Connect with us

ನೆಲದನಿ

ಧೀರ ಟೀಪುವಿನ ಲಾವಣಿಗಳು

Published

on

ಶ್ರೀ ಗುರುದಾಸ ನಂಜಣ್ಣ ಸುತ ನೀಲಕಂಠ ಅವರು ರಚಿಸಿರುವ ಟಿಪ್ಪುಸುಲ್ತಾನ್-ಲಾವಣಿಯ ಆಯ್ದ ಭಾಗಗಳು ಇಲ್ಲಿವೆ.

ಪುಸ್ತಕ : ಧೀರ ಟೀಪುವಿನ ಲಾವಣಿಗಳು
ಸಂಪಾದನೆ : ಲಿಂಗದೇವರು ಹಳೆಮನೆ

ಹೈದರ ಆಲಿಯು ಅರಿತವನಲ್ಲವು ಓದು ಬರಹವೆಂತೆಂಬುದನು|
ಆದರು ಖಚಿತದಿ ಕನ್ನಡ ಭಾಷೆಯೊಳು ಮಾತನಾಡುವುದನು ಅರಿತಿದ್ದನು||

ಮೋದದಿ ವೈರಿಗಳ ಮರ್ದಿಸಿ ಮೈಸೂರ ಧ್ವಜ ಮೆರೆಸಿದ್ದನು|
ಈ ಧರೆಯಿಂದಲಿ ಕಣ್ಮರೆಯಾದನು ಕನ್ನಡದ ಗಂಡುಗಲಿ ಎಂದೆನಿಸಿದವನು||

ಧಾಟಿ :ಉರ್ಡಾ
ಅಪ್ಪ ಕಟ್ಟಿದ ಮೈಸೂರ ದೇಶ ದೊಡ್ಡದಿತ್ತಲ್ಲಾ|
ಡೀಪುವಿನ ಕಾಲದೊಳು ಇನ್ನು ವಿಸ್ತರಿಸಿತಲ್ಲಾ||

ತಪ್ಪವನ್ನೇ ತಂದರು ಇಷ್ಟಾದರು ಬಿಡಲಿಲ್ಲಾ|
ಬೆಪ್ಪಾದರು ಅರಿಗಳು ಕೇಳಿ ಟೀಪು ಜಯಿಸೊಲ್ಲಾ||

ಧಾಟಿ:ಗುಲ್ಲಾರ್ಡು
ಹೈದರನ ಬಳಿಕ ಟೀಪುಸುಲ್ತಾನ|
ಬೆದರಿಸಿದ ಗದಗದ ಹಿಂದುಸ್ತಾನ||

ಪದವಿಯೊ ಮೈಸೂರಿನ ಸುಲ್ತಾನ|
ಕದನದಿ ಮಂಗ್ಳೂರ್ ಹಿಡಿದನು ಕೈವಶ ಬೆದರಿತು ಲಂಡನ್||

ಶ್ಲೋಕ :ಅರವು ಆಂದ್ರ ಶುರುವಿಗಿಡಿದನು ಪೌರುಶದಿ ಕೊಯಮತ್ತೂರನು|

ನಿರುತ ಲೂಟಿಯ ಹೊಡೆಯುತಲಿದ್ದನು ನೀಲಗಿರಿ ಮಲೆನಾಡನು
ಪೌರುಶದಿ ಮಲಬಾರನು||

ಧಾಟಿ:ಚಾಲ್
ಮೈಸೂರ ಷಾಜಾನನ ಘರ್ಜನೆ ಕೇಳಿ ಲಂಡನ್ ಪಳುಗಳು ಬೆದರೋಯ್ತು|
ಮಸಲತ್ ಮಾಡಿದ ಮೀರ್ಸಾದಿಕನಿಗೆ ದೇಶದ್ರೋಹಿ ಎಂಬ್ಹೆಸಾರಾಯ್ತು||

ಆಟಾಟೋಪದಿ ಟೀಪು ಸುಲ್ತಾನನು ಆರ್ಕಾಟ್ ಲೂಟಿಯ ಮಾಡಿದನು|
ಏಟೇಟಿನ ಮೇಲ್ ಉಲ್ಟಾ ಫಿರಂಗಿಯ ಕೋಠಿಗಳೆಷ್ಟೂ ಲೂಟಿದನು||

ನಟನೆಯ ನೈಜಾಂ ಮರಾಠಿ ಪೇಶ್ವೆಯ ಪಟಾಲಮ್ಮ ದಿಟ್ಟ ಗೆದ್ದಿದನು|
ಬ್ರಿಟಿಷ್ ಜನಾಂಗದ ಈಷ್ಟ ಇಂಡಿಯಾ ಕಂಪೆನಿ ಲಾಷ್ಟಿಗೆ ಮಾಡಿದನು||

ಕೋಟಲೆ ಹತ್ತಿದ ಬ್ರಿಟಿಷ್ ವರ್ತಕರು ಕೂಟ ಗೈದರು ಮಸಲತ್ತನ್ನು|
ಲೂಟಿಯನೊಡೆಯಲು ಶ್ರೀರಂಗಪಟ್ಣಕೆ ಜನರಲ್ ಹ್ಯಾರಿಸ್ ಬಂದಿದ್ದನು||

ಮಿಟ ಮಿಟ ಕಣ್ ಬಿಡುತ್ತಿದ ಮರಾಠಿ ಸಪೋಟಾಗಿ ಸೈನ್ಯ ತಂದಿದ್ದನು|
ಕಟಕಟ ಹಲ್ ಕಡಿಯುತ್ತ ನಿಜಾಮನು ತಟಕ್ಕನೆ ಖಳ ಹೊಕ್ಕಿದನು||

ಧಾಟಿ: ದೊಡ್ಡುರ್ಡಾ
ಮೀರ ಕಮರುರ್ದೀ ರ್ಖಾ ಸೇನಾಪತಿ ಸೋತನು ಈರೋಡ ಬಳಿಯಲಿ|
ಬಾರೋದ್ದೀನನ ಬಲವೆಲ್ಲಾ ಮಡಿದಿತು ಕೂಗಳತೆಯ ಮಳವಳ್ಳಿಯಲಿ||

ಫಿರಂಗಿ ದಳಪತಿ ಮಾನ್ಶಿಯರ ಲಾಲಿಯು ಮೂರ್ಛೆ ಬಿದ್ದನು ರಣದಲ್ಲಿ|
ಮೀರಸಾಧಕನ ದ್ರೋಹದಿ ಸತ್ತನು ಸೈಯ್ಯದ ಗಪೂರ ಗುಂಡೇಟಿನಲಿ||

ಧಾಟಿ: ಉರ್ಡಾ
ಘಡಘಡಲ್ ಗುಂಡೊಡೆದರು ಕೋಟೆಗೆ|
ಗಡಿಬಿಡಿಯು ಹತ್ತಿತ್ತು ಶ್ರೀರಂಗಪಟ್ಣದೊಳಗೆ||

ಕಡುದ್ರೋಹಿಗಳಾಟ ಮದ್ದಿನ ಮನೆ ಉರಿದೋಗೆ|
ಇಡಿಸಿದ್ದ ಫಿರಂಗಿಯು ಇಳಿದೋಯ್ತು ಮಣ್ಣೊಳಗೆ||

ಧಾಟಿ:ಗುಲ್ಲುರ್ಡಾ
ವಂಚಕರ ಮಿಂಚಿನಾಟ ಬಳ್ಳಿ|
ಸಂಚರಿಸಿ ಹೊಂಚಲಾಗಿತ್ತು||

ಶ್ಲೋಕ:
ಮೀರಸಾಧಕನಾಟ ಇಂಪಿನಾಟಕವೆ ಆಗಿದ್ದಿತು|
ದಾರಿ ತೋರಿತು ವೈರಿ ಜನರಿಗೆ ಭಾರೀ ಕಷ್ಟವೇ ತಪ್ಪಿತು||

ಧಾಟಿ: ಚಾಲ್
ಖಾಸಾ ದಂಡಿನ ಶ್ರೇಷ್ಠ ಮುಖಂಡರ ಮೋಸವು ಸುಲ್ತಾನರಿಗೆ ಅರಿವಾಯ್ತು|
ಮಸಲತ್ ಮಾಡಿದ ಮೀರಸಾಧಕನಿಗೆ ದೇಶದ್ರೋಹಿ ಎಂಬ್ಹೆಸರಾಯ್ತು||

ಹರಾಮ ಖೋರರ ಕರಾಮತ್ ಅರಿತನು ಟೀಪು ಸುಲ್ತಾನನು ನಿಮಿಷದಲಿ|
ಅರೇ ಹಮಾರೇ ನಮಖ್ಹರಾಮ ಕರೇಸೋ ತಾಯೆಂದ ಮನಸ್ಸಿನಲಿ||

ಸ್ವರಾಜ್ಯ ರಕ್ಷಣೆಗೋಸ್ಕರ ಸುಲ್ತಾನ ರಣಾಗ್ರ ಹೊರಟನು ರೋಷದಲಿ|
ಫರಂಗಿ ಸೋಲ್ಜರ ತರಂಗ ಮಧ್ಯದಿ ತುರಂಗ ಬಿಟ್ಟನು ತ್ವರಿತದಲಿ||

ಪರಂಪರೆಯಿಂಪರ ವಿರೋಧಿ ಪೋಜನು ಕುರಿಗಳಂದದಿ ಖಡ್ಗದಲಿ|
ಸರಾಸರಿಯಿಲ್ ಬರೆಯಲು ಸಿಗದು ತರಿದನೆಷ್ಟೋ ಶಿರವನಲ್ಲಿ||

ಪರಾಕ್ರಮದಿ ಬಲು ಹೋರಾಡಿ ಬಿದ್ದನು ಸಾರಂಗ ಬಾಗಿಲ ಗವಿಯ ಬಳಿ|
ಫರಂಗಿ ಪೋಜಿನ ತರಂಗ ನುಗ್ಗಿತು ಶ್ರೀರಂಗನ ಧಾಮನ ಪಟ್ಣದಲಿ||

ಧಾಟಿ:ದೊಡ್ಡುರ್ಡಾ
ಟೀಪುಸುಲ್ತಾನನ ಹದಿನೇಳು ವರುಷದ ಆಡಳಿತ ಕೊನೆಯಾಯ್ತು|
ಟೀಪು ರಾಜ್ಯದೊಳು ಶರಾಬು, ಶೇಂದಿ, ಗಾಂಜಾ ಆಫೀಮು ಇರಲಿಲ್ಲ||

ಟೀಪುವಿನ ಕಾಲದೊಳು ಜೂಜುನಾಟ ಮೇಣ್ ವ್ಯಭಿಚಾರದ ಸುಳಿವಿಲ್ಲ|
ಜ್ಞಾಪಕವಿದ್ದಿತು ಸಬ್ಬಲ್ ರಾಣಿಯ ದಿಣ್ಣೆಯ ಭಿತಿಯು ಜನಕೆಲ್ಲಾ||

ಧಾಟಿ: ಉರ್ಡಾ
ಹುಲಿ ಸೀಳಿದ ದೊರೆ ಅಳಿದೋದ ಮೇಲೆ ರಣದಲ್ಲಿ|
ಮಳೆಯಾಯಿತು ಗಳಿಗೇಲಿ ಪ್ರಳಯದಂತೆ ಭರದಲ್ಲಿ||

ಸುಲಿಗೆಯಾ ಮಾಡಿದರು ಶತ್ರುಜನರು ಪುರದಲ್ಲಿ|
ಬಳಿಕಾದ ವಿವರ ಬರೆದೇನು ಫಲವಿಲ್ಲಿ||

ಧಾಟಿ:ಗುಲ್ಲುರ್ಡಾ
ಬಂದವರಿಗೆಲ್ಲಾ ತಿಂದು ತೇಗೆ|
ಹಿಂದಿನ ರಾಜರ ಸಂತತೀಗೆ||

ಮುಂದಿನೊಳು ಮುಮ್ಮಡಿ ಕೃಷ್ಣರಾಜರೀಗೆ|
ಸಂದಿತು ರಾಜ್ಯವು ಸಾವಿರದೇಳ್ನೂರ ತೊಂಭತ್ರೊಂಭತ್ರೊಳಗೆ||

ಶ್ಲೋಕ:
ರಾಜಧಾನಿ ಮೈಸೂರ ಪಟ್ಣ ಮಾದರಿ ನವ ರೀತಿಯಲ್ಲಿ|
ಸೋಜಿಗದಿ ರಾಜಿಪುದು ಶ್ರೀ ಚಾಮುಂಡೇಶ್ವರಿ ಕೃಪೆಯಲ್ಲಿ||

ಶೇಷನ ಗಿರಿಹರಿದಾಸ ಪುಟ್ಟಣ್ಣನ ಲೇಸಿನ ಕರುಣವು ನಮಗಾಯ್ತು|
ಪೋಷಿಪ ಶ್ರೀ ಗುರು ದಾಸ ನಂಜಣ್ಣನ ಸುತ ನೀಲ್ಕಂಠನ ಪದವಾಯ್ತು||

ಶ್ರೀ ಗುರುದಾಸ ನಂಜಣ್ಣ ಸುತ ನೀಲಕಂಠ

ನೆಲದನಿ

‘ಬುರ್ರವೀಣಾ’ ವಾದ್ಯ ಸಂಗೀತ ಕಲಾಪ್ರಕಾರದ ಅಪ್ರತಿಮ ಕಲಾವಿದ ದಾಸರಿ ಕೊಂಡಪ್ಪ..!

Published

on

ಪ್ರೀತಿಯ ಬಂಧುಗಳೇ..,

ಬುರ್ರವೀಣಾ ವಾದ್ಯ ಸಂಗೀತದ ಈ ವಿಡಿಯೋವನ್ನು ತಪ್ಪದೇ ನೋಡಿ. ಜಾನಪದ ವಾದ್ಯ ಸಂಗೀತ ಮತ್ತು ಸಿರಿಕಂಠದ ಹಾಡುಗಾರಿಕೆಯನ್ನು ಆಲಿಸಬೇಕಾಗಿ ತಮ್ಮನ್ನು ಕೋರುತ್ತೇನೆ.

ಮಾಲದಾಸರಿ ಎಂಬ ಅಲೆಮಾರಿ ಬುಡಕಟ್ಟು ಜನಾಂಗಕ್ಕೆ ಸೇರಿದ ಬುರ್ರವೀಣಾ ವಾದ್ಯ ಸಂಗೀತ ಕಲಾಪ್ರಕಾರದ ಅಪ್ರತಿಮ ಕಲಾವಿದ ದಾಸರಿ ಕೊಂಡಪ್ಪ. ಬುರ್ರವೀಣೆಯನ್ನು ಭೂಮಿವೀಣೆ ಎಂಬ ಮತ್ತೊಂದು ಹೆಸರಿನಿಂದಲೂ ಕರೆಯಲಾಗುತ್ತದೆ. ಆಂಧ್ರಪ್ರದೇಶದ ತೆಂಗಾಣಕ್ಕೆ ಸೇರಿದ ದಾಸರಿ ಕೊಂಡಪ್ಪ ಎಂಬ ಈ ಕಲಾವಿದ ಬುರ್ರವೀಣಾ ವಾದ್ಯ ಸಂಗೀತ ಕಲಾಪ್ರಕಾರದ ಕೊನೆಯ ಕೊಂಡಿ.

ಮಾಲದಾಸರಿ ಅಥವಾ ಹೊಲಯದಾಸರಿ ಎಂಬುವ ಅಲೆಮಾರಿ ಸಮುದಾಯದವರು ತಮ್ಮನ್ನು, ಅಸ್ಪೃಶ್ಯತೆಯ ಸಾಮಾಜಿಕ ಶೋಷಣೆಗೆ ಗುರಿಯಾಗಿರುವ ಸಮಾಜದ ಮುಖ್ಯವಾಹಿನಿಯ ಹೊಲಯ (ಛಲವಾದಿ) ಸಮುದಾಯದ ಉಪ ಜಾತಿಯಾಗಿಯೂ, ಹೊಲಯರ ಹಳೆಮಕ್ಕಳಾಗಿಯೂ ಗುರುತಿಸಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ನಗರಗೆರೆ ಮತ್ತು ನಂಜಯ್ಯಗಾರ್ಲಪಲ್ಲಿ ಗ್ರಾಮಗಳಲ್ಲಿ… ಸೀಮಾಂಧ್ರದ ಗಡಿ ಭಾಗದಲ್ಲಿ ಮಾಲದಾಸರಿಯವರು ಚದುರಿದಂತೆ ನೆಲೆಸಿದ್ದಾರೆ.

ಇಂದಿಗೂ ಇಂತಹ ಜಾನಪದ ಕಲೆಗಳು ಉಳಿದಿರುವುದು ಸಮಾಜದ ಅಂಚಿನಲ್ಲಿರುವ ದಾಸರಿ ಕೊಂಡಪ್ಪನಂತಹ ಅನಕ್ಷರಸ್ತ ಕಲಾವಿದರಲ್ಲಿಯೇ ಅನ್ನಿಸುತ್ತಿದೆ. ಹರಿದಾಸ ಕವಿಗಳ ಕೀರ್ತನೆಗಳನ್ನು ಯಾವುದೇ ಹೊತ್ತಿಗೆಗಳ ನೆರವಿಲ್ಲದೆ ಸುಶ್ರಾವ್ಯವಾಗಿ ಹಾಡುವ ಇಂತಹ ಅಪರೂಪದ ಕೊಂಡಿಗಳು ಕಳಚಿ ಬಿದ್ದು ಮಣ್ಣಿನ ಪದರದಲ್ಲಿ ಮರೆಯಾದವೆಂದರೆ ಅವರು ತಲೆಮಾರುಗಳಿಂದ ಪೋಷಿಸಿಕೊಂಡು ಬಂದ ಕಲೆಗಳೂ ಕಾಲದ ಪರದೆಯ ಹಿಂದೆ ಕಾಣದಂತೆ ಮರೆಯಾಗಿ ಹೋಗಿಬಿಡುತ್ತವೆ,

ಪ್ರೀತಿಯ ಬಂಧುಗಳೇ.., ಬುರ್ರವೀಣಾ ವಾದ್ಯ ಸಂಗೀತದ ಈ ವಿಡಿಯೋವನ್ನು ತಪ್ಪದೇ ನೋಡಿ … ಜಾನಪದ ವಾದ್ಯ ಸಂಗೀತ ಮತ್ತು ಸಿರಿಕಂಠದ…

Posted by Vaddagere Nagarajaiah on Wednesday, 10 July 2019

-ಡಾ.ವಡ್ಡಗೆರೆ ನಾಗರಾಜಯ್ಯ
8722724174

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ನೆಲದನಿ

ಮಾನವ ಜೀವ ವಿಕಾಸದ ಮಹಾ ಪ್ರಾಗ್ಕಥನ

Published

on

ಭಾರತದ ಪ್ರಸಿದ್ಧ ಭೌತವಾದಿ ಚಿಂತಕ – ‘ಮಹಾಪಂಡಿತ’ ರಾಹುಲ ಸಾಂಕೃತ್ಯಾಯನ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಬರೆದಿರುವ ‘ವೋಲ್ಗಾ ಗಂಗಾ’ (1942) ಕೃತಿಯನ್ನು ಪರಿಚಯಿಸುತ್ತಿದ್ದೇನೆ.

ಕ್ರಿ.ಪೂ 6000 ದಿಂದ ಕ್ರಿ.ಶ.1942 ರ ತನಕ ಮಾನವ ಸಮಾಜದ ಐತಿಹಾಸಿಕ, ಆರ್ಥಿಕ, ರಾಜನೈತಿಕ‌ ಪ್ರವಾಹಗಳ 20 ಕಥಾರೂಪದ ಚಿತ್ರಣವಾಗಿರುವ ಈ ಕೃತಿ, ಮಾನವ ಸಮಾಜವು ಜೀವವಿಕಾಸಗೊಂಡ ಸಂಘರ್ಷಗಳನ್ನು ಸೈದ್ಧಾಂತಿಕವಾಗಿ ವಿಶ್ಲೇಷಿಸಿರುವ ಅತ್ಯಂತ ಮಹತ್ವದ ಕೃತಿಯಾಗಿರುತ್ತದೆ. ಹಿಂದಿಯಿಂದ ಈ ಕೃತಿಯನ್ನು ಕನ್ನಡಕ್ಕೆ ಬಿ.ಎಂ.ಶರ್ಮಾ ಅನುವಾದಿಸಿಕೊಟ್ಟು ಕನ್ನಡ ಓದುಗರಿಗೆ ಬಲು ಅನುಕೂಲ ಮಾಡಿದ್ದಾರೆ.

ಮಾನವನ ಜೀವ ವಿಕಾಸದ ಕುರಿತಾಗಿ ಚಾರ್ಲ್ಸ್ ಡಾರ್ವಿನ್ The origin of species and the evolution of man (1859) ಕೃತಿಯ ಪ್ರಕಟಣೆಯೊಂದಿಗೆ ದೈವನಿಯಾಮಕವೆನ್ನಲಾದ ಮಾನವ ಸೃಷ್ಟಿಯ ಕುರಿತ ಪುರಾಣ ಕಥಾನಕಗಳು ವಿಜ್ಞಾನದ ಹೊಸ ಶೋಧದ ಬೆಳಕಿನಲ್ಲಿ ಪ್ರಶ್ನಿಸಲ್ಪಟ್ಟವು. ಇದೇ ಪ್ರಶ್ನಾತರ್ಕ ಭೂಮಿಕೆಯೇ ‘ವೋಲ್ಗಾ ಗಂಗಾ’ ಕೃತಿಯ ಹುಟ್ಟುವಳಿಗೆ ಕಾರಣವಾಗಿದೆ.
ಮಾನವ ಸಮಾಜದ ವಿಕಾಸವನ್ನು ವೈಜ್ಞಾನಿಕವಾಗಿ ಮತ್ತು ಸೈದ್ಧಾಂತಿಕವಾಗಿ ತಿಳಿಸುವ ಉದ್ದೇಶ ತಾಳಿದ ರಾಹುಲ ಸಾಂಕೃತ್ಯಾಯನ ಹಿಂದೀ – ಐರೋಪ್ಯ ಜನಾಂಗಗಳನ್ನೇ ವಸ್ತುವಾಗಿರಿಸಿಕೊಂಡು ಕಥನ ರೂಪದಲ್ಲಿ ಪ್ರಾಗೈತಿಹಾಸಿಕ, ಸಮಾಜೋಆರ್ಥಿಕ, ಧರ್ಮ ಮತ್ತು ರಾಜನೀತಿ ಮುಂತಾದ ಸಂಗತಿಗಳನ್ನು ವಿವೇಚಿಸಿದ್ದಾರೆ. ಹಾಗಾಗಿ ‘ವೋಲ್ಗಾ ಗಂಗಾ’ ಕೃತಿಯು “A narration of the historical, economic and political stream of human society from 6000 BC to 1942 AD in the form of stories”.ರಾಹುಲ ಸಾಂಕೃತ್ಯಾಯನರೇ ಹೇಳುವಂತೆ ಭಾರತೀಯರಿಗಿಂತಲೂ ಮಿಶ್ರೀ, ಸುರಿಯಾನೀ ಮುಂತಾದ ಕೆಲವು ಜನಾಂಗಗಳು ಸಹಸ್ರಾರು ಶತಮಾನಗಳ ಮೊದಲೇ ಮಾನವ ಜೀವವಿಕಾಸದ ದಾರಿಯಲ್ಲಿ ಮೊದಲಿಗರಾಗಿದ್ದಾರೆ.

ಬ್ರಾಹ್ಮಣರು ಬ್ರಹ್ಮನ ತಲೆಯಿಂದಲೂ ಕ್ಷತ್ರಿಯರು ಭುಜಗಳಿಂದಲೂ ವೈಶ್ಯರು ತೊಡೆಗಳಿಂದಲೂ ಶೂದ್ರರು ಪಾದಗಳಿಂದಲೂ ಹುಟ್ಟಿದರೆಂಬ ಅವೈಜ್ಞಾನಿಕ ಸೃಷ್ಟಿ ಪುರಾಣ ಸೃಷ್ಟಿಸಿರುವ ಗೊಡ್ಡು ಸನಾತವಾದಿಗಳ ಎಲ್ಲಾ ವಾದ ವಿತಂಡವಾದ – ತರ್ಕ ಕುತರ್ಕಗಳನ್ನು ಒಂದರ್ಥದಲ್ಲಿ ಈ ಕೃತಿ ಸುಟ್ಟು ಬೂದಿಮಾಡಿತು. ಆದರೂ ಭಾರತವನ್ನು ಸದಾ ಮೌಢ್ಯದಲ್ಲಿರಿಸಿ ಪರೋಪಜೀವನ ಸಾಗಿಸುವ ಠಕ್ಕ ಪುರೋಹಿತ ವರ್ಗದವರು ತಮ್ಮ ಗೊಡ್ಡು ಪುರಾಣಗಳನ್ನು ಬಿತ್ತರಿಸುತ್ತಲೇ ಬಂದಿದ್ದಾರೆ. ರಾಹುಲ ಸಾಂಕೃತ್ಯಾಯನ ಹೇಳುವಂತೆ ಸನಾತನವಾದಿಗಳ ನಿಂದನಾ ರೂಪದ ವಿತಂಡವಾದವನ್ನು ಎದುರಿಸಲು ಲೇಖಕನ ಲೇಖನಿ ಹಿಂಜರಿಯುವುದಿಲ್ಲ.”ಪ್ರಪಂಚದ ಅದೆಷ್ಟೋ ಭಾಷೆಗಳಲ್ಲಿ ಕಲ್ಲು ,ಮಣ್ಣು, ಹಿತ್ತಾಳೆ, ತಾಮ್ರ, ಕಬ್ಬಿಣ, ಉಕ್ಕು ಇತ್ಯಾದಿ ಪ್ರಾಕೃತಿಕ ವಸ್ತುಗಳಲ್ಲಿ ಸಾಂಕೇತಿಕ ಅಥವಾ ಲಿಖಿತ ಸಾಹಿತ್ಯ, ಅಲಿಖಿತ ಗ್ರಾಮೀಣ ಗೀತೆಗಳು, ಕತೆಗಳು, ರೀತಿ ನೀತಿಗಳು ಯುಗಯುಗಕ್ಕೂ ಸಂಬಂಧಿಸಿ ರಾಶಿಗಟ್ಟಲೆಯಾಗಿ ದೊರಕುತ್ತಿದ್ದು ಈ ಕೃತಿಯೊಂದು ಕಥೆಗೂ ಆಧಾರಭೂತವಾಗಿವೆ” ಹಾಗಾಗಿಯೇ ಈ ಕೃತಿ ಎಲ್ಲಾ ಭಾರತೀಯ ಭಾಷೆಗಳಲ್ಲಿಯೇ ಅದ್ವಿತೀಯವಾದುದು.

‘ವೋಲ್ಗಾ ಗಂಗಾ’ ಕೃತಿಯನ್ನು ನಾನು 1988 ರಿಂದ ಇಲ್ಲಿಯವರೆಗೆ ಹಲವಾರು ಸಲ ಓದಿದ್ದೇನೆ. ಕ್ರಿ.ಪೂ 6000 ದಿಂದ ಹಿಡಿದು ಕ್ರಿ.ಶ 1942 ರ ತನಕದ ಕಾಲಾವಧಿಯಲ್ಲಿ ರಷ್ಯಾದ ವೋಲ್ಗಾದಿಂದ ಭಾರತದ ಗಂಗಾನದಿಯ ಭೂವಿಸ್ತಾರದಲ್ಲಿ ನೆಲೆಸಿರುವ ಮಾನವನ ವಿಕಾಸದ ಸಂಘರ್ಷಗಳ ಕಥನದ ಎಂಟು ಸಾವಿರ ವರ್ಷಗಳ ಕಾಲವ್ಯಾಪ್ತಿಯುಳ್ಳ ಈ ಕೃತಿ ಇಂದಿಗೂ ಪ್ರಸ್ತುತವಾದುದಾಗಿದ್ದು ನಮ್ಮ ಅನೇಕ ಪ್ರಶ್ನೆಗಳಿಗೆ ಇದು ಉತ್ತರ ಒದಗಿಸಲು ನೆರವಾಗಬಲ್ಲದು.

-ಡಾ.ವಡ್ಡಗೆರೆ ನಾಗರಾಜಯ್ಯ
8722724174

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ನೆಲದನಿ

ಕನ್ನಡ ಮತ್ತು ಸಂಸ್ಕೃತ ; ಮಿಸ್ ಮಾಡ್ದೆ ಈ ಲೇಖನ ಓದಿ..!

Published

on

ನ್ನಡ ಮತ್ತು ಸಂಸ್ಕೃತ ಭಾಷೆಯ ನಡುವಣ ಸಂಬಂಧಗಳ ಕುರಿತು ಈಚಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ತಪ್ಪಾಭಿಪ್ರಾಯ ಮೂಡಿಸುವ ಕೆಲಸಗಳು ನಡೆಯುತ್ತಿವೆ . ಆದುದರಿಂದ ಈ ಪುಟ್ಟ ಸರಳ ಟಿಪ್ಪಣಿ ನನ್ನ ತರುಣ ಗೆಳೆಯರಿಗಾಗಿಿ.

ಭಾರತದಲ್ಲಿ ಅನೇಕ ಭಾಷಾ ಗುಂಪುಗಳಿವೆ. ಅವುಗಳಲ್ಲಿ Indo Aryan Language family ( ಭಾರತದ 76.5% ಜನರು ಮಾತಾಡುವ ಹಿಂದಿ, ಉರ್ದು, ಗುಜರಾತೀ, ಬಾಂಗ್ಲಾ , ಕೊಂಕಣಿ ಇತ್ಯಾದಿ) , Dravidian Language family (ಭಾರತದ 20.5% ಜನರು ಮಾತಾಡುವ ತಮಿಳು, ಕನ್ನಡ, ತೆಲುಗು, ಮಲೆಯಾಳಂ, ತುಳು ಇತ್ಯಾದಿ) Austroasiatic language family ( ಭಾರತದ 3% ಜನ ಮಾತಾಡುವ ಖಾಸಿ, ಮುಂಡಾ, ಸಂತಾಲಿ ಇತ್ಯಾದಿ), Sino-Tibetan language family ( ಮೈತ್ಯಿ, ಬೋಡೋ, ಕರ್ಬಿ, ಲೆಪಚಾ ಇತ್ಯಾದಿ) ಮತ್ತು Great Andamanese language family ( ಜಂಗಿಲ್, ಜಾರ್ವಾ ಇತ್ಯಾದಿ) ಮುಖ್ಯವಾದುವು.

19ನೇ ಶತಮಾನದ ಮಧ್ಯಭಾಗದವರೆಗೂ ಈ ಎಲ್ಲಾ ಭಾಷೆಗಳಿಗೂ ಸಂಸ್ಕೃತವೇ ತಾಯಿ ಎಂದು ಹೇಳಲಾಗುತ್ತಿತ್ತು. ಆದರೆ ಇವೆಲ್ಲವೂ ಬೇರೆ ಬೇರೆ ಭಾಷಾ ಗುಂಪುಗಳಿಗೆ ಸೇರಿವೆ ಎಂಬುದನ್ನು ಭಾಷಾಶಾಸ್ತ್ರಜ್ಞರು ಈಗಾಗಲೇ ಸಾಬೀತು ಪಡಿಸಿದ್ದಾರೆ. ಕೆಳಗೆ ನೀಡಿದ ಪಟ್ಟಿಯಲ್ಲಿ ಕೆಲವು ಪದಗಳು ಹೇಗೆ ದ್ರಾವಿಡ ಭಾಷೆಗಳಿಗೆ ಸಮಾನವೂ ಇಂಡೋ ಆರ್ಯನ್ ಭಾಷೆಯಲ್ಲಿ ಭಿನ್ನವೂ ಆಗಿದೆ ಎಂಬುದನ್ನು ಸ್ಪಷ್ಟ ಪಡಿಸುತ್ತದೆ.

ಇದರ ಜೊತೆಗೆ, ಕನ್ನಡದಲ್ಲಿ ನಿರ್ಜೀವ ಮತ್ತು ಬುದ್ಧಿಹೀನ ವಿಷಯಗಳ ಪದಗಳು ನಪುಂಸಕವೇ ಆಗಿವೆ, ಸಂಸ್ಕೃತದಲ್ಲಿ ಹಾಗಿಲ್ಲ, ಕರ್ಮಣಿ ಪ್ರಯೋಗ ಕನ್ನಡದಲ್ಲಿಸಹಜವಾಗಿ ಇಲ್ಲ ( ಮಾಡಲ್ಪಟ್ಟಿತು ಎಂಬಂಥ ಪ್ರಯೋಗಗಳು). ಒಂದು, ಎರಡು, ಮೂರು , ಹತ್ತು , ನೂರು ಮೊದಲಾದ ಸಂಖ್ಯಾವಾಚಕ ಪದಗಳು ದ್ರಾವಿಡ ಭಾಷೆಗಳಲ್ಲಿದ್ದರೆ, ಏಕ, ದ್ವಯ, ತ್ರಯ, ದಶ, ಶತ ಮೊದಲಾದುವು ಇಂಡೋ ಆರ್ಯನ್ ಭಾಷೆಯಲ್ಲಿವೆ.

ದ್ರಾವಿಡ ಭಾಷೆಗಳಲ್ಲಿ ದ್ವಿ ವಚನವಿಲ್ಲ. ಸಂಸ್ಕೃತದಲ್ಲಿ ಎಕವಚನ ಮತ್ತು ಬಹುವಚನಕ್ಕೆ ಬೇರೆ ವಿಭಕ್ತಿ ಪ್ರತ್ಯಯಗಳಿದ್ದರೆ, ದ್ರಾವಿಡ ಭಾಷೆಗಳಲ್ಲಿ ಅದಿಲ್ಲ. ದ್ರಾವಿಡ ಭಾಷೆಗಳಲ್ಲಿ ಬಂಧುವಾಚಕಗಳು ಹೆಚ್ಚು ನಿಖರವಾಗಿವೆ ( ಅಣ್ಣ, ತಮ್ಮ, ಅಕ್ಕ , ತಂಗಿ ಇತ್ಯಾದಿ. ಸಂಸ್ಕೃತದಲ್ಲಿ ಅವುಗಳು ಅಷ್ಟು ನಿಖರವಾಗಿಲ್ಲ. ( ಭ್ರಾತೃ- brother, ಸಹೋದರ ಅಂದರೆ ಅಣ್ಣ ಅಥವಾ ತಮ್ಮ ಆಗಬಹುದು). ಕನ್ನಡ ಮತ್ತು ಸಂಸ್ಕೃತ ಬೇರೆ ಬೇರೆ ಭಾಷಾ ಗುಂಪಿಗೆ ಸೇರಿದುವು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ರಾಜಕೀಯ ಮಾಡುವವರು ಮಾಡುತ್ತಲೇ ಇರುತ್ತಾರೆ. ಅದಕ್ಕೆ ನಮ್ಮಂಥವರು ಸುಲಭವಾಗಿ ಬಲಿಬೀಳಬಾರದು ಅಷ್ಟೆ.

ಪುರುಶೋತ್ತಮ ಬಿಳಿಮಲೆ
(ಫೇಸ್ ಬುಕ್ ಪೋಸ್ಟ್)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending