Connect with us
http://www.suddidina.com/category/political-news

ರಾಜಕೀಯ

ಹೆಚ್.ಬಿ. ಮಂಜಪ್ಪ ಮತ್ತು ಲೋಕಸಭಾ ಚುನಾವಣೆ

Published

on

ಮಾನ್ಯರೆ,

2019 ರ ಲೋಕಸ‌ಭಾ ಚುನಾವಣೆ ಇದು ಗ್ರಾಮ ಪಂಚಾಯತಿ ಚುನಾವಣೆಯಲ್ಲ, ರಾಷ್ಟ್ರೀಯ ಹಿತಾಸಕ್ತಿಯ ಮೇಲೆ ನಡೆಯುವ ಈ ಚುನಾವಣೆ ಭಾರತದ ಅಭಿವೃದ್ಧಿಯ ದೃಷ್ಟಿಯಲ್ಲಿ ಮಹತ್ತರವಾದ ಚುನಾವಣೆ ಅನ್ನುವಂತದ್ದು.

ಈ ಚುನಾವಣೆಯಲ್ಲಿ ಕುರುಬರಿಗೆ ಟಿಕೆಟ್ ಕೊಟ್ಟಿದ್ದಾರೆ,ಲಿಗಾಯತರಿಗೆ ಟಿಕೆಟ್ ಕೊಟ್ಟಿದ್ದಾರೆ ಅನ್ನೋದು ಮುಖ್ಯ ಅಲ್ಲ, ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಅಡಿಯಲ್ಲಿ ಇವತ್ತು ಅಭ್ಯರ್ಥಿಗಳನ್ನ ಆಯ್ಕೆ ಮಾಡಿದ್ದು ಬೇರ ಬೇರೆ ಕ್ಷೇತ್ತಗಳಲ್ಲಿ ಲಿಂಗಾಯತರಿಗೆ,ನಾಯಕರಿಗೆ,
ದಲಿತರಿಗೆ ಬೇರೆ ಬೇರೆ ಸಮುದಾಯದವರಿಗೆ ಅವಕಾಶ ಸಿಕ್ಕಿರುವಂತದ್ದು ನಮಗೆಲ್ಲಾ ತಿಳಿದಿರುವಂತದ್ದು..

ಜಾತಿ ವ್ಯವಸ್ಥೆ ಅದೊಂದು ಭಾರತೀಯ ಸಮಾಜಕ್ಕೆ ಅಂಟಿದ ಶಾಪ

 • ಹೆಚ್ ಬಿ ಮಂಜಪ್ಟ ನಮ್ಮ ಪಕ್ಷದ ಅಭ್ಯರ್ಥಿಯೇನು ಕುರುಬರಲ್ಲೇ ಹುಟ್ಟಬೇಕೆಂದು ಅರ್ಜಿ ಹಾಕಿಕೊಂಡು ಹುಟ್ಟಿದವರೇನಲ್ಲ, ಜಾತಿ ವ್ಯವಸ್ಥೆ ಇದೆ ಅನಿವಾರ್ಯವಾಗಿ ಒಂದು ಜಾತಿಯಲ್ಲಿ ಹುಟ್ಟಿದ್ದಾರೆ.
 • ಹೆಚ್ ಬಿ ಮಂಜಪ್ಪ ಒಳ್ಳೆಯ ಮಾತುಗಾರ,ಪ್ರಗತಿ ಪರವಾಗಿ ಚಿಂತನೆ ಮಾಡುವಂತ ನಾಯಕ ದೇಶದ ರೈತರ ಉಳಿವಿಗಾಗಿ,ಅಭಿವೃದ್ಧಿಗಾಗಿ ಇಂತವರ ಆಯ್ಕೆ ಸೂಕ್ತವಾಗಿರುವಂತದ್ದು.ಬಿಜೆಪಿ ಅಭ್ಯರ್ಥಿ ಮಾನ್ಯ ಸಿದ್ದೇಶ್ ರವರ ಚಿಂತನೆ,ವೈಫಲ್ಯಗಳನ್ನ ನಾವು ಜನರಿಗೆ ತಿಳಿಸಬೇಕಾಗುತ್ತದೆ.
 • ಬಿಜೆಪಿ ಹೇಳಿ ಕೇಳಿ ವೈದಿಕರ ಪಕ್ಷ, ಸಂವಿಧಾನವನ್ನ ನಾಶ ಮಾಡ್ಲಿಕ್ಕಾಗೀನೆ ಹುಟ್ಟಿದಂತ ಪಕ್ಷ, ಇವತ್ತು ಸಂವಿಧಾನದ ನಾಶ ಅಂದರೆ ಭಾರತದ ಪರಂಪರೆಯ ನಾಶ, ಭಾರತದ ಸಂಸ್ಕೃತಿಯ ನಾಶ,ಲಿಂಗಾಯತರೂ ಸೇರಿದಂತೆ ಎಲ್ಲಾ ಹಿಂದುಳಿದ ದಲಿತ ಅಲ್ಪಸಂಖ್ಯಾತರ ನಾಶ, ಭಾರತದ ದ್ರಾವಿಡ ಸಂಸ್ಕೃತಿಯ ನಾಶ ಅನ್ನುವಂತದ್ದು.
 • ಬಿಜೆಪಿಯಲ್ಲಿ ಯಾವ ಲಿಂಗಾಯತರಿಗೂ ಗೌರವ ಇಲ್ಲ,ಕರ್ನಾಟಕದಲ್ಲಿ ಬಿಜೆಪಿಯ ಬಲ ಅಂದರೇ ಲಿಂಗಾಯತರು,ಆರು ಜನ ಸಂಸದರಿದ್ದರೂ ಕೂಡ ಒಬ್ಬರಿಗೂ ಮಂತ್ರಿ ಸ್ಥಾನ ಇಲ್ಲ, ಸ್ವತಃ ಮಾನ್ಯ ಸಿದ್ದೇಶ್ ರವರಿಗೇ ಮಂತ್ರಿ ಸ್ಥಾನ ಕೊಟ್ಟು ಸಡನ್ ಆಗಿ ಕಸಿದ್ಕೊಂಡಂತವರು ಕಾರಣ ಮಾನ್ಯ ಸಿದ್ದೇಶ್ ವೈದಿಕ ಅಲ್ಲ, ಒಬ್ಬ ಶೂದ್ರ ಆ ಕಾರಣಕ್ಕೆ ಅವರಿಗೆ ಬಿಜೆಪಿ ಅವಮಾನಿಸಿದ್ದು.
 • ಸ್ವತಃ ಬಿಜೆಪಿಯಲ್ಲಿ ಯಡಿಯೂರಪ್ಪನವರಿಗೇ ಗೌರವ ಇಲ್ಲ, ಯಡಿಯೂರಪ್ಪ ಲಿಂಗಾಯತ ನಾಯಕನಾಗಿದ್ದಕ್ಕೇ ಬಿಜೆಪಿಯಲ್ಲಿ ಮುಖ್ಯಮಂತ್ರಿಯಿಂದ ಕೆಳಗಿಳಿಸಿದ್ದು,ಮತ್ತೆ ಮುಖ್ಯಮಂತ್ರಿಯಾಗದಂತೆ ತಂತ್ರಗಳನ್ನ ರೂಪಿಸಿದ್ದು. ಯಡಿಯೂರಪ್ಪ ಭ್ರಷ್ಟಾಚಾರ ಮಾಡಿದಾರೆ ಅನ್ನಬಹುದು, ಅದಕ್ಕಿಂತ ಭ್ರಷ್ಟಾಚಾರಿಗಳು ಬಿಜೆಪಿಯಲ್ಲಿ ಇದ್ದಾರೆ ಅನ್ನುವಂತದ್ದು.
 • ನಮಗೆ ಸಿದ್ದೇಶ್ ಅಭ್ಯರ್ಥಿ ಇರಬಹುದು, ನಮ್ಮ ಮತ ಸಿದ್ದೇಶ್ ವಿರುದ್ಧ ಅಲ್ಲ ಮಾನ್ಯ ನರೇಂದ್ರ ಮೋದಿಯ ವಿರುದ್ಧ,ಬಿಜೆಪಿಯ ವಿರುದ್ಧ ಸಂವಿಧಾನ ನಾಶ ಮಾಡುವವರ ವಿರುದ್ಧ,ಭಾರತೀಯರ ಸಾಂಸ್ಕೃತಿಕ ಬದುಕನ್ನ ನಾಶ ಮಾಡುವವರ ವಿರುದ್ಧ.
 • ಸಿದ್ಧರಾಮಯ್ಯ ಕುರುಬ ಸಮುದಾಯದಲ್ಲಿ ಹುಟ್ಟಿದಂತವರು ಇವತ್ತು ಕೇವಲ ಕುರುಬರಿಗೆ ರೈತರ ಸಾಲ ಮನ್ನಾ ಮಾಡ್ಲಿಲ್ಲ,ಕೇವಲ ಕುರುಬರಿಗೆ ತಿಂಗಳಿಗೆ 30 ಕೆಜಿ ಅಕ್ಕಿ ಕೊಡ್ಲಿಲ್ಲ,ಕೇವಲ ಕುರುಬರ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟ ಕೊಡ್ಲಿಲ್ಲ,ಹಾಲು ಮೊಟ್ಟೆ,ಬಟ್ಟೆ ಪುಸ್ತಕ ಕೊಡ್ಲಿಲ್ಲ. ಮಾನ್ಯ ಸಿದ್ಧರಾಮಯ್ಯ ಬಸವ ಜಯಂತಿಯಂದು ನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, ಬಸವಣ್ಣ ಕಂಡ ಸಮ ಸಮಾಜದ ಉಳಿವಿಗಾಗಿ ಕಾರ್ಯಕ್ರಮ ರೂಪಿಸಿದಂತವರು, ನಾಡಿನದಲಿತರ,ಹಿಂದುಳಿದವರ(ಲಿಂಗಾಯತರೂ ಹಿಂದುಳಿದವರೆ,3rd B ) ಅಲ್ಪಸಂಖ್ಯಾತರ ರೈತರ ಪರವಾಗಿ ಕಾರ್ಯಕ್ರಮ ರುಪಿಸಿದಂತವರು,ರೈತರ ಪರವಾಗಿ,ಮಹಿಳೆಯರ ಪರವಾಗಿ,ವಿದ್ಯಾರ್ಥಿಗಳ ಪರವಾಗಿ ಕಾರ್ಯಕ್ರಮ ಕೊಟ್ಟಂಥವರು.
 • ಮಾನ್ಯ ಸಿದ್ಧರಾಮಯ್ಯನಂತಹ ರಾಜಕಾರಣಿ ಕರ್ನಾಟಕದ,ಭಾರತದ ರಾಜಕಾರಣದಲ್ಲಿ ಹುಟ್ಟಿರೋದ್ರಿಂದ್ಲೆ ಇವತ್ತು ಮೋದಿಯಂತವರು,ಬಿಜೆಪಿ ಸಂವಿಧಾನವನ್ನ ಮುಟ್ಲಿಕ್ಕೂ ಕೂಡ ಹೆದರುತ್ತೆ. ಮಾನ್ಯ ಸಿದ್ಧರಾಮಯ್ಯ,ಮಾನ್ಯ ಮಲ್ಲಿಕಾರ್ಜುನ ಖರ್ಗೆ,ಮಾನ್ಯ ಸತೀಶ್ ಜಾರಕಿಹೊಳಿ,ಮಾನ್ಯ ಇಬ್ರಾಹಿಂ ರಂತವರು ಇವತ್ತು ಇರೋದ್ರಿಂದ್ಲೇ ಸಂವಿಧಾನ,ಪ್ರಜಾಪ್ರಭುತ್ವ ಉಳಿದಿರೋದು.
 • ಮಾನ್ಯ ಮನ್ ಮೋಹನ್ ಸಿಂಗ್ ಭಾರತ ದೇಶದಲ್ಲಿ ಒಂದು ಕ್ರಾಂತಿಕಾರಿ ಸರ್ಕಾರವನ್ನು ಕೊಟ್ಟಂತವರು, ಭಾರತ ದೇಶದ ರೈತರ 72 ಸಾವಿರ ಕೋಟಿ ಸಾಲ ಮನ್ನಾ ಮಾಡುವ ಮೂಲಕ ಒಬ್ಬ ರೈತ ಪ್ರಧಾನಿಯಾದಂತವರು, ಆದರೆ ಮೋದಿ ಅದಾನಿ,ಅಂಬಾನಿಗಳ ಸಾಲ ಮನ್ನಾ ಮಾಡಿ ಶ್ರೀಮಂತರ,ಕಾರ್ಪೋರೇಟ್ ಕಂಪನಿಗಳ ಪರವಾದ ಪ್ರಧಾನಿಯಾದಂತವರು.

ಜಿ ಎಸ್ ಟಿ

 • ಹಿಂದೆ ಬಿಜೆಪಿ, ಮನ್ ಮೋಹನ್ ಸರ್ಕಾರ ಇದ್ದಾಗ ಜಿಎಸ್ಟಿ ಬಡವರ ವಿರುದ್ಧ,ರೈತರ ವಿರುದ್ಧ ಅನ್ನೋ ಕಾರಣಕ್ಕೆ ವಿರೋಧಿಸಿತ್ತು, ಆದರೆ ಮೋದಿ,ಬಿಜೆಪಿ ತನ್ನ ಆಡಳಿತದಲ್ಲಿ ಜಿಎಸ್ಟಿ ಜಾರಿಗೆ ತಂದು ಸಂಪೂರ್ಣವಾಗಿ ಬಡವರ ವಿರುದ್ಧವಾಗಿದೆ, ತಿನ್ನುವ ಅನ್ನಕ್ಕೆ 18 ಪರ್ಸೆಂಟ್ ತೆರಿಗ, ಶ್ರೀಮಂತರು ಉಪಯೋಗಿಸುವ ಬಂಗಾರಕ್ಕೆ 5 ಪರ್ಸೆಂಟ್ ತೆರಿಗೆ.
 • ನಮ್ಮ ರಾಹುಲ್ ಗಾಂಧಿ ಈಗಾಗ್ಲೆ ಜನರಿಗೆ ಭರವಸೆ ಕೊಟ್ಟಿದಾರೆ, ನನ್ನ ಸರ್ಕಾರ ಅಧಿಕಾರಕ್ಕೆ ಜಿಎಸ್ ಟಿ ಪರಾಮರ್ಶೆ ಮಾಡ್ತೇನೆ,ಬಡವರ ಪರವಾಗಿ ಜಿಎಸ್ ಟಿ ರೂಪಿಸ್ತೇನೆ ಅನ್ನುವಂತ ಮಾತು, ರೈತರಿಗೆ ಪ್ರತ್ಯೇಕ ಬಜೆಟ್,ಕಡು ಬಡವರ ಖಾತೆಗೆ ವರ್ಷಕ್ಕೆ 72000 ರೂ ಇದು ಕಾಂಗ್ರೆಸ್ ಬದ್ಧತೆ.
 • 70 ವರ್ಷ ಕಾಂಗ್ರೆಸ್ ಏನು ಮಾಡಿದೆ ಅನ್ನುವ ಮೋದಿಯವರೆ, ನಿಮ್ಮವ್ವನ್ನ ಹೋಗಿ ಕೇಳಿ ಕಾಂಗ್ರೆಸ್ ಏನು ಮಾಡಿದೆ ಅಂತ ಆಗ ಅವರು ಹೇಳ್ತಾರೆ. ಹಸಿರು ಕ್ರಾಂತಿ,ಕ್ಷೀರ ಕ್ರಾಂತಿ,ಬ್ಯಾಂಕ್ ರಾಷ್ಟ್ರೀಕರಣ,ಗರೀಬಿ ಹಠಾವೋ, ವೈಜ್ಞಾನಿಕ ಕ್ರಾಂತಿ ಇವೆಲ್ಲಾ ನೀವು ಮಾಡಿದ್ದಾ.
 • ನೀವು ಎಷ್ಟು ಡ್ಯಾಂ ಕಟ್ಸಿದೀರಿ,ಎಷ್ಟು ಶಾಲೆ ಕಟ್ಸಿದೀರಿ, ಎಷ್ಟು ಊರಿಗೆ ಕರೆಂಟು ಕೊಟ್ಟದೀರಿ, ಎಷ್ಟು ಬ್ಯಾಂಕ್,ಆಸ್ಪತ್ರೆ,ರೋಡು,ರೈಲು, ವಿಮಾನ ಸೆಟಲೈಟ್ ಬಿಟ್ಟಿದೀರಿ, ಯಾಕೆ ಬೊಗಳೆ ಬಿಡ್ತಾ ಇದೀರಾ, ಜನರೇನೂ ಮೂರ್ಖರಲ್ಲ, ನಿಮ್ಮ ಪ್ರತಿ ಸುಳ್ಳು,ಮೋಸವನ್ನ ಗಮನಿಸ್ತಾ ಇದ್ದಾರೆ.
 • ಮಾತೆತ್ತಿದರೆ ನಾನು ಚೌಕೀದಾರ್ ಅಂತಿರ್ತೀರಾ, ಮಾನೊಯ ಮೋದಿಯವರೆ, ರಫೇಲ್ ಫೈಲ್ ಕಳ್ಳತನವಾದಾಗ, ನೀರವ್ ಮೋದಿ ದೇಶ ಬಿಟ್ಟು ಹೋಗುವಾಗ ನೀವೇನ್ ಮಾಡ್ತಿದ್ರಿ, ನಿದ್ದೆ ಮಾಡ್ತಿದ್ರಾ, ಅಥವ ಲಾಲಿಪಾಪ್ ತಿನ್ತಿದ್ರಾ.
 • ಪುಲ್ವಾಮ ಧಾಳಿಗೆ, ಸೈನಿಕರ ಸಾವಿಗೆ ನೇರವಾಗಿ ನೀವೇ ಕಾರಣ,18 ಚೆಕ್ ಪೋಸ್ಟ್ ದಾಟಿ ಹೇಗೆ ಉಗ್ರಗಾಮಿಗಳು ನಿಮ್ಮಂತ ದಕ್ಷ,ನಿಷ್ಟಾವಂತ ಚೌಕೀದಾರ ಇದ್ದಾಗ ನುಗ್ತಾರೆ. ಗೋವಾದಿಂದ ಒಂದು ಬಿಯರ್ ಬಾಟಲ್ ತರ್ಲಿಕ್ಕೆ ಸಾಧ್ಯ ಆಗೋದಿಲ್ಲ ಅನ್ನೋದಾದ್ರೆ, ಅದು ಹೇಗೆ ಉಗ್ರಗಾಮಿಗಳು,ಅದು ಹೈಲೀ ಸೆಕ್ಯೂರಿಟಿ ಇರೋ ಏರಿಯಾಕ್ಕೆ ಬರ್ತಾರೆ. ನಾನ್ ಹೇಳ್ತೇನೆ ಕೇಳಿ ಮೋದಿಯವರೆ,ನೀವು ಐದು ವರ್ಷಗಳ ಕಾಲ ಜನರಿಗೆ ಏನೂ ಮಾಡ್ಲಿಲ್ಲ ಆದರೆ ಜನರ ಗಮನ ಬೇರೆಡೆಗೆ ಸೆಳೆದು ನಿಮ್ಮ ವೈಫಲ್ಯ ಮುಚ್ಕೋ ಬೇಕು, ಆ ಮೂಲಕ ಜನರ ಮನಸ್ಸಲ್ಲಿ ಕೋಮುವಾದವನ್ನ ಬಿತ್ತಿ ಮತ್ತೆ ಅಧಿಕಾರಕ್ಕೆ ಬರ್ಬೇಕು ಅನ್ನೋ ಮೋಸದ ಅಜೆಂಡಾ,ಕೋಮುವಾದಿ ಅಜೆಂಡಾ, ಹಿಡನ್ ಅಜೆಂಡಾ ನಿಮ್ದಲ್ವಾ ಮೋದಿ ಸಾಹೇಬ್ರಾ.
 • ಅನೇಕ ವಿಷಯಗಳ ಬಗ್ಗೆ ಮಾತ್ನಾಡಬಹುದಾದರೂ ಇಲ್ಲಿ ಎಲ್ಲವನ್ನೂ ಹೇಳೋದಕ್ಕೆ ಸಾಧ್ಯ ಆಗಲಾರದು,ಕೊನೆಗೆ ಒಂದು ಮಾತು, ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್ ಬಿ ಮಂಜಪ್ಪ ಮುಖ್ಯ ಅಲ್ಲ ಪಕ್ಷ ಮುಖ್ಯ,ಜಾತಿ ಮುಖ್ಯ ಅಲ್ಲ ರಾಷ್ಟ್ರ ಮುಖ್ಯ, ಬಡವರು ರೈತರು ಮುಖ್ಯ ಆ ಕಾರಣಕ್ಕೆ ತಾವು ಭತದಾನ ಮಾಡಿ ಕಾಂಗ್ರೆಸ್ ಗೆ ವೋಟ್ ಕೊಡಿ ಅನ್ನೋ ವಿನಮ್ರ ಮನವಿ ನನ್ನದು.

ವಂದನೆಗಳೊಂದಿಗೆ

ಉದಯಶಂಕರ ಮಾಗಾನಹಳ್ಳಿ
ಅಧ್ಯಕ್ಷರು
ರವಿ ಯುವಶಕ್ತಿ ಪಡೆ
ಹರಪನಹಳ್ಳಿ
9448649486

ಸುದ್ದಿದಿನ.ಕಾಂ|ವಾಟ್ಸಾಪ್|9986715401

ರಾಜಕೀಯ

ಮಲ್ಲಿಕಾರ್ಜುನ ಖರ್ಗೆಯವರು ಯಾಕೆ ಗೆಲ್ಲಬೇಕು ಎಂದರೆ…!

Published

on

mallikarjun kharge_suddidina

2004 ಈಗಿನಂತಹದ್ದೇ ದೆಹಲಿಯ ಏಪ್ರಿಲ್-ಮೇ ತಿಂಗಳ ಸುಡು ಬಿಸಿಲಿನ ಕಾಲ. ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಪಕ್ಷ ಸೋತು ಜೆಡಿ ಎಸ್ ಜತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದ್ದ ಹೊತ್ತು. ಕಾಂಗ್ರೆಸ್ ಪಕ್ಷದ ಇಬ್ಬರು ಮುಖ್ಯಮಂತ್ರಿ ಅಭ್ಯರ್ಥಿಗಳ ಸಂದರ್ಶನ ಮಾಡಲು ಹೊರಟಿದ್ದೆ.

ಮೊದಲು ಧರ್ಮಸಿಂಗ್ ಸಿಕ್ಕರು. ಮೆದು ಸ್ವಭಾವದ, ಬಹಳ ಡಿಪ್ಲೊಮೆಟಿಕ್ ಆಗಿ ಮಾತನಾಡುವ ಧರ್ಮಸಿಂಗ್ ಆ ದಿನ ತೀರಾ ಅಗ್ರೆಸಿವ್ ಆಗಿದ್ದರು. ‘’ಹೌದು, ನಾನು ಮುಖ್ಯಮಂತ್ರಿ ಪದವಿ ಆಕಾಂಕ್ಷಿ ಎಂದು ಬರೆಯಿರಿ’’ ಎಂದು ಜೋರು ದನಿಯಲ್ಲಿಯೇ ವಿವರವಾಗಿ ಮಾತನಾಡಿದ್ದರು.

ಅದರ ನಂತರ ಪಕ್ಕದ ರೂಮ್ ನಲ್ಲಿದ್ದ ಖರ್ಗೆ ಬಳಿ ಹೋದೆ. ಅವರು ‘’ ನೋಡ್ರಿ ದಿನೇಶ್, ಈ ಸಂದರ್ಶನ ಎಲ್ಲ ಬೇಡ, ನಮ್ಮಪಕ್ಷ ನಿಮಗೆ ಗೊತ್ತಲ್ಲ, ಹೈಕಮಾಂಡ್ ಗೆ ಇಷ್ಟವಾಗುವುದಿಲ್ಲ. ನೀವೇ ಲೇಖನ ಬರೆದು ಬಿಡಿ, ಸಂದರ್ಶನ ಬೇಡ’’ ಅಂದ್ರು ‘’ ನೋಡಿ ಸಾರ್, ಈಗಾಗಲೇ ನಿಮ್ಮ ಸ್ನೇಹಿತರು ನಾನು ಸಿಎಂ ಪದವಿಯ ಆಕಾಂಕ್ಷಿ ಎಂದು ಹೇಳಿಬಿಟ್ಟಿದ್ದಾರೆ. ಅವರಿಗೆ ಹೈಕಮಾಂಡ್ ಭಯ ಇಲ್ವಾ?’’ ಎಂದೆ. ಆಗಲೂ ಹಿಂದೆ ಮುಂದೆ ನೋಡಿದರು. ಅವರ ಜತೆ ನನಗೆ ಸ್ವಲ್ಪ ಸಲಿಗೆ ಇದೆ. ಆ ಕಾರಣಕ್ಕೆ ಸ್ವಲ್ಪ ಸಿಟ್ಟೂ ಬಂದಿತ್ತು. ‘’ ನೋಡಿ ಸಾರ್, ನೀವು ಹೀಗೆ ಹಿಂಜರಿಯುತ್ತಾ ಕೂತರೆ ಮುಖ್ಯಮಂತ್ರಿ ಆಗುವುದೇ ಇಲ್ಲ’’ ಎಂದು ಬಿಟ್ಟೆ, ನಕ್ಕರು. ಕೊನೆಗೂ ಅವರನ್ನು ಸಂದರ್ಶನಕ್ಕೆ ಒಪ್ಪಿಸುವಷ್ಟರಲ್ಲಿ ಸಾಕಾಗಿ ಹೋಗಿತ್ತು.

2013ರ ವಿಧಾನಸಭಾ ಚುನಾವಣೆಯ ಕಾಲದಲ್ಲಿ ಇದೇ ಏಪ್ರಿಲ್ ತಿಂಗಳ ಬಿಸಿಲಲ್ಲಿ ಧರ್ಮಸಿಂಗ್ ಮತ್ತು ಖರ್ಗೆ ಅವರ ಜತೆಯಲ್ಲಿ ಎರಡು ದಿನ ಅವರ ಹೆಲಿಕಾಪ್ಟರ್ ನಲ್ಲಿ ಸುತ್ತಿದ್ದೆ. ಆ ದಿನಗಳಲ್ಲಿ ಸಂವಿಧಾನದ 371ಜೆ ತಿದ್ದುಪಡಿಯ ರೂವಾರಿಯಾಗಿದ್ದ ಖರ್ಗೆ ‘’ವಿಕಾಸ ಪುರುಷ’’ನ ಹೊಸ ಅವತಾರದಲ್ಲಿದ್ದರು. ಹೋದಲ್ಲೆಲ್ಲ ಜೈಕಾರ.

ನಮ್ಮ ಹಾರಾಟದ ಮೊದಲ ದಿನ ನಾಲ್ಕು ಕ್ಷೇತ್ರಗಳನ್ನು ಆರಿಸಿಕೊಂಡಿದ್ದರು. ಅದರ ಬಗ್ಗೆ ಹೇಳುತ್ತಾ ‘’ ನೋಡಿ, ನಾವು ಹೋಗುತ್ತಿರುವ ನಾಲ್ಕೂ ಕ್ಷೇತ್ರಗಳಲ್ಲಿರುವ ನಮ್ಮ ಪಕ್ಷದ ಅಭ್ಯರ್ಥಿಗಳು ನನ್ನ ಲೋಕಸಭಾ ಚುನಾವಣೆಯಲ್ಲಿ ನನಗೆ ವಿರುದ್ಧವಾಗಿ ಕೆಲಸ ಮಾಡಿದ್ದರು ಗೊತ್ತಾ? ಎಂದರು. ನನಗೆ ಆಶ್ಚರ್ಯವಾಯಿತು.

‘’ ಹಾಗಿದ್ದರೆ ಅವರಿಗೆ ಟಿಕೆಟ್ ತಪ್ಪಿಸಬಹುದಿತ್ತಲ್ಲಾ?’’ ಎಂದೆ.. ‘’ ಛೇ, ಹಾಗೆಲ್ಲ ಮಾಡೋಕ್ಕಾಗುತ್ತಾ, ಅವರಿಗೆ ಟಿಕೆಟ್ ತಪ್ಪಿಸಿದೆ ಎಂದು ತಿಳಿದುಕೊಳ್ಳಿ. ಏನಾಗುತ್ತಿತ್ತು? ಅವರು ಬಂಡುಕೋರರಾಗಿ ಸ್ಪರ್ಧಿಸುತ್ತಿದ್ದರು. ಅದರಿಂದ ನಮ್ಮ ಪಕ್ಷದ ಅಭ್ಯರ್ಥಿ ಸೋತುಹೋದರೆ ಅದನ್ನು ಮತ್ತೆ ಕೈಗೆ ತೆಗೆದುಕೊಳ್ಳಲು ಹತ್ತು ವರ್ಷ ಬೇಕು. ಅವರನ್ನು ಗೆಲ್ಲಿಸಿದರೆ ನನ್ನ ಮುಂದಿನ ಚುನಾವಣೆಯಲ್ಲಿಯಾದರೂ ನನ್ನ ಪರವಾಗಿ ಕೆಲಸ ಮಾಡಬಹುದಲ್ಲಾ?’’ ಎಂದರು. ಆ ದಿನ ನಾವು ಹೋಗಿದ್ದ ಎರಡು ಕ್ಷೇತ್ರಗಳಲ್ಲಿ ಒಂದು ಅಫಜಲ್ ಪುರ, ಇನ್ನೊಂದು ಚಿಂಚೋಳಿ. (ಆಗಲೂ ಚಿಂಚೋಳಿ ಬೀದರ್ ಲೋಕಸಭೆಗೆ ಸೇರಿತ್ತು)

ಕಾಂಗ್ರೆಸ್ ಪಕ್ಷದಲ್ಲಿ ‘’ ಸೋಲಿಸುವ ರಾಜಕಾರಣ’’ ದ ಪಂಟರ್ ಗಳಿದ್ದಾರೆ. ಅವರ ಜೊತೆ ಮಾತನಾಡುವಾಗೆಲ್ಲ ಖರ್ಗೆಯವರ ಜತೆಗಿನ ಈ ಮಾತುಕತೆಯನ್ನು ತಪ್ಪದೆ ಹೇಳುತ್ತೇನೆ. ಒಳಗುದ್ದುಗಳ ಮೂಲಕ ‘’ಸೋಲಿಸುವ ರಾಜಕಾರಣ’’ದ ಮೂಲಕ ರಾಜಕೀಯವಾಗಿ ಗೆದ್ದವರು ಕಡಿಮೆ ಎನ್ನುವದು ನನ್ನ ಅನುಭವ.

ಮಲ್ಲಿಕಾರ್ಜುನ ಖರ್ಗೆಯವರ ಜತೆಗಿನ ಈ ಎರಡು ಮಾತುಕತೆಗಳಲ್ಲಿ ನನಗೆ ಕಂಡದ್ದು ಅವರ ಪ್ರಶ್ನಾತೀತ ಪಕ್ಷ ನಿಷ್ಠೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಪಕ್ಷ ನಿಷ್ಠೆಯಿಂದಾಗಿ ಅವರಿಗೆ ರಾಜಕೀಯದಲ್ಲಿ ಲಾಭಕ್ಕಿಂತ ನಷ್ಟವಾದುದೇ ಹೆಚ್ಚು. ಯಾರಿಗೆ ಗೊತ್ತು, ಮುಂದಿನ ದಿನಗಳಲ್ಲಿ ಅವರಿಗಾಗಲಿರುವ ದೊಡ್ಡ ರಾಜಕೀಯ ಲಾಭವಾಗಿ ಬಿಟ್ಟರೆ, ಹಿಂದಿನ ದಿನಗಳ ರಾಜಕೀಯ ನಷ್ಟಗಳು ಸಣ್ಣಪುಟ್ಟ ಎಂದು ಅನಿಸಿಬಿಡಬಹುದು. ಹಾಗಾಗಲಿ. ಆ ದೊಡ್ಡ ಲಾಭದ ಸಾಧ್ಯತೆ ಯಾವುದೆಂದು ಬಿಡಿಸಿ ಹೇಳಬೇಕೇ?

ದಿನೇಶ್ ಅಮಿನ್ ಮಟ್ಟು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ರಾಜಕೀಯ

ಹಿಂದುತ್ವ ಮತ್ತು‌ ಬಿಜೆಪಿ

Published

on

ಪ್ರಗ್ಯಾ ಸಿಂಗ್ ಠಾಕೂರ್ ಅನ್ನು ಲೋಕಸಭಾ ಚುನಾವಣೆಯಲ್ಲಿ ನಿಲ್ಲಿಸಿದ್ದು ನನಗೆ ತೀರಾ ಆಶ್ಚರ್ಯವಾಗಿಯೇನೂ ಕಾಣುತ್ತಿಲ್ಲ. ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೇಟು ನಿರಾಕರಿಸಿದ್ದು ಕೂಡ ದೊಡ್ಡ ಆಶ್ಚರ್ಯವೇನಲ್ಲ. ಇದು ಸಂಘ ಪರಿವಾರದಲ್ಲಿ ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಯೋಜನಾ ಪ್ರಕ್ರಿಯೆ ಮತ್ತು ಅನುಷ್ಠಾನ.

ಜನಸಾಮಾನ್ಯ ಹಿಂದುತ್ವವಾದ ಮತ್ತು ಹಿಂದೂರಾಷ್ಟ್ರದ ಕಲ್ಪನೆಯನ್ನು ಪರಿಗಣಿಸುವಂತೆ ಮಾಡುವುದು ಅವರ ಮೊದಲ ಹಂತದ ಕೆಲಸವಾಗಿತ್ತು. ಸ್ವಾತಂತ್ರ್ಯದ ನಂತರದ ದಶಕಗಳಲ್ಲಿ ಅದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಎಲ್ಲರನ್ನೂ ಒಳಗೊಳ್ಳುವ ಸಂವಿಧಾನ ಪ್ರೇರಿತ ರಾಷ್ಟ್ರೀಯತೆ ಬಹುಸಂಖ್ಯಾತ ಜನರಲ್ಲಿ ಸಾಮಾನ್ಯವಾಗಿಯೇ ಇತ್ತು. ಇಂಥಾ ವಾತಾವರಣದಲ್ಲಿ ವಾಜಪೇಯಿ, ಆಡ್ವಾಣಿ ಮತ್ತು ಜೋಷಿ ಸಾಕಷ್ಟು ಜಾಗರೂಕತೆಯಿಂದಲೇ ಕೆಲಸ ಮಾಡಬೇಕಿತ್ತು. ಇಲ್ಲದಿದ್ದರೆ ಅವರನ್ನಾಗಲೀ, ಅವರ ಸಿದ್ಧಾಂತವನ್ನಾಗಲೀ ಈಗ ಒಪ್ಪಿರುವವರೂ ಒಪ್ಪುವುದು ಕಷ್ಟವಿತ್ತು. ಈ ತಂಡ ಅದನ್ನು ಸಾಕಷ್ಟೂ ಯಶಸ್ವಿಯಾಗಿ ಮಾಡಿದ್ದಲ್ಲದೇ, ಬಲಪಂಥೀಯ ಸರ್ಕಾರಕ್ಕೂ ಕೂಡ ಒಂದು ಗಟ್ಟಿ ತಳಹದಿಯನ್ನು ಹಾಕಿಕೊಟ್ಟಿತು.

ಈ ತಳಹದಿ ದೊರೆತ ಮೇಲೆ ಹಿಂದುತ್ವವಾದವನ್ನು ಇನ್ನಷ್ಟು ನೆಲ-ಮನಕ್ಕಿಳಿಸಲು ಆ ತಲೆಮಾರಿಗಿಂತ ಹೆಚ್ಚು ಆಗ್ರಹಪೂರ್ವಕವಾಗಿ ಕೆಲಸ ಮಾಡುವ ತಲೆಮಾರಿನ ಅಗತ್ಯ ಕಾಣಿಸಿತು. ಹೀಗಾಗಿ ಮೋದಿಯನ್ನು ಮುನ್ನೆಲೆಗೆ ತರಲಾಯಿತು. ಜೋಷಿ, ಆಡ್ವಾಣಿಯವರನ್ನು ಬದಿಗೆ ಸರಿಸಿದ್ದು ಈ ಪ್ರಕ್ರಿಯೆಯೇ. ಮೋದಿಯವರ ಆಡಳಿತದಲ್ಲಿ ಪರಿವಾರ ಈ ಗುರಿಯತ್ತ ಸಾಕಷ್ಟು ದೂರ ಕ್ರಮಿಸುವುದು ಸಾಧ್ಯವಾಯಿತು ಎನ್ನುವುದನ್ನು ನಾವೆಲ್ಲ ಕಳೆದ ಐದು ವರ್ಷಗಳಲ್ಲಿ ಚೆನ್ನಾಗಿಯೇ ನೋಡಿದ್ದೇವೆ. ರಾಷ್ಟ್ರೀಯತೆಯ ವ್ಯಾಖ್ಯಾನವನ್ನು ಬದಲಿಸುವುದು, ದೇಶದ್ರೋಹವನ್ನು ಮರುವ್ಯಾಖ್ಯಾನಿಸುವುದು, ವಿಶ್ವವಿದ್ಯಾಲಯಗಳ ಮೇಲೆ, ವಿದ್ಯಾರ್ಥಿಗಳ ಮೇಲೆ ವೈಚಾರಿಕ ನಿರ್ಬಂಧ ಹೇರಿ, ತಮ್ಮದನ್ನು ಹೇರಲು ಮಾಡಿದಂಥಾ ಪ್ರಯತ್ನಗಳು, ದೇಶದ ಆಹಾರ ಪದ್ಧತಿಗಳ ಮೇಲೆ ಆದಂತಹ ಹಲ್ಲೆಗಳು, ಸಂವಿಧಾನವನ್ನು ನಿಕಶಕ್ಕೆ ಒಡ್ಡುವುದು, ಇನ್ನೂ ಮುಂತಾದವು ಕೇವಲ stray incidents ಅಲ್ಲ.

ಈಗ ಮೋದಿಯವರ “ಯಶಸ್ವೀ” ಪಾತ್ರವೂ ಕೊನೆಯ ಹಂತದಲ್ಲಿರುವಾಗ ಹಿಂದುತ್ವವಾದವನ್ನು ಅವರಿಗಿಂತ ಹೆಚ್ಚು ಭಾವೋದ್ವೇಗದಿಂದ ಹೇರುವ, ನಾಟಿಸುವ ತಲೆಮಾರಿನ ಅವಶ್ಯಕತೆ ಪರಿವಾರಕ್ಕೆ ಇದೆ. ಈ ಹಂತದಲ್ಲಿ ಬೌದ್ಧಿಕ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಭಾವನಾತ್ಮಕ ಸಾಮರ್ಥ್ಯದ ಅಗತ್ಯವಿದೆ. ಒಂದು ರೀತಿಯ ಮಿಲಿಟೆನ್ಸಿಯ ಅಗತ್ಯವೂ ಇದೆ. ಹೀಗಾಗಿಯೇ ಯಾರೂ ಊಹಿಸದ, ಆದರೆ ಅಂಥಾ ಉದ್ದೇಶಕ್ಕಾಗಿಯೇ ತರಬೇತಾಗಿರುವ ಯೋಗಿ, ಮಣಿಪುರ ಮತ್ತು ತ್ರಿಪುರಾದ ಮುಖ್ಯಮಂತ್ರಿಗಳು ಮುನ್ನೆಲೆಗೆ ಬಂದಿದ್ದು. ಅವರ ಕಾಲಾಳುಗಳಾಗಿ ದೇಶದ ತುಂಬಾ ಲಕ್ಷಾಂತರ ಯುವಕರು ತಯಾರಾಗಿದ್ದಾರೆ.

ಅವರಲ್ಲಿನ ಅನೇಕ ಮುಂದಾಳುಗಳಲ್ಲಿ ಒಬ್ಬ ಸೂರ್ಯ. ಆತನಿಗೆ ಇಂದು ಪ್ರವೇಶ ದೊರೆತಿದೆ. ಅದೇ ಪ್ರಕ್ರಿಯೆಯ ಭಾಗವಾಗಿಯೇ ಪ್ರಗ್ಯಾ ಸಿಂಗ್ ಠಾಕೂರ್ ಅನ್ನು ಕೂಡ ತರಲಾಗಿದೆ. ಒಂದು ವೇಳೆ ಇಂದು ಅನಂತಕುಮಾರ್ ಬದುಕಿದ್ದು, ಅವರನ್ನೂ ಈ ಚುನಾವಣೆಯಲ್ಲಿ ಬದಿಗೆ ಸರಿಸಿದ್ದರೂ ಕೂಡ ಆಶ್ಚರ್ಯವಾಗುತ್ತಿರಲಿಲ್ಲ. ಅದು ಕೂಡ ಆ ಕಾರ್ಯಕ್ರಮದ ಭಾಗವೇ ಆಗಿರುತ್ತಿತ್ತು. ಒಂದೆರಡು ದಿನಗಳ ಪ್ರತಿರೋಧದ ನಂತರ ಪರಿವಾರದೊಳಗೆ ಎಲ್ಲವೂ ತಣ್ಣಗಾಗುತ್ತಿತ್ತು. ಬಹುಶಃ ಈ ಚುನಾವಣೆಯಲ್ಲೇ ಹಾಗಾಗುತ್ತಿರಲಿಲ್ಲ ಎಂದುಕೊಳ್ಳುವುದು ಅವರ ಹತ್ತಿರದವರಿಗೆ ಸಮಾಧಾನ ತರಬಹುದು.

ಬಲಪಂಥೀಯತೆಯನ್ನು ಇಷ್ಟು ಕರಾರುವಾಕ್ಕಾಗಿ ಪಸರಿಸುತ್ತಿರುವ ಈ ಧೀರ್ಘಕಾಲೀನ ಕಾರ್ಯಕ್ರಮಕ್ಕೆ ತತ್ಸಮವಾಗಿ ಎದುರು ನಿಲ್ಲುವಂಥಾ ಮಾನವೀಯ ಕಾರ್ಯಕ್ರಮವೊಂದು ನಮ್ಮ ದೇಶದಲ್ಲಿ ಇನ್ನೂ ಗಟ್ಟಿಗೊಳ್ಳದಿರುವುದು ಶೋಚನೀಯ. ನಮ್ಮ ಯುವಪೀಳಿಗೆಗೆ ಇದನ್ನು ಮನದಟ್ಟು ಮಾಡಿಸುವ ಜವಾಬ್ದಾರಿ ನಮ್ಮ ಮೇಲಿದೆ.

ಕೇಸರಿ ಹರವು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ರಾಜಕೀಯ

ಈ ದಾಖಲೆಗಳಿದ್ದಲ್ಲಿ ಮತದಾನ ಮಾಡಬಹುದು

Published

on

ಸುದ್ದಿದಿನ,ಧಾರವಾಡ : ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಧಾರವಾಡ ಲೋಕಸಭೆ ಕ್ಷೇತ್ರಕ್ಕೆ ಏಪ್ರಿಲ್ 23 ರಂದು ಮತದಾನ ನಡೆಯಲಿದೆ. ಚುನಾವಣಾ ಆಯೋಗ ನೀಡಿರುವ ಭಾವಚಿತ್ರವಿರುವ ಗುರುತಿನ ಚೀಟಿ ಇಲ್ಲದಿದ್ದಲ್ಲಿ, ಪರ್ಯಾಯವಾಗಿ 11 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಹಾಜರುಪಡಿಸಿ ಮತದಾನ ಮಾಡಬಹುದಾಗಿದೆ.

ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಮತದಾರರು ಏಪ್ರಿಲ್ 23ರಂದು ಬೆಳಿಗ್ಗೆ 7 ರಿಂದ ಸಾಯಂಕಾಲ 6 ಗಂಟೆಯವರೆಗೆ ನಡೆಯಲಿರುವ ಮತದಾನದಲ್ಲಿ ಮತದಾರರ ಗುರುತಿನ ಚೀಟಿ ಇಲ್ಲದೇ ಇದ್ದ ಪಕ್ಷದಲ್ಲಿ, ಈ ಕೆಳಕಂಡಂತೆ ಪರ್ಯಾಯ 11 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಿ ಮತದಾನ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಬ್ಲಿಕ್ ಕಂಪನಿಗಳು ನೀಡಿರುವ ನೌಕರರ ಫೋಟೋ ಇರುವ ಗುರುತಿನ ಸೇವಾ ಕಾರ್ಡ್, ಸರ್ಕಾರಿ ವಲಯದ ಬ್ಯಾಂಕ್ ಅಥವಾ ಪೋಸ್ಟ್ ಆಫೀಸಿನಿಂದ ನೀಡಲಾದ ಫೋಟೋ ಇರುವ ಪಾಸ್‌ಬುಕ್, ಆದಾಯ ತೆರಿಗೆ ಗುರುತಿನ ಚೀಟಿ(ಪ್ಯಾನ್ ಕಾರ್ಡ್), ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಇಲಾಖೆ (ಆರ್.ಜಿ.ಐ).ಯಿಂದ ನೀಡಲಾದ ಸ್ಮಾರ್ಟ್ ಕಾರ್ಡ್, ನರೇಗಾ ಜಾಬ್‌ಕಾರ್ಡ್, ಕಾರ್ಮಿಕ ಸಚಿವಾಲಯದಿಂದ ನೀಡಲಾದ ಆರೋಗ್ಯ ಜೀವವಿಮೆ ಸ್ಮಾರ್ಟ್ ಕಾರ್ಡ್, ಪೆನ್ಷನ್ ದಾಖಲಾತಿ (ಫೋಟೋ ಇರುವ) ಮಾಜಿ ಸೈನಿಕ ಪಿಂಚಣಿ ಪುಸ್ತಕ ಪಿಂಚಣಿ ಪಾವತಿ ಆದೇಶ, ಮಾಜಿ ಸೈನಿಕರ, ವಿಧವೆ,ಅವಲಂಬಿತರ ದೃಢೀಕರಣ ಪತ್ರ, ವೃದ್ಧಾಪ್ಯ ವಿರಾಮ ವೇತನ ಆದೇಶ, ವಿಧವಾ ವೇತನ ಆದೇಶ, ಸ್ವಾತಂತ್ರ‍್ಯ ಯೋಧರ ಭಾವಚಿತ್ರವಿರುವ ಗುರುತಿನ ಚೀಟಿ, ಎಂ.ಪಿ., ಎಂ.ಎಲ್.ಎ., ಎಂ.ಎಲ್.ಸಿ. ಗಳಿಗೆ ಸರ್ಕಾರದಿಂದ ನೀಡಿರುವ ಅಧಿಕೃತ ಗುರುತಿನ ಚೀಟಿ ಮತ್ತು ಆಧಾರ್‌ಕಾರ್ಡ್ ಇದರಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಮತದಾರರು ತಪ್ಪದೇ ಏಪ್ರಿಲ್ 23 ರಂದು ಮತದಾನ ಮಾಡಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಬೂತ್ ಮಟ್ಟದ ಅಧಿಕಾರಿಗಳು (ಬಿ.ಎಲ್.ಓ)ಗಳು ಸಂಬಂಧಿಸಿದ ಮತಗಟ್ಟೆಯ ಮತದಾರರ ಭಾವಚಿತ್ರವಿರುವ ಮತದಾರ ಚೀಟಿಗಳನ್ನು (ಓಟರ್ ಸ್ಲಿಪ್) ಮತದಾರರ ಮನೆಗೆ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಓಟರ್ ಸ್ಲಿಪ್‌ಗಳನ್ನು ಬಿ.ಎಲ್.ಓ. ಗಳಿಂದ ಪಡೆದು ಏಪ್ರಿಲ್ 23 ರಂದು ಮತದಾನ ಮಾಡಬಹುದಾಗಿದೆ.

ಆದರೆ ಮತದಾರರ ಗುರುತಿನ ಚೀಟಿ ಅಥವಾ ಪರ್ಯಾಯ 11 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆ ಹಾಜರುಪಡಿಸುವುದು ಕಡ್ಡಾಯವಾಗಿದೆ. ಮತಗಟ್ಟೆಯೊಳಗೆ ಮತದಾರರು ಮೊಬೈಲ್, ಕ್ಯಾಮರಾ, ಲೇಸರ್ ಉಪಕರಣ ಇತ್ಯಾದಿ ಯಾವುದೇ ತರಹದ ಎಲೆಕ್ಟಾçನಿಕ್ ಉಪಕರಣಗಳನ್ನು ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಚುನಾವಣೆಗೆ ಸಂಬಂಧಿಸಿದ ಯಾವುದೇ ಮಾಹಿತಿ, ದೂರುಗಳಿಗೆ ಉಚಿತ ಸಹಾಯವಾಣಿ ಸಂಖ್ಯೆ.1950 ನ್ನು ಸಂಪರ್ಕಿಸಬಹುದಾಗಿದೆ. ಮತ್ತು ಚುನಾವಣಾ ನೀತಿಸಂಹಿತೆ ಉಲ್ಲಂಘನೆಯಾದಲ್ಲಿ ಸಿ.ವಿಜಲ್ ಮೊಬೈಲ್ ಆ್ಯಪ್ ಮೂಲಕ ದೂರು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading
Advertisement

Trending