Connect with us

ರಾಜಕೀಯ

ದಾದಾಸಾಹೇಬ್ ಕಾನ್ಷೀರಾಮ್ : ಕೆಲವು ವಿಚಾರಗಳು | ಅಂಬೇಡ್ಕರ್ ಜಯಂತಿಗೆ ರಜೆ ಕ್ಯಾನ್ಸಲ್ ಮಾಡಿದ್ದಕ್ಕೆ ಬಿಎಸ್‍ಪಿ ಹುಟ್ಟಿಕೊಂಡಿತು..!

Published

on

  • ಆರ್ ಹೆಚ್ ಬಿ

ಅಂಬೇಡ್ಕರ್ ಜಯಂತಿ ದಲಿತರಿಗೆ ಅದೆಷ್ಟು ಮಹತ್ವದ್ದು? ಬಹುಶಃ ಅದು ವರ್ಣಿಸಲಸದಳ. ಅದಕ್ಕೆ ರಜೆ ನೀಡದ್ದಕ್ಕೆ, ನೀಡಿದ್ದ ರಜೆಯನ್ನು ರದ್ದುಮಾಡಿದ್ದಕ್ಕೆ ಒಂದು ಬೃಹತ್ ರಾಜಕೀಯ ಪಕ್ಷವೇ ಹುಟ್ಟಿಕೊಂಡಿತೆಂದರೆ…! ಹೌದು, ಇದು ಸತ್ಯ. ಇತಿಹಾಸಕಾರರು ಗುರುತಿಸಿರುವಂತೆ 1964ರಲ್ಲಿ ಕಾನ್ಷೀರಾಮ್ ರವರು ಅಧಿಕಾರಿಯಾಗಿದ್ದ DRDO ಕಚೇರಿಯಲ್ಲಿ ಆ ವರ್ಷ ಇದ್ದಕ್ಕಿದ್ದಂತೆ ಅಂಬೇಡ್ಕರ್ ಜಯಂತಿ, ಬುದ್ಧ ಜಯಂತಿ ಮತ್ತು ವಾಲ್ಮೀಕಿ ಜಯಂತಿಗಳಿಗೆ ರಜೆ ಕ್ಯಾನ್ಸಲ್ ಮಾಡಲಾಗಿತ್ತು. ಅದರ ಬದಲು ಬೇರೆ ಹಿಂದೂ ಹಬ್ಬಗಳಿಗೆ ರಜೆ ನೀಡಲಾಗಿತ್ತು. ಇದರ ವಿರುದ್ಧ ಸಿಡಿದು ನಿಂತ ಕಾನ್ಷೀರಾಮ್‍ರವರು ‘ತಮ್ಮ ಕಚೇರಿಯಲ್ಲೇ ಅಂಬೇಡ್ಕರ್ ಜಯಂತಿ ರಜೆ ರದ್ದು ಮಾಡಿದರೆ?’ ಎಂದು ನೌಕರರ ಮುಂದಾಳತ್ವ ವಹಿಸಿ ದೊಡ್ಡ ಹೋರಾಟ ರೂಪಿಸಿದರು. ಪರಿಣಾಮ BAMCEF ನಂತಹ ಬೃಹತ್ ನೌಕರರ ಸಂಘಟನೆ, DS4 ನಂತಹ ಬೃಹತ್ ಹೋರಾಟದ ಹಾದಿ, ಬಿಎಸ್‍ಪಿಯಂತಹ ರಾಜಕೀಯ ಪಕ್ಷ ಹುಟ್ಟಿಕೊಂಡಿತು. ಈ ನಿಟ್ಟಿನಲ್ಲಿ 1964ರಲ್ಲಿ ಅಂಬೇಡ್ಕರ್ ಜಯಂತಿಗೆ ರಜೆ ರದ್ದುಗೊಳಿಸಿಲ್ಲದಿದ್ದರೆ ಕಾನ್ಷೀರಾಮ್ ರವರು ಮದುವೆಯಾಗಿ, ಡಿಆರ್‍ಡಿಒದಲ್ಲಿ ಓರ್ವ ಸಾಮಾನ್ಯ ಸಂಶೋಧಕನಾಗಿ ಸಾಮಾನ್ಯ ಜೀವನ ನಡೆಸುತ್ತ ಇದ್ದುಬಿಡುತ್ತಿದ್ದರು! ಆದರೆ ಅಂಬೇಡ್ಕರ್ ಜಯಂತಿಗೆ ರಜೆ ರದ್ದುಮಾಡಿದ್ದರಿಂದ ಕಾನ್ಷೀರಾಮ್‍ರೊಳಗೊಬ್ಬ ಹೋರಾಟಗಾರ, ಅಪ್ರತಿಮ ನಾಯಕ ಎದ್ದು ನಿಂತಿದ್ದ. So, that is the power of  Ambedkar Jayanthi and power of Kanshiram!

ಪ್ರವಾದಿ ಮಾದರಿಯ ಹುರುಪು

ಕಾನ್ಷೀರಾಮ್‍ರವರು BAMCEF ಹೆಸರಿನಲ್ಲಿ ನೌಕರರನ್ನು ಸಂಘಟಿಸಿದ್ದು ಎಲ್ಲರಿಗೂ ತಿಳಿದಿದೆ. ತಮ್ಮ ಕನಸನ್ನು ನನಸುಗೊಳಿಸಲು ಸರ್ಕಾರಿ ನೌಕರರನ್ನು ಬಳಸಿಕೊಳ್ಳಬೇಕು ಎಂಬ ಐಡಿಯಾ ಸಾಹೇಬರಿಗೆ ಬಂದದ್ದು 1973ರಲ್ಲಿ. ಆದರೆ ಅದು ಸಾಕಾರಗೊಳ್ಳಲು ಸುಮಾರು ಐದು ವರ್ಷಗಳು ಬೇಕಾಯಿತು. ಈ ಸಂದರ್ಭದಲ್ಲಿ ಸಾಹೇಬರು ನೌಕರರನ್ನು ಸಂಘಟಿಸುವ ಪರಿ ಹೇಗಿತ್ತು? ದಾದಾಸಾಹೇಬರೇ ನೆನೆಪಿಸಿಕೊಳ್ಳುವಂತೆ “ಆಗಾಗ ನಾನು ಸರ್ಕಾರಿ ಕಚೇರಿಗಳಿಗೆ ಭೇಟಿಕೊಡಲು ಹೋದಾಗ ಜನ ನನ್ನನ್ನು ನೋಡಿ ಓ! ಹುಚ್ಚ ಬಂದ ಎಂದು ಓಡಿಹೋಗುತ್ತಿದ್ದರು!” (Views and Interviews of Kanshiram by N.Manohara Prasad, Pp.126) ಆದರೆ ದಾದಾಸಾಹೇಬರ ಪ್ರವಾದಿ ಮಾದರಿಯ ಹುರುಪು ಅವರ ಅನುಯಾಯಿಗಳನ್ನು ಅವರತ್ತ ಸೆಳೆಯಲು ಪ್ರಾರಂಭಿಸಿತು!

ನೌಕರರು ಮೆದುಳಿನ ಬ್ಯಾಂಕುಗಳು!

ಕಾನ್ಷೀರಾಮ್ ರವರು ನೌಕರರಲ್ಲಿ ತಪ್ಪಿತಸ್ಥ ಭಾವನೆಯನ್ನು ತುಂಬಿದರು. ತಾನೆಲ್ಲ ಪಡೆದೆ ತಾನು ಸಮಾಜಕ್ಕೆ ಏನು ಕೊಟ್ಟೆ? ಎಂಬ ಭಾವವದು.  ನೌಕರರು ಬರೇ ಹಣಕಾಸು ನೀಡುವುದಷ್ಟೆ ಅಲ್ಲ, ಮುಖ್ಯವಾಗಿ ಕಾನ್ಷೀರಾಮ್‍ರವರು ನೌಕರರ talent(ಪ್ರತಿಭೆ)ಗಳನ್ನು ಬಳಸಿದರು. ಈ ಬಗ್ಗೆ ಸ್ವತಃ ಕಾನ್ಷೀರಾಮ್‍ರವರು ಒಂದೆಡೆ “we use them as brain banks”  ಎನ್ನುತ್ತಾರೆ. ಅಂದರೆ “ನಾನು ಅವರನ್ನು ಮೆದುಳಿನ ಬ್ಯಾಂಕ್ ಥರ ಬಳಸಿದೆ” ಎಂದರ್ಥ! ಇದಕ್ಕೆ ಅವರು ಕೊಡುವ ವಿವರಣೆ “ಅವರು (ನೌಕರರು) ದೇಶಾದ್ಯಂತ ಹರಡಿದ್ದಾರೆ. ಅವರ ಹಣಕಾಸು ಶಕ್ತಿ ಮತ್ತು ಬುಧ್ಧಿಶಕ್ತಿ ಎರಡೂ ಬೆಲೆಕಟ್ಟಲಾಗದ್ದು”. ಹೌದು, ಕಾನ್ಷೀರಾಮ್‍ರವರು ಹೇಳಿದ ಮೆದುಳಿನ ಬ್ಯಾಂಕ್; ಶೋಷಿತ ಸಮುದಾಯದ ನೌಕರರ ಬಳಿ ದುಡ್ಡಿದೆ, ಹಾಗೆ ಮೆದುಳಿನಲ್ಲಿ ಅಪಾರ ಬುದ್ಧಿಶಕ್ತಿ ಇದೆ. ಆ ಬುದ್ದಿಶಕ್ತಿಯ ಕಾರಣಕ್ಕೆ ಅವರು ಸರ್ಕಾರಿ ಕಚೇರಿಗಳಿಗೆ ನೌಕರರಾಗಿ ಬಂದಿರುವುದು. ಅಂದಹಾಗೆ ಬುದ್ಧಿಶಕ್ತಿ, ಅದು ಮಾತನಾಡುವ ಶಕ್ತಿ ಇರಬಹುದು, ಸಂಘಟನಾ ಶಕ್ತಿ ಇರಬಹುದು, ಬರೆಯುವ ಶಕ್ತಿ ಇರಬಹುದು, ಇದನ್ನೆಲ್ಲ ಸಮುದಾಯಕ್ಕೆ ವಾಪಸ್ ಕೊಡುವಂತೆ ಸಾಹೇಬರು ಹೇಳಿದರು. ಅದನ್ನೆ pay back to society ಎಂದರು.

ಶಿಕ್ಷಕನ ಕೈಕೆಳಗೆ ಐಎಎಸ್ ಅಧಿಕಾರಿಗಳು!

BAMCEF ಸಂಘಟನೆಯಲ್ಲಿದ್ದಾಗ ಅಲ್ಲಿ ನೌಕರರ ಕೇಡರ್ ಬಗ್ಗೆ ಅಂದರೆ ದರ್ಜೆಯ ಬಗ್ಗೆ ಯಾವುದೇ ತಾರತಮ್ಯವಿರಲಿಲ್ಲ. ಲಕ್ನೋದ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಹೇಳುವಂತೆ “ಕಾನ್ಷೀರಾಮ್ ರವರು ವಿವಿಧ ದರ್ಜೆಯ ನೌಕರರ ನಡುವೆ ಇದ್ದ ಸೇವಾ ಅಂದರೆ ನಾನು ಮೇಲ್ಮಟ್ಟದ ನೌಕರ ಅವನು ತಳಮಟ್ಟದ ನೌಕರ ಎಂಬ ಬೇಲಿಯನ್ನು ಮುರಿದರು. ಹೇಗೆಂದರೆ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಹೇಳುವಂತೆ “BAMCEF ನ ಸ್ಥಳೀಯ ಸಂಯೋಜಕನಾದ ಓರ್ವ ಶಿಕ್ಷಕನ ಮನೆಯಲ್ಲಿ ಐಎಎಸ್ ಅಧಿಕಾರಿಗಳೂ ಸೇರಿದಂತೆ ಕಚೇರಿಯ ಹಿರಿಯ ಅಧಿಕಾರಿಗಳೆಲ್ಲ ಆತ್ಮೀಯತೆಯಿಂದ ಸಭೆ ಸೇರುತ್ತಿದ್ದೆವು”.

ಭಾಷಣ ಕೇಳಲೂ ಹಣ ಕೊಡಬೇಕು!

ಕಾನ್ಷೀರಾಮ್‍ವರಿಗೆ ಪಕ್ಷ ಕಟ್ಟಲು ಇಷ್ಟೊಂದು ದುಡ್ಡು ಎಲ್ಲಿ ಬರುತ್ತದೆ? ಎಂಬುದು ಅಂದಿನ ಪತ್ರಕರ್ತರ ಸಂದೇಹವಾಗಿತ್ತು. ಆಗ ಕೆಲವು ಪತ್ರಕರ್ತರು ಕಾನ್ಷೀರಾಮ್ ರವರು ಅಂದಿನ ಉತ್ತರಪ್ರದೇಶದ ದೊಡ್ಡ ಬಿಸಿನೆಸ್‍ಮನ್ ಹಾಜಿ ಮಸ್ತಾನ್ ಮಿರ್ಝಿಯವರ ಜೊತೆ ಸಂಪರ್ಕದಲ್ಲಿದ್ದಾರೆ. ಅವರೇ ಇವರಿಗೆ ಹಣ ಕೊಡುವುದು ಎಂದು ಗುಲ್ಲೆಬ್ಬಿಸಿದರು. (ಯಾಕೆಂದರೆ 90ರ ದಶಕದಲ್ಲೇ ಲಕ್ನೋದಲ್ಲಿ ನಡೆದ ರ್ಯಾಲಿಯೊಂದರಲ್ಲಿ ದಾದಾಸಾಹೇಬರು ಜನರನ್ನು ಕರೆತರಲು ಬರೇ ಬಸ್ಸುಗಳಿಗೆ ಖರ್ಚು ಮಾಡಿದ್ದ ಹಣವೇ 22 ಲಕ್ಷ!) ಆಗ ಈ ಹಾಜಿ ಮಸ್ತಾನ್ ಮಿರ್ಝಿಯ ಕಥೆಗೆ ಸಾಹೇಬರು ಹೇಳಿದ್ದು “ಹಾಜಿ ಮಸ್ತಾನ್ ಸಣ್ಣ ವ್ಯಾಪಾರಿ. ಆತ ನನಗೆ ಎಷ್ಟು ಅಂತ ಕೊಡಲಿಕ್ಕೆ ಸಾಧ್ಯ? ನಿಜ ಹೇಳಬೇಕೆಂದರೆ ಭಾರತದ ಯಾವುದೇ ರಾಜಕೀಯ ಪಕ್ಷವೂ ಇಷ್ಟು ಹಣ ಖರ್ಚು ಮಾಡಿಲ್ಲ. ಅಷ್ಟು ಹಣವನ್ನು ನಾನು ಖರ್ಚು ಮಾಡಿದ್ದೇನೆ”. ಹಾಗಿದ್ದರೆ ಇದಕ್ಕೆಲ್ಲ ಹಣ? ಅದಕ್ಕೆ ದಾದಾಸಾಹೇಬರು ಹೇಳುವುದು “ನನಗೆ ವಿವಿಧ ಮೂಲಗಳಿಂದ ಹಣ ಬರುತ್ತದೆ. ಅಂದಹಾಗೆ ಆ ಮೂಲಗಳು ಎಂದೂ ಬತ್ತುವುದೇ ಇಲ್ಲ. ಮುಖ್ಯವಾಗಿ ಸದಸ್ಯತ್ವ ಶುಲ್ಕ ಮತ್ತು ಕಾಲಕಾಲಕ್ಕೆ ಕಾರ್ಯಕರ್ತರು ನೀಡುವ ದೇಣಿಗೆಯಿಂದ ಹಣ ಬರುತ್ತದೆ”. ಇದಲ್ಲದೆ ತಮ್ಮ ಭಾಷಣಗಳಿಗೆ ಕಡೇ ಪಕ್ಷ 52000 ಜನ ಸೇರಲೇಬೇಕು ಎಂದು ತಾಕೀತು ಮಾಡುತ್ತಿದ್ದ ಕಾನ್ಷೀರಾಮ್‍ರವರು ಕಡ್ಡಾಯವಾಗಿ ತಲಾ ಒಬ್ಬೊಬ್ಬರಿಂದ 1 ರೂನಂತೆ 52000 ಶುಲ್ಕ ವಸೂಲಿ ಮಾಡಿಸುತ್ತಿದ್ದರು! ಇದರ ಬಗ್ಗೆ ಜೋಕ್ ಕಟ್ ಮಾಡುತ್ತಿದ್ದ ಅವರು “ಈ ಮೊತ್ತವನ್ನು ಶೀಘ್ರದಲ್ಲೇ 1 ಲಕ್ಷಕ್ಕೆ ಏರಿಸಬೇಕೆಂದಿದ್ದೇನೆ” ಎನ್ನುತ್ತಿದ್ದರು. ಅಂದರೆ ಅವರು ಏರಿಸುತ್ತಿದ್ದದ್ದು ಬರೇ ಹಣವನ್ನಷ್ಟೆ ಅಲ್ಲ, ಜನರನ್ನೂ ಕೂಡ ಎಂಬುದು ಅಲ್ಲಿ ತಿಳಿಯಬೇಕಾದ ಅಂಶ!

ದಾದಾಸಾಹೇಬರನ್ನು ಸಿಐಎ ಏಜೆಂಟ್ ಎಂದ ಅಂದಿನ ಸರ್ಕಾರ!

ಅಬ್ಬಾ, 1987ರಲ್ಲಿ ಕಾನ್ಷೀರಾಮ್‍ರವರು ಉತ್ತರಪ್ರದೇಶದ ಬಿಜ್ನೋರ್ ನಿಂದ ಲೋಕಸಭೆಗೆ ಸ್ಪರ್ಧಿಸಿದರು. ಆ ಚುನಾವಣೆಯಲ್ಲಿ ಬಿಜ್ನೋರ್ ಜಿಲ್ಲೆ ಪೂರ್ತಿ ಒಂದು ಕರಪತ್ರ ಹಂಚಲಾಗಿತ್ತು ಮತ್ತು ಆ ಕರಪತ್ರದಲ್ಲಿದ್ದದ್ದು ಏನು ಗೊತ್ತೆ? ಕಾನ್ಷೀರಾಮ್ ಸಿಐಎ ಏಜೆಂಟ್ ಎಂದು! ಸಿಐಎ(ಸೆಂಟ್ರಲ್ ಇಂಟೆಲ್ಲೆಜೆನ್ಸಿ ಆಫ್ ಅಮೆರಿಕಾ) ಅದು ಭಾರತದ ‘ರಾ’ ಮತ್ತು ಪಾಕಿಸ್ತಾನದ ಐಎಎಸ್‍ಐ ನಂತೆ ಅಮೆರಿಕಾದ ಗುಪ್ತಚರ ಇಲಾಖೆ. ಅಂದರೆ ಭಾರತವನ್ನು ದುರ್ಬಲಗೊಳಿಸಲು ಅಮೆರಿಕಾ ಕಳುಹಿಸಿರುವ ಗುಪ್ತಚರ ಇಲಾಖೆಯ ಏಜೆಂಟ್ ಕಾನ್ಷೀರಾಮ್ ಎಂದು ಆ ಕರಪತ್ರದಲ್ಲಿ ಮುದ್ರಿಸಲಾಗಿತ್ತು! ಮತ್ತು ಚುನಾವಣಾ ಆ ಸಮಯದಲ್ಲಿ ಅದನ್ನು ಹಂಚಲಾಗಿತ್ತು. ಈ ಬಗ್ಗೆ ಆಕ್ರೋಶಭರಿತರಾಗಿ ಕಾನ್ಷೀರಾಮ್‍ರವರು ಹೇಳಿದ್ದು “ನಾನು ಸಿಐಎ ಏಜೆಂಟ್ ಆಗಿದ್ದರೆ ಈ ಸರ್ಕಾರವೇಕೆ ನನ್ನ ವಿರುದ್ಧ ಕ್ರಮ ಜರುಗಿಸಿಲ್ಲ? ಇದು ತೋರಿಸುವುದೇನೆಂದರೆ ಇದು ಹಿಜಡಾಗಳ ಸರ್ಕಾರ!” ಎಂದು.

ಜಾತಿಗಳನ್ನು ಒಗ್ಗೂಡಿಸುವವರು ಜಾತಿವಾದಿಯಾಗಲು ಹೇಗೆ ಸಾಧ್ಯ?

ಒಮ್ಮೆ ಪತ್ರಕರ್ತರು ದಾದಾಸಾಹೇಬರನ್ನು ಕೇಳಿದ್ದು “ಜಾತಿವಾದಿ ಪಕ್ಷವೊಂದನ್ನು ಕಟ್ಟಿರುವ ನಿಮ್ಮಿಂದ ಜಾತಿ ನಿರ್ಮೂಲನೆ ಹೇಗೆ ಸಾಧ್ಯ?” ಎಂದು. ಅದಕ್ಕೆ ಸಾಹೇಬರು ಕೊಟ್ಟ ಉತ್ತರ “ಬಿಎಸ್‍ಪಿ ಜಾತಿವಾದಿ ಪಕ್ಷವಲ್ಲ. ನಾವು ಈ ದೇಶದ 6000 ಜಾತಿಗಳನ್ನು ಒಗ್ಗೂಡಿಸುತ್ತಿದ್ದೇವೆ ಮತ್ತು ಹೀಗಿರುವಾಗ ನಮ್ಮನ್ನು ನೀವು ಯಾವ ಅರ್ಥದಲ್ಲಿ ಜಾತಿವಾದಿ ಎನ್ನುವಿರಿ?”. ಹೌದು, ದಾದಾಸಾಹೇಬರ ಮಾತಿನಂತೆ ಈ ದೇಶದ ಎಲ್ಲ ಜಾತಿಗಳೂ ಒಗ್ಗೂಡದೆ ಭವ್ಯ ಭಾರತ ನಿರ್ಮಾಣ ಸಾಧ್ಯವಿಲ್ಲ.

ಯತಾಸ್ಥಿತಿವಾದಿ ಗಾಂಧಿ

ಒಮ್ಮೆ ಪತ್ರಕರ್ತರು ಸಾಹೇಬರಿಗೆ “ನಿಮ್ಮ ಕಾರ್ಯಕರ್ತರು ಗಾಂಧಿ ಬಗ್ಗೆ ಇಷ್ಟೊಂದು ಹಗೆತನ ಸಾಧಿಸಲು ಏನು ಕಾರಣ?” ಎಂದರು. ಅದಕ್ಕೆ ದಾದಾಸಾಹೇಬರು ಹೇಳುತ್ತಾರೆ “ಗಾಂಧಿ ಈ ದೇಶದ ಪ್ರತಿಯೊಂದರ ಮೂಲ! ನನಗೆ ಬದಲಾವಣೆ ಬೇಕು, ಡಾ.ಅಂಬೇಡ್ಕರ್‍ರವರು ಕೂಡ ಬದಲಾವಣೆ ಬಯಸಿದ್ದರು. ಆದರೆ ಗಾಂಧಿ ಯತಾಸ್ಥಿತಿವಾದದ ವಾರಸುದಾರರು. ಅವರಿಗೆ ಶೂದ್ರ ಶೂದ್ರನಾಗೇ ಉಳಿಯಬೇಕು. ಅಂದಹಾಗೆ ಗಾಂಧಿ ಈ ದೇಶವನ್ನು ಇಬ್ಬಾಗಗೊಳಿಸಲು ಏನೇನುಮಾಡಬೇಕೋ ಅದೆಲ್ಲವನ್ನೂ ಮಾಡಿದರು. ಈ ನಿಟ್ಟಿನಲ್ಲಿ ಹೇಳುವುದಾದರೆ ನಾವು ಈ ದೇಶವನ್ನು ಒಗ್ಗೂಡಿಸುವ ದಿಸೆಯಲ್ಲಿ ಕೆಲಸಮಾಡುತ್ತಿದ್ದೇವೆ ಮತ್ತು ಎಲ್ಲ ರೀತಿಯ ಮಾನವ ನಿರ್ಮಿತ ವಿಭಜನೆಗಳನ್ನು ತೊಲಗಿಸುತ್ತೇವೆ”!

ಬಹುಜನ ಸಮಾಜ ಪಕ್ಷವೇ ಯಾಕೆ?

ಈ ಪ್ರಶ್ನೆಗೆ ಕಾನ್ಷೀರಾಮ್ ರವರು ಬರೆಯುತ್ತಾರೆ “ಇಂದು ಭಾರತದಲ್ಲಿ ಏಳು ರಾಷ್ಟ್ರೀಯ ಪಕ್ಷಗಳಿವೆ. ಈ ಎಲ್ಲ ಏಳು ರಾಷ್ಟ್ರೀಯ ಪಕ್ಷಗಳು ಪ್ರಬಲ ಹಿಂದೂ ಜಾತಿಗಳ ಕೈಯಲ್ಲಿವೆ. ಆ ಪ್ರಬಲ ಜಾತಿಗಳವರು ತಮ್ಮ ಆಳ್ವಿಕೆ ಮುಂದುವರೆಸಲು ಮತ್ತು ಹಿತಾಸಕ್ತಿ ಕಾಪಾಡಿಕೊಳ್ಳಲು ಈ ಏಳೂ ಪಕ್ಷಗಳನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿದ್ದಾರೆ. ಈ ಕಾರಣಕ್ಕೆ ದಲಿತ-ಶೋಷಿತ ಸಮಾಜ ತನ್ನ ಬಳಿ ಶೇ.85 ಮತ ಬ್ಯಾಂಕ್ ಇದ್ದರೂ ಕೂಡ ಅಸಹಾಯಕ ಪರಿಸ್ಥಿತಿಯಲ್ಲಿದೆ. ಇದಕ್ಕಾಗಿ ನನಗೆ ಅನಿಸಿದ್ದೆಂದರೆ ನಾವು ನಮ್ಮದೇ ಆದ ಸ್ವಂತ ರಾಜಕೀಯ ಪಕ್ಷ ಹೊಂದಬೇಕು” ಎಂಬುದು.

ತ್ಯಾಗಕ್ಕೆ ಮತ್ತೊಂದು ಹೆಸರೇ ಕಾನ್ಷೀರಾಮ್

ತ್ಯಾಗ; ಬಹುಶಃ ಈ ಪದ ಕಾನ್ಷೀರಾಮ್ ರವರಿಗೆ ಅನ್ವರ್ಥವಾಗುತ್ತದೆ. ಮಹಾಭಾರತದಲ್ಲಿ ಕರ್ಣ ತನ್ನ ಕಲಶ ಕುಂಡಲಿಗಳನ್ನು ಕೊಟ್ಟು ತನ್ನ ಪ್ರಾಣ ತ್ಯಾಗ ಮಾಡಿದ. ಆದರೆ ದಾದಾಸಾಹೇಬರು? ತಮ್ಮ ನೌಕರಿ, ತಮ್ಮ ಕುಟುಂಬ, ತಮ್ಮ ಬಳಿಯಿದ್ದ ನೌಕರಿಯಿಂದ ಸಂಪಾದಿಸಿದ್ದ ಆ ಹಣ ಮತ್ತು ಆ ನೌಕರಿಯಿಂದ ಮಜಾ ಮಾಡಬಹುದಾಗಿದ್ದ ಆ ಅಮೂಲ್ಯ ಸಮಯ ಎಲ್ಲವನ್ನೂ ತ್ಯಾಗಮಾಡಿದರು. ಸರ್ಕಾರಿ ನೌಕರರಾಗಲು ಎಲ್ಲರೂ ಹಪಹಪಿಸುವುದನ್ನು ನೋಡುತ್ತೇವೆ. ಅದೂ ದಾದಾಸಾಹೇಬರು ಆ ಕಾಲದಲ್ಲೇ ಬಿಎಸ್ಸಿ ಮಾಡಿ ಡಿಆರ್‍ಡಿಒದಂಥ ಉನ್ನತ ಸಂಸ್ಥೆ ಸೇರಿದ್ದರು. ನಿವೃತ್ತಿಯಾಗುವ ಹೊತ್ತಿಗೆ ಅವರು ಈ ದೇಶದ ದೊಡ್ಡ ವಿಜ್ಞಾನಿಯಾಗಿ ಲಕ್ಷ ಲಕ್ಷ ಗಳಿಸಿ ವೈಭವೋಪೇತ ಜೀವನ ನಡೆಸಬಹುದಿತ್ತು. ಆದರೆ ಶೋಷಿತ ಸಮುದಾಯಕ್ಕೋಸ್ಕರ ಅದನ್ನು ಬಿಟ್ಟದ್ದು, ಶೋಷಿತ ಬಹುಜನರ ಏಳಿಗೆಗಾಗಿ ತಾನು ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಶಪಥಗೈದದ್ದು, ಅಂತೆಯೇ ನುಡಿದಂತೆ ನಡೆದದ್ದು, ಅಗಾಧವನ್ನು ಸಾಧಿಸಿದ್ದು, ಬಹುಶಃ ಆ ತ್ಯಾಗಕ್ಕೆ ಎಣೆಯಿಲ್ಲ. ವರ್ಣಿಸಲು ಪದಗಳಿಲ್ಲ. ತನ್ನ ಪರಿಮಳವನ್ನು ಪ್ರಪಂಚಕ್ಕೆ ನೀಡಿ ತಾನು ಬಾಡುವ ಸುಂದರ ಹೂವು ಕಾನ್ಷೀರಾಮ್‍ರವರು. ನಿಂತುಹೋಗಿದ್ದ ಅಂಬೇಡ್ಕರ್ ರಥವನ್ನು 40 ವರ್ಷಗಳ ಕಾಲ ಮುನ್ನಡೆಸಿದರು. ಮರೆತುಹೋಗಬಹುದಾಗಿದ್ದ ಜೈಭೀಮ್ ಅನ್ನು ಬಾನೆತ್ತರಕೆ ಮೊಳಗಿಸಿದರು. ಅವರು ಇಂದು ನಮ್ಮ ನಡುವೆ ಇಲ್ಲದಿರಬಹುದು (ನಿಧನ; ಅಕ್ಟೋಬರ್ 9, 2006). ಆದರೆ ಅವರ ಅಮರ ತ್ಯಾಗ ನಮ್ಮ ನಡುವೆ ಉಳಿಯುತ್ತದೆ… ನಮ್ಮನ್ನು ಸದಾ ಕಾಡುತ್ತದೆ… ಅಶ್ರುತರ್ಪಣದೊಂದಿಗೆ…
ಜೈಭೀಮ್… ಜೈಭಾರತ್… ಜೈಕಾನ್ಷೀರಾಮ್…

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ.

ಯುವಜನರು, ಮಹಿಳೆಯರು, ರೈತರು ಸೇರಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚುನಾವಣಾ ಬಾಂಡ್ ಕುರಿತ ದತ್ತಾಂಶ ಬಿಡುಗಡೆ

Published

on

ಸುದ್ದಿದಿನ,ನವದೆಹಲಿ : ಚುನಾವಣಾ ಬಾಂಡ್ ಕುರಿತಂತೆ ಸುಪ್ರೀಂಕೋರ್ಟ್‌ನ ರಿಜಿಸ್ಟ್ರಿ ಇಂದ ಲಭ್ಯವಾದ ಅಂಕಿಕೃತ ದತ್ತಾಂಶ ಮಾದರಿಯನ್ನು ಚುನಾವಣಾ ಆಯೋಗ ಭಾನುವಾರ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ. www.eci.gov.in/candidate-politicalparty ವೆಬ್‌ಸೈಟ್‌ನಲ್ಲಿ ಈ ದತ್ತಾಂಶ ಲಭ್ಯವಿರುತ್ತದೆ.

ಸುಪ್ರೀಂಕೋರ್ಟ್ ನಿರ್ದೇಶಿಸಿದಂತೆ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಕುರಿತ ದತ್ತಾಂಶಗಳನ್ನು ಮೊಹರು ಹಾಕಿದ ಲಕೋಟೆಯಲ್ಲಿ ಸಲ್ಲಿಸಿದ್ದವು ಎಂದು ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ. ರಾಜಕೀಯ ಪಕ್ಷಗಳಿಂದ ಸ್ವೀಕರಿಸಿದ ಮೊಹರು ಹಾಕಿದ ಲಕೋಟೆಗಳನ್ನು ತೆರೆಯದೇ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿತ್ತು.

ಇದೇ 15ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ಮೇರೆಗೆ ಸುಪ್ರೀಂಕೋರ್ಟ್‌ನ ರಿಜಿಸ್ಟ್ರಿ, ಭೌತಿಕ ಪ್ರತಿ ಹಾಗೂ ಅದರ ಡಿಜಿಟಲ್ ದಾಖಲೆಯಿರುವ ಪೆನ್‌ಡ್ರೈವ್ ಒಳಗೊಂಡ ಮೊಹರು ಹಾಕಿದ ಲಕೋಟೆಯನ್ನು ಹಿಂತಿರುಗಿಸಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ನಿಷೇಧ : ಸಚಿವ ದಿನೇಶ್ ಗುಂಡೂರಾವ್

Published

on

ಸುದ್ದಿದಿನ, ಬೆಂಗಳೂರು : ಕೃತಕ ಬಣ್ಣ ಬಳಸಿದ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯಾದ್ಯಂತ ನಿಷೇಧಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಆದಾಗ್ಯೂ, ಬಣ್ಣ ಹಾಗೂ ರಾಸಾಯನಿಕ ಹಾಕದೇ ಇರುವ ಈ ತಿನಿಸುಗಳ ಮಾರಾಟಕ್ಕೆ ನಿರ್ಬಂಧ ಇಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರಿಗೂ ಅಚ್ಚುಮೆಚ್ಚಾದ ಈ ಎರಡು ತಿನಿಸುಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡಲು ಬಳಸುವ ಕೃತಕ ಬಣ್ಣಗಳಲ್ಲಿ ಅಪಾಯಕಾರಿ ರಾಸಾಯನಿಕಗಳು ಇರುವುದು ಪರೀಕ್ಷೆಗಳಿಂದ ದೃಢಪಟ್ಟಿದೆ ಎಂದರು. ರಾಜ್ಯದ ಹಲವೆಡೆ ಬೀದಿಬದಿಯ ಗಾಡಿಗಳು, ಹೋಟೆಲ್‌ಗಳಲ್ಲಿ ತಯಾರಿಸಿದ ಗೋಬಿ ಮಂಚೂರಿ ತಿನಿಸಿನ 171ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 107ಮಾದರಿಗಳಲ್ಲಿ ಅಸುರಕ್ಷಿತ ರಾಸಾಯನಿಕಗಳು ಪತ್ತೆಯಾಗಿರುವುದು ಆತಂಕಕಾರಿಯಾಗಿದೆ ಎಂದರು.

ಕೃತಕ ಬಣ್ಣಗಳಲ್ಲಿರುವ ರೋಡೊಮೈನ್-ಬಿ ಮತ್ತು ಟಾಟ್ರಝೀನ್ ರಾಸಾಯನಿಕಗಳು ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಹುದು ಎನ್ನುವ ಅಂಶ ತಿಳಿದುಬಂದಿದೆ. ಬಣ್ಣ ಹಾಕಿದ ಗೋಬಿಮಂಚೂರಿ ಮತ್ತು ಕಾಟನ್‌ಕ್ಯಾಂಡಿಗಳನ್ನು ಮಾರಾಟ ಮಾಡುವವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಏಳು ವರ್ಷದರೆಗೆ ಜೈಲು ಶಿಕ್ಷೆ, 10 ಲಕ್ಷ ರೂಪಾಯಿವರೆಗೆ ದಂಡ ಅಥವಾ ಜೀವಾವಧಿ ಶಿಕ್ಷೆಗೂ ಅವಕಾಶವಿದೆ ಎಂದು ಸಚಿವರು ಎಚ್ಚರಿಕೆ ನೀಡಿದರು.

ಹೇಳಿಕೆ


  • ಬಣ್ಣ ಹಾಕಿರುವ ಈ ಎರಡು ತಿನಿಸುಗಳನ್ನು ಸೇವಿಸಬಾರದು ಎಂದು ಸಾರ್ವಜನಿಕರಿಗೂ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಲ್ಲದೇ, ಕಬಾಬ್, ಪಾನಿಪೂರಿ ಮೊದಲಾದ ತಿನಿಸುಗಳಲ್ಲೂ ಕೃತಕ ಬಣ್ಣಗಳ ಬಳಕೆ ಆಗುತ್ತಿದೆಯೇ ಎಂದು ಪರಿಶೀಲಿಸಲಾಗುತ್ತಿದೆ.

            | ಸಚಿವ ದಿನೇಶ್ ಗುಂಡೂರಾವ್


ಟ್ವೀಟ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending