Connect with us

ಭಾವ ಭೈರಾಗಿ

ಪುಸ್ತಕ ವಿಮರ್ಶೆ | ಒಡಲಬೇಗೆಯ ನಡುವೆ ಹೊಳೆವ ‘ಮಡಿಲ ನಕ್ಷತ್ರ’

Published

on

  • ಡಾ.ಎನ್.ಕೆ.ಪದ್ಮನಾಭ

ವಿತೆ ಎಂದರೆ ಹಾಗೆಯೇ. ಅದು ಮನಸ್ಸಿಗೆ ಹತ್ತಿರ. ಬುದ್ಧಿ-ಭಾವಗಳ ಎಚ್ಚರದೊಳಗೆ ಸೃಷ್ಟಿಯಾಗುವ ಕೌತುಕ. ಒಂದಷ್ಟು ಖುಷಿ, ಒಂದಷ್ಟು ವಿಷಾದದ ಛಾಯೆಯನ್ನು ಅಕ್ಷರಗಳಲ್ಲಿ ಹಿಡಿದಿಟ್ಟು ಬೆಳಕಿನ ಗಮ್ಯವನ್ನು ಹೊಳೆಸುವ ದಿವ್ಯತ್ವ ಅದಕ್ಕಿರುತ್ತದೆ.

ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಮನುಷ್ಯ ಸ್ವಭಾವ ಆವಾಹಿಸಿಕೊಳ್ಳುತ್ತಲೇ ಇರುವ ಸಂಕೀರ್ಣತೆಯನ್ನು ಅದರ ಎಲ್ಲಾ ನೆಲೆಗಳೊಂದಿಗೆ ಪರೀಕ್ಷಿಸಿ ದಾಖಲಿಸುವ ಚಾರಿತ್ರಿಕ ಎನ್ನಬಹುದಾದ ಹೊಣೆಗಾರಿಕೆಯನ್ನು ನಿರ್ವಹಿಸುತ್ತಲೇ ಇರುತ್ತದೆ.

ಓದಿಸಿಕೊಳ್ಳುವ ಮತ್ತು ಹಾಗೆ ಓದಿಸಿಕೊಳ್ಳುತ್ತಲೇ ಆಪ್ತವಾಗಿಬಿಡುವ ಅದರ ವ್ಯಾಕರಣ ಭಿನ್ನವಾಗುತ್ತಲೇ ಇರುತ್ತದೆ. ಹೀಗಾಗಿಯೇ ನಿರ್ದಿಷ್ಟ ಚೌಕಟ್ಟುಗಳಾಚೆಗೆ ಜಿಗಿದು ಹೊಸದೊಂದು ಶೈಲಿಯನ್ನು ಹಾದು ವಿನೂತನ ಅರ್ಥವಿನ್ಯಾಸ ರೂಪಿಸುವಷ್ಟು ಪ್ರಭಾವೀಯಾಗಿರುತ್ತದೆ.

ಕವಯಿತ್ರಿ ರೇಖಾ ಭಟ್

ಮತ್ತೊಂದು ದೇಶಕಾಲದ ಕಾವ್ಯಮಾದರಿಯ ಪ್ರಭಾವ ಜೊತೆಯಾದರಂತೂ ಕವಿತೆಯ ಜೀವಂತಿಕೆಯ ಶಕ್ತಿ ಮತ್ತಷ್ಟು ವಿಸ್ತಾರಗೊಳ್ಳುತ್ತದೆ. ಕನ್ನಡದ ಗಜಲ್ ಮೂಲಕ ಇದು ಸಾಧ್ಯವಾಗುತ್ತಿದೆ.
ಪರ್ಷಿಯಾ ಮೂಲದ ಗಜಲ್ ಕಾವ್ಯಪ್ರಕಾರ ಕನ್ನಡದೊಳಗೆ ಅವತರಿಸಿದ ಪರಿಯೇ ಅನನ್ಯವಾದುದು.

ಹಿಂದಿ, ತರ್ಕಿಷ್, ಅರೇಬಿಕ್ ಮತ್ತು ಪರ್ಷಿಯನ್ ಭಾಷೆಗಳ ಶಾಬ್ದಿಕ ಶಕ್ತಿಯೊಂದಿಗಿನ ಗಜಲ್ ಕನ್ನಡತ್ವದ ಸ್ಪರ್ಶ ಪಡೆದು ಹೊಸ ಬಗೆಯ ಕಾವ್ಯಾಸ್ವಾದ ಹೊಮ್ಮಿಸುತ್ತಿದೆ. ನಮ್ಮದಲ್ಲದ ದೇಶದ ಭಾಷಿಕ ಸಂಸ್ಕೃತಿಯ ಪರಿಸರದೊಳಗೆ ರೂಪುಗೊಂಡ ಕಾವ್ಯಾಕೃತಿಯಾಗಿದ್ದ ಗಜಲ್ ಭಾರತದಲ್ಲಿ ಭಿನ್ನ ಸ್ವರೂಪವನ್ನು ತನ್ನದಾಗಿಸಿಕೊಂಡಿದ್ದಕ್ಕೆ ಇಲ್ಲಿಯ ಪ್ರತಿಭಾನ್ವಿತರ ಗ್ರಹಿಕೆ ಮತ್ತು ಅನ್ವಯಿಸುವಿಕೆಯ ಕೌಶಲ್ಯದ ಕಾಣ್ಕೆ ದೊಡ್ಡದು. ಶಾಂತರಸರಿಂದ ಶುರುವಾದ ಈ ಕಾಣ್ಕೆಯ ಯಾನ ಇದೀಗ ಪರಿಪಕ್ವತೆಯ ಪ್ರವರ್ಧಮಾನದ ಆಯಾಮ ಪಡೆದಿದೆ.

ಇದನ್ನು ಸಾಬೀತುಪಡಿಸುವಂತೆಯೇ ರೇಖಾ ಭಟ್ಟ ಹೊನ್ನಗದ್ದೆ ಅವರ ‘ಮಡಿಲ ನಕ್ಷತ್ರ’ ಗಜಲ್ ಸಂಕಲನ ಇದೆ. ಇದನ್ನು ಕೇವಲ ಗಜಲ್ ಸಂಕಲನ ಎನ್ನುವುದಕ್ಕಿಂತ ಗಜಲ್ ಪ್ರಕಾರಕ್ಕೆ ನೂತನ ಆಯಾಮ ದಕ್ಕಿಸಿಕೊಟ್ಟ ಕಲಾಕೃತಿ ಎನ್ನುವುದು ಸೂಕ್ತ. ಪ್ರೀತಿ-ಪ್ರೇಮದ ಭಾವಗಳನ್ನು ತಾತ್ವಿಕತೆಗೆ ತಿರುಗಿಸುವ ಸಾಧ್ಯತೆಯನ್ನು ಮನವರಿಕೆ ಮಾಡಿಕೊಡುವುದರಲ್ಲಿಯೇ ಈ ಕೃತಿಯ ಹೆಗ್ಗಳಿಕೆ ಇದೆ.

ಗಜಲ್‍ನಂಥ ಬೇರೊಂದು ದೇಶದ ಭಾಷಿಕ ಸಂಸ್ಕøತಿಯ ಕಾವ್ಯಾತ್ಮಕ ಭಿತ್ತಿಯನ್ನು ಕನ್ನಡೀಕರಿಸುವ ಮತ್ತು ಆ ಮೂಲಕ ಕನ್ನಡದ ಕಾವ್ಯ ಪರಂಪರೆಯನ್ನು ಪ್ರಖರಗೊಳಿಸುವ ಪ್ರಯತ್ನದಲ್ಲಿ ರೇಖಾ ಅವರು ಯಶಸ್ವಿಯಾಗಿದ್ದಾರೆ. ಈ ಯಶಸ್ಸು ಕೇವಲ ಅವರ ವ್ಯಕ್ತಿಗತ ಕಾವ್ಯಪ್ರತಿಭೆಗಷ್ಟೇ ಸೀಮಿತವಲ್ಲ.

ಈ ಪ್ರಕಾರದಲ್ಲಿ ಕಾರ್ಯನಿರ್ವಹಿಸುವವರೆಲ್ಲರಿಗೂ ಒಂದು ಮಾದರಿಯನ್ನು ರೂಪಿಸಿಕೊಡುವ ನಿಟ್ಟಿನಲ್ಲಿ ಈ ಯಶಸ್ಸಿನ ಶ್ರೇಷ್ಠತೆ ಇದೆ. ಮಾಧುರ್ಯದ ನಿವೇದನೆ ಮತ್ತು ವೇದನೆಯ ಅಭಿವ್ಯಕ್ತಿಯನ್ನೇ ಕೇಂದ್ರವಾಗಿಸಿಕೊಂಡ ಗಜಲ್ ಬದಲಾದ ಕಾಲಘಟ್ಟದಲ್ಲಿ ಮನುಷ್ಯ ಮತ್ತು ಜೀವಜೀವಗಳೊಳಗಿನ ಸಂಕೀರ್ಣ ಸ್ವರೂಪದ ಶೋಧನೆಯ ಕಲಾಪ್ರಕಾರವಾಗಿ ಮಾರ್ಪಡುವ ವಿಸ್ಮಯಕ್ಕೆ ಈ ಕೃತಿಯ ಸಾಲುಗಳು ಸಾಕ್ಷಿ ನುಡಿಯುತ್ತವೆ. ಈ ದೃಷ್ಟಿಯಿಂದ ರೇಖಾ ಅವರ ಗಜಲ್ ಬರವಣಿಗೆಯ ಯಶಸ್ಸು ವ್ಯಕ್ತಿಗತ ಗೆಲುವಿನಾಚೆಗಿನ ಸಾಮುದಾಯಿಕ ಆತ್ಮಶೋಧದ ಎತ್ತರವನ್ನೂ ದಕ್ಕಿಸಿಕೊಂಡುಬಿಡುತ್ತದೆ.

ಪ್ರೀತಿ, ಪ್ರೇಮ, ವಿರಹ, ದುಃಖ-ದುಮ್ಮಾನ, ಅಸಹಾಯಕತೆ – ಇವೆಲ್ಲವೂ ಮನುಷ್ಯ ಸ್ವಭಾವದ ಒಳಗೇ ಸಮ್ಮಿಳಿತಗೊಂಡ ವಿವಿಧ ಭಾವಗಳು. ಇವುಗಳನ್ನು ಹೊರತುಪಡಿಸಿ ಮನುಷ್ಯ ಅಸ್ತಿತ್ವವನ್ನು ಕಲ್ಪಿಸಿಕೊಳ್ಳಲಾಗದು. ಮನುಷ್ಯ ಸ್ವಭಾವವನ್ನು ಅದರ ಎಲ್ಲ ಇತಿ-ಮಿತಿಗಳ ಜೊತೆಗೆ ಸಮಗ್ರವಾಗಿ ಶೋಧಿಸಿ ಆ ಕ್ಷಣಕ್ಕೆ ಮನದೊಳಗೆ ಭಾವುಕ ಸಂಚಲನವನ್ನು ಕವಿತೆ ಮೂಡಿಸುತ್ತದೆ.

ಚೌಕಟ್ಟುಗಳ ದಿಗ್ಬಂಧನದಿಂದ ವಿಮುಕ್ತಗೊಳ್ಳುವುದಕ್ಕೆ ರಹದಾರಿ ತೋರುತ್ತದೆ. ಈ ಅಂತಃಸತ್ವದೊಂದಿಗೇ ಭಾರತೀಯ ಕಾವ್ಯಪ್ರಕಾರ ವಿವಿಧ ಕಾಲಗಳನ್ನು ಹಾದುಹೋಗಿದೆ. ಆಯಾ ಪ್ರಾದೇಶಿಕ ಭಾಷೆಗಳಲ್ಲಿ ರೂಪುಗೊಳ್ಳುವ ಕಾವ್ಯಪ್ರಕಾರವು ಭಾವಸಂವೇದನೆಯ ಬಹುಮುಖೀ ಪಾತ್ರಗಳೊಂದಿಗೆ ಗುರುತಿಸಿಕೊಂಡಿದೆ.

ಈ ಕಾವ್ಯಪರಂಪರೆಯನ್ನು ಸಮಗ್ರವಾಗಿ ಗ್ರಹಿಸಿಕೊಂಡು ಗಜಲ್‍ನ ವ್ಯಾಕರಣ ಪ್ರಜ್ಞೆ ಮತ್ತು ಆಶಯ ವಿನ್ಯಾಸದ ಮಾದರಿಯ ಆಧಾರದಲ್ಲಿ ಸೃಜನಶೀಲತೆಯನ್ನು ಸಾಬೀತುಪಡಿಸುವ ಶ್ರದ್ಧಾಪೂರ್ವಕ ಪ್ರಯತ್ನ ‘ಮಡಿಲ ನಕ್ಷತ್ರ’ದಂಥ ಕೃತಿಯನ್ನು ರೂಪಿಸುತ್ತದೆ.

ಕನ್ನಡದ ಕಾವ್ಯ ಮತ್ತು ಕಥನ ಕ್ರಮಗಳೊಳಗೇ ಬುದ್ಧಿ-ಭಾವಗಳ ಜುಗಲ್‍ಬಂದಿಯ ಎಳೆಗಳನ್ನು ಕಾಣಬಹುದು. ಮಹಿಳೆಯಾದ ಕಾರಣಕ್ಕೇ ಅನುಭವಿಸುವ ಎಲ್ಲ ಬಗೆಯ ಸಂಕಟಗಳು ಸಾಹಿತ್ಯದ ಮೂಲಕ ಧ್ವನಿತವಾಗಬೇಕಾದ ಅನಿವಾರ್ಯತೆ ಈಗಲೂ ಇದೆ. ಈ ಅನಿವಾರ್ಯತೆಯನ್ನು ಕನ್ನಡದ ಮಹಿಳಾ ಬರಹಗಾರರು ಕಾಡಿಸಿಕೊಂಡು ಸೃಜನಶೀಲ ಅಭಿವ್ಯಕ್ತಿ ಸಾಧಿಸಿದ್ದಾರೆ ಎನ್ನಬಹುದು.

ಬೌದ್ಧಿಕ ಎಚ್ಚರದೊಳಗೆ ರೂಪುಗೊಂಡ ಕಾವ್ಯ, ಕಥನಗಳು ವಾಸ್ತವದೊಂದಿಗೆ ಮುಖಾಮುಖಿಯಾಗಿ ಬಂಡಾಯದ ಧ್ವನಿಯನ್ನು ಅಣುರಣಿಸಿವೆ. ಪ್ರತಿಭಾ ನಂದಕುಮಾರ್ ಕಾವ್ಯಧ್ವನಿ ಈ ಬಗೆಯದ್ದು. ಸತ್ಯವನ್ನು ಅತ್ಯಂತ ನಿಷ್ಠುರ ಪ್ರಖರತೆಯ ವ್ಯಾಪ್ತಿಯಲ್ಲಿಟ್ಟು ಸಂಕಟಕ್ಕೆ ಕಾರಣವಾದ ವ್ಯವಸ್ಥೆಯನ್ನು ನಿಕಷಕ್ಕೊಡ್ಡುವ ಕ್ರಮ ಅವರ ಕಾವ್ಯದಲ್ಲಿ ಕಾಣುತ್ತೇವೆ. ವೈದೇಹಿ ಅವರ ಅಭಿವ್ಯಕ್ತಿಯು ಈ ರೀತಿಯದ್ದಲ್ಲ.

ಅಂತಃಕರಣದ ಆಪ್ತ ಭಾಷೆಯೊಳಗೆ ಎಲ್ಲ ಸಂಕಟಗಳನ್ನು ಕಾಣಿಸಿ ಸೌಜನ್ಯದ ಧಾಟಿಯಲ್ಲಿ ಪರ್ಯಾಯದ ಹಾದಿ ಹೊಳೆಸುವ ಪ್ರತಿಭೆ ಅವರದ್ದು. ಬುದ್ಧಿ-ಭಾವಗಳೊಂದಿಗಿನ ಈ ಬಗೆಯ ಅಭಿವ್ಯಕ್ತಿ ಮಾದರಿಗಳನ್ನು ಭಿನ್ನವಾಗಿ ಗ್ರಹಿಸಿಕೊಂಡಾಗ ಮಾತ್ರ ಕಾವ್ಯ ಅಥವಾ ಕಥನ ಪ್ರಕಾರಕ್ಕೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ನೂತನ ಆಯಾಮ ನೀಡುವುದಕ್ಕೆ ಸಾಧ್ಯವಾಗುತ್ತದೆ.

ರೇಖಾ ಭಟ್ಟ ಹೊನ್ನಗದ್ದೆ ಅವರ ಗಜಲ್ ಸಂಕಲನ ಈ ಸಾಧ್ಯತೆಯನ್ನು ಕಂಡರಿಸುತ್ತದೆ. ‘ಮಡಿಲ ನಕ್ಷತ್ರ’ ಶೀರ್ಷಿಕೆಯೇ ಹಲವು ಅರ್ಥಗಳನ್ನು ಧ್ವನಿಸುತ್ತದೆ. ಒಡಲೊಳಗೆ ಸಂಕಟಗಳ ಕೆಂಡ ಧಗಧಿಗಿಸುತ್ತಿದ್ದರೂ ಅದು ನೇರವಾಗಿ ಇಲ್ಲಿ ದಾಖಲಾಗದು. ಅದರ ಬದಲು ‘ಮಡಿಲ ನಕ್ಷತ್ರ’ ಹೊಳೆಯುತ್ತದೆ. ಆಕ್ರೋಶ, ಬಂಡಾಯಕ್ಕಿಂತ ಬದಲಾವಣೆಯ ಬೆಳಕಿನೆಡೆಗಿನ ಆಶಾವಾದಿ ನೋಟವನ್ನೇ ರೇಖಾ ಅವರು ಮುಖ್ಯವಾಗಿಸಿಕೊಳ್ಳುತ್ತಾರೆ.

ಈ ಕೃತಿಯ ಗಜಲ್‍ಗಳು ಅಂತರಾಳದ ಹೊಯ್ದಾಟಗಳಿಗೆ ಕಾರಣವಾಗುವ ವಾಸ್ತವಗಳನ್ನು ನೆಮ್ಮದಿಯ ನಾಳೆಗಳ ಹುಡುಕಾಟದ ಪ್ರಜ್ಞೆಯೊಂದಿಗೇ ರಚಿತವಾಗಿವೆ. ಆಶಾವಾದ ಕಳೆದುಕೊಳ್ಳದೇ ನಿಷ್ಠುರ ನಿರ್ಲಿಪ್ತತೆಯೊಂದಿಗೇ ಒಡಲಾಳದ ಬೇಗೆಯನ್ನು ಸಹಿಸಿಕೊಂಡು ಹೊಸ ಹೆಜ್ಜೆಗಳ ಕಡೆಗೆ ಪಯಣಿಸುವ ಜೀವನೋತ್ಸಾಹವೇ ಇಲ್ಲಿಯ ಗಜಲ್‍ಗಳ ಮುಖ್ಯಗಮ್ಯವಾಗಿದೆ.

ಸಂಕಲನದುದ್ದಕ್ಕೂ ಕಾಣಿಸಿಕೊಳ್ಳುವ ‘ರೇಖೆ’ ಕೇವಲ ಕಾವ್ಯನಾಮವಷ್ಟೇ ಅಲ್ಲ. ಎಲ್ಲ ಬಗೆಯ ಸಂಕುಚಿತ ಗಡಿರೇಖೆಗಳಾಚೆಗೆ ಜಿಗಿದು ಹೊಸ ಪಲ್ಲಟಗಳೊಂದಿಗಿನ ನಕ್ಷತ್ರಪ್ರಭೆಯೊಂದಿಗೆ ಗುರುತಿಸಿಕೊಳ್ಳುವ ಭಾವುಕ ಹಂಬಲದ ಪ್ರತೀಕವಾಗಿಯೂ ಅದನ್ನು ಗ್ರಹಿಸಬಹುದು. ವ್ಯವಸ್ಥೆಯೊಳಗೇ ರೂಪಿತವಾದ ಚೌಕಟ್ಟುಗಳಿಂದ ವಿಮುಕ್ತಗೊಳ್ಳುವ ಆಂತರ್ಯದ ಶೋಧಪ್ರಜ್ಞೆ ಹೊಳೆಸಿಕೊಂಡ ಎಚ್ಚರದ ಪ್ರತಿಮೆಯನ್ನಾಗಿಯೂ ‘ರೇಖೆ’ಯನ್ನು ವಿಶ್ಲೇಷಿಸಬಹುದು. ಇದಕ್ಕೆ ಉದಾಹರಣೆಯಾಗಿ ಈ ಗಜಲ್‍ನ್ನು ಪ್ರಸ್ತಾಪಿಸಬಹುದು;

ನಿರಾಸೆಯ ಮಡಿಲಲ್ಲಿ ಕನಸೊಂದು ತೂಗಿದರೆ ಸೋಲಾಗದು
ಹುತ್ತಗಟ್ಟಿದ ಚಿತ್ತದಿ ಹೊಸಬೆಳಕು ಹೊಕ್ಕರೆ ಮತ್ತೆ ಕತ್ತಲಾಗದು

ಸೂಜಿ ನೂರು ಚೂರುಗಳ ಸೇರಿಸಿ ಹೊಲಿದಾಗ ಹರವು ಕೌದಿ
ಮೊನಚಿಗೆ ಮೈಯೊಡ್ಡಿದರೂ ಖುಷಿಯ ನಡೆಗೆ ನೋವಾಗದು

ಬಿರುಗಾಳಿಯಾಗಿ ಬಂದೆರಗುವ ದುಗುಡಗಳೆಲ್ಲ ಯಾವ ಲೆಕ್ಕ
ಎದೆಗೆ ಬೇರಿಳಿಸಿ ಬೆಳೆದು ನಿಂತಿರುವ ಗಿಡವೆಂದಿಗೂ ಉರುಳದು

ಜೇನುಹುಳ ಅಲೆದಲೆದು ಸಿಹಿಗೂಡನು ಕಟ್ಟುವುದು ತಾನೇ
ಹೊರಗಂಟಿದ ನಂಜಿಗೆ ಅಂತರಂಗದ ಸವಿಯು ಬರಡಾಗದು

ಸಾವಿರ ದಾರಿಗಳು ಕರೆದರೇನು ನನ್ನ ಗುರಿ ನೀನು ಮಾತ್ರ
ಸರಳ ‘ರೇಖೆ’ಯ ಪಯಣವಿದು ಎಂದಿಗೂ ಹಿಮ್ಮರಳದು

ಹೀಗೆ ದುಗುಡ-ದುಮ್ಮಾನದ ನಿವೇದನೆಯಿದ್ದರೂ ಕೊನೆಗೆ ಆಶಾವಾದದ ಧ್ವನಿ ಹೊಮ್ಮಿಸುವಲ್ಲಿಯೇ ಇಲ್ಲಿಯ ಗಜಲ್‍ಗಳ ಭಿನ್ನತೆ ಇದೆ. ಇಲ್ಲಿಯ ಗಜಲ್‍ಗಳು ಪ್ರೀತಿಪೂರ್ವಕ ತಕರಾರು ಎತ್ತುತ್ತವೆ. ನೋಯಿಸಿದ್ದಕ್ಕೆ ಸಿಟ್ಟಿಲ್ಲ, ಆಕ್ರೋಶವಿಲ್ಲ, ದ್ವೇಷದ ಹೊಗೆಯಾಡುವುದಿಲ್ಲ. ಸೌಜನ್ಯದ ಪ್ರತಿಕ್ರಿಯೆಯ ಪದಗಳಲ್ಲಿಯೇ ಬಹುದೊಡ್ಡ ಸವಾಲೆಸೆಯುತ್ತವೆ.

‘ಎದೆಕಾಡ ಬಿದಿರಮೇಳೆ ನಿನಗಾಗಿ ತುಡಿದು ಕೊಳಲಾಗಿತ್ತು, ಒಲವ ನಾದ ಹೊಮ್ಮಿಸದೇ ಮುರಿದುಹೋದೆ ನೀನು’ ಎಂಬ ತಕರಾರು ಕನ್ನಡದ ಗಜಲ್‍ಗೆ ಹೊಸದೊಂದು ಪರಿಭಾಷೆಯನ್ನೇ ನೀಡಿದೆ ಎಂದೆನ್ನಿಸುತ್ತದೆ. ‘ರಕ್ತಬೀಜಾಸುರರು ತಲೆಎತ್ತಿ ಮೆರೆದು ನೆಲವೀಗ ನರಕ, ಸುರಿಸಿದ ಪ್ರೀತಿಮಳೆಯ ಕುರುಹಿರದೆ ಮುಗಿಲು ನರಳಿದೆ’ ಎಂಬ ಸಾಲುಗಳು ಪ್ರಕೃತಿಯ ವಕ್ತಾರಿಕೆ ಪಾತ್ರವನ್ನು ನಿಭಾಯಿಸಿವೆ.

ರೇಖೆ’ಯ ಅರೆಗಳಿಗೆ ಬಿಟ್ಟಿರದ ನಿನ್ನದಿಂದು ಅರಿವಿರದ ಬದುಕು, ಕೊನೆಗೂ ತೊರೆದೇ ಹೋದೆಯೆಂದು ದ್ವೇಷಿಸಲಾರೆ ನಿನ್ನನು’ ಎನ್ನುವ ನಿವೇದನೆ ನೋವಿನ ನಡುವೆಯೂ ಮನುಷ್ಯ ಸಕಾರಾತ್ಮಕತೆಯ ಕಡೆಗೆ ಹೊರಳಿಕೊಳ್ಳುವ ಅನಿವಾರ್ಯತೆಯನ್ನು ಮನಗಾಣಿಸುತ್ತದೆ.

ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯದೊಂದಿಗೆ ಪ್ರಕಟಿತವಾದ ಈ ಸಂಕಲನ ರೇಖಾ ಭಟ್ಟ ಹೊನ್ನಗದ್ದೆ ಅವರ ಕಾವ್ಯಪ್ರತಿಭೆಯ ವೈಶಿಷ್ಟ್ಯತೆಗೆ ಕನ್ನಡಿ ಹಿಡಿಯುತ್ತದೆ. ಹೊಸ ಕಾಲ ಎದುರುಗೊಳ್ಳಬಹುದಾದ ಸವಾಲು ಮತ್ತು ಆ ಕಾರಣಕ್ಕಾಗಿಯೇ ಅನುಭವಿಸಬಹುದಾದ ಸಂಕಟಗಳನ್ನು ಹಿಡಿದಿಟ್ಟು ಹೊಸ ಪ್ರಜ್ಞೆ ಮೂಡಿಸುವ ಜವಾಬ್ದಾರಿ ಕನ್ನಡ ಕಾವ್ಯ ಹೊತ್ತುಕೊಳ್ಳಬೇಕಿದೆ.

ಸರಕು ಸಂಸ್ಕೃತಿಯೇ ವಿಜೃಂಭಿಸುತ್ತಿರುವ ನಿರ್ಭಾವುಕ ಜಗತ್ತಿನೊಳಗೆ ಭಾವುಕ ಪ್ರಪಂಚದ ಆಶಾವಾದಿ ನೆಲೆಗಳನ್ನು ಕಾಣಿಸುವ ಹೊಸ ಅಭಿವ್ಯಕ್ತಿ ಮಾದರಿಗಳು ಮುನ್ನೆಲೆಗೆ ಬರಬೇಕಿದೆ. ಅಂಥ ವಿರಳ ಅಭಿವ್ಯಕ್ತಿ ಮಾದರಿಯಾಗಿ ರೇಖಾ ಅವರ ಗóಜಲ್ ಶೈಲಿ ವಿಶೇಷವೆನ್ನಿಸುತ್ತದೆ. ಈ ಕಾರಣಕ್ಕಾಗಿಯೇ ಅವರ ಕಾವ್ಯದ ಧಾಟಿ ಆಪ್ತವಾಗುತ್ತದೆ. ಸದ್ಯದ ಜಗತ್ತನ್ನು ಸ್ವಯಂಸ್ಫೂರ್ತಿಯೊಂದಿಗೆ ಎದುರುಗೊಳ್ಳಲು ನೆರವಾಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ

ಕವಿತೆ | ಚಪ್ಪಲಿ ಮತ್ತು ನಾನು

Published

on

  • ಮೂಡ್ನಾಕೂಡು ಚಿನ್ನಸ್ವಾಮಿ

ನಾನು ದೇವಸ್ಥಾನಕ್ಕೆ ಹೋದಾಗ
ಚಪ್ಪಲಿಯನ್ನು ಹೊರಗೆ ಬಿಡುವುದಿಲ್ಲ
ನಾನೇ ಹೊರಗಿರುತ್ತೇನೆ

ಚಮ್ಮಾರನ ಕಾಲುಗಳಲ್ಲಿ ಕಂಡ ಚಪ್ಪಲಿ
ಮನುಷ್ಯ ನಾಯಿಯನ್ನು ಕಚ್ಚಿದಾಗ ಆಗುವಂತೆ
ಸುದ್ದಿಯಾಗುತ್ತದೆ

ಚಪ್ಪಲಿಗಳನ್ನು ಬಿಚ್ಚಿ ಹರಡುವ
ಎಲ್ಲರ ಕಾಲುಗಳು
ನನ್ನ ಮೇಲೆ ಹರಿದಾಡುತ್ತವೆ

ನಾನೊಂದು ಗಿಡ
ಅದು ನನ್ನ ಬುಡ
ಎಂದವರಿಗೆ ತಿಳಿಯುವುದೇ ಇಲ್ಲ

ಬತ್ತಿದ ಕೆರೆಯ ನೀರುಗುಣಿಗೆ
ಗೋಣ ಅನಿಸುವ ಕೊಕ್ಕರೆಯಂತೆ
ನಾನು ಮುಂಗಾಲ
ತುದಿ ಬೆರಳುಗಳ ಮೇಲೆ
ನಿಂತು ಇಣುಕಿ ದೇವರ ರೂಪವನ್ನು
ಕಂಡಷ್ಟು ಕದಿಯಿತ್ತೇನೆ

ಹತ್ತಾರು ತಲೆಗಳ ನಡುವೆ
ಹೊಳೆಯುವ ಮುಕುಟಮಣಿ
ಮೆತ್ತನೆಯ ಹಾಸಾಗಿ ಬೆಳೆದು
ಛತ್ರಿಯಾಗುವ ಫಣಿ
ಒಮ್ಮೆ ವಜ್ರಖಚಿತ ಕಿರೀಟ
ಕಂಠೀಹಾರ, ಜನಿವಾರ
ದೀಪದಾರತಿ ಬೆಳಗಿ
ಫಂಟನಾದ ಮೊಳಗುವಾಗ
ಕಾದ ಕಬ್ಬಿಣವಾಗಿ
ನೆಲ ಕುಸಿಯತೊಡ, ಹಸಿ
ಒಡಲು ಉರಿ ಹತ್ತಿ ಬೇಯುತ್ತದೆ

ದೂರವಿದ್ದರೂ ನಿಷ್ಠಾವಂತ
ಗರುಡಗಂಭ ನನಗಿಷ್ಟ, ಅದರ ಮುಂದಿಟ್ಟ
ಕೆಂಡದ ಕುಂಡಕ್ಕಷ್ಟು ಧೂಪ ಎರಚಿ
ಹೊಗೆ ಚಿಮ್ಮಿಸುವಾಗ ನಾನು ಕೃತಾರ್ಥ

ದೇವರ ಬಳಿ ಸುಳಿದು
ದಕ್ಷಿಣೆ ಪ್ರದಕ್ಷಿಣೆ ಹಾಕುವವರು
ರೆಪ್ಪೆ ಮುಚ್ಚದೆ ಆಗಾಗ ನನ್ನತ್ತ ನೋಡುವರು
ನನ್ನ ಚಿತ್ತ ಮಾತ್ರ ದೇವರತ್ತ

ಗರ್ಭಗುಡಿಯಲ್ಲಿ
ಹೂವು ಗಂಧ ಪಡೆದುಕೊಳ್ಳುವವರ ಆತ್ಮ
ಕಳಚಿಟ್ಟ ಚಪ್ಪಲಿಗಳ ಬಳಿ
ಹೊರಗೆ

ನಿತ್ಯ ಹಜಾರದಲಿ ನಿಂತು
ಗೋಣ ಆನಿಸಿ ಇಣುಕಿ
ಪುನೀತವಾಗುವ ನನ್ನ ಆತ್ಮ
ದೇವರ ಬಳಿ ಒಳಗೆ

– ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2009 ರಲ್ಲಿ ಪ್ರಕಟಿಸಿರುವ ‘ಸುವರ್ಣ ಕಾವ್ಯ‘ ಪುಸ್ತಕದಿಂದ, ಮೂಡ್ನಾಕೂಡು ಚಿನ್ನಸ್ವಾಮಿಯವರ ‘ಚಪ್ಪಲಿ ಮತ್ತು ನಾನು’ ಕವಿತೆಯನ್ನು ಆಯ್ದುಕೊಳ್ಳಲಾಗಿದೆ. ಈ ಪುಸ್ತಕದ ಸಂಪಾದಕರು ಬಿ.ಎ.ಸನದಿ ಮತ್ತು ಸವಿತಾ ನಾಗಭೂಷಣ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪ್ರಿಯ ತೇಜಸ್ವಿ..!

Published

on


ಪೂರ್ಣಚಂದ್ರ ತೇಜಸ್ವಿಯವರ ‘ಕರ್ವಾಲೋ‘ ಕಾದಂಬರಿಯ ಬಗ್ಗೆ ಪಿ.ಲಂಕೇಶ್ ಬರೆದಿರುವ ಲೇಖನ ಇದು. ಈ ಲೇಖನ‌ ಬರೆಯುವ ಹಿಂದಿನ ದಿನ ಕನ್ನಡ ‘ಓರಾಟಗಾರರು‘ ಲಂಕೇಶ್ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ ಘಾಸಿ ಮಾಡಿದ್ದರು. ದೈಹಿಕ ನೋವನ್ನು ನಿವಾರಿಸುವ ಉದಕದಂತೆ ‘ಕರ್ವಾಲೋ‘ ಕಾದಂಬರಿ ಒದಗಿಬಂದು, ಲಂಕೇಶರು ವಿಮರ್ಶೆಯ ಗದ್ಯಕ್ಕೂ ಕಾವ್ಯ ಸ್ಪರ್ಶ ನೀಡಿ ಬರೆದಿದ್ದು, ಓದುಗರನ್ನು ಸೆಳೆಯುತ್ತದೆ. ಕರ್ವಾಲೋ ಕಾದಂಬರಿಯ ಓದು ಲಂಕೇಶರಿಗೆ ದೈಹಿಕ ನೋವನ್ನು ನೀಗಿಸಿತೆಂದರೆ ಅಕ್ಷರ ಥೆರಪಿ ದೊಡ್ಡದೇ ನಿಜ.


ಪ್ರಿಯ ತೇಜಸ್ವಿ,

‘ಕನ್ನಡದ ಉಟ್ಟು ಓರಾಟಗಾರ’ರ ಕೆಲಸದಿಂದಾಗಿ ನನ್ನ ಮೈಯಲ್ಲಿ ಸರಿಯಿಲ್ಲದೆ ನಿಮಗೆ ಈ ಕಾಗದ ಬರೆಯುವುದು ತಡವಾಯಿತು. (ಆಗತಾನೆ ವಾಟಾಳ್ ನಾಗರಾಜ್ ಕಡೆಯವರಿಂದ ಲಂಕೇಶ್ ರ ಮೇಲೆ ಹಲ್ಲೆಯಾಗಿತ್ತು) ಹೊಡೆತದಿಂದಾಗಿ ಮೈಕೈ ನೋವಾಗಿ ಮಲಗಿದ್ದಾಗ ಕೂಡ ನನ್ನ ಕೋಣೆಯ ತುಂಬ ನಗೆ ಹಬ್ಬಿತ್ತು. ನನ್ನನ್ನು ನೋಡಿದವರು ಅಚ್ಚರಿ ಪಡುವ ರೀತಿಯಲ್ಲಿ ಗೆಲುವಾಗಿದ್ದೆ. ಇದಕ್ಕೆ ಕಾರಣ ನಿಮ್ಮ ಪುಸ್ತಕ ‘ಕರ್ವಾಲೋ.’

ನಿಮ್ಮ ಈ ‘ಕರ್ವಾಲೋ.’ ಕಾದಂಬರಿಯ ಮೇಲೆ ಒಳ್ಳೆಯ ವಿಮರ್ಶಕರು ಒಳ್ಳೊಳ್ಳೆಯ ವಿಮರ್ಶೆ ಬರೆಯಲಿದ್ದಾರೆ ಎಂಬ ಬಗ್ಗೆ ಅನುಮಾನವಿಲ್ಲ. ನನಗೆ ಓದಿದೊಡನೆ ಅನ್ನಿಸಿದ್ದನ್ನು ಬರೆಯುತ್ತಿದ್ದೇನೆ. ನನ್ನ ಸಂತೋಷವನ್ನು ನಮ್ಮ ಓದುಗರೂ ಪಡೆಯಲೆಂಬ ಕಾರಣಕ್ಕೆ ಇದನ್ನು ಅಚ್ಚು ಮಾಡುತ್ತಿದ್ದೇನೆ.

ನಿಮ್ಮ ಕಾದಂಬರಿಯಲ್ಲಿ ತುಂಬ ಒಳ್ಳೆಯದೆಂದು ಹೊಳೆದದ್ದು ನಿಮ್ಮ ತಮಾಷೆ ಮತ್ತು ಈ ತಮಾಷೆಯ ಮೂಲಕವೇ ನೀವು ನಿಜವಾಗಿಸುವ ಮನುಷ್ಯರು.

ನಮ್ಮ ಈ ಕೊಳೆತು ಹೋಗಿರುವ ಸಮಾಜದಲ್ಲಿ ಎಲ್ಲೆಲ್ಲೋ ಇದ್ದು ತಮ್ಮ ಜೀವನ ಸಾಗಿಸುವ, ತಮ್ಮ ಕೈಲಾದ್ದು ಮಾಡುವ ಮಂದಣ್ಣ ಮತ್ತು ಕರ್ವಾಲೋಗಳು ನಿಮ್ಮ ತಮಾಷೆಯನ್ನು ತೂರಿ ನಮ್ಮ ಮನಸ್ಸು ಕಲಕುತ್ತಾರೆ.

ಒಂದು ಕಡೆ ಮಂದಣ್ಣನಿದ್ದಾನೆ. ಹುಳಹುಪ್ಪಟೆಗಳನ್ನು ಹುಡುಕುತ್ತ ಹಿಡಿಯುತ್ತ ಹೋಗುವ ಈತನ ಪ್ರಕಾರ ಈತನ ಜೀವನದ ಏಕ ಮಾತ್ರ ಗುರು ‘ಮೇರೇಜ್’ ಆಗುವುದು. ಎಲ್ಲೆರೆದುರು ಮದುವೆಯಾಗಿ ಫೋಟೋ ಹಿಡಿಸಿಕೊಂಡು ನಾಲ್ಕೈದು ಮಕ್ಕಳು ಮಾಡುವ ಸದುದ್ದೇಶ ಉಳ್ಳ ಈತ ‘ಮೇರೇಜ್’ನಲ್ಲೇ ವಿಫಲ. ಹಳ್ಳಿಯ ಸಾಮಾನ್ಯ ಅಪಾಪೋಲಿಯಂತೆ ಕಾಣುವ ಈತನ ಸರಳ ಆಶೆಗಳು ಇವನ ಆಳದ ಮುಗ್ಧತೆಯನ್ನು ತೋರುತ್ತವೆ.

ಈ ಮುಗ್ಧತೆಯೊಂದಿಗೇ ಈತನನ್ನು ಇವನಿಗೆ ಗೊತ್ತಿಲ್ಲದಂತೆಯೇ ಸೆಳೆಯುವ ಪ್ರಕೃತಿಯ ಬಗೆಗಿನ ಕುತೂಹಲ ಇದೆ. ಈ ಕುತೂಹಲದಿಂದಾಗಿ ಈತ ಅತ್ಯಂತ ಅಕಾಡೆಮಿಕ್ ಆಗಿ ಕಾಣುವ ಮಾನವತಾವಾದಿ ಕರ್ವಾಲೋ ಎಂಬ ಫ್ರೊಫೆಸರ್ ಗೆ ಗೆಳೆಯನಾಗಿದ್ದಾನೆ.

ಕರ್ವಾಲೋವನ್ನು ನೀವು ಚಿತ್ರಿಸಿರುವ ರೀತಿಯಲ್ಲಿ ನಿಮ್ಮ ಪ್ರತಿಭೆ ಚೆನ್ನಾಗಿ ಕಾಣುತ್ತದೆ. ಮಂಗಳೂರರು ಕಡೆಯ ಬಡ ಪಾದ್ರಿಯಂತಿರುವ ಈತ ನೀವು ಸಂಶಯದಿಂದ ನೋಡುವ ಮತ್ತು ನಿಮ್ಮ ಆಳದಲ್ಲಿರುವ ಸಂಶೋಧಕನಿಗೆ ಸಂಕೇತವಾಗಿದ್ದಾನೆ. ಈ ಕರ್ವಾಲೋ ಕೂಡ ಮಂದಣ್ಣನಂತೆ ಹುಳಹುಪ್ಪಟೆ ಪ್ರಾಣಿಗಳನ್ನು ಕಂಡು ಅಭ್ಯಾಸ ಮಾಡುವ ಮನುಷ್ಯ.

ಈತನ ಶಿಸ್ತು ಜೀವನದ ಹುಚ್ಚು ಹೊಳೆಗೆ ಹಾಕಿದ ಅಣೆಕಟ್ಟಿನಂತಿದೆ. ಪ್ರಕೃತಿಯ ಲಕ್ಷೋಪಲಕ್ಷ ಜೀವಿಗಳ ಬಗ್ಗೆ ಕುತೂಹಲ ತೋರುತ್ತ ಮೇಲ್ನೋಟಕ್ಕೆ ಒಣಕಲು ಮನುಷ್ಯನಂತೆ ಕಾಣುವ ಈತನಲ್ಲಿ ಮಾನವೀಯತೆ ಇದೆ. ನಿಮ್ಮ ಮಂದಣ್ಣನ ಬಗೆಗಿನ ಹಾಸ್ಯದ ಹಿಂದೆ ಹರಿಯುವ ಪ್ರೀತಿಯಂತೆಯೇ ಈ ಕರ್ವಾಲೋನ ಶಿಸ್ತಿನ ಹಿಂದೆ ಹರಿಯುವ ಅದಮ್ಯ ಕುತೂಹಲ ನನ್ನನ್ನು ಹರ್ಷದಿಂದ ಅಲ್ಲಾಡಿಸಿದ ಅಂಶ.

ನನಗೆ ಈ ಕಾದಂಬರಿ ನಾಲ್ಕು ಮುಖ್ಯ ಕಾರಣಕ್ಕೆ ತುಂಬ ಚೆನ್ನಾಗಿದೆ. ಮೊದಲನೆಯದಾಗಿ ನೀವು ಬರೀ ಹಂಜಿಪುಟ್ಟಿ ಎಂಬಂಥ ಹಾಸ್ಯಶೈಲಿಯಲ್ಲಿ ಬರೆಯುತ್ತ, ರೇಗುತ್ತ, ತಡವರಿಸುತ್ತಾ ಮನುಷ್ಯರ ಜೀವನವನ್ನು ಚಿತ್ರಿಸುವ ಬಗೆ. ಲಕ್ಷ್ಮಣ, ಮಂದಣ್ಣ, ಕರಿಯಣ್ಣ, ಯಂಕ್ಟ ಮುಂತಾದವರು ನಿಮ್ಮ ಶೈಲಿಯ ಮೂಲಕ ಜೀವ ಪಡೆಯುತ್ತಾರೆ. ನಿಮ್ಮ ಭಾವನೆಯ ಏರಿಳಿತಗಳ ನಡುವೆ ಈ ಜನ ಎದ್ದು ಓಡಾಡತೊಡಗುತ್ತಾರೆ.

ಕೋಟ್ಯಂತರ ವರ್ಷಗಳ ಹಿಂದಿನಿಂದ ಇರುವ ಪ್ರಾಣಿಗಳನ್ನು ಹುಡುಕುತ್ತ ನೀವು ನಿಮ್ಮ ಸುತ್ತಣ ವಿವಿಧ ಮಟ್ಟದ ಜನರ ಹಲಬಗೆಯ ವಿಕಾಸ ಅಥವಾ ವಿಕಾಸಗೊಳ್ಳದಿರುವಿಕೆಯನ್ನು ಚಿತ್ರಿಸುವುದು. ನೀವು ನೋಡುವ ವ್ಯಕ್ತಿಗಳ ರೂಪ ಈ ಕಾದಂಬರಿಯ ವರ್ಟಿಕಲ್ ಮತ್ತು ಹಾರಿಜಾಂಟಲ್ ಗುಣ ತೋರುತ್ತದೆ. ಇದು ಎರಡನೆಯ ಅಂಶ.

ಮೂರನೆಯದಾಗಿ ನೀವು ತೋರುವ ಪ್ರಜ್ಞೆಯ ವಿಸ್ತಾರ ಮತ್ತು ಸಂಶೋಧನೆಯ ಸಂಭ್ರಮ. ಹೊಟ್ಟೆಪಾಡಿಗೆ ಪ್ರಾಣಿಶಾಸ್ತ್ರ ಕಲಿತು ‘ಸಂಶೋಧಿಸುವ’ ಜನರು ಈ ನಿಮ್ಮ ಕಾದಂಬರಿಯ ಸಂದರ್ಭದಲ್ಲಿ ಹಾಸ್ಶಾಸ್ಪದ ಅನ್ನಿಸುತ್ತಾರೆ.

ಆಮೇಲೆ ನಮ್ಮಲ್ಲಿ ಕೇವಲ ಸೋಷಲಿಸ್ಟನೊಬ್ಬ ಮಾತ್ರ ವರ್ಣಿಸಬಲ್ಲಂಥ ಅನೇಕ ಜಾತಿ ಜನ, ವರ್ಗಗಳನ್ನು ತಿಳಿದುಕೊಂಡು ಚಿತ್ರಿಸುವ, ಅತ್ಯಂತ ತೀವ್ರ ಆಸಕ್ತಿ ಮತ್ತು ಪ್ರೇಮದಿಂದ ಮಾತ್ರ ಕೈಗೂಡುವ ಗ್ರಹಿಕೆ. ಈ ಜೇಬುಗಳ್ಳನೆನ್ನಿಸಿಕೊಂಡ ಸಾಬರ ಪ್ಯಾರ ಹೇಗೆ ನಿಮ್ಮ ಮಾನವೀಯತೆಯಲ್ಲಿ ಮಗುವಾಗಿ ಹೊಂದಿಹೋಗುತ್ತಾನೆ!

ಎಲ್ಲಕ್ಕಿಂತ ಮುಖ್ಯವಾಗಿ ಪ್ರಕೃತಿಯ ಬಗ್ಗೆ ನಿಮಗಿರುವ ನಿಲುವು. ಈ ಕಾದಂಬರಿಯ ನಾಯಕ ಕೆಲವೊಮ್ಮೆ ಬೇಸರಗೊಂಡು ತನ್ನ ತೋಟ ಮಾರಿ ಪೇಟೆ ಸೇರಲು ತೀರ್ಮಾನಿಸುತ್ತಾನೆ. ಆದರೆ ಈ ಪ್ರಕೃತಿ ಅವನನ್ನು ಬಿಡುವುದಿಲ್ಲ.

ಮಂದಣ್ಣನೆಂಬ ಮನುಷ್ಯನ ಪ್ರಕೃತಿಯಿಂದ ಹಿಡಿದ ಹಾರುವ ಓತಿಕಾಟದ ಪ್ರಕೃತಿ ವಿಕಾಸದವರೆಗೆ ಈ ಅಪಾರ ಕುತೂಹಲ ಹಬ್ಬಿದೆ. ಕಾರಂತ, ಕುವೆಂಪು ತರುವಾಯ ಪ್ರಕೃತಿಯನ್ನು ಇಷ್ಟು ಆಳವಾಗಿ ಪ್ರೀತಿಸುವ ಮತ್ತು ಅದಕ್ಕೆ ತಕ್ಕ ಕಾರಣಗಳುಳ್ಳ ವ್ಯಕ್ತಿ ನೀವೇ ಎಂದು ಕಾಣುತ್ತದೆ. ಈ ಇಡೀ ಕಾದಂಬರಿ ಪ್ರಕೃತಿಯ ಅಗಾಧ ಕೌತುಕಕ್ಕೆ ಹಿಡಿದ ಕನ್ನಡಿಯಾಗಿದೆ.

ಮೇಲಿನ ಮಾತುಗಳನ್ನು ಕಷ್ಟಪಟ್ಟು ಬರೆಯುತ್ತಿದ್ದೇನೆ. ದಿನದಿನಕ್ಕೆ ನಮ್ಮ ಜನರ ಬದುಕು ಕ್ರೂರವೂ ಅರ್ಥಹೀನವೂ ಆಗುತ್ತಿದೆ. ನಮ್ಮ ಹಾಸ್ಯ, ಟೀಕೆಗಳನ್ನು ಮೀರಿದ ರಾಕ್ಷಸರ ಬೆಳವಣಿಗೆ ನಮ್ಮ ಎಲ್ಲ ಒಳ್ಳೆಯದಕ್ಕೆ ಸವಾಲಾಗುತ್ತಿದೆ. ನಮ್ಮ ಜನ ತಮ್ಮ ಹಳ್ಳಿ, ಪರಿಸರಕ್ಕೆ ಮೀರಿದ ದುಷ್ಟ ಶಕ್ತಿಗಳ ಗುಲಾಮರಾಗುತ್ತಿದ್ದಾರೆ. ಈ ಮಟ್ಟದಲ್ಲಿ ನೋಡಿದಾಗ ನಿಮ್ಮಂಥ ಬಹುಮುಖ್ಯ ಬರಹಗಾರರ ಲೇಖನಗಳು ಕೂಡ ಎಲ್ಲೋ ರೊಮ್ಯಾಂಟಿಕ್ ಅನ್ನಿಸುತ್ತಾ ಹೋತುತ್ತವೆ.

ಬೇಸರ ಪಡಬೇಡಿ. ಎಲ್ಲಾ ಸರಿಹೋದೀತು. ನಾನು ಕೂಡ ಕೆಲವೊಮ್ಮೆ ಈ ಮಂದಣ್ಣನಂತಿದ್ದರೆ ಎಷ್ಟು ಚೆನ್ನಾಗಿತ್ತು ಅಂದುಕೊಂಡಿದ್ದೇನೆ.

-ಪಿ.ಲಂಕೇಶ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಭಾವ ಭೈರಾಗಿ

ಕವಿತೆ | ಅವನಿಗೆ

Published

on

  • ಹೂವ್ಹಿ ಕೈಲಾಸದ್, ದಾವಣಗೆರೆ

ಹೂ ಮನಸಿನ ಹುಡುಗಿ ನಾನು
ಒರಟಾತಿ ಒರಟ ಮನಸೇ
ಇಲ್ಲದ ಹುಡುಗ ನೀನು

ಭಾವನೆಗಳಲೆ ಬದುಕುವ ಜೀವಿ ನಾನು ಭಾವನೆಗಳಿದ್ದರು ವ್ಯಕ್ತಪಡಿಸಲಾರದ
ಅಭಾವುಕ ನೀನು

ಕಂಗಳಲಿ ಸಾವಿರ ಬಣ್ಣಗಳ
ತುಂಬಿಕೊಂಡ ಕಾಮನ ಬಿಲ್ಲು ನಾನು
ಆ ಬಣ್ಣಗಳಿಗೆ ಮಸಿ ಬಳೆದ ಕಪ್ಪುನೀನು

ಮುಂಗಾರಿನ ಪ್ರೀತಿ ಮಳೆಗಾಗಿ ಬಾಯ್ತೆರೆದು ಕಾಯುತಿರುವ ಇಳೆ ನಾನು
ಆಸೆ ತೋರಿಸಿ, ನಿರಾಶೆ ಮೂಡಿಸಿ,
ಗಾಳಿಯೊಂದಿಗೆ ಹಾರಿ ಹೋಗುವ ಮೋಡ ನೀನು

ಸುಕೋಮಲೆ ಶರೀರೆ ನಾನು
ಎರಗುವ ಕರಡಿ ನೀನು

ಕನಸುಗಳ ತೀರ ನಾನು
ಎಲ್ಲವನ್ನು ಕೊಚ್ಚಿ ತೊರೆದು
ಹೋಗುವ ತೊರೆ ನೀನು

ಬೆರಳ ತುದಿಯಲಿ ಮೀಟಿದಷ್ಟು ಸಂಗೀತ ಹೊರಡಿಸುವ ವೀಣೆ ನಾನು
ಕತ್ತಿಯಿಂದ ತಂತಿ ತುಂಡರಿಸುವ ಕಟುಕ ನೀನು

ಕೇದಗೆಯ ಬನ ನಾನು
ಮಿಥುನ ಕೊಲ್ಲಲು ಅದರೊಳಗೆ
ಅಡಗಿ ಕುಳಿತ ಕಾಳಿಂಗ ಸರ್ಪ ನೀನು

ಕೈ ತಾಕಿದರೆ ಕರಗಿ ಹೋಗುವ
ಪಾರಿಜಾತೆ ನಾನು, ಮೋಸದಲೆ ಸುಟ್ಟು ಬೂದಿಯಾಗಿಸಿದ ಕಾಳ್ಗಿಚ್ಚು ನೀನು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending