Connect with us

ರಾಜಕೀಯ

ರಕ್ಷಣಾ ಅಗತ್ಯಗಳನ್ನು ಪೂರೈಸಲು ರಕ್ಷಣಾ ಇಲಾಖೆಯ ಭೂಮಿಗಳ ಮೆಗಾ ಸೇಲ್..!

Published

on

 

  • ಅರ್ಜುನ್ ಬಿ.
    ಕನ್ನಡಕ್ಕೆ: ಕೆ.ಎಂ.ನಾಗರಾಜ್

ತಾನೊಬ್ಬ ಜನ ಬೆಂಬಲದಿಂದ ಪ್ರವರ್ಧಮಾನಕ್ಕೆ ಬರುತ್ತಿರುವ ಜಾಗತಿಕ ಬಲಪಂಥದ ಅಗ್ರಮಾನ್ಯ ನಾಯಕ ಎಂದು ಮೋದಿಯವರು ಭಾವಿಸಿರಬಹುದು. ಆದರೆ, ಅವರು ತಾನು ಸಾಮ್ರಾಜ್ಯಶಾಹಿಯ ಸುಳಿಯಲ್ಲಿ ಸಿಕ್ಕಿಕೊಂಡಿದ್ದೇನೆ ಮತ್ತು ವಿಶ್ವದಲ್ಲಿ ಅಮೇರಿಕಾದ ಯಜಮಾನಿಕೆಯನ್ನು ಬಲಪಡಿಸುವುದೇ ತನಗಿಗಿರುವ ಏಕೈಕ ಆಯ್ಕೆ ಎಂಬುದನ್ನು ಅರ್ಥಮಾಡಿಕೊಂಡಿಲ್ಲ. ಫಲಿತಾಂಶವೆಂದರೆ, ಭಾರತವನ್ನು ಒಂದು ಮಹಾನ್ ಶಕ್ತಿಶಾಲಿ ದೇಶವನ್ನಾಗಿ ಮಾರ್ಪಡಿಸುವ ಕನಸನ್ನು ಆರು ವರ್ಷಗಳ ಹಿಂದೆ ಭಾರತದ ಜನತೆಗೆ ಕಾಣಿಸಿದ್ದ ಅವರ ಆಳ್ವಿಕೆಯಲ್ಲಿ ಈಗ ದೇಶ ತನ್ನ ಚರಿತ್ರೆಯಲ್ಲಿ, ರಕ್ಷಣಾ ಮಂತ್ರಾಲಯವು ತನ್ನ ಖರ್ಚು ವೆಚ್ಚಗಳಿಗೆ ತನ್ನ ಆಸ್ತಿಗಳನ್ನು ಮಾರಿಕೊಂಡು ಕಾಲ ಸಾಗಿಸುವ ಹಂತವನ್ನು ನಾವೀಗ ತಲುಪಿದ್ದೇವೆ.

___________________________________________

ರು ವರ್ಷಗಳ ಹಿಂದೆ, ಪ್ರಧಾನ ಮಂತ್ರಿ ಮೋದಿಯವರು ಭಾರತವನ್ನು ಒಂದು ಮಹಾನ್ ಶಕ್ತಿಶಾಲಿ ದೇಶವನ್ನಾಗಿ ಮಾರ್ಪಡಿಸುವ ಕನಸನ್ನು ಭಾರತದ ಜನತೆಗೆ ಕಾಣಿಸಿದ್ದರು. ಭಾರತದ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಹಾರಿಸುವುದಾಗಿ ಅವರು 2014ರಲ್ಲಿ ಘೋಷಿಸಿದ್ದರು. ದೇಶದ ರಕ್ಷಣೆ ಮಾಡಿಕೊಳ್ಳುವುದರ ಜೊತೆಗೆ ಜಾಗತಿಕ ವ್ಯವಹಾರ-ವಿದ್ಯಮಾನಗಳಲ್ಲೂ ಭಾರತವು ಪ್ರಧಾನ ಭೂಮಿಕೆ ನಿರ್ವಹಿಸುತ್ತದೆ ಎಂದು ಮೋದಿ ಭಾವಿಸಿದ್ದರು. ಎರಡನೆಯ ಅವಧಿಗೆ ಅಧಿಕಾರಕ್ಕೆ ಬಂದ ನಂತರವಂತೂ ಮೋದಿಯವರ ವರ್ಚಸ್ಸಿನಿಂದ ಭಾರತದ ಮತದಾರರು ಮಾತ್ರವಲ್ಲ ಅಂತಾರಾಷ್ಟ್ರೀಯ ಸಮುದಾಯವೇ ನಿಬ್ಬೆರಗಾಗಿದೆ ಎಂದೇ ಮೋದಿ ಭಕ್ತರು ಭಾವಿಸಿದ್ದಾರೆ. ಹಾಗಾಗಿ, ಕಾಶ್ಮೀರದ ವಿಶೇಷ ಸ್ಥಾನ-ಮಾನ ಕಲ್ಪಿಸುವ 370ನೇ ವಿಧಿಯನ್ನು ಸರಿಯಾದ ಸಮಯದಲ್ಲಿ ಮೋದಿ ರದ್ದುಗೊಳಿಸಿದ್ದಾರೆ, ಏಕೆಂದರೆ, ಭಾರತದ ಪರವಾಗಿ ಅಂತಾರಾಷ್ಟ್ರೀಯ ಅಭಿಪ್ರಾಯವನ್ನು ಅವರು ಪ್ರಭಾವಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದಾಗಿ ಆರ್‌ಎಸ್‌
ಸ್‌ನ ಸಹಚರರು ನಂಬಿದ್ದಾರೆ.

ದೇಶದ ಜನಸಂಖ್ಯೆಯ ಬೃಹತ್ ಗಾತ್ರ, ಅದರ ಭೌಗೋಳಿಕ ನೆಲೆ ಮತ್ತು ಅದರ ಆರ್ಥಿಕ ವಹಿವಾಟುಗಳ ಸ್ವರೂಪ ಮತ್ತು ಗಾತ್ರಗಳಿಂದಾಗಿ, ಜಾಗತಿಕ ವಾಣಿಜ್ಯ-ವ್ಯವಹಾರ ವಹಿವಾಟುಗಳಲ್ಲಿ ಭಾರತವು ಸ್ವಾಭಾವಿಕವಾಗಿಯೇ ಒಂದು ಪ್ರಮುಖ ಜಾಗತಿಕ ಪೈಪೋಟಿದಾರ ಎಂಬುದು ಭಾರತದ ಬಲಪಂಥದ ನಂಬಿಕೆ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಸಂಜಾತರನ್ನು ಸಂಮೋಹಗೊಳಿಸುವ ಯಶಸ್ವಿ ಕಲೆಯೇ ದೇಶದ ಶಕ್ತಿ-ಸಾಮರ್ಥ್ಯವೆಂಬ ಗುಂಗಿನಲ್ಲಿರುವ ಮೋದಿಯವರು ಅಮೇರಿಕಾದ ಅಧ್ಯಕ್ಷರನ್ನೂ ತನ್ನ ತಾಳಕ್ಕೆ ತಕ್ಕಂತೆ ಕುಣಿಸಬಹುದು ಎಂದು ಭಾವಿಸಿದ್ದಾರೆ.

ಇಂತಹ ದೊಡ್ಡಸ್ತಿಕೆಯ ಭ್ರಮೆಗಳ ಪ್ರಚಾರದ ಮೂಲಕ ವಾಸ್ತವವನ್ನು ಮುಚ್ಚಿಡಲಾಗದು. ಕಟು ವಾಸ್ತವ ಏನೆಂದರೆ, ಕೈಗಾರಿಕೆಗಳ ಅಶಕ್ತ ತಳಹದಿ, ಉನ್ನತವಲ್ಲದ ಮಟ್ಟದ ತಂತ್ರಜ್ಞಾನ, ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಸಂಖ್ಯೆಯ ಜ್ಞಾನ ಬೋಧನೆಯ ಉತ್ಕೃಷ್ಟ ಕೇಂದ್ರಗಳನ್ನು ಹೊಂದಿರುವ ಭಾರತವು ಜಾಗತಿಕ ಗಣ್ಯರನ್ನು ಪ್ರಭಾವಿಸಲಾಗುವುದಿಲ್ಲ.

ಆದಾಗ್ಯೂ, ಮೋದಿ ಸರ್ಕಾರ ಮತ್ತು ಅವರ ಬೆಂಬಲಿಗರು ವಾಸ್ತವ ಜಗತ್ತಿನಿಂದ ದೂರ ಸರಿದು ತಮ್ಮ ಕಲ್ಪನೆಯ ಲೋಕದಲ್ಲಿ ವಿಹರಿಸುತ್ತಲೇ ಇದ್ದಾರೆ. ಇತ್ತೀಚೆಗೆ ಬ್ಯಾಂಕಾಕ್‌ನಲ್ಲಿ ನಡೆದ ಪ್ರಾದೇಶಿಕ ಸಮಗ್ರ ಆರ್ಥಿಕ ಒಪ್ಪಂದ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದರು: ಭಾರತದಲ್ಲಿ ಉದ್ಯಮ ಸ್ಥಾಪಿಸಲು ಇದು ಅತ್ಯತ್ತಮ ಸಮಯ. ಅನೇಕ ಸಂಗತಿಗಳಲ್ಲಿ ಏರಿಕೆ-ಇಳಿಕೆಗಳಾಗುತ್ತಿವೆ. ದೇಶದಲ್ಲಿ ವ್ಯವಹಾರ ನಡೆಸುವುದು ಸುಗಮವಾಗಿದೆ. ಬದುಕು ಸುಗಮವಾಗಿದೆ. ವಿದೇಶಿ ನೇರ ಹೂಡಿಕೆ, ಮೈದುಂಬಿದ ಅರಣ್ಯಗಳು, ಪೇಟೆಂಟ್ಸ್ (ಸ್ವಾಮ್ಯ), ಉತ್ಪಾದಕತೆ ಮತ್ತು ಮೂಲಸೌಕರ್ಯಗಳು ಹೆಚ್ಚುತ್ತಿವೆ. ಅದೇ ಸಮಯದಲ್ಲಿ ತೆರಿಗೆಗಳು, ತೆರಿಗೆ ದರಗಳು, ಕಛೇರಿಗಳಲ್ಲಿ ವಿಧಾನ-ವಿಳಂಬಗಳು, ಲಂಚಗುಳಿತನಗಳು ಮತ್ತು ಚಮಚಾಗಿರಿ ಇಳಿಯುತ್ತಿವೆ.

ಆದರೆ, ಅಹಿತವಾದ ವಾಸ್ತವ ಏನೆಂದರೆ, ಭಾರತವು ಈಗ ಆರ್ಥಿಕ ಮಂದಗತಿಯಲ್ಲಿ ಒದ್ದಾಡುತ್ತಿದೆ. ನೆರೆಯ ಬಾಂಗ್ಲಾದೇಶವು, ಭಾರತಕ್ಕಿಂತಲೂ ವೇಗವಾಗಿ, 8.1% ಆರ್ಥಿಕ ಬೆಳವಣಿಗೆ ಸಾಧಿಸುತ್ತಿದೆ. ನೇಪಾಳವೂ ಸಹ 2019ರಲ್ಲಿ ಭಾರತಕ್ಕಿಂತಲೂ ವೇಗವಾಗಿ ಬೆಳೆಯುತ್ತದೆ ಎಂದು ಅಂದಾಜು ಮಾಡಲಾಗಿದೆ. ವಿಶ್ವ ಬ್ಯಾಂಕಿನ ಪ್ರಕಾರ, ಆರ್ಥಿಕ ರಂಗದಲ್ಲಷ್ಟೇ ಅಲ್ಲ, ಹಲವು ಸಾಮಾಜಿಕ ಸೂಚಿಗಳಲ್ಲೂ ಬಾಂಗ್ಲಾದೇಶವು ಭಾರತಕ್ಕಿಂತ ಮುಂದಿದೆ. ಬಾಂಗ್ಲಾದೇಶದ ಸರಾಸರಿ ಮಾನವ ಜೀವಿತಾವಧಿ 72 ವರ್ಷಗಳಿದ್ದರೆ, ಭಾರತದಲ್ಲಿ ಅದು 69.1 ವರ್ಷಗಳು. ಬಾಂಗ್ಲಾದೇಶದ ಶಿಶು ಮರಣ ಸಂಖ್ಯೆ 25.1 ಇದ್ದರೆ, ಭಾರತದಲ್ಲಿ ಅದು 31.5 ಇದೆ.

ಕೇಂದ್ರ ಸರ್ಕಾರದ ಹಣಕಾಸಿನ ಪರಿಸ್ಥಿತಿ ಅದೆಷ್ಟು ಹದಗೆಟ್ಟಿದೆ ಎಂದರೆ, ಅದು ತನ್ನ ಮಾಮೂಲಿ ಖರ್ಚು-ವೆಚ್ಚಗಳಿಗೂ ಹಣ ಹೊಂದಿಸಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಹಾಗಾಗಿ, ತನ್ನ ಉದ್ದಿಮೆಗಳನ್ನೇ ಮಾರುತ್ತಿದೆ. ಈ ಬಗ್ಗೆ ಸಿಪಿಐ(ಎಂ) ನಾಯಕ ಸೀತಾರಾಂ ಯೆಚೂರಿ ಹೀಗೆ ಟ್ವೀಟ್ ಮಾಡಿದ್ದರು: ಮೋದಿ ಸರ್ಕಾರ ಪಾಪರಾಗಿದೆಯೇ? ತನ್ನ ದುಂದುಗಾರಿಕೆಯ ಖರ್ಚುಗಳಿಗೆ ಮತ್ತು ಕಟ್ಟು ಕತೆ ಹಾಗೂ ಅಸತ್ಯಗಳಿಂದ ಕೂಡಿದ ಪ್ರಚಾರಗಳಿಗೆ ಹಣ ಹೊಂದಿಸಿಕೊಳ್ಳಲು ಜನತೆಗೆ ಸೇರಿದ ಸಂಪತ್ತನ್ನು ಮಾರುವುದೇ?

ಕೇಂದ್ರ ಸರ್ಕಾರದ ಆದಾಯವು ಕಳೆದ ಎರಡು ವರ್ಷಗಳಿಂದಲೂ ಸತತವಾಗಿ ಇಳಿಯುತ್ತಿದೆ. ಹಾಗಾಗಿ, ಅದರ ವಿತ್ತೀಯ ಕೊರತೆ ಹೆಚ್ಚುತ್ತಿದೆ. ಈ ಕೊರತೆಯನ್ನು ಸರಿದೂಗಿಸಿಕೊಳ್ಳುವ ಸಲುವಾಗಿಯೇ, ರಿಸರ್ವ್ ಬ್ಯಾಂಕ್ ಹೊಂದಿದ್ದ ಮೀಸಲು ನಿಧಿಯಿಂದ 1.76 ಲಕ್ಷ ಕೋಟಿ ರೂಗಳನ್ನು ಇತ್ತೀಚೆಗಷ್ಟೇ ಕಸಿದುಕೊಂಡಿತ್ತು. ಆದಾಗ್ಯೂ, ಕೇಂದ್ರ ಸರ್ಕಾರವು ರಿಸರ್ವ್ ಬ್ಯಾಂಕ್ ಮೀಸಲು ಇಟ್ಟುಕೊಂಡಿರುವ ಚಿನ್ನವನ್ನೂ ಸಹ ಹರಾಜು ಹಾಕುವ ಸನ್ನಾಹದಲ್ಲಿದೆ ಎಂಬ ವರದಿ ಪ್ರಕಟವಾಗಿದೆ.

ಅಷ್ಟಾಗಿಯೂ, ಖಜಾನೆಯಲ್ಲಿ ಸಾಕಷ್ಟು ಹಣವಿಲ್ಲದಿರುವ ಪರಿಸ್ಥಿತಿಯಲ್ಲಿ, ಆದಾಯದ ಕೊರತೆಯನ್ನು ಸರಿದೂಗಿಸಿಕೊಳ್ಳಲು ಸರ್ಕಾರವು ಜನತೆಗೆ ಸೇರಿದ ಸಾರ್ವಜನಿಕ ಉದ್ದಿಮೆಗಳ ಸ್ವತ್ತುಗಳನ್ನು ಮಾರುತ್ತಿದೆ.
ಮಹಾರತ್ನ ಕಂಪೆನಿ ಎಂಬ ಅಭಿದಾನಕ್ಕೆ ಪಾತ್ರವಾಗಿದ್ದ ಮತ್ತು ಇಲ್ಲಿಯವರೆಗೆ 17,246 ಕೋಟಿ ರೂಗಳ ಲಾಭಾಂಶವನ್ನು ಕೇಂದ್ರ ಸರ್ಕಾರಕ್ಕೆ ನೀಡಿರುವ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ನಿನ 53.29% ಷೇರುಗಳನ್ನು; ಹಿಂದಿನ ವರ್ಷದಲ್ಲಿ 171% ಲಾಭಾಂಶ ಕೊಟ್ಟಿರುವ ಮತ್ತು ನವರತ್ನ ಕಂಪೆನಿಗಳಲ್ಲಿ ಒಂದಾದ ಕಂಟೈನರ್ ಕಾರ್ಪೊರೇಷನ್ನಿನ 63.75%; ಷಿಪ್ಪಿಂಗ್ ಕಾರ್ಪೊರೇಷನ್ನಿನ 63.75%; ತೆಹ್ರಿ ಹೈಡ್ರೊ ಡೆವೆಲ್ಪಮೆಂಟ್ ಕಾರ್ಪೊರೇಷನ್ನಿನ 75%; ನಾರ್ತ್ ಈಸ್ಟ್ ಇಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ನಿನ 100% ಷೇರುಗಳನ್ನು ಮಾರುವ ನಿರ್ಧಾರವನ್ನು ಕೇಂದ್ರ ಸಚಿವ ಸಂಪುಟವು ಕೈಗೊಂಡಿದೆ. ಮಾರಾಟದ ಪಟ್ಟಿಯಲ್ಲಿ, ಹಿಂದಿನ ವರ್ಷ ಒಂದರಲ್ಲೇ 7,218 ಕೋಟಿ ರೂ ಗಳ ಲಾಭ ಗಳಿಸಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ನಿನ 100% ಷೇರುಗಳ ಮಾರಾಟವನ್ನು ಕೊನೆ ಗಳಿಗೆಯಲ್ಲಿ ಸೇರಿಸಲಾಗಿದೆ ಎಂದು ವರದಿಯಾಗಿದೆ.

ಸರ್ಕಾರದ ಆರ್ಥಿಕ ಪರಿಸ್ಥಿತಿ ಅದೆಷ್ಟು ಬಿಗಡಾಯಿಸಿದೆ ಎಂದರೆ, ಕಾಯಂ ಸೇನೆಯನ್ನು ಪರಿಣಾಮಕಾರಿಯಾಗಿ ನಿಯುಕ್ತಿಗೊಳಿಸಲು ಮತ್ತು ಅದನ್ನು ನವೀನವಾಗಿ ಸಜ್ಜುಗೊಳಿಸಲು ಸಾಕಾಗುವಷ್ಟು ಹಣ ಸರ್ಕಾರದ ಬಳಿ ಇಲ್ಲ. ವಿತ್ತೀಯ ಮುಂಜಾಗರೂಕತೆಯ ಹೆಸರಿನಲ್ಲಿ, ಮಾಜಿ ಯೋಧರಿಗೆ ಸಲ್ಲಬೇಕಿದ್ದ ಮತ್ತು ವಾಗ್ದಾನ ಮಾಡಿದ್ದ ಒಂದು ಶ್ರೇಣಿ-ಒಂದು ನಿವೃತ್ತಿ ವೇತನವನ್ನು ನಿರಾಕರಿಸಲಾಗಿದೆ.

ಇದು ಒಂದು ಸ್ವಯಂ ನಿರ್ಮಿತ ಸಮಸ್ಯೆ. ಮೂಗು ಹೊರಲಾರದಷ್ಟು ದೊಡ್ಡದಾದ ಮೂಗುತಿ ಎನ್ನುವ ರೀತಿಯ ವಿದೇಶ ನೀತಿಯ ಅನುಸರಣೆ ಮತ್ತು ಚಾಣಕ್ಯತೆ ಮತ್ತು ಮಹತ್ವಾಕಾಂಕ್ಷೆಗಳಿಂದ ಕೂಡಿದ ಮನೋಭಾವದ ಕಾರಣಗಳಿಂದಾಗಿ ಈ ಸಮಸ್ಯೆ ಉದ್ಭವವಾಗಿದೆ. ಶಕ್ತಿಶಾಲಿ ದೇಶಗಳ ಮಿಲಿಟರಿ ಮೈತ್ರಿ ಕೂಟಗಳಿಗೆ ಸೇರಿಕೊಳ್ಳುವ ನೀತಿಗೆ ಬಲು ದುಬಾರಿ ಬೆಲೆಯನ್ನೇ ತೆರಬೇಕಾಗುತ್ತದೆ. ಮಿಲಿಟರಿ ಮೈತ್ರಿ ಕೂಟದ ಪಾಲುದಾರ ದೇಶಗಳು ಹೊಂದಿರುವ ಅತ್ಯಾಧುನಿಕ ಶಸ್ತ್ರ ಸಜ್ಜಿತ ಯುದ್ಧ ವಿಮಾನ, ಜಲಾಂತರ್ಗಾಮಿ ನೌಕೆ ಮತ್ತು ಟ್ಯಾಂಕರ್ ಇತ್ಯಾದಿಗಳಿಗೆ ಹೊಂದಿಕೊಳ್ಳುವ ಮಾದರಿಯ ಉಪಕರಣಗಳನ್ನೇ ಭಾರತ ಕೊಳ್ಳಬೇಕಾಗುತ್ತದೆ. ಅವುಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ದಂಡಿಯಾಗಿ ಹಣ ಖರ್ಚುಮಾಡಬೇಕಾಗುತ್ತದೆ.

ಇಂತಹ ಖರ್ಚುಗಳಿಂದಾಗಿ ಉಂಟಾಗಿರುವ ಆರ್ಥಿಕ ಒತ್ತಡವನ್ನು ನಿಭಾಯಿಸುವ ಸಲುವಾಗಿ, ಅಂದರೆ, ದೇಶದ ರಕ್ಷಣೆ ಮತ್ತು ಆಂತರಿಕ ಭದ್ರತೆಯ ವೆಚ್ಚಗಳಿಗೆ ಖಜಾನೆಯ ಹೊರಗಿನ ಮೂಲಗಳಿಂದ ಹಣ ಹೊಂದಿಸಿಕೊಳ್ಳುವ ಉದ್ದೇಶದಿಂದ, ಹದಿನೈದನೆಯ ಹಣಕಾಸು ಆಯೋಗದ ಪರಾಮರ್ಶೆಯ ವಿಷಯ ವ್ಯಾಪ್ತಿಯನ್ನು ತಿದ್ದುಪಡಿ ಮಾಡಲು ಸರ್ಕಾರವು ಹವಣಿಸುತ್ತಿದೆ. ಇಂತಹ ಒಂದು ಪ್ರಸ್ತಾಪದ ಸಮರ್ಥನೆಯಾಗಿ ಸರ್ಕಾರ ಕೊಡುವ ಕಾರಣವೆಂದರೆ, ಖರ್ಚುಗಳ ಬಗ್ಗೆ ರಕ್ಷಣಾ ಮಂತ್ರಾಲಯದ ಮುನ್ನಂದಾಜಿಗೂ ಮತ್ತು ವಿತ್ತ ಮಂತ್ರಾಲಯವು ಹಂಚುವ ಹಣದಲ್ಲಿ ಸತತವಾಗಿ ಶೇ.೨೫ರಷ್ಟು ಕೊರತೆಯಾಗುತ್ತಿದೆ.

ಹದಿನೈದನೆಯ ಹಣಕಾಸು ಆಯೋಗದ ಪರಾಮರ್ಶೆಯ ವಿಷಯ ವ್ಯಾಪ್ತಿಯ ತಿದ್ದುಪಡಿಯ ಮೂಲಕ ರಕ್ಷಣಾ ಇಲಾಖೆಯ ಭೂಮಿಯನ್ನು ಹರಾಜಿಗಿಡುವ ಪ್ರಕ್ರಿಯೆ ಆರಂಭವಾಗುತ್ತದೆ. ಈಗಾಗಲೇ ಭೂಮಿಯ ಹರಾಜಿನ ವಾಸನೆ ಹಿಡಿದಿರುವ ಭೂಗಳ್ಳರು ಮತ್ತು ಖಾಸಗಿ ವಲಯದ ರಣ ಹದ್ದುಗಳು ಅದನ್ನು ಕಬಳಿಸಲು ಹೊಂಚುಹಾಕುತ್ತಾ ಕುಳಿತಿವೆ. ರಕ್ಷಣಾ ಇಲಾಖೆಯು ಹೊಂದಿರುವ 17.5 ಲಕ್ಷ ಎಕರೆಗಳಷ್ಟು ಭೂಮಿಯಲ್ಲಿ, ಎಲ್ಲೆಲ್ಲಿ ಎಷ್ಟೆಷ್ಟು ಭೂಮಿ ಒತ್ತುವರಿಯಾಗಿದೆ ಮತ್ತು ನಾಗರಿಕ ಉದ್ದೇಶಗಳಿಗಾಗಿ ಅಗತ್ಯವಿರುವ ಸೇನೆಯ ಭೂಮಿ ಎಷ್ಟು ಎಂಬುದರ ಬೇಡಿಕೆಯನ್ನು ಗುರುತಿಸುವ ಕೆಲಸ ನಡೆಯುತ್ತಿದೆ.

ತಹ ಹರಾಜಿನ ಮೂಲಕ ರಕ್ಷಣಾ ಮಂತ್ರಾಲಯವು ಕನಿಷ್ಠ 25,000 ಕೋಟಿ ರೂಗಳನ್ನು ಪಡೆಯಬಹುದು ಎಂಬುದು ತಜ್ಞರ ಅಂದಾಜು. ಈ ಹಣವನ್ನು ಮೂಲ ಧನವಾಗಿ ಇಟ್ಟುಕೊಂಡು ಅದರಿಂದ ಬರುವ ಬಡ್ಡಿಯನ್ನು ಸೇನೆಯ ವಿಶೇಷ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು ಎಂಬುದು ತಜ್ಞರ ಸಲಹೆ.

ಈ ಸಂಬಂಧವಾಗಿ ಸಾರ್ವಜನಿಕ ಅಭಿಪ್ರಾಯ gಪಿಸುವ ಉದ್ದೇಶದಿಂದ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾಗುವಂತೆ ನೋಡಿಕೊಳ್ಳುವ ಕೆಲಸ ರಭಸದಿಂದ ನಡೆಯುತ್ತಿದೆ. ಸಾರ್ವಜನಿಕರಲ್ಲಿ ಅನುಕಂಪ ಹುಟ್ಟಿಸುವ ಉದ್ದೇಶದಿಂದ ದೇಶದ ಉದ್ದಗಲಕ್ಕೂ ಈಗಾಗಲೇ 9600 ಎಕರೆಗೂ ಮೇಲ್ಪಟ್ಟ ಭೂಮಿಯ ಒತ್ತುವರಿಯಾಗಿದೆ. ಈ ಸಂಬಂಧವಾಗಿ, ಹಲವಾರು ರಾಜ್ಯಗಳು ಮತ್ತು ನಗರ ಸಭೆಗಳ ವಿರುದ್ಧ ರಕ್ಷಣಾ ಮಂತ್ರಾಲಯ ದಾವೆ ಹೂಡಿದೆ ಎಂಬ ಕತೆಗಳನ್ನು ಹೆಣೆಯಲಾಗುತ್ತಿದೆ.

ಈ ಎಲ್ಲ ವಿದ್ಯಮಾನಗಳು ಸೂಚಿಸುವ ಸಾರಾಂಶ ಏನೆಂದರೆ, ದೇಶದ ಚರಿತ್ರೆಯಲ್ಲಿ, ರಕ್ಷಣಾ ಮಂತ್ರಾಲಯವು ಸೇನೆಯ ಖರ್ಚು ವೆಚ್ಚಗಳ ನಿರ್ವಹಣೆಗಾಗಿ ಸೇನೆಯ ಆಸ್ತಿ ಮಾರಾಟದಿಂದ ಬರುವ ಬಡ್ಡಿಯನ್ನು ಅವಲಂಬಿಸಿ ಕಾಲ ಸಾಗಿಸುವ ಹಂತವನ್ನು ನಾವೀಗ ತಲುಪಿದ್ದೇವೆ.

ಮಹಾನ್ ದೇಶಗಳು ತಮ್ಮ ಸೇನೆಯ ಖರ್ಚು ವೆಚ್ಚಗಳಿಗೆ ಕಂಡ ಕಂಡ ಸಂದಿ ಮೂಲೆಗಳನ್ನೂ ತಡಕಾಡಿ ತಮ್ಮ ಖಜಾನೆ ತುಂಬಿಸಿಕೊಳ್ಳುವುದಿಲ್ಲ. ಒಂದು ಹುರುಪಿನ ಕಾಯಂ ಸೇನೆಯನ್ನು ಪೋಷಿಸಿ ಅದನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಹೆಣಗಾಡುವ ಯಾವುದೇ ದೇಶದ ಖಜಾನೆಯು ತನ್ನ ಸರ್ಕಾರಕ್ಕೆ ನೆಲದ ಮೇಲೆ ನಿಲ್ಲುವಂತೆ ಮತ್ತು ಅದರ ಮಹತ್ವಾಕಾಂಕ್ಷೆಯನ್ನು ತಾನು ಹೊರುವಷ್ಟು ಮಟ್ಟಕ್ಕೆ ಇಳಿಸಿಕೊಳ್ಳುವಂತೆ ಹೇಳಬೇಕು.

ನಮ್ಮ ಕೊರತೆಗಳನ್ನು ಲೆಕ್ಕಿಸದೆ ಹಿಂದೂ ಮಹಾಸಾಗರದಲ್ಲಿ ನಾವು ಚೀನಾದೊಂದಿಗೆ ಪೈಪೋಟಿಗೆ ಇಳಿಯಲಾಗದು. ಅಪಾರ ಖರ್ಚು ವೆಚ್ಚಗಳು ತಗಲುವಂತಹ ಇಂದ್ರಜಾಲಗಳೋ ಎಂಬಂತಹ ಮಿಲಿಟರಿ ರಕ್ಷಣಾ ದೃಶ್ಯಾವಳಿಗಳನ್ನು ಆಗು ಮಾಡಿಕೊಳ್ಳಲಾಗದು. ನಮ್ಮ ವಿದೇಶ ನೀತಿಯನ್ನು ಮಾರ್ಪಡಿಸಿದ ನಂತರ, ನಮ್ಮ ರಾಜತಾಂತ್ರಿಕತೆ ಯಶಸ್ವಿಯಾಗುತ್ತದೆಂದು ಊಹಿಸಿಕೊಳ್ಳಲಾಗದು.

ಮೋದಿಯವರ ವಿದೇಶ ನೀತಿಯು ಸುಕ್ಕುಗಟ್ಟಿದೆ ಮತ್ತು ಅತಿ ಆಡಂಬರದಿಂದ ಕೂಡಿದೆ. ಅದು ಸೌಮ್ಯವಾಗಿರಬೇಕು ಮತ್ತು ತಾಳ್ಮೆಯಿಂದ ಕೂಡಿರಬೇಕು. ಬೇರೆ ಬೇರೆ ದೇಶಗಳಲ್ಲಿ ಅದ್ದೂರಿಯ ಸಭೆ ಸಮಾರಂಭಗಳನ್ನು ಏರ್ಪಡಿಸಲು ಮೋದಿ ಸರ್ಕಾರವು ಸಾವಿರಾರು ಕೋಟಿ ರೂ ಗಳನ್ನು ಖರ್ಚುಮಾಡುತ್ತಿದೆ. ಇವೆಲ್ಲ ಹಿಂದೆಂದೂ ಆಚರಿಸದ, ಕಂಡರಿಯದ ಕೇಳರಿಯದ ಕ್ರಮಗಳು. ಮೂರು ಟ್ರಿಲಿಯನ್ ಗಾತ್ರದ ಒಂದು ಅರ್ಥವ್ಯವಸ್ಥೆಯು ತನ್ನ ಇತಿ ಮಿತಿಗಳನ್ನು ಅರ್ಥಮಾಡಿಕೊಳ್ಳುವುದನ್ನು ಕಲಿಯಬೇಕು. ಅಂಧ ಶ್ರದ್ಧೆ ಮತ್ತು ನಂಬಿಕೆಗಳಷ್ಟೇ ಒಂದು ಪರಿಪಕ್ವ ಕಾರ್ಯನೀತಿಗೆ ಆಧಾರವಾಗಲಾರವು. ಮೋದಿಯವರ ವಿದೇಶ ನೀತಿಯ ಸಮಸ್ಯೆಯೆಂದರೆ, ಅದು, ದೇಶೀಯವಾಗಿ ಕಡಿಮೆ ಸಾಮರ್ಥ್ಯದ ಆಯುಧ ಮತ್ತು ಮದ್ದುಗುಂಡುಗಳನ್ನು ತಯಾರಿಸುವ ಮದ್ಯಮ ಬಲದ ದೇಶವೊಂದಕ್ಕೆ ಹೊರಲಾರದಷ್ಟು ಭವ್ಯ ಪ್ರಮಾಣದ್ದು.

ಬಲಪಂಥದ ಸಮಸ್ಯೆಯೆಂದರೆ, ಅದು ಬಲ ಪ್ರಯೋಗ ಮಾಡುವ ಇಚ್ಛಾಶಕ್ತಿಯನ್ನು ರಾಷ್ಟ್ರ ಗೌರವದೊಂದಿಗೆ ತಳುಕುಹಾಕುತ್ತದೆ. ದೇಶದ ಸಾರ್ವಭೌಮತೆಯ ಹಿರಿಮೆಯು ಅದು ಹೊಂದಿರುವ ಮಿಲಿಟರಿ ಶಕ್ತಿ ಮತ್ತು ಅದರ ಬಲ ಪ್ರದರ್ಶನಗಳಿಗೆ ನೇರವಾಗಿ ಅನುಗುಣವಾಗಿರುತ್ತದೆ ಎಂದು ಬಲಪಂಥ ಭಾವಿಸುತ್ತದೆ. ಆದರೆ, ಇದೇನೂ ಸಾರ್ವತ್ರಿಕವಾಗಿ ಅನ್ವಯವಾಗುವ ನಿಯಮವಲ್ಲ ಎಂಬುದು ಅದರ ಜಾಣ ಮರೆವು.

ತನ್ನ ಶಸ್ತ್ರಾಸ್ತ್ರಗಳ ಅಗತ್ಯವನ್ನು ಮತ್ತು ಸಂಪರ್ಕ-ಸಾಧನಗಳನ್ನು ಹೊರ ದೇಶಗಳಿಂದ ಪೂರೈಸಿಕೊಳ್ಳುವ ಮಧ್ಯಮ ಬಲದ ದೇಶ ತಾನೊಂದು ಗಟ್ಟಿ ಶಕ್ತಿಯೆಂದು ತೋರಿಸುವ ಅದರ ಆಕಾಂಕ್ಷೆ ಹೆಚ್ಚಿದಷ್ಟು ಅದರ ಸಾರ್ವಭೌಮತ್ವ ಕುಗ್ಗುತ್ತದೆ. ರಾಷ್ಟ್ರ ಹಿತವನ್ನು ಕಾಪಾಡುವ ಪ್ರಯತ್ನಗಳು ಅವಾಸ್ತವಿಕವಾಗಿದ್ದರೆ, ದೇಶವು ಹೆಚ್ಚು ಪರಾಧೀನವೂ ಮತ್ತೂ ಬೇಧ್ಯವೂ ಆಗುತ್ತದೆ.

ತಾನೊಬ್ಬ ಜನ ಬೆಂಬಲದಿಂದ ಪ್ರವರ್ಧಮಾನಕ್ಕೆ ಬರುತ್ತಿರುವ ಜಾಗತಿಕ ಬಲಪಂಥದ ಅಗ್ರಮಾನ್ಯ ನಾಯಕ ಎಂದು ಮೋದಿಯವರು ಭಾವಿಸಿರಬಹುದು. ಆದರೆ, ಅವರು ತಾನು ಸಾಮ್ರಾಜ್ಯಶಾಹಿಯ ಸುಳಿಯಲ್ಲಿ ಸಿಕ್ಕಿಕೊಂಡಿದ್ದೇನೆ ಮತ್ತು ವಿಶ್ವದಲ್ಲಿ ಅಮೇರಿಕಾದ ಯಜಮಾನಿಕೆಯನ್ನು ಬಲಪಡಿಸುವುದೇ ತನಗಿರುವ ಏಕೈಕ ಆಯ್ಕೆ ಎಂಬುದನ್ನು ಅರ್ಥಮಾಡಿಕೊಂಡಿಲ್ಲ.

(ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ರಾಜಕೀಯ

NRC, CAB ಮತ್ತು ವಲಸಿಗರು

Published

on

NRC ಹಾಗೂ CABನ್ನು ಸರಳೀಕರಿಸಿ ಹೇಳುವುದಾದರೆ ಅಸ್ಸಾಂನ ಉದಾಹರಣೆ ತೆಗೆದುಕೊಳ್ಳಬೇಕು. ಅಸ್ಸಾಂನಲ್ಲಿ ಹೀಗೋ ಹಾಗೋ NRC ಮುಗಿದಿದೆ. ಬಿಜೆಪಿಯ ಪ್ರಕಾರ ಅಸ್ಸಾಂನಲ್ಲಿ ಒಂದು ಕೋಟಿ ಅಕ್ರಮ ಮುಸ್ಲೀಮ್ ಬಾಂಗ್ಲಾದೇಶಿಗರಿದ್ದರು. ಹಾಗಾಗಿ NRC ನಡೆಯಿತು. NRCಯ ಮೊದಲ ಕರಡುಪ್ರತಿಯ ಪ್ರಕಾರ ಅಕ್ರಮ ಬಾಂಗ್ಲಾದೇಶಿಗಳ ಸಂಖ್ಯೆ ಒಂದು ಕೋಟಿಯಿದ್ದದ್ದು ನಲವತ್ತು ಲಕ್ಷಕ್ಕಿಳಿಯಿತು.

ಈ ಕರಡು NRCಯ ಫೈನಲ್ ಆದಾಗ ಭಾರತದಲ್ಲಿ ತಮ್ಮ ಇರುವಿಕೆಯ, ಬಾಳ್ವೆಯ ದಾಖಲೆಗಳನ್ನು ಕೊಡಲಾಗದೆ ಉಳಿದದ್ದು ಬರೀ ಹತ್ತೊಂಬತ್ತು ಲಕ್ಷ ಜನ. ಇದಾಗುವಾಗ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು ಎನ್ನುವುದನ್ನು ಮರೆಯಬಾರದು. ಕೊನೆಗೆ ಉಳಿದ ಹತ್ತೊಂಬತ್ತು ಲಕ್ಷ ಜನರಲ್ಲಿ NRC ಪ್ರಕಾರ ಹನ್ನೆರಡು ಲಕ್ಷ ಹಿಂದೂಗಳೆಂದಾಯಿತು. ಯಾವಾಗ ದಾಖಲೆ ಕೊಡಲಾಗದ ವಲಸಿಗರಲ್ಲಿ ಮುಸ್ಲೀಮರ ಸಂಖ್ಯೆ ಕಡಿಮೆಯಾಗಿ ಹಿಂದೂಗಳ ಸಂಖ್ಯೆ ಜಾಸ್ತಿಯಾಯಿತೋ, ಆವಾಗ ಸ್ವತ: ಅಸ್ಸಾಂ ಬಿಜೆಪಿ NRC ಬಗ್ಗೆ ಉಲ್ಟಾ ಹೊಡೆಯಿತು. NRCಯನ್ನೇ ತಿರಸ್ಕರಿಸಿ ಅದನ್ನು ಒಂದು ರದ್ದಿ ಪೇಪರ್ ಎಂದು ಬಣ್ಣಿಸಿತು.

ಇದು NRC ಮಹಾತ್ಮೆಯಾದರೆ ಈವಾಗ CABಯನ್ನು ತಂದು ಭಾರತದಲ್ಲಿ ತಮ್ಮ ಬಾಳ್ವೆಯ ಸೂಕ್ತ ದಾಖಲೆಗಳನ್ನು ಕೊಡಲಾಗದ ಈ ಹನ್ನೆರಡು ಲಕ್ಷ ಹಿಂದೂಗಳನ್ನು ಭಾರತದ ಪೌರರನ್ನಾಗಿ ಮಾಡುತ್ತಾರೆ. ಉಳಿದ ಏಳು ಲಕ್ಷ ಮುಸ್ಲೀಮರನ್ನು ಏನು ಮಾಡುತ್ತಾರೆ? ಅವರನ್ನು ಹೊರಹಾಕಲು ಆಗುವುದಿಲ್ಲ. ಅವರು ತಮ್ಮ ಅನರ್ಹತೆಯನ್ನು NRC Tribunalನಲ್ಲಿ ಪ್ರಶ್ನಿಸಬಹುದು.

ಅಲ್ಲೂ ಅವರು ಸೂಕ್ತ ದಾಖಲೆ ಕೊಟ್ಟಿಲ್ಲವೆಂದರೆ? ಅವರು ಭಾರತದವರಲ್ಲ ಬದಲಾಗಿ ಬಾಂಗ್ಲಾದೇಶದಿಂದ ಬಂದವರು ಎಂದು ಹೇಳಲು ದಾಖಲೆಗಳಿರಬೇಕಲ್ವಾ? ಹಾಗೆ ದಾಖಲೆಗಳಿಲ್ಲವೆಂದರೆ ಬಾಂಗ್ಲಾದೇಶವೂ ಅವರನ್ನು ಬರಮಾಡಿಕೊಳ್ಳುವುದಿಲ್ಲ. ಅಲ್ಲಿಗೆ ಈ ದಾಖಲೆಗಳಿಲ್ಲದ ಅಷ್ಟೂ ಮಂದಿಯನ್ನು ಜೈಲಿಗಾಗಬೇಕು ಇಲ್ಲಾಂದ್ರೆ Detention Centreಗಳಿಗೆ ಹಾಕಬೇಕು. ಅಸ್ಸಾಂನಲ್ಲಿ ಸದ್ಯಕ್ಕೆ ತಲಾ ಐವತ್ತು ಕೋಟಿ ವೆಚ್ಚದಲ್ಲಿ ಹನ್ನೊಂದು Detention Centreಗಳನ್ನು ಕಟ್ಟಲಾಗುತ್ತಿದೆ. ಸದ್ಯಕ್ಕೆ ಒಂದು Detention Centre ತಯಾರಾಗಿದೆಯಷ್ಟೇ. ಪ್ರತೀ Detention Centreನಲ್ಲಿ ಮೂರು ಸಾವಿರ ಅಕ್ರಮ ವಲಸಿಗರನ್ನು ಇಡಬಹುದು. ಈ ಹನ್ನೊಂದು Detention Centreಗಳ ಹೊರತಾಗಿ ಅಸ್ಸಾಂನ ಆರು ಜಿಲ್ಲಾ ಕಾರಾಗ್ರಹಗಳಲ್ಲಿ ಸಣ್ಣ Detention Centreಗಳಿವೆ. ಈ Detention Centreಗಳಿಗೆ ಸೇರಿಸಿದ ಅಕ್ರಮ ವಲಸಿಗರನ್ನು ಸಂಪೂರ್ಣವಾಗಿ ನೋಡಿಕೊಳ್ಳುವ ಜವಾಬ್ದಾರಿ ರಾಜ್ಯ ಹಾಗೂ ಕೇಂದ್ರ ಸರಕಾರದ್ದು.

ಇದುವರೆಗೂ ಕೂಲಿನಾಲಿ ಮಾಡಿ ಬದುಕುತ್ತಿದ್ದ ಇವರು ಈವಾಗ ಸಂಪೂರ್ಣವಾಗಿ ಸರಕಾರದ ಜವಾಬ್ದಾರಿ. ಇವರ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿನೂ ಸರಕಾರದ ಮೇಲೆ, ಇವರೆಲ್ಲರ ಊಟ, ಆರೋಗ್ಯ ಎಲ್ಲಾ ಜವಾಬ್ದಾರಿನೂ ಸರಕಾರದ ಮೇಲೆ. ಸರಕಾರದ ಮೇಲೆ ಎಂದರೆ ನಮ್ಮ ಮೇಲೆ. ಪರವಾಗಿಲ್ಲ. ನಮ್ಮಲ್ಲಿ ಪೆಟ್ರೋಲಿಗೆ ಇನ್ನೂರು ರೂಪಾಯಿಯಾದರೆ ಬೈಕನ್ನು ತಲೆಮೇಲೆ ಹೊತ್ತುಕೊಂಡು ಹೋಗುವವರು, ಈರುಳ್ಳಿಗೆ ನೂರ ಐವತ್ತು ರೂಪಾಯಿಯಾದರೆ ಈರುಳ್ಳಿಯನ್ನೇ ತ್ಯಜಿಸುವವರಿದ್ದಾರೆ. ಅವರು ಉಳಿಸಿದ ದುಡ್ಡನ್ನು ಈ Detention Centreಗಳ ವಾಸಿಗಳ ಅಭ್ಯುದಯಕ್ಕೆ ಬಳಸಬಹುದು.

ನಮ್ಮ ಪಿರಮಂಡೆಪೆಟ್ ಭಕ್ತರ ಪ್ರಕಾರ ಮೋದಿ, ಶಾ ಅಕ್ರಮ ವಲಸಿಗ ಮುಸ್ಲೀಮರನ್ನು ದೇಶದ ಹೊರಗೆ ಕಳುಹಿಸುತ್ತಾರೆ. ಆದರೆ ಎಲ್ಲಿ, ಯಾರಪ್ಪನ ಮನೆಗೆ? ಬಾಂಗ್ಲಾದೇಶ ಆಗಲಿ, ಪಾಕೀಸ್ಥಾನ ಆಗಲಿ, ಅಫ್ಘನಿಸ್ಥಾನ ಆಗಲಿ ಅವರನ್ನು ತಮ್ಮವರೆಂದು ಒಪ್ಪಿಕೊಂಡು ವಾಪಾಸ್ ತೆಗೆದುಕೊಳ್ಳುವುದಿಲ್ಲ. ಅವರು ಈ ದೇಶದವರೆಂದು ರುಜು ಮಾಡುವ ಜವಾಬ್ದಾರಿ ಭಾರತದ್ದು. ಈ ಏಳು ಲಕ್ಷ ಮಂದಿ ತಮ್ಮ ಅನರ್ಹತೆಯನ್ನು NRC ಟ್ರಿಬ್ಯೂನಲ್‍ನಲ್ಲಿ ಪ್ರಶ್ನಿಸಬಹುದು. ಆದರೆ ಅದಕ್ಕೆ ಪ್ರತೀ ವ್ಯಕ್ತಿಗೆ ಲಾಯರ್ ಫೀಸ್, ದಾಖಲೆ ಸಂಗ್ರಹ, ಸಾಕ್ಷಿಗಳನ್ನು ಹಿಯರಿಂಗ್‍ಗಳಿಗೆ ಕರೆದುಕೊಂಡು ಹೋಗುವುದು ಇತ್ಯಾದಿಯೆಂದು ಕನಿಷ್ಟ Rs 75000-100000 ಖರ್ಚು ಮಾಡಬೇಕಾಗುತ್ತದೆ.

ಆದರೆ ಇವರಲ್ಲಿ ಹೆಚ್ಚಿನವರು ಬಡವರು. ದಿನಕ್ಕೆ ಎರಡೊತ್ತಿನ ಊಟಕ್ಕೂ ಪರದಾಡುವವರು. ಅವರು ಎಲ್ಲಿಂದ ಈ ಹಣವನ್ನು ಜೋಡಿಸುವುದು? ಹಾಗಾಗಿ ಅವರು NRC ದಾಖಲೆಗಳನ್ನು ಪ್ರಶ್ನಿಸದೇ ಜೈಲು ಇಲ್ಲವೇ Detention Centreಗೆ ಹೋಗುತ್ತಾರೆ. ಪಾಕೀಸ್ಥಾನಕ್ಕೂ ಹೋಗುವುದಿಲ್ಲ, ಬಾಂಗ್ಲಾದೇಶಕ್ಕೂ ಹೋಗುವುದಿಲ್ಲ. ಯಾಕೆಂದರೆ ಹೆಚ್ಚಿನವರು ಅಲ್ಲಿನವರೇ ಅಲ್ಲ. ಇಲ್ಲೇ ಹುಟ್ಟಿ ಬೆಳೆದವರು. ಅವರ ಪೂರ್ವಜರಲ್ಲಿ ಯಾರೋ ಒಬ್ಬರು ಬಾಂಗ್ಲಾದೇಶ/ಪಾಕೀಸ್ಥಾನದವರು ಆಗಿರಬಹುದು. ಅದರೆ ಅವರು ಒಮ್ಮೆ ಭಾರತಕ್ಕೆ ಬಂದನಂತರ ಬಾಂಗ್ಲಾ/ಪಾಕೀಸ್ಥಾನದಲ್ಲೂ ಅವರಿಗೆ ಯಾರೂ ಇಲ್ಲ, ಯಾವ ದಾಖಲೆಗಳೂ ಇಲ್ಲ. ಹಾಗಾಗಿ ಅವರು ಎಲ್ಲಿಯೂ ಹೋಗುವುದಿಲ್ಲ. ಇಲ್ಲೇ ಇರುತ್ತಾರೆ ನಮ್ಮದೇ ದೇಶದಲ್ಲಿ ಸರಕಾರದ ಅತಿಥಿಗಳಾಗಿ. ಇದು ಮೂರುವರೆ ಕೋಟಿ ಜನಸಂಖ್ಯೆಯ ಒಂದು ರಾಜ್ಯದ ಪರಿಸ್ಥಿತಿ.

ಇಡೀ ದೇಶಕ್ಕೆ ಇದು ಅನ್ವಯವಾಗುವಾಗ ಎಂಥ ದಯನೀಯ ಪರಿಸ್ಥಿತಿ ಉಂಟಾಗುತ್ತೆಯೆಂದು ಊಹಿಸುವುದೂ ಕಷ್ಟ. ಅಸ್ಸಾಂನ NRCಗೆ ಖರ್ಚಾಗಿರುವ ಹಣ Rs 1600 ಕೋಟಿಯೆಂದು ಸರಕಾರಿ ದಾಖಲೆಗಳು ಹೇಳುತ್ತಿವೆ. ಇದರ ಜೊತೆ Detention Centre ಕಟ್ಟಲು ತಗಲುವ ಖರ್ಚು ಬೇರೆ. ಪ್ರತಿಯೊಂದೂ Detention Centre ಕಟ್ಟಲು ತಗಲುವ ಖರ್ಚು Rs 45-50 ಕೋಟಿ. ಇಡೀ ದೇಶದಲ್ಲಿ CAB ಆಗಿ ಅಕ್ರಮವಾಗಿ ಭಾರತದಲ್ಲಿ ನೆಲೆಸಿರುವ ಇಲ್ಲವೇ ತಮ್ಮ ಇರುವಿಕೆಯ ದಾಖಲೆ ಕೊಡಲಾಗದ ಹಿಂದೂ, ಕ್ರೈಸ್ತ, ಸಿಖ್, ಜೈನ, ಬೌದ್ಧ ಹಾಗೂ ಪಾರ್ಸಿಗಳಿಗೆ ಭಾರತದ ಪೌರತ್ವ ಸಿಗುತ್ತೆ. ಅಂದರೆ ಈ ಆರು ಸಮುದಾಯಗಳು ಹಾಗೂ ಮುಸ್ಲೀಮರದ್ದು ಒಂದೇ ಕಥೆ. ಯಾರಲ್ಲೂ ತಾವು ಭಾರತದಲ್ಲಿ ಯಾವತ್ತಿನಿಂದ ನೆಲೆಸಿದ್ದೇವೆ, ನಾವು ಭಾರತೀಯರೇ ಎನ್ನುವ ದಾಖಲೆಗಳಿಲ್ಲ. ಹಾಗಾಗಿ ಎಲ್ಲರೂ ‘ಅಕ್ರಮ’ಗಳು.

ಆದರೆ ಈ ಎಲ್ಲಾ ‘ಅಕ್ರಮ’ಗಳಲ್ಲಿ ಹಿಂದೂ, ಕ್ರೈಸ್ತ, ಸಿಖ್, ಜೈನ, ಬೌದ್ಧ ಹಾಗೂ ಪಾರ್ಸಿಗಳು ಯಾವುದೇ ಶ್ರಮವಿಲ್ಲದೆ ‘ಸಕ್ರಮ’ಗಳಾದರೆ, ಅವರಂತೆಯೇ ದಾಖಲೆಗಳಿಲ್ಲದ ಮುಸ್ಲೀಮರು ಅತಂತ್ರರಾಗುತ್ತಾರೆ. ಆದರೆ ನಮ್ಮ ಭಕ್ತರ ಪ್ರಕಾರ ಇದು ತಾರತಮ್ಯ ಅಲ್ಲ ಶೋಷಣೆನೂ ಅಲ್ಲ ಮುಸ್ಲೀಮ್ ದ್ವೇಷವೂ ಅಲ್ಲ. ಹೋಗ್ಲಿ ಇದನ್ನೆಲ್ಲಾ ಅರ್ಥ ಮಾಡಿಕೊಳ್ಳುವಷ್ಟು ಬ್ರೈನು ಅವರಿಗಿಲ್ಲ. ಇರುವ ಸಣ್ಣದೊಂದು ತುಂಡು ನಾಗ್ಪುರದ ಬ್ಲಡಿ ಬ್ಯಾಂಕ್‍ನಲ್ಲಿ ಅಡವಿಟ್ಟಾಗಿದೆ.

ಹೀಗೆ ದಾಖಲೆಗಳಿಲ್ಲದ ಮುಸ್ಲೀಮರನ್ನು NRCಯಡಿಯಲ್ಲಿ ತರುತ್ತಾರೆ. ಎಷ್ಟು ಮುಸ್ಲೀಮರು ಸಿಗುತ್ತಾರೋ ಎಂದು ತಿಳಿಯೋಲ್ಲ. ಆದರೆ ಸಿಕ್ಕ ಒಬ್ಬನೇ ಒಬ್ಬ ದಾಖಲೆಗಳಿಲ್ಲದ ಮುಸ್ಲೀಮರನ್ನು ದೇಶದ ಗಡಿ ಹೊರಗೆ ಕಳುಹಿಸಲಾಗುವುದಿಲ್ಲ ಬಾಂಗ್ಲಾ, ಪಾಕೀಸ್ಥಾನಗಳು ಅವರನ್ನು ಬರಮಾಡಿಕೊಳ್ಳದೆ. ಅಂದರೆ ದೇಶದೆಲ್ಲೆಡೆ ಎಷ್ಟು Detention Centreಗಳನ್ನು ಕಟ್ಟಬೇಕೋ? ಇದು ತಿಳಿಯುವ ಹೊತ್ತಿಗೆ ತಲೆಗೇರಿದ ಧರ್ಮದ ಅಫೀಮು ಇಳಿದು, ಮನುಷ್ಯ ರೂಪಕ್ಕೆ ಬರುತ್ತಾರೆ.

Almedia Gladson

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ರಾಜಕೀಯ

ಹರತಾಳು ಹಾಲಪ್ಪ ಕಂಡಂತೆ ಯಡಿಯೂರಪ್ಪ..!

Published

on

ನಿಷ್ಕಲ್ಮಶ ನಗುವಿನಲ್ಲಿ ಅದೆಷ್ಟು ಹೋರಾಟಗಳಿವೆಯೋ, ಅದೆಷ್ಟು ನೋವು- ಅನುಭವಿಸಿದ ಮೋಸಗಳಿವೆಯೋ ಹೇಳತೀರದು. ಗೆದ್ದಲು ಕಟ್ಟಿದ ಹುತ್ತದೊಳಗೆ ಹಾವುಗಳು ಬಂದು ಸೇರಿಕೊಳ್ಳುವಂತೆ ಅನೇಕರು ಕಟ್ಟಿ ಬೆಳೆಸಿದ ಪಕ್ಷದೊಳೆಗೆ ಇನ್ಯಾರೋ ಬಂದು ಅಧಿಕಾರ ಚಲಾಯಿಸುತ್ತಾರೆ.

ದಕ್ಷಿಣ ಭಾರತದಲ್ಲಿ (ಕರ್ನಾಟಕ) ಜನಸಂಘ -ಬಿಜೆಪಿ ಎಂಬ ಸಸಿ ಆಗಿನ್ನೂ ಮೊಳಕೆಯೋಡಿಯುತ್ತಿದ್ದ ಸಮಯದಲ್ಲಿ ಅದಕ್ಕೆ ಸಿಕ್ಕಂತಹ ತಾಯಿಬೇರು ಯಡಿಯೂರಪ್ಪ ಎಂಬ ಹೆಸರಾದರೆ, ಕಾರಣವಾಗಿದ್ದು ಅನಂತ ಕುಮಾರ್. ಕಾರ್ಯಕರ್ತರನ್ನು ಬಡಿದೆಬ್ಬಿಸಿ ಅನ್ಯಾಯ ಕಂಡಲ್ಲಿ ಹೋರಾಟ ಮಾಡುತ್ತಾ ಜನರಿಗೆ ಸ್ಥರ್ಯ ತುಂಬಿ,ನ್ಯಾಯ ದೊರಕಿಸುತ್ತ ಸಹಜ ಹೋರಟಗಾರನಾಗಿ ಜನರ ಮನಸಿನಲ್ಲಿ ಅಚ್ಚಳಿಯದಂತೆ ಉಳಿದ ಹೆಸರು ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ಎಂಬ ಛಲದಂಕಮಲ್ಲ.

ದೇವರಾಜ್ ಅರಸು, ಗುಂಡುರಾವ್, ರಾಮಕೃಷ್ಣ ಹೆಗ್ಡೆ,ನಿಜಲಿಂಗಪ್ಪ,ಜೆ.ಹೆಚ್.ಪಟೇಲ್,ಬಂಗಾರಪ್ಪ,ದೇವೇಗೌಡ. ಎಂಬ ರಾಜಕೀಯ ಮೇರು ಪರ್ವತಗಳ ಎದುರು ತನ್ನದೆಯಾದ ಕಾರ್ಯಕರ್ತರ ಸಾಮ್ರಾಜ್ಯ ಕಟ್ಟುತ್ತಾ ತಳ ಹಂತದಿಂದ ಪಕ್ಷಕಟ್ಟಿ ಯಾವತ್ತೂ ಅವಕಾಶವಾದಿ ರಾಜಕಾರಣ ಮಾಡದೆ, ಮೊದಲಬಾರಿಗೆ 2 ಅಂಕಿಯಿಂದ ಪ್ರಾರಂಭವಾದ ಬಿಜೆಪಿಯ ಗೆಲುವಿನ ಅಭಿಯಾನ 40ರ ಗಡಿಗೆ ಬಂದು ನಿಂತಾಗ, 2004 ರಲ್ಲಿ ಬಂಗಾರಪ್ಪ ನವರು ಬಿಜೆಪಿ ಸೇರ್ಪಡೆಯಾದಾಗ 79 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿತ್ತು. ಆ 79 ಶಾಸಕರಲ್ಲಿ ನಾನು ಒಬ್ಬನಾಗಿದ್ದೆ ಬಂಗಾರಪ್ಪ ನವರು ಬಿಜೆಪಿ ಪಕ್ಷ ತೊರೆದಾಗ ಇನ್ನೇನು ಬಿಜೆಪಿ ಸ್ಥಿತಿ ಡೋಲಾಯಮಾನವಾಗಿ ಹೋಯ್ತು, ಇನ್ನು ಬಿಜೆಪಿ ನೆಲ ಕಚ್ಚಿತ್ತು ಎಂಬ ಮಾತುಗಳು ಆರಂಭವಾದಾಗ,

ಸಮಿಶ್ರ ಸರ್ಕಾರದ ಭಾಗವಾಗಿ ಉಪಮುಖ್ಯಮಂತ್ರಿ ಗಳಾದ ಯಡಿಯೂರಪ್ಪ ನವರು, ನಂತರ 20-20 ಸರ್ಕಾರದ ಕೊನೆ ಅವಧಿಗೆ ಮುಖ್ಯಮಂತ್ರಿ ಗಳಾದರು ಜೆಡಿಎಸ್ ನವರ ಮೋಸಕ್ಕೆ ಬೇಸತ್ತು ಮೈತ್ರಿಯಿಂದ ಹೊರಬಂದು ಪಕ್ಷಕ್ಕೆ ಯಾವುದೇ ಕುಂದು ಬಾರದಂತೆ ಪಕ್ಷವನ್ನು ತನ್ನ ಸದೃಢ ನಾಯಕತ್ವದಲ್ಲಿ ಮುನ್ನೆಡೆಸಿ 2008 ರ ಚುನಾವಣೆಯಲ್ಲಿ 110 ಸ್ಥಾನಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ತನ್ನ ರಾಜಕೀಯ ಚಾಣಾಕ್ಷತೆ, ತನ್ನ ಸಾಮರ್ಥ್ಯವನ್ನು ನಿರೂಪಿಸಿ, ಸರ್ಕಾರ ಸುಭದ್ರವಾಗಲು ಮತ್ತೆ ನೆಡೆದ ಉಪಚುನಾವಣೆಗಳಲ್ಲಿ ಗೆದ್ದು ಬಹುಮತದ ಸರ್ಕಾರ ರಚಿಸಿದರು.

ತಮ್ಮ ಸಂಪುಟದಲ್ಲಿ ನನ್ನನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮಂತ್ರಿಯನ್ನಾಗಿಸಿದ್ದು ಯಡಿಯೂರಪ್ಪ ನವರ ಜಾತ್ಯತೀತ ನಿಲುವಿಗೆ ಹಾಗೂ ಸಣ್ಣ ಸಮುದಾಯಗಳನ್ನು ಮುನ್ನೆಲೆಗೆ ತರುವ ರಾಜಕೀಯ ಇಚ್ಛಾಶಕ್ತಿ ಗೆ ಹಿಡಿದ ಕೈಗನ್ನಡಿಯಾಗಿದೆ.

ಆನಂತರ ನೆಡೆದ ರಾಜಕೀಯ ವಿಪ್ಲವಗಳಿಂದ ಮನನೊಂದು ತಾನು ಬೆವರು ಸುರಿಸಿ ಬೆಳೆಸಿದ ಪಕ್ಷದಿಂದ ಹೊರಬಂದು ಕೆ.ಜೆ.ಪಿ ಸ್ಥಾಪಿಸಿ ಕೆಲ ತಿಂಗಳುಗಳಲ್ಲಿ ನೆಡೆದ ಚುನಾವಣೆಯಲ್ಲಿ ಶೇ 10% ಮತಗಳನ್ನು ಪಡೆದು ತನ್ನ ಸಾಮರ್ಥ್ಯವನ್ನು ನಿರೂಪಿಸಿದನ್ನು ರಾಜಕೀಯ ಎನ್ನುವ ಪುಸ್ತಕದಲ್ಲಿ ಬರೆದಿಡುವಂತಹ ಸಾಧನೆ ಮಾಡಿದ್ದು ವಿರೋಧಿಗಳ ಎದೆಯಲ್ಲಿ ಇನ್ನು ಮಾಸದಂತೆ ಅಚ್ಚುಳಿದಿದೆ. ನಂತರ ಬಿಜೆಪಿ ಸೇರ್ಪಡೆಯಾಗಿ 2014 ರ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಿಸಿಕೊಡುವ ಮೂಲಕ ಮೋದಿಯ ನಾಯಕತ್ವವೇ ಸೂಕ್ತ ಎಂದು ಮೊಟ್ಟ ಮೊದಲು ಉಚ್ಚರಿಸಿದ ನಾಯಕ BSY.

76 ರ ಹರೆಯದಲ್ಲಿ ಯುವಕರು ನಾಚಿಸುವಂತ ಓಡಾಟ ಸದಾ ಅಭಿವೃದ್ಧಿ ಪರ ಚಿಂತನೆಗಳು, ರೈತ ಪರ ನಿಲುವುಗಳು 2018 ರ ಚುನಾವಣೆಯಲ್ಲಿ ಮತ್ತೆ ಯಡಿಯೂರಪ್ಪ ನವರನ್ನು ಮುಖ್ಯಮಂತ್ರಿ ಯನ್ನಾಗಿ ನೋಡಬೇಕೆನ್ನುವ ಜನರು ಹಂಬಲಿಸುತ್ತಿದ್ದರು. ತನ್ನನ್ನು ನಂಬಿದವರನ್ನು ಎಂದು ಕೈಬಿಡದ ಯಡಿಯೂರಪ್ಪ ನವರು ಸಾಗರ ಕ್ಷೇತ್ರದಲ್ಲಿ ನಾನು ಗೆಲ್ಲುತ್ತೇನೆ ಎಂದು ವಿಶ್ವಾಸವಿಟ್ಟು ಹಲವರ ವಿರೋದದ ನಡುವೆ ಟಿಕೆಟ್ ನೀಡಿ ನನ್ನ ಕೈ ಹಿಡಿದರು. ರಾಜ್ಯದಲ್ಲಿ ಅಂದಿನ ಚುನಾವಣಾ ಫಲಿತಾಂಶ ಬಿಜೆಪಿಯನ್ನು ಅದಿಕಾರದ ಹೊಸ್ತಿಲಿಗೆ ತಂದು ನಿಲ್ಲಿಸಿತು. ( ಯಡಿಯೂರಪ್ಪ ನವರಿಗೆ ಸಂಪೂರ್ಣ ಜವಾಬ್ದಾರಿ ನೀಡಿದ್ದಾರೆ ಒಂದೂವರೆ ವರ್ಷ ವಿರೋಧಪಕ್ಷದಲ್ಲಿ ಕೂರುವ ಸ್ಥಿತಿ ಬರುತ್ತಿರಲಿಲ್ಲ )

ಅನಂತರ ನೆಡೆದ ರಾಜಕೀಯ ಪಗಡೆಯಾಟದಲ್ಲಿ #ವಾಚಾಮಗೋಚರವಾಗಿ ಬೈದಾಡಿಕೊಂಡಿದ್ದವರು ಸರ್ಕಾರ ರಚಿಸಿ ಜನರ ಭಾವನೆಗಳಿಗೆ ಧಕ್ಕೆ ತಂದರು. ಇವರ ಉಪಟಳಗಳನ್ನು ಸಹಿಸದ ಕೆಲ ಶಾಸಕರು ಬಂಡಾಯವೇದ್ದು ಸರ್ಕಾರ ಕೆಡವಿದರು. ತನ್ನ ಅವಕಾಶವಾಧಿ ರಾಜಕಾರಣದಿಂದ ಸ್ವಯಂ ಘೋಷಿತ ಸಭ್ಯಸ್ತರು ಅನರ್ಹರು ಎಂಬ ಹಣೆಪಟ್ಟಿ ನೀಡಿದರು. ನಂತರದ ಘಟನೆಗಳು ಜನರ ಕಣ್ಮುಂದಿದೆ, 4ನೇ ಬಾರಿ ಮುಖ್ಯಮಂತ್ರಿಯಾಗಿ ಎದುರಿಸಿದ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಗೆದ್ದು ವಿರೋಧಿಗಳನ್ನು ರಾಜ್ಯದ ಜನತೆ ಎದುರು ಬೆತ್ತಲೆ ನಿಲ್ಲಿಸಿ ಇತಿಹಾಸ ನಿರ್ಮಿಸಿದ ಕೀರ್ತಿ ಯಡಿಯೂರಪ್ಪ ನವರದ್ದು …ಗಾಡ್ ಫಾದರ್ ಇಲ್ಲದೆ ಬೆಳೆದು ಬಂದು, ನನ್ನಂತಹ ಅನೇಕ ರಾಜಕಾರಣಿಗಳ ಬಾಳಿಗೆ ಗಾಡ್ ಆದ ಯಡಿಯೂರಪ್ಪ ನವರ ಯಶಸ್ಸಿನ ಜೀವನ ಘಾತೆ.

2009ರ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಬಿಜೆಪಿ ಕಳಪೆ ಪ್ರದರ್ಶನ ಮಾಡಿದ್ದಾಗ ಕರ್ನಾಟಕದಿಂದ 19 ಸಂಸದರನ್ನು ಕಳುಹಿಸಿ ಕೊಟ್ಟಿದ್ದ ಯಡಿಯೂರಪ್ಪನವರಿಗೆ ಅಂದು ಶ್ರೀ ಲಾಲ್ ಕೃಷ್ಣ ಅಡ್ವಾಣಿಯವರಿಂದ ತುಂಬಿದ ಸಭೆಯಲ್ಲಿ
ಪುಷ್ಪಗುಚ್ಚ ನೀಡಿ ವಿಶೇಷ ಸನ್ಮಾನಿಸಿದ್ದರ.

2019 ರ ಲೋಕಸಭೆಯಲ್ಲಿ 25 ಹಾಗೂ ವಿಧಾನಸಭಾ ಉಪಚುನಾವಣೆಯಲ್ಲಿ ಒಂಟಿಯಾಗಿ ಸಮರ್ಥ ನಾಯಕತ್ವದಲ್ಲಿ 12 ಸ್ಥಾನ ಗೆಲ್ಲಿಸಿದಕ್ಕಾಗಿ ಇಂದು ನರೇಂದ್ರ ಮೋದಿಯವರಿಂದ “ಸ್ಟ್ಯಾಂಡಿಂಗ್ ಓವೇಷನ್”, ಮೂಲಕ ಯಡಿಯೂರಪ್ಪನವರಿಗೆ ಎಲ್ಲಾ ಸಂಸದರು ಎದ್ದು ನಿಂತು ಚಪ್ಪಾಳೆ ತಟ್ಟಿ‌ ಗೌರವಿಸಿದ್ದಾರೆ. ಈಗ ಹೇಳಿ ರಾಜ್ಯ ಆಳೋಕೆ ವಯಸ್ಸು ಬೇಡ, ಸಮರ್ಥ ನಾಯಕತ್ವ ಸಂಘಟನೆ ಚತುರತೆ ಇದ್ದರೆ ಸಾಕು.

ಇನ್ನಾದರೂ ವಿರೋಧಿಸುವವರು,ವಿಪಕ್ಷಗಳು, ದುರಹಂಕಾರಿ ಮಾತುಗಳಾಡುವವರು ಅರಿತು ನೆಡೆದರೆ ಒಳ್ಳೆಯದು.

ಹೆಚ್.ಹಾಲಪ್ಪ ಹರತಾಳು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ರಾಜಕೀಯ

ಆಯುಷ್ಮಾನ್ ಭಾರತ : ಆರೋಗ್ಯ ವಿಮೆಯಿಂದ ಯಾರಿಗೆ ಲಾಭ?

Published

on

  • ನವ ಉದಾರ ನೀತಿಗಳ ಅನುಸರಣೆಯ ಅವಧಿಯಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಹಾಳುಗೆಡವಿ ಖಾಸಗಿ ಆಸ್ಪತ್ರೆಗಳಿಗೆ ಉತ್ತೇಜನ ಕೊಡಲಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ವಿಮೆಯ ಪರಿಕಲ್ಪನೆ ಪ್ರಚಲಿತಗೊಂಡಿದೆ. ಇದನ್ನು ಹಿಂದಿನ ಕಾಂಗ್ರೆಸ್ ನೇತೃತ್ವದ ಸರಕಾರ ಆರಂಭಿಸಿದ್ದರೂ, ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರಗಳ ಅಡಿಯಲ್ಲಿ ಇದರ ಮೇಲೆಯೇ ಗಮನ ಕೇಂದ್ರೀಕರಿಸಲಾಗಿದೆ.
  • ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತನ್ನು ಸಂಪೂರ್ಣವಾಗಿ ಪಲ್ಲಟಗೊಳಿಸಿ ಖಾಸಗಿಯವರನ್ನೇ ಹೆಚ್ಚಾಗಿ ಅವಲಂಬಿಸುವಂತೆ ಮಾಡುವ ಖಾಸಗಿಯವರ ಮೂಲಕದ ಆರೋಗ್ಯ ವಿಮೆಯ ಪ್ರಯೋಜನ ಹೆಚ್ಚು ಸ್ಥಿತಿವಂತ ವಿಭಾಗಗಳಿಗೇ ದೊರೆತಿರುವಂತೆ ಕಾಣುತ್ತದೆ. ಇದರ ಆವಶ್ಯಕತೆ ಹೆಚ್ಚಾಗಿರುವ ಬಡವಿಭಾಗಗಳಿಗೆ ದೊರೆತಿರುವ ಪ್ರಯೋಜನ ನಗಣ್ಯವೆಂದೇ ಅಂಕಿ-ಅಂಶಗಳು ಹೇಳುತ್ತವೆ.

-ಕೆ.ಎಂ.ನಾಗರಾಜ್

ಮಾನವ ಹಕ್ಕುಗಳನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಲು ಮುಖ್ಯವಾಗಿ ಆರೋಗ್ಯ ಒಂದು ಹಕ್ಕು ಎಂದು ಪರಿಗಣಿತವಾದಾಗ ಮಾತ್ರ ಸಾಧ್ಯವಾಗುತ್ತದೆ. ಆದರೆ, ಆರೋಗ್ಯ ಒಂದು ಹಕ್ಕು ಎಂಬುದನ್ನು ನಮ್ಮ ಸಂವಿಧಾನ ಇನ್ನೂ ಒಪ್ಪಿಕೊಂಡಿಲ್ಲ. ಸಂವಿಧಾನದ ಮಾರ್ಗದರ್ಶಿ ತತ್ವಗಳಡಿಯಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಉತ್ತಮಪಡಿಸುವಂತೆ ಸುಪ್ರೀಂ ಕೋರ್ಟಿನ ಆದೇಶಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷಿಸಿವೆ. ಹಣಕಾಸಿನ ತೊಂದರೆಯಿಂದಾಗಿ ಸುಮಾರು ಎಂಟು ಕೋಟಿಯಷ್ಟು ಭಾರತೀಯರು ಕಾಯಿಲೆ ಇದ್ದಾಗಲೂ ಯಾವುದೇ ಔಷಧೋಪಚಾರ ಪಡೆಯುತ್ತಿಲ್ಲ.

ಇನ್ನು ಔಷಧೋಪಚಾರ ಪಡೆಯುವವರ ಪರಿಸ್ಥಿತಿಯಂತೂ ಭಯಾನಕವಾಗಿದೆ. ವೈದ್ಯಕೀಯ ಚಿಕಿತ್ಸೆಯ ವೆಚ್ಚ ಹೇಳತೀರದಷ್ಟು ದುಬಾರಿಯಾಗಿದೆ. ಆರೋಗ್ಯ ರಕ್ಷಣೆಗಾಗಿ ಒಂದು ಕುಟುಂಬವು ಮಾಡುವ ಖರ್ಚಿನಲ್ಲಿ 67% ಹಣ ಸಣ್ಣ ಪುಟ್ಟ ಔಷಧೋಪಚಾರ ಮತ್ತು ಇತರ ಕೆಲವು ಖರ್ಚುಗಳಿಗೆ ತಗಲುತ್ತದೆ ಎಂಬುದಾಗಿ ವರದಿಗಳು ತಿಳಿಸುತ್ತವೆ.

ನವ ಉದಾರ ನೀತಿಗಳ ಅನುಸರಣೆಯ ಅವಧಿಯಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಹಾಳುಗೆಡವಿ ಖಾಸಗಿ ಆಸ್ಪತ್ರೆಗಳಿಗೆ ಉತ್ತೇಜನ ಕೊಡಲಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ವಿಮೆಯ ಪರಿಕಲ್ಪನೆ ಪ್ರಚಲಿತಗೊಂಡಿದೆ. ಇದನ್ನು ಹಿಂದಿನ ಕಾಂಗ್ರೆಸ್ ನೇತೃತ್ವದ ಸರಕಾರ ಆರಂಭಿಸಿದ್ದರೂ, ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರಗಳ ಅಡಿಯಲ್ಲಿ ಇದರ ಮೇಲೆಯೇ ಗಮನ ಕೇಂದ್ರೀಕರಿಸಲಾಗಿದೆ.

ಮೋದಿ ಸರ್ಕಾರವು ತನ್ನ 2018-19ರ ಬಜೆಟ್‌ನಲ್ಲಿ ಆಯುಷ್ಮಾನ್ ಭಾರತ ಎಂಬ ಆರೋಗ್ಯ ವಿಮೆ ಯೋಜನೆಯನ್ನು ಘೋಷಿಸಿತ್ತು. 10 ಕೋಟಿ ಕುಟುಂಬಗಳಿಗೆ (ಅಂದರೆ, ಸುಮಾರು 50 ಕೋಟಿ ಮಂದಿಗೆ) ಐದು ಲಕ್ಷ ರೂಗಳ ವರೆಗಿನ ಆರೋಗ್ಯ ವಿಮೆ ಒದಗಿಸುವ ಈ ಯೋಜನೆಯು ಜಗತ್ತಿನಲ್ಲೇ ಅತಿ ದೊಡ್ಡದು ಎಂದು ಸರ್ಕಾರ ಹೇಳಿಕೊಂಡಿತ್ತು ಮತ್ತು ಅದಕ್ಕಾಗಿ ಬಜೆಟ್‌ನಲ್ಲಿ 2000 ಕೋಟಿ ರೂ ನಿಗದಿಪಡಿಸಿತ್ತು. ವಿಮಾ ಕಂಪೆನಿಗಳ ಮೂಲಕ ಜಾರಿಯಾಗುವ ಈ ಯೋಜನೆಗೆ ಫಲಾನುಭವಿಗಳ ಸಂಖ್ಯೆಯ ಆಧಾರದ ಮೇಲೆ ಸರ್ಕಾರವು ಪ್ರೀಮಿಯಂ ತೆರಬೇಕಾಗುತ್ತದೆ. ಹಾಗಾಗಿ, ಸರ್ಕಾರ ನಿಗದಿಪಡಿಸಿದ 2000 ಕೋಟಿ ರೂ ಗಳಲ್ಲಿ 50ಕೋಟಿ ಮಂದಿಗೆ ಪ್ರೀಮಿಯಂ ಲೆಕ್ಕದಲ್ಲಿ ಒದಗುವ ಹಣ ತಲಾ 40 ರೂಗಳಾಗುತ್ತದೆ.

ಈ ಒಂದು ಅಂಶವೇ ಜಗತ್ತಿನಲ್ಲೇ ಅತಿ ದೊಡ್ಡ ಆರೋಗ್ಯ ವಿಮೆಯ ನಿಜ ಸ್ವರೂಪವನ್ನು ಬಯಲು ಮಾಡಿತ್ತು. ಆದರೂ, ಬಿಜೆಪಿಯು 2019ರ ಚುನಾವಣೆಯಲ್ಲಿ ಆಯುಷ್ಮಾನ್ ಭಾರತ ಯೋಜನೆಯನ್ನು ಪ್ರಚಾರಕ್ಕೆ ಬಳಸಿಕೊಂಡಿತ್ತು. ಎರಡನೆಯ ಬಾರಿಗೆ ಅಧಿಕಾರಕ್ಕೆ ಬಂದ ನಂತರವೂ ಮೋದಿ ಸರ್ಕಾರವು 2019-20ರ ಬಜೆಟ್‌ನಲ್ಲಿ ಈ ಯೋಜನೆಗೆ 6400 ಕೋಟಿ ರೂ ನಿಗದಿಪಡಿಸಿದೆ. ಹಾಗಾಗಿ, ಈ ಯೋಜನೆಯು ಅದೆಷ್ಟು ಟೊಳ್ಳು ಎಂಬುದನ್ನು ಅರ್ಥಮಾಡಿಕೊಳ್ಳಲು ಹಿಂದಿನ ಸರ್ಕಾರಗಳು (ರಾಜ್ಯ ಮತ್ತು ಕೇಂದ್ರ ಸರ್ಕಾರಗಳು) ಜಾರಿಗೊಳಿಸಿದ್ದ ಆರೋಗ್ಯ ವಿಮಾ ಯೋಜನೆಗಳನ್ನು ಅವಲೋಕಿಸಬೇಕಾಗುತ್ತದೆ.

2002ರಲ್ಲಿ ಕರ್ನಾಟಕ ಸರ್ಕಾರವು ಯಶಸ್ವಿನಿ ಎಂಬ ಒಂದು ಆರೋಗ್ಯ ವಿಮೆಯನ್ನು ಜಾರಿಗೊಳಿಸಿತ್ತು. ಆರಂಭದಲ್ಲಿ, ಗ್ರಾಮೀಣ ಪ್ರದೇಶದ ಸಹಕಾರಿ ಸಂಘಗಳ ಸದಸ್ಯರಿಗೆ ಮಾತ್ರ ಸೀಮಿತಗೊಂಡಿದ್ದ ಈ ಕಿರು ಯೋಜನೆಯು ಸದಸ್ಯರಿಂದ ತಿಂಗಳಿಗೆ ತಲಾ ಐದು ರೂ ವಂತಿಕೆಯ ಮೂಲಕ ಸ್ವತಃ ಹಣ ಒದಗಿಸಿಕೊಳ್ಳುತ್ತಿತ್ತು. ಹೃದಯ ಸಂಬಂಧಿ ಮತ್ತು ಇತರ ಕೆಲವು ಶಸ್ತ್ರ ಚಿಕಿತ್ಸೆಗಳಿಗೆ ಗುರುತಿಸಿದ ಕೆಲವು ಆಸ್ಪತ್ರೆಗಳ ಮೂಲಕ ನಗದುರಹಿತ ಸೌಲಭ್ಯ ಒದಗಿಸಿತ್ತು.

ಈಚೆಗೆ, ಎರಡು ಲಕ್ಷದ ವರೆಗಿನ ವಿಮೆಯೊಂದಿಗೆ ವಾರ್ಷಿಕ ಪ್ರೀಮಿಯಂ ಮೊತ್ತವನ್ನು ಗ್ರಾಮೀಣದವರಿಗೆ 600ರೂ ಮತ್ತು ಪಟ್ಟಣದವರಿಗೆ 710 ರೂ ಏರಿಸಲಾಗಿದೆ ಮತ್ತು ಅನೇಕ ಆಸ್ಪತ್ರೆಗಳು ಮತ್ತು ಸುಮಾರು ಎಲ್ಲ ಶಸ್ತ್ರ ಚಿಕಿತ್ಸೆಗಳೂ ಯೋಜನೆಗೆ ಸೇರ್ಪಡೆಯಾಗಿವೆ. ಈ ನಡುವೆ, ಕರ್ನಾಟಕ ಸರ್ಕಾರವು ಯಶಸ್ವಿನಿ, ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ, ವಾಜಪೇಯಿ ಆರೋಗ್ಯ ಶ್ರೀ, ರಾಜೀವ್ ಆರೋಗ್ಯಭಾಗ್ಯ ಮುಂತಾದ ಎಲ್ಲ ಯೋಜನೆಗಳನ್ನೂ ಸೇರಿಸಿ ಆರೋಗ್ಯ ಕರ್ನಾಟಕ ಎಂಬ ಹೆಸರಿನ ಯೋಜನೆಯು ಗೊಂದಲದ ಗೂಡಾಗಿತ್ತು. ಆಯುಷ್ಮಾನ್ ಭಾರತ ಯೋಜನೆಯನ್ನು ಒಪ್ಪಿಕೊಳ್ಳಲಾಗದ ಪರಿಸ್ಥಿತಿಯಲ್ಲಿ, ಹಿಂದಿನ ಮತ್ತು ಇಂದಿನ ಮುಖ್ಯ ಮಂತ್ರಿ, ಇಬ್ಬರೂ, ಹಳೆಯ ಯಶಸ್ವಿನಿ ಯೋಜನೆಯನ್ನೇ ಜಾರಿಗೊಳಿಸುವುದಾಗಿ ಹೇಳಿದ್ದಾರೆ.

ಯುಪಿಎ ಸರ್ಕಾರವು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಅಡಿಯಲ್ಲಿ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ, ಜನನಿ ಸುರಕ್ಷಾ ಮುಂತಾದ ಯೋಜನೆಗಳ ಜೊತೆಗೆ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ಎಂಬ ಒಂದು ಆರೋಗ್ಯ ವಿಮೆಯನ್ನು ಜಾರಿಗೊಳಿಸಿತ್ತು. ಬಡತನ ರೇಖೆಯ ಕೆಳಗಿರುವ ಕುಟುಂಬಗಳಿಗೆ 30 ಸಾವಿರ ರೂ ವರೆಗಿನ ವಾರ್ಷಿಕ ಒಳ-ರೋಗಿ ಚಿಕಿತ್ಸೆಯನ್ನು ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯಡಿ ಕಲ್ಪಿಸಲಾಗಿತ್ತು.

ಈ ಯೋಜನೆಯನ್ನೇ ಮುಂದುವರೆಸಿದರೂ, ಅದೊಂದು ತನ್ನ ಹೊಸ ಯೋಜನೆಯೆಂಬಂತೆ ಪ್ರಸ್ತುತಪಡಿಸುತ್ತ ಮೋದಿ ಸರ್ಕಾರವು 2016-17ರ ಬಜೆಟ್‌ನಲ್ಲಿ, ಬಡ ಕುಟುಂಬಗಳಿಗೆ ಒಂದು ಲಕ್ಷ ರೂ ವರೆಗಿನ ಒಳ-ರೋಗಿ ಚಿಕಿತ್ಸೆಯನ್ನು ಮತ್ತು ಹಿರಿಯ ನಾಗರಿಕರಿಗೆ 30 ಸಾವಿರ ರೂ ಅಧಿಕವಾಗಿ ಒದಗಿಸುವುದಾಗಿ ಹೇಳಿತ್ತು. ಆದರೆ, ಈ ಯೋಜನೆ ಅನುಷ್ಠಾನಗೊಳ್ಳಲೇ ಇಲ್ಲ. ಬದಲಿಗೆ, ಮೂಗಿಗೆ ತುಪ್ಪ ಸವರುವ ಆಯುಷ್ಮಾನ್ ಭಾರತ ಯೋಜನೆಯ ಘೋಷಣೆಯಾಗಿದೆ.

ವಿಮೆಗೆ ಸಂಬಂಧಿಸಿದ ಅಂಕಿ-ಅಂಶಗಳ ಲೆಕ್ಕ ಹಾಕುವ ತಜ್ಞರ ಪ್ರಕಾರ, 50 ಕೋಟಿ ಮಂದಿಗೆ ಐದು ಲಕ್ಷ ರೂಗಳ ವರೆಗಿನ ಆರೋಗ್ಯ ವಿಮೆ ಒದಗಿಸುವ ಆಯುಷ್ಮಾನ್ ಭಾರತ ಯೋಜನೆಯ ತಲಾ ವಾರ್ಷಿಕ ಪ್ರೀಮಿಯಂ ಕನಿಷ್ಠ ಐದು ಸಾವಿರ ರೂ ಆಗುತ್ತದೆ. ಅಂದರೆ, ಸರ್ಕಾರವು ಒಂದು ಲಕ್ಷದ ಇಪ್ಪತ್ತೈದು ಸಾವಿರ ಕೋಟಿ ರೂಗಳಷ್ಟು ಪ್ರೀಮಿಯಂ ತೆರಬೇಕಾಗುತ್ತದೆ. ಆದರೆ, ಈ ಬಾಬ್ತು ಮೋದಿ ಸರ್ಕಾರವು 2019-20ರ ಬಜೆಟ್‌ನಲ್ಲಿ ತೆಗೆದಿಟ್ಟಿರುವ ಹಣ ಕೇವಲ 6,400 ಕೋಟಿ ರೂ. ಇದು ಮೋದಿ ಸರ್ಕಾರದ ಮಾತಿಗೂ ಮತ್ತು ಕೃತಿಗೂ ಇರುವ ಅಂತರವನ್ನು ತೋರಿಸುತ್ತದೆ.

ವಾಸ್ತವವಾಗಿ ಇದು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತನ್ನು ಸಂಪೂರ್ಣವಾಗಿ ಪಲ್ಲಟಗೊಳಿಸಿ ಖಾಸಗಿಯವರನ್ನೇ ಹೆಚ್ಚಾಗಿ ಅವಲಂಬಿಸುವಂತೆ ಮಾಡುವ ಯೋಜನೆಯೇ ಆಗಿದೆ. ಖಾಸಗಿಯವರ ಮೂಲಕ ಆರೋಗ್ಯ ವಿಮೆಯ ಮೇಲೆ ಹೆಚ್ಚಿನ ಒತ್ತು ನೀಡುವ ಇಂತಹ ಯೋಜನೆಗಳಿಂದ ನಿಜವಾಗಿ ಯಾರಿಗೆ ಲಾಭ ಎಂಬುದನ್ನು ಅಧ್ಯಯನ ಮಾಡುತ್ತಿರುವ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಅಂಕುರ್ ವರ್ಮ ಪ್ರಕಾರ (Who Benefits from the Govt Funded Health Insurance? , ನ್ಯೂಸ್‌ಕ್ಲಿಕ್, ಡಿಸೆಂಬರ್ 3, 2019) 2014ರಿಂದ 2018ರ ಅವಧಿಯಲ್ಲಿ ಆರೋಗ್ಯ ವಿಮೆಗೆ ಒಳಪಟ್ಟವರ ಪ್ರಮಾಣವೇನೂ ಹೆಚ್ಚಿಲ್ಲ.

ವಿಮಾಯೋಜನೆಯನ್ನು ಸಾರ್ವತ್ರಿಕಗೊಳಿಸಿರುವ ರಾಜ್ಯಗಳಲ್ಲಿ ಮಾತ್ರವೇ ಆರೋಗ್ಯ ವಿಮೆಯ ಫಲಾನುಭವಿಗಳ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಇರುವುದು. ಈ ಆರೋಗ್ಯ ವಿಮೆಯ ಪ್ರಯೋಜನ ಕೂಡ ಹೆಚ್ಚು ಸ್ಥಿತಿವಂತ ವಿಭಾಗಗಳಿಗೇ ದೊರೆತಿರುವಂತೆ ಕಾಣುತ್ತದೆ. ಇದರ ಆವಶ್ಯಕತೆ ಹೆಚ್ಚಾಗಿರುವ ಬಡವಿಭಾಗಗಳಿಗೆ ದೊರೆತಿರುವ ಪ್ರಯೋಜನ ನಗಣ್ಯವೆಂದೇ ಹೇಳಬಹುದು.

ಅಂಕುರ್‌ವರ್ಮ ತಮ್ಮ ಲೇಖನದಲ್ಲಿ ಹೋಲಿಸಿರುವ ೭೫ನೇ ಸುತ್ತಿನ ರಾಷ್ಟ್ರೀಯ ಸ್ಯಾಂಪಲ್ ಸರ್ವೆಯ 71ನೇ ಮತ್ತು 75ನೇ ಸುತ್ತಿನ ಮಾಹಿತಿಗಳು ಕುತೂಹಲಕಾರಿಯಾಗಿವೆ. ಜುಲೈ 2017 ಮತ್ತು ಜೂನ್ 2018ರ ನಡುವೆ, ಎನ್‌ಎಸ್‌ಎಸ್‌ಒ ನಡೆಸಿದ 75ನೇ ಸುತ್ತಿನ ರಾಷ್ಟ್ರೀಯ ಸ್ಯಾಂಪಲ್ ಸರ್ವೆಯ ಭಾಗವಾಗಿ, ಆರೋಗ್ಯ ಸಂಬಂಧವಾಗಿ ಕುಟುಂಬಗಳು ಮಾಡುವ ಖರ್ಚಿನ ವಿವರಗಳನ್ನು ಸಂಗ್ರಹಿಸಿದ ವರದಿಯನ್ನು ನವೆಂಬರ್ 24ರಂದು ಬಿಡುಗಡೆ ಮಾಡಿದೆ. ಇದೇ ಸರ್ವೆಯನ್ನು ಹಿಂದೆ 2014ರ 71ನೇ ಸುತ್ತಿನ ರಾಷ್ಟ್ರೀಯ ಸ್ಯಾಂಪಲ್ ಸರ್ವೆಯ ಭಾಗವಾಗಿ ಮಾಡಲಾಗಿತ್ತು.

75ನೇ ಸುತ್ತಿನ ರಾಷ್ಟ್ರೀಯ ಸ್ಯಾಂಪಲ್ ಸರ್ವೆಯ ಪ್ರಕಾರ, 2017-18ರಲ್ಲಿ, 85.9% ಗ್ರಾಮೀಣ ಜನತೆ ಮತ್ತು 82% ನಗರವಾಸಿಗಳು ಯಾವುದೇ ಆರೋಗ್ಯ ವಿಮೆಗೆ ಒಳಪಟ್ಟಿರಲಿಲ್ಲ. ವಿಮೆಗೆ ಒಳಪಡದವರ ಸಂಖ್ಯೆ 2014ರ ಸರ್ವೆಯಲ್ಲಿಯೂ ಇಷ್ಟೇ ಇತ್ತು ಮತ್ತು ಈ ನಾಲ್ಕು ವರ್ಷಗಳ ಅವಧಿಯಲ್ಲಿ ಆರೋಗ್ಯ ವಿಮೆಗೆ ಒಳಪಟ್ಟವರ ಸಂಖ್ಯೆಯು ನಗರಗಳಲ್ಲಿ ಮಾತ್ರ ಕೇವಲ 1.1% ಹೆಚ್ಚಿದೆ.

ವಿಮೆಗೆ ಒಳಪಟ್ಟವರಲ್ಲಿ ಬಹುತೇಕ ಎಲ್ಲರೂ ಸರ್ಕಾರ-ಪ್ರಾಯೋಜಿತ ವಿಮೆಗೊಳಪಟ್ಟಿದ್ದಾರೆ (ಕೋಷ್ಟಕ-1). ಗ್ರಾಮೀಣದಲ್ಲಿ, 0.2% ಮಂದಿ ಆರೋಗ್ಯ ವಿಮೆಯನ್ನು ತಾವೇ ಒದಗಿಸಿಕೊಂಡಿದ್ದಾರೆ ಮತ್ತು 0.3% ಮಂದಿ ಖಾಸಗಿ ಉದ್ಯೋಗದಾತರು ಒದಗಿಸಿದ ವಿಮೆಗೊಳಪಟ್ಟಿದ್ದಾರೆ. ನಗರಗಳಲ್ಲಿ, 3.8% ಮಂದಿ ಆರೋಗ್ಯ ವಿಮೆಯನ್ನು ತಾವೇ ಒದಗಿಸಿಕೊಂಡಿದ್ದಾರೆ ಮತ್ತು ಕೇವಲ 2.9% ಮಂದಿ ಖಾಸಗಿ ಉದ್ಯೋಗದಾತರು ಒದಗಿಸಿದ ವಿಮೆಗೊಳಪಟ್ಟಿದ್ದಾರೆ.

ಆರೋಗ್ಯ ವಿಮೆಗೊಳಪಟ್ಟವರ ಸಂಖ್ಯೆ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ. ಆಂಧ್ರ, ತೆಲಂಗಾಣ, ಕೇರಳ ಮತ್ತು ಛತ್ತೀಸ್‌ಘಡ ರಾಜ್ಯಗಳಲ್ಲಿ, ರಾಜ್ಯ ಸರ್ಕಾರಗಳು ಅರ್ಹತೆಯನ್ನು ಸಡಿಲಗೊಳಿಸಿರುವುದರಿಂದಾಗಿ, ಬಹುತೇಕ ಎಲ್ಲರೂ ಆರೋಗ್ಯ ವಿಮೆಗೊಳಪಟ್ಟಿದ್ದಾರೆ. ಉಳಿದ ರಾಜ್ಯಗಳಲ್ಲಿ ಆರೋಗ್ಯ ವಿಮೆಗೊಳಪಟ್ಟವರ ಸಂಖ್ಯೆ ನಿಕೃಷ್ಟವಾಗಿದೆ.

ಈ ಸರ್ವೆಯಿಂದ ಹೊರಹೊಮ್ಮುವ ಒಂದು ಮುಖ್ಯವಾದ ಅಂಶವೆಂದರೆ, ಬಡವರಿಗಾಗಿಯೇ ಇರುವ ಯೋಜನೆಗಳನ್ನೊಳಗೊಂಡ ಸರ್ಕಾರ-ಪ್ರಾಯೋಜಿತ ಆರೋಗ್ಯ ವಿಮೆಗೆ ಬಡ ಕುಟುಂಬಗಳಿಗಿಂತ ಅತಿ ಹೆಚ್ಚು ಸಂಖ್ಯೆಯ ಶ್ರೀಮಂತರೇ ಒಳಪಟ್ಟಿದ್ದಾರೆ (ಕೋಷ್ಟಕ-2).ಶೇ.20 ತಳ ಮಟ್ಟದ ಬಡ ಕುಟುಂಬಗಳ (ವೆಚ್ಚದ ಆಧಾರದ ಮೇಲೆ) ಪೈಕಿ ಕೇವಲ 10% ಕುಟುಂಬಗಳು ಆರೋಗ್ಯ ವಿಮೆಗೊಳಪಟ್ಟಿವೆ. ಇನ್ನೊಂದೆಡೆಯಲ್ಲಿ, ಶೇ.20 ಅತಿ ಶ್ರೀಮಂತ ಕುಟುಂಬಗಳ (ವೆಚ್ಚದ ಆಧಾರದ ಮೇಲೆ) ಪೈಕಿ ಶೇ.22 ಕುಟುಂಬಗಳು ಆರೋಗ್ಯ ವಿಮೆಗೊಳಪಟ್ಟಿವೆ. ಈ ಶ್ರೀಮಂತ ಕುಟುಂಬಗಳಲ್ಲಿ ಶೇ.20ರಷ್ಟು ಮಂದಿ ಸರ್ಕಾರ-ಪ್ರಾಯೋಜಿತ ಆರೋಗ್ಯ ವಿಮೆಯ ಸೌಲಭ್ಯ ಬಳಸಿಕೊಂಡಿದ್ದಾರೆ. ನಗರ ವಾಸಿಗಳಲ್ಲಿ ಸುಮಾರು 8% ಮಂದಿ ಸರ್ಕಾರ-ಪ್ರಾಯೋಜಿತ ಆರೋಗ್ಯ ವಿಮೆಗೊಳಪಟ್ಟಿದ್ದಾರೆ.

ಆಸ್ಪತ್ರೆ ಸೇರಿದ ಸಂದರ್ಭದಲ್ಲಿ ಸ್ವತಃ ಮಾಡಿದ ಖರ್ಚಿನಲ್ಲಿ ಸ್ವಲ್ಪ ಹಣ ಮರಳಿಸಲಾಗುತ್ತದೆ. ಈ ಪ್ರಕಾರವಾಗಿ, ಸರ್ಕಾರ-ಪ್ರಾಯೋಜಿತ ಆರೋಗ್ಯ ವಿಮೆ, ಖಾಸಗಿ ಉದ್ಯೋಗದಾತರು ಒದಗಿಸಿದ ಆರೋಗ್ಯ ವಿಮೆ ಮತ್ತು ಸ್ವಂತವೇ ಪಡೆದ ಆರೋಗ್ಯ ವಿಮೆಗಳ ಮೂಲಕ ಶ್ರೀಮಂತರು ಹೆಚ್ಚು ಹಣ ಮರಳಿ ಪಡೆಯುತ್ತಾರೆ (ಕೋಷ್ಟಕ-3). ಉದಾಹರಣೆಗೆ, ಗ್ರಾಮೀಣದಲ್ಲಿ, ಆಸ್ಪತ್ರೆ ಸೇರಿದ ಪ್ರಕರಣಗಳಲ್ಲಿ, ಬಡವರ ಪ್ರಕರಣಗಳಲ್ಲಿ ಕೇವಲ 1.6% ಮತ್ತು ಶ್ರೀಮಂತರ 4% ಪ್ರಕರಣಗಳಲ್ಲಿ ಸ್ವಲ್ಪ ಹಣ ಮಾತ್ರ ಮರಳಿ ಪಡೆಯುತ್ತಾರೆ. ಬಡ ಕುಟುಂಬಗಳು ಆಸ್ಪತ್ರೆಯಲ್ಲಿ ಮಾಡಿದ ಖರ್ಚಿನಲ್ಲಿ ಕೇವಲ 4% ಹಣ ಮರಳಿ ಪಡೆದರೆ, ಶ್ರೀಮಂತರು ಆಸ್ಪತ್ರೆಯಲ್ಲಿ ಮಾಡಿದ ಖರ್ಚಿನಲ್ಲಿ 22% ಹಣ ಮರಳಿ ಪಡೆಯುತ್ತಾರೆ. ಅದೇ ರೀತಿಯಲ್ಲಿ, ನಗರ ವಾಸಿಗಳಲ್ಲಿ, ಬಡವರು 1.5% ಹಣ ಮರಳಿ ಪಡೆದರೆ, ಶ್ರೀಮಂತರು 22% ಹಣ ಮರಳಿ ಪಡೆಯುತ್ತಾರೆ.

ನಗರವಾಸಿಗಳು ಆಸ್ಪತ್ರೆ ಸೇರಿದ ಪ್ರಕರಣಗಳಲ್ಲಿ, ಬಡವರು ಆಸ್ಪತ್ರೆಯಲ್ಲಿ ಮಾಡಿದ ಖರ್ಚಿನಲ್ಲಿ ಕೇವಲ 4 % ಹಣ ಮರಳಿ ಪಡೆದರೆ, ಶ್ರೀಮಂತರು 27% ಹಣ ಮರಳಿ ಪಡೆಯುತ್ತಾರೆ. ನಿರ್ದಿಷ್ಟವಾಗಿ, ಗ್ರಾಮೀಣ ಬಡವರು, ಒಂದು ಪ್ರಕರಣದಲ್ಲಿ, ಸರಾಸರಿ 279ರೂ ಮರಳಿ ಪಡೆದರೆ, ನಗರವಾಸಿ ಶ್ರೀಮಂತರು, ಒಂದು ಪ್ರಕರಣದಲ್ಲಿ, ಸರಾಸರಿ 12000 ರೂ ಮರಳಿ ಪಡೆಯುತ್ತಾರೆ. ಇದು, ಆರೋಗ್ಯ ವಿಮೆಯ ಒಳಗೊಳ್ಳುವಿಕೆಯಲ್ಲಿ ಮತ್ತು ಆಸ್ಪತ್ರೆಯಲ್ಲಿ ಖರ್ಚಾದ ಹಣ ಮರಳಿಪಡೆಯುವಲ್ಲಿ ಅದೆಷ್ಟು ತಾರತಮ್ಯತೆ ಇದೆ ಮತ್ತು ಬಡವರು ಅದೆಷ್ಟು ತಿರಸ್ಕಾರಕ್ಕೊಳಗಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಒಂದು ಅಂದಾಜಿನ ಪ್ರಕಾರ, ದುಬಾರಿ ವೆಚ್ಚದ ವೈದ್ಯಕೀಯ ಚಿಕಿತ್ಸೆಯ ಕಾರಣದಿಂದಾಗಿಯೇ ಪ್ರತಿ ವರ್ಷವೂ ಸುಮಾರು ಆರು ಕೋಟಿ ಮಂದಿ ಭಾರತೀಯರು ಬಡತನಕ್ಕೆ ತಳ್ಳಲ್ಪಡುತ್ತಾರೆ.

ಕೋಷ್ಟಕ – 1

2014 ಮತ್ತು 2018ರಲ್ಲಿ ಬೇರೆ ಬೇರೆ ಮಾದರಿಯ ಆರೋಗ್ಯ ವಿಮಾ ಯೋಜನೆ ಬಳಸಿಕೊಂಡ ವ್ಯಕ್ತಿಗಳ ಶೇಖಡಾವಾರು
ಆರೋಗ್ಯ ವಿಮೆಯ ಮಾದರಿ 71ನೇ ಸುತ್ತು 2014ರಲ್ಲಿ 75ನೇ ಸುತ್ತು 2017-18ರಲ್ಲಿ

ಗ್ರಾಮೀಣ ಪ್ರದೇಶ

ಸರ್ಕಾರ ಒದಗಿಸಿದ ಆರೋಗ್ಯ ವಿಮಾ ಯೋಜನೆ ಬಳಸಿಕೊಂಡವರು 13.1 13.5
ಖಾಸಗಿ ಉದ್ಯೋಗದಾತರು ಒದಗಿಸಿದ ವಿಮಾ ಯೋಜನೆ ಬಳಸಿಕೊಂಡವರು 0.6 0.3
ತಾವೇ ಒದಗಿಸಿಕೊಂಡ ಆರೋಗ್ಯ ವಿಮಾ ಯೋಜನೆಯನ್ನು ಬಳಸಿಕೊಂಡ ಕುಟುಂಬಗಳು 0.3 0.2ಇತರೆ 0.1 0.1
ಯಾವುದೇ ಆರೋಗ್ಯ ವಿಮೆಗೆ ಒಳಪಡದವರು 85.9 85.9

ನಗರ ಪ್ರದೇಶ

ಸರ್ಕಾರ ಒದಗಿಸಿದ ಆರೋಗ್ಯ ವಿಮಾ ಯೋಜನೆ ಬಳಸಿಕೊಂಡವರು 12 12.2
ಖಾಸಗಿ ಉದ್ಯೋಗದಾತರು ಒದಗಿಸಿದ ವಿಮಾ ಯೋಜನೆ ಬಳಸಿಕೊಂಡವರು 2.4 2.9
ತಾವೇ ಒದಗಿಸಿಕೊಂಡ ಆರೋಗ್ಯ ವಿಮಾ ಯೋಜನೆಯನ್ನು ಬಳಸಿಕೊಂಡ ಕುಟುಂಬಗಳು 3.5 3.8
ಇತರೆ 0.2 0.2
ಯಾವುದೇ ಆರೋಗ್ಯ ವಿಮೆಗೆ ಒಳಪಡದವರು 82 80.9

ಕೋಷ್ಟಕ – 2

2018ರಲ್ಲಿ ಆರೋಗ್ಯ ವಿಮೆಗೊಳಗಾದ ಕುಟುಂಬಗಳ ಅನುಪಾತ (ಕುಟುಂಬಗಳ ವೆಚ್ಚವನ್ನು ಆಧರಿಸಿ ಅವುಗಳನ್ನು ಐದು ಗುಂಪುಗಳಾಗಿ ವರ್ಗೀಕರಿಸಲಾಗಿದೆ)
ಕುಟುಂಬಗಳ ಐದು ಗುಂಪುಗಳು
ಸರ್ಕಾರದ ಆರೋಗ್ಯ ವಿಮೆ ಬಳಸಿಕೊಂಡವರು ಯಾವುದೋ ಒಂದು ಆರೋಗ್ಯ ವಿಮೆಗೆ ಒಳಪಟ್ಟವರು ಗ್ರಾಮೀಣ ನಗರ ಗ್ರಾಮೀಣ ನಗರ
ಶೇ.20 ತಳಮಟ್ಟದಬಡಕುಟುಂಬಗಳು 10.1 8.1 10.2 9.8
ಶೇ.20 ತಳಮಟ್ಟದಮೇಲಿನಕುಟುಂಬಗಳು (20-40) 9.2 11.9 9.4 14
ಮಧ್ಯಮಮಟ್ಟದಶೇ.20 ಕುಟುಂಬಗಳು (40-60) 12.5 14.2 12.9 18.2
ಶೇ.20 ಶ್ರೀಮಂತಕುಟುಂಬಗಳು (60-80) 15.4 13.2 16 20.4
ಶೇ.20 ಅತಿಶ್ರೀಮಂತಕುಟುಂಬಗಳು 20 13.5 21.9 33

ಕೋಷ್ಟಕ – 3

ಆಸ್ಪತ್ರೆಗೆ ಸೇರಿದ್ದಾಗ ಮಾಡಿದ ಖರ್ಚಿನಲ್ಲಿ ಶೇ. ಎಷ್ಟು ಮಂದಿ ಮರಳಿ ಹಣ ಪಡೆದರು ಮತ್ತು ಅದರ ಮೊತ್ತ ವೆಷ್ಟು(ಕುಟುಂಬಗಳ ವೆಚ್ಚವನ್ನು ಆಧರಿಸಿ ಅವುಗಳನ್ನು ಐದು ಗುಂಪುಗಳಾಗಿ ವರ್ಗೀಕರಿಸಲಾಗಿದೆ)

ಕುಟುಂಬಗಳ ಐದು ಗುಂಪುಗಳು

ಗ್ರಾಮೀಣ ನಗರ

ವೆಚ್ಚ ಮರಳಿ ಪಡೆದವರು(ಶೇ. ಸಂಖ್ಯೆ) ಮರಳಿ ಪಡೆದ ಸರಾಸರಿ ಮೊತ್ತ ವೆಚ್ಚ ಮರಳಿ ಪಡೆದವರು
(ಶೇ. ಸಂಖ್ಯೆ ಮರಳಿ ಪಡೆದ ಸರಾಸರಿ ಮೊತ್ತ
ಶೇ.20 ತಳಮಟ್ಟದಬಡಕುಟುಂಬಗಳು 1.6 279 1.5 562
ಶೇ.20 ತಳಮಟ್ಟದಮೇಲಿನಕುಟುಂಬಗಳು (20-40) 1.1 211 3.4 1467
ಮಧ್ಯಮಮಟ್ಟದಶೇ.20 ಕುಟುಂಬಗಳು (40-60) 1.9 417 5.5 2527
ಶೇ.20 ಶ್ರೀಮಂತಕುಟುಂಬಗಳು (60-80) 2.2 705 7.8 4030
ಶೇ.20 ಅತಿಶ್ರೀಮಂತಕುಟುಂಬಗಳು 4 1373 21.8 12000

(ಈ ವಾರದ ಜನಶಕ್ತಿ ವಾರ ಪತ್ರಿಕೆಯಲ್ಲಿ‌ ಪ್ರಕಟವಾದ ಲೇಖನ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending