತನೆಗೆ ಹಾಗೂ ಭಾಷಿಕ ರಚನೆಗೆ ಮಾತ್ರ ಸೀಮಿತಗೊಂಡಿಲ್ಲ. ಇದು ಮಾನಸಿಕ ವಿಕಾಸ ಹಾಗೂ ವ್ಯಕ್ತಿಯ ಮನಸ್ಸಿನಲ್ಲಿ ಜೈವಿಕವಾಗಿ ಹಾಗೂ ಸಹಜವಾಗಿಯೇ ಅಂತಸ್ಥವಾಗಿರುವ ಭಾಷಿಕ ವಿನ್ಯಾಸಕ್ಕೂ ಪೂರಕವಾಗಿ ಈ ನಂಟಸ್ತಿಕೆ ಹರಡಿಕೊಂಡಿರುತ್ತದೆ.

ಇದು ಬಹುತೇಕವಾಗಿ ರೂಪಕ ಇಲ್ಲವೇ ರೂಪಕಾತ್ಮಕ ನೆಲೆಯನ್ನು ಹೊಂದಿರುತ್ತದೆ. ಎಲ್ಲ ಸಮುದಾಯದ ಸದಸ್ಯರು ನೋಟಕ್ರಮಗಳಲ್ಲಿ ಬದುಕುವುದಷ್ಟೆಯಲ್ಲ, ಬದಲಾಗಿ ಈ ನೋಟಕ್ರಮಗಳ ರಚನೆಗಳನ್ನು ಕರಗತ ಮಾಡಿಕೊಳ್ಳುವ ಕೌಶಲಗಳನ್ನೂ ಹೊಂದಿರುತ್ತಾರೆ. ಆದ್ದರಿಂದ ಈ ವಸ್ತುವಿನ್ಯಾಸವು ಆಯಾ ನುಡಿಗಳಲ್ಲಿಯೇ ಪ್ರತಿಫಲನವಾಗುತ್ತದೆ. ನುಡಿಯೊಳಗೆಯೇ ಇಂತಹವೊಂದು ಹದಬೆರಕೆಯ ಆಯಾಮವಿರುತ್ತದೆ.

ನುಡಿಯಲ್ಲಿ ನಡೆಯುವ ಇಂತಹ ಹದಬೆರಕೆಯ ನೆಲೆಯನ್ನು ಕುರಿತು ಮಾತ್ನಾಡುವಾಗ, ನಮಗೆ ತೋರುವ ಪ್ರಮುಖ ಸಂಗತಿಯೇನಂದರೆ, ನುಡಿಯ ಕಾರಣದಿಂದಲೇ, ಮನುಷ್ಯರಿಗೆ ಇಂತಹವೊಂದು ಹದಬೆರಕೆಯ ಕಸುವು ನಮ್ಮ ಜೈವಿಕ ವಿನ್ಯಾಸದಲ್ಲಿಯೇ ನೆಲೆಗೊಂಡಿರುವುದು ಗೊತ್ತಾಗುತ್ತದೆ. ಇದೇ ಸನ್ನಿವೇಶದಲ್ಲಿಯೇ ಗೋಚರಿಸುವ ಮತ್ತೊಂದು ಸುಳಿವು ಏನೆಂದರೆ, ಬಹು ಬಗೆಯ ನೋಟಕ್ರಮಗಳನ್ನು ಪಡೆಯುವ ಅವಕಾಶವೂ ನಮಗೆ ಸಹಜವಾಗಿಯೇ ನಮ್ಮ ನಮ್ಮ ನುಡಿ ಪರಿಸರಗಳಲ್ಲಿ ಸಿಗುತ್ತವೆ.

ಹಾಗೇನೆ ನಮಗೆ ಬೇಕಾಗಿರುವ ನೋಟಕ್ರಮಗಳ ಇಲ್ಲವೇ ಪರಿಕಲ್ಪನೆಗಳ ಪ್ರಮಾಣದಲ್ಲಿ ನಮ್ಮದೆಯಾದ ಆಯ್ಕೆಗಳಿರುವುದು ಕೂಡ ವಿಶೇಷ. ಅಂದರೆ ಆಯಾ ನುಡಿ ಪರಿಸರದಲ್ಲಿ ಬದುಕುವ ಪ್ರತಿಯೊಬ್ಬರು ಕೂಡ ಸಮ ಪ್ರಮಾಣದ ಗ್ರಹಿಕೆಗಳನ್ನು ಪಡೆಯಲೇ ಬೇಕೆಂಬ ಯಾವುದೇ ಒತ್ತಾಯವಿರುವುದಿಲ್ಲ. ಹಾಗಾಗಿ ತಮ್ಮ ಬದುಕಿಗೆ ಅತ್ಯಂತ ಅಗತ್ಯವೆನಿಸುವ ನೋಟಕ್ರಮಗಳನ್ನು ಮಾತ್ರ ಪಡೆಯುವ ಈ ವಿನ್ಯಾಸವೇ ಮಾತು ಮತ್ತು ನೋಟಗಳ ನಡುವಣ ವಿಭಜನೆಗೆ ಕಾರಣವಾಗುತ್ತದೆ.

ಸಾಮಾಜಿಕ ಸಂವಹನವು ಲೀಲಾಜಾಲವಾಗಿ ಹಾಗೂ ಸಲೀಸಾಗಿ ನಡೆಯುವುದಕ್ಕೆ ಈ ನಿಲುವು ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇದರೊಟ್ಟಿಗೆ, ನೋಟಕ್ರಮಗಳನ್ನು ಭಾಷಿಕವಾಗಿ ವರ್ಗೀಕರಣಗೊಳಿಸುವ, ಆ ಇಡೀ ರಾಚನಿಕ ಪ್ರಕ್ರಿಯೆಯಲ್ಲಿಯೇ ಕ್ರಾಸ್‍ಲಿಂಗ್ವಿಸ್ಟಿಕ್ ವ್ಯತ್ಯಾಸಗಳು ಹೆಚ್ಚು ಪ್ರಬಲವಾಗಿರುತ್ತವೆ ಎಂಬುದು ಗಮನಾರ್ಹ ಸಂಗತಿ. ಹಾಗೂ ನೋಟಕ್ರಮಗಳ ಪ್ರತಿನಿಧಿಕರಣದಲ್ಲಿಯೂ ಈ ಕ್ರಾಸ್‍ಲಿಂಗ್ವಿಸ್ಟಿಕ್ ಮಾದರಿಗಳು ಅತ್ಯಂತ ನಿಚ್ಚಳವಾಗಿಯೇ ಕಾಣುತ್ತವೆ ಅನ್ನುವುದನ್ನೂ ಕೂಡ ಇಲ್ಲಿ ಮರೆಯಲು ಸಾಧ್ಯವಿಲ್ಲ.

ದಿಟ, ಈ ಕ್ರಾಸ್‍ಲಿಂಗ್ವಿಸ್ಟಿಕ್ ಮಾದರಿಗಳೇನು ನಮ್ಮಲ್ಲಿ ಯಾವುದೇ ಬಗೆಯ ಬೆರಗನ್ನುಂಟು ಮಾಡಲಾರವು. ಆದರೆ, ನೋಟಕ್ರಮಗಳಿಗೆ ನಾವು ಕಲ್ಪಿಸಿಕೊಳ್ಳಬಹುದಾದ ಯಾವುದೇ ಕಣ್ನೋಟಗಳ ವಿಧಾನಗಳ ಮೇಲೆ ಮನುಷ್ಯನ ನರತಂತು ವಿನ್ಯಾಸವು ಒಂದು ಬಗೆಯ ಒತ್ತಾಯವನ್ನುಂಟು ಮಾಡುತ್ತದೆ ಎಂಬ ದಿಟವನ್ನು ಅರಿಯಲು ಇವುಗಳು ಪೂರಕವಾಗಿರುತ್ತವೆ.

ನಮ್ಮ ಲೋಕಗ್ರಹಿಕೆಗಳನ್ನು ಕರಗತಗೊಳಿಸುವ ಸಂಕೀರ್ಣ ಭಾಷಿಕ ಸೂಚಿಗಳು, ವ್ಯವಸ್ಥೆಗಳು ಮತ್ತು ಉನ್ನತ ಮಟ್ಟದ ಸಾಹಿತ್ಯಕ ಹಾಗೂ ಕಲಾತ್ಮಕ ಚಳಕಗಳು ಮುಖ್ಯವಾಗಿ ಪ್ರಾಥಮಿಕ ನೋಟಗಳು ಹಾಗೂ ಮೂಲ ಅನುಭವವನ್ನು ನೆಲೆಯಾಗಿಸಿಕೊಂಡು ಮೈಪಡೆಯುತ್ತವೆ.

ನಾವು ಸಾಮೂಹಿಕವಾಗಿ ಬದುಕು ನಡೆಸುವ ಸನ್ನಿವೇಶದಲ್ಲಿ, ಯಾವುದೇ ದೇಶ ಇಲ್ಲವೇ ಗ್ರಹಿಕೆಯ ರಚನೆಗೆ ಸಂಬಂಧಿಸಿದ ಒಂದು ನಿರ್ಧಿಷ್ಟವಾದ ಹಾಗೂ ಏಕೈಕವಾದ ಇಲ್ಲವೇ ನಮ್ಮದೆಯಾದ ಒಂದು ನೋಟಕ್ರಮವನ್ನು ನಾವು ಹೊಂದಲಾರವು. ಏಕೆಂದರೆ, ಬಹುಜನರು ಬದುಕು ನಡೆಸುವ ಸನ್ನಿವೇಶದಲ್ಲಿ ಸಹಜವಾಗಿ ನೋಟಕ್ರಮಗಳು ಬಹುಸಂಕೀರ್ಣವಾದ ಲೋಕನೋಟಗಳಿಂದ ರೂಪುಗೊಂಡಿರುತ್ತವೆ. ಹಾಗಂತ ಅವುಗಳ ನಡುವೆ ಯಾವುದೇ ವ್ಯತ್ಯಾಸಗಳು ಇರಲಾರವು ಎಂದು ಮಾತ್ರ ಹೇಳಲು ಸಾಧ್ಯವಿಲ್ಲ.

ನುಡಿ ಬಳಕೆ ಸಾಮಾಜಿಕ ಬದುಕನ್ನು ಪಸರಿಸುವಂತೆ, ಆ ನುಡಿ ಬಳಸುವ ವಿಧಾನದಲ್ಲಿಯೇ ಈ ಸಾಮಾಜಿಕ ಬದುಕಿನ ವಿನ್ಯಾಸಗಳು ಕೂಡ ಅಂತಸ್ಥವಾಗಿರುತ್ತವೆ. ಬಹುತೇಕ ನುಡಿಯರಿಗರು ನುಡಿಯನ್ನು ಅದೊಂದು ಅಮೂರ್ತ ರಚನೆಯನ್ನಾಗಿ ಮಾತ್ರ ಪರಿಗಣಿಸಿರುತ್ತಾರೆ. ಅಂದರೆ ನುಡಿಯು ತನ್ನಷ್ಟಕ್ಕೆ ತಾನು ಸ್ವತಂತ್ರವಾಗಿ ನೆಲೆಗೊಂಡು ನಿರ್ಧಿಷ್ಟ ನುಡಿ ಬಳಕೆಯ ಸನ್ನಿವೇಶಗಳಿಗೆ ಮಾತ್ರ ಸೀಮಿತವಾಗಿರುತ್ತದೆ.

ಉದಾ.ಗೆ ಗಣಿತದ ಯಾವುದೇ ತಾರ್ಕಿಕ ರಚನೆಯು ನೇರವಾಗಿ ಸಮೂಹಗಳ ನಿರ್ಧಿಷ್ಟ ಸಮಸ್ಯೆಗಳಿಗೆ ಮಾತ್ರ ಅನ್ವಯವಾಗದೇ ಅದೊಂದು ಸ್ವತಂತ್ರ ಸೂತ್ರವಾಗಿ ರೂಪುಗೊಳ್ಳುತ್ತದೆ. ಆದರೆ ನುಡಿ ಬಳಕೆಯ ಒಂದೊಂದು ಅನುಭವ ಮತ್ತು ಪ್ರಯೋಗವು ಆಯಾ ನುಡಿ ಬಳಕೆಗೆ ಒಳಪಡುವ ವಲಯ ಹಾಗೂ ನಿಯೋಗಗಳಿಗೆ ಮಾತ್ರ ಸಂಬಂಧಿಸಿರುತ್ತವೆ.

ಹಾಗಾಗಿ ಪ್ರತಿಯೊಂದು ಸಂವಹನ ಕ್ರಿಯೆಯು ಕೂಡ ಒಂದೊಂದು ಸಾಮಾಜಿಕ ಸನ್ನಿವೇಶದಲ್ಲಿ ನೆಲೆಗೊಳ್ಳುತ್ತದೆ. ಹಾಗೂ ಭಾಷಿಕರು ಬಳಸು ಆಯಾ ಭಾಷಾ ರೂಪಗಳ ಮೇಲೆ ಈ ಸನ್ನಿವೇಶವು ತನ್ನ ಒತ್ತಾಯವನ್ನು ಹೇರುತ್ತದೆ. ಈ ಭಾಷಿಕರು ಸಾಮಾಜಿಕ ಸನ್ನಿವೇಶವನ್ನು ಹೇಗೆ ವ್ಯಾಖ್ಯಾನಿಸುತ್ತಾರೆ? ಇವರ ಗ್ರಹಿಕೆಗಳ ಬಗೆಗೆ ಬೇರೆಯವರಿಗೆ ಏನು ಗೊತ್ತಿರುತ್ತದೆ? ಅವರು ಹೇಗೆ ಇವುಗಳನ್ನು ಕುರಿತು ಯೋಚಿಸಬಲ್ಲರು? ಅವರು ಇವರ ಬಗೆಗೆ ಏನನ್ನು ಚಿಂತಿಸಬಲ್ಲರು ಮತ್ತು ನಂಬಬಲ್ಲರು? ಹಾಗೂ ತಮ್ಮ ಮತ್ತು ಬೇರೆಯವರ ಅಸ್ಮಿತೆಗಳ ಬಗೆಗೆ ಇವರು ಏನನ್ನು ಬಯಸುತ್ತಾರೆ ಎಂಬಿತ್ಯಾದಿ ಸಂಗತಿಗಳು, ಮಾತಿನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ರೂಪ ಮತ್ತು ಅರ್ಥಗಳ ಮೇಲೆ ಇವುಗಳು ಪರಿಣಾಮವನ್ನು ಬೀರುತ್ತವೆ.

ಆಯಾ ಸಾಮಾಜಿಕ ಮತ್ತು ಭಾಷಿಕ ಸನ್ನಿವೇಶಗಳನ್ನು ನೆಲೆಯಾಗಿಸಿಕೊಂಡು, ನೋಟಕ್ರಮಗಳ ತಿರುಳು (ಅರ್ಥ) ಪ್ರಸ್ತುತಗೊಳ್ಳುತ್ತದೆ. ಹಾಗೂ ಆಯಾ ಸನ್ನಿವೇಶಗಳಿಗೆ ಅನುಗುಣವಾಗಿ ನುಡಿಯಲ್ಲಿ ಮೈಪಡೆಯುವ ಈ ಎಲ್ಲ ನೋಟಕ್ರಮಗಳನ್ನು ವ್ಯಾಖ್ಯಾನಿಸಲಾಗುತ್ತದೆ.

ಅಂದರೆ ಹೇಳುಗ ಮತ್ತು ಕೇಳುಗರು ಜೊತೆಗೂಡಿ ತಾವು ಏನನ್ನು ಭಾವಿಸುತ್ತಾರೆ, ಏನನ್ನು ಗ್ರಹಿಸುತ್ತಾರೆ, ಏನನ್ನು ನೋಡುತ್ತಾರೆ ಹಾಗೂ ಸಂವಹನದ ಯಾವ ಹಂತವನ್ನು ಇವರು ತಲಪುತ್ತಾರೆ ಎಂಬೆಲ್ಲ ಸಂಗತಿಗಳು ಒಂದು ಪ್ರದೇಶದಲ್ಲಿ ಪ್ರಮುಖವಾಗುತ್ತವೆ. ಇಲ್ಲಿ, ಅಲ್ಲಿ, ಎಲ್ಲಿ, ಯಾವಾಗ, ಇದು, ಅದು ಮುಂತಾದ ಭಾಷಿಕ ಸೂಚಿಗಳು ಒಂದು ನಿರ್ಧಿಷ್ಟ ಕಾಲ ಮತ್ತು ದೇಶದ ವಿನ್ಯಾಸವನ್ನು ರೂಪಿಸುತ್ತವೆ.

ಮತ್ತು ಅಂತವೊಂದು ಸನ್ನಿವೇಶವನ್ನು ರೂಪಿಸುವ ಮುಕ್ತ ಅವಕಾಶವೂ ಈ ಭಾಷಿಕ ಸೂಚಿಗಳಲ್ಲಿ ಅಂತಸ್ಥವಾಗಿರುತ್ತದೆ. ಯಾವಾಗ ಹೇಳುಗ ಮತ್ತು ಕೇಳುಗರು ಒಂದು ದಿಟ ಪ್ರದೇಶವನ್ನು (ರಿಯಲ್ ಸ್ಪೇಸ್) ಪರಿಭಾವಿಸಲು, ಈಗ, ನಾಳೆ ಮತ್ತು ಕಳೆದ ವರುಷ ಮೊದಲಾದವುಗಳನ್ನು ಬಳಸುವುದನ್ನು ನೋಡಬಹುದು. ಉದಾ.ಗೆ ಬೇಂದ್ರೆಯವರ ಕವನವೊಂದರಲ್ಲಿ ಬಳಸಿರುವ ಇದಕ್ಕು, ಅದಕ್ಕು ಎದಕ್ಕು ಎಂಬೆಲ್ಲ ಸೂಚಕಗಳು ಕೇವಲ ಯಾವುದೇ ಒಂದು ಕಾಲ ಮತ್ತು ದೇಶಕ್ಕೆ ಮಾತ್ರ ಸೀಮಿತಗೊಂಡಿಲ್ಲ.

ಬದಲಾಗಿ ಆಯಾ ಕಾಲ ಮತ್ತು ದೇಶದ ಸನ್ನಿವೇಶಗಳಿಗೆ ಅನ್ವಯವಾಗುವ ಮುಕ್ತತೆ ಈ ಸೂಚಕಗಳಲ್ಲಿ ಇರುವುದನ್ನು ನೋಡಬಹುದು. ಹಾಗೂ ಪಂಪನ ಕಾವ್ಯದಲ್ಲಿ ಬಳಸಿರುವ ಎಷ್ಟೊಂದು ಅಭಿವ್ಯಕ್ತಿಗಳನ್ನು ನಮ್ಮ ಇವತ್ತಿನ ಸನ್ನಿವೇಶಕ್ಕೆ ಅನ್ವಯಿಸಿಕೊಂಡು ಮಾತ್ನಾಡುವಾಗ, ವ್ಯಕ್ತಿಗಳ ಹೆಸರುಗಳನ್ನು ಪರಿಗಣಿಸದೇ, ಆಯಾ ವ್ಯಕ್ತಿಗಳು ಪ್ರತಿನಿಧಿಸುವ ಸಾಮಾಜಿಕ ನೆಲೆ ಇಲ್ಲವೇ ಅಂತಸ್ತನ್ನು ಪರಿಗಣಿಸುತ್ತೇವೆ. ಯಾವುದೋ ಒಂದು ಕಾಲ್ಪನಿಕ ಪ್ರದೇಶದ (ಇಮ್ಯಾಜಿನ್ಡ್ ಸ್ಪೇಸ್) ಕಾಲ್ಪನಿಕ ನೆಲೆಯಿಂದ (ಇಮ್ಯಾಜಿನ್ಡ್ ಲೊಕೇಶನ್) ಬದುಕಿನ ನೋಟಗಳನ್ನು ಯಾವುದೇ ಒಬ್ಬ ಕಾಲ್ಪನಿಕ ಪಾಲುದಾರನಿಗೆ ಕಾಣಲು ಇಲ್ಲವೇ ತಲುಪಲು ಹೇಗೆ ಸಾಧ್ಯವಾಗುತ್ತದೆ.

ಅಂದರೆ ಹೇಳುಗ ಮತ್ತು ಕೇಳುಗ ಇವರಿಬ್ಬರೂ ಏನೆಲ್ಲವನ್ನೂ ಅರಿಯಲು, ಯೋಚಿಸಲು, ಗ್ರಹಿಸಲು ಹಾಗೂ ಪರಿಭಾವಿಸಲು ಸಾಧ್ಯವೋ, ಅದೆಲ್ಲವನ್ನೂ ಕಾಲ್ಪನಿಕವಾಗಿಯೇ ಪರಿಭಾವಿಸಲಾಗುತ್ತದೆ. ಏನೆಂದರೆ, ಮಾನಸಿಕ ನೆಲೆವೊಂದು (ಮೆಂಟಲ್ ಸ್ಪೇಸ್) ಏನೆಲ್ಲವನ್ನು ಒಳ್ಗೊಂಡಿರುತ್ತದೆ ಎನ್ನುವುದನ್ನು ಅರಿಯಲು ನಮಗೆಲ್ಲ ಸಾಧ್ಯವಾಗುವುದೇ ಮಾನಸಿಕವಾಗಿ ನೆಲೆಗೊಳ್ಳುವ ಇಂತಹ ಲೆಕ್ಕಾಚಾರಗಳಿಂದ ಮಾತ್ರ. ಹಾಗಾದರೆ, ಪ್ರತೀ ವ್ಯಕ್ತಿಯ ಮಾನಸಿಕ ನೆಲೆಯು ಪರಿಭಾವಿಸುವ ಯಾವುದೇ ವಿಚಾರ ಇಲ್ಲವೇ ನೋಟಕ್ರಮಗಳು, ಆಯಾ ವ್ಯಕ್ತಿಗೆ ಮಾತ್ರ ನಿರ್ಧಿಷ್ಟವಾಗಿರುತ್ತವೋ ಎಂಬ ಪ್ರಶ್ನೆಯೂ ಇಲ್ಲಿ ಎದುರಾಗುತ್ತದೆ.

ವಿಚಾರ ಇಲ್ಲವೇ ನೋಟಕ್ರಮಗಳು ವ್ಯಕ್ತಿ ವಿಶಷ್ಟತೆಯಿಂದ ಕೂಡಿರಲಾರವು. ಬದಲಾಗಿ ವ್ಯಕ್ತಿಗಳು ಈ ವಿಚಾರಗಳನ್ನು ಪರಿಭಾವಿಸುವ ಇಲ್ಲವೇ ನಿರ್ವಚಿಸುವ ವಿನ್ಯಾಸಗಳು ಮಾತ್ರ ಬೇರೆಯಾಗಿರುತ್ತವೆ. ಕಾಲ್ಪನಿಕ ಇಲ್ಲವೇ ದಿಟವಾದ ವ್ಯಕ್ತಿ, ಕಾಲ ಮತ್ತು ದೇಶಗಳನ್ನು ಪರಿಭಾವಿಸಲು ನಮಗೆ ಮುಖ್ಯವಾಗಿ ಡೈಯಕ್ಸಿಸ್‍ಗಳು (Deixis) ಒತ್ತಾಸೆಯಾಗಿರುತ್ತವೆ. ಡೈಯಕ್ಸಿಸ್‍ಗಳು ಮೂಲಕವೇ ನಾವು ಯಾವುದೇ ನುಡಿ ಪಠ್ಯಗಳಲ್ಲಿ ಸಂದರ್ಭಗಳನ್ನು ರೂಪಿಸಿಕೊಳ್ಳುತ್ತೇವೆ. ಈ ಸಂದರ್ಭಗಳೇ ನಮಗೆ ಕಾಲ, ದೇಶಗಳನ್ನು ಪರಿಭಾವಿಸಲು ಸೂಚಕಗಳಾಗಿರುತ್ತವೆ.

ಉದಾ.ಗೆ ನೀವು ದಯವಿಟ್ಟು ಇವತ್ತು ನಮ್ಮ ಮನೆಗೆ ಊಟಕ್ಕೆ ಬನ್ನಿ. ಈ ಉದಾಹರಣೆಯಲ್ಲಿರುವ ‘ನಮ್ಮ ಮನೆಗೆ’ ಎಂಬ ಉಲ್ಲೇಖವನ್ನು ಹೇಳುಗನು ಉಲ್ಲೇಖಿಸುವಾಗ, ಅವನು ಕಡ್ಡಾಯವಾಗಿ ತನ್ನ ಮನೆಯಲ್ಲಿಯೇ ಇರಬೇಕಾದ ಅಗತ್ಯವಿಲ್ಲ. ಮತ್ತು ಕೇಳುಗನಿಗೆ ಈ ಆಮಂತ್ರಣವನ್ನು ತನ್ನ ಮನೆಯಿಂದಲೇ ನೀಡುವ ಅಗತ್ಯವೂ ಕೂಡ ಇರುವುದಿಲ್ಲ. ಹಾಗೂ ಕೇಳುಗನು ಕೂಡ ಪ್ರತಿಯಾಗಿ, ಹ್ಞಾ! ಖಂಡಿತವಾಗಿ ನಾನು ನಿಮ್ಮ ಮನೆಗೆ ಊಟಕ್ಕೆ ಬರುತ್ತೇನೆ. ಎಂದು ಹೇಳುವಾಗಲೂ ಕೂಡ ಅವನು ಈ ಹೇಳುಗನ ಮನೆಗೆ ಬಂದು ಹೇಳುವ ಅವಶ್ಯಕತೆ ಇರವುದಿಲ್ಲ. ಅಂದರೆ ನುಡಿ ಸಾಮಗ್ರಿಗಳನ್ನು ಬಳಸುವಾಗ, ತಿರುಳುಗಳನ್ನು ಹೊರಡಿಸಲು ಬೇಕಾಗುವ ಅಂತರ್ಗತ ಸಾಮಗ್ರಿಗಳು ಅವುಗಳಲ್ಲಿ ಅಡಕವಾಗಿರುತ್ತವೆ.

ರಚನೆ ಹಾಗೂ ತಿರುಳು, ಈ ಎರಡೂ ನೆಲೆಗಳಿಂದಲೂ ನುಡಿ/ಮಾತು ಸಂದರ್ಭ ಮುಕ್ತವಾಗಿರುತ್ತದೆ. ಈ ಸಂದರ್ಭ ಮುಕ್ತತೆ ಕಾಲ-ದೇಶ-ವ್ಯಕ್ತಿಗಳನ್ನು ಮೀರಿ ನಿಲ್ಲುತ್ತದೆ. ಉದಾ.ಗೆ ಕುವೆಂಪು ಅವರು ತಮ್ಮ ಶ್ರೀ ರಾಮಯಣ ದರ್ಶನಂ, ಕೃತಿಯಲ್ಲಿ ಊರ್ಮಿಳೆಯಿಂದ, “ಕಡಲ್ಗಿದಿರ್ ಪನಿಗೇಂ ಪ್ರದರ್ಶನಂ” ಎಂಬ ಮಾತನ್ನು ಆಡಿಸುತ್ತಾರೆ. ಗಂಡನಿಗಾಗಿ ತಾನು ತಪಸ್ವಿನಿಯಂತೆ ಬದುಕಿದ್ದು ಪ್ರದರ್ಶನಕ್ಕಲ್ಲ ಎನ್ನುವ ಊರ್ಮಿಳೆಯ ಈ ಮಾತು ಸಾಂದರ್ಭಿಕವಾಗಿದ್ದರೂ, ಇದು ಸಂದರ್ಭ ಮುಕ್ತತೆಯನ್ನೂ ಪಡೆದಿರುತ್ತದೆ ಎಂಬುದು ಮಾತ್ರ ದಿಟ. ಯಾವುದೇ ಗುರಿರಹಿತ ಬದುಕಿನ ಯಾವುದೇ ಒಂದು ಕ್ರಿಯೆಯ ತಾತ್ಪರ್ಯವನ್ನು ಸೂಚಿಸಲು ಈ ಮಾತನ್ನು ಬಳಸಲು ಸಾಧ್ಯವಿದೆ.

ಕೇವಲ ಆಡಂಬರಕ್ಕಾಗಿ ಇಲ್ಲವೇ ಪ್ರದರ್ಶನಕ್ಕಾಗಿ ನಡೆಯುವ ಕ್ರಿಯೆಗಳನ್ನು ಟೀಕಿಸಲೂ ಕೂಡ ಈ ಮಾತನ್ನು ಬಳಸಬಹುದಾಗಿದೆ. ಪ್ರಾಥಮಿಕವಾಗಿ ನುಡಿಯೊಂದು ರಾಚನಿಕ ವ್ಯವಸ್ಥೆಯಾಗಿದ್ದರೂ ಕೂಡ, ಅದಕ್ಕೊಂದು ಅನಕೂಲಾತ್ಮಕ ನೆಲೆ ಇದ್ದೇ ಇರುತ್ತದೆ. ನುಡಿಯೊಂದಕ್ಕೆ ಈ ನೆಲೆಯೂ ಅತ್ಯಂತ ಮಹತ್ವದ ಸಂಗತಿಯಾಗಿರುತ್ತದೆ. ಅಂದರೆ, ಉಲಿ (ಧ್ವನಿ) ಮತ್ತು ತಿರುಳುಗಳ (ಅರ್ಥ) ನಡುವೆ ಯಾವುದೇ ಬಗೆಯ ತಾರ್ಕಿಕ ನಂಟಸ್ತಿಕೆ ಇರುವುದಿಲ್ಲ. ಉದಾ.ಗೆ ‘ಮರ’ ಎಂಬ ಪದದ ಉಲಿಗಳ ಮೊತ್ತಕ್ಕೂ ಅದು ನಿರೂಪಿಸುವ ತಿರುಳಿಗೂ ಯವುದೇ ಬಗೆಯ ನಂಟಿರುವುದಿಲ್ಲ. ಪ್ರತೀ ನುಡಿಯೊಳಗೆಯೇ ನಡೆಯುವ ಇಂತಹವೊಂದು ಹೊಂದಾಣಿಕೆಯ ನೆಲೆಯನ್ನೇ ನಾವು ಇಲ್ಲಿ ಅನಕೂಲಾತ್ಮಕವೆಂದು ಬಣ್ಣಿಸುತ್ತೇವೆ.

ನುಡಿ ತನ್ನಲ್ಲಿರುವ ಈ ಅನಕೂಲಾತ್ಮಕ ರಾಚನಿಕ ಸಾಮಗ್ರಿಗಳನ್ನು ಉಪಯೋಗಿಸಿಕೊಂಡೇ ಆಯಾ ಕಾಲ, ದೇಶ ಹಾಗೂ ವ್ಯಕ್ತಿಗಳಿಗೆ ಪೂರಕವಾಗುವ ಇಲ್ಲವೇ ಅಗತ್ಯವಾಗುವ ಸಂಕಥನಗಳನ್ನು ಕಟ್ಟುತ್ತಿರುತ್ತದೆ. ‘ಈ ಸಂಕಥನಗಳ ನಿರೂಪಣೆಯ ನುಡಿಯು ಕೂಡ ಕಣ್ಣಿನ ಓದಿಗೆ ಅನಕೂಲವಾಗುವಂತೆ ಇರುವ ಬದಲಾಗಿ ಕಿವಿಯ ಓದಿಗೆ ತಕ್ಕಂತೆ ಇರುತ್ತದೆ.

ಕಣ್ಣಿಗೆ ಕಾಣುವಂತೆ ಹೇಳುವುದಕ್ಕಿಂತ ಕಣ್ಣಿಗೆ ಕಟ್ಟುವಂತೆ ಹೇಳುವುದು ಈ ಸಂಕಥನಗಳ ದಾಟಿಯಾಗಿರುತ್ತದೆ’ (ಕೆವಿಎನ್:2010). ಮಾತು ಮತ್ತು ಮಾತಿನ ಮೂಲಕ ದೊರೆಯುವ ಒಂದೊಂದು ತಿರುಳು, ತಿಳಿವು ಹಾಗೂ ಹೊಳವುಗಳೆಲ್ಲವೂ ಅನುಭವದ ನೆಲೆಯನ್ನು ಪಡೆಯುತ್ತವೆ. ಮಾತು ಅನುಭವದ ಆಯಾಮವನ್ನು ಪಡೆದಕೂಡಲೇ, ಅದಕ್ಕೊಂದು ಸಂದರ್ಭ ಮುಕ್ತತೆಯು ಪ್ರಾಪ್ತವಾಗುತ್ತದೆ. ಇಂತಹ ವಿನ್ಯಾಸಗಳ ಕಾರಣವಾಗಿಯೇ ಮಾತು, ವ್ಯಕ್ತಿ, ಕಾಲ ಹಾಗೂ ದೇಶಗಳ ನಡುವೆ ವಿಭಜನೆಯೂ ಏರ್ಪಡುತ್ತದೆ ಎನ್ನುವುದು ಅತ್ಯಂತ ಮಹತ್ವದ ವಿದ್ಯಮಾನವಾಗಿದೆ.

ಆದರೆ ಸಾಮಾಜಿಕ ವಾಸ್ತವಗಳ ಮೂಲನೆಲೆಗಳು ಮೈಪಡೆಯುವುದು ಅಯಾ ನುಡಿಯಿಗರು (ಭಾಷಿಕರು) ತಾವಾಡುವ ನುಡಿಯ ತಿಳಿವಿನ ಮೂಲಕವೇ ಎಂಬುದು ಗಮನಾರ್ಹ. ಈ ವಿನ್ಯಾಸವು ಅತ್ಯಂತ ವ್ಯಾಪಕವಾಗಿರುತ್ತದೆ. ಮಾನಸಿಕ ಜಗತ್ತು ಮತ್ತು ಭೌತಿಕ ಜಗತ್ತಿನಲ್ಲಿರುವ ವಸ್ತುಗಳ-ವಿದ್ಯಮಾನಗಳ ತಿಳಿವನ್ನು ಈ ವಿನ್ಯಾಸವು ಒಳ್ಗೊಂಡಿರುತ್ತದೆ. ಈ ತಿಳಿವಿಗೆ ಎರಡು ಆಯಾಮಗಳು ಇರುತ್ತವೆ.

ಅಂದರೆ ಆಯಾ ತಿಳಿವು ಏನನ್ನು (ನಾಲೇಡ್ಜ್ ವ್ಹಾಟ್) ಸೂಚಿಸುತ್ತದೆ. ಹಾಗೂ ಆಯಾ ತಿಳಿವು ಹೇಗೆ (ನಾಲೇಡ್ಜ್ ಹೌ) ಸಮೂಹಗಳ ಒಡಲಲ್ಲಿ ನೆಲೆಗೊಳ್ಳುತ್ತದೆ ಎಂಬುದಾಗಿವೆ. ಆದರೆ ಈ ಎರಡೂ ತಿಳಿವಿನ ಆಯಾಮಗಳಲ್ಲಿ ಹಲವು ಬಗೆಯ ಸಾಮನ್ಯೀಕರಣದ (ಜನರ್ಯಾಲಿಟಿ) ನೆಲೆಗಳು ಹುದುಗಿರುತ್ತವೆ. ಹಾಗಾಗಿ ಒಂದೊಂದು ಪರಿಕಲ್ಪನಾತ್ಮಕ ತಿಳಿವು ಹಲವು ಆಯಾಮಗಳಿಂದ ಕೂಡಿರುತ್ತದೆ.

ಹಾಗೂ ಇಡಿತನದ ಮಾದರಿಗಳನ್ನು ಈ ಆಯಾಮಗಳು ನಿರಂತರವಾಗಿ ರೂಪಿಸುತ್ತವೆ. ಅಂದರೆ ಹಲವು ವಿಭಿನ್ನ ವಸ್ತುಗಳು ಹಾಗೂ ವಿದ್ಯಮಾನಗಳ ನಡುವಣ ಅಂತರ್ಸಂಬಂಧವನ್ನು ಗುರುತಿಸುವುದಾಗಿದೆ. ನುಡಿಯ ಮೂಲಕ ಮೈಪಡೆಯುವ ಪ್ರತಿಯೊಂದು ತಿಳಿವಿನ ಅವಿಭಾಜ್ಯ ಅಂಗವಾಗಿ ಇಂತಹ ಅಂತರ್ಸಂಬಂಧವು ನೆಲೆಗೊಳ್ಳುತ್ತದೆ.

ನುಡಿ ಸಾಮಗ್ರಿಗಳು ಕೇವಲ ಇಡಿತನವನ್ನು ಮಾತ್ರ ರೂಪಿಸದೇ ಬಿಡಿತನದ ಮೂಲಕ ಸಾಮಾಜಿಕ ಹಾಗೂ ಮಾನಸಿಕ ಪ್ರತ್ಯೇಕತೆಯನ್ನೂ ಸಂಘಟಿಸುತ್ತವೆ. ಅಸ್ಪೃಶ್ಯತೆಯಂತಹ ಅನುಭವವು ಶತಮಾನಗಳಿಂದ ಆಚರಣೆಯಲ್ಲಿದೆ. ಆದರೆ ಈ ಆಚರಣೆಯ ಸಾಮಾಜಿಕ ವಿನ್ಯಾಸದಲ್ಲಿ ಮಾತ್ರ ಬದಲಾವಣೆಯನ್ನು ಕಾಣಲು ಸಾಧ್ಯವೇ ಹೊರತು ಮಾನಸಿಕ ವಿನ್ಯಾಸದಲ್ಲಿ ಯಾವುದೇ ಬಗೆಯ ಪಲ್ಲಟವು ಇದುವರೆಗೂ ಏರ್ಪಟ್ಟಿರುವುದನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ.

ತಿರುಳಿನ ಇಲ್ಲವೇ ತಿಳಿವಿನ ಇಡಿತನದ ಸ್ವರೂಪದಲ್ಲಿಯೇ ಸಾಮಾಜಿಕ ಮತ್ತು ಮಾನಸಿಕ ಪ್ರತ್ಯೇಕತೆಯ ಚಹರೆಗಳು ಬಿಂಬಿತವಾಗುತ್ತವೆ. ತಿರುಳಿನ ಇಡಿತನದಲ್ಲಿರುವ ಅಂತರ್ಸಂಬಂಧದ ಆಯಾಮಗಳು ಇಂತಹ ಪ್ರತ್ಯೇಕತೆಯ ಕಾರಣದಿಂದ ಬಿಡಿಬಿಡಿಯಾಗಿ ನೆಲೆಗೊಳ್ಳುತ್ತವೆ. ಅಂದರೆ ಅಭಾದಿತ ಅನುಭವವು ಸಾಮಾಜಿಕ ಹಾಗೂ ಮಾನಸಿಕ ಇಡಿತವನ್ನಷ್ಟೆಯಲ್ಲದೇ ತಿರುಳಿನ ಐಕ್ಯತೆಯನ್ನೂ ಸೂಚಿಸುತ್ತದೆ.

ಆದರೆ ಸಮೂಹಗಳನ್ನು ಭಾದಿಸುವ ಯಾವುದೇ ಬಗೆಯ ಅನುಭವವೊಂದು ಐಕ್ಯತೆಯ ಸೂಚಕವಾಗಿರಲು ಸಾಧ್ಯವಿಲ್ಲ. ಈ ನಿಲುವು ಅತ್ಯಂತ ನಿಚ್ಚಳವಾಗಿ ನುಡಿ ಸಾಮಗ್ರಿಗಳ ಮೂಲಕ ಪ್ರಕಟವಾಗುತ್ತದೆ. ಅಂದರೆ ಮಾತಿನಲ್ಲಿ ಸಾಮಾಜಿಕ–ಮಾನಸಿಕ ಬಿರುಕುಗಳು ತಾವಾಗಿಯೇ ಏರ್ಪಡಲಾರವು ಎಂಬುದನ್ನು ಈ ಬಿಡಿತನದ ಆಯಾಮವು ಸೂಚಿಸುತ್ತದೆ. ಹಾಗಾಗಿ ಜಾತಿ ಮತ್ತು ಅಸ್ಪೃಶ್ಯತೆಯಂತಹ ಅನುಭವಗಳು ಇವತ್ತಿಗೂ ಸಹ ಪ್ರತ್ಯೇಕತೆಯ ಸೂಚಕಗಳಾಗಿ ನೆಲೆನಿಂತಿವೆ. ಪ್ರಜಾಸತ್ತಾತ್ಮಕ ನಿಲುವುಗಳು ಮಾತಿನ ಅವಿಭಾಜ್ಯ ಅಂಗವಾಗದೇ ಕೇವಲ ಉಲಿ ಮತ್ತು ತಿರುಳಿನ ನಡುವಣ ಸೂಚಿತ ಹಾಗೂ ಸೂಚಕ ನಂಟನ್ನು ವಿವರಿಸುವುದಕಷ್ಟೆ ಸೀಮಿತವಾಗಿವೆ.

ಇಂತಹ ಪ್ರತ್ಯೇಕತೆಯ ಕಾರಣಕ್ಕಾಗಿಯೇ ನುಡಿಯು ಎಲ್ಲ ಕಾಲದಲ್ಲಿಯೂ ಅತ್ಯಂತ ಪ್ರಬಲವಾದ ಅಸ್ಮಿತೆಯ ಸೂಚಕವಾಗಿ ನೆಲೆನಿಂತಿದೆ. ನುಡಿಯ ಮೂಲಕ ರೂಪುಗೊಳ್ಳುವ ಈ ಅಸ್ಮಿತೆಯೂ ಧರ್ಮದ ಮೂಲಕ ಪಡೆಯುವ ಅಸ್ಮಿತೆಗಿಂತಲೂ ಅತ್ಯಂತ ಪ್ರಬಲವಾಗಿರುತ್ತದೆ ಎಂಬುದು ಗಮನಾರ್ಹ. ಧರ್ಮವೂ ಕೂಡ ಸಮೂಹಗಳಲ್ಲಿ ಪ್ರತ್ಯೇಕತೆಯನ್ನು ಉಂಟುಮಾಡುವ ಬಹು ದೊಡ್ಡ ಅಸ್ತ್ರವಾಗಿದೆ ಎಂಬುದನ್ನೂ ಇಲ್ಲಿ ಯಾರು ಮರೆಯುವಂತಿಲ್ಲ.

ನುಡಿಯ ಸಂಘಟಿತ ಹಂತದಲ್ಲಿಯೇ ಪರಿಕಲ್ಪನಾತ್ಮಕತೆಯ ನೆಲೆಗಳು ಪರಸ್ಪರ ಸಂಬಂಧಿತ ಪರಿಕಲ್ಪನೆಗಳನ್ನು ಒಳಗೊಳ್ಳಬೇಕಾಗುತ್ತದೆ. ಆದರೆ ಇದೇ ಹಂತದಲ್ಲಿ ಮಾನಸಿಕ-ಸಾಮಾಜಿಕ ಬಿಡಿತನದದ ಇಲ್ಲವೇ ಪ್ರತ್ಯೇಕತೆಯ ಆಯಾಮಗಳು ಕೂಡ ಏರ್ಪಡುತ್ತವೆ. ಅಂದರೆ ಪರಸ್ಪರ ಸಂಬಂಧಿತ ಪರಿಕಲ್ಪನೆಗಳಲ್ಲಿ ಅಡಕವಾಗಿರುವ ಸಂಕೀರ್ಣತೆಯನ್ನು ಗ್ರಹಿಸುವ ಮೂಲಕ ಈ ಬಿಡಿತನದ ವಿನ್ಯಾಸಗಳನ್ನು ಅರಿಯುವ ಅಗತ್ಯವಿರುತ್ತದೆ.

ಏಕೆಂದರೆ ಮಾಹಿತಿಯೊಂದಕ್ಕಿಂತ ಹೆಚ್ಚು ಸಂಕೀರ್ಣವಾಗಿರುವ ವಸ್ತುಸ್ಥಿತಿಯೊಂದು ನುಡಿಯ ಅಭಿವ್ಯಕ್ತಿಗಳ ಮೂಲಕ ಸಹಜವಾಗಿ ಪ್ರತಿನಿಧಿಕರಣಗೊಳ್ಳುತ್ತದೆ. ಈ ಅಭಿವ್ಯಕ್ತಿಗಳನ್ನು ಅರ್ಥೈಸಿಕೊಳ್ಳುವುದೆಂದರೆ, ಆಯಾ ಮಾತುಗಳಲ್ಲಿ ಅತ್ಯಂತ ವ್ಯಾಪಕವಾಗಿ ಅಂತಸ್ಥವಾಗಿರುವ ಮಾಹಿತಿಗಳನ್ನು ಮಾತ್ರ ಅರಿಯುವುದಲ್ಲ. ಬದಲಾಗಿ ಅವುಗಳು ಸೂಚಿಸುವ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮಾನಸಿಕ ವಿನ್ಯಾಸಗಳನ್ನೂ ತಿಳಿಯುವುದಾಗಿದೆ.

ಹಾಗಾಗಿ ಅಭಿವ್ಯಕ್ತಿಯೊಂದು ರೂಪುಗೊಳ್ಳುವುದೆಂದರೆ, ವಿಸ್ತಾರವದ ಮಾಹಿತಿಯೊಂದನ್ನು ಅಮೂರ್ತಗೊಳಿಸಿ ನೋಡುವ ಬಗೆಯಾಗಿರುತ್ತದೆ. ಹೀಗೆ ಒಂದು ವ್ಯವಸ್ಥಿತವಾದ ವಿಸ್ತಾರದಲ್ಲಿ ಹರಡಿಕೊಂಡಿರುವ ಒಟ್ಟು ನುಡಿಮೊತ್ತವೇ ಹಾಗೂ ಆಯಾ ಸನ್ನಿವೇಶಕ್ಕೆ ಅಗತ್ಯವಿರುವ ಮಾಹಿತಿಗಳ ಸಂಚಯವೇ ಸಂಕಥನಗಳಾಗಿ ರೂಪುಗೊಳ್ಳುತ್ತವೆ. ಇಂತಹ ಸಂಕಥನಗಳು ಬಹುತೇಕವಾಗಿ ಪ್ರತಿನಿಧಿಕರಣದ ಮಾದರಿಗಳಾಗಿ ರೂಢಿಯಲ್ಲಿರುತ್ತವೆ.

ಯಾವುದೇ ತಿಳುವಿನ ನಿರ್ವಚನೆಯ ವಿನ್ಯಾಸಗಳು ಕೂಡ ಇಂತಹ ಸಂಕಥನಗಳ ಸನ್ನಿವೇಶಗಳಲ್ಲಿಯೇ ಬೇರೂರಿತ್ತವೆ. ಹಾಗಾಗಿ ಕಾಲ, ದೇಶ ಮತ್ತು ವ್ಯಕ್ತಿಗಳಿಗೆ ಅನುಗುಣವಾದ ಸಂಕಥನಗಳು-ಸನ್ನಿವೇಶಗಳು ನಿರಂತರವಾಗಿ ವಿಕಾಸಗೊಳ್ಳುತ್ತವೆ. ಪರಿಣಾಮವಾಗಿ ಮಾತು ಮತ್ತು ಈ ಎಲ್ಲ ಸಂಕಥನ-ಸನ್ನಿವೇಶಗಳ ನಡುವೆ ಸಹಜವಾಗಿ ವಿಭಜನೆಗಳು ಕೂಡ ಏರ್ಪಡುತ್ತವೆ. ಆದ್ದರಿಂದ ಪ್ರಾದೇಶಿಕ (ಸ್ಪೇಶಿಯಲ್) ಕೇಂದ್ರಿತ ನೋಟಕ್ರಮಗಳು, ಪರಿಕಲ್ಪನಾತ್ಮಕ ಕೇಂದ್ರಿತ ನೋಟಕ್ರಮಗಳಕ್ಕಿಂತ ಭಿನ್ನವಾಗಿರುತ್ತವೆ.

ಏಕೆಂದರೆ, ಕೇಳುಗನ ತಿಳಿವು, ನಂಬಿಕೆ, ಭಾವನೆಗಳು, ಪ್ರೇರಣೆಗಳು ಮೊದಲಾದ ಸಂಗತಿಗಳನ್ನು ಪರಿಗಣನೆಗೆ ತೆಗೆದುಕೊಂಡು, ಹೇಳುಗನು ತನ್ನ ಸಂದೇಶಗಳನ್ನು ರೂಪಿಸುತ್ತಾನೆ. ಈ ಪ್ರಕ್ರಿಯೆಯೂ ಕಾಲ, ದೇಶ ಹಾಗೂ ವ್ಯಕ್ತಿಗಳ ನೆಲೆಯಲ್ಲಿ ನಿರಂತರವಾಗಿ ನಡೆಯುತ್ತದೆ. ಇಲ್ಲಿ ಕಾಲಿಕ (ಟೆಂಪೊರಲ್) ವಿನ್ಯಾಸಗಳು ಮಹತ್ವವನ್ನು ಪಡೆದುಕೊಳ್ಳುವುದು ಕೂಡ ಇದೇ ಕಾರಣಗಳಿಂದ.

ಅದಕ್ಕಾಗಿ ಡೆರಿಡಾ ಹೇಳುವ ಸೂಚಕ-ಸೂಚಿತಗಳ ನಡುವಣ ಅಪರಿಮಿತವಾದ ಅರ್ಥದ ನಂಟಸ್ತಿಕೆಯನ್ನು ಗುರುತಿಸಲೂ ಕೂಡ ಈ ಕಾಲ-ದೇಶ ಹಾಗೂ ವ್ಯಕ್ತಿಗಳಿಗೆ ಸಂಬಂಧಿಸಿದ ವಿನ್ಯಾಸಗಳೇ ಕಾರಣವಾಗುತ್ತವೆ. ಅಂದರೆ, ಅರ್ಥದಲ್ಲಿ ಉಂಟಾಗುವ ಭೇದಗಳಿಗೆ ಪ್ರಾದೇಶಿಕತೆ (ಸ್ಪೇಶಿಯಲ್) ಕಾರಣವಾದರೆ, ಅರ್ಥಗಳ ಪಲ್ಲಟ ಇಲ್ಲವೇ ಮುಂದೂಡಿಕೆಗೆ ಕಾಲಿಕ (ಟೆಂಪೊರಲ್) ವಿನ್ಯಾಸಗಳು ಕಾರಣವಾಗುತ್ತವೆ ಎಂಬ ಹೊಳವು ಡೆರಿಡಾನ ಚಿಂತನೆಗಳಲ್ಲಿ ಎದ್ದು ಕಾಣುತ್ತದೆ.

ಒಟ್ಟಿನಲ್ಲಿ ಮಾತು ಮತ್ತು ಕಾಲ, ದೇಶ ಹಾಗೂ ವ್ಯಕ್ತಿಗಳ ನಡುವಣ ವಿಭಜನೆಗೆ ಏನೆಲ್ಲ ಸಂಗತಿಗಳು ಕಾರಣವಾಗುತ್ತವೆ. ಈ ಸಂಗತಿಗಳಿಗೆ ನುಡಿ ಮತ್ತು ನುಡಿ ಸಾಮಗ್ರಿಗಳು ಮಾತ್ರ ಕಾರಣವಲ್ಲ. ಬದಲಾಗಿ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮಾನಸಿಕ ವ್ಯಾಪಾರಗಳೂ ಕೂಡ ಕಾರಣವಾಗುತ್ತವೆ ಎನ್ನುವ ದಿಟವನ್ನು ಇಲ್ಲಿ ಅರಿಯಬಹುದಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ನೆಲದನಿ

ನುಡಿಯ ಒಡಲು – 20 : ದಾರಿಯಾವುದಯ್ಯ ಕನ್ನಡ ಚಿಂತನೆಗೆ..?

Published

on

  • ಡಾ. ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಒಂದೊಂದು ವರುಷವೂ ಕೂಡ ನವಂಬರ್ ತಿಂಗಳು ಕನ್ನಡ ನುಡಿ ಕುರಿತು ಚಿಂತಿಸುವ, ಯೋಚಿಸುವ ಹೆಚ್ಚುಗಾರಿಕೆಯನ್ನು ಪಡೆದಿದೆ. ದಿಟ, ಇಡೀ ಲೋಕದಲ್ಲಿಯೇ ಹೀಗೆ ನುಡಿ ಇಲ್ಲವೇ ಯಾವುದೇ ಸಾಮಾಜಿಕ-ಸಾಂಸ್ಕೃತಿಕ ಸಂಗತಿಗಳನ್ನು ಕೊಂಡಾಡುವುದಕ್ಕಾಗಿಯೇ ಒಂದೊಂದು ದಿನವನ್ನು ಗೊತ್ತುಪಡಿಸಿರುತ್ತಾರೆ.

ಯಾವುದು ಗತದ ನೆನಪಿನ ಸಂಕೇತವಾಗಿರುತ್ತದೆಯೋ? ಅದು ಯಾವಾಗಲೂ ಆಚರಣೆಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ಇಂತಹ ಆಚರಣೆಗಳು ಚರಿತ್ರೆಯ ಯಾವುದೇ ಬಗೆಯ ಚಾರಿತ್ರಿಕ ತಿಳಿವು ಇಲ್ಲವೇ ನಂಟಸ್ತಿಕೆಯ ಹಿರಿಮೆಯನ್ನು ಹೆಚ್ಚಿಸುವ ಇರಾದೆಯನ್ನು ಹೊಂದಿರಲಾವು. ಮತ್ತು ಆ ಮೂಲಕ ಈ ಹೊತ್ತಿನ ಬದುಕಿನ ಏಳ್ಗೆಯ ಬಗೆಗಿನ ಚಿಂತನೆಗಳಾಗಿ ಮೈಪಡೆಯುವುದಿಲ್ಲ.

ಯಾವಾಗಲೋ ಕಂಡ ಕನಸನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಆನಂದಿಸುವ ಇಲ್ಲವೇ ಆತಂಕಪಡುವ ರೀತಿಯಲ್ಲಿ ಇಂತಹ ಕನಸುಗಳು ನೆರವಾಗುತ್ತವೆ ಹಾಗೂ ಅಂತಹ ಉದ್ದೇಶಕ್ಕಾಗಿಯೇ ಅವು ಮುಂದುವರೆಯುತ್ತವೆ. ಈಗ ಕನ್ನಡಕ್ಕೆ ಬೇಕಿರುವುದು ಕೇವಲ ಈ ಹಳೆ ಕನುಸುಗಳ ಹಳಹಳಿಕೆಯಲ್ಲ. ಬದಲಾಗಿ ಹೊಸ ಕನುಸುಗಳನ್ನು ಕಾಣುವ ಮತ್ತು ಅವುಗಳನ್ನು ಈಡೇರಿಸಿಕೊಳ್ಳುವ ತುಡಿತವನ್ನುಂಟು ಮಾಡುವ ಅಗತ್ಯವಿದೆ.

ಈ ತುಡಿತಗಳೇ ಆಯಾ ಜನರ ನುಡಿಗಳ ಮೂಲಕ ಅವರ ಬದುಕಿನ ಅಗತ್ಯಗಳನ್ನು ಪೂರೈಸಿಕೊಳ್ಳುವುದಕ್ಕೆ ಕಾರಣವಾಗುತ್ತವೆ. ತಮ್ಮ ನುಡಿಗಳ ಮೂಲಕವೇ ತಮ್ಮ ಬದುಕಿನ ದಾರಿಗಳನ್ನು ಸಜ್ಜುಗೊಳಿಸಲು ಸಾಧ್ಯವಾಗುತ್ತದೆ. ಕರ್ನಾಟಕ ಸಮುದಾಯಗಳ ಬದುಕಿನ ಕನಸುಗಳನ್ನು ನನಸಾಗಿಸುವ ದಾರಿಗಳು ಹೀಗೆ ರೂಪುಗೊಳ್ಳುತ್ತವೆ. ಅಂದರೆ ಕನ್ನಡ ನುಡಿಯೂ ಜನರ ಆಶೋತ್ತರಗಳನ್ನು ಈಡೇರಿಸಲು ಸಜ್ಜುಗೊಳ್ಳಬೇಕು ಎಂಬುದೇ ಈ ಮಾತಿನ ತಿರುಳು.

ನುಡಿಗಳನ್ನು ಸಜ್ಜುಗೊಳಿಸುವುದು ಎಂದರೇನು? ಹಾಗೂ ಅವುಗಳನ್ನು ಹೇಗೆ ಸಜ್ಜುಗೊಳಿಸಬೇಕು? ಈ ಎರಡೂ ಕೇಳ್ವಿಗಳು ಇಲ್ಲಿ ಕೇವಲ ರೆಟರಿಕ್‌ಆಗಿ ಕೇಳಿಸಬಹುದು, ಆದರೆ ಅವು ಹಾಗಿಲ್ಲ. ಅಂದರೆ ನುಡಿಗಳ ಬೆಳವಣಿಗೆಯೇ ಜನರ ಬೆಳವಣಿಗೆಯೂ ಆಗಿರಬೇಕು ಅನ್ನುವ ನೆಲೆಯೇ ನುಡಿಗಳನ್ನು ಸಜ್ಜುಗೊಳಿಸುವ ಬಗೆಯಾಗಿರುತ್ತದೆ. ಬಹುತೇಕವಾಗಿ ನುಡಿಗಳ ಬೆಳವಣಿಗೆ ಎಂಬುದು ಆಯಾ ದೇಶದ ನುಡಿ ನೀತಿ ಹಾಗೂ ನುಡಿ ಯೋಜನೆಗಳೊಂದಿಗೆ ತಳುಕು ಹಾಕಿಕೊಂಡಿರುತ್ತವೆ.

ಹಾಗಾಗಿಯೇ ಕನ್ನಡದಂತಹ ನುಡಿಗಳಿಗೆ ಸಂವಿಧಾನದ ಮೂಲಕ ಸವಲತ್ತು ಮತ್ತು ಅವಕಾಶಗಳು ತಾತ್ವಿಕವಾಗಿ ಸಿಕ್ಕಿರುತ್ತವೆ. ಆಚರಣೆಯ ನೆಲೆಗೆ ಬಂದಾಗ ಸಂವಿಧಾನದಿಂದ ಸವಲತ್ತು, ಹಕ್ಕು ಹಾಗೂ ಅವಕಾಶಗಳನ್ನು ಪಡೆದಿರುವ ಕನ್ನಡದಂತಹ ನುಡಿಗೂ ಹಾಗೂ ಇಂತಹ ಎಲ್ಲ ಸವಲತ್ತುಗಳಿಂದ ವಂಚಿತವಾಗಿರುವ ಬೇರೆಯ ನುಡಿಗಳಿಗೂ ಬಹುತೇಕವಾಗಿ ಏನು ವ್ಯತ್ಯಾಸಗಳು ಇರುವುದಿಲ್ಲ. ಅಂದರೆ ಸಮೂಹಗಳ ಏಳ್ಗೆಯನ್ನು ಗಮನದಲ್ಲಿಟ್ಟಕೊಂಡು ಈ ಮಾತನ್ನು ಹೇಳಲಾಗಿದೆ.

ಆದರೆ ನುಡಿಗಳ ಚಹರೆಗಳನ್ನು ಕಟ್ಟಿಕೊಡುವ ಬಗೆಗಳಲ್ಲಿ ಮಾತ್ರ ಅಂತರಗಳು ಇದ್ದೇ ಇರುತ್ತವೆ. ಸಂವಿಧಾನದಲ್ಲಿ ಗುರುತಿಸಿದ ನುಡಿ ಹಾಗೂ ಆಯಾ ಗುರುತನ್ನು ಪಡೆಯದಿರುವ ನುಡಿಗಳು ಎನ್ನುವ ವಿಂಗಡಣೆಯೇ ಈ ಅಂತರಗಳಿಗೆ ಕಾರಣವಾಗುತ್ತದೆ. ಕನ್ನಡವು ಇಂತಹ ಮೀತಿಗಳನ್ನು ಮೀರಿ, ತನ್ನ ತಿಳಿವಿನ ಸಂಪನ್ಮೂಲಗಳನ್ನು ಉತ್ಪಾದಿಸುವ, ಮತ್ತು ಅವುಗಳನ್ನು ಹಂಚುವ ಬಗೆಗಳನ್ನು ರೂಪಿಸುವ ಅಗತ್ಯಕ್ಕೆ ಅನುಗುಣವಾಗಿ ಇದು ಸಜ್ಜುಗೊಳ್ಳಬೇಕಿದೆ.

ಜನರಿಗೆ ಅವರ ನುಡಿಗಳಲ್ಲಿಯೇ ಚಿಂತನೆಗಳನ್ನು ಬೆಳೆಸಲು ಅನುವಾಗಬೇಕು. ಮತ್ತು ಈ ಚಿಂತನೆಗಳು ಕರ್ನಾಟಕದ ಸಮೂಹಗಳ ಏಳ್ಗೆಯನ್ನೇ ಗುರಿಯಾಗಿಸಿಕೊಂಡಿರಬೇಕು. ನುಡಿಯೊಂದು ಬೇರೊಂದು ನುಡಿಗೆ ತನ್ನನ್ನು ಹೋಲಿಸಿಕೊಂಡು ಕೀಳರಿಮೆಗೆ ಒಳಗಾಗಬಾರದು. ಈ ಬಗೆಯ ಸವಾಲು ಹಾಗೂ ಇಕ್ಕಟ್ಟುಗಳಿಂದ ನುಡಿಯನ್ನು ಪಾರು ಮಾಡುವ ನೆಲೆಗಳೂ ಕೂಡ ನುಡಿಯೊಂದನ್ನು ಸಜ್ಜುಗೊಳಿಸುವ ಬಗೆಯಾಗಿರುತ್ತವೆ.

ಕನ್ನಡದ ಚಿಂತನೆಯನ್ನು ಕಟ್ಟುವ ಬಗೆಯಲ್ಲಿಯೇ ಸಾಕಷ್ಟು ತೊಡಕುಗಳು ಎದುರಾಗಿವೆ. ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಕರ್ನಾಟಕ-ಕನ್ನಡ ಚಿಂತಕರು ಇಂತಹ ತೊಡಕಿನ ದಾರಿಗಳನ್ನೇ ಇಲ್ಲಿಯ ಸಮೂಹಗಳ ಬದುಕಿನ ದಾರಿಗಳೆಂದು ನೆಮ್ಮಿದ್ದರು ಹಾಗೂ ಎಲ್ಲರನ್ನೂ ಕೂಡ ನೆಮ್ಮಿಸಿದರು. ಹೇಗೆಂದರೆ ಜನತೆಯ ಬದುಕುಗಳ ಒಳಗಿರುವ ತಿಳಿವಿನ ಒಳಕಸುವನ್ನು ಹೊರತರುವ ಬದಲಾಗಿ ಕೇವಲ ಪರನುಡಿಗಳಿಂದಲೇ ತಿಳಿವನ್ನು ಕಡತಂದು ಕನ್ನಡವನ್ನು ಬೆಳೆಸಿದರು.

ಬೆಳವಣಿಗೆ ಎಂಬುದು ಗಾತ್ರವನ್ನು ಕುರಿತಾದದ್ದಲ್ಲ. ಅದು ತಿಳಿವಿನ ಮಾದರಿ ಹಾಗೂ ಬಗೆಗಳನ್ನು ಕಟ್ಟುವ ಕ್ರಮವಾಗಿರುತ್ತದೆ. ಅಂದರೆ ಕನ್ನಡವನ್ನೂ ಕೂಡ ಒಂದು ತಿಳಿವು ಕೊಡುವ ನುಡಿಯನ್ನಾಗಿ ಬೆಳೆಸಬೇಕಿದ್ದವರು ಹಾಗೆ ಬೆಳೆಸಲಿಲ್ಲ. ಪರಿಣಾಮವಾಗಿ ಕನ್ನಡ ನುಡಿ ಬೇರೆ ನುಡಿಗಳಿಂದ ಮಾತ್ರ ತಿಳಿವನ್ನು ಪಡೆಯುವ ನೆಲೆಗೆ ಸೀಮಿತಗೊಳಿಸಿದರು. ತಿಳಿವು ಎಂಬುದು ಸಮೂಹಗಳ ಒಡಲಲ್ಲಿಯೇ ಹುಟ್ಟುಬಹುದಾದ ಸಂಗತಿಯೆ ಹೊರತು, ಅದೇನು ಯಾವುದೇ ದೈವಿಕ ಇಲ್ಲವೇ ಮಾಂತ್ರಿಕ ಲೀಲೆಯಿಂದ ರೂಪುಗೊಳ್ಳುವಂತಹದಲ್ಲ ಎಂಬ ಸಾಮನ್ಯ ವಿವೇಕವು ಇಲ್ಲಿ ಕಣ್ಮರೆಯಾಗಿದೆ.

ಹಾಗಾಗಿ ಸಮೂಹಗಳಿಗೆ ಕಸುವು ದಕ್ಕುವುದು ಹಾಗೂ ಅವರ ಬಯಕೆ-ಬೇಡಿಕೆಗಳು ಈಡೇರುವುದು ಅವರಾಡುವ ನುಡಿಗಳ ಮೂಲಕ ಮಾತ್ರ. ನುಡಿಗಳ ನಡುವೆ ಕೀಳರಿಮೆ ಇಲ್ಲವೇ ಮೇಲರಿಮೆ ಎಂಬ ತಿಕ್ಕಾಟವು ವಾಸ್ತವವಾಗಿ ಇರುವುದಿಲ್ಲ. ಇವು ಸಾಮಾಜಿಕವಾಗಿ ಉಂಟಾಗುವ ನಿಲುವುಗಳೇ ಹೊರತು ನುಡಿಯೊಂದರ ಒಡಲಲ್ಲೇ ಉಂಟಾಗುವಂತಹ ಗುಣಗಳಲ್ಲ. ಸಮೂಹಗಳ ಬದುಕಿನ ದಾರಿಗಳನ್ನು ಗುರುತಿಸುವ ತಿಳಿವು ಅವರವರ ನುಡಿಗಳಲ್ಲಿಯೇ ಅಡಕವಾಗಿರುತ್ತದೆ ಎಂಬ ದಿಟವನ್ನು ಅರಿಯಬೇಕಿದೆ.

ಜನರ ಪರವಾಗಿ ಮಾತ್ನಾಡುತ್ತೇವೆ ಎನ್ನುವ ಕನ್ನಡದ ಚಿಂತಕರು ಯಾವಾಗಲೂ ಜನರಿಗೆ ಬೆನ್ನುಮಾಡಿ ಮಾತ್ನಾಡುತ್ತಾರೆ. ಜನರಿಗೆ ಮುಖಮಾಡಿ ಮಾತ್ನಾಡಿದರೆ ಮಾತ್ರ ಕನ್ನಡದ ಬಿಕ್ಕಟ್ಟುಗಳು ಎಂತಹವು ಎಂಬ ದಿಟ ನಮಗೆ ಗೊತ್ತಾಗುತ್ತದೆ. ಅಂದರೆ ತೊಡಕುಗಳು ಇರುವುದು ಜನರಲ್ಲಿ ಇಲ್ಲವೇ ನುಡಿಯಲ್ಲಿ ಅಲ್ಲ. ಜನ ಮತ್ತು ನುಡಿಗಳ ನಡುವಿನ ನಂಟಸ್ತಿಕೆಯ ವಿನ್ಯಾಸಗಳನ್ನು ಕುರಿತು ಯೋಚಿಸುವ ತಿಳುವಳಿಕೆಯಲ್ಲಿವೆ.

ಇಂತಹ ತೊಡಕುಗಳನ್ನು ಪರಿಹರಿಸಿಕೊಳ್ಳಲೂ ಕೂಡ ನಾವು ಮತ್ತೆ ನಮ್ಮದೇ ನುಡಿಗಳನ್ನು ನಂಬಿ ನಡೆಯಬೇಕು. ಈ ಕಾರಣಕ್ಕಾಗಿಯೇ ಬ್ರಿಟಿಶರು ತಮ್ಮ ತಿಳಿವು, ಆಚರಣೆ ಹಾಗೂ ತಾತ್ವಿಕ ಸಂಗತಿಗಳನ್ನು ನಮ್ಮ ಮೇಲೆ ಹೇರಲು, ಅವರು ಇಂಗ್ಲಿಶು ನುಡಿಯನ್ನೇ ನೆಮ್ಮಿಕೊಂಡಿದ್ದರು. ಒಂದೊಂದು ನುಡಿಯೂ ಕೂಡ ಅದನ್ನಾಡುವ ಜನರ ಸಾಮಾಜಿಕ ಬದುಕುಗಳ ವಿನ್ಯಾಸಗಳನ್ನು ಮಂಡಿಸುತ್ತದೆ.

ಆದ್ದರಿಂದ ಕನ್ನಡದ ಮಾಧ್ಯಮದಲ್ಲಿ ಕಲಿಸುವುದು ಎಂದರೆ, ಅದು ಕೇವಲ ಕನ್ನಡ ನುಡಿ ರಚನೆ, ಅಕ್ಷರಗಳಲ್ಲಿ ಮಂಡಿತವಾಗುವ ತಿಳಿವನ್ನು ಮಾತ್ರ ಕನ್ನಡ ಮಾಧ್ಯಮದ ಶಿಕ್ಷಣವೆಂದು ಹೇಳಲು ಆಗುವುದಿಲ್ಲ. ಆಯಾ ಜನರ ಬದುಕಿನ ಚೌಕಟ್ಟುಗಳ ಒಳಗೆಯೇ ಹುದುಗಿರುವ ಲೋಕತಿಳಿವು ಮತ್ತು ತಾತ್ವಿಕ ವಿನ್ಯಾಸಗಳನ್ನು ಮಂಡಿಸುವ ಬಗೆಯನ್ನು ಶಿಕ್ಷಣ ಮಾಧ್ಯಮವೆಂದು ನಿರ್ವಚಿಸಬಹುದಾಗಿದೆ.

ಹಾಗಾಗಿ ಒಂದೊಂದು ನುಡಿಯೂ ತನ್ನ ಸಮುದಾಯಗಳಲ್ಲಿ ಅಡಕವಾಗಿರುವ ತಿಳಿವು ಹಾಗೂ ಲೋಕನೋಟಗಳನ್ನು ತಾತ್ವಿಕಗೊಳಿಸುವ ಸವಾಲುಗಳನ್ನು ಯಾವಾಗಲೂ ಎದುರಿಸುತ್ತಲೇ ಇರುತ್ತದೆ. ಪರಿಣಾಮವಾಗಿ ಶಿಕ್ಷಣದಲ್ಲಿ ಏನನ್ನು? ಹೇಗೆ? ಯಾರಿಗೆ? ಎಲ್ಲಿ? ಯಾವಾಗ? ಕಲಿಸಬೇಕು ಎಂಬ ಗುರಿಗಳನ್ನು ನಿಚ್ಚಳಗೊಳಿಸುವ ಸವಾಲುಗಳು ಮತ್ತೆ ಮತ್ತೆ ಎದುರಾಗುತ್ತವೆ. ಏಕೆಂದರೆ ನುಡಿಗಳಲ್ಲಿ ತಮ್ಮದೆಯಾದ ತಿಳಿವಿನ ಬಗೆಗಳು ಅಂತಸ್ಥವಾಗಿರುತ್ತವೆ ಅನ್ನುವ ದಿಟವನ್ನು ಮರೆಮಾಚಲಾಗುತ್ತದೆ.

ನಮಗೆ ಬೇಕಾದ ತಿಳಿವು ಯಾವುದು? ಅದನ್ನು ತೀರ್ಮಾನಿಸುವವರು ಯಾರು? ಮತ್ತು ಈ ತಿಳಿವು ಯಾವ ಬಗೆಯ ನುಡಿಯಲ್ಲಿ ಸಿಗುತ್ತದೆ? ಎಂಬ ಕೇಳ್ವಿಗಳೂ ಇಲ್ಲಿ ಹುಟ್ಟುತ್ತವೆ. ನಮ್ಮ ಬದುಕಿನ ಎಲ್ಲ ಬಗೆಯ ಬೇಡಿಕೆಗಳನ್ನು ಯಾವ ತಿಳಿವು ಈಡೇರಿಸುವುದೋ, ಅದುವೇ ನಮಗೆ ಬೇಕಾದ ತಿಳಿವೂ ಆಗಿರುತ್ತದೆ. ತಮಗೆ ಬೇಕಾದ ತಿಳಿವನ್ನು ಆಯಾ ಭಾಷಿಕರೇ ತೀರ್ಮಾನಿಸುತ್ತಾರೆ.

ಜನರಾಡುವ ಎಲ್ಲ ನುಡಿಗಳಲ್ಲಿಯೂ ಇಂತಹ ತಿಳಿವು ನೆಲೆಗೊಂಡಿರುತ್ತದೆ. ತಿಳಿವು ಆಯಾ ಭಾಷಿಕರ ಸಂಪನ್ಮೂಲವು ಹೌದು ಮತ್ತು ಅದು ಅವರ ಹಕ್ಕು ಕೂಡ. ಆದರೆ ತಿಳಿವು ಎಂಬ ಸಂಪನ್ಮೂಲವು ನಮ್ಮ ಬದುಕಿನ ಹಕ್ಕಾಗದೇ ಅದು ಕೇವಲ ಖಾಸಗಿ ಒಡೆತನದ ಸ್ವತ್ತಾಗಿದೆ. ಈ ಒಡೆತನದ ಮಾದರಿಗಳನ್ನು ನಾಶಪಡಿಸುವ ದಾರಿಗಳನ್ನು ನಾವು ಮತ್ತೆ ನಮ್ಮದೇ ನುಡಿಗಳ ಮೂಲಕ ಕಟ್ಟಿಕೊಳ್ಳುವ ಜರೂರಿದೆ.

ಇಲ್ಲವಾದರೆ ತಿಳಿವು ತನ್ನತನದ ನೆಲೆಯಾಗದೆ, ಪರಕೀಯತೆಯನ್ನು ಹುಟ್ಟಿಸುವ ಬಗೆಯಾಗುತ್ತದೆ. ಈ ಕಾರಣಕ್ಕಾಗಿಯೇ, ಲೋಕದಲ್ಲಿ ಮಂಡಿತವಾಗುವ ಯಾವುದೇ ಚಿಂತನೆಗಳು ನಮ್ಮ ಸಾಮಾಜಿಕ ಅರಿವಿನ ಭಾಗವಾಗುವುದು ಎಂದರೆ, ನಮ್ಮ ನುಡಿಗಳು ಕಟ್ಟಿಕೊಡುವ ಅರಿವಿನ ವಿನ್ಯಾಸಕ್ಕೆ ಅವುಗಳು ಹೊಂದಿಕೆಯಾಗಬೇಕಾಗುತ್ತದೆ.

ಇಲ್ಲವಾದರೆ ಸಮೂಹಗಳಿಗೆ ಯಾವುದೇ ಬಗೆಯ ಸಾಮಾಜಿಕ ಏಳ್ಗೆಯನ್ನು ಕಾಣಲು ಆಗುವುದಿಲ್ಲ. ಕಾನೂನು, ವಾಣಿಜ್ಯ, ವಿಜ್ಞಾನ, ತಂತ್ರಜ್ಞಾನ, ಆರ್ಥಿಕ ನೀತಿಗಳು, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಹಾಗೂ ಇತರೆ ಯಾವುದೆ ತಿಳಿವಿನ ಸಂಕಥನಗಳು ಜನರ ಹಕ್ಕು ಮತ್ತು ಅವರಿಗೆ ಸೇರಿದ ಸಂಪನ್ಮೂಲವಾಗಬೇಕೆಂದರೆ, ಈ ತಿಳಿವು ಆಯಾ ಸಮೂಹಗಳ ಸಾಮಾಜಿಕ ಅರಿವಿನ ಮೂಲಕ ಮಂಡಿತವಾಗಬೇಕು. ಆಯಾ ಸಮೂಹಗಳು ನಂಬಿರುವ ನುಡಿಗಳಲ್ಲಿ ಮಾತ್ರ ಈ ಸಾಮಾಜಿಕ ಅರಿವು ನೆಲೆಗೊಂಡಿರುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ1 hour ago

ಅಪ್ರಾಪ್ತ ಬಾಲಕಿಯ ಆತ್ಯಾಚಾರ,ಕೊಲೆ ಪ್ರಕರಣ : ಜಿಲ್ಲಾಧಿಕಾರಿಯಿಂದ ಸ್ಧಳಕ್ಕೆ ಭೇಟಿ ಪರಿಶೀಲನೆ

ಸುದ್ದಿದಿನ,ಮಂಡ್ಯ : ಜಿಲ್ಲೆಯ ಮದ್ದೂರು ತಾಲ್ಲೂಕಿನ ಹುರುಗಲವಾಡಿಯ ಬಾಲಕಿ ಆತ್ಯಾಚಾರಕ್ಕೆ ಯತ್ನಿಸಿ ಕೊಲೆ ನಡೆದ ಸ್ಥಳಕ್ಕೆ ಮಂಡ್ಯ ಜಿಲ್ಲಾಧಿಕಾರಿಗಳಾದ ಎಂ ವಿ ವೆಂಕಟೇಶ್‍ರವರು ಇಂದು ಭೇಟಿ ನೀಡಿ...

ದಿನದ ಸುದ್ದಿ9 hours ago

ಅಂಬೇಡ್ಕರ್‌ : ಅಂತಿಮ ಯಾತ್ರೆಯ ಆರ್ದ್ರ ಚಿತ್ರಗಳು

ಎನ್‌.ಆರ್‌. ಶಿವರಾಂ ಡಿಸೆಂಬರ್‌ 4, 1956ನೇ ಇಸವಿ. ಡಾ. ಅಂಬೇಡ್ಕರ್‌ ಅವರು ರಾಜ್ಯಸಭೆಯ ಕಲಾಪಗಳಲ್ಲಿ ಭಾಗವಹಿಸಿದ್ದರು. ಮರುದಿನ ಮನೆಯಲ್ಲೇ ಉಳಿದುಕೊಂಡು ಬರವಣಿಗೆಯಲ್ಲಿ ತೊಡಗಿಕೊಂಡಿದ್ದರು. ಅಂದು ರಾತ್ರಿ 8ಕ್ಕೆ,...

ದಿನದ ಸುದ್ದಿ22 hours ago

ಧರ್ಮದ ಹೆಸರಿನಲ್ಲಿ ಬಿಜೆಪಿಗರು ಅಮಾಯಕರ ರಕ್ತ ಹರಿಸುತ್ತಿದ್ದಾರೆ : ಸಿದ್ದರಾಮಯ್ಯ ಆಕ್ರೋಶ

ಸುದ್ದಿದಿನ, ಮೈಸೂರು : ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಉಪಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ನೀಡಿದ್ದ ದೊಡ್ಡ ಮೊತ್ತದ ಹಣವನ್ನು ಎನ್.ಆರ್ ಸಂತೋಷ್ ಹಾಗೂ ಸಿ.ಪಿ ಯೋಗೀಶ್ವರ್...

ದಿನದ ಸುದ್ದಿ2 days ago

ಮೋದಿ ಸರ್ಕಾರದ ಮೂರು ರೈತ ವಿರೋಧಿ ಮರಣಶಾಸನಗಳು

ಶಿವಸುಂದರ್ ಭಾರತದ ರೈತಾಪಿಯನ್ನು ಕಳೆದ 70 ವರ್ಷಗಳಿಂದ ಬಂಧನದಲ್ಲಿಟ್ಟಿದ್ದ ಎಲ್ಲಾ ಸಂಕೋಲೆಗಳಿಂದ ಬಿಡುಗಡೆ ಮಾಡಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದ ಮುಸುಕನ್ನು ಹೊದ್ದಿದ್ದ, ಆದರೆ ಆದರೆ ರೈತ...

ದಿನದ ಸುದ್ದಿ2 days ago

ದಾವಣಗೆರೆ : ಲೀಡ್‌ನಿಂದ 07 ದಿನಗಳ ನಾಯಕತ್ವ ಶಿಬಿರ ಆಯೋಜನೆ

ಸುದ್ದಿದಿನ, ದಾವಣಗೆರೆ: ನಗರದ ದೇಶಪಾಂಡೆ ಫೌಂಡೇಶನ್‌ನ ಲೀರ‍್ಸ ಎಕ್ಸಲ್‌ರೇಟಿಂಗ ಡೆವಲೆಪಮೆಂಟ ಪ್ರೋಗ್ರಾಮ್ ಸಹಯೋಗದಲ್ಲಿ ವಿದ್ಯಾರ್ಥಿಗಳಲ್ಲಿ ನಾಯಕತ್ವ ಮನೋಭಾವನೆಯನ್ನು ಮೂಡಿಸಲು ಲೀಡ್ ಲೀಡರ್‌ಶಿಪ್ ಶಿಬಿರ-2020 ರ ವಿಶೇಷ ನಾಯಕತ್ವ...

ದಿನದ ಸುದ್ದಿ2 days ago

ರೈತರು ರೊಚ್ಚಿಗೆದ್ದರೆ ಮುಂದಿನ ಅನಾಹುತಕ್ಕೆ ಪ್ರಧಾನಿ ಮೋದಿಯವರೇ ಕಾರಣ : ಸಿದ್ದರಾಮಯ್ಯ ಕಿಡಿ

ಸುದ್ದಿದಿನ, ದಾವಣಗೆರೆ : ಕೃಷಿ ವಿರೋಧಿ ಕಾಯಿದೆಗಳ ರದ್ದತಿಗಾಗಿ ಹೋರಾಟ ನಡೆಸುತ್ತಿರುವ ರೈತರನ್ನು ಗೌರವಯುತವಾಗಿ ಕರೆದು, ಪ್ರಾಮಾಣಿಕವಾಗಿ ಮಾತುಕತೆ ನಡೆಸಬೇಕಾಗಿರುವ ನರೇಂದ್ರ ಮೋದಿ ಸರ್ಕಾರ ಕಾಟಾಚಾರದ ಮಾತುಕತೆಯ...

ದಿನದ ಸುದ್ದಿ2 days ago

ದಾವಣಗೆರೆ | ಟೊಮೆಟೊ ಬೆಳೆಗೆ ಬೆಂಕಿರೋಗ : ಕೈಗೆ ಬಂದ ಬೆಳೆ, ಮಾರ್ಕೇಟ್ ಗೆ ಬರಲಿಲ್ಲ…!? ಯುವ ರೈತನ ಅಳಲು

ವಿಶೇಷ ವರದಿ: ಪ್ರೀತಿ. ಟಿ.ಎಸ್ ಸುದ್ದಿದಿನ,ದಾವಣಗೆರೆ : ಸ್ನಾತಕೋತ್ತರ ಪದವಿ ಮುಗಿಯಿತು. ಕೆಲಸ ಅರಸಿ ಅಲೆದಾಡಿ ಸೋತು ಟೊಮೋಟೊ ಬೆಳೆಯಲು ಮುಂದಾದ ಯುವಕನಿಗೆ ಇನ್ನೇನೂ ಫಸಲು ಕೈಗೆ...

ದಿನದ ಸುದ್ದಿ3 days ago

ಕುರುಬರ ಎಸ್ಟಿ ಹೋರಾಟದ ಹಿಂದೆ ಆರ್‌ಎಸ್ಎಸ್‌ ಕೈವಾಡವಿದೆ : ಸಿದ್ದರಾಮಯ್ಯ

ಸುದ್ದಿದಿನ, ಬೆಂಗಳೂರು : ಕುರುಬರ ಎಸ್ಟಿ ಹೋರಾಟದ ಹಿಂದೆ ಆರ್‌ಎಸ್ಎಸ್‌ನ ಕೈವಾಡವಿದೆ. ಇದು ಕುರುಬ ಸಮುದಾಯವನ್ನು ಒಡೆಯುವ ಹುನ್ನಾರದ ಭಾಗ. ಆರ್‌ಎಸ್ಎಸ್ ನ ದತ್ತಾತ್ರೇಯ ಹೊಸಬಾಳೆ ಹಾಗೂ...

ದಿನದ ಸುದ್ದಿ3 days ago

ದಾವಣಗೆರೆ | ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣಾ ವೇಳಾಪಟ್ಟಿ ಪ್ರಕಟ : ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ

ಸುದ್ದಿದಿನ,ದಾವಣಗೆರೆ : ರಾಜ್ಯ ಚುನಾವಣಾ ಆಯೋಗವು ನ.30 ರಂದು ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ 2020 ಕ್ಕೆ ಈ ಕೆಳಕಾಣಿಸಿದಂತೆ ವೇಳಾಪಟ್ಟಿಯನ್ನು ಹೊರಡಿಸಲಾಗಿರುತ್ತದೆ. ಚುನಾವಣಾ ವೇಳಾಪಟ್ಟಿ 07.12.2020...

ದಿನದ ಸುದ್ದಿ4 days ago

“ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಮ್ಯಾಸ ಬೇಡರ ಅಭಿವೃಧ್ದಿ ನಿಗಮ” ಸ್ಥಾಪನೆಗೆ ಮ್ಯಾಸ ಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ಮನವಿ

ಸುದ್ದಿದಿನ, ದಾವಣಗೆರೆ : ಮ್ಯಾಸ ಬೇಡ ಬುಡಕಟ್ಟು ಜನರ ಅಭಿವೃದ್ದಿಗಾಗಿ “ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಮ್ಯಾಸ ಬೇಡರ ಅಭಿವೃಧ್ದಿ ನಿಗಮ” ಸ್ಥಾಪನೆ ಮಾಡಲು ಕೋರಿ ಸೋಮವಾರ...

Trending