Connect with us

ಲೈಫ್ ಸ್ಟೈಲ್

‘ಸೀಬೆಹಣ್ಣಿ’ನ ಮಹತ್ವ..!

Published

on

ಸೀಬೆಹಣ್ಣು(ಪೇರಳೆ) ಬಾಯಿಗೆ ಮಾತ್ರ ರುಚಿ ಅಲ್ಲ ಅದರಿಂದ ಆರೋಗ್ಯ ಕೂಡ ವೃದ್ಧಿಸಲು ಸಾಧ್ಯ. ಈ‌ ಸೀಬೆಹಣ್ಣು ಎಲ್ಲಾ ಕಾಲದಲ್ಲೂ ದೊರೆಯುತ್ತದೆ. ಸೀಬೆ ಮಾತ್ರವಲ್ಲ ಅದರ ಬೇರೆ ಭಾಗಗಳು ಕೂಡ ತುಂಬಾ ಉಪಯೋಗವಿದೆ. ಈಗ ಅದರ ಭಾಗ ಹಾಗೂ ಹಣ್ಣಿನಿಂದ ಆಗುವ ಉಪಯೋಗವನ್ನು ಮುಂದೆ ತಿಳಿಯೋಣ.

  1. ಸೀಬೆಯ ಎಲೆಗಳನ್ನು ನುಣ್ಣಗೆ ಅರೆದು ಮುಖಕ್ಕೆ ಲೇಪಿಸಿಕೊಂಡರೆ ಒಂದು ವಾರದೊಳಗೆ ಮೊಡವೆಗಳ ನಿವಾರಣೆಯಾಗುವುದು.
  2. ಸೀಬೆಯ ಕಾಯಿಗಳನ್ನು ಹಲ್ಲುಗಳಿಂದ ಕಚ್ಚಿ ಚಪ್ಪರಿಸಿ ತಿಂದರೆ ದಂತಕ್ಷಯದ ಭಾದೆ ಇರುವುದಿಲ್ಲ.
  3. ಸೀಬೆಯ ಎಲೆಗಳನ್ನು ನುಣ್ಣಗೆ ಅರೆದು ಅದರಲ್ಲಿ ಮೈಕೈ ತಿಕ್ಕಿಕೊಂಡು ಬಿಸಿನೀರಿನಲ್ಲಿ ಸ್ನಾನ ಮಾಡುತ್ತಾ ಬಂದರೆ ಬೆವರಿನ ದುರ್ನಾತ ಮಾಯವಾಗುವುದು.
  4. ಬೀಜ ತೆಗೆದ ಸೀಬೆಹಣ್ಣಿನ ತಿರುಳಿಗೆ ಜೇನುತುಪ್ಪವನ್ನು ಬೆರೆಸಿ ಗರ್ಭಿಣಿಯರು ಸೇವಿಸಿದರೆ ಹೃದ್ರೋಗ, ಅರಿಶಿನ ಕಾಮಾಲೆ, ಉಬ್ಬಸ ಮತ್ತು ಕ್ಷಯದಂತಹ ಖಾಯಿಲೆಗಳಿಗೆ ನಿರೋಧಕವಾಗಿರುವುದು.
  5. ಶ್ರೀಗಂಧದೊಂದಗೆ ಸೀಬೆ ಎಲೆಗಳನ್ನು ತೇದು ಹಚ್ಚಿದರೆ ಕಜ್ಜಿ, ತುರಿ, ಹುಳಕಡ್ಡಿಗಳು ಮಾಯವಾಗಿ ಹೋಗುವುದು. ಇದೇ ಲೇಪನವನ್ನು ತಲೆಗೆ ಹಚ್ಚಿಕೊಂಡು ಒಂದೆರಡು ಗಂಟೆಗಳ ನಂತರ ಸ್ನಾನ ಮಾಡಿದರೆ ಹೇನುಗಳು ಸಾಯುವುವು.
  6. ಚಿಗುರು ಸೀಬೆ ಎಲೆಗಳ ಕಷಾಯವನ್ನು ತಯಾರಿಸಿ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ದಿನಕ್ಕೆ ಮೂರು ಬಾರಿ ಬಾಯಿ ಮುಕ್ಕಳಿಸಿ ಉಗುಳುವುದರಿಂದ ಬಾಯಿಯ ದುರ್ನಾತ ಮಾಯವಾಗುವುದು. ಬಾಯಿಹುಣ್ಣು ನಿವಾರಣೆಯಾಗುವುದು. ಜೊತೆಗೆ ವಸಡಿನಿಂದ ರಕ್ತಸ್ರಾವವಾಗುತ್ತಿದ್ದರೆ ಅದು ಸಹ ನಿಂತು ಹೋಗುವುದು.
  7. ಚಿಗುರು ಸೀಬೆಯ ಎಲೆಗಳನ್ನು ನುಣ್ಣಗೆ ಅರೆದು ಕಷಾಯ ತಯಾರಿಸಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ದಿನಕ್ಕೆ ಮೂರು ಬಾರಿ ಬಾಯಿ ಮುಕ್ಕುಳಿಸುವುದರಿಂದ ವಸಡಿನ ರಕ್ತಸ್ರಾವ ಸ್ಥಗಿತಗೊಳ್ಳವುದು ಹಾಗೂ ಬಾಯಿ ಹುಣ್ಣು ನಿವಾರಣೆಯಾಗುವುದು.
  8. ಮೈನವೆ ಮತ್ತು ಪಿತ್ತದ ಗಂಧೆಗಳನ್ನು ಹೋಗಲಾಡಿಸಲು ಸೀಬೆಯ ಮತ್ತು ದೊಡ್ಡ ಪತ್ರೆಯ ಸೊಪ್ಪನ್ನು ಮೊಸರಿನಲ್ಲಿ ನುಣ್ಣಗೆ ಅರೆದು ಮೈಗೆ ಹಚ್ಚಿಕೊಂಡು ಚನ್ನಾಗಿ ತಿಕ್ಕಿದ ನಂತರ ಬಿಸಿ ಬಿಸಿ ನೀರಿನ ಸಾನ್ನ ಮಾಡಿ.
  9. ಬೀಜ ಬಲಿಯದ ಸೀಬೆಕಾಯಿಗಳ ಕಷಾಯ ಸಿದ್ಧಪಡಿಸಿ ಮಜ್ಜಿಗೆಯೊಂದಿಗೆ ಕುಡಿದರೆ ಆಮಶಂಕೆ ಮತ್ತು ಎದೆನೋವು ನಿವಾರಣೆಯಾಗುವುದು.
  10. ಅತಿಯಾದ ಹೊಟ್ಟೆ ನೋವು ಉಂಟಾಗಿದ್ದರೆ ಸೀಬೆಯ ಹಣ್ಣನ್ನು ಉಪ್ಪು ಮತ್ತು ಕುಟ್ಟಿದ ಕಾಳು ಮೆಣಸಿನ ಪುಡಿಯೊಂದಿಗೆ ತಿಂದರೆ ನೋವು ಮಾಯವಾಗಿ ಹೊಟ್ಟೆ ಹಗುರವಾಗುತ್ತದೆ.
  11. ಸೀಬೆಯ ತಿರುಳನ್ನು ಬೀಜ ತೆಗೆದು ಹಾಲು ಮತ್ತು ಜೇನಿನೊಂದಿಗೆ ಬೆರೆಸಿ ಟಾನಿಕ್ ತಯಾರಿಸಿಕೊಂಡು ಸೇವಿಸಿದರೆ ಅಕಾಲ ಮುಪ್ಪು, ಹೊಟ್ಟೆ ಹುಣ್ಣು, ಮುಟ್ಟಿನ ಸಂಬಂಧ ಶೂಲೆ, ಅರಿಶಿನ ಕಾಮಾಲೆಯವರು ವೈದ್ಯಕೀಯ ಚಿಕಿತ್ಸೆ ಪಡೆಯುವಾಗ ಹೆಚ್ಚು ಶಕ್ತಿಯ ಉತ್ಪನ್ನವಾಗುತ್ತದೆ.
  12. ಸಾಮಾನ್ಯವಾಗಿ ಶೀತ ಉಂಟಾದರೆ ಸೀಬೆಕಾಯಿ ತಿನ್ನಬಾರದು ಅನ್ನುವುದನ್ನು ನೀವು ಕೇಳಿರಬಹುದು. ಆದರೆ ಶೀತ ಉಂಟಾದರೆ ಸೀಬೆಕಾಯಿ ತಿನ್ನುವುದು ಒಳ್ಳೆಯದು. ಏಕೆಂದರೆ ಇದರಲ್ಲಿ ವಿಟಮಿನ್ ಸಿ ಹಾಗೂ ಕಬ್ಬಿಣದಂಶವಿದ್ದು ಶೀತವನ್ನು ಕಡಿಮೆ ಮಾಡುತ್ತದೆ.
  13. ಇದರಲ್ಲಿ ಮ್ಯಾಗ್ನಿಷಿಯಂ ಇರುವುದರಿಂದ ಸ್ನಾಯುಗಳಲ್ಲಿರುವ ಒತ್ತಡವನ್ನು ಕಡಿಮೆ ಮಾಡಿ ಅದಕ್ಕೆ ವಿಶ್ರಾಂತಿಯನ್ನು ನೀಡುತ್ತದೆ. ಇದರಿಂದ ಮೈಕೈ ಸೆಳೆತ ಕಡಿಮೆಯಾಗುವುದು.
  14. ಬಿ ಗುಂಪಿನ ವಿಟಮಿನ್‌ಗಳು ಮೆದುಳಿಗೆ ಅವಶ್ಯಕ. ಸೀಬೆಕಾಯಿಯಲ್ಲಿ ಬಿ3 ಹಾಗೂ ಬಿ6 ವಿಟಮಿನ್ ಇದ್ದು ಮೆದುಳಿನ ನರಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.
  15. ಸೀಬೆಕಾಯಿಯಲ್ಲಿ ವಿಟಮಿನ್ ಇ ಇದೆ. ತ್ವಚೆ ರಕ್ಷಣೆಯಲ್ಲಿ ವಿಟಮಿನ್ ಇ ಪ್ರಮುಖ ಪಾತ್ರವನ್ನು ವಹಿಸುತ್ತದೆ.
  16. ಇದರಲ್ಲಿ ಫಾಲಿಕ್ ಆಸಿಡ್ ಹಾಗೂ ಇತರ ಖನಿಜಾಂಶಗಳು ಇರುವುದರಿಂದ ಗರ್ಭಿಣಿಯರಿಗೆ ಸೂಕ್ತವಾದ ಆಹಾರವಾಗಿದೆ.
  17. ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳಾದ ಮರೆವು, ಮಂದ ದೃಷ್ಟಿ ಮತ್ತು ಸಂಧಿವಾತವನ್ನೂ ನಿವಾರಿಸುವಲ್ಲಿ ಸೀಬೆ ಹಣ್ಣು ಸಹಕಾರಿ.
  18. ತೂಕ ಕಡಿಮೆಮಾಡಿಕೊಳ್ಳಬೇಕೆಂದಿದ್ದರೆ ಸೀಬೆ ಒಳ್ಳೆ ಆಯ್ಕೆ. ಸೀಬೆಯಲ್ಲಿ ಅವಶ್ಯಕ ಕಾರ್ಬೊ ಹೈಡ್ರೇಡ್ ಮತ್ತು ಫೈಬರ್ ಇರುವುದರಿಂದ ಬೊಜ್ಜನ್ನೂ ನಿಯಂತ್ರಿಸುತ್ತದೆ.
  19. ವೀರ್ಯೋತ್ಪತ್ತಿ ಕಡಿಮೆಯಿದ್ದ ಪುರುಷರು ಸೀಬೆಹಣ್ಣನ್ನು ಸೇವಿಸುವುದರಿಂದ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎನ್ನಲಾಗಿದೆ.
  20. ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಮಲಬದ್ಧತೆ ಸಮಸ್ಯೆ ಇರುವವರು ಹಣ್ಣಾದ ಸೀಬೆಕಾಯಿಯನ್ನು ಪ್ರತೀದಿನ ತಿನ್ನಿ, ಉತ್ತಮ ಫಲಿತಾಂಶ ಕಾಣುವಿರಿ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಲೈಫ್ ಸ್ಟೈಲ್

ಪರಿಸರ ಪಾಠ

Published

on

ಸಾಂದರ್ಭಿಕ ಚಿತ್ರ

ಅಂದು ಮುಂಜಾನೆ ಬೇಗನೆ ಎದ್ದು , ಪರಿಸರ ಅಧ್ಯಯನ ಶಿಬಿರಕ್ಕೆ ಹೋಗಲು ತಯಾರಾದೆ.ಕಳೆದ ಶೈಕ್ಷಣಿಕ ಸಾಲಿನಲ್ಲಿ ನಮ್ಮ ಕಾಲೇಜಿನ ವತಿಯಿಂದ ನಮ್ಮನ್ನು ಬಂಡಿಪುರ ಅರಣ್ಯಕ್ಕೆ ಕರೆದೊಯ್ದಿದ್ದರು . ಈ ಭಾರಿ ಭದ್ರಾ ಅಭಯಾರಣ್ಯಕ್ಕೆ ಹೊರಟಿದ್ದೆವು. ಅಂದು ಮಂಜಿನ ಬೆಳಗ್ಗೆ ಸುಮಾರು ಒಂದು ತಾಸು ನಗರದ ಬೀದಿ ಬೀದಿಗಳಲ್ಲಿ ನನ್ನ ಸ್ನೇಹಿತರು ತಂಗಿದ್ದ ತಾಣವನ್ನೇ ಹುಡುಕಿದೆ. ಹಲವು ಕಟ್ಟಡಗಳ ನಡುವೆ ಅವರಿದ್ದ ಕಟ್ಟಡ ಮರೆಯಾಗಿತ್ತು.

ಹೇಗೋ ನಮ್ಮ ವಿಭಾಗದ ಮೇಷ್ಟ್ರಿಗೆ ಕರೆ ಮಾಡಿ ಶಿಬಿರಕ್ಕೆ ಹೋಗಲೆಂದು ಹೊರಟ್ಟಿದ್ದ ಬಸ್ ಬಳಿ ತಲುಪಿದೆ. ಸಮಯ ಐದಕ್ಕೆ ಸರಿಯಾಗಿ ಹಾಸನದಿಂದ ಭದ್ರಾ ಅಭಯಾರಣ್ಯಕ್ಕೆ ನಮ್ಮ ಬಂಡಿ ಸಾಗಿತು. ಇನ್ನು ಚಂದಿರ ಸರಿದಿರದ ಕಾರಣ ನಾವೆಲ್ಲರೂ ನಿದ್ದೆಗೆ ಜಾರಿದೆವು. ದಾರಿ ಹರಿದಂತೆ ಪಯಣದ ಹುಮ್ಮಸ್ಸಿಗಾಗಿ ಡಿ.ಜೆ. ಹಾಡಿಗೆ ಹೆಜ್ಜೆ ಹಾಕ ತೊಡಗಿದೆವು., ಸಮಯ-ಹಾದಿ ಕಳದದ್ದೆ ತಿಳಿಯಲಿಲ್ಲ….!ಸುಮಾರು ಒಂಬತ್ತು ಮೂವತಕ್ಕೆ ಸರಿಯಾಗಿ ಲಕ್ಕವಳ್ಳಿ ತಲುಪಿದೆವು .

ಅರಣ್ಯಕ್ಕೆ ಹೋದಾಕ್ಷಣ ನಮ್ಮೊಳಗೆ ಮೌನ ಆವರಿಸಿತು. ಪರಿಸರದ ಬಗ್ಗೆ , ಕುತೂಹಲ , ಏಕಾಗ್ರತೆ ಹೆಚ್ಚಾಯಿತು, ನಾವೆಲ್ಲರೂ ನಮ್ಮ ಜಂಗಮವಾಣಿಗಳನ್ನು ಬಂದ್ ಮಾಡಿ ಶಿಬಿರದ ಉದ್ಘಾಟನಾ ಕಾರ್ಯಕ್ರದಲ್ಲಿ ಭಾಗಿಯಾದೆವು . ಕೇವಲ ನಾಲ್ಕು ಗೋಡೆಗಳ ಮಧ್ಯೆ ಕಲಿಯುವುದು ಸರ್ವೆ ಸಾಮಾನ್ಯ ಅದೇ ನೈಜ್ಯ ಶಾಲೆಯಾದ ಪರಿಸರದೊಂದಿಗೆ ಕಲಿಯುವುದು ಸಾಕಷ್ಟಿದೆ ಎಂಬುದು ನನಗರಿವಾಯಿತು. ಅಲ್ಲಿನ ಸ್ಥಳೀಯ ಪರಿಸರ ತಜ್ಞರೊಬ್ಬರು ಶಿಬಿರವನ್ನು ಉದ್ಘಾಟಿಸಿ ಭದ್ರಾ ಅಭಯಾರಣ್ಯದಲ್ಲಿರುವ ಸಸ್ಯ ಸಂಕುಲದ ಬಗ್ಗೆ ಪರಿಚಯಿಸಿದರು. ವಿಧ ವಿಧ ಬಗೆಯ ಕೀಟ , ಪ್ರಾಣಿ , ಪಕ್ಷಿ , ಹೂಗಳ ಬಗ್ಗೆ ಮಾಹಿತಿ ನೀಡಿದರು. ಬರೀ ಪಠ್ಯಕ್ರಮಕ್ಕೆ ಸೀಮಿತವಾಗಿ ಕಲಿತುತ್ತಿರುವ ನಮಗೆ ಪಠ್ಯೇತ್ತರ ಪಾಠಗಳನ್ನು ಆಲಿಸುವುದು ಬಹಳ ಹಿತಕರವೆನ್ನಿಸಿತು.

ನಂತರ ಅರಣ್ಯದ ವೈಶಿಷ್ಟ್ಯತೆಯ ಕುರಿತು ವಿಡಿಯೋ ತೋರಿಸುತ್ತಾ ಸಿಗ್ನೇಚರ್ ಎಂಬ ಜೇಡರ ಹುಳಿವಿನ ಬಗ್ಗೆ ವಿವರಿಸಿದರು. ಈ ಜೇಡ ಬಲೆಯಲ್ಲಿ ಒಂದು ರೀತಿಯ ಬಿಳಿ ಗೆರೆ ಹೆಣೆದಿರುತ್ತದೆ ಎಂದು ತಿಳಿಸಿದರು. ಅದಾದ ಮೇಲೆ ಹೀಗೆ ಸಫಾರಿ ಹೋಗಲು ಹೊರಡುವ ಮುನ್ನ ಅತ್ತಿತ್ತ ಸುತ್ತಾಡುತ್ತಾ ಇದ್ದಾಗ ಅಲ್ಲಿಯೇ ಲೈಟು ಕಂಬಕ್ಕೆ ಬಲೆಯೊಂದು ಹೆಣೆದಿತ್ತು . ಅದು ತಜ್ಞರು ವಿವರಿಸಿದ ಸಿಗ್ನೇಚರ್ ಜೇಡ ಒಂದು ರೀತಿಯ ಅಪರೂಪದ ಕೀಟವಾಗಿತ್ತು.ಅದರ ವೈಶಿಷ್ಟ್ಯತೆ ಹಾಗು ಕುಶಲತೆಯನ್ನು ಕಂಡು ಅಚ್ಚರಿಯಾಯಿತು.

ನಮ್ಮನ್ನು ಸಫಾರಿ ಕರೆದುಕೊಂಡು ಹೋದರು. ಸಫಾರಿಯಲ್ಲಿ ಮೊದಮೊದಲು ಖಾಲಿ ಕಾಡು ಕಾಣಿಸಿತಾದರೂ ಮುಂದೆ ದಾರಿ ಸವೆದಂತೆ ಲಂಗೂರ್, ಸಾಂಬಾರ್, ಕಾಡು ಎಮ್ಮೆ- ಕೋಣ , ಗುಳ್ಳೇ ನರಿ , ವಿಶಿಷ್ಟ ಕೆಂಪು ಬಾಲದ ಅಳಿಲು , ಉಲಿವ ನವಿಲು , ಉಡ, ಕಾಡು ಹಂದಿ ಎಲ್ಲವೂ ನೋಡಲು ಸಿಕ್ಕವು. ಆ ರಾತ್ರಿ ಸಫಾರಿಯಿಂದ ವಾಪ್ಪಸ್ಸಾದಾಗ ಮೇಷ್ಟ್ರು ಹೇಳಿದ ಮಾತಿನಂತೆ ಇಡೀ ರಾತ್ರಿ ಅನುಭವ ಲೇಖನ ವನ್ನು ಬರೆಯುತ್ತಿದ್ದವು.ಅಲ್ಲಿನ ಚಳಿಗೆ ನಿದ್ದೆಗೆ ಜಾರಿದ್ದೆ ಅರಿವಾಗಲಿಲ್ಲ. ಬೆಳಗಾದಾಗ ಭದ್ರಾ ನದಿಯ ಹಿನ್ನೋಟ ನಮ್ಮೆಲ್ಲರ ಕಣ್ ಸೆಳೆಯಿತು . ಬಂದ್ ಮಾಡಿದ್ದ ಮೊಬೈಲ್ ಗಳ ತೆಗೆದುಕೊಂಡು ಸುಂದರ ಪಟಗಳ ತೆಗೆಯುವಲ್ಲಿ-ತೆಗೆದುಕೊಳ್ಲುವಲ್ಲಿ ನಿರತರಾದೆವು . ಮುಂದೆ ನಮ್ಮ ಪಯಣ ಹತ್ತಿರದ ಸಕ್ಕರೆಬೈಲು ಆನೆ ಶಿಬಿರಕ್ಕೆ ಭೇಟಿ ನೀಡಿದೆವು . ಅಲ್ಲಿ ಆನೆಗಳಿಗೆ ತಾಲೀಮು ಮಾಡುತ್ತಿದ್ದದ್ದನ್ನು ಹತ್ತಿರದಿಂದ ಗಮನಿಸಿದೆವು.

ಮಾವುತರ ಆದೇಶದಂತೆ ಆನೆಗಳು ಶಿಸ್ತು ಭದ್ದವಾಗಿ ವರ್ತಿಸುತ್ತಿದ್ದವು, ಮಕ್ಕಳಂತೆ ಚೆಂಡಾಟ ಆಡುತ್ತಾ, ಪ್ರವಾಸಿಗರಿಗೆ ಸೊಂಡಿಲಲ್ಲಿ ನಮಿಸುತ್ತಾ ಲವಲವಿಕೆಯಿಂದ ಇದ್ದವು. ಮನುಷ್ಯನ ದುರಾಸೆಯಿಂದಾಗಿಯೇ ಎಷ್ಟೋ ಕಾಡು ನಾಶವಾಗುತ್ತದೆ. ಪ್ರಾಣಿಗಳು ನಾಡಿಗೆ ಬಂದು ದಾಳಿ ಮಾಡಲು ಕೆಲವೊಮ್ಮೆ ಮಾನವನೇ ಕಾರಣಕರ್ತರಾಗಿದ್ದಾನೆ. ಇಂತಹ ವಿಚಾರಗಳನ್ನು ನಾವೂ ಪರಿಸರದೊಳಗೆ ಪರಿಸರ ಜೀವಿಯಾದಾಗ ಮಾತ್ರ ಅರಿವಾಗುತ್ತದೆ ಹೊರತು ಕಾಂಕ್ರೀಟ್ ಕಾಡೊಳಗೆ ಬಾವಿ ಕಪ್ಪೆಗಳಂತೆ ಇದ್ದರೆ ಪ್ರಕೃತಿಯ ಬಗ್ಗೆ ಕಿಂಚಿತ್ತು ತಿಳಿಯಲಾಗುವುದಿಲ್ಲ.

ಸಕ್ಕರೆಬೈಲಿನಲ್ಲಿ ಸಂವೇದನೀಯ ವಿಚಾರಗಳು ಮಸ್ತಕದಲ್ಲಿ ಮೂಡಿದವು. ಮಧ್ಯಾಹ್ನ ನಮ್ಮ ನಾಡಿನ ಹೆಮ್ಮೆಯ ಕವಿ ಮನೆಗೆ (ಕುಪ್ಪಳಿಯ ಕವಿಶೈಲಕ್ಕೆ) ಭೇಟಿ ನೀಡಿದೆವು . ಮನೆಯಲ್ಲಿ ಹೆಜ್ಜೆ ಹಾಕುತ್ತಾ ಹೋದಂತೆ ಪುರಾತನ ಬದುಕಿನ ಶೈಲಿಯ ಬಗ್ಗೆ ಕುತೂಹಲ ಮೂಡಿತು. ಹೇಮಾವತಿ ಅಮ್ಮನವರ ಅಡುಗೆ ಮನೆಯ ಸಾಮಗ್ರಿಗಳನ್ನು ಕಂಡು ಅವರು ಪಡುತ್ತಿದ್ದ ಶ್ರಮ ಕಾಯಕ ಕಣ್ಮುಂದೆ ಗೋಚರಿಸಿತು. ಅಂದಿನ ಬದುಕಿನ ಶೈಲಿ , ಸಂಸ್ಕøತಿಯನ್ನು ಗಮನಿಸಿ ಕನಿಷ್ಟ ಪದ್ಧತಿ, ಬದುಕಿನ ಅಚ್ಚುಕಟ್ಟುತನವನ್ನು ಅಳವಡಿಸಿಕೊಳ್ಳಬೇಕಿನಿಸಿತು. ನಂತರ ಪ್ರವಾಸಿಗರ ಅನಿಸಿಕೆ ಪುಸ್ತಕದಲ್ಲಿ ಕವಿಮನೆ ನನ್ನ ಕನಸು ಎಂದು ಬರೆದೆ. ತೇಜಸ್ವಿಯವರ ಸಮಾಧಿಯ ಬಳಿ ಹೋಗುವ ಮುನ್ನ ಕವಿ ಶೈಲದ ಗುಡ್ಡದಲ್ಲಿ ಕುಳಿತು ಕುವೆಂಪುರವರ ಒಂದೆರಡು ಭಾವಗೀತೆಗಳನ್ನು ಧ್ಯಾನಸ್ತಳಾಗಿ ಹಾಡಿದೆ. ಮನಸ್ಸಿಗೆ ನೆಮ್ಮದಿಯಾಯಿತು, ಮನ ನಿರಾಳವಾಯಿತು.

ತೇಜಸ್ವಿಯವರು ಗತಿಸಿದ ದಿನ ನಾನು ಚಿಕ್ಕವಳಿದ್ದೆ ನನ್ನಪ್ಪ(ಎನ್ಕೆ),ಅಪ್ಪನ ಸ್ನೇಹಿತರಾದ ಎಸ್. ಗಂಗಾಧರಯ್ಯ ಮತ್ತು ಇನ್ನಿತ್ತರ ಜೊತೆ ಅವರ ಕೊನೆ ಭಾರಿ ನೋಡಲು ಹೋಗಿದ್ದೆವು . ಅದು ಮುಸುಕು ಮುಸುಕು ನೆನಪು ಅದಾದ ಬಳಿಕ ಅವರ ಸಮಾಧಿಯ ನೋಡುವ ಅವಕಾಶ ಒದಗಿರಲಿಲ್ಲ…..ಜಾತಿ – ಧರ್ಮವ ಮೀರಿದ ಮನುಜರಾಗಿದ್ದ ತೇಜಸ್ವಿಯವರು ಪ್ರಕೃತಿಯ ಒಡಲಿನಲ್ಲಿ ದೀರ್ಘಕಾಲ ವಿಶ್ರಮಿಸುತ್ತಿರುವುದ ಕಂಡ ಒಂದು ರೀತಿಯ ಸಾತ್ವಿಕ ಭಾವ ಮೂಡಿತು. ಬದುಕಿದರೆ
ಕುವೆಂಪು,ತೇಜಸ್ವಿಯವರಂತೆ ಆದರ್ಶ ಬದುಕನ್ನು ಜೀವಿಸಬೇಕೆಂದು ನಿರ್ಧರಿಸಿದೆ.ಮಾನವ ನಿರ್ಮಿತ ಕಟ್ಟುಪಾಡುಗಳನ್ನು ಮೀರಿ ನಿಷ್ಕಲ್ಮಶ ಮನಸ್ಸಿನಿಂದ ಇರುವ ಕಾಲ ಒಳಿತು ಮಾಡುವತ್ತ ಸಾಗೋಣ ಎನಿಸಿತು.

-ಸಂಘಮಿತ್ರೆ ಹೆಚ್.ಎಸ್.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ಲೈಫ್ ಸ್ಟೈಲ್

‘ಬಾರ್ಲಿ ಬಿಸಿಬೇಳೆ ಬಾತ್’ ಮಾಡೋದು ಹೇಗೆ ಗೊತ್ತಾ..?

Published

on

ನಮ್ಮ ದೇಶದಲ್ಲಿ ಬಾರ್ಲಿಯನ್ನು ಆಹಾರವಾಗಿ ಉಪಯೋಗಿಸುವ ಮಂದಿ ತುಂಬಾ ಕಡಿಮೆ. ವೈದ್ಯರು ಹೇಳಿದರೆ ಮಾತ್ರ ಕೆಲವು ಮಂದಿ ಇದನ್ನುಆಹಾರವಾಗಿಬಳಸುತ್ತಾರೆ.ಈಜಿಪ್ಟ್,ಉತ್ತರ ಆಫ್ರಿಕಾ ದೇಶದಲ್ಲಿ ಮೊದಲು ಬಾರ್ಲಿಯನ್ನು ಉಪಯೋಗಿಸಲು ಪ್ರಾರಂಭ ಮಾಡಿದರು. ಅಂದಹಾಗೆ ಈ ಬಾರ್ಲಿಯಿಂದ ರುಚಿ ರುಚಿಯಾದ ಬಿಸಿ ಬೇಳೆಬಾತ್ ಕೂಡ ಮಾಡಬಹುದು.

ಬೇಕಾಗುವ ಸಾಮಾಗ್ರಿಗಳು

  1. ಬಾರ್ಲಿ 100ಗ್ರಾಂ
  2. ತೊಗರಿ ಬೇಳೆ ಅರ್ಧ ಕಪ್
  3. ತರಕಾರಿಗಳು ಎಲ್ಲವನ್ನು ಒಂದಿಂಚು ಹೆಚ್ಚಿಕೊಳ್ಳಿ.
  4. ಕ್ಯಾರೆಟ್ 2
  5. ಹುರುಳಿ ಕಾಳಿ 7-8
  6. ಬಟಾಣಿ ಸ್ವಲ್ಪ
  7. ಆಲೂಗಡ್ಡೆ 1
  8. ಕ್ಯಾಪ್ಸಿಕಂ 1/2
  9. ಕರಿಬೇವು ಸ್ವಲ್ಪ

ಹುರಿದು ಕೊಳ್ಳಲು

  1. ಕಡಲೆಬೇಳೆ ಒಂದು ಟೀ ಚಮಚ
  2. ಉದ್ದಿನ ಬೇಳೆ ಒಂದು ಟೀ ಚಮಚ
  3. ಜೀರಿಗೆ ಅರ್ಧ ಟೀ ಚಮಚ
  4. ಸಾಸಿವೆ ಅರ್ಧ ಟೀ ಚಮಚ
  5. ಧನಿಯಾ ಎರಡು ಟೀ ಚಮಚ
  6. ಗಸಗಸೆ ಒಂದು ಟೀ ಚಮಚ
  7. ಮೆಂತ್ಯ ಕಾಲು ಟೀ ಚಮಚ.
  8. ಒಣಮೆಣಸಿನ ಕಾಯಿ ನಾಲ್ಕು/ಖಾರ ಎಷ್ಟು
  9. ಬೇಕು ಅಷ್ಟು
  10. ಕರಿಬೇವು ಸ್ವಲ್ಪ
  11. ಲವಂಗ ಎರಡು
  12. ಕಾಳುಮೆಣಸು ಹತ್ತು
  13. ಚಕ್ಕೆ ಅರ್ಧ ಇಂಚು
  14. ತೆಂಗಿನ ತುರಿ ಅರ್ಧ ಕಪ್
  15. ಹುರಿಯಲು ಎಣ್ಣೆ ಒಂದು ಟೀ ಚಮಚ
  16. ಉಪ್ಪು ರುಚಿಗೆ ತಕ್ಕಷ್ಟು
  17. ಹುಣಸೆ ಹಣ್ಣು ಸ್ವಲ್ಪ
  18. ಬೆಲ್ಲ ಚಿಕ್ಕ ತುಂಡು

ಒಗ್ಗರಣೆಗೆ

  1. ತುಪ್ಪ 3-4ಚಮಚ
  2. ಸಾಸಿವೆ ಅರ್ಧ ಟೀ ಚಮಚ
  3. ಕರಿಬೇವು ಸ್ವಲ್ಪ
  4. ಗೋಡಂಬಿ ಸ್ವಲ್ಪ
  5. ಇಂಗು ಚಿಟಿಕೆ‌

ಮಾಡುವ ವಿಧಾನ

  1. ಮೊದಲು ಕುಕ್ಕರಿನ ಪಾತ್ರೆಯಲ್ಲಿ ಬೇಳೆ ತರಕಾರಿಯನ್ನು ಒಂದು ಪಾತ್ರೆಯಲ್ಲಿ ಮತ್ತು ಬಾರ್ಲಿಯನ್ನು ಒಂದು ಪಾತ್ರೆಯಲ್ಲಿ ಹಾಕಿ 2-3ಕಪ್ ನೀರು(ಅರ್ಧ ಲೀಟರ್ ನೀರು)ಹಾಕಿ, 5-6ವಿಷಲ್ ಬರುವರೆಗೆ ಬೇಯಿಸಿ.
  2. ನಂತರ ಮಸಾಲೆ ಪದಾರ್ಥಗಳನ್ನು ಹುರಿದು ಅರ್ಧ ಕಪ್ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿ ಕೊಳ್ಳಿ.
  3. ಅದಕ್ಕೆ ಸಾಸಿವೆ, ಕರಿಬೇವು, ಇಂಗು ಮತ್ತು ಗೋಡಂಬಿಯನ್ನು ಹಾಕಿ ಒಗ್ಗರಣೆ ಮಾಡಿ ಕೊಳ್ಳಿ.
    ಇದಕ್ಕೆ ಬೇಯಿಸಿದ ತರಕಾರಿ ಮತ್ತು ಬೇಳೆಯನ್ನು ಹಾಕಿ.
  4. ನಂತರ ರುಬ್ಬಿಕೊಂಡ ಮಸಾಲೆ ಪದಾರ್ಥಗಳನ್ನು ಹಾಕಿ ಎಷ್ಟು ತಳ್ಳಗೆ ಬೇಕೋ ಅಷ್ಟು ನೀರನ್ನು ಹಾಕಿ ಚೆನ್ನಾಗಿ ಕುದಿಸಿ.
  5. ಕುದಿಯುವಾಗ ಬೆಲ್ಲವನ್ನು ಸೇರಿಸಿ.ಚೆನ್ನಾಗಿ ಕುದಿ ಬಂದ ನಂತರ ಒಲೆಯಿಂದ ಇಳಿಸಿ.‌ರುಚಿಯಾದ ಆರೋಗ್ಯಕರವಾದ ಬಾರ್ಲಿ ಬಿಸಿಬೇಳೆ ಬಾತ್ ತಯಾರಿಸಿ ಸವಿಯಿರಿ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ಲೈಫ್ ಸ್ಟೈಲ್

ಹಲವು ಔಷದೀಯ ಗುಣವುಳ್ಳ ‘ಬಾರ್ಲಿ’ ಬಗ್ಗೆ ನಿಮಗೆಷ್ಟು ಗೊತ್ತು..?

Published

on

ನಮ್ಮ ದೇಶದಲ್ಲಿ ಬಾರ್ಲಿಯನ್ನು ಆಹಾರವಾಗಿ ಉಪಯೋಗಿಸುವ ಮಂದಿ ತುಂಬಾ ಕಡಿಮೆ. ವೈದ್ಯರು ಹೇಳಿದರೆ ಮಾತ್ರ ಕೆಲವು ಮಂದಿ ಇದನ್ನು ಆಹಾರವಾಗಿ ಬಳಸುತ್ತಾರೆ. ಈಜಿಪ್ಟ್,ಉತ್ತರ ಆಫ್ರಿಕಾ ದೇಶದಲ್ಲಿ ಮೊದಲು ಬಾರ್ಲಿಯನ್ನು ಉಪಯೋಗಿಸಲು ಪ್ರಾರಂಭ ಮಾಡಿದರು.

ಬಾರ್ಲಿಯ ಉಪಯೋಗ

  1. ಬಾರ್ಲಿಯಲ್ಲಿ ವಿಟಮಿನ್ ‘ಎ’ಇರುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.
  2. ಬಾರ್ಲಿಯಲ್ಲಿ ಪೊಟ್ಯಾಶಿಯಂ ಹೇರಳವಾಗಿದೆ.ಇದು ರಕ್ತದೊತ್ತಡವನ್ನು ಸಮತೋಲನದಲ್ಲಿಡುತ್ತದೆ.
  3. ಇದರಲ್ಲಿ ನಾರಿನಂಶ ಜಾಸ್ತಿಯಿರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.
  4. ಬಾರ್ಲಿಯಲ್ಲಿರುವ ನಾರಿನಂಶದಿಂದ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನಿಧಾನವಾಗಿ ಬಿಡುಗಡೆ ಮಾಡಿ, ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ.
  5. ಮಧುಮೇಹ ಇದ್ದವರಿಗೆ ಬಾರ್ಲಿ ಉಪಯೋಗಿಸುವುದರಿಂದ ಲಾಭ ಪಡೆಯಬಹುದು.
  6. ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.ಬಾರ್ಲಿಯು ರಕ್ತದೊತ್ತಡದೊಂದಿಗೆ ಕೊಲೆಸ್ಟ್ರಾಲ್ನ್ನು ತಡೆಹಿಡಿಯುವ ಗುಣವನ್ನು ಹೊಂದಿರುವುದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ದೂರ ಮಾಡುವಲ್ಲಿ ಸಹಕಾರಿಯಾಗಿದೆ.
  7. ಬಾರ್ಲಿಯಲ್ಲಿ ಕಬ್ಬಿಣದ ಅಂಶ ಹೇರಳವಾಗಿರುತ್ತದೆ.ಇದರಿಂದ ರಕ್ತಹೀನತೆಯನ್ನು ನಿಯಂತ್ರಣ ಮಾಡಲು ಸಾಧ್ಯ.
  8. ಇದರಲ್ಲಿರುವ ಕ್ಯಾಲ್ಸಿಯಂ ಫಾಸ್ಪರಸ್ ಮೂಳೆಗಳ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ.
  9. ಇದರಲ್ಲಿರುವ ಮೆಗ್ನಿಷಿಯಂ ಜಿಂಕ್ ಎಂಬ ಖನಿಜಗಳು ಚರ್ಮಕ್ಕೆ ಮತ್ತು ಕೂದಲಿಗೆ ಹೊಳಪನ್ನು ನೀಡುತ್ತದೆ.
  10. ಬಾರ್ಲಿಯಲ್ಲಿ ವಿಟಮಿನ್ ‘ಬಿ’ಕಾಂಪ್ಲೆಕ್ಸ್ ಜೊತೆಗೆ ವಿಟಮಿನ್ ‘ಸಿ’ಇರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading
Advertisement

Trending