Connect with us

ಬಹಿರಂಗ

ವೇಶ್ಯೆಯಾಗಿದ್ದವಳು ಬುದ್ಧನ ಶಿಷ್ಯೆ ಆಗಿದ್ದು ಹೇಗೆ..!?

Published

on

  • ಅಂಬಳೆಮಹಾದೇವಸ್ವಾಮಿ,ಸಹಾಯಕ ಪ್ರಾಧ್ಯಾಪಕರು, ಮೈಸೂರು

ಭಾರತ ದೇಶ ಹಲವು ಧರ್ಮ.ಜಾತಿ.ಭಾಷೆ,ಸಂಸ್ಕೃತಿಯ ಆ ದೊಂಬಲವಾಗಿದೆ. ಎಲ್ಲ ಕ್ಷೇತ್ರದಲ್ಲೂ ತನ್ನದೇ ಆದ ಅಸ್ಮಿತೆಯನ್ನು ಹೊಂದಿದೆ.ಈ ಪುಣ್ಯ ಭೂಮಿಯಲ್ಲಿ ಕಾಲ ಕಾಲಕ್ಕೆ ಮಹಾತ್ಮರು ಉದಯಿಸಿ ಸಮಾಜವನ್ನು ಉದ್ಧರಿಸುವ ಪ್ರಯತ್ನ ಮಾಡಿದ್ದಾರೆ…ಹಾಗಾಗಿಯೇ ಎಲ್ಲರ ಎದೆಯಲ್ಲಿ ಇಂದಿಗೂ ನೆಲೆಯೂರಿದ್ದಾರೆ. ಅಂತಹ ಮಹಾಪುರುಷರು ಬದ್ದರಾದವರಿಗೆ ಉದ್ದರದ ಹೆದ್ದಾರಿಯನ್ನು ತೋರಿದ್ದಾರೆ. ಅಂಥ ಉದಾಹರಣೆಗಳು ನಮ್ಮ ಮುಂದಿವೆ.

ಇವತ್ತಿನ ಬಿಹಾರರಾಜ್ಯದಲ್ಲಿ ಕ್ರಿಸ್ತಪೂರ್ವ 500ರಲ್ಲಿ ವೈಶಾಲಿ ಎಂಬ ನಗರವಿತ್ತು. ಆ ನಗರದಲ್ಲಿ ರಾಜಮನೆತನದವರನ್ನು, ನಗರದ ಶ್ರೀಮಂತರನ್ನು ಸಂತುಷ್ಟಪಡಿಸುವುದಕ್ಕಾಗಿ ರಾಜನರ್ತಕಿಯನ್ನು ನಗರವಧುವಾಗಿ (ನಗರದ ವೇಶ್ಯೆ) ನೇಮಿಸುವ ಅಮಾನವೀಯ ಸಂಪ್ರದಾಯವಿತ್ತು. ಈ ನಗರವಧುವಿಗೆ ಅಲ್ಲಿನ ಮಂದಿ ಜನಕಲ್ಯಾಣಿ ಎಂಬ ಹೆಸರಿನಿಂದಲೂ ಕರೆಯುತ್ತಿದ್ದರು. ಇಂಥಹ ವಿಚಿತ್ರವಾದ ಮೌಡ್ಯಸಂಪ್ರದಾಯ ಆಚರಣೆ ಇದ್ದ ನಗರದಲ್ಲಿ ಆಮ್ರಪಾಲಿಯ ಜನನವಾಯಿತು.

ಆಮ್ರಪಾಲಿಯ ಹೆತ್ತ ತಂದೆತಾಯಿಗಳ ಬಗ್ಗೆ ನಿಖರವಾದ ಮಾಹಿತಿಯಿಲ್ಲ. ನಾನು ಹೇಳಲಿರುವ ವಿಚಾರಕ್ಕೆ ಅದೇನು ಮುಖ್ಯವೇನಲ್ಲ.ಅದ ಊರಿನಲ್ಲಿ ನೃತ್ಯ ಶಿಕ್ಷಕರಾಗಿದ್ದ ಕುಮಾರಭಟ್ಟ ಎಂಬವರು ನಡೆದು ಬರುತ್ತಿದ್ದಾಗ, ವೈಶಾಲಿ ನಗರದ ಆಮ್ರವನದಲ್ಲಿ (ಮಾವಿನತೋಟ) ಒಂದು ಹೆಣ್ಣು ಮಗು ಸಿಕ್ಕಿತು. ಆಮ್ರವನದಲ್ಲಿ ಸಿಕ್ಕಿದ್ದರಿಂದ ಅವಳಿಗೆ ಆಮ್ರಪಾಲಿ ಎಂದು ಹೆಸರಿಟ್ಟರು.

ಕುಮಾರಭಟ್ಟರ ಮಡದಿಯಾದ ಮಲ್ಲಿಕಾ ಆಮ್ರಪಾಲಿಯನ್ನು ಅತ್ಯಂತ ಪ್ರೀತಿಯಿಂದ ಸಾಕಿ ಸಲುಹಿದರು. ಮಲ್ಲಿಕಾರ ಮೊದಲ ಹೆಸರು ಆವಂತಿಕಾ. ಆವಂತಿಕಾ ಕೂಡ ಓರ್ವ ರಾಜ ನರ್ತಕಿಯಾಗಿದ್ದಲು ನರ್ತಕಿಯ ಕೆಲಸ ಬಿಟ್ಟು ಕುಮಾರಭಟ್ಟರನ್ನ ಮದುವೆಯಾದಾಗ ಆವಂತಿಕಾ ಮಲ್ಲಿಕಾ ಆಗಿ ಬದಲಾದರು.

ಆಮ್ರಪಾಲಿಯು ಕುಮಾರಭಟ್ಟರ ಮನೆಯಲ್ಲಿ ಸಕಲ ಸೌಲಭ್ಯಗಳೊಂದಿಗೆ ಸಂತೋಷವಾಗಿ ಬೆಳೆಯುತ್ತಿದ್ದಳು. ಕುಮಾರಭಟ್ಟರು ಪಲ್ಲವಿ ಎಂಬ ಶಿಷ್ಯೆಗೆ ನೃತ್ಯವನ್ನು ಕಲಿಸುವಾಗ ಆಮ್ರಪಾಲಿ ನೃತ್ಯದ ಕಡೆಗೆ ಆಕರ್ಷಿತಳಾಗಿ ತಾನು ನೃತ್ಯವನ್ನು ಕಲಿಯಬಯಸಿದಳು. ಆದರೆ ಕುಮಾರಭಟ್ಟರಿಗೆ ತಮ್ಮ ಮಗಳಿಗೆ ನೃತ್ಯವನ್ನು ಕಲಿಸಿ ಅವಳನ್ನು ನಗರವಧುವಾಗಿಸಲು ಇಷ್ಟವಿರಲಿಲ್ಲ.

ಆದರೆ ಆಮ್ರಪಾಲಿ ತನ್ನ ಛಲವನ್ನು ಬಿಡಲಿಲ್ಲ. ತಾಯಿ ಮಲ್ಲಿಕಾರನ್ನು ಪೀಡಿಸಿ ಕದ್ದುಮುಚ್ಚಿ ಸಕಲ ಪ್ರಕಾರದ ನೃತ್ಯಗಳನ್ನು ಸಂಪೂರ್ಣವಾಗಿ ಕಲಿತಳು. ಆದರೆ ತಮ್ಮ ಮಗಳು ಆಮ್ರಪಾಲಿ ಮುಂದೆಲ್ಲಿ ನಗರವಧುವಾಗುವಳೋ ಎಂಬ ಭಯದಿಂದ ಆಮ್ರಪಾಲಿಯ ಕೈಯಿಂದ ‘ಯಾವುದೇ ರಾಜನ ಆಸ್ಥಾನದಲ್ಲಿ ಕುಣಿಯುದಿಲ್ಲ’ ಎಂದು ಶಪಥ ಮಾಡಿಸಿಕೊಂಡರು.

ಹೀಗಿರುವಾಗ ವೈಶಾಲಿ ನಗರಕ್ಕೆ ಹೊಸ ನಗರವಧುವಿನ ಅವಶ್ಯಕತೆಯಿತ್ತು. ಅದಕ್ಕಾಗಿ ಒಂದು ನೃತ್ಯದ ಸ್ಪರ್ಧೆಯನ್ನು ಏರ್ಪಡಿಸಿದರು. ಅದರಲ್ಲಿ ವಿಜಯಿಯಾದವರನ್ನು ರಾಜ ನರ್ತಕಿಯಾಗಿ ನೇಮಿಸಿ, ಅವಳನ್ನೇ ನಗರವಧು ಮಾಡುವುದಾಗಿ ಘೋಷಣೆ ಹೊರಡಿಸಿಲಾಯಿತು. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಹಲವಾರು ಭಾಗಗಳಿಂದ ದೇಶದ ಮೂಲೆ ಮೂಲೆಗಳಿಂದ ನರ್ತಕಿಯರು ವೈಶಾಲಿಗೆ ಬಂದಿಳಿದರು.

ವೈಶಾಲಿ ನಗರದಿಂದ ಕುಮಾರಭಟ್ಟರ ಶಿಷ್ಯೆಯಾದ ಪಲ್ಲವಿ ಈ ಸ್ಪರ್ಧೆಯಲ್ಲಿ ಭಾಗವಹಿಸಿ ವೈಶಾಲಿ ನಗರದ ಘನತೆಯನ್ನು ಎತ್ತಿಹಿಡಿಯುವವಳಿದ್ದಳು. ಆದರೆ ಪಲ್ಲವಿ ಹೆಚ್ಚಿನ ಹಣ ಹಾಗೂ ಅಧಿಕಾರದ ಆಸೆಗಾಗಿ ವೈಶಾಲಿಯ ಶತ್ರು ರಾಜ್ಯವಾಗಿದ್ದ ಮಗಧ ರಾಜ್ಯಕ್ಕೆ ಫಲಾಯನಗೈದಳು.ಅಲ್ಲೇ ನೆಲೆಯೂರಲು ನಿರ್ಧರಿಸಿ ಬಿಟ್ಟಳು.

ಕೆಲ ದಿನಗಳ ನಂತರ ನಗರವಧು ಆಯ್ಕೆಯ ನೃತ್ಯ ಸ್ಪರ್ಧೆ ಬಂದೇ ಬಿಟ್ಟಿತು. ಆದರೆ ವೈಶಾಲಿಯ ಸ್ಪರ್ಧಿ ಪಲ್ಲವಿ ಓಡಿಹೋಗಿದ್ದಳು. ವೈಶಾಲಿ ನಗರದ ಮಾನ ಮರ್ಯಾದೆ ಈಗ ಆಮ್ರಪಾಲಿಯ ಕೈಯ್ಯಿಗೆ ಬಂತು. ಆಮ್ರಪಾಲಿಗೆ ನಗರವಧುವಾಗುವ ಆಸೆ ಇರಲಿಲ್ಲ. ಆದರೆ ವೈಶಾಲಿಯ ಘನತೆಯನ್ನು ಕಾಪಾಡುವದಕ್ಕಾಗಿ ಆಮ್ರಪಾಲಿ ನೃತ್ಯಸ್ಪರ್ಧೆಯಲ್ಲಿ ಭಾಗವಹಿಸಿದಳು. ಈ ಸುದ್ದಿ ತಿಳಿದು ಆಮ್ರಪಾಲಿಯ ತಾಯಿ ಮಲ್ಲಿಕಾ ಎದೆಯಾಘಾತದಿಂದ ಮಡಿದರು.

ಎಲ್ಲ ರಾಜ್ಯದ ನರ್ತಕಿಯರು ನೃತ್ಯವನ್ನು ಪ್ರದರ್ಶಿಸಿದ ನಂತರ ಆಮ್ರಪಾಲಿ ನೃತ್ಯ ಮಾಡಲು ವೇದಿಕೆಗೆ ಬಂದಳು. ವೇದಿಕೆಯ ಮೇಲೆ ಆಮ್ರಪಾಲಿಯನ್ನು ನೋಡಿ ಕುಮಾರಭಟ್ಟರಿಗೆ ಆಘಾತವಾಯಿತು. ತಮ್ಮ ಮಗಳು ಕೊನೆಗೂ ನಗರವಧುವಾಗುವಳು ಎಂಬ ಕೊರಗು ಅವರನ್ನು ಕೊರೆಯತೊಡಗಿತು. ಆಮ್ರಪಾಲಿ ನಗರವಧುವಾಗುವುದನ್ನು ನೋಡಲಾಗದೆ ಕುಮಾರಭಟ್ಟರು ವೈಶಾಲಿಯನ್ನು ಬಿಟ್ಟು ದೇಶಾಂತರ ಹೊರಟರು.

ವೇದಿಕೆಯ ಮೇಲೆ ಆಮ್ರಪಾಲಿಯನ್ನು ನೋಡಿ ವೈಶಾಲಿಯ ಜನ ಸ್ತಬ್ಧರಾದರು. ಅವಳ ಸೌಂದರ್ಯವನ್ನು ನೋಡಿ ಮೂಕವಿಸ್ಮೀತರಾದರು. ಆಮ್ರಪಾಲಿಯಷ್ಟು ಸುಂದರವಾಗಿರುವ ಕನ್ಯೆಯನ್ನು ಈ ಮೊದಲು ವೈಶಾಲಿಯಲ್ಲಿ ಯಾರು ನೋಡಿರಲಿಲ್ಲ. ಆಮ್ರಪಾಲಿಯನ್ನು ಜನ ಕಣ್ಣುಕಣ್ಣು ಬಿಟ್ಟು ನೋಡತೊಡಗಿದರು.

ಅವಳ ಮೇಲಿಂದ ದೃಷ್ಟಿ ಬದಲಿಸಲು ಯಾವ ಪುರುಷನಿಗೂ ಮನಸ್ಸಾಗಲಿಲ್ಲ ಜನರ ಕಣ್ಣಿನಿಂದ ಹೊರಟ ಅವರ ನೋಟದ ಬಾಣ ಅವಳಲ್ಲೆ ನೆಟ್ಟಿತ್ತು.ಎಲ್ಲರೂ ಅವಳ ಸೌಂದರ್ಯಕ್ಕೆ ಮಾರು ಹೋಗಿದ್ದರು.ಅವಳ ಅಂಗಾಂಗಗಳು ಕಣ್ಣುಗಳಿಂದ ಅಳತೆ ಮಾಡುತ್ತಿದ್ದರು. ಅವರೆಲ್ಲರ ಕಾಮದ ಕಣ್ಣುಗಳೊಡನೆ ಹೋರಾಡುತ್ತಾ ಆಮ್ರಪಾಲಿ ನೃತ್ಯ ಮಾಡಿದಳು. ಕೊನೆಗೆ ಅವಳೇ ಈ ನೃತ್ಯ ಸ್ಪರ್ಧೆಯಲ್ಲಿ ವಿಜಯಿಯಾದಳು.

ನೃತ್ಯಸ್ಪರ್ಧೆಯಲ್ಲಿ ಗೆದ್ದ ಆಮ್ರಪಾಲಿಯನ್ನು ರಾಜನರ್ತಕಿಯಾಗಿ ನೇಮಿಸಿ, ನಗರವಧುವೆಂದು ಘೋಷಿಸಲಾಯಿತು. ರಾಜನರ್ತಕಿಯಾಗಲು ಆಮ್ರಪಾಲಿ ಸಿದ್ಧಳಿದ್ದಳು. ಆದರೆ ನಗರವಧುವಾಗಿ ಸಾವಿರಾರು ಜನರ ಜೊತೆ ಮಲಗಲು ಅವಳಿಗೆ ಇಷ್ಟವಿರಲಿಲ್ಲ. ಅವಳಿಗೆ ಎಲ್ಲ ಹುಡುಗಿಯರಂತೆ ಕುಲವಧುವಾಗಿ ಗೌರವದ ಜೀವನ ನಡೆಸುವ ಆಸೆಯಿತ್ತು. ಎಲ್ಲರಂತೆ ಅವಳು ಒಂದು ಸುಂದರ ಹಾಗೂ ಸ್ವತಂತ್ರ ಜೀವನವನ್ನು ಅನುಭವಿಸಲು ಮುಂದಾಗಿ ನಗರವಧುವಾಗಲು ನಿರಾಕರಿಸಿದಳು. ಆಮ್ರಪಾಲಿಯ ಈ ನಿರ್ಧಾರದಿಂದ ವೈಶಾಲಿಯ ರಾಜಕುಮಾರ ಕೆರಳಿ ಕೆಂಡಾಮಂಡಲವಾದನು.

ಆಮ್ರಪಾಲಿ ನಗರವಧುವಾಗಲು ನಿರಾಕರಿಸಿದ್ದರಿಂದ ವೈಶಾಲಿಯ ರಾಜಕುಮಾರರಿಗೆ, ಧನಿಕರಿಗೆ ನಿರಾಸೆಯಾಗಿತ್ತು. ಅವಳ ಸೌಂದರ್ಯವನ್ನು ಕತ್ತಲ ಕೋಣೆಯಲ್ಲಿ ಮನಬಂದಂತೆ ಅನುಭವಿಸಿ ಸುಖಪಡಬೇಕು ಎಂಬ ಕನಸಿಗೆ ಕೊಡಲಿ ಏಟು ಬಿದ್ದಿತು. ಎಲ್ಲರೂ ಆಮ್ರಪಾಲಿಯನ್ನು ಮದುವೆಯಾಗಲು ಮುಂದಾದರು. ಅವಳಿಗಾಗಿ ಯುದ್ಧವನ್ನು ಸಹ ಮಾಡಲು ಎಲ್ಲರೂ ತಯಾರಿದ್ದರು. ಎಲ್ಲರೂ ಆಮ್ರಪಾಲಿಯ ಎದುರು ವಿವಾಹದ ಪ್ರಸ್ತಾಪವಿಟ್ಟರು. ಆದರೆ ಆಮ್ರಪಾಲಿ ಇವೆಲ್ಲವನ್ನೂ ತಿರಸ್ಕರಿಸಿ ತನ್ನ ಬಾಲ್ಯದ ಗೆಳೆಯ ಪುಷ್ಪಕುಮಾರನನ್ನು ಮದುವೆಯಾಗಲು ತಿರ್ಮಾನಿಸಿದಳು.

ಆಮ್ರಪಾಲಿಯನ್ನು ನಗರವಧುವಾಗಿ ನೇಮಿಸಬೇಕು ಎಂಬ ಕೂಗು ಜೋರಾಗಿ ಸದ್ದು ಮಾಡತೊಡಗಿತು. ಆಮ್ರಪಾಲಿಯನ್ನು ಮದುವೆಯಾಗದಿದ್ದರೂ, ಅವಳನ್ನು ಆಕ್ರಮಿಸಿ ಅನುಭವಿಸಲು ಸಾಮಂತರು ಮುಂದಾದರು. ಇದರಿಂದ ರಾಜ್ಯದಲ್ಲಿ ದಂಗೆಗಳು ಶುರುವಾದವು. ವೈಶಾಲಿಯಲ್ಲಿ ರಕ್ತದ ಹೊಳೆ ಉಗಮವಾಯಿತು.

ವೈಶಾಲಿಯ ರಾಜ ಆಮ್ರಪಾಲಿಯ ಮದುವೆಯ ದಿನವೇ ಅವಳ ಭಾವಿಪತಿಯನ್ನು ಕೊಂದು ಆಮ್ರಪಾಲಿಯನ್ನು ಆಸ್ಥಾನಕ್ಕೆ ಬಲವಂತವಾಗಿ ಕರೆದುಕೊಂಡು ಬಂದನು. ಕೂಡಲೇ ಒಂದು ನಗರಸಭೆಯನ್ನು ಕರೆದನು. ನಗರಸಭೆಯ ಒಮ್ಮತದ ಅನುಸಾರ ವೈಶಾಲಿ ನಗರದ ಶಾಂತಿಗಾಗಿ ಹಾಗೂ ಗಣತಂತ್ರದ ರಕ್ಷಣೆಗಾಗಿ ಸರ್ವಸಮ್ಮತದಿಂದ ಆಮ್ರಪಾಲಿಯನ್ನು ನಗರವಧುವೆಂದು ಘೋಷಿಸಿದರು.

ಸುಂದರವಾಗಿರುವ ಕನ್ಯೆ ಒಬ್ಬರಿಗೆ ಮಾತ್ರ ಸಿಮೀತವಾಗಿರಬಾರದು. ಎಲ್ಲರನ್ನೂ ಸಂತುಷ್ಟಪಡಿಸಲೇಬೇಕು ಎಂಬ ಹಟಕ್ಕೆ ಆಮ್ರಪಾಲಿ ನಗರವಧುವಾದಳು. ಅವಳ ಸುಂದರ ಕನಸುಗಳು ನೂಚ್ಚು ನೂರಾದವು. ಅವಳ ಸೌಂದರ್ಯವೇ ಅವಳಿಗೆ ಶಾಪವಾಯಿತು. ಅವಳಿಗೆ ಒಂದು ಭವ್ಯವಾದ ಅರಮನೆಯನ್ನು ಉಡುಗೊರೆಯಾಗಿ ನೀಡಲಾಯಿತು. ಅವಳ ಸೇವೆಗೆ ದಾಸಿಯರನ್ನು, ಕಾವಲಿಗೆ ಸೈನಿಕರನ್ನು ನಿಯೋಜಿಸಲಾಯಿತು.

ಆಮ್ರಪಾಲಿಯ ಸಾಂಗತ್ಯಕ್ಕಾಗಿ ಹಲವಾರು ತರುಣರು ಹಾತೊರೆದರು. ಬರೀ ವೈಶಾಲಿ ನಗರವಷ್ಟೇ ಅಲ್ಲದೇ ದೇಶವಿದೇಶಗಳಿಂದ ರಾಜಮಹಾರಾಜರು, ಶ್ರೀಮಂತರು, ಸಾಮಂತರು ಅವಳ ಅರಮನೆಯ ಮುಂದೆ ನಾಯಿಯಂತೆ ಕಾಯುತ್ತಿದ್ದರು. ಅವಳನ್ನು ಅನುಭವಿಸಲು ಅಂಗಲಾಚಿ ಹಣದ ಮಳೆಯನ್ನೇ ಸುರಿಸುತ್ತಿದ್ದರು. ಅವಳ ಬಟ್ಟಲು ಕಣ್ಣುಗಳು, ಬಳ್ಳಿಯಂತೆ ಬಳಕುವ ನಡುವಿಗೆ ಆಕರ್ಷಿತನಾಗದ ಪುರುಷನೇ ಇರಲಿಲ್ಲ. ಅವಳಿಗೆ ಮಧುಪಾನದ ಅವಶ್ಯಕತೆಯಿರಲಿಲ್ಲ. ಅವಳೇ ಒಂದು ನಶೆಯಾಗಿದ್ದಳು. ನೋಡುನೋಡುತ್ತಿದ್ದಂತೆ ಆಮ್ರಪಾಲಿ ಶ್ರೀಮಂತಳಾದಳು.

ಒಂದಿನ ಆಮ್ರಪಾಲಿ ವೈಶಾಲಿಯ ರಾಜಕುಮಾರನೊಂದಿಗೆ ವನವಿಹಾರಕ್ಕೆ ಹೋಗಿದ್ದಾಗ ಅವಳ ಮೇಲೆ ಒಂದು ಹುಲಿ ದಾಳಿ ಮಾಡಿತು. ಅವಳನ್ನು ರಕ್ಷಿಸಬೇಕಿದ್ದ ರಾಜಕುಮಾರ ಹುಲಿಗೆ ಹೆದರಿ ಓಡಿಹೋದನು. ಅದೇ ಸಮಯಕ್ಕೆ ಮಗಧದ ರಾಜಕುಮಾರ ಬಿಂಬಸಾರ ಅವಳನ್ನು ರಕ್ಷಿಸಿ ಅವಳಿಗೆ ಹತ್ತಿರವಾದನು. ಬಿಂಬಸಾರ ವೈಶಾಲಿ ನಗರಕ್ಕೆ ಶತ್ರುವಾಗಿದ್ದನು.

ವೈಶಾಲಿಯ ಮೇಲೆ ಸೇಡು ತೀರಿಸಿಕೊಳ್ಳಲು ಉಜ್ಜೈನಿಯ ವೀಣಾವಾದಕ ಆಮೋಧ ಎಂಬ ಮಾರುವೇಷದಲ್ಲಿ ವೈಶಾಲಿಯಲ್ಲಿದ್ದನು. ಆಮ್ರಪಾಲಿ ಬಿಂಬಸಾರನಿಗೆ ಮರುಳಾದಳು. ಬಿಂಬಸಾರ ವೈಶಾಲಿಯ ಶತ್ರುವಷ್ಟೇ ಅಲ್ಲ, ಅವಳು ನಗರವಧುವಾಗಲು ಮಗಧದ ಕುತಂತ್ರವೇ ಕಾರಣ ಎಂಬ ಸತ್ಯ ಗೊತ್ತಾದರೂ ಅವಳು ಬಿಂಬಸಾರನ ಶಾಂತಿ ನಾಟಕವನ್ನು ನಂಬಿದಳು. ಬಿಂಬಸಾರ ಮತ್ತು ಆಮ್ರಪಾಲಿಯ ಮಧ್ಯೆ ಪ್ರೇಮಾಂಕುರವಾಯಿತು. ಅವರು ಗುಪ್ತವಾಗಿ ಮದುವೆಯಾದರು. ಆಮ್ರಪಾಲಿ ಬಿಂಬಸಾರನೊಡನೆ ವೈಶಾಲಿ ನಗರಕ್ಕೆ ಮರಳಿದಳು.

ಆಮ್ರಪಾಲಿ ಮರಳಿ ಜೀವಂತವಾಗಿ ಬಂದಿರುವುದನ್ನು ಕಂಡು ವೈಶಾಲಿ ನಗರ ಸಂತಸದ ಕಡಲಲ್ಲಿ ತೇಲಾಡಿತು. ಬಿಂಬಸಾರ ವೀಣಾವಾದಕನಾಗಿ ಆಮ್ರಪಾಲಿಯ ಮನೆಯಲ್ಲೇ ಇದ್ದನು. ಆಮ್ರಪಾಲಿಯ ಮನೆಯಲ್ಲಿರುವ ಉಜ್ಜೈನಿಯ ವೀಣಾವಾದಕ ಆಮೋಧ, ತಮ್ಮ ಶತ್ರು ಮಗಧ ರಾಜ್ಯದ ರಾಜಕುಮಾರ ಬಿಂಬಸಾರ ಎಂದು ಗೊತ್ತಾದಾಗ ವೈಶಾಲಿಯ ಜನ ದಂಗೆಯೆದ್ದರು.

ಆಮ್ರಪಾಲಿಯ ಮನೆ ಮೇಲೆ ಕಲ್ಲು ತೂರಾಟ ನಡೆಸಿದರು. “ಆಮ್ರಪಾಲಿ ತಮ್ಮ ಶತ್ರು ಬಿಂಬಸಾರದೊಂದಿಗೆ ಸೇರಿ ವೈಶಾಲಿಯ ಸರ್ವನಾಶಕ್ಕೆ ಸಂಚು ರೂಪಿಸಿದ್ದಾಳೆ” ಎಂಬ ಆಪಾದನೆ ಮೇರೆಗೆ ಅವಳನ್ನು ಬಂಧಿಸಿ ಸೆರೆಮನೆಯಲ್ಲಿಟ್ಟರು. ನಿಸ್ಸಹಾಯಕನಾಗಿದ್ದ ಬಿಂಬಸಾರ ಗುಪ್ತಮಾರ್ಗದ ಮೂಲಕ ತನ್ನ ಮಗಧ ರಾಜ್ಯಕ್ಕೆ ಮರಳಿದನು. ವೈಶಾಲಿಯ ಮೇಲೆ ದಾಳಿ ಮಾಡಲು ಬಲಿಷ್ಟವಾದ ಸೈನ್ಯವನ್ನು ಸಿದ್ದಮಾಡಿದನು.

ವೈಶಾಲಿಯ ಘನತೆಗಾಗಿ, ಗಣತಂತ್ರದ ರಕ್ಷಣೆಗಾಗಿ ತನ್ನ ಕನಸುಗಳನ್ನು ಬಲಿಕೊಟ್ಟು ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿದ ಆಮ್ರಪಾಲಿಗೆ ರಾಜದ್ರೋಹದ ಆರೋಪ ಹೊರಿಸಿ ಸೆರೆಮನೆಗೆ ತಳ್ಳಿದ್ದು ಬಿಂಬಸಾರನಿಗೆ ಸಹಿಸಿಕೊಳ್ಳಲಾಗಲಿಲ್ಲ. ಅದಕ್ಕಾಗಿ ಆತ ವೈಶಾಲಿಯ ಮೇಲೆ ದಾಳಿ ಮಾಡಿದನು. ಗಯಾಸ್ಟ್ರೋಎಂಟರೈಟಿಸ್ ಟೀವಿ ಬಂಧಿಸಿಟ್ಟಿದ್ದ ಸೆರೆಮನೆಯೊಂದನ್ನು ಬಿಟ್ಟು, ಉಳಿದೆಲ್ಲ ನಗರವನ್ನು ಸಂಪೂರ್ಣವಾಗಿ ಸುಟ್ಟು ನಾಶಮಾಡಿ, ಆಮ್ರಪಾಲಿಯನ್ನು ಬಂಧಮುಕ್ತಗೊಳಿಸಿದನು.

ಬಂಧಮುಕ್ತಳಾದ ಆಮ್ರಪಾಲಿಗೆ ಖುಷಿಪಡಬೇಕೊ ಅಥವಾ ಯಾವ ನಗರದ ರಕ್ಷಣೆಗಾಗಿ ತನ್ನ ಶೀಲವನ್ನು ಸಾವಿರಾರು ಜನರಿಗೆ ಹಂಚಿ ನಗರವಧುವಾಗಿದ್ದಳೊ, ಆ ನಗರ ಸುಟ್ಟು ನಾಶವಾಗಿರುವುದರಿಂದ ಸಂಕಟ ಪಡಬೇಕೊ ಎಂಬುದು ತಿಳಿಯದಾಯಿತು. ಬಿಂಬಸಾರ ಹೀಗೆ ಮಾಡುವುದಕ್ಕೆ ವೈಶಾಲಿಯ ಸೇಡಿನ ಜೊತೆಗೆ ಅವಳ ಮೇಲಿನ ಪ್ರೀತಿಯೂ ಕಾರಣ ಎಂಬುದು ಅವಳಿಗೆ ತಿಳಿಯದೇ ಇರಲಿಲ್ಲ.

ಅವಳ ದೇಹ ಮಲಿನವಾಗಿದ್ದರೂ, ಮನಸ್ಸು ಪವಿತ್ರವಾಗಿತ್ತು. ವೈಶಾಲಿಯ ರಕ್ಷಣೆಗಾಗಿ ಅವಳು ತನ್ನನ್ನು ತಾನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದಳು. ಆದರೆ ಅದೇ ನಗರ ತನ್ನ ಪ್ರಿಯಕರನಿಂದ ನಾಶವಾಗಿರುವುದನ್ನು ಅವಳಿಂದ ಅರಗಿಸಿಕೊಳ್ಳಲಾಗಲಿಲ್ಲ. ಅದಕ್ಕಾಗಿ ಬಿಂಬಸಾರ ಅವಳನ್ನು ಮಗಧಕ್ಕೆ ಬರುವಂತೆ ಅಂಗಲಾಚಿ ಬೇಡಿಕೊಂಡರೂ ಅವಳು ಹೋಗಲಿಲ್ಲ.

“ಬಿಂಬಸಾರನೊಂದಿಗೆ ಸೇರಿ ವೈಶಾಲಿಯ ನಾಶಕ್ಕಾಗಿ ಆಮ್ರಪಾಲಿ ಸಂಚು ರೂಪಿಸಿದ್ದಾಳೆ” ಎಂಬ ಆರೋಪ ನಿಜವಾಗಬಾರದೆಂಬ ಕಾರಣಕ್ಕಾಗಿ ಬಿಂಬಸಾರನ ಪ್ರೀತಿಯನ್ನು ಆಮ್ರಪಾಲಿ ತ್ಯಾಗ ಮಾಡಿದಳು. ಅವನ ಜೊತೆ ಮಗಧಕ್ಕೆ ಹೋಗದೆ, ಅವರಿಬ್ಬರ ಪ್ರೇಮದ ಸಂಕೇತವಾಗಿ ಅವಳ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಮಗುವನ್ನು ಹೆತ್ತುಕೊಟ್ಟು, ಅವನಿಂದ ಶಾಶ್ವತವಾಗಿ ದೂರಾದಳು. ನಂತರ ಬುದ್ಧನ ವಿಚಾರವನ್ನು ಅರಿತು, ಬುದ್ಧನ ತತ್ವ ಉಪದೇಶಗಳಿಂದ ಪ್ರಭಾವಿತಳಾಗಿ, ಬುದ್ಧನ ಶಿಷ್ಯೆಯಾದಳು.

(-ಅಂಬಳೆಮಹಾದೇವಸ್ವಾಮಿ
ಸಹಾಯಕ ಪ್ರಾಧ್ಯಾಪಕ
ಕನ್ನಡ ವಿಭಾಗ
ಸೇಪಿಯಂಟ್ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು.ವಿಜಯನಗರ ಮೈಸೂರು.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಪೊಲೀಸರಿಂದ ಕಾನೂನಿನ ಅತ್ಯಾಚಾರ

Published

on

ಅತ್ಯಾಚಾರ ಸಂತ್ರಸ್ತೆ ಮನಿಶಾ ಶವ ಸುಡುತ್ತಿರುವುದು
  • ದಿನೇಶ್ ಅಮಿನ್ ಮಟ್ಟು

ತ್ರಾಸ್ ನಲ್ಲಿ ಮೇಲ್ಜಾತಿಯ ದುರುಳರಿಂದ ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ಯುವತಿಯ ಅಂತ್ಯಕ್ರಿಯೆಯನ್ನು ಪೊಲೀಸರು ತಂದೆ-ತಾಯಿಗೆ ಮಗಳ ಮುಖವನ್ನೂ ನೋಡಲು ಅವಕಾಶ ನೀಡದೆ ಅವಸರದಲ್ಲಿ ನಡುರಾತ್ರಿಯೇ ಅಂತ್ಯಕ್ರಿಯೆಯನ್ನು ಮುಗಿಸಿದರು. ಯಾಕೆ?

ನಮ್ಮ ಭವ್ಯಭಾರತದಲ್ಲಿ ಅತ್ಯಾಚಾರದ ನೂರು ಪ್ರಕರಣಗಳಲ್ಲಿ ಕೇವಲ 27 ಪ್ರಕರಣಗಳಲ್ಲಿ ಮಾತ್ರ ಅಪರಾಧಿಗಳಿಗೆ ಶಿಕ್ಷೆಯಾಗುತ್ತದೆ. 2018ರಲ್ಲಿ ಪೊಲೀಸ್ ಇಲಾಖೆಯಲ್ಲಿ ದಾಖಲಾಗಿದ್ದು 1,56,327 ರೇಪ್ ಪ್ರಕರಣಗಳು.

ಅವುಗಳಲ್ಲಿ ವಿಚಾರಣೆ ಪೂರ್ಣಗೊಂಡ ಪ್ರಕರಣಗಳು 17,313 ಮಾತ್ರ. ಇವುಗಳಲ್ಲಿ 11,133 ಪ್ರಕರಣಗಳ ಆರೋಪ ಪಟ್ಟಿ ಸಲ್ಲಿಕೆಯಾಗುವ ಮೊದಲೇ ಆರೋಪಿಗಳು ಬಿಡುಗಡೆಯಾಗಿದ್ದರು, 1472 ಪ್ರಕರಣಗಳಲ್ಲಿ ಆರೋಪಿಗಳು ವಿಚಾರಣೆ ನಡೆದು ದೋಷಮುಕ್ತರಾಗಿದ್ದರು.

ಆರೋಪಿಗಳು ದೋಷಮುಕ್ತರಾಗಲು ಒಂದು ಕಾರಣ ಏನೆನ್ನುವುದು ಬುಧವಾರ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪನ್ನು ನೋಡಿದವರಿಗೆ ಮನವರಿಕೆಯಾಗಿರಬಹುದು. ಇನ್ನೊಂದು ಪ್ರಮುಖ ಕಾರಣ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸುವ ಆರೋಪಪಟ್ಟಿಯಲ್ಲಿನ ದೋಷಗಳು.

ಅತ್ಯಾಚಾರದಂತಹ ಪ್ರಕರಣಗಳಲ್ಲಿ ಶೇಕಡಾ 90ರಷ್ಟು ಪ್ರಕರಣಗಳು ಪೊಲೀಸ್ ಇಲಾಖೆಯಲ್ಲಿ ಎಫ್ ಐ ಆರ್ ದಾಖಲಾಗಿ ಆರೋಪ ಪಟ್ಟಿ ಸಿದ್ದಗೊಂಡು ನ್ಯಾಯಾಲಯಕ್ಕೆ ಸಲ್ಲಿಸುವ ಹಂತದಲ್ಲಿ ಸತ್ತು ಹೋಗಿರುತ್ತವೆ.

ಸರ್ಕಾರ ವಿಶೇಷ ಆಸಕ್ತಿ ವಹಿಸಿದರೆ, ಪಬ್ಲಿಕ್ ಪ್ರಾಸಿಕ್ಯೂಟರ್ ಗಳೇನಾದರೂ ಕಸಬುದಾರ ವಕೀಲರಂತೆ ವೃತ್ತಿನಿಷ್ಠೆಯಿಂದ ಕಾರ್ಯನಿರ್ವಹಿಸಿದರೆ ಸತ್ತುಹೋಗಿರುವ ಒಂದಷ್ಟು ಪ್ರಕರಣಗಳಿಗೆ ಜೀವ ತುಂಬಬಹುದು. ಅವರೂ ವ್ಯವಸ್ಥೆಯ ಜೊತೆ ಷಾಮೀಲಾಗಿದ್ದರೆ ಆತನೂ ಸೇರ್ಕೊಂಡು ಉಳಿದ ಪ್ರಕರಣಗಳನ್ನು ಮುಗಿಸಿಬಿಡುತ್ತಾರೆ.

ಅಪರಾಧಿಗಳನ್ನು ರಕ್ಷಿಸಲು ಪೊಲೀಸರು ನಿರ್ಧರಿಸಿದರೆ ಅವರು ಮೊದಲು ಸಾಕ್ಷ್ಯ ನಾಶಕ್ಕೆ ಇಳಿಯುತ್ತಾರೆ. ಹತ್ರಾಸ್ ನಲ್ಲಿ ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ದಲಿತ ಯುವತಿಯ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ.
ಸೆಪ್ಟೆಂಬರ್ ಹದಿನಾಲ್ಕರಂದು ತನ್ನ ಮನೆ ಸಮೀಪದ ಕಾಡಲ್ಲಿ ಈ ದಲಿತ ಯುವತಿಯ ಮೇಲೆ ಊರಿನ ಮೇಲ್ಜಾತಿಯ ನಾಲ್ವರು ದುಷ್ಕರ್ಮಿಗಳು ಅತ್ಯಾಚಾರ ಎಸಗುತ್ತಾರೆ.

ಅಲ್ಲಿಂದಲೇ ಸಾಕ್ಷ್ಯ ನಾಶದ ಕೆಲಸ ಪ್ರಾರಂಭವಾಗುತ್ತದೆ. ಆ ಯುವತಿ ಒಂದೆರಡು ವರ್ಷ ಮಾತ್ರ ಶಾಲೆಗೆ ಹೋಗಿದ್ದಳಂತೆ. ಓದಲು ಬರೆಯಲು ಗೊತ್ತಿದ್ದ ಹಾಗೆ ಕಾಣುತ್ತಿಲ್ಲ. ಇದರಿಂದಾಗಿ ಮೌಖಿಕ ಹೇಳಿಕೆಯನ್ನಷ್ಟೇ ನೀಡಲು ಸಾಧ್ಯವಿತ್ತು. ಅದಕ್ಕಾಗಿ ನಾಲಗೆಯನ್ನು ಕತ್ತರಿಸಲಾಗಿತ್ತು.

ಅಲ್ಲಿಂದ ಪೊಲೀಸರ ಪ್ರವೇಶವಾಗುತ್ತದೆ. ಅಷ್ಟರಲ್ಲಿ ಯುವತಿ ಅಪರಾಧಿಗಳ ಹೆಸರನ್ನು ಹೇಳಿರುತ್ತಾಳೆ, ನಾಲ್ವರ ಬಂಧನವೂ ಆಗಿರುತ್ತದೆ. ಮಾಧ್ಯಮಗಳಲ್ಲಿ ವರದಿ ಬರತೊಡಗುತ್ತದೆ. ಇದೇನು ಕೈಮೀರಿ ಹೋಗುತ್ತಿದೆ ಎಂದನಿಸಿದಾಗ ಹೆತ್ತವರಿಗೆ ಮನವರಿಕೆ ಮಾಡಿ ಸ್ಥಳೀಯ ಆಸ್ಪತ್ರೆಯಲ್ಲಿದ್ದ ಆಕೆಯನ್ನು ದಿಡೀರನೆ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ಸಾಗಿಸುತ್ತಾರೆ. ಹೋಗುವ ಮೊದಲು ಆಕೆ ತಾಯಿಯ ಜೊತೆ, ಹುಷಾರಾಗಿ ಬರ್ತೇನೆ ಎಂದು ಹೇಳಿ ಹೋಗಿದ್ದಳಂತೆ.

ಹದಿನಾಲ್ಕು ದಿನ ಆಸ್ಪತ್ರೆಯಲ್ಲಿದ್ದು ಚೇತರಿಸಿಕೊಳ್ಳುತ್ತಿದ್ದ ಯುವತಿ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆ ಸೇರಿದ ಹದಿನೈದು ಗಂಟೆಗಳಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆಯುತ್ತಾಳೆ. ತಕ್ಷಣ ಹತ್ರಾಸ್ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಸ್ಪತ್ರೆಗೆ ಧಾವಿಸುತ್ತಾರೆ. ಹೆತ್ತವರಿಗೆ ಸಾವಿನ ಸುದ್ದಿ ತಿಳಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಅದರ ನಂತರ ಹೆತ್ತವರನ್ನು ದೂರ ಇಟ್ಟು ಯುವತಿಯ ಅಂತ್ಯಕ್ರಿಯೆ ನಡೆಸಲಾಗುತ್ತದೆ.

ಗಮನಿಸಬೇಕಾದ ಸಂಗತಿ ಎಂದರೆ ಇಲ್ಲಿಯ ವರೆಗೆ ಪೊಲೀಸರು ಹೆತ್ತವರಿಗೆ ಯುವತಿಯ ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿಯನ್ನು ನೀಡಿಲ್ಲ. ಇಷ್ಟೆಲ್ಲ ತಂತ್ರ-ಕುತಂತ್ರಗಳನ್ನು ನಡೆಸಿದವರು ತ ಮರಣೋತ್ತರ ಪರೀಕ್ಷೆಯಲ್ಲಿಯೂ ಕೈಯಾಡಿಸಿರುವ ಸಾಧ್ಯತೆಗಳು ಖಂಡಿತ ಇದೆ. ಸಂಶಯಗೊಂಡು ಹೆತ್ತವರು ಮರು ಮರಣೋತ್ತರ ಪರೀಕ್ಷೆಗೆ ಒತ್ತಾಯಿಸಬಾರದೆಂದೇ ಅವಸರದಲ್ಲಿ ಅಂತ್ಯಕ್ರಿಯೆ ನಡೆಸಿ ಅಳಿದುಳಿದ ಸಾಕ್ಷ್ಯಗಳನ್ನು ನಾಶ ಮಾಡಲಾಗಿದೆ.

ಸಾಮಾನ್ಯವಾಗಿ ಮೆಡಿಕೋ-ಲೀಗಲ್ ಪ್ರಕರಣಗಳಲ್ಲಿ ಮೃತದೇಹದ ಅಂತ್ಯಕ್ರಿಯೆಯನ್ನು ಹೇಗೆ ಮಾಡಬೇಕೆಂಬುದನ್ನು ಹೆತ್ತವರು/ಪೋಷಕರು ನಿರ್ಧರಿಸಬೇಕು. ಈ ಪ್ರಕರಣದಲ್ಲಿ ಮರಣೋತ್ತರ ಪರೀಕ್ಷೆಗೆ ಮೊದಲು ಪೊಲೀಸರು ಒಂದಷ್ಟು ಕಾಗದಪತ್ರಗಳಿಗೆ ಯುವತಿಯ ತಂದೆಯ ಸಹಿಹಾಕಿಸಿದ್ದಾರೆ.

ಅನಕ್ಷರಸ್ಥ ತಂದೆ ಹೇಳಿಕೆಯನ್ನು ಖಂಡಿತ ಓದಿರುವುದಿಲ್ಲ, ಪೊಲೀಸರು ಓದಿ ಹೇಳಿದ್ದನ್ನು ಒಪ್ಪಿಕೊಂಡಿರಬಹುದು. ಅದರಲ್ಲಿ ಮಗಳ ಮೃತದೇಹವನ್ನು ಸುಡಲು ಒಪ್ಪಿಗೆ ನೀಡಿದ್ದ ಪತ್ರಕ್ಕೂ ಅವರು ಸಹಿಹಾಕಿರಬಹುದು. ಅದನ್ನೇ ಪೊಲೀಸರು ಈಗ ‘’ ತಂದೆಯ ಒಪ್ಪಿಗೆಯ ಮೇಲೆಯೇ ಮೃತದೇಹದ ಅಂತ್ಯಕ್ರಿಯೆ ನಡೆಸಲಾಗಿದೆ’ ಎಂದು ಹೇಳುತ್ತಿರುವುದು.

ಈಗಾಗಲೇ ಪೊಲೀಸರ ಹೇಳಿಕೆಗಳ ಧಾಟಿ ಬದಲಾಗಿದೆ. ಮೊದಲನೆಯದಾಗಿ ಯುವತಿಯ ಮೇಲೆ ರೇಪ್ ನಡೆದಿಲ್ಲ, ರೇಪ್ ಗೆ ಪ್ರಯತ್ನಿಸಲಾಗಿದೆ ಎಂದು ಹೇಳತೊಡಗಿದ್ದಾರೆ, ಇದರ ಜೊತೆಗೆ ಯುವತಿಯ ನಾಲಗೆ ಕತ್ತರಿಸಲಾಗಿಲ್ಲ ಎಂದೂ ಹೇಳತೊಡಗಿದ್ದಾರೆ. ಪೊಲೀಸರು ನಾಳೆ ಅಧಿಕೃತವಾಗಿ ಈ ಹೇಳಿಕೆ ನೀಡಿದರೆ ಇದು ಸುಳ್ಳೆಂದು ಸಾಬೀತುಪಡಿಸುವುದು ಹೇಗೆ? ಮೃತದೇಹ ಸುಟ್ಟು ಬೂದಿಯಾಗಿದೆ.

ಇದನ್ನೇ “ ಪೊಲೀಸರಿಂದ ಕಾನೂನಿನ ಅತ್ಯಾಚಾರ” ಎಂದು ಹೇಳಲಾಗುತ್ತಿದೆ.ಯುಪಿ ಪೊಲೀಸರು ಈ ಕಲೆಯಲ್ಲಿ ವರ್ಷದಿಂದ ಪಳಗಿ ಬಿಟ್ಟಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ರೂತ್ ಗ್ರಿನ್ಸ್ ಬರ್ಗ್ : ಸಾವಿನಲ್ಲೂ ಪಡೆದ ಸ್ತ್ರೀ ಸಮಾನತೆ..!

Published

on

  • ಸಿ.ಎಸ್.ದ್ವಾರಕಾನಾಥ್

ದೇ ಸಪ್ಟೆಂಬರ್ 18 ನೇ ತಾರೀಖು ಬೆಳಿಗ್ಗೆ ಆರು ಗಂಟೆಗೆಲ್ಲ ಅಮೆರಿಕದಿಂದ ರೆಡ್ಡಿ ಪೋನ್ ಮಾಡಿ ಸುಮ್ಮನೇ ಒಂದೇ ಸಮ ಬೈಯ್ಯತೊಡಗಿದ!? ಇಲ್ಲಿನ ಬೆಳಿಗ್ಗೆ ಅಮೆರಿಕದಲ್ಲಿ ರಾತ್ರಿಯಾದ್ದರಿಂದ ಕೊಂಚ ‘ಔಷದಿ’ ಸೇವನೆಯಾಗಿರಬೇಕೆಂದು ಎದುರಾಡದೆ ಅವನ ಬೈಗುಳ ಕೇಳಿಸಿಕೊಳ್ಳತೊಡಗಿದೆ. ಅವನು ಅಷ್ಟೇನೂ ಕುಡಿದಿರಲಿಲ್ಲ “ಅಲ್ಲ ಕಣಯ್ಯ.. ರೂತ್ ಗ್ರಿನ್ಸ್ ಬರ್ಗ್ ನಂತಹ ಅದ್ಬುತ ಹೆಣ್ಣು ಮಗಳು ಸತ್ತಿದ್ದಾರೆ, ನಾಲ್ಕು ಸಾಲು ಬರೀಲಿಲ್ಲವಲ್ಲ ನೀನು.. ಹಾಳಾಗಿ ಹೋಗಿದೀಯ.. ಅಲ್ಲ.. ಥರ್ಗುಡ್ ಮಾರ್ಷಲ್ ಬಗ್ಗೆ ಬರೀತೀಯ.. ರೂತ್.. ಬಗ್ಗೆ ಬರೆಯೋಕೆ ನಿಂಗೆ ಆಗಲ್ಲ..?” ಅಂತ ರೇಗುತ್ತಲೇ ಇದ್ದ.

ರೂತ್ ಬಡರ್ ಗ್ರಿನ್ಸ್ ಬರ್ಗ್ ಎಂಬ ಜಗತ್ಪ್ರಸಿದ್ದ ಮಹಿಳಾ ಹೋರಾಟಗಾರ್ತಿ ಹಾಗೂ ಅಮೆರಿಕದ ಕ್ಯಾತ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ನಿಧನರಾದ ಬಗ್ಗೆ ಗೊತ್ತಿತ್ತು. ಇದೇ‌18ರಂದು ನಿಧನರಾದ ಈ ಹೆಣ್ಣು ಮಗಳನ್ನು ನಾಳೆ ಅಂತ್ಯಕ್ರಿಯೆ ಮಾಡುತ್ತಾರೆ. ಆಶ್ಚರ್ಯವೆಂದರೆ ತನ್ನ ಜೀವನಪೂರ್ತಿ ಮಹಿಳಾ ಹಕ್ಕುಗಳಿಗಾಗಿ ಹೋರಾಡಿದ ಈ ಹೆಣ್ಣು ಮಗಳು ಸಾವಿನಲ್ಲೂ ಸ್ತ್ರೀ ಸಮಾನತೆಯನ್ನು ಪಡೆದಿರುವುದು!?

ಸುಪ್ರೀಂ ಕೋರ್ಟಿನ ಸ್ಟೇಟ್ ಕ್ಯಾಪಿಟಲ್ಲಿನ ‘ನ್ಯಾಷನಲ್ ಸ್ಟ್ಯಾಚು ಹಾಲ್’ ನಲ್ಲಿ ಈಕೆಯ ದೇಹವನ್ನು ಇಡಲಾಗಿದೆ! ಅಮೆರಿಕದ ಇತಿಹಾಸದಲ್ಲಿ ಈ ಗೌರವ ಸಿಕ್ಕ ಮೊಟ್ಟಮೊದಲ ಮಹಿಳೆ ಗ್ರಿನ್ಸ್ ಬರ್ಗ್ ಆಗಿದ್ದಾರೆ! ಈ ಹಿಂದೆ ಯಾವ ಮಹಿಳೆಯ ದೇಹ ಇಲ್ಲಿಡಲಿಕ್ಕೂ ಇದು ಸಾದ್ಯವಾಗಿರಲಿಲ್ಲ! ಅಷ್ಟೆಲ್ಲ ಪ್ರಗತಿಪರ ಎನ್ನಲಾಗುವ ಅಮೆರಿಕದಂತ ಅಮೆರಿಕದಲ್ಲಿ ಪುರುಷ ಪ್ರಧಾನ ವ್ಯವಸ್ಥೆ ಇನ್ನೂ ಎಷ್ಟು ಬಲಿಷ್ಟ ವಾಗಿದೆ ಅನ್ನಲಿಕ್ಕೆ ಇದೇ ಸಾಕ್ಷಿ. ಇದೂ ಕೂಡ ರೂತ್ ರವರ ಮಹಿಳಾ ಸಮಾನತೆಯ ಹಕ್ಕುಗಳ ಹೋರಾಟಕ್ಕೆ ಸಿಕ್ಕ ಫಲ!

ಮೂಲತಃ Jew ಆದ ರೂತ್ ಸಣ್ಣ ವಯಸ್ಸಿನಲೇ ತಂದೆತಾಯಿಯನ್ನು ಕಳಕೊಂಡು, ಅನೇಕ ಸಂಕಷ್ಟಗಳಲ್ಲಿ ಬೆಳೆದು ಕಾನೂನು ವಿದ್ಯಾರ್ಥಿಯಾಗಿ, ಅದ್ಯಾಪಕಿಯಾಗಿ, ವಕೀಲಳಾಗಿ ಮಹಿಳಾ ಹಕ್ಕುಗಳಿಗಾಗಿ ಹೋರಾಡುತ್ತಲೇ ಬಂದವರು. ಇವರ ಮಹಿಳಾ ಕಾಳಜಿ ಮತ್ತು ದಕ್ಷತೆಯನ್ನು ಕಂಡ ಆಗಿನ ಅಮೆರಿಕ ಅದ್ಯಕ್ಷ ಬಿಲ್ ಕ್ಲಿಂಟನ್ ಈಕೆಯನ್ನು ಅಮೆರಿಕದ‌ ಸುಪ್ರೀಂ ಕೋರ್ಟಿಗೆ ನೇಮಿಸುತ್ತಾರೆ.

ನ್ಯಾಯಮೂರ್ತಿಯಾಗಿಯೂ ಈಕೆ ಅನೇಕ ತೀರ್ಪುಗಳಲ್ಲಿ ನೊಂದ ಮಹಿಳೆಯರಿಗೆ ನ್ಯಾಯ ಒದಗಿಸುತ್ತಾಳೆ. ಈ ತೀರ್ಪುಗಳು ಕೂಡ ಚರಿತ್ರಾರ್ಹ! ಅಮೆರಿಕದ ಮೊಟ್ಟ ಮೊದಲ ಸುಪ್ರೀಂ ಕೋರ್ಟಿನ ಕರಿಯ ನ್ಯಾಯಮೂರ್ತಿಯಾಗಿದ್ದ ಥರ್ಗುಡ್ ಮಾರ್ಷಲ್ ರಂತೆಯೇ ಮಹಿಳಾ ನ್ಯಾಯಮೂರ್ತಿಯಾಗಿ ಈಕೆಯ ಸಾಧನೆಗಳದು ದೊಡ್ಡ ಪಟ್ಟಿಯೇ ಇದೆ!

ಈಕೆ ಬಿಡುವಿಲ್ಲದ ನ್ಯಾಯಮೂರ್ತಿಯಾಗಿ ಕೆಲಸ ಮಾಡುತ್ತಲೇ ಪ್ಯಾಂಕ್ರಿಯಾಸ್ ಕ್ಯಾನ್ಸರಿಗೆ ತುತ್ತಾಗಿದ್ದಾರೆ. ನಾಳೆಯೇ ಈಕೆಯ ಅಂತ್ಯಕ್ರಿಯೆ. ರೂತ್ ಬಗೆಗಿನ, ನನಗೆ ನೆನಪಿರುವ ಒಂದು ಸಣ್ಣ ಘಟನೆಯನ್ನು ಹೇಳಿ ಮುಗಿಸುತ್ತೇನೆ.

ರೂತ್ ಅವರು ಅತ್ಯಂತ busy justice ಆಗಿ ಸುಪ್ರೀಂ ಕೋರ್ಟಿನಲ್ಲಿ ಕುಳಿತು ಕೆಲಸ ಮಾಡುತ್ತಿರುತ್ತಾರೆ. ಅವರ ಮಗುವಿನ ಶಾಲೆಯಿಂದ ಸತತವಾಗಿ ಈಕೆಗೆ ಪೋನ್ ಬರುತ್ತಲೇ ಇರುತ್ತೆ. ರೂತ್ ಶಾಲೆಯವರಿಗೆ ಹೇಳುತ್ತಾಳೆ “ನೋಡಿ ನನ್ನ ಮಗುವಿಗೆ ತಂದೆ ತಾಯಿ ಇಬ್ಬರೂ ಇದ್ದೇವೆ. ಬೇಕಿದ್ದರೆ ನಿಮ್ಮ ದಾಖಲೆಗಳಲ್ಲಿ ನೋಡಿ.

ತಾಯಿಯಾದ ನನಗೊಬ್ಬರಿಗೇ ನೀವು ಸತತವಾಗಿ ಏಕೆ ಪೋನ್ ಮಾಡುತ್ತೀರಿ? ಮಗುವಿನ ತಂದೆಗೆ ಯಾಕೆ ಮಾಡಲ್ಲ..? ನಿಮ್ಮ ಮನಸ್ಸಿನಲ್ಲಿ ತಾಯಿ ಸದಾ ಫ್ರೀ ಇರುತ್ತಾಳೆ.. ತಂದೆ ಮಾತ್ರ ಬ್ಯುಸಿ ಎಂಬುದು ನಿಮ್ಮ ತಲೆಯಲ್ಲಿ ಸಿದ್ದವಾಗಿ ಇರುತ್ತದೆಯಲ್ಲವೆ?‌” ಎಂದಾಗ ಶಾಲೆಯವರಿಗೆ ತಮ್ಮ ಸಿದ್ದ ಚಿಂತನೆಯ ತಪ್ಪಿನ ಅರಿವಾಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಅಬ್ಬಬ್ಬಾ..! ಇದು ಭಾರತೀಯ ಸಾಹಿತ್ಯದಲ್ಲಿಯೇ ವಿಶಿಷ್ಟವಾದ ಕಾದಂಬರಿ

Published

on

  • ರವಿ ಕೃಷ್ಣ ರೆಡ್ಡಿ

ಹಿಂದೂ: ಬದುಕಿನ ಸಮೃದ್ಧ ಅಡಕಲು“. ಇದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮರಾಠಿ ಲೇಖಕ ಡಾ.ಭಾಲಚಂದ್ರ ನೇಮಾಡೆ’ಯವರ 600+ ಪುಟಗಳ ದೀರ್ಘ ಕಾದಂಬರಿ, ಉದ್ಗ್ರಂಥ. ಇದನ್ನು ಕನ್ನಡಕ್ಕೆ ಚಂದ್ರಕಾಂತ ಪೋಕಳೆ‘ಯವರು ಬಹಳ ಶ್ರಮ ಮತ್ತು ಆಸ್ಥೆ ವಹಿಸಿ ಭಾಷಾಂತರಿಸಿದ್ದಾರೆ. ನಾನು ಈಗ ಬಲವಂತದ ಕಡ್ಡಾಯ ಗೃಹಬಂಧನದಲ್ಲಿ ಇರುವುದರಿಂದಾಗಿ ಇದನ್ನು ಓದುವಂತಾಯಿತು. ಹಿಂದೊಮ್ಮೆ ಒಂದೆರಡು ಪುಟ ನೋಡಿ ಇದರ ಭಾಷಾ ವೈಖರಿ ಮತ್ತು ನಿರೂಪಣೆಯ ಕಾರಣಕ್ಕೆ ನನ್ನಿಂದಾಗದು ಎಂದು ಬದಿಗಿಟ್ಟುಬಿಟ್ಟಿದ್ದೆ.

ಆದರೆ ನಾಲ್ಕೈದು ದಿನದ ಹಿಂದೆ ಹಠ ಹಿಡಿದು ಕುಳಿತ ಮೇಲೆ ನಿಧಾನಕ್ಕೆ ರುಚಿಸುತ್ತಾ ಹೋಯಿತು. ಸರಿಯಾದ ಸೂತ್ರವಿಲ್ಲ. ಅಸ್ತವ್ಯಸ್ತ ನಿರೂಪಣೆ. ಎಲ್ಲಿಂದಲೋ ಎಲ್ಲೆಲ್ಲಿಗೋ. ಒಮ್ಮೊಮ್ಮೆ ಕಾಲದೇಶಗಳನ್ನು ಉಲ್ಲಂಘಿಸಿ ಸಾಗುತ್ತದೆ. (60ರ ದಶಕದ ಕಥೆಯಲ್ಲಿ ಕೆಲವೊಮ್ಮೆ 90ರ ದಶಕದ ವಿಚಾರಗಳು ನುಸುಳುತ್ತವೆ.) ಇದರಲ್ಲಿ ಬರುವ ಪಾತ್ರಗಳ ಸಂಖ್ಯೆ ಮಹಾಭಾರತದಲ್ಲಿಯ ಪಾತ್ರಗಳನ್ನೂ ಮೀರಿಸುತ್ತದೆ. ನೂರಾರು ಪಾತ್ರಗಳು ನಾಲ್ಕಾರು ಸಾಲಿಗೆ ಮುಗಿಯುತ್ತವೆ. ಏಳೆಂಟು ಪಾತ್ರಗಳು ಮಾತ್ರ ಒಂದಿಷ್ಟು ವಿಸ್ತಾರ ಪಡೆಯುತ್ತವೆ. ಆದರೆ ಯಾವ ಪಾತ್ರಗಳೂ ಅನುದ್ದಿಶ್ಯ ಎಂದೆನಿಸುವುದಿಲ್ಲ.

ಈ ಕಾದಂಬರಿಯನ್ನು ಅರ್ಧ ಓದಿದ್ದಾಗ ಇದೊಂದು ಹಳೆಯ ತುಂಡುಬಟ್ಟೆಗಳನ್ನು ಹಾಕಿ ಹೊಲಿದ ಕೌದಿಯಂತಿದೆ ಎನಿಸುತ್ತಿತ್ತು ನನಗೆ. ಜೊತೆಗೆ ಅಡಕಲು ಎನ್ನುವ ಪದದ ಅರ್ಥವೂ ಗೊತ್ತಿರಲಿಲ್ಲ. ಕೊನೆಗೆ ಇದರ ಮರಾಠಿ ಪದವನ್ನು ಹುಡುಕಿ ಅದನ್ನು ಗೂಗಲ್ ಭಾಷಾಂತರ ಮಾಡಿದಾಗ ಗೊತ್ತಾಗಿದ್ದು ಅದಕ್ಕೆ ಇಂಗ್ಲೀಷಿನ Junk ಅಥವಾ Llitter ಎನ್ನುವ ಅರ್ಥವಿದೆ ಎಂದು. ಕನ್ನಡದಲ್ಲಿ ಇದಕ್ಕೆ ಕಸಕಡ್ಡಿ, ಚಿಂದಿ, ತ್ಯಾಜ್ಯ, ನಿರುಪಯುಕ್ತ ಎನ್ನುವಂತಹ ಅರ್ಥ ಬರುತ್ತದೆ. ಈ ಪುಸ್ತಕದ ಟ್ಯಾಗ್‌ಲೈನ್’ನ ಇಂಗ್ಲೀಷ್ ಭಾಷಾಂತರ ಮಾತ್ರ ಬಹುಶಃ ಅದರ ಮರಾಠಿ ಭಾವಾರ್ಥಕ್ಕೆ ಹತ್ತಿರವಿದೆ; Rich Junk of Living. ಜೀವನದ ಸಮೃದ್ಧ ಕಸಕಡ್ಡಿ.

ಕೊನೆಗೆ ನನಗೆ ಅನ್ನಿಸಿದ್ದು, ಹಲವು ಶತಮಾನಗಳ ಹಲವು ತಲೆಮಾರುಗಳ ಹಲವು ಕುಟುಂಬಗಳ ಜನರು ಬಳಸಿದ ಬಟ್ಟೆಗಳಿಂದ ಒಂದೊಂದೇ ತುಂಡು ಅಥವಾ ಚಿಂದಿಯನ್ನು ತೆಗೆದುಕೊಂಡು ಅವೆಲ್ಲವುಗಳನ್ನು ಸೇರಿಸಿ ಹೊಲಿದ ಒಂದು ವಿಸ್ತಾರವಾದ ದಪ್ಪಪದರದ ಅಮೂರ್ತ ಚಿತ್ರವಿನ್ಯಾಸದ ಕೌದಿಯಂತೆ ಇದೆ ಈ ಕಾದಂಬರಿ ಎಂದು.

ಇಂದಿನ ಪಾಕಿಸ್ತಾನದ ಮೊಹೆಂಜದಾರೋದಲ್ಲಿ ಐವತ್ತುಅರವತ್ತರ ದಶಕದಲ್ಲಿ ನಡೆದ ಉತ್ಖನನದ ವಿವರಗಳಿಂದ ಆರಂಭವಾಗಿ ಕಳೆದ ಎರಡು ಮೂರು ಶತಮಾನಗಳ ಮಹಾರಾಷ್ಟ್ರದ ಖಾನ್ದೇಶ್ ಪ್ರದೇಶದ ಮೋರಗಾಂವ ಎಂಬ ದೊಡ್ಡ ಹಳ್ಳಿಯಲ್ಲಿಯ ಬದುಕುಗಳೊಂದಿಗೆ ಈ ಕಾದಂಬರಿ ಸುತ್ತಿಕೊಳ್ಳುತ್ತಾ, ತೆರೆದುಕೊಳ್ಳುತ್ತಾ, ಗೋಜಲಾಗುತ್ತಾ ಹೋಗುತ್ತದೆ.

19ನೇ ಶತಮಾನದ ಆರಂಭದಲ್ಲಿ ಬ್ರಿಟಿಷರ ವಿರುದ್ಧ ಮಿಕ್ಕೆಲ್ಲಾ ಮರಾಠ ಸಂಸ್ಥಾನಗಳು ಶರಣಾಗುತ್ತ ಹೋದಾಗ ಯಶವಂತರಾವ್ ಹೋಳ್ಕರ್ ಎಂಬ ಮರಾಠ ದೊರೆ ನಡೆಸುವ ಏಕಾಂಗಿ ಹೋರಾಟದ ದಿನಗಳಲ್ಲಿ ಈ ಭಾಗದ ಗ್ರಾಮೀಣ ಬದುಕು ಹೇಗಿತ್ತು ಎಂದು ನಿರೂಪಿಸುತ್ತಾ, ಆ ಸಮಯದಲ್ಲಿ ತಮ್ಮ ಹಿತವನ್ನು ರಕ್ಷಿಸಿಕೊಳ್ಳಲು ಆ ಭಾಗದ ರೈತಾಪಿ ಜನರು–ಅದರಲ್ಲಿಯೂ ಕಾದಂಬರಿಯ ನಾಯಕ ಖಂಡೇರಾವ್’ನ ಪೂರ್ವಿಕರು–ಯಾವೆಲ್ಲ ತಂತ್ರಗಳನ್ನು ಮಾಡಿದರು.

ತದನಂತರ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಪಾಲ್ಗೊಂಡು ಹುತಾತ್ಮನಾಗುವ ಆತನ ಚಿಕ್ಕಪ್ಪನ ಒಂದಷ್ಟು ಕಥೆ, ಗಾಂಧೀಜಿ ಹತ್ಯೆಯ ಸಂದರ್ಭದಲ್ಲಿ ವಿವಿಧ ಮಹಾರಾಷ್ಟ್ರ ಸಮುದಾಯಗಳ ವರ್ತನೆ, ಮಳೆಯಾಶ್ರಿತ ಕೃಷಿಯಿಂದ ನೀರಾವರಿಗೆ ಹೊರಳುವ ರೈತ, ಅನಿಶ್ಚಿತ ಕೃಷಿಯಿಂದ ಬಿಡುಗಡೆಗೊಂಡು ಶಿಕ್ಷಣ ಮತ್ತು ನೌಕರಿಯ ಮೂಲಕ ನೆಮ್ಮದಿಯ ಜೀವನ ಕಂಡುಕೊಳ್ಳಲು ಗ್ರಾಮೀಣರು ಮಾಡುವ ಪ್ರಯತ್ನ, ಆ ಭಾಗದ ವಾರಕರಿ ಪಂಥದವರ ಸಂಪ್ರದಾಯಗಳು, ಕೂಡುಕುಟುಂಬದ ಲಾಭ-ನಷ್ಟಗಳು, ಅದರಲ್ಲಿಯ ಸಣ್ಣತನ ಕಿರಿಕಿರಿ ಅಸೂಯೆ ಮೋಸ ವಂಚನೆ ಔದಾರ್ಯ ತ್ಯಾಗ ವಿಘಟನೆ ಮುಂತಾದುವುಗಳ ಹಸಿಹಸಿ ಅನಾವರಣ ಇಲ್ಲಿದೆ.

ಸ್ವಾತಂತ್ರ್ಯೋತ್ತರ ಕಾಲದ ರಾಜಕಾರಣ, ಜಾತೀಯತೆ, ವಿಶ್ವವಿದ್ಯಾಲಯಗಳಲ್ಲಿ ನಡೆದ ಜಾತಿವಾದದ ಚರ್ಚೆ, ಕುಟಿಲತೆ, ವಿಶ್ವವಿದ್ಯಾಲಯದ ಶಿಕ್ಷಣ ದಕ್ಕಿಸಿಕೊಳ್ಳಲು ರೈತಾಪಿ ಯುವಕರು ಪಟ್ಟ ಪಡಿಪಾಟಲು, ಅಲ್ಪರು ಪ್ರಾಮಾಣಿಕರಿಗೆ ಮಾಡುವ ಅನ್ಯಾಯ, ಅಂತಹ ಸಂದರ್ಭದಲ್ಲಿಯೂ ವಿವಿಧ ಪ್ರದೇಶಗಳ ಅನ್ಯಜಾತಿಗಳ ವಿದ್ಯಾರ್ಥಿಗಳು ಕೂಡಿ ಕಲಿಯಬೇಕಾದ ಅನಿವಾರ್ಯತೆ ಸೃಷ್ಟಿಸಿದ ಮನೋವೈಶಾಲ್ಯತೆ, ಹೀಗೆ ಹಲವು ಸ್ತರಗಳಲ್ಲಿ ಕಾದಂಬರಿ ಸಾಗುತ್ತದೆ.

ಆರ್ಥಿಕವಾಗಿ ಒಂದಷ್ಟು ಸಬಲರಾದ ರೈತ ಕುಟುಂಬಗಳ ಮಹಿಳೆಯರು ತಮ್ಮ ಮನೆಯ ಹೆಣ್ಣುಮಕ್ಕಳನ್ನು ಯಾವುದೇ ಕಾರಣಕ್ಕೂ ರೈತಾಪಿ ಕೆಲಸ ಮಾಡುವ ಯುವಕರೊಂದಿಗೆ ಮದುವೆ ಮಾಡಿಸಕೂಡದು ಎಂದು ಗಟ್ಟಿಯಾಗಿ ನಿಲ್ಲುವುದು, ಆಸ್ಪತ್ರೆ ಹಾಗೂ ವೈದ್ಯರುಗಳು ಇಲ್ಲದಿದ್ದ ಸಮಯದಲ್ಲಿ ಗ್ರಾಮೀಣ ತಾಯಂದಿರು ತಮ್ಮ ರೋಗಪೀಡಿತ ಮಕ್ಕಳನ್ನು ಉಳಿಸಿಕೊಳ್ಳಲು ಮಾಡುತ್ತಿದ್ದ ಹರಸಾಹಸ, ಹಠ, ತ್ಯಾಗ; ಇಂತಹ ವಿಚಾರಗಳು ಇಲ್ಲಿ ಬಹಳ ಸೃಜನಶೀಲತೆಯಿಂದ ಹೇಳಲ್ಪಟ್ಟಿದೆ.

ಚರಿತ್ರೆಯ ಸಂಗತಿಗಳು ಬಂದಾಗ ಯಾವುದು ನಿಜವಾದದ್ದು, ಯಾವುದು ಕಾಲ್ಪನಿಕ, ದಂತಕಥೆ ಮತ್ತು ಊಹಾಪೋಹಗಳು ಯಾವುದು ಎಂಬೆಲ್ಲಾ ವಿಚಾರಗಳು ನಮ್ಮನ್ನು ಕಾಡುತ್ತವೆ. ಭೂಗೋಳ, ವಿಕಾಸವಾದ, ಪ್ರಾಗೈತಿಕ ಇತಿಹಾಸ, ಸಾಮಾಜಿಕ ಚರಿತ್ರೆ ಮುಂತಾದ ವಿಚಾರಗಳ ಬಗ್ಗೆ ಲೇಖಕರ ಅಪಾರ ಅಧ್ಯಯನ ಮತ್ತು ಜ್ಞಾನ ಕಾದಂಬರಿಯುದ್ದಕ್ಕೂ ನಮ್ಮನ್ನು ಬೆರಗುಗೊಳಿಸುತ್ತದೆ. ಕಳೆದ ಐದುಸಾವಿರ ವರ್ಷಗಳ ಭಾರತದ ಸಾಮಾಜಿಕ ಸಂರಚನೆ ರೂಪುಗೊಂಡ ಬಗೆಯನ್ನು ಅಲ್ಲಲ್ಲಿ ಅಮೂರ್ತವಾಗಿ ತಿಳಿಸಲು ಪ್ರಯತ್ನಿಸುತ್ತದೆ.

ಇನ್ನೂ ಅನೇಕ ವಿಚಾರಗಳನ್ನು ಈ ಕಾದಂಬರಿ ಹೇಳುತ್ತದೆಯಾದರೂ ನಾನು ಅವುಗಳನ್ನು ಇಲ್ಲಿ ವಿವರಿಸಲು ಹೋಗುವುದಿಲ್ಲ. ಅದು ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಣಿಸುತ್ತದೆ. ಮತ್ತು ಒಂದು ಓದಿಗೆ ಚೆನ್ನಾಗಿ ಅರ್ಥವಾಗುವುದೂ ಇಲ್ಲ.

ಭಾಲಚಂದ್ರ ನೇಮಾಡೆ’ಯವರು ಕಳೆದ ಅರ್ಧಶತಮಾನದ ಮರಾಠಿ ಸಾಹಿತ್ಯದ ಅತ್ಯಂತ ಪ್ರಭಾವಶಾಲಿ ಮತ್ತು ವಿವಾದಾತ್ಮಕ ಲೇಖಕರು ಎಂದು ಅವರ ಬಗೆಗಿನ ಕೆಲವೊಂದು ಓದು ತಿಳಿಸುತ್ತದೆ. ಇದು ಅವರ ಮಹತ್ವಾಕಾಂಕ್ಷಿ ಕೃತಿಯೂ ಹೌದು. ದೇಸಿವಾದ ಮತ್ತು ದೇಶಭಾಷೆಗಳ ಬಹುದೊಡ್ಡ ಪ್ರತಿಪಾದಕರವರು.

ಭಾರತವು ಬಹಳ ಪ್ರಾಚೀನವಾದ, ವಿಸ್ತಾರವಾದ, ಹಲವು ಸ್ಥಿತ್ಯಂತರಗಳನ್ನು ಕಂಡಂತಹ, ವಿಭಿನ್ನ ಸಂಪ್ರದಾಯ-ಸಂಸ್ಕೃತಿ-ಭಾಷಾ ವೈವಿಧ್ಯತೆಗಳನ್ನು ಹೊಂದಿದ್ದ, ಅಂತಹವು ಎಷ್ಟೋ ನಾಶವಾದ, ಮರುರೂಪಗೊಂಡ, ಹೊಸದನ್ನೇ ರೂಪಿಸಿಕೊಳ್ಳುತ್ತಿರುವ, ಅಲ್ಲಲ್ಲಿಯೇ ಕವಲೊಡೆದ ಸಹಸ್ರಾರು ಭಾಷೆ-ಸಂಸ್ಕೃತಿ-ಸಂಪ್ರದಾಯಗಳ ಬಹುದೊಡ್ಡ ಸಮಾಜ.

ಹಾಗಾಗಿ ಸಹಜವಾಗಿಯೇ ಇಲ್ಲಿ ಕಸವೂ ಇದೆ, ಅಮೂಲ್ಯವೂ ಇದೆ. ದಾರಿದ್ರ್ಯವೂ ಸಮೃದ್ಧವಾಗಿದೆ; ಸಮೃದ್ಧತೆಗೂ ದರಿದ್ರವಿಲ್ಲ. ಆಳದಲ್ಲಿ ಹಿಂಸೆಯೂ ಇದೆ, ಅಹಿಂಸೆಯೂ ಇದೆ. ಶೋಷಣೆಯೂ ಇದೆ, ಅದನ್ನು ಧಿಕ್ಕರಿಸುವ ಪ್ರತಿರೋಧವೂ ಅಂತರ್ಗತವಾಗಿದೆ. ಜ್ಞಾನವೂ ಇದೆ, ಅಜ್ಞಾನವೂ ಇದೆ. ಹೀಗೆ ಇದೊಂದು ವೈರುಧ್ಯಗಳ ಮಿಶ್ರಣ; ಭೂತದಲ್ಲಿ ಮತ್ತು ವರ್ತಮಾನದಲ್ಲಿಯೂ; ಬಹುಶಃ ಭವಿಷ್ಯದಲ್ಲಿಯೂ. ಇಂತಹ ವಿಚಾರಗಳನ್ನು ನಮಗೆ ತೋರಿಸುವ ಕನ್ನಡಿ “ಹಿಂದೂ” ಕಾದಂಬರಿ.

ಇದನ್ನು ಕನ್ನಡಕ್ಕೆ ಅನುವಾದಿಸಿರುವ ಚಂದ್ರಕಾಂತ ಪೋಕಳೆ’ಯವರಿಗೆ ವಿಶೇಷ ಧನ್ಯವಾದಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending