Connect with us

ಲೈಫ್ ಸ್ಟೈಲ್

ನಾಡಿಗೆ ಬಂದ ಕಾಡುಕೋಣ..!

Published

on

ಸಾಂದರ್ಭಿಕ ಚಿತ್ರ
 • ಪಶುವೈದ್ಯರುಗಳ ಪೇಷಂಟುಗಳು ಬರೀ ದನ, ಎಮ್ಮೆ, ಕೋಳಿ,ಕುರಿ, ಆಡು, ನಾಯಿ, ಬೆಕ್ಕು, ಕೋಳಿ, ಹಂದಿ ಇತ್ಯಾದಿಗಳಿಗೆ ಸೀಮಿತವಾಗಿರದೆ ಮೊಲ, ಇಲಿ, ಕೋತಿ, ಆಮೆ, ಹುಲಿ, ಸಿಂಹ, ಒಂಟೆ, ಆನೆ, ಚಿರತೆ, ಹಾವು , ನರಿ, ಜಿಂಕೆ, ಕಡಿವೆ ಇತ್ಯಾದಿ ತರಹೇವಾರಿ ವನ್ಯಜೀವಿಗಳ ಚಿಕಿತ್ಸೆ ಮತ್ತು ಜೀವನ ಕ್ರಮದ ಬಗ್ಗೆಯೂ ತಿಳಿದುಕೋಂಡಿರಬೇಕಾಗುತ್ತದೆ. ಕೆಲವೊಮ್ಮೆ ಈ ಪ್ರಾಣಿಗಳನ್ನು ಚಿಕಿತ್ಸೆ ಮಾಡುವಾಗ ಸಾಕಷ್ಟು ಅಪಾಯವೂ ಕಾದಿರುತ್ತದೆ. ಗಾಯಗೊಂಡ ಕಾಡುಕೋಣವೊಂದರ ಚಿಕಿತ್ಸೆಯ ರೋಚಕ ಅನುಭವ.

ಡಾ. ಎನ್.ಬಿ.ಶ್ರೀಧರ

ನಿವಾರವೊಂದರ ಮಧ್ಯಾಹ್ನ 11 ಘಂಟೆಯಿರಬಹುದು. ಆ ದಿನ ತಾಳಗುಪ್ಪದಲ್ಲಿ ಸಂತೆ. ಆಸ್ಪತ್ರೆಯಲ್ಲಿ ಗಿಜಿಗುಟ್ಟುವಷ್ಟು ಜನ ಮತ್ತು ತರಹೆವಾರಿ ಕೇಸುಗಳು. ಹುಳವಾಗಿ ಗಬ್ಬು ನಾರುವ ಗಾಯದಿಂದ ಹಿಡಿದು ಸಂತಾನಹರಣ ಚಿಕಿತ್ಸೆಗೆಂದು ಕಾಯುತ್ತಿರುವ ಪಕ್ಕದ ತಾಲೂಕು ಸೊರಬದ ಶ್ವಾನಗಳ ಸವಾರಿ ಕ್ಯೂನಲ್ಲಿತ್ತು. ಒಳರೋಗಿಗಳಾಗಿ ಮಾಡಿಕೊಂಡ ಕೆಲವು “ಪೇಷಂಟು”ಗಳ ಚಿಕಿತ್ಸೆಯೂ ಕಾದಿತ್ತು. ನಾನೇ ಪ್ರಯೋಗಕ್ಕೆಂದು ತಂದು ಸಂಶಯಿತ ವಿಷಗಿಡಗಳನ್ನು ತಿನ್ನಿಸುಸುತ್ತಿರುವ ಕರುಗಳ ಗುಂಪಿತ್ತು. ಮನೆಗೆ ಚಿಕಿತ್ಸೆಗೆ ಕರೆದಿರುವ “ಟೂರಿಂಗ್ ಪೇಷಂಟು”ಗಳ ಪಟ್ಟಿಯೂ ಸಹ ಬೆಳೆಯುತ್ತಿತ್ತು.

ಅಷ್ಟರಲ್ಲೇ ನನ್ನ ಶಿಷ್ಯ “ಸಾರ್..ಡಿ ಎಪ್ ಓ ಅವರು ಲೈನಿನಲ್ಲಿದ್ದಾರೆ. ಗರಂ ಆಗಿದಾರೆ.. ನಿಮ್ಮ ಜೊತೆ ಮಾತಾಡಬೇಕಂತೆ “ ಎಂದ. ಯಾವುದೋ ಕಾಡು ಕೋಣವೋ ಅಥವಾ ಹುಲಿ ಸಿಂಹ, ಜಿಂಕೆ ಇತ್ಯಾದಿ ವನ್ಯೃಗಗಳು ಕಾಡಿನಲ್ಲಿ ಸತ್ತಿರಬೇಕು. ಮರಣೋತ್ತರ ಪರೀಕ್ಷೆ ಮಾಡಲು ಕರೆಯುತ್ತಿದ್ದಾರೆ. ಈ ದಿನ ಹಳ್ಳ ಹಿಡಿಯಿತು. ದೇಶದ ಆರ್ಥಿಕತೆಗೆ ನಮ್ಮ ಹಸು ಎಮ್ಮೆಗಳಂತೆ ಒಂದಿನಿತೂ ಕೊಡುಗೆ ನೀಡದ, ಕರದಾತರು ಕಷ್ಟಪಟ್ಟು ನೀಡಿದ ಹಣವನ್ನು ಜೀವವೈವಿಧ್ಯದ ಸಂರಕ್ಷಣೆಯ ಹೆಸರಿನಲ್ಲಿ ನುಂಗಿ ನೀರು ಕುಡಿಯುತ್ತಿರುವ ಅಧಿಕಾರಿಗಳ ಗುಂಪೊಂದರ ಪುನರ್ವಸತಿಯಾಗಿ ಕೇಂದ್ರವಾಗಿ ಮಾರ್ಪಟ್ಟ ಇಲಾಖೆಯೆಂದು ನನ್ನ ಮಿತ್ರ ಹೇಳುವ ಅರಣ್ಯ ಇಲಾಖೆಯ ಯಾವುದೋ ಕಾಡು ಪ್ರಾಣಿ ಸತ್ತರೆ ಎಲ್ಲ ಕೆಲಸ ಬದಿಗೊತ್ತಿ ಅದರ ಕೊಳೆತು ಹೋದ ಶವಪರೀಕ್ಷೆಗೆ ಇಲ್ಲಿಂದ ಹೋಗಬೇಕಾದ ಅನಿವಾರ್ಯತೆಯನ್ನು ಶಪಿಸುತ್ತಾ ಫೋನು ಎತ್ತಿದೆ. ಆಕಡೆಯಿಂದ “ ಡಾಕ್ಟ್ರೇನ್ರಿ.. ಎಷ್ಟೊತ್ರಿ ಬರೋದು? ನಾನು ಸಾಗರ ಡಿಎಪ್ಪೋ ಕಣ್ರೀ… ತುಮರಿ ಹತ್ರ ಕಾಡುಕೋಣ ಅಡಿಕೆ ತೋಟದಲ್ಲಿ ಮನೆ ಮಾಡಿ ಬಿಟ್ಟಿದೆ.. ಅದ್ಕೆ ಒಂದಿಷ್ಟು ಚಿಕಿತ್ಸೆ ಆಗ್ಬೇಕಿತ್ತು.. ತುಮರಿಗೆ ಬೇಗ ಬಂದ್ಬಿಡಿ.. ಈ ಪೇಪರ್ರಿನವರು ತಲೆ ತಿಂತಾ ಇದ್ದಾರೆ” ಎಂದು ಅವರ ಅಧಿಕಾರಿ ಗತ್ತಿನಲ್ಲೇ ಗಾರ್ಡು ಫಾರೆಸ್ಟರುಗಳಿಗೆ ನೀಡುವಂತೆ ಆದೇಶ ನೀಡಿದರು.

ಇದೊಳ್ಳೆ ಕಥೆಯಾಯ್ತಲ್ಲ !! ದನದ ಚಿಕಿತ್ಸೆ ಬಿಟ್ಟು ಈ ಕಾಡುಕೋಣದ ಚಿಕಿತ್ಸೆಗೆ ಹೋಗ್ಬೇಕಲ್ಲ ? ಎಲ್ಲೋದ್ರು ಈ ಕಾಡುಪ್ರಾಣಿ ಡಾಕ್ಟರುಗಳು? ಎಂದು ಪರಿಚಿತರಾದ ಅರಣ್ಯ ಇಲಾಖೆಯ ಸ್ನೇಹಿತ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಫೋನಾಯಿಸಿದೆ. ಅದರ ಪ್ರವರ ತಿಳಿಯಿತು.

“ಅಡಿಕೆ ತೋಟದಲ್ಲಿ ಮನೆ ಮಾಡಿದ ಕಾಡುಕೋಣ” “ಕಾಡಿನಿಂದ ನಾಡು ಸೇರಿದ ಕಾಡುಕೋಣ” ಇತ್ಯಾದಿ ಶಿರ್ಷಿಕೆಯ ಸುದ್ಧಿಗಳು ದಿನಪತ್ರಿಕೆಗಳಲ್ಲಿ ಬರತೊಡಗಿದ ಮೇಲೆಯೇ ನಮಗೆ ಗೊತ್ತಾಗಿದ್ದು ಕಾಡುಕೋಣವೊಂದು ತುಮರಿ ಭಾಗದ ಹೆಗಡೆಯೊಬ್ಬರ ತೋಟ ಸೇರಿ ಅಲ್ಲಿಯೇ ಠಿಕಾಣಿ ಹೂಡಿದೆ ಎಂದು. ಸಾಮಾನ್ಯವಾಗಿ ನಮ್ಮ ಜಾನುವಾರುಗಳ ಜಂಜಾಟದಲ್ಲಿಯೇ ಮುಳುಗಿಹೋಗುವ ನಾವು ಆಗೆಲ್ಲ ಕಾಡುಪ್ರಾಣಿಗಳ ಚಿಕಿತ್ಸೆಗೆ ಹೋಗುವುದು ಕಡಿಮೆಯಾಗಿತ್ತು. ಅದಕ್ಕೆಂದೇ ಶಿವಮೊಗ್ಗದಲ್ಲಿ ಅರಣ್ಯ ಇಲಾಖೆಯಲ್ಲಿರುವ ಇರುವ “ಆನೆ ಡಾಕ್ಟರು” ಹುಲಿ ಸಿಂಹ” ಡಾಕ್ಟರುಗಳಾದ ವನ್ಯಜೀವಿ ಪಶುವೈದ್ಯರು ಬಂದು ಏನೇನು ಬೇಕೋ ಅದೆಲ್ಲಾ ಕ್ರಮ ತೆಗೆದುಕೊಳ್ಳುತ್ತಿದ್ದರು.

ಅದರೆ ಆಗ ವನ್ಯಜೀವಿ ತಜ್ಞ ಪಶುವೈದ್ಯರು ದೂರದೂರಿನಲ್ಲಿ ಪುಂಡ ಕಾಡಾನೆಗಳು ಊರು ನುಗ್ಗಿ ದಾಂಧಲೆ ಎಬ್ಬಿಸಿದ್ದರಿಂದ ಅವುಗಳ ತರಲೆ ನಿಲ್ಲಿಸಿ ಖೆಡ್ಡಾಕ್ಕೆ ಕೆಡವಲು ನಾಡಾನೆಗಳನ್ನು ತೆಗೆದುಕೊಂಡು ಹೋಗಿ ಕೊಡಗಿನ ಹತ್ತಿರ ಯಾವುದೇ ಹಳ್ಳಿಯಲ್ಲಿ ಕಳೆದು ೧೫ ದಿನಗಳಿಂದ ಬೀಡು ಬಿಟ್ಟಿದ್ದು ಅವರು ಬಂದು ಈ ಕಾಡು ಪ್ರಾಣಿಯ ಚಿಕಿತ್ಸೆ ಮಾಡುವವರೆಗೆ ದಿನನಿತ್ಯ ಕಾಟಕೊಡುವ ದಿನಪತ್ರಿಕೆಗಳಿಂದ ಬಚಾವಾಗಲು ಡಿಎಪ್ಪೋ ನನಗೆ ಫೋನಾಯಿಸಿದ್ದಾರೆಂದೂ, ಸಾಗರ ಪಶುವೈದ್ಯ ಆಸ್ಪತ್ರೆಯ ಪಶುವೈದ್ಯರೆಲ್ಲ ತುಮರಿ ಏರಿಯಾವು ನನ್ನ ವ್ಯಾಪ್ತಿಯಲ್ಲಿ ಬರುವುದರಿಂದ ನನಗೆ ತಿಳಿಸಲು ಸೂಚಿಸಿದ್ದಾರೆಂದೂ ತಿಳಿಯಿತು.

ಸರಿ ನಮ್ಮಾಸ್ಪತ್ರೆಯಿಂದ ಯಾವ ರೂಟಿನಲ್ಲೇ ಹೋದರು 60-70 ಕಿಲೋಮೀಟರು ಇರುವ ತುಮರಿಗೆ ಹೋಗಲು ಎಲ್ಲಾ ಚಿಕಿತ್ಸಾ ಪರಿಕರಗಳನ್ನು ಸಿದ್ಧ ಮಾಡಿಕೊಳ್ಳಲು ನನ್ನ ಶಿಷ್ಯನಿಗೆ ತಿಳಿಸಿದೆ. ಕಾಡು ಪ್ರಾಣಿಗಳಿಗೆ ಅರಿವಳಿಕೆ ನೀಡುವ ಡಾರ್ಟ್ ಗನ್ನು ಇಲ್ಲವೆಂದೂ, ಕಾಡೆಮ್ಮೆ (ಕಾಡು ಕೋಣ?), ಮೈಮೇಲೆ ಬಂದರೆ ಕಷ್ಟವಿದೆಯೆಂದೂ ಯಾವುದಕ್ಕೂ ಮನೆಗೆ ಹೋಗಿ ತಿಳಿಸಿ ಬರುವೆನೆಂದೂ ನನ್ನ ಶಿಷ್ಯ ಮನೆಗೆ ಹೊರಟ.

ತುಮರಿ, ಬ್ಯಾಕೋಡು, ಕಾರ್ಗಲ್ಲು, ಶಿರವಂತೆ, ಅರಳಗೋಡು, ಕೊಂಜವಳ್ಳಿ, ಸೈದೂರು ಇತ್ಯಾದಿ ಈಗ ಆಸ್ಪತ್ರೆಯಾಗಿರುವ ಸುಮಾರು 90ಕಿಲೋಮೀಟರ್ ವ್ಯಾಪ್ತಿಯ ವಿಸ್ತಾರ ಪ್ರದೇಶಗಳಿಗೆ ಏಕೈಕ ತಜ್ಞ ಪಶುವೈದ್ಯನಾದ ನಾನು ಈ ಭಾಗದಲ್ಲಿ ಯಾವುದೇ ನಾಡು ಅಥವಾ ಕಾಡು ಪ್ರಾಣಿಗಳಿಗೆ ತೊಂದರೆಯಾದರೂ ಮರಣೋತ್ತರ ಪರೀಕ್ಷೆ ಅಥವಾ ಚಿಕಿತ್ಸೆ ನೀಡುವ ಮಹತ್ತರ ಜವಾಬ್ದಾರಿ ಹೊತ್ತು ಕೊಂಡಿದ್ದೆ.

ಎಂದಿನಂತೆ ನನ್ನ ಸುಜ಼ುಕಿ ಸವಾರಿ ನನ್ನ ಶಿಷ್ಯನ ಜೊತೆ ತುಮರಿ ಕಡೆ ಹೊರಟಿತು. ಸಾಗರ ಸೇರಿ ಸಾಗರದಿಂದ ಹೊಳೆಬಾಗಿಲಿನ ಬಾರ್ಜು ದಾಟಿ ಇನ್ನೂ 25 ಕಿಮಿ ಅಂಕು ಡೊಂಕಾದ ರಸ್ತೆಗಳಲ್ಲಿ ಸಾಗಿ ಕಾಡುಕೋಣದ ವಿಷಯ ಕೇಳುತ್ತಾ ಸಾಗಿದೆವು. ಗಮನದ ಹಳ್ಳಿ ತಲುಪಿ ಅಲ್ಲಿ ಹೆಗ್ಡೇರ ತೋಟದಲ್ಲಿ ಗಮಯದ ಜಾಡು ಹಿಡಿದು ಸಾಗಿದೆವು. ಬೈಕಿನಲ್ಲಿ ಸಾಗಿ ಸಾಗಿ ಬೇಸರ ಎಷ್ಟೊತ್ತಿಗಪ್ಪಾ ಈ ಊರು ಬರುತ್ತೆ ಎನ್ನುವಷ್ಟರಲ್ಲಿ ಗಮಯದ ಉಗಮ ಸ್ಥಾನ ಬಂತು.

ಗಮಯದ ಸುತ್ತ ಜನವೋ ಜನ. ಕೆಲವು ಅರಣ್ಯ ಇಲಾಖೆ ಸಿಬ್ಬಂದಿ ಜಮೆಯಾಗಿ ಅವರ ಅಮೂಲ್ಯ ವಸ್ತುವಿನ ರಕ್ಷಣೆ ಮಾಡುತ್ತಿದ್ದರು. ಒಂದೆರಡು ಪೋಲೀಸ್ ಸಿಬ್ಬಂದಿಯೂ ಸಹ ಜನರ ಬೀಡು ಕಡಿಮೆ ಮಾಡಲು ಹರ ಸಾಹಸ ಪಡುತ್ತಿದ್ದರು. ಹೋಯ್.. ಹೋಯ್… ಡಾಕ್ಟ್ರು ಬಂದ್ರು .. ದಾರಿ ಬಿಡಿ” ಎನ್ನುವ ಆಜ್ಞೆ ಪೋಲೀಸರಿಂದ ಬಂದು ಎಲ್ಲಾ ಜನರಿಂದ ನಾನೇ ಫ಼ೋಕಸ್ಸಾದೆ. ಕಾಡು ಕೋಣವನ್ನು ಸುಮಾರು ೧೫ ಅಡಿ ದೂರದಿಂದ ನೋಡಿದೆ. ಬಿಳಿಯ ಪಟ್ಟಿಯ ಕುತ್ತಿಗೆ, ಕಟ್ಟು ಮಸ್ತಾದ ದೇಹ, ರಾಜಗಾಂಭೀರ್ಯದಲ್ಲಿ ಇರಬೇಕಾದ ಕಾಡುಕೋಣ ಲಾಚಾರ್ ಎದ್ದು ಬಡ್ಕಾಟೆ ಹೆಣದಂತೆ ಹಿಂಡಿ ನೀಡದೇ ಇರುವ ಏಳಲು ಸಾಧ್ಯವಾಗದ ಮುದಿ ಎಮ್ಮೆಯಾಗಿ ಹೋಗಿತ್ತು. ಆದರೂ ಅದರ ಸ್ಥಿತಿ ಗಮನಿಸಲು ಸ್ವಲ್ಪ ಹತ್ತಿರ ಹೋದರೆ ಬುಸ್ ಎಂದು ಶಬ್ಧ ಮಾಡುತ್ತಾ ಏರಿ ಬಂತು.

ಸರಿಯಾಗಿ ಗಮನಿಸಿದಾಗ ಮುಂದಿನ ಬಲಗಾಲಿನ ಮೇಲ್ಬಾಗ ಉಬ್ಬಿದಂತೆ ಕಂಡು ಬಂತು. ಇದರ ಚಿಕಿತ್ಸೆ ಮಾಡದೇ ಇದ್ದರೆ ಸತ್ತು ಹೋಗುವುದು ಗ್ಯಾರಂಟಿ ಅನ್ನಿಸಿತು. ಅರಣ್ಯ ಇಲಾಖೆಯವರಿಗೆ “ ಈ ಕೋಣನ್ನ ಹೇಗಾದ್ರೂ ಹಿಡಿದು ಕೊಟ್ರೆ, ಅದಕ್ಕೆ ಅರಿವಳಿಕೆ ಚುಚ್ಚುಮದ್ದು ನೀಡಿ ಏನಾದರೂ ಮಾಡಬಹುದು. ನಮ್ಮ ಹತ್ತಿರ ಅರಿವಳಿಕೆಯನ್ನು ದೂರದಿಂದಲೇ ನೀಡುವ “ಡಾರ್ಟ್ ಗನ್” ಇರದೇ ಇರುವುದರಿಂದ ಯಾವುದೇ ಕ್ಷಣದಲ್ಲಿ ಕಾಡು ಕೋಣ ನುಗ್ಗಿದರೆನಾಮಾವಶೇಷವಾಗುವ ಸಾಧ್ಯತೆ ಇತ್ತು. ಅದು ಕೃಷವಾಗಿರುವುದನ್ನು ಗಮನಿಸಿದರೆ ಅದಕ್ಕೆ ಗಂಭೀರವಾದ ಕಾಯಿಲೆ ಇರುವುದು ಗ್ಯಾರಂಟಿಯಾಗಿತ್ತು. ಚಿಕಿತ್ಸೆ ಮಾಡದೇ ಇದ್ದರೆ ಸತ್ತು ಯಮಪುರಿ ಸೇರಿ ಖಾಯಂ ಆಗಿ ಯಮನ ವಾಹನ ಆಗುವ ಸಾಧ್ಯತೆ ಇತ್ತು.

ನನ್ನ ಶಿಷ್ಯ ಖಾಯಂ ಎಮ್ಮೆಗಳನ್ನು ಕೆಡಗಿ ಅಭ್ಯಾಸ ಇದ್ದಾತ. ಆತ “ ಸಾರ್.. ಒಂದು ಕೈ ನೋಡಿಯೇ ಬಿಡ್ಲಾ ಸಾರ್.. ಕಾಡುಕೋಣ ಹ್ಯಾಂಗಿದ್ರೂ ಬಡಕಲಾಗಿದೆ. ನಮ್ಮ ಎಮ್ಮೆಗಳಷ್ಟೇ ತಾಕತ್ತು ಇರ್ಬಹುದು, ಹಗ್ಗ ಹಾಕಿ ಕೆಡವಿ ಬಿಡ್ತೀನಿ “ ಎಂದು ಹುಂಬ ಧೈರ್ಯ ತೋರಿದ. ನಾನು ಮಾತ್ರ ಈ ರಿಸ್ಕ್ ತೆಗೆದುಕೊಳ್ಳಲು ಸುತರಾಂ ಸಿದ್ದವಿರಲಿಲ್ಲ. ಎಲ್ಲಾದರೂ ನಮ್ಮ ಅಂದಾಜು ತಪ್ಪಿ ಈ ಕಾಡುಕೋಣ ನುಗ್ಗಿ ಯಾರನ್ನಾದರೂ ಕೆಡಗಿ ಕೊಂದರೆ ಯಾರು ಜವಾಬ್ದಾರರರು? ಎಂದು “ ಈ ಕಾಡು ಪ್ರಾಣಿ ಸಹವಾಸ ಸಾಕಪ್ಪಾ.. ಅದರ ಡಾಕ್ಟರುಗಳು ಬಂದು ಏನಾದರೂ ಮಾಡ್ಲಿ. ನಮ್ಮಿಂದ ದನ ಆರಾಮವಾದ್ರೆ ಸಾಕು” ಎಂದು ರಾಗ ಎಳೆದೆ. ಆದರೂ ವೃತ್ತಿಯ ತುಡಿತ ಇದೆಯಲ್ಲ.. ಏನಾದರೂ ಮಾಡಲೇ ಬೇಕು. ಸುತ್ತ ಮುತ್ತ ಸೇರಿದ ಜನ ಎಲ್ಲಾ ತರಹೇವಾರಿ ಕಾಮೆಂಟು ಪಾಸು ಮಾಡಲಿಕ್ಕೆ ಪ್ರಾರಂಭಿಸಿದರು.

ಅವರೊಲ್ಲಬ್ಬ “ಇವರು ದನಕ್ಕೆ ಮಾತ್ರ ಡಾಕ್ಟರು. ಎಮ್ಮೆ ಮುಕಳಿ ಒಳಗೆ ಕೈ ಹಾಕಿ ಇನ್ಸೆಮಿನೇಷನ್ ಮಾಡೋದು ಮಾತ್ರ ಇವರಿಗೆ ಕಲ್ಸಿರ್ತಾರೆ. ಈ ಕಾಡುಕೋಣದ ಟ್ರೀಟ್ಮೆಂಟಿಗೆಲ್ಲಾ ಮೈಸೂರಿನಿಂದ ಎಕ್ಸ್ಪರ್ಟ್ಸ್ ಬರ್ಬೇಕು. ಸುಮ್ನೇ ಟೈಮ್ ಪಾಸಿಗೆ ಬಂದಿದ್ದಾರೆ. ಅದ್ರ ಜೊತೆ ಈ ಫ಼ಾರೆಸ್ಟ್ ಖಾತೆ ಜನಾ ಬೇರೆ ದಂಡ” ಎಂದು ನನ್ನ ವೃತ್ತಿಯ ಘನತೆಯನ್ನು ಮೂರುಕಾಸಿಗಿಳಿಸಿ ನಿವಾಳಿಸಿ ಬಿಸಾಡಿದ ಹಾಗೂ ಫ಼ಾರೆಸ್ಟು ಇಲಾಖೆಯವರು ಕಳ್ಳ ನಾಟಾ ಮಾಡುತ್ತಿದ್ದ ಕೆಲ ಹಳ್ಳಿಯ ಜನರನ್ನು ಕುಂಡೆಯ ಮೇಲೆ ಹಾಕಿ ಕಟಕಟೆ ಒಳಗೆ ಹಾಕಿದ ಹಳೆ ಸೇಡು ತೀರಿಸಿಕೊಂಡ. ಹಳ್ಳಿಯಲ್ಲಿ ರಾತ್ರಿ ,10 ಘಂಟೆಗೆ ಕರು ಅಡ್ಡ ಸಿಕ್ಕಿಹಾಕಿಕೊಂಡಾಗ ಎಣ್ಣೆಯ ಮತ್ತನ್ನು ಏರಿಸಿಕೊಂಡವರಿಂದ ಈ ತರಹದ ಮಾತು ಕೇಳಿ ಅಭ್ಯಾಸವಾಗಿ ಹೋದ ನಾನು ಇದನ್ನು ಸೀರಿಯಸ್ ಆಗಿ ತೆಗೆದುಕೊಳ್ಳಲೇ ಇಲ್ಲ. ಆದರೆ ನನ್ನ ಶಿಷ್ಯನಿಗೆ ಮಾತ್ರ ನಖಶಿಖಾಂತ ಕೋಪ ಬಂದಿತ್ತು.

ಆತ “ಸಾರ್. ಏನೂ ತೊಂದರೆ ಇಲ್ಲದಂತೆ ಅದನ್ನು ಕೆಡಗಿ ಕೊಡ್ತೀನಿ ಸಾರ್. ಇಂಜೆಕ್ಷನ್ ಹಾಕಿ ಅನೇಸ್ಠೇಸಿಯಾ ಕೊಟ್ಟು ಕೆಲಸ ಮಾಡಿ.. ಫ಼ಾರೆಸ್ಟ್ ಡಿಪಾರ್ಟ್ಮೇಂಟಿನವರೂ ಸಹಾಯ ಮಾಡ್ತಾರೆ” ಅಂದ. ಅಷ್ಟು ಹೊತ್ತು ನಮ್ಮ ಪರಿಪಾಟಲು ನೋಡಿ ಮಜಾ ತಗಳ್ತಿದ್ದ ಅರಣ್ಯ ಇಲಾಖೆಯ ಗಾರ್ಡು ಫ಼ಾರೆಸ್ಟರುಗಳೂ ಜನರ ಮಾತಿನಿಂದ ರೇಗಿ ಏನಾದರೂ ಮಾಡಲೇಬೇಕೆಂಬ ತೀರ್ಮಾನಕ್ಕೆ ಬಂದಾಗಿತ್ತು, ಅವರು ನಾಟಾ ಸಾಗಿಸಲು ಕಳ್ಳ ಸಾಗಣೆಗೆ ಉಪಯೋಗಿಸುತ್ತಿದ್ದ ಸೀಜ಼್ ಮಾಡಿದ ದಪ್ಪನೇ ಹಗ್ಗ ತಂದರು.

ಅದನ್ನು ಎಂಟತ್ತು ಅಡಿಕೆ ಮರದ ಸುತ್ತ ಕಟ್ಟಿ ಕಾಡು ಕೋಣ ಹಗ್ಗದ ಕೋಟೆ ಒಳಗೆ ಭದ್ರವಾಗುವಂತೆ ದಿಗ್ಭಂಧನ ಹಾಕಿದರು. ಕಾಡುಕೋಣ ಇರುವ ಜಾಗದ ಸುತ್ತ ಗೂಟದ ಬೇಲಿ ರೆಡಿಯಾಗಿ ಅಕ್ಷರಷ: ಕೊರೋನಾ ಪೀಡಿತರನ್ನು ಕ್ವಾರಂಟೈನಿನೊಳಗೆ ಹಾಕಿದ ಹಾಗೇ ಲಾಕ್ ಮಾಡಿದರು. ಆದರೆ ಕೋಣಕ್ಕೆ ಅನೇಶ್ಥೆಸಿಯಾ ಇಂಜೆಕ್ಷನ್ ಚುಚ್ಚಬೇಕಲ್ಲ. “ಯಾರಾದ್ರೂ ಬಂದು ಇದನ್ನು ಮಾಂಸದಲ್ಲಿ ತೂರಿಸ್ರೋ” ಎಂದು ಸಿರಿಂಜಿನಲ್ಲಿ ತಕ್ಕ ಪ್ರಮಾಣದ ಅನೇಸ್ಥೆಸಿಯಾ ಚುಚ್ಚುಮದ್ದು ಲೋಡ್ ಮಾಡಿ ನೀಡಲು ಹೋದೆ. ಯಾರೂ ಮುಂದೆ ಬರಲಿಲ್ಲ.

ಒಂದು ಉಪಾಯ ಹೊಳೆಯಿತು. ನಾವು ನಿರ್ಮಿಸಿದ ಕೋಟೆಯೊಳಗೆ ಒಂದಿಷ್ಟು ಮುರುಗಲು ಮತ್ತು ಕೋಕೋ ಗಿಡಗಳಿದ್ದವು. ಅವುಗಳ ಮೇಲೆ ಹತ್ತಿ ಕುಳಿತರೆ ಮತ್ತು ಕಾಡುಕೋಣವನ್ನು ಅಲ್ಲಿಗೆ ನಿಧಾನವಾಗಿ ಚಲನೆಯಾಗುವಂತೆ ನೋಡಿಕೊಂಡರೆ ಅದಕ್ಕೆ ಕಚಕ್ ಎಂದು ಇಂಜೆಕ್ಷನ್ ಚುಚ್ಚಿಬಿಡುವ ಎಂದುಕೊಂಡೆ. ಆದರೆ ಇಲ್ಲಿ ತುಂಬಾ ರಿಸ್ಕ್ ಇತ್ತು. ಆದರೆ ಮೊದಲೇ ಗಾಯಾಳು ಕೋಣ, ಖಂಡಿತಾ ರೋಷ ಭರಿತವಾಗಿರುತ್ತದೆ. ಏನಾದರೂ ಹೆಚ್ಚುಕಮ್ಮಿ ಆಗಿ ಆಯ ತಪ್ಪಿದರೆ ಅದರ ಮೇಲೆಯೇ ಬೀಳುವ ಸಾಧ್ಯತೆ ಇತ್ತು. ಬಿದ್ದರೆ ತುಳಿದು ಖಂಡಿತಾ ತುಳಿದು ಯಮಪುರಿಗೆ ಕಳಿಸುತ್ತಿತ್ತು.

ಯಾರಿಗಾದರೂ ಮರ ಹತ್ತಿ ಅದು ಕೆಳಗೆ ಬಂದೊಡೆ ಇಂಜೆಕ್ಷನ್ ಚುಚ್ಚಿ ಎಮ್ದರೆ ಎಲ್ಲರೂ ಹೆದರು ಪುಕ್ಕಲರೆ. ಮತ್ತೆ ಕೆಲವರು ಹೊಟ್ಟೆ ಹೊತ್ತ ದಡೂತಿಗಳು. ಅಲ್ಲಿ ಇರುವವರಲ್ಲಿ ನಾನೇ ತೆಳ್ಳಗಿರುವವ. ಏನಾದರಾಗಲಿ ಎಂದು ಅನಸ್ಥೆಸಿಯಾವನ್ನು ತುಂಬಿಸಿದ ಸಿರಿಂಜ್ ಕೈಲಿ ಹಿಡಿದು ಅದು ನೇರವಾಗಿ ಕೆಳಗೆ ಬರಬಹುದಾದ ಕೋಕೋ ಗಿಡದ ಮೇಲೆ ಏರಿದೆ. ಕಾಡುಕೋಣವನ್ನು ಮರದ ಕೆಳಗೆ ಬಂದು ನಿಲ್ಲುವಂತೆ ಬೆದರಿಸಲು ಸೂಚಿಸಿದೆ.

ಹಲವು ರೌಂಡ್ ಕಾರ್ಯಾಚರಣೆಯ ನಂತರ ಯಾವುದೋ ಗಳಿಗೆಯಲ್ಲಿ ಕಾಡು ಕೋಣ ನಾನು ಮೇಲೆ ಇದ್ದ ಕೊಂಬೆಯ ಕೆಳಗೆ ಬಂದು ನಿಂತಿತು. ಇದೇ ಅವಕಾಶವೆಂದು ಅದರ ಹಿಂಬಾಗದ ಪ್ರಷ್ಠದ ಮೇಲೆ ಸೂಜಿಯ ಸಮೇತ ಸಿರಿಂಜ್ ಚುಚ್ಚಿ ಸರಕ್ಕನೇ ಔಷಧಿ ಸೇರಿಸಿದೆ. ಆಯ ತಪ್ಪಿ ಕೆಳಗೆ ಬಿದ್ದ ಹೊಡೆತಕ್ಕೆ ಕಾಡುಕೋಣದ ಎದುರು ಅಂಗಾತ ಬಿದ್ದೆ. ಇನ್ನೇನು ಕಾಡುಕೋಣ ನನ್ನನ್ನು ತಿವಿಯಬೇಕು.. ನೋಡ್ತೀನಿ .. ಏನೂ ಶಬ್ಧ ಇಲ್ಲ.

ನಾನು ಕೊಟ್ಟ ಅರಿವಳಿಕೆಯ ಪ್ರಭಾವದಿಂದ ಕಾಡುಕೋಣ ಧರಾಶಾಯಿಯಾಗಿತ್ತು.
ಕೂಡಲೇ ನನ್ನ ಶಿಷ್ಯ ಮತ್ತು ಅರಣ್ಯ ಇಲಾಖೆಯವರು ಕಾಡುಕೋಣವನ್ನು ನಾಡುಕೋಣ ಕಟ್ಟಿದಂತೆ ಹಗ್ಗದಿಂದ ಏಳದಂತೆ ಕ್ಷಣಮಾತ್ರದಲ್ಲಿ ಬಂಧಿಸಿದರು. ಕಾಡುಕೋಣದ ಮುಂಗಾಲಿನ ಮೇಲ್ಬಾಗದಲ್ಲಿ ಕೀವಿನಿಂದ ಕೂಡಿದ ಗಡ್ಡೆಯಿತ್ತು. ಸಾವಧಾನವಾಗಿ ಅದನ್ನು ಓಪನ್ ಮಾಡಿದಾಗ ಟಕ್ ಎಂದು ಅದರೊಳಗಿದ್ದ ಬುಲೆಟ್ ಹೊರಬಂತು. ಯಾರೋ ದುರುಳರು ಮಾಂಸದಾಸೆಗೆ ಕಾಡುಕೋಣಕ್ಕೆ ಗುಂಡು ಹೊಡೆದಾಗ ಅದು ಮಾಂಸದಲ್ಲಿ ಕಚ್ಚಿಕೊಂಡು ಅಲ್ಲಿ ಕೀವುಂಟುಮಾಡಿದೆ ಎಂದು ತಿಳಿಯಿತು.

ಕೀವು ಬಸಿದು ಹೋಗುವ ಹಾಗೇ ಮಾಡಿ ಅದರೊಳಗೆ ಟಿಂಚರ್ ಆಯೋಡಿನ್ ಯುಕ್ತ ಭಟ್ಟೆಯನ್ನಿರಿಸಿ ಸುತ್ತಲೂ ಮುಲಾಮು ಹಚ್ಚಿದೆ. ಅವಶ್ಯಕ ನಂಜುನಿವಾರಕಗಳು, ನೋವು ನಿವಾರಕಗಳು ಹಾಗೂ ಜೀವನಿರೋಧಕದ ಚುಚ್ಚುಮದ್ದು ನೀಡಿದೆ. ಕಾಡುಕೋಣ ಬಹಳ ಬಡಕಲುಗೊಂಡಿತ್ತು. ಬಹುಶ: ಕೀವಿನ ನೋವಿನ ಬಾಧೆಯಿಂದ ಇರಬಹುದೇನೋ? ಕಾಡು ಕೋಣ ನಾಡಿಗೆ ಆಶ್ರಯಕ್ಕೆ ಬಂದಿದೆ.ತೋಟದಲ್ಲಿ ಸುಲಭವಾಗಿ ಸಿಗುವ ಹಲಸಿನ ಹಣ್ಣು ಇತ್ಯಾದಿ ತಿಂದು ಸೆಟ್ಲ್ ಆಗಿದೆ ಎಂದು ಗೊತ್ತಾಯ್ತು. ಎಲ್ಲ ಕೆಲಸ ಮುಗಿಸಿ, ಅದರ ತಿಲಕಾಷ್ಠ ಮಹಿಷ ಬಂಧನ ಬಿಡಿಸಿ ದೂರ ಬಂದೆವು. ಕೋಟೆಯಂತೆ ಮಾಡಿದ ಹಗ್ಗದ ಬಿಗಿತವನ್ನೂ ಸಡಿಲ ಗೊಳಿಸಿದೆವು. ಸುಮಾರು ಮುಕ್ಕಾಲು ಘಂಟೆಗೆ ಕಾಡುಕೋಣಕ್ಕೆ ಪ್ರಜ್ಞೆ ಬಂತು. ಓಲಾಡುತ್ತಾ ಏಳಲು ಪ್ರಯತ್ನಿಸಿತು. ಸ್ವಲ್ಪ ಹೊತ್ತಿಗೆ ಎದ್ದು ನಿಂಟು ಮೈಕೊಡವಿಕೊಂಡಿತು. ದುಡುಕ್ಕನೆ ಪಕ್ಕಳದ ಹಳ್ಳದ ಮೇಲೆ ಏರಿ ನಿಂತಿತು. ನಮ್ಮೆಡೆ ಒಂತರಾ ಕೃತಜ್ಞತೆಯ ನೋಟ ಬೀರಿ ಕಾಡಿನಲ್ಲಿ ಜಿಗಿದು ಮಾಯವಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಲೈಫ್ ಸ್ಟೈಲ್

ಪಕ್ಷಿ ಪರಿಚಯ | ತೇನೆ ಹಕ್ಕಿ

Published

on

ತೇನೆ ಹಕ್ಕಿ / wader's birds
 • ಭಗವತಿ ಎಂ.ಆರ್

ಕ್ಕಿ ಲೋಕದ ಸೂಕ್ಷ್ಮಗ್ರಾಹಿ ಇದು.ಸಂಸ್ಕೃತದಲ್ಲಿ ಟಿಟ್ಟಿಭ ಅಂತಲೂ ಕರೆಯುತ್ತಾರೆ.ಮನುಷ್ಯರನ್ನು ಕಂಡರೆ ಬೆದರಿ ಮಾರುದೂರ ಓಡುತ್ತವೆ.ಎಷ್ಟೇ ದೂರದಲ್ಲಿದ್ದರೂ, ಅದರ ಸಮೀಪಿಸುತ್ತಿದ್ದೇವೆ ಅನ್ನುವುದು ಅದರ ಗಮನಕ್ಕೆ ಬಂದರೆ ಟಿಟ್ಟಿ ಟೀ ಎನ್ನುತ್ತ ಜಾಗ ಬದಲಿಸುತ್ತವೆ. ನಾವು ಇನ್ನು ಸ್ವಲ್ಪ ಮುಂದುವರೆದರೆ, ಹಾರಿಯೇ ಹೋಗುತ್ತವೆ.

ಬಯಲಿನಲ್ಲೇ ವಾಸಿಸುವ ಈ ಹಕ್ಕಿಗಳ ಗೂಡು ಎಂದರೆ ಕಲ್ಲುಗಳನ್ನು ವೃತ್ತಾಕಾರವಾಗಿ ಜೋಡಿಸಿಟ್ಟಂತೆ ಇರುತ್ತದೆ. ಸಮೀಪ ಹೋದರಷ್ಟೇ ಅಲ್ಲಿ ಮೊಟ್ಟೆಗಳಿರುವುದು ತಿಳಿಯುತ್ತದೆ. ತಾಯಿ ಹಕ್ಕಿಗಳು ಮರಿಗಳ ಸಮೀಪವೇ ಇದ್ದು ಜತನದಿಂದ ಕಾಯುತ್ತವೆ.

ಅವುಗಳಿಗೆ ಅಪಾಯ ಒದಗಿದಂತೆ ಕಂಡು ಬಂದರೆ ದಾಪುಗಾಲಿಟ್ಟು ಓಡಿ ಬರುತ್ತವೆ.ಹಲವರು ತೇನೆಹಕ್ಕಿಯು ಶಕುನದ ಹಕ್ಕಿಯೆಂದು ನಂಬುತ್ತಾರೆ. ತೇನೆ ಹಕ್ಕಿಯು ಮೊಟ್ಟೆಗಳನ್ನಿಟ್ಟರೆ ಮಳೆಬರುವ ಸೂಚನೆ, ರಾತ್ರಿಯ ಹೊತ್ತು ಯಾರ ಮನೆಯ ಹತ್ತಿರವಾದರೂ ಸುತ್ತಿದರೆ, ಅದು ಅಶುಭದ ಸೂಚನೆ ಎನ್ನುವ ನಂಬಿಕೆ ಹಲವು ಸಮುದಾಯಗಳಲ್ಲಿ ಇದೆ.

ಕೆಂಪು ಕಣ್ಣು, ಉದ್ದ ಕಾಲು, ಸದಾ ಎಚ್ಚರದ ಸ್ಥಿತಿಯಲ್ಲಿರುವ ಹಕ್ಕಿ, ನಮ್ಮ ಊರ ಕೋಳಿಗಳನ್ನು ನೆನಪಿಸುತ್ತವೆ. ಕೋಳಿಗಳಂತೆ ಹಗೂರ ಹೆಜ್ಜೆಗಳನಿಡುತ್ತಾ, ಓಡುತ್ತವೆ. ಮನುಷ್ಯನಿಂದ ತನಗೆ ಅಪಾಯ ಒದಗಿದೆ ಅನ್ನಿಸಿದಾಗ, ಅಥವ ತನ್ನ ಗೂಡಿನ, ಮರಿಗಳನ್ನು ರಕ್ಷಿಸಲು ಟೀಟ್ಟೀ. ಟ್ಯೂ ಎಂದು ಸುತ್ತುತ್ತಾ ವೈರಿಯ ಗಮನವನ್ನು ಬೇರೆಡೆಗೆ ಸೆಳೆಯುತ್ತವೆ. ವೈರಿಯ ಇರುವಿನ ಬಗ್ಗೆ ಇತರ ಹಕ್ಕಿಗಳಿಗೂ ಎಚ್ಚರಿಕೆ ಕೊಡುತ್ತ, ಒಟ್ಟಿಗೆ ಹಾರಿಹೋಗುವ ಇವುಗಳನ್ನು “ಪರೋಪಕಾರಿ ಪಾಪಣ್ಣ” ಅನ್ನಬಹುದು!

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಪ್ರಾಣಿಗಳಲ್ಲಿ ಕೊರೋನಾ ವೈರಾಣು ಸತ್ಯ ಮತ್ತು ಮಿಥ್ಯ : ಮಿಸ್ ಮಾಡ್ದೆ ಓದಿ

Published

on

 • ಅನೇಕ ದಿನಗಳಿಂದ ವೈರಸ್ ಕೊರೋನಾ “ವೈರಲ್” ಆಗಿದೆ. ಸಾಮಾಜಿಕ ಜಾಲತಾಣಗಳು, ವ್ರತ್ತ ಪತ್ರಿಕೆಗಳು, ಬಾಯಿ ಸುದ್ದಿ, ಗಾಳಿ ಸುದ್ದಿ, ಫೋನ್ ಸುದ್ದಿ ಎಲ್ಲವೂ ಕರೋನಾಮಯ. ಇನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳ ಬಗ್ಗೆಯಂತೂ ಹೇಳುವುದೇ ಬೇಡ. ಇಡೀ ದಿನ ಕರೋನಾ ಬಿಟ್ಟರೆ ಬೇರೊಂದಿಲ್ಲ. ಎಲ್ಲರಿಗೂ ಸಿಕ್ಕಾಪಟ್ಟೆ ಬಿಡುವು ಇರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿದ್ದಾರೆ. ಈ ಕರೋನಾ ಬಗ್ಗೆ ಬರೆಯೋದೇನಿದೆ ಎಂದು ಬೇರೆ ಕೆಲಸಗಳಲ್ಲಿ ಮಗ್ನನಾಗಿದ್ದೆ. ಈ ಮಧ್ಯೆ ಪ್ರಾಣಿಗಳಲ್ಲೂ ಕರೋನಾ ಎಂಬ ಸುದ್ಧಿ ಕೇಳಿ ಪ್ರತಿಕ್ರಿಯೆ ನೀಡಲಾರಂಭಿಸಿದೆ. ಆಗ ಅನಿಸಿದ್ದು ಪ್ರಾಣಿಗಳಲ್ಲೂ ಕರೋನಾದ ಬಗ್ಗೆ ಬರೆಯಬೇಕು ಎಂದು. ಕೆಲವು ಆಸಕ್ತಿದಾಯಕ ವಿಷಯಗಳಿವೆ. ಹಂಚಿಕೊಳ್ಳುವೆ. ಎಂದಿನಂತೆ ಓದಿ. ಪ್ರೋತ್ಸಾಹಿಸಿ.

-ಡಾ.ಎನ್.ಬಿ.ಶ್ರೀಧರ

ಇತ್ತೀಚೆಗಷ್ಟೇ ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್‌, ಇದೀಗ ವಿಶ್ವವನ್ನೇ ಗಡಗಡ ನಡುಗಿಸುತ್ತಿದೆ. ಕೊರೊನಾ ವೈರಸ್ ಹಾವಳಿ ದಿನೇದಿನೆ ಹೆಚ್ಚುತ್ತಿದ್ದು, ಜನಸಾಮಾನ್ಯರಲ್ಲಿ ತಲ್ಲಣ ಉಂಟುಮಾಡಿದೆ. ಕೊರೊನಾ ವೈರಸ್‌ನಿಂದಾಗಿ ವಿಶ್ವದಾದ್ಯಂತ ಈ ಕ್ಷಣದವರೆಗೆ ( 27-03-2020, 1.41 ಮಧ್ಯಾಹ್ನ) ಅಧೀಕೃತವಾಗಿ ಬಾಧಿತರ ಸಂಖ್ಯೆ 532,263 ಇದ್ದರೆ ಸಾವಿನ ಸಂಖ್ಯೆ 24,090. ಭಾರತದಲ್ಲಿ ಕೊರೋನಾ ಪೀಡಿತರ ಈ ಸಂಖ್ಯೆ  733ಕ್ಷಣದ ವರೆಗೆ ಇದ್ದರೆ ಮತ್ತು ಸಾವಿನ ಸಂಖ್ಯೆ 13 ಕ್ಕೆ ಏರಿದೆ. ಕರ್ನಾಟಕದಲ್ಲಿ ಭಾದೆಗೊಳಗಾದವರು 74 ಮೃತಪಟ್ಟವರ ಸಂಖ್ಯೆ6. ಇದು ಈ ಕ್ಷಣದ ವರೆಗಿನ ಸುದ್ಧಿ. ಇದು ಕ್ಷಣ ಕ್ಷಣಕ್ಕೂ ಜಾಸ್ತಿಯಾಗುತ್ತಲೇ ಇದೆ.

ಕೊರೊನಾ ಎಂಬುದು ಪ್ರಾಣಿಗಳಲ್ಲಿ ಅನಾರಾಗ್ಯವನ್ನು ಉಂಟುಮಾಡಬಲ್ಲ ವೈರಸ್‌ಗಳ ಬೃಹತ್‌ ಗುಂಪಾಗಿದೆ. ಈ ವೈರಸ್‌ಗಳು ಹೆಚ್ಚಾಗಿ ಉಸಿರಾಟದ ತೊಂದರೆ ಉಂಟುಮಾಡುತ್ತವೆ. ಸಾಮಾನ್ಯ ಶೀತವನ್ನು ಉಂಟುಮಾಡುವ ವೈರಸ್‌ನಿಂದ ಹಿಡಿದು, ಅತ್ಯಂತ ಅಪಾಯಕಾರಿಯಾದ ಮೆರ್ಸ್‌ (ಮಿಡಲ್‌ ಈಸ್ಟ್‌ ರೆಸ್ಪಿರೇಟರಿ ಸಿಂಡ್ರೋಂ), ಸಾರ್ಸ್‌ (ಸಿವಿಯರ್‌ ಅಕ್ಯೂಟ್‌ ರೆಸ್ಪಿರೇಟರಿ ಸಿಂಡ್ರೋಂ), ಇತ್ತೀಚೆಗೆ ಕಾಣಿಸಿಕೊಂಡಿರುವ ಕೊರೊನಾ ವೈರಸ್‌ ಡಿಸೀಸ್‌ (COVID-19), ಈ ಎಲ್ಲ ವೈರಸ್‌ಗಳೂ ಒಂದೇ ಗುಂಪಿಗೆ ಸೇರುತ್ತವೆ.

COVID-19 ಎಂದರೆ, ಇದೂ ಕೂಡ ಸೋಂಕನ್ನು ಉಂಟುಮಾಡಬಲ್ಲ ವೈರಸ್‌. ಇದು ಕೊರೊನಾ ವೈರಸ್‌ಗಳ ಪೈಕಿ ಇತ್ತೀಚೆಗೆ ಚೀನಾದಲ್ಲಿ ಪತ್ತೆಯಾಗಿ, ವಿಶ್ವಾದ್ಯಂತ ಹರಡುತ್ತಿರುವ ವೈರಸ್‌ ಆಗಿದೆ. ಚೀನಾದ ವುಹಾನ್‌ನಲ್ಲಿ 2019ರ ಡಿಸೆಂಬರ್‌ನಲ್ಲಿ ಪತ್ತೆಯಾಗುವ ಮೊದಲು ಈ ವೈರಸ್ ಕುರಿತು ವಿಶ್ವಕ್ಕೆ ಪರಿಚಯ ಇರಲಿಲ್ಲ.

ಕೊರೊನಾ ಸೋಂಕಿನ ಲಕ್ಷಗಳು ಹಂತಹಂತವಾಗಿ ಕಾಣಿಸಿಕೊಳ್ಳುತ್ತೆ. ಇದರಲ್ಲಿ ರೋಗಲಕ್ಷಣ ರಹಿತ, ಸೌಮ್ಯ, ತೀವ್ರ ಮತ್ತು ಮಾರಣಾಂತಿಕ ಎಂಬ ಹಂತಗಳಿವೆ. ಸಾಮಾನ್ಯ ರೋಗಲಕ್ಷಣಗಳು ಜ್ವರ, ಕೆಮ್ಮು, ಏದುಸಿರು ಮತ್ತು ಉಸಿರಾಟ ಕಷ್ಟವಾಗುವುದು ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸೋಂಕು ತೀವ್ರವಾದ ಪ್ರಕರಣಗಳಲ್ಲಿ ನ್ಯುಮೋನಿಯಾ, ಮೂತ್ರಪಿಂಡ ವೈಫ‌ಲ್ಯ ಮತ್ತು ಬಹು ಅಂಗಾಂಗ ವೈಫ‌ಲ್ಯಕ್ಕೂ ಕಾರಣವಾಗಬಹುದು.

ವೈರಸ್ಸಿಗೆ ನೋವೆಲ್‌ ಕೊರೊನಾ ವೈರಸ್‌ ಎಂದು ಕರೆಯುವುದೇಕೆ?

ಈ ಹಿಂದೆ, ಪ್ರಾಣಿಗಳಲ್ಲಾಗಲಿ, ಮನುಷ್ಯರಲ್ಲಾಗಲಿ ಕಾಣಿಸಿಕೊಳ್ಳದೇ ಇದ್ದು, ಇದೇ ಮೊದಲ ಬಾರಿಗೆ ಕಾಣಿಸಿಕೊಳ್ಳುವ ಕೊರೊನಾ ವೈರಸ್‌ಗೆ ನೋವೆಲ್‌ ಕೊರೊನಾ ವೈರಸ್‌ ಎಂದು ಕರೆಯುತ್ತಾರೆ.

ವೈರಸ್‌ನ ನೈಸರ್ಗಿಕ ಮೂಲ ಯಾವುದು?

ಕೊರೊನಾ ವೈರಸ್‌ಗಳ ನೈಸರ್ಗಿಕ ಮೂಲಗಳೆಂದರೆ ಪ್ರಾಣಿಗಳು. ಅದರಲ್ಲೂ ಸಸ್ತನಿಗಳು ಈ ವೈರಸ್ಸುಗಳಿಗೆ ಆವಾಸಸ್ಥಾನ ಎನ್ನಬಹುದು. ಬಾವಲಿಗಳು ಈ ವೈರಸ್‌ಗಳಿಗೆ ಆಶ್ರಯ ನೀಡುವ ಪ್ರಮುಖ ಜೀವಿಗಳು. ಪುನುಗು ಬೆಕ್ಕು ಅಥವಾ ಸಿವೆಟ್ ಕ್ಯಾಟ್ ಇದು SARS-CoV ಈ ಕಾಯಿಲೆ ಹಬ್ಬಿಸಿದರೆ, ಒಂಟೆ ಮತ್ತು ಬಾವಲಿಗಳು MERS-CoV ಅಥವಾ COVID 19 ನ್ನು ಹರಡುತ್ತವೆ. ಸಾಕು ಪ್ರಾಣಿಗಳೂ ಸೇರಿದಂತೆ ಹಲವು ಪ್ರಾಣಿಗಳಲ್ಲಿಯೂ ಕೊರೋನಾ ವರ್ಗದ ವೈರಸ್‌ಗಳು ಇರುತ್ತವೆ.

ಪುನುಗು ಬೆಕ್ಕು, ಒಂಟೆ ಮತ್ತು ಬಾವಲಿ ಇವು ಈ ವೈರಸ್ಸಿನ ಸಂಗ್ರಾಹಕಗಳಾಗಿರುತ್ತವೆ. ಆಕಳುಗಳು, ಹಂದಿ, ನಾಯಿ, ಬೆಕ್ಕು, ಕೋಳಿ ಇತ್ಯಾದಿ ಅನೇಕ ಪ್ರಾಣಿಗಳಲ್ಲಿ ಕರೋನಾ ವೈರಾಣು ರೋಗ ತಂದರೂ ಸಹ ಅವುಗಳಿಂದ ಮನುಷ್ಯರಿಗೆ ಬರುವ ಬಗ್ಗೆ ದಾಖಲೆಗಳಿಲ್ಲ.

ಪ್ರಾಣಿಗಳಲ್ಲಿ ಕರೋನಾ ವೈರಾಣು ರೋಗ

ಸಾಕು ಪ್ರಾಣಿಗಳಿಂದ ಕೊರೊನಾ ವೈರಸ್ ಹರಡಬಹುದು ಎನ್ನುವ ಭಯದಿಂದ ಕೆಲವರು ತಮ್ಮ ಮನೆಯಲ್ಲಿ ಇರುವ ನಾಯಿ, ಬೆಕ್ಕುಗಳನ್ನು ದೂರ ಮಾಡುತ್ತಿದ್ದಾರೆ. ಆದರೆ ಈ ಪ್ರಾಣಿಗಳಿಂದ ಕರೋನಾ ಕಾಯಿಲೆ ಬರುವ ಯಾವುದೇ ದಾಖಲೆ ಇಲ್ಲ. ಬಾಲಿವುಡ್ ನಟಿ ರಾಖಿ ಸಾವಂತ್ ಚೀನಾದ ಪಾಪಿ ಜನರು ಕಾಡು ಪ್ರಾಣಿಗಳನ್ನು ತಿಂದು ಕೊರೊನಾ ವೈರಸ್ ಹರಡಿಸಿದ್ದಾರೆ ಎಂದು ಹೇಳುವ ಮೂಲಕ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರೂ ಸಹ ಪ್ರಾಣಿಗಳ ಮಾಂಸ ತಿನ್ನುವುದರಿಂದ ಕರೋನಾ ಬರುತ್ತದೆ ಎಂಬುದರ ಬಗ್ಗೆ ಯಾವುದೇ ದಾಖಲೆ ಇಲ್ಲ.

ಕೋಳಿಗಳಿಂದ ಕರೋನಾ ಬರುತ್ತದೆ ಎಂದು ಸಹಸ್ರ ಸಂಖ್ಯೆಯಲ್ಲಿ ಕೋಳಿಗಳನ್ನು ನಾಶ ಮಾಡಿದ್ದು ಇದ್ದಕ್ಕಿದ್ದಂತೆ ಜನ ಕೋಳಿ ತಿನ್ನುವುದನ್ನು ನಿಲ್ಲಿ ಸುಖಾ ಸುಮ್ಮನೇ ಆ ಉಧ್ಯಮ ನೆಲ ಕಚ್ಚುವಂತೆ ಮಾಡಿದ್ದು ಈಗ ಇತಿಹಾಸ. ಕೇವಲ ಊಹಾಪೋಹಗಳನ್ನು ನಂಬಿ ವಿಜ್ಞಾನವನ್ನು ಮೂಲೆಗೊತ್ತಿದ್ದರ ಪರಿಣಾಮವೇ ಇದು.

ಸಾಕು ಪ್ರಾಣಿಗಳು ಕರೋನಾ ವಾಹಕಗಳೇ?

ಅಲ್ಲ. ನಾಯಿ ಮತ್ತು ಬೆಕ್ಕುಗಳಲ್ಲಿ ಈ ಕೊರೊನಾ ವೈರಸ್ ಸಾಮಾನ್ಯ. ಆದರೆ ಈಗ ಬಂದ COVID 19 ಕ್ಕೂ ಪ್ರಾಣಿಗಳಲ್ಲಿ ಬರುವ ಕರೋನಾ ವೈರಸ್ ರೋಗಕ್ಕೂ ಯಾವುದೇ ಸಂಬಂಧವಿಲ್ಲ. ಹುವಾನಾನ್ ಸಮುದ್ರಾಹಾರ ಮಾರುಕಟ್ಟೆಯಲ್ಲಿ ಈ ವೈರಸ್ ಮೊದಲು ಕಾಣಿಸಿಕೊಂಡಿದೆ. ಇಲ್ಲಿ ಅನೇಕ ಕಾಡು ಪ್ರಾಣಿಗಳು ಮತ್ತು ಸಮುದ್ರ ಪ್ರಾಣಿಗಳನ್ನು ಜೀವಂತವಾಗಿ ಮಾರಾಟ ಮಾಡಲಾಗುತ್ತಿತ್ತು. ಪುನುಗು ಬೆಕ್ಕು ಮತ್ತು ಬಾವಲಿಗಳನ್ನು ಸೇರಿಸಿಕೊಂಡು ಇಲ್ಲಿನ ಜನ ಹುರಿದು ಮುಕ್ಕಿದ್ದಕ್ಕೆ ಶಿಕ್ಷೆಯಾಗಿ ಇಡಿ ಪ್ರಪಂಚವನ್ನು ಕೊರೋನಾ ಮಾರಿ ಹುರಿದು ಮುಕ್ಕುತ್ತಿದೆ ಎಂಬುದು ದಾರ್ಶನಿಕರ ಕೊಂಕು ನುಡಿ. ಆದರೂ ಇಲ್ಲಿ ಕೊರೊನಾ ವೈರಸ್ ಸೋಂಕು ಹರಡಲು ನಿಖರ ಕಾರಣವೇನೆಂದು ಇನ್ನೂ ದೃಢಪಡಿಸಿಲ್ಲ. ಅಲ್ಲಿ ವೈರಸ್ ಪ್ರಥಮವಾಗಿ ಉಗಮವಾಗಿರಬಹುದೇ ಹೊರತು ಯಾವುದೇ ಪ್ರಾಣಿಗಳ ಮಾಂಸ ತಿಂದರೆ ಕರೋನಾ ಕಾಯಿಲೆ ಬರುವುದೆಂದು ದೃಢಪಟ್ಟಿಲ್ಲ.

ಬೆಕ್ಕು,ನಾಯಿ, ಹಂದಿ, ಜಾನುವಾರುಗಳು, ಕುದುರೆ, ಕೋಳಿ,ಇಲಿ ಮತ್ತು ಅಷ್ಟೇಕೆ ಮೀನಿನಲ್ಲಿಯೂ ಸಹ ಕರೋನಾ ವೈರಾಣು ಕಾಯಿಲೆ ಬರುತ್ತದೆ ಎಂಬ ಪ್ರತೀತಿ ಇದೆ. ಅನೇಕ ಪ್ರಾಣಿಗಳಲ್ಲಿ ಕರೋನಾ ವೈರಾಣುಗಳ ವಿವಿಧ ಪ್ರಬೇಧಗಳಿಂದ ಕಾಯಿಲೆ ಬರುತ್ತದೆ. ಸುಮಾರು ೧೬ ಕ್ಕಿಂತ ಜಾಸ್ತಿ ಕಾಯಿಲೆಗಳು ಈ ವೈರಾಣುವಿನಿಂದ ಬಂದರೂ ಸಹ ಪ್ರಾಣಿಗಳಿಗೆ ಬರುವ ಕರೋನಾ ವೈರಾಣು ಕಾಯಿಲೆ ಮನುಷ್ಯನಿಗೆ ಹರಡಿದ್ದಕ್ಕೆ ಯಾವುದೇ ದಾಖಲೆಗಳಿಲ್ಲ.

ಈ ಕೆಳಗಿನ ಕೋಷ್ಟಕ ಗಮನಿಸಿದರೆ ಪ್ರಾಣಿಗಳಲ್ಲಿ ಕರೋನಾ ವೈರಾಣುವಿನ ಉಪಪ್ರಬೇಧದದಿಂದ ಬರುವ ಅನೇಕ ಕಾಯಿಲೆಗಳ ವಿವರ ಸಿಗುತ್ತದೆ.

ಉಪ ಕುಟುಂಬ: ಕರೋನಾ ವೈರಿನೇ,ಜೀನಸ್ : ಅಲ್ಫಾ ಕರೋನಾ ವೈರಸ್

 1. ಫಿಲೈನ್ ಕರೋನಾ ವೈರಸ್ (ಫಿಲೈನ್ ಎಂಟರಿಕ್ ಕರೋನಾ ವೈರಸ್, ಫಿಲೈನ್ ಇನ್ಫೆಕ್ಷಿಯಸ್ ಪೆರಿಟೋನೈಟಿಸ್ ವೈರಸ್) ಬೆಕ್ಕು, ಹುಲಿ, ಸಿಂಹ, ಚಿರತೆ ಬೆಕ್ಕು, ಹುಲಿ ಮತ್ತು ಈ ಪ್ರಬೇಧಕ್ಕೆ ಸೇರಿದ ಪ್ರಾಣಿಗಳಲ್ಲಿ ಅಲ್ಪ ಪ್ರಮಾಣದ ಭೇಧಿ ಮತ್ತು ವಾಂತಿ ಭೇಧಿ ಉಂಟು ಮಾಡುವುದು. ನೇರ ಸಂಪರ್ಕ, ಸೋಂಕಿತ ಮಲದ ಮೂಲಕ, ಬೇಧಿ ಸಂಪರ್ಕ,ರಕ್ತ, ಮೂತ್ರ ಇತ್ಯಾದಿ ಉತ್ತಮ ಗುಣಮಟ್ಟದ ಪ್ರತ್ಯೇಕಿಸುವಿಕೆ, ಹರಡುವಿಕೆಯ ಚಕ್ರದ ನಿಯಂತ್ರಣ.
 2. ಕೆನೈನ್ ಕರೋನಾ ವೈರಸ್ ನಾಯಿ, ತೋಳ, ನರಿ ವಾಂತಿಭೇಧಿ, ತೀವ್ರವಾದ ವಾಂತಿ, ಭೇಧಿ ಮತ್ತು ಬಿಳಿರಕ್ತ ಕಣಗಳ ಕಡಿಮೆಯಾಗುವಿಕೆ ಸೋಂಕಿತ ಮಲದ ಮೂಲಕ ನಿಷ್ಕ್ರಿಯೆಗೊಳಿಸಿದ ಲಸಿಕೆ.
 3. ಟ್ರಾನ್ಸ್ಮಿಸಿಬಲ್ ಗ್ಯಾಸ್ಟ್ರೋಎಂಟರೈಟಿಸ್ ಹಂದಿ ಸ್ವಲ್ಪ ಪ್ರಮಾಣದ ಭೇಧಿ ಆದರೆ ನೀರು ಭೇಧಿ ,ವಾಂತಿ,ನಿರ್ಜಲೀಕರಣ ಸೋಂಕಿತ ಮಲದ ಮೂಲಕ ಬಾಯಿಯ ಮೂಲಕ ನೀಡುವ ನಿಷ್ಕ್ರಿಯೆಗೊಳಿಸಿದ ಲಸಿಕೆ.
 4. ಪೋರ್ಸೈನ್ ರೆಸ್ಪಿರೇಟರಿ ಕರೋನಾ ವೈರಸ್ ಹಂದಿ ಮಂದ ಸ್ವರೂಪದ ಕಾಯಿಲೆ ಗಾಳಿಯ ಮೂಲಕ ಲಸಿಕೆ ಇಲ್ಲ.
 5. ಪೋರ್ಸೈನ್ ಎಪಿಡೆಮಿಕ್ ಡಯೇರಿಯಾ ಕರೋನಾ ವೈರಸ್ ಹಂದಿ ಭೇಧಿ, ನೀರು ಭೇಧಿ ,ವಾಂತಿ,ನಿರ್ಜಲೀಕರಣ ಸೋಂಕಿತ ಮಲದ ಮೂಲಕ ಗರ್ಭಿಣಿ ಹಂದಿಗಳಿಗೆ ನಿಷ್ಕ್ರಿಯಗೊಳಿಸಿದ ಲಸಿಕೆ ಮತ್ತು ನಿರ್ಜೀವ ವೈರಾಣು ಲಸಿವೈರಸ್, ಕುಟುಂಬ: ಕರೋನಾ ವೈರಿನೇ,ಜೀನಸ್ : ಬ್ಯಾಕ್ಟೊ ಕರೋನಾ ವೈರಸ್,ಗುಂಪು ಎ
 6. ಪೋರ್ಸೈನ್ ಹೀಮ್ ಅಗ್ಲುಟಿನೇಟಿಂಗ್ ಕರೋನಾ ವೈರಸ್ ಹಂದಿ ಭೇಧಿ, ಅಹಾರ ಸೇವಿಸದಿರುವಿಕೆ,ಮೆದುಳಿನ ಉರಿಯೂತ, ನಡುಕ,ಬಡಕಲಾಗುವಿಕೆ ನೇರಸಂಪರ್ಕ, ಮೂಗಿನ ಮೂಲಕ, ಸ್ರಾವಕಗಳು ಉತ್ತಮ ನಿರ್ವಹಣೆ.ಲಸಿಕೆ ಇಲ್ಲ.ಮೌಸ್ ಹೆಪಟೈಟಿಸ್ ವೈರಸ್.ರಾಟ್ ಕರೋನಾ ವೈರಸ್ ಚಿಕ್ಕಿಲಿ.
 7. ಇಲಿ ಭೇಧಿ, ಪಿತ್ತಜನಕಾಂಗದ ಉರಿಯೂತ, ಮೆದುಳಿನ ಉರಿಯೂತ, ಮೆದುಳಿನ ಉರಿಯೂತ, ನೇರಸಂಪರ್ಕ, ಮೂಗಿನ ಮೂಲಕ, ಸ್ರಾವಕಗಳು ಉತ್ತಮ ನಿರ್ವಹಣೆ.
  ಲಸಿಕೆ ಇಲ್ಲ.
 8. ಬೊವೈನ್ ಕರೋನಾ ವೈರಸ್ ಆಕಳು ಮತ್ತು ಜಾನುವಾರುಗಳು ತೀವ್ರ ರಕ್ತ ಬೇಧಿ, ನಿರ್ಜಲೀಕರಣ,ಹಾಲಿನ ತೀವ್ರ ಇಳಿಮುಖ, ಶ್ವಾಸದ ತೊಂದರೆ ಸಗಣಿ, ವಾಯುದ್ರವ ತಾಯಿಂದ ಬರುವ ರೋಗತಡೆಗಟ್ಟುವ ಶಕ್ತಿ
 9. ಇಕ್ವೈನ್ ಕರೋನಾ ವೈರಸ್
  ಕುದುರೆ, ಕತ್ತೆವಾಂತಿ ಬೇಧಿ, ಶ್ವಾಸದ ತೊಂದರೆ ಮಲ, ವಾಯುದ್ರವ ತಾಯಿಂದ ಮರಿಗಳಿಗೆ ಬರುವ ರೋಗತಡೆಗಟ್ಟುವ ಶಕ್ತಿ.ಗುಂಪು ಬಿ.
 10. ಸಿವಿಯರ್ ಅಕ್ಯುಟ್ ರೆಸ್ಪಿರೇಟರಿ ಸಿಂಡ್ರೋಮ್ (ಸಾರ್ಸ್) ಮನುಷ್ಯ ತೀವ್ರತರ ಶ್ವಾಸದ ತೊಂದರೆ
  (ಬಾವಲಿಗಳು ವೈರಾಣುಗಳ ಸಂಗ್ರಹಕಗಳು) ವಾಯುದ್ರವ.ಸಿಂಬಳ ಲಸಿಕೆ ಇಲ್ಲ.ಕ್ವಾರಂಟೈನ್ ಮಾತ್ರ.ಗುಂಪು ಸಿ.
 11. ಮಿಡ್ಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್
  (ಮೆರ್ಸ್)ಇದು ಈಗ ಇಡೀ ಪ್ರಪಂಚಕ್ಕೆ ಹಬ್ಬಿರುವುದು ಮನುಷ್ಯ ತೀವ್ರತರ ಶ್ವಾಸದ ತೊಂದರೆ(ಒಂಟೆ ಮತ್ತು ಬಾವಲಿಗಳು ವೈರಾಣುಗಳ ಸಂಗ್ರಹಕಗಳು) ವಾಯುದ್ರವ,ಸಿಂಬಳ ಲಸಿಕೆ ಇಲ್ಲ,ಚಿಕಿತ್ಸೆ ಇಲ್ಲ,
  ಕ್ವಾರಂಟೈನ್ ಮಾತ್ರ.ಉಪ ಕುಟುಂಬ: ಕರೋನಾ ವೈರಿನೇಜೀನಸ್ : ಗಾಮ್ಮಾ ಕರೋನಾ ವೈರಸ್
 12. ಏವಿಯನ್ ಇನ್ಫೆಕ್ಷಿಯಸ್ ಬ್ರೋಂಕೈಟಿಸ್ ವೈರಸ್ ಹಕ್ಕಿಗಳು ಶ್ವಾಸನಾಳದ ಉರಿಯೂತ, ಮೂತ್ರಜನಕಾಂಗದ ಉರಿಯೂತ ಶ್ವಾಸದ ತೊಂದರೆ ವಾಯುದ್ರವ.ಸಿಂಬಳ ಬಹು ವೈರಲ್ ಲಸಿಕೆ.
 13. ಟರ್ಕಿ ಕರೋನಾ ವೈರಸ್
 14. ಬ್ಲೂ ಕೋಂಬ್ ವೈರಸ್ ಟರ್ಕಿಗಳು ಬೇಧಿ, ಕಪ್ಪು ಚರ್ಮ, ಖಿನ್ನತೆ ಮಲ, ವಾಯುದ್ರವ ನಿಷ್ಕ್ರಿಯಗೊಳಿಸಿದ ಲಸಿಕೆ
  ಉಪ ಕುಟುಂಬ: ಕರೋನಾ ವೈರಿನೇ
  ಜೀನಸ್ : ಡೆಲ್ಟಾ ಕರೋನಾ ವೈರಸ್
 15. ಪೋರ್ಸೈನ್ ಡೆಲ್ಟಾ ಕರೋನಾ ವೈರಸ್ ಹಾಲು ನೀಡುತ್ತಿರುವ ಹಂದಿಗಳು ವಿಶೇಷ ಲಕ್ಷಣಗಳಿಲ್ಲ
  ಕಡಿಮೆ ಸಾವು ಮಲ ಲಸಿಕೆ ಇಲ್ಲ.
 16. ಉಪ ಕುಟುಂಬ: ಟೋರೋ ವೈರಿನೇ
  ಜೀನಸ್ : ಟೋರೋ ವೈರಸ್
 17. ಬ್ರೇಡಾ ವೈರಸ್ ಜಾನುವಾರುಗಳು ಬೇಧಿ, ನಿರ್ಜಲೀಕರಣ ಮಲ ಲಸಿಕೆ ಇಲ್ಲ
  ಉಪ ಕುಟುಂಬ: ಟೋರೋ ವೈರಿನೇ
  ಜೀನಸ್ : ಟೋರೋ ವೈರಸ್ವೈಟ್ ಬ್ರೀಮ್ ವೈರಸ್.
 18. ಫೆದರ್ಡ್ ಮಿನೋ ವೈರಸ್ ಮೀನು ಚರ್ಮ ಮತ್ತು ಕಣ್ಣುಗಳಲ್ಲಿ ರಕ್ತ ಸ್ರಾವ ಕಲುಷಿತ ನೀರು ಲಸಿಕೆ ಇಲ್ಲ

ಬಾವಲಿ ಮತ್ತು ಕರೋನಾ ವೈರಾಣು

ಬಾವಲಿಗಳು ಎಲ್ಲಾ ರೀತಿಯ ಕರೋನಾ ವೈರಾಣು ಹರಡುವಲ್ಲಿ ಅತ್ಯಂತ ಮಹತ್ತರ ಪಾತ್ರ ವಹಿಸಿವೆ. ಸಿವಿಯರ್ ಅಕ್ಯುಟ್ ರೆಸ್ಪಿರೇಟರಿ ಸಿಂಡ್ರೋಮ್ (ಸಾರ್ಸ್) ಎಂದು ಕರೆಯುವ ಮನುಷ್ಯನ ಸಾವನ್ನು ಅಪೇಕ್ಷಿಸುವ ಕರೋನಾ ವೈರಾಣು ಕಾಯಿಲೆ ಸಹ ಬಾವಲಿಗಳಿಂದಲೇ ಹರಡಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಹಂದಿಗಳಲ್ಲಿ ಕರೋನಾ ವೈರಾಣು ಕಾಯಿಲೆ ಹರಡಲು ಸಹ ಈ ಬಾವಲಿಗಳೇ ಕಾರಣ. ಆದರೆ ಈ ಬಾವಲಿಗಳಲ್ಲಿ ರೋಗದ ಯಾವುದೇ ಲಕ್ಷಣಗಳು ಕಂಡು ಬರುವುದಿಲ್ಲ. ಕಾರಣ ಬಾವಲಿಗಳನ್ನು “ ಅತಿಥೇಯ ಸಂಗ್ರಾಹಕ” ಎನ್ನಬಹುದು. ಈಗ ಬರುತ್ತಿರುವ COVID-

ಇದಕ್ಕೆ ಒಂಟೆಗಳ ಮೂಲಕ ಮನುಷ್ಯರಿಗೆ ವೈರಸ್ ಹರಡಲು ಮೂಲಕಾರಣ ಬಾವಲಿಗಳು ಎಂದರೆ ತಪ್ಪಾಗಲಿಕ್ಕಿಲ್ಲ. ಮಧ್ಯಪ್ರಾಚ್ಯ ದೇಶಗಳಲ್ಲಿಯೇ ಈ ಕೊರೊನಾ ಮಹಾಮಾರಿ ಜನನವಾಗಿರುವುದು. ಇದಕ್ಕೇ ಇರಬಹುದು COVID-19 ಇದಕ್ಕೆ “ಮಿಡ್ಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್ (ಮೆರ್ಸ್)” ಎಂದು ಕರೆಯುವುದು. ಬಹುಶ: ಬಾವಲಿಗಳಿಂದ ಒಂಟೆಗಳಿಗೆ ಸಾಗಿದ ಕರೋನಾ ವೈರಸ್ ಮಧ್ಯಪ್ರಾಚ್ಯದ ಜನರಿಗೆ ಹಬ್ಬಿರಬಹುದು ಎಂಬ ಪ್ರತೀತಿ ಇದೆ. ಕರ್ನಾಟಕದಲ್ಲಿಯೂ ಸಹ ಮಧ್ಯಪ್ರಾಚ್ಯ ದೇಶಗಳಿಗೆ ಹೋಗಿ ಬಂದವರಿಂದ ಹರಡಿದ ಕರೋನಾ ಜಾಸ್ತಿ ಇರುವುದಕ್ಕೆ ಇದೇ ಕಾರಣವಿರಬಹುದೇನೋ?

ಪುನುಗು ಬೆಕ್ಕು (ಹಿಮಾಲಯನ್ ಪಾಮ್ ಸಿವೆಟ್) ಮತ್ತು ಕರೋನಾ ವೈರಾಣು

ಪುನುಗು ಬೆಕ್ಕು (ಹಿಮಾಲಯನ್ ಪಾಮ್ ಸಿವೆಟ್ ಕ್ಯಾಟ್) ಇವು ಬೆಕ್ಕಿನ ಜಾತಿಗೆ ಸೇರಿಲ್ಲ. ಮುಂಗುಸಿ ಜಾತಿಗೆ ಸೇರಿದ ಇವು ಹಲ್ಲಿ, ಹಾವು, ಕಪ್ಪೆ, ಇಲಿ ಇತ್ಯಾದಿ ಹಿಡಿದು ತಿನ್ನುತ್ತವೆ. ಚೈನಾದ ಹುವಾನಿನಲ್ಲಿ ಇವುಗಳನ್ನು ಹಿಡಿದು ಹುರಿದು ಮುಕ್ಕಿದ್ದರಿಂದ ಕರೋನಾ ಕಾಯಿಲೆ ಬಂದಿರಬಹುದೆಂದು ಊಹಿಸಲಾಗಿದೆ. ಇವು ಮಹತ್ತರವಾದ ಕರೋನಾ ವಾಹಕಗಳು. ನಮ್ಮ ದೇಶದ ಈಶಾನ್ಯ ಪ್ರಾಂತ್ಯದಲ್ಲಿ ಇವು ಇದ್ದರೂ ಸಹ ಯಾರು ಇವನ್ನು ತಿನ್ನುವ ಗೊಡವೆಗೆ ಹೋಗುವುದಿಲ್ಲ. ಇವುಗಳಿಂದ ಹೊರಸೂಸುವ “ಪುನುಗು” ಎಂಬ ಸುಗಂಧ ದ್ರವ್ಯಕ್ಕೆ ಆಸೆ ಪಟ್ಟು ಬೇಟೆಯಾಡಿ ಇವು ವಿನಾಶದಂಚು ತಲುಪಿವೆ.

ಈ ಪ್ರಾಣಿಗಳು ಚೈನಾ, ಭಾರತ ಮತ್ತು ಮಲೇಶಿಯಾದಲ್ಲಿದ್ದರೂ ಚೀನಿಯರು ಹಾವು, ಹುಳ ಹುಪ್ಪಟೆ ಮತ್ತು ಈ ತರಹದ ಇಲ್ಲ ಸಲ್ಲದ ಪ್ರಾಣಿಗಳನ್ನು ಹಿಡಿದು ಮುಕ್ಕುವುದರಿಂದ ಕರೋನಾ ಕಾಯಿಲೆ ಬಂದಿದೆ ಎಂದು ಜಗತ್ತಿನ ಜನಕ್ಕೆ ಚೀನಿಯರ ಮೇಲೆ ಕೋಪ. ಗಲೀಜು ಚೀನಿಯರು ಗುವಾಂಗ್ ಎಂಬ ಸ್ಥಳದ ಹೊಟೇಲೊಂದರಲ್ಲಿ ಅತ್ಯಂತ ಕೊಳಕು ರೀತಿಯಲ್ಲಿ ಈ ಸಿವೆಟ್ ಬೆಕ್ಕುಗಳನ್ನು ಕಡಿದು ಗ್ರಾಹಕರಿಗೆ ಹುರಿದು ಉಣಬಡಿಸಿದ್ದಕ್ಕೆ ಸಾರ್ಸ್ ಮಹಾಮಾರಿಯೂ ಸಹ ನುಸುಳಿದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಅದಕ್ಕೆ ಇಲ್ಲ ಸಲ್ಲದ ಪ್ರಾಣಿಗಳನ್ನೆಲ್ಲಾ ಕಡಿದು ತಿನ್ನಬಾರದು ಎನ್ನುವುದು.

ಒಂಟೆಗಳು ಮತ್ತು ಕರೋನಾ ವೈರಾಣು

ಒಂಟಿ ಡುಬ್ಬದ ಡ್ರೊಮೇಡರಿ ಒಂಟೆಗಳು ಕರೋನಾ ವೈರಾಣುಗಳ ವಾಹಕಗಳು ಎಂಬುದು ವಿವಾದಾತೀತವಾಗಿ ಸಬೂತಾಗಿದೆ. ಸಧ್ಯಕ್ಕೆ ವಿಶ್ವಕ್ಕೆ ಹೆಮ್ಮಾರಿಯಂತೆ ಅಂಟಿರುವ COVID-19 ಇದನ್ನು “ಮಿಡ್ಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್” (ಮೆರ್ಸ್) ಅಥವಾ “ಮಧ್ಯ ಪ್ರಾಚ್ಯ ಶ್ವಾಸಕೋಶದ ತೊಂದರೆ” ಎಂದೂ ಕರೆಯುತ್ತಾರೆ. ಇದು ಕರೋನಾ ವೈರಿನೇ ಉಪಕುಟುಂಬಕ್ಕೆ ಸೇರಿದ ಮತ್ತು ಜೀನಸ್ ಬ್ಯಾಕ್ಟೊ ಕರೋನಾ ವೈರಸ್ (ಗುಂಪು ಎ ) ಇದರಿಂದ ಬರುತ್ತದೆ. ಮಧ್ಯಪ್ರಾಚ್ಯ ದೇಶಗಳಾದ ಈಜಿಪ್ಟ್, ಓಮನ್, ಕ್ವತಾರ್ ಮತ್ತು ಸೌದಿ ಅರೇಬಿಯಾ ದೇಶಗಳಲ್ಲಿ ಇದು 2012 ನೇ ಸಾಲಿನಲ್ಲಿಯೇ ಕಾಣಿಸಿಕೊಂಡು ಮರಣ ಮ್ರದಂತಗ ಭಾರಿಸಿತ್ತು. ಅಲ್ಲಿ ಒಂಟೆಗಳ ಸಂಖ್ಯೆ ಜಾಸ್ತಿ ಇದ್ದು ಇವುಗಳಿಂದ ಮನುಷ್ಯರಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.

ಹಾಗೆಂದು ಒಂಟೆಗಳಲ್ಲಿ ಯಾವುದೇ ರೋಗಲಕ್ಷಣ ಅಥವಾ ಕಂಡು ಬರದೇ ಇರುವುದರಿಂದ ಇವು ಈ ವೈರಾಣುಗಳ “ಸಂಗ್ರಾಹಕ” (Reservoir) ಗಳಾಗಿ ಕೆಲಸ ಮಾಡುತ್ತವೆ. ಈ ವೈರಾಣು ಒಂಟೆಗಳ ಹಾಲಿನಲ್ಲಿ ಹೇರಳವಾಗಿ ಸ್ರವಿಸಲ್ಪಡುತ್ತದೆ. ಈ ಮಧ್ಯಪ್ರಾಚ್ಯ ದೇಶಗಳಲ್ಲಿ ಒಂಟೆ ಹಾಲು ಔಷಧಿಯೆಂದು ಪರಿಗಣಿಸಲ್ಪಡುತ್ತದೆಯಂತೆ. ಕಾಯಿಸದೇ ಕುಡಿದ ಈ ಹಾಲಿನಿಂದ ಮನುಷ್ಯರಿಗೆ ಮೊದಲು ಬಂತು ಎಂಬುದು ಪ್ರತೀತಿ. ನಮ್ಮಲ್ಲಿಯೂ ಸಹ ಆಕಳಿಗೆ ಬೇಡದ ಶರೀರದ ತ್ಯಾಜ್ಯ ವಸ್ತುಗಳನ್ನು ಹೊರ ಚೆಲ್ಲಲು ಇರುವ ಗೋಮೂತ್ರವನ್ನು ಔಷಧಿಯೆಂದು ತಪ್ಪು ಗ್ರಹಿಕೆಯಿಂದ ಕುಡಿಯುವಂತೆ ಅಲ್ಲಿಯೂ ಸಹ ಒಂಟೆ ಮೂತ್ರವನ್ನು ಕುಡಿಯುತ್ತಾರಂತೆ.

ಇದೂ ಸಹ ವೈರಾಣು ಹರಡಲು ಕಾರಣ ಎನ್ನುತ್ತಾರೆ ವಿಜ್ಞಾನಿಗಳು. ಒಂಟೆಗಳಲ್ಲಿ ಹೇಗೆ ಈ ವೈರಾಣು ಬಂತು ಎನ್ನುವುದೂ ಸಹ ಕುತೂಹಲಕಾರಿ. 1950 ರಲ್ಲಿ ಕ್ವತಾರಿನ ಜನಸಂಖ್ಯೆ ಕೇವಲ 16,000 ಆದರೆ ತೈಲ ಸಂಪತ್ತು ಪತ್ತೆಯಾದ ನಂತರ ಅನೇಕ ದೇಶಗಳಿಂದ ವಲಸೆ ಬಂದು ಹೋದವರಿಂದ ಅದು ತುಂಬಿ ಹೋಗಿ 2016 ರ ಹೊತ್ತಿಗೆ ಇದು 2,617,634 ತಲುಪಿತು. ಅರಬ್ ದೇಶಗಳಲ್ಲಿ1983-2000 ರ ನಂತರ ತೈಲ ಕಂಪನಿಗಳು ಅಗಾದವಾದ ತೈಲ ಸಂಪತ್ತನ್ನು ಪತ್ತೆ ಹಚ್ಚಿದವು. ಇವುಗಳನ್ನು ಅವುಗಳ ಸ್ಥಾನದಿಂದ ಮಾರುಕಟ್ಟೆಗೆ ಒಯ್ಯಲು ಉತ್ತಮ ಕಡಿಮೆ ಖರ್ಚಿನ ಸಾಧನ ಬೇಕಿತ್ತು. ಆಗಿಂದ ಪ್ರಾರಂಭವಾಗಿದ್ದು ಈ ಒಂಟೆಗಳ ಸಾಕಣೆ ಮತ್ತು ಅವುಗಳ ಮೂಲಕ ತೈಲ ಸಾಗಣೆ.

ಸರ್ಕಾರವೂ ಸಹ ಒಂಟೆ ಸಾಕಣೆ ಪ್ರೋತ್ಸಾಹಿಸಿತು. ಪರಿಣಾಮವಾಗಿ ಒಂಟೆಗಳ ಸಂಖ್ಯೆಯಲ್ಲಿ ಅಗಾಧ ಏರಿಕೆಯಾಯಿತು. ಈ ಒಂಟೆಗಳನ್ನು ಸಾಕುವವರು ಒಂಟೆಗಳ ಸಂಖ್ಯೆಯೊಂದಿಗೇ ಜಾಸ್ತಿಯಾದರು. ಒಂಟೆಗಳ ಜೊತೆಯೇ ಇರುವ ಇವರಿಗೆ ಒಂಟೆಗಳನ್ನು ಭಾಧಿಸದ ಆದರೆ ಮನುಷ್ಯರನ್ನು ಕಾಡುವ ಕರೋನಾ ವೈರಾಣು ಭಾಧೆ ಜಾಸ್ತಿಯಾಯಿತು. ಇವರು ಪಟ್ಟಣಕ್ಕೆ ಬಂದು ಪಟ್ಟಣದ ಜನರಿಗೆ ಈ ವೈರಾಣು ಬಾಧೆ ತಗಲಿಸಿದರು. ಪೇಟೆಯ ಜನ ಇಡೀ ಪ್ರಪಂಚಕ್ಕೆ ಕರೋನಾ ವೈರಾಣುವನ್ನು ಬಳುವಳಿಯಾಗಿ ನೀಡಿದರು.

ಇದು ಸಾಕು ಪ್ರಾಣಿಗಳಿಗೆ ಬರುತ್ತದೆ ಎಂಬ ಬಗ್ಗೆ ದಾಖಲೆಗಳಿಲ್ಲ. ಉಳಿದಂತೆ ಕರೋನಾ ವೈರಾಣುವಿನ ವಿವಿಧ ಪ್ರಭೇಧಗಳು ಹಂದಿ, ನಾಯಿ, ಹಕ್ಕಿಗಳು, ಮೀನು ಇತ್ಯಾದಿಗಳನ್ನು ಬಾಧಿಸುತ್ತಿದ್ದರೂ ಸಹ ಇವು ಮನುಷ್ಯನನ್ನು ಬಾಧಿಸುವ ಬಗ್ಗೆ ಯಾವುದೇ ದಾಖಲೆಗಳು ಇಲ್ಲ.

ನಾಯಿಗಳಲ್ಲಿ ಕರೋನಾ ವೈರಾಣು ಬಾಧೆ

ಈ ವೈರಾಣು ಶ್ವಾನಗಳನ್ನು ಕಡಿಮೆ ಪ್ರಮಾಡದಲ್ಲಿ ಭಾಧಿಸುವುದು. ಇದು ನಾಯಿಗಳಲ್ಲಿ ವಾಂತಿಭೇಧಿ, ತೀವ್ರವಾದ ವಾಂತಿ, ಭೇಧಿ ಮತ್ತು ಬಿಳಿರಕ್ತ ಕಣಗಳ ಕಡಿಮೆಯಾಗುವಿಕೆ ಇತ್ಯಾದಿಗಳನ್ನು ಉಂಟು ಮಾಡುತ್ತದೆ. ಇದಕ್ಕೆ ಉತ್ತಮ ಚಿಕಿತ್ಸೆ ಇಲ್ಲ. ಆದರೆ ನಿಯಮಿತವಾಗಿ ಇದಕ್ಕೆಂದೇ ಇರುವ ಲಸಿಕೆಯನ್ನು ಬಳಸುವುದರಿಂದ ಈ ಕಾಯಿಲೆಯನ್ನು ತಡೆಯಬಹುದು. ಈ ವೈರಸ್ಸು ಮನುಷ್ಯನಿಗೆ ಯಾವುದೇ ರೋಗವನ್ನುಂಟು ಮಾಡುವುದಿಲ್ಲ.

ಬೆಕ್ಕುಗಳ ಕೊರೋನಾ ವೈರಾಣು ಪೀಡೆ

ಇದೂ ಸಹ ಕರೋನಾ ವೈರಾಣುಗಳ ಪೀಡೆಯಿಂದ ಬರಬಹುದಾದ ಕಾಯಿಲೆಯಾದರೂ ಸಹ ಇದು ಹೊಟ್ಟೆಯಯ ಪೆರಿಟೋನಿಯಂ ಪದರದ ಉರಿಯೂತವನ್ನುಂಟು ಮಾಡುತ್ತದೆ. ತೀವ್ರ ಸಾಂಕ್ರಾಮಿಕವಾದ ಈ ಕಾಯಿಲೆಗೆ ಅನೇಕ ಬೆಕ್ಕುಗಳು ಬಲಿಯಾಗುತ್ತವೆ. ರೋಗನಿರೋಧಕ ಶಕ್ತಿ ಕಡಿಮೆ ಇರುವ ಬೆಕ್ಕುಗಳನ್ನು ಬಹಳ ಬೇಗ ಕಾಡುವ ಈ ಕಾಯಿಲೆ ಮರಿ ಬೆಕ್ಕುಗಳನ್ನು ಜಾಸ್ತಿ ಭಾಧಿಸುತ್ತದೆ. ಈ ಕಾಯಿಲೆಯನ್ನು ಅಷ್ಟು ಸುಲಭವಾಗಿ ಪತ್ತೆ ಸಾಧ್ಯವಿಲ್ಲ. ಈಗ ಇದಕ್ಕೆ ಲಸಿಕೆ ತಯಾರಿಸಲಾಗಿದ್ದು ಇದನ್ನು ಮೂಗಿನ ಮೂಲಕ ನೀಡಲಾಗುತ್ತದೆ. ಒಮ್ಮೆ ಈ ಕಾಯಿಲೆ ಬೆಕ್ಕಿಗೆ ಬಂದರೆ ಬೆಕ್ಕನ್ನು ಉಳಿಸಿಕೊಳ್ಳುವುದು ಬಹಳ ಕಷ್ಟ. ಚಿಕ್ಕ ಬೆಕ್ಕಿನ ಮರಿಗಳಿಗೆ ಈ ಕಾಯಿಲೆ ಬಹಳ ಮಾರಕ.

ಹಂದಿಗಳಲ್ಲಿ ಕರೋನಾ ವೈರಾಣು ತೊಂದರೆ

ಸುಮಾರು ನಾಲ್ಕೈದು ವಿಧದ ಕೊರೋನಾ ವೈರಾಣುಗಳು ಹಂದಿಗಳನ್ನು ಭಾಧಿಸುತ್ತವೆ. ಇದರಲ್ಲಿ ಅನೇಕ ಕರೋನಾ ವೈರಾಣುಗಳ ಪಾತ್ರ ಇದೆ. ಇವುಗಳಲ್ಲಿ ಪೋರ್ಸೈನ್ ಎಪಿಡೆಮಿಕ್ ಡಯೇರಿಯಾ ಇದು ತೀವ್ರತರನಾಗಿದ್ದು ಒಂದು ಹಂದಿಯಿಂದ ಮತ್ತೊಂದು ಹಂದಿಗೆ ಅತಿ ಶೀಘ್ರದಲ್ಲಿ ಹಬ್ಬುತ್ತದೆ. ತೀವ್ರತರನಾದ ಬೇಧಿ, ವಾಂತಿ, ಶರೀರದ ತಾಪಮಾನ ಇಳಿಯುವುದು, ನಿರ್ಜಲೀಕರಣ ಇತ್ಯಾದಿ ಈ ರೋಗದ ಲಕ್ಷಣಗಳು. ಶೇ 80-100ರಷ್ಟು ಸಾವು ಈ ಕಾಯಿಲೆಯಲ್ಲಿ ಕಂಡು ಬರುತ್ತದೆ. ಲಸಿಕೆ ಹಾಕಿ ತಡೆಯುವುದೊಂದೇ ಇದಕ್ಕೆ ದಾರಿ.

ಪೋರ್ಸೈನ್ ಹೀಮ್ ಅಗ್ಲುಟಿನೇಟಿಂಗ್ ಕರೋನಾ ವೈರಸ್ ಸಹ ಹಂದಿಗಳಲ್ಲಿ ಅಷ್ಟೇ ತೀವ್ರವಾದ ಕಾಯಿಲೆ. ಇದರಲ್ಲಿಯೂ ಸಹ ಹಂದಿಮರಿಗಳು ಸಾವಿಗೀಡಾಗುತ್ತವೆ. ಮೆದುಳು ಜ್ವರದಲ್ಲಿನ ಲಕ್ಷಗಳು ಕಾಣಿಸಿಕೊಂಡು ತೀವ್ರವಾದ ವಾಂತಿ ಇರುತ್ತದೆ. ಇದಕ್ಕೂ ಸೂಕ್ತ ಚಿಕಿತ್ಸೆ ಇಲ್ಲ. ಲಸಿಕೆಯಿಂದ ಮಾತ್ರ ತಡಿಯಬಹುದು. ಒಮ್ಮೆ ಬಂದರೆ ಎಲ್ಲಾ ಭಾಧಿತ ಹಂದಿಗಳು ಸತ್ತು ತಾನೇ ನಿಯಂತ್ರಣಕ್ಕೆ ಬರಬೇಕು.

ಆಕಳು ಮತ್ತು ಜಾನುವಾರುಗಳಲ್ಲಿ ಕರೋನಾ ವೈರಾಣು ಬಾಧೆ

ಕರುಗಳಲ್ಲಿ ಬಹಳ ಸಾಮಾನ್ಯವಾದ ಈ ಕಾಯಿಲೆ ತೀವ್ರವಾದ ಬೇಧಿ, ನಿರ್ಜಲೀಕರಣಮತ್ತು ಹಸಿವಿಲ್ಲದಿರುವಿಕೆ ಇತ್ಯಾದಿ ಲಕ್ಷಣಗಳನ್ನು ಹೊಂದಿದೆ. ಶ್ವಾಸಕೋಶದ ಉರಿಯೂತವೂ ಸಹ ಇರುತ್ತದೆ. ಇದಕ್ಕೆ ಉತ್ತಮ ಲಸಿಕೆ ಇಲ್ಲ.

ಕುದುರೆಗಳ ಕರೋನಾ ವೈರಾಣು ಬಾಧೆ

ಕುದುರೆ, ಕತ್ತೆ ಮತ್ತು ಈ ಜಾತಿಯ ಪ್ರಾಣಿಗಳಲ್ಲಿ ಈ ಕಾಯಿಲೆ ಬಂದಾಗ ಬೇಧಿ ಮತ್ತು ಹೊಟ್ಟೆನೋವು ಅನುಕ್ರಮವಾಗಿ ಕಂಡು ಬರುತ್ತದೆ. ಚಿಕಿತ್ಸೆಯ ನಂತರ ಬಹುತೇಕ ಪ್ರಾಣಿಗಳು ಚೇತರಿಸಿಕೊಳ್ಳುತ್ತವೆ.
ಹಕ್ಕಿಗಳ ಕೊರೊನಾ ಬಾಧೆ
ಏವಿಯನ್ ಇನ್ಫೆಕ್ಷಿಯಸ್ ಬ್ರೋಂಕೈಟಿಸ್ ವೈರಸ್ ಎಂಬ ವೈರಾಣು ಈ ಕಾಯಿಲೆಯನ್ನುಂಟು ಮಾಡುತ್ತದೆ. ಹಕ್ಕಿಗಳಲ್ಲಿ ಗುರುತಿಸಲಾಗದ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯನ್ನುಂಟು ಮಾಡುತ್ತದೆ. ಅನೇಕ ಹಕ್ಕಿಗಳು ಸಾಯುತ್ತವೆ. ಮರಣೋತ್ತರ ಪರೀಕ್ಷೆಯಲ್ಲಿ ಮೂತ್ರಜನಕಾಂಗ ಹಾಳಾಗಿರುವುದು ಕಂಡು ಬರುತ್ತದೆ.  ಇಷ್ಟು ಕರೋನಾ ಪುರಾಣ ಸಾಕು.

ಆಕರ: ಕರೋನಾ ವೈರಾಣು ಬಾಧೆ Appeal et al., 1980 and Carmicheal and Binn, 1981: Animal Corona Virus.In Advances in Veterinary Medicine 1999.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಕೊರೋನ ವೈರಾಣುವಿನ ಪರಿಚಯ

Published

on

 • ಡಾ. ಜೆ ಎಸ್ ಪಾಟೀಲ

ವೈರಾಣು ಅದೊಂದು ಸಸಾರಜನಕ ಅಣುವಾಗಿದ್ದು ಅದು ಕೊಬ್ಬಿನ ರಕ್ಷಣಾ ಪರದೆ ಹೊಂದಿರುತ್ತದೆ. ಇಂಥ ವೈರಾಣು ಮನುಷ್ಯನ ಕಣ್ಣು ˌ ಮೂಗುˌ ಗಂಟಲು ಮುಂತಾದ ಸೂಕ್ಷ್ಮ ಅಂಗಾಗಗಳ ಜೀವಕೋಶವನ್ನು ಸೇರಿಕೊಂಡ ಮೇಲೆ ಅದು ತನ್ನ ಅನುವಂಶಿಯ ಪರಿವರ್ತನೆಗೊಳಗಾಗಿ ಮನುಷ್ಯನ ಜೀವಕೋಶಗಳನ್ನು ಆಕ್ರಮಣಕಾರಿ ಗುಣಕಗಳನ್ನಾಗಿ ಪರಿವರ್ತಿಸುತ್ತದೆ.

ವೈರಾಣುವು ಒಂದು ಸಸಾರಜನಕ ಅಣುವಾಗಿರುವುದರಿಂದ ಇದನ್ನು ಸುಲಭವಾಗಿ ನಾಶಗೊಳಿಸಲಾಗದು. ಆದರೆ ಅದು ತನ್ನಿಂದ ತಾನೆ ಹಾಳಾಗಿ ಹೋಗುತ್ತದೆ. ಅದು ನಾಶಗೊಳ್ಳುವ ಅವಧಿಯು ವಾತಾವರಣದ ಉಷ್ಣತೆˌ ಆದ್ರತೆˌ ಮತ್ತು ಅದು ಯಾವ ಪದಾರ್ಥದ ಮೇಲಿರುವುದು ಎನ್ನುವುದನ್ನು ಅವಲಂಬಿಸಿರುತ್ತದೆ.

ವೈರಾಣುವು ದುರ್ಬಲವಾಗಿದ್ದು ಅದು ಕೊಬ್ಬಿನ ತೆಳುವಾದ ಪರದೆಯ ರಕ್ಷಣೆಯಲ್ಲಿರುತ್ತದೆ. ಆದ್ದರಿಂದ ಅದನ್ನು ನಾಶಗೊಳಿಸಲು ಮಾರ್ಜಕ ಅಥವ ಡಿಟರಜೆಂಟಯುಕ್ತ ನೀರು ಉಪಯೋಗಿಸಬೇಕಾಗುತ್ತದೆ. ಆ ಸೋಪುಯುಕ್ತ ನೀರಿನಿಂದ ನಮ್ಮ ಕೈಗಳನ್ನು ಕನಿಷ್ಟ 20 ಸೆಕೆಂಡಿಗಿಂತ ಹೆಚ್ಚು ಅವಧಿಗೆ ತಿಕ್ಕಿ ತೊಳೆಯಬೇಕು. ಆಗ ಸೋಪುಯುಕ್ತ ನೀರಿನ ನೊರೆಯಲ್ಲಿ ವೈರಾಣುವಿದ ಮೇಲಿನ ಕೊಬ್ಬಿನ ಪರದೆ ನಾಶವಾಗಿ ಅದು ಸತ್ತುಹೋಗುತ್ತದೆ.

ಕೊಬ್ಬು ಬಿಸಿ ನೀರಿನಲ್ಲಿ ಬಹುಬೇಗ ಕರಗುವುದರಿಂದ ಮತ್ತು ಹೆಚ್ಚು ನೊರೆ ಉತ್ಪಾದಿಸುವುದರಿಂದ ಸೋಪನ್ನು ಬಿಸಿ ನೀರು ಉಪಯೋಗಿಸಿ ಕೈ ಮತ್ತು ಬಟ್ಟೆಗಳನ್ನು ತೊಳೆಯಬೇಕು. ಮದ್ಯಸಾರ (ಅಲ್ಕೊಹಾಲ್) ಅಥವ ಅದರ 65 % ಮಿಶ್ರಣವು ಕೊಬ್ಬನ್ನು ಬಹು ಬೇಗ ಕರಗಿಸುವುದರಿಂದ ವೈರಾಣುವಿನ ಮೈಮೇಲಿನ ಕೊಬ್ಬಿನ ಪರದೆ ಬೇಗ ನಾಶಗೊಳಿಸಬಹುದು.

ವೈರಾಣುಗಳು ತಂಪಾದ ವಾತಾವರಣದಲ್ಲಿ ಮತ್ತು ಕ್ರತಕ ಹವಾನಿಯಂತ್ರಿತ ಆದ್ರತೆಯುಳ್ಳ ಸ್ಥಳಗಳಲ್ಲಿ ಸ್ಥಿರವಾಗಿರುತ್ತವೆ. ಆದ್ದರಿಂದ ಡಿಹ್ಯೂಮಿಡಿಫೈಡ್ˌ ಒಣ ಮತ್ತು ಬಿಸಿ ಹವೆ ಇರುವ ಬೆಳಕಿನ ವಾತಾವರಣ ವೈರಾಣುವನ್ನು ಬೇಗ ನಾಶಗೊಳಿಸಬಲ್ಲುದು.

ಯಾವುದೇ ವಸ್ತುವಿನ ಮೇಲೆ ಬೀಳುವ ಅತಿನೇರಳೆ ಬೆಳಕು (ಯುವಿ ಲೈಟ್) ಅದರಲ್ಲಿರುವ ವೈರಾಣುವನ್ನು ನಾಶಗೊಳಿಸಬಲ್ಲುದು. ಈ ಅತಿನೇರಳೆ ಕಿರಣಗಳು ಒಮ್ಮೊಮ್ಮೆ ಮನುಷ್ಯನ ದೇಹದ ಕೊಲೆಜೆನ್ನನ್ನು ಕೂಡ ನಾಶ ಮಾಡಿ ಕ್ಯಾನ್ಸರಕಾರವಾಗಬಹುದಾದ್ದರಿಂದ ಜಾಗುರುಕತೆಯಿಂದ ಬಳಸಬೇಕಾಗುವುದು.

ವೈರಾಣುಗಳು ಆರೋಗ್ಯಪೂರ್ಣ ತ್ವಚೆಯಲ್ಲಿ ಸೇರಲಾರವು. ವಿನೇಗರ್ˌ ಸ್ಪಿರೀಟ್ ˌ ಮತ್ತು ವೋಡ್ಕಗಳು ವೈರಾಣುವನ್ನು ನಾಶಗೊಳಿಸಲಾರವು. ಏಕೆಂದರೆ ಅವುಗಳಲ್ಲಿ ಮದ್ಯಸಾರದ ಪ್ರಮಾಣ 65% ಕ್ಕಿಂತ ಕಡಿಮೆ ಇರುತ್ತದೆ. ಮನೆಯ ಕಿಟಿಕಿ ಬಾಗಿಲುಗಳು ತೆರೆದಿಟ್ಟು ಆದಷ್ಟು ಮನೆ ಗಾಳಿಯಾಡುವಂತಿದ್ದರೆ ವೈರಾಣು ಬದುಕುಳಿಯದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ಬಹಿರಂಗ17 hours ago

ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ) ಸ್ಥಾಪನೆಗೆ ಕಾರಣರಾದ ಬಾಬಾಸಾಹೇಬ್ ಅಂಬೇಡ್ಕರ್

ರಘೋತ್ತಮ ಹೊ.ಬ ಭಾರತೀಯ ರಿಸರ್ವ್ ಬ್ಯಾಂಕ್ ಅಥವಾ ಆರ್ ಬಿ ಐ ಅಕ್ಷರಶಃ ಬಾಬಾಸಾಹೇಬ್ ಅಂಬೇಡ್ಕರರ ಮೆದುಳಿನ ಕೂಸು Brain child of Babasaheb. ಹೇಗೆಂದಿರಾ? ಇಲ್ಲಿ...

ಅಂತರಂಗ20 hours ago

ಅರಿಮೆಯ ಅರಿವಿರಲಿ-4 : ಒಳಗತ್ತಲ ಕಳ್ಳರು

ಯೋಗೇಶ್ ಮಾಸ್ಟರ್ ಅಡ್ಡಗಾಲಾಗುವ ಅರಿಮೆಗಳು ಅದೊಂದು ಮಗು. ಇತರ ಎಲ್ಲಾ ಮಕ್ಕಳು ಸಂತೋಷದಿಂದ ಕುಣಿದುಕೊಂಡು ಆಡುವಾಗ ತಾನೂ ಹಾಗೆಯೇ ಹೋಗಿ ಕುಣಿಯಬೇಕು ಎಂದು ಆಸೆ ಪಡುತ್ತದೆ. ಆದರೆ...

ದಿನದ ಸುದ್ದಿ21 hours ago

ದಾವಣಗೆರೆ | ಗ್ಯಾಸ್ ಸಿಲಿಂಡರ್ ವಿತರಕನ ಮೇಲೆ ಪೊಲೀಸರಿಂದ ಹಲ್ಲೆ ; ಆರೋಪ

ಸುದ್ದಿದಿನ,ದಾವಣಗೆರೆ : ಜಿಲ್ಲೆಯ, ಚನ್ನಗಿರಿ ತಾಲೂಕಿನ ನವಿಲೇಹಾಳು ಗ್ರಾಮದ ಗ್ಯಾಸ್ ಸಿಲಿಂಡರ್ ವಿತರಕ ರಜಾಕ್ ಎಂಬುವವರ ಮೇಲೆ ಮಂಗಳವಾರ ಪೊಲೀಸರು ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ....

ದಿನದ ಸುದ್ದಿ1 day ago

ದಾವಣಗೆರೆ | ನಾಳೆಯಿಂದಲೇ ಹೋಟೆಲ್ ಕಾರ್ಯಾರಂಭಕ್ಕೆ ಸೂಚನೆ ; ತಾವಿರುವಲ್ಲಿಯೇ ಪಡಿತರ ಪಡೆಯಿರಿ: ಜಿಲ್ಲಾಧಿಕಾರಿ

ಸುದ್ದಿದಿನ,ದಾವಣಗೆರೆ : ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್‍ಡೌನ್‍ನಿಂದ ಸಿಲುಕಿಕೊಂಡಿರುವ ನೆರೆ ಜಿಲ್ಲೆಗಳ ಹಾಗೂ ನೆರೆ ರಾಜ್ಯಗಳ ಸಾರ್ವಜನಿಕರು ತಮ್ಮ ಬಳಿ ಪಡಿತರ ಚೀಟಿ ಇದ್ದಲ್ಲಿ ತಾವಿರುವಲ್ಲಿಯೇ...

ಅಂತರಂಗ2 days ago

ಅರಿಮೆಯ ಅರಿವಿರಲಿ-3 : ಮನೋಬರಹವುಂಟು ಹಣೆಬರಹವಿಲ್ಲ

ಯೋಗೇಶ್ ಮಾಸ್ಟರ್ ಸಹಜವಾಗಿ ಅಥವಾ ಸರಳವಾಗಿ ಇರಬಹುದಾದದ್ದು ತೊಡಕುಗಳನ್ನೋ, ಜಟಿಲತೆಯನ್ನೋ ಅಥವಾ ಸಂಕೀರ್ಣತೆಯನ್ನೋ ಹೊಂದಿರುವಂತಹದ್ದಕ್ಕೆ ಕಾಂಪ್ಲೆಕ್ಸ್ ಅಂತ ಅನ್ನುತ್ತೇವೆ. ನನ್ನ ತಿಳುವಳಿಕೆಯ ಪರಿಮಿತಿಯಲ್ಲಿ ಮನುಷ್ಯನ ಮನಸ್ಸು ಜಗತ್ತಿನಲ್ಲಿರುವ...

ದಿನದ ಸುದ್ದಿ2 days ago

ಉಳ್ಳವರ ಭಾರತದಲ್ಲಿ ನರಳುತ್ತಿರುವ ಬಡ ಭಾರತ

ಜಗದೀಶ್ ಕೊಪ್ಪ ನಮ್ಮ ನಡುವಿನ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಹಾಗೂ ಮಾನವೀಯ ಮುಖದ ಹೃದಯವಂತ ಅಮಾರ್ತ್ಯ ಸೇನ್ ದಶಕದ ಹಿಂದೆ ಭಾರತದ ಅಭಿವೃದ್ಧಿಯನ್ನು ವ್ಯಾಖ್ಯಾನಿಸುತ್ತಾ, “ ಭಾರತದಲ್ಲಿ ಎರಡು...

ದಿನದ ಸುದ್ದಿ3 days ago

ಟಿಕ್ ಟಾಕ್ ಹಾಡಿಗೆ ದಾವಣಗೆರೆ ಕಾರ್ಪೊರೇಟರ್ ಡ್ಯಾನ್ಸ್ ವಿಡಿಯೋ ವೈರಲ್ : ಲಾಕ್ ಡೌನ್ ವೇಳೆ ಇದೆಲ್ಲಾ ಬೇಕಿತ್ತಾ ? ನೆಟ್ಟಿಗರ ಆಕ್ರೋಶ

ಸುದ್ದಿದಿನ,ದಾವಣಗೆರೆ : ಕೊರೊನಾ ವೈರಸ್ ನಿಂದ‌ ಇಡೀ ದೇಶ ಭಯದ ವಾತಾವರಣದಲ್ಲಿದೆ. ಪ್ರಧಾನಿಗಳ ಆದೇಶದಂತೆ ದೇಶವೇ ಲಾಕ್ ಡೌನ್ ಆಗಿದ್ದು, ಕೊರೊನಾ ವೈರಸ್ ಅನ್ನು ಹೇಗೆಲ್ಲಾ ತಡೆಯಬೇಕು...

ಅಂತರಂಗ3 days ago

ಅರಿಮೆಯ ಅರಿವಿರಲಿ – 2 : ಚಿತ್ರಗನ್ನಡಿ ದ್ವಂದ್ವ

ಯೋಗೇಶ್ ಮಾಸ್ಟರ್ ಮುಗ್ಧರು ಮತ್ತು ಮೂರ್ಖರು; ಈ ಇಬ್ಬರೂ ಸಾಮಾನ್ಯವಾಗಿ ದ್ವಂದ್ವದಿಂದ ಬೇಗ ಪಾರಾಗುತ್ತಾರೆ. ಸಾಮಾನ್ಯವಾಗಿ ಅವರಿಗೆ ದ್ವಂದ್ವವೇ ಆಗದು. ಮೊದಲು ಮೊಸರನ್ನ ತಿನ್ನಲಾ ಅಥವಾ ಪುಳಿಯೋಗರೆ...

ದಿನದ ಸುದ್ದಿ3 days ago

ಕೋವಿಡ್-19 ಕೋಲಾಹಲ

ಡಾ.ಎಚ್.ಎಸ್.ಅನುಪಮಾ ಬೆಳಗಾವಿ ಹತ್ತಿರದ ಹಳ್ಳಿಗೆ ಚೀನಾದಿಂದ ಟೆಕ್ಕಿ ದಂಪತಿಗಳು ಬಂದಿಳಿದರು. ಮೊದಲಾಗಿದ್ದರೆ ತಮ್ಮೂರಿಗೆ ವಿದೇಶದಿಂದ ಬಂದವರ ಕಾಣಲು ಹಳ್ಳಿಯ ಅಬಾಲವೃದ್ಧ ಸ್ತ್ರೀಪುರುಷರಾದಿಯಾಗಿ ಎಲ್ಲರೂ ಕುತೂಹಲಿಗಳಾಗಿರುತ್ತಿದ್ದರು. ಕರೆಕರೆದು ಮಾತಾಡಿಸುತ್ತಿದ್ದರು....

ಲೈಫ್ ಸ್ಟೈಲ್3 days ago

ಪಕ್ಷಿ ಪರಿಚಯ | ತೇನೆ ಹಕ್ಕಿ

ಭಗವತಿ ಎಂ.ಆರ್ ಹಕ್ಕಿ ಲೋಕದ ಸೂಕ್ಷ್ಮಗ್ರಾಹಿ ಇದು.ಸಂಸ್ಕೃತದಲ್ಲಿ ಟಿಟ್ಟಿಭ ಅಂತಲೂ ಕರೆಯುತ್ತಾರೆ.ಮನುಷ್ಯರನ್ನು ಕಂಡರೆ ಬೆದರಿ ಮಾರುದೂರ ಓಡುತ್ತವೆ.ಎಷ್ಟೇ ದೂರದಲ್ಲಿದ್ದರೂ, ಅದರ ಸಮೀಪಿಸುತ್ತಿದ್ದೇವೆ ಅನ್ನುವುದು ಅದರ ಗಮನಕ್ಕೆ ಬಂದರೆ...

Trending