Connect with us

ನೆಲದನಿ

ನುಡಿಯ ಒಡಲು – 18 |  ಇಂಗ್ಲಿಶ್ ಮಾಧ್ಯಮ ಎಂಬ ಕಣ್ಕಟ್ಟು

Published

on

 • ಡಾ‌. ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಇಂಗ್ಲಿಶ್ ಮಾಧ್ಯಮದಲ್ಲಿ ಶಿಕ್ಷಣ ಯಾಕಾಗಿ? ಯಾರಿಗಾಗಿ ಬೇಕು? ಎನ್ನುವ ಪ್ರಶ್ನೆಗಳನ್ನು ಎದುರುಗೊಳ್ಳದೇ, ಮಾಧ್ಯಮದ ಸುತ್ತಲೂ ನೆಲೆಗೊಂಡಿರುವ ಅಪಕಲ್ಪನೆಗಳನ್ನು ಪರಿಹರಿಸಿಕೊಳ್ಳುವುದು ಕಷ್ಟ. ಶಿಕ್ಷಣದ ಬಗೆಗಿನ ತಾತ್ವಿಕ ಇಲ್ಲವೇ ಪ್ರಾಯೋಗಿಕ ತಿಳಿವು ರಾಜಕೀಯ ಪ್ರೇರಿತವಾದರೆ, ಶೈಕ್ಷಣಿಕವಾಗಿ ಇದು ಕರ‍್ಯಸಾಧುವಾದ ನಿಲುವಾಗಲಾರದು. ಭಾಷೆಯೊಂದು ಅತ್ಯಂತ ಗಂಭೀರವಾದ ಗ್ರಹಿಕೆ. ಭಾಷೆಯನ್ನು ಕುರಿತ ನಮ್ಮ ತಿಳುವಳಿಕೆ ವೈಜ್ಞಾನಿಕವಾಗಿಲ್ಲ.

ಹಾಗಾಗಿ ಶಿಕ್ಷಣ ಮತ್ತು ಭಾಷೆಯ ಸಂಬಂಧವನ್ನು ಅರಿಯುವಲ್ಲಿ ನಾವು ಸೋತಿದ್ದೇವೆ. ಆದ್ದರಿಂದ ಇಂಗ್ಲಿಶು ಮಾಧ್ಯಮ ಹಾಗೂ ಇಂಗ್ಲಿಶು ಕಲಿಕೆ ನಮಗೆ ಯಾಕೆ ಮುಖ್ಯ? ಕಲಿಕೆಯೆಂದರೇನು? ಕಲಿಕೆಯ ವಿಧಾನ, ಪಠ್ಯಕ್ರಮ ಹಾಗೂ ಮೂಲಭೂತ ಸೌರ‍್ಯಗಳು ಹೇಗಿರಬೇಕು? ಎಂಬೆಲ್ಲ ಪ್ರಾಥಮಿಕ ಅನುಭವವು ನಮಗಿಲ್ಲ ಕೇವಲ ಇಂಗ್ಲಿಶು ಮೂಲಕ ಕಲಿಕೆಯನ್ನು ಶುರು ಮಾಡಿದರೆ, ಇವತ್ತು ನಾವು ಎದುರಿಸುತ್ತಿರುವ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ಔದ್ಯೋಗಿಕ ಬಿಕ್ಕಟ್ಟುಗಳಿಗೆ ಪರಿಹಾರಗಳು ದೊರೆಯುತ್ತವೆ ಎನ್ನುವ ಮೂಢನಂಬಿಕೆಯಲ್ಲಿದ್ದೇವೆ.

ನಮ್ಮ ಬದುಕಿನಲ್ಲಿ ಸಮಾನತೆಯನ್ನು ಸಾಧಿಸಲು, ಸಾಮಾಜಿಕ ಕಳಂಕಗಳಾದ ಅಸ್ಪೃಶ್ಯತೆ, ಜಾತೀಯತೆಯನ್ನು ಮೀರುವ ವಾತಾವರಣ ಇಂಗ್ಲಿಶು ಕಲಿಯುವುದರ ಮೂಲಕ ತನ್ನಷ್ಟಕ್ಕೆ ಸೃಷ್ಟಿಯಾಗುತ್ತದೆ ಎಂಬಂತಹ ತಪ್ಪು ನಂಬಿಕೆಯೂ ಇವತ್ತು ನಮ್ಮನ್ನು ಆವರಿಸಿಕೊಂಡಿದೆ.

ಭಾರತದಲ್ಲಿ ಇಂಗ್ಲಿಶು ಶಿಕ್ಷಣವನ್ನು ಆರಂಭಿಸುವುದರ ಹಿಂದಿನ ಉದ್ದೇಶವನ್ನು ಮೆಕಾಲೆ ತನ್ನ ಮಿನಿಟಿನಲ್ಲಿ ನಿಚ್ಚಳವಾಗಿಯೇ ಉಚ್ಚರಿಸಿದ್ದಾನೆ. ಅದೇನೆಂದರೆ, ‘ಭಾರತೀಯರು ರಕ್ತ, ಮಾಂಸ, ಮೈಬಣ್ಣದಲ್ಲಿ ಮಾತ್ರ. ಅವರ ಅಭಿಪ್ರಾಯಗಳು, ಆಲೋಚನಾಕ್ರಮಗಳು, ನೈತಿಕತೆ ಹಾಗೂ ಬೌದ್ಧಿಕ ಚಟುವಟಿಕೆಗಳು ಇಂಗ್ಲಿಶು ಆಗಿರಬೇಕು’ ಬ್ರಿಟಿಶರಿಗೆ ಅಡಿಯಾಳಾಗಿ ನಾವು ಕೆಲಸ ಮಾಡಬೇಕು ಎಂಬ ಮೆಕಾಲೆ ಮಾತಿನ ಈ ಒಳ ಉದ್ದೇಶವನ್ನು ಇಂದಿಗೂ ನಮ್ಮಿಂದ ಅರಿತುಕೊಳ್ಳಲು ಸಾಧ್ಯವಾಗಲಿಲ್ಲ.

ಪರಿಣಾಮವಾಗಿ ಬಂಡವಾಳಶಾಹಿ, ಬಹುರಾಷ್ಟ್ರೀಯ ಕಂಪನಿಗಳ ಬೆಳವಣಿಗೆಗೆ ದುಡಿಯುವ ಮಾನವ ಸೇವಾ ಸಂಪನ್ಮೂಲವನ್ನು ಇಂಗ್ಲಿಶಿನ ಮೂಲಕ ವಸಾಹತುಶಾಹಿ ಪ್ರಾಬಲ್ಯಕ್ಕೆ ಈಡಾದ ದೇಶಗಳಲ್ಲಿ ರೂಪಿಸಲಾಗುತ್ತದೆ. ಇದನ್ನೇ ನಾವು ನಮ್ಮ ಸಾಂಸ್ಕೃತಿಕ, ಆರ್ಥಿಕ ಹಾಗೂ ರಾಜಕೀಯ ವಿಮೋಚನೆಯ ದಾರಿಯೆಂದು ಮತ್ತು ಅಲಕ್ಷಿತ ಸಮೂಹಗಳ ಸಮಗ್ರ ಸಬಲೀಕರಣಗೊಳ್ಳುವ ಬಗೆಯೆಂದು ತೀರ್ಮಾನಿಸಿದ್ದೇವೆ.

ಹೊಸ ಸ್ವರೂಪದ ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ಶೋಷಣೆಯ ಅಸ್ತ್ರವಾಗಿ ಇಂಗ್ಲಿಶು ತಲೆಯೆತ್ತಿದ್ದನ್ನು ಮರೆತು, ಅದರ ಬೆನ್ನುಹತ್ತಿ ಹೋಗುತ್ತಿರುವುದನ್ನು ಕಂಡು, ಪ್ರಭುತ್ವ ತನ್ನ ರಾಜಕೀಯ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಧಾವಂತದಲ್ಲಿದೆ. ಇಂಗ್ಲಿಶು ಒಂದು ಉದ್ಯಮೆಯಾಗಿ ಸೃಷ್ಟಿಯಾಗಿದ್ದರ ಪರಿಣಾಮವಾಗಿ, ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಇಂಗ್ಲಿಶು ಮಾಧ್ಯಮದ ಮೂಲಕ ತಮ್ಮ ವ್ಯಾಪಾರವನ್ನು ನಡೆಸುತ್ತಿವೆ.

ಇಂಗ್ಲಿಶು ಮಾಧ್ಯಮದಿಂದ ಮಕ್ಕಳ ತಿಳಿವು ವಿಸ್ತಾರಗೊಳ್ಳುತ್ತದೆ, ವಿಶ್ವದಾದ್ಯಂತ ಲೀಲಾಜಾಲವಾಗಿ ಓಡಾಡುವ ಸಾಮರ್ಥ್ಯವನ್ನು ಇವರು ಪಡೆದುಕೊಳ್ಳುತ್ತಾರೆ ಅನ್ನುವುದು ತಪ್ಪು ಲೆಕ್ಕಾಚಾರವಾಗಿದೆ.

ಹೊಸ ಆರ್ಥಿಕ ನೀತಿಗಳಿಗೂ, ಜಾಗತೀಕರಣಕ್ಕೂ, ಉದ್ಯೋಗವಕಾಶಗಳಿಗೂ ಮತ್ತು ಇಂಗ್ಲಿಶು ಭಾಷೆಗೂ ಪರಸ್ಪರ ಸಂಬAಧವನ್ನು ಕಲ್ಪಿಸಲಾಗಿದೆ. ಒಟ್ಟಾರೆ ಲೋಕದ ಕಲ್ಯಾಣಕ್ಕೆ ಇಂಗ್ಲಿಶು ಭಾಷೆಯೇ ಕಾರಣ ಎಂಬ ಹುಸಿನಂಬಿಕೆ ನಮ್ಮ ಇವತ್ತಿನ ಶೈಕ್ಷಣಿಕ ಅವಘಡಗಳಿಗೆ ಪ್ರೇರಣೆಯಾಗಿದೆ. ಕಲಿಕೆ ಮತ್ತು ಬೋಧನೆ ಸೃಜನಶೀಲ ಕ್ರಿಯೆಯೇ ಹೊರತು ಅದೊಂದು ಕೇವಲ ಅನುಕರಣಾ ಪ್ರಕ್ರಿಯೆಯಲ್ಲ.

ಈ ವಾಸ್ತವವನ್ನು ಮನಗಾಣಲು ಇವತ್ತಿಗೂ ನಮಗೆ ಯಾಕೆ ಸಾಧ್ಯವಾಗಿಲ್ಲ? ಈಗಾಗಲೇ ನಮಗೆ ಚಿರಪರಿಚಿತವಾಗಿರುವ ಭಾಷೆಗಳ ಮೂಲಕ ಪಡೆಯುವ ಶಿಕ್ಷಣ ಸೃಜನಶೀಲವೂ, ಪ್ರಾಯೋಗಿಕವೂ ಆಗಿರುವುದಕ್ಕೆ ಸಾಧ್ಯವಿದೆ. ಹೌದು ತಾಯ್ನುಡಿ ಇಲ್ಲವೇ ಪರಿಸರದ ಭಾಷೆಯಲ್ಲಿ ಕಲಿಯಬೇಕು ಎನ್ನುವುದಕ್ಕೆ ಏನಾದರೂ ವೈಜ್ಞಾನಿಕ ಕಾರಣಗಳಿವೇ? ಎಂಬ ಪ್ರಶ್ನೆ ಇಲ್ಲಿ ತಲೆಯೆತ್ತಬಹುದು.

ಮಗು ಶಾಲೆಗೆ ಹೋಗುವಷ್ಟೊತ್ತಿಗೆ ತನ್ನ ತಾಯ್ನುಡಿ ಇಲ್ಲವೇ ಪರಿಸರದ ನುಡಿಯಲ್ಲಿ ಕಸುವನ್ನು ಪಡೆದಿರುತ್ತದೆ. ಯಾವುದೇ ನುಡಿಯನ್ನು ಪಡೆದುಕೊಳ್ಳುವ ಮಾನಸಿಕ ಕಸುವು ಮಗುವಿನಲ್ಲಿ ಅಂತಸ್ಥವಾಗಿರುತ್ತದೆ. ಆದರೆ ಆ ಕಸುವು ಒಂದು ನುಡಿಯಾಗಿ ಒಡಮೂಡಿ ಅಭಿವ್ಯಕ್ತಿಗೊಳ್ಳಲು ನುಡಿ ಸಾಮಾಗ್ರಿಗಳು ಮಗುವಿನ ಪರಿಸರದಲ್ಲಿಯೇ ಯಥೇಚ್ಛವಾಗಿ ಲಭಿಸಬೇಕು.

ಅಂದರೆ ಮಗುವಿನ ಮನೆ, ಬೀದಿ, ಸರ‍್ವಜನಿಕ ವಲಯಗಳಲ್ಲಿ ಆಯಾ ನುಡಿಯನ್ನು ಪಡೆಯುವುದಕ್ಕೆ ಬೇಕಾದ ವಿಪುಲವಾದ ನುಡಿ ಕಣಜ ದೊರೆಯತ್ತದೆ. ಆದರೆ ಇಂಗ್ಲಿಶು ನುಡಿ ಕಲಿಕೆಗೆ ಬೇಕಾದ ಇಂತಹ ವಾತಾವರಣ ಸಹಜವಾಗಿಯೇ ಒದಗಿಬರುವುದಿಲ್ಲ.
ಪ್ರಾಥಮಿಕ ಶಿಕ್ಷಣವನ್ನು ಪಡೆಯಲು ಇಂಗ್ಲಿಶು ದಾರಿಯಾಗದೇ ಕೇವಲ ಗೋಡೆಯಾಗುವ ಅಪಾಯವೂ ಇದೆ.

ಹಾಗಾಗಿಯೇ ಯುನಿಸ್ಕೋ ಸಂಸ್ಥೆಯ ವರದಿ ಪ್ರಕಾರ ಮಕ್ಕಳ ಶಿಕ್ಷಣವನ್ನು ನುಡಿ ೧ (ಎಲ್೧)ರಲ್ಲಿ ಕೊಡುವುದು ಸೂಕ್ತ. ಶಾಲೆಗೆ ಬರುವ ಮೊದಲೇ ಮಕ್ಕಳು ತಮ್ಮ ತಾಯ್ನುಡಿ/ಪರಿಸರದ (ನುಡಿ೧) ನುಡಿಯಲ್ಲಿ ಕಸುವನ್ನು ಪಡೆದುಕೊಂಡು ಕಲಿಕೆಯ ಪ್ರಕ್ರಿಯೆಗೆ ಸಜ್ಜಾಗಿರುತ್ತಾರೆ. ಇಂಗ್ಲಿಶು ನುಡಿ೨ರಲ್ಲಿ (ಎಲ್೨) ಕಲಿಕೆ ಹಾಗೂ ವಿಷಯ ಗ್ರಹಿಕೆಗೆ ಪೂರಕವಾದ ಎರಡೂ ಬಗೆಯ ಭಾಷಿಕ ವಾತಾವರಣ ಏಕಕಾಲಕ್ಕೆ ಮಗುವಿಗೆ ಲಭಿಸುವುದು ಅಸಾಧ್ಯ.

ಹಾಗೂ ಇಂತಹ ಹೊರಗಿನ ನುಡಿಯ ಮೂಲಕ ಕಲಿಕೆಯನ್ನು ಶುರುಮಾಡಿದರೆ, ಸರಿಯಾದ ಪಠ್ಯಕ್ರಮದ ಕೊರತೆ, ಸರಿಯಾದ ತರಬೇತಿಯಿಲ್ಲದ ಶಿಕ್ಷಕರು ಹಾಗೂ ಸುಸಜ್ಜಿತ ಮೂಲಭೂತ ಸೌರ‍್ಯಗಳ ಅಭಾವವಿರುವ ಸನ್ನಿವೇಶದಲ್ಲಿ ಇಂಗ್ಲಿಶು ಮಾಧ್ಯಮದಲ್ಲಿ ಶಿಕ್ಷಣ ಪಡೆಯುವುದೆಂದರೆ ಕೇವಲ ಅನುಕರಣೆಯಾಗುತ್ತದೆ. ಸಹಜವಾಗಿ ಸಂವಹನ ಮಾಡಲು ಅಸಮರ್ಥವಾಗಿದ್ದರೆ, ವಿಷಯವನ್ನು ಗ್ರಹಿಸುವ, ಯೋಚಿಸುವ ಇಲ್ಲವೇ ವಿಶ್ಲೇಷಿಸುವ ಮಾನಸಿಕ ಕಸುವನ್ನು ಮಕ್ಕಳಲ್ಲಿ ಸಜ್ಜುಗೊಳಿಸಲು ಸಾಧ್ಯವಿಲ್ಲ.

ನುಡಿ ಕೌಶಲವಾಗಿ (ಸ್ಕಿಲ್), ಕಸುವಾಗಿ (ಕಂಪಿಟೆನ್ಸ್) ಹಾಗೂ ಗ್ರಹಿಕೆಯಾಗಿ (ಕಂಪ್ರಹೆನ್ಸನ್) ರೂಪುಗೊಂಡಾಗ ಕಲಿಕೆಯೆಂಬುದು ಅರ್ಥಪೂರ್ಣ. ಇದು ಇಂಗ್ಲಿಶಿನ ಮೂಲಕ ಸಾಧ್ಯವೇ ಇಲ್ಲವೆಂದಲ್ಲ. ಆದರೆ ಈ ಅರ್ಥಪೂರ್ಣ ಕಲಿಕೆಗೆ ಬೇಕಾದ ಇಂಗ್ಲಿಶು ವಾತಾವರಣ ಮಕ್ಕಳಿಗಿಲ್ಲಿ ಸಿಗುವುದಿಲ್ಲ.

ಇಂಗ್ಲಿಶು ನುಡಿಯ ಬಗೆಗಿನ ಹಂಬಲಕ್ಕೆ ಕಾರಣಗಳನ್ನು ಹಲವು ಬಗೆಯಲ್ಲಿ ಗುರುತಿಸಬಹುದು; ಇಂಗ್ಲಿಶು ಕಲಿಕೆ ಈ ಲೋಕದ ಬಗೆಗಿನ ನಮ್ಮ ಅರಿವನ್ನು ವಿಸ್ತರಿಸುತ್ತದೆ. ಇದು ಕೇವಲ ಭಾಷೆಯಲ್ಲ ಇದೊಂದು ಗ್ರಹಿಕೆ. ಇಂಗ್ಲಿಶನ್ನು ಮಾತ್ನಾಡುವ ಜನರ ಸಾಮರ್ಥ್ಯವನ್ನು ತಾನು ಸೃಷ್ಟಿಸುವ ಉದ್ಯೋಗಾವಕಾಶದಿಂದ ಅದನ್ನು ಇಮ್ಮಡಿಗೊಳಿಸುತ್ತದೆ.

ಭಾಷೆಯನ್ನು ತಿಳಿದುಕೊಳ್ಳುವುದು ಅತ್ಯಂತ ಆಸಕ್ತಿದಾಯಕ ಸಂಗತಿ. ಯಾವುದೇ ನುಡಿಯ ಜೊತೆಗಿನ ನಂಟಸ್ತಿಕೆ ನಮ್ಮ ಭಾವಪ್ರಪಂಚವನ್ನು ವಿಸ್ತರಿಸುವ ಬಗೆಯಾಗಿದೆ. ಈ ಮಾತು ಎಲ್ಲ ನುಡಿಗಳಿಗೂ ಸಲ್ಲುತ್ತದೆ. ಜಗತ್ತಿನ ಯಾವುದೇ ಮೂಲೆಗೆ ಹೋದರೂ, ಇಂಗ್ಲಿಶು ಮಾತ್ನಾಡುವ ವ್ಯಕ್ತಿಗಳನ್ನು ಕಾಣುತ್ತೇವೆ. ಇಂಗ್ಲಿಶನ್ನು ಒಂದು ಅಧಿಕೃತ ಭಾಷೆಯನ್ನಾಗಿ ಮಾತ್ನಾಡುವ ಯುಕೆ, ಆಸ್ಟ್ರೇಲಿಯಾ, ಅಮೇರಿಕಾ, ಕೆನಡಾ, ಐರ್ಲ್ಯಾಂಡ್, ನ್ಯೂಜಿಲ್ಯಾಂಡ್, ಕೆರಿಬಿಯನ್ ದೇಶಗಳಲ್ಲಿಯೇ ನಾನ್ನೂರು ಮಿಲಿಯನ್ ಸ್ಥಳೀಯ ಭಾಷಿಕರನ್ನು ಗುರುತಿಸುತ್ತೇವೆ.

ಸರಳವಾಗಿ ಹೇಳಬೇಕೆಂದರೆ, ಇಂಗ್ಲಿಶು ಒಂದು ಅಂತರರಾಷ್ಟ್ರೀಯ ಭಾಷೆ. ಈ ಲೋಕದ ಪ್ರಮುಖ ಭಾಷೆಯನ್ನಾಗಿ ಇದನ್ನು ಮಾನ್ಯಮಾಡಲಾಗಿದೆ. ಜಗತ್ತಿನ ಕಾಲುಭಾದಷ್ಟು ಜನರು ಇಂಗ್ಲಿಶು ಒಂದನ್ನೇ ಮಾತ್ನಾಡುತ್ತಾರೆ ಎಂಬಂಶವನ್ನು ಅಂಕಿ-ಅಂಶಗಳು ಹೇಳುತ್ತವೆ. 1.6 ಶತಕೋಟಿ ಜನರು ಕೇವಲ ಶೇಕ್ಸಫಿಯರ್‌ನ ಮೂಲಕ ಇಂಗ್ಲಿಶನ್ನು ಅರ್ಥಮಾಡಿಕೊಳ್ಳುತ್ತಾರೆ.

ಇಂಗ್ಲಿಶು ಚಲನಚಿತ್ರಗಳನ್ನು ನಿರ್ಮಿಸುವ ಹಾಲಿವುಡ್ ಜಗತ್ತಿನ ದೊಡ್ಡ ಚಲನಚಿತ್ರೋದ್ಯಮವನ್ನು ಹೊಂದಿದೆ. ದಿಟ, ಚೀನಿಯನ್ನು ತಾಯ್ನುಡಿಯನ್ನಾಗಿ ಮಾತ್ನಾಡುವ 3 ಶತಕೋಟಿ ಜನರು ಜಗತ್ತಿನಾದ್ಯಂತ ಹರಡಿಕೊಂಡಿದ್ದಾರೆ. ಇವರಿಗೆ ಹೊರತಾಗಿ ಚೀನಿಯನ್ನು ಬೇರೆಯವರು ಯಾರೂ ಮಾತ್ನಾಡುವುದಿಲ್ಲ ಹಾಗೂ ಕಲಿಯುವ ಆಸಕ್ತಿಯನ್ನೂ ಹೊಂದಿಲ್ಲ. ಅಂತರರಾಷ್ಟ್ರೀಯ ವ್ಯಾಪಾರ ಒಪ್ಪಂದಗಳು ಇಂಗ್ಲಿಶನಲ್ಲಿಯೇ ನಡೆಯುತ್ತವೆ. ಇಂತಹ ವ್ಯವಹಾರಗಳಲ್ಲಿ ವ್ಯಾಪಕವಾಗಿ ಇಂಗ್ಲಿಶು ಮಾತ್ರ ಬಳಕೆಯಾಗುತ್ತದೆ.

ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾಲಯಗಳಲ್ಲಿ ವಿಶೇಷ ಅಧ್ಯಯನಶಿಸ್ತುಗಳ ಶಿಕ್ಷಣವೂ ಇಂಗ್ಲಿಶಿನಲ್ಲಿಯೇ ನಡೆಯುತ್ತದೆ. ಇಂಗ್ಲಿಶು ಮಾತ್ನಾಡುವ ದೇಶಗಳಲ್ಲಿ ಇಂತಹ ಅವಕಾಶಗಳು ಇನ್ನಷ್ಟು ವ್ಯಾಪಕವಾಗಿ ದೊರೆಯುತ್ತವೆ. ಈ ಎಲ್ಲ ಕಾರಣಗಳಿಗಾಗಿ ಇಂಗ್ಲಿಶಿನ ಬೇಡಿಕೆ ವ್ಯಾಪಕವಾಗಿ ಹರಡಿಕೊಂಡಿದೆ. ಇದೆಲ್ಲದಕ್ಕಿಂತ ಮುಖ್ಯ ಮಾತೇನೆಂದರೆ, ಶಿಕ್ಷಣವು ನಮ್ಮ ಬದುಕುಗಳಿಗೆ ಅತೀ ಮುಖ್ಯ. ಆದರೆ ನಮ್ಮ ಬದುಕಿನ ಗುಣಮಟ್ಟವನ್ನು ಇನ್ನಷ್ಟು ಸುಧಾರಿಸುವುದಕ್ಕೆ ಇಂಗ್ಲಿಶಿನಿಂದ ಮಾತ್ರ ಸಾಧ್ಯವೆಂಬ ಕಣ್ಕಟ್ಟು ನಮ್ಮನ್ನು ಆವರಿಸಿಕೊಂಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ನೆಲದನಿ

ನುಡಿಯ ಒಡಲು -19 | ನಾಡು-ನುಡಿ: ಅಂಬೇಡ್ಕರ್ ಅವರ ಚಿಂತನೆಗಳ ಪ್ರಸ್ತುತತೆ

Published

on

 • ಡಾ.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಅಂಬೇಡ್ಕರ್ ಅವರ ‘ಭಾಷಾವಾರು ರಾಜ್ಯಗಳ ಸಮಸ್ಯೆಗಳು’ ಎನ್ನುವ ಬರಹವು ಇಂದಿಗೂ ಹಲವು ನೆಲೆಗಳಿಂದ ಅತ್ಯಂತ ಕುತೂಹಲಕಾರಿ ಮತ್ತು ವಿಶಿಷ್ಟವಾಗಿದೆ. 1956ರ ರಾಜ್ಯಗಳ ಪುನರ್ರಚನೆಯ ಕಾಯ್ದೆಯನ್ನು ಕುರಿತು ವಿಮರ್ಶಿಸುತ್ತ, “ರಾಷ್ಟ್ರೀಯ ಐಕ್ಯತೆಯನ್ನು ಕಾಪಾಡಲು ಏಕಭಾಷಿಕ ರಾಜ್ಯಗಳಕ್ಕಿಂತ ಬಹುಭಾಷಿಕ ರಾಜ್ಯಗಳನ್ನು ಹೊಂದುವುದು ಹೆಚ್ಚು ಪ್ರಯೋಜನಕಾರಿ ಆಗುತ್ತದೆ” ಎಂದು ತಮ್ಮ ಅಭಿಪ್ರಾಯಗಳನ್ನು ಅಂಬೇಡ್ಕರ್ ಹೀಗೆ ದಾಖಲಿಸುತ್ತಾರೆ.

ಸಂಯುಕ್ತ ಭಾರತ ಎನ್ನುವ ಕಲ್ಪನೆಯೇ ಮರಣಗಂಟೆಯ ಸೂಚಕವಾಗಿದೆ ಎಂದು ಅವರು ಬಲವಾಗಿ ನಂಬಿದ್ದರು. ರಾಜ್ಯಗಳ ಮರುರಚನೆಯಲ್ಲಿ ಜನಸಂಖ್ಯೆಯ ಗಾತ್ರ ಮತ್ತು ಪ್ರಮಾಣವನ್ನು ರೂಪಿಸುವಲ್ಲಿ ಸಂವಿಧಾನ ಸೋಲುತ್ತದೆ ಎನ್ನುವ ಬೇಸರವನ್ನೂ ಇವರು ವ್ಯಕ್ತಪಡಿಸಿದ್ದರು. ಪ್ರಜೆಗಳ ಸಮಾನ ಪ್ರತಿನಿಧೀಕರಣವನ್ನು ಕಾಯ್ದುಕೊಳ್ಳುವುದು ಕೂಡ ಅತ್ಯಂತ ದುಸ್ತರವಾಗುತ್ತದೆ ಎಂಬ ನಿಲುವು ಇವರದಾಗಿತ್ತು.

ಅಂಬೇಡ್ಕರ್ ಅವರ ಅಭಿಪ್ರಾಯದಲ್ಲಿ, 1956ರ ರಾಜ್ಯಗಳ ಪುನರ್ರಚನೆಯ ಕಾಯಿದೆಯು ಉತ್ತರದ ರಾಜ್ಯಗಳನ್ನು ಬಲಪಡಿಸುವ ಹಾಗೂ ದಕ್ಷಿಣದ ರಾಜ್ಯಗಳನ್ನು ಬಾಲ್ಕನೈಸ್ ಮಾಡುವ ನಿಲುವುಗಳನ್ನು ಕಾಣುತ್ತಾರೆ. ಪರಿಣಾಮವಾಗಿ ದಕ್ಷಿಣದಲ್ಲಿ ಚಿಕ್ಕ ಚಿಕ್ಕ ರಾಜ್ಯಗಳು ತಲೆಯೆತ್ತಿದರೆ, ಮುಂಬೈ, ಪಂಜಾಬ್, ಉತ್ತರಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದಂತಹ ದೊಡ್ಡ ಪ್ರದೇಶಗಳು ಹಾಗೇ ಅಸ್ತಿತ್ವದಲ್ಲಿ ಉಳಿಯುತ್ತವೆ.

ಆದರೆ, ಈ ಎಲ್ಲಾ ರಾಜ್ಯಗಳು ಕೂಡ ಈ ಹೊತ್ತಿಗೆ ಮರುವಿಂಗಡಣೆಯಾಗಿರುತ್ತವೆ ಎಂಬ ಭವಿಷ್ಯವನ್ನೂ ಇವರು ನುಡದಿದ್ದರು. ಅಂಬೇಡ್ಕರ್ ಅವರ ಪ್ರಮುಖ ಆದ್ಯತೆ ಏನಾಗಿತ್ತೆಂದರೆ, ಒಂದೇ ಭಾಷೆಯನ್ನು ಮಾತ್ನಾಡುವ ಜನರು ಅನೇಕ ರಾಜ್ಯಗಳಲ್ಲಿ ವರ್ಗೀಕರಿಸಿರಬಹುದಿತ್ತು. ಏಕೆಂದರೆ, ಪತ್ರಿಯೊಂದು ರಾಜ್ಯವು ಕೂಡ ಒಂದೊಂದು ಭಾಷೆಯನ್ನು ಮಾತ್ನಾಡುವ ಜನರ ಅಧಿಕಾರ ವ್ಯಾಪ್ತಿಯಲ್ಲಿರುತ್ತದೆ.

ಇನ್ನೂ ಮುಂದುವರೆದು ಇವರು ಹೇಳುವುದೇನೆಂದರೆ, ‘ಒಂದು ಭಾಷೆ ಒಂದು ರಾಜ್ಯ’ ಎಂಬ ಸೂತ್ರವಿರಕೂಡದು. ಬದಲಾಗಿ, ‘ಒಂದು ರಾಜ್ಯ ಒಂದು ಭಾಷೆ’ ಎಂಬ ಸೂತ್ರವನ್ನು ಅಳವಡಿಸಿಕೊಳ್ಳಬೇಕು. ಈ ಸೂತ್ರದ ಜೊತೆಗೆ ಒಂದು ಭಾಷೆ ಒಂದು ರಾಜ್ಯ ಎಂಬ ಸೂತ್ರವನ್ನು ತಳಕುಹಾಕಿ ಗೊಂದಲವನ್ನುಂಟು ಮಾಡಬಾರದು. ಇಲ್ಲಿ ಅಂಬೇಡ್ಕರ್ ಅವರ ಒಟ್ಟು ತಾತ್ವಿಕತೆ ಏನನ್ನು ಪ್ರಸ್ತಾಪ ಮಾಡುತ್ತದೆ ಎನ್ನುವುದು ಮುಖ್ಯವಾಗುತ್ತದೆ.

ಅಂಬೇಡ್ಕರ್ ಅವರು ಭಾರತದ ಸಂವಿಧಾನವನ್ನು ರೂಪಿಸಿದವರು, ಸಾಮಾಜಿಕ ನ್ಯಾಯದ ಆದ್ಯಪ್ರವರ್ತಕ, ಪ್ರಜಾಪ್ರಭುತ್ವವು ಸಾಕಾರಗೊಳ್ಳಲು, ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಎಷ್ಟೊಂದು ಮುಖ್ಯ ಎಂಬುದನ್ನು ಚಿಂತಿಸಿದವರು. ಆದ್ದರಿಂದ ಇವರು ಪ್ರಸ್ತಾಪಿಸುತ್ತಿರುವ ‘ಒಂದು ರಾಜ್ಯ ಒಂದು ಭಾಷೆ’ ಎಂಬೀ ಸೂತ್ರದ ಹಿಂದಿನ ತಾತ್ವಿಕತೆಯು ಕೂಡ ಅತ್ಯಂತ ಪ್ರಜಾಸತ್ತಾತ್ಮಕವಾದ್ದು.

ಅಂದರೆ ಅಂಬೇಡ್ಕರ್ ಅವರು ಚಿಂತಿಸುತ್ತಿದ್ದ ಒಂದು ಬಹುಮುಖ್ಯ ವಿನ್ಯಾಸ ಯಾವುದೆಂದರೆ, ಎಲ್ಲ ಸಾಮಾಜಿಕ, ರಾಜಕೀಯ, ಆರ್ಥಿಕ, ಭಾಷಿಕ ಹಾಗೂ ಧಾರ್ಮಕ ವಿನ್ಯಾಸಗಳನ್ನೂ ಕೂಡ ಸಂವಿಧಾನದ ಪ್ರಜಾಸತ್ತಾತ್ಮಕ ನೀತಿಗಳನ್ನಾಗಿ ರೂಪಿಸುತ್ತಿದ್ದರು. ಹಾಗಾಗಿ ಇವರು ಪ್ರಸ್ತಾಪಿಸಿದ ಈ ಮೇಲಿನ ಸೂತ್ರವು ಇಂತಹದೇ ಒಂದು ವಿನ್ಯಾಸವಾಗಿದೆ. ಕೇವಲ ರಾಜಕೀಯ ಕಣ್ನೋಟದಿಂದ ಈ ಸೂತ್ರವನ್ನು ವಿಶ್ಲೇಷಣೆ ಮಾಡಿದರೆ ಇದರಲ್ಲಿ ಹಲವು ಬಗೆಯ ಕೊರತೆಗಳು ಕಾಣುತ್ತವೆ.

ಈ ರಾಜಕೀಯ ಕಣ್ನೋಟವೆನ್ನುವುದು ಕೇವಲ ರಾಜಕೀಯ ನಿಲುವುಗಳಿಂದ ಇಲ್ಲವೇ ನೀತಿಗಳಿಂದ ಕೂಡಿರುವ ಅಗತ್ಯವಿಲ್ಲ. ಇದು ಸಾಮಾಜಿಕ ಭಾಷಾಶಾಸ್ತ್ರೀಯ ಕಣ್ನೋಟವು ಆಗಿರಬಹುದು ಅಥವಾ ಯಾವುದೇ ಸಾಮಾಜಿಕ ಮೀಮಾಂಸೆಯ ನಿಲುವುಗಳಿಂದ ಪ್ರೇರಿತವಾದ ಕಣ್ನೋಟವು ಆಗಿರಬಹುದು. ಆದರೆ ಈ ಎಲ್ಲ ನಿಲುವುಗಳು ಬೈನರಿ ಇಲ್ಲವೇ ಡೈಕಾಟಮಿಗಳನ್ನು ಮುಂದಿಟ್ಟುಕೊಂಡು ವಿಶ್ಲೇಷಣೆ ಮಾಡುತ್ತವೆ. ಸಹಜವಾಗಿ, ಅಧಿಕಾರ ಸಂಬಂಧ ಇಲ್ಲವೇ ಯಜಮಾನಿಕೆ ವಿನ್ಯಾಸಗಳು ಇಲ್ಲಿ ಗೋಚರಿಸುತ್ತವೆ.

ಈ ವಿನ್ಯಾಸಗಳನ್ನೇ ಅಂಬೇಡ್ಕರ್ ಅವರ ‘ಒಂದು ರಾಜ್ಯ ಒಂದು ಭಾಷೆ’ಎಂಬೀ ಸೂತ್ರಕ್ಕೂ ಅನ್ವಯಿಸುವ ಅಪಾಯಗಳಿವೆ. ಇದು ಆಗಕೂಡದು ಎಂಬುದು ನನ್ನ ಬಯಕೆ. ಮತ್ತೊಂದು ಮಹತ್ವದ ಸಂಗತಿಯನ್ನು ಇಲ್ಲಿ ಉಲ್ಲೇಖಿಸಲೇ ಬೇಕು, ಅದೇನೆಂದರೆ ಅಂಬೇಡ್ಕರ್ ಅವರ ವಿಚಾರಗಳನ್ನು ಮತ್ತು ತಾತ್ವಿಕ ವಿನ್ಯಾಸಗಳನ್ನು ವಿಶ್ಲೇಷಿಸುವುದಕ್ಕೆ ನಾವು ಹೊಸ ನೋಟಕ್ರಮ ಹಾಗೂ ವಿಶ್ಲೇಷಣಾ ಪರಿಕರಗಳನ್ನು ಕಂಡುಕೊಳ್ಳುವ ಅಗತ್ಯವಿದೆ.

ಅಂಬೇಡ್ಕರ್ ಅವರು ಕೇವಲ ಸಾಮಾಜಿಕ, ಸಾಂಸ್ಕ್ರುತಿಕ, ರಾಜಕೀಯ ಹಾಗೂ ಧಾರ್ಮಿಕ ಸಂಗತಿಗಳಲ್ಲಿ ಹುದುಗಿರುವ ಏರುಪೇರುಗಳನ್ನು ಮಾತ್ರ ವಿಶ್ಲೇಷಿಸುವ ಪ್ರಯತ್ನವನ್ನು ಮಾಡಲಿಲ್ಲ. ಬದಲಾಗಿ ‘ಹೊಸ ಪ್ರಜಾಪ್ರಭುತ್ವ’ದ ವಿನ್ಯಾಸಗಳನ್ನು ನೆಲೆಗೊಳಿಸುವ ಚಿಂತನೆಗಳನ್ನು ರೂಪಿಸುತ್ತಿದ್ದರು. ಒಟ್ಟಿನಲ್ಲಿ ‘ವಿಚಾರ ಕ್ರಾಂತಿ ಮತ್ತು ಅರಿವಿನ ಪಲ್ಲಟ’ಗಳನ್ನು ಒಂದೇ ತಾತ್ವಿಕ ಚೌಕಟ್ಟಿನಲ್ಲಿ ರೂಪಿಸುವ ಇರಾದೆಯನ್ನು ಇವರು ಹೊಂದಿದ್ದರು.

ಭಾರತದ ಸಂವಿಧಾನದ ಪೀಠಿಕೆಯಲ್ಲಿ ಭಾರತವನ್ನು ‘ರಾಜ್ಯಗಳ ಒಕ್ಕೂಟ’ (ಸ್ಟೇಟ್ಸ್ ಆಫ್ ಯ್ಯೂನಿಯನ್ಸ್) ಎಂದು ಉಲ್ಲೇಖಿಸಲಾಗಿದೆ. ಅಂಬೇಡ್ಕರ್ ಅವರ ಸಾಮಾಜಿಕ ತತ್ವಶಾಸ್ತ್ರಕ್ಕೂ ಮತ್ತು ರಾಜ್ಯಗಳ ಒಕ್ಕೂಟದ ಕಲ್ಪನೆಯ ನಡುವೆ ಅತರ್ಸಂಬಂಧಗಳಿವೆ. ಭಾರತ ಎನ್ನುವುದು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕಾದರೆ, ಅದು ಖಂಡಿತವಾಗಿಯೂ ಸ್ವಾತಂತ್ರ್ಯ, ಸಮಾನತೆ ಮತ್ತು ಬಾಂಧವ್ಯ ಎಂಬ ಈ ಮೂರು ಪರಿಕಲ್ಪನೆಗಳನ್ನು ತನ್ನ ಗುರಿಗಳನ್ನಾಗಿ ರೂಪಿಸಿಕೊಳ್ಳಬೇಕು.

ಹಲವು ರಾಜ್ಯಗಳು ಒಂದು ಒಕ್ಕೂಟವಾಗಿ ನೆಲೆಗೊಳ್ಳಬೇಕೆಂದರೆ ಈ ಗುರಿಗಳು ಅವಶ್ಯವಾಗಿ ಬೇಕಾಗುತ್ತವೆ. ಅಂಬೇಡ್ಕರ್ ಅವರ ಚಿಂತನೆಗಳ ಆಶಯವಿರುವುದು ಭಾರತವನ್ನು ಕೇವಲ ಬಹುಭಾಷಿಕ, ಬಹುಸಾಂಸ್ಕ್ರುತಿಕ, ಬಹುಧರ್ಮೀಯ ಹಾಗೂ ಬಹುಜಾತಿಗಳಿಂದ ಕೂಡಿದ ರಾಷ್ಟ್ರವನ್ನಾಗಿ ನೋಡುವುದಾಗಿರಲಿಲ್ಲ.

ಬದಲಾಗಿ ಈ ಎಲ್ಲ ಭಿನ್ನ-ಅಸ್ಮಿತೆಗಳ ಅಚೆಗೂ ಭಾರತವು ಒಂದು ಒಕ್ಕೂಟವಾಗಿ ರೂಪುಗೊಳ್ಳಬೇಕು ಹಾಗೂ ಈ ಒಕ್ಕೂಟದೊಳಗೆ ನೆಲೆಗೊಳ್ಳುವ ಎಲ್ಲ ಸಮೂಹಗಳು ತಮ್ಮ ವೈಶಿಷ್ಟ್ಯತೆಗಳನ್ನು ಗುರುತಿಸಿಕೊಂಡರೂ, ಅವುಗಳು ಭೇದದ ಬೇರುಗಳಾಗದೇ, ಸಾಮಾಜಿಕ-ರಾಜಕೀಯ ಗಡಿಗಳನ್ನು ನಿರ್ಮಿಸದೇ, ಹೂದೋಟದ (ಫ್ಲಾವರ್ಸ್ ಪಾಟ್) ಸ್ವರೂಪದಲ್ಲಿ ನೆಲೆಗೊಳ್ಳಬೇಕು ಎಂಬುದು ಇವರ ಉದ್ದೇಶವಾಗಿತ್ತು.

ಯಾವತ್ತಿಗೂ ಭಾರತವನ್ನು ಒಂದು ಮೆಲ್ಟಿಂಗ್ ಪಾಟ್‍ನ್ನಾಗಿ ರೂಪಿಸುವ ಕನಸು ಕಂಡವರಲ್ಲ ಇವರು. ಆದರೆ, ಧಾರ್ಮಿಕ ಕುರುಡತನದಿಂದ ರಾಜ್ಯಭಾರವನ್ನು ಮಾಡುವರು ರಾಜ್ಯಗಳ ಒಕ್ಕೂಟವೆಂದರೆ, ಅದೊಂದು ಮೆಲ್ಟಿಂಗ್ ಪಾಟ್‍ನ ಸ್ವರೂಪದಲ್ಲಿ ದೇಶವನ್ನು ಕಟ್ಟುವುದು ಎಂದು ತಿಳಿದುಕೊಂಡಿದ್ದಾರೆ. ಈ ಎಲ್ಲ ಅಪಚಾರಗಳಿಂದ ವಿಮೋಚನೆಗೊಳಿಸಿ, ಒಂದು ಅಪ್ಪಟ ವೈಚಾರಿಕ, ಪ್ರಜಾಸತ್ತಾತ್ಮಕ ಹಾಗೂ ಸಾಮಾಜಿಕ ಐಕ್ಯತೆಯಿಂದ ಕೂಡಿಬಾಳುವ ಒಕ್ಕೂಟವನ್ನಾಗಿ ರೂಪಿಸುವ ಕನಸನ್ನು ಅಂಬೇಡ್ಕರ್ ಅವರು ಕಂಡಿದ್ದರು.

ದೇಶ, ರಾಷ್ಟ್ರ, ಒಕ್ಕೂಟ ಹಾಗೂ ರಾಜ್ಯ ಎಂಬಿತ್ಯಾದಿ ಕಲ್ಪನೆಗಳ ನಡುವಣ ಅತರ್ಸಂಬಂಧ ಹಾಗೂ ತಾತ್ವಿಕತೆಯನ್ನು ಅರಿಯದೇ ಹೋದದ್ದರಿಂದ, ಇವತ್ತು ಹಲವು ಬಗೆಯ ಸವಾಲುಗಳನ್ನು ಎದುರಿಸುವ ಇಕ್ಕಟ್ಟಿಗೆ ನಾವು ಸಿಲುಕಿದ್ದೇವೆ. ಪರಿಣಾಮವಾಗಿ ಭಾರತ (ಇಂಡಿಯಾ) ಹಾಗೂ ಭಾರತೀಯ (ಇಂಡಿಯನ್) ಎಂಬೀ ನಾಮಪದ ಮತ್ತು ನಾಮವಿಶೇಷಣಗಳ ನಡುವಣ ನಂಟು ಕಳಿಚಿಹೋಗಿ, ಇವುಗಳು ಪರಸ್ಪರ ವಿರೋಧಿಗಳಾಗಿ ವರ್ತಿಸುತ್ತವೆ. ಅಂದರೆ, ಭಾರತ ಒಂದು ರಚನಾತ್ಮಕ ನೆಲೆಯಾದರೆ, ಭಾರತೀಯ ಎಂಬುದು ಈ ರಚನೆಯನ್ನು ವಿವರಿಸುವ ಬಗೆಯಾಗಿದೆ.

ಆದರೆ ಇವತ್ತು ಭಾರತದ ರಚನೆಯೊಳಗೆ ಇರುವವನು/ಳು ಭಾರತೀಯನಾಗಿಯೇ ಕಾಣುವುದಿಲ್ಲ. ಏಕೆಂದರೆ, ಭಾರತದ ಪ್ರತಿಯೊಬ್ಬ ಪ್ರಜೆಯೂ ಕೂಡ ಹಿಂದೂ ಧರ್ಮದ ವಕ್ತಾರರು ಮಂಡಿಸುವ ಎಲ್ಲ ಬಗೆಯ ನಿಲುವುಗಳನ್ನು ಒಪ್ಪಿದರೇ ಮಾತ್ರ ಅವನು/ಳು ಭಾರತೀಯನಾಗಿ ಒಪ್ಪಿಗೆಯನ್ನು ಪಡೆಯುತ್ತಾರೆ. ಯಾವುದೇ ಒಂದು ದೇಶದ ರಚನೆ ಅದು ಕೇವಲ ಯಾವುದೇ ಒಂದು ಧರ್ಮದ ವಿನ್ಯಾಸಕ್ಕೆ ಮಾತ್ರ ಸೀಮಿತಗೊಂಡರೆ, ಇಂತಹ ಅಪಾಯಗಳು ಎದುರಾಗುತ್ತವೆ.

ಇಂತಹ ಅಪಾಯಗಳನ್ನು ಗ್ರಹಿಸಿದ ಅಂಬೇಡ್ಕರ್ ಅವರು, ಯಾವುದೇ ಒಂದು ಭಾಷೆಯನ್ನು ಮಾತ್ನಾಡುವ ಜನರು ಒಂದು ನಿರ್ದಿಷ್ಟ ರಾಜ್ಯದೊಳಗೆ ನೆಲೆಗೊಂಡರೆ, ಅದು ಜಾತಿ, ಧರ್ಮದ ಕೋಮು ಸ್ವರೂಪವನ್ನು ಪಡೆದುಕೊಳ್ಳುತ್ತದೆ ಹಾಗೂ ಒಕ್ಕೂಟದ ತಾತ್ವಿಕತೆಗೆ ಎದುರಾಗಿ, ತಮ್ಮದೇ ಆಶೋತ್ತರಗಳನ್ನು ರೂಪಿಸಿಕೊಳ್ಳುತ್ತರೆ. ಪರಿಣಾಮವಾಗಿ ಸಾಮಾಜಿಕ, ರಾಜಕೀಯ ಹಾಗೂ ಭಾಷಿಕ ಅಂತರಗಳು ಮತ್ತಷ್ಟು ಬಿಗಡಾಯಿಸುವುದಕ್ಕೆ ಪೂರಕವಾಗಿ ವರ್ತಿಸುತ್ತಾರೆ ಎಂಬುದನ್ನು ಮನಗಂಡಿದ್ದರು. ಅದಕ್ಕಾಗಿಯೇ ರಾಜ್ಯಗಳ ಒಕ್ಕೂಟ ಮತ್ತು ಒಂದು ರಾಜ್ಯ ಒಂದು ಭಾಷೆ ಎಂಬ ಸೂತ್ರವನ್ನು ಅವರು ಪ್ರಸ್ತಾಪ ಮಾಡಿದ್ದು.

ಈ ಮೇಲಿನ ಚರ್ಚೆಗಳು ಸೂಕ್ಷ್ಮವಾಗಿ ಪ್ರಸ್ತಾಪಿಸುವ ಎಲ್ಲ ಬಗೆಯ ಅಪಾಯಗಳನ್ನು ನಾವು ಇವತ್ತು ಭಾರತದಲ್ಲಿ ನೋಡುತ್ತಿದ್ದೇವೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ಹಲವು ದಶಕಗಳ ನಂತರವೂ ಕೂಡ ನಮ್ಮ ಭಾರತ ರಾಜ್ಯಗಳ ಒಕ್ಕೂಟದಂತೆ ಕೆಲಸವನ್ನು ಮಾಡದೇ, ಹಲವು ರಾಜ್ಯಗಳು ಹಲವು ಕಾರಣಗಳಿಗಾಗಿ ಶತ್ರು ಪಾಳ್ಯಗಳಂತೆ ವರ್ತಿಸುತ್ತವೆ. ಈ ಎಲ್ಲ ಶತ್ರುಗಳನ್ನು ಗಾಳಗಳನ್ನಾಗಿ ಬಳಸುವ ಕುತಂತ್ರದಂತೆ, ಕೇಂದ್ರ ಸರಕಾರ ಕೆಲಸವನ್ನು ನಿರ್ವಹಿಸುತ್ತಿದೆ.

ಗಡಿ, ನೀರು, ನೈಸರ್ಗಿಕ ಸಂಪತ್ತು, ಭಾಷೆ ಮೊದಲಾದ ಹಲವು ನೆಪಗಳನ್ನು ಮುಂದಿಟ್ಟುಕೊಂಡು ರಾಜ್ಯ ರಾಜ್ಯಗಳ ನಡುವೆ ಜಗಳಗಳು ಏರ್ಪಡುತ್ತವೆ. ಇಂತಹ ಜಗಳಗಳನ್ನು ರಾಜಕೀಯ ಲಾಭಕ್ಕಾಗಿಯೇ ಕೇಂದ್ರ ಸರಕಾರ ತನ್ನ ಪಕ್ಷಪಾತಿ ಗುಣವನ್ನು ನಿರಂತರವಾಗಿ ಪ್ರದರ್ಶಿಸುತ್ತ ಬಂದಿದೆ. ಸಮಾನತೆ, ಸ್ವಾತಂತ್ರ್ಯ ಮತ್ತು ಬಾಂಧವ್ಯದಂತಹ ಮೌಲ್ಯಗಳು ಇವತ್ತು ಕೇವಲ ಘೋಷಣೆಗಳಾಗಿ ಮಾತ್ರ ಅಸ್ತಿತ್ವದಲ್ಲಿವೆ.

ಈ ಎಲ್ಲ ಚರ್ಚೆಗಳು ನಮಗೆ ಖಾತ್ರಿಪಡಿಸುವುದೇನೆಂದರೆ, ರಾಜ್ಯಗಳ ಪುನರ್ರಚನೆಯ ಆಸಕ್ತಿಗಳು ಬಹುತೇಕವಾಗಿ ರಾಜಕೀಯ ಪ್ರೇರಿತವಾಗಿವೆ. ಹಾಗಾಗಿಯೇ, ಇವುಗಳನ್ನು ವಿರೋಧಿಸುವ ಚರ್ಚೆಗಳು ಎಷ್ಟೇ ತೀವ್ರವಾಗಿ ಮುಂಚೂಣೆಗೆ ಬಂದರೂ ಅವುಗಳನ್ನು ಮೌನಗೊಳಿಸುವ ಹುನ್ನಾರವನ್ನು ಮಾಡಲಾಯಿತು. ಸಾಮಾನ್ಯವಾಗಿ, ಪ್ರಿನ್ಸ್ಲಿ ಸ್ಟೇಟ್‍ಗಳನ್ನು ಏಕತ್ರಗೊಳಿಸುವ ಹಾಗೂ ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಿಗೆ ‘ವಿಶೇಷ ಸ್ಥಾನ’ವನ್ನು ಕಲ್ಪಿಸುವುದಕ್ಕೆ ವಿಶೇಷ ಗಮನವನ್ನು ನೀಡಲಾಯಿತು ಎಂದೂ ರಾಜ್ಯಗಳ ಪುನರ್ರಚನೆಯ ಹಿಂದಿನ ಉದ್ದೇಶಗಳನ್ನು ವ್ಯಾಖ್ಯಾನಿಸಲಾಗುತ್ತದೆ.

ಇರಲಿ, 2000ನೇ ಇಸ್ವಿಯಲ್ಲಿ ಛತ್ತೀಸ್ಘಡ್, ಜಾರ್ಖಂಡ್ ಹಾಗೂ ಉತ್ತರಾಂಚಲ್ ಹಾಗೂ ಈಚೆಗೆ ತೆಲಾಂಗಣ ಎಂಬೆಲ್ಲ ರಾಜ್ಯಗಳನ್ನು ಪುನರ್ರಚಿಸಲಾಯಿತು. ಈ ಎಲ್ಲ ರಾಜ್ಯಗಳನ್ನು ಭಾಷೆಯೇತರ ನೆಲೆಯಲ್ಲಿ ವ್ಯಾಖ್ಯಾನ ಮಾಡಲಾಗಿದೆ. ಇಲ್ಲಿ ಅತ್ಯಂತ ಸ್ಪಷ್ಟವಾಗಿರುವ ಅಂಶ ಏನೆಂದರೆ, ರಾಜ್ಯಗಳ ರಚನೆಯ ರಾಜಕಾರಣಕ್ಕೆ ಒತ್ತಾಸೆಯಾಗಿ ಈ ಎಲ್ಲ ಹೊಸ ರಾಜ್ಯಗಳು ಮೈದೆರದವು. ಆದರೆ ಉತ್ತಮ ಆಡಳಿತವನ್ನು ನೀಡುವ ಕಾರಣವನ್ನು ಮುಂದಿಟ್ಟುಕೊಂಡು ಏನೇ ವಾದವನ್ನು ಮಾಡಿದರೂ, ಇದರ ಹಿಂದಿನ ರಾಜಕೀಯ ನಿಲುವುಗಳು ಮಾತ್ರ ಕಣ್ಣಿಗೆ ರಾಚುತ್ತವೆ.

ಜೊತೆಗೆ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರ ನಡುವಣ ನಂಟಸ್ತಿಕೆ, ಕೇಂದ್ರ-ರಾಜ್ಯಗಳ ಸಂಬಂಧ ಹಾಗೂ ಸಾಮಾಜಿಕ ಅಸ್ಮಿತೆಯ ಪ್ರಶ್ನೆಗಳು ನಿರಂತರವಾಗಿ ರಾಜಕೀಯ ಸಂಕಥನದ ಭಾಗಗಳಾಗಿಯೇ ಚರ್ಚೆಗೆ ಒಳಪಡುತ್ತವೆ. ಹೊರತು ಸಮೂಹಗಳ ಏಳ್ಗೆಯ ಪ್ರಶ್ನೆಗಳನ್ನಾಗಿ ಅವುಗಳನ್ನು ಚರ್ಚಿಸುವುದಿಲ್ಲ. ವಿಭಜನೆಯ ನಂತರದ ಭಾರತದಲ್ಲಿ, ರಾಷ್ಟ್ರೀಯ ಐಕ್ಯತೆಯ ಪ್ರಶ್ನೆಗಳು ಒಂದುಕಡೆ ಹಾಗೂ ಸಾಂಸ್ಕ್ರುತಿಕ ಭಿನ್ನತೆಗಳನ್ನು ಗುರುತಿಸುವ ತುಡಿತಗಳು ಮತ್ತೊಂದು ಕಡೆ ತೀವ್ರವಾಗಿ ನಮ್ಮನ್ನು ಕಾಡುತ್ತಿದ್ದರು, ನಾವು ಅವುಗಳನ್ನು ಭಾರತೀಯ-ರಾಷ್ಟ್ರೀಯ ಚೌಕಟ್ಟಿಗೆ ಸೀಮಿತಗೊಳಿಸಿ ನೋಡುವ ಪ್ರಯತ್ನವನ್ನೇ ಮಾಡುತ್ತ ಬಂದಿದ್ದೇವೆ. ರಾಜ್ಯಗಳ ಸ್ವಾಯತ್ತತೆಯ ಪ್ರಶ್ನೆಗಳನ್ನೂ ಕೂಡ ಇದೇ ಚೌಕಟ್ಟಿಗೆ ಒಳಪಡಿಸಿದ್ದು ಮಾತ್ರ ವಿಪರ್ಯಾಸ. ಜನಾಂಗ-ಪ್ರಾದೇಶಿಕ ಅಸ್ಮಿತೆ ಹಾಗೂ ಉತ್ತಮ ಆಡಳಿತದ ನಡುವಣ ಸಂಬಂಧಗಳನ್ನು ಕುರಿತು ಮಾತ್ರ ಚಿಂತಿಸುವ ಕಡೆಗೆ ಇವತ್ತಿನ ಬೆಳವಣಿಗೆಗಳು ನಮ್ಮನ್ನು ಒತ್ತಾಯಿಸುತ್ತವೆ.

ಭಾಷಾವಾರು ಪ್ರಾಂತಗಳ ಪುನರ್ರಚನೆಯನ್ನು ಕುರಿತ ಅಂಬೇಡ್ಕರ್ ಅವರ ವಿಶ್ಲೇಷಣೆಗಳಿಗೆ ಚಾರಿತ್ರಿಕ ಸನ್ನಿವೇಶವಿದೆ. ಈ ಚಾರಿತ್ರಿಕ ಸನ್ನಿವೇಶದಿಂದ ಹೊರಗಿಟ್ಟು ನೋಡಿದರೂ ಇವತ್ತಿಗೂ ಈ ವಿಶ್ಲೇಷಣೆಗಳು ನಮ್ಮ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳನ್ನು ಅರಿಯಲು ಒತ್ತಾಸೆಯಾಗುತ್ತವೆ. ರಾಜ್ಯಾಡಳಿತವನ್ನು ಪ್ರಾದೇಶೀಕರಣಗೊಳಿಸುವ ಇರಾದೆಯಿಂದ ರಾಜ್ಯಗಳ ಪುನರ್ರಚನೆಯನ್ನು ಕೈಗೊಳ್ಳಲಾಗಿದೆ. ಪ್ರಾದೇಶಿಕ ಅಸ್ಮಿತೆಯನ್ನು ಹೊಂದುವ ತುಡಿತಕ್ಕೆ ಮುಖ್ಯವಾಗಿ ಈ ಮೂರು ಕಾರಣಗಳನ್ನು ಇಲ್ಲಿ ಗುರುತಿಸಬಹುದು.

ಮತದಾರರ ಪ್ರಾತಿನಿದ್ಯದಲ್ಲಿ ಬದಲಾವಣೆಯನ್ನು ತರುವ ಮೂಲಕ ಈಗಾಗಲೇ ರಾಜಕೀಯವಾಗಿ ನಿಶ್ಕ್ರಿಯಗೊಂಡಿದ್ದ ಇಲ್ಲವೇ ಆಯಾ ಪ್ರದೇಶದ ಜನರಲ್ಲಿ ಸುಪ್ತವಾಗಿದ್ದ ಪ್ರಾದೇಶಿಕತೆಯ ಹಪಾಹಪಿತನವನ್ನು ಪುನರುಜ್ಜೀವನಗೊಳಿಸುವುದಾಗಿತ್ತು. ಜಾತಿ, ಜನಾಂಗ, ಭಾಷೆಗಳನ್ನೇ ನೆಲೆಯಾಗಿಸಿಕೊಂಡ ರಾಜಕೀಯ ಪ್ರೇರಿತ ಅಭಿವ್ಯಕ್ತಿಯನ್ನು ಸಜ್ಜುಗೊಳಿಸುವ ಮೂಲಕ ಹೊಸದಾಗಿ ಮೈಪಡೆದ ರಾಜ್ಯಗಳು, ಸಾಮಾಜಿಕ ಒಡಕುಗಳಿಗೆ ನಾಂದಿ ಹಾಡಿದವು. ಪ್ರಾದೇಶಿಕ ಇಲ್ಲವೇ ರಾಷ್ಟ್ರೀಯ ಪಕ್ಷಗಳೆಂಬ ಯಾವುದೇ ಭೇದಗಳನ್ನು ಹೊಂದದೆ ಪ್ರಾದೇಶಿಕ ಕೇಂದ್ರಿತವಾದ ಚುನಾವಣೆಯ ಪ್ರಚಾರ ಮತ್ತು ನೀತಿಗಳನ್ನು ಹುಟ್ಟು ಹಾಕಲಾಗುತ್ತದೆ.

ಆದಾಯ ಮತ್ತು ಬಳಕೆಯ ವಿನ್ಯಾಸದಲ್ಲಿ ಪ್ರಾದೇಶಿಕ ಅಸಮಾನತೆಯ ಪ್ರಮಾಣವು ದಿನದಿಂದ ದಿನಕ್ಕೆ ತಲೆದೊರುತ್ತಿದೆ. ಪರಿಣಾಮವಾಗಿ ಸುಧಾರಣೋತ್ತರ ಕಾಲದಲ್ಲಿ ನಿರ್ಲಕ್ಷ್ಯ ಮತ್ತು ತಾರತಮ್ಯ ಧೋರಣೆಗಳು ಉಲ್ಬಣಿಸುತ್ತಿವೆ ಎಂಬ ಗ್ರಹಿಕೆಗೆ ಇದು ಇಂಬು ನೀಡುತ್ತಿದೆ. ಕರಾವಳಿ ಮತ್ತು ಇತರೆ ಅಭಿವ್ರುದ್ಧಿ ಹೊಂದಿದ ಪ್ರದೇಶಗಳು ನಿಸ್ಸಂಶಯವಾಗಿ, ನಿರಂತರವಾಗಿ ಸಮಗ್ರ ಬೆಳವಣಿಗೆಯನ್ನು ಹೊಂದುತ್ತಿವೆ. ಹಾಗೂ ಇಂತಹ ಅವಕಶಾಗಳಿಂದ ವಂಚಿತವಾಗಿರುವ ಇನ್ನಿತರೆ ಪ್ರಾದೇಶಿಕ ಹೊರ ವಲಯಗಳಿಗೆ ಹೋಲಿಸಿದರೆ ಖಾಸಗಿ ಬಂಡವಾಳದ ಅಪಾರ ಹೂಡುವಿಕೆಯಿಂದಲೂ ಅಭಿವ್ರುದ್ಧಿ ಹೊಂದಿದ ಈ ಪ್ರದೇಶಗಳೇ ಮತ್ತೆ ಮತ್ತೆ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಿವೆ.

ಆದರೆ ಈ ಪ್ರಾದೇಶಿಕ ಅಭಿವ್ರುದ್ಧಿಯಿಂದ ಹೊರಗುಳಿದ ಪ್ರಾದೇಶಿಕ ವಲಯಗಳು ಕಾನೂನು ಮತ್ತು ಸುವ್ಯವಸ್ಥೆಯಿಂದಲೂ ಬಾಧಿಸಲ್ಪಟ್ಟಿವೆ ಮತ್ತು ಆರ್ಥಿಕ ಹಾಗೂ ಸಾಮಾಜಿಕ ಮೂಲಭೂತ ಸೌಕರ್ಯಗಳ ಕೊರತೆಯಿಂದಲೂ ಬಳಲುತ್ತಿವೆ.
ಸಂವಿಧಾನ ರಾಜ್ಯಗಳೊಳಗೆಯೇ ಸಂಪತ್ಭರಿತ ಪ್ರದೇಶಗಳು ಇದ್ದು, ಅಗಾಧ ಪ್ರಮಾಣದಲ್ಲಿ ಖಾಸಗಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುತ್ತಿದ್ದು ಮತ್ತು ಪರಿಣಾಮಕಾರಿ ಬೆಳವಣಿಗೆಯನ್ನು ಹೊಂದುತ್ತಿದ್ದಾಗಲೂ, ಈ ಪ್ರದೇಶಗಳ ಮೇಲೆ ನಿರಂತರವಾಗಿ ಅವಲಂಭಿತವಾಗಿದ್ದ ಇತರೆ ಹಿಂದೂಳಿದ ಪ್ರದೇಶಗಳಿಗೆ ಯಾವುದೇ ಬಗೆಯ ಆದಾಯವನ್ನು ವರ್ಗಾಯಿಸುವುದನ್ನು ಈ ಸಂಪತ್ಭರಿತ ಪ್ರದೇಶಗಳು ನಿರಾಕರಿಸುತ್ತವೆ.

ಈ ಧೋರಣೆಗಳನ್ನು ವ್ಯಂಗವಾಗಿ ‘ಶ್ರೀಮಂತಿಕೆಯನ್ನು ಹಿಂಪಡೆಯುವ’ ಬಗೆಯನ್ನಾಗಿ ಇಲ್ಲಿ ನೋಡುತ್ತೇವೆ. ಇಲ್ಲಿಯ ಸ್ಥಳೀಯ ಮೇಲ್ವರ್ಗಗಳ ಆರೋಪ ಏನೆಂದರೆ, ರಾಜಕೀಯವಾಗಿ ಪ್ರಾಬಲ್ಯವನ್ನು ಹೊಂದಿರುವ ಇತರೆ ಪ್ರದೇಶದ ಮೇಲ್ವರ್ಗಗಳು ಆರ್ಥಿಕವಾಗಿ, ಆಡಳಿತಾತ್ಮಕವಾಗಿ ತಾರತಮ್ಯ ಧೋರಣೆಗಳನ್ನು ಹೊಂದುತ್ತವೆ ಎಂಬುದಾಗಿದೆ.

ಈ ಮೇಲಿನ ಪ್ರಕ್ರಿಯೆಯ ಪರಿಣಾಮವಾಗಿ ಭಾರತದ ಫೆಡರಲ್ ತಾತ್ವಿಕತೆಯಲ್ಲಿ ಗಮನಾರ್ಹವಾದ ಪಲ್ಲಟಗಳು ಏರ್ಪಟ್ಟಿರುತ್ತವೆ. ಈ ಪಲ್ಲಟಗಳು ಹಲವು ಸ್ವರೂಪದಲ್ಲಿ ಪ್ರತಿಫಲಿಸಿರುವುದನ್ನು ಈ ಮುಂದಿನ ಬೆಳವಣಿಗೆಗಳ ಮೂಲಕ ನೋಡುತ್ತೇವೆ. ಅಂದರೆ;
ಪ್ರಾದೇಶಿಕ ಅಸ್ಮಿತೆ, ಸಂಸ್ಕ್ರುತಿ ಹಾಗೂ ಭೌಗೋಳಿಕ ಭಿನ್ನತೆಗಳು, ರಾಜಕೀಯ ಪ್ರಾತಿನಿಧ್ಯ ಹಾಗೂ ಆಡಳಿತಾತ್ಮಕ ವಲಯಗಳನ್ನಾಗಿ ರೂಪಿಸುವುದಕ್ಕೆ ಇವುಗಳು ಮಹತ್ವದ ಮಾನದಂಡಗಳಾಗಿರುತ್ತವೆ.

ಪ್ರತ್ಯೇಕ ರಾಜ್ಯಗಳ ಕೋರಿ ನಡೆಸುವ ಚಳವಳಿಗಳು ಇವತ್ತು ಯಾವುದೇ ಬಗೆಯ ಭಾಷಾ ದುರಾಭಿಮಾನ ಇಲ್ಲವೇ ಪ್ರಾಂತೀಯ ಕಳಂಕಗಳನ್ನಾಗಿ ನೋಡುವ ಕಾಲವಲ್ಲವಿದು. ದಿಟ, ಹಿಂದೊಂದು ಕಾಲದಲ್ಲಿ ಇದನ್ನು ರಾಷ್ಟ್ರ ವಿರೋಧಿ ನಿಲುವನ್ನಾಗಿ ನೋಡುವ ಕ್ರಮವೊಂದಿತ್ತು.

ಇವತ್ತು ಹೊಸ ರಾಜ್ಯಗಳ ಪ್ರಸ್ತಾಪವು ಭಾಷಾ ತತ್ವಗಳ ಆಧಾರದ ಮೇಲೆ ಆಗುತ್ತಿಲ್ಲ. ಬದಲಾಗಿ ಅಭಿವ್ರುದ್ಧಿ ಮತ್ತು ಉತ್ತಮ ಆಡಳಿತವನ್ನು ಕೊಡುವ ನೆಪದಲ್ಲಿ ಮುಂಚೂಣೆಗೆ ಬರುತ್ತಿವೆ. ಅದರೆ ಮೊದಲ ಹಂತದ ರಾಜ್ಯಗಳ ಪುನರ್ರಚನೆಯು ಭಾಷೆಗಳನ್ನೇ ಆಧಾರವಾಗಿಟ್ಟುಕೊಂಡು ನಡೆದಿತ್ತು ಎಂಬುದು ಗಮನಾರ್ಹ.

ಆದರೆ ವೈರುಧ್ಯವೇನಂದರೆ, ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ಬಿಹಾರ ಪ್ರದೇಶಗಳಲ್ಲಿ ನೆಲೆಗೊಂಡಿದ್ದ ಬೇರೆ ಬೇರೆ ಒಳನುಡಿಗಳು ತಮ್ಮದೆಯಾದ ತಾಯ್ನೆಲವನ್ನು ಹೊಂದುವ ಇರಾದೆಯನ್ನೂ ತಾಳಿದ್ದವು. ಬುಂದೆಲ್ಖಂಡ, ರುಹೆಲ್ಖಂಡ ಹಾಗೂ ಮಿಥಿಲಾಂಚಲ್ ಪ್ರದೇಶಗಳು ತಮ್ಮ ಒಳನುಡಿಗಳಲ್ಲಿ ಹುದುಗಿರುವ ಸಂಸ್ಕ್ರುತಿ ಹಾಗೂ ಸಾಹಿತ್ಯದ ವೈಶಿಷ್ಟ್ಯ ಮತ್ತು ಶ್ರೀಮಂತಿಕೆಯನ್ನು ಕಂಡರಿಸುವ ಹಂಬಲವೂ ಇಂತಹ ಇರಾದೆಗಳಲ್ಲಿ ಅಡಕವಾಗಿದ್ದವು. ಕಳೆದ ದಶಕದಲ್ಲಿ ಅಂದರೆ ನವೆಂಬರ್ 2000ನೇ ಇಸ್ವಿಯಲ್ಲಿ ಮಧ್ಯಪ್ರದೇಶ, ಉತ್ತರಪ್ರದೇಶ ಹಾಗೂ ಬಿಹಾರ ರಾಜ್ಯಗಳಿಂದ ಛತ್ತೀಸ್ಘಡ್, ಉತ್ತರಾಂಚಲ್ ಹಾಗೂ ಜಾರ್ಖಂಡ್ ಎಂಬ ಹೊಸ ರಾಜ್ಯಗಳು ಅಸ್ತಿತ್ವಕ್ಕೆ ಬಂದವು.

ಈ ಮೂರು ರಾಜ್ಯಗಳು ಮೈದಾಳಲು ಕಾರಣ, ಫೆಡರಲ್ ಚಿಂತನೆಯಲ್ಲಿ ಏರ್ಪಟ್ಟ ಸಾಂಸ್ಕ್ರುತಿಕ-ರಾಜಕೀಯ ಪಲ್ಲಟಗಳೇ ಎಂದು ಹೇಳಬೇಕು. ಈ ಹೊಸ ರಾಜ್ಯಗಳ ಪುನರ್ರಚನೆಗೆ ಎಲ್ಲ ರಾಜಕೀಯ ಪಕ್ಷಗಳು ಬೆಂಬಲಿಸಿರುವುದನ್ನು ಮುಖ್ಯವಾಗಿ ಇಲ್ಲಿ ನೋಡಬಹುದು. ರಾಷ್ಟ್ರೀಯ ಪಕ್ಷಗಳ ಏಕಮುಖಿ ನಿಲುವುಗಳಿಂದ ಹಾಗೂ ತೀವ್ರವಾಗಿ ಬೆಳೆಯುತ್ತಿರುವ ರಾಜಕೀಯ ಸ್ಪರ್ಧಾತ್ಮಕ ವಾತಾವರಣದಿಂದ ತಪ್ಪಿಸಿಕೊಳ್ಳುವ ತಂತ್ರಗಳನ್ನೂ ಇಲ್ಲಿ ಕಾಣಬಹುದು. ಅಂದರೆ ಯಾವುದೇ ಒಂದು ರಾಷ್ಟ್ರೀಯ ಪಕ್ಷವು ಕೇಂದ್ರದಲ್ಲಿ ಅಧಿಕಾರವನ್ನು ಪಡೆಯುವುದರಿಂದ, ಪ್ರಾದೇಶಿಕ ಕಾಳಜಿಗಳನ್ನು ಈ ರಾಷ್ಟ್ರೀಯ ಪಕ್ಷಗಳು ಹೊಂದಿರಲಾರವು ಎಂಬ ಅನುಮಾನವೂ ಇಲ್ಲಿದೆ.

2009 ಡಿಸೆಂಬರ್‍ನಲ್ಲಿ ಪ್ರತ್ಯೇಕ ತೆಲೆಂಗಾಣ ರಾಜ್ಯದ ಹೊಸ ಬೇಡಿಕೆಯು ತೀವ್ರ ಸ್ವರೂಪವನ್ನು ಪಡೆದುಕೊಂಡಾಗ, ಕೇಂದ್ರ ಸರಕಾರವು ಈ ಬೇಡಿಕೆಯನ್ನು ಪರಿಗಣಿಸುವಾಗ, ಇನ್ನೂ ಹಲವಾರು ಹೊಸ ಮತ್ತು ಹಳೆ ಬೇಡಿಕೆಗಳು ಮುಂಚೂಣೆಗೆ ಬಂದವು. ಉದಾ.ಗೆ ಕರ್ನಾಟಕದಲ್ಲಿ ಕೂರ್ಗ್, ಬಿಹಾರದಲ್ಲಿ ಮಿಥಿಲಾಂಚಲ್, ಗುಜರಾತಿನಲ್ಲಿ ಸೌರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿ ಗೋರ್ಖಲ್ಯಾಂಡ್ ಹಾಗೂ ಕಾಮ್ಟಪೂರ್ ಮತ್ತು ಮಹಾರಾಷ್ಟ್ರದಲ್ಲಿ ವಿದರ್ಭ ಮೊದಲಾದ ಪ್ರದೇಶಗಳು ಪ್ರತ್ಯೇಕ ರಾಜ್ಯಗಳ ಬೇಡಿಕೆಗಳನ್ನು ಮುಂದಿಟ್ಟಿರುವುದು ಈಗ ಇತಿಹಾಸ. ತಮ್ಮ ತಾಯ್ನೆಲದಿಂದ ಪ್ರತ್ಯೇಕತೆಯನ್ನು ಬಯಸುವುದರ ಹಿಂದೆ ಕೇವಲ ಭಾಷಿಕ ಕಟ್ಟಾಭಿಮಾನ ಮಾತ್ರ ಇರಲಾರದು ಎಂಬುದು ಇಲ್ಲಿ ಅತ್ಯಂತ ನಿಚ್ಚಳವಾಗಿದೆ.

ಭಾರತವನ್ನು ಜಗತ್ತಿನ ಅತ್ಯಂತ ದೊಡ್ಡ ಪ್ರಜಾಸತ್ತಾತ್ಮಕ ರಾಷ್ಟ್ರವೆಂದು ಈಗಾಗಲೇ ಪರಿಗಣಿಸಿದ್ದರೂ, ಆಳವಾಗಿ ವಿಶ್ಲೇಷಿಸಿ ನೋಡಿದಾಗ ಈ ನೆಲೆ ಇನ್ನೂ ಭ್ರೂಣಾವಸ್ಥೆಯಲ್ಲಿಯೇ ಇರುವುದನ್ನು ನಾವು ಯಾರಾದರೂ ಮನಗಾಣುತ್ತೇವೆ. ಪ್ರಜಾಸತ್ತಾತ್ಮಕ ಅರಿವು ಮತ್ತು ಕ್ರಿಯೆಗಳು ಇನ್ನೂ ಪಕ್ವಗೊಳ್ಳುವ ಜರೂರಿದೆ. ಭಾಷೆಗಳ ಬಗೆಗೆ ಭಾರತವು ತಾಳಿರುವ ನಿಲುವುಗಳೇ ಇದಕ್ಕೆ ಸ್ಪಷ್ಟ ನಿದರ್ಶನ.

ಹಾಗಾಗಿ ಭಾರತದ ಇವತ್ತಿನ ಭಾಷಿಕ ಸನ್ನಿವೇಶವನ್ನು ಅರಿಯಲು, ಅಂಬೇಡ್ಕರ್ ಅವರ ಭಾಷಿಕ ಚಿಂತನೆಗಳನ್ನು ಮರುಪರಿಶೀಲಿಸುವುದು ಅತ್ಯಂತ ಅಗತ್ಯವಾಗಿದೆ. ಭಾರತದ ಭಾಷಾ ನೀತಿಗಳು ಹಲವು ಬಗೆಯ ಬದಲಾವಣೆಗೆ ಒಳಪಟ್ಟಿವೆ. ಭಾಷಾವಾರು ಪ್ರಾಂತಗಳ ಪುನರ್ರಚನೆಯೇ ಇದಕ್ಕೆ ಅತ್ಯಂತ ಮಹತ್ವದ ಸಾಕ್ಷಿಯಾಗಿದೆ. ಭಾರತವು ಒಂದು ಅಪ್ಪಟ ಬಹುಭಾಷಿಕ ದೇಶವಾಗಿದೆ. ಈ ದಿಟ ಬಹುಭಾಷಿಕತೆಯನ್ನು ಅರಿಯಲು ಸಾಕಷ್ಟು ಚಿಂತಕರು ತಮ್ಮ ಚಿಂತನೆಗಳನ್ನು ಬೆಳೆಸಿದ್ದಾರೆ.

ಇಂತಹ ಪ್ರಖ್ಯಾತ ಚಿಂತಕರು ಮತ್ತು ನೀತಿ ನಿರೂಪಕರನ್ನು ಬದಿಗಿಟ್ಟು, ಹೊಸ ಬಗೆಯ ಬಹುಭಾಷಿಕತೆಗೆ ಸಂಬಂಧಿಸಿದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಏಕೆಂದರೆ ಭಾಷಾವಾರು ಪ್ರಾಂತಗಳ ಪುನರ್ರಚನೆಯ ಬಗೆಗೆ ಈ ಚಿಂತಕರ ನಿಲುವುಗಳು ಅತ್ಯಂತ ವ್ಯತರಿಕ್ತವಾಗಿದ್ದವು.
ಅಂಬೇಡ್ಕರ್ ಅವರು ಭಾಷಾವಾರು ರಾಜ್ಯಗಳ ರಚನೆಯ ಮುಖ್ಯ ಪ್ರತಿಪಾದಕರು. ಆದರೆ ಈ ಭಾಷಾವಾರು ರಾಜ್ಯಗಳು ತಮ್ಮ ತಮ್ಮ ರಾಜ್ಯ ಭಾಷೆಗಳಿಗೆ (ಉದಾ.ಗೆ ಕರ್ನಾಟಕದಲ್ಲಿ ಕನ್ನಡ, ತಮಿಳುನಾಡಿನಲ್ಲಿ ತಮಿಳು ಮತ್ತು ಆಂದ್ರಪ್ರದೇಶ ಹಾಗೂ ತೆಲಾಂಗಣದಲ್ಲಿ ತೆಲುಗು ಇತ್ಯಾದಿ…) ಬದಲಾಗಿ ಹಿಂದಿಯನ್ನು ಆಡಳಿತ ಭಾಷೆಯನ್ನಾಗಿ ಬಳಸಬೇಕು ಎಂಬ ನಿಲುವನ್ನು ಹೊಂದಿದ್ದರು.

ಭಾರತವು ಮಧ್ಯಕಾಲೀನ ಭಾರತದ ಮರುರೂಪವನ್ನು ಪಡೆಯುವ ಅಪಾಯದಿಂದ ತಪ್ಪಿಸಲು, ಅಂಬೇಡ್ಕರ್ ಅವರು ಈ ನಿಲುವನ್ನು ತಾಳುತ್ತಾರೆ. ಏಕೆಂದರೆ, “ನಮ್ಮ ಭಾರತ ಆಧುನಿಕ ಭಾರತವಾಗಿ ಉಳಿಯದೇ ಪರಸ್ಪರ ವೈರತ್ವ ಮತ್ತು ಯುದ್ಧಗಳಲ್ಲಿ ಮುಳುಗಿರುವ ಅನೇಕ ದೇಶಗಳನ್ನೊಳಗೊಂಡ ಮಧ್ಯಕಾಲೀನ ಭಾರತವಾಗಿ ಅದು ಪರಿಣಮಿಸುತ್ತದೆ”. ಎಂಬ ಅಭಿಪ್ರಾಯ ಅವರದಾಗಿತ್ತು. ಮತ್ತು ಈ ಅಭಿಪ್ರಾಯವು ಇವತ್ತು ನಾವು ಭಾಷಿಕವಾಗಿ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ವಿಶ್ಲೇಷಿಸಿ ನೋಡುವಂತೆ ನಮ್ಮನ್ನು ಒತ್ತಾಯಿಸುತ್ತದೆ.

ಹೌದು, ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿಯೇ ರಚನೆಗೊಂಡ ಭಾರತದ ಸಂವಿಧಾನವು, ಅವರೇ ಊಹಿಸಿದ ಆತಂಕವನ್ನೂ ಲೆಕ್ಕಿಸದೇ ಇವತ್ತು ಸಂವಿಧಾನವು ಆಯಾ ರಾಜ್ಯಗಳ ಭಾಷೆಯನ್ನೇ ಅಧಿಕ್ರುತ ಆಡಳಿತ ಭಾಷೆಯನ್ನಾಗಿ ಬಳಸುವ ಅವಕಾಶವನ್ನು ನಮಗೆ ಒದಗಿಸಿದೆ.

ಭಾಷಾವಾರು ರಾಜ್ಯಗಳನ್ನು ರಚಿಸುವ ಪ್ರಕ್ರಿಯೆಯಲ್ಲಿಯೇ ಅಪಾಯಗಳು ಅಡಗಿರುತ್ತವೆ ಎಂಬ ಈ ವಿಚಾರವು ಎಷ್ಟೊಂದು ಸುಸ್ಪಷ್ಟವಾದುದೋ, ನಾವು ಭಾಷಾವಾರು ರಾಜ್ಯಗಳನ್ನು ರಚಿಸದಿದ್ದರೂ ಅದಕ್ಕಿಂತ ಹೆಚ್ಚಿನ ಅಪಾಯಕ್ಕೆ ಈಡಾಗುತ್ತೇವೆ ಎಂಬುದು ಕೂಡ ಅಷ್ಟೇ ನಿಖರವಾದ ನಿಲುವಾಗಿದೆ. ಈ ವಿಶ್ಲೇಷಣೆಗಳನ್ನು ಅಂಬೇಡ್ಕರ್ ಅವರು ತಮ್ಮ ಭಾಷಾವಾರು ರಾಜ್ಯಗಳನ್ನು ಕುರಿತ ಚಿಂತನೆಗಳು (1955) ಅನ್ನುವ ಬರಹದಲ್ಲಿ ಮಂಡಿಸುತ್ತಾರೆ.

ಭಾಷಾವಾರು ಪ್ರಾಂತಗಳ ಪುನರ್ರಚನೆಯಿಂದ ಏರ್ಪಡುವ ಪರಿಣಾಮಗಳನ್ನು ಒಂದಿಲ್ಲ ರೀತಿಯಲ್ಲಿ ನಿಭಾಯಿಸಲು ಸಾಧ್ಯವಾಗಬಹುದು. ಆದರೆ ಈ ಭಾಷಾವಾರು ಪ್ರಾಂತಗಳನ್ನು ರಚಿಸದ ಕಾರಣ ಎದುರಾಗುವ ಬಿಕ್ಕಟ್ಟುಗಳನ್ನು ನಿರ್ವವಹಿಸುವುದು ಅತ್ಯಂತ ದುಸ್ತರ ಎಂಬ ಅಭಿಪ್ರಾಯವನ್ನೂ ಇವರು ವ್ಯಕ್ತಪಡಿಸುತ್ತಾರೆ. ಇನ್ನೂ ಮುಂದುವರೆದು ಅಂಬೇಡ್ಕರ್ ಅವರು ಹೇಳುವುದೇನೆಂದರೆ, “ವಿವೇಕಶೀಲನೂ ದ್ರುಢ ಮನೋಭಾವದವನೂ ಅದ ಯಾವುದೇ ಮುತ್ಸದ್ದಿ ರಾಜಕಾರಣಿ (ಸ್ಟೇಟ್ಸ್‍ಮನ್)ಯು ಭಾಷಾವಾರು ಪ್ರಾಂತಗಳ ಪುನರ್ರಚನೆಯಿಂದ ಉಂಟಾಗುವ ಅಪಾಯಗಳನ್ನು ತಪ್ಪಿಸಬಲ್ಲನು.

ಆದರೆ ಈ ಭಾಷಾವಾರು ವಿಂಗಡಣೆಗೆ ಒಳಗಾಗದ ಸಂಕೀರ್ಣ ಭಾರತದಲ್ಲಿ ತಲೆದೊರುವ ಅಪಾಯಗಳು, ಎಷ್ಟೇ ಮುತ್ಸದ್ದಿ ರಜಕಾರಣಿಯಾಗಿದ್ದರೂ ಅವನ ನಿಯಂತ್ರಕ್ಕೆ ಈ ಅಪಾಯಗಳು ಸಿಗಲಾರವು” ಎಂಬ ಕಟು ಸತ್ಯವನ್ನು ಅಂಬೇಡ್ಕರ್ ಅವರು ನಮಗೆ ಇಲ್ಲಿ ಮನವರಿಕೆ ಮಾಡುತ್ತಾರೆ. ನಮ್ಮ ಗ್ರಹಿಕೆಗೆ ಹೊರತಾದ ಬಿಕ್ಕಟ್ಟುಗಳು ಸಂಕೀರ್ಣ ಬಹುಭಾಷಿಕ ಸನ್ನಿವೇಶದಲ್ಲಿ (ಮಧ್ಯಕಾಲೀನ ಭಾರತ) ಹುದುಗಿರುತ್ತವೆ ಎಂಬ ಕಟು ವಾಸ್ತವವನ್ನು ಅರಿಯುವುದರ ಜೊತೆಗೆ, ಪ್ರಜಾಪ್ರಭುತ್ವ (ಬಹುಭಾಷಿಕ) ಭಾರತದಲ್ಲಿ ಎದುರಾಗುವ ಭಾಷಿಕ ಬಿಕ್ಕಟ್ಟುಗಳನ್ನು ನಿರ್ವಹಿಸುವ ಕಾರ್ಯಯೋಜನೆಗಳನ್ನು ನೆಲೆಗೊಳಿಸುವ ಅಗತ್ಯವಿದೆ ಎಂಬ ಅನಿವಾರ್ಯತೆಯನ್ನೂ ಮನಗಾಣುತ್ತೇವೆ.

‘ಯಾವುದೇ ಭಾಷಾವಾರು ರಾಜ್ಯ ತನ್ನ ಪ್ರಾದೇಶಿಕ ಭಾಷೆಯನ್ನು ಅಧಿಕ್ರುತ ರಾಜ್ಯ ಭಾಷೆಯನ್ನಾಗಿ ಹೊಂದುವ ಮೂಲಕ ಸ್ವತಂತ್ರ ರಾಷ್ಟ್ರವಾಗಿ ಬೆಳೆಯಬಹುದು. ಸ್ವತಂತ್ರ ರಾಜ್ಯ ಮತ್ತು ಸ್ವತಂತ್ರ ರಾಷ್ಟ್ರಗಳ ನಡುವಣ ದಾರಿ ಅತ್ಯಂತ ಕಿರಿದಾದುದು. ಒಂದು ವೇಳೆ ಹೀಗಾದರೆ, ನಮ್ಮ ಭಾರತವು ಆಧುನಿಕ ಭಾರತವಾಗಿ ಉಳಿಯದೇ, ಹಲವು ದೇಶಗಳನ್ನೊಳಗೊಂಡು ನಿರಂತರವಾಗಿ ಪರಸ್ಪರ ವೈರತ್ವ ಮತ್ತು ಯುದ್ಧದಲ್ಲಿ ಮುಳುಗಿರುವ ಮಧ್ಯಕಾಲೀನ ಭಾರತವಾಗಿ ಮೈದಾಳುತ್ತದೆ’.

ಭಾಷಾವಾರು ಪ್ರಾಂತಗಳ ಪುನರ್ರಚನೆಯ ಸಾಧಕ ಮತ್ತು ಬಾಧಕಗಳನ್ನು ಪರಿಶೀಲಿಸುವ ದಾರಿಗಳನ್ನು ಅಂಬೇಡ್ಕರ್ ಅವರು ಅತ್ಯಂತ ಖಚಿತವಾಗಿ ಇಲ್ಲಿ ತೋರಿಸಿರುತ್ತಾರೆ. ಭಾಷಾವಾರು ಪ್ರಾಂತಗಳ ಪುನರ್ರಚನೆಯನ್ನು ಕೇವಲ ಭಾವನಾತ್ಮಕ ವಿದ್ಯಮಾನವನ್ನಾಗಿ ಪರಿಗಣಿಸದೇ ಅದನ್ನೊಂದು ವೈಜ್ಞಾನಿಕ ಮತ್ತು ತಾತ್ವಿಕ ನಿಲುವನ್ನಾಗಿ ನೋಡಿದರೆ, ಅಂಬೇಡ್ಕರ್ ಈ ಕುರಿತು ಏನನ್ನು ಸೂಚಿಸುತ್ತಿದ್ದಾರೆ, ಯಾಕೇ ಇವರ ವಿಶ್ಲೇಷಣೆಗಳು ನಮಗೆ ಇವತ್ತು ವ್ಯತರಿಕ್ತವಾಗಿ ಕಾಣುತ್ತವೆ ಎಂಬುದನ್ನು ಅರಿಯುವುದಕ್ಕೆ ಸಾಧ್ಯವಾಗುತ್ತದೆ. ಭಾಷಾವಾರು ಪ್ರಾಂತಗಳ ಪುನರ್ರಚನೆಯ ಪ್ರಕ್ರಿಯೆಯಲ್ಲಿ ಅಪಾಯಗಳು ಇರುವಂತೆ, ಭಾಷಾವಾರು ಪ್ರಾಂತಗಳನ್ನು ಪುನರ್ರಚಿಸದೇ ಹೋದರು ಅಪಾಯಗಳು ಹೇಗೆ ಅಡಕವಾಗಿರುತ್ತವೆ ಎಂಬ ವೈಜ್ಞಾನಿಕ ದಿಟವನ್ನು ಇಲ್ಲಿ ಮನಗಾಣುತ್ತೇವೆ.

ಹಾಗಾದರೆ ಅಂಬೇಡ್ಕರ್ ಅವರು ಏನನ್ನು ಹೇಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂಬ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ಇವರ ವಿಶ್ಲೇಷಣೆಗಳು ಅತ್ಯಂತ ನಿಚ್ಚಳವಾಗಿರುತ್ತವೆ. ಅಂದರೆ ಬಹುಭಾಷಿಕ ಸನ್ನಿವೇಶವನ್ನು ನಿಭಾಯಿಸುವ ದಾರಿಗಳನ್ನು ತೋರಿಸುವ ಜೊತೆಗೆ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ವಿನ್ಯಾಸಗಳನ್ನು ಮರುರೂಪಿಸಿಕೊಳ್ಳುವ ಬಗೆಗಳನ್ನೂ ಇಲ್ಲಿ ಕಂಡರಿಸುತ್ತಾರೆ. ಹಾಗಾಗಿ ಮಧ್ಯಕಾಲೀನ ಭಾರತದ ಸಂದರ್ಭಕ್ಕೆ ಈಡಾಗುವ ಅಪಾಯವನ್ನು ತಪ್ಪಿಸುವ ತಂತ್ರಗಳನ್ನು ಅಂಬೇಡ್ಕರ್ ಚಿಂತನೆಗಳಲ್ಲಿ ಕಾಣುತ್ತೇವೆ.

ಹಾಗಾಗಿ ಪುನರ್ರಚಿತ ರಾಜ್ಯಗಳಲ್ಲಿ ಎದುರಾಗುವ ಭಾಷಿಕ ಅಪಾಯಗಳಿಂದ ತಪ್ಪಿಸಲು, ಆಯಾ ರಾಜ್ಯದ ಪ್ರಾದೇಶಿಕ ಭಾಷೆಯನ್ನೇ ಅಧಿಕ್ರುತ ಆಡಳಿತ ಭಾಷೆಯನ್ನಾಗಿ ಬಳಸುವ ಬದಲಾಗಿ ಹಿಂದಿ ಇಲ್ಲವೇ ಇಂಗ್ಲಿಶು ಭಾಷೆಗಳನ್ನು ಬಳಸುವ ಪ್ರಸ್ತಾವನೆಯನ್ನು ಅಂಬೇಡ್ಕರ್ ಮಂಡಿಸುತ್ತಾರೆ. ಅಂದರೆ, “ಈ ಅಪಾಯಗಳನ್ನು ಬಗೆಹರಿಸುವುದು ಹೇಗೆ? ಇಂತಹ ಅಪಾಯಗಳನ್ನು ಬಗೆಹರಿಸಲು ಈ ಸದ್ಯ ನನಗೆ ಅನ್ನಿಸುವ ಏಕೈಕ ಉಪಾಯವೇನೆಂದರೆ, ಆಯಾ ರಾಜ್ಯದ ಪ್ರಾದೇಶಿಕ ಭಾಷೆಯನ್ನು ಅಧಿಕ್ರುತ ಆಡಳಿತ ಭಾಷೆಯನ್ನಾಗಿ ಬಳಸುವ ಅವಕಾಶವನ್ನು ಸಂವಿಧಾನದಲ್ಲಿಯೇ ಒದಗಿಸಕೂಡದು.

ರಾಜ್ಯದ ಅಧಿಕ್ರುತ ಭಾಷೆಯನ್ನಾಗಿ ಹಿಂದಿಯನ್ನು ಬಳಸಬೇಕು. ಭಾರತವು ಈ ನಿಲುವಿಗೆ ಹೊಂದಿಕೊಳ್ಳುವರಿಗೆ ಇಂಗ್ಲಿಶನ್ನು ಈ ಉದ್ದೇಶಕ್ಕಾಗಿ ಬಳಸಬೇಕು. ಭಾರತೀಯರು ಈ ಪ್ರಸ್ತಾವನೆಯನ್ನು ಒಪ್ಪಿಕೊಳ್ಳುವವರೇ? ಒಂದುಪಕ್ಷ ಇಲ್ಲವಾದಲ್ಲಿ, ಭಾಷಾವಾರು ರಾಜ್ಯಗಳು ಸಹಜವಾಗಿಯೇ ಅಪಾಯಕ್ಕೆ ಈಡಾಗುತ್ತವೆ”. ಹಾಗಾದರೆ ಅಂಬೇಡ್ಕರ್ ಅವರ ಈ ಮಾತುಗಳು ಏನನ್ನು ಸಾಬೀತಪಡಿಸುತ್ತವೆ ಎಂಬ ಅನುಮಾನವು ನಮ್ಮಲ್ಲಿ ಉಂಟಾಗದೇ ಇರಲಾರದು. ಸಮಾನತೆ, ಸ್ವಾತಂತ್ರ ಮತ್ತು ಬಾಂಧವ್ಯ ಎಂಬೀ ತ್ರಿವಳಿ ತತ್ವಗಳನ್ನು ಮಂಡಿಸುವ ಅಂಬೇಡ್ಕರ್ ಹಾಗೂ ಹಿಂದಿಯನ್ನು ರಾಜ್ಯದ ಅಧಿಕ್ರುತ ಭಾಷೆಯನ್ನಾಗಿ ಪ್ರಸ್ತಾಪಿಸುವ ಅಂಬೇಡ್ಕರ್ ಅವರ ನಿಲುವುಗಳ ನಡುವೇ ಯಾವುದೇ ಹೊಂದಾಣಿಕೆ ಕಾಣಿಸುತ್ತಿಲ್ಲ. ಇಲ್ಲಿ ಕೇವಲ ಏರುಪೇರುಗಳು ಇಲ್ಲವೇ ವಿರೋಧಭಾಸಗಳು ಇರುವಂತೆ ಭಾಸವಾಗುತ್ತದೆ.

ಮೂಲಭೂತ ಹಕ್ಕುಗಳು (ಫಂಡಾಮೆಂಟಲ್ ರೈಟ್ಸ್) ಮತ್ತು ರಾಜ್ಯ ನಿರ್ದೇಶಕ ತತ್ವಗಳ (ಸ್ಟೇಟ್ ಡಿರೆಕ್ಟಿವ್ ಪ್ರಿನ್ಸಿಪಲ್ಸ್) ನಡುವೆ ತಾತ್ವಿಕ ಹಾಗೂ ಪ್ರ್ಯಾಗ್ಮಾಟಿಕ್ (ಪ್ರಯೋಜನಕಾರಿ ತತ್ವ) ನಂಟನ್ನು ಕಲ್ಪಿಸಿರುವ ಅಂಬೇಡ್ಕರ್ ಅವರಿಗೆ, ಹಿಂದಿಯನ್ನು ಅಧಿಕ್ರುತ ರಾಜ್ಯ ಭಾಷೆಯನ್ನಾಗಿ ಒಪ್ಪಿಕೊಂಡರೆ ಏನೆಲ್ಲ ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಶೈಕ್ಷಣಿಕ ಬಿಕ್ಕಟ್ಟುಗಳು ಎದುರಾಗುತ್ತವೆ ಎಂಬ ವಾಸ್ತವ ಗೊತ್ತಿರಲಿಲ್ಲವೇ? ದಿಟ, ಆಯಾ ರಾಜ್ಯದ ಪ್ರಾದೇಶಿಕ ಭಾಷೆಯನ್ನೇ ಅಧಿಕ್ರುತ ರಾಜ್ಯ ಭಾಷೆಯನ್ನಾಗಿ ಒಪ್ಪಿಕೊಂಡಿದ್ದರಿಂದ, ಯಾವುದೇ ವ್ಯತ್ಯಾಸವನ್ನು ನಾವು ಇವತ್ತು ಕಾಣುತ್ತಿಲ್ಲ. ಅಂದರೆ ಕಲ್ಯಾಣ ರಾಜ್ಯಗಳನ್ನು ಕಟ್ಟುವುದಕ್ಕೆ ಸಾಧ್ಯವಾಗಿದೆ ಎಂದು ಹೇಳಲಾರೆ.

ಹಾಗಾದರೆ, ಅಂಬೇಡ್ಕರ್ ಅವರ ನಿಲುವುಗಳನ್ನು ಹೇಗೆ ವಿಶ್ಲೇಷಿಸಬೇಕು? ಯಾವ ತಾತ್ವಿಕ ವಿನ್ಯಾಸವನ್ನು ನೆಲೆಯಾಗಿಸಿಕೊಂಡು ಇವರ ಈ ನಿಲುವನ್ನು ಬಿಡಿಸಿ ನೋಡಬೇಕು? ಹಿಂದು ಧರ್ಮ ಮತ್ತು ಶಾಸ್ತ್ರಗಳಲ್ಲಿ ಹುದುಗಿರುವ ಜೀವವಿರೋಧಿ ಧೋರಣೆಗಳ ವಿರುದ್ಧ ತಮ್ಮ ಬದುಕಿನ ಉದ್ದಕ್ಕೂ ಹೋರಾಡಿದ ಅಂಬೇಡ್ಕರ್ ಅವರಿಗೆ, ಹಿಂದಿಯನ್ನು ಅಧಿಕ್ರುತ ರಾಜ್ಯ ಭಾಷೆಯನ್ನಾಗಿ ಒಪ್ಪಿಕೊಳ್ಳುವುದರಿಂದ, ಏನೆಲ್ಲ ಸಾಮಾಜಿಕ ಭಾಷಾಶಾಸ್ತ್ರೀಯ ಅಪಾಯಗಳು (ಸೋಶಿಯೋಲಿಂಗ್ವಿಸ್ಟಿಕ್ ಥ್ರೆಟ್ಸ್) ಎದುರಾಗುತ್ತವೆ ಎಂಬ ಕಟು ವಾಸ್ತವ ಅಂಬೇಡ್ಕರ್ ಅವರಿಗೆ ಗೋಚರಿಸಲಿಲ್ಲವೇ? ನಿಶ್ಚಿತವಾಗಿಯೂ ನಾನು ಇಲ್ಲವೆಂದು ಹೇಳಲಾರೆ. ಅಂಬೇಡ್ಕರ್ ಅವರ ಕಣ್ನೋಟದಲ್ಲಿ ಅಧಿಕ್ರುತ ರಾಜ್ಯ ಭಾಷೆಯೆಂಬುದು ಅದೊಂದು ಸಂವಿಧಾನಾತ್ಮಕ ಕಾಯಿದೆ.

ಕಾಯಿದೆಯ ಕಣ್ಣಲ್ಲಿ ಎಲ್ಲರೂ ಸಮಾನರೇ ಹಾಗಾಗಿ ಅಧಿಕ್ರುತ ರಾಜ್ಯ ಭಾಷೆಯನ್ನು ಸಂವಿಧಾನದ ಚೌಕಟ್ಟಿನಲ್ಲಿ ಅಡಕಗೊಳಿಸಿದರೆ ಮಾತ್ರ ಸಾಲದು. ಬದಲಾಗಿ ಅದನ್ನೊಂದು ಸಾಮಾಜಿಕ ತತ್ವಶಾಸ್ತ್ರೀಯ ಚೌಕಟ್ಟನ್ನಾಗಿ ಗ್ರಹಿಸಬೇಕು. ಆದ್ದರಿಂದ ಅಂಬೇಡ್ಕರ್ ಅವರು ಸಮಾನತೆ, ಸ್ವಾತಂತ್ರ್ಯ ಮತ್ತು ಬಾಂಧವ್ಯವನ್ನು ಸಾಮಾಜಿಕ ತತ್ವಶಾಸ್ತ್ರೀಯ ವಿನ್ಯಾಸಗಳನ್ನಾಗಿ ಮಂಡಿಸಿದರು. ಜೊತೆಗೆ ರಾಜಕೀಯ ಮತ್ತು ಸಾಮಾಜಿಕ ಸ್ವಾತಂತ್ರ್ಯಗಳ ನಡುವಣ ನಂಟಸ್ತಿಕೆ ಹೇಗಿರಬೇಕು ಮತ್ತು ಅಂತಹದೊಂದು ನಂಟಸ್ತಿಕೆಯನ್ನು ತರುವ ಮೂಲಕ ಮಾತ್ರ ಸಮಾನ ಸಮಾಜಗಳನ್ನು ಕಟ್ಟುವುದಕ್ಕೆ ಸಾಧ್ಯವೆಂಬ ತತ್ವವನ್ನು ಅತ್ಯಂತ ಖಚಿತವಾಗಿ ಮಂಡಿಸಿರುವುದಕ್ಕೂ ಇವರ ಈ ನಿಲುವೇ ಕಾರಣವಾಗಿದೆ.

ಹೌದು ಈ ಎಲ್ಲ ಚರ್ಚೆಗಳು ಹಾಗೂ ಅಂಬೇಡ್ಕರ್ ಅವರು ಮಂಡಿಸಿದ ಪ್ರಸ್ತಾವನೆಯನ್ನೂ ಮೀರಿ ಇವತ್ತು ಭಾರತದ ರಾಜ್ಯಗಳು ತಮ್ಮ ಪ್ರಾದೇಶಿಕ ಭಾಷೆಗಳನ್ನೇ ಅಧಿಕ್ರುತ ಭಾಷೆಗಳನ್ನಾಗಿ ಬಳಸುತ್ತಿವೆ. ಅಂದರೆ ಕರ್ನಾಟಕದಲ್ಲಿ ಕನ್ನಡ, ಆಂದ್ರಪ್ರದೇಶ ಮತ್ತು ತೆಲಾಂಗಣದಲ್ಲಿ ತೆಲುಗು ಹಾಗೂ ತಮಿಳುನಾಡಿನಲ್ಲಿ ತಮಿಳು ಭಾಷೆಗಳನ್ನು ತಮ್ಮ ಅಧಿಕ್ರುತ ರಾಜ್ಯ ಭಾಷೆಗಳನ್ನಾಗಿ ಅನುಷ್ಠಾನಗೊಳಿಸಲಾಗಿದೆ. ಆದರೆ ಈ ಯಾವ ರಾಜ್ಯಗಳಲ್ಲಿಯೂ ಕೂಡ ಇವತ್ತು ರಾಷ್ಟ್ರೀಯ ಅಪಐಕ್ಯತೆಯನ್ನಾಗಲೀ ಇಲ್ಲವೇ ಮಧ್ಯಕಾಲೀನ ಪರಿಸ್ಥಿತಿಯನ್ನು ಉಂಟು ಮಾಡುವ ಯಾವುದೇ ಅಪಾಯಗಳು ನಮಗೆ ಗೋಚರಿಸುತ್ತಿಲ್ಲ ಎಂಬ ವಾದಗಳೂ ಇವತ್ತು ಮುಂಚೂಣೆಯಲ್ಲಿವೆ.

ಹೌದು ರಾಜಕೀಯವಾಗಿ ಮಾತ್ನಾಡುವಾಗ ಈ ವಾದವು ಸರಿಯಾಗಿಯೇ ಕಾಣುತ್ತದೆ. ಆದರೆ ಸಾಮಾಜಿಕ-ಆರ್ಥಿಕ ಸನ್ನಿವೇಶದಲ್ಲಿ ದಿನದಿಂದ ದಿನಕ್ಕೆ ತಲೆದೊರುತ್ತಿರುವ ಅಸಮಾನತೆಯ ಸವಾಲುಗಳನ್ನು ಪರಿಶೀಲಿಸಿ ನೋಡಿದಾಗ, ಅಪಐಕ್ಯತೆಯ ಸ್ವರೂಪ ಮತ್ತು ಮಧ್ಯಕಾಲೀನ ಸಾಮಾಜಿಕ-ರಾಜಕೀಯ ಸನ್ನಿವೇಶದ ವಿನ್ಯಾಸಗಳು ನಿಚ್ಚಳಗೊಳ್ಳುತ್ತವೆ. ಮಧ್ಯಕಾಲೀನ ಸನ್ನಿವೇಶವನ್ನು ಕೇವಲ ಪರಸ್ಪರ ಯುದ್ಧ ಮಾಡುವುದಕ್ಕೆ ಮಾತ್ರ ಸೀಮಿತಗೊಳಿಸುವುದಲ್ಲ. ಇವತ್ತು ನಡೆಯುತ್ತಿರುವ ಧಾರ್ಮಿಕ ಸಾಮಾಜಿಕ ಸಂಘರ್ಷ ಹಾಗೂ ಅಸಹನೆಯ ವಿನ್ಯಾಸಗಳನ್ನು ಗಮನಿಸಿದಾಗ ನಮ್ಮ ಪ್ರಸ್ತುತ ಭಾರತವು ದಿಟವಾಗಿಯೂ ಆಧುನಿಕಗೊಂಡದೆಯೇ ಇಲ್ಲವೇ ಮಧ್ಯಕಾಲೀನ ಭಾರತವಾಗಿಯೇ ಇನ್ನೂ ಉಳದಿದೆ ಎನ್ನುವುದನ್ನು ಪತ್ತೆಹಚ್ಚಿ ನೋಡಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ನೆಲದನಿ

ನುಡಿಯ ಒಡಲು -17 | ದೇಶಿ ನುಡಿಗಳು ಮತ್ತು ಜ್ಞಾನಮೀಮಾಂಸೆಯ ಸವಾಲುಗಳು

Published

on

 • ಡಾ. ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ದೇಶಿ ನುಡಿಗಳು ಎಂದರೇನು? ಎಂಬೀ ಪ್ರಶ್ನೆಯ ಮೂಲಕ ಜ್ಞಾನಮೀಮಾಂಸೆಯ ಸವಾಲುಗಳನ್ನು ಕುರಿತು ಚರ್ಚಿಸಬೇಕಿದೆ. ಈ ಲೋಕದ ಯಾವುದೇ ನುಡಿಯನ್ನು ಕುರಿತು ಯೋಚಿಸುವಾಗಲೂ ನಮಗೆ ಎದುರಾಗುವ ಸವಾಲೇನೆಂದರೆ, ನಾವು ಆಡುವ ನುಡಿಗೂ ನಮ್ಮ ಬದುಕಿನ ಅನುಭವ, ಆಲೋಚನೆ ಹಾಗೂ ನಮಗೆ ಅಗತ್ಯವಾಗಿರುವ ಜ್ಞಾನಶಿಸ್ತುಗಳು ಮೈದಾಳುವ ನುಡಿಗಳು ಬಹುತೇಕವಾಗಿ ಬೇರೆ ಬೇರೆಯಾಗಿರುತ್ತವೆ.

ಈ ಬಿಕ್ಕಟ್ಟುಗಳೇ ಇವತ್ತು ದೇಶಿ ನುಡಿಗಳ ಬಗೆಗೆ ಯೋಚಿಸುವಂತೆ ಮಾಡುತ್ತವೆ. ನುಡಿ ನುಡಿಗಳ ನಡುವಣ ನಂಟಸ್ತಿಕೆ ಅಧಿಕಾರ ಸಂಬಂಧವನ್ನು ರೂಪಿಸುವುದು ಒಂದು ಬಗೆ. ಜ್ಞಾನದ ನುಡಿ ಉದ್ಯೋಗದ ನುಡಿ, ಅನ್ನದ ನುಡಿ, ಶಿಕ್ಷಣ ಮಾಧ್ಯಮ ಮೊದಲಾದ ವಿದ್ಯಮಾನಗಳು ಆಯಾ ನುಡಿಗೆ ತಂದು ಕೊಡುವ ಮಾನ್ಯತೆ ಮತ್ತೊಂದು ಬಗೆಯದು. ಇವೆರಡೂ ಪ್ರಕ್ರಿಯೆಗಳು ಬಹುತೇಕವಾಗಿ ಯಾವುದೇ ಒಂದು ನುಡಿಯನ್ನು ಬಲಪಡಿಸಲು ಒತ್ತಾಸೆಯಾಗುತ್ತವೆ.

ಇವತ್ತಿಗೂ ನುಡಿಯೊಂದು ಸಬಲೀಕರಣಗೊಳ್ಳಲು ಏನೆಲ್ಲ ನುಡಿ ಯೋಜನೆ ಹಾಗೂ ನುಡಿ ನೀತಿಗಳನನ್ನು ಹಮ್ಮಿಕೊಂಡರೂ ಆಯಾ ನುಡಿಗಳ ಕಸುವನ್ನು ಮನ್ನಣೆ ಮಾಡುವ ಬಗೆಗಳಲ್ಲಿ ತಾರತಮ್ಯಗಳು ತಲೆದೊರುತ್ತವೆ. ಅಧಿಕಾರ ನುಡಿಯಾಗುವ ಮತ್ತು ಜ್ಞಾನಮೀಮಾಂಸೆಯ ನುಡಿಯಾಗುವ ಪ್ರಕ್ರಿಯೆಗಳ ಸ್ವರೂಪ ಬೇರೆ ಬೇರೆಯಾದರೂ, ಅವುಗಳ ಮನೋಧರ್ಮ ಮಾತ್ರ ಒಂದೆಯಾಗಿರುತ್ತದೆ. ಕನ್ನಡ ನುಡಿಯನ್ನು ಕುರಿತು ಚಿಂತಿಸುವ ಒಂದೊಂದು ಸನ್ನಿವೇಶವೂ ಸಂಸ್ಕೃತ ಇಲ್ಲವೇ ಇಂಗ್ಲಿಶು ನುಡಿಗಳ ಪ್ರಭಾವ, ಪರಿಣಾಮ ಹಾಗೂ ಯಜಮಾನ್ಯದ ಚೌಕಟ್ಟುಗಳನ್ನು ವಿಶ್ಲೇಷಿಸುವುದಾಗಿದೆ.

ಸಮೂಹಗಳು ತಮ್ಮ ಬದುಕಿನುದ್ದಕ್ಕೂ ನೆಮ್ಮಿಕೊಂಡು ಬಂದಿರುವ ನುಡಿಗಳ ಮೂಲಕ ಜ್ಞಾನ, ಉದ್ಯೋಗ, ಶಿಕ್ಷಣ ಮೊದಲಾದವುಗಳು ಸಿಗದೇ ಹೋದರೆ, ಅಂತಹ ಸಮೂಹಗಳ ಸಾಮಾಜಿಕ, ರಾಜಕೀಯ ಏಳ್ಗೆಯು ಸಾಧ್ಯವಿಲ್ಲ. ಪರನುಡಿಗಳ ಮೂಲಕವೇ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಏನೆಲ್ಲ ಬಿಕ್ಕಟ್ಟುಗಳ ಎದುರಾಗುತ್ತವೆಂದರೆ, ಯಾವ ನುಡಿಯಲ್ಲಿ ತಮ್ಮ ಬದುಕಗಳ ಅನುಭವ ಸಾಂದ್ರಗೊಳ್ಳುತ್ತದೆಯೋ, ಅಂತಹದೊಂದು ನುಡಿಯೇ ನಿಷ್ಪ್ರಯೋಕವಾಗಿ ಕಂಡರೆ, ಬದುಕುಗಳು ಹೇಗೆತಾನೇ ಸಮಕಾಲೀನ ಸನ್ನಿವೇಶದ ಸವಾಲುಗಳನ್ನು ಈಡೇರಿಸಿಕೊಳ್ಳಲು ಸಾಧ್ಯ? ದಿಟ, ಜ್ಞಾನದ ವಿನ್ಯಾಸಗಳು, ಅನುಭವದ ಬೇರೆ ಬೇರೆ ಮಾದರಿಗಳು ಎಲ್ಲ ನುಡಿಗಳಲ್ಲಿಯೂ ಅಡಕವಾಗಿರುತ್ತವೆ.

ಈ ಮಾತು ಗ್ರೀಕ್, ಸಂಸ್ಕ್ರುತ ಮೊದಲಾದ ನುಡಿಗಳಿಗೂ ಅನ್ವಯವಾಗುತ್ತದೆ. ಯಾವುದೇ ಒಂದು ಕಾಲದಲ್ಲಿ ಜನಬದುಕಿನ ಜ್ಞಾನಮೀಮಾಂಸೆ ಹಾಗೂ ಅನುಭವಗಳೇ ಈ ನುಡಿಗಳಲ್ಲಿ ನೆಲೆಗೊಂಡಿರುತ್ತವೆ. ಹೀಗೆ ನೆಲೆನಿಂತಿರುವ ಜ್ಞಾನ ಹಾಗೂ ಅನುಭವ ಎಲ್ಲ ಕಾಲದ ಎಲ್ಲ ಸಮುದಾಯಗಳ ಬದುಕನ್ನು ನಿಭಾಯಿಸುವುದಕ್ಕೆ ಒತ್ತಾಸೆಯಾಗುತ್ತವೆಯೇ? ಎಂಬ ಪ್ರಶ್ನೆ ಮಹತ್ವವನ್ನು ಪಡೆದುಕೊಳ್ಳುತ್ತದೆ.

ಏಕೆಂದರೆ, ದೇಶಿ ನುಡಿಗಳು ಸ್ವಂತಿಕೆಯ ವಿನ್ಯಾಸಗಳ ಮೂಲಕ ಆಯಾ ಕಾಲದ ಬದುಕಿನ ವಿವಿಧ ಸಂಕಥನಗಳನ್ನು ಇಡೀಯಾಗಿ ನಮ್ಮುಂದೆ ಮಂಡಿಸುತ್ತವೆ. ಈ ಸಂಕಥನಗಳಿಗೆ ಪ್ರಾಬಲ್ಯ ಹಾಗೂ ಪ್ರತಿರೋಧದ ಎರಡೂ ಆಯಾಮಗಳಿರುತ್ತವೆ. ಸಮುದಾವೊಂದು ತನ್ನ ಒಡಲೊಳಗೆ ಏರ್ಪಟ್ಟಿರುವ ಸಾಮಾಜಿಕ-ರಾಜಕೀಯ ಪರಿಣಾಮಗಳನ್ನು ಅರಿಯಬೇಕೆಂದರೆ ಅದಕ್ಕಿರುವ ಒಂದೇ ಒಂದು ದಾರಿ, ತಾನು ನಿರಂತರವಾಗಿ ಸಂವಹನವನ್ನು ನಿಭಾಯಿಸಿಕೊಂಡು, ತನ್ನ ಅನುಭವದ ವಿವಿಧ ಸಂಕಥನಗಳನ್ನು ಅಭಿವ್ಯಕ್ತಿಸಲು ಯಾವ ನುಡಿ ಮಾಧ್ಯಮವಾಗಿದೆಯೋ, ಆಯಾ ನುಡಿಗಳ ಮೂಲಕವೇ ತನ್ನ ಬದುಕಿಗೆ ಬೇಕಾಗುವ ತಿಳಿವಿನ ದಾರಿಗಳನನ್ನು ರೂಪಿಸಿಕೊಳ್ಳುವುದೂ ಅನಿವಾರ್ಯವೇ ಆಗಿದೆ.

ಇಂತದೊಂದು ಚಿಂತನೆ ನಮ್ಮನ್ನು ಭಾಷಿಕ ಸಾಪೇಕ್ಷ ಸಿದ್ಧಾಂತಕ್ಕೆ ಈಡು ಮಾಡುತ್ತದೆ. ನಾವಾಡುವ ನುಡಿ ನಮ್ಮ ಲೋಕಾನುಭವನ್ನು ರೂಪಿಸುತ್ತದೆ. ಸಹಜವಾಗಿ ನಮ್ಮ ಆಲೋಚನೆಯ ಕ್ರಮಗಳು ಕೂಡ ಇಂತಹ ಲೋಕಾನುಭವದ ಪರಿಣಾಮಗಳಿಂದ ಮೈದಾಳುತ್ತವೆ ಎಂಬ ನಿರ್ಣಯಗಳಿಗೆ ನಾವು ಬದ್ಧರಾಗುತ್ತೇವೆ. ಒಂದು ಕಾಲದಲ್ಲಿ ಈ ಮಾತಿಗೆ ಬೇಕಾದಷ್ಟು ಸಮರ್ಥನೆಗಳಿದ್ದವು.

ಆದರೆ ಇವತ್ತು ಚಾಮ್ಸ್ಕಿಯ ವಿಚಾರಗಳು ಹೆಚ್ಚು ಹೆಚ್ಚು ತಾತ್ವಿಕ ಹಾಗೂ ವೈಜ್ಞಾನಿಕ ಸಮರ್ಥನೆಗಳಿಂದ ಬಲಗೊಂಡಿದ್ದರಿಂದ, ಚಿಂತನೆ ಮತ್ತು ನುಡಿಗಳ ನಡುವಣ ಅಂತರ್ಸಂಬಂಧವನ್ನು ವಿವರಿಸುವ ಚೌಕಟ್ಟೂ ಬೇರೆಯಾಗಿದೆ. ಸಮಕಾಲೀನ ಸನ್ನಿವೇಶದಲ್ಲಿ ಶಿಕ್ಷಣದ ಮಹತ್ವವನ್ನೂ ಅರಿಯಲು ನುಡಿ ಮತ್ತು ಸಂಕಥನಗಳಿಗೆ ಅತೀಯಾದ ಮಹತ್ವವನ್ನು ನೀಡಲಾಗಿದೆ. ಚಿಂತನೆಗಳನ್ನು ಅಭಿವ್ಯಕ್ತಿಸುವ ಅಸ್ತ್ರವನ್ನಾಗಿ ಮಾತ್ರ ಇವತ್ತು ನುಡಿಯನ್ನು ಬಳಸಲು ಸಾಧ್ಯವಿಲ್ಲ.

ಏಕೆಂದರೆ, ಗ್ರಹಿಕೆಯ ಅಗಾಧತೆಯನ್ನು ಮತ್ತು ತಾತ್ವಿಕತೆಯ ಸಾಧ್ಯತೆಗಳನ್ನು ಕಂಡರಿಯಲು ನುಡಿಯೇ ಮಹತ್ವದ ಸಂಗತಿಯಾಗಿದೆ. ಹಾಗಾಗಿ ನುಡಿ ಮತ್ತು ಚಿಂತನೆಗಳ ನಡುವಣ ಗಡಿಗೆರೆಯು ಅಳಿಸಿ ಹೋಗಿದೆ ಎಂದೂ ಹೇಳಲು ಸಾಧ್ಯವಿಲ್ಲ. ಕಾರಣ ಯಾವುದು ಎಲ್ಲಿ ಆರಂಭಗೊಳ್ಳುತ್ತದೆ ಇಲ್ಲವೇ ಯಾವುದು ಎಲ್ಲಿ ಕೊನೆಗೊಳ್ಳುತ್ತದೆ ಎಂಬುದನ್ನು ಗುರುತಿಸುವುದು ಕೂಡ ದುಸ್ತರ. ಆದ್ದರಿಂದ, ಯಾವುದೇ ಚಿಂತನೆಯ ಬೆಳವಣಿಗೆ ಮತ್ತು ಅದರ ಕ್ರೊಢೀಕರಣದ ನಡುವೆ ಅಂತರಗಳಿವೆ ಎನ್ನುವ ವಾದಗಳನ್ನೂ ಇನ್ನೂ ಒಪ್ಪಲಾಗಿಲ್ಲ.

ಹಾಗೇನೇ ಆಯಾ ನುಡಿಗಳಲ್ಲಿ ಹುದುಗಿರುವ ತಾತ್ವಿಕತೆಯ ಬಗೆಗಿನ ಪ್ರಶ್ನೆಗಳನ್ನು ನಿರಲಕ್ಷಿಸಲೂ ಸಾಧ್ಯವಿಲ್ಲ. ಅಂದರೆ ನುಡಿಯ ಕಸುವನ್ನು ಕುರಿತು ಯೋಚಿಸುವುದೆಂದರೆ, ಆಯಾ ನುಡಿಯು ಉತ್ಪಾದಿಸುವ ‘ಜ್ಞಾನ ಮೀಮಾಂಸೆಯ ವಿನ್ಯಾಸಗಳನ್ನನು’ ಕುರಿತು ಯೋಚಿಸುವುದಾಗಿದೆ. ಹಾಗಾಗಿ ವಿಟಗ್ನ್ಸ್ಟೇನ್ ಹೇಳಿದ ‘ನನ್ನ ಭಾಷೆಯ ಮಿತಿ ಅದು ನನ್ನ ಜ್ಞಾನದ ಮಿತಿ’ ಎನ್ನುವ ಮಾತು ಇಲ್ಲಿ ಮಹತ್ವವನ್ನು ಪಡೆಯುತ್ತದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಆಯಾ ಲೋಕದ ವಸ್ತು ವಿನ್ಯಾಸಗಳನ್ನು ಸೈದ್ಧಾಂತಿಕವಾಗಿ ಹಾಗೂ ಸೃಜನಾತ್ಮಕವಾಗಿ ಬಣ್ಣಿಸಲು ಆಯಾ ನುಡಿಗಳ ಮೂಲಕವೇ ಸಾಧ್ಯವಾಗಬೇಕು.

ಹೌದು ಒಂದು ನುಡಿಯಲ್ಲಿ ವಿಕಾಸಗೊಳ್ಳುವ ಜ್ಞಾನ ಹಾಗೂ ವೈಚಾರಿಕ ವಿನ್ಯಾಸಗಳನ್ನು ಕೇವಲ ನುಡಿಗೆ ಸೀಮಿತಗೊಳಿಸಿ ನೋಡುವ ಹೊರತಾಗಿ ಯಾವುದೇ ನುಡಿಯೊಂದಿಗೆ ತಳುಕು ಹಾಕಿಕೊಂಡಿರುವ ಸಾಮಾಜಿಕ ಆಚರಣೆಗಳನ್ನು ಒಳ್ಗೊಂಡಂತೆ ಚಿಂತಿಸಬೇಕಾಗುತ್ತದೆ. ಉದಾ.ಗೆ ಲೆಕ್ಕಶಾಸ್ತ್ರದ ತಿಳಿವು ಹಾಗೂ ಸಾಮಾಜಿಕ ಆಚವರಣೆಗಳ ನಡುವಣ ನಂಟಸ್ತಿಕೆಯನ್ನು ವಿಶ್ಲೇಷಿಸುವ ಮೂಲಕ ನುಡಿ ಮತ್ತು ತಾತ್ವಿಕತೆಯನ್ನು ಅರಿಯಬೇಕಿದೆ.

ಜ್ಞಾನದ ಅಧ್ಯಯನ ಮತ್ತು ನುಡಿಯ ಅಧ್ಯಯವನ್ನು ಮಾಡುವಾಗ ಎರಡು ಭಿನ್ನ ಆಯಾಮಗಳು ಹೊರಹೊಮ್ಮುತ್ತವೆ. ಒಂದಡೆ, ನಿಗೂಢ, ಅಮೂರ್ಥ ಭಾಷಾಜ್ಞಾನದೊಂದಿಗೆ ‘ಸಾಮಾನ್ಯ ನುಡಿ ಬಳಕೆದಾರರು’ ಇದ್ದರೆ, ಇನ್ನೊಂದಡೆ ಭಾಷಾಶಾಸ್ತ್ರಜ್ಞರು, ತತ್ವಜ್ಞಾನಿಗಳು, ಭಾಷಾ ಸಿದ್ಧಾಂತಿಗಳು ಇವರೆಲ್ಲರೂ ಸಾಮಾನ್ಯ ಭಾಷಾ ಬಳಕೆದಾರರ ಭಾಷಾಶಾಸ್ತ್ರೀಯ ಸಾಮರ್ಥ್ಯವನ್ನು ವೈಜ್ಞಾನಿಕ ಶಿಸ್ತನ್ನಾಗಿ ಅನುಸರಿಸಲಾಗುತ್ತದೆ.

ಈ ವ್ಯತ್ಯಾಸವು ಭಾಷೆಯ ಜ್ಞಾನಮೀಮಾಂಸೆಯ ನೆಲೆ ಹಾಗೂ ನಿಲುವುಗಳನ್ನು ಪ್ರತಿನಿಧಿಸುತ್ತದೆ. ಹಾಗಾಗಿ ಈ ಮುಂದಿನ ಮಾತುಗಳು ಈ ಹೊತ್ತಿನ ಅತ್ಯಂತ ಮಹತ್ವದ ಹಾಗೂ ಪ್ರಚಲಿತ ವಿದ್ಯಮಾನಗಳಾಗಿ ತೋರುತ್ತವೆ.

 1. ಅಭಿವ್ಯಕ್ತಿ ಮತ್ತು ಸಂವಹನಗಳೆರಡರಲ್ಲೂ ಅತ್ಯಂತ ಸಂಕೀರ್ಣವಾದ ಬೇಡಿಕೆಗಳನ್ನು ಈಡೇರಿಸಿಕೊಳ್ಳುವಾಗ, ನಾವು ಮನುಷ್ಯರು ಭಾಷೆಯನ್ನು ಹೇಗೆ ಬಳಸುತ್ತೇವೆ?
 2. ಸಾಮಾನ್ಯ ಭಾಷಾ ಬಳಕೆದಾರರ ಭಾಷಾಜ್ಞಾನಕ್ಕೆ ನಿಷ್ಠರಾಗಿ ಹಾಗೂ ಫಲಪ್ರದವಾಗಿ, ಅತ್ಯಂತ ಸಂಕೀರ್ಣವಾದ ವಿದ್ಯಮಾನಗಳನ್ನು ಭಾಷಾಶಾಸ್ತ್ರಜ್ಞರು ಹೇಗೆ ಅತ್ಯಂತ ಪರಿಣಾಮಕಾರಿಯಾಗಿ ಶೋಧಿಸಿ, ವಿವರಿಸಬಲ್ಲರು?

ಒಬ್ಬ ಭಾಷಾಶಾಸ್ತಜ್ಞ್ರ ಇಲ್ಲವೇ ತತ್ವಜ್ಞಾನಿಗೆ ಬೇರೆ ಯಾವುದೇ ಪ್ರಶ್ನೆಗಳು ಎದುರಾಗಬಹುದು ಆದರೆ ಇವರಿಬ್ಬರೂ ಕೂಡ ಈ ಮೂಲಭೂತ ಪ್ರಶ್ನೆಗಳನ್ನೇ ನೆಲೆಯಾಗಿಸಿಕೊಂಡು ತಮ್ಮ ತಿಳುವಳಿಕೆಗಳನ್ನು ವಿಸ್ತರಿಸಬಹುದು. ಕುತೂಹಲದ ಸಂಗತಿಯೇನೆಂದರೆ, ಈ ಪ್ರಶ್ನೆಗಳ ಬಗೆಗಿನ ವೈಯಕ್ತಿಕ ನಂಬಿಕೆಗಳು ಯಾವುದೇ ಬಗೆಯ ಪ್ರಜ್ಞಾಪೂರಕವಾದ ನಿಲುವುಗಳಾಗಿ ಪರಿಗಣಿಸಲ್ಪಟ್ಟಿರುವುದಿಲ್ಲ.

ಈ ಮಾತುಗಳನ್ನು ಚಾಮ್ಸ್ಕಿಯ ಚಿಂತನೆಗಳ ಮೂಲಕ ಇನ್ನಷ್ಟು ನಿಚ್ಚಳವಾಗಿ ವಿವರಿಸಬಹುದು. ಅಂದರೆ ಸಾಮಾನ್ಯ ಭಾಷಾ ಬಳಕೆದಾರರು, ಜ್ಞಾನದ ರಚನೆಗಳನ್ನು ಪಡೆದುಕೊಂಡಿರುತ್ತಾರೆ. ಇದನ್ನು ಭಾಷೆಯ ಸಂಕೀರ್ಣ ವ್ಯವಸ್ಥೆಗಳ ನಿಯಮ ಇಲ್ಲವೇ ತತ್ವವೆಂದು ಕರೆಯುವುದು ಅತ್ಯಂತ ಸಮಂಜಸ. ಹಾಗೂ ಭಾಷಾಧ್ಯಯನಕ್ಕೆ ಇರಬಹುದಾದ ಒಂದು ವೈಜ್ಞಾನಿಕ ಆಯಾಮವೇನೆಂದರೆ, ಜ್ಞಾನವನ್ನು ಖಚಿತವಾಗಿ ನಿರೂಪಿಸುವ ಆಯಾಮವನ್ನೂ ಇದು ಒಳ್ಗೊಂಡಿರಬೇಕು.

ಹಲವು ಕಾರಣಗಳಿಗಾಗಿ ಈ ಎರಡೂ ಬಗೆಯ ಆಲೋಚನಾ ಕ್ರಮಗಳ ಬಗೆಗೆ ಚಿಂತಕರು ಭಿನ್ನಾಭಿಪ್ರಾಯಗಳನ್ನು ಹೊಂದಿರುತ್ತಾರೆ. ಹಾಗೂ ಈ ಎರಡೂ ಮಾದರಿಗಳನ್ನು ನೆಮ್ಮಿಕೊಂಡೇ ನಮ್ಮ ಸಾಮಾನ್ಯ ತಿಳುವಳಿಕೆಯನ್ನು ವಿಸ್ತರಿಸುವ ವಿನ್ಯಸಗಳನ್ನೂ ನೋಡಬಹುದು.

ಮೇಲಿನ ಎಲ್ಲ ಚರ್ಚೆಗಳು ದೇಶಿ ನುಡಿಗಳ ಸ್ವರೂಪವನ್ನು ಅರಿಯುವ ಹಾಗೂ ಜ್ಞಾನಮೀಮಾಂಸೆಯ ಸವಾಲುಗಳು ಹೇಗೆ ಎದುರಾಗುತ್ತವೆ ಎಂಬ ತಾತ್ವಿಕ ವಿನ್ಯಾಸಗಳನ್ನು ಕುರಿತಿವೆ. ಆದ್ದರಿಂದ ಇವತ್ತು ನಾವು ದೇಶಿ ನುಡಿಗಳ ಮೂಲಕ ಜ್ಞಾನಮೀಮಾಂಸೆ ಇಲ್ಲವೇ ಜ್ಞಾನಶಿಸ್ತುಗಳನ್ನು ರೂಪಿಸಲು ಸಾಧ್ಯವಿಲ್ಲ ಅನ್ನುವುದಕ್ಕೆ ಇರಬಹುದಾದ ತಾತ್ವಿಕ ಕೊರತೆಗಳನ್ನೂ ಈ ಚರ್ಚೆಗಳು ಸೂಕ್ಷ್ಮವಾಗಿ ಪ್ರಕಟಿಸುತ್ತವೆ.

ಕನ್ನಡದ ಮೂಲಕ ವಿಜ್ಞಾನ, ತಂತ್ರಜ್ಞಾನ ಹಾಗೂ ಇತರೆ ಶಾಸ್ತ್ರೀಯ ವಿಚಾರಗಳನ್ನು ಅಭಿವ್ಯಕ್ತಿಸಲು ಸಾಧ್ಯವಿಲ್ಲ ಎನ್ನುವವರು ಅರಿಯಬೇಕಾದ ಮೂಲಭೂತ ಸತ್ಯವೇನೆಂದರೆ, ನಮ್ಮ ಗ್ರಹಿಕೆ ಮತ್ತು ಚಿಂತನೆಗಳು ಮೈದಾಳುವ ವಿನ್ಯಾಸಗಳನ್ನು ವೈಜ್ಞಾನಿಕವಾಗಿ ಅರಿಯದೇ ಹೋದರೆ ನುಡಿ ಬಗೆಗಿನ ಚಿಂತನೆಗಳು ಸೇರಿದಂತೆ ಯಾವುದೇ ತಾತ್ವಿಕ ವಿಚಾರಗಳು ಮೌಢ್ಯತೆಯ ಫಲಿತಗಳಾಗುತ್ತವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಿರ್ಲಜ್ಜ ದೇಶ ಮತ್ತು ಲಜ್ಜೆಗೆಟ್ಟ ರಾಜಕಾರಣ

Published

on

 • ನಾ ದಿವಾಕರ

ತ್ತರಪ್ರದೇಶದ ಹಥ್ರಾಸ್ ಎಂಬ ಕುಗ್ರಾಮ ದೇಶದ ರಾಜಧಾನಿಯಿಂದ 200 ಕಿಲೋಮೀಟರ್ ದೂರದಲ್ಲಿದೆ. ಅಲ್ಲಿ 19 ವರ್ಷದ ಯುವತಿ ಮನೀಷಾ ವಾಲ್ಮೀಕಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗುತ್ತಾಳೆ. ಪೊಲೀಸರ ಅಸಡ್ಡೆ ಮತ್ತು ವೈದ್ಯಲೋಕದ ನಿರ್ಲಕ್ಷ್ಯ ಆಕೆಯನ್ನು ಸಾವಿನಂಚಿಗೆ ತಂದು ನಿಲ್ಲಿಸುತ್ತದೆ.

ಮುರಿದ ಕಾಲು, ಗಾಯಗೊಂಡ ನಾಲಿಗೆ ಮತ್ತು ಭಗ್ನವಾದ ಕನಸುಗಳ ನಡುವೆಯೇ ಬದುಕಲು ತವಕಿಸುವ ಯುವತಿ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳಿ ಸಾಯುತ್ತಾಳೆ. ಅವಳ ಸಾವಿಗೆ ನಾಲ್ವರು ಕಾರಣರಾಗಿರುತ್ತಾರೆ. ಈ ಘಟನೆಯ ನಂತರ ಒಂದೆರಡು ದಿನಗಳಲ್ಲಿ ಇದೇ ರಾಜ್ಯದಲ್ಲಿ, ಮಧ್ಯಪ್ರದೇಶದಲ್ಲಿ, ರಾಜಸ್ಥಾನದಲ್ಲಿ ಅತ್ಯಾಚಾರ ಮತ್ತು ಕೊಲೆ ನಡೆಯುತ್ತದೆ. ಇದು ಸಾರ್ವಜನಿಕ ಚರ್ಚೆಗೊಳಪಟ್ಟಿರುವ ವಿಚಾರ.

ನಾವು, ಅಂದರೆ ಭವ್ಯ ಪರಂಪರೆಯನ್ನು ತಲೆಯ ಮೇಲೆ ಹೊತ್ತುಕೊಂಡು, ಚಾರಿತ್ರಿಕ ಶ್ರೇಷ್ಠತೆಯನ್ನು ಹೃದಯದಲ್ಲಿ ಹುದುಗಿಸಿಕೊಂಡು, ಪಾವಿತ್ರ್ಯತೆಯ ಕಣಜವನ್ನು ಮನದಾಳದಲ್ಲಿ ಅವಿಸಿಟ್ಟುಕೊಂಡು ವಿಶ್ವಗುರುವಾಗುವತ್ತ ದಾಪುಗಾಲು ಹಾಕುತ್ತಿರುವ ಭಾರತ ಎಂಬ ದೇಶದ ಪ್ರಜೆಗಳು ಈ ಘಟನೆಗಳಲ್ಲಿ ಏನೇನು ಕಾಣಬಹುದು.

 • ದುರ್ಬಲ-ಶೋಷಿತ ಸಮುದಾಯಕ್ಕೆ ಸೇರಿದ ಯುವತಿಯ ಮೇಲೆ ಮೇಲ್ಜಾತಿಯ ಬಲಾಢ್ಯರಿಂದ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಸಾವು.
 • ಜಾತಿ ಸಮೀಕರಣಗಳನ್ನು ಬದಿಗಿಟ್ಟು ನೋಡಲೇಬೇಕೆಂದರೆ ಓರ್ವ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಆಕೆಯ ಸಾವು.
 • ಅತ್ಯಾಚಾರ ಮಾಡಿದವರ ಸಾಮಾಜಿಕ-ರಾಜಕೀಯ ಪ್ರಾಬಲ್ಯ ಮತ್ತು ಜಾತಿ ಶ್ರೇಷ್ಠತೆ.
 • ಅತ್ಯಾಚಾರಿಗಳನ್ನು ರಕ್ಷಿಸಲು ಪ್ರಭುತ್ವದ ಹರಸಾಹಸ – ಪೊಲೀಸ್, ಆಸ್ಪತ್ರೆ, ತನಿಖಾ ಏಜೆನ್ಸಿ, ಅಧಿಕಾರಶಾಹಿ ಮತ್ತು ರಾಜಕೀಯ ನಾಯಕತ್ವ ಇವಿಷ್ಟೂ ಸೇರಿದರೆ ಪ್ರಭುತ್ವ ಅಲ್ಲವೇ ?
 • ಅತ್ಯಾಚಾರಕ್ಕೀಡಾಗಿ ಮೃತಪಟ್ಟ ಮಹಿಳೆಯ ಶವವನ್ನು ಕುಟುಂಬದವರಿಗೂ ನೀಡದೆ ಮಧ್ಯರಾತ್ರಿಯಲ್ಲಿ ಪೊಲೀಸರಿಂದಲೇ ಅಂತ್ಯಸಂಸ್ಕಾರ.
 • ಸಂತ್ರಸ್ತೆಯ ಕುಟುಂಬದವರಿಗೆ ಸಾಂತ್ವನ ಹೇಳಲು ಹೊರಟವರ ಬಂಧನ ಮತ್ತು ಅವರ ಮೇಲೆ ಪೊಲೀಸರ ಲಾಠಿ ಪ್ರಹಾರ. ಎಫ್ಐಆರ್ ದಾಖಲು.
 • ಅತ್ಯಾಚಾರಿಗಳನ್ನು ಖುಲ್ಲಂಖುಲ್ಲಾ ಸಮರ್ಥಿಸುವ ಮೇಲ್ಜಾತಿ ಸಮುದಾಯದ ಸಂಘಟನೆಗಳು.
 • ಈಗ ಸಂತ್ರಸ್ತೆಗೆ ಮತ್ತು ಅವರ ಕುಟುಂಬದವರಿಗೆ ನ್ಯಾಯ ದೊರಕಿಸಲು ಹೋರಾಡುತ್ತಿರುವವರ ವಿರುದ್ಧ “ ಅಂತರರಾಷ್ಟ್ರೀಯ ಪಿತೂರಿ”ಯ ಆರೋಪ. (ನಗರ ನಕ್ಸಲರ ಪ್ರವೇಶಕ್ಕೆ ಇನ್ನೂ ಸಮಯ ಇದೆ ಎಂದು ಭಾವಿಸೋಣ).
 • ಕೊನೆಯದಾಗಿ ಬಿಸಿರಕ್ತದ ಠಾಕೂರರ ಅಟ್ಟಹಾಸ ಮತ್ತು ಸಂಸ್ಕಾರವಿಲ್ಲದ(?) ಹೆಣ್ಣುಮಕ್ಕಳ ಬವಣೆಯ ಬಗ್ಗೆ ಅಧಿಕಾರಸ್ಥರ ವ್ಯಾಖ್ಯಾನ.
 • ಬಹಳ ಮುಖ್ಯ ಅಂಶವೆಂದರೆ ಇಂತಹ ಅಮಾನುಷ ಘಟನೆಗಳನ್ನು ಕುರಿತ ಪ್ರತಿಕ್ರಿಯೆಯಲ್ಲೂ ಕಾಣಬಹುದಾದ ರಾಜಕಾರಣದ ಛಾಯೆ ಮತ್ತು ಪಕ್ಷನಿಷ್ಟೆಗೆ ಬಲಿಯಾದ ಸಂವೇದನೆ.

ಇವಿಷ್ಟನ್ನೂ ಗಮನಿಸಿದಾಗ ನಾವು ಲಜ್ಜೆಗೆಟ್ಟ ರಾಜಕಾರಣದ ನಡುವೆ ಬದುಕುತ್ತಿದ್ದೇವೆ ಎನಿಸುವುದು ಸಹಜವಲ್ಲವೇ ? ಓರ್ವ ಸಾಧಾರಣ ಸಿನಿಮಾ ನಟನ ಆತ್ಮಹತ್ಯೆ ನಮ್ಮ ದೇಶದ ಬೌದ್ಧಿಕ ವಲಯದಲ್ಲಿ, ಮಾಧ್ಯಮ ಲೋಕದಲ್ಲಿ, ರಾಜಕೀಯ ಅಂಗಳದಲ್ಲಿ ಸಂಚಲನ ಮೂಡಿಸುತ್ತದೆ. ಓರ್ವ ಮಹಿಳೆಯ ಕಗ್ಗೊಲೆ ಮತ್ತು ಆಕೆಯ ಮೇಲಿನ ಅತ್ಯಾಚಾರ ಅಸ್ಮಿತೆಗಳ ಅಂಗಳದಲ್ಲಿ ಕಳೆದುಹೋಗುತ್ತದೆ.

ಅತ್ಯಾಚಾರಿಗಳು ಕೊಲೆಗಾರರು ರಾಜಕೀಯ ಪ್ರಾಬಲ್ಯ ಹೊಂದಿದ್ದರೆ ಸಂತ್ರಸ್ತೆಯನ್ನೇ ಸುಟ್ಟುಹಾಕಲಾಗುತ್ತದೆ, ಮನೀಷಾ ಘಟನೆಯಲ್ಲಾದಂತೆ. ಒಂದು ವೇಳೆ ಅತ್ಯಾಚಾರಿಗಳು ರಾಜಕೀಯ ಪ್ರಭಾವವಿಲ್ಲದೆ ಕೊಟ್ಟ ಕಾಸಿಗೆ ನ್ಯಾಯ ಒದಗಿಸುವವರಾಗಿದ್ದರೆ ಎನ್ಕೌಂಟರ್ ನಲ್ಲಿ ಕೊಲ್ಲಲ್ಪಡುತ್ತಾರೆ, ಪ್ರಿಯಾಂಕ ರೆಡ್ಡಿ ಘಟನೆಯಲ್ಲಾದಂತೆ. ಎರಡೂ ಸಂದರ್ಭಗಳಲ್ಲಿ ಸಾಕ್ಷಿಗಳು ನಾಶವಾಗುತ್ತವೆ.

ಜೀವಕ್ಕೆ ಬೆಲೆಯಿಲ್ಲದ ದೇಶದಲ್ಲಿ ಪ್ರಿಯಾಂಕ, ಮನೀಷಾ, ನಿರ್ಭಯ, ಧಾನಮ್ಮ, ಸೌಜನ್ಯ ಇವರೆಲ್ಲರೂ ಅಸ್ತಿತ್ವವೇ ಇಲ್ಲದಂತಾಗಿಬಿಡುತ್ತಾರೆ. ಮೂಲತಃ ಮಹಿಳೆಯರಲ್ಲವೇ ,
“ ಹೇಗಿರಬೇಕೋ ಹಾಗಿದ್ದರೆ ಸರಿ ಇಲ್ಲವಾದರೆ ,,,,,,,,,,????” ಈ ಧೋರಣೆ. ದಲಿತ ಮಹಿಳೆಯಾದರೆ ಈ ಧೋರಣೆಯ ಜೊತೆಗೆ “ ತಮ್ಮ ಸ್ಥಾನಮಾನವನ್ನು ಅರಿತು ನಡೆಯಬೇಕಲ್ಲವೇ,,,,,,????” ಎನ್ನುವ ದಾರ್ಷ್ಟ್ಯ. ಅತ್ಯಾಚಾರಕ್ಕೆ ಮರಣದಂಡನೆ ವಿಧಿಸುವ ಶಾಸನ ಜಾರಿಯಾಗಿದೆ.

ಆದರೆ ನೇಣು ಕುಣಿಕೆಯೂ ಅಸ್ಮಿತೆಯನ್ನಾಧರಿಸಿ ಬಿಗಿದುಕೊಳ್ಳುವ ದೇಶ ನಮ್ಮದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ರಾಜ್ಯದ ಮುಖ್ಯಮಂತ್ರಿ ಅತ್ಯಾಚಾರಕ್ಕೊಳಗಾದ ಹೆಣ್ಣು ಮಗುವಿಗೆ ಸಾಂತ್ವನವನ್ನೂ ಹೇಳದೆ, ತನ್ನ ಸಮುದಾಯದ ನರನಾಡಿಗಳಲ್ಲಿ ಹರಿಯುವ ಬಿಸಿರಕ್ತದ ಬಗ್ಗೆ ಹೆಮ್ಮೆ ಪಡುವುದನ್ನು , ಮತ್ತೋರ್ವ ಬಿಜೆಪಿ ಸಂಸದ ಹೆಣ್ಣುಮಕ್ಕಳಿಗೆ ಸಂಸ್ಕಾರವೇ ಮುಖ್ಯ ಎಂದು ಹೇಳುವುದನ್ನು ಹೇಗೆ ಬಣ್ಣಿಸುವುದು ?

ದೇಶದ ಪ್ರಮುಖ ರಾಜಕೀಯ ಪಕ್ಷದ ನಾಯಕರೊಬ್ಬರು ಮನೀಷಾ ಕುಟುಂಬದ ಸದಸ್ಯರನ್ನು ಅಪ್ಪಿಕೊಂಡು ಸಾಂತ್ವನ ಹೇಳುವುದು ನಾಟಕೀಯ ಪ್ರಹಸನ ಎಂದು ಹೀಗಳೆಯುವವರಿಗೆ, ಕುಟುಂಬದವರಿಗೆ ಆ ಯುವತಿಯ ಶವವನ್ನು ನೋಡಲೂ ಅವಕಾಶ ನೀಡದೆ ಸುಟ್ಟುಹಾಕಿದ ಪೊಲೀಸರ ಧೋರಣೆ ಹೇಗೆ ಕಾಣಬೇಕು. ಅದು ಮೃದು ನಾಟಕ ಇದು ಕ್ರೂರ ನಾಟಕ ಎನ್ನಬಹುದೇ ?

ಶವದಿಂದ ಸಾಕ್ಷಿ ನುಡಿಸಲು ಸಾಧ್ಯವಿಲ್ಲ ಆದರೆ ಶವವನ್ನು ಕೊಯ್ದರೆ ಸಾಕಷ್ಟು ಸತ್ಯ ಹೊರಬರುತ್ತವೆ ಅಲ್ಲವೇ ? ಇತ್ತ ಅನಾಥಳಂತೆ ಸುಟ್ಟುಹೋದ ಮನೀಷಾ ಅತ್ತ ಅಪರಾಧಿಗಳಂತೆ ಬಂಧಿತರಾದ ಆಕೆಯ ಕುಟುಂಬದ ಸದಸ್ಯರು, ಈ ಅಮಾಯಕರಿಗೆ ಬೆದರಿಕೆ ಹಾಕುವ ಠಾಕೂರರು. ಠಾಕೂರರ ವಿರುದ್ಧ ಎಫ್‍ಐಆರ್ ಸಹ ಸಲ್ಲಿಸದೆ, ನೊಂದ ಜೀವಗಳ ಮೇಲೆ ಎಫ್‍ಐಆರ್ ದಾಖಲಿಸುವ ಸರಕಾರ. ಇಲ್ಲಿ ಯಾರನ್ನು ಕ್ರೂರಿ ಎನ್ನಬೇಕು ?

ವಿವೇಕ, ವಿವೇಚನೆ ಮತ್ತು ಸೌಜನ್ಯ ಇರುವವರಿಗೆ ಹೇಳಬೇಕಿಲ್ಲ. ಇವೆಲ್ಲವನ್ನೂ ಕಳೆದುಕೊಂಡಿರುವ ಅಸ್ಮಿತೆಯ ರಾಜಕಾರಣದ ರೂವಾರಿಗಳಿಗೆ ಹೇಳಲೇಬೇಕಲ್ಲವೇ ? ಕ್ರೂರ ವ್ಯವಸ್ಥೆಯಲ್ಲಿ ನಡೆಯುವ ಎಲ್ಲ ಅಮಾನುಷ ಘಟನೆಗಳ ಹಿಂದೆಯೂ ಆ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ತಾರತಮ್ಯಗಳು, ಶೋಷಣೆಯ ಆಯಾಮಗಳು ಇದ್ದೇ ಇರುತ್ತವೆ.

ನಮ್ಮ ಸುತ್ತಲಿನ ಜಾತಿ, ಮತಧರ್ಮಗಳ ರಾಜಕಾರಣದಲ್ಲಿ ಇದನ್ನು ಕಾಣುತ್ತಲೇ ಇದ್ದೇವೆ. ಒಂದು ಸಮಾಜದಲ್ಲಿ ಸಂವೇದನೆ ಮತ್ತು ಮಾನವ ಸಂಬಂಧಗಳ ಸೂಕ್ಷ್ಮತೆ ಇದ್ದರೆ ಪ್ರತಿಯೊಂದು ಅತ್ಯಾಚಾರ, ದೌರ್ಜನ್ಯ ಪ್ರಕರಣವೂ ಮಾನಸಿಕ ಕ್ಷೋಭೆ ಉಂಟುಮಾಡುತ್ತದೆ. ಬಹುಶಃ ನವ ಭಾರತ ಈ ಸೂಕ್ಷ್ಮತೆಯನ್ನು ಕಳೆದುಕೊಂಡಿದೆ. ಆಸೀಫಾ ಮತ್ತು ಮನೀಷಾ ಪ್ರಕರಣದಲ್ಲಿ ಇದು ಸ್ಪಷ್ಟವಾಗಿದೆ.

ಈ ಎರಡೂ ಪ್ರಕರಣಗಳಲ್ಲಿ ಭವ್ಯ ಭಾರತದ ಕನಸನ್ನು ಹೊತ್ತು ಸಂಸ್ಕೃತಿಯನ್ನು ಆರಾಧಿಸುವವರ ಧೋರಣೆಯನ್ನು ಗಮನಿಸಿದಾಗ ಭಾರತದ ಮಣ್ಣಲ್ಲೇ ತಾರತಮ್ಯದ ಕಣಗಳು ಬೆರೆತುಹೋಗಿವೆಯೇನೋ ಎನಿಸುತ್ತದೆ. “ ಆಕೆ ಅವಳಲ್ಲವೇ ನಾವೇಕೆ ಪ್ರತಿಭಟಿಸಬೇಕು,,,, ” ಎನ್ನುವ ಧೋರಣೆ ಜಾತಿ ಅಸ್ಮಿತೆಯ ನೆಲೆಯಲ್ಲಿ ಕಂಡುಬಂದರೆ, “ ಹೆಣ್ಣು ಹೆಣ್ಣಾಗಿರಬೇಕಲ್ಲವೇ,,,,” ಎನ್ನುವ ಧೋರಣೆ ಪುರುಷಾಧಿಪತ್ಯದ ನೆಲೆಯಲ್ಲಿ ಕಂಡುಬರುತ್ತದೆ.

ಎರಡೂ ಸಂದರ್ಭಗಳಲ್ಲಿ ಮೇಲ್ಜಾತಿಯ ಮನಸುಗಳು ಬಹುಮಟ್ಟಿಗೆ ಒಂದೇ ಆಗಿರುವುದನ್ನು ಗಮನಿಸಬೇಕು. ಅತ್ಯಾಚಾರಕ್ಕೊಳಗಾದ ಮಹಿಳೆಗೆ ನ್ಯಾಯ ಒದಗಿಸಲು ಹೋರಾಡುವ ಮನಸುಗಳು ಅಂತರರಾಷ್ಟ್ರೀಯ ಪಿತೂರಿಯ ಛಾಯೆಯಲ್ಲಿ ಕಾಣುತ್ತದೆ ಎಂದರೆ ನಮ್ಮ ಪ್ರಭುತ್ವದ ದೃಷ್ಟಿ ಎಷ್ಟು ಮಸುಕಾಗಿರಬೇಕು. ಆ ಕಣ್ಣುಗಳಲ್ಲಿ ಎಷ್ಟೊಂದು ಕೊಳಕು ತುಂಬಿರಬೇಕು. ಆ ಹೃದಯದಲ್ಲಿ ಅದೆಷ್ಟು ಕಲ್ಮಷ ಸಂಗ್ರಹವಾಗಿರಬೇಕು.

ಭಾರತ ಹೀಗಿರಲಿಲ್ಲ ಎಂದು ಹೇಳುವಷ್ಟು ಆತ್ಮಸ್ಥೈರ್ಯ ಬಹುಶಃ ಯಾರಲ್ಲೂ ಇರಲಾರದು. ಏಕೆಂದರೆ ಭಾರತ ಹೀಗೆಯೇ ನಡೆದುಬಂದಿದೆ. ಮಹಾಭಾರತದಿಂದ ನವ ಭಾರತದವರೆಗೆ, ಮಥುರಾದಿಂದ ಹಥ್ರಾಸಿನವರೆಗೆ ಒಂದೆಡೆ ಪುರುಷ ಸಮಾಜದ ಅಟ್ಟಹಾಸ ಮತ್ತೊಂದೆಡೆ ಜಾತಿ ವ್ಯವಸ್ಥೆಯ ಕ್ರೌರ್ಯ ಎರಡು ಅಲಗಿನ ಕತ್ತಿಯ ಮೇಲೆ ನಡೆಯುತ್ತಲೇ ಈ ದೇಶದ ಮಹಿಳೆಯರು, ಅದರಲ್ಲೂ ಶೋಷಿತ ಮಹಿಳೆಯರು ತಮ್ಮ ಮೇಲಿನ ದೌರ್ಜನ್ಯ, ಅತ್ಯಾಚಾರ, ಅಟ್ಟಹಾಸ ಮತ್ತು ಅಧಿಪತ್ಯವನ್ನು ಎದುರಿಸುತ್ತಾ ಬಂದಿದ್ದಾರೆ.

ಆದರೆ ಅಸ್ಮಿತೆಯ ರಾಜಕಾರಣ, ಜಾತಿ ವ್ಯವಸ್ಥೆಯ ಚೌಕಟ್ಟುಗಳು, ಸಾಮಾಜಿಕ ಧೋರಣೆ ಮತ್ತು ಶ್ರೇಷ್ಠತೆಯ ವ್ಯಸನ ಇವೆಲ್ಲವೂ ನಮ್ಮೊಳಗಿನ ಸಂವೇದನೆ ಹಾಗೂ ಸೂಕ್ಷ್ಮತೆಯನ್ನೂ ಅಡ್ಡಡ್ಡಲಾಗಿ ಸೀಳುತ್ತಲೇ ಬಂದಿದೆ. ಹಾಗಾಗಿಯೇ ಮನೀಷಾ ನೂರರಲ್ಲಿ ಒಬ್ಬಳಾಗುತ್ತಾಳೆ, ಆಸಿಫಾ ನಿರ್ಲಕ್ಷಿತಳಾಗುತ್ತಾಳೆ.

ಓರ್ವ ಅಸಹಾಯಕ ಯುವತಿಯನ್ನು ನಾಲ್ಕು ಜನ ಏಕಾಂತ ಸ್ಥಳಕ್ಕೆ ಹೊತ್ತೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿ ಸಾವಿನಂಚಿಗೆ ತಂದು ಬಿಸಾಡಿದಾಗ, ಈ ಘಟನೆಯ ಸಾಕ್ಷಿ ಅತ್ಯಾಚಾರಕ್ಕೊಳಗಾದ ಮಹಿಳೆಯಲ್ಲದೆ ಮತ್ತಾರಿರಲು ಸಾಧ್ಯ ? ಮನೀಷಾ ವಾಲ್ಮೀಕಿ ತನ್ನ ಮೇಲೆ ನಡೆದಿರುವ ದೌರ್ಜನ್ಯದ ಬಗ್ಗೆ ಸ್ಪಷ್ಟವಾಗಿ ಹೇಳಿದ ಮೇಲೂ ಸಂಭೋಗವೇ ನಡೆದಿಲ್ಲ, ವೀರ್ಯಾಣು ಪತ್ತೆಯಾಗಿಲ್ಲ ಎಂದು ಹೇಳುವುದು ಬೌದ್ಧಿಕ ಕ್ರೌರ್ಯ ಎನಿಸುವುದಿಲ್ಲವೇ ?

ಸಂಭೋಗ ನಡೆದಿಲ್ಲ ಎಂದ ಮಾತ್ರಕ್ಕೆ ಅತ್ಯಾಚಾರವೇ ನಡೆದಿಲ್ಲ ಎಂದು ಹೇಳುವುದು ಕಾನೂನುಬದ್ಧವೇ ? ಮನೀಷಾ ಪ್ರಕರಣದಲ್ಲಿ ಒಂದು ಅಸಹಜ ಸಾವು ಸಂಭವಿಸಿದೆ ಈ ಸಾವಿಗೆ ಕಾರಣರಾದವರು ಅತ್ಯಾಚಾರ ನಡೆಸದಿದ್ದರೂ ಶಿಕ್ಷಾರ್ಹರೇ ಅಲ್ಲವೇ ? ಇಂತಹ ಕ್ರೂರಿಗಳನ್ನು ಜಾತಿ ಶ್ರೇಷ್ಠತೆಯ ನೆಲೆಯಲ್ಲಿ ಸಮರ್ಥಿಸಿಕೊಳ್ಳುವ ಒಂದು ಸಮುದಾಯ ನಮ್ಮ ನಡುವೆ ಇದೆ ಎಂದರೆ ನಾವು ತಲೆ ಎತ್ತಿ ತಿರುಗುವುದರಲ್ಲಿ ಅರ್ಥವಿಲ್ಲ.

ದುರಂತ ಎಂದರೆ ಪ್ರಭುತ್ವದ ದೃಷ್ಟಿಯಲ್ಲಿ ಬಿಸಿರಕ್ತದ ಠಾಕೂರರು ಅಮಾಯಕರಾಗಿ ಕಾಣುತ್ತಾರೆ. ರಕ್ತ ಚೆಲ್ಲಿದ ಮನೀಷಾಳ ಪರ ನಿಲ್ಲುವವರು ಅಂತರ ರಾಷ್ಟ್ರೀಯ ಪಿತೂರಿ ನಡೆಸುವ ದುಷ್ಟರಂತೆ ಕಾಣುತ್ತಾರೆ. ಇನ್ನು ಕೆಲವೇ ದಿನಗಳಲ್ಲಿ ಇಲ್ಲಿ ನಗರ ನಕ್ಸಲರು ನುಸುಳುತ್ತಾರೆ, ಪಾಕಿಸ್ತಾನದ ಏಜೆಂಟರೂ ಕಾಣುತ್ತಾರೆ, ಭಯೋತ್ಪಾದನೆಯ ಸುಳಿವೂ ದೊರಕಿಬಿಡುತ್ತದೆ. ಬಿಸಿರಕ್ತದ ಠಾಕೂರ ಕುಡಿಗಳು ಶುದ್ಧಹಸ್ತರಾಗಿಬಿಡುತ್ತಾರೆ.

ಕಾರಣ ಸ್ಪಷ್ಟ, ಇವರು ರಾಜಕೀಯ ಅಧಿಕಾರದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ, ಅಧಿಪತ್ಯ ರಾಜಕಾರಣಕ್ಕೆ ನವಿರಾದ ನೆಲಹಾಸುಗಳನ್ನು ಒದಗಿಸುತ್ತಾರೆ. ರಕ್ತ ಹೀನತೆಯಿಂದ ಬಳಲುವ ಶೋಷಿತ ಸಮುದಾಯಗಳಲ್ಲೂ ನೆತ್ತರು ಬಿಸಿಯಾಗಿಯೇ ಇರುತ್ತದೆ. ಈ ಸಮುದಾಯಗಳೂ ರಾಜಕೀಯವಾಗಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಆದರೆ ಈ ಸಮುದಾಯವನ್ನು ಪ್ರತಿನಿಧಿಸುವ ನಾಯಕರು ಹರಿದು ಹಂಚಿಹೋಗಿದ್ದಾರೆ, ಕೆಲವರು ತಮ್ಮ ಸ್ವಾಭಿಮಾನವನ್ನೂ , ಅಸ್ಮಿತೆಯನ್ನೂ ಮಾರಿಕೊಂಡವರಾಗಿದ್ದಾರೆ.

ಪಕ್ಷ ರಾಜಕಾರಣ ಅಸ್ಮಿತೆಗಳನ್ನು ನುಂಗಿಹಾಕುತ್ತಿರುವಂತೆ ಕಂಡುಬಂದರೂ, ಸೂಕ್ಷ್ಮವಾಗಿ ಗಮನಿಸಿದಾಗ ಅಸ್ಮಿತೆಯ ರಾಜಕಾರಣ ಅಧಿಕಾರ ರಾಜಕಾರಣಕ್ಕೆ ಬಲಿಯಾಗುತ್ತಿರುವುದೂ ಗೋಚರಿಸುತ್ತದೆ. ಅಸ್ಮಿತೆಯ ರಾಜಕಾರಣದ ಫಲಾನುಭವಿಗಳು ತಮ್ಮ ಮೂಲ ನೆಲೆಯನ್ನೇ ಮರೆತು ಅಧಿಕಾರ ರಾಜಕಾರಣಕ್ಕೆ ಜೋತುಬಿದ್ದಾಗ ಶೋಷಿತ ಸಮುದಾಯಗಳು ಆಳವಾದ ಕಮರಿಗೆ ಬಿದ್ದುಹೋಗುತ್ತವೆ. ಉತ್ತರ ಪ್ರದೇಶದಲ್ಲಿ ಮತ್ತು ಭಾರತದಾದ್ಯಂತ ಈ ವಿದ್ಯಮಾನವನ್ನು ಗಮನಿಸುತ್ತಲೇ ಇದ್ದೇವೆ.

ಹಾಗಾಗಿ ಪುರುಷ ಸಮಾಜಕ್ಕೆ ಮನೀಷಾ ಅಥವಾ ಆಸಿಫಾ ಅಥವಾ ಧಾನಮ್ಮ ಕೇವಲ ಮಹಿಳೆಯಾಗಿ ಕಂಡುಬರುತ್ತಾಳೆ. ಮೇಲ್ಜಾತಿಗಳಿಗೆ ಈ ಜೀವಗಳು ‘ ಅನ್ಯರ ’ ಗುಂಪಿಗೆ ಸೇರಿಬಿಡುತ್ತವೆ. ರಾಜಕಾರಣಿಗಳಿಗೆ ಲಾಭನಷ್ಟದ ಪಗಡೆಕಾಯಿಗಳಂತೆ ಕಂಡುಬರುತ್ತಾರೆ. ಊನ ಗ್ರಾಮದಲ್ಲಿ ಚರ್ಮ ಸುಲಿಸಿಕೊಂಡವರಿಗೂ, ಪೊಲೀಸರಿಂದ ಮಧ್ಯರಾತ್ರಿ ಸುಡಲ್ಪಟ್ಟ ಮನೀಷಾಳಿಗೂ ವ್ಯತ್ಯಾಸವೇನಾದರೂ ಇದ್ದರೆ ಅದು ಸ್ತ್ರೀ-ಪುರುಷದ ಚೌಕಟ್ಟಿಗೆ ಸೀಮಿತವಾಗುತ್ತದೆ.

ಮಾಯಾವತಿ ಏಕೆ ಸ್ಪಂದಿಸಲಿಲ್ಲ ಎಂದು ಕೇಳುವ ಮುನ್ನ, ರಾಹುಲ್ ಏಕೆ ಸ್ಪಂದಿಸುತ್ತಿದ್ದಾರೆ ಎಂದು ಯೋಚಿಸುವ ಮುನ್ನ ನಾಗರಿಕ ಸಮಾಜದ ಒಂದು ಭಾಗವಾಗಿ ನಾವು ಎಷ್ಟರ ಮಟ್ಟಿಗೆ ಸ್ಪಂದಿಸಿದ್ದೇವೆ ಎಂದು ಯೋಚಿಸುವ ಮನಸುಗಳು ಕಡಿಮೆಯಾಗುತ್ತಿವೆ. ಏಕೆಂದರೆ ದೇಶದ ಅಭಿವೃದ್ಧಿಯ ಮುಂದೆ ಇವೆಲ್ಲವೂ ಗೌಣ ಎನಿಸುವಂತಹ ಸಮೂಹ ಸನ್ನಿಗೆ ನಾಗರಿಕ ಸಮಾಜದ ಬಹುದೊಡ್ಡ ಸಮೂಹ ಬಲಿಯಾಗಿದೆ.

ಈ ಸಮೂಹದಲ್ಲಿ ಶೋಷಿತರೂ ಇದ್ದಾರೆ ಎನ್ನುವುದು ದುರಂತವಾದರೂ ಸತ್ಯ. ಅತ್ಯಾಚಾರ ಮತ್ತು ದೌರ್ಜನ್ಯಕ್ಕೊಳಗಾದ ಮಹಿಳೆಯನ್ನೇ ದೋಷಿಯಂತೆ ಕಾಣುವ, ದೂಷಿತಳನ್ನಾಗಿ ಮಾಡುವ ಶತಮಾನಗಳ ಪರಂಪರೆಗೆ ನಮ್ಮ ಸಮಾಜ ಒಗ್ಗಿಹೋಗಿದೆ. ಶಿಕ್ಷಣ ಮತ್ತು ಪ್ರಗತಿ ಈ ಮನಸ್ಥಿತಿಯನ್ನು ಬದಲಿಸಲು ಸಾಧ್ಯವಾಗಿಲ್ಲ.

ಈ ನಿಟ್ಟಿನಲ್ಲಿ ಒಂದು ನಿರ್ದಿಷ್ಟ ನೆಲೆಯಲ್ಲಿ “ ಭಾರತ ಹೀಗಿರಲಿಲ್ಲ ” ಎಂದು ಹೇಳಬಹುದು. ಮೂರು ನಾಲ್ಕು ದಶಕಗಳ ಹಿಂದೆ ಭಾರತ ಈ ರೀತಿಯ ನಿಷ್ಕ್ರಿಯತೆಗೆ ಬಲಿಯಾಗಿರಲಿಲ್ಲ. ಈ ಮಟ್ಟಿಗೆ ನಿರ್ಲಜ್ಜವಾಗಿರಲಿಲ್ಲ. ಒಂದು ಬೆಲ್ಚಿ, ಒಂದು ಕರಂಚೇಡು, ಒಂದು ಬತಾನಿತೊಲ, ಒಂದು ಲಕ್ಷ್ಮಣಪುರಬಾಥೆ, ಒಂದು ತ್ಸೆಂಡೂರು ನೂರಾರು ಬೀದಿ ನಾಟಕಗಳಿಗೆ, ಹಾಡುಗಳಿಗೆ, ಹೋರಾಟಗಳಿಗೆ ಪ್ರೇರಣೆ ನೀಡಿದ್ದವು.

ಆ ಒಂದು ಭಾರತ ಇಂದು ಇಲ್ಲವಾಗಿದೆ. ಏಕೆ ಹೀಗಾಯಿತು ಎಂದು ಕೆದಕುತ್ತಾ ಹೋದರೆ ಮತ್ತೊಮ್ಮೆ 1980-90ರ ದಶಕದ ಸಾಂಸ್ಕೃತಿಕ ರಾಜಕಾರಣ ಮತ್ತು ಮಂಡಲ-ಕಮಂಡಲದ ವಿಷವರ್ತುಲದಲ್ಲಿ ಬಂದು ನಿಲ್ಲುತ್ತೇವೆ. ಶೋಷಿತರ ದನಿಗೆ ದನಿಯಾಗಬೇಕಾದವರು ಶೋಷಿತ ಸಮುದಾಯದವರೇ ಆಗಬೇಕಿಲ್ಲ ಹಾಗೆಯೇ ಶೋಷಿತ ಸಮುದಾಯದ ಜನಪ್ರತಿನಿಧಿಗಳು ಈ ಆಕ್ರಂದನದ ದನಿಗೆ ದನಿಯಾಗದೆ ಅನ್ಯ ಮಾರ್ಗವೂ ಇಲ್ಲ.ಈ ಎರಡು ವಾಸ್ತವಗಳ ನಡುವೆ ನಾವು ಇಂದು ನಿರ್ಲಜ್ಜ ಭಾರತದಲ್ಲಿ ಬದುಕುತ್ತಿದ್ದೇವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending