Connect with us

ಲೈಫ್ ಸ್ಟೈಲ್

ಮಕ್ಕಳು‌ ‘ಸ್ಮಾರ್ಟ್ ಪೋನ್’ ಬಳಸುವುದು ಎಷ್ಟರ ಮಟ್ಟಿಗೆ ಸುರಕ್ಷಿತ..?

Published

on

 • ಸಂಧ್ಯಾ ಸಿಹಿಮೊಗೆ

ಮಾಯಾಜಗತ್ತು ಎಷ್ಟೊಂದು ಸುಂದರ…! ಕುಳಿತ ಜಾಗದಲ್ಲೇ ನಮ್ಮನ್ನು ಕುಳಿತುಕೊಳ್ಳುವಂತೆ ಮಾಡುವ, ದೂರ ಸರಿದರೂ ಮತ್ತೆಮತ್ತೆ ತನ್ನ ಬಳಿಯೆ ಉಳಿಯುವಂತೆ ಮಾಡುವ, ದಿನ ಪೂರ್ತಿ ಊಟ, ನಿದ್ದೆ, ಸ್ನಾನ ಹೀಗೆ ಎಲ್ಲಾ ಕೆಲಸಗಳನ್ನು ಬಿಟ್ಟು ಸುಮ್ಮನೆ ಒಂದೆಡೆ ಮೂಲೆಗೊರಗಿ ಕುಳಿತುಕೊಳ್ಳುವಂತೆ ಮಾಡುವ ಮಾಂತ್ರಿಕ ಶಕ್ತಿ ಹೊಂದಿರುವ ಮಾಯೆ ಈ ಮೊಬೈಲು.

ಇಂದಿನ ವೈಜ್ಞಾನಿಕ ಯುಗದಲ್ಲಿ ಮೊಬೈಲ್, ಸ್ಮಾರ್ಟ್‍ಪೋನ್, ಐಪ್ಯಾಡ್, ಲ್ಯಾಪ್‍ಟಾಪ್ ಮತ್ತು ಕಂಪ್ಯೂಟರ್‍ನಂತಹ ವಿನೂತನ ಅತ್ಯಾಧುನಿಕ ವಿದ್ಯುನ್ಮಾನ ಸಾಧನಗಳು ಕೈಲಿದ್ದರೆ ಸಾಕು ಇಡೀ ಜಗತ್ತೇ ನಮ್ಮ ಅಂಗೈಯಲ್ಲಿ. ನಮಗೆ ಅಗತ್ಯವಿರುವ ಎಲ್ಲಾ ಬಗೆಯ ವಿಷಯ, ಜ್ಞಾನ, ಮಾಹಿತಿ, ಸಂಗೀತ, ಮನೋರಂಜನೆ, ಸುದ್ದಿ, ಕ್ರೀಡೆ, ಸಂಪರ್ಕ, ಸಂದೇಶಗಳಂತಹ ತರಹೇವಾರಿ ಮಾಹಿತಿಗಳನ್ನು ಪಡೆಯುವುದರ ಜೊತೆಗೆ ಮಾನಸಿಕ ನೆಮ್ಮದಿ ನೀಡಿ ಮನಸ್ಸನ್ನು ಪುಳಕಗೊಳಿಸಬಲ್ಲ ಸಂಗತಿಗಳನ್ನು ನಾವು ಈ ಮೊಬೈಲ್ ತಂತ್ರಜ್ಞಾನದಿಂದ ಪಡೆಯಬಹುದಾಗಿದೆ.
ಮೊಬೈಲ್ ಅಥವಾ ಸ್ಮಾಟ್‍ಫೋನ್‍ನಿಂದ ಅವಶ್ಯಕ ಮಾಹಿತಿ, ಗೇಮ್, ಕಾರ್ಟೂನ್ ಮತ್ತು ಇನ್ನಿತರ ಮನಸ್ಸಿಗೆ ಮುದನೀಡುವ ಸೌಲಭ್ಯಗಳನ್ನು ಪಡೆದುಕೊಳ್ಳುವುದರ ಜೊತೆಗೆ ಬೌದ್ಧಿಕ ವಿಕಾಸ ಹಾಗೂ ಕಲಿತ ವಿದ್ಯೆಯನ್ನು ಒರೆಗೆ ಹಚ್ಚುವಲ್ಲಿಯೂ ಇದು ಸಹಾಯಕವಾಗಿದೆ.

ನಾವು ಸ್ಮಾರ್ಟ್‍ಫೋನ್‍ನಂತೆ ಸ್ಮಾರ್ಟ್ ಕೂಡ ಆಗಬಹುದೆಂಬುದೇನೋ ನಿಜ. ಆದರೆ, ಮೊಬೈಲ್ ಮತ್ತು ಸ್ಮಾರ್ಟ್‍ಫೋನ್‍ಗಳನ್ನು ಮಕ್ಕಳು ಬಳಸುವುದು ಎಷ್ಟರ ಮಟ್ಟಿಗೆ ಸುರಕ್ಷಿತ ?.. ಅವುಗಳಿಂದ ಆಗಬಹುದಾದ ದುಷ್ಟರಿಣಾಮಗಳ ಅರಿವಿಲ್ಲದೆ ಮೌನವಾಗಿರುವುದು ಅಪಾಯದ ಮುನ್ಸೂಚನೆಯೇ ಅಲ್ಲವೇ?.

ಇಂದಿನ ನಮ್ಮ ಬದುಕು ಮೊಬೈಲ್‍ಮಯವಾಗುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಹಿಂದಿನ ಕಾಲದಲ್ಲಿ ಮಕ್ಕಳಿಗೆ ಚಂದಮಾಮ ತೋರಿಸಿ, ಲಾಲಿ ಹಾಡಿ ಊಟ ಮಾಡಿಸುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಇಲ್ಲದೆ ಊಟ ಮಾಡುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಮೊಬೈಲ್ ಎಂಬ ಮಾಯೆ ತನ್ನ ಪ್ರಭಾವ ಬೀರಿರುವುದು ಅತ್ಯಂತ ಕಳವಳಕಾರಿ ಸಂಗತಿ.

ನಿರಂತರವಾಗಿ ಮೊಬೈಲ್ ಬಳಸುವುದರಿಂದ ಮಕ್ಕಳು ಭವಿಷ್ಯದಲ್ಲಿ ಎದುರಿಸಬಹುದಾದ ಸಮಸ್ಯೆಗಳ ಕುರಿತು ಪೋಷಕರು ಕಿಂಚಿತ್ತು ಗಮನಹರಿಸಿದರೆ ಒಳಿತು. ಪಬ್‍ಜಿ ಗೇಮ್, ಟಿಕ್‍ಟಾಕ್, ಸಾಮಾಜಿಕ ಜಾಲತಾಣ, ಆತಂಕಕಾರಿ ಸಾಪ್ಟವೇರ್‍ಗಳು ಹಾಗೂ ಅಶ್ಲೀಲ ಸಂಗತಿಗಳು ಮಕ್ಕಳ ಕೋಮಲವಾದ ಮನಸ್ಸನ್ನು ಕೆರಳಿಸಿ, ಪ್ರಚೋದಿಸಿ ಅವರ ಗಮನ ಕೇಂದ್ರೀಕರಿಸಿಕೊಂಡು ಕೊನೆಗೆ ಜೀವಹಾನಿಯಂತಹ ಘಟನೆಗಳು ಸಂಭವಿಸುತ್ತಿರುವುದು, ವೈಚಾರಿಕ ನೆಲೆಯಿಂದ ವಿಮುಖರಾಗಿ ಕ್ರೌರ್ಯಗಳಿಗೆ, ದುಷ್ಕøತ್ಯಗಳಿಗೆ ಕಾರಣವಾಗುತ್ತಿರುವುದು ಮೊಬೈಲ್ ಬಳಸುವ ಎಲ್ಲರಿಗೂ ತಿಳಿದ ಸಂಗತಿಯೇ ಆಗಿದೆ.
ಅತಿಯಾದ ಸ್ಮಾಟ್‍ಫೋನ್ ಬಳಕೆಯಿಂದ ಮಕ್ಕಳ ಆರೋಗ್ಯದ ಜೊತೆಗೆ ಕಲಿಕೆ ಮತ್ತು ಶೈಕ್ಷಣಿಕ ಚಟುವಟಿಕೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿ ಫಲಿತಾಂಶ ಕುಂಠಿತವಾಗುವ ಆತಂಕವಿದೆ. ಪ್ರೀತಿ, ವಾತ್ಸಲ್ಯ, ಮಮತೆ, ಜೀವನ, ಸಂಬಂಧಗಳ ಮೌಲ್ಯ ಹಾಗೂ ಸಂಸ್ಕøತಿಗಳ ಪರಿವೆಯೇ ಇಲ್ಲದೇ ಬದುಕುವ ಪರಿಸ್ಥಿತಿ ತಂದೊಡ್ಡಿದೆ.

ದೊಡ್ಡವರು ಮಕ್ಕಳ ಮುಂದೆ ಮೊಬೈಲ್ ಬಳಸುವುದನ್ನು ಕಡಿಮೆ ಮಾಡಿ, ಮಕ್ಕಳ ಬದುಕಿಗೆ ಮಾದರಿಯಾಗಬೇಕು. ನಮ್ಮ ಮಕ್ಕಳ ಭವಿಷ್ಯವನ್ನು ನಾವು ಮಾತ್ರವೇ ಬದಲಾಯಿಸಬಹುದು ಎಂಬುದನ್ನು ಅರಿತು ಜಾಗೃತರಾಗಬೇಕು.ಮಕ್ಕಳನ್ನು ಮೊಬೈಲ್‍ನಿಂದ ದೂರವಿರಿಸುವುದು ಇಂದು ಕಷ್ಟದ ಕೆಲಸ. ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳ ಮಾನಸಿಕ ಬೆಳವಣಿಗೆ ಕುಂಠಿತವಾಗಬಹುದು ಎಂದು ಅಧ್ಯಯನಗಳು ತಿಳಿಸಿದೆ.

ಹದಿಹರೆಯದ ಮತ್ತು ಯೌವ್ವನಾವಸ್ಥೆಯಲ್ಲಿರುವವರ ಆಲೋಚನಾ ಶಕ್ತಿ ಕುಗ್ಗಲು ಹಾಗೂ ಕ್ಷೀಣಿಸಲು ಮೊಬೈಲ್‍ನಿಂದಾಗುವ ದುಷ್ಟರಿಣಾಮಗಳು ಕಾರಣವಾಗಿದೆ. ಪಬ್‍ಜಿ ಗೇಮ್‍ನಂತಹ ಅವೇಶಭರಿತ ಆಟಗಳ ನಿಯಂತ್ರಣಕ್ಕೊಳಪಟ್ಟು ಕೊನೆಗೆ ಆಟದಲ್ಲಿ ಸೋತ ಮಕ್ಕಳು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಇದರಿಂದ ಮಕ್ಕಳ ಕಣ್ಣು, ಮೆದುಳು ಮತ್ತು ವಿವಿಧ ಶಾರೀರಿಕ ಬೆಳವಣಿಗೆಯ ಮೇಲೆ ಆರೋಗ್ಯದ ಅಡ್ಡ ಪರಿಣಾಮಗಳು ಆಗುತ್ತಿವೆ. ನಿರಂತರ ಮೊಬೈಲ್ ಬಳಕೆಯಿಂದ ರಕ್ತದೊತ್ತಡ ಮತ್ತು ನರರೋಗಕ್ಕೆ ತುತ್ತಾಗುವ ಸಾಧ್ಯತೆಗಳು ಇರುವುದನ್ನು ಇತ್ತೀಚಿನ ಸಂಶೋಧನೆಗಳು ದೃಢಪಡಿಸಿವೆ.
ನಿದ್ದೆ ಮಾಡೋಲ್ಲ ಮತ್ತು ಹೇಳಿದ ಮಾತು ಕೇಳೊಲ್ಲ ಎಂದರೆ ನಾವು ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಗೊಂಬೆಗಳ ಕಾರ್ಯಕ್ರಮ ಮತ್ತು ಗೇಮ್ ಆಡುವುದಕ್ಕೆ ಹೇಳಿ ಸುಮ್ಮನಾಗಿಸುತ್ತೇವೆ. ತಾಂತ್ರಿಕತೆ ಮತ್ತು ತಂತ್ರಜ್ಞಾನ ಯುಗದತ್ತ ಮುಖ ಮಾಡುತ್ತಿರುವ ನಾವು ನಮ್ಮ ಕಾರ್ಯಬಾಹುಳ್ಯದ ಒತ್ತಡದಿಂದಾಗಿ ಮಕ್ಕಳ ಕಡೆಗೆ ಗಮನ ಕೂಡಲು ಸಾಧ್ಯವಾಗುತ್ತಿಲ್ಲ. ಮೊಬೈಲ್ ಬಳಕೆಯಿಂದ ಹಲವಾರು ತೊಂದರೆಗಳು ಎದುರಾಗುತ್ತಿವೆ. ಹೀಗಾಗಿ ಮಕ್ಕಳ ಮನಸ್ಸು ಮತ್ತು ಆರೋಗ್ಯದ ಮೇಲೆ ಭೀಕರವಾದ ಪರಿಣಾಮ ಪರಿಣಾಮ ಬೀರುತ್ತಿವೆ.

ಮೊಬೈಲ್ ಫೋನ್‍ಗಳು ಮತ್ತು ಅವುಗಳ ಟವರ್‍ಗಳು ಹೊರಸೂಸುವ ತರಂಗಗಳು ಮಹಿಳೆಯರಲ್ಲಿ ಫಲವತ್ತತೆಯ ನಷ್ಟಕ್ಕೆ ಪ್ರಮುಖ ಕಾರಣವಾಗಿದೆ. ಎಂದು ವಿಶ್ವ ಆರೋಗ್ಯ ಸಂಸ್ಥೆ(WHO)ಯ ಅಧ್ಯಯನವೊಂದು ತಿಳಿಸಿದೆ. ಮೊಬೈಲ್ ಫೋನ್‍ಗಳ ನಿರಂತರ ಬಳಕೆಯು ಸದಾ ಪ್ರಶ್ನೆಯಲ್ಲಿದೆ. ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕುಸಿತ ಮತ್ತು ಮಹಿಳೆಯರಲ್ಲಿ ಫಲವತ್ತತೆ ಕಂಠಿತ ಸೇರಿದಂತೆ ಮೊಬೈಲ್ ವಿಕಿರಣದ ದುಷ್ಪರಿಣಾಮಗಳನ್ನು ಹಲವಾರು ಅಧ್ಯಯನಗಳು ಮತ್ತು ಸಂಶೋಧನೆಗಳು ಬಹಿರಂಗಗೊಳಿಸಿವೆ. ಅಷ್ಟೇ ಅಲ್ಲ, ಮೊಬೈಲ್ ವಿಕಿರಣವು ಮೆದುಳು ಟ್ಯೂಮರ್‍ಗಳನ್ನೂ ಉಂಟುಮಾಡುತ್ತದೆ ಎಂಬುದನ್ನು ಖಚಿತಪಡಿಸಿದೆ.

ಸ್ಮಾರ್ಟ್‍ಫೋನ್‍ಗಳ ನಿರಂತರ ಬಳಕೆ ನಮ್ಮ ಪ್ರತಿದಿನ ಬದುಕಿನ ಭಾಗವಾಗಿಬಿಟ್ಟಿದೆ. ಆದರೆ ಮನಸ್ಸು ಮತ್ತು ಶರೀರದ ಮೇಲೆ ಅದರ ದುಷ್ಟಪರಿಣಾಮಗಳ ಬಗ್ಗೆಯೂ ಮೊಬೈಲ್ ಬಳಕೆದಾರರು ತಿಳಿದಿರಬೇಕು.ಮೊಬೈಲ್ ಫೋನ್‍ಗಳು ಹೊರಸೂಸುವ ವಿಕಿರಣಗಳು ಕ್ಯಾನ್ಸರ್‍ನಂತಹ ಮಾರಣಾಂತಿಕ ಕಾಯಿಲೆಯನ್ನುಂಟು ಮಾಡುವ ಅಪಾಯವಿದೆ ಎನ್ನುವುದನ್ನು WHO ಸಂಶೋಧನೆಯು ಬಹಿರಂಗಗೊಳಿಸಿದೆ. ಸೆಲ್ ಫೋನ್‍ಗಳನ್ನು ಬಳಸಿದ್ದ ಹಲವಾರು ಯುವಜನರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಿರುವುದನ್ನು ಹಂಗೇರಿಯ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
ಮೊಬೈಲ್ ಟವರ್‍ನ 400 ಮೀಟರ್‍ಗಳ ಪ್ರದೇಶದಲ್ಲಿರುವವರಲ್ಲಿ ಕ್ಯಾನ್ಸರ್ ಅಪಾಯದ ಸಂಭವನೀಯತೆ ಮೂರು ಪಟ್ಟು ಹೆಚ್ಚಾಗಿರುವುದನ್ನು ಜರ್ಮನಿಯಲ್ಲಿ ನಡೆಸಲಾದ ಸಂಶೋಧನೆಯೊಂದು ತೋರಿಸಿದೆ. ಈ 400 ಮೀ. ಪ್ರದೇಶದಲ್ಲಿ ಮೊಬೈಲ್ ಸಿಗ್ನಲ್‍ಗಳ ಪ್ರಸರಣವು ಇತರ ಕಡೆಗಳಿಂದ 100 ಪಟ್ಟು ಹೆಚ್ಚಾಗಿರುತ್ತದೆ. ಮೊಬೈಲ್ ಫೋನ್ ಟವರ್‍ಗಳಿಂದ ಹೊರಹೊಮ್ಮುವ ವಿಕಿರಣದಿಂದಾಗಿ ಜೇನುನೊಣಗಳ ಸಂಖ್ಯೆ ಶೇ.60ರಷ್ಟು ಕುಸಿದಿದೆ ಎಂದು ಕೇರಳದಲ್ಲಿ ನಡೆಸಲಾದ ಸಂಶೋಧನೆಯೊಂದು ತಿಳಿಸಿದೆ.

ಸೆಲ್ ಫೋನ್ ಟವರ್‍ಗಳ ಸಮೀಪದಲ್ಲಿ ಕಾಗೆಗಳು ಇಡುವಂತಹ ಮೊಟ್ಟೆಗಳು 30ದಿನಗಳ ಬಳಿಕವೂ ಮರಿಗಳಾಗಿಲ್ಲ. ಸಾಮಾನ್ಯವಾಗಿ 10ರಿಂದ 14 ದಿನಗಳಲ್ಲಿ ಮೊಟ್ಟೆಗಳು ಒಡೆದು ಮರಿಗಳು ಹೊರಗೆ ಬರುತ್ತವೆ ಎನ್ನುವುದನ್ನೂ ಅಧ್ಯಯನಗಳು ಸೂಚಿಸಿವೆ. ಪೋನ್ ವಿಕಿರಣಗಳು ಆರೋಗ್ಯಕ್ಕೆ ಯಾವ ರೀತಿಯ ಅಪಾಯಗಳನ್ನು ಉಂಟುಮಾಡಬಹುದೆಂದು ತಿಳಿದರೆ ಅಚ್ಚರಿವುಂಟಾಗದಿರದು. ಮೊಬೈಲ್ ಫೋನ್ ವಿಕಿರಣವು ತಲೆನೋವು, ತಲೆಯೊಳಗೆ ಜುಮ್ಮೆನಿಸುವಿಕೆ, ನಿರಂತರ ಬಳಲಿಕೆ, ತಲೆ ಸುತ್ತುವಿಕೆ, ಖಿನ್ನತೆ, ನಿದ್ರಾಹೀನತೆ, ಮಂಪರು ನಿದ್ರೆ, ಕಣ್ಣಿನ ತೊಂದರೆ, ಏಕಾಗ್ರತೆ ನಷ್ಟ, ಕಿವಿಗಳಲ್ಲಿ ಗಂಟೆ ಬಾರಿಸಿದ ಅನುಭವ, ಶ್ರವಣ ಶಕ್ತಿ ಮತ್ತು ಜ್ಞಾಪಕ ಶಕ್ತಿ ನಷ್ಟ, ಅಜೀರ್ಣ ಸಮಸ್ಯೆ, ಅನಿಯಮಿತ ಹೃದಯಬಡಿತ ಇತ್ಯಾದಿ ನೋವುಗಳಿಗೆ ಕಾರಣವಾಗುತ್ತದೆ.
ಮೊಬೈಲ್ ವಿಕಿರಣವು ಫಲವತ್ತತೆ ನಷ್ಟ, ಕ್ಯಾನ್ಸರ್, ಮೆದುಳು ಟ್ಯೂಮರ್ ಮತ್ತು ಗರ್ಭಪಾತಕ್ಕೂ ಕಾರಣವಾಗುತ್ತವೆ ಎನ್ನುವುದನ್ನು ಸಂಶೋಧನೆಗಳು ತಿಳಿಸಿವೆ.

ನಮ್ಮ ಶರೀರದಲ್ಲಿ ಶೇ.70ರಷ್ಟು ಭಾಗ ನೀರಿದೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ನಮ್ಮ ಮೆದುಳಿನ ಶೇ.90ರಷ್ಟು ಭಾಗವೂ ನೀರೇ ಆಗಿದೆ. ಈ ನೀರು ಕ್ರಮೇಣ ವಿಕಿರಣವನ್ನು ಹೀರಿಕೊಳ್ಳುತ್ತದೆ ಮತ್ತು ಇದು ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವಾಗಿದೆ. ಸದಾಕಾಲ ಮೊಬೈಲ್ ಫೋನ್ ಬಳಸುವವರು ಕ್ಯಾನ್ಸರ್‍ಗೆ ಗುರಿಯಾಗುವ ಸಾಧ್ಯತೆಗಳಿರುತ್ತವೆ ಎಂದು WHO ವರದಿ ತಿಳಿಸಿದೆ.

1,000 ರಿಂದ 3,000 ಮೆಘಾ ಹರ್ಟ್ಸ್ ಸಾಮಥ್ರ್ಯದವರೆಗಿನ ವಿದ್ಯುತ್‍ಕಾಂತೀಯ ಅಲೆಗಳು ಮೈಕ್ರೊವೇವ್ ವಿಕಿರಣವನ್ನುಂಟು ಮಾಡುತ್ತದೆ. ಮೈಕ್ರೊವೇವ್ ಓವನ್, ಏರ್ ಕಂಡೀಷನರ್, ನಿಸ್ತಂತು ಕಂಪ್ಯೂಟರ್, ಕಾರ್ಡ್‍ಲೆಸ್ ಫೋನ್ ಮತ್ತು ಇತರ ವೈರ್‍ಲೆಸ್ ಸಾಧನಗಳೂ ವಿಕಿರಣಗಳನ್ನು ಸೂಸುತ್ತವೆ. ಆದರೆ ಹೆಚ್ಚುತ್ತಿರುವ ಸ್ಮಾರ್ಟ್‍ಫೋನ್ ಮತ್ತು ಮೊಬೈಲ್ ಬಳಕೆಯಿಂದ ಅದರ ಸಾಮೀಪ್ಯದಿಂದಾಗಿ ಮೊಬೈಲ್ ವಿಕಿರಣವು ಶರೀರಕ್ಕೆ ಅತ್ಯಂತ ಅಪಾಯಕಾರಿಯಾಗಿದೆ.
ಆಧುನಿಕತೆ ಮುಂದುವರೆದಂತೆ ನಮ್ಮ ಕೌಟುಂಬಿಕ ಮತ್ತು ಸಾಮಾಜಿಕ ಸಂಬಂಧಗಳು ಸಂಕೀರ್ಣವಾಗಿ ನಾಟಕೀಯತೆ, ಕೃತಕತೆ, ಸಮಯ ಸಾಧಕತನ, ಸ್ವಾರ್ಥಪರತೆ ಇತ್ಯಾದಿಗಳ ವಿಜೃಂಭಣೆಯನ್ನು ಈಗ ಎಲ್ಲೆಲ್ಲೂ ಕಾಣಬಹುದಾಗಿದೆ. ಇದರೊಂದಿಗೆ ಸಾಮಾಜಿಕ ಜಾಲತಾಣಗಳು ಸೇರಿಕೊಂಡು ಕೌಟುಂಬಿಕ ವ್ಯವಸ್ಥೆಯ ಬೇರುಗಳನ್ನು ಅಲುಗಾಡಿಸಲಾರಂಭಿಸಿವೆ ಎಂದರೆ ತಪ್ಪಾಗಲಾರದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಲೈಫ್ ಸ್ಟೈಲ್

ಪಕ್ಷಿ ಪರಿಚಯ | ದರ್ಜಿಹಕ್ಕಿ

Published

on

ಫೋಟೋ : ಭಗವತಿ‌ ಎಂ.ಅರ್
 • ಭಗವತಿ ಎಂ.ಆರ್

“ಟುವ್ವಿ! ಟುವ್ವಿ! ಟುವ್ವಿ! ಟುವ್ವಿ!
ಎಂದು ಹಕ್ಕಿ ಕೂಗಿತು
ಅದರ ಹಾಡು ಬಂದು
ಎನ್ನ ಎದೆಯ ಗೂಡು ತಾಗಿತು” ಕುವೆಂಪುರವರ ಟುವ್ವಿಹಕ್ಕಿಯ ಬಗೆಗಿನ ಕವನ ಪ್ರಸಿದ್ದವಾಗಿದೆ.

ಸದಾ ಚಟುವಟಿಕೆಯ ಹಕ್ಕಿಗಳಲ್ಲಿ ಈ ಸಿಂಪಿಗ ಕೂಡಾ ಒಂದು. ಇದರ ಇನ್ನೊಂದು ಹೆಸರು ದರ್ಜಿಹಕ್ಕಿ. ಕೆಂಪು ಕಣ್ಣು, ಕೆಂಪಿನ ಸುತ್ತ ಕಪ್ಪು ಉಂಗುರ ಮತ್ತು ಬಾಲ ಮತ್ತು ಬೆನ್ನಿನ ಭಾಗ ನಸು ಹಳದಿ, ಅಥವ ಪಾಚಿಯ ಬಣ್ಣ ಎಂದರೆ ಹೆಚ್ಚು ಸೂಕ್ತವಾದೀತು. ಹತ್ತಿರದಿಂದ ನೋಡಿದಾಗ ಇದು ದರ್ಜಿ ಹಕ್ಕಿ ಅಂತ ಕೂಡಲೇ ಗುರುತಿಸಬಹುದು.

ಇಲ್ಲವಾದರೆ ಅದು ಹಾರುವಾಗ, ಓಡಾಡುವಾಗ ಹೆಚ್ಚುಕಮ್ಮಿ ಸುವ್ವಿಯ (Ashy Prinia) ತರವೇ ಕಾಣುತ್ತದೆ. ದೂರದಿಂದ ನೋಡಿದಾಗ ಚಿಟ್ಟೆಯೊಂದು ಹಾರಾಡಿದಂತೆಯೇ ಕಾಣುತ್ತದೆ.  ಇದು ಎಲೆಗಳನ್ನು ಹೊಲಿದು ಜೋಳಿಗೆಯಂತೆ ಮಾಡಿ ಅದರೊಳಗೆ ಗೂಡು ಕಟ್ಟುತ್ತದೆ. ಗೂಡಿನ ಮೆತ್ತನೆಯ ಗಾದಿಯ ಮೇಲೆ ಸಮುದ್ರ ನೀಲಿಯ ಬಣ್ಣದ ಮೇಲೆ ಅಲ್ಲಲ್ಲಿ ಕಪ್ಪು ಕಲೆಗಳಂಥ ಮೊಟ್ಟೆಗಳನಿಡುತ್ತವೆ.

ಬಹು ಸಂಕೋಚದ ಹಕ್ಕಿ ಇದು. ಪೊದೆಗಳ, ಎಲೆಗಳ ನಡುವೆ ಸೇರಿಕೊಂಡರೆ ಕಾಣುವುದು ಕಷ್ಟ. ಹತ್ತಿರದಲ್ಲಿದ್ದಾಗ ಅದರ ದೇಹದ ಕಾಲುಭಾಗ ಮಾತ್ರ ಕಾಣುವುದು. ಎಲೆ ಅಲುಗಾಡಿದಂತಾದಾಗ ನೋಡುವಷ್ಟರಲ್ಲಿ ಹಾರಿ ಹೋಗಿರುತ್ತದೆ. ಮನುಷ್ಯ ಇದನ್ನು ನೋಡಿಯೇ ಹೊಲಿಗೆ ಕಲಿತಿರಬೇಕು.

ದರ್ಜಿಹಕ್ಕಿಯೆಂಬುದು ಇದರ ಅನ್ವರ್ಥನಾಮ. ಸಾಮಾನ್ಯವಾಗಿ ಜನವಸತಿ ಇರುವ ಕಡೆ, ಪೊದೆಗಳಲ್ಲಿ, ಉದ್ಯಾನವನಗಳಲ್ಲಿ ಈ ಹಕ್ಕಿಯನ್ನು ನೋಡಬಹುದು. “ಸಂತೆಯೊಳಗೊಂದು ಮನೆಯ ಮಾಡಿ” ಅಕ್ಕಮಹಾದೇವಿಯ ವಚನವನ್ನು ನೆನೆಪಿಸುತ್ತದೆ ಈ ಪುಟ್ಟಹಕ್ಕಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಬೆರಳುಗಳ ಮೇಲೆ ಬ್ಲೋ ಮಾಡಿ ‘ಬರ್ತಡೇ ಕ್ಯಾಂಡಲ್’..!

Published

on

 • ಚಿತ್ರಶ್ರೀ ಹರ್ಷ

ಹುಟ್ಟಿದ ಹಬ್ಬಕ್ಕೆ  ಕೇಕ್ ಮೇಲೆ ಕ್ಯಾಂಡಲ್ ಅಂಟಿಸಿ, ಕೇಕ್ ಕತ್ತರಿಸಿ, ಸೆಲಿಬ್ರೇಟ್ ಮಾಡುವುದು ಸಾಮಾನ್ಯ. ಆದರೆ ಕೇಕ್ ಮೇಲಿರಬೇಕಿದ್ದ ಬರ್ತಡೇ ಕ್ಯಾಂಡಲ್,  ಮಾನಿನಿಯರ ಕೈಬೆರಳುಗಳಲ್ಲಿ “ಫ್ಲೇಮ್ ನೈಲ್ ಆರ್ಟ್ ” ರೂಪ ತಾಳಿದೆ! ವಿಚಿತ್ರ ಎನಿಸಿದರೂ ಇದು ನೂರರಷ್ಟು ಸತ್ಯ.  ಸದಾ ಎಲ್ಲರಿಗಿಂತ ವಿಭಿನ್ನವಾಗಿರಬೇಕು ಎಂಬ ಗೀಳು ಮೈಗೂಡಿಸಿಕೊಂಡಿರುವ ಯುವಪೀಳಿಗೆಯ ಅನ್ವೇಷಣೆಯೇ ಈ “ಫ್ಲೇಮ್ ನೈಲ್ ಆರ್ಟ್ “.

ಏನಿದು ಫ್ಲೇಮ್ ನೈಲ್ ಆರ್ಟ್? 

ನೋಡೋಕೆ ಒಮ್ಮೆಲೆ ಮೈ ಝಂ ಎನಿಸುವ ಈ ಕ್ರಿಯೇಟಿವ್ ಸ್ಟೈಲ್, ಈಗ ಯುವಪೀಳಿಗೆಯ ಮೋಜಿನ ಸ್ಟೈಲ್ ಸ್ಟೇಟ್ ಮೆಂಟ್ ಆಗಿದೆ. ಮೈ ರೋಮಾಂಚನ ಗೊಳಿಸುವ ಈ ವಿಶಿಷ್ಟ ಕಲೆ , ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ನಿಮ್ಮ ಪ್ರೀತಿ ಪಾತ್ರರ ಬರ್ತಡೇಯನ್ನು ವಿಶೇಷ ರೀತಿಯಲ್ಲಿ ಆಚರಿಸಬಯಸುವವರು ಈ ಫ್ಲೇಮ್ ನೈಲ್ ಆರ್ಟ್ ಟ್ರೆಂಡ್ ಫಾಲೋ ಆಗುತ್ತಿದ್ದಾರೆ.

ಉಗುರಿನ ಮೇಲೆ ನೇಲ್ ಬೇಸ್ ಕೊಟ್ ಹಚ್ಚಿ, ಆರಿದ ನಂತರ, ಸಣ್ಣ 3D ಮಿನಿಯೇಚರ್ ಮೇಣದಬತ್ತಿಯನ್ನ ಕೈ ಬೆರಳುಗಳ ಮೇಲೆ ಅಂಟಿಸುವ ಈ ಟ್ರೆಂಡ್ ಈಗ ಯುವಪೀಳಿಗೆಯ ಪ್ರಮುಖ ಆಕರ್ಷಣೆ ಆಗಿದೆ.

ಅಂತೆಯೇ ಇದೇ ರೀತಿಯ ಹಲವಾರು 3D ಬರ್ತಡೇ ನೈಲ್ ಆರ್ಟ್ ಟ್ರೆಂಡ್ ಆಗುತ್ತಿದ್ದು,  ಬೆರಳ ಮೇಲೆ, (ಎಕ್ಟೆಂಷನ್ ನೈಲ್) ಕೃತಕ ಉಗುರುಗಳು, 3D ಮಿನಿಯೇಚರ್  ಗಳನ್ನು ಬಳಸಿ, ತುದಿಯಲ್ಲಿ ಕ್ಯಾಂಡಲ್ ಸಿಕ್ಕಿಸಲಾಗುತ್ತದೆ.

“ಕೈ ಬೆರಳುಗಳು ಸುಡುವುದಿಲ್ಲವೇ” ? ಎಂಬ ಪ್ರಶ್ನೆಗೆ  ನೈಲ್ ಆರ್ಟ್ ಪ್ರಿಯರಿಗೆ ಉತ್ತರ ಹೀಗಿತ್ತು ನೋಡಿ!.

” ವಿಭಿನ್ನವಾಗಿರಬೇಕು ಅಂದ ಮೇಲೆ ರಿಸ್ಕ್ ತೆಗೆದುಕೊಳ್ಳಲೂ ಸಿದ್ದ ವಿರಬೇಕು”
|ರಿಚಾ ( ಫ್ಯಾಷನ್ ಪ್ರಿಯೆ)

ಇನ್ನು ದಿನದಿನಕ್ಕೂ ಅಫಾಡವಾಗಿ ಬೆಳೆಯುತ್ತಿರುವ ನೈಲ್ ಆರ್ಟ್ ಟ್ರೆಂಡ್ ತನ್ನ ಪುಟ್ಟ ಉಗುರಿನಲ್ಲಿ ಇನ್ನೇನ್ನೇನು ಅಡಗಿಸಿಟ್ಟಿದೆಯೋ ಕಾದು ನೋಡಬೇಕು ಅಷ್ಟೇ.

“ಸೆನ್ಸೇಷನಲ್ ಫ್ಯಾಷನ್  ಕ್ರೇಜ್” ಮತ್ತು  “ವಿಭಿನ್ನತೆ” ಎಂಬ ಮಾಯಾಮೃಗ ದ ಬೆನ್ನತ್ತಿರುವ ಫ್ಯಾಷನ್ ಲೋಕ ಇನ್ನೇನ್ನೇನು ಹೊಸ ಅನ್ವೇಷಣೆ ಹೊರತರುತ್ತದೆಯೋ  ಎಂಬ ಕುತೂಹಲ ಫ್ಯಾಷನ್ ಪ್ರಿಯರದ್ದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಗುಮ್ಮಟನಗರಿಯಲ್ಲೊಂದು ಸುಂದರ ‘ಮತ್ಸ್ಯಲೋಕ’..!

Published

on

ಫೋಟೋ : ಕಾಂಚನಾ ಬಸವರಾಜ ಪೂಜಾರಿ

ನುಷ್ಯನ ಬುದ್ಧಿ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಉಪಯೋಗಿಸುವ ಮೀನುಗಳು ಇದೀಗ ಗುಮ್ಮಟನಗರಿಯ ಜನರನ್ನು ರಂಜಿಸುವ ಅಲಂಕಾರಿಕ ವಸ್ತುವಾಗಿಯು ಪರಿವರ್ತನೆಯಾಗಿವೆ. ಹೌದು ಮೀನು ಪ್ರೀಯರನ್ನು ಕೈ ಬೀಸಿ ಕರೆಯಲೆಂದೆ ಮತ್ಸ್ಯಲೊಂಕದಿಂದ ಮತ್ಸ್ಯಕನ್ಯೆಯರು ಧರೆಗಿಳಿದು ಬಂದು ಗುಮ್ಮಟನಗರಿಯಲ್ಲಿ ಮತ್ಸ್ಯಲೋಕವನ್ನೆ ಸೃಷ್ಠಿಸಿದ್ದಾರೆ.

ವಿಜಯಪುರದ ಡಾ. ಬಿ.ಆರ್.ಅಂಬೇಡ್ಕರ ಕ್ರಿಡಾಂಗಣ ಅಮೀಪದ ಆನ್-ಲೈನ್ ಟ್ರೇಂಡಿಂಗ್ ಸಂಕೀರ್ಣದ ಆವರಣದಲ್ಲಿ ಮೀನುಗಾರಿಕೆ ಇಲಾಖೆ ಆಯೋಜಿಸಿದ್ದ “ಬೃಹತ್ ಮತ್ಸ್ಯ ಮೇಳ 2020”ಯಲ್ಲಿ ನೋಡುಗರ ಕಣ್ಣಿಗೆ ಸಂಭ್ರಮವನ್ನು ಆನಂದಿಸುವಂತೆ ಹಬ್ಬವನ್ನುಂಟು ಮಾಡಿದ್ದವು.

ಮತ್ಸ್ಯ ಮೇಳಕ್ಕೆ ಕೊನೆಯದಿನವಾದ ಜ.14ರಂದು ಜನರಿಂದ ಉತ್ತಮವಾದ ರೀತಿಯಲ್ಲಿ ಸ್ಪಂದನೆ ದೊರೆತಿದೆ. ಹೌದು ಬೆಳಗಿನಿಂದಲೆ ಮತ್ಸ್ಯಕನ್ಯೆಯರನ್ನು ನೋಡಲೆಂದು ಜನರು ತಂಡೊಪ ತಂಡವಾಗಿ ಆಗಮಿಸಿದರು.

ತರಹೇವಾರಿ ಮೀನು

ಮಿಲ್ಕ್ ಮಾರ್ಫ್, ಗ್ರೀನ್‍ಸ್ಕೇಟ್, ರೋಜಿ ಬಾರ್ಬ್, ಪೆನ್ಸಿಲ್ ಟೆಟ್ರಾ, ಪಫರ್, ನಿಯೋನ್ ಟೆಟ್ರಾ, ಸಿಂಗಾಪುರ್ ಗಪ್ಪಿ, ಟೆಟ್ರಾ, ಚೆರ್ರಿ ಬಾರ್ಬ್, ವೆನಿಲ್ಲಾ ಕಾರ್ಫ್, ಹಾಕಿ ಸ್ಟಿಕ್ ಟೆಟ್ರಾ, ಸರ್ಪೆಟೆಟ್ರಾ, ಕೊಯಿಕಾರ್ಪ್, ಆರೆಂಜ್ ಕೊಯಿ, ಆಲ್‍ಬಿನೋ ಗೌರಾಮಿ ಹೆಡ್‍ಗೋಲ್ಡ್, ನಿಯೋನ್ ಟೆಟ್ರಾ, ಗಪ್ಪಿ ಮೀನು, ಆರೇಟಿಸ್, ತಿಲಾಪಿಯ್, ಕಪ್ಪು ಮೋಲಿ.

ಕ್ಲೌನ್ ಬಾರ್ಬ್, ಟೈಗರ್ ಶಾರ್ಕ್, ಸಿಲ್ವರ್ ಶಾರ್ಕ್, ಟೈಗರ್ ಬಾರ್ಬ್, ಕತ್ತಿ ಬಾಲದ ಮೀನು, ಆಲ್ಬಿನೋ ಕ್ಯಾಟ್ ಫಿಶ್, ಸಕ್ಕರ್ ಮೌತ್ ಕ್ಯಾಟ್ ಫಿಶ್, ನೀಲಿ ಮತ್ತು ಹಳದಿ ಮಾಫ, ಬಿಳಿ ಮೋಲಿ, ಗೋಲ್ಡ್ ಫಿಶ್, ಟೈಗರ್ ಬಾರ್ಬ, ಅಲ್ಬನೋ ಶಾರ್ಕ್, ಏಂಜಲ್ ಫಿಶ್(ಗಂಧರ್ವ ಮೀನು).

ಅಬ್ಬಾ ಈ ಮೀನುಗಳ ಹೆಸರು ಹೇಳುವಷ್ಟರಲ್ಲಿ ನನಗೆ ಸುಸ್ತಾಯಿತುರಿ. ಹೀಗೆ ಅನೇಕ ತಳಿಯ ನೂರಕ್ಕೂ ಹೆಚ್ಚು ಬಗೆಯ ದೇಶ-ವಿದೇಶಿಯ ಮೀನುಗಳು ಇಲ್ಲಿ ಒಂದೆ ಸೂರಿನ ಅಡಿಯಲ್ಲಿ ಸೇರಿ ಕಿರಿಯರಿಂದ ಹಿಡಿದು ಹಿರಿಯರವರೆಗೂ ಕೈಬೀಸಿ ಕರೆದು ರಂಜಿಸುತ್ತಿದ್ದವು. ಅಷ್ಟೇ ಅಲ್ಲದೆ ಇವುಗಳಲ್ಲಿ ಮನೆಯಲ್ಲಿ ಸಾಕುವಂತಹ ಮೀನುಗಳು ಸಹ ಪ್ರದರ್ಶನಕ್ಕೆ ಇಡಲಾಗಿತ್ತು.

ಈ ಸುಂದರ ಮೀನುಗಳುಗಳಲ್ಲಿ ವಿಶ್ವ ಪ್ರಸಿದ್ಧಿ ಹೊಂದಿರುವ, ಹಾಗೂ ಅಧಿಕ ಬೆಲೆ ಹೊಂದಿರುವ ಅರವಾನ ಮತ್ತು ಫ್ಲವರ್ ಹಾರನ್ ಮೀನುಗಳನ್ನು ಎಲ್ಲರ ಗಮನ ಸೆಳೆದವು. ಆದರೆ ಇನ್ನೂ ಕೆಲವು ಬೆಲೆಗಳ ಮೂಲಕ ಹುಬ್ಬೆರುಸುವಂತೆ ಮಾಡಿದ್ದವು. ಅವುಗಳಲ್ಲಿ ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂಬಂತೆ ಒಂದು ಸೆ.ಮೀ ಅಳತೆಯ ‘ಡೈಮಂಡ್ ಸ್ಟ್ರಿಂಗ್ ರೆ’ಗೆ ಒಂದು ಲಕ್ಷ ರೂ.

ಇದೆ, ಅದೇ ಐದು ಸೆ.ಮೀ ಗೆ ಐದು ಲಕ್ಷ ರೂ ಇದೆ, ಅದೆ ಒಂದುವರೆ ಕೆ.ಜಿ 20ಲಕ್ಷ ರೂ ಇದೆ. ‘ಅಲಿಗೇಟರ್‍ಗಾರ್’ ಎಂಬ ಮೀನಿಗೆ 2 ಲಕ್ಷ ರೂ, ‘ಲಿಯೋ ಪಾರ್ಡ್ ಡಿಸ್ಕಸ್’ ಮೀನಿಗೆ 1ಲಕ್ಷ ರೂ, ಚೀನಾದ ವಾಸ್ತುಮೀನು ‘ಪ್ಲವರ್ ಹಾರ್ನ್’ ಬೆಲೆ 70 ಸಾವಿರ ರೂ, ಹೀಗೆ ಅನೇಕ ಮೀನುಗಳು ಬೆಲೆಗಳ ಮೂಲಕ ಜನರನ್ನು ಆಕರ್ಷಣೆ ಮಾಡಿದವು ಇನ್ನು ಕೆಲವು ರಂಗು ರಂಗಾದ ಬಣ್ಣದಿಂದ ಮಕ್ಕಳನ್ನು ಆಕರ್ಷಣೆ ಮಾಡಿದವು. ಇದರ ಜೊತೆಗೆ ಮಕ್ಕಳು ಆಟವಾಡುತ್ತಾ ನಕ್ಕು ನಲಿದರು, ಹಾಗೂ ಯುವಜನರು ಸೆಲ್ಫಿ ಕ್ಲಿಕಿಸಿ ಸಂಭ್ರಮಿಸಿದರು.

ಜಿಲ್ಲೆಯ ಮೀನುಗಾರಿಕೆ ಇಲಾಖೆಯ ಯೋಜನೆಗಳು

 • ಮೀನುಗಾರಿಕೆ ಮೂಲಭೂತ ಸೌಲಭ್ಯಗಳ ನಿರ್ಮಾಣ ಮತ್ತು ನಿರ್ವಹಣೆ.
 • ಸಾರ್ವಜನಿಕ ವೀಕ್ಷಣೆಗಾಗಿ ಮುದ್ದು ಮೀನು ಸಂಗ್ರಹಾಲಯ ನಿರ್ವಹಣೆ.
 • ಉಚಿತ ಮೀನುಮರಿಗಳ ಹಂಚಿಕೆಯಿಂದ ರೈತರ ಸ್ವಂತ ಜಮೀನುಗಳಲ್ಲಿ ಸಣ್ಣ ಪ್ರಮಾಣದ ಜಲ ಮೂಲಗಳಲ್ಲಿ ಮೀನು ಉತ್ಪಾದನೆಗೆ ಉತ್ತೇಜನೆ ಮಾಡುವುದು.
 • ಮೀನು ಬಲೆ ಮತ್ತು ಹರಿಗೋಲನ್ನು ಉಚಿತವಾಗಿ ನೀಡುವುದು.
 • ಮತ್ಸ್ಯವಾಹಿನಿ ಯೋಜನೆಯಡಿ ಸಹಾಯಧನ ರೂಪದಲ್ಲಿ ಮೀನು ಮಾರಾಟ ಸಲಕರಣೆ ವಿತರಣೆ
 • ಕೆರೆಗಳಲ್ಲಿ ಬಿತ್ತನೆ ಮಾಡುವ ಮೀನುಮರಿಗಳಿಗೆ ಸಹಾಯಧನ
 • ನಿರ್ವಸತಿ ಮೀನುಗಾರರಿಗೆ ಮತ್ಸ್ಯ ಆಶ್ರಯ ಯೋಜನೆಯ ಅಡಿಯಲ್ಲಿ ವಸತಿ ಹೊಂದಲು ಧನ ಸಹಾಯ ಕಲ್ಪಸುವುದು
 • ಜಲಾಶಯ ಮತ್ತು ನದಿ ಮೀನುಗಾರರಿಗೆ ಜೀವ ರಕ್ಷಕ ಸಾಧನಗಳ ವಿತರಣೆ
 • ಸ್ವಂತ ಜಮೀನಿನಲ್ಲಿ ದೊಡ್ಡ ಪ್ರಮಾಣದ ಕೃಷಿ ಹೊಂಡಗಳನ್ನು ನಿರ್ಮಿಸಿ ಸುಧಾರಿತ ಮೀನುಗಾರಿಕೆ ಮಾಡಲು ಸಹಾಯಧನ ಕಲ್ಪಿಸುವುದು
 • ರಾಷ್ಟ್ರೀ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ನೆರವಿಂದ ಜಲಾಶಯಗಳ ಮೀನುಗಾರಿಕೆ ಅಭಿವೃದ್ಧಿ ಹಾಗೂ ತರಬೇತಿ, ವಿಸ್ತರಣೆ ಮತ್ತು ಸಂಶೋಧನೆ ನಡೆಸುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 08352-255734
ಮೀನುಗಾರಿಕೆ ಸಹಾಯಕ ನಿರ್ದೇಶಕ ವಿಜಯಪುರ: 9480822974
ಮೀನುಗಾರಿಕೆ ಸಹಾಯಕ ನಿರ್ದೇಶಕ ಮುದ್ದೇಬಿಹಾಳ: 9480822975

ಅಭಿಪ್ರಾಯಗಳು

 • ಈ ಮೀನುಗಳನ್ನು ದೇಶ ವಿದೇಶಗಳಿಂದ ತರಲಾಗಿದೆ. ಸಾರ್ವಜನಿಕರಿಂದ ಉತ್ತಮ ರೀತಿಯಲ್ಲಿ ಪ್ರತಿಕ್ರೀಯೆ ಸಿಕ್ಕಿದೆ. ಮೀನುಗಳನ್ನು ಶಿವಮೊಗ್ಗ, ಮೈಸುರು, ಬೆಂಗಳೂರು, ಮಂಗಳೂರು, ಅಮೇರಿಕಾ, ಆಸ್ಟ್ರೇಲಿಯಾ, ಹೀಗೆ ಅನೇಕ ದೇಶಗಳಿಂದ ಲಕ್ಷಾಂತರ ಹಣ ಬಂಡವಾಳ ಹಾಕಿ ಇವುಗಳನ್ನು ಇಲ್ಲಿವರೆಗೆ ಆಮ್ಲಜನಕದ ಸಹಾಯದಿಂದ ತಂದಿದ್ದೇವೆ.

| ದಯಾನಂದ ಬಜೆಂತ್ರಿ
ಕ್ಷೇತ್ರಪಾಲಕ ಮೀನುಗಾರಿಗೆ ಇಲಾಖೆ ವಿಜಯಪುರ

 • ನಾನು ಈ ರೀತಿಯ ಮೀನುಗಳನ್ನು ವಿದೇಶದಲ್ಲಿ ನೋಡಿದ್ದೆ. ಅಂಟ್ಲಾಟಿಕಾದಲ್ಲಿ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಜಲವಿಹಾರಕ್ಕೆ ಹೋದಾಗ ಕೈಯಲ್ಲಿ ಹಿಡಿದ್ದು ಸಂಭ್ರಮ ಪಟ್ಟಿದೆ. ಈಗ ಅದೆ ಅನುಭವ ಇಲ್ಲಿ ಮತ್ತೊಂದು ಬಾರಿ ಅನುಭವಿಸಿದೆ. ಮೀನುಗಾರಿಕೆ ಇಲಾಖೆಯವರು ಇಂತಹ ದೊಡ್ಡ ಪ್ರಮಾಣದಲ್ಲಿ ಮತ್ಸ್ಯ ಮೇಳ ಏರ್ಪಡಿಸಿರುವುದರಿಂದ ಎಲ್ಲರ ಜ್ಞಾನವು ಹೆಚ್ಚಿಸಿಕೊಳ್ಳಬಹುದು, ಹಾಗೂ ಮೀನುಗಳಲ್ಲಿ ಎಷ್ಟು ವಿಧಗಳು ಇದೆ ಎಂಬುದು ತಿಳಿದು ತಮ್ಮ ಮಕ್ಕಳಿಗೆ ತಿಳಿಸುವಲ್ಲಿ ಅನುಕೂಲವಾಗಿದೆ.

|ಶೋಭಾ ನಾಯಕ (ಸಾರ್ವಜನಿಕರು)

ಕಾಂಚನಾ ಬಸವರಾಜ ಪೂಜಾರಿ
3ನೇ ಸೇಮಿಸ್ಟರ್ ವಿದ್ಯಾರ್ಥಿನಿ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಕರ್ನಾಟಕ ರಾಜ್ಯ ಅಕ್ಕಮಾಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ
ವಿಜಯಪುರ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending