Connect with us

ದಿನದ ಸುದ್ದಿ

ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಗೆ ನಾಲ್ಕು ವರ್ಷ : 1059.92 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿ ಪ್ರಗತಿ

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆ ಸ್ಮಾರ್ಟ್‌ಸಿಟಿ ಯೋಜನೆ ಪ್ರಾರಂಭವಾದಾಗಿನಿಂದ ಇಂದಿನವರೆಗೆ ನಗರದಲ್ಲಿ ರೂ.1059.92 ಕೋಟಿ ವೆಚ್ಚದಲ್ಲಿ 74 ಕಾಮಗಾರಿಗಳನ್ನು ರೂಪಿಸಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ದಾವಣಗೆರೆ ಸ್ಮಾರ್ಟ್‌ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಶರೀಫ್ ತಿಳಿಸಿದರು.

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆಯಾಗಿ ಜೂ.25 ಕ್ಕೆ 4 ವರ್ಷಗಳು ಪೂರೈಸಿದ ಹಿನ್ನಲೆಯಲ್ಲಿ ಸ್ಮಾರ್ಟ್‌ಸಿಟಿ ಲಿ, ಕಚೇರಿಯಲ್ಲಿ ಮಂಗಳವಾರ ಕರೆಯಲಾಗಿದ್ದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೂ.5.88 ಕೋಟಿಯಲ್ಲಿ 12 ಕಾಮಗಾರಿಗಳು ಮುಕ್ತಾಯಗೊಂಡಿವೆ. ರೂ. 549.06 ಕೋಟಿಯಲ್ಲಿ 41 ಕಾಮಗಾರಿಗಳು ಪ್ರಗತಿಯಲ್ಲಿವೆ. ರೂ.161.73 ಕೋಟಿಯಲ್ಲಿ 09 ಕಾಮಗಾರಿಗಳು ಟೆಂಡರ್ ಹಂತದಲ್ಲಿದ್ದು, ಡಿ.ಪಿ.ಆರ್ ಹಂತದಲ್ಲಿ ರೂ.353.25 ಕೋಟಿ ವೆಚ್ಚದಲ್ಲಿ 12 ಕಾಮಗಾರಿಗಳಿವೆ.ದಾವಣಗೆರೆ ಜಿಲ್ಲೆಯು ಸ್ಮಾರ್ಟ್‌ಸಿಟಿ ಯೋಜನೆಯಡಿ ಮೊದಲ ಹಂತದಲ್ಲೇ ಆಯ್ಕೆಯಾಗಿದ್ದು, ಈ ಯೋಜನೆಯಲ್ಲಿ ಎಬಿಡಿ ಹಾಗೂ ಪಾನ್‌ಸಿಟಿ ಎಂದು ಎರಡು ವಿಭಾಗ ಮಾಡಿ ನಗರದಾದ್ಯಂತ ಹಲವಾರು ಕಾಮಗಾರಿಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದರು.

ಮೊದಲ ಹಂತದಲ್ಲಿ ರೂ.1.39 ಕೋಟಿಯಲ್ಲಿ 9 ಪಾರ್ಕ್‌ಗಳು ಹಾಗೂ ಎರಡನೇ ಹಂತದಲ್ಲಿ 37 ಪಾರ್ಕ್‌ಗಳನ್ನು ಆಯ್ಕೆ ಮಾಡಿಕೊಂಡು ಪಾರ್ಕ್‌ನಲ್ಲಿ ಇ-ಶೌಚಾಲಯಗಳನ್ನು ಒಂದು ಯುರೋಪಿಯನ್ ಶೈಲಿ ಹಾಗೂ ಇನ್ನೊಂದು ಭಾರತೀಯ ಶೈಲಿಯಲ್ಲಿ ನಿರ್ಮಿಸಲಾಗುತ್ತಿದೆ. 1 ರಿಂದ 10 ರ ವರೆಗಿನ ನಾಣ್ಯ ಹಾಕಿದರೆ ಇ-ಶೌಚಾಲಯ ಬಾಗಿಲು ತೆರಯುತ್ತದೆ. ಪ್ರತಿ 5 ಜನರ ಉಪಯೋಗದ ನಂತರ ಸ್ವಯಂ ಚಾಲಿತವಾಗಿ ಒಳಗಡೆ ಫ್ಲೋರ್‌ನ್ನು ಸ್ವಚ್ಛಗೊಳಿಸುತ್ತದೆ ಎಂದರು.

ರೂ. 3.58 ಕೋಟಿಯಲ್ಲಿ ನಗರದ 52 ಸ್ಥಳಗಳಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಸ್ಮಾರ್ಟ್ ಬಸ್ ಶೆಲ್ಟರ್‌ಗಳನ್ನು ನಿರ್ಮಿಸಲಾಗುತ್ತಿದ್ದು, ಎಲ್ಲಾ ಬಸ್‌ಗಳಿಗೆ ಜಿಪಿಎಸ್ ಅಳವಡಿಸಿ ಬಸ್ ಬರುವ ಸಮಯನ್ನು ಪ್ರದರ್ಶಿಸುವಂತೆ ಎಲ್‌ಇಡಿ ಫಲಕಗಳನ್ನು ಅಳವಡಿಸಲಾಗುವುದು. ರೂ. 25.41 ಕೋಟಿ ವೆಚ್ಚದಲ್ಲಿ ಹಳೇ ಬಸ್ ನಿಲ್ದಾಣದ ಪುನರಾಭಿವೃದ್ಧಿ ಕಾಮಗಾರಿಯನ್ನು ರೂಪಿಸಲಾಗಿದ್ದು, 21420.74 ಚ.ಮೀ. ವಿಸ್ತೀರ್ಣದಲ್ಲಿ ಕೆಳ ಮಹಡಿಯಲ್ಲಿ 92 ನಾಲ್ಕು ಚಕ್ರದ ವಾಹನ ಮತ್ತು 122 ದ್ವಿಚಕ್ರ ವಾಹನ ನಿಲುಗಡೆ ಹಾಗೂ ನೆಲ ಮಹಡಿಯಲ್ಲಿ 12 ಬಸ್ ನಿಲ್ಲುವ ವ್ಯವಸ್ಥೆಯನ್ನು ರೂಪಿಸಲಾಗಿದೆ. ನಿಲ್ದಾಣದಲ್ಲಿ ಅಂಗಡಿಗಳು, ನಿರ್ವಹಣಾ ಕೊಠಡಿ, ಶೌಚಾಲಯ, ಸ್ನಾನದ ಕೊಠಡಿ, ರ‌್ಯಾಂಪ್, ಪ್ರಯಾಣಿಕರಿಗೆ ಆಸನದ ವ್ಯವಸ್ಥೆ, ಕುಡಿಯುವ ನೀರು, ಲಿಫ್ಟ್, ಬಸ್ ಸಂಚಾರದ ಫಲಕಗಳು ಹಾಗೂ ಭದ್ರತೆಗಾಗಿ ಸಿ.ಸಿ ಟಿವಿ ಅಳವಡಿಸಲಾಗುವುದು ಎಂದರು.

ಬೈಸಿಕಲ್ ಷೇರಿಂಗ್ ಸಿಸ್ಟಮ್ ಹಾಗೂ ಇ-ರಿಕ್ಷಾ: ನಗರದಲ್ಲಿ ಸಾರ್ವಜನಿಕರಿಗೆ ಪರಿಸರ ಸ್ನೇಹಿ ಮತ್ತು ಸುರಕ್ಷತೆ ಸಂಚಾರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರೂ.9.90 ಕೋಟಿಗಳಲ್ಲಿ ಸಾರ್ವಜನಿಕ ಬೈಸಿಕಲ್ ಷೇರಿಂಗ್ ಸಿಸ್ಟಮ್ ಅಳವಡಿಸಲಾಗುವುದು. 20 ಡಾಕಿಂಗ್ ಸ್ಟೇಷನ್ಸ್‌ಗಳಿದ್ದು, 100 ವಿದ್ಯುತ್ ಚಾಲಿತ ಮತ್ತು 100 ಸಾಮಾನ್ಯ ಬೈಸಿಕಲ್ ವ್ಯವಸ್ಥೆ ಮಾಡಲಾಗುವುದು. ಈ ಕಾಮಗಾರಿಗೆ ಈಗಾಗಲೇ ಗುತ್ತಿಗೆ ನೀಡಲಾಗಿದ್ದು, ಮುಂದಿನ 15 ರಿಂದ 20 ದಿನಗಳಲ್ಲಿ ಕೆಲಸ ಪ್ರಾರಂಭವಾಗಲಿದೆ.
ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮತ್ತು ಪರಿಸರ ಮಾಲಿನ್ಯ ಕಡಿಮೆ ಮಾಡುವ ದೃಷ್ಠಿಯಿಂದ ಹಾಗೂ ಉದ್ಯೋಗ ನೀಡುವ ಸಲುವಾಗಿ ಆಧುನಿಕ ತಂತ್ರಜ್ಞಾನವುಳ್ಳ ಬ್ಯಾಟರಿ ಚಾಲಿತ 80 ಆಟೋಗಳನ್ನು ಸ್ಥಳೀಯರಿಗೆ (60:40) ಸಬ್ಸಿಡಿ ಆಧಾರದಲ್ಲಿ ನೀಡಲಾಗುವುದು. ಈಗಾಗಲೇ ನಾಲ್ವರು ಮುಂದೆ ಬಂದಿದ್ದು, ಕೆಲವೇ ದಿನಗಳಲ್ಲಿ ಆಟೋಗಳನ್ನು ವಿತರಿಸಲಾಗುವುದು. ಮಹಿಳೆಯರಿಗೆ ಶೇ.75 ರಷ್ಟು ಸಬ್ಸಿಯಡಿಯಲ್ಲಿ ನೀಡಲಿದ್ದೇವೆ ಎಂದರು.

ಜಿಲ್ಲೆಯ ಸಾರ್ವಜನಿಕರ ಹಿತದೃಷ್ಠಿಯಿಂದ ರೂ.2.85 ಕೋಟಿಗಳಲ್ಲಿ ವಿದ್ಯುತ್ ಚಿತಾಗಾರವನ್ನು ನಿರ್ಮಿಸಲು ಚಿಂತಿಸಲಾಗಿದ್ದು, ಈ ಕುರಿತು ಸರ್ವೆ ಕಾರ್ಯ ನಡೆಯುತ್ತಿದೆ. ನಗರದಲ್ಲಿ ಜನರ ಆರೋಗ್ಯಾಭಿವೃದ್ಧಿ ಮತ್ತು ಮಕ್ಕಳ ಆಟಕ್ಕೆ ಅನುಕೂಲವಾಗುವಂತೆ ವ್ಯಾಯಾಮ ಶಾಲೆ ಮತ್ತು ಮಕ್ಕಳ ಆಟಿಕೆ ಉಪಕರಣಗಳನ್ನು ನಗರದ 16 ಉದ್ಯಾನವನಗಳಲ್ಲಿ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಯೋಜನೆಯಲ್ಲಿ ಬೈಸಿಕಲ್, ಸೀಟೆಡ್ ಚೆಸ್ಟ್ ಪ್ರಸ್, ಎಚ್‌ಡಿ ಸಿಟ್ ಆಫ್, ಎಚ್.ಡಿ. ಸ್ಕಾಟ್ ಪುಶಿಂಗ್, ಹೆಲ್ತ್ ವಾಕರ್ ಸೇರಿದಂತೆ ಮಕ್ಕಳ ಆಟಿಕೆ ಉಪಕರಣಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.

ತುಂಗಾಭದ್ರ ನದಿಗೆ ಅಣೆಕಟ್ಟು ನಿರ್ಮಾಣ: ದಾವಣಗೆರೆ ನಗರಕ್ಕೆ 24*7 ಕುಡಿಯುವ ನೀರು ಒದಗಿಸಲು ತುಂಗಾಭದ್ರ ನದಿಗೆ 550 ಮೀ ಉದ್ದದ ಹಾಗೂ 2.5 ಮೀ ಅಗಲದ ಅಣೆಕಟ್ಟನ್ನು ರಾಜನಹಳ್ಳಿ ಜಾಕ್‌ವಲ್ ಬಳಿ ರೂ.76.11 ಕೋಟಿಯಲ್ಲಿ ನಿರ್ಮಿಸಲಾಗುವುದು. ಈ ಅಣೆಕಟ್ಟಿನಲ್ಲಿ 0.2 ಟಿಎಂಸಿ ನೀರು ಶೇಖರಣೆ ಮತ್ತು 50+5 ಸ್ವಯಂ ಚಾಲಿತ ಗೇಟ್ ನಿರ್ಮಾಣ ಮಾಡಲಾಗುವುದು. ಈ ಕಾಮಗಾರಿಯನ್ನು ಒಂದರೆಡು ತಿಂಗಳಿನಲ್ಲಿ ಪಾರಂಭಿಸಲಾಗುವುದು ಎಂದರು.

ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ರೂ.120 ಕೋಟಿಯಲ್ಲಿ ಅಭಿವೃದ್ಧಿಪಡಿಸಿ ಅದರಲ್ಲಿ ಮೂರು ಘಟಕಗಾಳಾಗಿ ಬಸ್ ಟರ್ಮಿನಲ್, ಕೆಎಸ್‌ಆರಟಿಸಿ ಕಚೇರಿ ಹಾಗೂ ಶಾಪಿಂಗ್ ಮಾಲ್ ಮತ್ತು ಚಿತ್ರ ಮಂದಿರ ನಿರ್ಮಿಸಲಾಗುವುದು. ಒಂದು ನೆಲಮಹಡಿ ಸೇರಿದಂತೆ 4 ಮಹಡಿಯ ಕಟ್ಟಡವನ್ನು ನಿರ್ಮಿಸಲಾಗುವುದು. 45 ಬಸ್‌ಗಳ ನಿಲುಗಡೆ ಹಾಗೂ ಪ್ರಯಾಣಿಕರಿಗೆ ಬೇಕಾದ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಕಲ್ಪಿಸಿ ಭದ್ರತೆಯ ದೃಷ್ಟಿಯಿಂದ ಸಿ,ಸಿ.ಕ್ಯಾಮಾರಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.

ನಗರದ ಎಂಟು ಸರ್ಕಾರಿ ಕಚೇರಿಗಳ ಮೇಲ್ಚಾವಣಿಯಲ್ಲಿ ರೂ.2.21 ಕೋಟಿ ವೆಚ್ಚದಲ್ಲಿ ಸೋಲಾರ್ ಪ್ಯಾನಲ್ಸ್ ಅಳವಡಿಕೆ ಮಾಡಿ ಸೌರ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವ ಗುರಿ ಹೊಂದಲಾಗಿದೆ. ಇದರಿಂದ ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್ ಉಳಿತಾಯ ಮತ್ತು ಬೆಸ್ಕಾಂ ಇಲಾಖೆಗೆ ಪ್ರತಿ ಯೂನಿಟ್‌ಗೆ ಪಾವತಿಸುತ್ತಿದ್ದ ರೂ. 8.50 ಬದಲಿಗೆ ಪ್ರತಿ ಯೂನಿಟ್‌ಗೆ ರೂ. 5.90 ಗಳನ್ನು 25 ವರ್ಷಗಳವರೆಗೆ ಪಾವತಿಸಲು ನಿಗದಿಯಾಗಿರುತ್ತದೆ. ಹೆಚ್ಚುವರಿಯಾಗಿರುವ ವಿದ್ಯುಚ್ಛಕ್ತಿಯನ್ನು ಬೆಸ್ಕಾಂ ಇಲಾಖೆಗೆ ಮಾರಾಟ ಮಾಡಲಾಗುವುದು ಎಂದು ತಿಳಿಸಿದರು.

ನಗರದಲ್ಲಿ ಅಪರಾಧ ನಿಯಂತ್ರಿಸಲು, ಸ್ವಚ್ಚತೆ ಬಗ್ಗೆ ಮಾಹಿತಿ ಪಡೆಯಲು ಮತ್ತು ಸುರಕ್ಷತೆಯ ದೃಷ್ಠಿಯಿಂದ ಸಿ.ಸಿ ಟಿವಿ ಕ್ಯಾಮರಾಗಳನ್ನು ರೂ.74.84 ಕೋಟಿ ವೆಚ್ಚದಲ್ಲಿ ಅಳವಡಿಸಲಾಗುವುದು. ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್, ಇಂಟಲಿಜೆಂಟ್ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿ, ಈ ಯೋಜನೆಯಲ್ಲಿ ಕಮಾಂಡ್ ಕಂಟ್ರೋಲ್ ಸೆಂಟರ್‌ನಿಂದ ಸಾರ್ವಜನಿಕರಿಗೆ ಸಾರಿಗೆ ಮತ್ತು ತುರ್ತು ಸೇವೆಗಳ ಮಾಹಿತಿ ನೀಡುವುದು, ಆನ್‌ಲೈನ್ ಅಪ್ಲಿಕೇಷನ್‌ಗಳನ್ನು ನಿಯಂತ್ರಣದಲ್ಲಿಡುವ ವ್ಯವಸ್ಥೆ ಕಲ್ಪಿಸುವುದು, ವಾಯು ಮಾಲಿನ್ಯದ ಮಾಹಿತಿಗಾಗಿ ಸೆನ್ಸಾರ್‌ಗಳನ್ನು ಅಳವಡಿಸುವುದು ಸೇರಿದಂತೆ ಇ-ಕಲಿಕಾ ಕೇಂದ್ರದ ಮೂಲಕ ಡಿಜಿಟಲ್ ಗ್ರಂಥಾಲಯವನ್ನು ಸ್ಥಾಪಿಸಲಾಗುವುದು. ಇ-ಆಡಳಿತ ಕಾರ್ಯಕ್ರಮದಲ್ಲಿ ಕಿಯೋಸ್ಕ್, ಒಂದು ನಗರ ಒಂದು ಸಂಖ್ಯೆ ಮತ್ತು ಇತರೆ ಸಾರ್ವಜನಿಕ ಸೇವೆಗಳನ್ನು ರೂಪಿಸಲಾಗಿದೆ ಹಾಗೂ ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ನಾಗರಿಕರಿಗೆ ಒದಗಿಸಲಾಗುವುದು ಎಂದರು.

ನಗರದ 10 ಸರ್ಕಾರಿ ಕಚೇರಿಗಳ ಆವರಣಗಳಲ್ಲಿ 2.42 ಕೋಟಿ ವೆಚ್ಚದಲ್ಲಿ ಡಿಸ್‌ಪ್ಲೇ ಬೋರ್ಡ್‌ಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳ ಮಾಹಿತಿ, ಹವಾಮಾನ ವರದಿ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ಹಲವು ಮಾಹಿತಿಗಳನ್ನು ನೇರ ಪ್ರಸಾರ ಮತ್ತು 19 ಸರ್ಕಾರಿ ಶಾಲೆಗಳಲ್ಲಿ 2.57 ಕೋಟಿ ವೆಚ್ಚದಲ್ಲಿ ಗಣಕಯಂತ್ರದ ಲ್ಯಾಬ್‌ಗಳನ್ನು ಒದಗಿಸಿ ಡಿಜಿಟಲ್ ತರಗತಿಗಳನ್ನು ಸ್ಥಾಪಿಸಲಾಗುವುದು ಎಂದರು.

ನಗರದಲ್ಲಿ ನಾಲ್ಕು ರಸ್ತೆಗಳನ್ನು ಸ್ಮಾರ್ಟ್ ರಸ್ತೆಗಳನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದ್ದು, ಕಾಮಗಾರಿಯು ಪೂರ್ಣಗೊಳ್ಳುವ ಹಂತದಲ್ಲಿವೆ. ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಈ ರಸ್ತೆಗಳಲ್ಲಿ ಮಳೆ ನೀರು ಪೈಪ್ ಚರಂಡಿ, ವಿದ್ಯುತ್, ದೂರವಾಣಿ ಯುಜಿಡಿ, ಗ್ಯಾಸ್ ನೀರಿನ ಪೈಪ್‌ಲೈನ್‌ಗಳನ್ನು ಭೂಗತವಾಗಿ ಸ್ಥಾಪಿಸಲಾಗುವುದು. ರಸ್ತೆಗಳ ಬದಿಯಲ್ಲಿ ಸುಂದರವಾದ ಮರಗಳನ್ನು ನೆಡುವುದರಿಂದ ಮತ್ತು ಎಲ್.ಇ.ಡಿ ಬೀದಿ ದೀಪಗಳನ್ನು ಅಳವಡಿಸುವುದರಿಂದ ಈ ರಸ್ತೆಗಳು ಸುಂದರವಾಗಿ ಕಾಣುತ್ತವೆ ಎಂದು ತಿಳಿಸಿದರು.

ಸ್ಮಾರ್ಟ್ ಸಿಟಿ ಮುಖ್ಯ ಅಭಿಯಂತರ ಸತೀಶ್, ಮುಖ್ಯ ಹಣಕಾಸು ಅಧಿಕಾರಿ ಪ್ರಭಾವತಿ, ಟೀಮ್ ಲೀಡರ್ ಶ್ರೀನಾಥ್‌ರೆಡ್ಡಿ, ಜನರಲ್ ಮ್ಯಾನೇಜರ್ ಚಂದ್ರಶೇಖರ್, ಕಾರ್ಯಪಾಲಕ ಅಭಿಯಂತರ ಗುರಪಾದಯ್ಯ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ಹೇಳಿಕೆ

  • ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ನಗರದ ಹೊರ ವಲಯದಲ್ಲಿರುವ ಗಾಜಿನ ಮನೆಗೆ ಶೌಚಾಲಯ ನಿರ್ಮಾಣ, ರೂ. 5 ಕೋಟಿ ವೆಚ್ಚದಲ್ಲಿ ಆಕರ್ಷಕ ಅಕ್ವೇರಿಯಂ, ಲೇಸರ್ ಶೋ, ಪ್ಲಾಂಟೇನ್ ಹಾಗೂ ಟಂಗಲ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ನಗರದಲ್ಲಿ ಪೊಲೀಸರ ನೈಟ್ ಬೀಟ್ ಬದಲಾಗಿ ದ್ರೋಣ್‌ಬೀಟ್ ಮಾಡಲು ಉದ್ದೇಶಿಸಿದ್ದ್ದು, ಇದು ನಿರ್ಮಾಣವಾದರೆ ಪೊಲೀಸರಿಗೆ ರಾತ್ರಿ ವೇಳೆ ಬೀಟ್ ಮಾಡವುದು ತಪ್ಪಲಿದೆ. ಈ ಯೋಜನೆ ಸಾಕಾರಗೊಂಡರೆ ಇದು ದೇಶದಲ್ಲೇ ಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ನಗರದಲ್ಲಿ ಸಾರ್ಟ್‌ಸಿಟಿ ಯೋಜನೆಯಲ್ಲಿ ನಡೆಯುತ್ತಿರುವ ಹಾಗೂ ಮುಂದೆ ನಡೆಯಲಿರುವ ಕಾಮಗಾರಿ ಬಗ್ಗೆ ಊಹಾಪೋಹಗಳಿಗೆ ಕಿವಿಕೊಡಬೇಡಿ. ಎಲ್ಲಾ ಕಾಮಗಾರಿಗಳು ಗುಣಮಟ್ಟ ಮತ್ತು ತ್ವರಿತ ಗತಿಯಲ್ಲಿ ನಡೆಯುವಂತೆ ಹಾಗೂ ಯಾವುದೇ ಅವ್ಯವಹಾರಗಳು ನಡೆಯದಂತೆ ಕ್ರಮ ವಹಿಸಲಾಗುವುದು.

|ದಾವಣಗೆರೆ ಸ್ಮಾರ್ಟ್‌ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ, ಶರೀಫ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಪಿ. ಚಿದಂಬರಂ ಐದು ದಿನಗಳ ವಶಕ್ಕೆ ಸಿಬಿಐ ಮನವಿ

Published

on

ಸುದ್ದಿದಿನ,ದೆಹಲಿ: ನಿನ್ನೆ ಐಎನ್ಎಕ್ಸ್ ಹಗಣದ ಆರೋಪದಲ್ಲಿ ಬಂಧಿಸಲಾಗಿದ್ದ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರನ್ನು ಇಂದು ನ್ಯಾಯಾಲಯಕ್ಕೆ ಸಿಬಿಐ ಅಧಿಕಾರಿಗಳು ಹಾಜರುಪಡಿಸಿದರು. ಚಿದಂಬರಂ ಅವರನ್ನು ಐದು ದಿನಗಳ ಕಾಲ ವಶಕ್ಕೆ ನೀಡುವಂತೆ ಸಿಬಿಐ ಮನವಿ ಮಾಡಿತು.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸಿಬಿಐ ಪರ ವಾದ ಮಂಡಿಸಿ, ಪಿ. ಚಿದಂಬರಂ ವಿಚಾರಣೆಗೆ ಸಹಕರಿಸುತ್ತಿಲ್ಲ. ಯಾವುದೇ ತನಿಖೆಗೂ ಏನನ್ನೂ ಪ್ರತಿಕ್ರಿಯಿಸುತ್ತಿಲ್ಲ. ಮೌನ ಅವರ ಸಾಂವಿಧಾನಿಕ ಹಕ್ಕು, ಆದರೆ, ಯಾವುದಕ್ಕೂ ಪ್ರತಿಕ್ರಿಯಿಸುತ್ತಿಲ್ಲ ಎಂದರು.

ಇತರ ಆರೋಪಿಗಳೊಂದಿಗೆ ಪಿ.ಚಿದಂಬರಂ ಅವರನ್ನು ವಿಚಾರಣೆ ನಡೆಸುವ ಅಗತ್ಯವಿರುವುದರಿಂದ ಅವರನ್ನು ಸಿಬಿಐ ವಶಕ್ಕೆ ನೀಡುವಂತೆ ಮೆಹ್ತಾ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು. ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.‌ ಇಂದಿನ ವಿಚಾರಣೆ ಹಿನ್ನೆಲೆಯಲ್ಲಿ ದೆಹಲಿಯ ಸಿಬಿಐ ನ್ಯಾಯಾಲಯದ ಆವರಣದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

Continue Reading

ದಿನದ ಸುದ್ದಿ

ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಸಿಬಿಐ ವಶಕ್ಕೆ…!

Published

on

ಸುದ್ದಿದಿನ ಡೆಸ್ಕ್ : ಐಎನ್‌ಎಕ್ಸ್‌ ಮೀಡಿಯಾ ಹೌಸ್‌ ಹಗರಣದಲ್ಲಿ ಸಿಲುಕಿರುವ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ನಿನ್ನೆ ರಾತ್ರಿ ಸಿನಿಮೀಯ ರೀತಿಯಲ್ಲಿ ಅರೆಸ್ಟ್ ಆಗಿದ್ದಾರೆ.

ಚಿದಂಬರಂರನ್ನು ಹೊಸದಿಲ್ಲಿಯ ಜೋರ್‌ಭಾಗ್‌ನಲ್ಲಿ ಸಿಬಿಐ ಮುಖ್ಯ ಕಚೇರಿಯಲ್ಲಿ ವಿಚಾರಣೆಗೆ ಕರೆದೊಯ್ಯಲಾಗಿದೆ. ನಿನ್ನೆ ಇಡೀ ರಾತ್ರಿ ಚಿದಂಬರಂ ಇಲ್ಲಿಯೇ ಕಳೆಯಬೇಕಾಗಿದೆ. ಇನ್ನು
ವಿಪರ್ಯಾಸ ಎಂದರೆ ಇದೇ ಮುಖ್ಯ ಕಚೇರಿಯ ಕಟ್ಟಡವನ್ನು ಉದ್ಘಾಟಿಸಿದ್ದೇ ಚಿದಂಬರಂ. 2011ರಲ್ಲಿ ಈ ಕಚೇರಿಯನ್ನು ಚಿದಂಬರಂ ಉದ್ಘಾಟಿಸಿದ್ದರು. ಈಗ ಅದೇ ಕಟ್ಟಡದಲ್ಲಿ ಬಂಧನಕ್ಕೊಳಗಾಗಿ ವಿಚಾರಣೆ ಎದುರಿಸುತ್ತಿದ್ದಾರೆ.

2010ರಲ್ಲಿ ಚಿದಂಬರಂ ಗೃಹ ಸಚಿವರಾಗಿದ್ದಾಗ ಸೊಹ್ರಾಬುದ್ದೀನ್‌ ಶೇಖ್‌ ನಕಲಿ ಎನ್‌ಕೌಂಟರ್‌ ಪ್ರಕರಣ ಸಂಬಂಧ ಅಮಿತ್‌ ಶಾ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಈಗ 2019ರಲ್ಲಿ ಚಿದಂಬರಂ ಸಿಬಿಐ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದಾರೆ. ಕೇಂದ್ರ ಗೃಹ ಸಚಿವರಾಗಿರುವವರು ಅಮಿತ್‌ ಶಾ.

Continue Reading

ದಿನದ ಸುದ್ದಿ

ದಾವಣಗೆರೆ | ನೂತನ ಜಿಲ್ಲಾಧಿಕಾರಿಗಳಾಗಿ ‘ಮಹಾಂತೇಶ್ ಜಿ. ಬೀಳಗಿ’ ಅಧಿಕಾರ ಸ್ವೀಕಾರ

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾಗಿ ಮಹಾಂತೇಶ್ ಜಿ. ಬೀಳಗಿ ಇವರು ಇಂದು ಅಧಿಕಾರ ವಹಿಸಿಕೊಂಡರು. ಇಂದು ಬೆಳಿಗ್ಗೆ ಕಚೇರಿಗೆ ಆಗಮಿಸಿದ ಅವರನ್ನು ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಅವರು ಪುಷ್ಪ ಗುಚ್ಚ ನೀಡಿ ಸ್ವಾಗತಿಸಿದರು. ಈ ಹಿಂದೆ ದಾವಣಗೆರೆ ಜಿಲ್ಲೆಯಲ್ಲಿ ಉಪವಿಭಾಗಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಶ್ರೀಯುತರು ಬೀದರ್ ಜಿ.ಪಂ ನ ಕಾರ್ಯನಿರ್ವಾಹಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು.

Continue Reading
Advertisement

Trending