Connect with us

ರಾಜಕೀಯ

ಕೊನೆಗೂ ಖಾತೆ ಹಂಚಿದ ಯಡಿಯೂರಪ್ಪ: ಯಾವ ಖಾತೆ ಯಾರಿಗೆ..?

Published

on

ಸುದ್ದಿದಿನ,ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿದ್ದಾರೆ. ಒಂದು ತಿಂಗಳ ಹಿಂದೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದ ಯಡಿಯೂರಪ್ಪ ಕಡೆಗೂ ತಮ್ಮ ಸಚಿವರಿಗೆ ಇಂದು ಖಾತೆ ಹಂಚಿ ತಮ್ಮ ಬಳಿ ಇದ್ದ ಹೆಚ್ಚುವರಿ ಖಾತೆಗಳ ಜವಾಬ್ದಾರಿಯಿಂದ ಮುಕ್ತವಾಗಿದ್ದಾರೆ.

ಹೈಕಮಾಂಡ್ ಜೊತೆಗೆ ಸತತವಾಗಿ ತಮ್ಮ ಪಟ್ಟಿ ಹಾಗೂ ಆರ್ ಎಸ್ ಎಸ್ ಪಟ್ಟಿಯ ನಡುವೆ ಸಮತೋಲನ ಸಾಧಿಸಿರುವ ಯಡಿಯೂರಪ್ಪ ಇಂದು, ರಾಜ್ಯಪಾಲ ವಜೂಬಾಯಿ ವಾಲಾ ಅವರಿಗೆ ಪಟ್ಟಿಯನ್ನು ಕಳುಹಿಸಿದ್ದರು. ಬಿ.ಎಸ್.ವೈ ಕಳುಹಿಸಿದ ಸಚಿವರ ಪಟ್ಟಿಗೆ ಅವರು ಅಂಕಿತ ಹಾಕಿದ್ದಾರೆ.

17 ಶಾಸಕರ ಪೈಕಿ ಯಾರಿಗೆ ಯಾವ ಖಾತೆ?

 1. ಗೋವಿಂದ ಕಾರಜೋಳ -ಲೋಕೋಪಯೋಗಿ ಇಲಾಖೆ
 2. ಡಾ. ಅಶ್ವತ್ಥ್ ನಾರಾಯಣ ಸಿ.ಎನ್ – ಐಟಿ-ಬಿಟಿ, ವೈದ್ಯಕೀಯ ಶಿಕ್ಷಣ
 3. ಕೆ.ಎಸ್.ಈಶ್ವರಪ್ಪ – ಸಮಾಜ ಕಲ್ಯಾಣ
 4. ಆರ್.ಅಶೋಕ – ಕಂದಾಯ
 5. ಜಗದೀಶ್ ಶೆಟ್ಟರ್ – ಬೃಹತ್ ಮತ್ತು ಮಧ್ಯಮ ಕೈಗಾರಿಕೆ
 6. ಬಿ.ಶ್ರೀರಾಮುಲು – ಆರೋಗ್ಯ ಮತ್ತು ಕುಟುಂಬ ಕಲ್ಯಾಣ
 7. ಎಸ್.ಸುರೇಶ ಕುಮಾರ್ – ಉನ್ನತ ಶಿಕ್ಷಣ
 8. ವಿ.ಸೋಮಣ್ಣ – ವಸತಿ ಮತ್ತು ನಗರಾಭಿವೃದ್ಧಿ
 9. ಕೋಟ ಶ್ರೀನಿವಾಸ್ ಪೂಜಾರಿ – ಮೀನುಗಾರಿಕೆ, ಬಂದರು
 10. ಜೆ.ಸಿ. ಮಾಧುಸ್ವಾಮಿ – ಕಾನೂನು ಮತ್ತು ಸಂಸದೀಯ ವ್ಯವಹಾರ
 11. ಚಂದ್ರಕಾಂತಗೌಡ ಚನ್ನಪ್ಪಗೌಡ ಪಾಟೀಲ್ – ಗಣಿ ಮತ್ತು ಭೂ ವಿಜ್ಞಾನ
 12. ಜೊಲ್ಲೆ ಶಶಿಕಲಾ ಅಣ್ಣಾ ಸಾಹೇಬ್ – ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
 13. ಎಚ್.ನಾಗೇಶ್ – ತೋಟಗಾರಿಕೆ
  ಉಳಿದ ಪ್ರಮುಖ ಖಾತೆಗಳನ್ನು ಸಿಎಂ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮೋದಿ ಭಾಷಣ ಅಸಹಾಯಕ ನಾಯಕನ ಗೋಳಾಟದಂತಿತ್ತು : ಸಿದ್ದರಾಮಯ್ಯ ಲೇವಡಿ

Published

on

ಸುದ್ದಿದಿನ, ಬೆಂಗಳೂರು : ಬಾಯಿ ಬಿಟ್ಟರೆ ಬಣ್ಣಗೇಡು ಎಂಬಂತಾಗಿದೆ ಪ್ರಧಾನಿ ನರೇಂದ್ರ ಮೋದಿಯವರ ಭಾಷಣಗಳು. ನಿಯಂತ್ರಣ ಮೀರಿ ಹರಡುತ್ತಿರುವ ಕೊರೊನಾ ಸೋಂಕಿನಿಂದ ತತ್ತರಿಸಿರುವ ಜನರಲ್ಲಿ ಆತ್ಮವಿಶ್ವಾಸ ತುಂಬುವ ಯಾವ ನಿರ್ಧಿಷ್ಟ ಯೋಜನೆಗಳ ಪ್ರಸ್ತಾವಗಳೇ ಇಲ್ಲದ ಪ್ರಧಾನಿ ಭಾಷಣ ಅಸಹಾಯಕ ನಾಯಕನ ಗೋಳಾಟದಂತಿತ್ತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿಮಾಡಿದರು.

ಮಂಗಳವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಡವರಿಗೆ ಉಚಿತ ಆಹಾರ ಧಾನ್ಯ ನೀಡುವ ಗರೀಬ್ ಕಲ್ಯಾಣ ಯೋಜನೆಯನ್ನು ನವಂಬರ್ ತಿಂಗಳ ವರೆಗೆ ಮುಂದುವರಿಸಿರುವುದು ಸ್ವಾಗತಾರ್ಹ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿಯವರು ತಿಂಗಳ ಹಿಂದೆಯೇ ಈ ಬೇಡಿಕೆ ಇಟ್ಟಿದ್ದರು. ಅದನ್ನು ಒಪ್ಪಿಕೊಂಡದ್ದಕ್ಕೆ ಧನ್ಯವಾದಗಳು ಎಂದರು.

ಕೊರೊನಾ ಸೋಂಕಿನ ತೀವ್ರತೆಯನ್ನು ಅವಲೋಕಿಸಿದರೆ ಇದು ಮುಂದಿನ 2-3 ತಿಂಗಳೊಳಗೆ ಕೊನೆಗೊಳ್ಳುವಂತಹದ್ದಲ್ಲ. ಮುಂದಿನ ದಿನಗಳಲ್ಲಿ ದೇಶದಲ್ಲಿ ಹಸಿವಿನ ಸಮಸ್ಯೆ ಭೀಕರವಾಗಲಿದೆ. ಆದ್ದರಿಂದ ನಮ್ಮ ಸರ್ಕಾರ ರಾಜ್ಯದಲ್ಲಿ ಜಾರಿಗೊಳಿಸಿದ್ದ ಅನ್ನಭಾಗ್ಯದ ಮಾದರಿಯಲ್ಲಿ ಇಡೀ ರಾಷ್ಟ್ರದಲ್ಲಿ ಬಡವರಿಗೆ ಉಚಿತ ಆಹಾರಧಾನ್ಯ ಪೂರೈಸುವ ಶಾಶ್ವತ ಯೋಜನೆಯನ್ನು ಜಾರಿಗೆ ತರಬೇಕೆಂದು ಪ್ರಧಾನಿಯವರನ್ನು ಒತ್ತಾಯಿಸುತ್ತೇನೆ ಎಂದು ಹೇಳಿದರು.

ದೇಶದ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ, ಆಮ್ಲಜನಕ ಪೂರೈಕೆ ವ್ಯವಸ್ಥೆ, ವೆಂಟಿಲೇಟರ್ ಗಳ ತೀವ್ರ ಕೊರತೆ ಇದೆ. ವೈದ್ಯರು,ದಾದಿಯರ ಕೊರತೆ ಇದೆ. ದುಬಾರಿ ಚಿಕಿತ್ಸೆ ವೆಚ್ಚದಿಂದ ಜನ ಕೊರೊನಾ ಸೋಂಕಿಗಿಂತ ಕೊರೊನಾ ಚಿಕಿತ್ಸೆಗೆ ಜನ ಹೆದರುವಂತಾಗಿದೆ. ಈ ಬಗ್ಗೆ ರಾಜ್ಯಗಳಿಗೆ ಕೇಂದ್ರ ನೆರವು ಘೋಷಿಸಬಹುದೆಂಬ ನಿರೀಕ್ಷೆ ಹುಸಿಯಾಗಿದೆ ಎಂದು ಕಿಡಿಕಾರಿದರು.

ಪಿಎಂ ಕೇರ್ಸ್ ನಿಧಿಗೆ ನೆರವಾಗಲು ದೇಶದ ಜನರನ್ನು ವಿನಂತಿಸಿದ್ದ ಪ್ರಧಾನಿಗಳು ಅದರ ಖರ್ಚು-ವೆಚ್ಚದ ಸಂಪೂರ್ಣ ವಿವರವನ್ನು ದೇಶದ ಮುಂದಿಟ್ಟು ಪಾರದರ್ಶಕವಾಗಿ ನಡೆದುಕೊಳ್ಳಬಹುದೆಂಬ ನಿರೀಕ್ಷೆಯೂ ಹುಸಿಯಾಗಿದೆ. ಇದಕ್ಕೆ ಚೀನಾದಿಂದಲೂ ದೇಣಿಗೆ ಪಡೆಯಲಾಗಿದೆ ಎಂಬ ಆರೋಪಗಳಿವೆ. ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕಿತ್ತು ಎಂದರು.

ಸತತ 23ನೇ ದಿನ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದೆ. ಇದರಿಂದ ಆಹಾರಧಾನ್ಯ, ತರಕಾರಿ, ಹಣ್ಣು ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆಯೂ ಏರುತ್ತಿದೆ. ಈ ತೈಲಬೆಲೆ ಏರಿಕೆ ಇನ್ನೆಷ್ಟು ದಿನಗಳ ಕಾಲ ಏರಲಿದೆ ಎಂದಾದರೂ ಹೇಳಿಬಿಟ್ಟಿದ್ದರೆ ಜನ ಕೆಟ್ಟ ದಿನಗಳಿಗೆ ಹೊಂದಿಕೊಳ್ಳಲು ಸಿದ್ದವಾಗುತ್ತಿದ್ದರು ಎಂದು ಕಿಡಿಕಾರಿದರು.

ಹುತಾತ್ಮ 20 ವೀರಯೋಧರ ಬಲಿದಾನ ವ್ಯರ್ಥವಾಗುವುದಿಲ್ಲ ಎಂದು ಘೋಷಿಸಿದ್ದ ಪ್ರಧಾನಿ ಮೋದಿಯವರು, ಇದಕ್ಕಾಗಿ ಏನು ಮಾಡಿದ್ದಾರೆ ಎನ್ನುವುದನ್ನು ತಿಳಿಸಿದ್ದರೆ ನೊಂದ ದೇಶದ ಜನತೆ ಮತ್ತು ವೀರಯೋಧರ ಕುಟುಂಬಕ್ಕೆ ಸಾಂತ್ವನ ಮಾಡಿದ ಹಾಗಾಗುತ್ತಿತ್ತು. ಈ ಘಟನೆಯ ಪ್ರಸ್ತಾವವನ್ನೇ ಮಾಡದೆ ನಿರ್ಲಕ್ಷಿಸಿರುವುದು ವಿಷಾದನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸರ್ವಾಧಿಕಾರದ ತುರ್ತು-ನವ ಉದಾರವಾದದ ಪರಿಸ್ಥಿತಿ

Published

on

 • ನಾ ದಿವಾಕರ

ತುರ್ತು ಪರಿಸ್ಥಿತಿ ನೆನಪಾದ ಕೂಡಲೇ ಒಂದು ಕರಾಳ ಛಾಯೆ ಕವಿದಂತೆ ಭಾವಿಸುವ ಒಂದು ಪೀಳಿಗೆ ನಮ್ಮ ನಡುವೆ ಇದೆ. ಈ ಪೀಳಿಗೆಯ ನಡುವೆಯೇ ಇರುವ ಹಿರಿಯ ಪೀಳಿಗೆಗೆ ಜೂನ್ 25 ಪ್ರಜಾಸತ್ತೆಯ ಕತ್ತು ಹಿಸುಕಿದ ಒಂದು ದುರಂತ ಪ್ರಯತ್ನದಂತೆ ಕಾಣುತ್ತದೆ.

ಈ ಎರಡೂ ಪೀಳಿಗೆಯ ಜನರು ಪ್ರತ್ಯಕ್ಷವಾಗಿ, ಪರೋಕ್ಷವಾಗಿ, ಹೋರಾಟದ ಮೂಲಕ, ಚಟುವಟಿಕೆಯ ಮೂಲಕ, ಅಧ್ಯಯನದ ಮೂಲಕ ತುರ್ತುಪರಿಸ್ಥಿತಿಯ ಕರಾಳ ದಿನಗಳನ್ನು ಎದುರಿಸಿದ್ದಾರೆ. ಈ ಅನುಭವದ ಮೂಸೆಯಲ್ಲಿ ನಿಂತು ಇಂದಿನ ರಾಜಕಾರಣವನ್ನು ಅವಲೋಕನ ಮಾಡುವಾಗ ನಮ್ಮ ಮುಂದೆ ಇಂದಿನ ಯುವ ಪೀಳಿಗೆ ಪ್ರತ್ಯಕ್ಷವಾಗುತ್ತದೆ.

ಈ ಪೀಳಿಗೆಯ ಒಂದು ವರ್ಗ, ತುರ್ತುಪರಿಸ್ಥಿತಿಯ ಅನುಭವವಿಲ್ಲದಿದ್ದರೂ ವಾಸ್ತವ ಚರಿತ್ರೆಯ ಪುಟಗಳ ಒಳಹೊಕ್ಕು ಅಧ್ಯಯನಶೀಲತೆಯಿಂದ 1960-70ರ ದಶಕದ ಸಮಾಜೋ ಆರ್ಥಿಕ ಮತ್ತು ರಾಜಕೀಯ ಸ್ಥಿತ್ಯಂತರಗಳನ್ನು ಗ್ರಹಿಸುವ ಒಂದು ವರ್ಗ, ತುರ್ತುಪರಿಸ್ಥಿತಿಯನ್ನು ಭಿನ್ನ ನೆಲೆಯಲ್ಲಿ ವ್ಯಾಖ್ಯಾನಿಸಲು ಸಾಧ್ಯ.

ಈ ವರ್ಗ ವಾಟ್ಸಾಪ್ ವಿಶ್ವವಿದ್ಯಾಲಯ ಸ್ಥಾಪನೆಯಾಗುವ ಮುನ್ನವೇ ತಮ್ಮ ಸಾಮಾಜಿಕ ಪ್ರಜ್ಞೆಯನ್ನು ಹರಿತಗೊಳಿಸಿಕೊಂಡಿರುವುದರಿಂದ ಇವರಿಗೆ 1975ರ ಜೂನ್ 25 ರಾಜಕೀಯ ಪಲ್ಲಟ ಉಂಟುಮಾಡಿದ ಒಂದು ವಿದ್ಯಮಾನದಂತೆ ಕಾಣಲು ಸಾಧ್ಯ.

1960ರ ದಶಕದ ಯುದ್ಧ, ಬಡತನ, ಹಸಿವು, ನಿರುದ್ಯೋಗ ಮತ್ತು ಜನಾಂದೋಲನಗಳಿಗೂ 1970ರ ದಶಕದ ರಾಜಕೀಯ ಬೆಳವಣಿಗೆಗಳಿಗೂ ಇರುವ ಸೂಕ್ಷ್ಮ ಸಂಬಂಧಗಳನ್ನು ಈ ಎರಡೂ ವರ್ಗಗಳು ಸಮರ್ಥವಾಗಿ ಗ್ರಹಿಸಲು ಸಾಧ್ಯ. ಗತ ಚರಿತ್ರೆಯನ್ನು ಸಮಕಾಲೀನ ನೆಲೆಯಲ್ಲಿಟ್ಟು ನೋಡದೆ ವಸ್ತುನಿಷ್ಠವಾಗಿ ವಿಶ್ಲೇಷಿಸುವವರಿಗೆ ಈ ಸೂಕ್ಷ್ಮಗಳೊಡನೆ ಅಂದಿನ ಕಾಲಘಟ್ಟದ ನೈಜ ರಾಜಕೀಯ ಸ್ಥಿತ್ಯಂತರಗಳೂ ಅರಿವಾಗುತ್ತದೆ. 1975ರ ತುರ್ತುಪರಿಸ್ಥಿತಿಯನ್ನು ಕೇವಲ ಒಂದು ಸಹಿ, ತಿದ್ದುಪಡಿ ಅಥವಾ ಕಡತದಲ್ಲಿ ಕಾಣುವುದಕ್ಕಿಂತಲೂ, ಒಂದು ದಶಕದ ರಾಜಕೀಯ ಬೆಳವಣಿಗೆಗಳು ಮತ್ತು ಸಮಾಜೋ ಆರ್ಥಿಕ ಪಲ್ಲಟಗಳಲ್ಲಿ ಕಾಣಲೂ ಸಾಧ್ಯವಾಗಬಹುದು.

ಇಂದಿನ ಯುವ ಪೀಳಿಗೆಯ ಮತ್ತೊಂದು ವರ್ಗ, ಶತಮಾನದ ಯುವಜನತೆ ಅಥವಾ 1990ರ ನಂತರದ ಪೀಳಿಗೆಯನ್ನು ಪ್ರತಿನಿಧಿಸುವ ಒಂದು ವರ್ಗಕ್ಕೆ 1960ರ ಸಮಾಜೋ ಆರ್ಥಿಕ ವಿಪ್ಲವಗಳು, 1970ರ ರಾಜಕೀಯ ಬೆಳವಣಿಗೆಗಳು ಮತ್ತು 1980ರ ಸಮಾಜೋ ಸಾಂಸ್ಕೃತಿಕ ಬೆಳವಣಿಗೆಗಳು, ಈ ಮೂರೂ ವಿದ್ಯಮಾನಗಳು ಇತಿಹಾಸದ ಪುಟಗಳಾಗಿ ಮಾತ್ರ ಕಾಣುತ್ತವೆ. ಈ ಇತಿಹಾಸದ ಪುಟಗಳಲ್ಲಿ ಅಡಗಿರುವ ಮಿಥ್ಯೆಯ ಚೌಕಟ್ಟಿನಲ್ಲೇ ನವ ಭಾರತದ ಭವಿಷ್ಯದ ಇತಿಹಾಸವನ್ನು ಕಟ್ಟುವ ಪರಂಪರೆಗೆ ಈ ಪೀಳಿಗೆಯವರು ಬಲಿಯಾಗುತ್ತಿರುವುದನ್ನು ವಾಟ್ಸಾಪ್ ವಿಶ್ವವಿದ್ಯಾಲಯದ ಬೌದ್ಧಿಕ ವಲಯದಲ್ಲಿ ಕಾಣಬಹುದು.

ಇಂದು ತುರ್ತುಪರಿಸ್ಥಿತಿ ಹೇರಿದ 45 ವರ್ಷಗಳ ನಂತರ ನಾವು ಹಿಂದಿರುಗಿ ನೋಡಿದಾಗ ಒಂದು ಕ್ಷಣ ಸ್ತಬ್ಧರಾಗುತ್ತೇವೆ. ಮತ್ತೊಂದು ತುರ್ತುಪರಿಸ್ಥಿತಿ ಹೇರಲಾಗುತ್ತದೆ ಎಂಬ ಭೀತಿ ಕಾಡುತ್ತಲೇ ಇದೆ. ಹಿರಿಯ ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ಸಹ ಇದೇ ಆತಂಕ ವ್ಯಕ್ತಪಡಿಸಿದ್ದುದನ್ನು ಸ್ಮರಿಸಬಹುದು. ಆದರೆ ವಾಸ್ತವ ಪರಿಸ್ಥಿತಿಯನ್ನೊಮ್ಮೆ ಅವಲೋಕಿಸಿದಾಗ, ತುರ್ತುಪರಿಸ್ಥಿತಿ ಹೇರಲು ಇನ್ನೇನು ಉಳಿದಿದೆ ಎಂಬ ಪ್ರಶ್ನೆಯೂ ಕಾಡುತ್ತದೆ. ಈಗಿರುವ ಪರಿಸ್ಥಿತಿ ಕೊಂಚ ಸುಧಾರಣೆಯಾದರೆ, ದಮನಿತ ದನಿಗಳು ಉಸಿರಾಡುವಂತಾದರೆ, ತುರ್ತುಪರಿಸ್ಥಿತಿ ತೆರವಾದಂತೆಯೇ ಎಂಬ ಭಾವನೆ ಮೂಡಿದರೂ ಅಚ್ಚರಿಯೇನಿಲ್ಲ.

1975 ಮತ್ತು 2020 ಈ ಎರಡು ಕಾಲಘಟ್ಟಗಳನ್ನು ಎರಡು ವಿಭಿನ್ನ ನೆಲೆಗಳಲ್ಲಿ ವಿಶ್ಲೇಷಿಸಿದರೂ ಕೆಲವು ಸಮಾನ ಅಂಶಗಳು ಸಹಜವಾಗಿ ಕಾಣುತ್ತವೆ. 1975ರಲ್ಲಿ ಸಕ್ರಿಯವಾಗಿಯೂ, ಕ್ರಿಯಾಶೀಲವಾಗಿಯೂ, ಸ್ವಾಯತ್ತ ಅಲ್ಲದಿದ್ದರೂ ಸ್ವತಂತ್ರವಾಗಿದ್ದ ಸಾಂವಿಧಾನಿಕ ಸಂಸ್ಥೆಗಳನ್ನು ನಿರ್ಬಂಧಿಸುವ ಮೂಲಕ ತುರ್ತುಪರಿಸ್ಥಿತಿ ಹೇರಲಾಗಿತ್ತು. ಸಮಾಜಮುಖಿ ಎನ್ನಬಹುದಾಗಿದ್ದ, ಸಾಮಾಜಿಕ ತುಮುಲಗಳಿಗೆ ತುಡಿತ ಹೊಂದಿದ್ದ ಮಾಧ್ಯಮಗಳ ಕತ್ತು ಹಿಸುಕುವ ಪ್ರಯತ್ನ ನಡೆದಿತ್ತು. ಈ ನಿರಂಕುಶ ಅಧಿಕಾರವನ್ನು ಸಮರ್ಥಿಸಲು ಹಿಂಸಾತ್ಮಕ ಮಾರ್ಗವನ್ನೂ, ಕರಾಳ ಶಾಸನಗಳನ್ನೂ ಅನುಸರಿಸಲಾಗಿತ್ತು. ಇದನ್ನು ನಾವಿಂದು ಒಂದು ಪಕ್ಷದ ನೆಲೆಯಲ್ಲಿ ನಿಂತು ಕ್ರೂರ ದಬ್ಬಾಳಿಕೆ ಎಂದೋ, ಸರ್ವಾಧಿಕಾರ ಎಂದೋ ಖಂಡಿಸುತ್ತೇವೆ. ಖಂಡಿಸಲೂ ಬೇಕು.

ಆದರೆ 2020ರ ಸಂದರ್ಭವನ್ನೊಮ್ಮೆ ನೋಡಿದಾಗ, ಅಂದು ಒಂದು ಸಾಂವಿಧಾನಿಕ ತಿದ್ದುಪಡಿಯ ಮೂಲಕ ತಮ್ಮ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದ ಸಾಂವಿಧಾನಿಕ ಸಂಸ್ಥೆಗಳು ಇಂದು ಯಾವುದೇ ಅಧಿಸೂಚನೆ ಇಲ್ಲದೆ, ಯಾವುದೇ ತಿದ್ದುಪಡಿ ಇಲ್ಲದೆಯೇ ನಿಷ್ಕ್ರಿಯವಾಗಿವೆ. ಬಹುತೇಕ ಸಾಂವಿಧಾನಿಕ ಸಂಸ್ಥೆಗಳು ಕ್ರಿಯಾಶೀಲತೆಯನ್ನು ಕಳೆದುಕೊಂಡಿವೆ, ಸಂವೇದನೆಯನ್ನು ಕಳೆದುಕೊಂಡಿವೆ.

ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಸ್ತಂಭ ಎಂದೇ ಗುರುತಿಸಲ್ಪಡುವ ಮಾಧ್ಯಮಗಳು ( ಅಂದು ಕೇವಲ ಮುದ್ರಣ-ಇಂದು ವಿದ್ಯುನ್ಮಾನವೂ ಸೇರಿದೆ) ಅಂದು ಸರ್ವಾಧಿಕಾರದ ಪ್ರಹಾರಕ್ಕೆ ನಲುಗಿಹೋಗಿದ್ದವು. ಇಂದು ಕಾರ್ಪೋರೇಟ್ ರಾಜಕಾರಣದ ಪ್ರಹಾರಕ್ಕೆ ಶರಣಾಗಿದ್ದು, ಸ್ವತಃ ತಮ್ಮ ಸ್ವಂತಿಕೆಯನ್ನು ಕಳೆದುಕೊಂಡಿವೆ. (ಕೆಲವು ಅಪವಾದಗಳನ್ನು ಹೊರತುಪಡಿಸಿ).

ಅಂದು ಬಹುಪಾಲು ಮಾಧ್ಯಮಗಳು ತಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳಲು ಹೆಣಗಾಡಿದ್ದವು. ಇಂದು ಮಾರಿಕೊಳ್ಳಲು ಹೆಣಗಾಡುತ್ತಿವೆ. ಅಂದು ಸಾಂವಿಧಾನಿಕ ಸಂಸ್ಥೆಗಳನ್ನು ನಿರ್ವಹಿಸುವ ಅಧಿಕಾರ ವರ್ಗ ಒತ್ತಡದ ರಾಜಕಾರಣಕ್ಕೆ ಸಿಲುಕಿ ಅಸಹಾಯಕತೆಯಿಂದ ನಲುಗಿಹೋಗಿದ್ದವು.

ಇಂದು ಇದೇ ಅಧಿಕಾರ ವರ್ಗ ಸ್ವಹಿತಾಸಕ್ತಿಯ ಸ್ವಾರ್ಥತೆಗೆ ಬಲಿಯಾಗಿ ನಲುಗಿಹೋಗುತ್ತಿರುವ ಜನಸಮುದಾಯಗಳನ್ನು ನಿರ್ಲಕ್ಷಿಸುತ್ತಿದೆ. ಸಂವಿಧಾನದ 42ನೆಯ ತಿದ್ದುಪಡಿ ಅನೂರ್ಜಿತವಾಗಿದೆ ನಿಜ, ಆದರೆ ನಿಷ್ಕ್ರಿಯವಾಗಿಲ್ಲ ಎನ್ನುವುದನ್ನು 2020ರಲ್ಲಿ ಕಾಣುತ್ತಿದ್ದೇವೆ. ಇಂದಿನ ರಾಜಕಾರಣದ ನೆಲೆಯಲ್ಲಿ ನಿಂತು 1975ರ ಸಂದರ್ಭವನ್ನು ಗಮನಿಸಿದಾಗ 42ನೆಯ ತಿದ್ದುಪಡಿ ಒಂದು ತೆಳು ಅಡ್ಡ ಪರದೆಯಂತೆ ಕಾಣುತ್ತದೆ.

ಈ ಬದಲಾವಣೆಯ ಹಿಂದೆ ಇರುವ ಬಂಡವಾಳ ವ್ಯವಸ್ಥೆಯನ್ನು ಗಮನಿಸುವಾಗಲೂ ಎರಡು ಭಿನ್ನ ನೆಲೆಗಳಲ್ಲಿ ನಿಂತು ವಿಶ್ಲೇಷಿಸಬೇಕಾಗುತ್ತದೆ. ಔದ್ಯಮಿಕ ಬಂಡವಾಳದ ಕಾಲಘಟ್ಟದ 1975 ಮತ್ತು ಹಣಕಾಸು ಬಂಡವಾಳ ಕಾಲಘಟ್ಟದ 2020 ವಿಭಿನ್ನವಾಗಿ ಕಾಣುವುದೇ ಆದರೆ ಅದು ಆರ್ಥಿಕ ನೆಲೆಯಲ್ಲಿ ಮಾತ್ರ. ಸಮಾಜೋ ಸಾಂಸ್ಕೃತಿಕ ನೆಲೆಗಳಲ್ಲಿ ಯಾವುದೇ ಭಿನ್ನತೆಯನ್ನು ಗುರುತಿಸಲಾಗುವುದಿಲ್ಲ.

ಅಂದು ಭಾರತವನ್ನು ಆಳುತ್ತಿದ್ದ ಪ್ರಜಾತಂತ್ರ ವ್ಯವಸ್ಥೆಯೇ ಇಂದಿಗೂ ಆಳುತ್ತದೆ. ಇಂದಿಗೂ ಅದೇ ಗಣತಂತ್ರ ಮತ್ತು ಒಕ್ಕೂಟ ವ್ಯವಸ್ಥೆಗೆ ಬದ್ಧವಾಗಿರುವ ಸಂವಿಧಾನವನ್ನು ಹೊತ್ತು ತಿರುಗುತ್ತಿದ್ದೇವೆ. ಅಂದು ತುರ್ತುಪರಿಸ್ಥಿತಿ ಹೇರಲು ಕಾರಣ ಎನ್ನಲಾಗಿದ್ದ ಪ್ರಭುತ್ವ ವಿರೋಧಿ ಹೋರಾಟದ ನೆಲೆಗಳು ಇಂದಿಗೂ ಜೀವಂತವಾಗಿವೆ.

ಸಮ ಸಮಾಜಕ್ಕಾಗಿ ಹೋರಾಡುವ ಮತ್ತು ಅಸಮಾನತೆ, ದೌರ್ಜನ್ಯ, ಶೋಷಣೆಯ ವಿರುದ್ಧ ದನಿ ಎತ್ತುವ ನಾಗರಿಕ ಸಮಾಜವನ್ನು ದಮನಿಸದೆ ಹೋದರೆ ಬಂಡವಾಳ ವ್ಯವಸ್ಥೆಗೆ ತನ್ನ ಅಧಿಪತ್ಯವನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಇದನ್ನು ಇಂದಿರಾಗಾಂಧಿ 1975ರಲ್ಲಿ ಸಂವಿಧಾನ ತಿದ್ದುಪಡಿಯ ಮೂಲಕ ಸಾಧಿಸಲು ಯತ್ನಿಸಿದ್ದರು. ಇಂದು ಸಂವಿಧಾನದ ಚೌಕಟ್ಟಿನಲ್ಲೇ ಯತ್ನಿಸಲಾಗುತ್ತಿದೆ. ಪ್ರಜೆಗಳ ದೃಷ್ಟಿಯಿಂದ ಪರಿಸ್ಥಿತಿ ಬದಲಾಗಿಲ್ಲ, ಪ್ರಭುತ್ವಕ್ಕೆ ಈ ಶೋಷಣೆಯ ಕ್ರಮದ ತುರ್ತು ಹಾಗೆಯೇ ಉಳಿದಿದೆ.

1975ರ ತುರ್ತುಪರಿಸ್ಥಿತಿಯನ್ನು ಒಂದು ಪಕ್ಷದ ಅಥವಾ ಓರ್ವ ಅಧಿನಾಯಕಿಯ ನಿರಂಕುಶ ಧೋರಣೆಯ ಪ್ರತೀಕ ಎಂದು ಭಾವಿಸುವುದು ತಾತ್ವಿಕ ನೆಲೆಯಲ್ಲಿ ಒಪ್ಪಬಹುದಾದರೂ, ಭಾರತದ ಪ್ರಭುತ್ವದ ಆಡಳಿತ ಧೋರಣೆಯಲ್ಲಿ ಕವಲೊಡೆದಿದ್ದು ಈ ಪರ್ವಕಾಲದ ಮೂಲಕವೇ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

1960-70ರ ದಶಕದ ಜನಪರ ಹೋರಾಟಗಳ ಚರಿತ್ರೆಯನ್ನು ಅವಲೋಕಿಸಿದಾಗ ಇದು ಸ್ಪಷ್ಟವಾಗುತ್ತದೆ. ಭೂ ಹೋರಾಟಗಳು, ನಕ್ಸಲ್‍ಬಾರಿ ಚಳುವಳಿ, ದಲಿತ-ಆದಿವಾಸಿ-ಮಹಿಳೆಯರ ಶೋಷಣೆಯ ವಿರುದ್ಧ ಹೊರಹೊಮ್ಮಿದ ಜನಾಂದೋಲನಗಳು, ಪ್ರಾದೇಶಿಕ ಅಸಮಾನತೆಯ ವಿರುದ್ಧ ಸಿಡಿದೆದ್ದ ದನಿಗಳು, ಕಾರ್ಮಿಕರು-ರೈತರು-ಕೃಷಿ ಕಾರ್ಮಿಕರ ಹಕ್ಕೊತ್ತಾಯಗಳು, ಸ್ವಾತಂತ್ರ್ಯೋತ್ತರ ಭಾರತದ ಅಭಿವೃದ್ಧಿ ಪಥದಲ್ಲಿ ವಂಚಿತರಾದ ಅನೇಕ ಜನಸಮುದಾಯಗಳ ಆಕ್ರೋಶದ ದನಿಗಳು, ಸಮಾಜೋ ಸಾಂಸ್ಕೃತಿಕ ತಾರತಮ್ಯಗಳ ವಿರುದ್ಧ ಸಿಡಿದೆದ್ದ ನಾಗರಿಕ ಸಮಾಜದ ಪ್ರಬುದ್ಧ ದನಿಗಳು ಅಂದಿನ ಸರ್ಕಾರವನ್ನು ಮತ್ತು ಭಾರತದ ಪ್ರಭುತ್ವವನ್ನು ಕಂಗೆಡಿಸಿದ್ದನ್ನು ನಿರ್ಲಕ್ಷಿಸಲಾಗುವುದಿಲ್ಲ.

1971ರ ಯುದ್ಧೋನ್ಮಾದವೂ ಈ ಜನಾಂದೋಲನಗಳ ಹುಮ್ಮಸ್ಸನ್ನು ಶಿಥಿಲಗೊಳಿಸಲಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ. ಹಸಿರು ಕ್ರಾಂತಿ, ಬ್ಯಾಂಕ್ ರಾಷ್ಟ್ರೀಕರಣ, ಭೂ ಸುಧಾರಣೆ, ಸಾರ್ವಜನಿಕ ಉದ್ದಿಮೆಗಳ ಪ್ರಗತಿಯ ಹೊರತಾಗಿಯೂ ದೇಶದ ಶೋಷಿತ ಜನಸಮುದಾಯಗಳ ಬದುಕಿನ ಪ್ರಶ್ನೆ ಗಂಭೀರವಾಗಿತ್ತು. ಭೂ ಸುಧಾರಣೆ ಭೂಮಿಯ ಹಂಚಿಕೆಗೆ ನೆರವಾದರೂ ಊಳಿಗಮಾನ್ಯ ಶೋಷಣೆಯನ್ನು ಹೋಗಲಾಡಿಸಲಿಲ್ಲ.

ಸಮ ಸಮಾಜ ಮತ್ತು ಸಮಾಜವಾದದ ಪ್ರತಿಪಾದನೆಗಳ ನಡುವೆಯೇ ಸ್ವಾತಂತ್ರ್ಯದ ಪರಿಕಲ್ಪನೆಯನ್ನೇ ಪ್ರಶ್ನಿಸುವ ನಾಗರಿಕ ದನಿ ದಾಖಲಾಗಿದ್ದನ್ನು ಸ್ಮರಿಸಬಹುದು. ಈ ಹೋರಾಟಗಳು ಅರೆ ಸಮಾಜವಾದಿ ಭಾರತದ ಬಂಡವಾಳಶಾಹಿ ಪ್ರಭುತ್ವಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದ್ದೂ ಹೌದು. ಇದೇ ಸಂದರ್ಭದಲ್ಲಿ ಪ್ರಾದೇಶಿಕ ಅಭಿವೃದ್ಧಿಯ ಪರಿಕಲ್ಪನೆ ಮತ್ತು ಪ್ರಾದೇಶಿಕ ಅಸ್ಮಿತೆಯ ರಾಜಕಾರಣ ಗರಿಗೆದರಿದ್ದನ್ನೂ ಗಮನಿಸಬೇಕು.

1975ರ ತುರ್ತುಪರಿಸ್ಥಿತಿಯ ಹೇರಿಕೆಗೆ ಅಧಿಪತ್ಯ ರಾಜಕಾರಣ ಒಂದು ನೆಪಮಾತ್ರವಾಗಿತ್ತು. ಜಾಗತಿಕ ಬಂಡವಾಳಕ್ಕೆ ತೆರೆದುಕೊಳ್ಳುತ್ತಿದ್ದ ಭಾರತದ ಬಂಡವಾಳ ವ್ಯವಸ್ಥೆ ತನ್ನ ಸಮಾಜವಾದಿ ಪೊರೆಯನ್ನು ಕಳಚಿಕೊಂಡು ಜಾಗತಿಕ ಬಂಡವಾಳದೊಡನೆ ಬೆಸೆದುಕೊಳ್ಳುವ ನಿಟ್ಟಿನಲ್ಲಿ ದೇಶದ ಪ್ರಭುತ್ವ ತನ್ನ ಆಡಳಿತ ಧೋರಣೆಯನ್ನು ಬದಲಿಸುವುದು ಆಳುವ ವರ್ಗಗಳಿಗೆ ಅನಿವಾರ್ಯವೆನಿಸಿತ್ತು.

ಹಾಗಾಗಿಯೇ ತುರ್ತುಪರಿಸ್ಥಿತಿಯನ್ನು ಎಷ್ಟೇ ಉಗ್ರವಾಗಿ ವಿರೋಧಿಸಿದರೂ ಬೂರ್ಷ್ವಾ ರಾಜಕೀಯ ಪಕ್ಷಗಳು ನಂತರ ಎರಡು ಮೂರು ದಶಕಗಳಲ್ಲಿ ಸಂವಿಧಾನದ ಚೌಕಟ್ಟಿನಲ್ಲೇ ಜಾರಿಯಾದ ಅನೇಕ ಕರಾಳ ಶಾಸನಗಳನ್ನು ಮೌನವಾಗಿ ಸಹಿಸಿಕೊಂಡಿದ್ದವು. ಇಂದಿಗೂ ಸಹಿಸಿಕೊಂಡಿವೆ. ಇದು ಪ್ರಭುತ್ವದ ತುರ್ತು ಮತ್ತು ಅನಿವಾರ್ಯತೆಯಾಗಿತ್ತು.

ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸೆರೆವಾಸ ಅನುಭವಿಸಿ, ದೇಶವ್ಯಾಪಿ ಹೋರಾಟಗಳನ್ನು ರೂಪಿಸಿ ಪ್ರಜಾತಂತ್ರದ ಉಳಿವಿಗಾಗಿ “ಅವಿರತ ಶ್ರಮಿಸಿದ” ರಾಜಕೀಯ ನಾಯಕರ ದಂಡು ಇಂದಿಗೂ ನಮ್ಮ ಮುಂದಿದೆ.

ಈ ನಾಯಕರಲ್ಲಿ ಸಾರ್ವಭೌಮ ಪ್ರಜೆಗಳ ಮತ್ತು ಭಾರತದ ಸಂವಿಧಾನದ ಪ್ರಜಾತಂತ್ರ ಆಶಯಗಳನ್ನು ಕಾಣಲು ಸಾಧ್ಯವೇ ? ಇಂದು ಸ್ವಾತಂತ್ರ್ಯ ಸೇನಾನಿಗಳಂತೆ ಆತ್ಮರತಿಯಲ್ಲಿ ತೊಡಗಿರುವ ರಾಜಕೀಯ ನಾಯಕರು, ಪ್ರಾದೇಶಿಕ ಪಕ್ಷಗಳ ನೇತಾರರು, ಸಾಂಸ್ಕøತಿಕ ರಾಜಕಾರಣದ ಅಧಿಪತಿಗಳು ಭಾರತದ ಪ್ರಜಾತಂತ್ರ ವ್ಯವಸ್ಥೆಯನ್ನು ಹಂತಹಂತವಾಗಿ ನಾಶಪಡಿಸುತ್ತಲೇ ಇರುವುದನ್ನು ಗಮನಿಸುತ್ತಲೇ ಇದ್ದೇವೆ.

ಮಾನವ ಹಕ್ಕುಗಳಿಗಾಗಿ, ಶೋಷಣೆ ಮತ್ತು ದೌರ್ಜನ್ಯದ ವಿರುದ್ಧ, ಸಾಮಾಜಿಕ ನ್ಯಾಯಕ್ಕಾಗಿ, ಸಮಾನತೆಗಾಗಿ ಹೋರಾಡುವ ದನಿಗಳನ್ನು ನಿರಂತರವಾಗಿ ದಮನಿಸಲಾಗುತ್ತಿದ್ದರೂ ದಿವ್ಯ ಮೌನಕ್ಕೆ ಶರಣಾಗಿರುವ 1975ರ ಸೇನಾನಿಗಳು ನಮ್ಮ ನಡುವೆಯೇ ಅಧಿಕಾರದಲ್ಲಿದ್ದಾರೆ.

1975ರಲ್ಲಿ “ ಪ್ರಜಾತಂತ್ರದ ಉಳಿವಿಗಾಗಿ ” ತಮ್ಮ ಸೈದ್ಧಾಂತಿಕ ನೆಲೆಗಳನ್ನೂ ಬದಿಗಿಟ್ಟು ಒಂದಾದ ಸಮಾಜವಾದಿ ನಾಯಕರು ಇಂದು ಸಮ ಸಮಾಜದ ಮೌಲ್ಯಗಳನ್ನೇ ಮರೆತಂತೆ ಕಾಣುತ್ತಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ವಿರೋಧಿ ನೆಲೆಯಲ್ಲಿ ಬಲಪಂಥೀಯ ರಾಜಕಾರಣಕ್ಕೆ ಪ್ರತ್ಯಕ್ಷ-ಪರೋಕ್ಷ ಬೆಂಬಲ ನೀಡಿದ ಸಮಾಜವಾದಿ ನಾಯಕರು ನಂತರದ ದಿನಗಳಲ್ಲಿ, ಬಲಪಂಥೀಯ ಆಕ್ರಮಣಶೀಲತೆಯನ್ನು ಖಂಡಿಸುವ ವ್ಯವಧಾನವನ್ನೂ ಕಳೆದುಕೊಂಡಿದ್ದನ್ನು ಕಂಡಿದ್ದೇವೆ.

ಮತ್ತೊಂದೆಡೆ ಪ್ರಭುತ್ವದ ಆಶಯಗಳನ್ನು ಮತ್ತಷ್ಟು ಬಲಪಡಿಸಲೆಂದೇ 1975ರ ಸಂದರ್ಭವನ್ನು ಬಳಸಿಕೊಂಡು, ಸಮಾಜವಾದದ ಮೆಟ್ಟಿಲುಗಳನೇರಿ ತನ್ನ ಭದ್ರ ಕೋಟೆ ಕಟ್ಟಿದ ಬಲಪಂಥೀಯ ರಾಜಕಾರಣ ಇಂದು ಅಧಿಪತ್ಯ ಸಾಧಿಸಿರುವುದನ್ನೂ ಕಾಣುತ್ತಿದ್ದೇವೆ.

1975ರಲ್ಲಿ ಇಂದಿರಾ ಸೃಷ್ಟಿಸಿದ ಅಲೆ ಪ್ರಭುತ್ವದ ಮೂಲ ಲಕ್ಷಣಗಳನ್ನೇ ಬದಲಿಸುವ ಒಂದು ಆಯಾಮವನ್ನೂ ಹೊಂದಿತ್ತು ಎನ್ನುವುದನ್ನು 1980ರ ನಂತರದ ರಾಜಕೀಯ ಬೆಳವಣಿಗೆಗಳಲ್ಲಿ, 1990ರ ದಶಕದ ಸಾಂಸ್ಕೃತಿಕ ರಾಜಕಾರಣದಲ್ಲಿ, 2000ದ ನಂತರದ ನವ ಉದಾರವಾದದ ಬೆಳವಣಿಗೆಗಳಲ್ಲಿ ಮತ್ತು 2010ರ ನಂತರದ ದಮನಕಾರಿ ಆಡಳಿತ ವ್ಯವಸ್ಥೆಯಲ್ಲಿ ಸ್ಪಷ್ಟವಾಗಿ ಗಮನಿಸಬಹುದಲ್ಲವೇ ?

ಅಂದಿನ ತುರ್ತುಪರಿಸ್ಥಿತಿಯನ್ನು ನೆನೆದು ಉದ್ರೇಕದ ಮಾತುಗಳನ್ನಾಡುವ ಮುನ್ನ ಇಂದು ಅಪಾಯದಲ್ಲಿರುವ ಸಾಂಸ್ಥಿಕ ವ್ಯವಸ್ಥೆಯ ಬಗ್ಗೆಯೂ ಉಸಿರೆತ್ತಬೇಕಲ್ಲವೇ ? ಮಾಧ್ಯಮ ಸ್ವಾತಂತ್ರ್ಯ ಮತ್ತು ವಾಕ್ ಸ್ವಾತಂತ್ರ್ಯದ ರಕ್ಷಣೆಗಾಗಿ 1975ರಲ್ಲಿ ಟೊಂಕಕಟ್ಟಿ ನಿಂತು ಸೆರೆವಾಸವನ್ನೂ ಅನುಭವಿಸಿದ ನಾಯಕರೇ ಇಂದು ದೇಶಾದ್ಯಂತ ಪ್ರತಿರೋಧದ ದನಿಗಳನ್ನು ಶಾಶ್ವತವಾಗಿ ಅಡಗಿಸಲು ಯತ್ನಿಸುತ್ತಿರುವುದನ್ನು ಗಮನಿಸಬೇಕಲ್ಲವೇ ?

ಅಂದು ಔದ್ಯಮಿಕ ಬಂಡವಾಳ ಸೃಷ್ಟಿಸಿದ ಬಿಕ್ಕಟ್ಟುಗಳಿಗಿಂತಲೂ ಹೆಚ್ಚಿನ ಬಿಕ್ಕಟ್ಟನ್ನು ನವ ಉದಾರವಾದದ ಹಣಕಾಸು ಬಂಡವಾಳ ಇಂದು ಸೃಷ್ಟಿಸಿದೆ. ಅಂದು ರೈತ ಸಮುದಾಯದಲ್ಲಿದ್ದ ಭೂಮಿಯ ಪ್ರಶ್ನೆ ಇಂದಿಗೂ ಜೀವಂತವಾಗಿದೆ. ಅಂದು ಸ್ಥಳೀಯ ಭೂಮಾಲಿಕರ ವಿರುದ್ಧ ಹೋರಾಡಬೇಕಿದ್ದ ಕೃಷಿಕ ಸಮುದಾಯ ಇಂದು ಜಾಗತಿಕ ಬಂಡವಾಳದ ವಿರುದ್ಧ ಹೋರಾಡಬೇಕಿದೆ.

ಭೂ ಸುಧಾರಣೆ ತಲೆಕೆಳಗಾಗಿ ಚಲಿಸುತ್ತಿರುವ ಈ ಸಂದರ್ಭದಲ್ಲಿ ಭೂಮಿಯ ಪ್ರಶ್ನೆ ಯಾವುದೇ ರಾಜಕೀಯ ಪಕ್ಷಗಳ, ದಲಿತ ಸಂಘಟನೆಗಳ ಆದ್ಯತೆಯಾಗಿಲ್ಲ ಎನ್ನುವುದೇ ಚಿಂತೆಗೀಡುಮಾಡುವ ವಿಚಾರವಾಗಿದೆ. ಮತ್ತೊಂದೆಡೆ ಅಂದು ಔದ್ಯಮಿಕ ಪ್ರಗತಿ ಮತ್ತು ಆರ್ಥಿಕ ಅಭಿವೃದ್ಧಿಗೆ ಅಡಿಗಲ್ಲುಗಳಂತೆ ಶ್ರಮಿಸಿದ ದುಡಿಯುವ ವರ್ಗಗಳು ಇಂದು ಬಳಸಿ ಬಿಸಾಡಬಹುದಾದ ಮಾರುಕಟ್ಟೆ ಸರಕುಗಳಂತಾಗಿದ್ದಾರೆ.

ಕಾರ್ಮಿಕ ಸಂಘಟನೆಗಳು ಪ್ರಭುತ್ವ ವಿರೋಧಿ ನಿಲುವಿನಿಂದ ವಿಮುಖವಾಗಿದ್ದನ್ನು ಈ 45 ವರ್ಷಗಳಲ್ಲಿ ವಿವಿಧ ಹಂತಗಳಲ್ಲಿ ಕಂಡಿದ್ದೇವೆ. ಇದರ ನೇರ ಪರಿಣಾಮ ಇಂದು ದೇಶದ ದುಡಿಯುವ ವರ್ಗಗಳ ಮೂಲ ನೆಲೆಯೇ ಶಿಥಿಲವಾಗಿದೆ.

ಅಸ್ಮಿತೆಯ ರಾಜಕಾರಣದಲ್ಲಿ ಅಸ್ತಿತ್ವದ ನೆಲೆಗಳನ್ನೇ ಕಳೆದುಕೊಂಡಿರುವ ಜನಸಮುದಾಯಗಳು ಇಂದು ರಾಜಕೀಯ ಬಂದಿಗಳಾಗಿವೆ. 1975ರ ತುರ್ತುಪರಿಸ್ಥಿತಿ ಈ ಬೆಳವಣಿಗೆಗೆ ಶಿಲಾನ್ಯಾಸ ಮಾಡಿದ್ದನ್ನು ಅಲ್ಲಗಳೆಯಲಾಗುವುದಿಲ್ಲ. ಭೀಮಾ ಕೊರೆಗಾಂವ್ ಪ್ರಕರಣ, ಜೆಎನ್‍ಯು ಘಟನೆಗಳು, ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್ ಆರ್ ಸಿ ವಿರೋಧಿ ಹೋರಾಟಗಳು ಈ ಶಿಲಾನ್ಯಾಸ ಫಲಕದಲ್ಲಿ ಬಿಂಬಿಸಲ್ಪಡುತ್ತಿವೆ.

ಕೃಷಿ ಭೂಮಿಯನ್ನು ಶಾಶ್ವತವಾಗಿ ಕಳೆದುಕೊಳ್ಳುವ ಸಂದರ್ಭದಲ್ಲಿ ಈ ದೇಶದ ರೈತ ಸಮುದಾಯ ತನ್ನ ಅಸ್ತಿತ್ವಕ್ಕಾಗಿ ಹೋರಾಡಬೇಕಿದೆ. ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಹಂತಹಂತವಾಗಿ ಕಳೆದುಕೊಳ್ಳುತ್ತಲೇ ಅಸ್ತಿತ್ವದ ರಕ್ಷಣೆಗಾಗಿ ದುಡಿಯುವ ವರ್ಗಗಳು ಹೋರಾಡಬೇಕಿದೆ.

ಸಾಮಾಜಿಕ ನ್ಯಾಯದ ಪರಿಕಲ್ಪನೆ ನ್ಯಾಯಾಂಗದ
ಆವರಣದಲ್ಲೇ ಆವಿಯಾಗಿ ಹೋಗುತ್ತಿರುವ ಸಂದರ್ಭವನ್ನು ಶೋಷಿತ ಸಮುದಾಯಗಳು ಎದುರಿಸಬೇಕಿದೆ. ಹಣಕಾಸು ಬಂಡವಾಳದ ಆಕ್ರಮಣಕ್ಕೆ ಆದಿವಾಸಿ ಸಮುದಾಯ ತತ್ತರಿಸಿ ಹೋಗುತ್ತಿದೆ. ಹೆಣ್ತನದ ಅಸ್ಮಿತೆಯನ್ನು ಉಳಿಸಿಕೊಳ್ಳಲು ಮಹಿಳಾ ಸಮುದಾಯ ನಿರಂತರವಾಗಿ ಹೋರಾಡುವ ಅನಿವಾರ್ಯತೆಯಲ್ಲಿದೆ.

ಇಷ್ಟರ ನಡುವೆ ಮಾನವ ಹಕ್ಕುಗಳಿಗಾಗಿ, ನಾಗರಿಕ ಹಕ್ಕುಗಳಿಗಾಗಿ, ಪೌರತ್ವದ ಹಕ್ಕುಗಳಿಗಾಗಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡುವ ದನಿಗಳಿಗೆ ಎಲ್ಲ ಸಾಂವಿಧಾನಿಕ ಸಾಂಸ್ಥಿಕ ನೆಲೆಗಳೂ ಮುಚ್ಚಲ್ಪಟ್ಟಿವೆ. ನ್ಯಾಯಾಂಗದ ಅಂಗಳದಲ್ಲೂ ನ್ಯಾಯಕ್ಕಾಗಿ ಗೋಗರೆಯಬೇಕಾದ, ಹಾತೊರೆಯಬೇಕಾದ ಹತಾಶ ಪರಿಸ್ಥಿತಿ ನಿರ್ಮಾಣವಾಗಿದೆ.

1975ರಲ್ಲಿ ಈ ದನಿಗಳ ಪರ ನಿಂತಿದ್ದ ಪ್ರಜಾತಂತ್ರದ ನಾಲ್ಕನೆಯ ಸ್ತಂಭ , ಮಾಧ್ಯಮ ಜಗತ್ತು ಇಂದು ಬೇಲಿ ದಾಟಿ ಪ್ರಭುತ್ವದೊಡನೆ ನಿಂತಿದೆ. ಈ ದನಿಗಳಿಗೆ ರಾಜಕೀಯ ಪರ್ಯಾಯ ಒದಗಿಸಬೇಕಾದ ಪಕ್ಷಗಳು ಅಸ್ಮಿತೆಯ ರಾಜಕಾರಣಕ್ಕೆ ಬಲಿಯಾಗಿ ಬೆತ್ತಲಾಗಿವೆ. ಜನಪರ ಹೋರಾಟಗಳನ್ನೂ ಈ ಅಸ್ಮಿತೆಯ ರಾಜಕಾರಣವೇ ನುಂಗಿಹಾಕಿರುವುದನ್ನೂ ನೋಡುತ್ತಿದ್ದೇವೆ.

ಈ ಸಂದಿಗ್ಧ ಪರಿಸ್ಥಿತಿಯಲ್ಲೇ 45 ವರ್ಷಗಳ ಹಿಂದಿನ ಕರಾಳ ದಿನಗಳನ್ನು ನೆನೆಯುತ್ತಿದ್ದೇವೆ. ಈ ಅವಧಿಯಲ್ಲಿ ದೇಶದ ಎಡಪಕ್ಷಗಳು ಮತ್ತು ದಲಿತ ಸಂಘಟನೆಗಳು ಹೋರಾಟದ ಹಾದಿಗಳನ್ನು ಸ್ಪಷ್ಟವಾಗಿ ಗುರುತಿಸದೆ ಹೋದದ್ದನ್ನು ಗಮನಿಸಬೇಕಿದೆ.

1975ರ ಕರಾಳ ದಿನಗಳನ್ನು ನೆನೆದು ದುಃಖಿಸುವ ಮುನ್ನ ನಮ್ಮ ಸುತ್ತಲೂ ಕವಿಯುತ್ತಿರುವ ಕಾರ್ಮೋಡದ ಪರಿವೆ ನಮ್ಮಲ್ಲಿದೆಯೇ ಎಂದು ಪ್ರಶ್ನಿಸಿಕೊಳ್ಳುವುದು ಒಳಿತಲ್ಲವೇ ? ಅಂದು ಹೇರಲಾಗಿತ್ತು ಇಂದು ಜಾರಿಗೊಳಿಸಲಾಗುತ್ತಿದೆ. ಪರಿಸ್ಥಿತಿಯಲ್ಲಿ ಬದಲಾವಣೆಯಾಗಿಲ್ಲ. ಅಧಿಕಾರ ರಾಜಕಾರಣದ ತುರ್ತು ಸಹ ಬದಲಾಗಿಲ್ಲ. ಯುವ ಪೀಳಿಗೆಗೆ ಇದನ್ನು ಮನದಟ್ಟು ಮಾಡುತ್ತಲೇ ನಾವು ಬದಲಾಗಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೋವಿಡ್ ಸೋಂಕಿತ ಪೇದೆ ಆತ್ಮಹತ್ಯೆ: ಯಡಿಯೂರಪ್ಪ ಸಂತಾಪ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ಬೆಂಗಳೂರು: ಕರ್ನಾಟಕ ರಾಜ್ಯ ಮೀಸಲು ಪಡೆಯ ಬೆಂಗಳೂರು ನಗರದ 4ನೇ ಬೆಟಾಲಿಯನ್‌ನಲ್ಲಿ ಸಶಸ್ತ್ರ ಪೇದೆಯಾಗಿದ್ದ ಮಂಜೇಶ್ ಅವರು, ಕೋವಿಡ್ ಸೋಂಕು ದೃಢಪಟ್ಟ ಕಾರಣ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ದುಃಖಕರ ಎಂದು ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.

ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಭಗವಂತ ಅವರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದಿರುವ ಮುಖ್ಯಮಂತ್ರಿಗಳು, ಮೃತರ ಕುಟುಂಬಕ್ಕೆ ಸರ್ಕಾರದಿಂದ ದೊರಕಬಹುದಾದ ಎಲ್ಲ ಪರಿಹಾರ ಮತ್ತು ಸೌಲಭ್ಯಗಳನ್ನು ಶೀಘ್ರವಾಗಿ ಒದಗಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಿರುವುದಾಗಿ ತಿಳಿಸಿದ್ದಾರೆ.

ಪೊಲೀಸ್ ಸಿಬ್ಬಂದಿಗಳು ಕೋವಿಡ್ ಸಂಬಂಧಿತ ಕೆಲಸಗಳಲ್ಲಿ ಮುಂಚೂಣಿಯಲ್ಲಿ ವಾರಿಯರ್ ಗಳಾಗಿ ಜೀವವನ್ನೇ ಪಣಕ್ಕಿಟ್ಟು ಶ್ಲಾಘನೀಯ ಕೆಲಸ ಮಾಡುತ್ತಿದ್ದು, ಅವರಿಗಾಗಿಯೇ ಪ್ರತ್ಯೇಕ ಕೋವಿಡ್ ಪರೀಕ್ಷಾ ಕೇಂದ್ರ ಪ್ರಾರಂಭಿಸಲಾಗುತ್ತಿದೆ. ಸೋಂಕಿತರಿಗೆ ಅತ್ಯುತ್ತಮ ಚಿಕಿತ್ಸೆ ನೀಡಲು ಎಲ್ಲ ಕ್ರಮಗಳನ್ನೂ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಒಟ್ಟಾರೆ, ಕೋವಿಡ್ ಸೋಂಕಿನಿಂದ ಮರಣ ಹೊಂದಿದವರ ಸಂಖ್ಯೆ ಇತರ ಪ್ರಮುಖ ರಾಜ್ಯಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಯಾವುದೇ ಸೋಂಕಿತ ನಾಗರಿಕರು ಹಾಗೂ ಸರ್ಕಾರಿ ಸಿಬ್ಬಂದಿ ಯಾವುದೇ ಕಾರಣಕ್ಕೂ ದೃತಿಗೆಡುವ ಅಗತ್ಯವಿಲ್ಲ. ಸರ್ಕಾರ ಸದಾ ನಿಮ್ಮೆಲ್ಲರ ಜೊತೆಗಿರಲಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending