Connect with us

ದಿನದ ಸುದ್ದಿ

ಭೀಮೋದ್ಯಮಿಗಳ ಯಶೋಗಾಥೆ : ಚಿನ್ನ-ಬೆಳ್ಳಿ ಪ್ರಮೋದ್ ಎಂಬ ದಲಿತ ಯುವಕನ ಸಕ್ಸೆಸ್ ಸ್ಟೋರಿ

Published

on

  • ನಾಗರಾಜ್ ಹೆತ್ತೂರ್

ದುಕಿಗಾಗಿ ಚಿನ್ನ ಗಿರವಿ ಇಟ್ಟವ ಮುಂದೊಂದು ದಿನ ಚಿನ್ನದಂಗಡಿಯ ಮಾಲೀಕನಾದ. ಕೇವಲ 95 ಸಾವಿರದಿಂದ 70 ಕೋಟಿ ವ್ಯವಹಾರ ನಡೆಸುವ ಪ್ರಮೋದ್ ಅವರು,

  • ಅಂಬೇಡ್ಕರ್ ಇಲ್ಲದಿದ್ದರೆ ನಾನಿಲ್ಲ….! ಈ ಯಶಸ್ಸಿಗೆ ಅವರೇ ಕಾರಣ
  • ಕೇವಲ 95 ಸಾವಿರದ ಮೂಲ ಬಂಡವಾಳ ಈಗ ವಾರ್ಷಿಕ 70 ಕೋಟಿ ವ್ಯವಹಾರ
  • ದಲಿತರು ಜ್ಯೂಯಲರಿ ಶಾಪ್ ಮಾಡುತ್ತಾರಾ ಎಂದು ನಕ್ಕು ಅವಮಾನಿಸಿದ್ದರು

ಅದು 1995 ರ ಇಸವಿ. ಡಿಗ್ರಿ ಓದುತ್ತಿದ್ದ ಆ ಯುವಕನ ತಲೆಯಲ್ಲಿ ಏನಾದರೂ ಬ್ಯುಸಿನೆಸ್ ಮಾಡಬೇಕೆಂಬ ಹಂಬಲ. ಮದ್ಯಾಹ್ನ ಕಾಲೇಜು ಮುಗಿಯುತ್ತಿತ್ತು. ಆ ಸಮಯದಲ್ಲಿ ಏನು ಮಾಡು ವುದು? ತಲೆಯಲ್ಲಿ ನೂರೆಂಟು ಯೋಚನೆ. ಕಾಲೇಜು ನಡುವೆ ಪಾರ್ಟ್ ಟೈಂ ಗೆ ಸೇರಿಕೊಂಡಿದ್ದು ಜ್ಯೂಯಲರಿ ಶಾಪ್ ಒಂದಕ್ಕೆ ಕೆಲಸಗಾರನಾಗಿ. ಕಣ್ಣೆದುರಿಗೆ ಇದ್ದ ಚಿನ್ನವನ್ನು ನೋಡಿದಾಗ ಇದು ನಮ್ಮಂತಹವರಿಗಲ್ಲ ಅಂದುಕೊಂಡಿದ್ದೆ ಹೆಚ್ಚು. ಇಷ್ಟಕ್ಕೂ ದಲಿತರು ಚಿನ್ನ ಬೆಳ್ಳಿ ಕ್ಷೇತ್ರದಲ್ಲಿ ಕಾಲಿರಿಸಿ ಉಳಿದುಕೊಳ್ಳುವುದುಂಟೆ? ಚಿನ್ನ, ಬೆಳ್ಳಿ ಉದ್ಯಮ ಎಂದರೆ ಅದು ಮಾರ್ವಾಡಿ, ಸೇಠುಗಳ ಉದ್ಯಮ. ಆ ಉದ್ಯಮದಲ್ಲಿ ದಲಿತರು ಕಾಲುಡಲು ಸಾಧ್ಯವೇ ..? ಹಾಗೆ ಸುಮ್ಮನೆ ನೆನಪಿಸಿಕೊಳ್ಳಲೂ ಅಸಾಧ್ಯದ ಮಾತು.

ವಾಸ್ತವದಲ್ಲಿ ಯಾವ ದಲಿತ ಕುಟುಂಬದಿಂದ ಬಂದವನೂ ಕಲ್ಪಿಸಿಕೊಂಡಿರುವುದೂ ಇಲ್ಲ. ಆದರೆ ಆ ಯುವಕ ಯಾರೂ ತುಳಿಯದ ಹಾದಿಯಲ್ಲಿ ಹೋಗಲು ಬಯಸಿದ್ದ. ಅಲ್ಲಿ 2 ವರ್ಷ ಕೆಲಸ ಮಾಡಿದ್ದಾಯಿತು. ಅನುಭವ ಪಡೆದಿದ್ದೂ ಆಯಿತು. ಅಷ್ಟರಲ್ಲಿ ಡಿಗ್ರಿ ಮುಗಿದಿತ್ತು. ನಾನೇಕೆ ಚಿನ್ನಬೆಳ್ಳಿ ಕ್ಷೇತ್ರಕ್ಕೆ ಕಾಲಿಡಬಾರದು…,? ನಾನೂ ಒಂದು ಜ್ಯೂಯಲರಿ ಅಂಗಡಿ ತೆರಯಬಾರದೇಕೆ? ಅದೊಂದು ದಿನ ಈ ಯೋಚನೆ ತಲೆಗೆ ಹೊಳೆದಿತ್ತು. ಅದೊಂದು ದಿನ ಆ ಕೆಲಸಕ್ಕೆ ಕೈ ಹಾಕಿದ ಆ ಹುಡುಗ ಮತ್ತೆ ಹಿಂದೆ ನೋಡಲೇ ಇಲ್ಲ.

ಸ್ನೇಹಿತರೊಬ್ಬರು ಗಿರವಿ ಇಟ್ಟು ಕೊಟ್ಟ ಐವತ್ತು ಸಾವಿರ ರೂಪಾಯಿ ಮತ್ತು ಬ್ಯಾಂಕ್‍ನಿಂದ ಕೊಟ್ಟ ತೊಂಬತ್ತೈದು ಸಾವಿರ ರೂಪಾಯಿಯಲ್ಲಿ ಆರಂಭಿಸಿದ ಚಿನ್ನ ಬೆಳ್ಳಿ ವಹಿವಾಟು ಇಂದು ವರ್ಷಕ್ಕೆ ಐವತ್ತು ಕೋಟಿ ವಹಿವಾಟು ನಡೆಸುತ್ತಿದೆ. ಜಾತಿ- ಧರ್ಮಗಳನ್ನು ಮೀರಿ ಆ ಯುವಕ ಒಬ್ಬ ಯಶಸ್ವಿ ಉದ್ಯಮಿಯಾಗಿ ಹೊರ ಹೊಮ್ಮಿದ್ದಾರೆ. ನಂಬಿಕೆ ಮತ್ತು ಕೆಲಸದ ಮೇಲೆ ಶ್ರದ್ಧೆ ಇದ್ದರೆ ದಲಿತರು ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗಬಹುದು ಎಂದು ತೋರಿಸಿದ್ದಾರೆ ಹಾಸನದ ಆಕಾಶ್ ಜ್ಯೂಯಲರ್ಸ್ ಮಾಲೀಕ ಬಿ.ಎನ್ ಪ್ರಮೋದ್. ಅವರು ಬೆಳೆದ ಪರಿಯನ್ನು ಅವರ ಬಾಯಿಂದಲೇ ಕೇಳೋಣ:

ಕೈಯ್ಯಲ್ಲಿ ಬಿಡಿಗಾಸಿಲ್ಲದೇ ಆರಂಭಿಸಿದ ಆಕಾಶ್ ಜ್ಯೂಯಲರ್ಸ್

ಪಾರ್ಟ್ ಟೈಂ ನಲ್ಲಿ ನಾನು ಕೆಲಸ ಮಾಡ ಬೇಕೆಂದು ಓಡಾಡುತ್ತಿದ್ದಾಗ ಇಲ್ಲೊಬ್ಬರು ರಾಜಾಸ್ತಾನದವರಿದ್ದರು. ಅಂಗಡಿ ಹೆಸರು ಮನೋಜ ಬ್ಯಾಂಕರ್ಸ್ನ ಮಾಲೀಕ ಶಾಂತಿ ಲಾಲ್ ಗುಲ್ ಗುಲಿಯಾ ಅವರ ಹತ್ತಿರ ಸೇರಿಕೊಂಡೆ. ಡಿಗ್ರಿಗೆ ಹೋಗುತ್ತಲೇ ಫ್ರೀ ಟೈಂ ನಲ್ಲಿ ಅಂಗಡಿಯಲ್ಲಿ ಪಾರ್ಟ್ ಟೈಂ ಕೆಲಸವನ್ನು 2 ವರ್ಷ ಮಾಡಿದೆ. ಒಳ್ಳೆ ಅನುಭವ ಸಿಕ್ಕಿತು. ನಾವೇ ಏಕೆ ಮಾಡಬಾರದು ಎಂದು ಮನಸ್ಸಾಯಿತು. ಪಾರ್ಟ್‍ನರ್ ಯಾರೂ ಇರಲಿಲ್ಲ, ಮನೆಯಲ್ಲಿ ಬಡತನ. ಕೈಯ್ಯಲ್ಲಿ ಹಣವಿಲ್ಲ. ಆದರೂ ಒಂದು ಗಟ್ಟಿ ನಿರ್ಧಾರ ತೆಗೆದುಕೊಂಡೆ. ಆಗ ನನ್ನೊಂದಿಗೆ ಇದ್ದದ್ದು ಆತ್ಮವಿಶ್ವಾಸ ಮಾತ್ರ.

ದುಡ್ಡಿಗೆ ಏನು ಮಾಡುವುದು ಎಂದು ಯೋಚಿಸಿದಾಗ ನನ್ನ ಕೈ ಹಿಡಿದವರು ದೂಪ ಪೇಪರ್ ಏಜೆನ್ಸಿ ನಡೆಸುತ್ತಿದ್ದ ದೊರೆಸ್ವಾಮಿ. ಜೀವನದಲ್ಲಿ ಅವರನ್ನು ಮರೆಯುವಂತೆಯೇ ಇಲ್ಲ. `ಸಾರ್ ಅಂಗಡಿ ಮಾಡುತ್ತಿದ್ದೇನೆ’ ಅವರು ಮರು ಮಾತ ನಾಡಲಿಲ್ಲ. ಯಾಕೆಂದರೆ ನನ್ನ ಮೇಲೆ ಅವರಿಗೆ ನಂಬಿಕೆ ಇತ್ತು. ಅವರ ಮನೆಯಲ್ಲಿದ್ದ ಚಿನ್ನ ಅಡವಿಟ್ಟು 50 ಸಾವಿರ ತಂದುಕೊಟ್ಟರು.

ಆ ಕಾಲಕ್ಕೆ ಅದು ದೊಡ್ಡ ಮೊತ್ತ. ಅದನ್ನು ತೆಗೆದುಕೊಂಡು ಹೋಗಿ ಅಡ್ವಾನ್ಸ್ ಕೊಟ್ಟೆ. ಇನ್ನೊಬ್ಬರಿಗೆ ಗಿರವಿ ಇಟ್ಟು ತಂದ ಹಣದಲ್ಲಿ ಒಂದು ಸಣ್ಣ ಟೇಬಲ್- ಕುರ್ಚಿ ಹಾಕಿಕೊಂಡು ಕಳಿತೆವು. ಆಗ ಶುರುವಾಗಿದ್ದು ಆಕಾಶ್‍ ಜ್ಯೂಯಲರ್ಸ್. ನನ್ನ ಈ ಉದ್ಯಮದ ಹಿಂದೆ ಬೆನ್ನೆಲುಬಾಗಿ ನಿಂತವರು ಶಾಂತಿ ಲಾಲ್ ಗುಲ್ ಗುಲಿಯಾ. ಅವರನ್ನೂ ಎಂದೂ ಮರೆಯುವಂತಿಲ್ಲ.

ದಲಿತರು ಜ್ಯೂಯಲರಿ ಶಾಪ್ ಮಾಡುತ್ತಾರಾ ಎಂದು ನಕ್ಕು ಅವಮಾನಿಸಿದ್ದರು

ಅಂಗಡಿ ತೆರೆದಿದ್ದಾಯಿತು, ಮೂಲ ಬಂಡವಾಳ ಬೇಕಲ್ಲವೇ..? ನಂತರ ಪಿಎಂಆರ್ ವೈ ಪ್ರಧಾನಮಂತ್ರಿ ಜವಹಾರ್‍ಲಾಲ್ ಯೋಜನೆಗೆ ಅರ್ಜಿ ಹಾಕಿದೆ. ಆಗಲೂ ಒಂದು ಕತೆ. ನಮ್ಮವರು (ದಲಿತರು) ಡಿಫಾಲ್ಟರ್ ಆಗಿದ್ದರು, ನೀವು ಸರಿಯಾಗಿ ಹಣ ಕಟ್ಟುವುದಿಲ್ಲ ನಿಮಗೆ ಕೊಡುವುದಿಲ್ಲ ಎಂದರು.

ಮೊದಲನೆಯದಾಗಿ ನಾನು ಸೆಲೆಕ್ಟೆ ಆಗಲಿಲ್ಲ. ಕಾರಣ, ಜ್ಯುಯಲರಿ ಶಾಪ್ ಮಾಡುವುದು ಅದು ದಲಿತರು…? ನನ್ನ ಮಾತು ಕೇಳಿ ಅಲ್ಲಿನ ಆಯ್ಕೆ ಸಮಿತಿ ಅಧಿಕಾರಿಗಳು ನಕ್ಕು ಅವಮಾನ ಮಾಡಿ ಕಳುಹಿದ್ದರು. ಅದೊಂದು ಅಪರಾಧ` ಎಂಬಂತೆ ನನ್ನ ನೋಡಿದ್ದರು. `ಅದು ನಿಮ್ಮಂತಹವರಿಗಲ್ಲ ಹೋಗಯ್ಯ’ ಎಂದು ಕುಹಕವಾಡಿದ್ದರು. ಇನ್ನೂ ಹೇಳುವುದಾದರೆ ಸರಕಾರದಿಂದ ಇಂತಹ ಸ್ಕೀಂ ಗೆ ಸಾಲವೇ ಇರಲಿಲ್ಲ.

ದಿ.ಚಂದ್ರ ಪ್ರಸಾದ್ ತ್ಯಾಗಿ ಹೇಳಿ ಸಾಲ ಕೊಡಿಸಿದರು

ಆಗ ನನಗೆ ನೆನಪಾಗಿದ್ದು ದಿ. ಚಂದ್ರಪ್ರಸಾದ್ ತ್ಯಾಗಿ. ಅಗವರು ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷರಾಗಿದ್ದರು. ಅವರ ಮನೆಗೆ ಹೋಗಿ ವಿಚಾರ ಹೇಳಿದೆ. ಆಗವರು ಡಿಐಸಿ ಅಧಿಕಾರಿಗಳಿಗೆ ಕರೆ ಮಾಡಿ ಚಿನ್ನ ಬೆಳ್ಳಿ ಅಂಗಡಿ ತೆರೆಯಲು ಯಾರಾದರೂ ದಲಿತರು ಅರ್ಜಿ ಹಾಕಿದ್ದಾರೆನ್ರಿ ಎಂದು ವಿಚಾರಿಸಿದರು.

ಅವರ ಮಾತಿಗೆ ಒಪ್ಪಿದ ಅಧಿಕಾರಿಗಳು ಒಲ್ಲದ ಮನಸ್ಸಿನಿಂದಲೇ ಸೆಲೆಕ್ಷನ್ ಮಾಡಿಸಿದರು. ಅಲ್ಲಿ ಸೆಲೆಕ್ಟ್ ಆದೆ. ಆದರೆ ಬ್ಯಾಂಕಿನಲ್ಲಿ ಮತ್ತೆ ರಿಜೆಕ್ಟ್ . ವಿಜಯ ಬ್ಯಾಂಕಿನ ಮೆನೆಜರ್ `ನಿಮ್ಮವರು ಕಟ್ಟುವುದಿಲ್ಲ ಹೋಗ್ರಿ ‘ಎಂದುಬಿಟ್ಟರು. ನಾನು ಅವರೆದುರು ನಿಂತು ನೇರವಾಗಿಯೇ ಹೇಳಿದೆ ಸಾರ್ ಕೊಡಿ, ನನಗೆ ಬೇರೆಯವರ ಕತೆ ಗೊತ್ತಿಲ್ಲ. ನಾನು ಕಟ್ಟುತ್ತೇನೆ ಎಂದೆ.

ಕೇವಲ 95 ಸಾವಿರದ ಮೂಲ ಬಂಡವಾಳ

ಅದೇನೋ ನನ್ನ ಅದೃಷ್ಟ. ಏಳೂವರೆ ಸಾವಿರ ಸಬ್ಸಿಡಿ ಸೇರಿ 95 ಸಾವಿರದ ಚೆಕ್ ಕೊಟ್ಟರು ಅದೇ ನನ್ನ ಮೂಲ ಬಂಡವಾಳ. ಇದನ್ನು ತೀರಿಸಲು 7 ವರ್ಷ ಬೇಕು. ಆದರೆ ಶೃದ್ಧೆಯಿಂದ ಕೆಲಸ ಮಾಡಿದೆ. ಯಶಸ್ಸು ಸಿಕ್ಕಿತು. 3 ವರ್ಷಕ್ಕೆ ಸಾಲ ತೀರಿಸಿದೆ. ನನಗೆ ಸಾಲ ಕೊಟ್ಟ ಮ್ಯಾನೇಜರ್ ಬೆಂಗಳೂರಿನಲ್ಲಿ ಚೀಪ್ ಮ್ಯಾನೆಜರ್ ಆಗಿದ್ದರು.

ಹೋಗಿ ಅವರಿಗೆ ಕೊಟ್ಟೆ. ಅವರು ಅಚ್ಚರಿಯಿಂದ ಕೂರಿಸಿಕೊಂಡು ಮಾತನಾಡಿಸಿದರು. ಅವರಿಗೆ ಹೇಳಿದೆ `ನಮ್ಮಂತಹವರು ಬಂದರೆ ಕೊಡಿ’ ಕೆಲವರು ಹಾನೆಸ್ಟ್ ಆಗಿರುತ್ತಾರೆ ಎಂದೆ. ಆ ಮೆನೆಜರ್ ಈಗ ನಿವೃತ್ತಿ ಆಗಿದ್ದಾರೆ. ಆದರೆ ಇವತ್ತಿಗೂ ನಮ್ಮ ಕಸ್ಟಮರ್. ಈಗಲೂ ಬರುತ್ತಾರೆ ಈಗವರು ಮಂಗಳೂರಿನಲಿದ್ದಾರೆ. ಅತಿ ಕಡಿಮೆ ಹಣ ಹಾಕಿ ಈ ಎತ್ತರಕ್ಕೆ ಬೆಳೆದೆ. ಇದು ಬೆಳೆದು ಬಂದ ಹಾದಿ ಇದು ಎನ್ನುತ್ತಾರೆ ಪ್ರಮೋದ್.

ಪೆಟ್ರೋಲ್ ಬಂಕ್ ಮಾಲೀಕರಾಗಿಯೂ ಯಶಸ್ವಿ

ಒಂದು ಚಿಕ್ಕ ಅಂಗಡಿ ಮಾಡಿದ್ದು. 13 ವರ್ಷ ಕೆಲಸ ಮಾಡಿದೆ. ಇಂದು ದೊಡ್ಡ ಶೋರೂಂ ಮಾಡಿದ್ದೇನೆ. ಮಂಗಳೂರಿನಲ್ಲಿ ಪೆಟ್ರೋಲ್ ಬಂಕ್ ಮಾಡಿದ್ದೇನೆ. ಅದರಲ್ಲೂ ಯಶಸ್ವಿಯಾದೆ. 25 ರಿಂದ 30 ಮಂದಿಗೆ ಕೆಲಸ ಕೊಟ್ಟಿದ್ದೇನೆ. ತಿಂಗಳಿಗೆ ಲಕ್ಷಾಂತರ ರುಪಾಯಿ ಸಂಬಳ ನೀಡುತ್ತೇನೆ. ವಾರ್ಷಿಕವಾಗಿ ಏನಿಲ್ಲವೆಂದರೂ 80 ಕೋಟಿ ವಹಿವಾಟು ನಡೆಯುತ್ತಿದೆ ಎನ್ನುತ್ತಾರೆ.

ಚಿನ್ನ ಬೆಳ್ಳಿ ವರ್ತಕರ ಸಂಘದ ಕಾರ್ಯದರ್ಶಿಯಾಗಿ

ಚಿನ್ನ -ಬೆಳ್ಳಿ ವರ್ತಕರ ಸಂಘದ ಕಾರ್ಯದರ್ಶಿಯೂ ಆಗಿರುವ ಅವರು, ಅಸೋಸಿಯೇಷನ್ ಆರಂಭದಿಂದಲೇ ಇದ್ದವರು. ವರ್ತಕರೊಂದಿಗೆ ತಮ್ಮ ಒಡನಾಟದ ಬಗ್ಗೆ ಹೇಳುವುದಿಷ್ಟು `ನಾವು ಎಲ್ಲರೊಂದಿಗೆ ಚೆನ್ನಾಗಿರಬೇಕು, ಮೇಲಾಗಿ ಇತರೆ ವರ್ಗದವರೊಂದಿಗೆ ಬೆಳೆಯಬೇಕು. ಇದಕ್ಕಾಗಿ ಬ್ರಾಡ್ ಮೈಂಡ್ ಬೆಳೆಸಿಕೊಳ್ಳಬೇಕು. ಇತರೆ ವರ್ಗದವರ ಜೊತೆ ಬಿದ್ದಾಗ ಹೆಚ್ಚು ಕಲಿತುಕೊಳ್ಳಬಹುದು.

ಇಲ್ಲಿ ನಂಬಿಕೆಯೇ ಮುಖ್ಯ. ದಲಿತ ಎನ್ನುವುದಕ್ಕಿಂತಲೂ ಒಳ್ಳೆಯ ಉದ್ದಿಮೆದಾರರಾಗ ಬೇಕು.ಸತ್ಯ ಹೇಳಬೇಕೆಂದರೆ ದಲಿತರೊಂದಿಗೆ ಇದ್ದು ಬೆಳೆಯಲು ಕಷ್ಟ. ಆದರೆ ಇತರೆ ಜನಾಂಗದವರೊಂದಿಗೆ ಬೆಳೆಯಬೇಕು. ಇಲ್ಲದಿದ್ದರೆ ಎಲ್ಲಿರುತ್ತೇವೆಯೋ ಅಲ್ಲೇ. ನಾವು ಅವರಿಂದ ಕಲಿತುಕೊಳ್ಳಬೇಕು. ಯಾಕೆ ಅವರು ಬೇಗ ಮುಂದುವರೆಯುತ್ತಾರೆ ಅವೆಲ್ಲವನ್ನೂ ನೋಡ ಬೇಕು.

ಜನ ಈಗ ನನ್ನನ್ನು ಉದ್ಯಮಿಯಾಗಿ ನೋಡುತ್ತಾರೆ

ಈಗ ನನ್ನ ಕಸ್ಟಮರ್ಸ್ ಮತ್ತು ಹೊರಜಗತ್ತು ನನ್ನನ್ನು ದಲಿತ ಎನ್ನುವುದಕ್ಕಿಂತಲೂ ಒಳ್ಳೆಯ ಉದ್ದಿಮೆದಾರನಾಗಿ ನನ್ನನ್ನು ನೋಡುತ್ತಾರೆ. ಇತ್ತೀಚೆಗಷ್ಟೆ ರಾಜ್ಯ ಜ್ಯೂಯಲರಿ ಅಸೋಸಿಯಷನ್. ಇಡೀ ರಾಜ್ಯದಲ್ಲಿ ಈ ಉದ್ಯಮದಲ್ಲಿರುವ ದಲಿತರ ಪೈಕಿ ನಾನು ಮತ್ತು ಬೆಂಗಳೂರಿನಲ್ಲಿರುವ ಒಬ್ಬರು.

ಯಾವುದನ್ನು ನಾವು ಜೀವನದ ಪ್ರಮುಖ ವಸ್ತು, ಕೈಗೆಟಗದ ವಸ್ತು ಎಂದು ಕೊಂಡಿದ್ದೇವೋ ಅದೇ ಚಿನ್ನವನ್ನು ಇಂದು ಮಾರಾಟ ಮಾಡುತ್ತೇವೆ, ಇಂಪೋರ್ಟ್ ಮಾಡಿಕೊಳ್ಳುತ್ತೇವೆ. ನಮ್ಮದು ಚಿನ್ನದೊಂದಿಗೆ ಬದುಕು ಎನ್ನುವಂತಾಗಿದೆ. ಇದೇ ಚಿನ್ನವನ್ನು ಅಡ ಇಟ್ಟು ಅಂಗಡಿ ಕಟ್ಟಿದ್ದು ಎಂದರೆ ಒಂದು ಕ್ಷಣ ನಂಬಲು ಆಗುವುದಿಲ್ಲ.

ಬಡ ಕುಟುಂಬದಲ್ಲಿ ಹುಟ್ಟಿ ಕೋಟಿಗಟ್ಟಲೆ ವ್ಯವಹಾರ

ನಾನು ಹುಟ್ಟಿದ್ದು ಹಾಸನ ತಾಲ್ಲೂಕು ದೊಡ್ಡಬಾಗನಹಳ್ಳಿಯಲ್ಲಿ. ತಂದೆ ನಿಂಗಯ್ಯ, ತಾಯಿ ಜಯಮ್ಮ, ಡಿಗ್ರಿ ಮುಗಿದ ಸಂದರ್ಭ ನನ್ನ ತಂದೆ ತೀರಿಕೊಂಡರು. ಶಿಕ್ಷಣ ಇಲಾಖೆಯಲ್ಲಿ 4 ನೇ ದರ್ಜೆ ನೌಕರರಾಗಿದ್ದರು. ತೀರಿಕೊಂಡ ನಂತರ ತಂದೆಯ ಕೆಲಸ ನನಗೆ ಬಂತು, ತಿರಸ್ಕರಿಸಿದೆ. ನನಗೆ ಬಿಸಿನೆಸ್ ಮಾಡುವ ಹಂಬಲ. ಅಂದು ಮನೆಯವರೆಲ್ಲ ತುಂಬಾ ಒತ್ತಾಯ ಮಾಡಿದ್ದರು ಅವತ್ತು ಸರಕಾರಿ ಕೆಲಸಕ್ಕೆ ಹೋಗಿದ್ದರೆ ಈ ಮಟ್ಟಕ್ಕೆ ಬೆಳೆಯಲು ಆಗುತ್ತಿರಲಿಲ್ಲ.

ನಾವು 4 ಜನ ಇಬ್ಬರು ಗಂಡು ಇಬ್ಬರು ಹೆಣ್ಣು. ನಾನೇ ಕೊನೆ ಯವನು ಸಹೋದರ ಜಯರಾಂ ಶಿಕ್ಷಣ ಇಲಾಖೆ ಯಲ್ಲಿ ಪ್ರಥಮ ದರ್ಜೆ ನೌಕರಾಗಿದ್ದಾರೆ. ನನ್ನ ಈ ಯಶಸ್ಸಿನ ಹಿಂದೆ ಸಹೋದರ ಜಯರಾಂ ಅವರ ಪಾತ್ರ ಬಹುಮುಖ್ಯವಾಗಿದೆ. ಹಾಗೇ ಅತ್ನಿ ಎಂಸಿಇ ಕಾಲೇಜಿನ ಪ್ರೊಫೆಸರ್ ಅತ್ನಿ ಕೃಷ್ಣ, ಹಾಗೂ ಅತ್ನಿ ಮಹದೇವ್ ಹಾಗೂ ಸ್ನೇಹಿತರ ಮಾರ್ಗದರ್ಶನ ನನ್ನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನುತ್ತಾರೆ ಪ್ರಮೋದ್.

ಬದುಕುವ ಛಲ ಇದ್ದರೆ ನಾವೂ ಈ ಕ್ಷೇತ್ರದಲ್ಲಿ ಯಶಸ್ವಿಯಾಗಬಹುದು

ಈ ಕ್ಷೇತ್ರದಲ್ಲಿ ಬರಲು ಐಡಿಯಾಸ್‍ಬೇಕು ಕೋಟ್ಯಾಂತರ ಹಣ ಬೇಡ . ಸ್ವಲ್ಪವೇ ಇದ್ದರೂ ಸಾಕು. ಈ ಕ್ಷೇತ್ರದಲ್ಲೂ ಜಯಿಸಬಹುದು ಹಾಗೆ ಆಸಕ್ತಿ ಇರುವ ಯುವಕರು ಬಂದರೆ ನಾನು ದಾರಿ ಹೇಳುತ್ತೇನೆ. ಅಂದ ಹಾಗೆ ಜ್ಯೂಯಲಿರಿ ಶಾಪ್ ಮಾಡಲೆಂದು ಸರಕಾರದಿಂದ ಯಾವ ಸ್ಕೀಮ್ ಕೂಡ ಇಲ್ಲ. ನಾನು ಇಲ್ಲಿಗೆ ಬರಲು ಸಹಾಯ ಮಾಡಿ ದವರೆಲ್ಲ ಇತರೆ ವರ್ಗದವರು, ಶೆಟ್ಟರು, ಗೌಡರು ಅವರೇ ಈ ಫೀಲ್ಡಿಗೆ ಕರೆತಂದವರು .

ಬಹುಶಃ ನಾನೇ ನಾದರೂ ನಮ್ಮ ಜಾತಿಯವರ ಜೊತೆ ಹೋಗಿದ್ದರೆ ಅವರನ್ನು ಎದುರಿಸುವುದು ಕಷ್ಟವಾಗುತ್ತಿತ್ತು ಎಂದು ಪ್ರಾಮಾಣಿಕವಾಗಿ ಹೇಳುತ್ತಾರೆ. ಚಿನ್ನ ಬೆಳ್ಳಿ ವರ್ತಕರೆಂದರೆ ಅದು ಸೇಟು, ಮಾರ್ವಾಡಿಗಳದ್ದು ಎಂಬಂತಿರುವ ಕ್ಷೇತ್ರದಲ್ಲಿ ದಲಿತ ಯುವಕನೊಬ್ಬ ಈ ಪರಿ ಬೆಳೆದು ನಿಂತಿದ್ದು ಯಶೋ ಗಾಥೆಯೇ ಸರಿ. ಉದ್ಯಮ ವಲಯಕ್ಕೆ ಹೊರಡುವರಿಗೆ ಪ್ರಮೋದ್ ಮತ್ತು ಅವರು ಕಟ್ಟಿ ಬೆಳೆಸಿದ ಆಕಾಶ ಜ್ಯೂಯಲರ್ಸ್ ಮಾದರಿಯಾಗಿದೆ ಎಂದರೆ ತಪ್ಪಿಲ್ಲ.

ಪ್ರಾಮಾಣಿಕತೆ ಮತ್ತು ತಾಳ್ಮೆ ಇದ್ದರೆ ಸಕ್ಸಸ್

ನಮ್ಮ ದಲಿತ ಯುವಕರು ಈ ಕ್ಷೇತ್ರಕ್ಕೆ ಬರುತ್ತಿದ್ದಾರೆ ಅದರೂ ಭಯ. ಇಲ್ಲಿ ಉಳಿದುಕೊಳ್ಳಬೇಕು ಎಂದರೆಪ್ರಾಮಾಣಿಕತೆ, ನಂಬಿಕೆ, ಆತ್ಮವಿಶ್ವಾಸ ಮತ್ತು ಶ್ರಮ ಹಾಗಿದ್ದರೆ ಮಾತ್ರ ಉದ್ಯಮ ಕ್ಷೇತ್ರದಲ್ಲಿ ಮುಂದೆ ಬರಬಹುದು. ಅದರಲ್ಲೂ ಕಾಯುವ ತಾಳ್ಮೆ ಬೇಕು. ಇನ್ನೂ ಕೆಲವರು ಭಯದಿಂದ ಬರುತ್ತಿಲ್ಲ. ಬಜೆಟ್ ಗೆ ತಕ್ಕಂತೆ ವ್ಯವಹಾರ ಮಾಡಿ ಇತಿಮಿತಿ ಸಮಸ್ಯೆಗಳು ಬರುತ್ತವೆ. ವ್ಯಾಪಾರ ಒಂದು ಕಲೆ, ಹಾಗೆಯೇ ತಾಳ್ಮೆ ಬೇಕು ನನ್ನ ಈ ಸಕ್ಸೆಸ್ ಪ್ರಯಣದಲ್ಲಿ ಈಗ ನನ್ನ ಪತ್ನಿ ನ್ಯಾ ಕೈ ಜೋಡಿಸಿದ್ದಾರೆ.

ಬಿಇ ಕಂಪ್ಯೂಟರ್ ಸೈನ್ಸ್ ಮಾಡಿರುವ ಇವರು ನನ್ನ ಜ್ಯೂವೆಲರಿ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ಜೊತೆಗೆ ವಿನೀಸ್ ಎನ್ ಪ್ರಮೋದ್ ಎಂಬ ಮಗಳಿದ್ದಾಳೆ.ಜ್ಯೂವೆಲ್ಲರಿಯನ್ನು ಇನ್ನೂ ಎತ್ತರಕ್ಕೆ ವಿಸ್ತರಿಸುವ ಉದ್ದೇಶ ಹೊಂದಿದ್ದೇವೆ. ಹಾಗೆ ನೊಂದವರಿಗೆ, ನಿರ್ಗತಿಕರಿಗೆ ಕೈಲಾದ ಸಹಾಯ ಮಾಡುತ್ತೇವೆ.

ಬಹುಮುಖ್ಯವಾಗಿ ಉದ್ಯಮ ಕ್ಷೇತ್ರಕ್ಕೆ ಬರುವರಿಗೆ ಸದಾ ಪ್ರೋತ್ಸಾಹಿಸಲು, ಯಾವುದೇ ಸಲಹೆ ಸಹಕಾರ ಕೊಡಲು ನಾನು ಸಿದ್ದನಿದ್ದೇನೆ. ಯಾರೂ ಬೇಕಾದರೂ ನನ್ನನ್ನು ಸಂಪರ್ಕಿಸಬಹುದು. ಆದರೆ ಹಣವನ್ನೇ ಮಾಡಬೇಕೆಂದು ಬರಬೇಡಿ ಎನ್ನುತ್ತಾರೆ ಪ್ರಮೋದ್.

ರಾಷ್ಟ್ರಪತಿ ಕೆ.ಆರ್. ನಾರಾಯಣ್ ನನ್ನ ಬಗ್ಗೆ ಕೇಳಿ ಬೆನ್ನುತಟ್ಟಿದ್ದರು

ಅಬ್ದುಲ್ ಕಲಾಂ ಹೇಳಿದಂತೆ, ಯಾವಾಗಲೂ ನಾವು ದೊಡ್ಡ ದೊಡ್ಡ ಕನಸುಗಳನ್ನೇ ಕಾಣಬೇಕು. ನಾನು ರಾಷ್ಟ್ರಪತಿಯನ್ನು ನೋಡುತ್ತೇನೆಂದು ಅಂದುಕೊಂಡವನೂ ಅಲ್ಲ. ಆದರೆ ಕೆ.ಆರ್. ನಾರಾಯಣ್ ಅವರನ್ನು ನೋಡಿ ಕೈ ಕುಲುಕು ಮಾತನಾಡಿದ್ದರು. ಅದು ನನ್ನ ಸ್ಮರಣೀಯವಾದ ಘಟನೆ. ಹಾಗೆ ಮಂತ್ರಿಗಳಾದ ಜಾರ್ಜ್ ಫರ್ನಾಂಡಿಸ್, ಬಂಗಾರು ಲಕ್ಮಣ್ ಹಾಗೂ ದೇಶದ ನಮ್ಮ ಸಮುದಾಯದ ಎಲ್ಲಾ ಎಂಪಿಗಳನ್ನು ಒಮ್ಮೆ ಭೇಟಿ ಮಾಡಿದ್ದು ಜೀವನದ ಬಹುಮುಖ್ಯ ಘಟನೆಗಳು ಒಬ್ಬ ಉದ್ಯಮಿಯಾಗಿ ಇದೆಲ್ಲ ಸಾಧ್ಯವಾಯಿತು. ರಾಷ್ಟ್ರಪತಿ ಭವನದಲ್ಲಿ ಅವರನ್ನು ಮುಟ್ಟಿ ಮಾತನಾಡಿಸಿದ್ದು ನನ್ನ ಜೀವನದ ಅವಿಸ್ಮರಣೀಯ ಹಾಗೂ ಅದ್ಭುತ ಕ್ಷಣಗಳು .
ಬಾಬಾಸಾಹೇಬರಿಲ್ಲದಿದ್ದರೆ ನಾನಿಲ್ಲ….! ಈ ಯಶಸ್ಸಿಗೆ ಅವರೇ ಕಾರಣ.

ಹೌದು…! ನನ್ನ ಎಲ್ಲಾ ಬೆಳವಣಿಗೆ, ಸಾಧನೆಯ ಯಶಸ್ಸಿನ ಹಿಂದಿನ ಆದರ್ಶ ಬಾಬಾಸಾಹೇಬ್ ಅಂಬೇಡ್ಕರ್. ಅವರೇ ನನ್ನ ದೇವರು. ಅವರು ಕೊಟ್ಟ ಭಿಕ್ಷೆಯಿಂದ ನಾವು ಈ ಮಟ್ಟಕ್ಕೆ ಬಂದಿದ್ದೇವೆ. ಅವರಿಲ್ಲದಿದ್ದರೆ ನಾನು ಈ ಕ್ಷೇತ್ರಕ್ಕೆ ಬರಲು ಸಾಧ್ಯವೇ ಇರುತ್ತಿರಲಿಲ್ಲ. ನನ್ನ ಮೊದಲ ಸ್ಪೂರ್ತಿ. ಅವರಿಂದಲೇ ನಾನು ಈ ಮಟ್ಟಕ್ಕೆ ಬೆಳೆಯಲು ಕಾರಣವಾಯಿತು. ನಾನೊಬ್ಬ ಅಂಬೇಡ್ಕರ್ ಅನುಯಾಯಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.

(ಪ್ರಮೋದ್ , ಆಕಾಶ್ ಜ್ಯೂಯಲರ್ಸ್ ಮಾಲೀಕರು, ಹಾಸನ ಮೊ- 9448330416)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಬಾಯಿ ಬಿಟ್ಟರೆ ಬಣ್ಣಗೇಡಿನಂತಾಗಿದೆ ಮೋದಿ ಭಾಷಣಗಳು : ಸಿದ್ದರಾಮಯ್ಯ

Published

on

ಸುದ್ದಿದಿನ, ಬೆಂಗಳೂರು:ಬಾಯಿ ಬಿಟ್ಟರೆ ಬಣ್ಣಗೇಡು ಎಂಬಂತಾಗಿದೆ ಪ್ರಧಾನಿ ನರೇಂದ್ರ ಮೋದಿಯವರ ಭಾಷಣಗಳು. ನಿಯಂತ್ರಣ ಮೀರಿ ಹರಡುತ್ತಿರುವ ಕೊರೊನಾ ಸೋಂಕಿನಿಂದ ತತ್ತರಿಸಿರುವ ಜನರಲ್ಲಿ ಆತ್ಮವಿಶ್ವಾಸ ತುಂಬುವ ಯಾವ ನಿರ್ಧಿಷ್ಟ ಯೋಜನೆಗಳ ಪ್ರಸ್ತಾವಗಳೇ ಇಲ್ಲದ ಪ್ರಧಾನಿ ಭಾಷಣ ಅಸಹಾಯಕ ನಾಯಕನ ಗೋಳಾಟದಂತಿತ್ತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಬಡವರಿಗೆ ಉಚಿತ ಆಹಾರ ಧಾನ್ಯ ನೀಡುವ ಗರೀಬ್ ಕಲ್ಯಾಣ ಯೋಜನೆಯನ್ನು ನವಂಬರ್ ತಿಂಗಳ ವರೆಗೆ ಮುಂದುವರಿಸಿರುವುದು ಸ್ವಾಗತಾರ್ಹ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿಯವರು ತಿಂಗಳ ಹಿಂದೆಯೇ ಈ ಬೇಡಿಕೆ ಇಟ್ಟಿದ್ದರು. ಅದನ್ನು ಒಪ್ಪಿಕೊಂಡದ್ದಕ್ಕೆ ಧನ್ಯವಾದಗಳು.

ಕೊರೊನಾ ಸೋಂಕಿನ ತೀವ್ರತೆಯನ್ನು ಅವಲೋಕಿಸಿದರೆ ಇದು ಮುಂದಿನ 2-3 ತಿಂಗಳೊಳಗೆ ಕೊನೆಗೊಳ್ಳುವಂತಹದ್ದಲ್ಲ. ಮುಂದಿನ ದಿನಗಳಲ್ಲಿ ದೇಶದಲ್ಲಿ ಹಸಿವಿನ ಸಮಸ್ಯೆ ಭೀಕರವಾಗಲಿದೆ. ಆದ್ದರಿಂದ ನಮ್ಮ ಸರ್ಕಾರ ರಾಜ್ಯದಲ್ಲಿ ಜಾರಿಗೊಳಿಸಿದ್ದ ಅನ್ನಭಾಗ್ಯದ ಮಾದರಿಯಲ್ಲಿ ಇಡೀ ರಾಷ್ಟ್ರದಲ್ಲಿ ಬಡವರಿಗೆ ಉಚಿತ ಆಹಾರಧಾನ್ಯ ಪೂರೈಸುವ ಶಾಶ್ವತ ಯೋಜನೆಯನ್ನು ಜಾರಿಗೆ ತರಬೇಕೆಂದು ಪ್ರಧಾನಿಯವರನ್ನು ಒತ್ತಾಯಿಸುತ್ತೇನೆ ಎಂದರು.

ದೇಶದ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ, ಆಮ್ಲಜನಕ ಪೂರೈಕೆ ವ್ಯವಸ್ಥೆ, ವೆಂಟಿಲೇಟರ್ ಗಳ ತೀವ್ರ ಕೊರತೆ ಇದೆ. ವೈದ್ಯರು,ದಾದಿಯರ ಕೊರತೆ ಇದೆ. ದುಬಾರಿ ಚಿಕಿತ್ಸೆ ವೆಚ್ಚದಿಂದ ಜನ ಕೊರೊನಾ ಸೋಂಕಿಗಿಂತ ಕೊರೊನಾ ಚಿಕಿತ್ಸೆಗೆ ಜನ ಹೆದರುವಂತಾಗಿದೆ. ಈ ಬಗ್ಗೆ ರಾಜ್ಯಗಳಿಗೆ ಕೇಂದ್ರ ನೆರವು ಘೋಷಿಸಬಹುದೆಂಬ ನಿರೀಕ್ಷೆ ಹುಸಿಯಾಗಿದೆ.

ಪಿಎಂ ಕೇರ್ಸ್ ನಿಧಿಗೆ ನೆರವಾಗಲು ದೇಶದ ಜನರನ್ನು ವಿನಂತಿಸಿದ್ದ ಪ್ರಧಾನಿಗಳು ಅದರ ಖರ್ಚು-ವೆಚ್ಚದ ಸಂಪೂರ್ಣ ವಿವರವನ್ನು ದೇಶದ ಮುಂದಿಟ್ಟು ಪಾರದರ್ಶಕವಾಗಿ ನಡೆದುಕೊಳ್ಳಬಹುದೆಂಬ ನಿರೀಕ್ಷೆಯೂ ಹುಸಿಯಾಗಿದೆ. ಇದಕ್ಕೆ ಚೀನಾದಿಂದಲೂ ದೇಣಿಗೆ ಪಡೆಯಲಾಗಿದೆ ಎಂಬ ಆರೋಪಗಳಿವೆ. ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕಿತ್ತು ಎಂದು ಹೇಳಿದರು.

ಸತತ 23ನೇ ದಿನ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದೆ. ಇದರಿಂದ ಆಹಾರಧಾನ್ಯ, ತರಕಾರಿ, ಹಣ್ಣು ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆಯೂ ಏರುತ್ತಿದೆ. ಈ ತೈಲಬೆಲೆ ಏರಿಕೆ ಇನ್ನೆಷ್ಟು ದಿನಗಳ ಕಾಲ ಏರಲಿದೆ ಎಂದಾದರೂ ಹೇಳಿಬಿಟ್ಟಿದ್ದರೆ ಜನ ಕೆಟ್ಟ ದಿನಗಳಿಗೆ ಹೊಂದಿಕೊಳ್ಳಲು ಸಿದ್ದವಾಗುತ್ತಿದ್ದರು.

ಹುತಾತ್ಮ 20 ವೀರಯೋಧರ ಬಲಿದಾನ ವ್ಯರ್ಥವಾಗುವುದಿಲ್ಲ ಎಂದು ಘೋಷಿಸಿದ್ದ ಪ್ರಧಾನಿ ಮೋದಿಯವರು, ಇದಕ್ಕಾಗಿ ಏನು ಮಾಡಿದ್ದಾರೆ ಎನ್ನುವುದನ್ನು ತಿಳಿಸಿದ್ದರೆ ನೊಂದ ದೇಶದ ಜನತೆ ಮತ್ತು ವೀರಯೋಧರ ಕುಟುಂಬಕ್ಕೆ ಸಾಂತ್ವನ ಮಾಡಿದ ಹಾಗಾಗುತ್ತಿತ್ತು. ಈ ಘಟನೆಯ ಪ್ರಸ್ತಾವವನ್ನೇ ಮಾಡದೆ ನಿರ್ಲಕ್ಷಿಸಿರುವುದು ವಿಷಾದನೀಯ ಎಂದು ಕಿಡಿಕಾರಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ರಾಜ್ಯದಲ್ಲಿ ಒಟ್ಟು 18016 ಕೊರೋನಾ ಸೋಂಕಿತರು, ಗುರುವಾರ 1502 ಕೇಸ್ ಪತ್ತೆ..!

Published

on

ಸುದ್ದಿದಿನ, ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ದಿನೇ ದಿನೇ ಶರವೇಗದಲ್ಲಿ ಹೆಚ್ಚುತ್ತಿದೆ. ನಾಡಿನ ಜನತೆಯಂತೂ ಭಯದಲ್ಲಿ ಬದುಕು ಸಾಗಿಸುವ ಅನಿವಾರ್ಯತೆ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಗಳಿಗೂ ಕೊರೋನಾ ಸೋಂಕು ಹರಡಿದ್ದು ಸೋಂಕು ಹರಡದಂತೆ ತಡೆಹಿಡಿಯಲು ಇನ್ನು ಎಷ್ಟು ದಿನಗಳಾಗುತ್ತದೋ‌ ಎಂಬ ಪ್ರಶ್ನೆ ಜನ ಸಾಮಾನ್ಯನ್ನು ಕಾಡುತ್ತಿದೆ.

ಕೋವಿಡ್19 ಮಾಹಿತಿ: 2ನೇ ಜುಲೈ 2020

  • ಒಟ್ಟು ಪ್ರಕರಣಗಳು: 18016
  • ಮೃತಪಟ್ಟವರು: 272
  • ಗುಣಮುಖರಾದವರು: 8334
  • ಹೊಸ ಪ್ರಕರಣಗಳು: 1502

ಇತರೆ ಮಾಹಿತಿ

ಜಿಲ್ಲಾವಾರು ಸೋಂಕಿತರು, ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪರಿಸರಪ್ರೇಮಿ ಕಾಮೇಗೌಡರಿಗೆ ಜೀವತಾವಧಿ ಉಚಿತ ಬಸ್ ಪಾಸ್ : ಯಡಿಯೂರಪ್ಪ

Published

on

ಸುದ್ದಿದಿನ, ಬೆಂಗಳೂರು: ಅಪರೂಪದ ಪರಿಸರ ಕಾಳಜಿಯ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿಯ ಕಾಮೇಗೌಡ ಅವರಿಗೆ, ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಜೀವಿತಾವಧಿ ಉಚಿತ ಬಸ್ ಪಾಸ್ ನೀಡಿದೆ.

ಮಾಧ್ಯಮವೊಂದರಲ್ಲಿ ಈ ಬಗ್ಗೆ ತಮ್ಮ ಆಸೆ ವ್ಯಕ್ತಪಡಿಸಿದ್ದ ಕಾಮೇಗೌಡರ ಅಭಿಲಾಷೆಯಂತೆ, ಉಚಿತ ಪಾಸ್ ವಿತರಿಸಲು ಮಾನ್ಯ ಮುಖ್ಯಮಂತ್ರಿಗಳು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೂಚನೆ ನೀಡಿದ್ದರು.

ಗೌಡರ ಪರಿಸರ ಕಾಳಜಿಗೆ ಮತ್ತೊಮ್ಮೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿಗಳು, ಕಾಮೇಗೌಡರ ಪರಿಸರ ಸೇವೆ ಬಗ್ಗೆ ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ತಮ್ಮ ‘ಮನ್ ಕಿ ಬಾತ್ ‘ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದನ್ನು ಸ್ಮರಿಸಿಕೊಂಡಿದ್ದಾರೆ.

ಕಾಮೇಗೌಡ ಅವರಂತಹ, ಬೆಲೆ ಕಟ್ಟಲಾಗದ ಪರಿಸರ ಕಾಳಜಿಯುಳ್ಳವರ ಸಂತತಿ ಇನ್ನೂ ಹೆಚ್ಚಾಗಲಿ ಎಂದು ಅಶಿಸುವುದಾಗಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending