Connect with us

ರಾಜಕೀಯ

ನಾನು ಜೆಡಿಎಸ್ ಬಿಡಲಿಲ್ಲ, ನನ್ನನ್ನು ಜೆಡಿಎಸ್‌ನಿಂದ ಉಚ್ಚಾಟನೆ ಮಾಡಿದರು : ಸಿದ್ದರಾಮಯ್ಯ

Published

on

ದಾವಣಗೆರೆ, ಸುದ್ದಿದಿನ : ನಾನು ಜೆಡಿಎಸ್ ಬಿಡಲಿಲ್ಲ, ನನ್ನನ್ನು ಜೆಡಿಎಸ್‌ನಿಂದ ಉಚ್ಚಾಟನೆ ಮಾಡಿದ್ದರು. ಧರಂಸಿಂಗ್ ಸರ್ಕಾರದಲ್ಲಿ ನಾನು ಉಪಮುಖ್ಯಮಂತ್ರಿಯಾಗಿದ್ದೆ, ಆ ಸ್ಥಾನದಿಂದ ನನ್ನನ್ನು ವಜಾ ಮಾಡಿದರು. ಇದಾದ ಒಂದು ವರ್ಷದ ನಂತರ ನಾನು ಕಾಂಗ್ರೆಸ್ ಸೇರಿದ್ದು. ನಾನು ಕಾಂಗ್ರೆಸ್ ಸೇರುವಾಗ ಕಾಂಗ್ರೆಸ್ ಅಧಿಕಾರದಲ್ಲಿ ಇರಲಿಲ್ಲ, ವಿರೋಧ ಪಕ್ಷದ ಸ್ಥಾನದಲ್ಲಿತ್ತು. ಹಣ, ಅಧಿಕಾರದಾಸೆಗೆ ಬೇರೆಯವರಂತೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಇನ್ನೊಂದು ಪಕ್ಷ ಸೇರಿದವನಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜಾರೋಷವಾಗಿ ಬಿಜೆಪಿ ಪಕ್ಷ ದುಡ್ಡು ಹಂಚ್ತಿದೆ, ಸಚಿವ ಕಾರಜೋಳ ದುಡ್ಡು ಹಂಚಿದ್ದು ಟಿವಿಯಲ್ಲಿ ಬರ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಜಾತಿ ಮೇಲೆ ಮತ ಕೇಳ್ತಿದ್ದಾರೆ, ಮಂತ್ರಿ ಮಾಡ್ತೀನಿ, ತಾಲ್ಲೂಕು ಮಾಡ್ತೀನಿ ಎಂದು ಆಶ್ವಾಸನೆ ಕೊಡ್ತಿದ್ದಾರೆ. ದೂರು ಕೊಟ್ಟರೂ ಕ್ರಮ ಇಲ್ಲ,
ಚುನಾವಣಾ ಆಯೋಗ ಅಸ್ತಿತ್ವದಲ್ಲಿದೆಯೇ? ಹದಿನೇಳು ಶಾಸಕರನ್ನು ಬಿಜೆಪಿ ದುಡ್ಡು ಕೊಟ್ಟೇ ಖರೀದಿಸಿದ್ದಕ್ಕೆ ಸಾಂದರ್ಭಿಕ ಸಾಕ್ಷ್ಯಗಳಿವೆ. ಈಗಿನ ಡಿಸಿಎಂ ಅಶ್ವಥನಾರಾಯಣ, ಶಾಸಕರಾದ ವಿಶ್ವನಾಥ್, ಲಿಂಬಾವಳಿ ಮತ್ತು ಯೋಗೇಶ್ವರ್ ಮನೆಗೆ ಬಂದು 5 ಕೋಟಿ ರೂ. ನೀಡಿದ್ದರು ಎಂದು ಮಾಜಿ ಸಚಿವ ಶ್ರೀನಿವಾಸಗೌಡ ವಿಧಾನಸಭೆಯಲ್ಲಿಯೇ ಹೇಳಿಲ್ವೆ? ಇನ್ನು ಏನು ಸಾಕ್ಷಿ ಬೇಕು? ದೇವದುರ್ಗಕ್ಕೆ ಯಡಿಯೂರಪ್ಪ ಹೋಗಿ ಜೆಡಿಎಸ್ ಶಾಸಕನ ಖರೀದಿಗೆ ಯತ್ನಿಸಿದ್ದು ಅಡಿಯೋ ಟೇಪ್‌ನಲ್ಲಿಲ್ವೇ? ಅದು ತಮ್ಮದೇ ಧ್ವನಿ ಎಂದು ಅವರು ಒಪ್ಪಿಕೊಂಡಿಲ್ವೆ? ಇದರ ಅರ್ಥ ಏನು? ಆತ್ಮಸಾಕ್ಷಿಗಿಂತ ಮಿಗಿಲಾದ ಸಾಕ್ಷಿ ಯಾವುದು? ಎಂದು ಪ್ರಶ್ನಿಸಿದರು.

ತಮ್ಮನ್ನು ಮಂತ್ರಿಯೂ ಮಾಡಬೇಕು ಹಾಗೂ ಉಪಚುನಾವಣೆಯಲ್ಲಿ ಹಣವನ್ನೂ ಖರ್ಚು ಮಾಡಬೇಕೆಂದು ಯಡಿಯೂರಪ್ಪ ಅವರ ಜೊತೆ ಅನರ್ಹರು ಮೊದಲೇ ಒಪ್ಪಂದ ಮಾಡಿಕೊಂಡಿದ್ದರು. ಹಾಗಾಗಿ ಉಪಚುನಾವಣೆಯಲ್ಲಿ ಬಿಜೆಪಿ ಕೋಟಿಗಟ್ಟಲೆ ಹಣ ಸುರಿಯುತ್ತಿದೆ, ನಮ್ಮ ಪಕ್ಷದಲ್ಲಿ ಹಣವಿಲ್ಲ‌. ಹಣ ಖರ್ಚು ಮಾಡುವ ವಿಚಾರದಲ್ಲಿ ಬಿಜೆಪಿ ಜೊತೆ ಸ್ಪರ್ಧೆ ಅಸಾಧ್ಯ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಬ್ರೇಕಿಂಗ್: ಕೇಂದ್ರ ಸಚಿವ ಸಂಪುಟಕ್ಕೆ ಸರ್ಜರಿ?

Published

on


ದೆಹಲಿ:  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮಂತ್ರಿ ಮಂಡಲದಲ್ಲಿ ಬಜೆಟ್ ಮಂಡನೆ ಯಾದ ಬಳಿಕ ಭಾರಿ ಬದಲಾವಣೆ ಆಗಲಿದ್ದು, ಆರ್ಥಿಕ ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಪರಿಣಿತರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ.

ದಾಳಿಂಬೆ ಬೆಳೆದರೆ ಕೈ ತುಂಬಾ ಕಾಸು

ದೇಶದ ಆರ್ಥಿಕ ಪರಿಸ್ಥಿತಿಯ ಸುಧಾರಣೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ಆರ್ಥಿಕ, ಬ್ಯಾಂಕಿಂಗ್ ಕ್ಷೇತ್ರದ ಪರಿಣಿತರಿಗೆ ಆದ್ಯತೆ ನೀಡಲಿದ್ದು, ಸಚಿವ ಸಂಪುಟದಲ್ಲಿ ಸ್ವಲ್ಪ ಬದಲವಣೆಗೆ ಮುಂದಾಗಿದೆ. ಬ್ರಿಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ವಿ. ಕಾಮತ್ ಹಾಗೂ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಶೀಘ್ರವೇ ಕೇಂದ್ರ ಸಚಿವ ಸಂಪುಟ ಸೇರಿಕೊಳ್ಳಲಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

Continue Reading

ರಾಜಕೀಯ

ಆ ಮಹಾತ್ಯಾಗಿ ನುಡಿದ ಭವಿಷ್ಯ ಸುಳ್ಳಾಗಲಿಲ್ಲ

Published

on

ಕಾನ್ಷೀರಾಂ ಮತ್ತು ಮಾಯಾವತಿ

ಇಂದು ಅಕ್ಕ ಮಾಯಾವತಿಯವರ 64 ನೇ ಹುಟ್ಟು ಹಬ್ಬ. ಅವರಿಗೆ ಭೀಮ ಶುಭಾಶಯಗಳನ್ನು ಕೋರುತ್ತಾ..

  • ಮಹೇಶ್ ಸರಗೂರು

ಅದು 1977 ರ ಚಳಿಗಾಲದ ಸಮಯ. ದೆಹಲಿಯ ಚಳಿ ಎಂದರೆ ಕೇಳಬೇಕೆ? ಚಳಿ ಎಂದರೆ ಅಂತಿಂಥ ಚಳಿಯಲ್ಲ. ಅತ್ಯಂತ ಭೀಕರವಾದ ಚಳಿ. ನರನಾಡಿಗಳಲ್ಲಿ ನಡುಕ ಹುಟ್ಟಿಸುವ ಚಳಿ.ಇಂತಹ ವಿಪರೀತ ಚಳಿಯ ಅವಧಿಯಲ್ಲೂ ಕಾನ್ಷೀರಾಮ್ ಸಾಹೇಬರು ಬಾಂಸೆಫ್ ಸಂಘಟನೆಯನ್ನು ಹುಟ್ಟುಹಾಕಲು ಹಗಲಿರುಳು ಹೆಣಗುತ್ತಿದ್ದರು.

ಇಂತಹ ಸಮಯದಲ್ಲಿ ಒಂದು ದಿನ ಕಾನ್ಷೀರಾಮ್ ಸಾಹೇಬರು ಮನದಲ್ಲಿ ಅದೇನೋ ಒಂದು ಗಟ್ಟಿ ನಿರ್ಧಾರ ಮಾಡಿಕೊಂಡು ಮೇಲಕ್ಕೆದ್ದರು. ಕಿವಿಗೆ ಮತ್ತು ಕುತ್ತಿಗೆಗೆ ಉಲ್ಲನ್ ಸ್ಕಾರ್ಫ್ ಸುತ್ತಿಕೊಂಡು ಸಹೊದ್ಯೋಗಿಯೊಬ್ಬನನ್ನು ಜೊತೆಗೆ ಕರೆದುಕೊಂಡು ಹೊರನಡೆದರು. ಆಗ ಸಮಯ ರಾತ್ರಿ ಒಂಭತ್ತು ಗಂಟೆ.

ದೆಹಲಿಯ ಬಹುತೇಕ ಜನರು ಆ ಕೊರೆಯುವ ಚಳಿಗೆ ಹೆದರಿಕೊಂಡು, ಬೆಚ್ಚನೆಯ ಹಾಸಿಗೆಯಲ್ಲಿ ಮೈ ತುಂಬಾ ಹೊದ್ದುಕೊಂಡು ಮಲಗಿದ್ದರು. ಇಂತಹ ಸಮಯದಲ್ಲಿ ದೆಹಲಿಯ ಇಂದ್ರಪುರಿ ಪ್ರದೇಶವನ್ನು ಪ್ರವೇಶಿಸಿದ ಕಾನ್ಷೀರಾಮ್ ಸಾಹೇಬರು ಮತ್ತು ಅವರ ಸಹೋದ್ಯೋಗಿ ಇಕ್ಕಟ್ಟಾದ ಓಣಿಯಲ್ಲಿ ನಡೆದು ಮನೆಯೊಂದರ ಬಾಗಿಲು ಬಡಿದರು.

ಅದೇ ತಾನೇ ಊಟ ಮುಗಿಸಿ ಓದುತ್ತಿದ್ದ ಹೆಣ್ಣುಮಗಳೊಬ್ಬಳು ಇಂತಹ ಅಪರಾತ್ರಿಯಲ್ಲಿ ಅದ್ಯಾರು ಬಾಗಿಲು ಬಡಿಯುತ್ತಿರಬಹುದೆಂದು ಯೋಚಿಸುತ್ತಲೇ ಬಾಗಿಲು ತೆರೆದು ನೋಡಿದರೆ ಎದುರಿಗೆ ಕಾನ್ಷೀರಾಮ್ ಸಾಹೇಬರು ನಿಂತಿದ್ದರು.

ಬಾಗಿಲು ತೆರೆದ ಆ ಹೆಣ್ಣು ಮಗಳು ಬೇರಾರೂ ಆಗಿರಲಿಲ್ಲ. ಅವರೇ ಮಾಯಾವತಿ.
ಆಧುನಿಕ ಭಾರತದ ರಾಜಕೀಯ ಇತಿಹಾಸದಲ್ಲಿಯೇ ಅಚ್ಚರಿಯ ಪವಾಡ ಸೃಷ್ಟಿಸಿದ ಆ ಇಬ್ಬರು ಮಹಾಮಹಿಮರು ಒಬ್ಬರಿಗೊಬ್ಬರು ಎದುರುಗೊಂಡ ಮೊದಲ ಕ್ಷಣ ಅದಾಗಿತ್ತು.

ಅಕ್ಕ ಮಾಯಾವತಿಯವರಿಗೆ ಒಂದು ಕ್ಷಣ ಉಸಿರು ನಿಂತಂತಾಯಿತು. ಕಾರಣ ಅಲ್ಲಿ ನಿಂತವರು ವಾಸ್ತವವಾಗಿ ಕಾನ್ಷೀರಾಮ್ ಸಾಹೇಬರಾಗಿದ್ದರೂ ಅವರ ರೂಪ, ಪ್ರತಿರೂಪ ಸಾಕ್ಷಾತ್ ಭಗವಾನ್ ಬುದ್ದನಂತಿತ್ತು. ಭೋಧಿಸತ್ವ ಬಾಬಾಸಾಹೇಬ್ ಅಂಬೇಡ್ಕರ್ ರವರನ್ನು ಹೋಲುತ್ತಿತ್ತು.

ತನ್ನ ಕಣ್ಣನ್ನು ತಾನೇ ನಂಬದಾದ ಮಾಯಾವತಿಯವರು ಸಾವರಿಸಿಕೊಂಡು ಕಾನ್ಷೀರಾಮ್ ಸಾಹೇಬರನ್ನು ಮನೆಯೊಳಗೆ ಬರಮಾಡಿಕೊಂಡರು. ಕಾನ್ಷೀರಾಮ್ ಸಾಹೇಬರ ಆಕಸ್ಮಿಕ ಆಗಮನ ಮಾಯಾವತಿಯವರ ಮನೆಯಲ್ಲಿ ಮಿಂಚಿನ ಸಂಚಾರವನ್ನುಂಟುಮಾಡಿತ್ತು.

ಮಾಯಾವತಿಯವರ ತಂದೆತಾಯಿಗಳು ಗಡಬಡಿಸಿ ಬಂದು, ಆದರದಿಂದ ಸ್ವಾಗತಿಸಿ, ಪರಸ್ಪರ ಕ್ಷೇಮ ಸಮಾಚಾರ ವಿನಿಮಯ ಮಾಡಿಕೊಂಡರು. ಬಾಂಸೆಫ್ ಕೆಲಸದ ಮೂಲಕ ಅದಾಗಲೇ ಉತ್ತರ ಭಾರತದಾದ್ಯಂತ ಮನೆಮಾತಾಗಿದ್ದ ಕಾನ್ಷೀರಾಮ್ ಸಾಹೇಬರು ಇಂತಹ ಅಪರಾತ್ರಿ ಹೊತ್ತಲ್ಲಿ ಮನೆಗೆ ಬಂದಿದ್ದು ಪ್ರಭುದಾಸ್ ದಯಾಳ್ ಮತ್ತು ರಾಮರತಿಯವರಿಗೆ ಬಿಡಿಸಲಾಗದ ಒಗಟಿನಂತಾಗಿತ್ತು. ಏತಕ್ಕೆ ಬಂದಿದ್ದಾರೋ, ಏನು ಸುದ್ದಿ ತಂದಿದ್ದಾರೋ ಎಂಬ ಅಳುಕು ಅವರದಾಗಿತ್ತು.

ಅಂಬೇಡ್ಕರ್ ಆಶಯಗಳಿಗೆ ದ್ರೋಹವೆಸಗಿದ್ದೀರಿ

ಕಾನ್ಷೀರಾಮ್ ಸಾಹೇಬರು ಆ ಅಪರಾತ್ರಿಯಲ್ಲಿ ಮಾಯಾವತಿಯವರನ್ನು ಹುಡುಕಿಕೊಂಡು ಬರಲು ಕಾರಣವೊಂದಿತ್ತು. ಆ ಕಾರಣವೇನೆಂದರೆ, 1977 ರ ಸೆಪ್ಟೆಂಬರ್ ನಲ್ಲಿ ಸರ್ಕಾರದ ವತಿಯಿಂದ ದೆಹಲಿಯ Constitution club ನಲ್ಲಿ ಮೂರು ದಿನಗಳ ಕಾಲ ‘ಜಾತಿ ವಿನಾಶ’ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಅಂದಿನ ಕೇಂದ್ರ ಆರೋಗ್ಯ ಸಚಿವರಾಗಿದ್ದ ಮತ್ತು ಹೆಸರಾಂತ ಸಮಾಜವಾದಿ ನಾಯಕರಾಗಿದ್ದ ರಾಜ್ ನಾರಾಯಣ್ ರವರು ತಮ್ಮ ಭಾಷಣದಲ್ಲಿ ಅವಹೇಳನಕಾರಿಯಾದ ‘ಹರಿಜನ’ ಪದವನ್ನು ಪದೇ ಪದೇ ಬಳಸಿ ಮಾತನಾಡುತ್ತಿದ್ದರು.

ಅಲ್ಲೇ ಹಾಜರಿದ್ದ ಸರ್ಕಾರಿ ಶಿಕ್ಷಕಿ ಮಾಯಾವತಿಯವರು ಎದ್ದು ನಿಂತು ರಾಜ್ ನಾರಾಯಣ್ ರವರನ್ನು ತರಾಟೆಗೆ ತೆಗೆದುಕೊಂಡರು. ಪರಿಶಿಷ್ಟ ಜಾತಿಯವರಿಗೆ ಹರಿಜನರೆಂದು ಕರೆದು ಅಂಬೇಡ್ಕರ್ ಆಶಯಗಳಿಗೆ ದ್ರೋಹವೆಸಗಿದ್ದೀರಿ. ನಿಮ್ಮ ಘನತೆ ಮತ್ತು ಗೌರವಗಳನ್ನು ಮರೆತು ಬೇಜವಾಬ್ದಾರಿಯಿಂದ ಮಾತನಾಡಿದ್ದೀರಿ. ನೀವು ಈ ಕೂಡಲೇ ಬಹಿರಂಗ ಕ್ಷಮೆ ಕೇಳಬೇಕು ಎಂದು ಸಭೆಯಲ್ಲಿ ಕ್ಷಮೆ ಕೇಳಿಸಿ ಎಲ್ಲರ ಗಮನ ಸೆಳೆದಿದ್ದರು. ಈ ಘಟನೆಯಿಂದ ಮಾಯಾವತಿಯವರು ಎಲ್ಲರ ಕೇಂದ್ರ ಬಿಂದುವಾದರು.

ಇದೇ ಸಭೆಯಲ್ಲಿದ್ದ ಕೆಲವು ಬಾಂಸೆಫ್ ಕಾರ್ಯಕರ್ತರು ಮಾಯಾವತಿಯವರ ವಿಷಯವನ್ನು ಕಾನ್ಷೀರಾಮ್ ಸಾಹೇಬರಿಗೆ ವಿವರಿಸಿ, ಮಾಯಾವತಿಯವರು ನಮ್ಮ ಸಂಘಟನೆಯಲ್ಲಿದ್ದರೆ ಬಾಂಸೆಫ್ ಗೆ ಹೆಚ್ಚು ಬಲ ಬರುತ್ತದೆ ಎಂದು ತಿಳಿಸಿದರು. ಬಾಂಸೆಫ್ ಕಾರ್ಯಕರ್ತರ ಮಾತಿನಿಂದ ಉತ್ತೇಜಿತರಾದ ಕಾನ್ಷೀರಾಮ್ ಸಾಹೇಬರು ಮಾಯಾವತಿಯವರ ಅರಿವಿಗೆ ಬಾರದಂತೆ ಅವರ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಮಾಯಾವತಿಯವರ ಚಿಂತನೆಗಳನ್ನು ಗಮನವಿಟ್ಟು ಆಲಿಸಿದರು. ಅದಕ್ಕಾಗಿ ಮಾಯಾವತಿಯವರನ್ನು ಹುಡುಕಿಕೊಂಡು ಬಂದಿದ್ದರು.

ಐಎಎಸ್ ಅಧಿಕಾರಿಯಾಗಿ ಶೋಷಿತ ಜನಾಂಗಗಳ ಸೇವೆ ಮಾಡಬೇಕು

ಕಾನ್ಷೀರಾಮ್ ಸಾಹೇಬರು ಮಾಯಾವತಿಯವರ ಜೊತೆ ಸುಮಾರು ಒಂದು ಗಂಟೆಗಳ ಕಾಲ ಭಾರತದ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗತಿಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ಮಹಾತ್ಮ ಜ್ಯೋತಿಭಾಫುಲೆಯವರಿಂದಿಡಿದು ಬಾಬಾಸಾಹೇಬ್ ಅಂಬೇಡ್ಕರ್ ವರೆಗಿನ ಎಲ್ಲಾ ಮಹಾಪುರುಷರ ಹೋರಾಟವನ್ನು ಮತ್ತು ಅದರ ಮುಂದುವರಿಕೆಯ ಮಹತ್ವವನ್ನು ಮನಮುಟ್ಟುವಂತೆ ವಿವರಿಸಿ ಹೇಳಿದರು.

ಇದಾದ ಬಳಿಕ ಮಾಯಾವತಿಯವರ ಜೀವನದ ಆಸೆ ಆಕಾಂಕ್ಷೆಗಳನ್ನು, ದ್ಯೇಯೋದ್ದೇಶಗಳನ್ನು ಕೇಳಿ ತಿಳಿದುಕೊಂಡರು. ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ತಾನು ಐಎಎಸ್ ಅಧಿಕಾರಿಯಾಗಿ ಶೋಷಿತ ಜನಾಂಗಗಳ ಸೇವೆ ಮಾಡಬೇಕು ಎನ್ನುವುದು ನನ್ನ ಗುರಿ ಎಂದು ಮಾಯಾವತಿಯವರು ತಿಳಿಸಿದರು.

ನಂತರ ಹೊರಡುವ ಸಮಯದಲ್ಲಿ ಅಂತಿಮವಾಗಿ ಒಂದು ನಿರ್ಧಾರಕ್ಕೆ ಬಂದ ಕಾನ್ಷೀರಾಮ್ ಸಾಹೇಬರು ” ನೀನು ಅಂದುಕೊಂಡಂತೆ ಖಂಡಿತವಾಗಿ ನೀನು ಐಎಎಸ್ ಅಧಿಕಾರಿ ಆಗಬಹುದು. ಆ ಅರ್ಹತೆ ನಿನಗಿದೆ. ಅದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ನೀನು ಅಂದುಕೊಂಡಂತೆ ನಿನ್ನ ಜನರ ಸೇವೆ ಮಾಡುವುದು ಮಾತ್ರ ನಿಮ್ಮಿಂದ ಸಾಧ್ಯವಾಗುವುದಿಲ್ಲ.

ಕಾರಣ, ಒಬ್ಬ ಸರ್ಕಾರಿ ಅಧಿಕಾರಿಯಾಗಿ ನೀನು ಸರಕಾರ ನಡೆಸುವ ರಾಜಕಾರಿಣಿಗಳ ಇಚ್ಚೆಯಂತೆ ನಡೆಯಬೇಕಾಗುತ್ತದೆ. ಶ್ರೀಮಂತರ ನೋಟುಗಳಿಂದ ಬಡವರ ಓಟುಗಳನ್ನು ಖರೀದಿಸುವುದನ್ನೇ ಪ್ರಜಾಪ್ರಭುತ್ವ ಎಂದು ಪರಿಗಣಿಸಿರುವ ಭಾರತದಲ್ಲಿ ರಾಜಕೀಯ ನಾಯಕರ ಯೋಜನೆಗಳು ಮತ್ತು ಯೋಚನೆಗಳು ಜಾರಿಯಾಗುತ್ತವೆಯೇ ಹೊರತು ಐಎಎಸ್ ಅಧಿಕಾರಿಗಳ ಯೋಜನೆಗಳು ಮತ್ತು ಯೋಚನೆಗಳಲ್ಲ.

ಈಗ ನಮ್ಮ ಸಮಾಜದಲ್ಲಿ ಬೇಕಾದಷ್ಟು ಮಂದಿ ಐಎಎಸ್ ಅಧಿಕಾರಿಗಳಿದ್ದಾರೆ. ಆದರೆ ಅವರೆಲ್ಲ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದಾರೆ. ಅವರಿಂದ ಏನನ್ನೂ ನಿರೀಕ್ಷಿಸುವಂತಿಲ್ಲ. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಹೀಗಾಗಿ ನಮಗೆ ಬೇಕಾಗಿರುವುದು ಐಎಎಸ್ ಅಧಿಕಾರಿಗಳಲ್ಲ. ರಾಜಕೀಯ ನಾಯಕರು. ಐಎಎಸ್ ಅಧಿಕಾರಿಗಳಿಂದ ಸರಿಯಾಗಿ ಕೆಲಸ ಮಾಡಿಸಬಲ್ಲ, ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ಕುಳಿತು ಜನಪರ ಶಾಸನಗಳನ್ನು ರೂಪಿಸಬಲ್ಲ , ಅವುಗಳನ್ನು ಜಾರಿಗೊಳಿಸಬಲ್ಲ ಸಮರ್ಥ ರಾಜಕೀಯ ನಾಯಕರು.

ನಮ್ಮ ಸಮಾಜದಲ್ಲಿ ಇಂಥ ನಾಯಕರ ಕೊರತೆ ಇದೆ. ‌ನೀನು ಆ ಕೊರತೆಯನ್ನು ನೀಗಿಸಬೇಕು. ನಿನ್ನಲ್ಲಿ ಆ ಶಕ್ತಿಯಿದೆ. ನನ್ನ ಮಾತನ್ನು ನೀನು ನಂಬುವುದಾದರೆ, ನಿನ್ನಲ್ಲಿ ಇಂತದ್ದೊಂದು ಬಯಕೆ ಇದ್ದುದಾದರೆ ನಾನು ನಿನ್ನನ್ನು ಅಂಥ ಒಬ್ಬ ಸಮರ್ಥ ನಾಯಕಿಯನ್ನಾಗಿ ತಯಾರು ಮಾಡುತ್ತೇನೆ. ಆಗ ನೂರಾರು ಜನ ಐಎಎಸ್ ಅಧಿಕಾರಿಗಳು ತಮ್ಮ ಫೈಲುಗಳನ್ನು ಹಿಡಿದುಕೊಂಡು ಬಂದು ನಿನ್ನ ಆದೇಶಕ್ಕಾಗಿ ಕಾಯುತ್ತಾರೆ.

ಒಳ್ಳೆಯ ಮತ್ತು ಕೆಟ್ಟ ಕೆಲಸ ಎರಡನ್ನೂ ಮಾಡುವ ಶಕ್ತಿ ಹೊಂದಿರುವ ಐಎಎಸ್ ಅಧಿಕಾರಿಗಳಿಂದ ನೀನು ನಿನ್ನೆಲ್ಲ ಒಳ್ಳೆಯ ಕೆಲಸಗಳನ್ನೇ ಮಾಡಿಸಬಹುದು. ಅದಕ್ಕಾಗಿ ನೀನು ಒಬ್ಬ ಐಎಎಸ್ ಅಧಿಕಾರಿಯಾಗುವ ಬದಲು ಒಬ್ಬ ಸಮರ್ಥ ರಾಜಕೀಯ ನಾಯಕಿಯಾಗುವುದು ಒಳ್ಳೆಯದು. ಯಾವುದಕ್ಕೂ ಯೋಚಿಸಿ ಒಂದು ಸರಿಯಾದ ನಿರ್ಧಾರಕ್ಕೆ ಬಾ… ನೀನು ತೆಗೆದುಕೊಳ್ಳುವ ನಿರ್ಧಾರದಲ್ಲಿ ಬಹುಜನರ ಭವಿಷ್ಯ ಅಡಗಿದೆ ಎಂದು ಹೇಳಿ ಅಲ್ಲಿಂದ ಹೊರಟು ಹೋದರು.

ಮುಂದೆ ನಡೆದಿದ್ದೆಲ್ಲವೂ ನಮ್ಮ ಕಣ್ಣ ಮುಂದಿರುವ ಇತಿಹಾಸ. ನುಡಿದಂತೆ ನಡೆದು, ಯಕಶ್ಚಿತ್ ಶಾಲಾ ಶಿಕ್ಷಕಿಯೊಬ್ಬಳನ್ನು ಉತ್ತರಪ್ರದೇಶದಂತಹ ಅತಿದೊಡ್ಡ ರಾಜ್ಯದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿ, ದೇಶವೇ ಕೊಂಡಾಡುವಂತೆ ಅದ್ಬುತ ಕಾರ್ಯಗಳನ್ನು ಸಾಧಿಸಿ ತೋರಿಸಿದ ಪವಾಡ ಪುರುಷ ಕಾನ್ಷೀರಾಮ್. ಅಂದು ಆ ಮಹಾತ್ಯಾಗಿ ನುಡಿದ ಭವಿಷ್ಯ ಸುಳ್ಳಾಗಲಿಲ್ಲ. ಕಾರಣ, ಮಹಾಜ್ಞಾನಿಗಳ ಮಾತುಗಳು ಸುಳ್ಳಾಗಲು ಸಾದ್ಯವೇ ಇಲ್ಲ..!

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ರಾಜಕೀಯ

NRC ಮತ್ತು CAA ಯಾರಿಗೆ ಲಾಭ‌..?

Published

on

ಬಿಂದು ಶ್ರೀ ಗೌಡ
  • ಬಿಂದು ಗೌಡ ಕೆಪಿಸಿಸಿ,ಸಾಮಾಜಿಕ ಜಾಲತಾಣ ರಾಜ್ಯ ಕಾರ್ಯದರ್ಶಿ

ಒಂದು ಮನೆಯಲ್ಲಿ ನಾಲ್ಕು ಜನ ಇದ್ರು ಆದ್ರೆ ತಿನ್ನೋಕೆ ಇದ್ದಿದ್ದೇ ಎರಡು ರೊಟ್ಟಿ ಕಡೆಗೆ ಅರ್ಧ ಅರ್ಧ ತಗೊಂಡು ಹಂಚಿಕೊಂಡು ತಿನ್ನೋಣ ಅಂತ ಮಾತು ಕಥೆ ಆಯ್ತು ಇನ್ನೇನು ಎರಡು ರೊಟ್ಟಿ ಭಾಗ ಆಗಿ ನಾಲ್ಕು ಜನ ಹಂಚಿಕೊಳ್ಳಬೇಕು ಅಷ್ಟರಲ್ಲಿ ಹೊರಗಿಂದ ಯಾರೋ 3 ಜನ ಬಂದ್ರು ಈಗ ಇರುವ 2 ರೊಟ್ಟಿಯನ್ನು 4+3 ಅಂದ್ರೆ 7 ಜನ ಹಂಚಿಕೊಳ್ಳಬೇಕು , ಹೇಗೆ ಹಂಚಿಕೊಳ್ಳುತ್ತಾರೆ, ಇದರಿಂದ ಹೊಟ್ಟೆ ತುಂಬುತ್ತಾ ? ರೊಟ್ಟಿಯನ್ನು ಹಂಚಿಕೊಳ್ಳಬಹುದು ಭೂಮಿಯನ್ನು ಹಂಚಿಕೊಳ್ಳೋಕೆ ಸಾಧ್ಯವಾ ?

ಹೌದು ಈಗಿನ ಸಧ್ಯದ ಪರಿಸ್ಥಿತಿ ಹಾಗಿದೆ ದೇಶದಲ್ಲಿ ಈಗಾಗಲೇ ನಿರುದ್ಯೋಗ ಸಮಸ್ಯೆ ಕಳೆದ 45 ವರ್ಷದಲ್ಲೇ ಇದೆ ಮೊದಲ ಬಾರಿಗೆ ಇಷ್ಟರ ಮಟ್ಟಿಗೆ ನಿರುದ್ಯೋಗ ಸಮಸ್ಯೆ ಕಂಡು ಬಂದಿದೆ ಅಂತದರಲ್ಲಿ ಹೊರ ದೇಶಗಳಿಂದ ಬರುವವರಿಗೆ ಜಾಗ ಕೊಟ್ಟು ಪೌರತ್ವವನ್ನು ಕೊಡ್ತೀರಿ ಆಮೇಲೆ ಅವರಿಗೆ ಉದ್ಯೋಗ ಎಲ್ಲಿಂದ ಕೊಡ್ತೀರಿ ? ಬಂದವರು ಬಂದವರ ಹಾಗೆ ಇರ್ತಾರ ? ನೋ ಮದುವೆ ಮಕ್ಕಳು ಹೀಗೆ ಜನಸಂಖ್ಯೆ ಹೆಚ್ಚುತ್ತಲೇ ಹೋಗುತ್ತೆ ಅವರಿಗೆಲ್ಲ ಉದ್ಯೋಗ, ಆಹಾರ ಎಲ್ಲಿಂದ ಉತ್ಪತ್ತಿ ಆಗುತ್ತೆ ಈಗಾಗಲೇ ಅವೈಜ್ಞಾನಿಕ ಜಿ ಎಸ್ ಟಿ ಹೊರೆಯಾಗಿದೆ.

ನೋಟ್ ಬಂದಿಗಳ ಕಾರಣಕ್ಕೆ ಎಷ್ಟೋ ಕಾರ್ಖಾನೆ , ಉದ್ದಿಮೆ , ವ್ಯವಹಾರಗಳು ಮುಚ್ಚಿಹೋಗಿವೆ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ , ಇಲ್ಲಿರುವವರೇ ಕೆಲಸಗಳನ್ನ ಕಳೆದುಕೊಂಡು ಮನೆಯಲ್ಲಿ ಕೂತಿರುವಾಗ , ನಿರುದ್ಯೋಗ ಹಸಿವಿನ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗ, ದೊಡ್ಡ ದೊಡ್ಡ ಉದ್ಯಮಿಗಳು ನಷ್ಟದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ CAA ಅವಶ್ಯಕತೆ ಇದೆಯಾ ?

ಇನ್ನು NRC ಇದಿನ್ನೂ ಜಾರಿಯಾಗಿಲ್ಲ , ಆಗುತ್ತೆ ಅನ್ನುವ ಸುಳಿವು ಇದೆ 1990ರಲ್ಲಿ ಹುಟ್ಟಿರುವ ನನ್ನಲ್ಲೇ BIRTH CERTIFICATE ಇಲ್ಲ ಇನ್ನು ಹಳ್ಳಿಗಾಡುಗಳಲ್ಲಿ ಹುಟ್ಟಿದ , ಮನೆಯಲ್ಲಿಯೇ ಹೆರಿಗೆ ಆದವರ ಜನನ ಪ್ರಮಾಣ ಪತ್ರವನ್ನು ಎಲ್ಲಿಂದ ತರೋದು , ಆದಿವಾಸಿಗಳು , ಹಕ್ಕಿ ಪಿಕ್ಕಿಯವರು ಬುಡಕಟ್ಟಿನವರು ಇಂದಿಗೂ ಸೌಲಭ್ಯ ವಂಚಿತರಾಗಿ ಅರಣ್ಯಗಳಲ್ಲಿ ಇದ್ದಾರೆ ಅವರೆಲ್ಲ ಎಲ್ಲಿಂದ ತರ್ತಾರೆ ?? ನಮ್ಮ ದೇಶದಲ್ಲಿ ಏನಿಲ್ಲ ಅಂದ್ರು ಸಾವಿರಾರು ಅನಾಥ ಆಶ್ರಮ , ವೃದ್ಧಾಶ್ರಮಗಳು ಇವೆ ಅವರೆಲ್ಲ ಎಲ್ಲಿಂದ ತರ್ತಾರೆ ತಮ್ಮ ಜನನ ಪ್ರಮಾಣ ಪತ್ರಗಳನ್ನು ?

ಆಧಾರ್ ಕಾರ್ಡ್ , ಪ್ಯಾನ್ ಕಾರ್ಡ್ , ವೋಟರ್ ಐಡಿ , ಪಾಸ್ ಪೋರ್ಟ್ , ರೇಶನ್ ಕಾರ್ಡ್ , ಡ್ರೈವಿಂಗ್ ಲೈಸನ್ಸ್ ಇದ್ಯಾವುದೂ ಕೂಡ ದಾಖಲೆ ಅಲ್ಲ ಅನ್ನೋದೇ ಆದ್ರೆ ಇನ್ನೇನು ಕೊಟ್ಟು ಸಾಭೀತು ಪಡಿಸಬೇಕು ??

ಬಿಜೆಪಿ MEMBERSHIP CARD ತೋರಿಸಿ ಈ ದೇಶದ ಪ್ರಜೆ ಅಂತ ಸಾಬೀತು ಪಡಿಸಬೇಕಾ ???

ಆಧಾರ್ ಕಾರ್ಡ್ ಆಧಾರ ಅಲ್ಲ ಅಂದಾದರೆ ಯಾವ ಆಧಾರದ ಮೇಲೆ ಮಾಡಿದ್ದು ಅದನ್ನ ಯಾತಕ್ಕಾಗಿ ಮಾಡಿದ್ದು , ಜನಗಳ ಸಮಯ ಜೊತೆಗೆ ಹಣ ಎರಡು ಖರ್ಚಾಗಿದೆ ಇನ್ನು ಆಗುತ್ತಲೇ ಇದೆ ಒಂದು ಸಾರಿ ಅಪ್ಡೇಟ್ ಮಾಡಿಸೋಕೆ 50 ರೂಪಾಯಿ ಕೊಡಬೇಕು ಆಧಾರ್ ಆಧಾರ ಅಲ್ಲ ಅಂದಮೇಲೆ ಅಪ್ಡೇಟ್ ಯಾಕೆ ಮಾಡಿಸಬೇಕು ಬ್ಯಾನ್ ಮಾಡಿ ಜನರ ಸಮಯ ಮತ್ತು ದುಡ್ಡು ಆದ್ರೂ ಉಳಿಯುತ್ತೆ!

ಇದರಿಂದ ಮುಸಲ್ಮಾನರಿಗೆ ಮಾತ್ರ ತೊಂದರೆ ಅನ್ನೋದು ಮೂರ್ಖತನ , ಪಕ್ಕದ ಮನೆ ಅಹ್ಮದ್ ಭಾಯ್ ಅವರ ಹಿರೀಕರು ಜನನ ಪುರಾವೆ ಇಟ್ಕೊಂಡಿದ್ರೆ ಅವರಿಗೇನು ಸಮಸ್ಯೆ ಇಲ್ಲ ಇಲ್ಲಿನ ಪೌರತ್ವ ಪಡೀತಾರೆ ಅದೇ ಅಹ್ಮದ್ ಅಣ್ಣನ ಪಕ್ಕದ ಮನೆಯವ ಸುರೇಶ ಯಾವ ದಾಖಲೆ ಇಟ್ಕೊಂಡಿಲ್ಲ ಅಂದ್ರೆ ಅವನು ಈ ದೇಶದ ಪ್ರಜೆ ಅಲ್ಲ ಅಂತ ಡೈರೆಕ್ಟ್ ಆಗಿ ಡಿಟೆಂಶನ್ ಸೆಂಟರ್ ಗೆ ಹಾಕ್ತಾರೆ ಹಿಂದೂ ಅಂತ ಸುಮ್ಮನೆ ಬಿಡೋದಿಲ್ಲ .

ಆದ್ದರಿಂದ NRC ಮತ್ತು CAA ಇಂದ ಅನಾನುಕೂಲವೆ ಹೊರತು ಅನುಕೂಲವಾಗಲಿ , ಲಾಭವಾಗಲಿ ದೇಶದ ಜನತೆಗೆ ಇಲ್ಲ ಇದರಿಂದ ಅನುಕೂಲ ಬಹುಶಃ ಬಿಜೆಪಿಗರಿಗೆ ಆಗಬಹುದು (ವೋಟರ್ಸ್ ಮ್ಯಾಟರ್ಸ್ ) ಅಷ್ಟೇ ಬಿಟ್ರೆ ಬೇರೆ ಇಲ್ಲ , ಇಂತಹ ಸಮಯದಲ್ಲಿ ಕೇಂದ್ರ ಸರ್ಕಾರ ಕೆಲಸಕ್ಕೆ ಬಾರದ ಇಂತಹ ವಿಚಾರಗಳನ್ನು ಬಿಟ್ಟು ನಿಜವಾಗಿಯೂ ಗಮನ ಕೊಡಬೇಕಾದ ಆರ್ಥಿಕ ಸಮಸ್ಯೆ , ಶಿಕ್ಷಣ , ರಕ್ಷಣೆ , ಭದ್ರತೆ , ನಿರುದ್ಯೋಗ ಇವುಗಳ ಬಗ್ಗೆ ಗಮನ ಕೊಡಲಿ.

ಇನ್ನುಳಿದಂತೆ ಭಾವುಕವಾಗಿ ಯೋಚನೆ ಮಾಡೋದಾದರೆ ಹೌದು ನಮಗೆ ಬೇಕಿಲ್ಲ ನಾವು ಈ ಮಣ್ಣಿನ ಮಕ್ಕಳು ನಮ್ಮ ನೆಲದಲ್ಲಿ ನಾವು ಯಾರಿಗೂ ನಾವು ಇಲ್ಲಿಯವರು ಎಂದು ಸಾಬೀತು ಪಡಿಸುವ ಅವಶ್ಯಕತೆ ಇಲ್ಲ !

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending