Connect with us

ದಿನದ ಸುದ್ದಿ

ಉತ್ತಮ ಇಳುವರಿ, ಒಳ್ಳೆಯ ಲಾಭ ಶೇಂಗಾ ಬೆಳೆಯ ಬೇಸಾಯ ಕ್ರಮಗಳು : ಮಿಸ್ ಮಾಡ್ದೆ ಓದಿ

Published

on

ಸುದ್ದಿದಿನ,ದಾವಣಗೆರೆ: ಪ್ರಸ್ತುತ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಬಿತ್ತನೆ ಪೂರ್ವ ಉಳುಮೆ ಕಾರ್ಯ ಮುಗಿದಲ್ಲಿ, ಮಣ್ಣಿನ ತೇವಾಂಶದ ಹದ ನೋಡಿ ಶೇಂಗಾ ಬಿತ್ತನೆ ಮಾಡಬಹುದಾಗಿದೆ. ಶೇಂಗಾ ಒಂದು ಪ್ರಮುಖ ದ್ವಿದಳ ಎಣ್ಣೆಕಾಳು ಬೆಳೆಯಾಗಿದ್ದು, ಎಲ್ಲಾ ರೀತಿಯ ಹವಾಗುಣಕ್ಕೂ ಹೊಂದಿಕೊಳ್ಳುವ ಗುಣ ಹೊಂದಿದ್ದು, ಎಲ್ಲಾ ರೀತಿಯ ಮಣ್ಣಿನಲ್ಲೂ ಬೆಳೆಯಬಹುದಾಗಿದೆ.

ಸುಧಾರಿತ ಬೇಸಾಯ ಕ್ರಮಗಳು ಹಾಗೂ ಆಯಾ ಪ್ರದೇಶಕ್ಕೆ ಹೊಂದಿಕೊಳ್ಳುವಂತಹ ತಳಿಗಳ ಆಯ್ಕೆಯನ್ನು ರೈತರು ಅಳವಡಿಸಿಕೊಂಡಲ್ಲಿ ಉತ್ತಮ ಇಳುವರಿಯ ಜೊತೆಗೆ ಒಳ್ಳೆಯ ಲಾಭ ಪಡೆಯಬಹುದಾಗಿದೆ.

2020 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 13,285 ಹೆಕ್ಟೇರ್ ಪ್ರದೇಶದಲ್ಲಿ ನೆಲಗಡಲೆ ಬೆಳೆಯುವ ಗುರಿ ಹೊಂದಲಾಗಿದ್ದು, ಜಗಳೂರು, ಹೊನ್ನಾಳಿ, ನ್ಯಾಮತಿ, ದಾವಣಗೆರೆ ಭಾಗದಲ್ಲಿ ಬೆಳೆಯಲಾಗುವುದು.

ಬಿತ್ತನೆ ಕಾಲ

ಮುಂಗಾರು ಮಳೆಯಾಶ್ರಿತ ನೆಲಗಡಲೆಯನ್ನು ಮೇ ತಿಂಗಳ ಎರಡನೇ ವಾರದಿಂದ ಜುಲೈ ತಿಂಗಳ ಎರಡನೇ ವಾರದೊಳಗೆ ಬಿತ್ತನೆ ಮಾಡಬಹುದು.

ಸುಧಾರಿತ ತಳಿಗಳ ಆಯ್ಕೆ: ತಳಿಗಳು

ಟಿ.ಎಂ.ವಿ-2, ಜಿ.ಪಿ.ಬಿ.ಡಿ-4 & 5, ಜಿ-252, ಕೆ-6. ಪ್ರಮಾಣಿತ ಬಿತ್ತನೆ ಬೀಜವನ್ನು ಪ್ರತಿ ಮೂರು ಹಂಗಾಮಿನಲ್ಲೊಮ್ಮೆ ಬಳಸಬೇಕು. ಪ್ರಮಾಣಿತ ಬಿತ್ತನೆ ಬಳಸಿದ ಮಾದರಿ ಬೆಳೆ ತಾಕಿನಿಂದ ಬಿತ್ತನೆ ಬೀಜ ಆಯ್ಕೆ ಮಾಡಬಹುದಾಗಿದೆ.

ಬೀಜೋಪಚಾರ

ಬೀಜ ಬಿತ್ತನೆ ಮಾಡುವ ಮೊದಲು ಪ್ರತಿ ಕಿ.ಗ್ರಾಂ ನೆಲಗಡಲೆ ಬೀಜಕ್ಕೆ 2.5 ಗ್ರಾಂ ಥೈರಾಮ್ ಪುಡಿಯನ್ನು ಬೆರಸಿ, ನೆರಳಿನಲ್ಲಿ ಒಣಗಿಸಬೇಕು, ನಂತರ ಒಂದು ಎಕರೆ ಬಿತ್ತನೆ ಬೀಜಕ್ಕೆ 150 ಗ್ರಾಂ ರೈಜೋಬಿಯಂ & 400 ಗ್ರಾಂ. ಪಿ.ಎಸ್.ಬಿ. ಜೈವಿಕ ಗೊಬ್ಬರಗಳನ್ನು ಅಂಟು ದ್ರಾವಣ ಬಳಸಿ ಉಪಚರಿಸಿ ಬಿತ್ತನೆಗೆ ಬಳಸಬೇಕು.

ಗೊಣ್ಣೆ ಹುಳು – ಗೆದ್ದಲು ಹುಳುಗಳ ಬಾಧೆ ಇದ್ದಲ್ಲಿ ಕಿ.ಗ್ರಾಂ ಬಿತ್ತನೆ ಬೀಜಕ್ಕೆ 15 ಮಿ.ಲೀ. ಕ್ಲೊರೋಫೈರಿಫಾಸ್‍ನ್ನು ಬೀಜಕ್ಕೆ ಹಾನಿಯಾಗದಂತೆ ಲೇಪಿಸಿ ಬಿತ್ತನೆ ಮಾಡುವುದು. ಬೀಜೋಪಚಾರದ ಸಮಯದಲ್ಲಿ ಮೊದಲು ಕೀಟನಾಶಕದಿಂದ ಉಪಚರಿಸಿ ನಂತರ ಜೈವಿಕ ಗೊಬ್ಬರದಿಂದ ಉಪಚರಿಸಬೇಕು.

ಬೀಜ ಪ್ರಮಾಣ – ಅಂತರ

ಪ್ರತಿ ಎಕರೆಗೆ 45 ಕಿ.ಗ್ರಾಂ ಬಿತ್ತನೆ ಬೀಜವನ್ನು 30 ಸೆಂ.ಮೀ x 15 ಸೆಂ.ಮೀ ಅಂತರದ ಸಾಲಿನಲ್ಲಿ ಬಿತ್ತ ಬಹುದಾಗಿದೆ.

ಅಂತರ ಬೆಳೆ

ಶೇಂಗಾ ಬೆಳೆಯಲ್ಲಿ 4 ರಿಂದ 6 ಸಾಲಿಗೆ ಒಂದು ಸಾಲು ತೊಗರಿ ಬೆಳೆಯಬಹುದು. ಇಡಿ ಶೇಂಗಾ ಬೆಳೆ ಬಿತ್ತನೆ ಮಾಡುವಾಗ ಕೊತ್ತುಂಬರಿ, ಹೆಸರು, ಅಲಸಂದೆ, ಉದ್ದು, ನವಣೆ, ಸಾಸುವೆ ಬೆಳೆಗಳನ್ನು ಶೇಂಗಾ ಸಾಲಿನಲ್ಲಿಯೇ ಮಿಶ್ರ ಬೆಳೆಯಾಗಿ ಬೆಳೆಯುವುದರಿಂದ ಉತ್ಪಾದಕತೆ ಮತ್ತು ಆದಾಯ ಹೆಚ್ಚಿಸಬಹುದಾಗಿದೆ.

ಪೋಷಕಾಂಶ ನಿರ್ವಹಣೆ

ಭೂಮಿಯನ್ನು ಚೆನ್ನಾಗಿ ಹದ ಮಾಡಿದ ನಂತರ ಶಿಫಾರಸ್ಸು ಮಾಡಿದ 4 ಟನ್ ಸಾವಯವ ಗೊಬ್ಬರವನ್ನು ಬಿತ್ತನೆಗೆ 2-3 ವಾರ ಮೊದಲು ಬಿತ್ತನೆ ಸಮಯದಲ್ಲಿ ಬಳಸಬೇಕು ಹಾಗೂ ರಸಾಯನಿಕ ಗೊಬ್ಬರಗಳಾದ 10 ಕಿ.ಗ್ರಾಂ

ಸಾರಜನಕ

20 ಕಿ.ಗ್ರಾಂ ರಂಜಕ, 10 ಕಿ.ಗ್ರಾಂ ಪೊಟ್ಯಾಷ್‍ನ್ನು ಬಿತ್ತನೆ ಸಮಯದಲ್ಲಿ ಹಾಕುವುದು.ಎಕರೆಗೆ 4 ಕಿ.ಗ್ರಾಂ ಸತುವಿನ ಸಲ್ಫೇಟ್ ಹಾಗೂ 4 ಕಿ.ಗ್ರಾಂ ಬೋರಾಕ್ಸ್‍ನ್ನು ಸಾವಯವ ಗೊಬ್ಬರಗದೊಂದಿಗೆ ಮಿಶ್ರಣ ಮಾಡಿ ಬಿತ್ತುವ ಸಂದರ್ಭದಲ್ಲಿ ಎರಚಬೇಕು.

ಸಾಮಾನ್ಯವಾಗಿ ರೈತರು ಸಾರಜನಕ, ರಂಜಕ, ಪೊಟ್ಯಾಷ್ ಗೊಬ್ಬರವನ್ನು ಬಳಸುತ್ತಾರೆ. ಆದರೆ ಎಣ್ಣೆಕಾಳು ಬೆಳೆಯಾದ ನೆಲಗಡಲೆಗೆ ಕ್ಯಾಲ್ಸಿಯಂ ಮತ್ತು ಗಂಧಕದ ಅವಶ್ಯಕತೆ ಅಗತ್ಯವಾಗಿರುವುದರಿಂದ ರೈತ ಬಾಂಧವರು ಇತರೆ ಗೊಬ್ಬರಗಳ ಜೊತೆಗೆ ಜಿಪ್ಸಂನ್ನು ಬೆಳೆಗೆ ಪೂರೈಸುವುದು ಅತ್ಯವಶ್ಯಕವಾಗಿದೆ. ಇದರಿಂದಾಗಿ ಕಾಯಿ ಗಟ್ಟಿಯಾಗುವಿಕೆ, ಎಣ್ಣೆ ಅಂಶ ಜಾಸ್ತಿಯಾಗುವುದರಿಂದ ಜೊಳ್ಳು ಬೀಜಗಳು ಕಡಿಮೆಯಾಗಿ ಶೇ. 18 ರಿಂದ 20 ರಷ್ಟು ಇಳುವರಿ ಹೆಚ್ಚಾಗುವುದು.

ಬಿತ್ತನೆ ಸಮಯದಲ್ಲಿ ಎಕರೆಗೆ 2 ಕ್ವಿಂಟಾಲ್ ಜಿಪ್ಸಂ ಅನ್ನು ಸಾಲಿನ ಮಧ್ಯೆ ಹಾಕುವುದು. ಅಥವಾ 40 ರಿಂದ 45 ದಿನದ ಬೆಳೆಗೆ / ಹೂ ಬಿಡುವ ಹಂತದ ಸಮಯದಲ್ಲಿ 2 ಸಾಲುಗಳ ಮಧ್ಯೆ ಹಾಕಿ ಎಡೆ ಹೊಡೆಯುವುದು. ಮೂಟೆ ಲೆಕ್ಕದಲ್ಲಿ ರಸಗೊಬ್ಬರ ಬಳಸದೇ ಮಣ್ಣು ಪರೀಕ್ಷೆ ಆಧಾರದ ಮೇಲೆ ರಸಗೊಬ್ಬರ ಬಳಸಬೇಕು. ರಸಗೊಬ್ಬರಗಳನ್ನು ಅಧಿಕೃತ ಮಾರಾಟಗಾರರಿಂದ ನಿಗಧಿತ ಬಿಲ್ಲು ಪಡೆದು ಖರೀದಿಸಬೇಕು.

ಕಳೆ ನಿರ್ವಹಣೆ

ಬಿತ್ತಿದ ದಿವಸ – ಮಾರನೆ ದಿವ ಎಕರೆಗೆ 1 ಲೀಟರ್ ಅಲಾಕ್ಲೋರ್ 50 ಇ.ಸಿ. ಅಥವಾ 800 ಮು.ಲೀ.ಮೆಟಾಲ್‍ಕ್ಲೋರ್ 50 ಇ.ಸಿ. ಕಳೆನಾಶಕವನ್ನು 300 ಲೀ. ನೀರಿನಲ್ಲಿ ಬೆರಸಿ ಸಿಂಪರಣೆ ಮಾಡಬೇಕು. ಸಿಂಪರಣೆ ಸಮಯದಲ್ಲಿ ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿರಬೇಕು.

ಅಂತರ ಬೇಸಾಯ

ಬಿತ್ತಿದ 15 ದಿವಸಗಳ ನಂತರ, 10 ದಿವಸಗಳ ಅಂತರದಲ್ಲಿ 3 ಬಾರಿ ಕುಂಟೆ ಹಾಯಿಸಬೇಕು. ಯಾವುದೇ ಕಾರಣಕ್ಕೂ ಬಿತ್ತಿದ 45 ದಿವಸಗಳ ನಂತರ ಕುಂಟೆ ಹಾಯಿಸಬಾರದು ಎಂದು ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ| ಇಸ್ಪೀಟ್ ಆಡಿ ಸಿಕ್ಕಿಬಿದ್ದ ಶಿಕ್ಷಣ ಇಲಾಖೆಯ 7 ಸಿಬ್ಬಂದಿ ಅಮಾನತು

Published

on

ಸುದ್ದಿದಿನ, ದಾವಣಗೆರೆ: ಕೊರೊನಾ ಕರ್ತವ್ಯಕ್ಕೆ ನಿಯೋಜಿಸಿದ್ದಾಗ ಇಸ್ಪೀಟ್ ಜೂಜಾಟ ಆಡಿ ಸಿಕ್ಕಿ ಬಿದ್ದಿದ್ದ ದಾವಣಗೆರೆ ಉತ್ತರವಲಯದ ಬಿಇಓ ಕಚೇರಿಯ ಏಳು ಜನ ಸಿಬ್ಬಂದಿಯನ್ನು ಶಿಕ್ಷಣ ಇಲಾಖೆ ಆಯುಕ್ತ ಡಾ. ಕೆ ಜಿ ಜಗದೀಶ್ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಉತ್ತರವಲಯದ ಆದೀಕ್ಷಕ ಹೆಚ್.ಎಸ್ ಬಸವರಾಜ, ಪ್ರಥಮ ದರ್ಜೆ ಸಹಾಯಕ ಎಂ ಸುಧಾಕರ್, ದ್ವಿತೀಯ ದರ್ಜೆ ಸಹಾಯಕ ಕೊಟ್ರೋಶ್ ಸೇರಿದಂತೆ ಏಳು ಜನರನ್ನು ಅಮಾನತು ಮಾಡಲಾಗಿದೆ. ಒಂದು ತಿಂಗಳ ಹಿಂದೆ ಲಾಕ್ ಡೌನ್ ಸಮಯದಲ್ಲಿ ಇಸ್ಪೀಟ್ ಆಡುವಾಗ ಸಿಕ್ಕಿ ಬಿದ್ದಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಎಸ್ ಎಸ್ ಎಲ್ ಸಿ ಪರೀಕ್ಷೆ, ಜಿಲ್ಲೆಯಲ್ಲಿ 1150 ಕೊಠಡಿ ವ್ಯವಸ್ಥೆ ; ಒಂದು ಕೊಠಡಿಯಲ್ಲಿ 18 ವಿದ್ಯಾರ್ಥಿಗಳಿಗೆ ಅವಕಾಶ : ಡಿಡಿಪಿಐ ಪರಮೇಶ್ವರಪ್ಪ

Published

on

ಸುದ್ದಿದಿನ,ದಾವಣಗೆರೆ: ಸರ್ಕಾರದ ಆದೇಶದಂತೆ ಜೂ.25 ರಿಂದ ಜು.4 ರವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸಬೇಕು ಎಂದು ನಿರ್ಧರಿಸಿದ್ದೆವೇ. ಜಿಲ್ಲೆಯಲ್ಲಿ ಒಟ್ಟು 435 ಸರ್ಕಾರಿ ಶಾಲೆಗಳಿದ್ದು, 1150 ಕೊಠಡಿಗಳ ವ್ಯವಸ್ಥೆ ಇದೆ, ಒಂದು ಕೊಠಡಿಯಲ್ಲಿ 18 ವಿದ್ಯಾರ್ಥಿಗಳಿ ಮಾತ್ರ ಪರೀಕ್ಷೆ ಬರೆಯಲು ಅವಕಾಶವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪರಮೇಶ್ವರಪ್ಪ ಹೇಳಿದರು.

ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಮಂಗಳವಾರ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಪೂರ್ವ ಸಿದ್ಧತೆಗಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ಸಭೆಯಲ್ಲಿ ಅವರು ಮಾತನಾದರು.

ಜಿಲ್ಲೆಯಲ್ಲಿ ಒಟ್ಟು 20.927 ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿದ್ದಾರೆ. ಅದರಲ್ಲಿ 10.311 ಗಂಡು ಮಕ್ಕಳು ಹಾಗೂ 10.616 ಹೆಣ್ಣು ಮಕ್ಕಳು ಇದ್ದಾರೆ. ವಿದ್ಯಾರ್ಥಿಗಳು ಭಯ ಪಡದ ರೀತಿಯಲ್ಲಿ ಪತ್ರಿಕೆಗಳಲ್ಲಿ ಫೋನ್ ಇನ್ ಕಾರ್ಯಕ್ರಮ ನಡೆಸಲಾಗಿದೆ, ಮತ್ತು ಚಂದನ ವಾಹಿನಿಯ ಪುನರ್ ಮನನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿ ಸಮಸ್ಯೆಗೆ ಪರಿಹಾರ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ನಡೆಸಲು ಸಭೆಯಲ್ಲಿ ತಿರ್ಮಾನಿಸಲಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಥರ್ಮಲ್ ಸ್ಕ್ರೀನಿಂಗ್ ನಡೆಸಿ ನಂತರ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗುತ್ತದೆ. ಸ್ಕೌಟ್ ಅಂಡ್ ಗೈಡ್ಸ್‍ನವರು ವಿದ್ಯಾರ್ಥಿಗಳಿಗೆ ಒಟ್ಟು 22.000 ಮಾಸ್ಕ್‍ಗಳ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದರು.

ಪರೀಕ್ಷಾ ಕೇಂದ್ರ

  1. ಪ್ರತಿ ಪರೀಕ್ಷಾ ಕೇಂದ್ರಗಳಿಗೆ ತಲಾ ಇಬ್ಬರು ಆರೋಗ್ಯ ಕಾರ್ಯಕರ್ತರ ನಿಯೋಜನೆ.
  2. ಕಂಟೈನ್‍ಮೆಂಟ್ ಜೋನ್ ಪ್ರದೇಶದಲ್ಲಿರುವ ಮಕ್ಕಳಿಗೆ ಪೂರಕ ಕೊಠಡಿ ನಿಯೋಜನೆ.
  3. ಕಂಟೈನ್‍ಮೆಂಟ್ ಜೋನ್ ಪ್ರದೇಶದ ವಿದ್ಯಾರ್ಥಿಗಳಿಗೆ ಎನ್-95 ಮಾಸ್ಕ್ ವಿತರಣೆ.
  4. ಪ್ರತಿ 200 ವಿದ್ಯಾರ್ಥಿಗಳಿಗೆ ಒಂದು ಥರ್ಮಲ್ ಸ್ಕ್ರೀನಿಂಗ್ ಯಂತ್ರ.
  5. ಪರೀಕ್ಷೆ ಬರೆಯುವ ಎಲ್ಲಾ ಮಕ್ಕಳಿಗೆ 2 ಮಾಸ್ಕ್ ವಿತರಣೆ.
  6. ಪ್ರತಿ ಒಂದು ಕೊಠಡಿಗೆ 18 ರಿಂದ 20 ವಿದ್ಯಾರ್ಥಿಗಳು.
  7. ಯಾವುದೇ ವಿದ್ಯಾರ್ಥಿ ಕ್ವಾರಂಟೈನ್‍ಲ್ಲಿದ್ದರೆ ಅವರಿಗೆ ಮುಂದಿನ ಆಗಸ್ಟ್ ತಿಂಗಳಲ್ಲಿ ನಡೆಯುವ ಪೂರಕ ಪರೀಕ್ಷೆಯಲ್ಲಿ ಹೊಸ ವಿದ್ಯಾರ್ಥಿ ಎಂದು ಪರಿಗಣಿಸಿ ಅವಕಾಶ ನೀಡಲಾಗುವುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

Published

on

ಸುದ್ದಿದಿನ,ದಾವಣಗೆರೆ: ಸಫಾಯಿ ಕರ್ಮಚಾರಿಗಳು, ಮ್ಯಾನುಯಲ್ ಸ್ಕ್ಯಾವೆಂಜರ್‍ಗಳು ಹಾಗೂ ಅವರ ಅವಲಂಬಿತ ಕುಂಟುಬದ ಸದಸ್ಯರಿಗೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮದಿಂದ ಅನುಷ್ಟಾನಗೊಳಿಸುತ್ತಿರುವ ಸ್ವಯಂ ಉದ್ಯೋಗ, ಸಮೃದ್ದಿ, ಉನ್ನತಿ, ಪ್ರೇರಣಾ, ಐರಾವತ, ಸ್ಪೂರ್ತಿ, ಪ್ರಬುದ್ದ, ಗಂಗಾ ಕಲ್ಯಾಣ ಹಾಗೂ ಭೂ ಒಡೆತನ ಯೋಜನೆಯಡಿ ಸಾಲ ಸೌಲಭ್ಯ ಕಲ್ಪಿಸಲು 2019-20ನೇ ಸಾಲಿಗೆ ಅರ್ಹ ಫಲಾಪೇಕ್ಷಿಗಳಿಂದ ಆನಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು.

ಈ ಹಿಂದೆ ಅರ್ಜಿ ಸಲ್ಲಿಸಲು ಮೇ 30 ಕಡೆಯ ದಿನವೆಂದು ನಿಗದಿಪಡಿಸಲಾಗಿತ್ತು. ಕೋವಿಡ್-19 ಸಾಂಕ್ರ್ರಾಮಿಕ ರೋಗ ನಿಯಂತ್ರಿಸುವ ಸಲುವಾಗಿ ಸರ್ಕಾರವು ಕೈಗೊಂಡಿದ್ದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸುವ ಅವಧಿಯನ್ನು ಇದೀಗ ಜೂನ್ 30 ರವರೆಗೆ ವಿಸ್ತರಿಸಲು ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮದವರು ಸೂಚಿಸಿರುವ ಮೇರೆಗೆ ಅರ್ಹ ಫಲಾನುಭವಿಗಳು ಅರ್ಜಿಗಳನ್ನು ಜೂ.30 ರ ಒಳಗೆ www.kssds.kar.nic.in ಆನ್‍ಲೈನ್‍ನಲ್ಲಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮ, ಪಿ.ಬಿ ರೋಡ್, #337/16-16, ಗಣೇಶ ಲೇ ಔಟ್ 1ನೇ ಕ್ರಾಸ್, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ ಇಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending