Connect with us

ನೆಲದನಿ

ಲೈಂಗಿಕ ಶಿಲ್ಪಗಳ ಹಿಂದಿನ ತತ್ವ ಏನು..?

Published

on

ಶಿವಮೊಗ್ಗ ಜಿಲ್ಲೆಯ ಉಳವಿಯ (ನಮ್ಮೂರಿನಿಂದ 25 ಕಿಲೋಮೀಟರ್ ದೂರದಲ್ಲಿರುವ) ಕೆರೆ ಏರಿಯೊಂದರ ಮೇಲೆ ಬೈಕಿನಲ್ಲಿ ಹೋಗುತ್ತಿರುವಾಗ ನನ್ನನ್ನು ಗಕ್ಕನೆ ನಿಲ್ಲಿಸುವಂತೆ ಮಾಡಿದ್ದು ಈ ಕಲ್ಲಿನ ಕೆತ್ತನೆಗಳು. ಇದನ್ನು ನೋಡಿ ಕೆಲವರು ನಾಚಿಕೆ ಪಟ್ಡುಕೊಳ್ಳಬಹುದು, ಲೇವಡಿ ಮಾಡಬಹುದು ಅಥವಾ ಇಂತಹ erotic ಲೈಂಗಿಕ ಶಿಲ್ಪಗಳ ಅರ್ಥ ಏನು ಎಂದೂ ತಲೆ ಕೆಡಿಸಿಕೊಳ್ಳಬಹುದು. ಗಂಭೀರವಾಗಿ ಅವಲೋಕಿಸಿದರೆ ಈ ದೇಶದ ಮೂಲ ಸಂಸ್ಕೃತಿ ಮತ್ತು ಮೂಲ ಧರ್ಮ ಇವುಗಳಲ್ಲಿದೆ.

ಪುರುಷ ತನ್ನ ಲಿಂಗವನ್ನು ಹಿಡಿದುಕೊಂಡಿರುವ ಮತ್ತು ಮಹಿಳೆ ಅದನ್ನು ಹೊತ್ತುಕೊಂಡಿರುವ ಒಂದು ಶಿಲ್ಪ, ಹಾಗೂ ಮಹಿಳೆ ತನ್ನ ಯೋನಿಯನ್ನು ಹಿಡಿದುಕೊಂಡಿರುವ ಮತ್ತೊಂದು ಶಿಲ್ಪ ಸೂಚಿಸುವುದು ದ್ರಾವಿಡ ಮತ್ತು ದ್ರಾವಿಡ ಪೂರ್ವ ಸಮುದಾಯಗಳ ಫಲವಂತಿಕೆಯ ಆಚರಣೆ (fertility cult) ಯನ್ನು ಜಗತ್ತಿನಲ್ಲಿ ಇಂದು ಇರುವ ವೈದಿಕ, ಇಸ್ಲಾಂ, ಪಾರ್ಸಿ, ಕ್ರೈಸ್ತ ಮೊದಲಾದ ಯಾವುದೇ ಮತಧರ್ಮ ಹುಟ್ಟುವುದಕ್ಕೆ ಮೊದಲು ವ್ಯಾಪಕವಾಗಿ ಇದ್ದ ಆಚರಣೆ ಇದು. ಭಾರತದ ಮಟ್ಟಿಗೆ ಆರ್ಯರು ಇಲ್ಲಿಗೆ ಕಾಲಿಡುವ ಮುನ್ನ ದ್ರಾವಿಡ ಸಮುದಾಯಗಳು ಎಲ್ಲೆಡೆ ಪಾಲಿಸುತ್ತಿದ್ದ “ಧರ್ಮ” ಇದು. ಇದೇ ಆಚರಣೆಗಳು ಮುಂದೆ ವ್ಯವಸ್ಥಿತ ರೂಪ ಪಡೆದು ತಾಂತ್ರಿಕ ಪಂಥದ ಏಳಿಗೆಗೆ ಅನುವು ಮಾಡಿಕೊಟ್ಟವು ಎಂದು ಮಾನವಶಾಸ್ತ್ರಜ್ಞರು, ಸಂಸ್ಕೃತಿ ಚಿಂತಕರು ಶೋಧಿಸಿದ್ದಾರೆ.

ಕರ್ನಾಟಕದಲ್ಲಿಯೇ ಅನೇಕ ಕಡೆಗಳಲ್ಲಿ ಲಜ್ಜಾ ಗೌರಿಯ ವಿಗ್ರಹಗಳು ದೊರೆತಿವೆ. ಲಜ್ಜಾಗೌರಿಯ ಮುಖವು ಅರಳಿದ ಕಮಲವನ್ನು ಹೊಂದಿದ್ದು ಯೋನಿ ಮೇಲ್ಮುಖವಾಗಿರುತ್ತದೆ. ಇದೂ ಸಹ ಫಲವಂತಿಕೆ ಪಂಥದ ಪೂಜಾ ಸಾಧನವೇ ಆಗಿದೆ. ಈ ಕೆತ್ತನೆಗಳಲ್ಲಿನ ಮೂಲ ತಿಳುವಳಿಕೆಯ ಸಾರ ಇಷ್ಟೇ. ಸಕಲ ಜೀವ ಜಂತುಗಳ ಸಂತಾನೋತ್ಪತ್ತಿಗೆ ಕಾರಣವಾಗುವ ಸ್ತ್ರೀ ಪುರುಷ ಜನನಾಂಗಗಳೇ ಪೂಜನೀಯವಾದವು. ಮುಂದೆ ಶೈವ ಪಂಥವು ಸ್ವೀಕರಿಸಿದ ಲಿಂಗವೂ ಸ್ತ್ರೀ-ಪುರುಷ ಸಮಾಗಮ ತತ್ವವನ್ನೇ ಸಾಂಕೇತಿಕಗೊಳಿಸಿಕೊಂಡದ್ದು. ಈ ಬಗ್ಗೆ ಸಂಸ್ಕೃತಿ ಚಿಂತಕರಾದ ಡಾ.ಲಕ್ಷ್ಮೀಪತಿ ಕೋಲಾರ ಅವರು, ಲಾಗಾಯ್ತಿನ ಲಿಂಗ ಪುರಾಣ ಲೇಖನದಲ್ಲಿ”ವೇದದಲ್ಲೆಲ್ಲೂ ‘ಶಿವ’ ಎಂಬ ಪದದ ಪ್ರಯೋಗವೂ ಆಗಿಲ್ಲ ಎಂಬುದನ್ನು ಶಂ.ಭಾ. ಜೋಶಿಯವರು ತಮ್ಮ ಶಿವ ರಹಸ್ಯ ದಲ್ಲಿ ದಾಖಲಿಸಿದ್ದಾರೆ. ವೈದಿಕ ಸಾಹಿತ್ಯದಲ್ಲಿ ಮೊದಲು ಶಿವ ಎಂಬ ನಾಮದ ಪ್ರಯೋಗವಾಗಿರುವುದು ಶ್ವೇತಾಶ್ವತೋಪನಿಷತ್ತಿನಲ್ಲೇ! ದ್ರಾವಿಡ ಭಾಷಾ ವಿಜ್ಞಾನಿಗಳು ಈಗಾಗಲೇ ದೃಢಪಡಿಸಿರುವಂತೆ ‘ಶಿವ’ ಮತ್ತು ‘ಲಿಂಗ’ ಶಬ್ದಗಳು ಸಂಸ್ಕೃತ ಭಾಷೆಯದ್ದಲ್ಲವೇ ಅಲ್ಲ…..” ಎನ್ನುತ್ತಾರೆ.

ಅಲ್ಲ ದ್ಚೈತ ಹಾಗೂ ಅದ್ವೈತ ಚಿಂತನೆಗಳ ಮೂಲವೂ ಸಹ ಈ ಸ್ತ್ರೀ ಪುರುಷ ಸಂಯೋಗದ ಫಲವಂತಿಕೆ ಪಂಥದಲ್ಲಿಯೇ ಇದ್ದವು ಎನ್ನಲಾಗುತ್ತದೆ. ಹೆಣ್ಣು ಗಂಡಿನ ಮಿಲನದ ಸರಳ ಸುಂದರ ಅದ್ವೈತ ತತ್ವವನ್ನು ಮುಂದೆ ಎಂಟನೇ ಶತಮಾನದಲ್ಲಿ ಜನವಿರೊಧಿ ಸಿದ್ಧಾಂತವಾಗಿಸಲಾಯಿತು ಎನ್ನಲಾಗುತ್ತದೆ. ಈ ಬಗ್ಗೆ ಲಕ್ಷ್ಮೀಪತಿ ಅವರು ಅದೇ ಲೇಖನದಲ್ಲಿ ಹೀಗ ಬರೆಯುತ್ತಾರೆ. “ಹೆಣ್ಣು- ಗಂಡುಗಳು ದ್ವೈತವಾಗಿದ್ದು, ಅವರ ಸಮಾಗಮದಿಂ ಸೃಷ್ಟಿಕ್ರಿಯೆ ನಡೆದು, ಅಲ್ಲಿ ಹುಟ್ಟುವ ಹೊಸ ಜೀವ ಅವರಿಂದ ಬೇರೆಯಲ್ಲವಾಗಿ ಅದು ಅದ್ವೈತ. ಇದು ಜೇನು ಕುರುಬರ ಅಣಪೆ ನೂರಾಳೊಡೆಯನ ಪರಿಕಲ್ಪನೆಯ ಹಿಂದಿರುವ ಆದಿಮವಾದ, ಸರಳ ಅದ್ವೈತ ತತ್ವ. ಜೇನು ಕುರುಬರಲ್ಲಿನ ಈ ಸೃಷ್ಟಿ ಕ್ರಿಯೆಯನ್ನಾಧರಿಸಿದ ಅದ್ವೈತ ತತ್ವವನ್ನೇ ವೈದಿಕ ಪೂರ್ವದ ಅಥವ ದ್ರಾವಿಡರ ತಂತ್ರ ಪಂಥವು ತಂತ್ರಾಕೃತಿಗಳ ಮೂಲಕವೇ ಹಿಡಿದಿಟ್ಟಿತು.

ಉದಾಹರಣೆಗೆ ಸರಳವಾಗಿ ಹೀಗೆ ವಿವರಿಸಬಹುದು

ಮೇಲ್ಮುಖವಾದ ತ್ರಿಕೋನವು ಪುರುಷ ಲಿಂಗದ ಸಂಕೇತವಾದರೆ ಕೆಳಮುಖವಾದ ತ್ರಿಕೋನವು ಸ್ತ್ರೀಲಿಂಗದ ಸಂಕೇತವೆಂದುಕೊಳ್ಳೋಣ. ಹೆಣ್ಣು ಗಂಡುಗಳು ಪ್ರತ್ಯೇಕವಾಗಿರುವವರೆಗೂ ಈ ತ್ರಿಕೋನಗಳು ಬೇರೆ ಬೇರೆಯೇ ಆಗಿ ದ್ವೈತವನ್ನು ಹೇಳುತ್ತವೆ. ಹೆಣ್ಣು- ಗಂಡುಗಳು ಸಮಾಗಮಗೊಂಡಾಗ ಎರಡು ತ್ರಿಕೋನಗಳೂ ಹೀಗ ಬೆಳೆದುಕೊಂಡು ಆರು ತ್ರಿಕೋನಗಳನ್ನು ಸೃಷ್ಟಿಸುತ್ತವೆ. ಈ ಹೊಸದಾದ ಆರು ತ್ರಿಕೋನಗಳೂ ಮೂಲದ ಹೆಣ್ಣು ಗಂಡುಗಳ ಎರಡು ತ್ರಿಕೋನಗಳಿಂದ ಹೊರತಾದುದಲ್ಲವಾದ್ದರಿಂದ ಅದು ಅದ್ವೈತವನ್ನು ಸಾರುತ್ತದೆ. ಮನುಷ್ಯ ಮೂರು ಸಂದರ್ಭಗಳಲ್ಲಿ ತುರಿಯಾವಸ್ಥೆಯನ್ನು (orgasm) ತಲುಪುತ್ತಾನೆಂದು ಶೈವ ತತ್ಬ ಹೇಳುತ್ತದೆ. ಅದು ಹೆಣ್ಣು ಗಂಡಿನ ಸಮಾಗಮ, ಸಂಗೀತ ಹಾಗೂ ನೃತ್ಯದ ತಲ್ಲೀನತೆಗಳಲ್ಲಿ. ಹಾಗಾಗಿ ಇದೇ ತಂತ್ರಾಕೃತಿಯನ್ನು
ಕೊಂಚ ಬದಲಿಸಿ ಢಮರುಗವನ್ನು ಸೃಷ್ಟಿಸಿ ಹೆಣ್ಣು ತ್ರಿಕೋನದಿಂದ ಶಕ್ತಿ ಮತ್ತು ಪುರುಷ ತ್ರಿಕೋನದಿಂದ ಶಿವನನ್ನು ಇರಿಸಿ ಶಿವ ಶಕ್ತಿಯರ ಸಮಾಗಮದಲ್ಲಿ ನಾದೋತ್ಪತ್ತಿಯ ತತ್ವವನ್ನು ವಿವರಿಸುತ್ತದೆ. ಇದು ದ್ರಾವಿಡ ಪೂರ್ವ ಬುಡಮಟ್ಟುಗಳ phallic cult ನಿಂದ ಎತ್ತಿ ವಿವರಿಸಿದ diagrammatic ಅದ್ವೈತವಾಗಿದೆ. ಈ ಮೂಲ ಅದ್ವೈತವನ್ನು ಸೃಷ್ಟಿಶೀಲ ನೆಲೆಯಿಂದ ಪಲ್ಲಟಗೊಳಿಸಿ ಪರ- ಬ್ರಹ್ಮ- ಆತ್ಮ- ಪರಮಾತ್ಮದ ವೈದಿಕೋಪನಿಷತ್ತಿನ ವಂಚ ಜಾಲದಲ್ಲಿ ಸಂಕೀರ್ಣಗೊಳಿಸಿ ಜನಸಾಮಾನ್ಯರಿಗೆ ಎಟುಕದಂತೆ ಜಟಿಲ ತತ್ವವನ್ನಾಗಿಸಿದ್ದೊಂದು ಪಿತೂರಿಯೂ ಆಗಿದೆ. ಈ ವಂಚಕ ಚರಿತ್ರೆಯ ವಿವರಣೆಯೂ ಮತ್ತೊಂದು ಅಧ್ಯಾಯವಾಗಬಲ್ಲದು” ಎನ್ನುತ್ತಾರೆ.

ಇಂದಿನ ಕಾಲದಲ್ಲಿ ಹಾಸ್ಯ ಎನಿಸುವ, ವಿಚಿತ್ರ ಎನಿಸುವ ಜನಪದರ ಎಷ್ಟೋ ಆಚರಣೆಗಳಲ್ಲಿ, ನಂಬಿಕೆಗಳಲ್ಲಿ ಇತಿಹಾಸದ ಸತ್ಯಗಳು ಹುದುಗಿ ಹೋಗಿರುತ್ತವೆ. ಅವುಗಳನ್ನು ಎತ್ತಿ ತೆಗೆದು ಜನರಿಗೆ ವಿವರಿಸುವ ಜರೂರು ಇಂದು ಎದುರಾಗಿದೆ.. ಬದುಕಿನ ಪ್ರತಿ ಕ್ಷಣವೂ ವೈದಿಕಗೊಳ್ಳುತ್ತಿರುವ ಕೇಡುಗಾಲದಲ್ಲಿರುವ ನಾವು ಸಂಸ್ಕೃತಿಯ ಮಹಾ ಮರೆವಿನಿಂದ ಹೊರಬರಲೇಬೇಕಾಗಿದೆ.

(ಲೇಖಕರು- ಹರ್ಷಕುಮಾರ್ ಕುಗ್ವೆ, ಪತ್ರಕರ್ತರು, ಉಡುಪಿ)

ನೆಲದನಿ

ಧೀರ ಟೀಪುವಿನ ಲಾವಣಿಗಳು

Published

on

ಶ್ರೀ ಗುರುದಾಸ ನಂಜಣ್ಣ ಸುತ ನೀಲಕಂಠ ಅವರು ರಚಿಸಿರುವ ಟಿಪ್ಪುಸುಲ್ತಾನ್-ಲಾವಣಿಯ ಆಯ್ದ ಭಾಗಗಳು ಇಲ್ಲಿವೆ.

ಪುಸ್ತಕ : ಧೀರ ಟೀಪುವಿನ ಲಾವಣಿಗಳು
ಸಂಪಾದನೆ : ಲಿಂಗದೇವರು ಹಳೆಮನೆ

ಹೈದರ ಆಲಿಯು ಅರಿತವನಲ್ಲವು ಓದು ಬರಹವೆಂತೆಂಬುದನು|
ಆದರು ಖಚಿತದಿ ಕನ್ನಡ ಭಾಷೆಯೊಳು ಮಾತನಾಡುವುದನು ಅರಿತಿದ್ದನು||

ಮೋದದಿ ವೈರಿಗಳ ಮರ್ದಿಸಿ ಮೈಸೂರ ಧ್ವಜ ಮೆರೆಸಿದ್ದನು|
ಈ ಧರೆಯಿಂದಲಿ ಕಣ್ಮರೆಯಾದನು ಕನ್ನಡದ ಗಂಡುಗಲಿ ಎಂದೆನಿಸಿದವನು||

ಧಾಟಿ :ಉರ್ಡಾ
ಅಪ್ಪ ಕಟ್ಟಿದ ಮೈಸೂರ ದೇಶ ದೊಡ್ಡದಿತ್ತಲ್ಲಾ|
ಡೀಪುವಿನ ಕಾಲದೊಳು ಇನ್ನು ವಿಸ್ತರಿಸಿತಲ್ಲಾ||

ತಪ್ಪವನ್ನೇ ತಂದರು ಇಷ್ಟಾದರು ಬಿಡಲಿಲ್ಲಾ|
ಬೆಪ್ಪಾದರು ಅರಿಗಳು ಕೇಳಿ ಟೀಪು ಜಯಿಸೊಲ್ಲಾ||

ಧಾಟಿ:ಗುಲ್ಲಾರ್ಡು
ಹೈದರನ ಬಳಿಕ ಟೀಪುಸುಲ್ತಾನ|
ಬೆದರಿಸಿದ ಗದಗದ ಹಿಂದುಸ್ತಾನ||

ಪದವಿಯೊ ಮೈಸೂರಿನ ಸುಲ್ತಾನ|
ಕದನದಿ ಮಂಗ್ಳೂರ್ ಹಿಡಿದನು ಕೈವಶ ಬೆದರಿತು ಲಂಡನ್||

ಶ್ಲೋಕ :ಅರವು ಆಂದ್ರ ಶುರುವಿಗಿಡಿದನು ಪೌರುಶದಿ ಕೊಯಮತ್ತೂರನು|

ನಿರುತ ಲೂಟಿಯ ಹೊಡೆಯುತಲಿದ್ದನು ನೀಲಗಿರಿ ಮಲೆನಾಡನು
ಪೌರುಶದಿ ಮಲಬಾರನು||

ಧಾಟಿ:ಚಾಲ್
ಮೈಸೂರ ಷಾಜಾನನ ಘರ್ಜನೆ ಕೇಳಿ ಲಂಡನ್ ಪಳುಗಳು ಬೆದರೋಯ್ತು|
ಮಸಲತ್ ಮಾಡಿದ ಮೀರ್ಸಾದಿಕನಿಗೆ ದೇಶದ್ರೋಹಿ ಎಂಬ್ಹೆಸಾರಾಯ್ತು||

ಆಟಾಟೋಪದಿ ಟೀಪು ಸುಲ್ತಾನನು ಆರ್ಕಾಟ್ ಲೂಟಿಯ ಮಾಡಿದನು|
ಏಟೇಟಿನ ಮೇಲ್ ಉಲ್ಟಾ ಫಿರಂಗಿಯ ಕೋಠಿಗಳೆಷ್ಟೂ ಲೂಟಿದನು||

ನಟನೆಯ ನೈಜಾಂ ಮರಾಠಿ ಪೇಶ್ವೆಯ ಪಟಾಲಮ್ಮ ದಿಟ್ಟ ಗೆದ್ದಿದನು|
ಬ್ರಿಟಿಷ್ ಜನಾಂಗದ ಈಷ್ಟ ಇಂಡಿಯಾ ಕಂಪೆನಿ ಲಾಷ್ಟಿಗೆ ಮಾಡಿದನು||

ಕೋಟಲೆ ಹತ್ತಿದ ಬ್ರಿಟಿಷ್ ವರ್ತಕರು ಕೂಟ ಗೈದರು ಮಸಲತ್ತನ್ನು|
ಲೂಟಿಯನೊಡೆಯಲು ಶ್ರೀರಂಗಪಟ್ಣಕೆ ಜನರಲ್ ಹ್ಯಾರಿಸ್ ಬಂದಿದ್ದನು||

ಮಿಟ ಮಿಟ ಕಣ್ ಬಿಡುತ್ತಿದ ಮರಾಠಿ ಸಪೋಟಾಗಿ ಸೈನ್ಯ ತಂದಿದ್ದನು|
ಕಟಕಟ ಹಲ್ ಕಡಿಯುತ್ತ ನಿಜಾಮನು ತಟಕ್ಕನೆ ಖಳ ಹೊಕ್ಕಿದನು||

ಧಾಟಿ: ದೊಡ್ಡುರ್ಡಾ
ಮೀರ ಕಮರುರ್ದೀ ರ್ಖಾ ಸೇನಾಪತಿ ಸೋತನು ಈರೋಡ ಬಳಿಯಲಿ|
ಬಾರೋದ್ದೀನನ ಬಲವೆಲ್ಲಾ ಮಡಿದಿತು ಕೂಗಳತೆಯ ಮಳವಳ್ಳಿಯಲಿ||

ಫಿರಂಗಿ ದಳಪತಿ ಮಾನ್ಶಿಯರ ಲಾಲಿಯು ಮೂರ್ಛೆ ಬಿದ್ದನು ರಣದಲ್ಲಿ|
ಮೀರಸಾಧಕನ ದ್ರೋಹದಿ ಸತ್ತನು ಸೈಯ್ಯದ ಗಪೂರ ಗುಂಡೇಟಿನಲಿ||

ಧಾಟಿ: ಉರ್ಡಾ
ಘಡಘಡಲ್ ಗುಂಡೊಡೆದರು ಕೋಟೆಗೆ|
ಗಡಿಬಿಡಿಯು ಹತ್ತಿತ್ತು ಶ್ರೀರಂಗಪಟ್ಣದೊಳಗೆ||

ಕಡುದ್ರೋಹಿಗಳಾಟ ಮದ್ದಿನ ಮನೆ ಉರಿದೋಗೆ|
ಇಡಿಸಿದ್ದ ಫಿರಂಗಿಯು ಇಳಿದೋಯ್ತು ಮಣ್ಣೊಳಗೆ||

ಧಾಟಿ:ಗುಲ್ಲುರ್ಡಾ
ವಂಚಕರ ಮಿಂಚಿನಾಟ ಬಳ್ಳಿ|
ಸಂಚರಿಸಿ ಹೊಂಚಲಾಗಿತ್ತು||

ಶ್ಲೋಕ:
ಮೀರಸಾಧಕನಾಟ ಇಂಪಿನಾಟಕವೆ ಆಗಿದ್ದಿತು|
ದಾರಿ ತೋರಿತು ವೈರಿ ಜನರಿಗೆ ಭಾರೀ ಕಷ್ಟವೇ ತಪ್ಪಿತು||

ಧಾಟಿ: ಚಾಲ್
ಖಾಸಾ ದಂಡಿನ ಶ್ರೇಷ್ಠ ಮುಖಂಡರ ಮೋಸವು ಸುಲ್ತಾನರಿಗೆ ಅರಿವಾಯ್ತು|
ಮಸಲತ್ ಮಾಡಿದ ಮೀರಸಾಧಕನಿಗೆ ದೇಶದ್ರೋಹಿ ಎಂಬ್ಹೆಸರಾಯ್ತು||

ಹರಾಮ ಖೋರರ ಕರಾಮತ್ ಅರಿತನು ಟೀಪು ಸುಲ್ತಾನನು ನಿಮಿಷದಲಿ|
ಅರೇ ಹಮಾರೇ ನಮಖ್ಹರಾಮ ಕರೇಸೋ ತಾಯೆಂದ ಮನಸ್ಸಿನಲಿ||

ಸ್ವರಾಜ್ಯ ರಕ್ಷಣೆಗೋಸ್ಕರ ಸುಲ್ತಾನ ರಣಾಗ್ರ ಹೊರಟನು ರೋಷದಲಿ|
ಫರಂಗಿ ಸೋಲ್ಜರ ತರಂಗ ಮಧ್ಯದಿ ತುರಂಗ ಬಿಟ್ಟನು ತ್ವರಿತದಲಿ||

ಪರಂಪರೆಯಿಂಪರ ವಿರೋಧಿ ಪೋಜನು ಕುರಿಗಳಂದದಿ ಖಡ್ಗದಲಿ|
ಸರಾಸರಿಯಿಲ್ ಬರೆಯಲು ಸಿಗದು ತರಿದನೆಷ್ಟೋ ಶಿರವನಲ್ಲಿ||

ಪರಾಕ್ರಮದಿ ಬಲು ಹೋರಾಡಿ ಬಿದ್ದನು ಸಾರಂಗ ಬಾಗಿಲ ಗವಿಯ ಬಳಿ|
ಫರಂಗಿ ಪೋಜಿನ ತರಂಗ ನುಗ್ಗಿತು ಶ್ರೀರಂಗನ ಧಾಮನ ಪಟ್ಣದಲಿ||

ಧಾಟಿ:ದೊಡ್ಡುರ್ಡಾ
ಟೀಪುಸುಲ್ತಾನನ ಹದಿನೇಳು ವರುಷದ ಆಡಳಿತ ಕೊನೆಯಾಯ್ತು|
ಟೀಪು ರಾಜ್ಯದೊಳು ಶರಾಬು, ಶೇಂದಿ, ಗಾಂಜಾ ಆಫೀಮು ಇರಲಿಲ್ಲ||

ಟೀಪುವಿನ ಕಾಲದೊಳು ಜೂಜುನಾಟ ಮೇಣ್ ವ್ಯಭಿಚಾರದ ಸುಳಿವಿಲ್ಲ|
ಜ್ಞಾಪಕವಿದ್ದಿತು ಸಬ್ಬಲ್ ರಾಣಿಯ ದಿಣ್ಣೆಯ ಭಿತಿಯು ಜನಕೆಲ್ಲಾ||

ಧಾಟಿ: ಉರ್ಡಾ
ಹುಲಿ ಸೀಳಿದ ದೊರೆ ಅಳಿದೋದ ಮೇಲೆ ರಣದಲ್ಲಿ|
ಮಳೆಯಾಯಿತು ಗಳಿಗೇಲಿ ಪ್ರಳಯದಂತೆ ಭರದಲ್ಲಿ||

ಸುಲಿಗೆಯಾ ಮಾಡಿದರು ಶತ್ರುಜನರು ಪುರದಲ್ಲಿ|
ಬಳಿಕಾದ ವಿವರ ಬರೆದೇನು ಫಲವಿಲ್ಲಿ||

ಧಾಟಿ:ಗುಲ್ಲುರ್ಡಾ
ಬಂದವರಿಗೆಲ್ಲಾ ತಿಂದು ತೇಗೆ|
ಹಿಂದಿನ ರಾಜರ ಸಂತತೀಗೆ||

ಮುಂದಿನೊಳು ಮುಮ್ಮಡಿ ಕೃಷ್ಣರಾಜರೀಗೆ|
ಸಂದಿತು ರಾಜ್ಯವು ಸಾವಿರದೇಳ್ನೂರ ತೊಂಭತ್ರೊಂಭತ್ರೊಳಗೆ||

ಶ್ಲೋಕ:
ರಾಜಧಾನಿ ಮೈಸೂರ ಪಟ್ಣ ಮಾದರಿ ನವ ರೀತಿಯಲ್ಲಿ|
ಸೋಜಿಗದಿ ರಾಜಿಪುದು ಶ್ರೀ ಚಾಮುಂಡೇಶ್ವರಿ ಕೃಪೆಯಲ್ಲಿ||

ಶೇಷನ ಗಿರಿಹರಿದಾಸ ಪುಟ್ಟಣ್ಣನ ಲೇಸಿನ ಕರುಣವು ನಮಗಾಯ್ತು|
ಪೋಷಿಪ ಶ್ರೀ ಗುರು ದಾಸ ನಂಜಣ್ಣನ ಸುತ ನೀಲ್ಕಂಠನ ಪದವಾಯ್ತು||

ಶ್ರೀ ಗುರುದಾಸ ನಂಜಣ್ಣ ಸುತ ನೀಲಕಂಠ

Continue Reading

ನೆಲದನಿ

ನೆಲದನಿಯ ಮಿಡಿತ : ಎಂ.ನಂಜುಂಡಸ್ವಾಮಿಯವರ ತಾತ್ವಿಕ ಶೋಧ

Published

on

ಭಾರತವು ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಂಡ ನಾಡು. ಇಲ್ಲಿ ಬಹುತ್ವದ ನೆಲೆಗಳು ಸಾಂಸ್ಕøತಿಕ ನೆಲೆಯಲ್ಲಿ ಕಂಡುಬರುತ್ತವೆ. ಆದರೆ ಇಂತಹ ಬಹುತ್ವದ ಸಾಂಸ್ಕøತಿಕ ಶ್ರೀಮಂತಿಕೆಯ ನಾಡಿನಲ್ಲಿ ವಲಸೆ ಬಂದಂತಹ ಆರ್ಯ ಸಂಸ್ಕøತಿಯೊಂದು ಇಲ್ಲಿನ ಮೂಲನಿವಾಸಿ ಸಂಸ್ಕøತಿಗಳನ್ನು ಹತ್ತಿಕ್ಕುವ ಮೂಲಕ ಏಕತ್ವದ ಸಂಸ್ಕøತಿಯ ಮೂಲಕ ದಾಳಿ ನಡೆಸಿದೆ. ಆ ಮೂಲಕ ಪುರೋಹಿತಶಾಹಿ ನೆಲೆಯ ಬ್ರಾಹ್ಮಣತ್ವ ಹಾಗೂ ತಮ್ಮ ಸಂಸ್ಕøತ ಭಾಷೆಯೇ ಶ್ರೇಷ್ಠವೆಂದು ಪ್ರತಿಪಾದಿಸುತ್ತ, ಈ ನಾಡಿನ ಬಹುತ್ವ ಸಂಸ್ಕøತಿಯ ಜೀವಪರ ಆಶಯಗಳನ್ನು ವಿಸ್ಮøತಿಗೊಳಪಡಿಸುವ ಪ್ರಯತ್ನ ನಡೆಸಿದೆ. ಬ್ರಾಹ್ಮಣಶಾಹಿಯು ರೂಪಿಸಿರುವ ಈ ನೀಚ ಪ್ರವೃತ್ತಿಯ ವಿರುದ್ಧ ಬುದ್ಧನಿಂದ ಬಾಬಾಸಾಹೇಬ ಅಂಬೇಡ್ಕರ್ ಅವರ ತನಕ ಹಲವಾರು ದಾರ್ಶನಿಕರು ಹೋರಾಟ ನಡೆಸಿದ್ದಾರೆ. ಈ ಎಲ್ಲಾ ದಾರ್ಶನಿಕರ ಹೋರಾಟದ ಫಲವಾಗಿ ದಲಿತ ಸಮುದಾಯಗಳು ಜಾಗೃತರಾಗುತ್ತ ಬಂದಿದ್ದಾರೆ. ಆ ಮೂಲಕ ತಮ್ಮ ಅಸ್ತಿತ್ವದ ಶೋಧಕ್ಕೆ ಮುಂದಾಗಿರುವುದಕ್ಕೆ ಹಲವಾರು ನಿದರ್ಶನಗಳು ನಮ್ಮ ಮುಂದಿವೆ. ಇಂತಹ ಚಾರಿತ್ರಿಕ ಅಸ್ಮಿತೆಯ ಶೋಧಕ್ಕೆ ಮುಂದಾದವರಲ್ಲಿ ಎಂ.ನಂಜುಂಡಸ್ವಾಮಿ (ಮನಂ) ಅವರು ಒಬ್ಬರಾಗಿದ್ದಾರೆ.

ಶ್ರೀಯುತ ಎಂ.ನಂಜುಂಡಸ್ವಾಮಿಯವರು ದಿನಾಂಕ: 28 ಮಾರ್ಚ್ 1970 ರಂದು ಶ್ರೀ ಮಾಳವ ಮಹದೇವಯ್ಯ, ಶ್ರೀಮತಿ ಮಾಳವ ಸರೋಜಮ್ಮ ದಂಪತಿಗಳ ಮಗನಾಗಿ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಜನ್ಮತಳೆದರು. ಇವರು ಆರಂಭಿಕ ಶಿಕ್ಷಣವನ್ನು ಧಾರವಾಡದಲ್ಲಿ ಪಡೆದರು. 1993ರಲ್ಲಿ ಗಣಿತಂತ್ರಜ್ಞಾನದಲ್ಲಿ ಬಿ.ಟೆಕ್ ಪದವಿಯನ್ನು ಸೂರತ್ಕಲ್‍ನಲ್ಲಿ ಪಡೆದರು. ಪದವಿ ಶಿಕ್ಷಣದ ತರುವಾಯದಲ್ಲಿ ಗೋವಾ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿ ಇಂಜಿನಿಯರಾಗಿ ಸೇವೆ ಸಲ್ಲಿಸಿದರು. ರಾಂಚಿಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೋಲ್ ಮ್ಯಾನೇಜ್‍ಮೆಂಟ್ ಕೋರ್ಸ್ ಪೂರೈಸಿ, ಕಲ್ಲಿದ್ದಲು ಗಣಿಯಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ‘ಭಾರತದ ಲೋಕಸೇವಾ ಆಯೋಗ’ವು ನಡೆಸುವ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕಿನೊಂದಿಗೆ ತೇರ್ಗಡೆಯನ್ನು ಹೊಂದುವ ಮೂಲಕ ಭಾರತೀಯ ಪೊಲೀಸ್ ಸೇವೆಗೆ 1997 ಆಗಸ್ಟ್ 25ರಂದು ತಮ್ಮನ್ನು ತೆರೆದುಕೊಂಡರು. ಅಲ್ಲಿಂದ ಪ್ರಾರಂಭವಾದ ಇವರ ಸೇವೆಯು ವಿವಿಧ ಹುದ್ದೆಗಳನ್ನು ಅಲಂಕರಿಸುವ ಮೂಲಕ ಪ್ರಾಮಾಣಿಕ ಸೇವೆಯನ್ನು ಸಲ್ಲಿಸುತ್ತ ಬಂದಿದ್ದಾರೆ. ಪ್ರಸ್ತುತದಲ್ಲಿ ಬೆಂಗಳೂರು ನಗರದಲ್ಲಿ ಪ್ರಭಾರಿ ಪೊಲೀಸ್ ಕಮೀಷನರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಶ್ರೀಯುತ ಎಂ.ನಂಜುಂಡಸ್ವಾಮಿಯವರು ತಮಗಿರುವ ಉನ್ನತ ಹುದ್ದೆಯ ಆಚೆಯೂ ಸಾಧನೆ ಮಾಡುವ ಹಂಬಲವೊತ್ತವರು. ಇವರಲ್ಲಿ ಬಹುಮುಖಿ ಪ್ರತಿಭೆಯೊಂದು ಸದಾ ಕ್ರಿಯಾಶೀಲವಾಗಿದೆ. ಇದರಿಂದಾಗಿ ತಮ್ಮ ಜವಬ್ದಾರಿಯುತ ಸೇವೆಯಾಚೆ ಸಾಹಿತ್ಯ, ಸಂಶೋಧನೆಯಂತಹ ಕ್ಷೇತ್ರಗಳಲ್ಲಿಯೂ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಆ ಮೂಲಕವಾಗಿ ಬಾಬಾಸಾಹೇಬರ ವೈಚಾರಿಕ ಚಿಂತನೆಗಳಿಂದ ಪ್ರಭಾವಿತರಾಗಿ, ತಳಸಮುದಾಯಗಳ ಚಾರಿತ್ರಿಕ ಅಸ್ಮಿತೆಯ ಶೋಧಕ್ಕೂ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಶತಮಾನಗಳಿಂದ ತಳಸಮುದಾಯದ ಜನತೆಯನ್ನು ಶೋಷಣೆ ಮಾಡುತ್ತ ಬಂದಿರುವ ಸಂಸ್ಕøತ ಭಾಷೆ ಹಾಗೂ ಸಂಸ್ಕøತ ಸಾಹಿತ್ಯದಿಂದ ಯಾವುದೆ ಸತ್ಯವನ್ನು ತಿಳಿಯಲು ಸಾಧ್ಯವಿಲ್ಲ ಎಂಬುದನ್ನು ಮನಗಂಡ ಶ್ರೀಯುತರು ಒಂದು ಕಾಲದಲ್ಲಿ ಈ ನಾಡಿನ ನೆಲದ ಭಾಷೆಗಳಾಗಿದ್ದ ಸುಮೇರಿಯನ್, ಅಕ್ಕಾಡಿಯನ್ ಹಾಗೂ ಮಾಳವ ಭಾಷೆಗಳ ಮೂಲಕ ತಳಸಮುದಾಯಗಳ ಚಾರಿತ್ರಿಕ ಶೋಧಕ್ಕೆ ಮುಂದಾಗಿದ್ದಾರೆ. ಆ ಮೂಲಕ ಈ ನೆಲೆದ ಭಾಷೆಗಳನ್ನು ವಿಶೇಷವಾದ ಆಸಕ್ತಿಯಿಂದ ಅಧ್ಯಯನ ಮಾಡಿ, ತಳಸಮುದಾಯಗಳ ಸ್ವಾಭಿಮಾನದ ಬದುಕಿಗೆ ಪೂರಕವಾದ ಅಂಶಗಳನ್ನು ಧಾರೆಯೆರೆದಿದ್ದಾರೆ. ಸಂಸ್ಕøತ ಭಾಷೆಯ ಪ್ರಕಾರ ‘ಕೀಳು’ ಎಂಬುದು ಕನಿಷ್ಟ ಎಂದಾದರೆ, ಸಮೇರಿಯನ್ ಭಾಷೆಯಲ್ಲಿ ‘ಕೀಳು’ ಎಂಬುದರ ಅರ್ಥ ಹೀಗಿದೆ; ‘ಕೀ’ ಎಂದರೆ ಭೂಮಿ. ‘ಳು’ ಎಂದರೆ ವ್ಯಕ್ತಿ ಎಂದರ್ಥ. ಸುಮೇರಿಯನ್ ಭಾಷೆಯಲ್ಲಿ ‘ಕೀಳು’ ಎಂದರೆ ಭೂಮಿಯವ, ಭೂಮಿಯಲ್ಲಿ ಕೆಲಸ ಮಾಡುವವ ಅಥವಾ ರೈತ ಎಂದರ್ಥ ಎಂಬುದನ್ನು ಶ್ರೀಯುತರು ತಮ್ಮ ಅಧ್ಯಯನದ ಮೂಲಕ ಗುರುತಿಸಿದ್ದಾರೆ. ಹಾಗೆಯೇ ಪುರೋಹಿತಶಾಹಿ ವ್ಯವಸ್ಥೆಯು ಅತ್ಯಂತ ನಿಕೃಷ್ಟವಾಗಿ ನಡೆಸಿಕೊಂಡು ಬಂದಿರುವಂತಹ ‘ಹೊಲಯ’ ಮತ್ತು ‘ಮಾದಿಗ’ ಜನಾಂಗವು ಕೂಡ ಚರಿತ್ರೆಯಲ್ಲಿ ರಾಜವಂಶಗಳಾಗಿ ಬಾಳಿ ಬದುಕಿರುವ ನಿದರ್ಶನಗಳನ್ನು ಪಲ್ಲವ ರಾಜವಂಶಗಳ ಮೂಲಕ ಗುರುತಿಸಿದ ಕೀರ್ತಿಯು ಇವರಿಗೆ ಸಲ್ಲುತ್ತದೆ. ಆ ಮೂಲಕವಾಗಿ ಈ ಸಮುದಾಯಗಳಿಗೆ ನೈತಿಕ ಸ್ಥೈರ್ಯವನ್ನು ನೀಡಿದ್ದಾರೆ.

ಶ್ರೀಯುತ ಎಂ.ನಂಜುಂಡಸ್ವಾಮಿಯವರು ಸದಾ ಸಾಮಾಜಿಕ ಜಾಗೃತಿ ಮೂಡಿಸುವತ್ತ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಇವರು ಬಾಬಾಸಾಹೇಬ ಅಂಬೇಡ್ಕರ್ ರಚಿಸಿರುವ ಸಂವಿಧಾನದ ಮೇಲೆ ಅಪಾರವಾದ ನಂಬಿಕೆಯನ್ನು ಹೊಂದಿದ್ದು, “ನಾವೆಲ್ಲ ಭಾರತೀಯರು, ನಮ್ಮೆಲ್ಲರ ಧರ್ಮ ಭಾರತೀಯ ಧರ್ಮ, ನಮ್ಮ ಧರ್ಮಗ್ರಂಥ ಭಾರತದ ಸಂವಿಧಾನ” ಎಂಬ ಘೋಷವಾಕ್ಯದ ಮೂಲಕ ಸರ್ವ ಮಾನವರನ್ನು ಸಮಾನವಾಗಿ ಕಾಣಬೇಕೆಂಬ ಆಶಯವನ್ನು ಸಂವಿಧಾನದ ಅಡಿಯಲ್ಲಿ ವ್ಯಕ್ತಪಡಿಸುತ್ತ ಬಂದಿದ್ದಾರೆ. ಸಂವಿಧಾನವನ್ನು ಸುಟ್ಟಂತಹ ದುರುಳರು ಮತ್ತೇ ಸನಾತನ ವ್ಯವಸ್ಥೆಯ ಮನುವಾದವನ್ನು ಜಾರಿಗೆ ತರುವ ಮೂಲಕ ಅಸಮಾನತೆ ಮತ್ತು ಕೋಮುವಾದವನ್ನು ಬಿತ್ತಲು ತವಕಿಸುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಶ್ರೀಯುತರ ಈ ಹೇಳಿಕೆಯ ಆರೋಗ್ಯಪೂರ್ಣ ಸಮಾಜಕ್ಕೆ ಅತ್ಯಂತ ಮಹತ್ವದ್ದಾಗಿದೆ. ಹಾಗೆಯೇ ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವ ಯುವಜನತೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ‘ಮಾದಕ ವಸ್ತುಗಳಿಗೆ ಬೇಡ ಎನ್ನಿರಿ” ಎಂಬ ಅಭಿಯಾನದ ಮೂಲಕವಾಗಿ ಸದೃಢ ದೇಶ ನಿರ್ಮಾಣದ ಕನಸ್ಸೊತ್ತು ಶ್ರೀಯುತರು ಮುನ್ನಡೆಯುತ್ತಿದ್ದಾರೆ.

ಶ್ರೀಯುತರು ಸಾಹಿತ್ಯ ಹಾಗೂ ಸಂಶೋಧನೆಯ ವಿವಿಧ ಪ್ರಕಾರಗಳಾದ ಫಿಲೊಲಾಜಿ, ಭಾಷಶಾಸ್ತ್ರ, ಪದಶಾಸ್ತ್ರ, ಸುಮೇರಿಯನ್, ಅಕ್ಕಾಡಿಯನ್, ಮಾಳವ ಭಾಷೆ ಮತ್ತು ವಿವಿಧ ನಾಗರೀಕತೆಗಳ ಕುರಿತು ವಿಶೇಷವಾದ ಆಸಕ್ತಿಯನ್ನು ಹೊಂದಿದ್ದು, ಹಲವಾರು ಸಾಹಿತ್ಯ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಇವುಗಳಲ್ಲಿ ಭಾರತದ ಮೊದಲ ದೊರೆಗಳು, ಹೊಲೆಯರು-ಮಾದರು-ರಾಜರು, ಹುಡುಕಾಟ, ಕೊಸೊವೊದ ಜಾಣರು, ಮಿಜೆನಿಯವರ ಸಣ್ಣಕಥೆಗಳು ಇವು ಶ್ರೀಯುತರ ಪ್ರಮುಖ ಕೃತಿಗಳಾಗಿವೆ. ಇವುಗಳ ಮೂಲಕ ಕನ್ನಡ ಸಾಹಿತ್ಯ ವಲಯದ ಶ್ರೀಮಂತಿಕೆಗಾಗಿ ಶ್ರಮಿಸಿದ್ದಾರೆ. ಶ್ರೀಯುತರ ಸಾಹಿತ್ಯ ಸೇವೆಗೆ ‘ಕುವೆಂಪು ವಿಶ್ವಮಾನವ’ ಪ್ರಶಸ್ತಿ ಮತ್ತು ಹಲವಾರು ಸನ್ಮಾನಗಳು ಲಭಿಸಿವೆ. ಹಾಗೆಯೇ ಶ್ರೀಯುತರ ಸರ್ಕಾರಿ ಸೇವೆಯ ಮೂಲಕ ದೇಶಕ್ಕೆ ಮಾಡಿದ ಸೇವೆಯನ್ನು ಪರಿಗಣಿಸಿ ‘ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಾಜಿ ಕರ್ನಾಟಕ ಸೂರತ್ಕಲ್’ನವರು 2004ರಲ್ಲಿ ‘ಗ್ಲೋಬಲ್ ಅಲುಮ್ನಿ ಎಕ್ಸಲೆನ್ಸ್ ಅವಾರ್ಡ್’ ನೀಡಿ ಗೌರವಿಸಿದೆ. ಹಾಗೆಯೇ ಕೊಸೊವೊದಲ್ಲಿ ಶಾಂತಿ ಸ್ಥಾಪನಾ ಕಾರ್ಯದಲ್ಲಿ ತೋರಿದ ಮಹತ್ವಪೂರ್ಣ ಸಾಧನೆಗಾಗಿ ವಿಶ್ವಸಂಸ್ಥೆಯು ಇವರಿಗೆ ‘ವಿಶ್ವಸಂಸ್ಥೆಯ ಪದಕ’ ನೀಡಿ ಗೌರವಿಸಿದೆ.

ಶ್ರೀಯುತ ಎಂ.ನಂಜುಂಡಸ್ವಾಮಿಯವರು ಉನ್ನತವಾದ ಹುದ್ಧೆಯನ್ನು ಅಲಂಕರಿಸಿದ್ದರು ಕೂಡ ಸಾಮಾಜಿಕ ಕಳಕಳಿಯನ್ನು ಹೊಂದಿದವರಾಗಿದ್ದಾರೆ. ಆ ಮೂಲಕ ದಮನಿತ ಸಮುದಾಯಗಳ ಮತ್ತು ಯುವಜನತೆಯ ಜಾಗೃತಿಗಾಗಿ ಸದಾ ತುಡಿಯುವ ಮೂಲಕ ಆರೋಗ್ಯಪೂರ್ಣ ಸಮಾಜದ ಕನಸ್ಸೊತ್ತು ಮುನ್ನಡೆಯುತ್ತಿದ್ದಾರೆ. ಇವರ ಈ ಹೋರಾಟದ ಹಾದಿಯು ಸದಾ ಯಶಸ್ವಿನೆಡೆಗೆ ಸಾಗಲೆಂಬುದು ನಮ್ಮ ಹಾರೈಕೆ.

Continue Reading

ನೆಲದನಿ

ನೆಲದನಿ : ಜಾನಪದ ಹಾಡುಗಾರ್ತಿ ವಡ್ಡಗೆರೆ ಕದರಮ್ಮ

Published

on

ನಾಡೋಜ ಎಚ್.ಎಲ್.ನಾಗೇಗೌಡ ಜನ್ಮ ಶತಮಾನೋತ್ಸವದ ಪ್ರಯುಕ್ತ ರಾಮನಗರದ ಜಾನಪದ ಲೋಕವು, 2015ನೆ ಸಾಲಿನ ಜಾನಪದಲೋಕ ಪ್ರಶಸ್ತಿಗೆ ತುಮಕೂರು ಜಿಲ್ಲೆ ವಡ್ಡಗೆರೆ ಗ್ರಾಮದ ಜಾನಪದ ಹಾಡುಗಾರ್ತಿ ವಡ್ಡಗೆರೆ ಕದರಮ್ಮ ಅವರನ್ನು ಆಯ್ಕೆ ಮಾಡಿದೆ. ದಿನಾಂಕ 08.02.2015ರ ರವಿವಾರ ರಾಮನಗರ ಪಟ್ಟಣದ ಜಾನಪದಲೋಕದಲ್ಲಿ ನಡೆದ ಲೋಕೋತ್ಸವ-2015 ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಜಾನಪದ ಪರಂಪರೆಯಲ್ಲಿಯೇ ಕಿರೀಟ ಪ್ರಾಯವೆನ್ನಿಸಿದ ಬಂಡುಕೋರ ಆಸಾದಿ ಕಾವ್ಯವನ್ನು ಮತ್ತು ತತ್ವಪದಗಳನ್ನು ಹಾಡುತ್ತಿದ್ದ ಜಾನಪದ ಕವಿ-ಗಾಯಕರ (ತಿಮ್ಮಯ್ಯ-ಚಿಕ್ಕಮ್ಮ) ಕುಟುಂಬದಲ್ಲಿ ಹುಟ್ಟಿದ ವಡ್ಡಗೆರೆ ಕದರಮ್ಮ ಮೂಲತಃ ತುಮಕೂರು ಜಿಲ್ಲೆಯವರು. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕು, ಹೊಳವನಹಳ್ಳಿ ಹೋಬಳಿಯ ಚಿಕ್ಕನಹಳ್ಳಿ ಗ್ರಾಮದ ಬಡ ದಲಿತ ಕುಟುಂಬದಲ್ಲಿ ಜಾನಪದ ಕವಿ-ಗಾಯಕರ ಮಗಳಾಗಿ ಹುಟ್ಟಿದ ಕದರಮ್ಮ ಹತ್ತು ವರ್ಷದ ಹುಡುಗಿಯಾಗಿರುವಾಗಲೇ, ಮೈನೆರೆಯುವ ಮುಂಚೆಯೇ ಬಾಲ್ಯವಿವಾಹವಾಗಿ, ಇದೇ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮದ ಮೇಲ್ಜಾತಿ ಭೂಮಾಲಕರ ಮನೆಯಲ್ಲಿಜೀತಗಾರನಾಗಿದ್ದ ಹನುಮಂತಯ್ಯ ಎಂಬ ಯುವಕನ ಕೈಹಿಡಿದು ವಡ್ಡಗೆರೆ ಗ್ರಾಮಕ್ಕೆ ಬಂದಾಗ ಕದರಮ್ಮನಲ್ಲಿದ್ದ ಜಾನಪದ ಪ್ರತಿಭೆಯನ್ನು ಗುರುತಿಸಿ ಪೋಷಿಸಿದ್ದು ಆಕೆಯ ಅತ್ತೆ ಸಣ್ಣಹನುಮಕ್ಕಜ್ಜಿ. ಸ್ವತಃ ಜಾನಪದ ಕವಯಿತ್ರಿ-ಗಾಯಕಿ-ಕಲಾವಿದೆಯಾಗಿದ್ದ ಸಣ್ಣಹನುಮಕಜ್ಜ್ಕಿ, ಕದರಮ್ಮನಿಗೆ ವ್ಯವಸಾಯದ ಕೆಲಸಗಳೊಂದಿಗೆ ನೂರಾರು ಜಾನಪದ ಹಾಡು, ಕಥೆ, ಪುರಾಣ, ಒಗಟು, ಲಾವಣಿ, ಸಾಂಪ್ರದಾಯಿಕ ಆಚರಣೆಗಳು ಮುಂತಾದವುಗಳನ್ನು ಕಲಿಸಿಕೊಟ್ಟರು. ಸಣ್ಣಹನುಮಕ್ಕಜ್ಜಿಯ ವಾರಿಗೆಯ ದಲಿತ ಜಾನಪದ ಗಾಯಕಿಯರಾಗಿದ್ದ ದಿ.ನರಸಕ್ಕಜ್ಜಿ, ದಿ.ಬುಡ್ಡಗದರಮ್ಮಜ್ಜಿ, ದಿ.ನಾಗಮ್ಮಜ್ಜಿ, ದಿ.ಕೆಂಪನಾಗಮ್ಮಜ್ಜಿ ಮುಂತಾದವರು ವಡ್ಡಗೆರೆ ನಾಗಮ್ಮನ ಕಾವ್ಯವನ್ನು ಹಾಡುವುದರಲ್ಲಿ ತುಂಬಾ ಹೆಸರುವಾಸಿಯಾಗಿದ್ದರು. ಅವರೆಲ್ಲರ ನೆರವಿನಿಂದ ವಡ್ಡಗೆರೆ ಕದರಮ್ಮ, ವಡ್ಡಗೆರೆ ನಾಗಮ್ಮನ ಕಾವ್ಯವನ್ನು ಸಲಿಲವಾಗಿ ಹಾಡುವುದನ್ನು ರೂಢಿಸಿಕೊಂಡರು. ವಡ್ಡಗೆರೆಯ ಗ್ರಾಮದೇವತೆ ವಡ್ಡಗೆರೆ ನಾಗಮ್ಮ.

ವಚನಕಾರ ಬಸವಣ್ಣನನ್ನು ಕುರಿತು ಅಮ್ಮ ವಡ್ಡಗೆರೆ ಕದರಮ್ಮ ಮತ್ತು ಅಕ್ಕನಾದ ವಡ್ಡಗೆರೆ ಮುದ್ದುನಾಗಮ್ಮ ಹಾಡಿರುವ ಜಾನಪದ ಗೀತೆ

ನಾಗಮ್ಮನ ಜೀವನದ ವೃತ್ತಾಂತವನ್ನು ಸಾರುವ ಈ ಕಾವ್ಯವು ಸುಮಾರು ಒಂಭೈನೂರು ವರ್ಷಗಳ ಪುರಾತನ ಚರಿತ್ರೆಯನ್ನು ಗರ್ಭೀಕರಿಸಿಕೊಂಡಿದೆ.ನಾಗಮ್ಮ ಎಂಬ ಏಳು ವರ್ಷದ ಎಳೆಪ್ರಾಯದ ಹೆಣ್ಣುಮಗಳೊಬ್ಬಳು ಮೈನೆರೆಯುವ ಮೊದಲೇ ವಡ್ಡಗೆರೆಯ ಸಿರಿವಂತರ ಮಗ ನಾಗಣ್ಣನನ್ನುಬಾಲ್ಯವಿವಾಹ ಮಾಡಿಕೊಂಡು ವಡ್ಡಗೆರೆಗೆ ಬಂದ. ಕೆಲ ದಿನಗಳಲ್ಲಿಯೇ ನಾಗಣ್ಣ ಯುದ್ಧಕ್ಕೆ ಹೋಗಿ ರಣರಂಗದಲ್ಲಿ ವೀರಮರಣವನ್ನಪ್ಪುತ್ತಾನೆ. ಬಾಲ ವಿಧವೆಯಾದ ನಾಗಮ್ಮ ತನ್ನ ಸತ್ತ ಗಂಡನೊಂದಿಗೆ ಚಿತೆಯೇರಿ ಪ್ರಾಣಾರ್ಪಣೆ ಮಾಡಿಕೊಂಡು ಮಹಾಸತಿ ವೀರನಾಗಮ್ಮ ಎಂದು ಕರೆಸಿಕೊಳ್ಳುತ್ತಾಳೆ. ಮಹಾಸತಿ ನಾಗಮ್ಮನ ಬದುಕಿನ ದುರಂತಮಯ ಮತ್ತು ಕರುಣಾಜನಕ ಕಥಾನಕವು ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮದ ಜನಪದ ದಲಿತ ಕವಯಿತ್ರಿಯರ ನಾಲಗೆ ಮೇಲೆ ಜಾನಪದ ಕಾವ್ಯವಾಗಿ ಓನಾಮ ಮಂತ್ರದಂತೆ ನೆಲೆಸುತ್ತದೆ. ಮಹಾಸತಿ ವೀರನಾಗಮ್ಮ ವಡ್ಡಗೆರೆಯ ಗ್ರಾಮದೇವತೆಯಾಗಿ ನೆಲೆಸುವ ಮೂಲಕ ಅನೇಕ ಪವಾಡಗಳನ್ನು ಮೆರೆಯುತ್ತಾಳೆ. ಸುಮಾರು ಒಂದು ಸಾವಿರ ವರ್ಷಗಳಷ್ಟು ಪುರಾತನವಾಗಿರುವ ವಡ್ಡಗೆರೆ ನಾಗಮ್ಮನ ಕಾವ್ಯವು ಆದಿಮ ಅಚ್ಚಗನ್ನಡ ಭಾಷಾಸೌಷ್ಠವತೆಯಲ್ಲಿ ಕರ್ನಾಟಕದ ತುಮಕೂರು ಜಿಲ್ಲೆ, ಚಿತ್ರದುರ್ಗ ಜಿಲ್ಲೆ, ನೆಲಮಂಗಲ ಸೀಮೆ, ದೊಡ್ಡಬಳ್ಳಾಪುರ ಸೀಮೆ, ಆಂದ್ರಪ್ರದೇಶದ ಅನಂತಪುರ ಜಿಲ್ಲೆ, ತಮಿಳುನಾಡಿನ ಕೊಯಮತ್ತೂರು ಸೀಮೆ ಮುಂತಾದ ಪ್ರದೇಶಗಳಲ್ಲಿ ಇಂದಿಗೂ ನರದ ರಕ್ತದಂತೆ ಜನಪದ ಕವಿಗಳ ನಾಲಗೆ ಮೇಲೆ ಹರಿದಾಡುತ್ತಿದೆ. ಕುಂಚಿಟಿಗ ಜನಾಂಗದ ಕುಲಚರಿತ್ರೆಯನ್ನು ಸಾರುವ ವಡ್ಡಗೆರೆ ನಾಗಮ್ಮನ ಕಾವ್ಯವನ್ನು ವಡ್ಡಗೆರೆಯ ಜನಪದ ದಲಿತ ಕವಯಿತ್ರಿಯರು ಹರಕೆ ಹೊತ್ತ ಭಕ್ತರ ಮನೆಗಳಿಗೆ ಹೋಗಿ ಹಾಡಿಬರುವ ಕಾಯಕವನ್ನು ನೂರಾರು ವರ್ಷಗಳಿಂದ ಮುಂದುವರಿಸಿಕೊಂಡು ಬಂದಿದ್ದಾರೆ.

ಈ ಕವಿ-ಗಾಯಕರ ಪೈಕಿ ವಡ್ಡಗೆರೆ ಕದರಮ್ಮನವರಿಗೆ ಪ್ರಧಾನ ಸ್ಥಾನವಿದೆ.ಜಾನಪದ ಕುರಿತ ಇವರ ಅರಿವು ಮತ್ತು ಅಮೂಲ್ಯ ಮಾಹಿತಿಗಳನ್ನು ನಾಡಿನ ಅನೇಕ ಸಂಶೋಧಕರು ತಮ್ಮ ಗ್ರಂಥಗಳಲ್ಲಿ ಬಳಸಿಕೊಂಡಿದ್ದಾರೆ. ಅನೇಕ ಸಂಶೋಧಕರು ಪಿಎಚ್ಡಿ ಪದವಿಗಳನ್ನೂ ಪಡೆದುಕೊಂಡಿದ್ದಾರೆ. ಅಂತಹ ಕೆಲವು ಗ್ರಂಥಗಳಲ್ಲಿ ವಡ್ಡಗೆರೆ ಗ್ರಾಮದ ನಿವೃತ್ತ ಐ.ಎ.ಎಸ್. ಅಧಿಕಾರಿ ವಿ.ಡಿ.ವೀರಕ್ಯಾತಯ್ಯ ಬರೆದಿರುವ ಕುಂಚಿಟಿಗರ ಜನಾಂಗ, ಇತಿಹಾಸ ಹಾಗೂ ಸಂಪ್ರದಾಯಗಳು(1994), ಎಂ.ವೀರಕ್ಯಾತಯ್ಯ ಬರೆದಿರುವ ವಿಜಯೀ ವೀರಕೇತುರಾಯ (ನಾಟಕ 1999), ಎಂ.ಹೆಚ್. ನಾಗರಾಜು ಅವರ ಸಂಶೋಧನಾ ಕೃತಿ ಕುಂಚಿಟಿಗರ ಸಾಂಸ್ಕೃತಿಕ ಇತಿಹಾಸ(2003), ಡಾ.ರಾಜಣ್ಣ ಹುಣಿಸೇಪಾಳ್ಯ ಅವರಮಹಾಸತಿ ಶಿವಶರಣೆ ವೀರನಾಗಮ್ಮದೇವಿ(1996), ಡಾ.ಓ.ನಾಗರಾಜು ಅವರ ಪಿಎಚ್.ಡಿ ಸಂಶೋಧನಾ ಪ್ರಬಂಧ ತುಮಕೂರು ಜಿಲ್ಲೆಯ ಗ್ರಾಮದೇವತೆಗಳು: ಒಂದು ಅಧ್ಯಯನ(2007) ಹಾಗೂ ವಡ್ಡಗೆರೆ ನಾಗರಾಜಯ್ಯ ಸಂಪಾದಿಸಿರುವ ವಡ್ಡಗೆರೆ ನಾಗಮ್ಮ: ಮಹಾಸತಿ ಕಾವ್ಯ(2010) ಮುಂತಾದ ಕೃತಿಗಳು ಪ್ರಮುಖವಾಗಿವೆ. ವಡ್ಡಗೆರೆನಾಗಮ್ಮ: ಮಹಾಸತಿ ಕಾವ್ಯವನ್ನು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯವು 2015-16ನೆ ಇಸವಿಯಿಂದ ಜಾರಿಗೆ ಬರುವಂತೆ ಅಂತಿಮ ವರ್ಷದಲ್ಲಿ ಎಂ.ಎ ಪದವಿ ವ್ಯಾಸಂಗಮಾಡುತ್ತಿರುವ ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವನ್ನಾಗಿ ಅಂಗೀಕರಿಸಿದೆ. ಇದರ ಜೊತೆಗೆ ವಡ್ಡಗೆರೆ ಕದರಮ್ಮ ಅವರು ರಿಯಲ್ ಚಾಲೆಂಜರ್ಸ್ ಟೀಮ್ಗಾಗಿ ಈಶ್ವರ್ ಗುಬ್ಬಿ ನಿರ್ದೇಶಿಸಿ, ಶ್ರೀ ರಾಘವ್ ನಿರ್ಮಿಸಿರುವ ‘‘ಮುಗ್ಧ’’ ಸಾಕ್ಷಚಿತ್ರದಲ್ಲಿ ಮುಗ್ದ ಯುವಕನೊಬ್ಬನ ತಾಯಿಯ ಪಾತ್ರದಲ್ಲಿಯೂ ಅಭಿನಯಿಸಿದ್ದಾರೆ. ತುಮಕೂರು ಜಿಲ್ಲೆಯ ದಲಿತ ಕವಿ-ಚಿಂತಕ ಹಾಗೂ ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯರಾಗಿರುವ ವಡ್ಡಗೆರೆ ನಾಗರಾಜಯ್ಯ ಇದೇ ಕದರಮ್ಮನವರ ಮಗನಾಗಿ ನಾಡಿನಲ್ಲಿ ಹೆಸರಾಗಿದ್ದಾರೆ. ಪ್ರಸ್ತುತ ಜಾನಪದ ಗಾಯಕಿಯರಾದ ವಡ್ಡಗೆರೆ ಕದರಮ್ಮ(75) ಹಾಗೂ ವಡ್ಡಗೆರೆ ಮುದ್ದನಾಗಮ್ಮ(72) ಈ ಕಥಾಕಾವ್ಯವನ್ನು ಮೂಲಧಾಟಿಯಲ್ಲಿ ನಿರೂಪಿಸುವ ಅಸಲಿ ಕವಯಿತ್ರಿ-ಕಲಾವಿದರಾಗಿದ್ದಾರೆ. ವಡ್ಡಗೆರೆ ನಾಗಮ್ಮನ ಪದಗಳು, ಗಂಗೆ-ಗೌರಿ ಕಾವ್ಯ, ಬಿಲ್ಲಾಳರಾಯ-ಗೊಲ್ಲಾಳರಾಯನ ಪದ, ಬೆಟ್ಟದಮದ್ದೆಮ್ಮನ ಪದ, ಗುಣಸಾಗರಿ ಕಾವ್ಯ, ಕರಿಭಂಟನ ಪದ, ತತ್ವಪದ, ಆಂಜನೇಯನ ಪದ, ಚಂದ್ರಮನ ಪದ, ಜಾಂಬವರ ಪದ, ಮಾರಮ್ಮನ ಪದ, ಕರಿಯಮ್ಮನ ಪದ, ಆದಿಜಾಂಬವ ಪುರಾಣ, ಹೊಸಗೆ ಪದ, ಮದುವೆ-ಸೋಬಾನೆ ಪದಗಳು, ಹಸೆ ಪದಗಳು, ಸುಗ್ಗಿ ಪದಗಳು, ಲಾಲಿ ಹಾಡುಗಳು, ಗಂಗಭಾರತ ಕಾವ್ಯ ಮುಂತಾದ ಅನೇಕ ಜಾನಪದ ಹಾಡುಗಬ್ಬಗಳನ್ನು ಹಾಡುವಲ್ಲಿ ಸುತ್ತಮುತ್ತಲ ಊರುಗಳಲ್ಲಿ ಹೆಸರಾಗಿದ್ದಾರೆ. ಎರಡು ವರ್ಷಗಳ ಹಿಂದೆ ಕೆಂಪನಾಗಮ್ಮಜ್ಜಿ ಎಂಬ ಮುಖ್ಯ ಕಲಾವಿದೆಯು ನಿಧನರಾದ ಬಳಿಕ, ವಡ್ಡಗೆರೆ ಕದರಮ್ಮನವರು ಮುಮ್ಮೇಳದ ಮುಖ್ಯ ಕವಯಿತ್ರಿ-ಹಾಡುಗಾರ್ತಿಯಾಗಿ ತನ್ನ ತಂಡವನ್ನು ಮುನ್ನಡೆಸುವುದರೊಂದಿಗೆ ಹೊಸ ತಲೆಮಾರಿನವರಿಗೆ ಜಾನಪದ ಹಾಡುಗಳನ್ನು ಕಲಿಸಿಕೊಡುತ್ತಿದ್ದಾರೆ. ಪ್ರಸ್ತುತ ವಡ್ಡಗೆರೆ ಗ್ರಾಮದಲ್ಲಿ ಜಾನಪದ ಕವಯಿತ್ರಿ-ಗಾಯಕಿಯರಾದ ವಡ್ಡಗೆರೆ ಕದರಮ್ಮ, ವಡ್ಡಗೆರೆ ಮುದ್ದನಾಗಮ್ಮ, ಲಕ್ಷ್ಮಮ್ಮ ಮತ್ತು ಸಂಜೀವಮ್ಮ ಇವರು ಜಾನಪದ ವಕ್ತಾರರಾಗಿ ವಡ್ಡಗೆರೆ ಗ್ರಾಮ ಮತ್ತು ಸುತ್ತಮುತ್ತಲ ಹಳ್ಳಿಗಳಲ್ಲಿ ಜಾನಪದ ಹಾಡುಗಳನ್ನು ಹಾಡುತ್ತಾ ಮೂಲ ಜಾನಪದ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ.

ವಡ್ಡಗೆರೆ ಕದರಮ್ಮನವರ ನೇತೃತ್ವದಲ್ಲಿ ಈ ಕಲಾವಿದರು ತುಮಕೂರು ನಗರದ ಸರಸ್ವತಿಪುರಂನಲ್ಲಿ ದಿನಾಂಕ 30.11.2014ರಂದು, ರಂಗರಂಗ ಕಲಾಕೇಂದ್ರದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಹಾಡಿರಿ ರಾಗಗಳ…. ಎಂಬ ವಿಶಿಷ್ಟ ಜಾನಪದ ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ದಿನಾಂಕ 05.01.2015ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಶಿರಾ ತಾಲೂಕು ಗಡಿನಾಡ ಸಂಪರ್ಕಾಧ್ಯಯನ ಕೇಂದ್ರದ ಸಹಯೋಗದಲ್ಲಿ ಏರ್ಪಡಿಸಿದ್ದ ಗ್ರಾಮ ಸಂಸ್ಕೃತಿ ಉತ್ಸವ ಸುಗ್ಗಿ-ಹುಗ್ಗಿ ಉತ್ಸವದಲ್ಲಿ ಜಾನಪದ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ದಿನಾಂಕ: 08-02-2015 ರಂದು ನಾಡಿನಲ್ಲಿಯೇ ಪ್ರಖ್ಯಾತವಾಗಿರುವ ಜಾನಪದ ಲೋಕದಲ್ಲಿ ನಡೆಯುತ್ತಿರುವ ‘ಜಾನಪದ ಲೋಕೋತ್ಸವ’ದಲ್ಲಿ ಮಹಾಸತಿ ವಡ್ಡಗೆರೆ ನಾಗಮ್ಮನ ಕಾವ್ಯದ ಆಯ್ದ ಭಾಗವನ್ನು ಮಂಡಿಸಿದರು.

 

-ಲೇಖಕರು : ಡಾ. ಬಗ್ಗನಡು ನಾಗಭೂಷಣ

Continue Reading
Advertisement

Trending