Connect with us

ದಿನದ ಸುದ್ದಿ

ದಾವಣಗೆರೆ | ಇದೇನು ಸ್ಮಾರ್ಟ್ ಸಿಟಿಯೋ? ಕೊಚ್ಚೆ ಗುಂಡಿಯೋ? : ಎಸ್.ಓ.ಜಿ ಕಾಲೋನಿ ಜನರ ಅಳಲು

Published

on

ಎಸ್ ಓ ಜಿ ಕಾಲೋನಿ ಕಸದ ರಾಶಿ

ಪ್ರೀತಿ.ಟಿ.ಎಸ್

ಎಸ್.ಓ.ಜಿ. ಕಾಲೋನಿಯಿಂದ ಎಸ್.ಎಸ್.ಆಸ್ಪತ್ರೆಗೆ ಸಾಗುವ ರಸ್ತೆ ಬದಿಯಲ್ಲಿ ದುರಸ್ತಿ ಕಾಣದ ಚರಂಡಿಗಳು, ಅಲ್ಲಲ್ಲಿ ಕಸದ ರಾಶಿ, ಪೊದೆಗಳು ಬೆಳೆದು ಹಾವು-ಹುಪ್ಪಡಿಗಳ ಕಾಟ. ಬೀದಿ ದೀಪಗಳು ಇಲ್ಲದಿರುವಂತಹ, ತಗ್ಗು ಗುಂಡಿ ಇರುವ ರಸ್ತೆಗಳು.ಇದು ಕಂಡು ಬಂದದ್ದು ಸ್ಮಾರ್ಟ್ ಸಿಟಿ ದಾವಣಗೆರೆಯ ಎಸ್.ಓ.ಜಿ. ಕಾಲೋನಿಯಲ್ಲಿ.

ಈ ರಸ್ತೆಯ ಮೇಲೆ ಸಾರ್ವಜನಿಕರು ಓಡಾಡುವಾಗ ಪಕ್ಕದಲ್ಲಿಯೇ ಕಸದ ರಾಶಿ, ಅದರಿಂದ ಬೀರುವ ದುರ್ವಾಸನೆ, ಬೀದಿ ನಾಯಿ ಹಾಗೂ ಹಾವುಗಳ ಉಪಟಳ ಇಂತಹ ಸಮಸ್ಯೆಗಳಿಂದಾಗಿ ಇಲ್ಲಿನ ಸ್ಥಳೀಯ ನಿವಾಸಿಗರು ಕಿರಿ ಕಿರಿ ಅನುಭವಿಸುತ್ತಿದ್ದಾರೆ.
ಪ್ರತಿದಿನ ಕಸ ವಿಲೇವಾರಿ ವಾಹನ ಸ್ಥಳದಲ್ಲಿ ಸಂಚರಿಸಿದರೂ ಸಿಬ್ಬಂದಿಗಳು ಬೀದಿಗಳಿಗೆ ಹೋಗಿ ಕಸ ಸಂಗ್ರಹಿಸುವುದಿಲ್ಲ. ವಾರಕ್ಕೆ 2 ಬಾರಿ ಕಸ ಸಂಗ್ರಹಿಸಿ ಬೇಜವಾಬ್ದಾರಿ ತೋರುತ್ತಿದ್ದಾರೆ. ಇದರಿಂದಾಗಿ ಅಲ್ಲಿರುವ ನಿವಾಸಿಗಳು ಕಸವನ್ನು ಎಲ್ಲೆಂದರಲ್ಲಿ ಹಾಕುತ್ತಿದ್ದಾರೆ. ಕಸದ ವಿಲೇವಾರಿಯಲ್ಲಿ ಸ್ಥಳೀಯ ಆಡಳಿತ ನಿರ್ಲಕ್ಷ್ಯ ವಹಿಸಿದ್ದು, ಕಸ ವಿಲೇವಾರಿ ಕುರಿತು ಶೀಘ್ರ ಕ್ರಮ ಕೈಗೊಳ್ಳುವಂತೆ ಇಲ್ಲಿನ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಅಷ್ಟೇ ಅಲ್ಲ, ಆ ವಾರ್ಡ್‍ನಲ್ಲಿ ಸಂಗ್ರಹಿಸಲಾದ ಕಸವನ್ನು ಸಿಬ್ಬಂದಿಗಳು ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಸಮೀಪದಲ್ಲಿಯೇ ಸುರಿದು ಕೆಲವು ದಿನಗಳಿಗೊಮ್ಮೆ ಸುಡುತ್ತಾರೆ. ಈ ಸ್ಥಳದ ಸುತ್ತಮುತ್ತ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ, ತೋಟಗಾರಿಕೆ ಇಲಾಖೆ ಹಾಗೂ ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳಿದ್ದು ಅದರಿಂದ ಉತ್ಪತ್ತಿಯಾಗುವ ಹೊಗೆಯಿಂದ ತಮ್ಮ ಕಾರ್ಯ ನಿರ್ವಹಿಸದೆ ತೊಂದರೆ ಅನುಭವಿಸುವಂತಾಗಿದೆ.
ನಗರದಲ್ಲಿ ಅಲ್ಲಲ್ಲಿ ಕಂಟೇನರ್‍ಗಳ ವ್ಯವಸ್ಥೆ ಇಲ್ಲದಿರುವುದರಿಂದ, ಸಾರ್ವಜನಿಕರು ತಮ್ಮ ಮನೆಯ ಕಸವನ್ನು ವಿಲೇವಾರಿ ಮಾಡಲು ಅಲ್ಲಲ್ಲಿ ಕಸ ಹಾಕುತ್ತಾರೆ. ಇದರ ಪರಿಣಾಮ ಅಕ್ಕಪಕ್ಕದ ಮನೆಯ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿ ಅಧಿಕಾರಶಾಹಿ ಮತ್ತು ಜನಪ್ರತಿನಿಧಿಗಳು ಹಿಂದೇಟು ಹಾಕಿರುವುದು ಎದ್ದು ಕಾಣುತ್ತದೆ.

ಸಾಂಕ್ರಾಮಿಕ ರೋಗದ ಭೀತಿ

ಇದು ಮಳೆಗಾಲದ ಸಮಯವಾದರಿಂದ, ಇಂತಹ ಸಮಯದಲ್ಲಿ ಕಸದ ಜತೆ ಮತ್ತಷ್ಟು ನೀರು ನಿಂತು ಕೊಳೆತು ಹುಳು ಹುಪ್ಪಡಿಗಳು ಹೆಚ್ಚಾಗುತ್ತಿವೆ. ಇದು ಸಾಂಕ್ರಾಮಿಕ ರೋಗಕ್ಕೆ ಹೇಳಿ ಮಾಡಿದ ಋತುಮಾನವಾಗಿದೆ. ಆದರಿಂದ ಇಲ್ಲಿ ಸಂಗ್ರಹವಾದ ಕಸವನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕು. ಇಲ್ಲದಿದ್ದರೆ ಕಸದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಮಲೇರಿಯಾ, ಡೆಂಗ್ಯೂ ಸೇರಿದಂತೆ ಇನ್ನಿತರ ಕಾಯಿಲೆಗೆ ಅನುವು ಮಾಡಿಕೊಡಲು ಸಹಕಾರಿಯಾಗುತ್ತದೆ. ಆದ್ದರಿಂದ ಕೂಡಲೇ ಚರಂಡಿ, ರಸ್ತೆ ಮೇಲಿನ ಕಸದ ರಾಶಿಯನ್ನು ಸ್ವಚ್ಛ ಮಾಡುವಲ್ಲಿ ಪಾಲಿಕೆ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.

ಪ್ಲಾಸ್ಟಿಕ್ ತ್ಯಾಜ್ಯದ ಸಾಮ್ರಾಜ್ಯ

ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಲು ಎಷ್ಟೋ ಪ್ರಯತ್ನಗಳು ನಡೆದರೂ ಪ್ಲಾಸ್ಟಿಕ್ ಬಳಕೆ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂಬುದನ್ನು ಈ ಕಸದ ರಾಶಿಯ ಮೂಲಕ ಸಾಕ್ಷಿ ಸಮೇತ ತೋರಿಸಬಹುದು. ಹೆಚ್ಚಿನ ಪಾಲು ಪ್ಲಾಸ್ಟಿಕ್ ಚೀಲಗಳು, ಒಡೆದ ಗಾಜಿನ ಬಾಟಲಿ ಚೂರುಗಳು, ನೀರು ಕುಡಿದು ಬಿಸಾಡಿದ ಬಾಟಲಿಗಳು ಇಲ್ಲಿ ಕಂಡು ಬರುತ್ತವೆ.

ಜಾನುವಾರು ಜೀವಕ್ಕೆ ತುತ್ತು

ಕಸದ ರಾಶಿಯಲ್ಲಿ ಪ್ಲಾಸ್ಟಿಕ್‍ನ ಪ್ರಮಾಣವೇ ಜಾಸ್ತಿ ಇರುವುದರಿಂದ ದನ ಕರುಗಳ ಸಾವಿಗೆ ಇದು ಒಂದು ಕಾರಣವಾಗಿ ಪರಿಣಮಿಸಿದೆ. ಏಕೆಂದರೆ ಈ ಪ್ಲಾಸ್ಟಿಕ್ ವಸ್ತುಗಳ ಮಧ್ಯೆ ಇರುವ ಆಹಾರ ಪದಾರ್ಥ ತಿನ್ನಲು ಬರುವ ಪ್ರಾಣಿಗಳು ತಮ್ಮ ಜೀವ ಕಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚು.

ಶೀಘ್ರವೇ ಕ್ರಮ ಅಗತ್ಯ

ಕಸ ವಿಲೇವಾರಿ ಮಾಡಲು ನಗರಸಭೆ ಶೀಘ್ರವೇ ಕ್ರಮ ತೆಗೆದುಕೊಳ್ಳಬೇಕು. ಅಧಿಕಾರಿಗಳು ಹೆಚ್ಚಿನ ಪೌರಕಾರ್ಮಿಕರನ್ನು ಬಳಸಿಕೊಂಡು ಹಾಗೂ ಸಣ್ಣ-ಪುಟ್ಟ ಕಸವನ್ನು ತುಂಬುವ ಗಾಡಿಗಳ ಮೂಲಕ ನಗರದ ವಿವಿಧ ಭಾಗಗಳಲ್ಲಿರುವ ಕಸದ ಗುಂಪುಗಳನ್ನು ಕಡಿಮೆ ಮಾಡಬೇಕಿದೆ.

ಮಹಾನಗರ ಪಾಲಿಕೆ ಅಧಿಕಾರಿಗಳು ಸಮಸ್ಯೆಯನ್ನು ಅರಿತುಕೊಂಡು ಈಗಲೇ ಎಚ್ಚೆತ್ತುಕೊಂಡು, ಪರಿಹಾರವನ್ನು ಒದಗಿಸಬೇಕು. ಇದರಲ್ಲಿ ಸಾರ್ವಜನಿಕರ ಪಾತ್ರವೂ ಮುಖ್ಯ. ಕೇವಲ ಅಧಿಕಾರಿಗಳು ಹಾಗೂ ಪಾಲಿಕೆಯನ್ನು ದೂಷಿಗಳನ್ನಾಗಿ ಮಾಡುವ ಮೊದಲು ಸಾರ್ವಜನಿಕರು ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ಅರಿತರೆ ಆಡಳಿತ ವರ್ಗವನ್ನು ದೂರುವುದು ತಪ್ಪುತ್ತದೆ. ನಾವು ಇರುವ ಪ್ರದೇಶವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ನಮ್ಮ ಕರ್ತವ್ಯ.

ನಿವಾಸಿಗಳ ಅಭಿಪ್ರಾಯ

• ಕಸ ವಿಲೇವಾರಿ ಮಾಡುವಲ್ಲಿ ನಗರಪಾಲಿಕೆಯವರು ಸರಿಯಾದ ಕ್ರಮವನ್ನು ಕೈಗೊಳ್ಳದೇ ಬೇಜವಾಬ್ದಾರಿ ಮಾಡುತ್ತಿದ್ದಾರೆ. ಸುತ್ತಮುತ್ತ ಸ್ಥಳಗಳಿಂದ ಸಂಗ್ರಹಿಸಲ್ಪಟ್ಟ ಕಸವನ್ನು ಬಸ್ ಡಿಪೋ, ತೋಟಗಾರಿಕೆ ಇಲಾಖೆ, ಎನ್.ಎಸ್.ಎಸ್ ಆಫೀಸ್ ಬಳಿಯೇ ಸಂಗ್ರಹಿಸಿಟ್ಟು ಕೆಲವು ದಿನಗಳಿಗೊಮ್ಮೆ ಸುಡುತ್ತಾರೆ. ಇದರಿಂದ ದುರ್ವಾಸನೆಯ ಜೊತೆಗೆ ಸುಟ್ಟಾಗ ಬರುವ ಹೊಗೆಯಿಂದ ಕೆಲಸ ಮಾಡಲು ಕಿರಿಕಿರಿ ಅನಿಸುತ್ತದೆ. ತೋಟಗಾರಿಕೆ ಅಡಿಯಲ್ಲಿ ಬೆಳೆದ ಅನೇಕ ಮರಗಳ ವಿನಾಶವೂ ಆಗುತ್ತಿದೆ. ಚರಂಡಿಗಳಲ್ಲಿ ನಿಂತ ನೀರಿನಿಂದ ಸೊಳ್ಳೆಗಳ ಹಾವಳಿಯೂ ಜಾಸ್ತಿ ಆಗಿದೆ.

| ಬಿ.ಎಸ್.ವೀರಭದ್ರಪ್ಪ, ಟೈಯರ್ ಪ್ಲಾಂಟ್ ಪ್ರಭಾರ

• ಪೌರಕಾರ್ಮಿಕರು ಪ್ರತಿ ದಿನ ಬಂದರು ಸಹ ಹೋಟೆಲ್‍ಗಳಲ್ಲಿ ಟೀ ಕುಡಿದು, ಹರಟೆ ಹೊಡೆಯುತ್ತಾ ಸಮಯ ವ್ಯರ್ಥ ಮಾಡುತ್ತಾರೆ. ಅವರಿಗೆ ಸರ್ಕಾರ ಸಂಬಳ ನೀಡಿದರು ಸಹ ಸಾರ್ವಜನಿಕರಿಗೆ ಹಣ ಕೇಳಿ ಕಾಟ ನೀಡುತ್ತಾರೆ. ವಾರಕ್ಕೆರಡು ಬಾರಿ ಮಾತ್ರ ತಮ್ಮ ಕೆಲಸ ನಿರ್ವಹಿಸುತ್ತಾರೆ.

| ಗೌತಮ್, ಸ್ಥಳಿಯ ನಿವಾಸಿ

• ಏರಿಯಾದಲ್ಲಿ ಅಲ್ಲಲ್ಲಿ ಕಸವನ್ನು ಹಾಕುತ್ತಿದ್ದು ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತಿದೆ. ಇದರ ತಡೆಗೆ ಫಾಗಿಂಗ್ ಮಾಡಬೇಕು. ಪಾಲಿಕೆ ವಾಹನಗಳು ದಿನನಿತ್ಯ ಬರಬೇಕು. ಪೌರಕಾರ್ಮಿಕರು ನಿರ್ಲಕ್ಷ್ಯ ತಾಳದೆ ನಿತ್ಯ ಕೆಲಸ ಮಾಡುವಲ್ಲಿ ಮೇಲಾಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು.

| ರಿಯಾಜ್, ಸ್ಥಳೀಯ ನಿವಾಸಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮುಕ್ತ ವ್ಯಾಪಾರ ಒಪ್ಪಂದ (FTA) | ಮೋದಿ ಸರ್ಕಾರದ ಈ ಪ್ರಯತ್ನ, ರೈತರ ಪಾಲಿನ ಮರಣ ಶಾಸನ : ಸಿದ್ದರಾಮಯ್ಯ ಆಕ್ರೋಶ

Published

on

ಸುದ್ದಿದಿನ,ಬೆಂಗಳೂರು : ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (RCEP)ದಡಿಯಲ್ಲಿ ನಡೆಲಿರುವ ಮುಕ್ತ ವ್ಯಾಪಾರ ಒಪ್ಪಂದ (FTA) ದೇಶದ ಕೃಷಿ ಕ್ಷೇತ್ರಕ್ಕೆ ಮಾರಕವಾಗಲಿದೆ, ನರೇಂದ್ರ ಮೋದಿ ಸರ್ಕಾರದ ಈ ಪ್ರಯತ್ನ ರೈತರ ಪಾಲಿನ ಮರಣಶಾಸನ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಮಾರು 10 ಕೋಟಿ ರೈತರ ಬದುಕು ಹೈನುಗಾರಿಕೆಯನ್ನು ಅವಲಂಬಿಸಿದೆ. ಕರ್ನಾಟಕದಲ್ಲಿಯೇ ಸುಮಾರು 86 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ನ್ಯೂಜಿಲೇಂಡ್, ಅಸ್ಟ್ರೇಲಿಯಾದಂತಹ ದೇಶಗಳಿಂದ ಅಗ್ಗದ ದರದ ಹಾಲು ಆಮದಿಗೆ ಅವಕಾಶ ನೀಡುವ RCEP ನಮ್ಮ ರೈತರನ್ನು ಬೀದಿ ಪಾಲು ಮಾಡಲಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಹೈನುಗಾರಿಕೆಯನ್ನು ಉತ್ತೇಜಿಸಲು ‘ಕ್ಷೀರಧಾರೆ’ ಮತ್ತು ಶಾಲಾ ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡಲು ‘ಕ್ಷೀರಭಾಗ್ಯ’ ಯೋಜನೆಗಳನ್ನು ಜಾರಿಗೆ ತಂದಿದ್ದೆ. ಮೋದಿಯವರ ಸರ್ಕಾರ ರೈತರು ಮತ್ತು ಶಾಲಾ ಮಕ್ಕಳ ಬದುಕು ಕಸಿಯಲು ಹೊರಟಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಯುಪಿಎ ಸರ್ಕಾರ RCEP ಮಾತುಕತೆಯಲ್ಲಿ ಭಾಗಿಯಾಗಿದ್ದು ನಿಜ. ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ದೇಶದ ರೈತರ ಹಿತ ಕಾಪಾಡಲು ಕೆಲವು ಬದಲಾವಣೆಗಳನ್ನು ಬಯಸಿದ್ದರು. ಆದರೆ ಮೋದಿಯವರು ಅವರು ಇಡೀ ದೇಶವನ್ನು ಕತ್ತಲಲ್ಲಿಟ್ಟು ಈ ಒಪ್ಪಂದಕ್ಕೆ ಸಹಿ ಹಾಕಲು ಹೊರಟಿದ್ದಾರೆ. ಎಲ್ಲಿದೆ ಪಾರದರ್ಶಕತೆ? ನಮ್ಮ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿಯವರು FTA ವಿರೋಧಿಸಲು ಕರೆ ನೀಡಿರುವುದನ್ನು ಸ್ವಾಗತಿಸುತ್ತೇನೆ.ನಮ್ಮ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೂ ಬಿಜೆಪಿ ಸರ್ಕಾರದ ರೈತ ವಿರೋಧಿ ಒಪ್ಪಂದದ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕರೆನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಇದು ಭಂಡಗೆಟ್ಟ ಸರ್ಕಾರ, ಅಧಿಕಾರದ ಹೊರತಾಗಿ ಅವರಿಗೆ ಬೇರೇನೂ ಬೇಡ : ಬಿಜೆಪಿ ವಿರುದ್ಧ ಸಿದ್ದ ರಾಮಯ್ಯ ಕಿಡಿ

Published

on

ಸುದ್ದಿದಿನ,ಬೆಂಗಳೂರು : ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕೆಂದು ಹೋದಾಗ ಅಲ್ಲಿನ ಸರ್ಕಾರ ಐದು ವರ್ಷ ಏನು ಅಭಿವೃದ್ಧಿ ಮಾಡಿದೆ ಎಂಬ ಬಗ್ಗೆ ಅನುಮಾನ ಮೂಡಿತು. ಹೈದರಾಬಾದ್- ಪೂನಾ ಹೆದ್ದಾರಿಯಲ್ಲಿ ವಾಹನ ಸಂಚರಿಸಲು ಪರದಾಡಬೇಕಿದೆ. ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರ ತವರು ರಾಜ್ಯದ ಸ್ಥಿತಿಯೇ ಹೀಗೆ. ಆದರೂ ಜನ ಬಿಜೆಪಿಗೆ ಮತ ನೀಡುತ್ತಾರೆಯೇ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಬಿಜೆಪಿಯವರು ಇವಿಎಂ ದುರುಪಯೋಗ ಮಾಡಿಕೊಂಡು ಚುನಾವಣೆಯಲ್ಲಿ ಗೆಲ್ಲುತ್ತಿರುವ ಸಾಧ್ಯತೆಗಳೂ ಇರಬಹುದು. ಅಭಿವೃದ್ಧಿ ಕಾರ್ಯಗಳನ್ನೇ ಮಾಡದಿದ್ದರೂ ಹೇಗೆ ಚುನಾವಣೆ ಗೆಲ್ಲಲು ಸಾಧ್ಯ? ಅಧಿಕಾರ ಹಿಡಿಯಲು ಚುನಾವಣಾ ಆಯೋಗ ಸೇರಿದಂತೆ ಎಲ್ಲ ಸ್ವಾಯತ್ತ ಸಂಸ್ಥೆಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳತ್ತಿದೆ. ಚುನಾವಣೆ ಘೋಷಣೆಯಾದ ದಿನದಿಂದ ನೀತಿಸಂಹಿತೆ ಜಾರಿಯಾಗಬೇಕು. ಆದರೆ ರಾಜ್ಯದಲ್ಲಿ 70 ದಿನ ಮುಂಚಿತವಾಗಿ ಚುನಾವಣೆಯ ದಿನವನ್ನು ಘೋಷಿಸಿದರೂ ಇನ್ನೂ ನೀತಿಸಂಹಿತೆ ಜಾರಿಯಾಗಿಲ್ಲ. ಇವೆಲ್ಲ ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಮೇಲೆ ಪ್ರಭಾವ ಬೀರುತ್ತಿರುವುದಕ್ಕೆ ಸ್ಪಷ್ಟ ನಿದರ್ಶನಗಳು. ಇವಿಎಂ ಯಂತ್ರಗಳು ನಂಬಿಕಾರ್ಹವಲ್ಲ ಎಂಬ ಕಾರಣದಿಂದ ಅಮೆರಿಕಾ, ಜಪಾನ್, ಜರ್ಮನಿಯಂತಹ ಮುಂದುವರೆದ ರಾಷ್ಟ್ರಗಳೇ ಸಾಂಪ್ರದಾಯಿಕ ಮತದಾನದ ಶೈಲಿಯಾದ ಮತಚೀಟಿ ಬಳಕೆಯನ್ನು ಮರು ಅಳವಡಿಕೆ ಮಾಡಿಕೊಂಡಿರುವಾಗ ಭಾರತ ಏಕೆ ಮಾಡಿಕೊಳ್ಳಬಾರದು? ಇಷ್ಟೊಂದು ಜನ ಇವಿಎಂ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನಿಸಿದರೂ ಅದರ ಮೇಲೆ ಬಿಜೆಪಿಗರ ಅತಿಯಾದ ಪ್ರೀತಿಗೆ ಕಾರಣವೇನು? ಎಂದಿದ್ದಾರೆ.

ಪ್ರವಾಹದಲ್ಲಿ‌ ಮನೆ ಕಳೆದುಕೊಂಡವರಿಗೆ ಪರಿಹಾರಧನ ನೀಡಿಲ್ಲ, ತಾತ್ಕಾಲಿಕ ಶೆಡ್ ಹಾಕಿಕೊಟ್ಟಿಲ್ಲ, ಕೆಲವರಿಗೆ ಹತ್ತು ಸಾವಿರ ಕೊಟ್ಟಿದ್ದು ಬಿಟ್ಟರೆ ಇದುವರೆಗೂ ರಾಜ್ಯ ಸರ್ಕಾರ ಬೇರಾವ ಗಮನಾರ್ಹ ಕೆಲಸವನ್ನು ಮಾಡಿಲ್ಲ. ಈಗ ಮತ್ತೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಹೀಗಾದರೆ ಸಂತ್ರಸ್ತರ ಗತಿಯೇನು? ಯು.ಪಿ.ಎ ಅವಧಿಯಲ್ಲಿ ದೊರೆತ ಪರಿಹಾರಕ್ಕೂ, ಎನ್‌ಡಿಎ ಅವಧಿಯಲ್ಲಿ ದೊರೆತ ಪರಿಹಾರದ ಮೊತ್ತಕ್ಕು ತಾಳೆ ಹಾಕುವುದು ಮೂರ್ಖತನ. ಹಿಂದೆ ಸಂಭವಿಸಿದ ಪ್ರವಾಹಕ್ಕೂ, ಈ ಬಾರಿಯ ಪ್ರವಾಹಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸಾವು, ನೋವು, ನಷ್ಟದ ಪ್ರಮಾಣ ಈ ಬಾರಿ ಅತಿ ಹೆಚ್ಚಾಗಿದೆ. ನಾನು ಮೊದಲ ಬಜೆಟ್ ಮಂಡಿಸಿದಾಗ ಒಂದು ಲಕ್ಷ ಕೋಟಿಯಿದ್ದ ಬಜೆಟ್ ಗಾತ್ರ, ಕೊನೆಯ ಬಜೆಟ್‌ಗೆ ರೂ.2 ಲಕ್ಷ ಕೋಟಿ ಮೀರಿತ್ತು. ಅಂದರೆ ಹಣದ ಮೌಲ್ಯ ಒಂದೇ ಪ್ರಕಾರವಾಗಿ ಇಲ್ಲ. ಹಾಗಾಗಿ ಕೇಂದ್ರ ನೀಡಿರುವ ಪರಿಹಾರ ಹಣದ ಪ್ರಮಾಣದಲ್ಲಿ ಸ್ವಲ್ಪ ಹೆಚ್ಚಿರಬಹುದು. ಹಾಗೆಂದ ಮಾತ್ರಕ್ಕೆ ಅಗತ್ಯ ಪ್ರಮಾಣದ ನೆರವು ದೊರೆತಿದೆ ಎಂದಲ್ಲ ಎಂದು ಹೇಳಿದ್ದಾರೆ.

ನೆರೆ ಪರಿಹಾರ ಕಾರ್ಯಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷವಾಗಿ ನಾವು ನಿತ್ಯವೂ ಸರ್ಕಾರವನ್ನು ಎಚ್ಚರಿಸುವ ಕಾರ್ಯ ಮಾಡುತ್ತಿದ್ದೇವೆ. ಆದರೆ ಇದು ಭಂಡಗೆಟ್ಟ ಸರ್ಕಾರ, ಅಧಿಕಾರದ ಹೊರತಾಗಿ ಅವರಿಗೆ ಬೇರೇನೂ ಬೇಡ. “ನಿದ್ರಿಸುತ್ತಿರುವವರನ್ನು ಎಬ್ಬಿಸಬಹುದು, ನಿದ್ರಿಸುತ್ತಿರುವಂತೆ ನಟಿಸುವವರನ್ನು ಎಬ್ಬಿಸುವುದು ಅಸಾಧ್ಯದ ಮಾತು” ಎಂದು ಕೆಂಡಾ ಮಂಡಲವಾಗಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಹಾಯ ಹಸ್ತದ ನಿರೀಕ್ಷೆಯಲ್ಲಿ ಈ‌ ಉತ್ಸಾಹಿ ದಿವ್ಯಾಂಗ ಯುವ ಪ್ರತಿಭೆ

Published

on

  • ಗಂಗಾಧರ ಬಿ ಎಲ್ ನಿಟ್ಟೂರ್

ನೆಯಲ್ಲಿ ಎಲ್ಲರ ಮುದ್ದಿನ ಕಣ್ಮಣಿಯಾಗಿದ್ದ ಆತ ಎಲ್ಲಾ ಮಕ್ಕಳಂತೆ ಉಂಡುಟ್ಟು, ಆಯಾಗಿ ಓಡಾಡಿಕೊಂಡಿದ್ದ. 3 – 4 ವರ್ಷದವನಿದ್ದಾಗ ಒಮ್ಮೆ ಕಾಡಿದ ಅತಿಸಾರ ಭೇದಿ ಮತ್ತು ಜ್ವರಕ್ಕೆಂದು ಕೊಡಿಸಿದ ಚಿಕಿತ್ಸೆ ಓವರ್ ಡೋಸ್ ಆಗಿ ಕಾಲಿನ ಸ್ವಾಧೀನ ಕಿತ್ತುಕೊಂಡಿದ್ದಲ್ಲದೆ ದೃಷ್ಟಿಯನ್ನೂ ಪ್ರತಿಶತಃ ಮಂದಗೊಳಿಸಿ ಮೂಲೆ ಹಿಡಿಸಿ ಬಿಟ್ಟಿತು. ಆದರೂ ಅವನೊಳಗಿನ ಅದಮ್ಯ ಉತ್ಸಾಹವನ್ನು ಮಾತ್ರ ಕಸಿದುಕೊಳ್ಳಲಾಗಲಿಲ್ಲ ಆ ದುರ್ವಿಧಿಗೆ. ಆತನ ಜೀವನೋತ್ಸಾಹ, ಪಾಸಿಟಿವ್ ಎನರ್ಜಿಯನ್ನು ಕಂಡ ಯಾರಿಗಾದರೂ ಖಂಡಿತ ಅಚ್ಚರಿಯಾಗುತ್ತದೆ.

ಹುಟ್ಟು ಅನಕ್ಷರಸ್ಥನಾದ ಆತನಿಗೆ ಹಾಡುವುದೆಂದರೆ ಪಂಚಪ್ರಾಣ. ಟಿವಿ, ಮೊಬೈಲ್ ನಲ್ಲಿ ಒಮ್ಮೆ ಕೇಳಿದ ಹಾಡನ್ನು ಸೀದಾ ಮಸ್ತಕಕ್ಕೇರಿಸಿಕೊಂಡು ಬಿಡುತ್ತಾನೆ. ಕವ್ವಾಲಿ, ಶರೀಫರ ತತ್ವಪದಗಳನ್ನು ಹಾಡುವುದೆಂದರೆ ಬಲು ಪ್ರೀತಿ. ಹಿಂದಿ ಮತ್ತು ಕನ್ನಡ ಸಿನಿಮಾ ಗೀತೆಗಳು ಸೇರಿದಂತೆ ನೂರಾರು ಹಾಡುಗಳ ಜತೆ ಪ್ರಸಿದ್ಧ ನಟರುಗಳ ಹಲವಾರು ಡೈಲಾಗ್ ಗಳು ಸಹ ಬಾಯಿಪಾಠವಾಗಿವೆ. ಸಂಗೀತವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡದಿದ್ದರೂ ಯಾವುದೇ ಗೀತೆಗಳಿಗೆ ಭಾವತುಂಬಿ ಹಾಡುವ ಕಲೆ ಆತನಿಗೆ ಒಲಿದಿದೆ.

ಇಂತಹ ವಿಶೇಷ ವಿಶಿಷ್ಟ ದಿವ್ಯಾಂಗ ಪ್ರತಿಭೆಯ ಹೆಸರು ಕೆ. ಮೊಹಮ್ಮದ್ ಬಾಷಾ. ದಾವಣಗೆರೆ ನಗರದ ನಿಟುವಳ್ಳಿ ಹೊಸ ಬಡಾವಣೆಯ 2ನೇ ಮೇನ್ 4 ನೇ ಕ್ರಾಸ್ ನಲ್ಲಿ ವಾಸ. ತಂದೆ ದಿವಂಗತ ಬಾಬು ಸಾಬ್, ತಾಯಿ ಎಂ. ಮಾಮಾಜಾನ್. ಬಡತನದ ಬೇಗೆಯಲ್ಲಿ ಬೇಯುತ್ತಿರುವ ಕುಟುಂಬದ ಭಾರವನ್ನು ಮೊಹಮ್ಮದ್ ನ ಅಣ್ಣನಾದ ವಲಿಬಾಷಾರ ಆಟೋ ರಿಕ್ಷಾ ಹೊತ್ತು ಸಾಗುತ್ತಿದೆ.

ನಿರ್ವಹಣೆಯ ತೊಂದರೆ ಹಿನ್ನೆಲೆಯಲ್ಲಿ ದಿವ್ಯಾಂಗನಾದರೂ ಕಲಿಕೆಯಲ್ಲಿ ಅಪಾರ ಶ್ರದ್ಧೆ ಮತ್ತು ಆಸಕ್ತಿ ಹೊಂದಿರುವ ಮೊಹಮ್ಮದ್ ನನ್ನು ಓದು – ಬರಹ ಅಥವಾ ಸಂಗೀತಭ್ಯಾಸಕ್ಕಾಗಿ ಯಾವುದಾದರೂ ಉಚಿತ ವಸತಿ ಶಾಲೆ ಅಥವಾ ಆಶ್ರಮಗಳಿಗಾದರೂ ಕಳಿಸಲು ಸಾಧ್ಯವಾಗಲಿಲ್ಲ ಎಂಬುದು ಮಾಮಾಜಾನ್ ರ ನೋವಿನ ನುಡಿ.

ಪ್ರಸ್ತುತ 27 ರ ಪ್ರಾಯದ ಈ ಉತ್ಸಾಹಿ ಯುವಕನ ಪ್ರತಿಭೆ ಬೆಳಕಿಗೆ ಬರಲು ಸದ್ಯ ವೇದಿಕೆಯನ್ನು ಕಲ್ಪಿಸಿಕೊಡುವವರು, ಆರ್ಥಿಕವಾಗಿ ಸಹಕಾರ ನೀಡುವ ಔದಾರ್ಯ ಉಳ್ಳವರು ಮುಂದೆ ಬಂದು ಗುರುತಿಸಬೇಕಿದೆ. ಈತನ ಸಂಗೀತ ಕಲಿಕೆಯನ್ನು ಕ್ರಮಬದ್ಧ ಮತ್ತು ಶಾಸ್ತ್ರೀಯಗೊಳಿಸಲು ಬಿಡುವಿನ ವೇಳೆಯಲ್ಲಿ ಆತನ ಮನೆಗೆ ಹೋಗಿ ಉಚಿತವಾಗಿ ಸಂಗೀತ ಹೇಳಿಕೊಡುವ ಸಹೃದಯತೆಯನ್ನು ಸಂಗೀತ ಶಿಕ್ಷಕರು ತೋರಬೇಕಿದೆ .

ಸದ್ಯದ ಪರಿಸ್ಥಿತಿಯಲ್ಲಿ ಹೃದಯ ಶ್ರೀಮಂತಿಕೆಯಿಂದ ಯಾರಾದರೂ ತಾವಾಗಿಯೇ ಒಂದಷ್ಟು ಸಹಾಯ ಹಸ್ತ ಚಾಚಿದರೆ ಆತನ ಕುಟುಂಬದ ಆರ್ಥಿಕ ಬವಣೆ ನೀಗಲು ಸಹಾಯವಾಗುವ ಜೊತೆ ಸಂಗೀತ ಕ್ಷೇತ್ರಕ್ಕೆ ಈ ಪ್ರತಿಭೆಯಿಂದ ಸಾಕಷ್ಟು ಕೊಡುಗೆ ಲಭಿಸುವುದರಲ್ಲಿಯೂ ಸಂದೇಹವಿಲ್ಲ.

ದಯವಿಟ್ಟು ಈ ನಂಬರ್ ಗೆ ಸಂಪರ್ಕಿಸಿ ಸಹಾಯ ಹಸ್ತ ಚಾಚಿ : ಮೊಹಮ್ಮದ್ ಬಾಷಾ ನ ಮೊ.ಸಂ : 8088644148

Continue Reading

Trending