Connect with us

ಅಂತರಂಗ

ಧರ್ಮ ಮರ್ಮ-03 : ದೈವಿಕತೆ ಮತ್ತು ಧಾರ್ಮಿಕತೆ

Published

on

  • ಯೋಗೇಶ್ ಮಾಸ್ಟರ್

ದೇವರ ಪರಿಕಲ್ಪನೆ ವಿಶ್ವದ ಬಹುತೇಕ ಸಂಸ್ಕೃತಿಗಳಲ್ಲಿ ಭಯದ ಮೂಲವೇ ಆಗಿದ್ದು, ನಂತರ ಅದನ್ನು ಸುಧಾರಿಸಿದಂತಹ ಉದಾಹರಣೆಗಳು ಧಾರಾಳವಾಗಿ ಕಾಣುತ್ತದೆ. ಇಂದಿನ ಭಾಷೆಯಲ್ಲಿ ಭಾರತೀಯರು ಎನ್ನುವುದಾದರೂ ಸ್ಪಷ್ಟ ಸೀಮೆ, ಸಂಸ್ಕೃತಿ, ಭಾಷೆ, ಜನಾಂಗವೇನೂ ಇಲ್ಲದ ಈ ನೆಲದ ವಿವಿಧ ನೆಲೆಗಳಲ್ಲೇ ದೇವರ ಕಲ್ಪನೆಗಳು ಅನೇಕ ರೀತಿಗಳಲ್ಲಿ ಉಂಟಾದವು.

ಆದರೆ, ನಂತರ ರಾಜಕೀಯವಾಗಿ ಮತ್ತು ಭೌಗೋಳಿಕವಾಗಿ, ಮಾತಾಡುವ ಭಾಷೆಯೂ ಸೇರಿದಂತೆ ಜನಗಣಗಳನ್ನು ಒಂದು ಮಾಡಿರುವ ಕಾರಣಕ್ಕಾಗಿ, ರಾಷ್ಟ್ರೀಯತೆಯ ಹೆಸರಿನಲ್ಲಿ, ಅದಕ್ಕೂ ಮೀರಿ ಜಗತ್ಕುಟುಂಬದ ಪರಿಕಲ್ಪನೆಯಲ್ಲಿ ಈ ವಿವಿಧತೆಗಳಲ್ಲಿ ಏಕತೆಯನ್ನು ಕಾಣುವ ಪ್ರಯತ್ನವನ್ನು ಹಲವಾರು ದಿಕ್ಕುಗಳಿಂದ ಮಾಡುತ್ತಿದ್ದರೂ ಸಾಧ್ಯವಾಗಿಲ್ಲ. ಬಹುಶಃ ಸಾಧ್ಯವಾಗುವುದೂ ಇಲ್ಲ.

ನಿರ್ಧಮೀಯವಾಗಿ, ಸಂಪ್ರದಾಯರಹಿತವಾಗಿ ಏಕತೆಯನ್ನು ಸಾಧಿಸಲು ಸಾಧ್ಯವಾಗುವುದು ಜೀವಸೂಕ್ಷ್ಮವಾದ ಮಾನವೀಯ ನೆಲೆಗಟ್ಟಿನಿಂದ ಯೋಚಿಸಲು ಸಮರ್ಥವಾದಾಗ ಮಾತ್ರ. ಏಕತೆಯೆಂದರೆ ಆಲೋಚನೆಯಷ್ಟೇ. ಆ ಆಲೋಚನೆಯನ್ನು ಖಾಸಗಿಯಾಗಿ ತಮ್ಮದೆಂದು ಭಾವಿಸುವುದು. ಧರ್ಮವೂ ಕೂಡಾ ಒಂದು ಆಲೋಚನೆಯೇ ಆಗಿದೆ. ವಾಸ್ತವವಾಗಿ ಮನುಷ್ಯನೆಂದು ನಾವು ಯಾವ ಜೀವವರ್ಗಕ್ಕೆ ಕರೆಯುತ್ತೇವೆಯೋ ಆ ತಳಿಯು ಮೂಲದಲ್ಲಿ ಪ್ರಾಣಿಯೇ ಆಗಿದ್ದು ಒಂದು ವಿಶಿಷ್ಟ ಗುಣ ಲಕ್ಷಣವೆಂದರೆ ಮನಸ್ಸು.

ಈ ಮನಸ್ಸಿನ ಕಾರಣದಿಂದಲೇ ಅವನಿಗೆ ಆಲೋಚಿಸಲು ಸಾಧ್ಯವಾಗಿರುವುದು. ಪ್ರಾಣಿಗಳಿಗಿರುವಂತೆ ಪ್ರವೃತ್ತಿಯೂ ಕೂಡಾ ಸಹಜವಾಗಿ ಇದೆ ಮತ್ತು ಆ ಪ್ರವೃತ್ತಿಯನ್ನು ಕ್ರಮಬದ್ಧಗೊಳಿಸಿಕೊಂಡು ತನ್ನ ಜೀವನವನ್ನು ಮುಂಗಾಣುವಂತಹ ಆಲೋಚನಾ ಶಕ್ತಿಯೂ ಇದೆ. ಈ ಆಲೋಚನೆಯಿಂದಾಗಿ ತರ್ಕವೂ ಸಾಧ್ಯವಾಗುತ್ತದೆ.

ಈ ಮನಸ್ಸಿಗೆ ಇರುವ ಆಲೋಚನಾ ಶಕ್ತಿಯ ಪರಿಣಾಮವಾಗಿ ತನ್ನ ದೈಹಿಕ, ಮಾನಸಿಕ, ಬೌದ್ಧಿಕ ಮತ್ತು ಭಾವನಾತ್ಮಕ ಚಟುವಟಿಕೆಗಳನ್ನು ತಾನೇ ನೋಡಿಕೊಳ್ಳಬಲ್ಲ. ಹಾಗೆಯೇ ಇತರರದನ್ನು ಗಮನಿಸಬಲ್ಲ. ತನ್ನ ಹಿಂದಿನದನ್ನು ಸ್ಮರಣೆಗೆ ತಂದುಕೊಂಡು ಅದನ್ನು ದಾಖಲು ಮಾಡಲು ಸಾಧ್ಯವಾಗುತ್ತದೆ. ಮುಂದಿನದನ್ನು ದೂರದೃಷ್ಟಿಯಿಂದ ಗ್ರಹಿಸಿ ಅದಕ್ಕೆ ಯೋಜನೆಗಳನ್ನು ರೂಪಿಸಿಕೊಳ್ಳಲೂ ಸಾಧ್ಯವಾಗುತ್ತದೆ.

ಒಂದು ಸ್ಪಷ್ಟವಾಗಿ ತಿಳಿದುಕೊಳ್ಳೋಣ. ಪ್ರಾಣಿಗಳ ಪ್ರವೃತ್ತಿಯೂ ಮತ್ತು ಮನುಷ್ಯನ ವೈಚಾರಿಕ ಮನಸ್ಸೂ ಏಕಕಾಲದಲ್ಲಿ ನಮ್ಮಲ್ಲಿ ಅಸ್ತಿತ್ವದಲ್ಲಿರುವುದರಿಂದಲೇ ಮನುಕುಲ ವಿಕಾಸದ ಚರಿತ್ರೆಯಲ್ಲಿ ಸಂಘರ್ಷಗಳನ್ನು, ದಾಳಿಗಳನ್ನು, ಯುದ್ಧಗಳನ್ನು ಸತತವಾಗಿ ಕಾಣುತ್ತಿದ್ದೇವೆ. ಅಹಂಕಾರ ಎನ್ನುವುದು ವ್ಯಕ್ತಿಗತವಾಗಿರುವ ಒಂದು ಸ್ವಕೇಂದ್ರಿತ ಭಾವ. ಈ ಭಾವವು ವರವೂ ಹೌದು, ಶಾಪವೂ ಹೌದು. ಈ ಅಹಂಕಾರದ ಭಾವವನ್ನು ಮನುಷ್ಯ ತನ್ನಲ್ಲಿ ಮತ್ತು ತನ್ನಂತೆಯೇ ಇರುವ ಇತರರಲ್ಲಿ ಸ್ಪಷ್ಟವಾಗಿ ಗುರುತಿಸಿದ.

ಹಾಗೂ ಅದರಿಂದಾಗುವ ಒಳಿತು ಮತ್ತು ಕೆಡಕುಗಳನ್ನೂ ಕೂಡಾ ಕಂಡುಕೊಂಡ. ಆದರೆ ಕೆಡುಕು ಎನ್ನುವುದು ಸಹಜವಾಗಿ ಆಗ್ರಹ ಮತ್ತು ಆಕ್ರೋಶಭರಿತವಾಗಿದ್ದು ರಭಸವನ್ನು ಹೊಂದಿರುತ್ತದೆ. ಒಳಿತು ಎನ್ನುವುದು ರಭಸ ರಹಿತವಾಗಿ ಸಾತ್ವಿಕವಾಗಿರುವುದರಿಂದ, ಅಗ್ರಗಾಮಿಯಾಗಿಲ್ಲದಿರುವುದರಿಂದ ಅದು ಕೆಡುಕಿನ ರಭಸವನ್ನು ತಡೆಯಲಾರದ ಕಾರಣದಿಂದ ಒಂದು ಕ್ರಮಕ್ಕೆ ಮನುಷ್ಯನ ಮನವನ್ನು ಒಳಪಡಿಸಲೇ ಬೇಕಾಗಿರುವಂತಹ ಅನಿವಾರ್ಯವಿತ್ತು.

ಆದಿಮ ಕಾಲದಲ್ಲಿ ಮನುಷ್ಯರು ಮನುಷ್ಯರಿಂದಲೇ ಎರಡು ಬಹುದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದ್ದರು. ಒಂದು ಬಲಶಾಲಿ ಮನುಷ್ಯರು ನಿರ್ಬಲರನ್ನು ನಿಗ್ರಹಿಸುತ್ತಿದ್ದರು. ಈ ನಿರ್ಬಲರು ದಾರ್ಷ್ಟ್ಯದ ಮತ್ತು ಆಕ್ರಮಣಕಾರಿಯಾದ ಬಲಶಾಲಿಗಳನ್ನು ಎದುರಿಸಲು ಸಂಘಟಿತರಾಗಬೇಕಿತ್ತು. ಅವರೂ ಶಕ್ತಿಶಾಲಿಗಳಾಗಬೇಕಿದೆ ಎಂಬುದನ್ನು ಕೆಲವರು ಮನಗಂಡರು.

ಆದರೆ ಇವರೂ ಬರಿದೇ ಶಕ್ತಿಶಾಲಿಗಳಾಗಿಬಿಟ್ಟಿದ್ದರೆ ಈ ಮೊದಲ ಕೇಡಿನ ವರ್ತನೆಗಳ ಶಕ್ತಿಶಾಲಿಗಳಂತೆಯೇ ವರ್ತಿಸುವ ಸಾಧ್ಯತೆಯೂ ಇರುವುದರಿಂದ ಒಂದು ಕ್ರಮದೊಳಗೆ ಅವರನ್ನು ಅಡಕ ಮಾಡಿಸುವ ಒಂದು ಅನಿವಾರ್ಯತೆ ಇತ್ತು. ಆ ಅನಿವಾರ್ಯತೆಯ ಫಲವೇ ಧರ್ಮ. ನಿರ್ಬಲರ ಮೇಲಿನ ಅನುಕಂಪವೇ ಧರ್ಮಗಳ ಉಗಮಕ್ಕೆ ಕಾರಣವಾಯಿತು.

ಪಶುತನದ ಕೆಂಡ

ಮನುಷ್ಯನ ಆಲೋಚನೆಗಳನ್ನು ಒಂದು ನಿರ್ಧಿಷ್ಟ ಕ್ರಮಕ್ಕೆ ಒಳಪಡಿಸಿದರೆ ಅಷ್ಟಕ್ಕೆ ಸುಮ್ಮನಾಗುವ ವರ್ಗವಲ್ಲ ಈ ಮಾನವ. ಅವನಲ್ಲಿ ಸ್ವಾಭಾವಿಕವಾದಂತಹ ಪಶುಪ್ರವೃತ್ತಿ ಸದಾ ಬೂಧಿ ಮುಚ್ಚಿದ ಕೆಂಡದಂತೆ ಇದ್ದೇ ಇರುತ್ತದೆ. ಅದಕ್ಕಾಗಿ ಆದಿಮ ಕಾಲದ ಪ್ರಕೃತಿಯ ವಿದ್ಯಮಾನಗಳಿಗೆ ಪಟ್ಟ ಭಯದ ಪ್ರತಿಫಲವಾಗಿ ಹುಟ್ಟಿದ ದೇವರ ಪರಿಕಲ್ಪನೆಯನ್ನು ಜಾಣ ನಾಯಕ ತೆಗೆದುಕೊಂಡ.

ತನ್ನನ್ನು ಪ್ರವಾದಿಯೆಂದು ಕರೆಯಿಸಿಕೊಂಡ ಆ ಜಾಣ ಮತ್ತು ಕರುಣಾಮಯಿ ಮನುಷ್ಯ ತನ್ನ ಸೂಕ್ಷ್ಮಗ್ರಹಿಕೆಗಳನ್ನು, ಕ್ರಮಕ್ಕೊಳಪಡಿಸುವ ರೀತಿಗಳನ್ನು ಮತ್ತು ದೂರಾಲೋಚನೆಗಳನ್ನು ತನ್ನೊಡನೆ ಇರುವವರಿಗೆ ದಾಟಿಸಲು ದೇವರನ್ನು ಮಾಧ್ಯಮವನ್ನಾಗಿಸಿಕೊಂಡ. ಇಲ್ಲವಾದರೆ ಇವನೂ ನಮ್ಮಂತೆಯೇ ಇರುವವನಾದರೆ ನಾವೇಕೆ ಇವನ ಮಾತನ್ನು ಕೇಳಬೇಕು? ಇದು ಮನುಷ್ಯನ ಸಾಧಾರಣ ಅಹಂಕಾರದ ಧೋರಣೆ.

ಅವನು ತಮ್ಮ ಜೀವನದ ಕ್ರಮವನ್ನೇ ನಿರ್ದೇಶಿಸಲು ಹೊರಟಿದ್ದಾನೆಂದರೆ ಒಂದೋ ಅವನು ಅತಿಮಾನುಷನಾಗಿರಬೇಕು, ಅಥವಾ ಮಾನವನಲ್ಲದೇ ಸರ್ವಶಕ್ತಿ ಇರುವಂತಹ ದೇವರು ತಾನು ಆಯ್ದ ಅವನ ಮೂಲಕ ತನ್ನ ಮಾತುಗಳನ್ನು ಹೇಳಬೇಕು. ಬೈಬಲ್ಲಂತೂ ಈ ವೈಚಾರಿಕತೆಯನ್ನು ತನ್ನ ಆದಿಕಾಂಡದಲ್ಲಿ ಬಹಳ ಸುಂದರವಾದ ಕಥನದ ರೂಪಕದಲ್ಲಿ ಕಟ್ಟಿಕೊಡುತ್ತದೆ.

ತನ್ನ ಶಕ್ತಿಯ ಬಗ್ಗೆ ಅಭಿಮಾನವಿದ್ದು ಅಹಂಕಾರದಿಂದ ತನ್ನ ದಾರ್ಷ್ಟ್ಯವನ್ನು ಪ್ರದರ್ಶಿಸುವ ಮನುಷ್ಯನ ಶಕ್ತಿಗೆ ಎಟುಕಲಾರದ ಶಕ್ತಿಯಾದ ದೇವರ ಪರಿಕಲ್ಪನೆ ಅವನನ್ನು ಭಯದಲ್ಲಿ ಹಿಡಿದಿಡಲೇ ನಂತರ ಬಳಕೆಯಾದದ್ದು. ಹಾಗೆಯೇ ಧರ್ಮವು ಈ ದಾರ್ಷ್ಟ್ಯದ ಮಾನವರನ್ನು ಕ್ರಮಗೊಳಿಸಿ ನಿರ್ಬಲರನ್ನು ರಕ್ಷಿಸಲೆಂದೇ ಜಾಣನೂ, ಅನುಭಾವಿಯೂ, ಅನುಕಂಪಪೂರಿತನೂ ಆದ ಮನುಷ್ಯನ ದಯೆಯಿಂದ ರೂಪುಗೊಂಡಿದ್ದು.
ಒಟ್ಟಿನಲ್ಲಿ ಇಷ್ಟು ತಿಳಿದುಕೊಳ್ಳೋಣ. ಭಯವೇ ದೇವರ ಮೂಲ. ದಯವೇ ಧರ್ಮದ ಮೂಲ.

ಇನ್ನು ಹಲವಾರು ಆಯಾಮಗಳಿಂದ ಧರ್ಮವನ್ನು ವಿವಿಧ ದೇಶಗಳಲ್ಲಿ, ವಿವಿಧ ಕಾಲಗಳಲ್ಲಿ ವಿವರಿಸಲು ಯತ್ನಿಸಿದ್ದಾರೆ. ಆ ವಿವರಣೆಗಳಿಗೂ ಆಯಾ ಪ್ರದೇಶಗಳ ಸಾಮಾಜಿಕ ವಿದ್ಯಮಾನಗಳು ಕಾರಣವಾಗಿರುತ್ತವೆ. ಅವುಗಳನ್ನು ಮುಂದೆ ಸಂದರ್ಭಾನುಸಾರ ನೋಡೋಣ.

ಒಟ್ಟಾರೆ ಧರ್ಮ, ಸಂಪ್ರದಾಯ, ನಂಬಿಕೆ ಇತ್ಯಾದಿಗಳ ಸಂಕೋಲೆಯಲ್ಲಿ ದೇವರನ್ನು ಬಂಧಿಸಿ, ತಾವು ಸೃಷ್ಟಿಸಿದ ದೇವರನ್ನು ತಮ್ಮ ಸೃಷ್ಟಿಕರ್ತನನ್ನಾಗಿ ಮಾಡಿಕೊಂಡು, ತನ್ನ ಪ್ರತಿರೂಪದಂತೆ ದೇವರು ತಮ್ಮನ್ನು ಸೃಷ್ಟಿಸಿದ ಎಂದು ತಮ್ಮ ಪ್ರತಿರೂಪವನ್ನು ಅವನಿಗೆ ಆರೋಪಿಸಿದ ಹೆಗ್ಗಳಿಗೆ ನಮ್ಮ ಮಾನವ ಜನಾಂಗಕ್ಕಿದೆ.

ಮಾನವನ ಶಕ್ತಿಯ ವಿಕಾಸ, ವಿಸ್ತರಣೆಯ ಮತ್ತು ಸಾಮರ್ಥ್ಯದ ಭೀಕರತೆಗಳನ್ನು ಮಾನವನೇ ಅರಿಯುತ್ತಿದ್ದಂತೆ, ಮಾನವನೇ ಇದನ್ನು ಒಂದು ತಹಂಬದಿಗೆ ತರಲು ಮತ್ತೊಂದು ಪರಿಕಲ್ಪನೆಯನ್ನು ಸೃಷ್ಟಿಸಿದ ಅಥವಾ ಸೃಷ್ಟಿಯಾಗಿದ್ದ ದೇವರ ಪರಿಕಲ್ಪನೆಯನ್ನು ಗಟ್ಟಿಗೊಳಿಸಿದ. ಈ ದೇವರ ಪರಿಕಲ್ಪನೆಯು ನಿರ್ಬಲರಿಗೆ ಭರವಸೆಯಾದರೆ, ಮತ್ತೂ ಕೆಲವರಿಗೆ ಶೋಷಣೆಯ ಅಸ್ತ್ರವಾಗಿದ್ದು ಮಾತ್ರ ವಿಪರ್ಯಾಸ.

ವಿಕಾಸವಾದ ಮಾನವನ ಬುದ್ಧಿಮತ್ತೆ

ಭೌತಿಕವಾಗಿ ಮಾನವನ ಶಕ್ತಿಯ ವಿಕಾಸವಾದದ್ದೇನೂ ನಮಗೆ ಕಾಣುವುದಿಲ್ಲ. ಸಹಸ್ರಾರು ವರ್ಷಗಳ ಹಿಂದೆ ಇದ್ದಂತಹ ಮನುಷ್ಯನ ದೈಹಿಕ ಸಾಮರ್ಥ್ಯವನ್ನು ಅಥವಾ ಅದೇ ಶಾರೀರಿಕ ಬಲದ ಉದಾಹರಣೆಗಳನ್ನು ಈಗಲೂ ಕಾಣಬಹುದು. ಆದರೆ ಜೀವನ ಪದ್ಧತಿ, ಆಹಾರ ಮತ್ತು ಉಡುಗೆ ತೊಡುಗೆಗಳ ಪದ್ಧತಿಗಳು, ತಂತ್ರಜ್ಞಾನದ ಬಳಕೆಗಳು ಒಂದೇ ಬಗೆಯಾಗಿ ಕಾಣುವುದಿಲ್ಲ.

ಅದೇ ಹಳೆಯ ಬಗೆಯ ಶರೀರಗಳು, ಅವೇ ಕಣ್ಣುಗಳು, ಅವೇ ಕೈಗಳು, ಅವೇ ಕರಳುಗಳು, ಯಕೃತ್ತು ಇತ್ಯಾದಿ, ಆದರೆ ಅವುಗಳು ಬಳಸುತ್ತಿರುವ ವಸ್ತುಗಳು, ಸೇವನೆಗಳು ಮತ್ತು ಪಡೆಯುತ್ತಿರುವ ಪೋಷಣೆಗಳಲ್ಲಿ ಧ್ರುವಾಂತರ ಮತ್ತು ಯುಗಾಂತರಗಳ ವ್ಯತ್ಯಾಸಗಳನ್ನು ಕಾಣಬಹುದು. ಆಗಿಲ್ಲದ ತಂತ್ರಜ್ಞಾನ ಈಗಿದೆ. ಆಗಿಲ್ಲದ ಜೀವನಪದ್ಧತಿ ಈಗ ಬಳಕೆಯಲ್ಲಿದೆ.

ಈಗ ನಾವು ಉಪಯೋಗಿಸುತ್ತಿರುವ, ಉಪಭೋಗಿಸುತ್ತಿರುವ ಆವಿಷ್ಕಾರದ ಫಲಗಳು ದೀರ್ಘಕಾಲದ, ಹಲವು ಜನಗಳ ಪ್ರಯತ್ನಗಳ, ತಪ್ಪು ಮತ್ತು ಪ್ರಯತ್ನಗಳಿಂದ ರೂಪುಗೊಂಡಿರುವವೇ. ಹಾಗೆಯೇ ನಮ್ಮ ಮುಂದಿನ ಪೀಳಿಗೆಗಳ ಬಳಕೆ ಮತ್ತು ಜೀವನ ಪದ್ಧತಿಯಲ್ಲಿ ಇನ್ನೂ ಮುಂದುವರಿದ ಅಥವಾ ವಿಕಸಿತ ಬದಲಾವಣೆಗಳನ್ನು ಕಾಣುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.

ಆ ರೀತಿಯ ಬದಲಾವಣೆಗೆ ತಮ್ಮ ಬುದ್ಧಿ ಅಥವಾ ಮಿದುಳಿನ ಸಾಮರ್ಥ್ಯದ ಬಳಕೆಯೇ ಮತ್ತು ಅದರ ವ್ಯಾಪ್ತಿಯ ಅಪಾರ ಬಳಕೆಯೇ ಕಾರಣವಲ್ಲದೇ ಬೇರೇನೂ ಅಲ್ಲ. ಹಾಗೆಯೇ ಚಿಂತನಾ ಕ್ರಮ ಮತ್ತು ವಿಚಾರ ಧಾಟಿಯೂ ಕೂಡ ಬದಲಾಗುತ್ತಾ ಬಂದಿತು. ಆಗಿಲ್ಲದ ದೇವರು, ಧರ್ಮ, ನಂಬಿಕೆಗಳು ಈಗೆಲ್ಲಿಂದ ಬಂದವು? ಅವು ಹೇಗೆ ಬದಲಾಗದಂತಹ ಸತ್ಯವಾಯಿತು? ಯಾವ ದೇವರೂ, ಧರ್ಮವೂ ಈ ಜಗತ್ತಿನ ಸೃಷ್ಟಿಯಿಂದ ಇರಲಿ, ಮನುಷ್ಯನ ಸೃಷ್ಟಿಯಿಂದಲೇ ಇರಲಿಲ್ಲ.

ಮನುಕುಲ ವಿಕಾಸದ ಯಾವುದೋ ಒಂದು ಹಂತದಲ್ಲಿ ತನ್ನ ಆಲೋಚನೆಗಳಿಂದ ಉತ್ಪನ್ನವಾದ ವಿಚಾರಗಳಿಂದ ದೇವರು ಜಗತ್ತನ್ನು ಸೃಷ್ಟಿಸಿದನೆಂಬುದನ್ನು ಮನುಷ್ಯ ಹೇಗೆ ಗ್ರಹಿಸಿದ? ಕಾಣದ ದೇವರನ್ನು ಯಾರು, ಹೇಗೆ ಕಂಡ? ದೇವರೆಂಬುದು ಗ್ರಹಿಸಿದ, ವಿಚಾರ ಮಾಡಿದ, ಕಲ್ಪಿಸಿಕೊಂಡ, ವಿವಿಧ ಸತ್ವ, ಸಾರ, ಶಕ್ತಿಗಳಿಗೆ ಆರೋಪಿಸಿದಂತಹ ಪರಿಕಲ್ಪನೆಯೇ ಹೊರತು ಎಂದಿಗೂ ಸಾಕಾರಸ್ತಿತ್ವದಲ್ಲಿ ಕಾಣುವಂತಹ ಸತ್ಯವೇನಲ್ಲ.

ಆದರೂ ವಿಕಾಸವಾಗಿಸಲು ಒಪ್ಪದ ದೇವರ ಮತ್ತು ಧರ್ಮವನ್ನು, ಭಿನ್ನ ಬೇಧಗಳನ್ನು ಉಂಟು ಮಾಡುವ ಅವುಗಳ ಪ್ರಭಾವವು ಮನುಕುಲದ ಮೇಲೆ ಕಂಡೇ ಅದನ್ನು ಸುಧಾರಿಸಲು ಯತ್ನಿಸಿದರು. ಸಂಕೀರ್ಣವಾಗಿರುವ ಆ ನಿರಾಕಾರ ಮತ್ತು ಅಸಂಗತ ಪರಿಕಲ್ಪನೆಗಳನ್ನು ಸರಳೀಕರಣಗೊಳಿಸಿ ತಮ್ಮ ಸಹಜೀವಿಗಳನ್ನು ಒಂದು ಮಾನವೀಯ ಮತ್ತು ಉದಾರವಾದ ನೆಲೆಗಟ್ಟಿಗೆ ತರಲು ಶ್ರಮಿಸಿದರು.

ಆ ದೇವರ ಪರಿಕಲ್ಪನೆಗಳು ಜನಜೀವನದೊಳಗೆ ಅದೆಷ್ಟು ಹಾಸುಹೊಕ್ಕಾಗಿದ್ದವೆಂದರೆ, ಅವನ್ನು ನಿರಾಕರಿಸಿದರೆ, ಸುಧಾರಕರನ್ನೇ ತಿರಸ್ಕರಿಸುವ ಎಲ್ಲಾ ಸಾಧ್ಯತೆಗಳಿದ್ದವು. ಆದ್ದರಿಂದ ಆ ಪರಿಕಲ್ಪನೆಗಳನ್ನು ಸುಧಾರಿಸಲು, ತಮ್ಮ ಮುಂದುವರಿದ ಮತ್ತು ವಿಕಸಿತವಾದ ಚಿಂತನೆಗಳಿಂದ ವಿವರಿಸಲು, ಅರ್ಥ ನೀಡಲು ಪ್ರಯತ್ನಿಸಿದರು.

ಜೀವಂತವಿರುವುದರ ಲಕ್ಷಣವೇ ಬೆಳವಣಿಗೆ ಮತ್ತು ವಿಕಾಸ. ಆದರೆ, ತಮ್ಮದೇ ಆದಂತಹ ಕಾರಣಗಳಿಂದ ಈ ವಿಕಾಸವನ್ನಾಗಲಿ, ಬೆಳವಣಿಗೆಯನ್ನಾಗಲಿ ಒಪ್ಪದ ಮೂಲಭೂತವಾದಿಗಳು ಅವರನ್ನೇ ನಾಶಗೊಳಿಸಿದರು. ಅಥವಾ ಅವರ ನಂತರ ತಮ್ಮ ತೆಕ್ಕೆಗೇ ಅವರ ಚಿಂತನೆಗಳನ್ನೂ ಎಳೆದುಕೊಂಡು ಬಿಟ್ಟರು.

ದೇವರ ಸುಧಾರಕರು

ಕ್ರೈಸ್ತರ ದೇವರ ಪರಿಕಲ್ಪನೆಯ ಮೂಲ ಬ್ಯಾಬಿಲೋನಿಯನ್ನಿನ ಮಿಥಾಲಜಿಯ ಆಧಾರಿತ ವಿಚಾರಗಳಿಂದ ಮೂಡಿ, ಆದಮ, ಹವ್ವರಂತಹ ಆದಿ ಮಾನವರೂ ಮೊದಲ್ಗೊಂಡು ಯಹೂದಿಗಳ ಸಾಂಪ್ರದಾಯಿಕ ನಂಬುಗೆಗೆ ಎಡೆ ಮಾಡಿತ್ತು. ಅವುಗಳು ವಿಕಸಿತವಾದ ಹಂತಗಳು ಈಗ ನಮಗೆ ಬೇಡ. ಆದರೆ, ಯೇಸು ಎಂಬ ಸಮಾಜ ಸುಧಾರಕ ಅವರ ಪರಿಕಲ್ಪನೆಗಳನ್ನು ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ, ತಾತ್ವಿಕವಾಗಿ ಸುಧಾರಿಸುವ ನಿಟ್ಟಿನಲ್ಲಿ ಮಾನವತೆಯ ಮತ್ತು ಔದಾರ್ಯದ ನೆಲೆಗಟ್ಟಿನ ಸಮಾಜದಲ್ಲಿ ಎಲ್ಲರನ್ನೂ ಒಂದುಗೂಡಿಸುವ ಪ್ರಯತ್ನ ಮಾಡಿದ.

ಈಗಲೂ ಬಹಳಷ್ಟು ಕ್ರೈಸ್ತರು ಉಪಯೋಗಿಸುವ ಶಬ್ಧ ‘ಗಾಡ್ ಫಿಯರ್’. ದೇವರು ಎಂಬುವುದಕ್ಕೆ ಇಷ್ಟವಾಗದ್ದನ್ನು ಮಾಡದೇ ಹೋದರೆ ಅದರ ಆಗ್ರಹಕ್ಕೆ ಗುರಿಯಾಗುತ್ತೇವೆಂಬ ಪರಿಕಲ್ಪನೆ ಜನರು ನೈತಿಕವಾಗಿ ಬದುಕುವುದಕ್ಕೂ, ದುರ್ಮಾಗಿಗಳಾಗದೇ ಇರುವುದಕ್ಕೂ ಸಾಧ್ಯವಾಗುವುದಕ್ಕೆ ಸಹಾಯಕವಾದದ್ದು. ಉದ್ದೇಶ ಒಳ್ಳೆಯದೇ ಆದರೂ, ನಕಾರಾತ್ಮಕವಾದ ಅನುಸಂಧಾನದ ಬದಲಾಗಿ ಭೀತಿಯನ್ನು ಪ್ರೀತಿಗೆ ಬದಲಿಸಲು ಯೇಸು ಯತ್ನಿಸಿದ.

ಭೀತಿಯನ್ನು ಪ್ರೀತಿಯನ್ನಾಗಿ ಬದಲಿಸುವುದೂ ಕೂಡ ಅತಿ ಉನ್ನತವಾದ ಕ್ರಾಂತಿಕಾರಕ ನಡೆಯೇ ಆಗಿತ್ತು. ನಿರಾಕಾರವಾಗಿರುವ ದೇವರನ್ನು ತಂದೆಯೆಂಬಂತೆ ಭಾವನಾತ್ಮಕವಾಗಿ ಸಾಕಾರಗೊಳಿಸಿ, ಪ್ರೀತಿ ಮತ್ತು ವಾತ್ಸಲ್ಯಪೂರ್ಣವಾದ ತಂದೆಯಂತೆ ಅವನನ್ನು ಬಿಂಬಿಸಿ, ಅವನ ಇಷ್ಟಕ್ಕೆ ನಡೆದುಕೊಂಡು ಪ್ರೇಮಪೂರ್ಣ ಮತ್ತು ಔದಾರ್ಯಪೂರ್ಣವಾದ ಜನರ ಸಮಾಜವನ್ನು ಉಂಟುಮಾಡಲು ಯತ್ನಿಸಿದ.

ಭೀತಿಯ ಸ್ಥಾನದಲ್ಲಿ ಪ್ರೀತಿಯು ಬಂದಿತಾದರೂ, ಧಾರ್ಮಿಕತೆಯಾಗಲಿ, ಸಾಂಪ್ರದಾಯಕ ಧೋರಣೆಗಳಾಗಲಿ ಅದನ್ನು ಒಪ್ಪಲು ತಯಾರಿರಲಿಲ್ಲ. ರಾಜಕೀಯಪ್ರೇರಿತ ಅಥವಾ ಸ್ವಸ್ಥಾನಕೇಂದ್ರಿತರಾಗಿದ್ದ ಅಂದಿನ ಪುರೋಹಿತರೇ ಯೇಸುವಿನ ವಿಚಾರಗಳನ್ನು ಅವನ ದೇಹ ಸಮೇತ ನಾಶ ಮಾಡಲು ಯತ್ನಿಸಿ ಸಫಲರೂ ಆದರು. ಆದರೆ ಕ್ರೈಸ್ತರಲ್ಲಿ ಇಂದಿಗೂ ಪಾದ್ರಿಗಳೆಂಬ ಪುರೋಹಿತರು ಇದ್ದಾರೆ ಎಂಬುದು ವಿಪರ್ಯಾಸವೋ, ಅವಶ್ಯಕವೋ, ವ್ಯಂಗ್ಯವೋ; ವಿಭಿನ್ನ ನೆಲೆಗಳ ವಿಶ್ಲೇಷಣೆಗಳಲ್ಲಿ ವಿಭಿನ್ನ ರೀತಿಗಳಲ್ಲಿ ವ್ಯಕ್ತವಾಗುತ್ತದೆ.

ಆದರೆ ಆ ಪಾದ್ರಿಗಳು ಎಂತವರೆಂಬುದು ಧರ್ಮಾಧಾರಿತವಾದುದಲ್ಲ, ವ್ಯಕ್ತಿಗತವಾದದು. ಧರ್ಮದ ಲಾಂಛನದಡಿಯಲ್ಲಿ ತಮ್ಮ ಮಾನವೀಯ ಮತ್ತು ಉದಾರವಾದ ನೆಲೆಗಟ್ಟಿನ ಆಧಾರದಲ್ಲಿ ಧಾರ್ಮಿಕತೆಯನ್ನು ವಿವರಿಸುತ್ತಾರೆ ಮತ್ತು ಆಚರಿಸುತ್ತಾರೆ.

ಇರಲಿ, ಮುಂದೆ ಕ್ರೈಸ್ತ ಧರ್ಮದ ಅವತರಣವಾದ ಮೇಲೆ ಪಿತ, ಸುತ ಮತ್ತು ಪವಿತ್ರಾತ್ಮಗಳೆಂಬ ತ್ರಿಮೂರ್ತಿಯ ಪರಿಕಲ್ಪನೆಯಿಂದ ಸೈದ್ಧಾಂತಿಕವಾಗಿ ಮತ್ತಷ್ಟು ಸಂಕೀರ್ಣಗೊಂಡಂತಹ ವಿಷಯದ ಉಗಮವಾಯ್ತು. ತಮ್ಮನ್ನು ಪಾಪಿಯೆಂದು ನಕಾರಾತ್ಮಕ ಧೋರಣೆಯನ್ನೂ ಮತ್ತು ಪ್ರೀತಿಯೆಂಬ ಸಕಾರಾತ್ಮಕ ಧೋರಣೆಯನ್ನೂ ಒಟ್ಟೊಟ್ಟಿಗೇ ಸ್ವೀಕರಿಸಿದ್ದಾರೆ.

ಒಂದು ವೇಳೆ ಯೇಸುವೆಂಬ ಸುಧಾರಕನಿಗೆ ತನ್ನ ವಿಷನ್ ಮತ್ತು ಮಿಷನ್‍ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿದ್ದರೆ, ಇಂದು ಕ್ರೈಸ್ತಮತವೆಂಬುದೇ ಇರುತ್ತಿರಲಿಲ್ಲವೆಂದು ನನ್ನ ಗ್ರಹಿಕೆ. ಪಿತ, ಸುತ ಮತ್ತು ಪವಿತ್ರಾತ್ಮಗಳೂ ಇರುತ್ತಿರಲಿಲ್ಲ. ಆತನ ಸಾವಿನಾಧಾರಿತವಾದ ಆರಾಧನೆಗಳಾಗಲಿ, ಸಂಪ್ರದಾಯಗಳಾಗಲಿ ಇರುತ್ತಿರಲಿಲ್ಲ. ಪೂರ್ಣವಾಗಿ ಸಂವಹಿಸದ ಯೇಸುವಿನ ವಿಚಾರಗಳ ಅಲ್ಪ ಗ್ರಹಿಕೆಗಳು ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಗಳಾಗುತ್ತಾ ವಿಷಯಾಂತರವೇ ಆಗಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.

ಮನುಕುಲದಲ್ಲಿ ಶೋಷಣೆಗೆ ಒಳಗಾಗುವ ನಿರ್ಬಲರನ್ನು ಮಾನಸಿಕವಾಗಿ ಮತ್ತು ಆತ್ಮಿಕವಾಗಿ ಸದೃಢಗೊಳಿಸಲು ಉದ್ದೇಶಿಸಿದ್ದ ಯೇಸುವಿನ ಬೋಧನೆಗಳು ಮತ್ತು ದೌರ್ಜನ್ಯ ಹಾಗೂ ನಿರ್ಲಜ್ಜ ಕ್ರೌರ್ಯ ಸಂಪ್ರದಾಯದ ವಿರುದ್ಧವಾದ ಸಾತ್ವಿಕವಾದ ಕ್ರಾಂತಿಯಿಂದ ಕೂಡಿದ ಆತನ ಜೀವನ ಚರಿತ್ರೆಯ ಪರಿಕ್ಷಿಪ್ತ ರೂಪ ಬೈಬಲ್.

ಬೈಬಲ್ ಕ್ರಿಸ್ತನೆಂಬ ಜಾಣ ಮತ್ತು ದಯಾಹೃದಯದ ಒಂದು ಪರಿಚಯವನ್ನಷ್ಟೇ ನೀಡುವುದು. ಆತನ ವಾಸ್ತವ ರೂಪವನ್ನಲ್ಲ. ಹಲವಾರು ಬೈಬಲ್ಲುಗಳಿವೆ ಅವುಗಳಲ್ಲಿರುವ ಹೊಟ್ಟು ಮತ್ತು ಕಾಳುಗಳನ್ನು ಬೇರ್ಪಡಿಸುವುದು ಮತ್ತು ಅದರಿಂದ ಕ್ರಿಸ್ತನೆಂಬ ಮನುಕುಲದ ಕರುಣೆಯ ಬೀಜವನ್ನು ಹೆಕ್ಕಿ ತೆಗೆಯುವುದು ಸಾಧ್ಯ. ಆದರೆ ಸಧ್ಯಕ್ಕೆ ಈ ಲೇಖನಕ್ಕೆ ಆ ಉದ್ದೇಶವಿಲ್ಲ. ಮುಂದೆ ಕ್ರೈಸ್ತಧರ್ಮದ ಚರಿತ್ರೆಯ ಸಮಯದಲ್ಲಿ ಇದನ್ನು ವಿವರವಾಗಿ ನೋಡೋಣ.

ಇದೊಂದು ಉದಾಹರಣೆಯಷ್ಟೇ! ಯಾವುದೇ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಸುಧಾರಕನಿಗೆ ಹಲವಾರು ರಾಜಕೀಯ, ಸಾಮಾಜಿಕ ಅಡೆತಡೆಗಳಿದ್ದು ಅಷ್ಟು ಸುಲಭವಾಗಿ ಆತನ ದೃಷ್ಟಿಯಂತೆ ತನ್ನ ಮಿಷನ್‍ನನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಸುಧಾರಕರ, ಹೋರಾಟಗಾರರ ವಿಫಲ ಮಿಷನ್‍ಗಳ ಮುಂದುವರಿಕೆಗಳೇ ಧರ್ಮಗಳಾಗುವವು.

ಆದರೆ ಅವು ವಿಕಾಸಕ್ಕೆ ಮಾರ್ಗವಾಗದೇ, ಮಂಡೂಕಗಳ ಕೂಪಕ್ಕೆ ಮತ್ತೊಂದು ಕೊಡುಗೆಯಾಗುವುದು ಮನುಕುಲದ ದುರಾದೃಷ್ಟ. ಬುದ್ಧ, ಆದಿನಾಥ, ಮಹಾವೀರ, ಮಹಮದ್, ನಾನಕ್, ಬಸವ, ಬಹಾಯ್ ಯಾರೇ ಆಗಲಿ ಇದರಿಂದ ಹೊರತಲ್ಲ.

ಬೆಳವಣಿಕೆ ಮತ್ತು ವಿಕಾಸದ ಹಾದಿಯಲ್ಲಿಯೇ ಇರುವ ಜಗತ್ತಿನಲ್ಲಿ ಹೊಸ ಪ್ರವಾದಿಗಳು, ತೀರ್ಥಂಕರರು ಹುಟ್ಟಲಾರರೇಕೆ? ಹುಟ್ಟಿದರೂ, ಘೋಷಿಸಿಕೊಂಡರೂ ಕೇಳುವವರಾರು? ಒಪ್ಪುವುದಾದರೂ ಹೇಗೆ ಸಾಧ್ಯ?
ಹಾಗೊಮ್ಮೆ ಯಾರಾದರೂ ವೈಚಾರಿಕವಾಗಿ, ಸೈದ್ಧಾಂತಿಕವಾಗಿ ಮುಂದಾದರೂ ಜನ ಸಮೂಹ ಅವನ ಚಿಂತನೆಗಳ ಧಾರೆಯನ್ನು ಮೆಚ್ಚುವುದಕ್ಕೆ ಇಚ್ಛಿಸುವುದಿಲ್ಲ.

ತಮ್ಮ ಸಮಕಾಲೀನ ಯಾವುದೋ ಈ ವ್ಯಕ್ತಿಯನ್ನು ನಂಬಿಕೆಯ ಕೇಂದ್ರಕ್ಕೆ ಒಯ್ಯಲಾಗುವುದಿಲ್ಲ. ವಿಚಾರಗಳನ್ನು ಆಳಕ್ಕೆ ತೆಗೆದುಕೊಳ್ಳಲಾಗುವುದಿಲ್ಲ. ತಮ್ಮಂತೆ ಉಣ್ಣುವ, ಉಡುವಷ್ಟೇ ಮಾಡದೇ ಅತಿಮಾನುಷವಾದುದನ್ನು ಮಾಡಿದರೆ ಒಂದು ಹಂತಕ್ಕೆ ಒಪ್ಪಲು ಸಾಧ್ಯ! ಈ ಕಥೆ ಇಂದಿನದು ಮಾತ್ರವಲ್ಲ. ಅನಾದಿಕಾಲದಿಂದಲೂ ಹಾಗೆಯೇ ಇರುವುದು.

ಹಾಗಾಗಿಯೇ ಎಂದೋ, ಯಾವುದೋ ಕಾಲದಲ್ಲಿ ಏನೋ ಮಾಡಿ ಸತ್ತವರಷ್ಟೇ ದೇವರಾಗುತ್ತಾರೆ. ಈಗ ನಾನು ದೇವರೆಂದು ಘೋಷಿಸಿಕೊಂಡವರೆಲ್ಲಾ ಅಪಹಾಸ್ಯಕ್ಕೆ, ಟೀಕೆಗೆ ಅಥವಾ ವಿಮರ್ಶೆಗೆ ಗುರಿಯಾಗುತ್ತಾರೆ. ತಾನು ದೇವರೆನ್ನದೇ ಬರಿಯ ದೇವರ ಮಗನೆಂದು ಕರೆದುಕೊಂಡ ಕ್ರಿಸ್ತನಿಗೇ ಅಪಾಯ ತಪ್ಪಿರಲಿಲ್ಲ.

ಪುಟ್ಟಪರ್ತಿಯ ಸತ್ಯಸಾಯಿಬಾಬಾನ ಸಮಕಾಲೀನರಾದ ಮತ್ತು ಆತನ ವಿವಿಧ ವಿಷಯಗಳು ಸ್ಪಷ್ಟವಾಗಿ ತಿಳಿದಿರುವಂತಹ ಈ ನಮ್ಮ ಪೀಳಿಗೆಯು ಮುಗಿದಾದ ಮೇಲೆ ಮುಂಬರುವ ಪೀಳಿಗೆಯೊಂದು ಅವರ ಎಲ್ಲಾ ಪ್ಲಸ್ ಮತ್ತು ಮೈನಸ್ಸುಗಳನ್ನು ವಿವಿಧ ರೀತಿಗಳಲ್ಲಿ ಅರ್ಥೈಸುತ್ತಾ, ಈಗಿನ ಕೃಷ್ಣನ ಪರಿಕಲ್ಪನೆಯ ರೀತಿಯಲ್ಲಿ ಒಂದು ದೇವರನ್ನಾಗಿ ಸ್ಪಷ್ಟೀಕರಿಸಬಹುದು. ದೇವರೆನ್ನುವ ಅಭೂತಪೂರ್ವವಾದ, ಅತ್ಯದ್ಭುತವಾದ ಪರಿಕಲ್ಪನೆಗೆ ಸೇರಿಕೊಳ್ಳಲು ಮನುಷ್ಯನಿಗೆ ಹಲವು ದಾರಿಗಳುಂಟು.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ನಡುಪಂಥ ಅನ್ನುವ ಗುಳ್ಳೇನರಿ ಸಿದ್ದಾಂತ : ಭಾಗ -3

Published

on

  • ಲೋಕೇಶ್ ಪೂಜಾರಿ

ಒಬ್ಬ ನಡುಪಂಥೀಯ ನರಿ ಹೀಗೆ ಬರೆದುಕೊಳ್ಳುತ್ತಾನೆ. “ನಾನು ಬಿಲ್ಲವರ ಬಗ್ಗೆ ಬರೆದೆ ,ಅವರು ಜಗಳಕ್ಕೆ ಬಂದರು, ಬಂಟರ ಬಗ್ಗೆ ಮಾತಾಡಿದೆ ಅವರೂ ಜಗಳಕ್ಕೆ ನಿಂತರು, ಒಕ್ಕಲಿಗರ ಬಗ್ಗೆ ಬರೆದೆ ಅವರೂ ಯುದ್ದಕ್ಕೆ ಬಂದರು, ಲಿಂಗಾಯತ ರ ಬಗ್ಗೆ ಬರೆದೆ ಅವರೂ‌ ಜಗಳಕ್ಕೆ ನಿಂತರು.

ಕೊನೆಗೆ ನಾನು ಬ್ರಾಹ್ಮಣರ ಬಗ್ಗೆ ಬರೆಯಲು ಶುರುಮಾಡಿದೆ ,ಅವರು ಮಾತ್ರ ನಾನು ಎಷ್ಟೇ ಬರೆದರೂ ಯಾವುದೇ ಪ್ರತಿಕ್ರಿಯೆ ತೋರಲಿಲ್ಲ.
ಕೊನೆಗೆ ಯಾವುದು ಶ್ರೇಷ್ಠ ಎನ್ನುವ ನಿರ್ಧಾರಕ್ಕೆ ಬಂದೆ ” ಹೀಗೆ ಬರೆದುಕೊಂಡಾತ ಕೂಡಾ ಒಬ್ಬ ಬ್ರಾಹ್ಮಣ. ತನ್ನ ಮಗುವಿನ ವಿಸರ್ಜನೆ ಅದರ ಅಮ್ಮನಿಗೆ ಪರಿಮಳವೇ. ಅದನ್ನು ಮೊದಲು ಆತ ಅರಿತುಕೊಳ್ಳಬೇಕು.

ಮೊದಲನೇದಾಗಿ ವಿಷಯ ಇಲ್ಲದೇ ಜಾತಿ ವಿಚಾರ ಎತ್ತಿ ಬರೆಯಲು ಅವನ್ಯಾವ ದೊಣ್ಣೇ ನಾಯಕ?
ಮಹಾತ್ಮಾ ಗಾಂಧಿ ಕೇವಲ ಒಬ್ಬ ವ್ಯಕ್ತಿ ಅಲ್ಲ, ಅದೊಂದು ವಿಚಾರಮಂಟಪ. ಗಾಂಧೀ ಪೋಟೋ ಇಟ್ಟುಕೊಂಡು ಗೋಡ್ಸೆಯನ್ನು ಸಮರ್ಥನೆ ಮಾಡುವುದನ್ನು ನಾವು ಖಂಡಿತಾ ಪ್ರತಿಭಟಿಸುತ್ತೇವೆ. ಗಾಂಧಿ ಬದಲು ಗೋಡ್ಸೆ ಪೋಟೋ ನೇ ಇಟ್ಟುಕೊಂಡರೆ ಆತನ ಕರ್ಮ ಎಂದು ಸುಮ್ಮನೇ ಇರುತ್ತವೆ.

ಇವರುಗಳು ಎಷ್ಟು ಕುಟಿಲತನದ ಮನಸ್ಸು ಹೊಂದಿರುತ್ತಾರೆ ಎಂದರೆ, ಮೊದಲು ಶ್ರೀ ನಾರಾಯಣ ಗುರುಗಳ ಬಗ್ಗೆ ಪುಟಗಟ್ಟಲೆ ಬರೀತಾರೆ. ಅವರ ಕಾವ್ಯಗಳು ,ಪ್ರವಚನಗಳು ಆದ್ಯಾತ್ಮಿಕ ಜೀವನ ಇತ್ಯಾದಿ. ಜನರು ಈತನನ್ನು ಗುರುಗಳ ಬಗ್ಗೆ ಆದರಣೀಯ ಮನಸ್ಸು ಹೊಂದಿದ ಮನುಷ್ಯ ಎಂದು ತೀರ್ಮಾನಕ್ಕೆ ಬರುವ ತನಕ ಕಾಯುತ್ತಾರೆ. ಬಳಿಕ ಅಲ್ಲಿ ಅದ್ವೈತ ಬರುತ್ತದೆ. ಜೊತೆಗೆ ಶಂಕರಾಚಾರ್ಯರು ನುಸುಳುತ್ತಾರೆ. ಕೊನೆಗೆ ಶ್ರೀ ನಾರಾಯಣ ಗುರುಗಳ ಮಹಾನ್ ವ್ಯಕ್ತಿತ್ವಕ್ಕೆ ಶಂಕರಾಚಾರ್ಯರು ಕಾರಣ ಅನ್ನುವ ಸುಳ್ಳನ್ನು ಬಹಳ ಜನರ ಮೆದುಳಿಗೆ ತುಂಬಿಸುವುದರಲ್ಲಿ ಯಶಸ್ವಿಯಾಗುತ್ತಾರೆ.

ಗುರುಗಳು ಮಾಡಿದ್ದು ಬರೀ ಆಧ್ಯಾತ್ಮಿಕ ಕ್ರಾಂತಿ ಮಾತ್ರ ಅಲ್ಲ. ಅವರು ಶೈಕ್ಷಣಿಕ ಕ್ರಾಂತಿ ,ಸಾಮಾಜಿಕ ಕ್ರಾಂತಿ ,ಕೈಗಾರಿಕಾ ಕ್ರಾಂತಿ ಕೂಡಾ ಮಾಡಿದ್ದಾರೆ.
ಅವರ ಜೊತೆಗೆ ಬಹಳಷ್ಟು ಇತರರೂ ಇದ್ದರು.
ಮುಸ್ಲಿಂ ಮತ್ತು ಕ್ರೈಸ್ತ ಧರ್ಮದ ಶಿಷ್ಯರೂ ಇದ್ದರು. ಕೊನೆಗೆ ತಮ್ಮ ಜೀವಿತಾವಧಿಯಲ್ಲಿ ಅವರು ಕೊಟ್ಟು ಹೋಗಿದ್ದ ದ್ಯೇಯವಾಕ್ಯಗಳು.

01. “ವಿದ್ಯೆಯಿಂದ ಸಂಪನ್ನರಾಗಿ ,ಸಂಘಟನೆಯಿಂದ ಬಲಯುತರಾಗಿ”.

ಇದರ ಬಗ್ಗೆ ನಡುಪಂಥೀಯ ನರಿ ಏನೂ ಬರೆಯುವುದಿಲ್ಲ.ಸಂಘಟನೆಗಳು ಶಂಕರಾಚಾರ್ಯರ ಮೂಲಭೂತ ವಾದದ ಕೆಳಗೇ ಕೆಳವರ್ಗದ ಜನರ ಸಹಕಾರದೊಂದಿಗೆ ಮೆಲ್ವರ್ಗದ ಜನರ ಒಳಿತಿಗೆ ಇರಲಿ ಎಂದು ಅದರ ಆಸೆ ಇರುತ್ತದೆ.

02.  “ಒಂದೇ ಜಾತಿ, ಒಂದೇ ಮತ ,ಒಬ್ಬನೇ ದೇವರು.”

ಗುರುಗಳು ಸ್ಮಶಾನವಾಸಿ ಶಿವನ ಪೂಜೆ ಮಾಡಲು ಹೇಳಿದ ಕಾಲಘಟ್ಟದಲ್ಲಿ ಕೆಳಜಾತಿಯವರಿಗೆ ದೇವಸ್ಥಾನ ಪ್ರವೇಶ ಇರಲಿಲ್ಲ. ವೈದಿಕ ಮೋಸ ಅರ್ಥ ಮಾಡಿಕೊಳ್ಳಲು ವಿದ್ಯೆ ಇರಲಿಲ್ಲ. ಈಗ ಶಿವನ ಆರಾಧನೆಯ ಜೊತೆಗೆ ‌, ಇತರ ದೇವಸ್ಥಾನಗಳ ಪೂಜೆಯ ಹಕ್ಕನ್ನೂ ಪಡೆದುಕೊಳ್ಳಬಹುದು.

ವಿವಿಧತೆಯಲ್ಲಿ ಏಕತೆ ಇದ್ದ ಹಾಗೆ. ಏಕತೆಯಲ್ಲಿ ವಿವಿಧತೆ ಕೂಡಾ ಆದ್ಯಾತ್ಮದ ಭಾಗ. ಆ ವಿಚಾರದಲ್ಲಿ ನಡುಪಂಥೀಯ ನರಿಗಳು ಗುರುಗಳ ವಿಚಾರಧಾರೆಯನ್ನು ಗೊಜಲು ಮಾಡುತ್ತಾರೆ.

ದಶಾವತಾರಗಳಲ್ಲಿ ಇರುವುದು ಒಬ್ಬ ದೇವ ಮಹಾವಿಷ್ಣು ಅಂತಾ ಪುರಾಣದಲ್ಲಿ ಇದ್ದರೂ..
ಕೃಷ್ಣ ನ ದೇವಸ್ಥಾನ, ರಾಮನ ದೇವಸ್ಥಾನ ,ನರಸಿಂಹ ದೇವಸ್ಥಾನ ,ಪರಶುರಾಮ ನ ದೇವಸ್ಥಾನ ಗಳು ಇಲ್ಲವೇ???

ಮನುಷ್ಯ ವಿವಿಧ ರೂಪಗಳಲ್ಲಿ ಪೂಜೆ ಮಾಡಬಹುದು.ದೇವನು ಭಾವಪ್ರಿಯನೇ ಹೊರತು, ಆಚರಣೆಗಳ ಪ್ರಿಯ ಅಲ್ಲ. ದೇವರಿಗೆ ಭಾಷೆಯ ವರ್ತುಲವೂ ಇಲ್ಲ. ಸಂಸ್ಕೃತ ಅಗತ್ಯ ಇಲ್ಲ. ಯಾವ ಅರ್ಚಕನಿಗೂ ದೇವರು ಒಲಿದ ಉದಾಹರಣೆನೇ ಇಲ್ಲ. ಪೂಜೆ ಎನ್ನುವುದು ವೈಧಿಕ ಅಲ್ಲವೇ ಅಲ್ಲ.

03.  “ಶ್ರೀ ನಾರಾಯಣ ಗುರುಗಳು ಹೇಳಿದ್ದು
ಧಾರ್ಮಿಕ ಸಿದ್ದಾಂತಗಳು ವಾದಿಸಲಿಕ್ಕೂ ಅಲ್ಲ ,ವಾದಿಸಿ ಜಯಿಸಲಿಕ್ಕೂ ಅಲ್ಲ. ಅವು ಸರ್ವರ ಸಮನ್ವಯ ಜೀವನಕ್ಕೆ ಜೀವಾಳವಾಗಬೇಕು. ಮನುಷ್ಯನನ್ನು ಒಳ್ಳೆಯ ಮನುಷ್ಯನಾಗಿ ಮಾಡುವುದೇ ಎಲ್ಲಾ ಧರ್ಮಗಳ ಉದ್ದೇಶಗಳು. ಮತ ಯಾವುದಾದರೇನು ಮನುಷ್ಯ ಒಳ್ಳೆಯವನಾಗರೆ ಸಾಕು”.

ನಡುಪಂಥ ದ ನರಿಗಳು ಯಾವ ಕಾರಣಕ್ಕೂ ಇದರ ಬಗ್ಗೆ ಹೇಳುವುದಿಲ್ಲ. ಪ್ರತಿಯೊಂದಕ್ಕೂ ಪುರಾಣವನ್ನೇ ಎಳೆದು ತರುತ್ತಾರೆ. ಒಟ್ಟಿನಲ್ಲಿ ಶೂದ್ರ ಮಂತ್ರ ಪಠನ ಮಾಡಿದರೆ ಆತನ ಕಿವಿಗೆ ಕಾದ ಸೀಸೆಯನ್ನು ಹುಯ್ಯಬೇಕು ಎಂದು ಹೇಳಿದ ಶಂಕರಾಚಾರ್ಯರನ್ನು
ಸುಧಾರಣಾವಾದದ ಶ್ರೀ ನಾರಾಯಣಗುರುಗಳ ನಡುವೆ ತರಬೇಕು.

04. ನಾರಾಯಣ ಗುರುಗಳು ಹೇಳಿದ್ದು, ” ಹಿಂದುಳಿದ ಜನಾಂಗಳು ಅಂದಾನುಕರಣೆಗೆ ಮಾಡುವ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು.ಮದುವೆ ಕೂಡಾ ಸರಳವಾಗಿ ನಡೆಯಬೇಕು”

ನಡುಪಂಥೀಯ ನರಿಗಳು ಜ್ಯೋತಿಷ್ಯ ದ ಬಗ್ಗೆ ಮಾತಾಡಿ ಅದು ಕೂಡಾ ಸನಾತನ ದ ಭಾಗ ಅಂತಾವೆ. ಗುರುಗಳು ಹೇಳಿದ್ದಕ್ಕೆ ಅದು ಸಂಪೂರ್ಣ ವ್ಯತಿರಿಕ್ತ. ನಾರಾಯಣ ಗುರುಗಳು ಆದ್ಯಾತ್ಮಿಕತೆಯನ್ನು ಸಾಮಾಜಿಕ, ಶೈಕ್ಷಣಿಕ ಕ್ರಾಂತಿಗೆ ಬಳಸಿಕೊಂಡರೆ, ಈ ನರಿಗಳು ಕಪಟ ಆದ್ಯಾತ್ಮಿಕತೆಯನ್ನು ನಟಿಸಿ
ಜನರೊಳಗೆ ಕೀಳರಿಮೆ ಮತ್ತು ಶ್ರೇಷ್ಠತೆ ಎರಡನ್ನೂ ಬಿತ್ತಿ ವಿಘಟನೆಗೆ ಕಾರಣವಾಗುತ್ತವೆ.

ಈ ನರಿಗಳು ಶ್ರೀ ನಾರಾಯಣ ಗುರುಗಳ ಹೆಸರನ್ನು ಬಳಸಿಕೊಳ್ಳುವುದೇ ಅವರ ಪುಕ್ಕಲು ತನಕ್ಕೆ ದೊಡ್ಡ ನಿದರ್ಶನ. ಇನ್ನು ಅಂಬೇಡ್ಕರ್ ವಿಚಾರಕ್ಕೆ ಬರುವುದಾದರೆ, ಅಂಬೇಡ್ಕರ್ ಭೌದ್ಧ ಧರ್ಮ ಸ್ವೀಕಾರ ಮಾಡಿದ ಬಗ್ಗೆ ಎಲ್ಲಾದರೂ ಬರೆದಿದ್ದಾರ ನೋಡಿ. ಡೋಂಗಿ ಆದ್ಯಾತ್ಮ ಸಿದ್ದಾಂತಿಗಳು ಶುರುಮಾಡಬೇಕಾಗಿರುವುದೇ ಅಲ್ಲಿಂದ.

ಅಂಬೇಡ್ಕರ್ ವಿಚಾರದಾರೆಗಳು ರಾಜಕೀಯ ಮತ್ತು ಸಾಮಾಜಿಕ ವಿಚಾರದ ಪಠ್ಯಗಳಾಗಿ ಭಾರತದಲ್ಲಿ ಜಾತಿವ್ಯವಸ್ಥೆ ಸಂಪೂರ್ಣ ನಿರ್ನಾಮ ಆಗುವ ತನಕ ಪ್ರತೀ ಮನುಷ್ಯನೂ ಓದಬೇಕಾಗಿರುವಂತಹದ್ದು.

ಆದರೆ ನಡುಪಂಥೀಯ ನರಿಗಳಿಗೆ ಸಂವಿಧಾನದ ರಚನೆಯಲ್ಲಿ ಭಾಗಿಯಾದ ತಮ್ಮ ಕುಲಸ್ಥರು, ಅಂಬೇಡ್ಕರ್ ರ ಜೀವನದಲ್ಲಿ ಅದ್ಯಾಪಕರಾಗಿ
ಬಂದ ತಮ್ಮ ಕುಲಸ್ಥರು.ಅಂಬೇಡ್ಕರ್ ರ ವೈವಾಹಿಕ ಜೀವನ ಇವನ್ನೇ ಮುಂದಿಟ್ಟು ಪುಟಗಟ್ಟಲೆ ಬರೀಬೇಕು ಅನ್ನಿಸುತ್ತದೆ.

ಅಂಬೇಡ್ಕರ್ ಜೊತೆಗೆ ಕಮ್ಯುನಿಸ್ಟ್ ಪಕ್ಷ ಕ್ಕೆ, ಕಾಂಗ್ರೆಸ್ ಗೆ ಜಗಳ ಇತ್ತು ಎಂದು ತೋರಿಸುವ ಆಸೆ ಇರುತ್ತದೆ.ಪ್ರಸ್ತುತ ಬಿಳಿಮಲೆಯವರೂ ಅಮೀನರೂ ಮೀನು ಗಸಿ ಒಳ್ಳೇದ ,ಅಥವಾ ನಾಟಿ ಕೋಳಿಯ ಅಂತಾ ತಮಾಷೆಗೆ ಚರ್ಚೆ ಮಾಡಿದರೂ ,ಅವರಿಬ್ಬರ ನಡುವೆ ಸಿದ್ದಾಂತಿಕ ಬಿನ್ನತೆ ಇತ್ತು ಎಂದು ನೂರಾರು ಸುಳ್ಳು ಗಳನ್ನು ಹಣೆದು ಬರೆಯುವ ಜಾಣತನ ಅವರಿಗೆ.

ತಾನು ಬರೆಯುವುದನ್ನು ಬೇರೆಯವರು ಮೆಚ್ಚಿಕೊಳ್ಳದೇ ಇದ್ದರೆ ತನಗೇನು, ತನ್ನ ಹೆಂಡತಿ ಮಕ್ಕಳು ,ನೆರೆಹೊರೆಯವರು ವಿರೋಧ ತೋರಿಸದೇ ಇದ್ದರೆ ಸಾಕು ಎಂದು ನಾಚಿಕೆ ಇಲ್ಲದೇ ಬರೆದುಕೊಳ್ಳುವ ಮನುಷ್ಯ ನಿಗೆ ತಾನು ಬರೆವ ಸುಳ್ಳು ಗಳಿಂದಾಗಿ ಎಡ ಬಲ ಎರಡೂ ಪಂಥದ ಬಹುದೊಡ್ಡ ಪಾಲೋವರ್ಸ್ ನ ಸೆಳೀತೇನೇ ಎನ್ನುವ ಹುಚ್ಚು ಆಸೆ.

ಬ್ರಾಹ್ಮಣರನ್ನು ಬೈದರೆ ಸುಮ್ಮನೇ ಇರುತ್ತಾರೆ ಎಂದು ಪದೇ ಪದೇ ಜಾತಿ ಹೆಸರೆತ್ತಿ ಮಾತಾಡುವ ಅವನಿಗೆ ನನ್ನ ಪ್ರಶ್ನೆ ಏನೆಂದರೆ ತಪ್ಪು ಮಾಡಿದಾಗ ಬೈದರೆ ಸುಮ್ಮನಿರದೇ ಏನು ಕೀಳುತ್ತಾರೆ ಅನ್ನುವುದು?

ಹೆಚ್ಚೆಂದರೆ ,ಬಿಲ್ಲವರು ಬೈದಾಗ ಬಂಟರನ್ನು, ಬಂಟರು ಬೈದಾಗ ಮೊಗವೀರರನ್ನು ,ಎಲ್ಲರೂ ಸೇರಿ ಬೈದಾಗ ಇನ್ಯಾರನ್ನೋ ಅಪ್ಪಿಕೊಂಡು ಪರಸ್ಪರ ಜಗಳ ಹತ್ತಿಸಿ ತನ್ನ ರಕ್ಷಣೆ ಮಾಡಿಕೊಳ್ಳಬಹುದಷ್ಟೇ.
ಅದನ್ನು ಬಿಟ್ಟು ಬೇರೇನೂ ಮಾಡುವ ನೈತಿಕ ಹಕ್ಕಿಲ್ಲ.

ಬಹುದೊಡ್ಡ ಮಠದ ಸ್ವಾಮೀಜಿ ಹೆಣ್ಣಿನ ಸಂಗ ಮಾಡಿ , ಅದು ಕೋರ್ಟ್ ನಲ್ಲಿ ಸಾಬೀತು ಆದರೆ.
ಸನ್ಯಾಸ ಕಳೆದು ಕೊಂಡ ಆತ ಪೀಠತ್ಯಾಗ ಮಾಡು ಅಂತಾ ಬೈದರೆ ಏನು ಮಾಡ್ತಾನೆ.
ಸಂಸಾರಿಯಾದರೂ ಮಠಾದೀಶನಾಗಿ ಇರಬಹುದು
ಎಂದು ವಾದ ಮಾಡಬೇಕು ಅಥವಾ ಸುಮ್ಮನೇ ಬಿದ್ದುಕೊಳ್ಳಬೇಕು.

ನಂದಳಿಕೆ ನಿರಂಜನ ಭಟ್ಟನಿಗೆ ,ಯಾಕಪ್ಪಾ ಉದ್ಯಮಿ ಬಾಸ್ಕರ ಶೆಟ್ಟಿ ಯವರನ್ನು ಕೊಂದು ಶವ ಕತ್ತರಿಸಿ ಹೋಮ ಕುಂಡಕ್ಕೆ ಹಾಕಿದೆ ಎಂದು ಕೇಳಿದರೆ ಏನು ಉತ್ತರ ಕೊಡುತ್ತಾನೆ? ಆದಿತ್ಯರಾವ್ ಗೆ ಯಾಕಪ್ಪಾ ಬಾಂಬ್ ಇಟ್ಟೆ ಎಂದು ಕೇಳಿದರೆ ಏನು ಉತ್ತರ ಕೊಡುತ್ತಾನೆ?

ತಪ್ಪು ಮಾಡಿ ಸಿಕ್ಕಿಬಿದ್ದ ಮೇಲೆ ಟೀಕೆ ಮಾಡಿದರೆ,
ಸುಮ್ಮನೇ ಇರುವುದೇ ಸಾತ್ವಿಕ ಗುಣ ಅಂತಾ ಬಡಕೊಳ್ಳುವ ನಡುಪಂಥೀಯ ನರಿಗೆ ,ನಾನು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುವ ತಾಖತ್ ಇದೆಯೇ?

ಸೂಲಿಬೆಲೆಗೆ ತಾನು ಮಾಡಿದ ಭಾಷಣಗಳೆಲ್ಲವೂ ಸತ್ಯ ಎಂದು ತೆರೆದ ವೇದಿಕೆ ಮುಂದೆ ಪುರಾವೆ ಸಮೇತ ವಿವರಿಸಲು ಹೇಗೆ ಸಾದ್ಯ ಇಲ್ಲವೋ..ಅದೇ ರೀತಿ ಚೊಕ್ಕವಾಗಿ ಕಪೋಲಕಲ್ಪಿತ ಕತೆಗಳನ್ನು ಬರೆದು ಸತ್ಯವನ್ನು ಅಡಿಗೆ ಹಾಕಿ ಕೂತವನಿಗೂ ಪ್ರಶ್ನೆಗಳಿಗೆ ಉತ್ತರಿಸುವ ನೈತಿಕ ಸ್ಥೈರ್ಯ ಇರದ ಕಾರಣದಿಂದನೇ ಬಾಗಿಲು ಹಾಕಿ ಒಳಗೆ ಕೂತಿರುವುದು. ಸುಳ್ಳುಗಳನ್ನು ಪುರಾವೆ ಸಮೇತ ನಿರೂಪಿಸುವುದು ಹೇಗೆ.?

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ನಡುಪಂಥ ಎನ್ನುವ ಗುಳ್ಳೇನರಿ ಸಿದ್ಧಾಂತ | ಭಾಗ‌ -2

Published

on

  • ಲೋಕೇಶ್ ಪೂಜಾರಿ

ನ್ಲಾ ಅದು ಮುಖದಲ್ಲಿ ಮೂಗು
ಎಂದಾಕ್ಷಣ ಪಟಕ್ಕನೆ ಮುಖ ಒರೆಸಿಕೊಳ್ತಾರೆ ಹೆಚ್ಚಿನವರು ಪಾಪ. ಹಾಗೆ ಮಾಡುವವರು ಮೂರ್ಖರಲ್ಲ.
ಸಾಟಿ ಮನುಷ್ಯನನ್ನು ನಂಬಿದವರು.

ಹೇಳುವುದನ್ನು ಗಂಬೀರವಾಗಿ ಸಂದೇಹ ಬರದಂತೆ ಹೇಳಿದರೆ, ಗಟ್ಟಿಯಾಗಿ ನಂಬಿ ಬಿಡ್ತಾರೆ. ಅದರಲ್ಲೂ ಬಿಸಿರಕ್ತದ ಯುವಕರು‌, ಕೂತು ಹೌದೇ ಅಲ್ಲವೇ ಎಂದು ಯೋಚನೆ ಮಾಡುವುದೇ ಇಲ್ಲ. ಕೆಲ ವರ್ಷಗಳ ಹಿಂದೆ ವಿಚಾರವಾದಿಯೊಬ್ಬರು ಮಹಾತ್ಮಾ ಗಾಂಧಿಯವರ ಉಡುಪಿ ಬೇಟಿಯ ಬಗ್ಗೆ ಬರಹವೊಂದನ್ನು ಬರೆದಿದ್ದರು.

ಉಡುಪಿಯ ಅಂದಿನ ಮಠಗಳು ಇಂದಿನವರು
ಊಹಿಸಲಾಗದಷ್ಟು ಕರ್ಮಠವಾಗಿದ್ದವು. ಅದು ರಾಜಾಶ್ರಯ ಮತ್ತು ಬ್ರಿಟಿಷ್ ಅಡಲಿತದ ಕಾಲ.

ಆ ವಿಚಾರವಾದಿಗಳ ಬರವಣಿಗೆ ಹೀಗಿತ್ತು…
“ಗಾಂಧಿಯವರು ಅಜ್ಜರಕಾಡು ಮೈದಾನದಲ್ಲಿ ಜನಸಂಪರ್ಕ ಸಭೆ ಮುಗಿದ ಬಳಿಕ ,ಉಡುಪಿ ಮಠಗಳಲ್ಲಿ ಇರುವ ಜಾತಿತಾರತಮ್ಯದ ಬಗ್ಗೆ ಕೇಳಿ, ದೇವಸ್ಥಾನಕ್ಕೆ ಹೋಗಲು ನಿರಾಕರಿಸಿದರು ಮತ್ತು ಹೋಗುವಾಗ ದಾರಿಯಲ್ಲಿ ಉಡುಪಿ ಕೃಷ್ಣ ಮಠವನ್ನು ತೋರಿಸಿ,‌ಇದೇನಾ ಆ ದೇವಸ್ಥಾನ ಎಂದು ಕೇಳಿದರು ”

ಆ ಪೋಸ್ಟ್ ಹಾಕಿದ ಮರುದಿನ ಚಕ್ರತೀರ್ಥ ಬರೆಯುತ್ತಾನೆ.”ಉಡುಪಿಯ Geography ಗೊತ್ತಿರುವವರಿಗೆ ಅರ್ಥ ಆಗುತ್ತದೆ ,ಉಡುಪಿಯಿಂದ ಕಾರವಾರಕ್ಕೆ ಹೋಗುವ ದಾರಿಯಲ್ಲಿ ಕೃಷ್ಣಮಠ ಬರಲು ಸಾದ್ಯವೇ ಇಲ್ಲ.” ಆತ ಬರೆದ ಆ ಪೋಸ್ಟ್ ಗೆ ಉಡುಪಿಯ ಹುಡುಗರೂ ಸೇರಿದಂತೆ ಸಾವಿರಾರು ಜನ ಲೈಕ್ ಕೊಡುತ್ತಾರೆ. ನೂರಾರು ಜನ ಆ ಪೋಸ್ಟನ್ನು ಷೇರ್ ಮಾಡುತ್ತಾರೆ.

ಗಾಂಧೀಯವರ ಲೇಖನ ಬರೆದಿದ್ದ ವಿಚಾರವಾದಿಯನ್ನು ಲೇವಡಿ ಮಾಡುತ್ತಾರೆ. ಮಹಾತ್ಮಾ ಗಾಂಧಿಯವರು ಎಣ್ಣೆ ಹೊಡೆಯಲು ತಲ್ಲೂರ್ ಬಾರ್ ಗೆ ಹೋದಾಗ ಕೃಷ್ಣ ಮಠ ಕಾಣಿಸಿದ್ದಾ ಎಂದೆಲ್ಲಾ ಲೇವಡಿ ಮಾಡಲಾಗುತ್ತದೆ.
ಸುಳ್ಳು ದರ್ಶನ ಮಾಡಿಸಿದ ಚಕ್ರತೀರ್ಥನಿಗೆ ಜೈಕಾರ ಕೂಗಲಾಗುತ್ತದೆ.

ಅದೇ ದಿನ ಚಕ್ರತೀರ್ಥ ನಾನು ಅವನ ವಾಲ್ ಗೆ ಹಾಕಿದ ಕಮೆಂಟ್ ಡಿಲೀಟ್ ಮಾಡಿ ನನ್ನನ್ನು block ಮಾಡುತ್ತಾನೆ. ಸತ್ಯ ಏನೆಂದರೆ ಮಹಾತ್ಮಾ ಗಾಂಧಿಯವರು ಉಡುಪಿಗೆ ಬೇಟಿ ನೀಡಿದ್ದ 1934ರಲ್ಲಿ ,ಉಡುಪಿಯಲ್ಲಿ ಒಂದೇ ಒಂದು ಟಾರು ಹಾಕಿದ ರಸ್ತೆ ಇರಲಿಲ್ಲ.
ವಿದ್ಯುತ್ ಅಂದರೆ ಏನು ಅಂತಾನೇ ಜನಕ್ಕೆ ಗೊತ್ತಿರದ ಕಾಲ.

ಅಜ್ಜರಕಾಡಿನಿಂದ ಕಾರವಾರ ಹೋಗುವಾಗ ಈಗಿನ ಕಿನ್ನಿಮುಲ್ಕಿಯ ರಸ್ತೆಯಲ್ಲಿ ಸಾಗಿ ಚಿತ್ತರಂಜನ್ ಸರ್ಕಲ್ ಮೂಲಕ ಕಲ್ಸಂಕ ಗುಂಡಿಬೈಲ್ ಮುಖಾಂತರ ನೇ ಹೋಗಬೇಕು.ಹಾಗೆ ಸಾಗುವಾಗ ಅನಂತೇಶ್ವರ ದೇವಸ್ಥಾನ ಸಹಿತ ಎಲ್ಲವೂ ಕಾಣಿಸಲೇ ಬೇಕು. ಯಾಕೆಂದರೆ ನಡುವೆ ಇರುವ ಕಟ್ಟಡಗಳೆಲ್ಲವೂ ನಂತರ ನಿರ್ಮಾಣವಾದವೇ. ರಾಷ್ಟ್ರೀಯ ಹೆದ್ದಾರಿ ,ರಾಜ್ಯಹೆದ್ದಾರಿ, ನದಿಗಳಿಗೆ ಸೇತುವೆಗಳು ಯಾವುದೂ ಇರಲಿಲ್ಲ.

ಆದರೆ ಪೋಸ್ಟ್ ನಲ್ಲಿ ರಂಪಾಟ ಮಾಡಿದ ಹುಡುಗರ ತಲೆಯಲ್ಲಿ ಗಾಂಧಿ ಯಾಕೆ ಅಜ್ಜರಕಾಡಿಂದ ಸೀದಾ ಕರಾವಳಿ ಬೈಪಾಸ್ ಗೆ ಬಂದು ರೊಯ್ ಅಂತಾ ಹೈವೇರಸ್ತೆಯಲ್ಲಿ ಹೋಗಿಲ್ಲ ಅಂತಾನೇ ಓಡುತ್ತಿರುತ್ತದೆ.
ಪಾಪ ಅವರಿಗೆ ಇತಿಹಾಸ ಗೊತ್ತಿಲ್ಲ. ಆ ಹೈವೇ ರಸ್ತೆ ನಿರ್ಮಾಣ ಆಗಿದ್ದೇ ಎಪ್ಪತ್ತರ ದಶಕದ ಮೇಲೆ. ಅದು ಇರಲೇ ಇಲ್ಲ. ಸತ್ಯ ಏನೆಂದು ಹೇಳಲು ಹೊರಟಾಗ ಚಕ್ರತೀರ್ಥ ನನ್ನನ್ನು block ಮಾಡಿದ‌.

ಚೊಕ್ಕಾಡಿಯ ತರಹನೇ ಸಾವಿರಾರು ಪೇಕ್ ಐಡಿಗಳನ್ನು ಜೊತೆಗೇ ಇಟ್ಟುಕೊಂಡು ಒರಿಜಿನಲ್ ಐಡಿಗಳನ್ನು ಬ್ಲಾಕ್ ಮಾಡುವ ನೂರಾರು ಜನ ಇದ್ದಾರೆ. ಇವುಗಳ ನರಿಬುದ್ದಿ ಬೆಳಕಿಗೆ ಬರಬೇಕಾದರೆ ನಾವು ಗಳು ಬರೀತಾನೇ ಇರಬೇಕು. ಸತ್ಯ ಹೇಳುತ್ತಾನೇ ಇರಬೇಕು.

ನಡುಪಂಥ ದ ನರಿ ಚಕ್ರವರ್ತಿ ‌ಸೂಲಿಬೆಲೆಯ ಬಗ್ಗೆ ಮಾತಾಡುತ್ತಾ ,ಆತ ಅತಿಯಾಗಿ ಉಪೇಕ್ಷೆಯ ಭಾಷಣ ಮಾಡುವುದು ಹೌದು ಆದರೆ ಆತನ ಸಮಾಜಸೇವೆಯನ್ನು ಮರೆಯಬಾರದು ಅನ್ನುತ್ತದೆ.
ಅಲ್ಲಿ ಸಮಾಜಸೇವೆ ಏನು ಅಂತಾ ಜಪ್ಪೆಂದರೂ ಬಾಯಿಬಿಡಲ್ಲ .

ಯಾಕೆಂದರೆ ಅದನ್ನು ಆತ ಕೂಡಾ ಬಾಷಣಗಳಲ್ಲಿ ಹೇಳುವುದೇ ಇಲ್ಲ. ದೇಣಿಗೆ ಎತ್ತಿ ಕರೆ ಕಲ್ಯಾಣಿ ಸ್ವಚ್ಚ ಮಾಡಲು ಕ್ಯೂನಲ್ಲಿ ನಿಂತಿದ್ದಾರೆ ಜನ.ಅವರಲ್ಲಿ ಮಾಜೀ IAS ಗಳೂ ಇಂಜಿನಿಯರ್ ಗಳೂ ಇದ್ದಾರೆ. ಈತನೇ ಯಾಕೆ ಬೇಕು? ಸುಳ್ಳು ಭಾಷಣಗಳ ಜೊತೆಗೆ ಆತನ ಸಮಾಜಸೇವೆಯ documentary ಬಿಡುಗಡೆಯಾದಾಗ ಮಾತ್ರ ತೂಕ ಸರಿಯಾಗುವುದು.

ಆತ ಅಂಜುಮಾನ್ ಇಸ್ಲಾಮಿಕ್ ಕಾಲೇಜಿನಲ್ಲಿ ಓದಿ ಹೊರಬಂದಾಗ ಕೈಯಲ್ಲಿ ಎಷ್ಟು ಕಾಸು ಇತ್ತು.
ನಿವೇದಿತಾ ಪ್ರತಿಷ್ಠಾನ ಮಾಡಿದ ಬಳಿಕ ಏನಾಯ್ತು?
ಜಾಗೋ ಭಾರತ್ , ಯುವಬ್ರಿಗೇಡ್ ಎಲ್ಲಾ ಮಾಡಿದ ಬಳಿಕ ಆತನ ಬಳಿ ಎಷ್ಟು ಅಸ್ತಿ ಇದೆ ಎಷ್ಟು ಕಾಸಿದೆ. ಅದನ್ನು ತಿಳಿದುಕೊಳ್ಳುವ ಅವಶ್ಯಕತೆ ಸಮಾಜಕ್ಕೆ ಇದೆ. ಹಾಗೆ ಮಾಡಿದಾಗ ಮಾತ್ರ ಆರುನೂರು ಢ್ರೋನ್ ಗಳ ಪ್ರವೀಣ ಒಂದೂ ಢ್ರೋನ್ ಪೂರ್ತಿ ಮಾಡಿಲ್ಲ ಎನ್ನುವಂತಹದೇ ಸತ್ಯ ಹೊರಗಡೆ ಬರುತ್ತದೆ.

ಭಾಷಣದಲ್ಲಿ ಸುಳ್ಳು ಮಾತಾಡಿರುವವರು ಜೊತೆಗೆ ಇರುವ ಹುಡುಗರ ಜೊತೆಗೂ ಮಾತಾಡಿರುತ್ತಾರೆ,‌ಮತ್ತು ಸಮಾಜವನ್ನೂ ವಂಚಿಸುತ್ತಾರೆ‌ ಎನ್ನುವುದು ಯಾವ ಮೂಡನಿಗಾದರೂ ಗೊತ್ತಾಗುತ್ತದೆ.ಮೊದಲು ನಾವೂ ಬರಿಯಬೇಕು. ಸುಳ್ಳಿನ ತೋರಣವನ್ನು ಸತ್ಯದ ಬಾಕಿನಿಂದ ಇರಿದು ಬೀಳಿಸಲೇ ಬೇಕು. ದಾರಿ ತಪ್ಪಿದ ಹುಡುಗರಿಗೆ ಸತ್ಯ ಏನು ಅಂತಾ ತಿಳಿಸಲೇ ಬೇಕು.

ಮಟನ್ ಅಂಗಡಿ ನಡೆಸುವವರು ” ಪ್ರಾಣಿಹಿಂಸೆ ಮಾಡಬಾರದು ” ಅಂತಾ ಭಾಷಣ ಮಾಡಿದ ಹಾಗೆ
ಅಸಹಿಷ್ಣುತೆ ಬಿತ್ತುವವರು ” ಅಸಹಿಷ್ಣುಗಳಿಗೆ ಹಿತಬೋದೆ” ಹೇಳ್ತಾರಂತೆ. ಸುಳ್ಳು ಹೇಳುವವರು ಮಹಾತ್ಮಾ ಗಾಂಧಿ ಬಗ್ಗೆ, ಮನುವಾದಿಗಳು ಶ್ರೀ ನಾರಾಯಣ ಗುರುಗಳ ಬಗ್ಗೆ, ಜಾತಿವಾದಿಗಳು ಅಂಬೇಡ್ಕರ್ ಬಗ್ಗೆ ಬಾಷಣ ಮಾಡಿದರೆ ಸುಮ್ಮನಿರುವುದು ಯಾಕೆ ಅನ್ನುವುದೇ ನನ್ನ ಪ್ರಶ್ನೆ..

ಕೆಲವು ಪ್ರಮುಖ ವಿಚಾರಗಳೊಂದಿಗೆ ನಾಳಿನ ಪೋಸ್ಟ್‌ ನೊಂದಿಗೆ ಚರ್ಚೆ ಮಾಡೋಣ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಒಲವೇ ಜೀವನ ಸಾಕ್ಷಾತ್ಕಾರ..!

Published

on

sakshtkara_suddidina
  • ಕ್ರಾಂತಿರಾಜ್ ಒಡೆಯರ್, ಸಹಾಯಕ ಪ್ರಾಧ್ಯಾಪಕರು, ಮೈಸೂರು

ನ್ನಡ ಚಲನಚಿತ್ರ ಲೋಕದ ದಿಗ್ಗಜ ನಿರ್ದೇಶಕರಲ್ಲೊಬ್ಬರಾದ ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶಿಸಿರುವ ಅದ್ಬುತ ಚಿತ್ರಗಳಲ್ಲಿ “ಸಾಕ್ಷಾತ್ಕಾರ” ಹಲವರಿಗೆ ಬಹಳ ಇಷ್ಟವಾಗುವ ಚಿತ್ರ. ಈ ಚಿತ್ರದಲ್ಲಿ, ನಾಯಕ ಡಾ ರಾಜಕುಮಾರ್ ಅವರ ತಂದೆ ಪಾತ್ರ ನಿರ್ವಹಿಸಿರುವ ಪೃಥ್ವಿರಾಜ್ ಕಪೂರ್ ಅವರು ಚಿತ್ರದಲ್ಲಿ ಹಲವು ಬಾರಿ ಹೇಳುವ ಘೋಷವಾಕ್ಯ “ಒಲವೇ ಜೀವನ ಸಾಕ್ಷಾತ್ಕಾರ”. ಈ ಘೋಷವಾಕ್ಯಕ್ಕೆ ಹೇಳಿ ಮಾಡಿಸಿದ ಹಾಗೆ ನಾಯಕ ರಾಜಕುಮಾರ್ ಅವರ ಪಾತ್ರ.

ಸೋದರ ಮಾವನ ಮಗಳನ್ನೇ ಮದುವೆ ಮಾಡಿಕೊಳ್ಳಬೇಕೆಂಬ ಷರತ್ತು ಹಾಕುವ ತಾಯಿ ಹಾಗೂ ಅದರಂತೆ ಒತ್ತಡದ ವಾತಾವರಣ ನಿರ್ಮಾಣ ಮಾಡುವ ಮನೆಯವರ ಮಾತನ್ನು ದಿಕ್ಕರಿಸಿ, ರಾಜಕುಮಾರ್ ಅವರು ತಂದೆಯ ಘೋಷವಾಕ್ಯ “ಒಲವೇ ಜೀವನ ಸಾಕ್ಷಾತ್ಕಾರ’ ದಂತೆ ತಾನು ಪ್ರೀತಿಸಿದ ಹುಡುಗಿ ಮೂಲ ನಕ್ಷತ್ರದವಳಾದರೂ, ಅವಳನ್ನೇ ವರಿಸಬೇಕೆಂದು ನಿರ್ದರಿಸಿದರೂ, ಅವರಿಬ್ಬರ ಮದುವೆ ಸಾಧ್ಯವಾಗದೇ, ಚಿತ್ರದ ನಾಯಕನ ಮನೆಯ ಜನರ ಕ್ರೂರತ್ವದಿಂದ ಸಾವಿಗೀಡಾಗುವ ನಾಯಕಿಯ ಮೃತದೇಹದ ಬಳಿ ಕುಳಿತು ಕಣ್ಣೀರಿಡುವ ನಾಯಕ ರಾಜಕುಮಾರ್, ಶವವಾಗಿ ಮಲಗಿರುವ ನಾಯಕಿಯ ಕೊರಳಿಗೆ ತಾಳಿಯನ್ನು ಕಟ್ಟಿ “ಒಲವೇ ಜೀವನ ಸಾಕ್ಷಾತ್ಕಾರ” ಎಂದು ಹೇಳುವ ದೃಶ್ಯ ಎಲ್ಲರ ಮನಕಲಕುವಂತೆ ಮಾಡುವುದರ ಜೊತೆಗೆ ಪ್ರೀತಿ, ಸಂಬಂಧ ಹಾಗೂ ವಿಶ್ವಾಸ ಎಂಬ ಪದಗಳ ಆದರ್ಶದ ಫಿಲಾಸಫಿಯನ್ನೇ ಹೇಳುತ್ತದೆ.

ಈ ಚಿತ್ರದಲ್ಲಿ ತೋರಿಸಿರುವ ಹಾಗೆ ಆದರ್ಶಮಯ ಪ್ರೀತಿಯನ್ನು ಒಂದು ಗಂಡಾಗಲಿ ಅಥವಾ ಹೆಣ್ಣಾಗಲಿ ಕಾಪಾಡಿಕೊಳ್ಳಲು ಸಾಧ್ಯವೇ ಎಂದು ಅವಲೋಕಿಸಿದಾಗ, ಇತಿಹಾಸದಲ್ಲಿ ಹಾಗೂ ವರ್ತಮಾನದಲ್ಲಿ ಕೆಲವು ಉದಾಹರಣೆಗಳು ಸಿಗಬಹುದು. ಆದರೆ ಮನುಷ್ಯರ ಸೈಕಾಲಜಿ ಇದರ ವಿರುದ್ಧವಾದ ದಿಕ್ಕಿನಲ್ಲಿ ಚಲಿಸುತ್ತದೆ. ಅದಕ್ಕಾಗಿಯೇ ಏನೋ ಒಂದು ಗಂಡು ಹೆಣ್ಣಿನ ಸಂಬಂಧದಲ್ಲಿ ವೈಮನಸ್ಸು, ಜಗಳ ಹಾಗೂ ದೋಷಾರೋಪದಿಂದ ಪ್ರಾರಂಭವಾಗಿ ಕೆಲವರ ಜೀವನದಲ್ಲಿ ವಿವಾಹೇತರ ಸಂಬಂಧಗಳು ಬೆಸೆದುಕೊಳ್ಳುವುದಲ್ಲದೇ, ಹಲವರ ಸಂಬಂಧಗಳು ವಿವಾಹ ವಿಚ್ಚೇದನದಲ್ಲಿ ಕೊನೆಗೊಳ್ಳುತ್ತವೆ.

ಇದು ಒಂಥರಾ “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ನೆಡೆಯುವುದೇ ಜೀವನ” ಎಂಬ ನಾಣ್ಣುಡಿಗೆ ಪೂರಕವಾದಂತೆ. ಒಟ್ಟಿನಲ್ಲಿ ಹೇಳುವುದಾದರೆ, ಒಂದು ಗಂಡು ಮತ್ತು ಹೆಣ್ಣಿನ ನಡುವಿನ ಆದರ್ಶಮಯ ಪ್ರೀತಿ ಅಥವಾ ಸಂಬಂಧ ಮನುಷ್ಯರ ಸೈಕಾಲಜಿಗೆ ವಿರುದ್ಧ ದಿಕ್ಕಿನಲ್ಲಿ ಚಲಿಸಬೇಕಾಗಿದ್ದು, ಅದಕ್ಕೆ ಬಹಳ ಸದೃಢ ಮನಸ್ಸು ಒಂದು ಗಂಡು ಹಾಗೂ ಹೆಣ್ಣು ಇಬ್ಬರಲ್ಲೂ ಇರಬೇಕಾಗುತ್ತದೆ. ಇಂತಹ ಸದೃಢ ಮನಸ್ಸುಗಳು ಇರಲು ಸಾಧ್ಯವೇ ಎಂದು ನನ್ನನ್ನೂ ಒಳಗೊಂಡಂತೆ ನನ್ನ ಸುತ್ತಲಿರುವ ವ್ಯಕ್ತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಮನುಷ್ಯರ ಜೀವನದ ಕೆಲವು ಸತ್ಯಗಳು ಅನಾವರಣಗೊಳ್ಳುತ್ತಾ ಹೋದವು.

ಎರಡು ದಿನಗಳ ಹಿಂದೆ, ನಾನು ಮತ್ತು ನನ್ನ ಮಡದಿ ದ್ವಿಚಕ್ರ ವಾಹನದಲ್ಲಿ ಹೋಗುವಾಗ, ಆ ರಸ್ತೆಯ ಬದಿಯಲ್ಲಿ ನಿಂತಿದ್ದ ಕಾರಿನಿಂದ ಒಬ್ಬ ಮಹಿಳೆ ಡೋರ್ ತೆಗೆದು ಹೊರ ಬರಲಾಗಿ, “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಸೆಳೆಯುವುದು ಮನಸ್ಸು” ಎಂಬ ಮನುಷ್ಯನ ಸೈಕಾಲಜಿ ಪ್ರಕಾರ ಕಾರಿನಿಂದ ಇಳಿಯುವ ಆ ಮಹಿಳೆಯತ್ತ ನೆಟ್ಟ ನನ್ನ ಕಣ್ಣುಗಳನ್ನು ಗಮನಿಸಿದ ನನ್ನ ಮಡದಿ, “ದಾರಿ ಮುಂದೆ ಇದೆ. ಸರಿಗೇ ನೋಡ್ಕಂಡು ಗಾಡಿ ಓಡ್ಸಿ” ಎಂದು ನನಗೆ ಹೇಳಲಾಗಿ, “ಚೆನ್ನಾಗಿದಾರಲ್ವ ನೋಡಕೆ” ಎಂದು ನಾನು ಮಡದಿಗೆ ಉತ್ತರ ಕೊಡಲಾಗಿ, ಇಬ್ಬರೂ ಆ ಸಂದರ್ಭದಲ್ಲಿ ನಕ್ಕು, ಮನೆಗೆ ತೆರಳಿದ ಮೇಲೂ ಆ ಸಂದರ್ಭವನ್ನು ನೆನೆದು ನನ್ನ ಮಡದಿ ನನ್ನನ್ನು ಕಿಚಾಯಿಸಿದ್ದೂ ಇದೆ. ನಮ್ಮಿಬ್ಬರ ನಡುವೆ ಇಂತಹ ಸಂದರ್ಭಗಳು ಬಂದಿರುವುದು ಹಲವಾರು.

ಕನ್ನಡ ಚಲನ ಚಿತ್ರದ ಮಾಜಿ ನಟಿ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ನನಗೆ ಬಹಳ ಇಷ್ಟ ಎಂದು ತಿಳಿದಿರುವ ನನ್ನ ಮಡದಿ, ರಮ್ಯಾ ಅವರ ಯಾವುದೇ ಚೆಂದದ ಚಿತ್ರ ಸಿಕ್ಕರೆ ನನಗೆ ಫೋನಿನ ಮೂಲಕ ಕಳುಹಿಸುತ್ತಾರೆ. ಹಾಗೆಯೇ ನನ್ನ ಮಡದಿಗೆ ನಟ ದರ್ಶನ್ ತೂಗುದೀಪ ಎಂದರೆ ನನಗಿಂತ ಇಷ್ಟ. ದರ್ಶನ್ ರ ಚೆಂದದ ಚಿತ್ರ ಹಾಗೂ ಅವರು ನಟಿಸಿರುವ ಚಲನ ಚಿತ್ರದ ತುಣುಕುಗಳನ್ನು ನನ್ನ ಮಡದಿಗೆ ನಾನು ಕಳುಹಿಸುತ್ತೇನೆ.

ಅಷ್ಟೇ ಅಲ್ಲದೇ, ಅವರು ನನ್ನ ಜೊತೆ ಇರುವಾಗ ನಮ್ಮ ಕಣ್ಣಿಗೆ ಕಾಣುವ ಚೆಂದದ ಪುರುಷರನ್ನು ನೋಡಿ ಪ್ರಶಂಸಿಸುವಾಗ, ನಾನು ಕೂಡ ಅವರೊಡನೆ ದನಿಗೂಡಿಸುತ್ತೇನೆ. ಇಷ್ಟಿದ್ದರೂ ನಮ್ಮಿಬ್ಬರಲ್ಲಿ ಯಾವತ್ತೂ ಕೂಡ “ಜೆಲಸಿ” ಎಂಬುದನ್ನು ನಾನು ಕಂಡಿಲ್ಲ. ನಾವಿಬ್ಬರೂ ಮನುಷ್ಯರ ಸೈಕಾಲಜಿ ಅನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದು, ಕ್ಷಣ ಮಾತ್ರಕ್ಕೆ ಬೇರೆಡೆ ಆಕರ್ಷಿತರಾದರೂ, ನಮ್ಮಲ್ಲಿರುವ ಸತ್ಯವನ್ನು ಅರಗಿಸಿಕೊಳ್ಳುವ ಗುಣ ಹಾಗೂ ಸಾಕ್ಷಾತ್ಕಾರ ಚಿತ್ರದಲ್ಲಿ ಡಾ ರಾಜಕುಮಾರ್ ಅವರು ಹೇಳುವ “ಒಲವು” ಎಂಬ ಭಾವನೆ ವಿಸ್ತಾರವಾದ ಜೀವನದಲ್ಲಿ ನಮ್ಮಿಬ್ಬರನ್ನು ಮನುಷ್ಯರ ಸೈಕಾಲಜಿ ಗೆ ವಿರುದ್ಧವಾಗಿ ನೆಡೆಯುವಂತೆ ಮಾಡುತ್ತಿದೆಯೇನೋ ಎಂಬುದು ನನ್ನ ಅನಿಸಿಕೆ.

ಒಂದು ಗಂಡು ಮತ್ತು ಹೆಣ್ಣಿನ ನಡುವೆ ಉಂಟಾಗುವ “ಒಲವು” ಎಂಬ ಭಾವನೆಗೆ ಮನುಷ್ಯರ ಸೈಕಾಲಜಿ ಪ್ರಚೋದಿಸುವ “ಜೀವನದ ತಾತ್ಕಾಲಿಕ ಆಕರ್ಷಣೆ” ಯನ್ನು ಮೀರಿಸುವ ಶಕ್ತಿ ಇದೆ ಎಂಬುದು ನನ್ನ ಅನುಭವದ ಅನಿಸಿಕೆ. ಈ “ಒಲವು” ಉಂಟಾಗಲು ಒಂದು ಗಂಡು ಹಾಗೂ ಹೆಣ್ಣಿನ ಆಸೆ ಮತ್ತು ಆದ್ಯತೆಗಳಲ್ಲಿ ಸಾಮ್ಯತೆ, ಇಬ್ಬರ ಜೀವನದ ಉದ್ದೇಶ ಹಾಗೂ ಗುರಿ ಸಾದಿಸಲು ಒಬ್ಬರಿಗೊಬ್ಬರು ಒತ್ತಾಸೆಯಾಗಿ ನಿಲ್ಲುವ ಮನೋಭಾವ, ಸ್ವಾತಂತ್ರ್ಯ ಹಾಗೂ ಸಮಾನತೆ, ಸ್ನೇಹಿತರ ಭಾವನೆ ಇವೆಲ್ಲದರಿಂದ ಕೂಡಿರುವ ವಾತಾವರಣ ಬಹಳ ಮುಖ್ಯ ಎಂದು ನನ್ನ ಅಭಿಪ್ರಾಯ.

ನನ್ನ ಕೆಲವು ಸ್ನೇಹಿತರು ಹಾಗೂ ಸಂಬಂಧಿಕರನ್ನೂ ನೋಡಿದ್ದೇನೆ. ಅದರಲ್ಲಿ ಕೆಲವರು ತಮ್ಮ ಕುಟುಂಬದ ಯಾರನ್ನೋ ಖುಷಿಪಡಿಸಲು, ಅವರ ಪೋಷಕರು ಗುರುತು ಪಡಿಸಿದವರನ್ನ ಮದುವೆ ಮಾಡಿಕೊಂಡು, ಮಡದಿಗಳಿಬ್ಬರ ನಡುವಿನ ಆಸೆ, ಗುರಿ, ಸಿದ್ದಾಂತ, ಜೀವನ ಶೈಲಿ, ಜೀವನದ ಉದ್ದೇಶ, ಆಲೋಚನೆ, ಸಮಾಜದ ಬಗೆಗಿನ ಪರಿಕಲ್ಪನೆ ಹಾಗೂ ಹವ್ಯಾಸಗಳಲ್ಲಿ ಅಜಗಜಾಂತರ ವ್ಯತ್ಯಾಸಗಳಿದ್ದು, ಒಬ್ಬರ ಒಟ್ಟಾರೆ ಜೀವನ ಶೈಲಿ ಕಂಡರೆ ಮತ್ತೊಬ್ಬರಿಗೆ ಕೋಪ. ಒಬ್ಬರ ಮೇಲೊಬ್ಬರು ದೋಷಾರೋಪ ಮಾಡಿಕೊಂಡು, ತಮ್ಮ ನಿಕಟವರ್ತಿಗಳೊಂದಿಗೆ ಮಡದಿಯ ಬಗೆಗೆ ದೂರನ್ನ ಹೇಳಿ, ತಾವಿರುವ ಪರಿಸ್ಥಿತಿಯ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸುವ ಸ್ಥಿತಿ ಇವರದು.

ಇದರ ಪರಿಣಾಮವಾಗಿ, ಇಬ್ಬರ ನಡುವಿನ ಮುಖಾಮುಖಿ ತಪ್ಪಿಸಲು ಏನೇನೋ ಕಾರಣಗಳನ್ನು ಹೇಳಿ ಮನೆಗೆ ತಡವಾಗಿ ಬರುವುದೋ, ಬರೀ ಔಪಚಾರಿಕ ಮಾತುಗಳನ್ನಷ್ಟೇ ಆಡಿ ಬೇರೆ ಕೆಲಸಗಳಲ್ಲಿ ಪಾಲ್ಗೊಳ್ಳುವುದೋ, ಯಾವುದಾದರೊಂದು ಕಾರಣಗಳನ್ನು ಹೇಳಿ ಎಷ್ಟು ಸಮಯ ಅಥವಾ ದಿನಗಳು ಸಾಧ್ಯವೂ ಅಷ್ಟು ದೂರ ಉಳಿಯುವುದನ್ನು ಮೊದಲಿಸಿ ವಿವಾಹೇತರ ಸಂಬಂಧಗಳಿಗೆ ಕೆಲವರು ಒಳಗಾಗಿದ್ದರೆ, ಕೆಲವರು ಈ ಅನ್ಯೋನ್ಯತೆ ಇಲ್ಲದ ಸಂಬಂಧ ಸಾಕೆಂದು ವಿವಾಹ ವಿಚ್ಚೇದನ ಪಡೆದು ತಮ್ಮ ಕಲ್ಪನೆಯ ಜೀವನವನ್ನು ನೆಡೆಸುತ್ತಿದ್ದಾರೆ. ಇನ್ನೂ ಹಲವರು ಸಮಾಜದ ಕಟ್ಟುಪಾಡುಗಳಿಗೆ ಹೆದರಿ ಕಷ್ಟವೋ ಸುಖವೋ “ಕಟ್ಟುಕೊಂಡಿದದ್ದರ ಜೊತೆ ಕೊನೆವರೆಗೂ ಸಾಯಬೇಕು” ಎಂದು ನಿಶ್ಚಯಿಸಿ ಜೀವನವನ್ನ ದೂಡುತ್ತಿದ್ದಾರೆ.

ಇನ್ನು ಈ ಯುವಕ ಯುವತಿಯರ ನಡುವಿನ “ಪ್ರೀತಿ” ಎಂಬ ಸಂಬಂದದ್ದು ಇನ್ನೊಂದು ವಿಚಿತ್ರ. ಇವರಿಗೆ ಮನುಷ್ಯರ ಸಹಜ ಸೈಕಾಲಜಿ ಸತ್ಯಗಳು ಆರ್ಥವಾಗದೇ, ಅಥವಾ ಅರ್ಥವಾದರೂ ಅದನ್ನು ಜೀರ್ಣಿಸಿಕೊಳ್ಳಲಾಗದೇ ಕೆಲವರು ತಮ್ಮ ಪ್ರೇಯಸಿ ಅಥವಾ ಪ್ರಿಯತಮನನ್ನು ದೂಷಿಸಿ, ದ್ವೇಷಿಸಿ , ತಮ್ಮ ನಡವಳಿಕೆಯಲ್ಲಿ ಬಾರೀ ಬದಲಾವಣೆ ಮಾಡಿಕೊಂಡು, ಅಡ್ಡ ದಾರಿಯನ್ನು ಹಿಡಿದಿದ್ದರೆ, ಇನ್ನು ಕೆಲವು ಮುಗ್ಧ ಮನಸ್ಸುಗಳು ತಮ್ಮ ಜೀವನದಲ್ಲಾದ ಕಹಿ ಘಟನೆಯಿಂದ ಹೊರಬರಲಾರದೆ ಖಿನ್ನತೆಗೆ ಒಳಗಾಗಿರುವುದನ್ನು ನಾನು ನೋಡಿದ್ದೇನೆ.

ಸಮಾಜದ ಎಲ್ಲ ವ್ಯಕ್ತಿಗಳ ಹಿತಬಯಸುವವನಾಗಿ ಹೇಳುವುದಾದರೆ, ಒಂದು ಗಂಡು ಅಥವಾ ಹೆಣ್ಣು, ಯುವ ವಯಸ್ಸಿನಲ್ಲಿ ಪ್ರೀತಿ ಎಂಬ ಸಂಕೋಲೆಯಲ್ಲಿ ಬೀಳುವ ಹಾಗೂ ಮದುವೆ ಎಂಬ ಸಂಬಂಧದಲ್ಲಿ ಬೆಸೆದುಕೊಳ್ಳುವ ಮೊದಲು ಈ “ಒಲವು” ಎಂಬ ಪದದ ಅಂಶಗಳಾದ ಸಿದ್ದಾಂತ, ಜೀವನ ಶೈಲಿ, ಜೀವನದ ಉದ್ದೇಶ, ಆಲೋಚನೆ, ಸಮಾಜದ ಬಗೆಗಿನ ಪರಿಕಲ್ಪನೆ, ಗೆಳೆತನ, ಹವ್ಯಾಸಗಳು ಹಾಗೂ ಇತ್ಯಾದಿಗಳಲ್ಲಿ ತಮ್ಮದೇ ಆಲೋಚನೆಯುಳ್ಳ ಜತೆಗಾರರನ್ನ ಹುಡುಕಿಕೊಳ್ಳುವ ಮೂಲಕ ಸಾಯುವವರೆಗೂ ಸಂತೋಷವಾಗಿ ಬದುಕಿ ತಮ್ಮ ಜೀವನದ ಉದ್ದೇಶವನ್ನು ಸಾರ್ಥಕಗೊಳಿಸಬಹುದು.

ಒಂದು ವೇಳೆ ಅನಿರೀಕ್ಷಿತವಾಗಿಯೋ ಅಥವಾ ಪೋಷಕರು ನಿಶ್ಚಯಿಸುವ ಒಪ್ಪಂದದ ಮದುವೆಗಳಿಂದ ಬೆಸೆದುಕೊಳ್ಳುವ ಸಂಬಂಧದಿಂದ “ಒಲವಿನ” ಅಂಶಗಳನ್ನ ನಿರೀಕ್ಷಿಸಲು ಆರಂಭದಲ್ಲಿ ಸಾಧ್ಯವಾಗದಿದ್ದರೂ, ಒಂದು ಗಂಡು ಹಾಗೂ ಹೆಣ್ಣಿನಲ್ಲಿ ಇರುವ ಮೆಚುರಿಟಿ ಹಾಗೂ ಪರಸ್ಪರ ತಿಳುವಳಿಕೆಯ ಗುಣಗಳಿದ್ದರೆ ಈ ಮನುಷ್ಯರ ಸಹಜ ಸೈಕಾಲಜಿ “ಇರುವುದೆಲ್ಲವ ಬಿಟ್ಟು ಇರುದುದರೆಡೆಗೆ ಜೀವನ” ಎಂಬ ಮಾತನ್ನು ಒಂದು ಗಂಡು ಮತ್ತು ಹೆಣ್ಣಿನ ವಿಸ್ತಾರ ಸಂಬಂಧದ ಪರಿಕಲ್ಪನೆಯಲ್ಲಿ ಸುಳ್ಳು ಮಾಡಿ, ಸಾಕ್ಷಾತ್ಕಾರ ಚಿತ್ರದ ಘೋಷವಾಕ್ಯ “ಒಲವೇ ಜೀವನ ಸಾಕ್ಷಾತ್ಕಾರ” ವನ್ನು ಸತ್ಯವಾಗಿಸಬಹುದು ಎಂಬ ಅನಿಸಿಕೆ ನನ್ನದು.

ಸುದ್ದಿದಿನ|ವಾಟ್ಸಾಪ್|9980346243

Continue Reading

Trending