Connect with us

ದಿನದ ಸುದ್ದಿ

ಉರಿ ಚಮ್ಮಾಳಿಗೆ

Published

on

  • ಡಾ.ವಡ್ಡಗೆರೆ ‌ನಾಗರಾಜಯ್ಯ

ವೊತ್ತಿನ ಬೆಳಗು ನನಗಿನ್ನೂ ಹಸಿರಾಗಿ ನೆನಪಿಗಿದೆ. ಪ್ರಾಯಶಃ ಇನ್ನೆಂದಿಗೂ ಮಾಸದ ನೆನಪು ಅದು ; ನನ್ನ ಕರೇಕುಲದ ಮುಂದಿನ ಪೀಳಿಗೆಗಳು ಸೂರ್ಯ ಚಂದ್ರನಿರುವ ತನಕ ಈ ನೆನಪನ್ನು ತಮ್ಮೊಡನೆ ಹೊತ್ತೊಯ್ಯುತ್ತವೆಂಬ ಬಲವಾದ ನಂಬಿಕೆ ನನಗಿದೆ.

ಮಾನವ ನಿರ್ಮಿತ ಯಾವುದೇ ಉಪಾಯಗಳು ನನ್ನ ಕುಲಸ್ತರು ಅನುಭವಿಸಿದ ಸುಖ ದುಃಖ, ನೋವು – ನಲಿವು, ಸಂಕಟ ಹಾಗೂ ಹೋರಾಟಗಳ ನೆನಪಿನ ಬೇರನ್ನು ಕಿತ್ತು ಹಾಕಲು ಸಾಧ್ಯವಿಲ್ಲ ; ಆ ದೇವರಿಂದಲೂ ಕೂಡ! ನಮ್ಮ ನೆನಪಿಗೆ ಅಂತಹ ಅಗಾಧ ಶಕ್ತಿಯಿದೆ. ಅದು ನಿತ್ಯಗಾಮಿನಿ.

ಆ ದಿನ ಬೆಳಗ್ಗೆ ಅನುಭವ ಮಂಟಪದ ದಾರಿಯಲ್ಲಿ ಎದುರಾದ ನಿನ್ನನ್ನು ನೋಡಿದ ನಾನು ‘ಶರಣು ಬಸವಣ್ಣ’ ಎಂದು ನಂಬಿಸಿದ್ದೆ. ಇದಕ್ಕೆ ಪ್ರತಿಯಾಗಿ ನೀನೂ ಸಹ “ಶರಣು ಶರಣು ಹರಳಯ್ಯ” ಎಂದು ವಂದಿಸಿದ್ದೆ. ನೆನಪಿದೆಯಾ ಅಣ್ಣಾ? ನಿನ್ನಿಂದ ಒಂದು ಶರಣರಿಗೆ ಬದಲಾಗಿ ಎರಡು ಸಲ “ಶರಣು ಶರಣು” ಎಂಬ ನುಡಿ ಕೇಳಿದ ನಾನು ಎಷ್ಟೊಂದು ತತ್ತರಿಸಿ ಹೋದೆ.

ನಿನಗೆ ಗೊತ್ತಿರಲಿಕ್ಕಿಲ್ಲ. ನೀನು ನನ್ನ ಅರಿವಿಗೆ ಬಾರದಂತೆ ಸಹಜವಾಗಿ ಒಂದು ಶರಣು ಹೆಚ್ಚುವರಿ ಋಣಭಾರ ನನ್ನ ಮೇಲೆ ಹೇರಿದ್ದೆ. ನೀನೇನೋ ಭಾರ ಇಳಿಸಿಕೊಳ್ಳಲು ಚಡಪಡಿಸಿ ಬೆಂದು ಹೋಗುವಂಥವನು ನಿಜ. ನಿಮ್ಮವರು ಹೊತ್ತ ಭಾರ ಇಳಿಸಲು ಹೋದ ನೀನು ನನ್ನ ಮೇಲೆ ಭಾರ ಹೇರಿದೆಯಲ್ವಾ, ಇದು ನ್ಯಾಯವೇ? ಎಷ್ಟಾದರೂ ನೀನು ಭಾರ ಹೊರಿಸುವ ಕುಲದಿಂದ ಬಂದವನು; ನಾನಾದರೋ ಭಾರ ಹೊರಲೆಂದೇ ಹುಟ್ಟಿದ ನೊಗವೆಳೆವ ಮೂಕತ್ತು ಎಂಬುದು ನನಗೆ ಅರಿವಾಯಿತು.

ನಾನು ಹೊಲೆಯುವ ಮೆಟ್ಟುಗಳ ಮೇಲೆ ಭಾರ ಹಾಕಿ ನಡೆಯುವ ದಾರಿಹೋಕರು ನನ್ನೆದುರಿನಲ್ಲಿದ್ದಾರೆ. ಮೆಟ್ಟು ಹೊಲೆಯುವ ನನಗೆ ಮೆಟ್ಟೆಂದಿಗೂ ಭಾರವಲ್ಲ. ನಡೆಯುವ ದಾರಿಹೋಕರ ದಣಿವನ್ನು ತಾಪವನ್ನು ನನ್ನ ಮೆಟ್ಟು ಕಳೆಯಬಲ್ಲದು. ಕಲ್ಲು ಮುಳ್ಳುಗಳು ನನ್ನ ಮೆಟ್ಟುಗಳಿರುವ ಕಡೆಗೆ ದಾರಿಹೋಕರ ಪಾದಗಳನ್ನು ಚುಚ್ಚಲಾರವು.

ಆ ದಿನ ನೀನು ಶರಣು ಶರರಣಯ್ಯಾ ಎಂದು ಹೇಳಿದ ಬಳಿಕ ಏರುವ ಹೊತ್ತಿನೊಂದಿಗೆ ನೀನು ಹೊರಿಸಿದ ಶರಣೆಂಬ ವಜೆಯೂ ಏರುತ್ತಾ ಹೋಯಿತು.

ಏರುವ ಹೊತ್ತಿನೊಡನೆ ನೀನು ಹೊರಿಸಿದ ಶರಣೆಂಬ ವಜೆ ಹೊತ್ತ ನನ್ನ ಬೆನ್ನ ಬುಡದಿಂದ ಸಣ್ಣಗೆ ಶುರುವಾದ ಚಳುಕು ಇಡೀ ಶರೀರವನ್ನೆಲ್ಲಾ ಬಾಧಿಸತೊಡಗಿತ್ತು. ಅಣ್ಣಾ ನನಗೆ ಗೊತ್ತು. ನೀನು ಬಲಾತ್ಕರಿಸಿಯೇನು ಹೊರಿಸಲಿಲ್ಲ ; ಹಾಗೆ ನೋಡಿದರೆ ನೀನು ನಿನ್ನ ಪೂರ್ವಿಕರಿಗಿಂತಲೂ ಬದಲು ಕರುಣಿ. ಅವರಾದರೂ ನಮ್ಮನ್ನು ಪಶುಗಳಿಗಿಂತಲೂ ಕಡೆಯಾಗಿ ನಡೆಸಿಕೊಂಡರು.

ಛೇ! ಕ್ಷಮಿಸು. ನೀನೆಲ್ಲಿ ಅವರಲ್ಲಿ? ಎತ್ತಣಿಂದೆತ್ತ ಸಂಬಂಧ. ಅಂತಹ ಪೂರ್ವಿಕ ಪಳೆಯುಳಿಕೆಗಳನ್ನು ಬಿಸುಡಿ ನಿಮ್ಮ ಹಟ್ಟಿಗೆ ಓಡೋಡಿ ಬಂದ ನೀನು, ‘ಅಪ್ಪನು ನಮ್ಮ ಮಾದಾರ ಚನ್ನಯ್ಯ, ಬೊಪ್ಪ ನು ನಮ್ಮ ಡೋಹರ ಕಕ್ಕಯ್ಯ”ನೆಂದು ನಮ್ಮನ್ನೆಲ್ಲಾ ಬಾವುಣಿಕೆಯಿಂದ ತಬ್ಬಿಕೊಂಡು ನಮ್ಮ ಕಲ ಕರೇಕಲದೊಬ್ಬ ಮಗನಾದೆ ; ನೀನೊಂದು ನವಜಾತ ಶಿಶು!

ಇಲ್ಲಿ ನನ್ನ ಹಟ್ಟಿಯಲ್ಲಿ ತುಂಬಿ ಫಲದೂಗುವ ತೆಂಗಿನ ಮರದಂಥ ತಾಯಂದಿರು ತಮ್ಮ ಮಕ್ಕಳಿಗೆ ಹಾಲೂಡುವುದು ಬಲು ಸೋಜಿಗ! ಹಾಲು ಬತ್ತಿದ ಅಜ್ಜಿಯರೂ ತಮ್ಮ ಎದೆಗೆ ಅವುಚಿಕೊಂಡು ಮೊಮ್ಮಕ್ಕಳಿಗೆ ಮೊಲೆಯುಣಿಸುತ್ತಾರೆ : ಅಲ್ಲಿ ಪ್ರೀತಿ ಜಿನುಗುತ್ತದೆ! ಎಲ್ಲ ತಾಯಂದಿರೂ ತಮ್ಮೊಳಗಿನ ಮಾತೃತ್ವವನ್ನು ಹುಟ್ಟಿದ್ದ ಪ್ರತಿ ಮಗುವಿಗೂ ನೇವರಿಸಿ ಉಣ ಬಡಿಸುತ್ತಾರೆ.

ತಮ್ಮ ಕಂದಮ್ಮಗಳಿಗೆ ಎಷ್ಟು ಸಲ ಎದೆ ಹಾಲು ಕುಡಿಸಿದರೂ ತೃಪ್ತಿಯಾಗದ ಸಮಗಾರ ಭೀಮಮ್ಮವರು ನಮ್ಮ ಕರೇಕುಲದ ಹಟ್ಟಿಯಲ್ಲಾಡುವ ಇತರ ಕಂದಮ್ಮಗಳಿಗೂ ಹಾಲು ಕುಡಿಸುವುದುದುಂಟು. ಇಲ್ಲಿ ಹುಟ್ಟುವ ಪ್ರತಿ ಶಿಶುವು ಹಟ್ಟಿಯ ಎಲ್ಲ ತಾಯಂದಿರ ಎದೆ ಹಾಲು ಕುಡಿದು ಬೆಳೆಯುತ್ತದೆ. ಹೇ, ಬಸವಣ್ಣಾ ಇಂತಹ ಭಾಗ್ಯ ನಮ್ಮ ಶಿಶುವಾಗಿ ನೀನು ಕಂಡೆ!

ನನಗೆ ಹಟ್ಟಿ ತುಂಬಾ ತಾಯಂದಿರು. ಹಟ್ಟಿ, ಬಯಲಲ್ಲಿ ಬಟ್ಟ ಬಯಲಲ್ಲಿ ಊರ ಸೆರಗಲ್ಲಿ, ಎಲ್ಲೆಂದರಲ್ಲಿ ಎದೆ ಹಾಲು ಕುಡಿಸಿದ ನನ್ನ ತಾಯಂದಿರು ನನಗೆ ಹೇಳುತ್ತಿದ್ದ ಒಂದು ಮಾತು “ಅನ್ಯರ ಹೊರೆ ನೀನು ಹೊರಬೇಕಲ್ಲದೆ ನಿನ್ನ ಹೊರೆಯನ್ನು ಪರರ ಮೇಲೆ ಹೊರಿಸುವುದು ಸಲ್ಲತಕ್ಕದ್ದಲ್ಲ ಹರಳಯ್ಯಾ” ಎಂಬುದು. ಆ ದಿನ ನಾನು ಹೊರಿಸಿದ ಒಂದು ಶರಣಿನ ಹೆಚ್ಚಿನ ಹೊರೆ ಹೊತ್ತು ನಾನು ಮನೆಗೆ ಬಂದೆ. ಆಗ ಇಳಿ ಹೊತ್ತು; ಧೂಳು ಸಂಜೆ.

ನನ್ನ ನೆಚ್ಚಿನ ಸತಿ ಶಿವಶರಣೆ ಕಲ್ಯಾಣಮ್ಮನ ಕೂಟೆ ಮಾತನಾಡುತ್ತಾ ಹೊರೆ ಇಳಿಸಿಕೊಳ್ಳುವ ಉಪಾಯವನ್ನು ಕೇಳಿದೆ. ಹೊರೆ ಇಳಿಸುವ ಮಾರ್ಗ ಹೆಂಗಸರಿಗೆ ಮಾತ್ರ ಗೊತ್ತೆಂದರೆ ನಿನಗೆ ಆಶ್ಚರ್ಯವಾಗಬಹುದಲ್ಲವೆ ಬಸವಣ್ಣ? ಹೌದು, ನನ್ನ ಹೆಂಡತಿ ಕಾರ್ಯಸಾಧ್ಯವಾದ ಉಪಾಯವನ್ನು ಹೇಳುತ್ತಾಳೆಂಬ ವಿಶ್ವಾಸದಿಂದಲೇ ಕೇಳಿದ್ದೆ.

“ನೋಡು, ಶಿವಶರಣ ಬಸವಣ್ಣನವರ ಶರಣಿನ ತೂಕಕ್ಕೆ ಸಮವಾಗುವಂಥ ಸಂಪತ್ತು ನಮ್ಮತಾವ ಏನು ತಾನೆ ಐತೆ? ಹೂವುನ ಹಾಸ್ಗೆ ಮ್ಯಾಲ ನಡೆದಂಗೆ ಕಾಣೋಂಥ ಪಾದ್ರಾಕ್ಷಿ ಮಾಡ್ಕೊಡನಿ” ಎಂದು ನಮ್ಮ ಕರೇಕುಲದ ಸಮಗಾರರು ಜತನವಾಗಿ ಕಾಪಾಡಿಕೊಂಡು ಬಂದ ಚಮ್ಮಾರಿಕೆಯ ಉಪಾಯವನ್ನು ಅವಳಿಂದ ಕೇಳಿದ ನಾನು, ದೇವಾಂಶಿ ಮಾತುಮನಾದ ನಿನಗೆ ತೀರಾ ವಿಶೇಷವಾದ ಪಾದ್ರಾಕ್ಷಿಯನೇ ಮಾಡೋಡಬೇಕು, ಯಂಗೆ ಮಾಡೋದು? ಯಾವ ತೊಗಲಿನಿಂದ ಮಾಡೋದು? ಎಂಬ ಯೋಚನೆಗಳ ಸುಳಿಗೆ ಬಿದ್ದೆ.

ಆಗ ನನ್ನ ಮುಖದ ನೆರಿಗೆಗಳ ಅಕ್ಷರಗಳನ್ನು ಸಲೀಸಾಗಿ ಓದಿ ಅರ್ಥ ಮಾಡಿಕೊಂಡು,‌ ‘ಗೋವಿನ ತೊಗಲು ಉಪಯೋಗಿಸಿದಂತೆಯೇ ನರ ಮನುಷ್ಯ ತೊಗಲ ಚಮ್ಮಾಳಿಗೆ ಮಾಡಿಕೊಡದ ವಿನಾ ಶರಣಿನ ವಜೆಯನ್ನು ನೀಗಿಕೊಳ್ಳಲಾಗದು’ ಎಂಬ ಸಲಹೆಯನ್ನು ಮುಂದಿಟ್ಟ ಕಲ್ಯಾಣಮ್ಮ, ನಮ್ಮ ಮಕ್ಕಳನ್ನು ಆಡಿಸಿ ನಲಿಸಿ ತೂಗಿ ಮಲಗಿಸಿದ ನಮ್ಮ ಅಂಕಪೀಠದ ತೊಡೆ ತೊಗಲು ಮಾತ್ರ ಈ ಕಾರ್ಯಕ್ಕೆ ಯೋಗ್ಯವೆಂದು ಬಗೆದು ಮೊದಲಿಗೆ ತನ್ನ ಚರ್ಮವನ್ನೇ ನೀಡಲು ದುಡದಿಂದ ಮುಂದಾದಳು. ಈಗ ಯೋಚಿಸು ಬಸವಣ್ಣಾ ನಮ್ಮ ಹೆಣ್ಣಿನ ಮಹಿಮೆ ಎಂಥದ್ದು?

ಮರುದಿನ ಬೆಳಗ್ಗೆ ಎದ್ದು ಸ್ನಾನಾದಿಗಳನ್ನು ಮಾಡಿ, ಮನೆಯನ್ನೆಲ್ಲಾ ಸಾರಿಸಿ, ಗುಡಿಸಿ, ಚುಕ್ಕಿ ರಂಗೋಲಿ ಎಳೆದು ಮೂಡಲ ಮುಖನಾಗಿ ‘ತಿತ್ತಿ’ ಯೊಂದಿಗೆ ಕುಳಿತಿದ್ದ ಕಲ್ಯಾಣಮ್ಮ ಮುಖ ಹೊಂಬಣ್ಣದಲ್ಲಿ ಹೊಳೆವ ಸೂರ್ಯನಂತೆಯೇ ಕಾಂತಿಯಿಂದ ಶೋಭಿಸುತ್ತಿತ್ತು. ಅವಳ ಮುಖದ ಕಾಂತಿಯ ಸುಂಕು ನನ್ನ ಮುಖಕ್ಕೆ ಪರಾಗಸ್ಪರ್ಶಗೊಂಡ ಬಳಿಕವೇ ತಿತ್ತಿಗೆ ಶರಣೆಂದು ಚೂರಿಯನ್ನು ತೆಗೆದುಕೊಂಡು ಕುಲಕಾರ್ಯೇವು ಮಾಡಲು ಕುಳಿತೆ.

ಅಣ್ಣಾ … ಬಸವಣ್ಣ…! ಅಂದು ಬೆಳಗ್ಗೆ ನಮ್ಮ ಗುಡಿಸಲ ನೆತ್ತಿ ಮೇಲೆ ನವಿಲೆರಡು ಆಡುತ್ತಿದ್ದವು. ಸಾವಿರ ಕಣ್ಣು ಅರಳಿಸಿ ಎಳೆ ಬಿಸಿಲಿನಲ್ಲಿ ನರ್ತಿಸುತ್ತಿದ್ದ ಬಂಗಾರದ ನವಿಲುಗಳು! ಬಾಲ್ಯದಲ್ಲಿ ನನ್ನ ಅಮ್ಮ ಹೇಳುತ್ತಿದ್ದಳು, “ಹರಳಯ್ಯಾ, ಈ ಜಗತ್ತು ಹುಟ್ಟಿದ್ದು ನವಿಲು ಮೊಟ್ಟೆಯಿಂದ ಕಣೋ, ಇಲ್ಲದಿದ್ದರೆ ಈ ಸೃಷ್ಟಿ ಇಷ್ಟೊಂದು ಸುಂದರವಾಗಿರಲು ಹೇಗೆ ತಾನೆ ಸಾಧ್ಯವಿತ್ತು?”

ಹೌದು ಬಸವಣ್ಣಾ ನನ್ನ ಅಮ್ಮ ಹೇಳಿದ ಅದೇ ನವಿಲು ನಮ್ಮ ಗುಡಿಸಲು ಮೇಲೇರಿ ಹಾರಿ ಕುಣಿಯುತ್ತಿರುವಾಗ ನಾನು ನನ್ನ ಬಲ ತೊಡೆ ತೊಗಲನ್ನು, ಕಲ್ಯಾಣಮ್ಮ ತನ್ನ ಎಡ ತೊಡೆ ತೊಗಲನ್ನು ಪರಸ್ಪರ ಸುಲಿದು ತೆಗೆಯಲು ದುಡಮಾಡಿ ಕುಳಿತಿದ್ದೆವು; ನವಿಲುಗಳು ಕುಣಿಯುತ್ತಲೇ ಇದ್ದವು ಬಲು ಚೆಂದವಾಗಿ!

ಅಣ್ಣಾ… ನಿಜ ಹೇಳಬೇಕೆಂದರೆ ಗಲ್ಲೇಬಾನಿಯ ದಿವ್ಯೋದಕ ಸ್ಪರ್ಶದಿಂದ ತೋಯ್ದುದಕ್ಕಿಂತಲೂ ಮಿಗಿಲಾಗಿ ನೀನು ನಮ್ಮ ಕುಲಸ್ಥರಿಗೆ ತೋರಿಸಿದ ಕರುಣಾಮೃತದಿಂದಲೇ ನಮ್ಮ ದೇಹಕ್ಕಾವರಿಸಿದ್ದ ಸೂತಕದ ತೊಗಲು ತೊಯ್ದು ಹೋಗಿತ್ತು! ಸೂತಕದ ತೊಗಲನ್ನು ಸುಲಿದು ತೆಗೆಯಲು ನೀನು ಹೊರಿಸಿದ ‘ಶರಣು’ ಒಂದು ನೆಪವಾಗಿತ್ತು.

ಸಾಮು ಹಿಡಿದ ಚೂರಿಯಿಂದ ಬಹಳ ಚಮತ್ಕಾರಿಕವಾಗಿಯೆ ತೊಗಲು ಸುಲಿದೆವು; ನಾವು ಕುಶಲಕರ್ಮಿಗಳು; ತೊಗಲು ಸುಲಿಯುವ ನನಗೆ ದೇಹವೆಂಬುದು ಯಾವತ್ತಿಗೂ ಅಡ್ಡಿಯಾಗದು! ತನ್ನ ತೊಗಲನ್ನು ತಾನು ಸುಲಿದುಕೊಳ್ಳಲಾಗದವನು ಸಮಗಾರನೇ ಅಲ್ಲ! ಹೇ! ಬಸವಣ್ಣಾ ನಿನ್ನನ್ನು ಆವರಿಸಿಕೊಳ್ಳುತ್ತಿದ್ದ ಬ್ರಾಹ್ಮಣ್ಯದ ಸೂತಕದ ತೊಗಲನ್ನು ಹರಿದು ಬಿಸಾಕಿದ ನೀನೊಬ್ಬ ದೊಡ್ಡ ಸಮಗಾರ.

ಅಂತೂ ನಿನಗೆ ಚಮ್ಮಾಳಿಗೆ ಮಾಡಿಕೊಡಲೆಂದು ನಾನು, ನನ್ನ ಪತ್ನಿಯೂ ನಮ್ಮ ತೊಗಲನ್ನು ನಾವೇ ಸುಲಿದು, ಅದರ ಸೆಳ್ಳೆ ತೆಗೆದು, ಬಿಸಿಲಿನಲ್ಲಿ ಒಣಗಿಸಿ ಕರೆಹಾಯಿಸಲು ಸಿದ್ಧಗೊಳಿಸಿದೆವು.

ಚರ್ಮ ಹದ ಮಾಡುವ ವಿಧಾನವನ್ನು ಕರೆ ಹಾಯಿಸುವುದು ಎಂದು ಹೇಳುವುದು ವಾಡಿಕೆ. ಬಸವಣ್ಣಾ ಈ ವಿಧಾನವು ನಿನಗೆ ಕೇಳಿಯೋ ನೋಡಿಯೋ ಗೊತ್ತಿರಬಹುದೆಂದು ನಾನು ಊಹಿಸುತ್ತೇನೆ. ಆದರೂ ನಿನಗೆ ಅರ್ಪಿಸಿದ ಚಮಾಳಿಗೆಯನ್ನು ತಯಾರಿಸಿದ ಬಗೆಯನ್ನು ಹೇಳುತ್ತೇನೆ ಕೇಳು.

ಗಲ್ಲೇಬಾನಿಯಲ್ಲಿ ಒಂದು ಗುಲಿಕೆ ತಂಗಡಿ ಗಿಡದ ಚಕ್ಕೆ ಪುಡಿಯೊಂದಿಗೆ ಪಾವು ಗುಲಿಕೆ ಸುಣ್ಣದ ಪುಡಿಯನ್ನು ಕಲೆಸಿದೆ. ನನ್ನ ಕೆಲಸದ ಬಳಿಕ ಕಲ್ಯಾಣಮ್ಮ ಎರಡು ಹರುವಿ ನೀರು ಸುರಿದು ಗಲ್ಲೇಬಾನಿಯಲ್ಲಿ ಎರಡು ಜಾವ ಚರ್ಮವನ್ನು ನೆನೆ ಹಾಕಿದಳು. ಒಂದೊಂದು ಪ್ರಾಣಿಯ ಚರ್ಮವನ್ನೂ ಅದರದೇ ವಿಶಿಷ್ಟ ವಿಧಾನಾನುಸಾರ ಕರೆ ಹಾಯಿಸಬೇಕು.

ತಂಗಡಿ ಚಕ್ಕೆಯ ಪುಡಿ ಮತ್ತು ಸುಣ್ಣದ ನೀರಿನಲ್ಲಿ ಹದಗೊಂಡ ಚರ್ಮವನ್ನು ಶುದ್ಧ ನೀರಿನಲ್ಲಿ ತೊಳೆದು ಬಿಸಿಲಿನಲ್ಲಿ ಒಣಗಿಸಬೇಕು. ಆದರೆ ನಿನಗೆ ಚಮ್ಮಾಳಿಗೆ ತಯಾರಿಸಿ ಕೊಡಲು ನಾವು ಬಹಳ ಜಾಗರೂಕತೆ ವಹಿಸಿದ್ದೆವು. ಸೋಸಿದ ನೀರಿನ ‘ತಿಳಿಗರೆ’ಯಲ್ಲಿ ಹದಗೊಂಡ ಚರ್ಮವನ್ನು ಮತ್ತೊಂದು ಗಲ್ಲೇಬಾನಿಯ ಬೆವರ ಗಂಧೋದಕದಲ್ಲಿ ತೊಳೆದು, ಮುಗಿಲ ಮಿಂಚನೆ ಎರೆದು, ರಾತ್ರಿ ಮಂಜಿನಲಿ ನೆನೆದ ಚರ್ಮವನ್ನು ರಾತ್ರಿಯ‌ ಚಂದ್ರಮನ ಬೆಳ್ಳಿ ಕಿರಣಗಳ ಬಿಸಿಯಲ್ಲಿ ಕಾಯಿಸಿ, ಬೆಳಗಿನ ಪ್ರಥಮ ಉಷಾಕಿರಣದಲ್ಲಿ ಕಾಯ್ದ ಚರ್ಮವನ್ನು ಸಂಜೆಯ ಮಂದ ನಿಷಾಕಿರಣಗಳಿಂದ ತಂಪು ಮಾಡಿ ಅದರೊಳಕ್ಕೆ ಪಾಂಗಿತವಾಗಿ ಅಗ್ನಿ ಪಾದಕವನ್ನು ತಂಪುಗೊಳಿಸಿ ಹೆಪ್ಪಿಡಲಾಯಿತು.

ಅಣ್ಣಾ…. ಬಸವಣ್ಣಾ ಹೀಗೆ ಪಾಕಾದ ಚರ್ಮವನ್ನು ನೆಲದ ಮೇಲೆ ಹರವಿ, ಮೈನಾಗಿರುವುದು ಕಂಡು, ಹರುಷಗೊಂಡು ನಿನ್ನ ಪಾದಗಳ ಅಳತೆಯನ್ನು ಧೇನಿಸತೂಡಗಲು ನಿನ್ನ ಪಾದಗಳೋ
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ ಕೂಡಲಸಂಗಮ ದೇವಾ”

ನಿನ್ನ ಅನಂತ ಪಾದದ ಅಳತೆ ನನ್ನ ಕಣ್ಣ ಆಯತಕ್ಕೆ ಸಿಕ್ಕದಾಗಿ ಕುಲದ ತಂದೆ ಜಾಂಬವನನ್ನು ಧ್ಯಾನಿಸಲು, ಜಾಂಬವ ತಾತನಾದರೋ ದೇವಿ ಅರುಂಧತಿಯವರಿಗೆ ನಿನ್ನ ಪಾದದಳತೆಯನು. ಕೆಂಡರಿಸುವಂತೆ ತಿಳಿಸಲು, ದೇವಿ ಅರುಂಧತಿಯಾದರೋ ತನ್ನ ಬಸಿರೊಳಗೆ ಹುಟ್ಟಿದ ಮಾದಾರ ಚೆನ್ನಯ್ಯನಿಗೆ ಅನುಜ್ಞೆ ಮಾಡಲು, ಚನ್ನಯ್ಯನು ತನ್ನ ಕರುಳ ಹೊಕ್ಕುಳ ಬಳ್ಳಿ ಕಲ್ಯಾಣಮ್ಮನವರಿಗೆ ನಿನ್ನ ಪಾದದ ಅಳತೆಯ ಸೋಜುಗವ ವಿವರಿಸಿದರು ಹೀಗೆ :-

ಬಸವಣ್ಣನೆಂಬುವನು ನಮ್ಮಕುಲದ ಬಂಗಾರದ ಶಿಶುವಲ್ಲವೋ ಅವನು ಉಸಿರೆಂಬ ಘನವೋ. ಅವನು ಉಸಿರೆಂಬ ಘನವಲ್ಲವೋ ಘನವೆಂಬ ಉಸಿರೊಳಡಗಿದ ಪ್ರಾಣವೋ!”

ಇಂತೀ ನಿನಗೆ ಒಪ್ಪುವ ಪಾದ್ರಾಕ್ಷಿಯ ಅಳತೆಯನ್ನು ಅರಿಯದವಳಾದ ಕಲ್ಯಾಣಮ್ಮನು ಮೂಲದಲ್ಲಿ ಜಲಮಯವಾಗಿದ್ದ ಈ ಸೃಷ್ಟಿಗೆ ತನ್ನ ರಕ್ತವನ್ನೇ ಬಸಿದು ಹೆಪ್ಪಿಟ್ಟು ಭೂಮಿಯನ್ನು ಸೃಷ್ಟಿಸಿದ ಮಾದಿಗರ ಮೊದಲ ಮಗನಾದ ಹೆಪ್ಪುಮುನಿಯನ್ನು ಸಾಕ್ಷಿಯಾಗಿ ಒಡ್ಡಿ, “ಬಸವಣ್ಣನು ನಿಜವಾದ ನಮ್ಮ ಮಾದಾರ ಕುಲದ ಮಗನೇ ಆಗಿದ್ದಲ್ಲಿ ಪುರೋಹಿತರ ಕಣ್ಣ ಎಚ್ಚರಿಕೆಯ ತಪ್ಪಿಸಿ ಓಡಿ ಬಂದು ನನ್ನ ಮಡಿಲಲ್ಲಿ ಮಲಗುವ ಕಂದಮ್ಮನಂತೆ ನನ್ನ ಸೆರಗು ಹಿಡಿದು ‘ಅವ್ವಾ’ ಎಂದು ಚೆಲುನುಡಿಗಳಲ್ಲಿ ಕರೆಯಲಿ” ಎಂದು ಪ್ರೀತಿಯಿಂದ ಕೂಗಿದಾಗ, ಬಿಜ್ಜಳನ ಅಧಿಕಾರದ ಸೆರಗಿನ ಮರೆಯಲ್ಲಿದ್ದ ನೀನು ನಿನ್ನ ಜನ್ಮಧಾರಕ ವೇಷ ಕಳೆದು, ಜಗ್ಗನೆ ಜನಿವಾರ ಹರಿದು, ಬಯಲ ಬೆತ್ತಲೆಯಂತೆ ಹುಟ್ಟುಮಾರ್ಗದಲ್ಲಿ ದಿಬ್ಬ ಹತ್ತಿ ಕಣಿವೆ ಇಳಿದು ಅಗ್ರಹಾರದಿಂದ ಬಲು ದೂರವುಳ್ಳ ಹಟ್ಟಿಯ ಹೊಕ್ಕು ನಮ್ಮ ಮನೆಯಲ್ಲಿ ಕಿಲಗುಡುವ ಕಂದನಾದೆ!

ಆ ಬಳಿಕ… ಚಲುವ ಚಂದಿರನಂಥ ಕಂದಮನಾದ ನಿನ್ನ ಅಂದದ ಆಟಗಳು ಚಂದದ ನೋಟಗಳು ಸಾವಿರ ನಕ್ಷತ್ರಗಳ ಕಣ್ಣು ಬಿಡುವ ನವಿಲು ಕುಣಿತದ ಹೊಳಪನ್ನು ನಮ್ಮ ಗುಡಿಸಲು ತುಂಬಿ, ಕಲ್ಯಾಣಮ್ಮನವರು ತಾಯ ಸೆರಗು ಮರೆಮಾಡಿ ಕಿಲಕಿಲನೆ ನಗುತ್ತಾ ನಿನ್ನ ಪುಟ್ಟ ಪಾದಗಳನ್ನು ಕಣ್ಣೊಳಗೆ ಮುಚ್ಚಿಕೊಂಡರಲ್ಲೋ ಅಣ್ಣಾ!

ಹೀಗೆ ನಿನ್ನ ಪಾದಗಳನ್ನು ಕಣ್ಣೊಳಗೆ ಮುಚ್ಚಿಕೊಂಡ ಸೋಜಿಗವನ್ನು ಕಲ್ಯಾಣಮ್ಮ ಬೀಜದೊಳಗಿರುವ ಮೊಳಕೆಯನ್ನು ಕಾಣಿಸುವಂತೆ ನನಗೆ ಕಂಡರಿಸಿದಾಗ ಅಲ್ಲಿ ನಮ್ಮ ಗುಡಿಸಲೊಳಗೆ ಅಡಿಗಲ್ಲ ಮೇಲೆ ಮುದ್ರೆಯೊತ್ತಿತ್ತು. ನಿನ್ನ ಪಾದಗಳ ಅಳತೆ ನಮ್ಮ ಅಡಿಗಲ್ಲಿನ ಮೇಲೆ ಬಟುವಾದ ಉದ್ದ, ಬಟುವಾದ ಅಗಲ ; ನಿನ್ನ ಪಾದ ಅಷ್ಟೆ!

ಅಣ್ಣಾ, ಮಾದಾರನ ಚಮ್ಮಾರಿಕೆಯ ಅಡಿಗಲ್ಲು ಸಾಮಾನ್ಯವಲ್ಲ ; ಪೂರ್ವದಲ್ಲಿ ಇವಳು ಕಾಳಿಕಾ ಮಾತೆ; ವಿಶ್ವಕರ್ಮನ ತಾಯಿ! ಮಾದಿಗರ ಹೊಸ್ತಿಲಲ್ಲಿ ಅಡಿಗಲ್ಲು ರೂಪಾಗಿ ಕುಂತವಳೆ!

ಇದು ತಾತ ಜಾಂಬವರು ನೀಡಿದ ಕುಲದ ದಾನ. ಕುಶಲ ಕರ್ಮಿಯ ಕಲೆ ಅರಳುವುದು ಇಲ್ಲಿ. ನಿನಗೆ ಮಾಡಿಕೊಟ್ಟ ಚಮ್ಮಾಳಿಗೆ ಕುಶಲತೆಯಲ್ಲಿ ಅರಳಿದ್ದು ಇದೇ ಅಡಿಗಲ್ಲ ಮೇಲೆ. ವಚನ ಕಟ್ಟುವುದು ನಿನಗೆ ಹೇಗೋ ಹಾಗೆ ನಮಗೆ ಚಮ್ಮಾರಿಕೆ ಸೃಷ್ಟಿಶೀಲ ಕ್ರಿಯೆ. ನಿನಗೆ ನಾವು ತಯಾರಿಸಿಕೊಟ್ಟ ಚಮ್ಮಾಳಿಗೆ ನಮ್ಮ ಪಾಲಿಗೊಂದು ಶ್ರೇಷ್ಢ ವಚನ. ಅದಕ್ಕಾಗಿ ನಾನಾಗಲೀ ನನ್ನ ಹೆಂಟತಿಯಾಗಲೀ ಅನ್ಯ ವಚನಗಳನ್ನೇ ಬರೆದಿಲ್ಲ. ನಮ್ಮ ಕಾಯಕದ ಬದುಕೇ ಒಂದು ವಚನ.

(ಚರ್ಮಕ್ಕೆ ಕರೆ ಹಾಯಿಸಿ ಹದಮಾಡುವ ವಿಧಾನವನ್ನು ಕುರಿತು ಮಾಹಿತಿ ನೀಡಿದವರು ನನ್ನ ತಂದೆ ಹನುಮಂತಯ್ಯ ಮತ್ತು ತಾಯಿ ಕದರಮ್ಮ)

(ಡಾ.ವಡ್ಡಗೆರೆ ‌ನಾಗರಾಜಯ್ಯ
8722724174)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending