Connect with us

ನೆಲದನಿ

ದಮನಿತರ ಬದುಕಿನ ಆಶಾಕಿರಣ ಮಂಜಮ್ಮ ಜೋಗತಿಯ ಕಲಾ ಬದುಕು

Published

on

ಜಾನಪದ ಸಿರಿವಂತಿಕೆ ಎಂಬುದು ಒಂದು ನಾಡಿನ ಪ್ರಾದೇಶಿಕ ವೈಶಿಷ್ಟ್ಯತೆಯ ಪ್ರತೀಕವಾಗಿರುತ್ತದೆ. ಇಂತಹ ಜಾನಪದವು ಪ್ರಾದೇಶಿಕ ಸತ್ವವನ್ನು ಅರಿಯುವುದಕ್ಕೆ, ಗುರುತಿಸುವುದಕ್ಕೆ ಸಹಕಾರಿಯಾಗುತ್ತದೆ. ಒಂದು ನಾಡಿನ ಜನರ ಜೀವಂತ ಸಾಹಿತ್ಯವಾಗಿರುವ ಜನಪದವು ಸಾಮಾನ್ಯರ ಬದುಕಿನೊಂದಿಗೆ ಬೆರೆತುಕೊಂಡಿರುತ್ತದೆ. ಇಂತಹ ಜಾನಪದಕ್ಕೂ ಬಡತನದ ಬದುಕಿಗೂ ಅವಿನಾಭಾವ ಸಂಬಂಧವಿದೆ. ಜಾನದಪ ಕಲೆಗಳು ಇಂದಿಗೂ ಜೀವಂತವಾಗಿರುವುದು ಬಡವರ ಗುಡಿಸಲುಗಳಲ್ಲೆ. ಹೀಗಾಗಿ ಜಾನಪದ ಸಿರಿವಂತಿಕೆಗೆ ಆಶ್ರಯ ತಾಣಗಳಾಗಿರುವುದು ಬಡವರ ಗುಡಿಸಲುಗಳೆ. ಆದ್ದರಿಂದ ಜಾನಪದಕ್ಕೂ ಬಡತನದ ಬದುಕಿಗೂ ಬಿಡಿಸಲಾರದ ಬಂಧವೊಂದಿದೆ. ಈ ಬಂಧವು ಚರಿತೆಯುದ್ಧಕ್ಕೂ ತನ್ನ ನಿರಂತರವಾದ ಪಯಣವನ್ನು ಮುಂದುವರೆಸಿಕೊಂಡು ಬಂದಿದೆ.

ಇಂತಹ ನಾಡಿನ ಜೀವನಾಡಿಯಾದ ಜಾನಪದ ಕಲೆಯನ್ನು ತಮ್ಮ ಬದುಕಿನ ಭಾಗವಾಗಿ ಕಾಪಾಡಿಕೊಂಡು ಬಂದವರಲ್ಲಿ ಮಂಜಮ್ಮ ಜೋಗತಿಯವರು ಒಬ್ಬರಾಗಿದ್ದಾರೆ. ಇವರು ಜಾನಪದದ ವಿವಿಧ ಪ್ರಕಾರಗಳಲ್ಲಿ ಒಂದಾಗಿರುವ ಜೋಗತಿ ನೃತ್ಯ ಹಾಗೂ ಹಾಡುಗಾರಿಕೆ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದು ಮಾತ್ರವಲ್ಲದೆ ಈ ಸಾಹಿತ್ಯ ಪ್ರಕಾರದ ಉಳಿವಿಗಾಗಿ ಅವಿರತ ಶ್ರಮವನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮಂಜಮ್ಮ ಜೊಗತಿಯು ನಾಡು ಕಂಡ ‘ಜೋಗತಿ ಸಿರಿ’ಯಾಗಿ ಕಂಡುಬರುತ್ತಾರೆ. ಇಂತಹ ಜಾನಪದ ಸಿರಿಯ ಕಲಾ ಬದುಕಿನ ಸುತ್ತ ಅಂತರ್ಗತವಾಗಿರುವ ಸಂಕಥನವನ್ನು ಗುರುತಿಸುವ ಉದ್ಧೇಶವನ್ನು ಪ್ರಸ್ತುತ ಲೇಖನವು ಒಳಗೊಂಡಿದೆ.

ಜಗತ್ತಿನ ಪ್ರತಿಯೊಂದು ಕುಟುಂಬಗಳಲ್ಲಿ ತಂದೆ ತಾಯಂದಿರು ಕೂಡ ತಮ್ಮ ಮಕ್ಕಳು ಒಳ್ಳೆಯ ವಿದ್ಯಾವಂತರಾಗಬೇಕು, ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಳ್ಳಬೇಕು. ಯಾರ ಮುಂದೆಯೂ ತಗ್ಗಿ ನಡೆಯುವಂತಾಗಬಾರದು ಎಂದೆಲ್ಲ ಕನಸು ಕಟ್ಟಿರುತ್ತಾರೆ. ತಮ್ಮ ಮಕ್ಕಳು ಸಮಾಜ ಘಾತುಕರಿರಲಿ, ಬರೀ ಸುಳ್ಳು ಹೇಳಿದರೂ ತಂದೆ ತಾಯಿಗಳು ಸಹಿಸಿಕೊಳ್ಳುವುದಿಲ್ಲ. ವಾಸ್ತವ ಹೀಗಿರುವಾಗ ತಮ್ಮ ವಂಶವನ್ನು ಬೆಳಗಬೇಕಾದ ಗಂಡು ಮಗ ಹೆಣ್ಣಾಗಿ ವರ್ತಿಸುತ್ತಿದ್ದಾನೆ, ಇಲ್ಲವೇ ಹೆಣ್ಣಾಗಿ ಪರಿವರ್ತನೆಯಾಗುತ್ತಾನೆ ಎಂದರೆ ಯಾರು ತಾನೇ ಸಹಿಸಿಕೊಳ್ಳಲು ಸಾಧ್ಯ. ಅದೂ ಭಾರತದಂತಹ ಸಾಂಪ್ರದಾಯಿಕ ನಾಡಿನಲ್ಲಿ ಊಹಿಸಿಕೊಳ್ಳುವುದು ಕಷ್ಟವೆ. ಇಂತಹ ಸಂಕಷ್ಟವೊಂದು ಬಾಲ್ಯದ ದಿನಗಳಲ್ಲಿ ಮಂಜಮ್ಮ ಜೋಗತಿಯ ಕುಟುಂಬವನ್ನು ಪ್ರವೇಶಿಸಿತು. ಮಂಜಮ್ಮನ ದೈಹಿಕ ಕ್ರಿಯೆಯಲ್ಲಾದ ಈ ಬದಲಾವಣೆಯು ಜೈವಿಕ ಕ್ರಿಯೆಯಾಗಿರಬಹುದು. ಆದರೆ ಸಾಂಪ್ರದಾಯಿಕ ಸಮಾಜದಲ್ಲಿ ಇದನ್ನು ನೋಡುವ ದೃಷ್ಟಿಕೋನ ತುಂಬಾ ತಮ್ಮ ಕೆಳ ಮಟ್ಟದ್ದಾಗಿರುತ್ತದೆ. ಮಂಜುನಾಥ ತನ್ನ ಜೈವಿಕ ಒತ್ತಡಗಳಿಂದ ಮಂಜಮ್ಮನಾಗುವ ಸನ್ನವೇಶದಲ್ಲಿ ಅನುಭವಿಸಿದ ಯಾತನೆಗಳು ತುಂಬಾ ತ್ರಾಸದಾಯಕವಾಗಿದ್ದವು. ಇಲ್ಲಿ ಮಂಜಮ್ಮನನ್ನು ಕಾಡಿದ, ಸಂಕಷ್ಟಕ್ಕೆ ದೂಡಿದ ಘಟನೆಗಳಿಗೆ ಮಂಜಮ್ಮನ್ನ ಕುಟುಂಬ ನೇರ ಹೊಣೆಯಲ್ಲ. ಮಂಜುನಾಥ ತನ್ನ ಸಹಜ ಜೈವಿಕ ಸ್ವಭಾವಗಳಲ್ಲಿ ಹೆಣ್ಣಾಗಿ ಪರಿವರ್ತನೆಯಾಗುವುದನ್ನು ತಡೆಯಲು ಸಾಧ್ಯವಿಲ್ಲ ಎಂಬುದು ತನ್ನ ಕುಟುಂಬಕ್ಕೆ ಸಂಪೂರ್ಣವಾದ ಅರಿವಿದೆ. ಆದರೆ ತನ್ನ ಕುಟುಂಬದ ಸುತ್ತಮುತ್ತಲಿನ ಸಮಾಜದಲ್ಲಿ ಅಪಮಾನಕ್ಕೆ ಗುರಿಯಾಗಬೇಕಾದ ಒತ್ತಡಗಳಲ್ಲಿ ಉಂಟಾದ ಸಂಘರ್ಷವೇ ಮಂಜಮ್ಮನನ್ನು ಗಂಡಸ್ಸಾಗಿಯೇ ಉಳಿಯುವಂತೆ ಒತ್ತಾಯ ನಡೆದಿವೆ. ಈ ಒತ್ತಾಯದ ಭಾಗವಾದ ಹಿಂಸೆ ಮತ್ತು ಅವಮಾನಗಳು ಅವರ ಬದುಕಿನಲ್ಲಿ ಹಲವಾರು ತಲ್ಲಣಗಳನ್ನು ಮೂಡಿಸಿವೆ.

ಜೋಗತಿ ಮಂಜಮ್ಮಅವರೊಂದಿಗೆ ಲೇಖಕರು

ಮಂಜಮ್ಮ ಜೋಗತಿಯು ಶ್ರೀ ಹನುಮಂತಯ್ಯ ಶೆಟ್ಟಿ, ಶ್ರೀಮತಿ ಜಯಲಕ್ಷ್ಮೀಯವ ಪುತ್ರನಾಗಿ ಬಳ್ಳಾರಿ ಜಿಲ್ಲೆಯ ಕಲ್ಲುಕಂಬ ಗ್ರಾಮದಲ್ಲಿ ಜನಿಸಿದವರು. ಇವರ ತಂದೆ ತಾಯಿಗೆ ಇಪ್ಪತ್ತೊಂದು ಜನ ಮಕ್ಕಳಲ್ಲಿ ಮಂಜಮ್ಮ ಜೋಗತಿಯು ಒಬ್ಬರಾಗಿದ್ದರು. ಈ ಇಪ್ಪತ್ತೊಂದು ಜನ ಮಕ್ಕಳಲ್ಲಿ ಉಳಿದುಕೊಂಡಿದ್ದು ಮಾತ್ರ ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು ಮಾತ್ರ. ಈ ಇಬ್ಬರು ಗಂಡು ಸಂತಾನಗಳಲ್ಲಿ ಮಂಜಮ್ಮ (ಮಂಜುನಾಥ) ಒಬ್ಬರಾಗಿದ್ದರು. ಆದ್ದರಿಂದ ಇಲ್ಲಿ ಉಳಿದ ಎರಡು ಗಂಡು ಸಂತಾನಗಳಲ್ಲಿ ಒಬ್ಬರಾಗಿರುವ ಮಂಜುನಾಥ ಕೃಷ್ಣನಂತಾಗಿ ತಮ್ಮ ವಂಶವನ್ನು ಬೆಳಗುತ್ತಾನೆ ಎಂಬುದು ತಂದೆ ತಾಯಿಗಳ ಆದಮ್ಯ ಬಯಕೆಯಾಗಿತ್ತು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಕೃಷ್ಣನಂತಾಗಿ ವಂಶ ಬೆಳಗಬೇಕಾದ ಮಗ ಬೃಹನ್ನಳೆಯಂತಾದಾಗ ತಂದೆ ತಾಯಿಗಳಿಗೆ ತೀವ್ರತರವಾದ ಆಘಾತವನ್ನು ಮೂಡಿತ್ತು. ತಮ್ಮ ಬಾಲ್ಯದ ದಿನಗಳಿಂದಲೆ ಮಂಜಮ್ಮ ಗಂಡು ಹುಡುಗರ ಜೊತೆಯಲ್ಲಿ ಬೆರೆಯದೆ ಹೆಚ್ಚಾಗಿ ಹುಡುಗಿಯರೊಂದಿಗೆ ಬೆರೆಯುತ್ತಿದ್ದರು. ಹೆಂಗಸರು ಮಾಡುವ ಕೆಲಸಗಳಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಸಮಾಜದ ಜನರಿಂದ ಹಲವಾರು ಕುಹಕದ ಮಾತುಗಳು ಹೊರಬಿದ್ದು, ಮಂಜಮ್ಮನ ಮನಸ್ಸನ್ನು ಘಾಸಿಗೊಳಿಸುತ್ತಿದ್ದವು. ಕೆಲವು ಹೆಣ್ಣು ಮಕ್ಕಳು “ಅವನ್ಯಾಕೆ ನಮ್ಮ ಜತೆ ಬರುತ್ತಾನೆ? ಈ ವಯಸ್ಸಿಗೆ ಅವನಿಗೇನು ಚಪಲ. ನೋಡೋಕೆ ಹೆಣ್ಣಿನಂಗಾಡ್ತಾನೆ, ಹೆಣ್ಣಿನ ಚಪಲ ಬ್ಯಾರೆ” ಎಂದೆಲ್ಲ ನೇರವಾಗಿ ನಿಂದಿಸುತ್ತಿದ್ದರು. ಆದರೆ ವಾಸ್ತವವಾಗಿ ಮಂಜುನಾಥನಲ್ಲಿ ಮಂಜವ್ವ ಒಡಮೂಡುತ್ತಿದ್ದಳು. ಆದರೆ ಈ ಸೂಕ್ಷ್ಮ ಅಳಲನ್ನು ಅರ್ಥೈಸುವ ಮನಸ್ಥಿತಿಯು ಯಾರಿಗೂ ಇರಲಿಲ್ಲ. ಇಂತಹ ಸಂದರ್ಭದಲ್ಲಿ ತನ್ನೆಲ್ಲ ನೋವುಗಳನ್ನು ತಾನೆ ನುಂಗಿಕೊಂಡು ಬದುಕಿನ ಹಾದಿಯನ್ನು ಕಂಡುಕೊಳ್ಳುವ ಸಾಹಸಮಯ ಬದುಕಿಗಾಗಿ ಮಂಜಮ್ಮ ತವಕಿಸಿದ್ದಾರೆ.

ಮಂಜಮ್ಮ ತನ್ನಲ್ಲಿ ಮೂಡಿದ ಹೆಣ್ತನವನ್ನು ಹೊತ್ತು ನಡೆಸಿದ ಹೋರಾಟದಲ್ಲಿ ಅವಮಾನಗಳೆ ಹೆಚ್ಚು. ಮಂಜಮ್ಮನ ದೇಹದಲ್ಲಿ ಒಡಮೂಡಿದ್ದು ಜೈವಿಕ ಕ್ರಿಯೆ. ಈ ಜೈವಿಕವಾದ ಬದಲಾವಣೆಯ ಒತ್ತಡದ ಭಾಗವಾಗಿ ಮಂಜಮ್ಮ ತಮ್ಮ ಹೆಣ್ತನವನ್ನು ಪ್ರದರ್ಶಿಸಿದರು. ಆದರೆ ಈ ಸಮಾಜದ ಕಣ್ಣಿಗೆ ಅದು ಸಹಜವಾದ ಜೈವಿಕ ಬದಲಾವಣೆಯಾಗಿರಲಿಲ್ಲ. ಅದನ್ನು ದೇವರಿಗೆ ಆರೋಪಿಸಲಾಯಿತು. ‘ಶೆಟ್ರು ಹುಡುಗ ಮಂಜುನಾಥನ ಮೈಯಾಗೆ ಹುಲಿಗೆಮ್ಮ ಬರಕತ್ಯಾಳೆ’ ಎಂದು ಆರೋಪಿಸಿದರು. ಆದರೆ ಇದರಿಂದ ಮಂಜಮ್ಮನ ಮೇಲೆ ಕುಟುಂಬದವರಿಂದ ಒತ್ತಡಗಳು ತೀವ್ರವಾದಾಗ ಮಂಜಮ್ಮ ಈ ಜೀವದ ಅಂತ್ಯಕ್ಕೆ ನಾಂದಿ ಹಾಡಲು ಮುಂದಾಗಿ ವಿಷ ಸೇವನೆ ಮಾಡಿದರು. ಆದರೆ ಅದೃಷ್ಟವಶತ್ ಇವರನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸೇರಿಸಿದ ಪರಿಣಾಮವಾಗಿ ಬದುಕುಳಿದರು. ದಾವಣಗೆರೆಯ ಸರ್ಕಾರಿ ಆಸ್ಪತ್ರೆಗೆ ಇವರನ್ನು ಸೇರಿಸಿದ ನಂತರ ಇವರ ಯೋಗಕ್ಷೇಮ ನೋಡಿಕೊಳ್ಳಲು ಯಾರು ಮುಂದೆ ಬರುವುದಿಲ್ಲ. ಇಂತಹ ಸಂದಿಗ್ಧ ಸಂದರ್ಭದಲ್ಲಿ ತನ್ನ ಜೀವನ ಹಾಗೂ ಹಸಿವನ್ನು ಪೂರೈಸಿಕೊಳ್ಳುವುದಕ್ಕಾಗಿ ಆಸ್ಪತ್ರೆಯ ರೋಗಿಗಳ ಎದುರು ದೇವಿಯ ಹಾಡು ನೃತ್ಯ ಮಾಡಿ ಜೀವನವನ್ನು ಸಾಗಿಸಿದರು. ನಂತರದಲ್ಲಿ ಸಂಪ್ರದಾಯದಂತೆ ದೇವಿಯ ದೀಕ್ಷೆ ತೆಗೆದುಕೊಂಡು ಮನೆಯಿಂದ ಹೊರ ನಡೆದ ಮಂಜವ್ವ ದಾವಣಗೆರೆಯಲ್ಲಿ ಪ್ರತ್ಯೇಕವಾದ ವಾಸ್ತವ್ಯ ಹೂಡಿದರು. ಹಲವು ಕಡೆ ನಡೆಯುವ ಸಂತೆ, ಜಾತ್ರೆಗಳಲ್ಲಿ ದೇವಿಯನ್ನು ಹೊತ್ತೊಯ್ದು ತನ್ನ ಜೀವನ ನಿರ್ವಹಣೆಗೆ ಮುಂದಾದರು.


ಮನೆಯಿಂದ ಹೊರಬಂದ ಮಂಜಮ್ಮ ತನ್ನ ಜೀವನವನ್ನು ತಾನು ಸಾಗಿಸಿಕೊಂಡು ಸ್ವಲ್ಪ ನೆಮ್ಮದಿಯನ್ನು ಕಂಡುಕೊಳ್ಳುವ ಸಂದರ್ಭದಲ್ಲಿ ಇವರ ಬದುಕನ್ನು ಘಾಸಿಗೊಳಿಸುವಂತಹ ಘಟನೆಯೊಂದು ನಡೆದು ಹೋಗಿತ್ತು. ತಾನು ಸಂಗ್ರಹಿಸಿದ ಹಣವನ್ನೆಲ್ಲ ಕೂಡಿಟ್ಟುಕೊಂಡು ಮನೆ ಬಾಡಿಗೆ ಕಟ್ಟಲು ಸಿದ್ಧ ಮಾಡಿಕೊಂಡು ಬರುವಾಗ ದಾವಣಗೆರೆಯ ಹೈಸ್ಕೂಲು ಮೈದಾನದಲ್ಲಿ ಇವರ ಮೇಲೆ ಪುಢಾರಿಗಳ ಗುಂಪೊಂದು ಅತ್ಯಾಚಾರಕ್ಕೆ ಮುಂದಾಗಿ, ಸೀರೆ ಉಟ್ಟ ಗಂಡು ದೇಹದ ಮೇಲೆ ದೌರ್ಜನ್ಯವೆಸಗಿ, ಇವರ ಬಳಿಯಿದ್ದ ಹಣವನ್ನೆಲ್ಲ ಕಸಿದುಕೊಳ್ಳುತ್ತಾರೆ. ಈ ಘಟನೆಯಿಂದ ಇವರಲ್ಲಿ ತೀವ್ರ ಮುಜುಗರ ಉಂಟಾಗುತ್ತದೆ. ಈ ಎಲ್ಲಾ ಘಟನೆಗಳನ್ನು ಮೆಟ್ಟಿನಿಂತ ಮಂಜಮ್ಮ ಸಾಧಿಸುವ ಛಲವೊತ್ತು ಮುನ್ನಡೆಯುತ್ತಾರೆ.

ಮಂಜಮ್ಮ ನಿರಂತರವಾಗಿ ತನ್ನ ಬದುಕಿನ ಹೋರಾಟವನ್ನು ಮುಂದುವರೆಸಿಕೊಂಡು ಬಂದವರು. ಇವರು ದೇವತೆಯ ದೀಕ್ಷೆ ಪಡೆದು ಮನೆಯಿಂದ ಹೊರಬಂದ ಸಂದರ್ಭದಲ್ಲಿ ಜೀವನವು ತುಂಬಾ ದುಸ್ತರವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಮಂಜಮ್ಮ ಆಯ್ದುಕೊಂಡಿದ್ದು ಸ್ವಾಭಿಮಾನದ ಬದುಕಿಗೆ ಪೂರಕವಾದ ಕಲೆಯನ್ನು. ಆರಂಭಿಕ ಹಂತದ ಈ ಕಲೆಗೆ ಪ್ರಚೋದಕ ಶಕ್ತಿಯಾದವರು ಬಸಪ್ಪನವರು. ಈ ಗುರುವಿನ ಆಶ್ರಯ ಪಡೆದು, ಅವರ ಶಿಷ್ಯಳಾಗಿ ಶಿರಸಾವಹಿಸಿ ದುಡಿದ ಮಂಜಮ್ಮ ನಂತರ ದಿನಗಳಲ್ಲಿ ಈ ಕಲೆಯೊಂದಿಗೆ ತನ್ನ ನಿರಂತದ ಬಂಧವನ್ನು ಕಾಯ್ದುಕೊಳ್ಳುತ್ತಾರೆ. ನಂತರದ ದಿನಗಳಲ್ಲಿ ಹಲವಾರು ಏಳುಬೀಳುಗಳನ್ನು ಅನುಭವಿಸಿದ ಮಂಜಮ್ಮ ಜೋಗತಿ ಮುಂದೆ ಕಾಳವ್ವ ಜೋಗತಿಯನ್ನು ಗುರುವಾಗಿ ಪಡೆಯುತ್ತಾಳೆ. ಈ ಕಾಳವ್ವ ಜೋಗತಿಯು ಮಂಜವ್ವನಿಗೆ ಕೇವಲ ಗುರುವಾಗಿರುವುದಿಲ್ಲ. ಅದರಾಚೆ ತಂದೆ ತಾಯಿ, ಬಂಧು ಬಳಗ ಮತ್ತು ಸರ್ವಸ್ವವಾಗಿಯೂ ಮಂಜವ್ವನಿಗೆ ಅಭಯ ನೀಡುತ್ತಾರೆ. ಕಾಳವ್ವ ಜೋಗತಿಯಿಂದ ಒಂದು ನೆಲೆಯನ್ನು ಕಂಡುಕೊಂಡ ಮಂಜವ್ವ ಜೋಗತಿಯು ತನ್ನ ಬದುಕಿಗಾಗಿ ಸ್ವಾರ್ಥವನ್ನು ಬೆಳೆಸಿಕೊಳ್ಳದೆ, ತನ್ನ ಗುರು ಕಾಳವ್ವ ಜೋಗತಿಯ ಮಾರ್ಗದರ್ಶನದಲ್ಲಿ ತನ್ನಂತೆ ಸಮಾಜ ಮತ್ತು ಕುಟುಂಬದಿಂದ ವಂಚಿತರಾದ ಹಲವಾರು ಅಬಲರಿಗೆ ಆಶ್ರಯ ನೀಡುವ ಮಹಾತಾಯಿಯಾಗಿ ದುಡಿಯುತ್ತಾರೆ.

ಮಂಜಮ್ಮನದು ಯಾವಾಗಲೂ ಒಂಟಿ ಬದುಕಲ್ಲ. ಮಂಜವ್ವ ಎಂಬುದೇ ಕೂಡು ಕುಟುಂಬದ ಮೂರ್ತ ಸ್ವರೂಪ. ಈ ಮಹಾತಾಯಿಯದು ಮಾತೃ ಹೃದಯ. ಕಷ್ಟ ಎಂದು ಬಂದವರಿಗೆ ಅಭಯ ನೀಡಿ ಆಶ್ರಯ ಕಲ್ಪಿಸುವುದೆ ಈ ತಾಯಿಯ ಗುಣವಾಗಿದೆ. ಮಂಜಮ್ಮ ತಾನು ಅನುಭವಿಸಿದ ಎಲ್ಲಾ ಸಂಕಷ್ಟಗಳನ್ನು ಎಂದು ಮರೆತವರಲ್ಲ. ಹೀಗಾಗಿ ಸಮಾಜದಲ್ಲಿ ಮಂಗಳಮುಖಿಯರು ಅನುಭವಿಸುತ್ತಿರುವ ಯಾತನೆಯ ಬಿಸಿಯನ್ನು ಸ್ವತಃ ಅನುಭವಿಸಿದವರಾಗಿದ್ದಾರೆ. ಹೀಗಾಗಿ ಯಾವುದೇ ಮಂಗಳಮುಖಿಯರು ಸಮಾಜದಿಂದ ತಿರಸ್ಕರಿಸಲ್ಪಟ್ಟಿದ್ದರು ಕೂಡ ಅಂತಹವರಿಗೆ ಆಶ್ರಯ ಕಲ್ಪಿಸಿಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲದೆ ಹಲವಾರು ದೀನ ದಲಿತರಿಗೆ ಆಶ್ರಯಧಾತರಾಗಿ ಮಂಜಮ್ಮ ತಮ್ಮ ಸೇವೆಯನ್ನು ನೀಡುತ್ತಿದ್ದಾರೆ. ಮಂಜಮ್ಮ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ ಗ್ರಾಮದಲ್ಲಿ ಪುಟ್ಟ ಮನೆಯೊಂದನ್ನು ನಿರ್ಮಿಸಿಕೊಂಡು ದಮನಿತರ ಸೇವೆಯನ್ನು ಮಾಡುವ ಕಾಯಕದಲ್ಲಿ ಸದಾ ತಲ್ಲಿನರಾಗಿದ್ದಾರೆ. ಇದು ಅವರ ಮಾತೃ ಮೌಲ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತದೆ.
ಮಂಜಮ್ಮನದು ಬಹುಮುಖಿ ವ್ಯಕ್ತಿತ್ವ. ಯಾವುದೆ ಒಂದು ಕಾರ್ಯದಲ್ಲಿ ಮಾತ್ರ ತನ್ನನ್ನು ತೊಡಗಿಸಿಕೊಂಡು ಸುಮ್ಮನಿರುವವರಲ್ಲ. ಕಲಾ ಕ್ಷೇತ್ರಕ್ಕೆ ಬಂದರೆ ಅವರು ಒಬ್ಬ ಜೋಗತಿಯಾಗಿ, ದೇವತೆಯನ್ನು ಆರಾಧಿಸುವುದರೊಂದಿಗೆ, ಜೋಗತಿ ನೃತ್ಯದಲ್ಲಿ ತನ್ನದೆ ಆದ ಛಾಪು ಮೂಡಿಸಿದ ಕೀರ್ತಿ ಇವರದಾಗಿದೆ. ಜೋಗತಿ ನೃತ್ಯದಲ್ಲಿನ ಇವರ ಸಾಧನೆಯು ಇವರನ್ನು ಉತ್ತುಂಗ ಶಿಖರದತ್ತ ಕೊಂಡೊಯ್ದಿದೆ. ಈ ಜೋಗತಿ ಕಲೆಯು ಅವಸಾನದ ಅಂಚಿನಲ್ಲಿರುವಾಗ ಇದಕ್ಕೆ ಮರುಜೀವ ನೀಡಿದವರು ಮಂಜಮ್ಮ ಎಂದರೆ ತಪ್ಪಾಗಲಾರದು. ಈ ಜೋಗತಿ ಕಲೆಯನ್ನು ಪ್ರಚಾರಾತ್ಮಕವಾದ ನೆಲೆಯಲ್ಲಿ ಹಲವಾರ ಸಮಾಜಿಕ ಜಾಗೃತಿ ಕಾರ್ಯಕ್ರಮಗಳಲ್ಲಿ ಇದನ್ನು ಬಳಸಿಕೊಂಡ ಕೀರ್ತಿಗೆ ಇವರು ಭಾಜನರಾಗಿದ್ದಾರೆ. ಆಧುನಿಕ ಸಂಗೀತಾ ಮತ್ತು ನೃತ್ಯಗಳ ಪ್ರಭಾವದಿಂದ ಮೂಲೆಗುಂಪಾಗಿದ್ದ ಮತ್ತು ಯುವಜನತೆ ಮನದ ಮೂಸೆಯಿಂದ ಮರೆಯಾಗುತ್ತಿದ್ದ ಈ ಜೋಗತಿ ನೃತ್ಯ ಮತ್ತು ಕಲೆಯನ್ನು ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳ ಮೂಲಕ ಪ್ರದರ್ಶನ ನೀಡಿ, ಇದರ ಬಗೆಗೆ ಅರಿವು ಮೂಡಿಸುವಲ್ಲಿ ಮಂಜಮ್ಮ ಜೋಗತಿಯ ಕಾಣ್ಕೆಯು ಅಪಾರವಾಗಿದೆ. ಹಾಗೆಯೇ ಈ ಜೋಗತಿ ನೃತ್ಯವನ್ನು ಯುವ ಪೀಳಿಗೆಗೆ ಪರಿಚಯಿಸುವ ಮತ್ತು ಈ ಕಲೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ನೆಲೆಯಲ್ಲಿ ತಮ್ಮ ಹೋರಾಟವನ್ನು ಮಂಜಮ್ಮ ಮುಂದುವರೆಸಿಕೊಂಡು ಬಂದಿದ್ದಾರೆ.

ಮಂಜಮ್ಮನ ಕಲಾಸೇವೆ ಜೋಗತಿ ನೃತ್ಯಕ್ಕೆ ಮಾತ್ರ ಸೀಮಿತವಾದುದಲ್ಲ. ಅದರಾಚೆ ನಾಟಕ ಕ್ಷೇತ್ರಕ್ಕೂ ಲಗ್ಗೆ ಇಟ್ಟಿದೆ. ಆರಂಭಿಕ ಹಂತದಲ್ಲಿ ತಮ್ಮ ಹಸಿವನ್ನು ನೀಗಿಸಲು ದೇವಿಯ ಮಹಾತ್ಮೆಯನ್ನು ಪ್ರಧಾನವಾಗಿಟ್ಟುಕೊಂಡು ಬೀದಿ ನಾಟಕಗಳನ್ನು ಪ್ರದರ್ಶನ ಮಡುವ ಮೂಲಕ ಜೀವನವನ್ನು ಆರಂಭಿಸಿದ ಮಂಜಮ್ಮ ಜೋಗತಿಯು ರೇಣುಕೆಯ ಪಾತ್ರಕ್ಕೆ ಜೀವ ತುಂಬಿದರು. ಹೀಗೆ ಬೀದಿ ನಾಟಕಗಳ ಮೂಲಕ ಪ್ರದರ್ಶನವನ್ನು ಆರಂಭಿಸಿದ ಮಂಜಮ್ಮ ಸಾಮಾಜಿಕ ಅರಿವು ಮೂಡಿಸುವ ನೆಲೆಯಲ್ಲಿ ಏಡ್ಸ್, ಮಲೇರಿಯಾ, ಪೋಲಿಯೊ, ಸ್ವಚ್ಚತೆಯ ಅರಿವು ಮೂಡಿಸುವ ಹಲವಾರು ನಾಟಕಗಳನ್ನು ಪ್ರದರ್ಶನ ಮಾಡುತ್ತ ಬಂದಿದ್ದಾರೆ. ಹಾಗೆಯೇ ಮುಂದುವರೆದು ಹಲವಾರು ಪೌರಾಣಿಕ ನಾಟಕಗಳಲ್ಲಿ ಪ್ರಮುಖ ಪಾತ್ರಧಾರಿಯಾಗಿ ತನ್ನ ಸೇವೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ದೃಢ ದೇಹಕಾಯರಾದ ಮಂಜಮ್ಮ ಭೀಮ, ದುರ್ಯೋಧನ, ಹಿರಣ್ಯಕಶ್ಯಪು ಪಾತ್ರಗಳ ಮೂಲಕ ಪುರುಷ ಪಾತ್ರಧಾರಿಗಳು ನಾಚುವಂತೆ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಹೀಗೆ ಮುಂದುವರೆದ ಇವರ ಸಾಧನೆಯು ಇಂದಿಗೂ ತನ್ನ ಜೀವಂತಿಕೆಯನ್ನು ಕಾಯ್ದುಕೊಂಡಿದ್ದು, ಹಲವಾರು ನಾಟಕಗಳ ಪ್ರದರ್ಶನದ ಜೊತೆಗೆ ಯುವ ಸಮುದಾಯಕ್ಕೆ ನಾಟಕ ತರಬೇತಿ ನೀಡುವ ಜವಬ್ದಾರಿಯನ್ನು ಹೊತ್ತಿದ್ದಾರೆ. ಹೀಗಾಗಿ ಜೋಗತಿ ನೃತ್ಯ ಮತ್ತು ನಾಟಕ ಕ್ಷೇತ್ರಗಳಲ್ಲಿ ಮಂಜಮ್ಮನ ಸಾಧನೆಯು ಅಪಾರವಾದುದಾಗಿದೆ.

ಮಂಜಮ್ಮ ಗಂಡಾಗಿ ಹುಟ್ಟಿ ಹೆಣ್ಣಾಗಿ ಪರಿವರ್ತನೆಯಾದವರು. ಇದು ಅವರ ದೇಹದಲ್ಲಾದ ಜೈವಿಕ ಬದಲಾವಣೆ. ಆದರೆ ಈ ಜೈವಿಕ ಕ್ರಿಯೆಯಿಂದ ಉಂಟಾದ ಬದಲಾವಣೆಯ ಪರಿಣಾಮವಾಗಿ ಸಮಾಜದಲ್ಲಿ ಹಲವಾರು ಸಂಕಷ್ಟಗಳನ್ನು ಅನುಭವಿಸಿದರು. ಈ ಸಂಕಷ್ಟಗಳು ಅತಿಯಾದಾಗ ಸಾವಿಗೆ ಶರಣಾಗಲು ಮುಂದಾದರು. ಆದರೆ ಸಾವನ್ನು ಜಯಿಸಿದ ಮಂಜಮ್ಮ ಇಂದು ಸಾಧನೆಯ ಶಿಖರದಲ್ಲಿದ್ದಾರೆ. ಅಂದು ತಾವು ಹೆಣ್ಣಾಗಿ ಮನೆಯನ್ನು ತೊರೆದಾಗ ಒಂದು ಕಾಟನ್ ಸೀರೆ ಮಾತ್ರ ಇವರ ಬಳಿ ಇದ್ದಿದ್ದು. ಆದರೆ ಈ ಬಡತನಕ್ಕೆ ಅಂಜದ ಮಂಜಮ್ಮ ನಿಷ್ಠೆ ಮತ್ತು ಪ್ರಾಮಾಣಿಕತೆಯ ಮೂಲಕ ಇಂದು ಸಮಾಜದಲ್ಲಿ ಉತ್ತಮವಾದ ಸ್ಥಾನಮಾನವನ್ನು ಪಡೆದುಕೊಂಡಿದ್ದಾರೆ. ಅಂದು ಕೇವಲ ಒಂದು ಸೀರೆಯನ್ನುಟ್ಟು ಹೊರಬಂದ ಈ ಮಹಾತಾಯಿಯು ಇಚಿದು ತನ್ನಲ್ಲಿ ಹಲವಾರು ಸೀರೆಗಳು ಇರುವುದನ್ನು ನೆನೆದು ಸಂತೋಷ ಪಡುತ್ತಾರೆ. ಮಂಜಮ್ಮ ಆಸ್ತಿಪಾಸ್ತಿಯನ್ನು ಸಂಪಾದಿಸಿದವರಲ್ಲ. ದೀನ ದಲಿತರ ಹಾರೈಕೆ ಮತ್ತು ಅವರ ಪ್ರೀತಿಯನ್ನು ಸಂಪಾದಿಸುವುದೆ ಆಸ್ತಿಯೆಂದು ಭಾವಿಸಿದವರು. ಸೀರೆಯೊಂದಿಗಿನ ಇವರ ನಂಟು ಹೆಣ್ತನದ ಪ್ರತಿರೂಪವಾಗಿದೆ. ಇದರೊಂದಿಗಿನ ಅವರ ನಂಟು ಭಾವನಾತ್ಮಕ ಸ್ವರೂಪದಿಂದ ಕೂಡಿದೆ.

ಮಂಜಮ್ಮನವರ ಕಲಾಕ್ಷೇತ್ರದ ಸಾಧನೆಗಾಗಿ ಕರ್ನಾಟಕ ಸರ್ಕಾರವು ನೀಡುವ ಉನ್ನತ ಪುರಸ್ಕಾರವಾಗಿರುವ ‘ಕನ್ನಡ ರಾಜ್ಯೋತ್ಸವ’ ಪ್ರಶಸ್ತಿಯು ಇವರ ಮುಡಿಗೇರಿದೆ. ಹಾಗೆಯೇ ಇವರ ಕಲಾಸೇವೆ ಹಾಗೂ ಸಾಮಾಜಿಕ ಕಳಕಳಿಯನ್ನು ಗಮನಿಸಿದಂತಹ ಹಲವಾರು ಸಂಘ ಸಂಸ್ಥೆಗಳು ಹಲವಾರು ಪುರಸ್ಕಾರ ಹಾಗೂ ಸನ್ಮಾನದ ಮೂಲಕವಾಗಿ ಇವರನ್ನು ಗೌರವಿಸಿವೆ. ಸಾಧನೆಗೆ ಹೆಣ್ಣು ಗಂಡು, ಮೇಲು ಕೀಳು, ಶ್ರೇಷ್ಠ ಕನಿಷ್ಟವೆಂಬ ಯಾವುದೇ ಅಡ್ಡಿ ಆತಂಕಗಳಿಲ್ಲ. ಸಾಧಿಸುವ ಛಲವೊಂದಿದ್ದರೆ ಎಂಥ ಪರ್ವತವನ್ನು ಶ್ರಮದ ಮೂಲಕ ಹೇರಿ ಸಾಧಿಸಬಹುದು ಎಂಬುದನ್ನು ಮಂಜಮ್ಮ ಸಾಧಿಸಿ ತೋರಿಸಿದ್ದಾರೆ. ಮಂಜಮ್ಮನದು ಸದಾ ತುಡಿಯುವ ಮಾತೃ ಹೃದಯ. ಈ ಮಹಾತಾಯಿಯ ಮಾತೃ ಹೃದಯವು ಕೇವಲ ದಮನಿತ ಸಮುದಾಯದ ಮಾನವ ಲೋಕಕ್ಕೆ ಮಾತ್ರ ಮಿಡಿಯುತ್ತ ಬಂದಿಲ್ಲ. ಅದರಾಚೆಗಿನ ಪ್ರಾಣಿ ಪಕ್ಷಿ ಸಂಕುಲಕ್ಕೂ ತನ್ನ ಅಂತಃಕರಣದ ತುಡಿತವನ್ನು ವ್ಯಕ್ತಪಡಿಸಿಕೊಂಡು ಬಂದಿದೆ. ಇದಕ್ಕೆ ಸಾಕ್ಷಿಯಾಗಿ ಈ ತಾಯಿಯು ತನ್ನ ಕುಟೀರದೊಳಗೆ ವಿವಿಧ ಪ್ರಾಣಿ ಸಂಕುಲಕ್ಕೆ ಆಶ್ರಯ ನೀಡಿ, ತನ್ನ ಮಕ್ಕಳಂತೆ ಪ್ರೀತಿಯುಣಿಸುತ್ತಾ ಬಂದು, ಅವುಗಳ ನೋವಿಗೆ ಮಿಡಿದಿದ್ದಾರೆ. ಮಂಜಮ್ಮ ಎಂಬ ಈ ಮಹಾತಾಯಿಯು ತನ್ನಂತೆ ಹಲವಾರು ಮಂಗಳಮುಖಿಯರಿಗೆ ಆಶ್ರಯ ನೀಡುವುದರ ಜೊತೆಗೆ, ಆಶ್ರಯ ಕಳೆದುಕೊಂಡ ವೃದ್ಧರು ಹಾಗೂ ತಂದೆ ತಾಯಿಗಳ ಪ್ರೀತಿಯಿಂದ ವಂಚಿತರಾದ ಅನಾಥ ಮಕ್ಕಳಿಗೆ ಆಶ್ರಯಧಾತೆಯಾಗಿ ತನ್ನ ಮಾತೃ ಶ್ರೀಮಂತಿಕೆಯನ್ನು ಹಾಗೂ ತಾಯ್ತನವನ್ನು ಹೆಚ್ಚಿಸಿಕೊಂಡಿದ್ದಾರೆ. ಇದು ಮಂಜಮ್ಮ ಜೋಗತಿಯ ಬದುಕಿನ ಕಿರು ಪರಿಚಯ ಮಾತ್ರವಾಗಿದೆ. ಇವರ ಸಾಧನೆಯು ನಿಸ್ವಾರ್ಥದಿಂದ ಕೂಡಿದ್ದು, ಮಾತು ಕೃತಿಯಾಗಿ, ಕಾರ್ಯವಾಗಿ ಹೊರಹೊಮ್ಮಿದೆ. ಆದ ಕಾರಣ ಇವರನ್ನು, ಇವರ ಕಾರ್ಯವನ್ನು ಎಷ್ಟು ವರ್ಣಿಸಿದರೂ ಅತಿಶಯೋಕ್ತಿಯಾಗಲಾರದು. ಮಂಜಮ್ಮ ಜೋಗತಿಯೆಂಬ ಈ ಮಹಾತಾಯಿಯು ಕಲಾಕ್ಷೇತ್ರಕ್ಕೆ ಇನ್ನಷ್ಟು ಸೇವೆಯನ್ನು ನೀಡಲಿ, ಇವರ ಸಾಮಾಜಿಕ ಕಳಕಳಿ ಸದಾ ಹೀಗೆ ಮುಂದುವರೆಯುವಂತಹ ಆರೋಗ್ಯವನ್ನು ದೇವರು ಕರಣಿಸಲಿ ಎಂಬುದೆ ನಮ್ಮ ಹಾರೈಕೆ.

ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401

ನೆಲದನಿ

ರಂಗದ ಮೇಲೆ ಮಂಗಳಮುಖಿಯರ ಬದುಕಿನಾಟ ವಿಶೇಷ ಲೇಖನ : ಸಂಧ್ಯಾ ಸಿಹಿಮೊಗೆ

Published

on

ರಂಗಕರ್ಮಿ ರೇವತಿ

ಗಂಡು ಹೆಣ್ಣೆಂಬ ಚೌಕಟ್ಟಿನಾಚೆ ಭಿನ್ನ ಲಿಂಗಿಯಾಗಿ ತನ್ನ ಭಾವನೆ, ತುಮುಲಗಳನ್ನು ರಂಗದ ಮೇಲೆ ಪ್ರಸ್ತುತ ಪಡಿಸುತ್ತಿರುವ ರೇವತಿ ಅವರು ಲೈಂಗಿಕ ಅಲ್ಪಸಂಖ್ಯಾತರ ಆಶಾಕಿರಣವಾಗಿದ್ದಾರೆ. ಸಮಾಜದಲ್ಲಿ ಅವಮಾನ, ದೈಹಿಕ ಮತ್ತು ಮಾನಸಿಕ ಕಿರುಕುಳಗಳಿಗೆ ಒಳಗಾಗುವ ಮಂಗಳಮುಖಿಯರಿಗೆ ಬದುಕುವ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ರೇವತಿಯವರು ರಂಗಭೂಮಿಯಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸುತ್ತಿದ್ದಾರೆ.

ತಮಿಳುನಾಡಿನ ನಮಕ್ಕಲ್ ಜಿಲ್ಲೆಯಲ್ಲಿ ಜನಿಸಿದ ಸ್ವತ: ಮಂಗಳಮುಖಿಯಾದ ಇವರು ತಮ್ಮಂತೆಯೇ ಇರುವ ಲೈಂಗಿಕ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಹಾಗೂ ಅವರಲ್ಲಿ ಆತ್ಮ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇವರು ರಚಿಸಿದ ಕನ್ನಡ ಅನುವಾದಿತ `ಬದುಕು ಬಯಲು’ ಎಂಬ ನಾಟಕವು ರಾಜ್ಯದ ಹಲವು ಜಿಲ್ಲೆಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ. ಇವರ ಜೀವನವನ್ನು ಆಧರಿಸಿದ `ಜನುಮದತ್ತ’ ಎಂಬ ನಾಟಕವು 50ಕ್ಕೂ ಹೆಚ್ಚು ಪ್ರದರ್ಶನ ಕಂಡು ಜನಮನ್ನಣೆ ಪಡೆದಿದೆ. ಈ ನಾಟಕದಲ್ಲಿ ತಾವೇ ಮುಖ್ಯ ಪಾತ್ರದಲ್ಲಿ ನಟಿಸಿದ್ದು ಕನ್ನಡ ರಂಗಭೂಮಿಗೊಂದು ಹೊಸ ಆಯಾಮ ಸಿಕ್ಕಂತಾಗಿದೆ. ರೇವತಿಯವರ ಜೀವನಾಧಾರಿತವಾಗಿ ರಚಿಸಿರುವ ಎನ್ನ ಕೊರಳ್ ತಮಿಳು ನಾಟಕವನ್ನು ಅವರೇ `ನನ್ನ ದನಿ’ ಎಂದು ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ಗಂಡು ಹೆಣ್ಣುಗಳ ಚೌಕಟ್ಟಿನಾಚೆ ಭಿನ್ನ ಲಿಂಗಿಯಾಗಿ ಬದುಕುವುದು ಬಲು ಕಷ್ಟವಾಗಿರುವ ಬಗ್ಗೆ ನಾಟಕದಲ್ಲಿ ಎಳೆ- ಎಳೆಯಾಗಿ ಬಿಡಿಸಿದ್ದು ಸ್ವತಃ ಅವರೇ ಅಭಿನಯಿಸಿದ್ದಾರೆ. ಬೆಂಗಳೂರು, ಶಿವಮೊಗ್ಗ ಸೇರಿದಂತೆ ಹಲವಾರು ಕಡೆಗಳಲ್ಲಿ ನಾಟಕ ಯಶಸ್ವಿ ಪ್ರದರ್ಶನ ಕಂಡಿದೆ.

ಲೈಂಗಿಕ ಅಲ್ಪಸಂಖ್ಯಾತರ ಹೋರಾಟದ ಬಗ್ಗೆ ಹಲವಾರು ಲೇಖನಗಳನ್ನು ರೇವತಿ ಬರೆದು ಪ್ರಕಟಿಸಿದ್ದಾರೆ. ಇವರು ಬರೆದ ಹಲವಾರು ಲೇಖನಗಳು ದೇಶದ ವಿವಿಧ ಭಾಷೆಗಳಿಗೆ ತುರ್ಜುಮೆಯಾಗಿದೆ. ತಮ್ಮನ್ನು ಮಹಿಳೆಯೆಂದು ದೃಢೀಕರಿಸಿಕೊಂಡು ಪಾಸ್‍ಪೋರ್ಟ್‍ನಲ್ಲೂ ಮಹಿಳೆ ಎಂಬ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಇವರು ಯಶಸ್ವಿಯಾಗಿದ್ದಾರೆ. ಕನ್ನಡ, ತಮಿಳು ಹಾಗೂ ಹಿಂದಿ ಭಾಷೆಯನ್ನು ಬಲ್ಲ ಇವರು ಸಂಗಮ ಎಂಬ ಲೈಂಗಿಕ ಶೋಷಿತರ ಧ್ವನಿಯಾದ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಕರ್ನಾಟಕ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯದಲ್ಲೂ ಇವರು ಕಾರ್ಯನಿರ್ವಹಿಸಿರುತ್ತಾರೆ. ಲೈಂಕಿಕ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಅಳವಾಗಿ ಅಧ್ಯಯನ ನಡೆಸುವ ಸಂಘಟನೆಗಳೊಂದಿಗೆ ಕೈ ಜೋಡಿಸಿರುತ್ತಾರೆ. ರಾಜ್ಯ ಸರಕಾರ ಹಿಂದುಳಿದ ವರ್ಗಗಳ ಆಯೋಗದೊಂದಿಗೆ ಹಲವು ವರ್ಷ ಕಾರ್ಯ ನಿರ್ವಹಿಸಿದ್ದರು.

ಇವರ ಇನ್ನಿತರ ಲೇಖನಗಳೆಂದರೆ `ಉನರುಮಂ ಉರುವವಂ’, `ದಿ ಟ್ರೂತ್ ಎಬೌಟ್ ಮಿ’ ಇವು ತಮಿಳು, ಮಲೆಯಾಳಂ ಮತ್ತು ತೆಲುಗಿಗೆ ಭಾಷಾಂತರವಾಗಿದೆ 20ಕ್ಕೂ ಹೆಚ್ಚು ಕಾಲೇಜು ಮತ್ತು ವಿಶ್ವವಿದ್ಯಾನಿಯಗಳಲ್ಲಿ ಪಠ್ಯಕ್ರಮವಾಗಿದೆ. 2010 ರಲ್ಲಿ ಹಮಾರಾ ಕಹಾನಿಯಾ ಹಮಾರಾ ಖಾಡೇ, ಹಿಜಡಾಕಾ ಜೀವನಯಾನ ಕಾ ಏಕ್ ಸಂಖನ್, 2016 ರಲ್ಲಿ ಎ ಲೈಫ್ ಇನ್ ಟ್ರಾನ್ಸ ಆಕ್ಟಿವಿಜಂ ಎಂಬ ಕೃತಿಗಳನ್ನು ರಚಿಸಿದ್ದಾರೆ.

ಮಂಗಳಮುಖಿಯರನ್ನು ಸಮಾಜದಲ್ಲಿ ಎಲ್ಲಾ ಕಡೆ ತಾತ್ಸಾರ ಭಾವದಿಂದ ನೋಡುತ್ತಾರೆ ಅವರನ್ನು ಮನುಷ್ಯರಂತೆ ಕಾಣೋರೆ ವಿರಳ. ಸಮಾಜದ ಮುಂದೆ ತಿರಸ್ಕ್ರತರಾಗಿ ಬದುಕುತ್ತಿದ್ದಾರೆ. ಸ್ವಾಭಿಮಾನದಿಂದ ಬದುಕುಬೇಕು ಮಂಗಳ ಮುಖಿಯರನ್ನು ಮಹಿಳೆಯರೆಂದು ಗುರುತಿಸಬೇಕು ಹಾಗೂ ಸಮಾಜ ಗೌವರಯುತವಾಗಿ ಕಾಣಬೇಕು ಈ ದಿಸೆಯಲ್ಲಿ ದೃಢನಿರ್ಧಾರ ತೆಗೆದುಕೊಂಡು ಮಂಗಳಮುಖಿಯರ ಶ್ರೇಯೋಭಿವೃದ್ಧಿಗೆ ಶ್ರಮಪಡುತ್ತಿರುವುದು ಯುವ ಪೀಳಿಗೆಗೆ ಉತ್ತಮ ಉದಾಹರಣೆ.

ಕೃಪೆ : ವಾರ್ತಾಭವನ ಶಿವಮೊಗ್ಗ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ನೆಲದನಿ

ಕರ್ನಾಟಕವೆಂದರೆ ಕರುಣೆಯಿಲ್ಲವೇ..? ಕನ್ನಡವೆಂದರೆ ಹೆಮ್ಮೆಯಲ್ಲವೇ..?

Published

on

 

ಉದಯವಾಗಲಿ ಚಲುವ ಕನ್ನಡನಾಡು
ಬದುಕು ಬಲಹೀನ ನಿಧಿಯು ಸದಭಿಮಾನದ ಗೂಡು”

ಅಂದು 1924 ನೇ ಇಸವಿ ಬೆಳಗಾವಿಯಲ್ಲಿ ಗಾಂಧೀಜಿಯವರು ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಸಂಗೀತ ವಿದೂಷಿ ಗಂಗೂಬಾಯಿ ಹಾನಗಲ್ ರವರು ಬಾಲಕಿಯಾಗಿದ್ದಾಗ ಹಾಡಿದಂಥ ಹಾಡಿದು. ಇದನ್ನು ಹುಯಿಲಗೋಳ ನಾರಾಯಣರಾಯರು ಬರೆದಂಥ ರಾಷ್ಟ್ರಗೀತೆ. ಹೌದು ಅಂದಿನ ಕಾಲಕ್ಕೆ ಇದು ಕನ್ನಡ ಭಾಷೆಗೆ ರಾಷ್ಟ್ರಗೀತೆಯೇ ಸರಿ. ಮೊದಲಿನಿಂದಲೂ ಭಾಷಾತೀತ ರಾಷ್ಟವಾಗಿರುವ ಭಾರತದಲ್ಲಿ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡವೂ ದ್ರಾವಿಡಭಾಷೆಗಳಲ್ಲಿ ಒಂದು. ಇಂಥಾ ಭಾಷಾಪ್ರೇಮ ಹೊತ್ತ ಹುಯಿಲಗೋಳ ನಾರಾಯಣರಾಯರು ಕನ್ನಡಕ್ಕಾಗಿಯೇ ಬರೆದಂಥ ಅದ್ಭುತ ಅರ್ಥಗಳುಳ್ಳ ಸಾಲಿನ ಪದಗಳು. ಸ್ವತಂತ್ರ ಪೂರ್ವದಲ್ಲೇ ಭಾಷಾಭಿಮಾನದಿಂದ ಒಗ್ಗೂಡುವ ಪ್ರಯತ್ನಕ್ಕೆ ನಾಂದಿಯಾಯಿತೇನೋ ಇವರ ಬರಹದ ಹಾಡು. ಹುಯಿಲಗೋಳ ನಾರಾಯಣರಾಯರು ಕನ್ನಡಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು.

ಏಕೀಕರಣಗೊಂಡ ಕರ್ನಾಟಕ 60 ವಸಂತಗಳನ್ನ ಪೂರೈಸಿ ವಜ್ರಮಹೋತ್ಸವವನ್ನೂ ಆಚರಿಸಿಕೊಂಡಿದೆ. ಕನ್ನಡ ಭಾಷಿಕರು ವಾಸಿಸುವ ಬಹುತೇಕ ಪ್ರದೇಶಗಳೆಲ್ಲಾ ಪ್ರಥಮವಾಗಿ ಒಂದಾದ ಈ ಉತ್ಸವಕ್ಕೆ ಏನಿಲ್ಲವೆಂದರೂ ಒಂದೂವರೆ ಶತಮಾನದ ಹಿನ್ನೆಲೆ ಇದೆ. ಹಿಂದೆ ಒಂದು ಭೂಭಾಗಕ್ಕೆ ಕರ್ನಾಟಕವೆಂಬ ಹೆಸರು ಇರಲಿಲ್ಲ. ಕನ್ನಡ ಭಾಷೆ ಮಾತನಾಡುವ ಸ್ಥಳಗಳಲ್ಲಿ ಕನ್ನಡಿಗರೆ ಆಳ್ವಿಕೆ ನಡೆಸಿದರು. ಕದಂಬರು ಕನ್ನಡ ಮಾತೃಭಾಷೆಯ ರಾಜಮನೆತನಗಳಲ್ಲಿ ಮೊದಲಿಗರು. ಇವರ ಬಳಿಕ ಹಲವಾರು ರಾಜವಂಶಗಳು ನೂರಾರು ವರ್ಷಗಳ ಕಾಲ ವಿವಿಧ ಭಾಗಗಳಲ್ಲಿ ಆಡಳಿತ ನಡೆಸಿದರು. ಕನ್ನಡ ಭಾಷೆಗೆ ಆಗ ಮಾನ್ಯತೆ ಇತ್ತು.

ಬ್ರಿಟಿಷರು ಭಾರತಕ್ಕೆ ಬಂದು ಭಾರತವನ್ನೇ ತಮ್ಮ ಅಂಕೆಗೆ ತೆಗೆದುಕೊಳ್ಳಲು ಆರಂಭಿಸಿದರು. ಅನೇಕ ದೌರ್ಬಲ್ಯಗಳಿಂದ ನಮ್ಮ ನೂರೆಂಟು ಸಂಸ್ಥಾನಗಳು ಅವರ ವಶಕ್ಕೆ ಹೋದವು. ಬೆರಳೆನಿಕೆಯಷ್ಟು ರಾಜರು ಮಾತ್ರ ಬಿಳಿಯರ ವಿರುದ್ಧ ಸೆಟೆದು ನಿಂತರು. ಅಂಥವರಲ್ಲಿ ಮೈಸೂರು ಸಂಸ್ಥಾನದ ಟಿಪ್ಪು ಸುಲ್ತಾನ್ ಕೂಡ ಒಬ್ಬರು. ಕೊನೆಯ ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಪತನಗೊಂಡಿದ್ದು 1799ರಲ್ಲಿ. ಆ ಹೊತ್ತಿಗಾಗಲೇ ದೇಶದೆಲ್ಲೆಡೆ ಬ್ರಿಟಿಷರ ಆಡಳಿತ ಶುರುವಾಗಿತ್ತು. ಗೆದ್ದ ಪ್ರಾಂತ್ಯಗಳನ್ನೆಲ್ಲಾ ಅವರಿಷ್ಟಕ್ಕೆ ಬಂದಂತೆ ಹಂಚಿಕೆ ಮಾಡಲು ಆರಂಭಿಸಿದರು. ಇಂಥಹ ವಿಭಜನೆ ಒಳಪಟ್ಟವರಲ್ಲಿ ಕನ್ನಡಿಗರೂ ಸೇರಿದ್ದರು. ಕನ್ನಡ ಮಾತನಾಡುವ ಪ್ರದೇಶಗಳನ್ನು ಸುಮಾರು 20 ಕ್ಕೂ ಹೆಚ್ಚು ಭಾಗಗಳಾಗಿ ವಿಂಗಡಿಸಿದರು. ಕೆಲವು ಪ್ರದೇಶಗಳನ್ನು ತಾವೇ ಇಟ್ಟುಕೊಂಡರೆ ಇನ್ನೂ ಹಲವು ಪ್ರದೇಶಗಳನ್ನು ತಮಗೆ ಬೆಂಬಲಿಸುತ್ತಿದ್ದ ಸಂಸ್ಥಾನಗಳಿಗೆ ಬಿಟ್ಟುಕೊಟ್ಟರು. ದುರಾದೃಷ್ಟವೆಂದರೆ ಅವರು ಅನ್ಯ ಭಾಷಿಕರಾಗಿದ್ದರು. ಅವರ ಆಳ್ವಕೆಯಲ್ಲಿ ಕನ್ನಡ ಮಾತನಾಡುವವರು ಅಕ್ಷರಶಃ ಅನಾಥರಾದರು.

ಮರಾಠಿ, ಉರ್ದು, ತಮಿಳು, ತೆಲುಗು ಭಾಷಿಕರ ನಡುವೆ ಕನ್ನಡಿಗರು ಇರಲೇಬೇಕಾದ ಅನಿವಾರ್ಯ ಸಂದರ್ಭ ಸೃಷ್ಟಿಯಾಯಿತು. ಆಡಳಿತಗಾರರು ಕನ್ನಡಿಗರ ಆತಂಕ ದೂರ ಮಾಡುವ ಯಾವ ಕ್ರಮವನ್ನೂ ತೆಗೆದುಕೊಳ್ಳುತ್ತಿರಲಿಲ್ಲ. ನಮಗೆ ಅನ್ಯಾಯವಾಗುತ್ತಿದೆ, ನಮ್ಮ ಭಾಷೆಗೆ ತೊಂದರೆಯಾಗುತ್ತಿದೆ ಎಂದು ಒಗ್ಗಟ್ಟಾಗಿ ಹೇಳುವ ಪರಿಸ್ಥಿತಿಯೂ ಕನ್ನಡಿಗರಿಗೆ ಇರಲಿಲ್ಲ. ನಮ್ಮದೇ ನೆಲದಲ್ಲಿ ನಾವೇ ಅಲ್ಪ ಸಂಖ್ಯಾತರೆನ್ನಿಸಿಕೊಂಡು ಬವಣೆ ಪಡುವ ಗೋಳು ನಮ್ಮದಾಗಿತ್ತು. ಸಾವಿರಾರು ವರ್ಷಗಳಿಂದ ಉಳಿದುಕೊಂಡಿದ್ದ, ಕನ್ನಡಿಗರ ಸಂಸ್ಕೃತಿಗೆ ಧಕ್ಕೆ ಉಂಟಾಯಿತು. ಇಪ್ಪತ್ತಕ್ಕೂ ಹೆಚ್ಚು ದ್ವೀಪಗಳಾಗಿ ಹಂಚಿ ಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳಲ್ಲಿ ಕನ್ನಡತನ ಉಳಿಸಿ ಕೊಳ್ಳುವುದು ಅಸಾಧ್ಯವಾಗಿತ್ತು.ಅಚ್ಚ ಕನ್ನಡ ಮಾತನಾಡುವ ಪ್ರದೇಶಗಳಲ್ಲಿ ಅನ್ಯಭಾಷಿಕರು ಅವರ ಭಾಷೆಯನ್ನು ಸುಕಾ ಸುಮ್ಮನೆ ಹೇರುತ್ತಿದ್ದರು. ಆಡಳಿತ ಅವರ ಕೈಯಲ್ಲಿದ್ದರಿಂದ ಕನ್ನಡಿಗರು ಮಣಿಯಲೇಬೇಕಾದ ಅನಿವಾರ್ಯ ಸ್ಥಿತಿ ಅದು. ಭಾಷೆ ಕಳೆದುಕೊಳ್ಳುತ್ತಿರುವ ಭೀತಿ ಒಂದೆಡೆಯಾದರೆ ಅನ್ಯಭಾಷಿಕರ ದಬ್ಬಾಳಿಕೆಗೆ ಕನ್ನಡಿಗರು ಗುರಿಯಾದರು. ಇಂಥಹ ಯಾತನಾಮಯ ಪರಿಸ್ಥಿತಿಯಲ್ಲಿ ಸಾಂಸ್ಕೃತಿಕವಾಗಿ, ಪ್ರಾದೇಶಿಕವಾಗಿ ಕನ್ನಡಿಗರೆಲ್ಲಾ ಒಂದಾಗಬೇಕೆಂಬ ಕೂಗು ಎದ್ದಿತು. ತಾತ್ವಿಕ ತಳಹದಿಯ ಮೇಲೆ ಕನ್ನಡ ಸಂಸ್ಕೃತಿ-ಕನ್ನಡಿಗರು ಒಂದುಗೂಡಲು ಆರಂಭವಾದ ಆಂದೋಲನವೇ ಕನ್ನಡ ಏಕೀಕರಣ ಚಳುವಳಿ. ಕನ್ನಡಕ್ಕೆ, ಕನ್ನಡಿಗರಿಗೆ ನಾವೆಲ್ಲಾ ಒಂದಾಗಬೇಕೆಂದು ಮೊದ ಮೊದಲಿಗೆ ಪ್ರೇರಣೆ ಕೊಟ್ಟವರು ಅಭಿವ್ಯಕ್ತಿ ಮಾಡಲು ಅವಕಾಶವಿದ್ದ ಕವಿಗಳು, ಸಾಹಿತಿಗಳು, ಕಲಾವಿದರು.ಕಥೆ-ಕವನ-ಕಾದಂಬರಿ-ಚಿತ್ರ,  ಬರಹಗಳಲ್ಲಿ ಕನ್ನಡತ್ವ ಕಾಣಿಸಿಕೊಳ್ಳತೊಡಗಿತು.

ಆ ಕಾಲಘಟ್ಟದಲ್ಲಿ ಕನ್ನಡಿಗರೆಲ್ಲರೂ ಒಂದಾಗಿ ಹೋರಾಟ ನಡೆಸುವ ವಾತಾವರಣ ಇರಲಿಲ್ಲ. ಇಂಗ್ಲೆಂಡ್ ನ ವ್ಯಾಪಾರಿ ಸಂಸ್ಥೆಯೊಂದು ಭಾರತದಲ್ಲಿ ಅಂದಾದುಂದಿ ಆಡಳಿತ ನಡೆಸುತ್ತಿತ್ತು. ಇದರಿಂದ ಇಂಗ್ಲೆಂಡ್ ನ ಪ್ರತಿಷ್ಟೆಗೆ ಪೆಟ್ಟು ಬಿದ್ದಾಗ ಸ್ವತಃ ಬ್ರಿಟನ್ ರಾಣಿಯೇ ಭಾರತದ ಆಡಳಿತವನ್ನು ನೇರವಾಗಿ ಕೈಗೆತ್ತಿಕೊಂಡರು. ಆಗ ಅಲ್ಲಿದ್ದ ಬಿಗಿವಾತಾವರಣ ಕಡಿಮೆಯಾಯಿತು. ಆಗ ಆಡಳಿತ ನಡೆಸಲು ಬಂದ ಕೆಲವು ಅಧಿಕಾರಿಗಳು ಕನ್ನಡಿಗರ ಪರಿಪಾಟಲುಗಳನ್ನ ನೋಡಿ ವಾಸ್ತವತೆ ಸ್ಥಿತಿಯನ್ನು ಮೇಲಾಧಿಕಾರಿಗಳಿಗೆ ವರದಿ ನೀಡಿದರು. ಆ ಸಮಯದಲ್ಲಿ ಕನ್ನಡಿಗರ ಬಗೆಗೆ ಸಹಾನುಭೂತಿ ಸಿಕ್ಕಿತು. ಆದರೆ ತಾವು ಇಷ್ಟೂ ವರ್ಷ ಕಳೆದುಕೊಂಡಿದ್ದನ್ನು ಮತ್ತೆ ಪಡೆಯಬೇಕಾದರೆ ಒಗ್ಗಟ್ಟಾಗಬೇಕೆಂಬ ಅಭಿಲಾಷೆ ಕನ್ನಡಿಗರಲ್ಲಿ ಮೂಡಿತು.ಅದಕ್ಕೆ ಬ್ರಿಟಿಷ್ ಅಧಿಕಾರಿಗಳು-ಸಂಶೋಧಕರು ಬೆಂಬಲ ಕೊಟ್ಟರು. ಕೇವಲ ಅನುಕೂಲಕ್ಕೆ ತಕ್ಕಂತೆ ಪ್ರದೇಶಗಳನ್ನು ತುಂಡು ತುಂಡು ಮಾಡಿದ್ದ ಬ್ರಿಟಿಷ್ ಸರ್ಕಾರದ ನೀತಿಯನ್ನು ದೇಶದ ಕೆಲವೆಡೆ ವಿರೋಧಿಸುವ ಕಾರ್ಯ ನಡೆಯಿತು.ವಾಸ್ತವಾಂಶ ಗೊತ್ತಿದ್ದ ಕೆಲ ಇಂಗ್ಲೀಷ್ ಅಧಿಕಾರಿಗಳೂ “ಭಾಷೆ”ಯ ಆಧಾರದ ಮೇಲೆ ಪ್ರಾಂತ್ಯಗಳನ್ನು ವಿಂಗಡಿಸಲು ಸೂಚಿಸಿದರು. ಆದರೆ ಇದರಿಂದ ಹೆಚ್ಚಿನ ಪ್ರಗತಿಯೇನೂ ಆಗಲಿಲ್ಲ. ಯಥಾಸ್ಥಿತಿ ಮುಂದುವರಿಯಿತು. ಕರ್ನಾಟಕದಲ್ಲಿ  ಕನ್ನಡಕ್ಕೆ ಶಾಲೆಗಳಲ್ಲಿ ಹೆಚ್ವಿನ ಮಾನ್ಯತೆ ಸಿಕ್ಕಿತು. ಕೆಲವು ಕನ್ನಡ ಶಾಲೆಗಳು ಪ್ರಾರಂಭವಾದವು.

19 ನೇ ಶತಮಾನದ ಕೊನೆ ವೇಳೆಗೆ ಭಾರತ ಸ್ವತಂತ್ರವಾಗಬೇಕೆಂಬ ಕೂಗು ಎಲ್ಲೆಡೆ ಕೇಳಿಬಂತು. ಆಡಳಿತದ ಅನುಕೂಲಕ್ಕಾಗಿ ವಿಭಜನೆಯಾದ ಭಾಷಿಕರೂ ಸ್ವಾತಂತ್ರ್ಯ ಚಳುವಳಿಗೆ ದೊಡ್ಡ ಪ್ರಮಾಣದಲ್ಲಿಯೇ ಕೈ ಜೋಡಿಸಿದರು. ಭಾಷಾವಾರು ಪ್ರಾಂತ್ಯಗಳು ರಚನೆಗೊಳ್ಳಬೇಕೆಂಬ ಒಳಷರತ್ತಿನೊಡನೆ ಹೋರಾಟ ಮೊದಲಾಯಿತು. ಅದಕ್ಕೆ ಕನ್ನಡ ನಾಡು ಸೇರಿತು, ಕರ್ನಾಟಕ ಏಕೀಕರಣದ ಆಗ್ರಹವೂ ಅದರಲ್ಲಿತ್ತು. ಕನ್ನಡ ಮಾತನಾಡುವ. ಪ್ರದೇಶಗಳಲ್ಲಿ ಮುಂಬೈ ಭಾಗ ಹಾಗೂ ನಿಜಾಮ್ ಆಡಳಿತದ ಪ್ರಾಂತ್ಯಗಳು ಕನ್ನಡಿಗರಿಗೆ ತೊಂದರೆ ಒಡ್ಡಿದ್ದವು. ಒಂದೆಡೆ ಮರಾಠಿ ಪ್ರಾಬಲ್ಯ ಇನ್ನೊಂದೆಡೆ ಉರ್ದು ಹೇರಿಕೆ. ಕನ್ನಡಿಗರದು ಉಸಿರು ಕಟ್ಟಿದಂತ ಪರಿಸ್ಥಿತಿ. ಮುಂಬೈ ವಲಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಭಾಷೆ ಬೆಳೆಸಲು ಹೆಚ್ಚಿನ ಒತ್ತಾಸೆಗಳು ಆರಂಭಗೊಂಡರು. ಇದಕ್ಕೆ ಶಾಂತ ಕವಿಗಳು,  ಡೆಪ್ಯೂಟಿ ಚೆನ್ನಪ್ಪನವರು ಭದ್ರ ಬುನಾದಿಯನ್ನು ಒದಗಿಸಿಕೊಟ್ಟರು. ಕನ್ನಡದ ಚಟುವಟಿಕೆಗಳು ಶಾಲೆಗಳ ಹೊರಗೂ ಪ್ರಾರಂಭಗೊಂಡವು. ರಾ.ಹ ದೇಶಪಾಂಡೆ ಅವರು ಸಮಾನ ಮನಸ್ಕರೊಂದಿಗೆ ಸ್ಥಾಪಿಸಿದ ‘ಕರ್ನಾಟಕ ವಿದ್ಯಾವರ್ಧಕ ಸಂಘ’ ಕನ್ನಡ ಪರದನಿ ಎತ್ತಲು ಸಾಂಸ್ಥಿಕ ರೂಪಕೊಟ್ಟಿತು. ಕನ್ನಡ ‘ವಾಗ್ಭೂಷಣ’ ಪತ್ರಿಕೆ ಏಕೀಕರಣದ ಅಗತ್ಯತೆಯನ್ನು ಸ್ಪಷ್ಟವಾಗಿ ಪ್ರಕಟಿಸಿತು. ಅಸ್ಸಾಂ,  ಬಂಗಾಲ, ಗುಜರಾತ್ ಮೊದಲಾದ ಕಡೆಗಳಲ್ಲಿ ಸ್ಥಳೀಯ ಭಾಷೆಗಳ ನೆಲೆಯಲ್ಲಿ ನಡೆಸಿದ ಚಳುವಳಿಗಳನ್ನು ಗಮನಿಸುತ್ತಿದ್ದ ಮುಂಬಯಿ ಭಾಗದ ಕನ್ನಡಿಗರು ಕನ್ನಡ ಏಕೀಕರಣದ ಧ್ವನಿಯನ್ನು ನಿರಂತರವಾಗಿ ಉಳಿಸಿಕೊಂಡು ಬಂದರು. ಇದೇ ಹಾದಿಯಲ್ಲಿ ಅಖಿಲ ಕರ್ನಾಟಕ ಗ್ರಂಥಕರ ಸಮ್ಮೇಳನವೂ ನಡೆಯಿತು.ಎಲ್ಲವೂ ಏಕೀಕರಣಕ್ಕೆ ಪೂರಕವಾದ ವಾತಾವರಣವನ್ನು ಹುಟ್ಟುಹಾಕಿದವು. ಮೈಸೂರು ಪ್ರಾಂತ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು 1915 ರಲ್ಲಿ ಜನ್ಮತಾಳಿ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಕನ್ನಡ ಮಾತನಾಡುವ ಪ್ರದೇಶಗಳಲ್ಲಿ ಏರ್ಪಡಿಸಿ ಅಲ್ಲಿ ಕನ್ನಡಪರ, ಕರ್ನಾಟಕಪರ ಚಿಂತನೆಗಳು ಹೊರ ಹೊಮ್ಮುವಂತೆ ಮಾಡಿತು.

ಕರ್ನಾಟಕದ ಭವ್ಯ ಇತಿಹಾಸ, ಕನ್ನಡ ಸಾಹಿತ್ಯದ ಶ್ರೀಮಂತಿಕೆ , ಕನ್ನಡ ನೆಲದ ವೈಶಿಷ್ಟ್ಯ ಮುಂತಾದ ವಿಷಯಗಳನ್ನು ಒಳಗೊಂಡ ಹಲವಾರು ಕೃತಿಗಳು ಕನ್ನಡಿಗರ ಕೈ ತಲುಪಿದವು. ಎಲ್ಲವೂ ಕರ್ನಾಟಕತ್ವವನ್ನು ಪ್ರತಿಪಾದಿಸುತ್ತಿದ್ದವು. ರಾಷ್ಟೀಯ ಹೋರಾಟದ ಜೊತೆ ಜೊತೆಗೆ ಕರ್ನಾಟಕ ಏಕೀಕರಣ ಚಳುವಳಿಯೂ ಹೆಜ್ಜೆ ಹಾಕಿತು.ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳು ಅಗತ್ಯವೆಂಬ ಮುಂದಾಲೋಚನೆಯಿಂದ ಕಾಂಗ್ರೆಸ್ ಪಕ್ಷ ಸಮಿತಿಗಳು ಭಾಷೆಯ ಆಧಾರದ ಘಟಕಗಳಾಗುವಂತೆ ಶ್ರಮಿಸಿದ್ದವು. ಮಹಾತ್ಮಗಾಂಧಿ ಅವರು ಅಖಿಲ ಭಾರತ ಕಾಂಗ್ರೆಸ್ ವಾರ್ಷಿಕ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಅದರ ಇತಿಹಾಸದಲ್ಲಿ ಒಮ್ಮೆ ಮಾತ್ರ. ಅದು ನಡೆದದ್ದು ಕನ್ನಡದ ನೆಲ ಬೆಳಗಾವಿಯಲ್ಲಿ (1924). ಇದೇ ಸಮ್ಮೇಳನ ಕರ್ನಾಟಕ ಏಕೀಕರಣದ ಮುನ್ನುಡಿ ಬರೆಯಲು ಪ್ರೇರೇಪಿಸಿತು. ಕರ್ನಾಟಕ ಏಕೀಕರಣ ಚಳುವಳಿ ಜೀವಂತವಾಗಿಯೇ ಇತ್ತು.ಸ್ವಾತಂತ್ರ್ಯಾ ನಂತರ  ಕಾಂಗ್ರೆಸ್ ಅಗ್ರಗಣ್ಯ ನಾಯಕರಲ್ಲೊಭ್ಬರಾದ ಎಸ್.ನಿಜಲಿಂಗಪ್ಪ ಎಡಬಿಡದೇ ಆಗಿನ ಪ್ರಧಾನಿ ಸೆಹರೂ ಅವರನ್ನು ಏಕೀಕರಣಕ್ಕಾಗಿ ನಿರ್ಧಾರ ತೆಗೆದುಕೊಳ್ಳಲು ನೆನಪು ಮಾಡುತ್ತಲೇ ಇದ್ದರು. ಸ್ವಾತಂತ್ರ್ಯಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ ಆಶ್ವಾಸನೆಗಳನ್ನು ಒಪ್ಪಿಕೊಳ್ಳಲು ಕೇಂದ್ರ ಸರ್ಕಾರ ಹಿಂದೇಟು ಹಾಕಿತು. ಆಂಧ್ರ ಉದಯದ ಸಮಯದಲ್ಲಿ ಬಳ್ಳಾರಿ ಮೈಸೂರಿಗೆ ಸೇರ್ಪಡೆಯಾದ ಸಂಭ್ರಮದ ಗಳಿಗೆಯಲ್ಲಿ ಯುವಕ ರಂಜಾನ್ ಸಾಬ್ ಅಸುನೀಗಿದರು. ಈ ಪ್ರಾಣಿಬಲಿ ಹಿಂದೆಯೇ ಕನ್ನಡಿಗರು ಅಮರಾಣಾಂತ ಉಪವಾಸ,  ಸತ್ಯಾಗ್ರಹ ಅಸ್ತ್ರಪ್ರಯೋಗಿಸಿದರು.ದೊಡ್ಡ ಮೇಟಿ ಹಾಗೂ ಅದರ ಗುಂಚಿ ಶಂಕರಕಲ್ಲನ ಗೌಡ ಪಾಟೀಲರು ಉಪವಾಸ ಕೂತರು. ಪರಿಸ್ಥಿತಿ ಬಿಗಡಾಯಿಸಿತು. ಅಧಿಕಾರರೂಢ ಕಾಂಗ್ರೆಸ್ ಕೈಚೆಲ್ಲಿ ಕುಳಿತಾಗ ಕಾಂಗ್ರೆಸೇತರ ಪಕ್ಷಗಳು ಚಳುವಳಿ ಕೈಗೆತ್ತಿಕೊಂಡವು. ಅದರಲ್ಲಿ ಕಮ್ಯುನಿಷ್ಟ್ ಹಾಗೂ ಪ್ರಜಾ ಸಮಾಜವಾದಿ ಪಕ್ಷವಾದಿ ಮುಖ್ಯವಾದವು.

ಆ ವೇಳೆಗೆ ಅಸ್ತಿತ್ವಕ್ಕೆ ಬಂದಿದ್ದ ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು ಏಕೀಕರಣಕ್ಕಾಗಿ ಹೋರಾಟಕ್ಕೆ ಇಳಿಯಿತು. ಪ್ರತಿಭಟನೆ-ಮೆರವಣಿಗೆ ಉಪವಾಸ, ಸಮ್ಮೇಳನ ಇವೆಲ್ಲ ಅವ್ಯಾಹತವಾಗಿ ನಡೆಯಲಾರಂಭಿಸಿದ್ದರಿಂದ ಅನ್ಯಮಾರ್ಗವಿಲ್ಲದೆ ಕೇಂದ್ರ ಸರ್ಕಾರ ನಾ!! ಫಜಲ್ ಆಲಿ ಅವರ ನೇತೃತ್ವದಲ್ಲಿ ಇನ್ನೊಂದು ಆಯೋಗವನ್ನು ನೇಮಿಸಿತು. ಜವಾಹರಲಾಲ ನೆಹರೂ ಅವರಿಗೆ ಕರ್ನಾಟಕ ಏಕೀಕರಣ ಮಾಡಬೇಕಾದ ಅನಿವಾರ್ಯತೆ ಅರ್ಥವಾಗಿತ್ತು. ರಾಜ್ಯ ವಿಂಗಡನಾ ಆಯೋಗವೆಂದು ಉಲ್ಲೇಖಿಸಲ್ಪಟ್ಟ ಈ ಸಮಿತಿಯಲ್ಕಿ ಎಚ್.ಎನ್. ಕುಂಜ್ರು ಹಾಗೂ ಕೆ.ಎಂ. ಫಣಿಕ್ಕರ್ ಸದಸ್ಯರಾಗಿದ್ದರು. ಈ ಮೂವರ ಸಮಿತಿ ಕರ್ನಾಟಕ ಏಕೀಕರಣದ ಎಲ್ಲಾ ಮಗ್ಗುಲುಗಳನ್ನು ಪರಿಶೀಲಿಸಿತು. ಕೊನೆಗೆ ಕನ್ನಡ ರಾಜ್ಯ ಏಕೀಕರಣಗೊಳ್ಳಲು ಪಕ್ವವಾಗಿದೆ ಎಂಬ ವರದಿಯನ್ನು 1955 ರ ಸೆಪ್ಟಂಬರ್ 30 ರಂದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು. ಏಕೀಕರಣಕ್ಕೆ ಲೋಕಸಭೆ,  ರಾಜ್ಯಸಭೆಗಳೂ  ಒಪ್ಪಿಗೆ ಕೊಟ್ಟ ನಂತರ ರಾಷ್ಟ್ರಪತಿಗಳ ಅಂಕಿತ ಬಿತ್ತು. ಶತಕಗಳಷ್ಟು ಚರಿತ್ರೆ ಇದ್ದರೂ ಎಂದೂ ಏಕಾಡಳಿತಕ್ಕೆ ಒಳಪಡದಿದ್ದ ಕನ್ನಡಿಗರು 1956 ರ ನವೆಂಬರ್ 1 ರಂದು ಒಂದು ರಾಜ್ಯದ ಆಡಳಿತಕ್ಕೆ ಒಂದಾದರು. ಕರ್ನಾಟಕ ರಾಜ್ಯ ರಚನೆಗೆ ಅಂತಿಮ ಅಂಕಿತ ಹಾಕಿದ್ದ ಆಗಿನ ರಾಷ್ಟ್ರಪತಿಗಳಾದ ಬಾಬು ರಾಜೇಂದ್ರಪ್ರಸಾದ್ ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದಲ್ಲಿ ವಿಧ್ಯುಕ್ತವಾಗಿ ಮೈಸೂರು (ಕರ್ನಾಟಕ) ರಾಜ್ಯ ಉದಯವನ್ನು ಘೋಷಿಸಿದರು. ವಿಪರ್ಯಾಸವೆಂದರೆ ಬಹುತೇಕ ಕನ್ನಡ ಮಾತನಾಡುವ ಪ್ರದೇಶಗಳು ಆಂಧ್ರ , ತಮಿಳುನಾಡು, ಮಹಾರಾಷ್ಟ್ರ, ಕೇರಳಗಳಲ್ಲಿಯೇ ಉಳಿದು ಬಿಟ್ಟವು. ಕನ್ನಡಿಗರ ಹೊಸ ರಾಜ್ಯಕ್ಕೆ ಮೈಸೂರು ಎಂದು ಕರೆದಿದ್ದು ಅಸಮಾಧಾನಕ್ಕೆ ಕಾರಣವಾಯಿತು. ಇದು ನಡೆದ 17 ವರ್ಷಗಳ ತರುವಾಯ ಸಿ. ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದಾಗ ಏಕೀಕೃತ ರಾಜ್ಯಕ್ಕೆ ಕರ್ನಾಟಕವೆಂದು ಮರು ನಾಮಕರಣವಾಗಿ ತೃಪ್ತಿಗೆ ಹಾದಿ ಮಾಡಿಕೊಟ್ಟಿತು.

ಈ ಮೇಲೆ ಹೇಳಿರುವುದೆಲ್ಲಾ ಕಥೆಯಲ್ಲ , ಬದಲಾಗಿ ನಡೆದ ಇತಿಹಾಸದ ಒಂದೊಂದು ಅಕ್ಷರಗಳ ಮುತ್ತುಗಳು. ಅಷ್ಟೊಂದು ಮಹನೀಯರುಗಳ ಪರಿಶ್ರಮದ ಫಲವಾಗಿಯೇ ಇಂದು ಅಖಂಡ ಕರ್ನಾಟಕದಲ್ಲಿ  ನಾವೆಲ್ಲಾ ಅತ್ಯಂತ ಸಂತೋಷದಿಂದ ಜೀವಿಸುತ್ತಿದ್ದೇವೆ. ಜೇನಿನಂಥ ಸಂಸಾರದಲ್ಲಿ ಹುಳಿ ಹಿಂಡುವ ಕೆಲಸವನ್ನು ಕೆಲ ನಾಯಕರುಗಳು ಅನಾವಶ್ಯಕವಾಗಿ ಮಾಡುತ್ತಿದ್ದಾರೆ. ಜನರು ಮುಗ್ಧರೇ, ಆದರೆ ಜನಗಳನ್ನಾಳುವ ಜನಪ್ರತಿನಿಧಿಗಳು ಮುಗ್ಧರಲ್ಲ.ಚಾಟಿ ಇಲ್ಲದೇ ಬುಗುರಿ ತಿರುಗಿಸುವ ಪ್ರವೀಣರು. ವಾಸ್ತವದಲ್ಲಿ ಅಖಂಡ ಕರ್ನಾಟಕವನ್ನ ಹಿಬ್ಬಾಗ ಮಾಡಲು ಪ್ರಯತ್ನಿಸುತ್ತಿರುವವರಿಗೆಲ್ಲಾ ಏನು ಸಿಗುವುದಿಲ್ಲ ಮತ್ತು ಅದರಿಂದ ಏನೂ ಲಾಭವಾಗುವುದಿಲ್ಲ. ಬದಲಾಗಿ ರಾಜಕಾರಣಿಗಳು ಲಾಭ ಪಡೆದುಕೊಳ್ಳುತ್ತಾರೆ. ಅಭಿವೃದ್ಧಿಯಾಗಲಿಲ್ಲ ಎಂಬ ಒಂದೇ ಕಾರಣ ಇಟ್ಟುಕೊಂಡು ರಾಜ್ಯವನ್ನು ವಿಭಜನೆ ಮಾಡಲು ಹೊರಟಿರುವ ಮುಗ್ಧಜನರಿಗೇನು ಗೊತ್ತು ಇದು ರಾಜಕೀಯದ ದೊಂಬರಾಟವೆಂದು. ಹೈದರಾಬಾದ್ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಎಂದು ಅವರೇ ಹೇಳಿಕೊಳ್ಳುತ್ತಿರುವ ಮಾತುಗಳು. ಇಲ್ಲಿ ಯಾವ ಸರ್ಕಾರಗಳಾಗಲೀ , ಮೀಡಿಯಾದವರಾಗಲೀ ಹೇಳುತ್ತಿಲ್ಲ. ಹೈದರಾಬಾದ್ ಕರ್ನಾಟಕಕ್ಕೆ 371J ಎಂಬ ಸಂವಿಧಾನಾತ್ಮಕ ವಿಶೇಷ ಸ್ಥಾನಮಾನವನ್ನು ನೀಡಿ ಆ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಅದಕ್ಕೆ ಪೂರಕವಾದ ಸವಲತ್ತುಗಳನ್ನು ನೀಡಲಾಗುತ್ತಿದೆ. ಅದನ್ನು ಸದ್ಭಳಕೆ ಮಾಡಿಕೊಳ್ಳಬೇಕಾಗಿರುವುದು ರಾಜಕಾರಣಿಗಳು ಮತ್ತು ಆಯಾ ಕ್ಷೇತ್ರದ ಎಂ.ಎಲ್.ಎ ಮತ್ತು ಎಂ.ಪಿಗಳದ್ದು. ಅಭಿವೃದ್ದಿ ಎಂಬ ಮಂತ್ರದ ಮೂಲಕ ಹುಳಿ ಹಿಂಡುವ ಕೆಲಸ ಮಾಡುತ್ತಿರುವ ವ್ಯಕ್ತಿಗಳು ಅಥವಾ ನಾಯಕರುಗಳು ಜನಪ್ರತಿನಿಧಿಗಳ ಕೊರಳಪಟ್ಟಿ ಹಿಡಿದು ಕೇಳಬೇಕು. ಸ್ವಾತಂತ್ರ್ಯಾ ನಂತರ ಅಥವಾ ಕರ್ನಾಟಕ ಏಕೀಕರಣವಾದ ನಂತರ ಹೈದರಾಬಾದ್ ಕರ್ನಾಟಕಕ್ಕೆ ಅಥವಾ ಉತ್ತರ ಕರ್ನಾಟಕಕ್ಕೆ ಎಷ್ಟು ಅನುಧಾನ ನೀಡಿದ್ದಾರೆಂದು ಅಂಕಿ ಅಂಶಗಳನ್ನು ನೋಡಿದರೆ ತಿಳಿಯುತ್ತದೆ.

ಹಾಗೆ ನೆನ್ನೆಯ ದಿನ ದಿನಾಂಕ  05.08.2018 ರ ಪ್ರಜಾವಾಣಿ ಪತ್ರಿಕೆಯ ಕಡೆ ಕಣ್ಣಾಯಿಸಿದೆ. ಈ ಸಲದ ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಎಷ್ಟು ಅನುಧಾನವನ್ನು ನೀಡಿದ್ದಾರೆ ಎಂದು ಬರೆದಿತ್ತು.ಅದನ್ನು ನೋಡಿ ಆಶ್ಚರ್ಯವಾಯಿತು. 13 ಜಿಲ್ಲೆಗಳಿಗೆ ಬರೋಬರಿ 7241 ಕೋಟಿ ರೂ.ಗಳು ಮತ್ತು ಮಿಕ್ಕ ದಕ್ಷಿಣ ಜಿಲ್ಲೆಗಳಿಗೆ 7238 ಕೋಟಿ ರೂ.ಗಳು ನೀಡಿದ್ದಾರೆ. ಇದರಿಂದಲೇ ತಿಳಿಯುತ್ತದೆ ಕುಮಾರಸ್ವಾಮಿಯವರ ನೇತೃತ್ವದ ಸಮ್ಮಿಶ್ರ ಸರ್ಕಾರ ಮಲತಾಯಿ ಧೋರಣೆ ಮಾಡುತ್ತದೆಯೋ ಇಲ್ಲಾ ತಾಯಿ ಮಮತೆ ತೋರುತ್ತದೆಯೋ ಎಂದು. ಅವರು ಹೇಳಿದಂತೆ ಮಾಡಲು ಹೊರಟೇವೆಂದರೆ ಒಂದು ರಾಜ್ಯವನ್ನು ಕಟ್ಟುವುದು, ಬೆಳೆಸುವುದು ಅಷ್ಟೊಂದು ಸುಲಭದ ಮಾತಲ್ಲ. ಒಂದು ರಾಜ್ಯವನ್ನು ಹೊಸದಾಗಿ ಸೃಷ್ಟಿಸಲು ಹೋದರೆ ಸಂವಿಧಾನಾತ್ಮಕವಾಗಿ ಒಪ್ಪಿಗೆ ಇದ್ದರೂ ಆರ್ಥಿಕವಾಗಿ, ನೈಸರ್ಗಿಕವಾಗಿ, ಸ್ವಾಭಾವಿಕ ಸೌಕರ್ಯಾದಿಗಳಾಗಿ ನೋಡಕೊಳ್ಳಬೇಕಾಗುತ್ತದೆ. ಒಂದು ರಾಜ್ಯವನ್ನು ನಡೆಸಲು ಸಾಲ ತರುವುದೊಂದೇ ಮಾರ್ಗವಲ್ಲ, ಅದನ್ನು ತೀರಿಸಲು ಆದಾಯ ಬೇಕಲ್ಲವೇ? . ಆದಾಯದ ಮೂಲ ಯಾವುದಿದೆ ಉತ್ತರ ಭಾಗಕ್ಕೆ ?. ಪಕ್ಕದ ಆಂಧ್ರಪ್ರದೇಶವನ್ನು ನೋಡಿಯಾದರೂ ಬುದ್ದಿ ಕಲಿಯಬಹುದು. ಆದಾಯದ ಭಾಗವೆಲ್ಲಾ ತೆಲಾಂಗಣ ಭಾಗಕ್ಕೆ ಸೇರ್ಪಡೆಯಾಗಿ ಆಂಧ್ರಪ್ರದೇಶ ರಾಜ್ಯ ಅಭಿವೃದ್ಧಿಗೆ ಹೆಣಗಾಡುತ್ತಿದೆ. ಅದಕ್ಕಾಗಿ ಬಿಜೆಪಿಯ ಮೈತ್ರಿ ಪಕ್ಷವಾಗಿ ಚಂದ್ರಬಾಬುನಾಯ್ಡು ಸರ್ಕಾರ ಗುರುತಿಸಿಕೊಂಡರೂ ಅದರಿಂದ ಏನೂ ಪ್ರಯೋಜನವಾಗದೇ ಮೈತ್ರಿಯಿಂದ ಹೊರಬಂದದ್ದು ಈಗ ಇತಿಹಾಸ. ಹೊಸ ರಾಜಧಾನಿ ಸೃಷ್ಠಿಸಲು ಹರಸಾಹಸ ಪಡುತ್ತಿದೆ. ಅದರಂತೆಯೇ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಪ್ರಸ್ತುತವಾಗಿ ಇರುವಂತ ಅಖಂಡ ಕರ್ನಾಟಕಕ್ಕೆ ಆದಾಯವೆಂದರೆ ಸಾಫ್ಟ್ ವೇರ್ ಮತ್ತು ಕೈಗಾರಿಕ ವಲಯಗಳು.ಇವೆರಡೂ ದಕ್ಷಿಣ ಭಾಗದಲ್ಲಿ ಇರುವುದರಿಂದ ಉತ್ತರಕ್ಕೆ ಅನಾನುಕೂಲವಾಗುವುದರಲ್ಲಿ ಸಂದೇಹವಿಲ್ಲ. ನೈಸರ್ಗಿಕವಾಗಿಯೂ ಕೂಡ ದಕ್ಷಿಣ ಕರ್ನಾಟಕ ಬಹಳ ಆದಾಯದಲ್ಲಿದೆ.

ದಕ್ಷಿಣದವರು ನಮಗೆ ಯಾವ ರೀತಿಯ ಬೆಂಬಲವನ್ನು ನೀಡುತ್ತಿಲ್ಲ ಎಂಬ ಆರೋಪ ಎಷ್ಟು ಸರಿ ?.ಕಳಸಾ ಬಂಡೂರಿ ವಿಚಾರದಲ್ಲಿ ಎಲ್ಲರೂ ಅವರ ಬೆಂಬಲಕ್ಕೆ ನಿಂತಿಲ್ಲವೇ? .ಇತ್ತೀಚಿಗಷ್ಟೇ ಕೇಂದ್ರದ ಪ್ರತಿಷ್ಟಿತ ವಿದ್ಯಾಕೇಂದ್ರ ಐ.ಐ.ಟಿ ಯನ್ನು ಧಾರವಾಡಕ್ಕೆ ನೀಡಲಿಲ್ಲವೇ? . ಕರ್ನಾಟಕ ಏಕೀಕರಣಕ್ಕೆ ಅರವತ್ತು ತುಂಬಿದ ಸಂಭ್ರಮದಲ್ಲಿ ಸುವರ್ಣ ಕರ್ನಾಟಕದ ನೆನಪಿಗಾಗಿ ಅವರ ಇಚ್ಛೆಯಂತೆ ಸುಮಾರು 594 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಆಡಳಿದ ಶಕ್ತಿಕೇಂದ್ರವಾದ ವಿಧಾನ ಸೌಧದ ತದ್ರೂಪು ಎಂಬಂತೆ “ಸುವರ್ಣ ಸೌಧ” ವನ್ನು ಬೆಳಗಾವಿಯಲ್ಲಿ ನಿರ್ಮಾಣ ಮಾಡಿಲ್ಲವೇ?. ದೂರದಿಂದ ಬರಲಾಗದು ಎಂಬ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ಸಂಚಾರಿ ಉಚ್ಚನ್ಯಾಯಾಲಯವನ್ನು ಸ್ಥಾಪಿಸಲಾಯಿತು. ಇನ್ನು ಹಲವು ಪ್ರತಿಷ್ಟಿತ ಯೋಜನೆಗಳನ್ನು ಉತ್ತರ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನದ ಅಭಿಮಾನದ ಮೇಲೆ ನೀಡಲಾಗಿದೆ. ಹೀಗಿರುವಾಗ ಇಲ್ಲಿ ಅಭಿವೃದ್ಧಿ ಆಗಿಲ್ಲವೆಂಬ ಅನುಮಾನವೇಕೆ? . ಲೋಕಸಭೆಯಲ್ಲಿ,  ವಿಧಾನಸಭೆಯಲ್ಲಿ ಮಾತನಾಡಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಅರಿವು ಮೂಡಿಸು ಅನುದಾನವನ್ನು ಬಿಡುಗಡೆಗೊಳಿಸಿಕೊಂಡು ಮಾದರಿ ಕ್ಷೇತ್ರಗಳಾಗಿ ಮಾಡಿ ಜನರ ವಿಶ್ವಾಸವನ್ನು ಗೆಲ್ಲಬೇಕಾದದ್ದು ಜನಪ್ರತಿನಿಧಿಗಳ ಕೆಲಸ. ಹೋರಾಟ ಮಾಡಲೆಂದು ಹಳ್ಳಿಯ ಜನಗಳಿಗೆ 100/- ಅಥವಾ  200/- ರೂ.ಗಳ ಕೊಟ್ಟು ಪ್ರತಿಭಟನೆ ಮಾಡಿಸಿದರೆ ಪಾಪ ಅವರಿಗೆ ಸಿಗುವುದಾದರೂ ಏನು ?.

ಮೊದಲೇ ಹೇಳಿದಂತೆ ಒಂದು ರಾಜ್ಯಕ್ಕೆ ಆದಾಯದ ಮೂಲ ಎಂದರೆ ತೆರಿಗೆ. ತೆರಿಗೆ ವಸೂಲಿ ಮಾಡಬೇಕೆಂದರೆ ಅವರಿಗೆ ಪೂರಕವಾದ ಮೂಲಸೌಲಭ್ಯಗಳ ಒದಗಿಸಬೇಕು. ಬಂಡವಾಳ ಶಾಹಿಗಳಿಂದ ಬಂಡವಾಳ ಹೂಡಿಕೆ ಮಾಡಿದಾಗ ಮಾತ್ರ ತೆರಿಗೆ ಬಂದು ಒಂದು ಸರ್ಕಾರನ್ನು ನಡೆಸಲು ಆಗುವುದು. ಈಗಿನ ಪರಿಸ್ಥಿತಿಯನ್ನು ಗಮನಿಸಿದಾಗ ಕೇಂದ್ರ ಸರ್ಕಾರ ಎಷ್ಟರ ಮಟ್ಟಿಗೆ ಬೆಂಬಲವಾಗಿ ನಿಲ್ಲುತ್ತದೆ ತಿಳಿದಿಲ್ಲ. ಒಮ್ಮತವಾದ ಸರ್ಕಾರ ಒಮ್ಮೆಯೂ ಬಂದಿಲ್ಲ. ಕೇಂದ್ರದಲ್ಲಿ ಒಂದು ಪಕ್ಷವಾದರೆ, ರಾಜ್ಯದಲ್ಲಿ ಇನ್ನೊಂದು ಪಕ್ಷ. ಯಾವಾಗಲೂ ದಾಯಾದಿಯ ಹಗೆಯಂತೆಯೇ ಮಲತಾಯಿ ಧೋರಣೆ ತೋರಿಸುತ್ತಾ ಬಂದಿವೆ. ಅನುದಾನವನ್ನೂ ಸಹ ನಮ್ಮ ರಾಜ್ಯಕ್ಕೆ ಸರಿಯಾಗಿ ವಿತರಣೆ ಮಾಡುವುದಿಲ್ಲ. ಇದು ನಮ್ಮ ಕರ್ನಾಟಕದ ದುರಾದೃಷ್ಟ ಎನ್ನಬಹುದು. ಇನ್ನು ರಾಜ್ಯ ಹೋಳಾದರೆ ಖಂಡಿತವಾಗಿಯೂ ಸಹಾಯ ಮಾಡುತ್ತದೆ ಎಂಬ ಯಾವ ನಂಬಿಕೆಯೂ ಇಲ್ಲ. ಮೊದಲೆ ಉತ್ತರ ಕರ್ನಾಟಕ ಬಯಲು ಸೀಮೆ, ಬಿಸಿಲನಾಡು ಎಂದೆಲ್ಲಾ ಖ್ಯಾತಿಗಳಿಸಿದೆ. ಹೀಗಿರುವಾಗ ವಿಭಜನೆಯಾಗಿ ಸಿಗುವ ಸವಲತ್ತಿನಿಂದಲೂ ವಂಚಿತವಾಗಬೇಕಾಗುತ್ತದೆ. ಅಖಂಡ ಕರ್ನಾಟಕದಲ್ಲಿ ಆರು ಕೋಟಿ ಜನರಿದ್ದರೂ ಪಕ್ಕದ ತಮಿಳುನಾಡು ಕಾವೇರಿ ನೀರಿನ ವಿಚಾರಕ್ಕೆ ಬಂದಾಗ ಅವರ ಹಿಡಿತಕ್ಕೆ ಒಳಗಾಗುತ್ತೇವೆ. ಇನ್ನು ಇಬ್ಭಾಗವಾದರೆ ಖಂಡಿತವಾಗಿಯೂ ಅದರ ಬೆರಳ ತುದಿಯಲ್ಲಿ ಆಡಿಸಿಬಿಡುತ್ತಾರೆ.

ಅಷ್ಟಕ್ಕೂ ಇಲ್ಲಿ ನಡೆಯುತ್ತಿರುವುದು ಬರೀ ಪ್ರದೇಶಗಳ ಹಂಚಲಾಟವಲ್ಲ. ರಾಜಕೀಯದ ಚದುರಂಗದಾಟ, ಜಾತಿರಾಜಕಾರಣದ ದೊಂಬರಾಟ. ರಾಜಕಾರಣಿಗಳ ಪ್ರಕಾರ ಜಾತಿ ಆಧಾರದಲ್ಲಿ ಜನಸಂಖ್ಯೆಯನ್ನು ನೋಡಿದಾಗ ಲಿಂಗಾಯಿತರೇ ಪ್ರಾಬಲ್ಯ ಹೊಂದಿದ್ದಾರೆ ಎಂದು ತಿಳಿದು ಹೇಗಿದ್ದರೂ ಲಿಂಗಾಯಿತರು ಬಿಜೆಪಿ ಸಾರಥ್ಯ ವಹಿಸಿರುವ ಬಿ.ಎಸ್.ಯಡಿಯೂರಪ್ಪ ನವರ ಮೇಲೆ ವಿಶ್ವಾಸ ಹೊಂದಿರುತ್ತಾರೆ. ರಾಜ್ಯ ವಿಭಜನೆಯಾದರೆ ಖಂಡಿತವಾಗಿಯೂ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಪಕ್ಷವು ಏಕಚಕ್ರಾಧಿಪತ್ಯವನ್ನು ಸಾಧಿಸಬಹುದು ಎಂಬ ದೂರಾಲೋಚನೆ. ನಿಜ ಹೇಳಬೇಕೆಂದರೆ ಇದು ದೂರಾಲೋಚನೆಯಲ್ಲ ದುರಾಲೋಚನೆ ಎಂದೇ ಹೇಳಬಹುದು. ಆದರೆ ಕಾಂಗ್ರೆಸ್ ನಲ್ಲೂ ಲಿಂಗಾಯಿತ ಘಟಾನುಘಟಿ ನಾಯಕರುಗಳಿರುವುದರಿಂದ ಬಿಜೆಪಿಗೆ ಸ್ವಲ್ಪ ಕಷ್ಟವೆಂದೇ ಹೇಳಬಹುದು. ರಾಜ್ಯ ವಿಭಜನೆ ವಿಷಯವಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಾದ      ಕುಮಾರಸ್ವಾಮಿಯವರು ಹೇಳಿಕೆ ನೀಡಿದ್ದಾರೆ ಎನ್ನಲಾದ ವೀಡಿಯೋವನ್ನು ಸಂಪೂರ್ಣವಾಗಿ ಕೇಳಿದ ಮೇಲೆ ಒಂದು ಸ್ಪಷ್ಟವಾಯಿತು. ಅವರು ಅಲ್ಲಿ ಬಹಳ ನೋವಿನಿಂದ,  ಒತ್ತಡದಿಂದ , ಹತಾಶೆಯಿಂದ “ಬೇರೆ ರಾಜ್ಯ ಬೇಕು ಎಂದು ಕೇಳುತ್ತಿದ್ದೀರಿ ಎಂಗೋ ತಗೋಳ್ರಪ್ಪಾ” ಎಂದು ಹೇಳಿದ್ದಾರೆ. ಇದರಲ್ಲಿ ತಪ್ಪೇನಿದೆ ಒಬ್ಬ ವ್ಯಕ್ತಿಯನ್ನು ಎಡೆಬಿಡದೆ ತಿಣುಕುತ್ತಿದ್ದರೆ ಮನಸ್ಸು ಹುಚ್ಚೇಳುವುದು ಸಹಜ. ಅದರಂತೆಯೇ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ. ಅವರೂ ಕೂಡ ಮನುಷ್ಯರಲ್ಲವೇ?  ಅವರಿಗೂ ಕೂಡ ಭಾವನೆಗಳು, ಆತ್ಮಗೌರವ, ರೋಷವೇಷ ಎಲ್ಲವೂ ಇದೆ. ಬೀದಿಗಳಲ್ಲಿ ನಾಯಿಗಳಂತೆ ವಿರೋಧ ಪಕ್ಷದ ನಾಯಕರು ಸಿಕ್ಕಸಿಕ್ಕ ಕಡೆ ಮೀಡಿಯಾ ಮುಂದೆ ಸ್ಟೇಟ್ಮೆಂಟ್ ಕೊಟ್ಟರೆ ಹೇಗೆ. ನಿಜವಾಗಿಯೂ ರಾಜ್ಯದ ಅಭಿವೃದ್ಧಿ ಕಡೆಗೆ ಗಮನ ಇದ್ದರೆ ಕೂತು ಚರ್ಚಿಸಿ ಮಾಡಬೇಕು. ಅವತಿಗೆ ಬೇಕಾಗಿರುವುದು ಅಧಿಕಾರ, ಅಭಿವೃದ್ಧಿಯಲ್ಲ.

ಸನ್ಮಾನ್ಯ ಕುಮಾರಸ್ವಾಮಿಯವರು ಟಿವಿ ಮಾಧ್ಯಮದವರ ಬಗ್ಗೆ ಮಾತನಾಡಿದ್ದಾರೆನ್ನಲಾದ ವಿಷಯವನ್ನಿಟ್ಟುಕೊಂಡು ಅವರ ತೇಜೋವಧೆ ಮಾಡಲಿಕ್ಕೆ ಹೊರಟಿರುವುದು ಎಷ್ಟು ಸರಿ. ಹೌದು ಟಿವಿ ಮಾಧ್ಯಮದವರಿಂದಲೇ ಅಖಂಡ ಕರ್ನಾಟಕ ಹೋಳಾಗಬೇಕೆಂಬ ಕೂಗು ಎದ್ದಿರುವುದು. ಕೆಲಸಕ್ಕೆ ಬಾರದ ಅದೂ ರಾಜಕಾರಣಿಗಳನ್ನೇ ಕೂರಿಸಿಕೊಂಡು ಪಬ್ಲಿಕ್ ಟಿವಿಯಲ್ಲಿ ಪ್ರತಿದಿನ ರಾತ್ರಿ 8 ಗಂಟೆಗೆ ಚರ್ಚೆ ನಡೆಯುತ್ತದೆ. ಅದು ರಾಜ್ಯದ ಹಿತವನ್ನ ಕಾಪಾಡುವ ಚರ್ಚೆಯಾಗಿರುವುದಿಲ್ಲ, ಬದಲಾಗಿ ಅವರವರ ಪಕ್ಷದವರ ಘನತೆಯನ್ನು ಬಿಂಬಿಸಿಕೊಳ್ಳುವ ಚರ್ಚೆಗಳಾಗಿರುತ್ತದೆ ಮತ್ತು ಅಕ್ಷರ ಸಹ ಬೀದಿ ನಾಯಿಗಳ ಜಗಳದಂತಿರುತ್ತದೆ.ಅದರ ಹೊರತಾಗಿ ಸಾಹಿತಿಗಳನ್ನೋ, ಚಿಂತಕರನ್ನೋ ಕರೆಸಿ ಮಾತನಾಡಬಹುದಲ್ಲ. ಅರುಣ್ ಬಡಿಗೇರ್ ಎಂಬ ನಿರೂಪಕ ತಾನೇ ಮೇಧಾವಿ ಎಂದು ತಿಳಿದುಕೊಂಡಿದ್ದಾನೆ ಮತ್ತು ವಯಸ್ಸಿಗೆ, ಹುದ್ದೆಗೆ ಮರ್ಯಾದೆ ನೀಡದೇ ಮಾತನಾಡುತ್ತಾನೆ. ಮೀಡಿಯಾದವರು ತೋರಿಸುವ ಮತ್ತು ಮಾತನಾಡುವ ವಿಷಯದಿಂದ ದೇಶಕ್ಕೆ ಅಥವಾ ರಾಜ್ಯಕ್ಕೆ ಒಳ್ಳೆಯದಾಗಬೇಕೇ ಹೊರತು ಕೆಡುಕಾಗಬಾರದು. ಇನ್ನಾದರೂ ರಾಜಕಾರಣಿಗಳು, ಸಂಘಟನೆಗಳು ಮತ್ತು ಮೀಡಿಯಾದವರು ಅನಾವಶ್ಯಕ ವಿಚಾರಗಳನ್ನು ಬಿಟ್ಟು ರಾಜ್ಯದ ಅಭಿವೃದ್ಧಿ ಬಗ್ಗೆ ಗಮನ ಹರಿಸಿ ಅಖಂಡ ಕರ್ನಾಟಕಕ್ಕೆ ದುಡಿಯಿರಿ ಎಂದು ಆಶಿಸುತ್ತೇನೆ.

ಜೈ ಕರ್ನಾಟಕ  ಜೈ ಭಾರತ

ಮಹದೇವ್ ಬಿಳುಗಲಿ
     9611339024
    

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ನೆಲದನಿ

ಬುದ್ಧತ್ವ, ಬುದ್ಧ ತತ್ವ..!

Published

on

ಗತ್ತಿನ ಮಹಾ ಮಹಾ ಗುರುಗಳಲ್ಲಿ, ಅನುಭಾವಿಗಳಲ್ಲಿ ಬುದ್ಧ ಎತ್ತರವಾಗಿ ನಿಲ್ಲುತ್ತಾನೆ. ಅನೇಕರು, ನಾನು ಹೇಳಿದ್ದನ್ನು ಕೇಳು, ನಾನು ಮಾಡಿದಂತೆ ಮಾಡು, ನನ್ನ ಮಾರ್ಗದಲ್ಲಿ ನಡೆ ಎಂದು ಮುಂತಾಗಿ ಹೇಳಿದರು. ತಮ್ಮ ಹಿಂಬಾಲಕರನ್ನು ಹುಟ್ಟುಹಾಕಿದರು. ಇದು ಧಾರ್ಮಿಕ ಸಂಕೋಲೆ. ಇಲ್ಲಿ ಯೋಚನೆಗೆ ಆಸ್ಪದವಿಲ್ಲ. ಆದರೆ ಬುದ್ಧ ಮಾತ್ರ ‘ನೀನು ನೀನಾಗಿರು’ ಎಂದು ಹೇಳಿದ. ಇಲ್ಲಿ ಯಾವ ಸಂಕೋಲೆಯೂ ಇಲ್ಲ, ಪಂಜರವೂ ಇಲ್ಲ. ಬುದ್ಧ ಎಲ್ಲರನ್ನೂ ತನ್ನ ಸಹ ಪ್ರಯಾಣಿಕರು, ತನ್ನ ಮಿತ್ರರು (ಮೈತ್ರೇಯ)ಎಂದು ಕರೆದ.

ಒಂದು ಹೂವು ತಾನು ಇನ್ನೊಂದು ಹೂವಿನಂತಾಗಲು ಬಯಸುವುದಿಲ್ಲ, ಹಾಗಯೇ ಮತ್ತೊಂದು ಹೂವು ತನ್ನಂತಾಗಲಿ ಎಂದೂ ಕೂಡ ಬಯಸುವುದಿಲ್ಲ. ತಾನು ತಾನೇ. ಅದು ಅದೇ. ಎರಡೂ ಸುಂದರ.
ತನಗೆ ಏನು ಸಿಕ್ಕಿದೆಯೋ ಅಷ್ಟರಲ್ಲಿ, ತನ್ನ ಇತಿ-ಮಿತಿಯೊಳಗೆ, ಸುಂದರವಾಗಿ ಅರಳಿ ಇದ್ದಷ್ಟು ದಿನ ಸೌಂದರ್ಯವನ್ನು ಪಸರಿಸಿ, ತನ್ನನ್ನು ನೋಡುವವರಲ್ಲಿ ಪ್ರೀತಿಯನ್ನು ಹುಟ್ಟಿಸಿ, ಕೊನೆಗೊಮ್ಮೆ ಶಾಂತವಾಗಿ ಉದುರಿಹೋಗುತ್ತದೆ. ಇದ್ದಷ್ಟು ದಿನ ಆ ಹೂವು, ಅದು ಬೇಕು ಅನ್ನಲಿಲ್ಲ, ಇದು ಬೇಡ ಅನ್ನಲಿಲ್ಲ. ಹೀಗಾಗಿ ಅದು ಎಂದೂ ದುಃಖ ಪಡಲಿಲ್ಲ. ಅದರ ಜೀವನ ಸಾರ್ಥಕ. ಇದು ಬುದ್ಧತ್ವ. ಬುದ್ಧ ತತ್ವ.

ಮನುಷ್ಯನಿಗೆ ಮನಸ್ಸು, ಬುದ್ಧಿ ಇರುವುದರಿಂದ ಜಗತ್ತು ಇನ್ನಷ್ಟು ಸುಂದರವಾಗಬೇಕಿತ್ತು. ಆದರೆ ಆಗಿರುವುದು ಅದಕ್ಕೆ ತದ್ವಿರುದ್ಧ. ಅವನ ಮಾತೊಂದು, ಕೃತಿ ಇನ್ನೊಂದು, ಮನಸ್ಸು ಮತ್ತೊಂದು. ಒಳಗೊಂದು, ಹೊರಗೊಂದು. ಹೀಗಾಗಿ ಅವನು ತನ್ನ ಜೀವನವನ್ನು ತಾನೇ ನರಕ ಮಾಡಿಕೊಂಡು, ಅದರಿಂದ ಹೊರಬರಲಾರದೆ ಒದ್ದಾಡುತ್ತಿದ್ದಾನೆ. ಅವನು ತಾನಾರೆಂದು ತಿಳಿದು, ತನ್ನಂತೆ ತಾನಾದರೆ ಮಾತ್ರ ಇದರಿಂದ ಬಿಡುಗಡೆ.

ಬುದ್ಧ ಹೇಳುತ್ತಾನೆ, ನಿನ್ನ ದುಃಖಕ್ಕೆ ನೀನೇ ಕಾರಣ. ನಿನ್ನ ಉದ್ಧಾರಕ್ಕೂ ನೀನೇ ಕಾರಣ. ಯಾರೂ ಬಂದು ನಿನ್ನ ಹಣತೆಯನ್ನು ಹಚ್ಚುವುದಿಲ್ಲ. ನೀನೂ ಹಚ್ಚಬೇಡ. ಏಕೆಂದರೆ ನೀನು ಸ್ವಯಂ ಜ್ಯೋತಿ ಸ್ವರೂಪನು.

ಅಪ್ಪೋ ದೀಪೋ ಭವ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending