Connect with us

ಬಹಿರಂಗ

ಭಾರತ ಸಂವಿಧಾನಕ್ಕೆ ‘ಭೂತ’ಚೇಷ್ಟೆ

Published

on

  • ದೇವನೂರ ಮಹಾದೇವ

ಮ್ಮ ಸಂವಿಧಾನಕ್ಕೆ 60 ವರ್ಷಗಳ ಇತಿಹಾಸ. ಆದರೆ ಸಾವಿರಾರು ವರ್ಷಗಳ ಇತಿಹಾಸವಿರುವ ಇಂದೂ ಕೂಡ ಅಗೋಚರವಾಗಿ ಆಳ್ವಿಕೆ ನಡೆಸುತ್ತಿರುವ ಅಲಿಖಿತ ಸಂವಿಧಾನವೂ ಒಂದಿದೆ. ಇದು ಭಾರತದ ಮನೋಭೂಮಿಕೆಯಲ್ಲಿದೆ. ಇದು ಭೂತಕಾಲದ ಸಂವಿಧಾನ. ಇದು ಭಾರತದ ಸುಪ್ತಪ್ರಜ್ಞೆಯ ಆಳದಲ್ಲಿದೆ. ಈ ಎರಡರ ನಡುವೆ ಯುದ್ಧ ಜರುಗುತ್ತಿದೆ. ಭೂತಕಾಲದ ಸಂವಿಧಾನವೂ ಇಲ್ಲಿ ಬಲವಾಗಿದೆ. ಹಾಗಾಗಿ ನಮ್ಮ ವರ್ತಮಾನ ಸಂವಿಧಾನದ ಆಸೆಗಳು ತೆವಳುತ್ತಿವೆ.

ಈ ನನ್ನ ಮಾತುಗಳಲ್ಲಿ ಹೊಸತೇನೂ ಇಲ್ಲ. ನಿಮ್ಮ ನಡುವೆ ನಾನೇ ಸ್ಪಷ್ಟ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವೆ. ಈ ಚಿಂತೆ ಮತ್ತು ಚಿಂತನೆಗಳನ್ನು ಉದಾಹರಣೆಗಳ ಮೂಲಕ ಸ್ಪಷ್ಟ ಮಾಡಿಕೊಳ್ಳಲು ಪ್ರಯತ್ನಿಸುವೆ.

ಬಹಳ ಹಿಂದೆ, ಡಾ.ಯು.ಆರ್.ಅನಂತಮೂರ್ತಿಯವರು ಇಂಗ್ಲಿಷ್ ವಿಭಾಗದಲ್ಲಿದ್ದಾಗ, ಅವರನ್ನು ಭೇಟಿ ಮಾಡಲು ಹಿರಿಯರೊಬ್ಬರು ಬಂದಿದ್ದರು. ತುಂಬಾ ಶುಭ್ರವಾಗಿದ್ದರು. ಮೈತುಂಬಾ ಬಿಳಿ ಬಟ್ಟೆ. ಜುಟ್ಟು ನಾಮ ಇತ್ತು. ಅವರು ಮಾತಾಡಿ ಹೋದ ಮೇಲೆ ಅನಂತಮೂರ್ತಿಯವರು ‘ಈಗ ಬಂದಿದ್ದವರು ವೇದ ಉಪನಿಷತ್ ಪುರಾಣ ಪಾರಂಗತರು’ ಎಂದರು. ಜೊತೆಗೆ- ‘ಇವರು ತಾವೇ ತಮ್ಮ ಅಡಿಗೆ ಮಾಡಿಕೊಂಡು ಊಟ ಮಾಡುವುದು’ ಎಂದೂ ಹೇಳಿದರು.

ಇದು ಯಾಕೋ ನನ್ನ ಮನಸ್ಸಲ್ಲಿ ಉಳಿದುಬಿಟ್ಟಿತು. ತನ್ನ ಕೈಯಾರ ಮಾಡಿದ್ದನ್ನು ಮಾತ್ರ ಊಟ ಮಾಡುವ ಇವರಿಗೆ ವೇದ ಉಪನಿಷತ್‍ಗಳು ಹೇಳಿಕೊಟ್ಟಿದ್ದೇನು ಎಂಬ ಪ್ರಶ್ನೆ ನನ್ನೊಳಗೆ ಉಳಿದುಬಿಟ್ಟಿತು. ಈಗ ಅನ್ನಿಸುತ್ತ್ತಿದೆ- ಇವರ ಕಠೋರ ಮಡಿಯ ಅಸ್ತಿತ್ವದಲ್ಲೆ ಅಸ್ಪೃಶ್ಯತೆಯ ಪ್ರಚಾರ ಕಾರ್ಯವೂ ಅಂತರ್ಗತವಾಗಿದೆ ಅಂತ. ಇವರನ್ನು ಅರ್ಥ ಮಾಡಿಕೊಳ್ಳೋಣ. ಅಂದರೆ ಇವರನ್ನು ಪಳೆಯುಳಿಕೆ ಎಂದು ಭಾವಿಸಿದರೆ ಸಮಸ್ಯೆ ಇಲ್ಲ. ಆದರೆ ಅವರ ಮಡಿಯನ್ನು ಪಾರಂಪರಿಕ ಮೌಲ್ಯ ಎಂದು ಗೌರವಿಸಿದರೆ ಅಪಾಯ ಆರಂಭವಾಗುತ್ತದೆ.

ಇನ್ನೊಂದು ಭೀಕರ ಉದಾಹರಣೆ ಕೊಡುತ್ತೇನೆ. ಪುರಿ ಜಗದ್ಗುರು ಅಸೃಶ್ಯತೆಯನ್ನು ಎತ್ತಿ ಹಿಡಿದಾಗ ಭಾರತ ತಲ್ಲಣಿಸಲಿಲ್ಲ. ಭೀಕರ ಉದಾಹರಣೆ ಎಂದು ನನ್ನ ಸಮಾಧಾನಕ್ಕಾಗಿ ಹೇಳಿಕೊಂಡೆ ಅಷ್ಟೆ. ಆದರೆ ಅದು ಭೀಕರವಾಗಿ ಸಮಾಜಕ್ಕೆ ತಟ್ಟಲೇ ಇಲ್ಲ. ಪುರಿ ಜಗದ್ಗುರು ಅಸಹ್ಯವಾಗಿ ನಮಗೆ ಕಾಣಲೇ ಇಲ್ಲ.

ಯಾಕೆಂದರೆ ನಮ್ಮ ವರ್ತಮಾನದ ಪ್ರಜ್ಞೆಯ ಸಂವಿಧಾನವು ಸಮಾನತೆಯನ್ನು ಮೌಲ್ಯ ಮಾಡಿದರೆ, ಭೂತಕಾಲದ ಸುಪ್ತಪ್ರಜ್ಞೆಯ ಸಂವಿಧಾನಕ್ಕೆ ಶ್ರೇಣೀಕೃತ ಸಮಾಜದ ಅಸ್ಪೃಶ್ಯತೆ, ಜಾತಿತಾರತಮ್ಯಗಳೇ ಮೌಲ್ಯವಾಗಿದೆ. ಭೂತದ ಕಪ್ಪುಹಣ ಇಂದೂ ಚಲಾವಣೆಯಲ್ಲಿದೆ. ಹೀಗಿರುವಾಗ ಸಮಾಜ ಯಾಕಾಗಿ ತಲ್ಲಣಿಸಬೇಕು? ಹೀಗಿದ್ದಾಗ ವರ್ತಮಾನದ ಸಂವಿಧಾನದ ಆಸೆಗಳು ತೆವಳದೆ ಮತ್ತೇನು ಮಾಡಲು ಸಾಧ್ಯ?

ಹಾಗೆ ಇಂದು ಚರ್ಚಿತವಾಗುತ್ತಿರುವ ಮತಾಂತರ ನಿಷೇಧದ ಪ್ರಸ್ತಾಪಕ್ಕೆ ಬಂದರೂ ಇಲ್ಲೂ ಕಾಣುವುದು ಇದನ್ನೇ. ಹಾಲಿ ಬಿಜೆಪಿ ಕರ್ನಾಟಕ ಸರ್ಕಾರ ಹಾಗೂ ಪೇಜಾವರ ಮಠಾಧೀಶರಾದಿಗಳು ಈ ಮತಾಂತರ ನಿಷೇಧಕ್ಕಾಗಿ ಹಾತೊರೆಯುತ್ತಿದೆ. ಶೂದ್ರನೊಬ್ಬ ನಿಮ್ಮ ಬ್ರಾಹ್ಮಣ ಜಾತಿಗೆ ಸೇರುತ್ತೇನೆಂದರೆ ಆಕಾಶ ನೋಡುವ ಮಠಾಧಿಪತಿಗಳು ಹಾಗೆ ಬ್ರಾಹ್ಮಣ ಜಾತಿಗೆ ನನ್ನನು ವರ್ಗಾವಣೆ ಮಾಡಿ ಎಂದು ಶೂದ್ರ ಕೇಳಿದರೆ ಇದು ತನ್ನ ವ್ಯಾಪ್ತಿಗೆ ಬರುವುದಿಲ್ಲವೆನ್ನುವ ಸರ್ಕಾರ, ಮತಾಂತರ ನಿಷೇಧಕ್ಕೆ ಚಿಂತಿಸುತ್ತಿರುವ ಕ್ರೌರ್ಯವು ಗಾಬರಿ ಹುಟ್ಟಿಸುತ್ತದೆ.

ಇರಲಿ, ಮತಾಂತರದ ಚಲನೆಯು ಭಾರತದಲ್ಲಿ ಇದ್ದುದರಿಂದಲೇ ಇಲ್ಲಿ ಅನೇಕಾನೇಕ ಧರ್ಮಗಳಿರುವುದು. ಈಗ ಹಾಲಿ ಭಾರತದಲ್ಲಿ ಮತಾಂತರಕ್ಕೆ ಅವಕಾಶವಿರುವ ಜೈನ, ಬೌದ್ಧ, ಸಿಖ್ ಹಾಗೂ ಕೆಲವು ಲಿಂಗಾಯತ ಪರಂಪರೆಯ ಧರ್ಮಗಳಿವೆ. ಲಿಂಗಾಯತವು ತನ್ನ ಜಾತಿ ಬಿಟ್ಟರೆ, ಭಾರತದ ದುಡಿಯುವ ವರ್ಗದ ಅಂದರೆ ತಳಸಮುದಾಯಗಳ ಧರ್ಮವಾಗಬಹುದಾದ ಸತ್ವವು ಅದರೊಳಗೆ ಇನ್ನೂ ಕುಟುಕುಜೀವದಂತೆ ಹುದುಗಿದೆ. ಇವುಗಳಲ್ಲಿ ನಿಧಾನವಾಗಿಯಾದರೂ ಮತಾಂತರ ಜರಗುತ್ತಲೇ ಇದೆ.

ನಮ್ಮ ಕಣ್ಣೆದುರೇ ಉಪನಿಷದ್ ದ್ರವ್ಯದಿಂದ ಧರ್ಮವಾಗಿ ಹುಟ್ಟು ಪಡೆಯಬಹುದಾಗಿದ್ದ ‘ಪರಮಹಂಸಧರ್ಮ’ವೊಂದು ಗತಿಸಿ ಬಿಟ್ಟಿತು. ಆ ಎಳೆಧರ್ಮದ ಕುತ್ತಿಗೆಗೆ ಜನಿವಾರ ಬಿಗಿದುಬಿಟ್ಟರು. ಇಂದು ರಾಮಕೃಷ್ಣಾಶ್ರಮಗಳು ಭೋಜನಶಾಲೆ ಮತ್ತು ವೇದಾಂತ ಕಥಾಕಾಲಕ್ಷೇಪ ತಾಣಗಳಾಗಿಬಿಟ್ಟಿವೆ. ಇದು ಈ ಸ್ಥಿತಿಯಿಂದ ಜಿಗಿದು ಎದ್ದರೆ ಇಂದೂ ಧರ್ಮವಾಗಬಹುದು. ಇಂದು ಸಂಘ ಪರಿವಾರವು ಹೇಳುತ್ತಿರುವ ಹಿಂದೂ ಧರ್ಮವು ಇಸ್ಲಾಂಗೆ ಪ್ರತಿಸ್ಪರ್ಧಿಯಾಗಿದ್ದು ಕೇವಲ ಇಸ್ಲಾಮಿನ ಮೂಲಭೂತವಾದೀ ಗುಣ ಲಕ್ಷಣಗಳನ್ನು ಮಾತ್ರ ತಾನು ಪಡೆದುಕೊಂಡು ಒಂದು ರೀತಿಯಲ್ಲಿ ನಮ್ಮ ಕಣ್ಣ ಮುಂದೆ ಈಗ ಜರುಗುತ್ತಿರುವುದು ‘ಹಿಂದ್‍ಇಸ್ಲಾಮೀ’ ನವಧರ್ಮವೊಂದರ ಉದಯದಂತೆಯೂ ಇದು ಕಾಣುತ್ತದೆ.

ಇಂದು ನಮ್ಮ ನಡುವೆ, ಸ್ಥಗಿತಗೊಂಡ ಸಾಮಾಜಿಕ ಪದ್ಧತಿಯೇ ಹಿಂದು ಎಂಬ ಧರ್ಮವಾಗಿ ಈ ಪದ್ಧತಿಯು ಎಲ್ಲಾ ಧರ್ಮಗಳಿಗಿಂತಲೂ ಪ್ರಬಲವಾಗಿದೆ. ಶ್ರೇಣಿಯ ಸಮಾಜಕ್ಕಾಗಿ ಇರುವ ಕಾನೂನು ಕಟ್ಟಳೆಗಳೇ ‘ಹಿಂದು ಧರ್ಮ’ ಎಂದಾಗಿದೆ, ಈ ಶ್ರೇಣಿಯ ಕಾನೂನು ಕಟ್ಟಳೆಗಳೇ ಇಲ್ಲಿ ಧರ್ಮವಾಗಿದೆ. ಇದು ಸಾವಿರಾರು ವರ್ಷಗಳಿಂದಲೂ ಧರ್ಮದ ವೇಷ ಹಾಕಿಕೊಂಡು ವಂಚಿಸಿ ವಂಚಿಸಿ ತನ್ನನ್ನು ಧರ್ಮವೆಂದೇ ಭಾವಿಸುವಂತೆ ಮಾಡಿಬಿಟ್ಟಿದೆ.

ತನ್ನ ವಂಚನೆಗಳಿಗೆ ಭಾರತದ ಮಹೋನ್ನತ ಜ್ಞಾನಶಾಖೆಗಳಾದ ದರ್ಶನಗಳನ್ನೂ ಬೌದ್ಧ-ಜೈನ ಧರ್ಮಗಳನ್ನೂ ಮಾತಾಡುವ ವಸ್ತುವಾಗಿ ಬಳಸಿಕೊಂಡಿದೆ. ದೇವರನ್ನೂ ಅವತಾರ ಎತ್ತಿಸಿದೆ. ಇದೆಲ್ಲಾ ಯಾತಕ್ಕಾಗಿ ಅಂದರೆ- ಶ್ರೇಣೀಕೃತ ಜಾತಿ ವರ್ಣ ಕಟ್ಟುಪಾಡುಗಳನ್ನು ಸುಪ್ತಪ್ರಜ್ಞೆಯಲ್ಲಿ ಸ್ಥಾಪಿಸುವುದಕ್ಕಾಗಿ. ಅದಕ್ಕಾಗೇ ಯಾವ ರಾಜ ಬಂದರೂ ರಾಜಧರ್ಮ ಅಂದರೆ ವರ್ಣವ್ಯವಸ್ಥೆಯನ್ನು ಕಾಪಾಡುವುದೇ ಆಗಿತ್ತು.

ಹಿಂದು ಆಗಿರುವುದೆಂದರೆ-ಇದ್ದ ಕಡೆ ಇರುವ ಶ್ರೇಣಿಯಲ್ಲಿ ಬಿದ್ದಿರು-ಎಂದೇ ಅರ್ಥ. ಇಲ್ಲಿರಬೇಕೆ? ಇಲ್ಲಿ ಅಸಮಾನತೆ ಕಟ್ಟಳೆಗಳ ವ್ಯಾಘ್ರನು ಧರ್ಮದ ಗೋಮುಖ ವೇಷದಲ್ಲಿದ್ದಾನೆ. ಹಿಂದೂ ಗೋಮುಖ ವ್ಯಾಘ್ರನಲ್ಲಿ ವ್ಯಾಘ್ರನ ಸಾಯಿಸಿದರೆ-ಅಂದರೆ ಶ್ರೇಣೀಕೃತ ಜಾತಿ ಕಟ್ಟಳೆ, ಅಸ್ಪೃಶ್ಯತೆಗಳ ಸಾಯಿಸಿದರೆ-ಇದೂ ಒಂದು ಧರ್ಮವಾಗಬಹುದು. ಇದು ಸಾಧ್ಯವೆ?

ಆದರೆ ಇದು ಸಾಧ್ಯವೇ ಎಂದು ಶ್ರೀ ಪೇಜಾವರರನ್ನು ಪ್ರಾತಿನಿಧಿಕ ಮಾಡಿಕೊಂಡು ಕೇಳುತ್ತಿದ್ದೇನೆ. ಅವತಾರ ಎತ್ತಿಸಿಯಾದರೂ ಜಾತಿಯ ಶ್ರೇಣಿಯು ಇಲ್ಲದಂತೆ ಹಿಂದೂ ಸಮಾಜ ರೂಪಿಸಿ ಅದನ್ನು ಧರ್ಮ ಮಾಡಲು ಸಾಧ್ಯವಿದೆಯೆ? ಇದಾಗದಿದ್ದರೆ, ಹಿಂದೂ ಸಮಾಜದ ದೇವಸ್ಥಾನ, ಮಠ, ಇತ್ಯಾದಿಗಳಲ್ಲಿ ಮಠಾಧೀಶ ಸ್ಥಾನ ಪೂಜೆ ಕಾರ್ಯ ಇತ್ಯಾದಿ ನಿರ್ವಹಣೆಗಳಲ್ಲಿ ಸಕಲೆಂಟು ಜಾತಿಗೂ ಪರ್ಯಾಯ ವ್ಯವಸ್ಥೆ ತರಲಾದರೂ ಸಾಧ್ಯವಿದೆಯೆ? ಉಡುಪಿಯಲ್ಲಿ ಅಷ್ಟಮಠಗಳ ಬದಲು ನವಮಠಗಳ ಪರ್ಯಾಯಕ್ಕಾಗಿ, ಡಿಮ್ಯಾಂಡ್ ಇಟ್ಟು ಕಾಯುತ್ತಿರುವವನಂತೆ ಇರುವ ಕನಕ ಇನ್ನೆಷ್ಟು ದಿನ ಕಾಯಬೇಕು? ಅಥವಾ ಅವನು ಹೊರಗಿರುವುದೇ ಧರ್ಮವೆ?

ನೀವು ದಲಿತ ಕೇರಿಗೆ ಪಾದವಿಟ್ಟರೆ ಅದನ್ನೆ ಧನ್ಯ ಎಂದುಕೊಳ್ಳುವ ಆ ದಲಿತ ಕೇರಿಯ ಮಗುವೊಂದು ನಿಮ್ಮನ್ನು ಪ್ರೀತಿಸಿ `ನಾನೂ ನಿಮ್ಮೊಡನೆ ಬರುತ್ತೇನೆ, ನನಗೂ ನೀವಾಗುವ ಆಸೆ’ ಎಂದರೆ ನೀವೇನು ಮಾಡುತ್ತೀರಿ? ಇಲ್ಲಿ ನೀವು ಅಂದರೆ ನೀವೇ ಅಲ್ಲ. ನಿಮ್ಮಂತೆ ಇರುವ ಎಲ್ಲರಿಗೂ ಇದು ಎದುರಾಗುತ್ತಿಲ್ಲ ಯಾಕೆ? ನಿಮ್ಮದೂ ಪತನದ ಸ್ಥಿತಿಯಲ್ಲವೇ? ನಿಮ್ಮಂಥವರಿಗೆ ಇಂಥವುಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಯಾಕೆಂದರೆ ಇಂಥವರ ದೇಹದೊಳಗಿನ ಆತ್ಮಸಾಕ್ಷಿ ಅಥವಾ ಸಾಕ್ಷಿಪ್ರಜ್ಞೆಯು ನೇಣಿಗೆ ಹಾಕಲ್ಪಟ್ಟಿರುತ್ತದೆ.

ಏಕೆಂದರೆ ಭಾರತದ ಸಮಾಜದ ಸುಪ್ತ ಮನಸ್ಸು ಅಸ್ಪೃಶ್ಯತೆ, ಶ್ರೇಣೀಕೃತ ಜಾತಿ ಪದ್ಧತಿ, ತಾರತಮ್ಯಗಳ ಅಪಮೌಲ್ಯಗಳನ್ನೆ ಮೌಲ್ಯ ಮಾಡಿಬಿಟ್ಟಿದೆ. ಇದನ್ನು ಬಿತ್ತುವವರನ್ನು ಪೂಜ್ಯರು, ಶ್ರೀಶ್ರೀಶ್ರೀ, ಮಾತಾಡಿದರೆ ಆಶೀರ್ವಚನ, ಆಧ್ಯಾತ್ಮಿಕ ಚಿಂತಕರು, ಪರಮ ಪೂಜ್ಯರು ಇತ್ಯಾದಿ ಪಟ್ಟಕಟ್ಟಿದೆ.

ಈ ಪ್ರಭಾವಕ್ಕೆ ಒಳಗಾದವರೇ ಭಾರತದ ಸಂವಿಧಾನದ ಆಶಯಗಳನ್ನು ನಿರ್ಧರಿಸುವ ನಿರ್ವಹಿಸುವ ನಿರ್ಣಾಯಕ ಸ್ಥಾನಗಳಲ್ಲಿ ಹೆಚ್ಚಾಗಿ ಇರುವಾಗ, ಕಳೆದ ವರ್ಷದ ರಾಜ್ಯ ಬಜೆಟ್‍ನಲ್ಲಿ ದಲಿತರಿಗೆ ಮೀಸಲಿಟ್ಟ 4 ಸಾವಿರ ಕೋಟಿಗಳಲ್ಲಿ ಅರ್ಧದಷ್ಟನ್ನು ಕಾಟಾಚಾರಕ್ಕೆ ಖರ್ಚುಮಾಡಿ ಉಳಿಕೆ ಅರ್ಧವನ್ನು ಲ್ಯಾಪ್ಸ್ ಮಾಡಿರುವ ಕ್ರಿಯೆ ಇಲ್ಲಿ ಸಹಜವಲ್ಲವೆ? ದಲಿತರ ಮೀಸಲಾತಿ ಉದ್ಯೋಗದಲ್ಲಿ ದಲಿತೇತರರು ನುಸುಳಿ ಪಡೆಯುತ್ತಿರುವುದು ಇಲ್ಲಿ ಸಹಜ ಕ್ರಿಯೆ ತಾನೆ? ನಮಗೆ ಅನ್ಯಾಯಗಳು, ಅನ್ಯಾಯಗಳಾಗಿ ಬಂದು ಮುಟ್ಟುತ್ತಿಲ್ಲ.

ಕನ್ನಡದಲ್ಲಿ ಒಂದು ಪದ ಇದೆ- `ಪಾಪ’ ಅಂತ. ಇದನ್ನು ಪಾಪ (Sin)ಕ್ಕೂ ಬಳಸುತ್ತಾರೆ, ಹಾಗೇ ಕರುಣೆ (pity)ಗೂ ಬಳಸುತ್ತಾರೆ. ಪಾಪಕ್ಕೆ ಬಳಸಿದರೆ ಪಾಪಿಷ್ಟ ಆಗುತ್ತಾನೆ. ಕರುಣೆಗೆ ಬಳಸಿದರೆ ಪಾಪದವನು ಆಗುತ್ತಾನೆ. ಪಾಪದವನು ಒಂದು ಪಟ್ಟು ಪತನಗೊಂಡವನಾಗಿದ್ದರೆ, ಪಾಪಿಷ್ಟನು ನೂರು ಪಟ್ಟು ಪತನಗೊಂಡವನಾಗಿರುತ್ತಾನೆ. ಅಸ್ಪೃಶ್ಯತೆಗೆ ಅಥವಾ ತಾರತಮ್ಯಕ್ಕೆ ಒಳಗಾದವರು ಪಾಪದವರು ಆಗುತ್ತಾರೆ.

ಯಾಕೆಂದರೆ ಇವರ ಮನೋಭೂಮಿಕೆಯಲ್ಲಿ ಅಸ್ಪೃಶ್ಯತೆ ತಾರತಮ್ಯ ಇರುವುದಿಲ್ಲ. ಆದರೆ ಯಾರು ಅಸ್ಪೃಶ್ಯತೆ, ತಾರತಮ್ಯ ಆಚರಿಸುತ್ತಾರೋ ಅವರ ಮನೋಭೂಮಿಕೆಯಲ್ಲಿ ಅಸ್ಪೃಶ್ಯತೆ ತಾರತಮ್ಯಗಳೇ ತುಂಬಿರುತ್ತವೆ. ಈ ನಿಜದ ಎದುರು ಅಸ್ಪೃಶ್ಯತೆ ತಾರತಮ್ಯ ಆಚರಿಸುವವರು ಪಾಪಿಷ್ಟರಾಗುತ್ತಾರೆ. ‘ಗುಲಾಮನನ್ನು ಪಳಗಿಸಲು ಹೆಣಗುವ ಮಾಲೀಕನ ಮನಸ್ಸಿನ ತುಂಬಾ ಗುಲಾಮತನ ತುಂಬಿರುತ್ತದೆ’ -ಎಂಬ ಹೆಗಲ್‍ನ ನುಡಿಯ ನಿಜದಂತೆ.

ನಾವು ನಮ್ಮ ಸಮಾಜವನ್ನು ನೋಡುವ ನೋಟಕ್ಕೆ ಈ ನಿಜದ ದರ್ಶನವಾದರೆ ಇದು ಸಂವಿಧಾನದ ಆಶಯಗಳತ್ತ ನಾವಿಟ್ಟ ಮೊದಲ ಹೆಜ್ಜೆಯಾಗುತ್ತದೆ. ಇದು ಕಡು ಕಷ್ಟ. ಭಾರತೀಯ ಮನಸ್ಸಿನ ನಡೆ ಮತ್ತು ನುಡಿ ಸೀಳಿಹೋಗಿದೆ. ಅಸ್ಪೃಶ್ಯತೆ ಪಾಪ ಎಂದರೆ ಹೌದೆನ್ನುವ ಭಾರತೀಯ ಮನಸ್ಸು ಅದೇ ಅಸ್ಪೃಶ್ಯತೆ ಆಚರಿಸುವವರು ಪಾಪಿಷ್ಟರು ಎಂದರೆ ಬೆಚ್ಚಿ ಬೀಳುತ್ತದೆ. ವ್ಯವಹಾರಕ್ಕೆ ವೇದವನ್ನು ನಡೆದುಕೊಂಡು, ಆದರ್ಶಕ್ಕೆ ವೇದಾಂತ ಎಂದರೆ ಉಪನಿಷತ್ತನ್ನು ಮಾತಿನ ಕಾಲಕ್ಷೇಪ ಮಾಡಿದ್ದೇ ಕಾರಣವೂ ಇರಬಹುದು.

ಆದರೆ ಈ ಪಾಪದವರೂ ಎಚ್ಚರದ ಸ್ಥಿತಿಯಲ್ಲಿ ಇಲ್ಲ. ಮಧ್ಯಮ ಜಾತಿಗೆ ಸೇರಿದ ನನ್ನ ಗೆಳೆಯನೊಬ್ಬ- “ಒಂದು ಚೋಟುದ್ದ ಬ್ರಾಹ್ಮಣ ಹುಡುಗ ಅವನು. ನಮ್ಮ ವಯಸ್ಸಾದ ಅಪ್ಪನಿಗೇನೆ `ಏನಯ್ಯ ಗೌಡ, ಚೆನ್ನಾಗಿದ್ದೀಯಾ?’ ಅಂತ ಏಕವಚನದಲ್ಲಿ ಕೇಳ್ತಾನಲ್ಲಯ್ಯ!” ಎಂದು ಕುಪಿತನಾಗಿ ಹೇಳಿದ. ನಾನು ಅವನಿಗೆ ‘ಸರಿಯಪ್ಪ, ನೀನು ಚಿಕ್ಕವನಾಗಿದ್ದಾಗ ನಮ್ಮ ಜಾತಿಯ ವಯಸ್ಸಾದವರಿಗೆ ಯಾವ ವಚನದಲ್ಲಿ ಕರೆಯುತ್ತಿದ್ದೆ?’ ಎಂದು ಕೇಳಿದೆ. ಇಂಥವರಲ್ಲಿ ಸ್ವಾಭಿಮಾನದ ಎಚ್ಚರ ಅಂದರೆ ತನ್ನದು ಮಾತ್ರ ಆಗಿರುತ್ತದೆ, ಇನ್ನೊಂದರ ಪರಿವೆ ಇರುವುದಿಲ್ಲ.

ಹಾಗೇ ದಲಿತರ ಮನಸ್ಥಿತಿಗೆ ಬಂದರೂ ಸಣ್ಣ ಪುಟ್ಟದಾದರೂ ಇದನ್ನೇ ಕಾಣುತ್ತೇವೆ. ಭಾರತದ ಬಹುತೇಕ ಸಮುದಾಯಗಳು ಹೀಗೇ ಇವೆ. ರಸಾಯನಶಾಸ್ತ್ರದಲ್ಲಿ ಬರುವ ಪರ್ಯಾಪ್ತ ದ್ರಾವಣ (Saturated solution)ದಂತೆ ಎಲ್ಲಾ ಜಾತಿಗಳು ತಂತಮ್ಮ ಕೊನೆ ಸ್ಥಿತಿ ತಲುಪಿ, ಅಸ್ಪೃಶ್ಯತೆ ತಾರತಮ್ಯಗಳು ನಡೆದು ಬಂದ ಪದ್ಧತಿಗಳಾಗಿ ಎಚ್ಚರವಿಲ್ಲದೆ ತಮಗೆ ತಾವೇ ನಡೆದುಕೊಂಡು ಬರುತ್ತಿವೆ. ನಾವು ಅದರೊಳಗೇ ಸಂಪೂರ್ಣ ಮುಳುಗಿಹೋಗಿರುವುದರಿಂದ ಅದರ ಐಬನ್ನು ಅರಿವಿಗೆ ತಂದುಕೊಳ್ಳುವುದಕ್ಕೇ ಹರಸಾಹಸ ಪಡಬೇಕಿದೆ.

ಈಗ ಭಾರತದಲ್ಲಿ ವರ್ತಮಾನದ ಸಂವಿಧಾನವೇನೊ ಪಾಪದವರನ್ನು ಮೇಲೆತ್ತಲು ಕೈಚಾಚಿದೆ. ಆದರೆ ಭೂತಕಾಲದ ಸಂವಿಧಾನ ಕಾಲೆಳೆಯುತ್ತಿದೆ. ಈ ಪಾಪದವರೂ ಎಚ್ಚರದಲ್ಲಿಲ್ಲ. ಸಂವಿಧಾನದ ಆಶಯಗಳ ಕಾಲೆಳೆಯುವ ಪಾಪಿಷ್ಟರಾದರೋ ಸಮಾಜದಲ್ಲಿ ಗಣ್ಯರೆನ್ನಿಸಿಕೊಂಡಿದ್ದಾರೆ. ಇವರ ವಂಶಸ್ಥರೇ ಇವರ ಪ್ರಭಾವದಲ್ಲಿರುವವರೇ ನಿರ್ಧರಿಸುವವರು ನಿರ್ವಹಿಸುವವರು ಆಗಿದ್ದಾರೆ. ಸಂವಿಧಾನದ ಆಸೆಗಳು ಈಡೇರುವುದಾದರೂ ಹೇಗೆ?

ಬಸ್ಸು ರೈಲು ಕಾರಣಕ್ಕಾಗಿ ಅಕ್ಕಪಕ್ಕ ಕೂತಿದ್ದೇವೆ. ಹೊಟೇಲ್ ಕಾರಣಕ್ಕಾಗಿ ಸಹಪಂಕ್ತಿ ಭೋಜನ ಮಾಡಿದ್ದೇವೆ. ನೌಕರಿ ಕಾರಣಕ್ಕಾಗಿ ಒಟ್ಟಾಗಿ ಓಡಾಡಿದ್ದೇವೆ, ಅಲ್ಲಿ ಇಲ್ಲಿ ಮದುವೆಗಳೂ ಆಗಿವೆ. ಇಲ್ಲಿ ಆಗುತ್ತಿರುವ ಬದಲಾವಣೆಗಳು ಹೆಚ್ಚಾಗಿ ಬಹಿರಂಗ ಒತ್ತಡದವು. ಅಂತರಂಗ ಕತ್ತಲಲ್ಲೆ ಇದೆ.

ಏನೇನು ಮಾಡಬಹುದಿತ್ತು? ಮೊದಲ ಹೆಜ್ಜೆಯಾಗಿ, ವರ್ತಮಾನದ ಸಂವಿಧಾನದ ಆಶಯಗಳಿಗೆ ತಕ್ಕಂತೆ ಪ್ರಜೆಗಳನ್ನು ರೂಪಿಸಲು ಶಿಕ್ಷಣ ಕ್ಷೇತ್ರವನ್ನು ತೆಪ್ಪ ಮಾಡಿಕೊಳ್ಳಬಹುದಿತ್ತು. ಶಿಕ್ಷಣ ಪಡೆಯುವ ಎಳೆಯರು ಆ ವಿದ್ಯೆಯಲ್ಲೆ ನಾಗರಿಕರೂ ಆಗುವಂತೆ ಶಿಕ್ಷಣವನ್ನೂ ರೂಪಿಸಬಹುದಿತ್ತು. ಸಮಾಜದಲ್ಲಿ ಅಸ್ಪೃಶ್ಯತೆ ತಾರತಮ್ಯ ಆಚರಿಸುವವರ ಬಗ್ಗೆ ಆ ಪದ್ಧತಿಗಳ ಬಗ್ಗೆ ಇರುವ ಭಯ ಭಕ್ತಿಗಳಲ್ಲಿ- ಭಯ ಇರಲಿ, ಆದರೆ ಭಕ್ತಿಯನ್ನು ಇಲ್ಲದಂತೆ ಮಾಡಬೇಕಿತ್ತು. ಭಕ್ತಿಯು ಅಪಮೌಲ್ಯವನ್ನೇ ಮೌಲ್ಯವಾಗಿಸಿ ಬಿಡಲೂಬಹುದು.

ಈ ಅಪಾಯದ ಅರಿವು ನಮಗಿರಬೇಕಿತ್ತು. ಈ ಅರಿವು ನಮಗೆ ಇದ್ದಿದ್ದರೆ.. ನಮ್ಮ ಶಿಕ್ಷಣದ ಪಠ್ಯ, ನಾವು ನೋಡುವ ದೃಷ್ಟಿಕೋನ ಎಲ್ಲವೂ ಹೊಸತಾಗಿ ಬಿಡುತ್ತಿತ್ತು. ಆಗ ಕೇವಲ ಮನುಷ್ಯ ಪ್ರಜ್ಞೆ ಕೆಲಸ ಮಾಡುತ್ತದೆ. ಆಗ ತಾರತಮ್ಯ ಮೌಲ್ಯವಾಗಿಸುವವರು ಪಳೆಯುಳಿಕೆಗಳಂತೆ ನಮ್ಮ ಸಮಾಜಶಾಸ್ತ್ರಜ್ಞರಿಗೆ ಕಾಣಬಹುದು. ಆಗ ಇಂಥವು ಸಾಮಾಜಿಕ ಸಾಂಸ್ಕೃತಿಕ ಅನಿಷ್ಟ ಪದ್ಧತಿಗಳು ಎಂದೋ ಅಥವಾ ಸಾಮಾಜಿಕ ಸಮಸ್ಯೆಗಳು ಎಂದೋ ಅಧ್ಯಯನದ ವಸ್ತುವಾಗುತ್ತಿತ್ತು.

ರಾಜ್ಯಶಾಸ್ತ್ರದಲ್ಲಿ- ಸಂವಿಧಾನ ಅನುಷ್ಠಾನಕ್ಕೆ ಇರುವ ತೊಡಕುಗಳ ಪಟ್ಟಿಯಲ್ಲಿ ಇದೂ ಸೇರ್ಪಡೆಯಾಗುತ್ತಿತ್ತು. ಮನಃಶಾಸ್ತ್ರದ ಸಮ್ಮೋಹಿನಿ ತಜ್ಞರು ಈ ಸುಪ್ತಪ್ರಜ್ಞೆಯ ತಾರತಮ್ಯಗಳನ್ನು ತಮ್ಮ ಅಧ್ಯಯನ ವಿಷಯ ಎಂದು ಪರಿಗಣಿಸಿ ಭೂತೋಚ್ಛಾಟನೆಯ ವಿಧಿವಿಧಾನಗಳನ್ನು ಕಂಡು ಹಿಡಿಯುವ ಪ್ರಯತ್ನಗಳೂ ಆಗುತ್ತಿದ್ದವು. ಶಿಕ್ಷಣತಜ್ಞರಿಂದ ಸಂವಿಧಾನದ ಆಶಯಗಳಿಗೆ ಪಠ್ಯ ರಚನೆಯಾಗುತ್ತಿತ್ತು -ಹೀಗೆ.

ಆದರೆ ಭಾರತದ ಶಿಕ್ಷಣ ಕ್ಷೇತ್ರಕ್ಕೆ ಬಂದರೆ ಇಲ್ಲೂ ಏನಾಗಿದೆ? ಹಿಂದೆ ದ್ವಿಜರಲ್ಲದವರಿಗೆ ವಿದ್ಯೆ ವಂಚಿಸಲ್ಪಟ್ಟಿತ್ತು. ಈಗ ವರ್ತಮಾನದ ಸಂವಿಧಾನದಲ್ಲಿ ವಿದ್ಯೆ ಎಲ್ಲರಿಗೂ ಮುಕ್ತವಾಗಿದೆ, ನಿಜ. ಆದರೆ ಕೊಟ್ಟಂತೆ ಕಾಣಿಸುತ್ತ ಸಹಜವಾಗೇ ಹೊರಗಿಡುವ ಸಂಚೂ ಜೊತೆಗೇ ಜರುಗುತ್ತಿದೆ. ಏಕರೂಪದ ಶಿಕ್ಷಣ ಪದ್ಧತಿ ಇಲ್ಲದೆ, ಪ್ರಾಥಮಿಕ ಶಿಕ್ಷಣದಲ್ಲಾದರೂ ಮಾತೃಭಾಷೆ ಮಾಧ್ಯಮವಾಗದೆ, ಕಡ್ಡಾಯ ಶಿಕ್ಷಣದಲ್ಲಿ ಕಡ್ಡಾಯ ಇಲ್ಲದೆ, ಮುಖ್ಯವಾಗಿ ಗ್ರಾಮೀಣ ಭಾರತವು ಸಹಜವೊ ಎಂಬಂತೆ ಹೊರ ಹಾಕಲ್ಪಡುತ್ತಿದೆ.

ಎಲ್ಲರಿಗೂ ಶಿಕ್ಷಣ ನೀಡಬೇಕೆಂಬ ಆಧುನಿಕ ಪ್ರಜ್ಞೆಯನ್ನು, ಶಿಕ್ಷಣ ಕೊಡಬಾರದೆನ್ನುವ ಸನಾತನ ಸುಪ್ತಪ್ರಜ್ಞೆಯೂ ನಿಯಂತ್ರಿಸುತ್ತಿರುವುದರ ಪರಿಣಾಮದಿಂದ ಇದಾಗುತ್ತಿರಬಹುದೇನೊ. ಇಲ್ಲೂ ತಾರತಮ್ಯವೇ. ಇದಕ್ಕೆ ನಾವು ಬೆಚ್ಚುತ್ತಿಲ್ಲ, ಬೆದರುತ್ತಿಲ್ಲ. ಮೊದಲು ಶಿಕ್ಷಣ ಕ್ಷೇತ್ರದಲ್ಲಿ ನಾವು ಎಚ್ಚೆತ್ತುಕೊಂಡು ಮನುಷ್ಯರಾದರೆ ಉಳಿದುದೆಲ್ಲಾ ತಂತಾನೆ ಕಾಣಬಹುದೇನೋ.

ಭಾರತದ ಇಂದಿನ ಸ್ಥಿತಿಗೆ ಒಂದು ಚಿತ್ರಣ ಕೊಟ್ಟು ಮುಗಿಸುತ್ತೇನೆ. ತುಂಬಾ ಹಿಂದೆ, ಹಳ್ಳಿಯೊಂದರಲ್ಲಿ ದಲಿತರಿಗೆ ಪ್ರವೇಶವಿಲ್ಲದ ಕಾರಣಕ್ಕೆ ಗಲಾಟೆಯಾಗಿ ಅಲ್ಲಿಗೆ ಹೋಗಿದ್ದೆವು. ಹೋಗಿ ನೋಡಿದರೆ, ಆ ಹೊಟೇಲ್ ಅಂದರೆ ಅದು ಜಗುಲಿ ಮೇಲೆ ತೆಂಗಿನ ಗರಿ ಕಟ್ಟಿದ ಒಂದು ಕತ್ತಲು ತುಂಬಿದ ಜೋಪಡಿಯಾಗಿತ್ತು. ಅಲ್ಲಿ ನೊಣಗಳ ಸಾಮ್ರಾಜ್ಯವಿತ್ತು. ಬಚ್ಚಲು ಪಕ್ಕದಲ್ಲೆ ಹರಿಯುತ್ತ ಮೂಗು ಮುಚ್ಚಿಕೊಂಡು ಏನಾರು ತಿನ್ನಬೇಕಿತ್ತು.

ಈ ಹೊಟೇಲ್ ಪ್ರವೇಶಕ್ಕೆ ದಲಿತರು ಹಾತೊರೆಯುತ್ತಿದ್ದರು. ಆ ದೃಶ್ಯ ನೋಡಿದ ನನ್ನ ಜೊತೆಗಿದ್ದ ಶ್ರೀಕೃಷ್ಣಆಲನಹಳ್ಳಿ ‘ಅಯ್ಯೋ ಮಾದೇವ, ಇಲ್ಲಿ ದಲಿತರು ಏನನ್ನೂ ತಿನ್ನದಿದ್ದರೇನೇ ಆರೋಗ್ಯವಲ್ಲವೆ?’ ಎಂದಿದ್ದರು. ಅದಕ್ಕೆ ನಾನು ‘ಪ್ರವೇಶ ಕೇಳುತ್ತಿರುವುದು ಮನಸ್ಸಿನ ಒಳಕ್ಕೆ’ ಎಂದಿದ್ದೆ.

ಭಾರತದ ಸ್ಥಿತಿಯೂ ಹೆಚ್ಚುಕಮ್ಮಿ ಆ ಹೊಟೇಲ್‍ನ ಕತೆಯಂತೆಯೇ ಇದೆ. ಇಲ್ಲಿ ಕೊಳಕುತನವಿದೆ, ಅನಾರೋಗ್ಯವಿದೆ, ಬಡತನವಿದೆ, ಅಜ್ಞಾನವು ತುಂಬಿದೆ. ಇಷ್ಟಿದ್ದೂ ಹೀಗಿದ್ದೂ ಭಾರತವು ಸ್ವಾತಂತ್ರ್ಯ ಪಡೆದ ನಂತರ ರಾಜರ ಆಳ್ವಿಕೆ ಕೊನೆಗೊಳಿಸಿದ್ದೂ, ವಯಸ್ಕರ ಮತದಾನ ಪದ್ಧತಿ ತಂದಿದ್ದೂ, ತನ್ನ ಮಿತಿಗಳೊಡನೆ ಶಿಕ್ಷಣವನ್ನು ಸರ್ವರಿಗೂ ಮುಕ್ತಗೊಳಿಸಿದ್ದೂ, ಭೂಸುಧಾರಣೆ, ಮೀಸಲಾತಿ ಇತ್ಯಾದಿ ಈ ನೆಲದಲ್ಲಿ ಸಂಭವಿಸಿರುವುದು ಸಾಮಾನ್ಯ ಸಂಗತಿಗಳೇನೂ ಅಲ್ಲ.

ಇದಕ್ಕೆ ಕಾರಣ- ಭಾರತದಲ್ಲಿ ಬುದ್ಧ, ವಚನಕಾರರಂಥವರ ಮಹೋನ್ನತ ಪರಂಪರೆಯ ಬೆಳಕು ಇರುವುದೂ ಅವರು ಉಸಿರಾಡಿದ ಗಾಳಿ ಅವರಿಟ್ಟ ಹೆಜ್ಜೆ ಗುರುತುಗಳು ಇರುವುದೂ ಈ ಮಹೋನ್ನತ ಪರಂಪರೆಯೂ ಭಾರತದ ಉನ್ನತ ಮನಸ್ಸುಗಳನ್ನು ಒಂದಿಷ್ಟು ಸೆಳೆದು ಕೈಹಿಡಿದು ನಡೆಸುತ್ತಿರುವುದೂ ಕಾರಣವಾಗಿರಬಹುದು. ಈ ಉನ್ನತ ಪರಂಪರೆಯ ಹೆಜ್ಜೆಗಳನ್ನು ಗುರುತಿಸಿ ನಾವು ಹೆಜ್ಜೆ ಇಟ್ಟರೆ ಆಗ ಸಂವಿಧಾನದ ಆಸೆಗಳು ಕೈಗೂಡಲೂಬಹುದು.

(‘ಎದೆಗೆ ಬಿದ್ದ ಅಕ್ಷರ’ ಸಂಕಲನದಿಂದ ಆಯ್ದ ಒಂದು ಬರಹ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಬಹಿರಂಗ

ಕನ್ನಡಿಗರ ಮನ ಮನೆಗೆ ಮಹಾನಾಯಕ

Published

on

  • ರಘೋತ್ತಮ ಹೊ.ಬ

ಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆರವರ ಮಗಳು ಉದ್ಯಮಿ ಸ್ಮೃತಿ ಸುಶೀಲ್ ಕುಮಾರ್ ಶಿಂಧೆ ತಮ್ಮ “ಸೋಬೋ ಫಿಲಂಸ್” ಲಾಂಛನದಡಿಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನ ಚರಿತ್ರೆ ಕುರಿತು ಹಿಂದಿಯಲ್ಲಿ “ಏಕ್ ಮಹಾನಾಯಕ್” ಧಾರಾವಾಹಿ ನಿರ್ಮಿಸಿದ್ದಾರೆ.

ಅದು ಕಳೆದ ಅಂದರೆ 2019 ಡಿಸೆಂಬರ್ 17ರಿಂದ ಹಿಂದಿಯ ಅಂಡ್ ಟಿವಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8:30 ಕ್ಕೆ ಯಶಸ್ವಿಯಾಗಿ ಪ್ರಸಾರ ಕೂಡ ಆಗುತ್ತಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಾಲ್ಯದ ಜೀವನದಿಂದ ಹಿಡಿದು ಅಂತ್ಯದವರೆಗೆ ಅವರ ಸಮಗ್ರ ಹೋರಾಟದ ಜೀವನದ ಚಿತ್ರಣವನ್ನು ಧಾರಾವಾಹಿ ಕಟ್ಟಿಕೊಡುತ್ತಿದೆ.

ಧಾರಾವಾಹಿಯ ನಿರ್ದೇಶಕರು ಇಮ್ತಿಯಾಜ್ ಪಂಜಾಬಿ. ಕಥೆ ಶಾಂತಿಭೂಷಣ್ ಅವರದು. ಅಂದಹಾಗೆ ಧಾರಾವಾಹಿಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಇಂಗ್ಲಿಷ್ ಬರಹಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಖ್ಯಾತ ಇತಿಹಾಸಕಾರ ಅವರ ಹರಿ ನರ್ಕೆ ಅವರ ಮಾರ್ಗದರ್ಶನವಿದೆ. ಮಹಾರಾಷ್ಟ್ರದಲ್ಲಿ ಲಭ್ಯವಿರುವ ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತ ವಿಪುಲ ಮರಾಠಿ ಸಾಹಿತ್ಯ ವಿಶೇಷವಾಗಿ ಸಿ.ಆರ್.ಖೈರ್ಮೋಡೆಯವರ ಬರಹಗಳನ್ನು ಈ ಧಾರವಾಹಿ ಆಧರಿಸಿದೆ.

ಧಾರಾವಾಹಿಯ ಪಾತ್ರವರ್ಗದ ಬಗ್ಗೆ ಹೇಳುವುದಾದರೆ ಬಾಲಕ ಭೀಮರಾವ್ ಪಾತ್ರಧಾರಿಯಾಗಿ ಆಯುಧ್ ಬನ್ಸಾಲಿ ಅಭಿನಯಿಸಿದ್ದಾರೆ. ಬಾಲಕ ಭೀಮನ ತಾಯಿ ಭೀಮಬಾಯಿಯಾಗಿ ನೇಹ ಜೋಶಿ ನಟಿಸಿದ್ದಾರೆ. ಇನ್ನು ಭೀಮನ ತಂದೆ ರಾಮ್ ಜಿ ಸಕ್ಪಾಲ್ ಪಾತ್ರದಲ್ಲಿ ಜಗನ್ನಾಥ್ ನಿವಾಂಗನೆ, ಬಾಲಕ ಭೀಮನ ದೊಡ್ಡಣ್ಣನ ಪಾತ್ರದಲ್ಲಿ ಸವದ್ ಮನ್ಸೂರಿ, ಚಿಕ್ಕಣ್ಣನ ಪಾತ್ರದಲ್ಲಿ ಅತ್ತಾರ್ ಖಾನ್, ಅತ್ತೆಯ ಪಾತ್ರದಲ್ಲಿ ಖುಷ್ಬು ಕಮಾಲ್ ನಟಿಸಿದ್ದರೆ, ಸಹೋದರಿ ಯರ ಪಾತ್ರದಲ್ಲಿ ತುಳಸಿ ಮತ್ತು ವಂಶಿಕಾ ಯಾದವ್ ನಟಿಸಿದ್ದಾರೆ.

ಅಂದಹಾಗೆ ಅಂಬೇಡ್ಕರರ ಬಾಲ್ಯದ ಜೀವನದ ನಂತರ ಅಂದರೆ ಯುವಕ ಅಂಬೇಡ್ಕರ್ ಪಾತ್ರಧಾರಿಯಾಗಿ ಪ್ರಸಾದ್ ಜಾವಡೆ ಕಾಣಿಸಿಕೊಳ್ಳಲಿದ್ದಾರೆ. ಸಂತಸದ ವಿಷಯ ಹಿಂದಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ಇದೀಗ ಕನ್ನಡಕ್ಕೆ ಡಬ್ ಆಗಿ ಕನ್ನಡಿಗರಿಗಾಗಿ ಜೀ ಕನ್ನಡದಲ್ಲಿ ಪ್ರಸಾರ ಮಾಡುತ್ತಿದೆ. ಅದರ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಈ ನಿಟ್ಟಿನಲ್ಲಿ ಅಕ್ಷರಶಃ ಅಭಿನಂದನಾರ್ಹರು.

ಹಾಗೆಯೇ ವಿಶೇಷವಾಗಿ ಈಗಾಗಲೇ ಭಾರಿ ಜನಪ್ರಿಯತೆ ಪಡೆದಿರುವ ಧಾರಾವಾಹಿಯ ಟೈಟಲ್ ಸಾಂಗ್ “ರಾಷ್ಟ್ರ ಸಂವಿಧಾನಕ್ಕೆ ನೀನೇ ಶಿಲ್ಪಿಯು... ” ಗೀತೆಯನ್ನು ಅಶ್ವಿನ್ ಶರ್ಮಾ ಹಾಡಿದ್ದರೆ, ಹರ್ಷಪ್ರಿಯ ಅದಕ್ಕೆ ಸಾಹಿತ್ಯ ಒದಗಿಸಿದ್ದಾರೆ. ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 6 ಕ್ಕೆ ಇದು ಪ್ರಸಾರವಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗ ಮಹಾನಾಯಕನನ್ನು ನೋಡಲಿ ಬಾಬಾಸಾಹೇಬ್ ಅಂಬೇಡ್ಕರರನ್ನು ಕಣ್ತುಂಬಿಕೊಳ್ಳಲಿ ಎಂಬುದೇ ಕಳಕಳಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ದೇವರಿಗೊಂದು ಮಂದಿರ ಕಟ್ಟಿ , ಸ್ವರ್ಗಕ್ಕೊಂದು ರೈಲು ಹಾಕಿದಾಗ..?

Published

on

ಎಡ್ಮಂಡ್ ಬ್ರೂಕ್ ಎಂಬ ವ್ಯಕ್ತಿಯಿದ್ದನು. ಆತನಿಗೆ ದೇವರ ಮೇಲೆ ನಂಬಿಕೆಯೇ ಇರಲಿಲ್ಲ. ಆದರೂ ಪ್ರತಿ ಭಾನಿವಾರ ಆತ ಚರ್ಚ್ ಗೆ ಹೋಗಿ ಅಲ್ಲಿನ ಫಾದರ್ ಬೋಧನೆಗಳನ್ನು ಕೇಳುತ್ತಿದ್ದನು. ಇದನ್ನು ಕಂಡ ಒಬ್ಬ ವ್ಯಕ್ತಿ ” ನಿನಗೆ ದೇವರ ಮೇಲೆ ನಂಬಿಕೆಯೇ ಇಲ್ಲ. ಹಾಗಿರುವಾಗ ಚರ್ಚಿಗೆ ಬರುವುದಾದರೂ ಏತಕ್ಕೆ ?” ಎಂದು ಕೇಳುತ್ತಾನೆ. ಅದಕ್ಕೆ ಎಡ್ಮಂಡ್ ಬ್ರೂಕ್ ” ನನಗೆ ನಂಬಿಕೆಯಿಲ್ಲ. ಆದರೆ ಈ ಫಾದರ್ ತುಂಬಾ ಅದ್ಬುತವಾದ ವ್ಯಕ್ತಿ.

ಏಕೆಂದರೆ ಈತನು ದೇವರ ಮೇಲೆ ಇಟ್ಟ ನಂಬಿಕೆಯಲ್ಲೂ ಈತ ತುಂಬಾ ಒಳ್ಳೆಯ ಮಾತುಗಳಿಂದ ಒಳ್ಳೆಯದನ್ನು ಪ್ರೇರೇಪಿಸುತ್ತಾನೆ.‌ ನಾನು ನಾಸ್ತಿಕ , ಈತ ಆಸ್ತಿಕ. ಈತನ ನಂಬಿಕೆ ಮೌಡ್ಯವಾಗಿರಬಹುದು, ತಪ್ಪಾಗಿರಬಹುದು. ಅದು ನನಗೆ ಮುಖ್ಯವಲ್ಲ ಬದಲಿಗೆ ಆತ ಮಾಡುತ್ತಿರುವ ಕೆಲಸ ತುಂಬಾ ಸುಂದರವಾಗಿದೆ. ಮೌಡ್ಯವಿದ್ದರೂ ಆತ ಒಳ್ಳೆಯದನ್ನು ಒಲಿಸಿಕೊಂಡಿದ್ದಾನೆ. ಅದೇ ನನಗೆ ಮುಖ್ಯ. ಆದ್ದರಿಂದಲೇ ನಾನು ಪ್ರತಿ ಭಾನುವಾರ ಆತನ ಮಾತುಗಳನ್ನು ಕೇಳಲು ಬರುತ್ತೇನೆ” ಎಂದನು.

ಹೀಗೆ ಕೆಲವು ದಿನಗಳ ನಂತರ ಫಾದರ್ ತನ್ನ ಬೋಧನೆಯಲ್ಲಿ ” ಯಾರು ಒಳ್ಳೆಯ ಗುಣ, ನಡತೆ ಮತ್ತು ದೇವರ ಮೇಲೆ ನಂಬಿಕೆ ಹೊಂದಿರುತ್ತಾರೋ , ಅವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ” ಎಂದು ಹೇಳುತ್ತಾರೆ. ಇದನ್ನು ಕೇಳಿಸಿಕೊಂಡ ಎಡ್ಮಂಡ್ ಬ್ರೂಕ್ ಬೋಧನೆ ಮುಗಿದ ನಂತರ ಫಾದರ್ ಅನ್ನು ಭೇಟಿ ಮಾಡಿ ” ನೀವು ಬೋಧಿಸುತ್ತಾ ಒಂದು ಮಾತು ಹೇಳಿದ್ದೀರಿ.

ಯಾರು ಒಳ್ಳೆಯ ಗುಣ, ನಡತೆ ಮತ್ತು ದೇವರ ಮೇಲೆ ನಂಬಿಕೆ ಹೊಂದಿರುತ್ತಾರೋ ಅವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂದು. ಹಾಗಾದರೆ ಒಳ್ಳೆಯ ಗುಣ, ನಡತೆ ಇದ್ದು ದೇವರ ಮೇಲೆ ನಂಬಿಕೆ ಇಲ್ಲದಿದ್ದವರು ಎಲ್ಲಿಗೆ ಹೋಗುತ್ತಾರೆ?.

ಸ್ವರ್ಗಕ್ಕಾ ಅಥವಾ ನರಕಕ್ಕಾ?. ಒಂದು ವೇಳೆ ಒಳ್ಳೆಯ ಗುಣ,ನಡೆತೆಯೇ ಮುಖ್ಯವಾದರೆ ದೇವರ ಮೇಲೆ ನಂಬಿಕೆ ಏಕೆ ಬೇಕು? ಅಥವಾ ದೇವರ ಮೇಲೆ ನಂಬಿಕೆ ಮಾತ್ರ ಇದ್ದರೆ ಸಾಕು ಎನ್ನುವುದಾದರೆ ಒಳ್ಳೆಯ ಗುಣ, ನಡತೆಗಳ ಅಗತ್ಯವಾದರೂ ಏನು?. ಈ ಗೊಂದಲವನ್ನು ನೀವು ಬಿಡಿಸಿ ಹೇಳಿ” ಎಂದು ಕೇಳುತ್ತಾರೆ.

ಇಂತಹಾ ಪ್ರಶ್ನೆ ನಿರೀಕ್ಷಿಸದ ಫಾದರ್ ಸ್ವಲ್ಪ ಗೊಂದಲಕ್ಕೆ ಒಳಗಾಗಿ ” ನನಗೆ ಒಂದು ವಾರ ಸಮಯ ಕೊಡಿ. ನಾನು ಈ ಕುರಿತು ಪರಿಶೀಲಿಸಿ ಹೇಳುತ್ತೇನೆ” ಎಂದರು. ಸರಿ ಎಂದು ಎಡ್ಮಂಡ್ ಕೂಡಾ ಅಲ್ಲಿಂದ ಹೊರಡುತ್ತಾರೆ. ಈ ಒಂದು ವಾರದ ಕಾಲ ಫಾದರ್ ಗೆ ಹೆಚ್ಚು ಒತ್ತಡವನ್ನು ತರುತ್ತದೆ.

ಬೈಬಲಿನ ಎಲ್ಲಾ ಪುಟ ಪುಟವೂ ಓದುತ್ತಾರೆ. ಪುನಃ ಪುನಃ ಮರುಪರೀಕ್ಷಿಸುತ್ತಾರೆ. ಕೊನೆಗೂ ಸಮಾಧಾನಕರವಾದ ಉತ್ತರ ದೊರೆಯುವುದಿಲ್ಲ. ಕೊನೆಗೆ ಉತ್ತರಿಸಲೇಬೇಕಾದ ದಿನವೂ ಬರುತ್ತದೆ. ಅದೇ ಸಮಯದಲ್ಲಿ ಬೋಧನೆಗೂ ಮೊದಲು ಸ್ವಲ್ಪ ವಿಶ್ರಾಂತಿಯಲ್ಲಿ ಕುಳಿತಿದ್ದ ಫಾದರ್ ಉತ್ತರದ ಗುಂಗಿನಲ್ಲೇ ಹಾಗೇ ನಿದ್ದೆಗೆ ಜಾರುತ್ತಾರೆ. ನಿದ್ದೆಯಲ್ಲಿ ಒಂದು ಕನಸು ಕೂಡಾ ಬರುತ್ತದೆ.

ಕನಸಿನಲ್ಲಿ ಫಾದರ್ ಒಂದು ರೈಲಿನಲ್ಲಿ ಪ್ರಯಾಣಿಸುತ್ತಿರುತ್ತಾರೆ. ಕೂಡಲೇ ಅಲ್ಲಿದ್ದವರನ್ನು ಕುರಿತು ” ಈ ರೈಲು ಎಲ್ಲಿಗೆ ಹೋಗುತ್ತಿದೆ?” ಎಂದು ಕೇಳುತ್ತಾನೆ. ಅಲ್ಲಿದ್ದವರು ” ಸ್ವರ್ಗಕ್ಕೆ” ಎಂದು ಹೇಳುತ್ತಾರೆ. ಫಾದರ್ ” ತುಂಬಾ ಸಂತೋಷ, ಒಳ್ಳೆಯದಾಯ್ತು” ಎಂದು ಸಂತೋಷಗೊಳ್ಳುತ್ತಾನೆ. ಕೂಡಲೇ ಅಲ್ಲಿದ್ದವರನ್ನು ” ಇಷ್ಟಕ್ಕೂ ಇವರೆಲ್ಲಿ?. ಅದೇ ಸಾಕ್ರೆಟಿಸ್ ನಂತಹವರು. ಒಳ್ಳೆಯ ಗುಣ, ನಡತೆ ಹೊಂದಿರುತ್ತಾರೆ.

ಆದರೆ ದೇವರ ಮೇಲೆ ನಂಬಿಕೆ ಇಲ್ಲದಂತವರು?” ಕೇಳುತ್ತಾನೆ. ಅವರು ” ಗೊತ್ತಿಲ್ಲ. ಈ ರೈಲಿನಲ್ಲಂತೂ ಇಲ್ಲ” ಎಂದು ಹೇಳುತ್ತಾರೆ. ಅಷ್ಟರಲ್ಲಿ ಸ್ವರ್ಗ ತಲುಪುತ್ತಾರೆ. ಆದರೆ ಚರ್ಚಿನ ಫಾದರ್ ಗೆ ಸ್ವರ್ಗ ಅಷ್ಟಾಗಿ ಹಿಡಿಸಲಿಲ್ಲ. ಸ್ವರ್ಗ ತುಂಬಾ ನೀರಸವಾಗಿದೆ, ಹಾಳಾದಂತಿದೆ, ಅಷ್ಟು ಆಕರ್ಷಕವಾಗಿರಲಿಲ್ಲ. ಹಾಗಾಗಿ ಫಾದರ್ ಪುನಃ ನರಕಕ್ಕೆ ಹೋಗುವ ರೈಲು ಬರುವುದನ್ನು ನೋಡಿ ಹತ್ತುತ್ತಾರೆ. ನರಕಕ್ಕೆ ಹೋದ ತಕ್ಷಣ ಫಾದರ್ ಗೆ ತುಂಬಾ ಆಶ್ಚರ್ಯವಾಗುತ್ತದೆ.

ಎಲ್ಲಿ ನೋಡಿದರೂ ದೊಡ್ಡ ಮರಗಳು, ಹಸಿರಿನಿಂದ ಕಂಗೊಳಿಸುತ್ತಾ ತುಂಬಾ ಸಂತೋಷದಿಂದ ತುಂಬಿರುತ್ತದೆ. ಅನುಮಾನಗೊಂಡ ಫಾದರ್ ಅಲ್ಲಿದ್ದ ಕೆಲವರನ್ನು “ಇದು ನಿಜವಾಗಿಯೂ ನರಕವೇ? ” ಎಂದು ಕೇಳುತ್ತಾರೆ. ” ಹೌದು” ಎಂದು ಉತ್ತರ ಸಿಗುತ್ತದೆ. ಹಾಗೇ ” ಇಲ್ಲಿ ಸಾಕ್ರೆಟಿಸ್ ಇದ್ದಾನಾ?” ಎಂದು ಅನುಮಾನದಿಂದ ಪ್ರಶ್ನಿಸುತ್ತಾನೆ. ಅದಕ್ಕೆ ಅವರು ” ಅಗೋ ಅಲ್ಲಿ ಹೊಲದಲ್ಲಿ ಕೆಲಸ ಮಾಡ್ತಾ ಇದ್ದಾನೆ” ಎಂದು ತೋರಿಸುತ್ತಾರೆ.

ಫಾದರ್ ಕಾತುರದಿಂದ ಸಾಕ್ರೆಟಿಸ್ ಬಳಿ ಓಡುತ್ತಾನೆ. ಹತ್ತಿರ ಹೋಗಿ ” ನೀನು ಇಲ್ಲಿದ್ದೀಯ. ನಿನಗೆ ಒಳ್ಳೆಯ ಗುಣ, ನಡತೆ ಇದೆ. ಆದರೆ ದೇವರ ಮೇಲೆ ನಂಬಿಕೆ ಇಲ್ಲ ಹಾಗಾಗಿ ನಿನ್ನನ್ನ ನರಕದಲ್ಲಿ ಬಿಟ್ಟಿದ್ದಾರೆಯೇ? ” ಎಂದು ಕೇಳುತ್ತಾನೆ. ಅದಕ್ಕೆ ಕೆಲಸ ಮಾಡುತ್ತಲೇ ಸಾಕ್ರೆಟಿಸ್ ” ನನಗೆ ನರಕದ ಬಗ್ಗೆ ಏನೂ ಗೊತ್ತಿಲ್ಲ, ನಂಬಿಕೆಯೂ ಇಲ್ಲ. ಹೇಗೂ ಇಲ್ಲಗೆ ಬಂದನಲ್ಲ ಹಾಗಾಗಿ ಇದನ್ನು ಸ್ವರ್ಗವಾಗಿ ಮಾಡಿದೆ ಅಷ್ಟೇ” ಎಂದನು.

ಕೂಡಲೇ ತಟ್ ಎಂದು ಕಣ್ಣು ಬಿಟ್ಟು ಕನಸಿನಿಂದ ಹೊರಬರುತ್ತಾರೆ ಫಾದರ್. ಉತ್ತರಕ್ಕಾಗಿ ಕಾಯುತ್ತಿದ್ದ ಎಡ್ಮಂಡ್ ಬ್ರೂಕ್ ನನ್ನ ಉದ್ದೇಶಿಸುತ್ತಾ ” ನಾನು ಉತ್ತರಿಸುವುದಕ್ಕೂ ಮೊದಲು ನನಗೆ ಬಂದ ಕನಸಿನ ಬಗ್ಗೆ ಹೇಳಬೇಕು. ಈ ಕನಸಿನಿಂದ ನನಗೆ ಒಂದು ಅರಿವಾಯಿತು.

ಏನೆಂದರೆ ಒಳ್ಳೆಯ ಗುಣ, ನಡತೆ ಇದ್ದವರು ಯಾವ ಪ್ರದೇಶಕ್ಕೆ ಹೋದರೂ ಅದನ್ನು ಸ್ವರ್ಗವಾಗಿ ಮಾರ್ಪಡಿಸುತ್ತಾರೆ. ಆದರೆ ಒಳ್ಳೆಯ ಗುಣ, ನಡತೆ ಇಲ್ಲದೆ ದೇವರ ಮೇಲೆ ನಂಬಿಕೆ ಇದ್ದವರು ಯಾವ ಪ್ರದೇಶಕ್ಕೆ ಹೋದರೂ ಅದು ನರಕವಾಗಿ ಮಾರ್ಪಡುತ್ತದೆ ಎಂದು ಒಂದು ಕನಸಿನ ಮೂಲಕ ನನಗೆ ಅರಿವಾಯಿತು” ಎಂದು ಹೇಳುತ್ತಾರೆ.

ಸ್ನೇಹಿತರೆ ನಾವು ಸ್ವತಃ ನಾಸ್ತಿಕರಾಗಿರಬಹುದು ಅಥವಾ ಆಸ್ತಿಕರಾಗಿರಬಹುದು. ಆದರೆ ಒಬ್ಬ ವ್ಯಕ್ತಿಯು ದೇವರ ಮೇಲೆ ನಂಬಿಕೆ ಇಟ್ಟದ್ದಾನೋ ಇಲ್ಲವೋ ಎಂಬ ಕಾರಣದಿಂದ ಆತನನ್ನು ನಾವು ನಿರ್ಧರಿಸುವುದು ಅಥವಾ ನಿಂಧಿಸುವುದು ತಪ್ಪಾಗುತ್ತದೆ. ಬದಲಿಗೆ ಆತ ಆಸ್ತಿಕನಾಗಿರಲಿ ನಾಸ್ತಿಕನಾಗಿರಲಿ ಒಳ್ಳೆಯ ಗುಣ ನಡತೆ ಇದ್ದರೆ ಮಾತ್ರ ಆತನ ವ್ಯಕ್ತಿತ್ವ ಸರಿಯೆಂದು ಒಪ್ಪಬೇಕು.

ದೇವರ ಮೇಲಿನ ನಂಬಿಕೆಯೇ ಮೌಡ್ಯವಾಗಿರಬಹುದು ಆದರೆ ಆ ನಂಬಿಕೆ ಹೊಂದಿರುವ ವ್ಯಕ್ತಿಯ ನಡತೆ ಮುಖ್ಯವಾಗುತ್ತದೆ. ನಾಸ್ತಿಕತೆಯೇ ಸರಿ ಅಥವಾ ವಾಸ್ತವ ಆಗಿರಬಹುದು ಆದರೆ ನಡೆತೆಯಿಲ್ಲದಿದ್ದರೆ ತಪ್ಪಾಗುತ್ತದೆ.

ಇನ್ನು ಮಂದಿರ ನಿರ್ಮಾಣವೇ ದೊಡ್ಡ ಸಾಧನೆ ಎಂದು ಹೇಳುವವರಿಗೆ ನನ್ನ ಮನವಿ ಇಷ್ಟೆ. ಗುಣ, ನಡತೆ, ಸಾಮರಸ್ಯ,ಸಮಾನತೆ, ಸಹೋದರತೆ ಇಂತಹಾ ಗುಣಗಳನ್ನು ಬೆಳಸದ ಎಷ್ಟು ದೊಡ್ಡ ಮಂದಿರ ಕಟ್ಟಿದರೂ, ಮಸೀದಿ, ಚರ್ಚು ಕಟ್ಟಿದರೂ ಅದು ನರಕವನ್ನಷ್ಟೇ ಸೃಷ್ಟಿಸುತ್ತದೆ. ನೀವು ನಂಬಿಕೆ ಇಡುವ ದೇವರು ಕೂಡಾ ಮೆಚ್ಚುವುದಿಲ್ಲ. ಕೊನೆಗೆ ಇಂತಹಾ ನರಕವನ್ನು ಕೂಡಾ ಒಳ್ಳೆಯ ಗುಣ, ನಡತೆಗಳಿರುವವರು ಮಾತ್ರವೇ ಸ್ವರ್ಗವಾಗಿಸಬಲ್ಲರು. ಅವರು ಆಸ್ತಿಕರಾಗಿರಲಿ , ನಾಸ್ತಿಕರಾಗಿರಲಿ.

ಜನಾ ನಾಗಪ್ಪ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಮುನ್ನೂರು ರಾಮಾಯಣಗಳು : ಒಂದು ವ್ಯಾಖ್ಯಾನ

Published

on

ಎ. ಕೆ. ರಾಮಾನುಜನ್ ಅವರ `ಥ್ರೀ ಹಂಡ್ರೆಡ್ ರಾಮಾಯಣಾಸ್: ಫೈವ್ ಎಕ್ಸಾಂಪಲ್ಸ್ ಅಂಡ್ ಥ್ರೀ ಥಾಟ್ಸ್ ಆನ್ ಟ್ರಾನ್ಸ್‌ಲೇಷನ್ಸ್~ (Three Hundred Ramayanas: Five Examples and Three Thoughts on Translations) ಎಂಬ ಪ್ರಸಿದ್ಧ ಲೇಖನ ಮೊದಲಿಗೆ ಚಿಕಾಗೋ ವಿ.ವಿ.ಯಲ್ಲಿ 1985-86ರಲ್ಲಿ ನಡೆದ ಕಮ್ಮಟವೊಂದರಲ್ಲಿ ಮಾಡಿದ ಭಾಷಣ; ಅನಂತರ ಅದನ್ನು ವಿಸ್ತರಿಸಿ, ಬರೆದ  ಲೇಖನ ಪಾಲಾ ರಿಚ್ಮನ್ ಅವರ Many Ramayanas  (1991) ಎಂಬ ಸಂಕಲನದ ಮೊದಲ ಲೇಖನವಾಗಿ ಪ್ರಕಟವಾಯಿತು.

ವಿನಯ್ ಧಾರ್ವಾಡಕರ್ ಸಂಪಾದಿಸಿರುವ ರಾಮಾನುಜನ್ ಅವರ ಸಮಗ್ರ ಲೇಖನಗಳ ಸಂಕಲನದಲ್ಲಿ ಇದು ಸೇರ್ಪಡೆಯಾಗಿದೆ (1999; ಪು. 131-160).

ತಮ್ಮ ಕಾಲದಲ್ಲಿ ಪ್ರಚಲಿತವಿದ್ದ ರಾಮ ಕಥೆಗಳನ್ನಾಧರಿಸಿ ವಾಲ್ಮೀಕಿ ಮುನಿಗಳು ಸಂಸ್ಕೃತದಲ್ಲಿ ಭಾರತದ ಆದಿಕಾವ್ಯವನ್ನು ಬರೆದ ನಂತರ, ಕಳೆದ 2500 ವರ್ಷಗಳ ಅವಧಿಯಲ್ಲಿ, ಭಾರತದ ಹಾಗೂ ದಕ್ಷಿಣ ಏಷ್ಯಾದ ಎಲ್ಲಾ ಭಾಷೆಗಳಲ್ಲಿಯೂ ರಾಮಕಥೆಯು ಮತ್ತೆ ಮತ್ತೆ ಕಥಿಸಲ್ಪಟ್ಟಿದೆ; ಮತ್ತು, ಈ ಪರಂಪರೆ ಇನ್ನೂ ಮುಂದುವರಿದಿದೆ.

ಪ್ರಾಯಃ ಸಾವಿರವನ್ನೂ ಮೀರುವ ಇವೆಲ್ಲಾ ರಾಮಾಯಣಗಳನ್ನು ಯಾವ ಪರಿಪ್ರೇಕ್ಷ್ಯದಿಂದ ನೋಡಬಹುದು? ಈ ರಾಮಾಯಣಗಳಲ್ಲಿ ಕಂಡುಬರುವ ಭಿನ್ನತೆಗಳಲ್ಲಿ ಏನಾದರೂ ಸಮಾನ ವಿನ್ಯಾಸವಿದೆಯೆ? ರಾಮಾನುಜನ್ ಅವರ ತೌಲನಿಕ ಲೇಖನ ಈ ಕಠಿಣ ಪ್ರಶ್ನೆಗಳಿಗೆ ಉತ್ತರವನ್ನು ಶೋಧಿಸುತ್ತದೆ.

ಈ ದೀರ್ಘ ಲೇಖನದಲ್ಲಿ ಚರ್ಚಿಸಲ್ಪಟ್ಟಿರುವ ವಿಷಯಗಳ ಹರಹು ಹೀಗಿದೆ: ಪೀಠಿಕೆ, ವಾಲ್ಮೀಕಿ ಮತ್ತು ಕಂಬನ್, ಜೈನ ರಾಮಾಯಣಗಳು, ಲಿಖಿತ-ಮೌಖಿಕ ಕಥನಗಳು, ದಕ್ಷಿಣ ಏಷ್ಯಾದ ಒಂದು ರಾಮಕಥೆ, ಭಿನ್ನತೆಗಳ ವಿನ್ಯಾಸ, ಭಾಷಾಂತರಗಳ ಸ್ವರೂಪ, ಮತ್ತು ರಾಮಾಯಣ ಶ್ರವಣದ ಪರಿಣಾಮ.

ಪೀಠಿಕೆಯಲ್ಲಿ, ಒಂದು ಜಾನಪದ ಕಥೆಯ ಮೂಲಕ ಭಾರತದಲ್ಲಿ ಮತ್ತು ಇತರ ದೇಶಗಳಲ್ಲಿ, ಮೌಖಿಕ ಹಾಗೂ ಲಿಖಿತ ಪರಂಪರೆಗಳಲ್ಲಿ ಅನೇಕ ರಾಮಾಯಣಗಳಿರುವುದನ್ನು ದಾಖಲಿಸಿ, ತಮ್ಮ ಲೇಖನದ ಉದ್ದೇಶ `ಈ ಬಗೆಯ ನೂರಾರು ರಾಮಾಯಣಗಳ ಭಿನ್ನತೆಗಳಲ್ಲಿ ಇರಬಹುದಾದ ವಿನ್ಯಾಸವನ್ನು ಗುರುತಿಸುವುದು’ ಎಂದು ರಾಮಾನುಜನ್ ಮಂಡಿಸುತ್ತಾರೆ.

ಅನಂತರ, ವಾಲ್ಮೀಕಿ-ಕಂಬನ್ ರಾಮಾಯಣಗಳಲ್ಲಿರುವ ಅಹಲ್ಯಾ ಪ್ರಕರಣವನ್ನು ತುಲನಾತ್ಮಕವಾಗಿ  ವಿಶ್ಲೇಷಿಸುತ್ತಾ, ಕಂಬನ್ ರಾಮಾಯಣದಲ್ಲಿರುವ ಈ ಪ್ರಸಂಗದ ನಾಟಕೀಯತೆ ಹಾಗೂ ತಮಿಳು ಭಕ್ತಿಪಂಥದ ಪ್ರಭಾವ ಇತ್ಯಾದಿ ಅಂಶಗಳನ್ನು ರಾಮಾನುಜನ್ ವಿವರಿಸುತ್ತಾರೆ:  ವಾಲ್ಮೀಕಿ ರಾಮಾಯಣದಲ್ಲಿ ಇಂದ್ರನು ಅಹಲ್ಯೆಯನ್ನು ವಂಚಿಸಿ ಭೋಗಿಸಿದರೆ, ಕಂಬನ್ ಕೃತಿಯಲ್ಲಿ, ತಾನು ತಪ್ಪು ಮಾಡುತ್ತಿದ್ದೆೀನೆಂದು ಅಹಲ್ಯೆಗೆ ಗೊತ್ತಿದ್ದರೂ ತನ್ನ ಮೋಹವನ್ನು ಜಯಿಸಲಾರದೆ ಅವಳು ಇಂದ್ರನಿಗೆ ವಶವಾಗುತ್ತಾಳೆ.

ಅನಂತರ, ವಿಮಲಸೂರಿಯ ಪಉಮ ಚರಿಯದಿಂದ ಪ್ರಾರಂಭವಾಗುವ ಜೈನ ರಾಮಾಯಣಗಳು ಮತ್ತು ವಾಲ್ಮೀಕಿ ರಾಮಾಯಣ ಇವುಗಳ ನಡುವಿನ ಭಿನ್ನತೆಗಳನ್ನು ಹೀಗೆ ಗುರುತಿಸುತ್ತಾರೆ: ಜೈನ ರಾಮಾಯಣಗಳಲ್ಲಿ ರಾವಣನು ಕ್ರೂರ ರಾಕ್ಷಸನಲ್ಲ.

63 ಶಲಾಕಾಪುರುಷರಲ್ಲಿ ಒಬ್ಬ ಪ್ರತಿವಾಸುದೇವ; ಉದಾತ್ತ ರಾವಣನಿಗಿರುವ ಒಂದೇ ಒಂದು ಮಿತಿಯೆಂದರೆ ಸೀತಾ ವ್ಯಾಮೋಹ;  ರಾವಣ ವಧೆಯಾಗುವುದು ಲಕ್ಷ್ಮಣನಿಂದ; ರಾವಣ, ಕುಂಭಕರ್ಣ, ವಾಲಿ, ಹನುಮಂತ, ಜಾಂಬವಂತ, ಮುಂತಾದವರು ರಾಕ್ಷಸರಾಗಲಿ ಕಪಿ ಕರಡಿಗಳಾಗಲಿ ಅಲ್ಲ. ಅವರೆಲರ‌್ಲೂ ವಿದ್ಯಾಧರ ಕುಲಕ್ಕೆ ಸೇರಿದವರು; ಇತ್ಯಾದಿ.

ಮುಂದಿನ ಭಾಗದಲ್ಲಿ, ಲಿಖಿತ-ಮೌಖಿಕ ರಾಮಾಯಣ ಪರಂಪರೆಗಳನ್ನು ವ್ಯಾಖ್ಯಾನಿಸುತ್ತಾ, ರಾಮಾನುಜನ್ ಕನ್ನಡದ (ರಾಗೌ ಮುಂತಾದವರು ಸಂಪಾದಿಸಿರುವ, 1973ರಲ್ಲಿ ಪ್ರಕಟವಾದ) `ತಂಬೂರಿ ರಾಮಾಯಣವನ್ನು ದೀರ್ಘವಾಗಿ ಚರ್ಚಿಸುತ್ತಾರೆ.

ಮಕ್ಕಳಿಲ್ಲದ ರಾವಣನು ಮುನಿ ಕೊಟ್ಟ ಹಣ್ಣನ್ನು ತಾನೇ ಸೇವಿಸಿ, ಗರ್ಭವನ್ನು ಧರಿಸಿ, `ಸೀತಾಗ~ ಹೊರಬಂದ ಮಗು `ಸೀತೆ; ಮುಂದೆ, ಅವಳು ತನ್ನ ಕುಲವನ್ನೇ ನಾಶಮಾಡುತ್ತಾಳೆಂಬ ಜೋತಿಷ್ಕರ ಹೇಳಿಕೆಯನ್ನು ನಂಬಿ, ಅವಳನ್ನು ಒಂದು ಪೆಟ್ಟಿಗೆಯಲ್ಲಿಟ್ಟು ನದಿಯಲ್ಲಿ ತೇಲಿ ಬಿಡುತ್ತಾನೆ ಮತ್ತು ಜನಕನಿಗೆ ಆ ಪೆಟ್ಟಿಗೆ ಸಿಕ್ಕಿ, ಅವನು ಆ ಮಗುವನ್ನು ತಂದು ಸಾಕುತ್ತಾನೆ.

ರಾಮಾನುಜನ್ ಇಲ್ಲಿ ಗಮನಿಸುವ ಎರಡು ಪ್ರಮುಖ ಅಂಶಗಳೆಂದರೆ 1) ಸೀತೆ ರಾವಣನ ಮಗಳು, 2) ರಾವಣನು ಗರ್ಭಧಾರಣೆ ಮಾಡುವುದು.  ಈ ಎರಡೂ ಘಟನೆಗಳ ಆಳದಲ್ಲಿ ಸ್ತ್ರೀವಿಶಿಷ್ಟ ಗರ್ಭಕೋಶ ಹಾಗೂ ಪ್ರಸವ ಇವುಗಳನ್ನು ಕುರಿತು ಪುರುಷನಿಗಿರುವ ಅಸೂಯೆ ಮತ್ತು ತನ್ನ ಮಗಳನ್ನು ಕುರಿತು ತಂದೆಗಿರುವ `ಈಡಿಪಸ್~ ಅಥವಾ `ಅಗಮ್ಯ ಗಮನ~ದ  ಆಶಯ, ಇತ್ಯಾದಿಗಳನ್ನು ಗುರುತಿಸಿ, ರಾಮಾನುಜನ್ ಈ ಆಶಯಗಳು ಭಾರತೀಯ ಸಾಹಿತ್ಯದಲ್ಲಿ ವಿಫುಲವಾಗಿವೆ ಎಂದು ಮಂಡಿಸುತ್ತಾರೆ.

ಅನಂತರ, ಥಾಯ್ ಭಾಷೆಯಲ್ಲಿರುವ ರಾಮಾಕೀನ್ ಎಂಬ ಹೆಸರಿನ ರಾಮಾಯಣ ವನ್ನು ವಿಶ್ಲೇಷಿಸುತ್ತಾ, ರಾಮಾನುಜನ್ ಈ ರಚನೆಯ ಭಿನ್ನತೆಗಳನ್ನು ಗುರುತಿಸುತ್ತಾರೆ: ಇಲ್ಲಿ ಸೀತೆಗೆ ವನವಾಸ ಪ್ರಾಪ್ತವಾಗುವುದು ಶೂರ್ಪನಖಿಯ ಕುಯುಕ್ತಿಯಿಂದ (ಕನ್ನಡದ ಚಿತ್ರಪಟ ರಾಮಾಯಣದಲ್ಲಿರುವಂತೆ); ಸೀತೆ ರಾವಣ-ಮಂಡೋದರಿಯರ ಮಗಳು, ಆದರೆ ಭವಿಷ್ಯದ್ವಾಣಿಗೆ ಹೆದರಿ ರಾವಣನು ಅವಳನ್ನು ದೂರಮಾಡುತ್ತಾನೆ; ಇತ್ಯಾದಿ.

ಈ ಬಗೆಯಲ್ಲಿ, ವೈದಿಕ ಪರಂಪರೆಯ ರಾಮಾಯಣಗಳು, ಜೈನ ಪರಂಪರೆಯ ಹಾಗೂ ಮೌಖಿಕ ಪರಂಪರೆಯ ರಾಮಾಯಣಗಳು ಮತ್ತು ಆಗ್ನೇಯ ಏಷ್ಯಾದ ರಾಮಾಯಣಗಳು, ಇವುಗಳ ನಡುವಿನ ಸಮಾನತೆ-ಭಿನ್ನತೆಗಳನ್ನು ಗುರುತಿಸಿದ ನಂತರ, ಈ ಲೇಖನದ ಎರಡು ಮುಖ್ಯ ಭಾಗಗಳು ಬರುತ್ತವೆ.

`ಭಿನ್ನತೆಗಳ ವಿನ್ಯಾಸ~ ಎಂಬ ಭಾಗದಲ್ಲಿ, ಹೇಗೆ ಈ ಪರಂಪರೆಗಳಲ್ಲಿ ಎರಡು ಭಿನ್ನ ಮುಕ್ತಾಯಗಳ (ಪಟ್ಟಾಭಿಷೇಕ/ ಲವ-ಕುಶ ಜನನ) ಹಾಗೂ ಎರಡು ಭಿನ್ನ ಪ್ರಾರಂಭಗಳ ರಾಮಾಯಣಗಳಿವೆ; ಮತ್ತು ಇವುಗಳು ಆಳದಲ್ಲಿ (ಮುಖ್ಯವಾಗಿ ಸೀತೆ) ಫಲವಂತಿಕೆ ಮತ್ತು ನಿಸರ್ಗ-ಮಾನವ ಸಂಬಂಧಗಳ ರೂಪಕಗಳು ಎಂದು ರಾಮಾನುಜನ್ ವಿವರಿಸುತ್ತಾರೆ.

ಹಾಗೆಯೇ, ಪ್ರತಿಯೊಂದು ರಾಮಾಯಣವನ್ನೂ ಅದರ `ಸಂದರ್ಭ,~ ಎಂದರೆ, ಆ ಕೃತಿ ರಚನೆಯಾದ ಭಾಷಿಕ ಸಂದರ್ಭ, ಪ್ರಾದೇಶಿಕ ಪರಂಪರೆ, ಆ ಸಮುದಾಯದ/ಲೇಖಕನ ಧಾರ್ಮಿಕ ನಂಬಿಕೆ ಹಾಗೂ ಸಾಮಾಜಿಕ ಮೌಲ್ಯಗಳು, ಇತ್ಯಾದಿ ರೂಪಿಸುತ್ತವೆ ಎಂಬ ತೀರ್ಮಾನಕ್ಕೆ ಬರುತ್ತಾರೆ.

ಈ ಸಂದರ್ಭದಲ್ಲಿಯೇ ಅವರ ಪ್ರಖ್ಯಾತ ಹೇಳಿಕೆ ಬರುತ್ತದೆ: `ರಾಮಾಯಣವೆಂದರೆ ಭಾರತದ ಎರಡನೆಯ ಭಾಷೆ~. ಮುಂದಿನ ಭಾಗದಲ್ಲಿ,  ರಾಮಕಥೆಯ ಈ ಭಿನ್ನ ರೂಪಣೆಗಳನ್ನು `ಅನುವಾದ~ಗಳೆಂದು ಕರೆಯಬಹುದು ಎಂದು ವಾದಿಸುತ್ತಾ, ರಾಮಾನುಜನ್ ಮೂರುಬಗೆಯ ಅನುವಾದ ಮಾರ್ಗಗಳನ್ನು ವಿವರಿಸುತ್ತಾರೆ (Iconic/Indexical/ Symbolic). ಅನಂತರ,  ಎಲ್ಲಾ ರಾಮಾಯಣಗಳನ್ನೂ ಒಳಗೊಳ್ಳುವ ಒಂದು ಸ್ವೋಪಜ್ಞ ವಿಮರ್ಶಾತ್ಮಕ ಚೌಕಟ್ಟನ್ನು ರೂಪಕಾತ್ಮಕವಾಗಿ ರಾಮಾನುಜನ್  ಹೀಗೆ ಕಟ್ಟುತ್ತಾರೆ:

`ನಿಯತವಾಗಿ, ಮತ್ತೆ ಮತ್ತೆ ರಾಮಾಯಣಗಳು ಸೃಷ್ಟಿಯಾದ ಸಾಂಸ್ಕೃತಿಕ ಪ್ರದೇಶವನ್ನು ಬಗೆಬಗೆಯ ಸೂಚಕಗಳಿಂದ  ತುಂಬಿರುವ ಒಂದು ಅಗಾಧ ಸರೋವರದಂತೆ ನೋಡಬಹುದು.

ಈ ಸೂಚಕಗಳೆಂದರೆ, ಕಥನ ಚೌಕಟ್ಟುಗಳು, ಪಾತ್ರಗಳು, ಹೆಸರುಗಳು, ಭೂಗೋಳ, ಘಟನೆಗಳು ಮತ್ತು ಸಂಬಂಧಗಳು, ಇತ್ಯಾದಿ. … ಪ್ರತಿಯೊಬ್ಬ ಭಾರತೀಯ ಲೇಖಕನೂ ಈ ಸರೋವರದಲ್ಲಿ ಮುಳುಗಿ ತನ್ನದೇ ಆದ ಒಂದು ವಿಶಿಷ್ಟ ಪಠ್ಯವನ್ನು ಹೊರತೆಗೆಯುತ್ತಾನೆ… ಈ ಅರ್ಥದಲ್ಲಿ (ರಾಮಾಯಣದ) ಯಾವ ಪಠ್ಯವೂ ಮೂಲವಲ್ಲ. ಆದರೆ ಯಾವ ಕಥನವೂ ಕೇವಲ ಮರುಕಥನವಲ್ಲ; ಮತ್ತು ಈ ಕಥೆಗೆ ಕೊನೆಯಿಲ್ಲ. ಆದರೆ ಪ್ರತಿಯೊಂದು ಪಠ್ಯವೂ ಸ್ವಯಂ ಪೂರ್ಣವಾಗಿರುತ್ತದೆ~ (ಪು. 158).

ಕೊನೆಯಲ್ಲಿ, ರಾಮಾಯಣ-ಶ್ರವಣದ ಪರಿಣಾಮವನ್ನು ದಾಖಲಿಸುವ ಒಂದು ಕಥೆಯೊಡನೆ ರಾಮಾನುಜನ್ ತಮ್ಮ ಲೇಖನವನ್ನು ಮುಗಿಸುತ್ತಾರೆ.

ಕಳೆದ ಎರಡು ದಶಕಗಳಲ್ಲಿ ಅಂತರರಾಷ್ಟ್ರೀಯ ವಿದ್ವತ್ ಮನ್ನಣೆಯನ್ನು ಗಳಿಸಿರುವ ಹಾಗೂ ಸಾಂಸ್ಕೃತಿಕ ತೌಲನಿಕ ವಿಮರ್ಶೆಯ ಒಂದು ಪ್ರಮುಖ ಮಾದರಿಯಾಗಿರುವ ರಾಮಾನುಜನ್ ಅವರ ಈ ಲೇಖನ ಇತ್ತೀಚೆಗೆ ದೆಹಲಿ ವಿ.ವಿ.ಯಲ್ಲಿ ವಾದ-ವಿವಾದಗಳಿಗೆ ಗುರಿಯಾಗಿ, ಕೊನೆಗೆ ಅದನ್ನು ಪಠ್ಯಾವಳಿಯಿಂದ ಬಿಟ್ಟಿರುವುದು ಅತ್ಯಂತ ಖೇದದ  ಸಂಗತಿ.

2006ರಲ್ಲಿ ಈ ಲೇಖನ ಬಿ.ಎ. ಆನರ್ಸ್ `ಕಲ್ಚರಲ್ ಹಿಸ್ಟರಿ~ ಪಠ್ಯಕ್ರಮದಲ್ಲಿ ಸೇರಿಸಲ್ಪಟ್ಟಿತು; 2008ರಲ್ಲಿಯೇ ಎಬಿವಿಪಿ ಕಾರ್ಯಕರ್ತರು ಈ ಲೇಖನದ ವಿರುದ್ಧ ಗಲಭೆ ಮಾಡಿ, ಇತಿಹಾಸ ವಿಭಾಗಕ್ಕೆ ನುಗ್ಗಿ, ಅಲ್ಲಿನ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದರು.

ಅನಂತರ, ಈ ವಿಷಯ ಸುಪ್ರೀಂ ಕೋರ್ಟ್‌ಗೆ ಹೋಗಿ, ಅದರ ಆದೇಶದಂತೆ ರಚಿಸಲ್ಪಟ್ಟ ನಾಲ್ಕು ತಜ್ಞರ ಸಮಿತಿಯಲ್ಲಿ ಮೂವರು `ಇದು ಮೌಲಿಕ ಸಂಶೋಧನೆಯನ್ನು ಒಳಗೊಂಡಿದೆ~ ಎಂದು ತಮ್ಮ ಅಭಿಪ್ರಾಯವನ್ನು ದಾಖಲಿಸಿದರು; ಆದರೆ, ನಾಲ್ಕನೆಯವರು `ಈ ಲೇಖನವನ್ನು ಹಿಂದುಗಳಲ್ಲದವರು ಪಾಠ ಮಾಡಲು ಅಸಾಧ್ಯ; ಮತ್ತು ಇದನ್ನು ಅರ್ಥಮಾಡಿಕೊಳ್ಳಲು ಕಿಶೋರಾವಸ್ಥೆಯ ವಿದ್ಯಾರ್ಥಿಗಳಿಗೆ ಸಾಧ್ಯವಿಲ್ಲ; ಆದುದರಿಂದ ಇದನ್ನು ಪಠ್ಯಾವಳಿಯಿಂದ ತೆಗೆಯಬೇಕು~ ಎಂದು ತಮ್ಮ ಅಭಿಪ್ರಾಯವನ್ನು ದಾಖಲಿಸಿದರು.

ಎರಡು ವಾರಗಳ ಹಿಂದೆ, ಈ ಒಬ್ಬರ ವಾದವನ್ನು ಒಪ್ಪಿ, ದೆಹಲಿ ವಿ. ವಿ.ಯ ಅಕಡೆಮಿಕ್ ಕೌನ್ಸಿಲ್ ಈ ಲೇಖನವನ್ನು ಪಠ್ಯಾವಳಿಯಿಂದ ತೆಗೆದು ಹಾಕಿತು.

ಎಬಿವಿಪಿ ಮತ್ತು ಇತರ ಬಲಪಂಥೀಯರು ಈ ಲೇಖನವನ್ನು ವಿರೋಧಿಸುವ ಕಾರಣಗಳು (ಪತ್ರಿಕೆಗಳಲ್ಲಿ ಬಂದಂತೆ) ಮೂರು: ಕೆಲವು ರಾಮಾಯಣಗಳು ಸೀತೆ ರಾವಣನ ಮಗಳೆಂದು ನಿರೂಪಿಸುತ್ತವೆ ಎಂಬುದನ್ನು ಈ ಲೇಖನ ಪ್ರಸ್ತಾಪಿಸುತ್ತದೆ; ಅವತಾರ ಪುರುಷನಾದ ರಾಮನನ್ನು ಮಾನವನೆಂದು ಕೆಲವು ರಾಮಾಯಣಗಳು ನಿರೂಪಿಸುವುದನ್ನು ರಾಮಾನುಜನ್ ದಾಖಲಿಸುತ್ತಾರೆ; ಮತ್ತು, ಈ ಬಗೆಯ ಚರ್ಚೆ `ಹಿಂದುಗಳ ಭಾವನೆಗಳಿಗೆ ನೋವುಂಟು ಮಾಡುತ್ತದೆ.~

ಸೀತೆ ರಾವಣನ ಮಗಳೆಂದು ಕನ್ನಡ-ತೆಲುಗು ಮೌಖಿಕ ರಾಮಾಯಣಗಳಲ್ಲಿ. ಜೈನ ಪರಂಪರೆಯ ವಾಸುದೇವಹಿಂಡಿ ಎಂಬ ಕಥನದಲ್ಲಿ, ಮತ್ತು ಆಗ್ನೇಯ ಏಷ್ಯಾದ (ಥಾಯ್) ರಾಮಾಕೀನ್ ಕೃತಿಯಲ್ಲಿ ನಿರೂಪಿಸಲ್ಪಟ್ಟಿದೆ ಎಂಬುದನ್ನು ರಾಮಾನುಜನ್ ದಾಖಲಿಸುತ್ತಾರೆ, ನಿಜ.

ಆದರೆ, ಇನ್ನೂ ಅನೇಕ ಲಿಖಿತ-ಮೌಖಿಕ ರಾಮಾಯಣಗಳಲ್ಲಿ ಸೀತೆ ರಾವಣನ ಮಗಳೆಂದು ನಿರೂಪಿಸಲ್ಪಟ್ಟಿದೆ: 10 ನೆಯ ಶತಮಾನದ ಅಭಿನಂದನನ ಸಂಸ್ಕೃತ ರಾಮಚರಿತ; 12 ನೆಯ ಶತಮಾನದ ಸಂಸ್ಕೃತ ಅದ್ಭುತ ರಾಮಾಯಣ; ಒರಿಯಾ ಭಾಷೆಯ, 18ನೆಯ ಶತಮಾನದ ಸರಳದಾಸನ ರಾಮಾಯಣ; ಮೌಖಿಕ ಸಂಪ್ರದಾಯದ  ಕುಕಣಾ ರಾಮಾಯಣ, ಅವಧ್ ರಾಮಾಯಣ ಇತ್ಯಾದಿ.

ಭಿನ್ನ ಕಾಲಘಟ್ಟಗಳಲ್ಲಿ, ಭಿನ್ನ ಭಾಷಿಕ ಸಮುದಾಯಗಳಲ್ಲಿ ಪ್ರಚಲಿತವಿದ್ದ `ಕಥೆ-ಐತಿಹ್ಯ~ಗಳನ್ನು ಆಧರಿಸಿ ಈ ಕೃತಿಗಳು ರಚಿಸಲ್ಪಟ್ಟಿವೆ; ಮತ್ತು, ವಾಲ್ಮೀಕಿ ರಾಮಾಯಣಕ್ಕೂ ಮೊದಲು ರಾಮ-ರಾವಣ ಕಥೆಗಳು ಜಾತಕ ಕಥೆಗಳಲ್ಲಿ ಇದ್ದುವು ಎಂಬುದನ್ನು ಮಿರ್ಜಿ ಆಣ್ಣಾರಾಯರು, ಜಾಕೋಬಿ, ರೋಮಿಲಾ ಥಾಪರ್ ಮುಂತಾದವರು ಅಧಿಕಾರಯುತವಾಗಿ ತೀರ್ಮಾನಿಸಿದ್ದಾರೆ.

ಮುಖ್ಯವಾಗಿ ಇಲ್ಲಿ ಗಮನಿಸಬೇಕಾದುದು ರಾಮಾನುಜನ್ ಅವರ ವಿಮರ್ಶಾತ್ಮಕ ನಿಲುವು: ತೌಲನಿಕ ವಿಮರ್ಶೆಯಲ್ಲಿ `ಇದು ಸರಿ, ಇದು ತಪ್ಪು~ ಎಂಬಂತಹ ಮೌಲ್ಯಾತ್ಮಕ ನಿಲುವಿರುವುದಿಲ್ಲ. ಅದರ ಬದಲು ವಿವರಣೆ ಹಾಗೂ ಸಾಂಸ್ಕೃತಿಕ ವ್ಯಾಖ್ಯಾನ.  ರಾಮಾನುಜನ್ ಅವರದು ಈ ಬಗೆಯ ವಸ್ತುನಿಷ್ಠ ತೌಲನಿಕ ವ್ಯಾಖ್ಯಾನ.

ಇನ್ನೂ ಮುಖ್ಯವಾಗಿ ಶ್ರೀರಾಮನ ದೈವತ್ವದ/ ಚಾರಿತ್ರಿಕತೆಯ ಪ್ರಶ್ನೆ.  ಪ್ರಾಚೀನ ಕಾಲದಿಂದಲೂ ಭಾರತೀಯ ವಿದ್ವಾಂಸರು ಮಹಾಭಾರತವನ್ನು ಇತಿಹಾಸವೆಂದು ಮತ್ತು ರಾಮಾಯಣವನ್ನು ಕಾವ್ಯವೆಂದು ಪರಿಗಣಿಸಿದ್ದಾರೆ.

ರಾಮನ ಮಾನವತೆಯನ್ನು ವಾಲ್ಮೀಕಿ ಮುನಿಗಳ ರಾಮಾಯಣದ ಎರಡನೆಯ ಶ್ಲೋಕವೇ ದೃಢಪಡಿಸುತ್ತದೆ: `ಕೋ..ನಸ್ಮಿನ್ ಸಂಪ್ರತಮ್ ಲೋಕೆ..~ (ಎಂದರೆ `ಈ ಲೋಕದಲ್ಲಿ ಯಾರು ಗುಣವಾನ್, ವೀರ್ಯವಾನ್ ಇತ್ಯಾದಿ ವಿಶೇಷಣಗಳಿಗೆ ಪಾತ್ರರಾದವರು~) ಎಂದು ಮುನಿಗಳು ನಾರದರನ್ನು ಕೇಳುತ್ತಾರೆ; ಮತ್ತು ನಾರದರು ಶ್ರೀರಾಮನನ್ನು ಹೆಸರಿಸುತ್ತಾರೆ.
ಹಾಗೆಯೇ, ಕಾವ್ಯದ ಕೊನೆಯಲ್ಲಿ ಶ್ರೀರಾಮನು ತಾನು ಮನುಷ್ಯಮಾತ್ರ ಎಂಬುದನ್ನು ಹೀಗೆ ಸ್ಪಷ್ಟಪಡಿಸುತ್ತಾನೆ: `ಆತ್ಮಾನಂ ಮಾನುಷಂ ಮನ್ಯೆ~.

Speaking of Siva, Hymns for the Drowning, Poems of ove and War ಇತ್ಯಾದಿ ಅನುವಾದಿತ ಕೃತಿಗಳ ಮೂಲಕ ಹಾಗೂ ತಮ್ಮ ಸ್ವೋಪಜ್ಞ ವಿಮರ್ಶಾತ್ಮಕ ಲೇಖನಗಳ ಮೂಲಕ ರಾಮಾನುಜನ್ ಭಾರತದ ಪ್ರಾಂತೀಯ ಭಾಷೆಗಳ ಸಾಹಿತ್ಯ-ಸಂಸ್ಕೃತಿಗಳನ್ನು ಹೊರ ಜಗತ್ತಿಗೆ ಪರಿಚಯಿಸಿ, ಆ ಮೂಲಕ `ಓರಿಯೆಂಟಲಿಸ್ಟ್~ ಚಿಂತನೆಗೆ ವಸಾಹತೋತ್ತರ ರೂಪವನ್ನು ಕೊಟ್ಟರು. ಅಂತಹ ಭಾರತೀಯ ವಿದ್ವಾಂಸನ ಪ್ರಬುದ್ಧ ಸಂಶೋಧನಾ ಲೇಖನವನ್ನು ಕುರಿತ ಪ್ರತಿಭಟನೆ ಅತೀವ ದುರದೃಷ್ಟಕರ ಎಂದಷ್ಟೇ ಹೇಳಬಹುದು.

ಸೌಜನ್ಯ : ಪ್ರಜಾವಾಣಿ, 25 ಅಕ್ಟೋಬರ್ 2011

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending