Connect with us

ಬಹಿರಂಗ

ದಲಿತ ಚಳುವಳಿಯ ಮುಂದೆ ಮತ್ತೊಂದು ಸವಾಲು

Published

on

  • ಮೂಲ: ಬದ್ರಿನಾರಾಯಣ್(ಹಿಂದೂ ಜುಲೈ 14), ಅನುವಾದ: ನಾ ದಿವಾಕರ

ಕೋವಿದ್ 19 ಬದಲಾಗುತ್ತಿರುವ ಸಮಾಜದ ಲಕ್ಷಣಗಳನ್ನು ಗ್ರಹಿಸಲು ನಮ್ಮನ್ನು ಪ್ರೇರೇಪಿಸುತ್ತಿದೆ. ವಿಶೇಷವಾಗಿ ಉತ್ತರ ಭಾರತದಲ್ಲಿ ಕೊರೋನಾ ಪಿಡುಗು ಸಾಮಾಜಿಕವಾಗಿ ಆರ್ಥಿಕವಾಗಿ ನಿರ್ಲಕ್ಷಿಸಲ್ಪಟ್ಟವರನ್ನು ಕುರಿತ ಸಂಕಥನದ ದಿಕ್ಕನ್ನೇ ಬದಲಿಸಿದೆ. ದಲಿತರ ಸಮಸ್ಯೆಗಳು ಈ ಸಂಕಥನದ ಒಂದು ಭಾಗವಾಗಿದ್ದರೂ ಕೋವಿದ್ 19 ನಿಂದ ಉಲ್ಬಣಿಸುತ್ತಿರುವ ಆರ್ಥಿಕ ಸಮಸ್ಯೆಗಳು ಮತ್ತು ವ್ಯತ್ಯಯಗಳ ಸುತ್ತಲಿನ ವ್ಯಾಪಕ ಚರ್ಚೆಯಲ್ಲಿ ಇದು ಮುಳುಗಿಹೋಗಿದೆ.

ಕೋವಿದ್ 19 ಸಂದರ್ಭದಲ್ಲಿ ನಿರ್ಲಕ್ಷಿತ ಸಮುದಾಯಗಳ ಬಗ್ಗೆ ನಡೆಯುತ್ತಿರುವ ರಾಜಕೀಯ ಸಂಕಥನಗಳಲ್ಲಿ ಎರಡು ಪ್ರಮುಖ ಬದಲಾವಣೆಯಾಗಿರುವುದನ್ನು ಗಮನಿಸಬಹುದು. ಲಾಕ್ ಡೌನ್ ಪರಿಣಾಮವಾಗಿ ದೇಶದ ಬಡ ಜನತೆ, ವಲಸೆ ಕಾರ್ಮಿಕರು ತೀವ್ರ ಸಂಕಷ್ಟಕ್ಕೊಳಗಾದ ನಂತರ ರಾಜಕೀಯ ಸಂಕಥನಗಳಲ್ಲಿ ಇವರ ಸಮಸ್ಯೆಗಳೇ ಕೇಂದ್ರ ಬಿಂದು ಆಗುತ್ತಿದೆ.

ಎರಡನೆಯದಾಗಿ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ನಿರ್ಲಕ್ಷಿತ ಸಮುದಾಯಗಳ ಸ್ಥಾನಮಾನ ಮತ್ತು ರಕ್ಷಣೆ ಪ್ರಧಾನವಾಗಿ ಚರ್ಚೆಗೊಳಗಾಗುತ್ತಿದೆ. ಆದರೆ ನಿರ್ಲಕ್ಷಿತ ಸಮುದಾಯಗಳು, ಬಡ ಜನತೆ ಮತ್ತು ದುರ್ಬಲ ವರ್ಗಗಳ ಬಗ್ಗೆ ನಡೆಯುತ್ತಿರುವ ವ್ಯಾಪಕ ಚರ್ಚೆಯಲ್ಲಿ ದಲಿತರ ಸಮಸ್ಯೆಗಳು ನೇಪಥ್ಯಕ್ಕೆ ಸರಿದಿವೆ.

ಸಮಕಾಲೀನ ಚರ್ಚೆಗಳಲ್ಲಿ ವರ್ಗ ಆಧಾರಿತ ಪರಿಭಾಷೆ ಹೆಚ್ಚಾಗುತ್ತಿದೆ. ಜಾತಿ ಆಧಾರಿತ ಸಮಸ್ಯೆಗಳು ಬಹುತೇಕ ಮಾಯವಾಗಿದೆ ಅಥವಾ ಇತರ ಸಮಸ್ಯೆಗಳಲ್ಲಿ ಸಮ್ಮಿಳಿತವಾಗಿ ಚರ್ಚೆಗೊಳಗಾಗುತ್ತಿದೆ. ಈ ಹೊಸ ಬದಲಾವಣೆ ಮತ್ತು ಪಲ್ಲಟಗಳೊಡನೆ ಪರಿಣಾಮಕಾರಿಯಾಗಿ ಹೊಂದಿಕೊಳ್ಳುವ ನಿಟ್ಟಿನಲ್ಲಿ ಬಹುಜನ ಸಮಾಜ ಪಕ್ಷದ ಮಾಯಾವತಿ ಮತ್ತು ಭೀಮ್ ಆರ್ಮಿಯ ಆಝಾದ್ ವಿಫಲರಾಗಿದ್ದಾರೆ.

ಈ ಹೊಸ ಚರ್ಚೆಗಳಲ್ಲಿ ತಮ್ಮ ರಾಜಕೀಯ ನೆಲೆಗಳನ್ನು ಅಳವಡಿಸಿಕೊಂಡು ಮುಂದುವರೆಯಲು ಇಬ್ಬರೂ ನಾಯಕರು ವಿಫಲರಾಗಿದ್ದಾರೆ. ಈ ಹಂತದಲ್ಲಿ ಇಬ್ಬರೂ ನಾಯಕರು ತಮ್ಮ ಸಂಪೂರ್ಣ ಜಾತಿ ಆಧಾರಿತ ಪರಿಭಾಷೆಯನ್ನು ಬದಿಗೊತ್ತಿ ಬದಲಾದ ಸನ್ನಿವೇಶಕ್ಕೆ ಅನುಗುಣವಾಗಿ ತಮ್ಮ ರಾಜಕೀಯ ಸಂಕಥವನ್ನು ಮುಂದುವರೆಸಬೇಕಿದೆ. ವಲಸೆ ಕಾರ್ಮಿಕರಲ್ಲಿ ಅಪಾರ ಸಂಖ್ಯೆಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರು ಇದ್ದಾರೆ.

ಅದರೆ ಉತ್ತರ ಭಾರತದ ದಲಿತ ನಾಯಕರು ಈ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗಿಲ್ಲ. ವಲಸೆ ಕಾರ್ಮಿಕರಲ್ಲಿ ಬಹುಪಾಲು ಜನರು ದಲಿತ ಮತ್ತು ಒಬಿಸಿ ವರ್ಗಗಳಿಗೇ ಸೇರಿದರವಾಗಿರುವುದರಿಂದ ತಮ್ಮ ಜಾತಿ ಪ್ರಧಾನ ಕ್ಷೇತ್ರಗಳಲ್ಲಿ ವರ್ಗ ಪರಿಭಾಷೆಗಳಾದ ಕಾರ್ಮಿಕರು ಮತ್ತು ಬಡ ಜನರು ಎನ್ನುವುದನ್ನು ಹೇಗೆ ಬಳಸುವುದು ಎನ್ನುವ ಗೊಂದಲ ಇಬ್ಬರೂ ನಾಯಕರನ್ನು ಕಾಡುತ್ತಿದೆ.

ಈ ಗೊಂದಲದ ಫಲವಾಗಿ ಇಬ್ಬರೂ ದಲಿತ ನಾಯಕರು ತಮ್ಮ ವಾದ ಮಂಡಿಸಲು ಹೆಣಗಾಡುತ್ತಿರುವುದು ಸ್ಪಷ್ಟವಾಗುತ್ತಿದೆ. ರಾಜಕೀಯ ಚರ್ಚೆಗಳಲ್ಲಿ ಕಂಡುಬರುತ್ತಿರುವ ಈ ಪಲ್ಲಟಗಳು ಕೊರೋನೋತ್ತರ ಸಂದರ್ಭದಲ್ಲಿ ಹೀಗೆಯೇ ಮುಂದುವರೆಯುವ ಸಾಧ್ಯತೆಗಳೂ ಇದ್ದು , ಇನ್ನೂ ಹಲವು ವರ್ಷಗಳ ಕಾಲ ನಿರ್ಲಕ್ಷಿತ ಸಮುದಾಯಗಳ ಸಮಸ್ಯೆಗಳು ಹೆಚ್ಚಾಗುತ್ತಲೇ ಹೋಗುವುದರಿಂದ ಈ ಚರ್ಚೆಯೂ ಹೀಗೆಯೇ ಮುಂದುವರೆಯುತ್ತದೆ.

ಉತ್ತರ ಭಾರತದ ದಲಿತ ಚಳುವಳಿಗಳಲ್ಲಿ ಜನರನ್ನು ಕ್ರೋಢೀಕರಿಸುವ ಸಂದರ್ಭದಲ್ಲಿ ಜಾತಿ ಆಧಾರಿತ ದ್ವಿಮಾನ ಪ್ರಶ್ನೆಗಳನ್ನೇ ಪ್ರಧಾನವಾಗಿ ಪರಿಗಣಿಸಲಾಗುತ್ತದೆ. ಆದರೆ ಬದಲಾದ ರಾಜಕೀಯ ಸನ್ನಿವೇಶಕ್ಕೆ ಸ್ಪಂದಿಸುವಲ್ಲಿ ವೈಫಲ್ಯ ಎದ್ದುಕಾಣುತ್ತದೆ. ಕಾನ್ಷಿರಾಮ್ ನೇತೃತ್ವದ 1990ರ ದಶಕದ ಬಹುಜನ ಚಳುವಳಿಯ ಕಾಲದಿಂದಲೂ ಈ ನಾಯಕರು ತಮ್ಮ ವಾಕ್ ಸರಣಿಯನ್ನಾಗಲೀ, ರಾಜಕೀಯ ನಡೆನುಡಿಯನ್ನಾಗಲೀ ಬದಲಿಸಿಯೇ ಇಲ್ಲ.

ಇಂದು ದಲಿತ ಮತ್ತು ಬಹುಜನ ಚಳುವಳಿ ಕಾರ್ಯಸೂಚಿಯ ಕೊರತೆ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಕೊರತೆಯನ್ನು ಎದುರಿಸುತ್ತಿದೆ.
ಈಡೇರಿಸಲಾರದ ಭರವಸೆಗಳನ್ನೇ ಮತ್ತೆ ಮತ್ತೆ ಘೋಷಿಸುತ್ತಲೇ , ಹೊಸ ಘೋಷಣೆಗಳನ್ನು ಹುಟ್ಟುಹಾಕುವುದರಿಂದ ಈ ಚಳುವಳಿಗಳ ಬೆಂಬಲಿಗರಲ್ಲಿ ಮತ್ತು ಕಾರ್ಯಕರ್ತರಲ್ಲಿ ಭ್ರಮನಿರಸನ ಉಂಟಾಗುತ್ತಿದೆ.
ಮತ್ತೊಂದೆಡೆ ಉತ್ತರ ಭಾರತದ ದಲಿತ ಚಳುವಳಿ ನಾಯಕತ್ವದ ಬಿಕ್ಕಟ್ಟಿನಿಂದ ಬಳಲುತ್ತಿದೆ.

ಚಳುವಳಿ ಮತ್ತು ಪಕ್ಷದ ನಡುವಿನ ಕರುಳಿನ ಕೊಂಡಿ ಶಿಥಿಲವಾಗಿರುವುದರಿಂದ ಈ ಬಿಕ್ಕಟ್ಟು ದಿನೇ ದಿನೇ ಉಲ್ಬಣಿಸುತ್ತಿದೆ. ಉತ್ತರಪ್ರದೇಶ, ಬಿಹಾರ, ಪಂಜಾಬ್ ಮತ್ತು ರಾಜಸ್ಥಾನ ಈ ರಾಜ್ಯಗಳಲ್ಲಿ ದಲಿತ ಚಳುವಳಿಗಳ ಹಕ್ಕೊತ್ತಾಯಗಳು ದಲಿತ-ಬಹುಜನ ಚುನಾವಣಾ ರಾಜಕಾರಣದ ಗುಂಪುಗಳಿಗೆ, ಪಕ್ಷಗಳಿಗೆ ಸೀಮಿತವಾಗಿದೆ. ಜಿಗ್ನೇಶ್ ಮೆವಾನಿ ಮತ್ತು ಆಝಾದ್ ಅವರ ನೇತೃತ್ವದ ಪರ್ಯಾಯ ಸಾಮಾಜಿಕ ಚಳುವಳಿಗಳೂ ಸಹ ಇದೇ ಚುನಾವಣಾ ರಾಜಕಾರಣದ ಸುಳಿಗೆ ಸಿಲುಕಿವೆ.

1990ರ ಬಹುಜನ ಚಳುವಳಿಯ ಸಂದರ್ಭದಲ್ಲಿ ದಲಿತ ಚಳುವಳಿ ಮತ್ತು ಬಹುಜನ ಪಕ್ಷ ಎರಡೂ ಸಹ ಪರಸ್ಪರ ಸಹಯೋಗದೊಂದಿಗೆ ಮುನ್ನಡೆಯಬೇಕೆಂದು ತೀರ್ಮಾನಿಸಲಾಗಿತ್ತು. ಆದರೆ ಬಹುಜನ ಸಾಮಾಜಿಕ ಚಳುವಳಿಯಿಂದಲೇ ರೂಪುಗೊಂಡ ಬಹುಜನ ಸಮಾಜ ಪಕ್ಷ ಕ್ರಮೇಣ ಗೋಪುರಾಕಾರದಲ್ಲೇ ಬೆಳೆಯುತ್ತಾ ಹೋಯಿತು.

ಮಾಯಾವತಿ ನಾಯಕತ್ವದಲ್ಲಿ ಪಕ್ಷ ದಲಿತ ಚಳುವಳಿಯೊಡನೆ ಸಂಪರ್ಕವನ್ನೇ ಕಡೆದುಕೊಂಡಿದೆ. ಬಹುಜನ ಸಮಾಜ ಪಕ್ಷದಲ್ಲಿ ವಿವಿಧ ದಲಿತ-ಬಹುಜನ ಸಮುದಾಯಗಳ ನಾಯಕರು ಹೊರಹೊಮ್ಮುವುದು ಸಾಧ್ಯವಾಗಲೇ ಇಲ್ಲ. ಇದರ ಪರಿಣಾಮ ಸಾಮಾಜಿಕ ತಳಹದಿಯ ವ್ಯಾಪ್ತಿ ಕಡಿಮೆಯಾಗುತ್ತಾ ಹೋಗುವುದೇ ಅಲ್ಲದೆ ದಲಿತ ಚಳುವಳಿಯೂ ದುರ್ಬಲವಾಗುತ್ತಲೇ ಇದೆ.

ಹಾಗಾಗಿ ಒಂದೆಡೆ ಬಹುಜನ ಚಳುವಳಿಯು ಅಪಾರ ಸಂಖ್ಯೆಯಲ್ಲಿರುವ ಬಹುಜನ-ದಲಿತ ಸಮುದಾಯದ ಜನರಿಗೆ ರಾಜಕೀಯ ಆಕಾಂಕ್ಷೆಗಳನ್ನು ಹೊಂದಲು ಅವಕಾಶ ನೀಡಿದರೆ ಮತ್ತೊಂದೆಡೆ ಹೊಸ ನಾಯಕತ್ವ ಬೆಳೆಯಲು ಇದ್ದ ಅವಕಾಶಗಳನ್ನು ಹೊಸಕಿ ಹಾಕುವ ಮೂಲಕ ವಿವಿಧ ಹಂತಗಳಲ್ಲಿ ಇರಬಹುದಾದ ರಾಜಕೀಯ ಆಕಾಂಕ್ಷೆಗಳಿಗೆ ಕಡಿವಾಣ ಹಾಕಿದೆ.

ತನ್ಮೂಲಕ ಕಾರ್ಯಕರ್ತರ ಉತ್ಸಾಹಕ್ಕೆ ತಣ್ಣೀರೆರಚಿರುವುದೇ ಅಲ್ಲದೆ ಪಕ್ಷ ಮತ್ತು ಚಳುವಳಿಯ ಸಹಜ ಬೆಳವಣಿಗೆಗೆ ಕಡಿವಾಣ ಹಾಕಿದೆ. ದಲಿತ ಚಳುವಳಿ ನಿರಂತರವಾಗಿ ಹೊಸ ಸವಾಲುಗಳನ್ನು ಎದುರಿಸುತ್ತಲೇ ಇದೆ. ಆದರೆ ಇದರ ನಾಯಕರು ಬದಲಾದ ಸನ್ನಿವೇಶಕ್ಕೆ ಅನುಗುಣವಾಗಿ ತಮ್ಮ ರಾಜಕೀಯ ಪರಿಭಾಷೆಯನ್ನು ಮತ್ತು ವಿಧಾನಗಳನ್ನು ಬದಲಾಯಿಸಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ.

ಅಂಬೇಡ್ಕರ್ ಸಿದ್ಧಾಂತದ ಪ್ರಭಾವದಿಂದ ಮತ್ತು ದಲಿತ ಬಹುಜನ ಚಳುವಳಿಗಳ ಪ್ರಭಾವದಿಂದ ದಲಿತ ಗುಂಪುಗಳ ಒಂದು ವರ್ಗದಲ್ಲಿ ರಾಜಕೀಯ ಜಾಗೃತಿ ಮತ್ತು ದಲಿತ ಪ್ರಜ್ಞೆಯನ್ನು ರೂಪಿಸಲಾಗಿತ್ತು. ಏತನ್ಮಧ್ಯೆ ದಲಿತ ಸಮುದಾಯದೊಳಗೆ ಹಿಂದುತ್ವ ನಾಯಕರ ಹಸ್ತಕ್ಷೇಪದ ಪರಿಣಾಮವಾಗಿ ದಲಿತರಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೊಳಗಾದವರನ್ನು ಹಿಂದುತ್ವ ರಾಜಕಾರಣದಲ್ಲಿ ಪಳಗಿಸಲು ಸಾಧ್ಯವಾಗಿದೆ.

ಈಗ ಕೋವಿದ್ 19 ದಲಿತ ಚಳುವಳಿಗೆ ಹೊಸ ಸವಾಲುಗಳನ್ನು ತಂದೊಡ್ಡಿದೆ. ಜಾತಿ ಆಧಾರಿತ ಅಸ್ಮಿತೆಗಳು ದಲಿತ ಚಳುವಳಿಗಳ ಸಂಕಥನಗಳಿಗೆ ಸೈದ್ಧಾಂತಿಕ ಭೂಮಿಕ ಒದಗಿಸಿದ್ದವು, ಆದರೆ ಈಗ ಸಮಸ್ಯೆಗಳು ಜಾತಿ ಮತ್ತು ಧರ್ಮವನ್ನು ಮೀರಿ ಮುನ್ನಡೆದಿದೆ. ಇದು ಹೊಸ ಸವಾಲನ್ನು ತಂದೊಡ್ಡಿದೆ.ಈ ಸವಾಲು ತಾತ್ಕಾಲಿಕವೇ ಇರಬಹುದು ಆದರೆ ಇದು ದಲಿತ ರಾಜಕಾರಣದ ಕ್ರಿಯಾತ್ಮಕ ಪರಿವರ್ತನೆಗೆ ಎಡೆಮಾಡಿಕೊಡುತ್ತದೆ. ಬದಲಾದ ಸನ್ನಿವೇಶಗಳಿಗೆ ಹೊಂದಿಕೊಂಡು ಮುನ್ನಡೆಯಲು ದಲಿತ ಚಳುವಳಿಗಳು ಹೊಸ ಸಾಮಾಜಿಕ ತಂತ್ರಗಾರಿಕೆಗಳನ್ನು ರೂಪಿಸಿಕೊಳ್ಳುವುದು ಅತ್ಯವಶ್ಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಇವಳು ತಿಪ್ಪೇಲಕ್ಷ್ಮೀ..!

Published

on

  • ಡಾ.ವಡ್ಡಗೆರೆ ನಾಗರಾಜಯ್ಯ

ತಿಪ್ಪೆಲಕ್ಷ್ಮಿಯು ರೈತಾಪಿಗಳ ಮತ್ತು ದುಡಿಯುವ ರೈತಕೂಲಿಗಳ ಲಕುಮಿ; ಲಕ್ಷಮಿ. ಲಕ್ಷಮಿ- ಲಚ್ಚಮಿ- ಲಚ್ಮಿಯಾದ ಈ ಲಕ್ಷ್ಮಿಯನ್ನು ತಿಪ್ಪೇಲಕ್ಷ್ಮಮ್ಮ, ತಿಪ್ಪೇಲಕ್ಕವ್ವ, ತಿಪ್ಪಮ್ಮ, ತಿಪ್ಪೇರಂಗಪ್ಪ, ತಿಪ್ಪೇಸ್ವಾಮಿ, ತಿಪ್ಪೇಶ, ತಿಪ್ಪೇನಾಗ, ತಿಪ್ಪಯ್ಯ ಮುಂತಾದ ಹೆಸರುಗಳಿಂದ ಪುರುಷ-ಸ್ತ್ರೀ ಎಂಬ ಭೇದಗಳಿಲ್ಲದೆ ಕರೆಯಲಾಗುತ್ತದೆ.

ಬುಡಕಟ್ಟು ಕಾಡುಗೊಲ್ಲರ ಜಾನಪದ ಕಥೆಯೊಂದರ ಪ್ರಕಾರ ಗೊಲ್ಲರಿಗೆ ಲಕ್ಷ್ಮಿ ಮತ್ತು ರುದ್ರ ಇಬ್ಬರೂ ಕುರಿಪಿಚ್ಚಿಗೆಯ ರೂಪದಲ್ಲಿ ಸಿಕ್ಕಿದರು. ಅವರೇ ತಿಪ್ಪೇಲಕ್ಷ್ಮಿ ಮತ್ತು ತಿಪ್ಪೇರುದ್ರ!

ಕಾಪಾಲಿಕ ನಾಥಪಂಥದ ನಾಥಸಿದ್ಧರು ನಂಬುವಂತೆ ಗೋರಖನಾಥ ತಿಪ್ಪೆಯಲ್ಲಿ ಹುಟ್ಟಿದವನು. ದಕ್ಕಲ ಜನಾಂಗದ ಆದಿಪುರುಷನಾದ ದಕ್ಕದ ಮಹಾಮುನಿಯು ತಿಪ್ಪೆಯಲ್ಲಿ ಹುಟ್ಟಿದನೆಂದು ಆದಿಜಾಂಬವ ಪುರಾಣ ಹೇಳುತ್ತದೆ.

ಚಮ್ಮಾರ ಸಂತ ರವಿದಾಸ ಹೇಳುವಂತೆ ಲಕ್ಷ್ಮೀ ಮತ್ತು ಗಂಗಮ್ಮ ಇದೇ ಚಮ್ಮಾರನ ಮಕ್ಕಳು. ಸಿಂದೋಳ್ಳು-ಗೋಸಂಗಿ-ದಕ್ಕಲರು- ಮಾಷ್ಟೀಕರು ಮುಂತಾದ ಅಲೆಮಾರಿಗಳು ಹೇಳುವಂತೆ ಮೊದಲಿಗೆ ಲಕ್ಷ್ಮಿಯು ಮಾದಿಗರ ಮನೆಮಗಳಾಗಿ ಗಲ್ಲೆಬಾನಿಯ ಕರಿಜಲದಲ್ಲಿ ಹುಟ್ಟಿದವಳು. ಆ ನಂತರದಲ್ಲಿ ಕೋಮಟಿಶೆಟ್ಟರ ಮನೆಯಲ್ಲಿ ವಸ್ತಿ ಮಾಡಿದಳು.

ಮಲೆಮಹದೇಶ್ವರನ ಕಾವ್ಯದಲ್ಲಿರುವಂತೆ ಮಲೆಯ ಮಹದೇವ ಹುಟ್ಟಿಬರುವುದೇ ತಿಪ್ಪೆಯಿಂದ. ತಿಪ್ಪೆಗುಂಡಿಯಿಂದ ಎದ್ದುಬಂದ ಮಹದೇವ ತನ್ನ ಮೈತುಂಬಾ ಕೀವು-ರಕ್ತ-ರಸಕು ತುಂಬಿಕೊಂಡು, ಮೈಮೇಲೆ ಸತ್ತೆಮ್ಮೆ ಕರುವಿನ ಚರ್ಮ ಹೊದ್ದುಕೊಂಡು, ಕೊರಳಿಗೆ ಸೇಂದಿ ಗಡಿಗೆ ಕಟ್ಟಿಕೊಂಡು ಕಲ್ಯಾಣಪಟ್ಟಣ ಪ್ರವೇಶಿಸುತ್ತಾನೆ.

ಮಂಟೇಸ್ವಾಮಿ ಕಾವ್ಯದಲ್ಲಿ ವ್ಯಕ್ತವಾಗಿರುವಂತೆ ಕಲ್ಯಾಣದಲ್ಲಿ ತನಗೆ ಶರಣರು ಪ್ರವೇಶ ನಿರಾಕರಿಸಿದ ಬಳಿಕ, ಮಂಟೇಸ್ವಾಮಿಯು ತನ್ನ ಮೈಮೇಲೆ ಸತ್ತೆಮ್ಮೆ ಕರುವಿನ ಚರ್ಮ ಹೊದ್ದುಕೊಂಡು ಮಾದಿಗರ ಘನಶರಣನಾದ ಹರಳಯ್ಯನ ತಿಪ್ಪೇಗುಂಡಿ ಸೇರಿಕೊಳ್ಳುತ್ತಾನೆ. ಹರಳಯ್ಯನ ತಿಪ್ಪೇಗುಂಡಿಯಲ್ಲಿದ್ದ ಮಂಟೇಸ್ವಾಮಿಯನ್ನು ಬಸವಣ್ಣ ಮತ್ತು ನೀಲಮ್ಮನವರು ಪ್ರಾರ್ಥಿಸಿ ಮರಳಿ ಕಲ್ಯಾಣ ಪಟ್ಟಣಕ್ಕೆ ಕರೆದುಕೊಂಡು ಹೋಗುತ್ತಾರೆ.

ದೇಶಿ ಯೋಗಿ ನಾಯಕನಹಟ್ಟಿ ತಿಪ್ಪೇಸ್ವಾಮಿಯು ಸತ್ತೆಮ್ಮೆಯನ್ನು ಬದುಕಿಸುವ ಪವಾಡ ಮಾಡಿ, ತಿಪ್ಪೆಗೆ ಸೆಗಣಿ ಮತ್ತು ಮನೆಮಕ್ಕಳಿಗೆ ಹಾಲುಕೊಡುವ ಎಮ್ಮೆಗಳನ್ನು ಬದುಕಿಸಿ ಅನ್ನ ಬೆಳೆಯುವ ರೈತರಿಗೆ ನೆರವಾಗುತ್ತಾನೆ. ಈ ದಿನ ಪುರೋಹಿತಶಾಹಿ ವ್ಯವಸ್ಥೆಯು ಸೃಷ್ಟಿಸಿರುವ “ವರಮಹಾಲಕ್ಷ್ಮಿ”ಗಿಂತಲೂ ನಮ್ಮ ದುಡಿಯುವ ಜನರ ತಿಪ್ಪೇಲಕ್ಷ್ಮಿ ದೊಡ್ಡವಳು!

ಇಂತಹ ತಿಪ್ಪೇಲಕ್ಷ್ಮಿಯನ್ನು ಮರೆಯಬೇಡಿರಿ- ಮರೆತರೆ ನಿಮಗೆ ಅನ್ನ ಸಿಕ್ಕುವುದಿಲ್ಲ.

(ಡಾ.ವಡ್ಡಗೆರೆ ನಾಗರಾಜಯ್ಯ
8722724174)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಟಿಪ್ಪು ದೇಶ ಭಕ್ತನಲ್ಲವೆ..?

Published

on

  • ವಿ.ಎಸ್. ಬಾಬು

ಭಾರತದ ಮನುವಾದಿಗಳು ಶತ ಶತಮಾನಗಳಿಂದ ಮಾಡುತ್ತಿರುವ ಯಡವಟ್ಟುಗಳಿಂದ ಸಾವಿರಾರು ಬಹುಜನ ಪರಾಕ್ರಮಿಗಳು, ಇತಿಹಾಸಕಾರರು, ದೊರೆಗಳು ಮುಂತಾದವರು ಕಾಲಗರ್ಭದಲ್ಲಿ ನಾಮಾವಶೇಷವಾಗಿ ಹೋಗಿದ್ದಾರೆ. ಅವರಿಗೆ ನ್ಯಾಯಸಮ್ಮತವಾಗಿ ಸಿಗಬೇಕಾದ ಮನ್ನಣೆ, ಗೌರವಗಳು ಸಿಗದಂತಾಗಿವೆ. ಅಂಥವುಗಳಲ್ಲಿ ಮಹಾನ್ ಪರಾಕ್ರಮಿ, ದೇಶಪ್ರೇಮಿ, ಮೈಸೂರು ಹುಲಿ ಟಿಪ್ಪುಸುಲ್ತಾನ್ ಒಬ್ಬರು.

ಭಾರತದ ಅಂಟು ಜಾಡ್ಯಗಳಾದ ವಿ.ಹೆಚ್.ಪಿ., ಭಜರಂಗದಳ ಮುಂತಾದವು ಟಿಪ್ಪೂ ಒಬ್ಬ ಮಾತಾಂಧ, ದುಷ್ಟ ಕ್ರೂರಿ ಎಂದೆಲ್ಲಾ ಹೇಳಿ ಉದ್ದೇಶಪೂರ್ವಕವಾಗಿ ಸುಳ್ಳ ಸುದ್ದಿಗಳನ್ನು ಹುಟ್ಟಿಸಿ ಈತನಿಗೆ ಇತಿಹಾಸದಲ್ಲಿ ನೀಡಬೇಕಾದ ಸ್ಥಾನಮಾನ ನೀಡದೆ ಅಗೌರವದಿಂದ ಕಂಡಿವೆ. ಟಿಪ್ಪೂ ಕೇವಲ ಒಬ್ಬ ಅವೈದಿಕ ಎಂಬ ಏಕೈಕ ಕಾರಣಕ್ಕಾಗಿ ಅವನನ್ನು ವಿರೋಧಿಸಲಾಗಿದೆ. ಬಹುಜನರಾದ ನಾವು ಟಿಪ್ಪೂವನ್ನು ಗೌರವಿಸಿ, ಬಹುಜನ ಮಕ್ಕಳಿಗೆ ಆತನ ಇತಿಹಾಸವನ್ನು ತಿಳಿಸಬೇಕಾಗದೆ. ಏಕೆಂದರೆ ಸಾಮಾಜಿಕ ಪರಿವರ್ತನೆಯ ಚಳುವಳಿಯಲ್ಲಿ ಟಿಪ್ಪುವಿನದು ಸಿಂಹಪಾಲಿದೆ.

ಮೊದಲನೆಯದಾಗಿ ಮಲಬಾರಿನಲ್ಲಿ ದಲಿತರು ಮತ್ತು ಹಿಂದುಳಿದ ಮಹಿಳೆಯರು ಅಂದು ಮೇಲು ಹೊದಿಕೆಯನ್ನು ಹಾಕುವಂತಿರಲಿಲ್ಲ ಪುರೋಹಿತಶಾಹಿ ವ್ಯವಸ್ಥೆ ಅದನ್ನು ಕಡ್ಡಾಯ ಮಾಡಿತ್ತು. ಅವರನ್ನು ಕೀಳಾಗಿ ಕಾಣುತ್ತಿದ್ದ ಸಂದರ್ಭದಲ್ಲಿ ಟಿಪ್ಪು ಒಂದು ರಾಜಾಜ್ಞೆ ಹೊರಡಿಸಿ. ಪುರೋಹಿತಶಾಹಿ ಮಠಕ್ಕೆ ಎಚ್ಚರಿಸಿ ಅನಿಷ್ಟ ಪದ್ಧತಿಯನ್ನು ನಿಲ್ಲಿಸದಿದ್ದರೆ ಉಗ್ರಶಿಕ್ಷೆಗೆ ಗುರಿಯಾಗಬೇಕಾಗುತ್ತದೆಂದು ಹೇಳಿ ಮಠಾಧಿಪತಿಗಳಿಗೆ ಛೀಮಾರಿ ಹಾಕಿದ್ದ! ಯಾರೊಬ್ಬರೂ ಬೆತ್ತಲೆ, ಅರೆಬೆತ್ತಲೆ ಇರಬಾರದೆಂದು ಎಲ್ಲರೂ ವಸ್ತ್ರಗಳನ್ನು ಕಡ್ಡಾಯವಾಗಿ ಹಾಕಬೇಕೆಂದೂ ಕಟ್ಟಪ್ಪಣೆ ಹೊರಡಿಸಿ, ನಾಗರಿಕ ಸಮಾಜದ ಲಕ್ಷಣಗಳನ್ನು ವಿವರಿಸಿದ್ದ! ಆದ್ದರಿಂದ ಮಲಬಾರಿನ ಮನುವಾದಿಗಳು ಟಿಪ್ಪುವಿನ ಮೇಲೆ ದ್ವೇಷ ಸಾಧಿಸುತ್ತಿದ್ದರು.

ಮತ್ತೊಂದು ಅನಿಷ್ಟ ಪದ್ಧತಿಯಾದ ಮದ್ಯಪಾನವನ್ನು ತನ್ನ ರಾಜ್ಯದಲ್ಲಿ ಬಹಿಷ್ಕರಿಸಿಲ್ಲದೆ ತನ್ನ ಆಪ್ತ ಕಾರ್ಯದರ್ಶಿಗೆ ಕಾಗದ ಬರೆದು ನಾನು ಜನರಿಗೆ ಮದ್ಯವನ್ನು ಕುಡಿಸಿ ಬೊಕ್ಕಸವನ್ನು ತುಂಬಿಕೊಂಡು ರಾಜನಾಗಿರುವುದಕ್ಕಿಂತ ವಿಷ ಕುಡಿದು ಸಾಯುವುದು ಲೇಸು. ಇಡೀ ಸಮಾಜ ನನಗೆ ಪ್ರಜ್ಞಾವಂತ ಸಮಾಜವಾಗಬೇಕು. ಹಾಗೇನಾದರೂ ನಾನು ಜನರಿಗೆ ಹೆಂಡ ಕುಡಿಸಿ ಕುರ್ಚಿಯಲ್ಲಿ ಕುಳಿತುಕೊಳ್ಳುವುದೇ ಅವಶ್ಯವಾದರೆ ಅಂತಹ ಕುರ್ಚಿ ನನಗೆ ಬೇಕಿಲ್ಲ. ಅಂತಹ ದೊರೆ ಪಟ್ಟ ನನಗೆ ಬೇಡ” ಎಂದು ಹೇಳಿ ರಾಜ್ಯಾದ್ಯಂತ ಇರುವ ಈಚಲು ಮರಗಳನ್ನು ಕಡಿಸಲು ಆಜ್ಞೆ ಮಾಡಿದ್ದ! ಅಬಕಾರಿಯಿಂದಲೇ ಸರ್ಕಾರ ನಡೆಸಲು ಸಾಧ್ಯ ಎಂದು ಹೇಳುವ ಇಂದಿನ ಹೊಣೆಗೇಡಿ ಸರ್ಕಾರಗಳಿಗೆ ಟಿಪ್ಪುವಿನ ಮಾತು ಕಿವಿಗೆ ಕಾದ ಸೀಸ ಹಾಕಿದಂತಾಗುತ್ತದೆ.!

ಮಕ್ಕಳ ಮಾರಾಟ ನಿಷೇಧ ಜೀತ ಪದ್ಧತಿ ನಿರ್ಮೂಲನೆ, ಜೂಜು ಮತ್ತು ತಂಬಾಕು ಸೇವನೆಯ ವಿರುದ್ದ ದೊಡ್ಡ ಸಮರ ಸಾರಿದ್ದ ಟಿಪ್ಪು, ತನ್ನ 17 ವರ್ಷಗಳ ಆಡಳಿತದಲ್ಲಿ ಜನರು ರಾಜಕೀಯವಾಗಿ, ಸಾಮಾಜಿಕವಾಗಿ ಆರ್ಥಿಕವಾಗಿ ಸ್ವಾತಂತ್ರ್ಯ ಹೊಂದುವುದರ ಜೊತೆಗೆ ಅಜ್ಞಾನ, ಮೂಢನಂಬಿಕೆಗಳಿಂದಲೂ ಮುಕ್ತಿ ಹೊಂದಬೇಕೆಂದು ಬಯಸಿದ್ದ.

ಟಿಪ್ಪು ಕಂದಾಯ ಹಾಗೂ ಇನಾಂ ಪದ್ಧತಿಯಲ್ಲಿ ತಂದ ಕೆಲವು ಅಮೂಲಾಗ್ರ ಬದಲಾವಣೆಗಳಿಂದಾಗಿ ಹಿಂದೂ ಧರ್ಮದ ಮೇಲ್ವರ್ಗದ ಕೋಪಕ್ಕೆ ತುತ್ತಾಗಿ ಇವನೊಬ್ಬ ದುಷ್ಟರಾಜನಂತೆ ಚಿತ್ರಿಸಲ್ಪಟ್ಟ! ಕಂದಾಯವನ್ನು ಮಧ್ಯಸ್ಥಿಕೆಗಾರರಾದ ಸಾಹುಕಾರದಿಂದ ಕೊಡಿಸಿ ಅದಕ್ಕಾಗಿ ಅವರಿಗೆ ಕಮಿಷನ್ ಕೊಡಲಾಗುತ್ತಿತ್ತು. ಇದು ಗ್ರಾಮಸ್ಥರನ್ನು ಶೋಷಣೆ ಮಾಡಲು ವಿಪುಲ ಅವಕಾಶ ಮಾಡಿಕೊಟ್ಟಿತ್ತು. ಇದನ್ನು ತಪ್ಪಿಸಿ ಬದಲಿಗೆ ಕಂದಾಯದ ಅಧಿಕಾರಿಗಳನ್ನು ನೇಮಕ ಮಾಡಿದನು. ಇದರ ಜೊತೆಗೆ ಅಧಿಕೃತವಲ್ಲದ ಇನಾಂ ಜಮೀನುಗಳನ್ನು ಹಿಂದಕ್ಕೆ ಪಡೆದು, ಅಧಿಕಾರಿಗಳಿಗೆ ಸಂಬಳವಾಗಿ ಜಹಗೀರುಗಳನ್ನು ಕೊಡುವುದನ್ನು ತಪ್ಪಿಸಿ ನಗದು ಹಣ ನೀಡಬೇಕೆಂದು ನೀಡಬೇಕೆಂದು ಆಜ್ಞೆ ಹೊರಡಿಸಿದನು.

ಇದರಿಂದ ಕಂದಾಯ ವಸೂಲಿ ಮಾಡುತ್ತಿದ್ದ ಸಾಹಾಕಾರರು, ವೇದಾಂತ ಶಿಖಾಮಣಿ, ವೇದಬ್ರಹ್ಮ, ಆ ಬ್ರಹ್ಮ, ಈ ಬ್ರಹ್ಮ ಎಂಬ ಬಿರುದು ಬಾವಲಿಗಳನ್ನು ರಾಜರಿಂದ ಪಡೆದಿದ್ದವರು ಮತ್ತು ಅದಕ್ಕಾಗಿ ಅಗ್ರಹಾರಗಳು, ಜಹಗೀರುಗಳನ್ನು ಪಡೆದು ತಿಂದು ತೇಗಿ ತ್ರಿಮತಗಳಲ್ಲಿ ಶ್ರೇಷ್ಟ ಮತ ಯಾವುದು? ಎಂಬ ಒಣ ಚರ್ಚೆಗಳಲ್ಲಿ ಕಾಲಹರಣ ಮಾಡುತ್ತಾ ರಾಜ್ಯದ ಆದಾಯವನ್ನು ನುಂಗಿ ನೀರು ಕುಡಿದಿದ್ದವರು ತಮ್ಮ ಆದಾಯ ಮೂಲಗಳನ್ನು ಕಳೆದುಕೊಂಡರು ಮತ್ತು ಅಂತಹ ಜನರನ್ನು ಹದ್ದುಬಸ್ತಿನಲ್ಲಿಟ್ಟ ಟಿಪ್ಪು ಅವರ ಸೊಕ್ಕು ಮುರಿದಿದ್ದ. ಮುಂದೆ ಇವರ ಸಂತತಿಯವರೇ ಟಿಪ್ಪುವಿನ ಬಗ್ಗೆ ಅಪಪ್ರಚಾರಕ್ಕೆ ಇಳಿದಿದ್ದು.

ಇದೇ ಸಂದರ್ಭದಲ್ಲಿ ಕೊಡಗಿನಲ್ಲಿ ವಾಸವಾಗಿದ್ದ ಎರವರು, ಹೊಲೆಯರು ಮತ್ತು ಮಲಬಾರಿನ ಅಂತ್ಯಜರು ನಂಬೂದಿರಿ ಬ್ರಾಹ್ಮಣರ ಮತ್ತು ಇತರ ಹಿಂದೂಗಳ ಕೀಳು ದೃಷ್ಟಿಗೆ ತುತ್ತಾಗಿ ಧಾರ್ಮಿಕವಾಗಿ ಸಾಮಾಜಿಕವಾಗಿ ತೀವ್ರ ಶೋಷಣೆಗಳಿಗೆ ಒಳಪಟ್ಟಿದ್ದರು. ಇದರಿಂದ ರೋಸಿಹೋಗಿದ್ದ ಆ ಜನತೆ ಟಿಪ್ಪುವಿನ ಆಡಳಿತ ವೈಖರಿ ಕಂಡು ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದರು. ಇದನ್ನು ಸಹಿಸದ ಹಿಂದೂಗಳು ಟಿಪ್ಪುವಿನ ವ್ಯಕ್ತಿತ್ವಕ್ಕೆ ಮಸಿ ಬಳಿದು ಅವನನ್ನು ಮತಾಂಧ ಎಂದರು.

ಈತನ ಆಡಳಿತದಲ್ಲಿ ತಂದ ನಿತ್ಯ ಜೀವನದಲ್ಲಿ ನಾಣ್ಯಗಳ ಚಲಾವಣೆ, ಕ್ಯಾಲೆಂಡರ್, ತೂಕ ಮತ್ತು ಅಳತೆ, ಹಣಕಾಸು ಬ್ಯಾಂಕಿಂಗ್ ಮುಂತಾದ ಬದಲಾವಣೆಗಳಿಂದ ಆಡಳಿತದಲ್ಲಿ ಹೊಸ ಗಾಳಿ ಬೀಸುವಂತೆ ಮಾಡಿತು. ಮುಂದೆ ನಾಲ್ವಡಿಯವರಿಂದ ಸಾಕಾರಗೊಂಡ ಕಾವೇರಿಗೆ ಅಡ್ಡಲಾಗಿ ಕಟ್ಟಬೇಕೆಂಬ ಅಣೆಕಟ್ಟಿನ ರೂಪುರೇಷೆಯ ಕಲ್ಪನೆ, ಸಹಕಾರಿ ಬ್ಯಾಂಕಿನ ಆರಂಭ, ಮೈಸೂರು ನೌಕಾಪಡೆಯ ಸ್ಥಾಪನೆ ದರ್-ಲಾಲ್-ಉಮೂರ್ ಎಂದು ಕರೆಯಲ್ಪಡುವ ತಾಂತ್ರಿಕ ವಿಶ್ವವಿದ್ಯಾಲಯ ಹೀಗೆ ಆಡಳಿತಾತ್ಮಕವಾದ ಪ್ರಯೋಗಗಳಿಂದ ಕೂಡಿದ್ದ ಇವನ ರಾಜ್ಯಭಾರ “ಸರ್ಕಾರ್ …… ಬಾದ್” ಎಂದು ಹೆಸರು ಪಡೆಯಿತು.

ಶ್ರೀರಂಗ ಪಟ್ಟಣದ ಪಶ್ಚಿಮಕ್ಕೆ ಕಾವೇರಿ ನದಿಗೆ ಅಡ್ಡಲಾಗಿ 70 ಅಡಿ ಎತ್ತರದ ಅಣೆಕಟ್ಟನ್ನು ನಿರ್ಮಿಸಿದ್ದಲ್ಲಿ ಮೈಸೂರಿನ ತಲಕಾಡಿನ ಬಳಿ ಮುಡುಕುತೊರೆ ಎಂಬಲ್ಲಿ ಕಾವೇರಿ ನದಿಗೆ ಅಣೆಕಟ್ಟುಯೊಂದನ್ನು ಕಟ್ಟಿ ಆ ಪ್ರದೇಶವನ್ನೆಲ್ಲಾ ನೀರಾವರಿಗೆ ಅಳವಡಿಸಿದ ಕೀರ್ತಿ ಟಿಪ್ಪುವಿನದು.

ಈ ಆಧುನಿಕ ಕಾಲದ ಮಾರುಕಟ್ಟೆ ನಿಯಂತ್ರಣ ವ್ಯವಸ್ಥೆಯನ್ನು ಆ ಮಧ್ಯಕಾಲದಲ್ಲೇ ಜಾರಿಗೆ ತಂದು ಟಿಪ್ಪು ಬಹಳಷ್ಟು ವಸ್ತುಗಳನ್ನು ಅಂದರೆ ಬಂಗಾರದ ಅದಿರು, ಗಂಧದ ಮರ, ಲೋಹ ಆನೆ, ತೆಂಗಿನಕಾಯಿ, ಕರಿಮೆಣಸು ಹಾಗೂ ಬೆಲೆಬಾಳುವ ಮರ ಇವುಗಳನ್ನು ರಾಷ್ಟ್ರೀಕರಿಸಿದ್ದನು. ತಪ್ಪು ಮಾಡಿದ ವ್ಯಕ್ತಿಗೆ ಶಿಕ್ಷೆ ವಿಧಿಸುವ ಬದಲು ತನ್ನ ಗ್ರಾಮದ ಬಳಿ ಮಾವಿನ ಗಿಡಗಳನ್ನು ಮತ್ತು ಹಲಸಿನ ಗಿಡಗಳನ್ನು ನೆಡತಕ್ಕದ್ದು ಮತ್ತು ಆ ಗಿಡಗಳು ಮೂರು ದೇರಾಗಳ ಎತ್ತರ ಬೆಳೆಯುವವರೆಗೂ ಅಪರಾಧಿ ಆ ಗಿಡಗಳಿಗೆ ನೀರುಣಿಸ ತಕ್ಕದ್ದು ಮತ್ತು ಸಂರಕ್ಷಿಸತಕ್ಕದ್ದು ಎಂಬ ದಂಡನೆ ವಿಧಿಸುವ ಮೂಲಕ ತನ್ನ ರಾಜ್ಯದಲ್ಲೆಲ್ಲ ಹಸಿರು ಪರಿಸರಿಸುವಂತೆ ಮಾಡಿದ!

ಮೈಸೂರು ರಾಜ್ಯಕ್ಕೆ ಮೊಟ್ಟ ಮೊದಲ ಬಾರಿಗೆ ರೇಷ್ಮೆಯನ್ನು ಪರಿಚಯಿಸಿದ ಕೀರ್ತಿ ಟಿಪ್ಪುವಿನದಾಗಿದೆ. ರೇಷ್ಮೆ ಬೆಳೆಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಟಿಪ್ಪು ತನ್ನ ರಾಜ್ಯದಲ್ಲಿ ಉತೃಷ್ಟ ರೇಷ್ಮೆ ತಯಾರಿಕೆಗೆ ಹೆಸರಾಗಿದ್ದ. ಹಾಗೆಯೇ ಇವನ ನಿರಂತರ ಕಾಳಜಿಯಿಂದ ಅಂದು ಮೈಸೂರು ಪ್ರಾಂತ್ಯದಲ್ಲಿ 318 ರೇಷ್ಮೆ ಉತ್ಪಾದನಾ ಕುಟುಂಬಗಳಿದ್ದವು.

ತುಂಬಾ ಅಪರೂಪದ ಸಸ್ಯ ತಳಿಗಳನ್ನು ಸಂರಕ್ಷಿಸಲೆಂದೇ ಲಾಲ್‌ಬಾಗ್ ತೋಟವನ್ನು ಕೇವಲ ಮನೋಲ್ಲಾಸಕ್ಕಾಗಿ ಎಂದು ಭಾವಿಸದೆ ಪ್ರಪಂಚದ ಅತಿ ದೊಡ್ಡ ಪ್ರಯೋಗ ಶಾಲೆಯನ್ನಾಗಿ ಪರಿವರ್ತಿಸಿದ್ದ!

ಕನ್ನಡ, ಪರ್ಷಿಯನ್, ಫ್ರೆಂಚ್, ತೆಲುಗು, ತಮಿಳು ಭಾಷೆಯ ಮೇಲೆ ಅಗಾಧವಾದ ಜ್ಞಾನ ಹೊಂದಿದ್ದ ಟಿಪ್ಪು, ಬೃಹತ್ ಗಾತ್ರದ ಗ್ರಂಥಭಂಡಾರವನ್ನು ಹೊಂದಿದ್ದ. ‘ಟಿಪ್ಪುವಿನ ಕನಸುಗಳು’ ಎಂಬ 38 ಲೇಖನಗಳು, ಫಾತುರ್ ಮುಜಾಹಿದ್ದೀನ್ (ಸೈನಿಕನ ವಿಜಯ), ಭೂಕಂದಾಯ ಕಾಯಿದೆ, ವಾಣಿಜ್ಯ ಕಾಯಿದೆಗಳ ಬಗ್ಗೆ ಪುಸ್ತಕಗಳನ್ನು ಬರೆದು ಪ್ರೌಢ ಲೇಖಕನೆನಿಸಿಕೊಂಡಿದ್ದ ಟಿಪ್ಪು ತನ್ನ ಅರಮನೆಯ ಮುಂದೆ ಸ್ವಾತಂತ್ರ್ಯದ ಸಂಕೇತವಾಗಿ ಸಂಪಿಗೆ ಮರವೊಂದನ್ನು ನೆಟ್ಟು ತನ್ನನ್ನು ತಾನು ಕೇವಲ ನಾಗರಿಕ ಟಿಪ್ಪು ಎಂದು ಕರೆದುಕೊಂಡ!

ಅದಿಯಿಲ್ಲದ ಅತ್ಯವಿಲ್ಲದ ಸನಾತನಿಗಳಿಗೆ ರೀಲು ಬಿಡುವುದೇ ಚರಿತ್ರೆಯಾಗಿರುವಾಗ ಬಹುಜನರು ಏನನ್ನು ತಾನೆ ಕಲಿಯಲು ಸಾಧ್ಯ? ಈಗಲಾದರೂ ನಾವು ಅಧ್ಯಯನವನ್ನು ಗಂಭೀರವಾಗಿ ಪರಿಗಣಿಸಿ ಈ ವೈದಿಕರು ಬಿಟ್ಟಿರುವ ರೀಲುಗಳ ಬಣ್ಣವನ್ನು ಬಯಲು ಮಾಡಬೇಕಿದೆ!.

ಪ್ರಪಂಚದ ಇತಿಹಾಸ ಪುಟಗಳನ್ನು ಅವಲೋಕಿಸಿದಾಗ ತನ್ನ ಸ್ವಾಭಿಮಾನದ ಉಳಿವಿಗಾಗಿ ತನ್ನ ಕರುಳ ಬಳ್ಳಿಗಳನ್ನೇ ಒತ್ತೆಯಿಟ್ಟು ದಾಖಲೆ ಮತ್ತೆಲ್ಲೂ ಇಲ್ಲ. ತನ್ನ ಆತ್ಮಗೌರವದ ಮುಂದೆ ಎಂತಹ ಕಠಿಣ ಸಂದರ್ಭಗಳನ್ನು ಎದುರಿಸುವ ತಾಕತ್ತು ಹೊಂದಿದ್ದ ಟಿಪ್ಪುವನ್ನು ಈ ದೇಶದ ವೈದಿಕರು ಬೇಕೆಂತಲೆ ಇತಿಹಾಸದ ಪುಟಗಳಲ್ಲಿ ಕಡೆಗಣಿಸಿದ್ದಾರೆ. ಮೈಸೂರಿನ ಇತಿಹಾಸವನ್ನು ಭಿನ್ನವಾಗಿ ಬರೆದ ಟಿಪ್ಪುವಿಗೆ ಬಹುಜನರಾದ ನಾವು ನಮ್ಮ ಬಹುಜನ ಇತಿಹಾಸದಲ್ಲಿ ಅಗ್ರಸ್ಥಾನ ಕೊಡಬೇಕು.

ಯಾಕೆಂದರೆ ಈ ಸನಾತನಿಗಳು ಯಾರನ್ನೂ ವೈಭವೀಕರಿಸಿ ಹೊಗಳಿ ಮೇಲಕ್ಕೆ ಕೂರಿಸಿದ್ದಾರೆ ಅವರೆಲ್ಲರ ಮೇಲೆ ನಮಗೆ ಗುಮಾನಿಯಿದೆ! ಬಾಬಾ ಸಾಹೇಬರು ಒಂದು ಕಡೆ “If a Hindu Says ‘yes’ we should say ‘No’ When they asy ‘No’ we should say yes” ಎಂದು ಹೇಳಿದ್ದಾರೆ. ಈ ಮಾತು ಇಷ್ಟೊಂದು ವಿಶಾಲ ವ್ಯಾಪ್ತಿಯಲ್ಲಿ ಅರ್ಥೈಸುತ್ತದೆ ಎಂಬ ಕಲ್ಪನೆಯೇ ನಮಗಿರಲಿಲ್ಲ! ಇರಲಿ, ಕಾಲ ಇನ್ನೂ ಮಿಂಚಿಲ್ಲ !

ಇತಿಹಾಸಕಾರರಾದ ಕಿರ್ಕ್, ಪ್ಯಾಟ್ರಿಕ್, ವಿಲ್ಸ್ ಮುಂತಾದವರು ಟಿಪ್ಪುವನ್ನು ತಪ್ಪಾಗಿ ಅರ್ಥೈಸಿದ್ದಾರೆ. ಇವರೆಲ್ಲಾ ಅಂಗ್ಲ ವೈದಿಕರು, ಇದಕ್ಕೆ ಇಲ್ಲಿನ ವೈದಿಕರು, ಮಸಾಲೆ ಸೇರಿಸಿ ಟಿಪ್ಪುವನ್ನು ಖಳನಾಯಕನನ್ನಾಗಿ ಚಿತ್ರಿಸಿದ್ದಾರೆ. ಟಿಪ್ಪುವಿನಿಂದ ಮೈಸೂರು ಯುದ್ಧಗಳಲ್ಲಿ ಸೋತು ಸೆರೆಸಿಕ್ಕ ಬೈಲಿ. ಬ್ರೆಟ್‌ವೈಟ್ ಮುಂತಾದವರು ಇಲ್ಲಿನ ವಿದ್ವಾಂಸರಿಗೆ ತಪ್ಪು ಸುದ್ದಿಗಳನ್ನು ಫೀಡ್ ಮಾಡಿ ಸತ್ಯವನ್ನು ಮುಚ್ಚಿ ಹಾಕಿದ್ದಾರೆ. ಆದ್ದರಿಂದಲೇ ಬಾಬಾಸಾಹೇಬರು “ನಮ್ಮ ಇತಿಹಾಸವನ್ನು ನಾವೇ ಬರೆಯಬೇಕು” ಎಂದು ಹೇಳಿದ್ದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ಛತ್ರಪತಿ ಶಾಹುಮಹಾರಾಜ್ : ಸಾಮಾಜಿಕ ಪರಿವರ್ತನೆಯ ಮೇರುಸ್ತಂಭ

Published

on

  • ರಘೋತ್ತಮ ಹೊಬ

1902 ಜುಲೈ 26ರಂದು ಈ ದೇಶದ ಸಂಸ್ಥಾನವೊಂದರ ಅರಸರೋರ್ವರು ಹೊರಡಿಸಿದ್ದ ಆದೇಶ ಈ ರೀತಿ ಇತ್ತು “ಈ ಆದೇಶ ಹೊರಡಿಸಿದಂದಿನಿಂದ ಇನ್ನುಮುಂದೆ ಖಾಲಿಯಾಗುವ ಹುದ್ದೆಗಳಲ್ಲಿ ಶೇ.50ರಷ್ಟು ಹುದ್ದೆಗಳನ್ನು ಹಿಂದುಳಿದ ವರ್ಗದ ಅಭ್ಯರ್ಥಿಗಳಿಂದ ಭರ್ತಿಮಾಡಲಾಗುವುದು.ಹಾಗೆಯೇ ಈ ಆದೇಶದ ಉದ್ದೇಶಕ್ಕಾಗಿ ಬ್ರಾಹ್ಮಣ, ಪ್ರಭು, ಶೇಣಾವಿ, ಪಾರ್ಸಿ ಮತ್ತು ಇತರ ಮುಂದುವರಿದ ವರ್ಗಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಜಾತಿಗಳನ್ನು ‘ಹಿಂದುಳಿದ ವರ್ಗಗಳು’ ಎಂದು ಅರ್ಥೈಸಲಾಗುವುದು”.

ಹೌದು, ಹಿಂದುಳಿದ ವರ್ಗಗಳಿಗೆ(ಓ.ಬಿ.ಸಿ) ಈ ದೇಶದಲ್ಲಿ ಪ್ರಪ್ರಥಮವಾಗಿ ಶೇ.50ರಷ್ಟು ಮೀಸಲಾತಿ ನೀಡಿ ಆಜ್ಞೆ ಹೊರಡಿಸಿ ‘ಮೀಸಲಾತಿಯ ಜನಕ (Father of Reservation) ಖ್ಯಾತಿಗೊಂಡ ಅರಸ ಬೇರಾರು ಅಲ್ಲ, ಕೊಲ್ಲಾಪುರದ ಛತ್ರಿಪತಿ ಶಾಹು ಮಹಾರಾಜರು. ಸಹಜವಾಗಿ ಹೇಳುವುದಾದರೆ “ಭಾರತದ ಸಾಮಾಜಿಕ ಪ್ರಜಾಪ್ರಭುತ್ವದ ಮೇರುಸ್ತಂಭ” (ಆಧಾರ: Chatrapati Shahu the Pillar Of Social Democracy : Published by Education department, Government of Maharashtra , p.146).

ಶಾಹು ಮಹಾರಾಜರು ಹುಟ್ಟಿದ್ದು 1874 ಜುಲೈ 26 ರಂದು. ತಂದೆ ಜಯಸಿಂಗರಾವ್ ಅಪ್ಪಾಸಾಹೇಬ್ ಘಾಟ್ಗೆ, ತಾಯಿ ರಾಧಾಬಾಯಿ. ಹಾಗೆ ಶಾಹು ಮಹಾರಾಜರ ಮೂಲ ಹೆಸರು ಯಶವಂತ್‍ರಾವ್ ಘಾಟ್ಗೆ. ಮಹಾರಾಜ ಶಾಹುರವರ ಪೂರ್ವಿಕರು ಮೂಲತಃ ಛತ್ರಪತಿ ಶಿವಾಜಿಯ ವಂಶಸ್ಥರು. ಆ ಕಾರಣಕ್ಕಾಗಿ ಶಿವಾಜಿಯವರ ಗೌರವ ಪದವಿಯಾದ ‘ಛತ್ರಪತಿ’ ಬಿರುದು ಮಹಾರಾಜ ಶಾಹುರವರಿಗೆ ಸ್ವಾಭಾವಿಕವಾಗಿ ಸಂದಿತು.

ಪ್ರಶ್ನೆ ಏನೆಂದರೆ ಮಹಾರಾಜ ಶಾಹುರವರು ತಮ್ಮ ಅರಸೊತ್ತಿಗೆಯನ್ನು ಅಂದಿನ ಇತರೆ ಅರಸರುಗಳಂತೆ ಬರೀ ಮೋಜು, ಮಸ್ತಿಗೆ ಬಳಸಿದರೆ? ಖಂಡಿತ ಹಾಗೆ ಪ್ರಶ್ನೆ ಕೇಳುವುದೇ ಮಹಾಪರಾಧವಾಗುತ್ತದೆ. ದಿಟ ಹೇಳಬೇಕೆಂದರೆ ಶಾಹುರವರು ಪ್ರಜಾನುರಾಗಿಯಾದರು. ಯಾವ ತಳವರ್ಗಗಳು, ಬ್ರಾಹ್ಮಣೇತರ ಸಮುದಾಯಗಳು ಶತಶತಮಾನಗಳಿಂದ ವಿದ್ಯೆ, ಆಸ್ತಿ, ಅಧಿಕಾರಗಳಿಂದ ವಂಚಿತಗೊಂಡಿದ್ದವೋ ಅಂತಹದ್ದನ್ನು ವಾಪಸ್ ಕೊಡಿಸಲು ಸ್ವತಃ ಆ ಸಮುದಾಯಗಳ ಪ್ರತಿನಿಧಿಯಾಗಿ ನೋವನ್ನು ಅನುಭವಿಸಿ ಶ್ರಮಿಸಿದರು.

ಅಂತಹ ನೋವಿನ ಪ್ರಕರಣವೊಂದನ್ನು ಇಲ್ಲಿ ದಾಖಲಿಸುವುದಾದರೆ “1900 ರ ವರ್ಷದ ಒಂದು ದಿನ ಬೆಳಿಗ್ಗೆ ಯುವರಾಜ ಶಾಹು ತಮ್ಮ ತಂದೆ ಅಪ್ಪಾಸಾಹೇಬ್ ಘಾಟ್ಗೆ ಮತ್ತು ಇತರರೊಡನೆ ಪಂಚಗಂಗಾ ನದಿಗೆ ಸ್ನಾನ ಮಾಡಲು ಹೋದರು. ಆಗ ಸಂಪ್ರದಾಯದಂತೆ ಮಹಾರಾಜರು ನದಿಯಲ್ಲಿ ಸ್ನಾನಮಾಡುತ್ತಿದ್ದರೆ ಬ್ರಾಹ್ಮಣ ಪೂಜಾರಿಗಳು ಮಂತ್ರ ಹೇಳಬೇಕಾಗಿತ್ತು. ಅಂತೆಯೇ ಯುವರಾಜ ಶಾಹು ಸ್ನಾನ ಮಾಡುತ್ತಿದ್ದಾಗ ಮಂತ್ರ ಹೇಳಲಾಯಿತು.

ಆದರೆ ಆ ಮಂತ್ರ ‘ವೇದ ಪಠಣವಾಗಿರಲಿಲ್ಲ! ಬದಲಿಗೆ ಪುರಾಣದ ಯಾವುದೋ ಒಂದೆರಡು ಶ್ಲೋಕಗಳಾಗಿದ್ದವು. ಅಂದಹಾಗೆ ಇದನ್ನು ಸಹಪಾಠಿಯೋರ್ವರಿಂದ ತಿಳಿದ ಯುವರಾಜ ಶಾಹು ಮಂತ್ರ ಹೇಳಿದ ಪೂಜಾರಿಯನ್ನು ಈ ಬಗ್ಗೆ ಕೇಳಲಾಗಿ ಪೂಜಾರಿ ಹೇಳಿದ್ದೇನೆಂದರೆ ‘ಮಹಾರಾಜರು ಶೂದ್ರ ವರ್ಗಕ್ಕೆ ಸೇರಿದ್ದರಿಂದ ಅವರಿಗೆ ವೇದಗಳ ಮಂತ್ರಗಳನ್ನು ಹೇಳುವ ಹಾಗಿಲ್ಲ’ ಎಂದು! (ಅದೇ ಕೃತಿ, ಪು.114). ಖಂಡಿತ, ಈ ಘಟನೆ ಶಾಹು ಮಹಾರಾಜರಲ್ಲಿ ಆಕ್ರೋಶದ ಅಲೆಯನ್ನೇ ಎಬ್ಬಿಸಿತು. ಯಾಕೆಂದರೆ ಮಹಾರಾಜರಿಂದ ವೇತನ ಪಡೆಯುವ ಪೂಜಾರಿಯೊಬ್ಬ ಅದೇ ಮಹಾರಾಜರಿಗೆ ‘ಅವರು ಶೂದ್ರರು’ ಎಂಬ ಕಾರಣಕ್ಕಾಗಿ ಅವರಿಗೆ ವೇದಗಳನ್ನು ಉಚ್ಛರಿಸುವುದಿಲ್ಲ ಎಂದರೆ?

ವೇದೋಕ್ತ ಪ್ರಕರಣ

ಅಂತೆಯೇ ಇದರಿಂದ ಕೆರಳಿದ ಶಾಹು ಮಹಾರಾಜರು 1901 ಅಕ್ಟೋಬರ್ ತಿಂಗಳಲ್ಲಿ ತಮ್ಮ ಆಸ್ಥಾನದ ಮುಖ್ಯ ಪೂಜಾರಿ ರಾಜೋಪಾಧ್ಯೆಯವರಿಗೆ ತಮ್ಮ ಅರಮನೆಯಲ್ಲಿ ಇನ್ನುಮುಂದೆ ವೇದೋಕ್ತಿಗಳನ್ನೇ ಉಚ್ಛರಿಸಬೇಕೆಂದು ರಾಜಾಜ್ಞೆ ವಿಧಿಸಿದರು.

ಆದರೆ ಮಹಾರಾಜರ ಇಂತಹ ಆಜ್ಞೆ ಮತ್ತು ಈ ಸಂಬಂಧ ಅವರು ನೀಡಿದ ನೋಟೀಸುಗಳಿಗೆ ಮುಖ್ಯಪೂಜಾರಿ ರಾಜೋಪಾಧ್ಯೆಯವರು ತಲೆಕೆಡಿಸಿಕೊಳ್ಳಲೇ ಇಲ್ಲ! ಕಡೆಗೆ ತಮ್ಮ ಅಧಿಕಾರ ದಂಡ ಪ್ರಯೋಗಿಸಿದ ಶಾಹು ಮಹಾರಾಜರು ಆ ರಾಜೋಪಾಧ್ಯೆಯನ್ನು ಪೂಜಾರಿಗಿರಿಯಿಂದ ಕಿತ್ತೆಸೆದರು! ಅವರಿಗೆ ಬಳುವಳಿಯಾಗಿ ನೀಡಿದ್ದ ಇನಾಮು ಗ್ರಾಮ ಮತ್ತು ಭೂಮಿಯನ್ನು ವಾಪಸ್ ಪಡೆದರು.

ಅಲ್ಲದೇ ಸದರಿ ರಾಜೋಪಾಧ್ಯೆಯವರಿಗೆ ನೀಡಿದ್ದ ಕೆಲವು ರೆವಿನ್ಯೂ, ಸಿವಿಲ್ ಮತ್ತು ಕ್ರಿಮಿನಲ್ ಅಧಿಕಾರಗಳನ್ನು ಕಿತ್ತುಕೊಂಡು ಮಹಾರಾಜ ಶಾಹು ಅವರನ್ನು ಅರಮನೆಯಿಂದ ಹೊರಹಾಕಿದರು. ಅಂದಹಾಗೆ ಶಾಹು ಮಹಾರಾಜರ ಇಂತಹ ಕ್ರಮಗಳ ವಿರುದ್ಧ ರಾಜೋಪಾಧ್ಯೆ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಿದನಾದರೂ ಎಲ್ಲಾ ನ್ಯಾಯಾಲಯಗಳೂ ಸಂಸ್ಥಾನವೊಂದರ ರಾಜನಾಗಿ ಶಾಹು ಮಹಾರಾಜರ ಈ ಆಜ್ಞೆ ನ್ಯಾಯಸಮ್ಮತ ಎಂದು ಮಹಾರಾಜರ ಕ್ರಮಗಳನ್ನು ಎತ್ತಿಹಿಡಿದವು.

ಹಾಗೆಯೇ ಸಂಧಾನಗಳ ಮೂಲಕ ಶಾಹುಮಹಾರಾಜರನ್ನು ಕ್ಷತ್ರಿಯ ಎಂದು ಒಪ್ಪಿಕೊಳ್ಳಲಾಯಿತು. ಅಂತೆಯೇ ಅವರ ಅರಮನೆಯಲ್ಲಿ ವೇದಮಂತ್ರಗಳನ್ನು ಉಚ್ಛರಿಸುವ ಪರಿಪಾಠ ಕೂಡ ಆರಂಭವಾಯಿತು! (ಅದೇ ಕೃತಿ, ಪು.136). ಈ ನಿಟ್ಟಿನಲಿ ಈ ಪ್ರಕರಣ ಭಾರತದ ಇತಿಹಾಸದಲ್ಲಿ ‘ವೇದೋಕ್ತ ಪ್ರಕರಣ’ ಎಂದು ಹೆಸರು ಪಡೆಯಿತಲ್ಲದೆ, ಬ್ರಾಹ್ಮಣ್ಯದ ಕಾನೂನಿನ ಪಾರುಪತ್ಯಕ್ಕೆ ಪ್ರಪ್ರಥಮವಾಗಿ ತಡೆಯೊಡ್ಡಿತ್ತು!

ಅಸ್ಪೃಶ್ಯತೆಯ ವಿರುದ್ಧ ಸಮರ

ಶಾಹು ಮಹಾರಾಜರು ಹಿಂದುಳಿದ ವರ್ಗ(ಓ.ಬಿ.ಸಿ)ಗಳಿಗೆ ತಮ್ಮ ಸಂಸ್ಥಾನದಲ್ಲಿ ಶೇ.50ರಷ್ಟು ಮೀಸಲಾತಿ ಜಾರಿಗೊಳಿಸಿದ್ದನ್ನು ತಿಳಿದಿರಿ. ಆದರೆ ಆಗ ಅವರು ಎದುರಿಸಿದ ಟೀಕೆ? ಇಂತಹ ಮೀಸಲಾತಿ ಟೀಕೆಗೆ ಶಾಹುರವರು ಉತ್ತರಿಸಿರುವ ಪರಿ ನೋಡಿ “ಹಿಂದುಳಿದ ವರ್ಗಗಳ ಏಳ್ಗೆಗಾಗಿ ನನ್ನ ರಾಜ್ಯದಲ್ಲಿ ವಿಶೇಷ ಪ್ರಯತ್ನ ನಡೆಯುತ್ತಿರುವುದನ್ನು ಕೆಲವು ಸುಶಿಕ್ಷಿತ ಮೇಲ್ವರ್ಗದ ಜನ ಅಪಮಾನಕಾರಿ ನಡೆ ಎಂದು ಭಾವಿಸುತ್ತಿದ್ದಾರೆ.

ಆದರೆ ಖಾಯಿಲೆಪೀಡಿತ ದುರ್ಬಲ ಮಗುವೊಂದನ್ನು ವೈದ್ಯರು ವಿಶೇಷವಾಗಿ ಮಹಿಳಾ ವೈದ್ಯರು ಹೇಗೆ ನೋಡಿಕೊಳ್ಳುತ್ತಾರೆ? ಈ ನಿಟ್ಟಿನಲಿ ಆ ಕ್ರಮವನ್ನೇ ಉಲ್ಲೇಖಿಸುವುದಾದರೆ ವೈದ್ಯರು ಅಂತಹ ದುರ್ಬಲ ಮಗು ಇತರರಂತೆ ದಷ್ಟಪುಷ್ಟವಾಗಲು ವಿಶೇಷ ಆಹಾರಗಳನ್ನು ನೀಡುತ್ತಾರೆ ಮತ್ತು ಇದನ್ನು ಎಲ್ಲರೂ ಒಪ್ಪುತ್ತಾರೆ.

ದುರಂತವೆಂದರೆ ನಾನು ಇದೇ ಸಿದ್ಧಾಂತವನ್ನು(ದುರ್ಬಲ ಮಗುವಿನ) ಅಸ್ಪೃಶ್ಯರಿಗೆ ಅಪ್ಲೈ ಮಾಡಿದರೆ ನನ್ನನ್ನು ಯಾಕೆ ಟೀಕಿಸುತ್ತಾರೆ ಎಂಬುದೇ ಅರ್ಥವಾಗುತ್ತಿಲ್ಲ!” (ಅದೇ ಕೃತಿ, ಪು.35). ‘ಮೀಸಲಾತಿಯ ಜನಕ’ ಮೀಸಲಾತಿಯನ್ನು ಅದ್ಭುತವಾಗಿ ಸಮರ್ಥಿಸಿದ ಪರಿ ಇದು!

ಕಾಕತಾಳೀಯವೆಂದರೆ ಇದೇ ಮೀಸಲಾತಿಯ ಜನಕ ಅರ್ಥಾತ್ ಶಾಹು ಮಹಾರಾಜರು ಅದೇ ಮೀಸಲಾತಿಯ ಆಧುನಿಕ ಪ್ರವರ್ತಕ ಬಾಬಾಸಾಹೇಬ್ ಅಂಬೇಡ್ಕರರನ್ನು ಈ ದೇಶಕ್ಕೆ ವಿಶೇಷವಾಗಿ ಅಸ್ಪೃಶ್ಯತೆ ಮುಂದೆ 1922 ಫೆಬ್ರವರಿ 22 ರಂದು ದೆಹಲಿಯಲ್ಲಿ ನಡೆದ ‘ಅಖಿಲ ಭಾರತ ಶೋಷಿತ ವರ್ಗಗಳ ಸಮ್ಮೇಳನ’ದಲ್ಲಿ ಪರಿಚಯಿಸುತ್ತಾ ‘You should all keep before you Mr.Bhimrao Ambedkar, Your great leader as your ideal and try to follow him, to be like him’
ಎಂದರು!

ಅಂದರೆ ‘ನಿಮ್ಮ ಶ್ರೇಷ್ಠ ನಾಯಕ ಶ್ರೀ ಭೀಮರಾವ್ ಅಂಬೇಡ್ಕರರಂತೆ ನೀವಾಗಬೇಕು, ಅವರನ್ನು ನೀವು(ಶೋಷಿತ ವರ್ಗಗಳು) ನಿಮ್ಮ ಆದರ್ಶವಾಗಿ ಸ್ವೀಕರಿಸಬೇಕು, ಮುಂದಿಟ್ಟುಕೊಳ್ಳಬೇಕು’ ಎಂದರ್ಥ! (ಅದೇ ಕೃತಿ, ಪು.38). ಖಂಡಿತ, ಶಾಹುರವರು ಅಂಬೇಡ್ಕರರನ್ನು ಅಸ್ಪೃಶ್ಯರಿಗೆ ಬರೀ ಪರಿಚಯಿಸಿದ್ದಷ್ಟೇ ಅಲ್ಲ ಅವರ ಹೋರಾಟಕ್ಕೆ, ಅವರ ಬದುಕಿಗೆ ತಮ್ಮ ಬೆಂಬಲದ ನೆರವನ್ನೂ ನೀಡಿದ್ದಾರೆ.

ಯಾವ ಪರಿ ಎಂದರೆ ಅಂಬೇಡ್ಕರರು 1921ರಲ್ಲಿ ಇಂಗ್ಲೆಂಡಿಗೆ ಎಂಎಸ್ಸಿ, ಡಿಎಸ್ಸಿ ಪದವಿ ಪಡೆಯಲು ತೆರಳಿ ತಮ್ಮ ಶಿಕ್ಷಣಕ್ಕೆ ‘200 ಪೌಂಡ್ ನೆರವು ಬೇಕೆಂದು’ ಶಾಹು ಮಹಾರಾಜರಿಗೆ ಪತ್ರ ಬರೆದಾಗ ಮಹಾರಾಜರು ತಡ ಮಾಡದೆ ಅಂಬೇಡ್ಕರರಿಗೆ ಲಂಡನ್ನಿನ ಅವರ ವಿಳಾಸಕ್ಕೆ ಅಂದಿನ ಭಾರತೀಯ ಕರೆನ್ಸಿಯಲ್ಲಿ 1500ರೂಗಳನ್ನು ಕಳುಹಿಸುತ್ತಾರೆ.

ಅಲ್ಲದೆ ಅಂಬೇಡ್ಕರರು ವಿದೇಶದಲ್ಲಿದ್ದುದರಿಂದ ಅವರ ಶ್ರೀಮತಿ ಮಾತೆ ರಮಾಬಾಯಿಯವರಿಗೆ ನೆರವಾಗಲೆಂದು ಅವರಿಗೂ ಕೂಡ ಶಾಹು ಮಹಾರಾಜರು 750 ರೂಗಳ ಸಹಾಯಧನ ಮಂಜೂರು ಮಾಡುತ್ತಾರೆ. ಹಾಗೆಯೇ ಇದೇ ಸಂದರ್ಭದಲ್ಲಿ ಅಂಬೇಡ್ಕರರು ಈ ದೇಶದ ಶೋಷಿತರ ಪ್ರಥಮ ಪತ್ರಿಕೆ ‘ಮೂಕ ನಾಯಕ’ವನ್ನು ಆರಂಭಿಸಿದಾಗ ಶಾಹುಮಹಾರಾಜರು ಅದಕ್ಕೂ ಕೂಡ 2500ರೂಗಳ ಅನುದಾನ ನೀಡುತ್ತಾರೆ.

ಹಾಗೆ ಅಂಬೇಡ್ಕರರ ಹೋರಾಟಕ್ಕೆ ಹೀಗೆ ಅನುದಾನ ನೀಡಿದ್ದಷ್ಟೇ ಅಲ್ಲ, ಶಾಹು ಮಹಾರಾಜರು 1920ರಲ್ಲಿ ಅಂಬೇಡ್ಕರರ ಶಿಫಾರಸ್ಸಿನ ಮೇರೆಗೆ ಆರ್.ಕೆ.ಕದಂ ಎಂಬ ಅಸ್ಪೃಶ್ಯ ರನ್ನು ನಾಮನಿರ್ದೇಶನದ ಮೂಲಕ ತಮ್ಮ ಸಂಸ್ಥಾನದ ಆಡಳಿತ ಪರಿಷತ್ತಿಗೂ ಕೂಡ ಸದಸ್ಯರನ್ನಾಗಿ ನೇಮಿಸಿಕೊಳ್ಳುತ್ತಾರೆ.

ಅಲ್ಲದೆ ಅಸ್ಪೃಶ್ಯತೆ ವಿರುದ್ಧ ರಾಜಾಜ್ಞೆ ವಿಧಿಸುವ ಅವರು “ಯಾವುದೇ ಮನುಷ್ಯರಿಗೆ ಸಾರ್ವಜನಿಕ ಸ್ಥಳ, ಧರ್ಮಛತ್ರ, ಸರ್ಕಾರಿ ಕಚೇರಿ, ಸಾರ್ವಜನಿಕ ಹೋಟೆಲ್ಲು, ಕೆರೆ, ಬಾವಿ ಇತ್ಯಾದಿಗಳಿಗೆ ಯಾವುದೇ ಕಾರಣಕ್ಕೂ ಪ್ರವೇಶ ನಿರಾಕರಿಸುವಂತಿಲ್ಲ”(ಅದೇ ಕೃತಿ, ಪು.199) ಎನ್ನುತ್ತಾರೆ. ಆ ಮೂಲಕ ಅಸ್ಪøಶ್ಯತೆ ವಿರುದ್ಧ ಶಾಹು ಮಹಾರಾಜರು ಸಮರ ಸಾರುತ್ತಾರೆ.

ಶಾಹು ಸತ್ಯಶೋಧಕ ಸಮಾಜ

ಒಂದು ವಿಷಯವನ್ನಿಲ್ಲಿ ಪ್ರಸ್ತಾಪಿಸಲೇಬೇಕಿದೆ. ಅದು ಮಹಾತ್ಮ ಜ್ಯೋತಿಬಾಫುಲೆಯವರಿಗೆ ಸಂಬಂಧಪಟ್ಟಿದ್ದು. ಹಿಂದುಳಿದ ಫೂಲ್ ಮಾಲಿ(ಹೂವಾಡಿಗ) ಜಾತಿಗೆ ಸೇರಿದ ಜ್ಯೋತಿಬಾಫುಲೆಯವರು ತಮ್ಮ ಧರ್ಮಪತ್ನಿ ಮಾತೆ ಸಾವಿತ್ರಿಬಾಫುಲೆಯವರೊಡಗೂಡಿ ಮಹಾರಾಷ್ಟ್ರದಲ್ಲಿ ತಮ್ಮ ಸತ್ಯಶೋಧಕ ಸಮಾಜ ಚಳುವಳಿಯ ಮೂಲಕ(1873) ಸಾಮಾಜಿಕ ಕ್ರಾಂತಿಯ ಕಿಡಿ ಹಚ್ಚಿದ್ದು ಎಲ್ಲರಿಗೂ ತಿಳಿದಿದೆ (1873).

ಅಂದಹಾಗೆ ಫುಲೆಯವರ ಈ ಚಳುವಳಿಯನ್ನು ‘ಶಾಹು ಸತ್ಯಶೋಧಕ ಸಮಾಜ’ ಹೆಸರಿನಲ್ಲಿ ಸಮರ್ಥವಾಗಿ ಮುಂದುವರಿಸಿದ ಶಾಹು ಮಹಾರಾಜರು ಸಾಮಾಜಿಕ ಪರಿವರ್ತನೆಯ ನೂತನ ಶಕೆಯ ಈ ನಿಟ್ಟಿನಲ್ಲಿ ಭಾರತದಲ್ಲಿ ಫುಲೆಯವರ ಸಶಕ್ತ ಉತ್ತರಾಧಿಕಾರಿಯಾಗುತ್ತಾರೆ. ಈ ದಿಸೆಯಲ್ಲಿ ಶಾಹುರವರ ಈ ಎಲ್ಲಾ ಸಾಮಾಜಿಕ ಪರಿವರ್ತನೆಯ ಕೈಂಕರ್ಯಗಳಲ್ಲಿ ಫುಲೆಯವರ ನೆರಳನ್ನು ನಾವು ಸ್ಪಷ್ಟವಾಗಿ ಗುರುತಿಸಬಹುದು.

ಕಡೆಯದಾಗಿ ಶಾಹು ಮಹಾರಾಜರ ಪ್ರಾಯೋಗಿಕ ಸಾಮಾಜಿಕತೆಯನ್ನಿಲ್ಲಿ ಒಂದು ಉದಾಹರಣೆಯನ್ನಾಗಿ ನೋಡೋಣ. ಅದೆಂದರೆ ‘ತಮ್ಮ ರಾಜ್ಯದ ರಾಜಧಾನಿ ಕೊಲ್ಲಾಪುರ ನಗರದ ಮುಖ್ಯರಸ್ತೆಯೊಂದರಲ್ಲಿ ಮಹಾರಾಜ ಶಾಹುರವರು ಉದ್ದೇಶಪೂರ್ವಕವಾಗಿಯೇ ಗಂಗಾರಾಂ ಕಾಂಬ್ಳೆ ಎಂಬ ಅಸ್ಪೃಶ್ಯನಿಗೆ ಹಣಕಾಸು ನೆರವು ನೀಡಿ ಹೊಟೆಲ್ಲೊಂದನ್ನು ತೆರೆಸಿದ್ದರು.

ಹಾಗೆಯೇ ಆ ಹೊಟೆಲ್ಲಿಗೆ ‘ಶಾಹು ಟೀ ಷಾಪ್’ ಎಂದು ಹೆಸರಿಡಿಸಿದ್ದ ಮಹಾರಾಜರು ಪ್ರತಿದಿನ ತಮ್ಮ ಆಸ್ಥಾನದ ಇತರರೊಡನೆ ಆ ಹೊಟೆಲ್ಲಿಗೆ ಹೋಗಿ ಟೀ ಕುಡಿಯುತ್ತಿದ್ದರು. ಆ ಮೂಲಕ ಜಾತಿ ಆಧಾರದ ಉದ್ಯೋಗ ತೊಲಗಿಸುವುದರ ಜೊತೆಗೆ, ಅಸ್ಪೃಶ್ಯತೆ ಆಚರಣೆ ತಮ್ಮ ರಾಜ್ಯದಲ್ಲಿ ಸಲ್ಲದ್ದೆಂದು ಬಹಿರಂಗವಾಗಿ ಶಾಹು ಮಹಾರಾಜರು ಇಡೀ ಜಗತ್ತಿಗೆ ಪ್ರತಿನಿತ್ಯ ಪ್ರಾಯೋಗಿಕವಾಗಿ ತೋರಿಸಿಕೊಡುತ್ತಿದ್ದರು. ದುರಂತವೆಂದರೆ ಇಂತಹ ಸಾಮಾಜಿಕ ಪ್ರಯೋಗದ ಶ್ರೇಷ್ಠ ಅರಸು ಡಯಾಬಿಟಿಸ್‍ಗೆ ತುತ್ತಾಗಿ 48ರ ಸಣ್ಣ ಹರೆಯದಲ್ಲೇ ಅಂದರೆ 1922 ಮೇ 6 ರಂದು ನಿಧನರಾದರು.

ಒಂದು ವಾಸ್ತಾವಾಂಶವನ್ನಿಲ್ಲಿ ಪ್ರಸ್ತಾಪಿಸಬೇಕು ಅದೆಂದರೆ ಲೋಕಮಾನ್ಯ ಎಂಬ ಹೆಸರಿನ ಸೋಕಾಲ್ಡ್ ಬಾಲಗಂಗಾಧರ ತಿಲಕರು ಶಾಹು ಮಹಾರಾಜರ ಉಗ್ರ ಟೀಕಾಕಾರರಾಗಿದ್ದರು. ಹಾಗೆಯೇ ತಿಲಕರ ಸಂಪಾದಕತ್ವದ ‘ಕೇಸರಿ’ ಪತ್ರಿಕೆ ಶಾಹು ಮಹಾರಾಜರ ಇಂತಹ ಸಾಮಾಜಿಕ ಕಲ್ಯಾಣ ಕಾರ್ಯ ಕಂಡು ಅವರನ್ನು ಸ್ವರಾಜ್ಯ ದ್ರೋಹಿ ಎಂದಿತ್ತು!

ಆದರೆ ಶಾಹು ಮಹಾರಾಜರು ಮನುವಾದಿಗಳ ಇಂತಹ ಟೀಕೆಗಳಿಗೆಲ್ಲ ಖಂಡಿತ ಜಗ್ಗಲಿಲ್ಲ. ಬದಲಿಗೆ “ನನ್ನನ್ನು ಕೊಲ್ಲಾಪುರದ ಈ ಸಿಂಹಾಸನದಿಂದ ಕಿತ್ತೊಗೆದರೂ ಸರೀ ನಾನು ಈ ದೇಶದ ಶೋಷಿತ ವರ್ಗಗಳು ಮತ್ತು ಹಿಂದುಳಿದ ವರ್ಗಗಳ ಸೇವೆಯನ್ನು ನಿರಂತರ ಮುಂದುವರಿಸುವುದಾಗಿ” ಗುಡುಗಿದರು.

ಒಂದಂತು ನಿಜ, ಭಾರತದ ಸಾಮಾಜಿಕ ಪರಿವರ್ತನೆಯ ಚಳುವಳಿಯ ಇತಿಹಾಸದಲ್ಲಿ ಛತ್ರಪತಿ ಶಾಹು ಮಹಾರಾಜರ ಹೆಸರು ಅಚ್ಚಳಿಯದೇ ಶ್ರೇಷ್ಠತಮವಾಗಿ ದಾಖಲಾಗಿದೆ. ಮಹಾತ್ಮ ಜ್ಯೋತಿಬಾಫುಲೆ, ಶ್ರೀ ನಾರಾಯಣಗುರು, ಪೆರಿಯಾರ್ ರಾಮಸ್ವಾಮಿ ನಾಯ್ಕರ್, ಬಾಬಾಸಾಹೇಬ್ ಅಂಬೇಡ್ಕರ್ ಹೀಗೆ ಧೀಮಂತ ಸಾಮಾಜಿಕ ಪರಿವರ್ತನ ಚಿಂತಕರ ಜೊತೆ ಶಾಹು ಮಹಾರಾಜರ ಹೆಸರು ‘ಸಾಮಾಜಿಕ ಪ್ರಜಾಪ್ರಭುತ್ವದ ಮೇರುಸ್ತಂಭ’ವೆಂದು ಅನ್ವರ್ಥವಾಗಿದೆ. ಈ ನಿಟ್ಟಿನಲ್ಲಿ ಅಂತಹ ಸಾಮಾಜಿಕ ಕೈಂಕರ್ಯದ ಅರಸನ ಕ್ರಾಂತಿಯ ಪಥದಲ್ಲಿ ಈ ದೇಶ, ಈ ಸಮಾಜ ನಿರಂತರ ಸಾಗಬೇಕಷ್ಟೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending