Connect with us

ಸಿನಿ ಸುದ್ದಿ

ಕಟ್ಟ ಕಡೆಯ ಬಿಂದು-ಇದ್ದೆಡೆಯೇ ಕಂಡಾಗ

Published

on

  • ನಾ ದಿವಾಕರ

ಬುಧವಾರ ಬಾಲಿವುಡ್ ನಟ ಇರ್ಫಾನ್ ಖಾನ್ ನಿಧನರಾಗಿದ್ದು ತಿಳಿದಾಗ ಕೆಲವು ಕ್ಷಣ ಮಾತೇ ಹೊರಡಲಿಲ್ಲ. ಇತ್ತೀಚೆಗೆ ಕಂಬನಿ ಬತ್ತಿ ಹೋಗಿದೆ ಇಲ್ಲದಿದ್ದರೆ ಸುರಿದುಹೋಗುತ್ತಿತ್ತೇನೋ ! ಆದರೂ ಕಣ್ಣಾವೆಗಳು ವದ್ದೆಯಾದ ಅನುಭವ. ನೂರಾರು ಚಿತ್ರಗಳಲ್ಲಿ ನಟಿಸಿದವರಲ್ಲ, ಗಗನದೆತ್ತರದ ಕಟೌಟ್ ನೋಡಿರುವ ಆರಾಧ್ಯ ದೈವ ಎನಿಸಿಕೊಂಡವರಲ್ಲ. ಅಭಿಮಾನಿ ಸಂಘಗಳಿಗೆ ಪಾತ್ರರಾದವರಲ್ಲ. ಬಹುಶಃ 35 ವರ್ಷಗಳ ಪಯಣದಲ್ಲಿ ತಮಗೆ ಲಭಿಸಿದ ಅವಕಾಶವನ್ನು ಕೊಂಚವೂ ರಾಜಿ ಮಾಡಿಕೊಳ್ಳದೆ ನ್ಯಾಯಸಲ್ಲಿಸಿದ ಕೆಲವೇ ನಟರಲ್ಲಿ ಇರ್ಫಾನ್ ಒಬ್ಬರು.

ಅವರು ಇಷ್ಟವಾಗುವುದೂ ಈ ಕಾರಣಕ್ಕೇ. ಸಂಭಾಷಣೆಯ ವೈಖರಿ, ಕಂಗಳಲ್ಲೇ ಭಾವ ಸ್ಫುರಿಸುವ ಅದ್ಭುತ ಕಲಾಭಿವ್ಯಕ್ತಿ, ಪಾತ್ರದೊಳಗೆ ಪರಕಾಯ ಪ್ರವೇಶ, ಅಭಿನಯದಲ್ಲಿ ತಲ್ಲೀನತೆ ಮತ್ತು ತಾವು ನಿರ್ವಹಿಸುವ ಪಾತ್ರವನ್ನು ಪರದೆಯ ಹೊರ ತಂದು ನೋಡುವವರ ಮಧ್ಯೆ ನಿಲ್ಲಿಸುವಂತಹ ಕಲಾತ್ಮಕತೆ ಇವೆಲ್ಲವೂ ಇರ್ಫಾನ್ ಅವರನ್ನು ಅದ್ಭುತ ನಟನನ್ನಾಗಿ ಮಾಡಿತ್ತು.

ಅವರಲ್ಲಿ ಗಮನಿಸಬಹುದಾದ ಮತ್ತೊಂದು ಅಂಶ, ಯಾವುದೇ ಅನುಕರಣೆ ಇರಲಿಲ್ಲ. ಅವರಿಗೆ ಗಾಡ್ ಫಾದರ್ ಸಹ ಇರಲಿಲ್ಲವೆನ್ನಿ. ತಮ್ಮ ಕಲಾ ಸಾಮರ್ಥ್ಯದ ಮೇಲೆ ತಾವೇ ನಿರ್ಮಿಸಿಕೊಂಡ ಕಲಾ ಪ್ರಪಂಚದಲ್ಲಿ ವಿಶ್ವದಾದ್ಯಂತ ಜನಪ್ರಿಯತೆ ಪಡೆದ ನಟ. ಕೆಲವೊಮ್ಮೆ ಸೈಯೀದ್ ಜಾಫ್ರಿ ನೆನಪಾಗುತ್ತಾರೆ. ಪಾತ್ರಗಳಲ್ಲಿ ಜೀವಂತಿಕೆಯನ್ನು ತುಂಬಲು ತಮ್ಮ ಕಣ್ಣುಗಳೇ ಸಾಕು ಎನ್ನುವ ಕೆಲವೇ ಸಮಕಾಲೀನ ನಟರು ನಮ್ಮ ನಡುವೆ ಇದ್ದಾರೆ/ಇದ್ದರು. ಸೈಯಿದ್ ಜಾಫ್ರಿ, ನಾಸಿರುದ್ದಿನ್ ಶಾ, ಕಮಲ ಹಾಸನ್, ಅನುಪಮ್ ಖೇರ್, ಫರೂಕ್ ಶೇಖ್, ನಾನಾ ಪಾಟೇಕರ್ ಮತ್ತು ಇರ್ಫಾನ್ ಖಾನ್.

ಇರ್ಫಾನ್ ಈಗ ಇದ್ದರು ಎನ್ನುವ ಸಾಲಿಗೆ ಸೇರಿದ್ದಾರೆ. ಒಬ್ಬ ನಟ ಪರದೆಯ ಮೇಲೆ ಬಿಂಬಿಸುವ ಮೌಲ್ಯಗಳೇ ಬೇರೆ, ನಿತ್ಯ ಜೀವನದಲ್ಲಿ ಅನುಸರಿಸುವ ಮೌಲ್ಯಗಳೇ ಬೇರೆ ಎನ್ನುವುದು ದಿಟ. ಆದರೆ ಜನಮಾನಸದಲ್ಲಿ ತಮ್ಮ ಅಭಿನಯ ಕಲೆಯಿಂದ ಮನೆ ಮಾಡಿದ ಕಲಾವಿದ ಜನಸಾಮಾನ್ಯರ ತುಡಿತಗಳಿಗೆ ಸ್ಪಂದಿಸಿದರೆ ಎಷ್ಟು ಆಪ್ತರಾಗಬಹುದು ? ಈ ಪ್ರಶ್ನೆಗೆ ಇರ್ಫಾನ್ ಅಂಥವರು ಮಾತ್ರ ಉತ್ತರ ನೀಡಲು ಸಾಧ್ಯ. ಅದಕ್ಕೇ ಇರ್ಫಾನ್ ಭಾಯಿ ಇಷ್ಟವಾಗುತ್ತಾರೆ.

53, ಸಾಯುವ ವಯಸ್ಸಲ್ಲ. ಆದರೆ ಅವರು ಎದುರಿಸಿದ ಖಾಯಿಲೆಗೆ ಒಂದರಿಂದ ನೂರು ಲೆಕ್ಕವೇ ಗೊತ್ತಿಲ್ಲ. ಕರೆದುಕೊಂಡು ಹೋಗಲೆಂದೇ ಬಂದ ಖಾಯಿಲೆಯೊಡನೆ ಎರಡು ವರ್ಷಗಳ ಕಾಲ ಸೆಣಸಿ ಇರ್ಫಾನ್ ವಿದಾಯ ಹೇಳಿದ್ದಾರೆ. 2018ರಲ್ಲಿ ಅವರು ಲಂಡನ್ನಿನ ಆಸ್ಪತ್ರೆಗೆ ದಾಖಲೆಯಾಗಿದ್ದಾಗ ಬರೆದ ಪುಟ್ಟ ಬರಹ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಅದರ ಕೆಲವು ಸಾಲುಗಳು ಹೀಗಿವೆ :- ನಾನು ವೇಗವಾಗಿ ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಕನಸುಗಳು, ಯೋಜನೆಗಳು, ಗುರಿಗಳು ಎಲ್ಲವುಗಳಲ್ಲಿ ಎಂಗೇಜ್ ಆಗಿದ್ದೆ. ಥಟ್ಟನೆ ಯಾರೋ ಭುಜ ತಟ್ಟಿದಂತಾಯಿತು, ತಿರುಗಿ ನೋಡಿದರೆ ಟಿ ಸಿ ನಿಂತಿದ್ದರು “ ನೀವು ತಲುಪಬೇಕಾದ ಸ್ಥಳ ಬಂದಿದೆ, ಪ್ಲೀಸ್ ಇಳಿದುಬಿಡಿ ಎಂದರು, ಇಲ್ಲ ಇಲ್ಲ ನಾನು ತಲುಪಬೇಕಾದ ಸ್ಥಳ ಇನ್ನೂ ಬಂದಿಲ್ಲ ಎಂದೆ, ಇಲ್ಲ ಇದೇ ಅದು ಕೆಲವೊಮ್ಮೆ ಹಾಗೆಯೇ ಆಗುತ್ತೆ ”. ಓಹ್ ಸಾವಿನ ನಿರೀಕ್ಷೆಯಲ್ಲಿರುವ ಒಬ್ಬ ವ್ಯಕ್ತಿ ಈ ರೀತಿಯ ರೂಪಕವನ್ನು ಬರೆಯುವುದೆಂದರೆ ಅಚ್ಚರಿಯಾಗುವುದಲ್ಲವೇ ?

ಇರ್ಫಾನ್ ಹೀಗೆ ಬರೆದಿದ್ದನ್ನು ಅನುವಾದಿಸಿದ ವೇಣುಗೋಪಾಲ್ ಶೆಟ್ಟಿಯವರಿಗೆ ಸಾವಿರ ವಂದನೆಗಳು. ಹಂಚಿಕೊಂಡ ವಿನುತಾ ವಿಶ್ವನಾಥ್ ಮತ್ತು ಪುರುಷೋತ್ತಮ್ ಬಿಳಿಮಲೆಯವರಿಗೂ. ಜೀವನ ದರ್ಶನ ಮಾಡಿಸುವ ಇಂತಹ ಮಾತುಗಳು ಕೆಲವೊಮ್ಮೆ ಐಡಿಯಲಿಸ್ಟಿಕ್ ಎನಿಸಬಹುದು ಅಥವಾ ಭಾವನಾತ್ಮಕವೋ, ಅಧ್ಯಾತ್ಮವೋ ಎನಿಸಬಹುದು. ಆದರೆ ಈ ರೀತಿ ಸಾವಿನ ನಿರೀಕ್ಷೆಯಲ್ಲಿರುವವರೊಡನೆ ಬದುಕಿದವರಿಗೆ ಇದು ಹೆಚ್ಚು ಆಪ್ತ ಎನಿಸುತ್ತದೆ. ಇರ್ಫಾನ್ ಎರಡು ವರ್ಷಗಳ ಕಾಲ ಹೀಗೆ ಅಂತ್ಯದ ನಿರೀಕ್ಷೆಯಲ್ಲೇ ಬದುಕಿ ಮರ್ತ್ಯ ಮೀರಿ ನಿಲ್ಲಲು ಯತ್ನಿಸಿದ್ದಾರೆ.

ಅವರೇ ತಮ್ಮ ಪತ್ರದಲ್ಲಿ ಹೇಳಿರುವಂತೆ “ ಸಾಗರದಲ್ಲಿ ತೇಲುತ್ತಿರುವ ಮರದ ತೊಗಟೆಯಂತಿರುವ ನಿಮಗೆ ಅಲ್ಲಿನ ಅಲೆಗಳು ಹೇಗಿರಬಹುದೆಂದು ಊಹಿಸಲೂ ಅಸಾಧ್ಯವಾಗುತ್ತದೆ, ಅವುಗಳನ್ನು ನಿಯಂತ್ರಿಸಲು ನೀರು ಹತಾಶರಾಗಿ ಪ್ರಯತ್ನಿಸುತ್ತೀರಿ ” ಮತ್ತೊಂದು ರೂಪಕ. ಬದುಕುವ ಛಲ ಮತ್ತು ಸಾವಿನ ನಿರೀಕ್ಷೆಯ ನಡುವೆ ಸಂಘರ್ಷ ಎಂದರೆ ಇದೇ ಅಲ್ಲವೇ ? ಎಂತಹ ಬರಹ ಬಿಟ್ಟುಹೋಗಿದ್ದೀರಿ ಇರ್ಫಾನ್. ಒಂದೇ ಪುಟ ಇದ್ದರೂ ಬೃಹತ್ ಕಾವ್ಯದಂತೆ ಭಾವ ಸ್ಫುರಿಸಿದೆ. ನೀವು ನಿಜಕ್ಕೂ ಧನ್ಯ ಇರ್ಫಾನ್ ಭಾಯ್.

ಇರ್ಫಾನ್‍ಖಾನ್ ಅವರ ಸಾವಿನ ಸುದ್ದಿ ಖಿನ್ನತೆ ಮೂಡಿಸಿತ್ತು

ಮಧ್ಯಾಹ್ನ ಕೊರೋನಾ ಇಲ್ಲದ ಸುದ್ದಿಯನ್ನು (ಕನ್ನಡ ಸುದ್ದಿಮನೆಯಲ್ಲ) ನೋಡಲು ಅವಕಾಶ ಸಿಕ್ಕಿತೆಂಬ ಸಣ್ಣ ಖುಷಿ ಒಂದೆಡೆಯಾದರೆ ಇರ್ಫಾನ್‍ಖಾನ್ ಅವರ ಸಾವಿನ ಸುದ್ದಿ ಖಿನ್ನತೆ ಮೂಡಿಸಿತ್ತು. ನೆನ್ನೆ ರಾತ್ರಿ ಏನೋ ನೆನಪಾಯಿತು. ರಾಜೇಶ್ ಖನ್ನಾ-ಅಮಿತಾಬ್ ನಟನೆಯ, ಹೃಷಿಕೇಶ್ ಮುಖರ್ಜಿಯ ಆನಂದ್ ಚಿತ್ರ ನೆನಪಾಯಿತು. ನೋಡಿದಾಗಲೆಲ್ಲಾ ಕಣ್ಣು ವದ್ದೆ ಮಾಡುವ ಚಿತ್ರ ಅದು. ಹಾಗೆಯೇ ಸಾವು ಬದುಕಿನ ಸಂಘರ್ಷವನ್ನು, ಸಾವಿನ ನಿರೀಕ್ಷೆಯಲ್ಲಿರುವ ಒಬ್ಬ ಸರಳ ವ್ಯಕ್ತಿಯ ಕಣ್ಣುಗಳ ಮೂಲಕ ತೋರಿಸುವ ಚಿತ್ರವೂ ಹೌದು. ರಾಜೇಶ್ ಖನ್ನನ ಬದುಕಿನ ಮೈಲಿಗಲ್ಲು ಈ ಚಿತ್ರ. ಈ ಚಿತ್ರದ ಕೆಲವು ಸಂಭಾಷಣೆಗಳು ಸಾರ್ವಕಾಲಿಕವಾದವು, ಸಾರ್ವತ್ರಿಕವಾದವೂ ಹೌದು. ಕ್ಯಾನ್ಸರ್ ಇರುವ ಒಬ್ಬ ಕವಿ ಹೃದಯದ ವ್ಯಕ್ತಿ ಇನ್ನು ಆರು ತಿಂಗಳಲ್ಲಿ ತಾನು ಈ ಲೋಕದಲ್ಲಿ ಇರುವುದಿಲ್ಲ ಎಂದು ತಿಳಿದಿದ್ದರೂ , ಜೀವನವನ್ನು ನೋಡುವ ಬಗೆ, ಅದ್ಭುತ. ಚಿತ್ರ ನೋಡಿಯೇ ಆಸ್ವಾದಿಸಬೇಕು.

ಈ ಚಿತ್ರದಲ್ಲಿ ಕಾಕಾನ (ರಾಜೇಶ್ ಖನ್ನನ ಅಡ್ಡಹೆಸರು) ಕೆಲವು ಸಂಭಾಷಣೆಗಳಿವೆ. ಆನಂದ್‍ಗೆ ಕ್ಯಾನ್ಸರ್ ಗಡ್ಡೆ ಇದೆ ಎಂದು ತಿಳಿದಾಗ “ ನಾನು ಇನ್ನು ಆರು ತಿಂಗಳಿಗಿಂತಲೂ ಹೆಚ್ಚು ಬದುಕುವುದಿಲ್ಲ. 70 ವರ್ಷಕ್ಕೂ ಆರು ತಿಂಗಳಿಗೂ ಏನು ವ್ಯತ್ಯಾಸವಿದೆ , ಮುಂದಿನ ಆರು ತಿಂಗಳಲ್ಲಿ ಲಕ್ಷಾಂತರ ಕ್ಷಣಗಳನ್ನು ಬದುಕುವವರ ಪಾಡೇನು ? ಬದುಕು ದೀರ್ಘವಾಗಿರಬೇಕಿಲ್ಲ ಉತ್ತಮವಾಗಿರಬೇಕು, ನಾನು ಬದುಕಿರುವವರೆಗೂ ಸತ್ತಿರುವುದಿಲ್ಲ ಸತ್ತ ನಂತರ ನಾನೇ ಇರುವುದಿಲ್ಲ ” ಇದು ಆನಂದ್ ಒಬ್ಬ ವೈದ್ಯನಿಗೆ, ಅಮಿತಾಬ್‍ಗೆ ಹೇಳುವ ಮಾತುಗಳು. ಮತ್ತೊಂದು ದೃಶ್ಯದಲ್ಲಿ “ ಪ್ರತಿಯೊಂದು ನಗುವಿನ ಹಿಂದೆಯೂ ಖುಷಿಯೇ ಇರಬೇಕೆಂದಿಲ್ಲ ಬಾಬುಮೊಷಾಯ್ ಕೆಲವೊಮ್ಮೆ ದುಃಖವೂ ಇರುತ್ತದೆ ” ಎನ್ನುತ್ತಾನೆ. ಒಮ್ಮೆ ಆನಂದನ ಗೆಳೆಯನ ಮಡದಿ ತನ್ನ ಹುಟ್ಟುಹಬ್ಬದ ದಿನ ಅವನ ಆಶೀರ್ವಾದ ಬಯಸುತ್ತಾಳೆ ಆಗ ಆನಂದ್ “ ನಿನಗೆ ಏನೆಂದು ಹಾರೈಸಲಿ ತಂಗಿ, ನನ್ನ ಆಯಸ್ಸನ್ನು ನಿನಗೆ ಕೊಡು ಎಂದು ದೇವರಲ್ಲಿ ಕೇಳಲೂ ಆಗುವುದಿಲ್ಲ ” ಎಂದು ಮನದಲ್ಲೇ ಪರಿತಪಿಸುತ್ತಾನೆ.

ಮತ್ತೊಂದು ಮನಮಿಡಿಯುದ ದೃಶ್ಯದಲ್ಲಿ ಅಮಿತಾಬ್ ಒಬ್ಬ ವೈದ್ಯನಾಗಿ ಆನಂದ್‍ಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಹೇಳುತ್ತಾನೆ . ಆಗ ಆನಂದ್ “ ಇನ್ನೆಷ್ಟು ದಿನ ನನಗೆ, ನಿನ್ನ ದಿನಗಳು ಮುಗಿಯುತ್ತಿವೆ ಎಂದು ನೆನಪುಮಾಡುತ್ತೀಯ ಬಾಬುಮೊಷಾಯ್, ಈವರೆಗೂ ಯಾರೂ ತನ್ನ ಸಾವನ್ನು ಕಂಡಿಲ್ಲ ಆದರೆ ನಾನು ದುರ್ಭಾಗ್ಯನು, ಪ್ರತಿಕ್ಷಣವೂ ನನ್ನ ಸಾವನ್ನು ಕಾಣುತ್ತಿದ್ದೇನೆ , ನಿನ್ನ ನೋವು ತುಂಬಿದ ಕಣ್ಣುಗಳಲ್ಲಿ ” ಎಂದು ಹೇಳುತ್ತಾನೆ. ಅಂತ್ಯದ ನಿರೀಕ್ಷೆಯಲ್ಲಿರುವ ಒಂದು ಜೀವ ಮತ್ತೊಂದು ಜೀವದ ಕಣ್ಣುಗಳಲ್ಲಿ ಜೀವಂತಿಕೆ ಬಯಸುತ್ತದೆ. ಇಂತಹ ದೃಶ್ಯ ರೂಪಕಗಳು ಬಹುಶಃ ಈಗಿನ ಚಿತ್ರಗಳಲ್ಲಿ ಕನಸಿನ ಮಾತೆನ್ನಿ.

ಇರ್ಫಾನ್ ಇದೇ ಪ್ರಯತ್ನ ಮಾಡಿ ಹೊರಟುಬಿಟ್ಟಿದ್ದಾರೆ

ಈ ಆನಂದ್ ಚಿತ್ರ ನನಗೆ ಬಹಳ ಆಪ್ತವಾದದ್ದು. ಇದಕ್ಕೆ ಕಾರಣವೂ ಇದೆ. ತನ್ನ ಬದುಕಿನ ಪಯಣ ಇನ್ನು ಕೆಲವೇ ದಿನಗಳಲ್ಲಿ, ವರ್ಷಗಳಲ್ಲಿ ಅಂತ್ಯವಾಗುತ್ತದೆ ಎಂದು ತಿಳಿದಿದ್ದೂ ಸದಾ ಹರ್ಷಚಿತ್ತನಾಗಿರುವ ಆನಂದ್ ಬಹಳ ಆಪ್ತ ಎನಿಸುತ್ತಾನೆ. ಏಕೆಂದರೆ ಅವನು ಬದುಕು ಮತ್ತು ಸಾವು ಎರಡನ್ನೂ ಗೆಲ್ಲಲು ಯತ್ನಿಸುತ್ತಾನೆ. ಬಹುಶಃ ಇರ್ಫಾನ್ ಇದೇ ಪ್ರಯತ್ನ ಮಾಡಿ ಹೊರಟುಬಿಟ್ಟಿದ್ದಾರೆ.

ನನ್ನೊಡನೆ ನಾಲ್ಕು ದಶಕಗಳ ಕಾಲ ಬದುಕಿ ತನ್ನ ಪಯಣ ಮುಗಿಸಿದ ನನ್ನ ಸೋದರ ನಾಗರಾಜ್ ಇದೇ ಸನ್ನಿವೇಶದಲ್ಲೇ ಬದುಕಿದ್ದನ್ನು ಕಂಡಿದ್ದೇನೆ. ಅವನಿಗೆ ವಿ ಎಸ್ ಡಿ (ventricular septal defect)ತೊಂದರೆ ಇತ್ತು. ಅಂದರೆ ಹೃದಯದ ಹೃತ್ಕುಕ್ಷಿಗಳನ್ನು ಬೇರ್ಪಡಿಸುವ ಗೋಡೆ (ಸೆಪ್ಟಮ್)ಯಲ್ಲಿ ಒಂದು ರಂಧ್ರ ಇತ್ತು. ರಕ್ತ ಎಡದಿಂದ ಬಲಕ್ಕೆ ಹರಿಯುತ್ತಿದ್ದುದರಿಂದ, ಆಮ್ಲಜನಕದ ಅಂಶ ಹೆಚ್ಚಾಗಿರುವ ರಕ್ತ ಶ್ವಾಸಕೋಶದೊಳಗೆ ಹೋಗುತ್ತಿತ್ತು. ಆಗ ಹೃದಯ ಬಡಿತದ ವೇಗ ಹೆಚ್ಚಾಗುತ್ತಿತ್ತು. ಶ್ರಮವಹಿಸುವ ಯಾವುದೇ ಕೆಲಸ ಮಾಡಲಾಗುತ್ತಿರಲಿಲ್ಲ. ಹುಟ್ಟಿನಿಂದಲೇ ಬಂದ ಸಮಸ್ಯೆ, ಚಿಕಿತ್ಸೆ ನೀಡಲಿಲ್ಲವೆನ್ನಿ.

ನಮಗಿಬ್ಬರಿಗೂ ಕೆನರಾ ಬ್ಯಾಂಕಿನಲ್ಲಿ ಒಮ್ಮೆಲೆ ನೌಕರಿ ದೊರೆತಾಗ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕಿತ್ತು. ಇವನಿಗೆ ಇದ್ದ ಸಮಸ್ಯೆಯನ್ನು ನೋಡಿ ವೈದ್ಯರು ನಿರಾಕರಿಸಿಬಿಟ್ಟರು. ನೌಕರಿ ಇಲ್ಲದಿದ್ದರೆ ನಮ್ಮ ಬದುಕೂ ಇಲ್ಲ ಎನ್ನುವ ಪರಿಸ್ಥಿತಿ. ಹೇಗೋ ವೈದ್ಯರ ಕಾಲು ಹಿಡಿದು ಪ್ರಮಾಣಪತ್ರ ಗಿಟ್ಟಿಸಿಕೊಂಡೆವು. ಆಗ ನಮಗೆ ಮತ್ತು ಅವನಿಗೆ ತಿಳಿದ ವಿಷಯ, ಅವನ ಆಯಸ್ಸು 40 ವರ್ಷ ಮಾತ್ರ ಎನ್ನುವುದು. ನಮ್ಮ ಕಣ್ಣೀರು ಕೋಡಿ ಹರಿಯಿತು, ಅವನು ವಿಚಲಿತನಾಗಲಿಲ್ಲ. ಐದು ಮೆಟ್ಟಿಲುಗಳಿಗಿಂತಲೂ ಹೆಚ್ಚು ಹತ್ತಲಾಗುತ್ತಿರಲಿಲ್ಲ. ಓಡುವುದು ಸಾಧ್ಯವೇ ಇರಲಿಲ್ಲ. ಭಾರ ಎತ್ತುವುದು ಅಸಾಧ್ಯವಾಗಿತ್ತು. ಬ್ಯಾಂಕಿನಲ್ಲಿ (ಆಗ ಲೆಡ್ಜರ್ ಇದ್ದ ಕಾಲ 1984) ಲೆಡ್ಜರ್ ಎತ್ತಿಕೊಡಲು ಯಾರಾದರೂ ಬರಬೇಕಿತ್ತು. ಮೊದಲ ಅಂತಸ್ತಿನಲ್ಲಿದ್ದ ವಿಭಾಗ ಅವನಿಗೆ ನಿಷಿದ್ಧ ಏಕೆಂದರೆ ಮೆಟ್ಟಿಲು ಹತ್ತಲಾಗುತ್ತಿರಲಿಲ್ಲ. ಮನೆಯಲ್ಲಿ ನನ್ನ ರಕ್ಷಣೆ ಮತ್ತು ನೆರವು ಇತ್ತೆನ್ನಿ.

ಇರ್ಫಾನ್ ಖಾನ್ ಬದುಕು ಮತ್ತು ಆನಂದ್ ಚಿತ್ರವನ್ನು ನೋಡುವಾಗ ಅವನ ನೆನಪಾಗುತ್ತದೆ. “ ಈ ಆ್ಯಮ್ ಎ ಹೋಲ್ ಹಾರ್ಟೆಡ್ ಮ್ಯಾನ್ ” ಎನ್ನುತ್ತಿದ್ದ. ಯಾರಾದರೂ ಏಕೆ ಎಂದು ಕೇಳಿದರೆ ಹಾರ್ಟ್‍ನಲ್ಲಿ ಹೋಲ್ ಇದೆ ಅದಕ್ಕೇ ಎನ್ನುತ್ತಿದ್ದ. ಹೀಗೆ ಅವನ ಹಾಸ್ಯ ಮಿಶ್ರಿತ ಮಾತುಗಳು. ಹತ್ತು ನಿಮಿಷ ನಡೆದರೆ ಅವನ ಹೃದಯ ಬಡಿತ ಐದು ಆಡಿ ದೂರಕ್ಕೆ ಕೇಳುತ್ತಿತ್ತು. ಸುಸ್ತಾಗಿ ಕುಳಿತುಬಿಡುತ್ತಿದ್ದ. ಎಷ್ಟೋ ಬಾರಿ ಅವನ ಇಡೀ ಭಾರವನ್ನು ನನ್ನ ಹೆಗಲ ಮೇಲೆ ಹೊತ್ತು ನಡೆಸಿದ್ದೆ. ಹೈದರಾಬಾದ್ ನೋಡಲು ಹೋದಾಗ ಅವನಿಗೆ ಮೇಲೆ ಹತ್ತಲಾಗುವುದಿಲ್ಲ ಎಂದು ನಾನೂ ಸಹ ಗೋಲ್ಕೊಂಡಾ, ಚಾರ್ ಮಿನಾರ್ ಒಳಗೆ ಹೋಗದೆ ಬಂದಿದ್ದೆ. ಅವನ ಜೀವನ ಬೇಗನೆ ಕೊನೆಯಾಗುತ್ತದೆ ಎಂದು ತಿಳಿದಿದ್ದೂ ಸದಾ ಎಲ್ಲರನ್ನೂ ನಗಿಸುತ್ತಲೇ ಬದುಕು ಸವೆಸಿದ ಸೋದರ ಅಗಲಿ 19 ವರ್ಷ ಕಳೆದಿದೆ. ಈಗಲೂ ಅವನ ಕೆಲವು ಜೋಕ್ಸ್ ನೆನಪಾಗುತ್ತವೆ. ಒಂದೆರಡು ತುಣುಕುಗಳು :

1. “ ಮೇನೇಜರ್ : ನಾಗರಾಜ್ ಇಲ್ಲಿ ಬನ್ನಿ ದುಬೈನಿಂದ ಬೇಗ್ ಬಂದಿದ್ದಾರೆ
ಇವನು : ಯಾಕ್ಸಾರ್ ನಿಧಾನವಾಗೇ ಬರಬಹುದಿತ್ತಲ್ಲವೇ ? ”

2. “ ಗೆಳೆಯ (ಮುಸ್ಲಿಂ) : ನಾಗರಾಜ್ ಜೀ ನನಗೆ ಗಂಡು ಮಗು ಹುಟ್ಟಿದೆ
ಇವನು : ಈದ್ ಮುಬಾರಕ್ ಜೀ !!
ಗೆಳೆಯ : ಏನ್ ದಿವಾಕರ್ ಮಗು ಹುಟ್ಟಿದ್ರೆ ಇವ್ನು ಈದ್ ಮುಬಾರಕ್ ಅಂತಾನೆ
ಇವನು : ಸಾರಿ, ಈದಿದ್ದಕ್ಕೆ ಮುಬಾರಕ್ !!!! ”

3. “ ನನ್ನ ಮದುವೆಯ ಸಂದರ್ಭ. ನನ್ನ ಭಾವಿ ಮಾವನರು ಕುಟುಂಬದವರೊಡನೆ ಮನೆಗೆ ಬಂದಿದ್ದರು.
ನನ್ನ ಸೋದರಿ : ಸರ್ ನಿಮಗೆ ಎಷ್ಟು ಮಕ್ಕಳು ?
ಭಾವಿ ಮಾವನವರು : ಹನ್ನೆರಡು ಜನ ಆರು ಗಂಡು ಆರು ಹೆಣ್ಣು
ನನ್ನ ಸೋದರಿ : ನೀವು ಏನು ಕೆಲಸ ಮಾಡ್ತಿದ್ರೀ ?
ಇವನು : ಅದೇ ಕೆಲ್ಸ !!!!!! ”

ಹೀಗೆ ತನ್ನ ಸಾವು ನಿಶ್ಚಿತ ಎಂದು ತಿಳಿದಿದ್ದೂ ಮಾತು ಮಾತಿಗೂ ಎಲ್ಲರನ್ನೂ ನಗಿಸುತ್ತಲೇ 17 ವರ್ಷಗಳ ಕಾಲ ಬದುಕು ಸವೆಸಿದ. ಮದುವೆ ಬೇಡ ಎಂದು ಹೇಳಿದ್ದರೂ ಮದುವೆಯಾದ. ಕೆಲವು ವರ್ಷ ಸಂಸಾರವೂ ನಡೆಯಿತು. ಆದರೆ ವೈದ್ಯರ ಮಾತು ಸುಳ್ಳಾಗಲಿಲ್ಲ. ನಲವತ್ತು ತುಂಬಿದ ನಾಲ್ಕು ತಿಂಗಳಲ್ಲೇ ಇಲ್ಲವಾದ, 2001.

ಇದೇ ಜೀವನ ಇದುವೇ ಜೀವನ ಎನ್ನಬಹುದೇ ?

ಇರ್ಫಾನ್ ಖಾನ್ ಇಲ್ಲವಾದ ಸಂದರ್ಭದಲ್ಲಿ ಮತ್ತು ಅವರ ಅದ್ಭುತ ಬರಹ ಓದಿದ ನಂತರ ಏಕೋ ನೆನಪು ಜಾರಿತು. ಆನಂದ್ ನನಗೆ ಆಪ್ತವಾಗುವುದು ಈ ಕಾರಣಕ್ಕೆ. ಈಗ ಇರ್ಫಾನ್ ಹೆಚ್ಚು ಆಪ್ತವಾಗುವುದೂ ಇದೇ ಕಾರಣಕ್ಕೆ. ಸಾವು ಬದುಕಿನ ನಡುವೆ ಅಂತರ ಬಹಳ ಕಡಿಮೆ ಎನ್ನುವ ವಾಸ್ತವವನ್ನು ಅರಿಯಲು ಇಂತಹ ಕೆಲವು ದೃಷ್ಟಾಂತಗಳೂ ನೆರವಾಗುತ್ತವೆ. ಇರ್ಫಾನ್ ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟುಹೋಗಿದ್ದಾರೆ. ಪರದೆಯ ಮೇಲೆ ಮತ್ತು ನಮ್ಮ ನಡುವೆ ಅದ್ಭುತ ನೆನಪುಗಳನ್ನೂ ಬಿಟ್ಟುಹೋಗಿದ್ದಾರೆ. ಇಂತಹ ಜೀವಗಳ ಜೀವಂತಿಕೆ ಸಾವಿನಲ್ಲೂ ಕಾಣುತ್ತದೆಯಲ್ಲವೇ ? ಇದೇ ಜೀವನ ಇದುವೇ ಜೀವನ ಎನ್ನಬಹುದೇ ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

ಲೋಕಸಭಾ ಚುನಾವಣೆ ; ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸಭೆ : ಇತರೆ ಪ್ರಮುಖ ಸುದ್ದಿಗಳು

Published

on

ಮದ್ಯಾಹ್ನದ ಸುದ್ದಿಮುಖ್ಯಾಂಶಗಳು

  1. ಮಹಿಳೆಯರ ಅಭ್ಯುದಯಕ್ಕಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ನಾರಿಶಕ್ತಿಯ ಸಬಲೀಕರಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
  2. ಪ್ರಧಾನಮಂತ್ರಿ ನರೇಂದ್ರ ಮೋದಿ, ಇಂದು ನವದೆಹಲಿಯಲ್ಲಿ ’ಸಶಕ್ತ ನಾರಿ ವಿಕಸಿತ ಭಾರತ’ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಅವರು ’ನಮೋ ಡ್ರೋನ್ ದೀದಿ’ ಯೋಜನೆಯಲ್ಲಿ ಏರ್ಪಡಿಸಿರುವ ಕೃಷಿಗೆ ಸಂಬಂಧಿಸಿದ ಡ್ರೋನ್ ಪ್ರದರ್ಶನ ವೀಕ್ಷಿಸಿದರು.
  3. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹರಿಯಾಣದ ಗುರುಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ವಿವಿಧ ರಾಜ್ಯಗಳಿಗೆ ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ಮೌಲ್ಯದ 112 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
  4. ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ದೆಹಲಿಯಲ್ಲಿಂದು ಸಂಜೆ ರಾಷ್ಟ್ರೀಯಾಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ರಾಜ್ಯದ 18 ರಿಂದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ.
  5. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಯಾಬ್ ಚಾಲಕರು, ಕಾರ್ಮಿಕರು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಇಂದಿರಾ ಕ್ಯಾಂಟೀನ್ ಅನ್ನು ಇಂದಿನಿಂದ ಆರಂಭಿಸಲಾಗಿದೆ.
  6. ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿರುವ ಡಾಲ್ಬಿ ಥಿಯೇಟರ್‌ನಲ್ಲಿ ಹಾಲಿವುಡ್‌ನ ಪ್ರಮುಖ ತಾರೆಯರು 96 ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ’ಯೊರ್ಗೊಸ್ ಲ್ಯಾಂಥಿಮೋಸ್ ಪೂರ್ ಥಿಂಗ್ಸ್’ ಚಿತ್ರದ ’ಬೆಲ್ಲಾ ಬ್ಯಾಕ್ಸ್ಟರ್’ ಪಾತ್ರದ ಅಭಿನಯಕ್ಕಾಗಿ ’ಎಮ್ಮಾ ಸ್ಟೋನ್’ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.
  7. ಐಸಿಸಿ ವಿಶ್ವ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಭಾರತ ಅಗ್ರಸ್ಥಾನಕ್ಕೆ ಮರಳಿದೆ. ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದ್ದು, ಇಂಗ್ಲೆಂಡ್ 3ನೇ ಸ್ಥಾನದಲ್ಲಿದೆ. ಇದರೊಂದಿಗೆ ಕ್ರಿಕೆಟ್‌ನ ಎಲ್ಲಾ ಮೂರೂ ಮಾದರಿಯಲ್ಲೂ ಭಾರತ ತಂಡ ನಂ. 1ಸ್ಥಾನ ಪಡೆದಿದೆ.
  8. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಹಿಳೆಯರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿಂದು ಗುಜರಾತ್ ಜಯಂಟ್ಸ್ ಮತ್ತು ಯುಪಿ ವಾರಿಯರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

‘ಸಪ್ತ ಸಾಗರದಾಚೆ ಎಲ್ಲೋ – ಸೈಡ್‍ ಬಿ’ ಚಿತ್ರದ ಟಿಕೆಟ್‍ ಮೇಲೆ ಶೆ.20ರಷ್ಟು ಕಡಿತ

Published

on

ಸುದ್ದಿದಿನ ಡೆಸ್ಕ್ : ರಕ್ಷಿತ್‍ ಶೆಟ್ಟಿ ಮತ್ತು ರುಕ್ಷಿಣಿ ವಸಂತ್‍ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್‍ ಬಿ’ ಚಿತ್ರವು ಕಳೆದ ಶುಕ್ರವಾರ ಬಿಡುಗಡೆಯಾಗಿ, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.

ಈ ಮಧ್ಯೆ, ಇನ್ನಷ್ಟು ಹೆಚ್ಚು ಜನರನ್ನು ಚಿತ್ರಮಂದಿರಗಳಿಗೆ ಕರೆತರುವ ನಿಟ್ಟಿನಲ್ಲಿ ಚಿತ್ರತಂಡ ಇಂದಿನಿಂದ ಪ್ರತಿ ಟಿಕೆಟ್‍ ಶೇ. 20ರಷ್ಟು ರಿಯಾಯ್ತಿಯನ್ನು ಚಿತ್ರತಂಡ ಘೋಷಿಸಿದೆ. ಈ ಚಿತ್ರವನ್ನು ಹೇಮಂತ್‍ ರಾವ್ ನಿರ್ದೇಶಿಸಿದ್ದು, ಗೋಪಾಲಕೃಷ್ಣ ದೇಶಪಾಂಡೆ, ಚೈತ್ರಾ ಆಚಾರ್‍, ಅಚ್ಯುತ್‍ ಕುಮಾರ್‍, ರಮೇಶ್‍ ಅರವಿಂದ್‍ ಮುಂತಾದವರು ನಟಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ನೋಡಿದ ಮೊದಲ‌ ಪ್ರೇಕ್ಷಕ ದರ್ಶನ್

Published

on

ಸುದ್ದಿದಿನ ಡೆಸ್ಕ್ : ಸೂರಿ ನಿರ್ದೇಶನದಲ್ಲಿ ಅಭಿಷೇಕ್‍ ಅಂಬರೀಶ್‍ ಅಭಿನಯಿಸಿರುವ ‘ಬ್ಯಾಡ್‍ ಮ್ಯಾನರ್ಸ್’ ಚಿತ್ರವು ಇದೇ ನ.24ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಈ ಮಧ್ಯೆ, ಇತ್ತೀಚೆಗೆ ಚಿತ್ರತಂಡ ಆಯೋಜಿಸಿದ್ದ ವಿಶೇಷ ಪ್ರದರ್ಶನದಲ್ಲಿ ದರ್ಶನ್‍ ಮತ್ತು ಸುಮಲತಾ ಅಂಬರೀಷ್‍ ಅವರು ಚಿತ್ರವನ್ನು ನೋಡಿದ್ದಾರೆ. ಚಿತ್ರದ ಬಗ್ಗೆ ಖುಷಿಯಿಂದ ಮಾತನಾಡಿರುವ ದರ್ಶನ್‍, ಅಭಿ ಬೆನ್ನಿಗೆ ‘ನಿಮ್ಮ‌ಪ್ರೀತಿಯ ದಾಸ’ ಎಂದು ಬರೆದು 5ಕ್ಕೆ 5 ಸ್ಟಾರ್ ಗಳನ್ನ ಕೊಟ್ಟಿದ್ದಾರೆ.

“ಈ ಸಿನಿಮಾದಲ್ಲಿ ನೀವು ರಿಯಲ್ ರೆಬೆಲ್ ಸ್ಟಾರ್‍ನ ನೋಡ್ತೀರಿ. ಹೆಮ್ಮೆಯಾಗ್ತಿದೆ ಎರಡನೇ ಸಿನಿಮಾದಲ್ಲಿ ಈ ಲೆವ್ವೆಲ್ಲಿಗೆ ಅಭಿ ಮಾಗಿರೋದು. ಸಿನಿಮಾ ಬೇರೆ ಲೆವ್ವಲ್ ಇದೆ. ದೊಡ್ಡ ಯಶಸ್ಸು ಇದಕ್ಕೆ ಖಂಡಿತ ಧಕ್ಕಲಿದೆ’ ಎಂದು ಬರೆಯುವ ಮೂಲಕ ದರ್ಶನ್‍ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending