Connect with us

ದಿನದ ಸುದ್ದಿ

ಚಿರು ಎಂಬ ವಾಯುಪುತ್ರ, ವಿದಾಯ ಮಿತ್ರ

Published

on

  • ವಿ.ನಾಗೇಂದ್ರ ಪ್ರಸಾದ್,‌ ಚಿತ್ರ ಸಾಹಿತಿ, ಬೆಂಗಳೂರು

ವಾಯುಪುತ್ರ ಚಿತ್ರದ ಗೀತರಚನೆಗೆ ನನ್ನನ್ನು ಅರ್ಜುನ್ ಸರ್ಜಾ ಚೆನ್ನೈ ಗೆ ಕರೆಸಿದ್ದರು. ಅರ್ಜುನ್ ಸರ್ಜಾ ಸಹೋದರಿಯ ಮಗ ಹೀರೋ ಆಗುತ್ತಾನಂತೆ ಅನ್ನುವ ಸುದ್ದಿ ಅಷ್ಟು ಹೊತ್ತಿಗೆ ಎಲ್ಲರಿಗೂ ಗೊತ್ತಿತ್ತು.

ಶಕ್ತಿ ಪ್ರಸಾದ್ ಅವರ ಮೊಮ್ಮಗ, ಅರ್ಜುನ್ ಸರ್ಜಾ ಅವರ ಗರಡಿಯಲ್ಲಿ ಅಕ್ಷರಶಃ ಪಳಗಿದ ಹುಡುಗ ನೋಡಲು ಹೇಗಿರುತ್ತಾನೆ? ಅನ್ನುವ ಕುತೂಹಲ ನನಗೂ ಇತ್ತು. ಚೆನ್ನೈ ನ ಅರ್ಜುನ್ ಸರ್ಜಾ ಅವರ ಕಚೇರಿಗೆ ಬೆಳಗ್ಗೆ 9 ಗಂಟೆ ಸುಮಾರಿಗೆ ಹೋಗಿ ಕುಳಿತೆ. ಅದೊಂದು ಕಛೇರಿ ಕಂ ಗೆಸ್ಟ್ ಹೌಸ್ ಎನ್ನಬಹುದು.

ಅರ್ಜುನ್ ಅವರು ಬರುವುದಕ್ಕೆ ಇನ್ನೂ ಸಮಯವಿತ್ತು. ಅವರ ಮ್ಯಾನೇಜರ್ ರಾಮಕೃಷ್ಣ ನನ್ನನ್ನು ಉಪಚರಿಸಿದರು. ಒಂದು ಬಾಗಿಲಿನಿಂದ ಬಂದ ಒಬ್ಬ ಹುಡುಗ ನನ್ನತ್ತ ಬಂದು ನಮಸ್ಕಾರ ಹೇಳಿದ. ಚೆನ್ನೈ ನಲ್ಲಿ ಕನ್ನಡ ಕೇಳುವ ಖುಷಿಯೇ ಬೇರೆ. ಪ್ರತಿ ನಮಸ್ಕಾರ ಹೇಳಿದೆ. ಆ ಹುಡುಗ ಬಂದವನೇ ನನ್ನ ಪಕ್ಕದಲ್ಲಿ ಕುಳಿತ. ಅವನನ್ನೇ ದಿಟ್ಟಿಸಿ ನೋಡಿದೆ. “ನಾನು ಚಿರಂಜೀವಿ ಸರ್. ನಿಮ್ಮ ಹಾಡುಗಳ ಫ್ಯಾನ್” ಅಂದ.ಸಂತೋಷದಿಂದ ಥ್ಯಾಂಕ್ಸ್ ಹೇಳಿದೆ. ಅಷ್ಟು ಹೊತ್ತಿಗೆ ಈ ಹುಡುಗನೇ ಆ ಹೊಸ ಹೀರೋ ಎಂದು ಅರ್ಥವಾಯಿತು.

ಜಿಮ್ ನಲ್ಲಿ ಸಾಮು ಮಾಡಿದ ದೇಹ, ಆರೋಗ್ಯಪೂರ್ಣ ಮಂದಹಾಸ, ಕಣ್ಣುಗಳಲ್ಲಿ ಮಿಂಚು. ತನ್ನ ಆಸಕ್ತಿ ಮತ್ತು ಅಭಿರುಚಿಗಳ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಾ ಹೋದ. ಅವನ ಮಾತುಗಳಲ್ಲಿ ಏನನ್ನೋ ಸಾಧಿಸುವ ಹುಮ್ಮಸ್ಸು. ತನ್ನ ಅಪೀಯರೆನ್ಸ್ ಬಗ್ಗೆ, ನೃತ್ಯದ ಬಗ್ಗೆ, ತನ್ನ ಆಕ್ಷನ್‌ ಹಾಗೂ ಆ ಸಿನಿಮಾದಲ್ಲಿ ತಾನು ಕಾಣಬಯಸುವುದರ ಬಗ್ಗೆ ಹೇಳಿದ. ಚಿರಂಜೀವಿಯ ಮುಗ್ಧತೆ, ಪ್ರಾಮಾಣಿಕತೆ ನನ್ನನ್ನು ಸೆಳೆದವು.

ನಾನು ಶಕ್ತಿ ಪ್ರಸಾದ್ ಅವರ ಹಿಂದಿನ ತಲೆಮಾರಿನವರಾದರೂ ಅವರ ಅಭಿನಯ ಹಾಗೂ ವ್ಯಕ್ತಿತ್ವದ ಬಗ್ಗೆ ಅಪಾರ ಅಭಿಮಾನ. ಅರ್ಜುನ್ ಸರ್ಜಾ ಅವರು ತಮಿಳು ನಾಡಿನಲ್ಲಿ ಸಾಧಕರಾಗಿ ಹೆಜ್ಜೆ ಊರಿರುವ ಬಗ್ಗೆ ವಿಶೇಷ ಪ್ರೀತಿ. ಕಿಶೋರ್ ಸರ್ಜಾ ಅವರ ಸ್ನೇಹಪರತೆ, ವೃತ್ತಿಪರತೆಯ ಮೇಲೆ ನನಗಿರುವ ಆಪ್ಯಾಯತೆ. ಇವೆಲ್ಲವೂ ಚಿರಂಜೀವಿ ಸರ್ಜಾ ನನ್ನು ಹೆಚ್ಚು ಪ್ರೀತಿಸಲು ಅನುವು ಮಾಡಿಕೊಟ್ಟವು.
ಒಂದೇ ಭೇಟಿಯಲ್ಲಿ ತೀರಾ ಹತ್ತಿರಾಗಿಬಿಟ್ಟ ಹುಡುಗ.
ಅವನಿಗೆ ಕಿಶೋರ್ ಸರ್ಜಾ ಅಂದರೆ ಅಪರಿಮಿತ ಪ್ರೇಮ. ಅನನ್ಯ ಭಕ್ತಿ.

ಚಿರಂಜೀವಿಯ ಉತ್ಸಾಹ ನೋಡಿದ ಮೇಲೆ ಒಂದಷ್ಟು ಹಿತನುಡಿ ಹೇಳುವ ಮನಸಾಯಿತು. “ಚಿರು ನಿನ್ನ ಮೇಲೆ ದೊಡ್ಡ ಜವಾಬ್ದಾರಿ ಇದೆ. ನಿಮ್ಮ ಮಾವ ನಿನ್ನ ಮೇಲಿಟ್ಟಿರುವ ನಂಬಿಕೆ ಉಳಿಸಿಕೊಳ್ಳಬೇಕು. ಒಳ್ಳೆಯ ಹೆಸರು ಮಾಡುವ ಅವಕಾಶವಿದೆ. ಯಶಸ್ವಿ ಹೀರೋ ಆಗುವ ಲಕ್ಷಣಗಳಿವೆ. ಡೈರೆಕ್ಟರ್ ಗೆ ಹಾಗೂ ಪ್ರೊಡ್ಯೂಸರ್ ಗೆ ಗೌರವ ಕೊಡುವುದನ್ನು ಮಾತ್ರ ಯಾವತ್ತೂ ಮರೆಯಬೇಡ. ಅದೇ ನಿನ್ನನ್ನು ಕಾಯುವುದು. ನಿಮ್ಮ ಮಾವಾನೇ ಅದಕ್ಕೆ ಉದಾಹರಣೆ” ಎಂದು ಒಂದಷ್ಟು ಉದ್ದದ ಭಾಷಣವೇ ಬಿಗಿದು ಬಿಟ್ಟೆ. ಇವತ್ತಿನ ಅನೇಕ ಹೀರೋಗಳನ್ನು, ಸ್ಟಾರ್ ಗಳನ್ನು ಮೊದಲ ಸಿನಿಮಾದಿಂದ ತೀರಾ ಹತ್ತಿರದಿಂದ ಬಲ್ಲೆನಾದ್ದರಿಂದ ಅವರಿಗೆ ಕೊಟ್ಟಿದ್ದ ಉಪದೇಶಗಳನ್ನೇ ಚಿರುವಿಗೂ ನೀಡಿದೆ.

ಕೈ ಕಟ್ಟಿಕೊಂಡು ಎಲ್ಲವನ್ನೂ ಆಲಿಸಿದ ಚಿರು ” ಹೂಂ ಸರ್. ನೀವು ಹೇಳಿದ್ದೆಲ್ಲ ನಮ್ಮ ಮಾವಾನೂ ಹೇಳಿದ್ದಾರೆ. ಅವರು ಹಾಕಿದ ಗೆರೆ ದಾಟೊಲ್ಲ ಅವರ ಹಾಗೆ ಒಳ್ಳೆ ಹೆಸರು ತೊಗೋತೀನಿ.” ಅಂದ. ತಮ್ಮ ಧೃವನ ಬಗ್ಗೆ, ಅಮ್ಮ , ಅಜ್ಜಿ , ಮಾವಂದಿರ ಬಗ್ಗೆ ಬಲು ಪ್ರೀತಿಯಿಂದ ಹೇಳಿಕೊಂಡ. ಸುಮಾರು ತಾಸು ಮಾತಾಡಿದೆವು. ಅರ್ಜುನ್ ಸರ್ಜಾ ಅವರ ಆಗಮನವಾಯಿತು.
ಬಂದವರೇ ಚಿರುವನ್ನು ಗದರಿಸ ತೊಡಗಿದರು. “ಎಕ್ಸ ಸೈಜ್ ಮಾಡಿಲ್ಲವಂತೆ..ಮೊನ್ನೆ ಎಲ್ಲೋ ಹೋಗಿದ್ಯಂತೆ…”ಇತ್ಯಾದಿ ಇತ್ಯಾದಿ ದೂರುಗಳನ್ನು ಹೇಳಿ ಗದರಿಸಿದರು.

“ಇಲ್ಲಾ ಮಾಮಾ..ಮಾಡಿದೆ…..ಮೊನ್ನೆ ಎಲ್ಲೂ ಹೋಗಿಲ್ಲ..”ಎಂದು ಏನೋ ಸಮಜಾಯಿಶಿ ಕೊಡುತ್ತಾ ಮಾವನನ್ನು ಮುದ್ದು ಮಾಡಿದ. ಅವರು ನಗುತ್ತಾ ಒಂದಷ್ಟು ಸಲಹೆ ನೀಡಿದರು. ನಂತರ ಹಾಡಿನ ಚರ್ಚೆ ಆರಂಭವಾಯಿತು. ವಾಯುಪುತ್ರ ಚಿತ್ರ ಬಿಡುಗಡೆಯೂ ಆಯಿತು. ಇದಾದ ನಂತರ..ವರದ.. ಅಮ್ಮ ಐ ಲವ್ ಯೂ…ಸಿಂಗ ಮುಂತಾದ ಚಿತ್ರಗಳ ಸಂದರ್ಭಗಳಲ್ಲಿ ನನ್ನ ಮತ್ತು ಚಿರುವಿನ ಭೇಟಿಯಾಗುತ್ತಿತ್ತು. ನನ್ನನ್ನು ನೋಡಿದಾಗಲೆಲ್ಲಾ ಅದೇ ಪ್ರೀತಿ ಮತ್ತು ಗೌರವದಿಂದ ನಡೆದುಕೊಳ್ಳುತ್ತಿದ್ದ ಕಿರಿಯ ಮಿತ್ರ ಚಿರು.

ಹಲವಾರು ಭೇಟಿ ಮತ್ತು ನೆನಪುಗಳನ್ನು ನನ್ನಲ್ಲಿ ಬಿಟ್ಟು ಹೋಗಿದ್ದಾನೆ. ಯಾವಾಗಲೂ ಮಳೆಯ ಸಂಜೆಗಳಲ್ಲಿ ನೆನಪಾಗುತ್ತಿದ್ದ. ಇನ್ನು ಮುಂದೆ ಹೆಚ್ಚು ನೆನಪಾಗುತ್ತಾನೆ. ವಿನಾಕಾರಣದ ಪ್ರೀತಿಗೆ ಒಳಗು ಮಾಡಿದವನು. ಅಕಾಲಿಕವಾಗಿ ಹೋಗಿಬಿಟ್ಟ. ಅಪಾರ ದುಖಃವನ್ನು ಉಳಿಸಿಹೋದ ಚಿರುವಿನ ಅಂದಿನ ಮಂದಹಾಸ ಎಂದಿಗೂ ನನ್ನ ಸ್ಮೃತಿ ಪಟಲದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಹೋಗಿ ಬಾ ಮಿತ್ರ. ಚಿರು ಐ ಲವ್ ಯೂ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ರಾಜ್ಯದಲ್ಲಿಂದು 4,169 ಕೊರೋನಾ ಕೇಸ್ ಪತ್ತೆ, ಒಟ್ಟು 51,422 ಕೇಸ್..!

Published

on

ಸುದ್ದಿದಿನ:ಬೆಂಗಳೂರು: ಇಲ್ಲಿಯವರೆಗಿನ ಎಲ್ಲ ದಾಖಲೆಗಳನ್ನು ಕೊರೊನಾ ಇಂದು ಬ್ರೇಕ್ ಮಾಡಿದ್ದು, ರಾಜ್ಯದಲ್ಲಿ ಒಂದೇ ದಿನ 4,169 ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 51,422ಕ್ಕೇರಿಕೆ ಆಗಿದೆ. ಇವತ್ತು 104 ಜನರನ್ನು ಮಹಾಮಾರಿ ಕೊರೊನಾ ಬಲಿ ಪಡೆದಿದೆ.

ಬೆಂಗಳೂರಿನಲ್ಲಿ ಸಹ ಕೊರೊನಾ ಸ್ಫೋಟವಾಗಿದ್ದು, ಒಂದೇ ದಿನ 2,344 ಪ್ರಕರಣಗಳು ವರದಿ ಆಗಿವೆ. ಒಟ್ಟಾರೆ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 25 ಸಾವಿರದ ಗಡಿ ದಾಟಿದೆ. ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ಇದುವರೆಗೂ 1032 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

‘ಸುದ್ದಿ ಸಂವಿಧಾನ’ ಕೃತಿ ಬಿಡುಗಡೆ ವೆಬಿನಾರ್ ಮಾಧ್ಯಮಕ್ಕೆ ಹೊಸ ಆಯಾಮ ಅಗತ್ಯ: ವೀರೇಂದ್ರ ಪಿ.ಎಂ

Published

on

ಸುದ್ದಿದಿನ,ಉಜಿರೆ: ಆಧುನಿಕ ಸುದ್ದಿಮಾಧ್ಯಮ ವಲಯವು ವಾಚಾಳಿತನದ ಶಾಪಕ್ಕೀಡಾಗಿದ್ದು, ಇದರ ನಕಾರಾತ್ಮಕ ಪರಿಣಾಮಗಳನ್ನು ತಡೆದು ಹೊಸ ಆಯಾಮ ನೀಡುವ ವೃತ್ತಿಪರ ಬದ್ಧತೆಯ ಅನಿವಾರ್ಯತೆ ಇದೆ ಎಂದು ಪತ್ರಕರ್ತ, ತುಂಗಭದ್ರಾ ನ್ಯೂಸ್ ಪೋರ್ಟಲ್ ಸಂಪಾದಕ ವೀರೇಂದ್ರ ಪಿ.ಎಂ ಅಭಿಪ್ರಾಯಪಟ್ಟರು.

ಉಜಿರೆಯ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮಲ್ಟಿಮೀಡಿಯಾ ಸ್ಟುಡಿಯೋದಲ್ಲಿ ಆಯೋಜಿತವಾದ ಸಹಾಯಕ ಪ್ರಾಧ್ಯಾಪಕ ಡಾ.ಎನ್.ಕೆ.ಪದ್ಮನಾಭ ಅವರ ‘ಸುದ್ದಿ ಸಂವಿಧಾನ’ ಕೃತಿ ಬಿಡುಗಡೆ ವೆಬಿನಾರ್‌ನಲ್ಲಿ ಕೃತಿಯ ಕುರಿತು ಅವರು ಮಾತನಾಡಿದರು.

ಯಾವಾಗ ಒಬ್ಬ ಪತ್ರಕರ್ತ ವಾಚಾಳಿತನಕ್ಕೆ ಬೀಳುತ್ತಾನೋ ಆಗ ಮಾಧ್ಯಮ ನಿರೀಕ್ಷಿಸುವ ವೃತ್ತಿಬದ್ಧತೆಯಿಂದನುಣುಚಿಕೊಳ್ಳಲಾರಂಭಿಸುತ್ತಾನೆ. ಮಾತಿನ ಮಂಟಪ ಕಟ್ಟುವುದರಿಂದ ಯಾವುದೇ ಪ್ರಯೋಜನವಿಲ್ಲ. ಸುದ್ದಿಲೋಕಕ್ಕೆ ಬೇಕಾದದ್ದು ವಾಚಾಳಿತನವಲ್ಲ. ಸುದ್ದಿಮಾಧ್ಯಮವು ಸಂಯಮಪೂರ್ಣ ಚಿಂತನೆ ಮತ್ತು ಅದಕ್ಕೆ ಅನುಗುಣವಾದ ಕಾರ್ಯನಿರ್ವಹಣೆಯನ್ನು ವರದಿಗಾರರು, ಸಂಪಾದಕರಿಂದ ನಿರೀಕ್ಷಿಸುತ್ತದೆ ಎಂದು ಹೇಳಿದರು.

ವರದಿಗಾರನಾದವನು ಕಣ್ಣು ಮತ್ತು ಕಿವಿಯನ್ನು ಸದಾ ಕಾಲ ಜಾಗೃತ ಸ್ಥಿತಿಯಲ್ಲಿಡಬೇಕು. ಆಗ ಮಾತ್ರ ವಿವಿಧ ವಿಚಾರಗಳನ್ನು ಭಿನ್ನವಾಗಿ ಗ್ರಹಿಸಿಕೊಳ್ಳಲು ಸಾಧ್ಯವಾಗುತ್ತದೆ. ಸುದ್ದಿಗೆ ಕಲೆ ಮತ್ತು ವಿಜ್ಞಾನದ ಆಯಾಮವೂ ಇದೆ ಎಂಬುದನ್ನು ಗ್ರಹಿಸಿಕೊಂಡ ವರದಿಗಾರರು ಸುದ್ದಿ ಮಾಧ್ಯಮದಲ್ಲಿ ಭಿನ್ನವಾಗಿ ಗುರುತಿಸಿಕೊಳ್ಳಲು ಸಾಧ್ಯ.

ಈ ಬಗೆಯ ಗ್ರಹಿಕೆಯು ವೃತ್ತಿಪರ ಯಶಸ್ಸನ್ನು ಕಂಡುಕೊಳ್ಳುವುದಕ್ಕೆ ಪೂರಕವಾಗುವುದಲ್ಲದೇ ಬರಹ-ಚಿಂತನೆಯ ಮೂಲಕ ಸಾಮಾಜಿಕ ಕೊಡುಗೆಯನ್ನೂ ನೀಡಬಹುದು. ಈ ಅಂಶವನ್ನು ಡಾ.ಎನ್.ಕೆ.ಪದ್ಮನಾಭ ಅವರ ‘ಸುದ್ದಿ ಸಂವಿಧಾನ’ ಕೃತಿಯು ಆಪ್ತವಾಗಿ ಕಟ್ಟಿಕೊಟ್ಟಿದೆ ಎಂದರು.

ವಿವಿಧ ಬಗೆಯ ಸಮಸ್ಯೆಗಳನ್ನು ಗ್ರಹಿಸುವ ವಿಧಾನ ಸುದ್ದಿ ಬರವಣಿಗೆಯಲ್ಲಿ ಬಹಳ ಮುಖ್ಯವಾದುದು. ಈ ಗ್ರಹಿಕೆಯ ನೆರವಿನೊಂದಿಗೇ ಜನರಿಗೆ ಮಾಹಿತಿ ನೀಡಿ ಅವರೊಳಗೆ ಜಾಗೃತಿ ಮೂಡಿಸಬಹುದಾದ ಸುದ್ದಿಸಂಸ್ಕೃತಿಯನ್ನು ಹುಟ್ಟುಹಾಕಬಹುದು. ಈ ಆಶಾವಾದದೊಂದಿಗೇ ಎಲ್ಲ ಸುದ್ದಿ ಮಾಧ್ಯಮ ವೃತ್ತಿಪರರು ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ನುಡಿದರು.

ಸುದ್ದಿ ಸಂವಿಧಾನ’ ಕೃತಿಯನ್ನು ಬಿಡುಗಡೆಗೊಳಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ.ಭಾಸ್ಕರ ಹೆಗಡೆ ಮಾತನಾಡಿದರು. ಬಹುಮಾಧ್ಯಮಗಳು ತರಹೇವಾರಿ ಮಾಹಿತಿಯನ್ನು ನೀಡುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಯಾವುದು ನಿಜವಾದ ಸುದ್ದಿ ಎಂಬುದನ್ನು ಮನಗಾಣಿಸುವಲ್ಲಿ ಎನ್.ಕೆ.ಪದ್ಮನಾಭ ಅವರ ಕೃತಿ ಯಶಸ್ವಿಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೃತಿಯ ಲೇಖಕ ಡಾ.ಎನ್.ಕೆ.ಪದ್ಮನಾಭ ಪರಂಪರೆಯ ಚಲನಶೀಲತೆಯನ್ನು ಮುನ್ನಡೆಸುವ ಪಾತ್ರ ಸುದ್ದಿಯಿಂದ ನಿರ್ವಹಿಸಲ್ಪಡಬೇಕಾದ ಅಗತ್ಯವಿದೆ ಎಂದರು. ಸುದ್ದಿಮಾಧ್ಯಮವನ್ನು ಪ್ರಜಾಪ್ರಭುತ್ವದ ಕಾವಲುನಾಯಿ ಎಂದು ಹೇಳಲಾಗುತ್ತದೆ. ಆದರೆ, ಈ ಕಾವಲು ನಾಯಿಯ ಸ್ಥಾನವನ್ನು ಧನದಾಹದ ಸಂಕುಚಿತತೆಯನ್ನೇ ಗುಣಲಕ್ಷಣವನ್ನಾಗಿಸಿಕೊಂಡ ರಾಕ್ಷಸಪ್ರಾಣಿ ಆಕ್ರಮಿಸಿಕೊಂಡಿದೆ. ಇದರ ಹಿಡಿತದಿಂದ ಈ ಸ್ಥಾನವನ್ನು ವಿಮುಕ್ತಗೊಳಿಸಿ ಕಾವಲುನಾಯಿಯ ಪಾತ್ರ ನಿರಂತರವಾಗಬೇಕಿದೆ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಕೃತಿಯ ಮುಖಪುಟ ರಚಿಸಿದ ಸುಷ್ಮಾ ಉಪ್ಪಿನ್ ಇಸಳೂರು, ಗ್ರಾಫಿಕ್ ಸ್ಪರ್ಶ ನೀಡಿದ ಕೃಷ್ಣಪ್ರಶಾಂತ್, ಸಹಾಯಕ ಪ್ರಾಧ್ಯಾಪಕರಾದ ಸುನೀಲ್ ಹೆಗ್ಡೆ, ಡಾ.ಹಂಪೀಶ್, ಗೀತಾ ವಸಂತ್ ಇಜಿಮಾನ್ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೋಗಲೂರು ಗ್ರಾಮದಲ್ಲಿ ಕೊರೋನ ಆತಂಕ : ಹೊರ ರಾಜ್ಯದಿಂದ ಬಂದವರನ್ನು ಕ್ವಾರಂಟೈನ್ ಮಾಡಲಾಗುವುದು : ತಹಶಿಲ್ದಾರ್ ಪುಟ್ಟರಾಜಗೌಡ

Published

on

ಸುದ್ದಿದಿನ,ಚನ್ನಗಿರಿ/ಕೋಗಲೂರು : ಗ್ರಾಮದಲ್ಲಿ‌ 65 ವರ್ಷ ವಯಸ್ಸಿನ ಮಹಿಳೆಯೊಬ್ಬರಿಗೆ ಕೊರೋನ ಸೋಂಕು‌ ದೃಡ ಪಟ್ಟಿದ್ದು. ಸೋಂಕಿತ ವ್ಯಕ್ತಿಯು ಮದುವೆ ಸಮಾರಂಭಗಳಲ್ಲಿ ಹಾಗೂ ಗ್ರಾಮದಲ್ಲಿ‌ ಸಾಕಷ್ಟು ಓಡಾಡಿರುವುದನ್ನು ಕಂಡ ಗ್ರಾಮಸ್ಥರು ಅತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬೆಂಗಳೂರು ಹಾಗೂ ವಿವಿದ ಕಡೆಗೆ ಕೆಲಸಕ್ಕಾಗಿ ಹರಸಿ ಹೋಗಿದ್ದವರೆಲ್ಲರೂ ಸಹ ತಂತಮ್ಮ ಗ್ರಾಮಗಳಿಗೆ ವಾಪಸ್ಸಾಗುತ್ತಿರುವುದನ್ನು ನೋಡಿದರೆ ಮತ್ತಷ್ಟು ಗ್ರಾಮಸ್ಥರಲ್ಲಿ ಭಯದ ವಾತವರಣ ಸೃಷ್ಠಿಯಾಗುತ್ತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತ ಪಡಿಸಿದ್ದಾರೆ.

ಹೊರಗಡೆಯಿಂದ ಬರುತ್ತಿರುವವರ ಮೇಲೆ ಗ್ರಾಪಂ ಆಡಳಿತ ಹಾಗೂ ಅಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಈ ವಿಚಾರದ ಮುನ್ನೆಚ್ಚರಿಕೆಯಿಂದ ಗ್ರಾಮದಲ್ಲಿ‌ ಗ್ರಾಮಪಂಚಾಯಿತಿ ಆಡಳಿತವು ದ್ವನಿವರ್ಧಕ ಮೂಲಕ‌  ಜನತೆರಿಗೆ ಮಾಸ್ಕ್ ಧರಸಿ ಅಂತರ ಕಾಯ್ದುಕೊಳ್ಳಲು ಸಂದೇಶ ಸಾರುತಿದ್ದರೂ ಸಹ ಕೆಲವರು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರುಗಳಿಗೆ ಮಾಹಿತಿಯನ್ನು ನೀಡದೆ ಗುಪ್ತವಾಗಿ ಮನೆಗಳನ್ನು ಸೇರಿಕೊಳ್ಳುತ್ತಿದ್ದಾರೆ ಎಂದು ಗ್ರಾಮದ ಜನತೆ ಹೇಳಿದ್ದಾರೆ. ‌

ಕೋಗಲೂರು ಗ್ರಾಮದಲ್ಲಿ ಸೀಲ್ ಡೌನ್

ಕೊರೋನ ಬಗ್ಗೆ ಭಯ ಬೇಡ ಎಚ್ಚರಿಕೆಯಿಂದ ಇರಿ : ತಹಸೀಲ್ದಾರ್ ಪುಟ್ಟರಾಜಗೌಡ

ಇತ್ತೀಚೆಗೆ ಹೊರ ರಾಜ್ಯಗಳಿಂದ ಹಳ್ಳಿಗಳಿಗೆ ಬರುವವರ ಸಂಖ್ಯೆ ಹೆಚ್ಚಾಗುತಿದ್ದು ತಾಲೂಕು ಆಡಳಿತವು ಸೂಕ್ಷ್ಮವಾಗಿ ಗಮನಿಸುತಿದೆ, ನಮ್ಮ ಕಂದಾಯ ಅಧಿಕಾರಿಗಳು ಅರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಪರಸ್ಪರ ಸಂಪರ್ಕಹೊಂದಿದ್ದು ಹೊರಗಡೆಯಿಂದ ಬರುವವರ ಮೇಲೆ ನಿಗಾ ಇಟ್ಟಿರುತ್ತಾರೆ. ಗುಪ್ತವಾಗಿ ಮನೆ ಸೇರಿ ಕೊಂಡಿರುವವರನ್ನು ಪತ್ತೆ ಮಾಡಿ ಅವರ ಗಂಟಲು ಮಾದರಿ ಪರೀಕ್ಷೆಗೆ ಒಳಪಡಿಸಿ ಕ್ವಾರಂಟೈನ್ ಮಾಡಲಾಗುವುದೆಂದು ದೂರವಾಣಿ ಮುಖಾಂತರ ತಹಸೀಲ್ದಾರ್ ಪುಟ್ಟರಾಜಗೌಡ ರವರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending