Connect with us

ನೆಲದನಿ

ರಂಗದ ಮೇಲೆ ಮಂಗಳಮುಖಿಯರ ಬದುಕಿನಾಟ ವಿಶೇಷ ಲೇಖನ : ಸಂಧ್ಯಾ ಸಿಹಿಮೊಗೆ

Published

on

ರಂಗಕರ್ಮಿ ರೇವತಿ

ಗಂಡು ಹೆಣ್ಣೆಂಬ ಚೌಕಟ್ಟಿನಾಚೆ ಭಿನ್ನ ಲಿಂಗಿಯಾಗಿ ತನ್ನ ಭಾವನೆ, ತುಮುಲಗಳನ್ನು ರಂಗದ ಮೇಲೆ ಪ್ರಸ್ತುತ ಪಡಿಸುತ್ತಿರುವ ರೇವತಿ ಅವರು ಲೈಂಗಿಕ ಅಲ್ಪಸಂಖ್ಯಾತರ ಆಶಾಕಿರಣವಾಗಿದ್ದಾರೆ. ಸಮಾಜದಲ್ಲಿ ಅವಮಾನ, ದೈಹಿಕ ಮತ್ತು ಮಾನಸಿಕ ಕಿರುಕುಳಗಳಿಗೆ ಒಳಗಾಗುವ ಮಂಗಳಮುಖಿಯರಿಗೆ ಬದುಕುವ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ರೇವತಿಯವರು ರಂಗಭೂಮಿಯಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸುತ್ತಿದ್ದಾರೆ.

ತಮಿಳುನಾಡಿನ ನಮಕ್ಕಲ್ ಜಿಲ್ಲೆಯಲ್ಲಿ ಜನಿಸಿದ ಸ್ವತ: ಮಂಗಳಮುಖಿಯಾದ ಇವರು ತಮ್ಮಂತೆಯೇ ಇರುವ ಲೈಂಗಿಕ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಹಾಗೂ ಅವರಲ್ಲಿ ಆತ್ಮ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇವರು ರಚಿಸಿದ ಕನ್ನಡ ಅನುವಾದಿತ `ಬದುಕು ಬಯಲು’ ಎಂಬ ನಾಟಕವು ರಾಜ್ಯದ ಹಲವು ಜಿಲ್ಲೆಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ. ಇವರ ಜೀವನವನ್ನು ಆಧರಿಸಿದ `ಜನುಮದತ್ತ’ ಎಂಬ ನಾಟಕವು 50ಕ್ಕೂ ಹೆಚ್ಚು ಪ್ರದರ್ಶನ ಕಂಡು ಜನಮನ್ನಣೆ ಪಡೆದಿದೆ. ಈ ನಾಟಕದಲ್ಲಿ ತಾವೇ ಮುಖ್ಯ ಪಾತ್ರದಲ್ಲಿ ನಟಿಸಿದ್ದು ಕನ್ನಡ ರಂಗಭೂಮಿಗೊಂದು ಹೊಸ ಆಯಾಮ ಸಿಕ್ಕಂತಾಗಿದೆ. ರೇವತಿಯವರ ಜೀವನಾಧಾರಿತವಾಗಿ ರಚಿಸಿರುವ ಎನ್ನ ಕೊರಳ್ ತಮಿಳು ನಾಟಕವನ್ನು ಅವರೇ `ನನ್ನ ದನಿ’ ಎಂದು ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ಗಂಡು ಹೆಣ್ಣುಗಳ ಚೌಕಟ್ಟಿನಾಚೆ ಭಿನ್ನ ಲಿಂಗಿಯಾಗಿ ಬದುಕುವುದು ಬಲು ಕಷ್ಟವಾಗಿರುವ ಬಗ್ಗೆ ನಾಟಕದಲ್ಲಿ ಎಳೆ- ಎಳೆಯಾಗಿ ಬಿಡಿಸಿದ್ದು ಸ್ವತಃ ಅವರೇ ಅಭಿನಯಿಸಿದ್ದಾರೆ. ಬೆಂಗಳೂರು, ಶಿವಮೊಗ್ಗ ಸೇರಿದಂತೆ ಹಲವಾರು ಕಡೆಗಳಲ್ಲಿ ನಾಟಕ ಯಶಸ್ವಿ ಪ್ರದರ್ಶನ ಕಂಡಿದೆ.

ಲೈಂಗಿಕ ಅಲ್ಪಸಂಖ್ಯಾತರ ಹೋರಾಟದ ಬಗ್ಗೆ ಹಲವಾರು ಲೇಖನಗಳನ್ನು ರೇವತಿ ಬರೆದು ಪ್ರಕಟಿಸಿದ್ದಾರೆ. ಇವರು ಬರೆದ ಹಲವಾರು ಲೇಖನಗಳು ದೇಶದ ವಿವಿಧ ಭಾಷೆಗಳಿಗೆ ತುರ್ಜುಮೆಯಾಗಿದೆ. ತಮ್ಮನ್ನು ಮಹಿಳೆಯೆಂದು ದೃಢೀಕರಿಸಿಕೊಂಡು ಪಾಸ್‍ಪೋರ್ಟ್‍ನಲ್ಲೂ ಮಹಿಳೆ ಎಂಬ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಇವರು ಯಶಸ್ವಿಯಾಗಿದ್ದಾರೆ. ಕನ್ನಡ, ತಮಿಳು ಹಾಗೂ ಹಿಂದಿ ಭಾಷೆಯನ್ನು ಬಲ್ಲ ಇವರು ಸಂಗಮ ಎಂಬ ಲೈಂಗಿಕ ಶೋಷಿತರ ಧ್ವನಿಯಾದ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಕರ್ನಾಟಕ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯದಲ್ಲೂ ಇವರು ಕಾರ್ಯನಿರ್ವಹಿಸಿರುತ್ತಾರೆ. ಲೈಂಕಿಕ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಅಳವಾಗಿ ಅಧ್ಯಯನ ನಡೆಸುವ ಸಂಘಟನೆಗಳೊಂದಿಗೆ ಕೈ ಜೋಡಿಸಿರುತ್ತಾರೆ. ರಾಜ್ಯ ಸರಕಾರ ಹಿಂದುಳಿದ ವರ್ಗಗಳ ಆಯೋಗದೊಂದಿಗೆ ಹಲವು ವರ್ಷ ಕಾರ್ಯ ನಿರ್ವಹಿಸಿದ್ದರು.

ಇವರ ಇನ್ನಿತರ ಲೇಖನಗಳೆಂದರೆ `ಉನರುಮಂ ಉರುವವಂ’, `ದಿ ಟ್ರೂತ್ ಎಬೌಟ್ ಮಿ’ ಇವು ತಮಿಳು, ಮಲೆಯಾಳಂ ಮತ್ತು ತೆಲುಗಿಗೆ ಭಾಷಾಂತರವಾಗಿದೆ 20ಕ್ಕೂ ಹೆಚ್ಚು ಕಾಲೇಜು ಮತ್ತು ವಿಶ್ವವಿದ್ಯಾನಿಯಗಳಲ್ಲಿ ಪಠ್ಯಕ್ರಮವಾಗಿದೆ. 2010 ರಲ್ಲಿ ಹಮಾರಾ ಕಹಾನಿಯಾ ಹಮಾರಾ ಖಾಡೇ, ಹಿಜಡಾಕಾ ಜೀವನಯಾನ ಕಾ ಏಕ್ ಸಂಖನ್, 2016 ರಲ್ಲಿ ಎ ಲೈಫ್ ಇನ್ ಟ್ರಾನ್ಸ ಆಕ್ಟಿವಿಜಂ ಎಂಬ ಕೃತಿಗಳನ್ನು ರಚಿಸಿದ್ದಾರೆ.

ಮಂಗಳಮುಖಿಯರನ್ನು ಸಮಾಜದಲ್ಲಿ ಎಲ್ಲಾ ಕಡೆ ತಾತ್ಸಾರ ಭಾವದಿಂದ ನೋಡುತ್ತಾರೆ ಅವರನ್ನು ಮನುಷ್ಯರಂತೆ ಕಾಣೋರೆ ವಿರಳ. ಸಮಾಜದ ಮುಂದೆ ತಿರಸ್ಕ್ರತರಾಗಿ ಬದುಕುತ್ತಿದ್ದಾರೆ. ಸ್ವಾಭಿಮಾನದಿಂದ ಬದುಕುಬೇಕು ಮಂಗಳ ಮುಖಿಯರನ್ನು ಮಹಿಳೆಯರೆಂದು ಗುರುತಿಸಬೇಕು ಹಾಗೂ ಸಮಾಜ ಗೌವರಯುತವಾಗಿ ಕಾಣಬೇಕು ಈ ದಿಸೆಯಲ್ಲಿ ದೃಢನಿರ್ಧಾರ ತೆಗೆದುಕೊಂಡು ಮಂಗಳಮುಖಿಯರ ಶ್ರೇಯೋಭಿವೃದ್ಧಿಗೆ ಶ್ರಮಪಡುತ್ತಿರುವುದು ಯುವ ಪೀಳಿಗೆಗೆ ಉತ್ತಮ ಉದಾಹರಣೆ.

ಕೃಪೆ : ವಾರ್ತಾಭವನ ಶಿವಮೊಗ್ಗ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ನೆಲದನಿ

ಅಪರೂಪಕ್ಕೊಮ್ಮೆ,ಅಪರೂಪದ ವ್ಯಕ್ತಿ ‘ಶೋಭಾ ಗುನ್ನಾಪೂರ’..!

Published

on

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಿರೇಮಸಳಿರವರು,ತವರುಮನೆ ಶಿರಶ್ಯಾಡ.ಗಂಡ ತುಕಾರಾಮ್ ಗುನ್ನಾಪೂರ ರೈತರಾಗಿದ್ದಾರೆ. ಇವರಿಗೆ ಮೂವರು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗು,ಓದುವ ಹವ್ಯಾಸ ಉಳ್ಳವರು ಎಲ್ಲಿದ್ದರೂ,ಸುಖಿಯಾಗಿರಬಲ್ಲರು ಎಂಬ ಮಾತೊಂದಿದೆ,ಆ ಮಾತಿಗೆ ಕೈಗನ್ನಡಿ ಹಾಗೂ ಅಲ್ಪ‌ ವಿದ್ಯೆ ಮಹಾಗರ್ವಿ ಎಂಬ ಮಾತಿಗೆ ತದ್ವೀರುದ್ಧವಾಗಿದ್ದಾರೆ ಈ ಶೋಭಾ ಅಮ್ಮನವರು.

ಓದಿದ್ದು ಕೇವಲ ಒಂಬತ್ತನೇ ತರಗತಿಯವರೆಗೆ ಮಾತ್ರ ಆದರೆ ಕನ್ನಡ ಸಾಹಿತ್ಯವನ್ನು ಓದುವ ಅಪಾರ ಆಸಕ್ತಿ ಇರಿಸಿಕೊಂಡಿದ್ದಾರೆ.ಮುಂದೆ ಕಲಿಯಲು ಹಳ್ಳಿಯಲ್ಲಿ ಹೆಣ್ಮಕ್ಕಳಿಗೆ ಆಸ್ಪಾದವಿರಲಿಲ್ಲ.ನಮ್ಮ ತಂದೆಯವರು ನಾವು ದೊಡ್ಡವರಾದ ಬಳಿಕ ನೀವು ಶಾಲೆಗೆ ಹೋಗೋದು ಬೇಡ ಅಂತ್ಹೇಳಿ ನಮ್ಮನ್ನು ಮದುವೆ ಮಾಡಿಕೊಟ್ಟರು.ನಮಗಿನ್ನೂ ಕಲಿಯಬೇಕೆಂಬ ಆಸಕ್ತಿ ಇನ್ನೂ ಇತ್ತು.ಆದರೆ ಹಳ್ಳಿಯಲ್ಲಿ ದೊಡ್ಡವರಾದ ಬಳಿಕ ಮತ್ತೆಲ್ಲಿ ಶಾಲೆಗೆ ಕಳಿಸಬೇಕಂತ ಹೇಳಿ ಕೊಟ್ಟು ಮದುವೆ ಮಾಡಿದರು.

ಆದರೆ ನಾವು ಕಲಿಯಲೇಬೇಕೆಂಬ ಛಲವಿರುವುದರಿಂದ ಬರೆಯಲು,ಓದಲು ರೂಢಿಸಿಕೊಂಡೆವು.ಕಸದಾಗಿನ ಯಾವುದಾದರೂ ಪೇಪರ್ ಬಿದ್ದಿತ್ತೆಂದರೆ ನನಗೆ ಅದು ಓದದೇ ಇದ್ರೆ ಸಮಾಧಾನನೇ ಆಗುತ್ತಿರಲಿಲ್ಲ.ನಮ್ಮದು ಕೂಡುತುಂಬು ಕುಟುಂಬ ಏಳು ಮಂದಿ ಅಣ್ಣ-ತಮ್ಮದಿಂರು ಏಳು ಮಂದಿ ಹೆಣ್ಣುಮಕ್ಕಳು ಅತ್ತೆ,ಮಾವ ಅಷ್ಟಿದ್ದರೂ ಅವರ ಜೊತೆ ನಾನು ಕೆಲಸ ಮಾಡಿ ಓದು-ಬರಹದ ಕಡೆ ಲಕ್ಷ್ಯ,ಸಮಯವೂ ಕೊಟ್ಟಿದ್ದೆ. ಬೇಕಾದಷ್ಟೂ ಕೆಲಸವಿರಲದು ಓದು ಬರಹಕ್ಕೆ ಎರಡು ಗಂಟೆ ಕಡ್ಡಾಯವಾಗಿ ಸಮಯ ಮೀಸಲು ಮಾಡಿ ಓದುತ್ತಿದ್ದೆ,ಬರೆಯುತ್ತಿದ್ದೆ.ಈಗ ಅದು ಪ್ರಸ್ತುತ ಓದಿ-ಓದಿ ಅಭ್ಯಾಸವಾಗಿ ಕಥೆ,ಕಾದಂಬರಿ ಬರೆಯಲು ತೊಡಗಿದೆ.

ಮುಂದೆ ಬರುಬರುತ್ತಾ ನನ್ನ ಮಕ್ಕಳು ನನಗೆ ಬುದ್ಧಿ ಹೇಳತೋಡಗಿದರು.ಅಮ್ಮ ನೀನು ಇಷ್ಟೇಲ್ಲಾ ಕಥೆ,ಕಾದಂಬರಿ ಓದುತ್ತಿಯಾ,ಬರೆಯುತ್ತೀಯಾ ಏನಾದರೂ ನೀನು ಬರೆ ಎಂದರು.ಮಕ್ಕಳ ಪರಿಣಾಮವೇ ಇರಬಹುದು, ಇವರ ಎರಡು ಪುಸ್ತಕಗಳು (ಕಥಾ-ಸಂಕಲನ,ಆತ್ಮಚರಿತ್ರೆ) ಮುದ್ರಣದ ಹಂತದಲ್ಲಿವೆ.ಇವರು ಬರೆದ ಕವಿತೆಗಳು ಪಂಜಾಬಿ ಭಾಷೆಗೆ ಅನುವಾದಗೊಂಡಿವೆ ಹಾಗೂ ಕಥೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.(ಬದುಕಿನ ಪಯಣವನ್ನು ಎಳೆ-ಎಳೆಯಾಗಿ ಖುಷಿಯಿಂದ ಬಿಚ್ಚಿಟ್ಟುತ್ತಾರೆ.)

ಬಾಲ್ಯದಲ್ಲಿಯೂ ಸಾಕಷ್ಟು ಕಷ್ಟ ಅನುಭವಿಸಿ,ಸದಾ ಸಂಸಾರದ ಜಂಜಾಟದಲ್ಲಿದ್ದರೂ,ದಿನಕ್ಕೆರಡು ಗಂಟೆ ಕಡ್ಡಾಯವಾಗಿ ಚಾಚೂ-ತಪ್ಪದೇ ಓದಲು ಸಮಯವಿರುಸುತ್ತಿದ್ದರಿವರು,ಆದರೆ ನನಗನ್ನಿಸಿದ್ದು ಈಗ ಅರ್ಧದಿನ,ಒಮ್ಮೊಮ್ಮೆ ದಿನಪೂರ್ತಿಯೂ ಓದಬಹುದೆಂದು ನಂಬಿಕೆಯಿದೆ,ಕಾರಣ‌ ತುಂಬಾ ಕಷ್ಟದಿಂದ,ಹಳ್ಳಿಯ ಮಹಿಳೆ ಹೊಲ-ಮನೆ ಕೆಲಸ ತಾನೇನೂ,ತನ್ನ ಕುಟುಂಬದ ಜಗತ್ತೇನೂ ಎನ್ನುತ್ತಿದ್ದರಿವರು. *ಮಕ್ಕಳಿಗೆ ಅಕ್ಕ-ಪಕ್ಕದ ಮಕ್ಕಳಿಗೂ ಶುದ್ಧಬರಹ ಹಾಕಿಕೊಟ್ಟು,ದಿನಾಲೂ ಶಾಲೆಯ ಮನೆಕೆಲಸ ಮಾಡಿಸುತ್ತಿದ್ದರು.ಇಂದು ಆ ಮಕ್ಕಳು ಒಳ್ಳೆಯಸ್ಥಾನದಲ್ಲಿ,ಸ್ಥಿತಿಯಲ್ಲಿದ್ದಾರೆ.

ಇಂದು ಇವರ ಕುಟುಂಬ ಸುಸ್ಥಿರವಾಗಿದೆ,ಮಕ್ಕಳೂ ಸಹ ಉತ್ತಮವಾದ ಉದ್ಯೋಗದಲ್ಲಿದ್ದಾರೆ.ಈಗಲೂ ಸಹ ಹೊಲ-ಮನೆ ಕೆಲಸ ಮಾಡುತ್ತಾ ಅತಿಹೆಚ್ಚು ಸಮಯ ಓದುತ್ತಾರೆ.ಬದುಕಿನ ಒತ್ತಡದ ನಡುವೆ ಪುಸ್ತಕಗಳನ್ನು ಓದುವುದು ಬಿಟ್ಟಿರಲಿಲ್ಲ.ಅದರ ಪರಿಣಾಮವಾಗಿಯೇ ಇವರಿಂದ ಇತ್ತಿಚೀಗೆ ಕಥೆ,ಕವಿತೆಗಳು ಹತ್ತಾರು ಸೃಷ್ಟಿ ಆಗಿದ್ದಾವೆ,ಆಗುತ್ತವೆಯೂ ಕೂಡ ಅದು ಹೀಗೆಯೇ,ಇವರು ಕನ್ನಡ ಸಾಹಿತ್ಯ ಸೇವೆಯನ್ನು ಮಾಡಲಿಕ್ಕೆ ಇನ್ನೂ ಆ ಅಕ್ಷರಾಂಬೆ ಶಕ್ತಿ ನೀಡಲೆಂದು ಆಶಿಸೋಣ.!

ಸಾಮಾನ್ಯ ಹಳ್ಳಿಯ ಹೆಣ್ಣುಮಗಳಾದ ಶೋಭಾ ಗುನ್ನಾಪೂರ ಅಮ್ಮನವರು.ತಮ್ಮ ಬದುಕಿನ ಇಚ್ಛಾಶಕ್ತಿಯಿಂದ ನೋವು ನಲಿವುಗಳಿಂದ ಆಚೆ ಬಂದು ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘದ ಪ್ರತಿನಿಧಿಯಾಗಿ ಅನೇಕ ಹೆಣ್ಣುಮಕ್ಕಳ ಬದುಕಿಗೆ ಸ್ಪೂರ್ತಿಯಾಗಿದ್ದಾರೆ. ಪ್ರಗತಿಪರ ರೈತರಾಗಿರಾಗಿದ್ದಾರೆ.ಹಿರೇಮಸಳಿಯಲ್ಲಿ ಕುಡಿತ ಬಿಡಿಸಲು,ಮಕ್ಕಳಿಗೆ ವಿಧ್ಯಾಭ್ಯಾಸ ನೀಡಲು, ನೊಂದ ಮಹಿಳೆಯರಿಗೆ ಸಾಂತ್ವಾನ ನೀಡಿ ಆಸರೆಯಾಗಿ ನಿಲ್ಲಲು ಶ್ರಮಿಸಿದ್ದಾರೆ.

ಇವರು ಮಕ್ಕಳಿಗಾಗಿ ಆಸ್ತಿ ಮಾಡಲಿಲ್ಲ,ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿದ್ದಾರೆ.!

ಇವರ ಮಕ್ಕಳು ಬೇರೆ ಬೇರೆ ಊರಲ್ಲಿ ನೌಕ್ರಿ(ಉದ್ಯೋಗ) ಹಿಡಿದು ಹೆಮ್ಮೆ ತರುವ ಕೆಲಸ ಮಾಡಿದ್ದಾರೆ,ಮಾಡುತ್ತಿದ್ದಾರೆಯೂ ಕೂಡ ಬೆಂಗಳೂರಲ್ಲಿ ಸುನಿಲ್ ಕುಮಾರ್ ಗುನ್ನಾಪೂರ ಎನ್ನುವವರು ಲಾಯಾರ್ ಆಗಿ,ಬಾಗಲಕೋಟೆಯಲ್ಲಿ ಅನಿಲ್ ಕುಮಾರ್ ಗುನ್ನಾಪೂರರವರು ಸರ್ವೆಯರ್ ಕೆಲಸದಲ್ಲಿದ್ದು ಮತ್ತು ಕವಿಗಳಾಗಿದ್ದಾರೆ.

ಇನ್ನೊಬ್ಬರು ಭೀಮರಾವ್ ಧಾರವಾಡದಲ್ಲಿ ಪ್ರಸ್ತುತ ಕೆ.ಎ.ಎಸ್ ಪರೀಕ್ಷೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಇನ್ನೊಬ್ಬ ಹೆಣ್ಣುಮಗಳು ಅನಿತಾ ಗಂಡನ ಮನೆಯಲ್ಲಿ ಸುಖ ಸಾಂಸರೀಕವಾದ ಜೀವನವನ್ನು ಸಾಗಿಸುತ್ತಿದ್ದಾರೆ.

ಪ್ರೀಯ ಓದುಗರೇ,

ಶೋಭಾ ಅಮ್ಮನವರು ಮಹಿಳೆಯರಿಗೆ ಒಂದು ಸಲಹೆನ ನೀಡುತ್ತಾರೆ ಬನ್ನಿ,ಅವರ ಮಾತಿನಲ್ಲೇ ಕೇಳೋಣ..

ಹೆಣ್ಣುಮಕ್ಕಳು ಸದಾ ಕೆಲಸ-ಕೆಲಸ ಅಂತ ಆರೋಗ್ಯದ ಕಡೆ ಗಮನವೇ ಹರಿಸುವುದಿಲ್ಲ.ಸದಾ ಗಂಡ,ಮಕ್ಕಳು,ಸಂಸಾರದಲ್ಲಿಯೇ ಅವರ ಸಮಯ ಕಳೆದು ಹೋಗುತ್ತದೆ.

ಆರೋಗ್ಯದ ಬಗೆಯಲ್ಲಿ ಸರಿಯಾದ ಸಮಯಕ್ಕೆ ಊಟ ಮಾಡುವುದಿಲ್ಲ,ಸಮಯಕ್ಕೆ ಹೊಂದುವಂತೆ ನಿದ್ದೆಯೇ ಬರುವುದಿಲ್ಲ,ಬರೀ ಸಂಸಾರದಲ್ಲಿಯೇ ಹೋಗುತ್ತದೆ.ಅದಕ್ಕೆ ಇದೆಲ್ಲದರ ಒತ್ತಡದ ಕೆಲಸದ ಜೊತೆಯೂ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ.ಜೊತೆಗೆ ಸರಿಯಾಗಿ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸೋಣ,ಆ ಮಕ್ಕಳನ್ನೇ ನಾವು ಆಸ್ತಿ ಮಾಡಿಕೊಳ್ಳೋಣ. “ನಾವು ಆಸ್ತಿ ಮಾಡುವುದು ಬೇಕಾಗಿಲ್ಲ.ಮಕ್ಕಳೇ ನಮಗೊಂದು ಆಸ್ತಿ”.

ಆದರೆ ಸರಿಯಾಗಿ ಅಭ್ಯಾಸ ಕೊಟ್ಟು ಮಕ್ಕಳಿಗೆ ಮಾರ್ಗದಾಳುಗಳಾಗೋಣ.ನಮಗೆಷ್ಟೇ ಬರಲಿ,ತಿಳಿದಿರಲಿ ಮಕ್ಕಳಿಗೆ ಹೇಳಬೇಕು.ಉದಾಹರಣೆಗೆ ನಾವೇ ಒಂದು ಪುಸ್ತಕವನ್ನು ತೆಗೆದುಕೊಂಡು ಕೂತರೇ,ಮಕ್ಕಳೂ ಸಹ ಪುಸ್ತಕ ತೆಗೆದುಕೊಂಡು ಕುಳಿತುಕೊಳ್ಳುತ್ತಾರೆ.ಟಿವಿ ನೋಡಿದರೆ,ಅವರೂ ಟಿವಿ ನೋಡುತ್ತಾ ಕೂರುತ್ತಾರೆ.ಅದು ಪ್ರತಿಯೊಬ್ಬ ತಾಯಿಯ ಅನುಕರಣೆಯಲ್ಲಿ ಅಡಗಿರುತ್ತದೆ.ಪುರುಷರು(ಗಂಡ) ಏನೂ ಮಾಡುವುದಿಲ್ಲ.ಅವರು ತಂದು ಹಾಕಿ ಹೊರಗಡೆ ಹೋಗಿ ಬಿಡುತ್ತಾರಷ್ಟೇ,(ತುಸು-ನಸುನಕ್ಕು) ಅದು ಅನುಕರಣೆ ತಾಯಿಕಡೆ ಇರುತ್ತದೆ.

ತಾಯಿಯಾಗಿ ಸುಸಜ್ಜಿತವಾಗಿ ವಿದ್ಯೆ-ಬುದ್ಧಿ,ಸಂಸ್ಕೃತಿ ಮಕ್ಕಳಿಗೆ ಕಲಿಸಿದೇವೆಂದರೆ,ಮಕ್ಕಳು ತಮ್ಮಿಂದ ಅಚಾನಕವಾಗಿ ಕಲಿಯುತ್ತಾರೆ.ತಾಯಿಗಳಾದ ನಾವೇ ಏನೂ ಕಲಿಸದೇ ಬರೀ ಟಿವಿ ನೋಡೋದು,ನೌಕರಸ್ಥ ತಾಯಿಯವರು ಉದ್ಯೋಗಕ್ಕೇನೆ ಸೀಮಿತವಾಗಿ ಮಕ್ಕಳಿಗೆ ನಮಗೆ ಆಗುವುದಿಲ್ಲ,ಓದಿರಿ,ಬರೆಯಿರಿ ಅಂದರೆ ಪಾಪ ಮಕ್ಕಳು ಏನೂ ಮಾಡಲಸಾಧ್ಯ.ಸಣ್ಣ ಮಕ್ಕಳಿಗೆ ನಾವು ಒತ್ತಡದ ಜೀವನದಲ್ಲಿಯೂ ಸ್ವಲ್ಪ ಹೇಳಬೇಕು.ತಳಪಾಯ ದುರಸ್ತಿ ಮಾಡಿ,ಒಳ್ಳೆಯ ಮಾರ್ಗದರ್ಶನ ನಾವು ನೀಡಿದರೆ ಮಕ್ಕಳ ಕೈ ಹಿಡಿಯುವವರೇ ಯಾರಿಲ್ಲ ಅದಕ್ಕೆ ನಮ್ಮ ಮಕ್ಕಳಿಗೆ ಸರಿಯಾಗಿ ಕಲಿಸಬೇಕು.

ಈ ಹೆಣ್ಣುಮಕ್ಕಳು(ಪ್ರೌಢಶಾಲಾ-ಮಕ್ಕಳು) ಇದಾರಲ್ಲ,ಈ ದೇಶದ ಪ್ರಜೆಗಳು.ತೊಟ್ಟಿಲು ತೂಗುವ ಇವರ ಕೈಗಳು,ಜಗತ್ತನೇ ತೂಗುತ್ತದೆ. ಏನೋ ಒಂದು ತಾರತಮ್ಯಕ್ಕೆ ಹೆಣ್ಣು ಹುಟ್ಟಬಾರದೆಂದು ಹೇಳುತ್ತಾರೆ.ಮೊದಲು ಹೆಣ್ಣಾಗಬೇಕು.ಹೆಣ್ಣಿನಿಂದಲೇ ಜಗತ್ತು,ಹೆಣ್ಣಿನಿಂದಲೇ ಸರ್ವಸ್ವ.ಆ ಹೆಣ್ಣು ನಮಗೆ ಎಷ್ಟು ಮಹತ್ವವೆಂದರೆ,ಗಂಡುಮಕ್ಕಳಿಗಿಂತ ಹೆಣ್ಣುಮಕ್ಕಳಿರಬೇಕು.ಒಂದು ಮಾದರಿಯಾಗುತ್ತಾರೆ.ಕಷ್ಟಕ್ಕೂ-ಸುಖಕ್ಕೂ ಹೆಣ್ಮಕ್ಕಳು ಆಗುತ್ತಾರೆ,ಗಂಡುಮಕ್ಕಳು ಆಗುವುದಿಲ್ಲ.ಸತ್ತರೆ ಗಂಡು ಮಕ್ಕಳು ದೂರಹೋಗಿ ಕೂರುತ್ತಾರೆ,ಹೆಣ್ಮಕ್ಕಳು ಕೂಡುತ್ತಾರೇನೂ.?

ಅದಕ್ಕೆ ಹೆಣ್ಣು-ಗಂಡೆಂಬ ತಾರತಮ್ಯ ಮಾಡದಿರಿ.ನಮಗೆ ಹೆಣ್ಣುಮಕ್ಕಳು-ಗಂಡುಮಕ್ಕಳೂ ಬೇಕು.ಅಷ್ಟೇ ಚಿಕ್ಕ-ಚೊಕ್ಕ ಸಂಸಾರದ ಜೀವನ ಮಾಡಿಕೊಂಡು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕೆಂದು ಕೇಳಿಕೊಳ್ಳುತ್ತೇನೆ.

ಪದವಿ,ಸರ್ಟಿಫೀಕೇಟ್ ಇಲ್ಲದ ಮಹಿಳೆಯೂ ಸಾಧಿಸಬಹುದೆಂದು ಹೆಣ್ಣು ಅಬಲೆಯಲ್ಲ ಸಬಲೆ ಎಂದು ತೋರಿಸಿ ಇಂದು ನಮ್ಮ ಮುಂದೆ ಮಾದರಿಯಾಗಿ ನಿಂತಿದ್ದಾರೆ.ಪ್ರಚಾರದಿಂದ ದೂರ ಇರುವ ಶೋಭಾ ಗುನ್ನಾಪೂರ ಅಮ್ಮನವರು ಎಲೆ ಮರೆಯ ಕಾಯಿಯಂತೆ ತಮ್ಮ ಕೆಲಸ ಪ್ರೀತಿಯಿಂದ ಮಾಡುತ್ತಾ ಸಾಗಿದ್ದಾರೆ,ಸಾಗುತ್ತಿದ್ದಾರೆಯೂ ಕೂಡ..ಅವರ ಸೇವೆಯೂ,ಹೀಗೆಯೇ ಸಾಗುತ್ತಾ ಅವಿಸ್ಮರಣೀಯವಾಗಿ ಇತಿಹಾಸದ ಪುಟಗಳಲ್ಲಿ ಸೇರಲಿ ಎನ್ನುತ್ತಾ..!

ಶಿವರಾಜ್ ಮೋತಿ
ಪದವಿ ವಿಧ್ಯಾರ್ಥಿ
ಧಾರವಾಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ನೆಲದನಿ

ಕೋರೆಗಾವ ವಿಜಯ : ದಲಿತ ಸ್ವಾಭಿಮಾನ ದಿನ

Published

on

  • ಡಾ.ಸಿದ್ರಾಮ ಕಾರಣಿಕ, ಧಾರವಾಡ, ಮೊ:9035343031

ಜನೇವರಿ 1…
ಇದು ದಲಿತ ಸ್ವಾಭಿಮಾನದ ದಿನ ! ದಲಿತರಾದವರೆಲ್ಲ ಮರೆಯದೇ ನೆನಪಿಡಬೇಕಾದ ದಿನ. ಇಡೀ ದೇಶದಲ್ಲಿಯೇ ವರ್ಣಧರ್ಮವನ್ನು ಪಾಲಿಸಿ, ದಲಿತರನ್ನು ನಿರಂತರವಾಗಿ ಶೋಷಣೆ ಮಾಡುತ್ತ, ಅವರ ಮೇಲೆ ದಿನನಿತ್ಯ ಅನ್ಯಾಯವೆಸಗುತ್ತ ಬಂದಿದ್ದ ಮಹಾರಾಷ್ಟ್ರದ ಪೇಶ್ವೆಗಳ ಸೊಕ್ಕಡಗಿಸಿ ಪೇಶ್ವಾಯಿ ಸಾಮ್ರಾಜ್ಯವನ್ನು ಇನ್ನಿಲ್ಲದಂತೆ ಮಾಡಿದ ಐತಿಹಾಸಿಕ ದಿನವಿದು. ಸುಮಾರು ನಲವತ್ತು ಸಾವಿರದಷ್ಟಿದ್ದ ಪೇಶ್ವೆ ಸೈನಿಕರನ್ನು ಕೇವಲ ಐದು ನೂರು ವೀರ ಯೋಧರು ಮಣ್ಣುಮುಕ್ಕಿಸಿದ ದಿನವಿದು.

ಹೌದು !
ಹಿಂದೂ ಧರ್ಮದ ಅನಾಚಾರಗಳನ್ನೆಲ್ಲ ದಲಿತರ ಮೇಲೆ ಹೇರಿ, ನಿರ್ದಯಿಯಾಗಿ ವರ್ತಿಸಿದ್ದ ಪೇಶ್ವೆಗಳಿಗೆ ಇಂಥದ್ದೊಂದು ಅಂತ್ಯ ತೋರಿಸುವ ಅವಶ್ಯಕತೆ ಇತ್ತು. ಅದನ್ನು ಸಾಧ್ಯ ಮಾಡಿ ತೋರಿಸಿದವರು ಬ್ರಿಟಿಷ್ ಸೇನೆಯಲ್ಲಿದ್ದ ದಲಿತ ಯೋಧರು.

ಪುಣೆ-ಅಹಮದಾನಗರ ಮಾರ್ಗದಲ್ಲಿ ಭೀಮಾನದಿಯ ತೀರದಲ್ಲಿ ಕೋರೆಗಾವ ಹೆಸರಿನ ಒಂದು ಸಣ್ಣ ಹಳ್ಳಿಯಿದೆ. ಹಳ್ಳಿ ಸಣ್ಣದಿದ್ದರೂ ಭೀಮಾ ತೀರದ ಆ ಹಳ್ಳಿಯಲ್ಲಿ ಅಡಗಿರುವ ಇತಿಹಾಸ ತುಂಬ ದೊಡ್ಡದು. ಅಷ್ಟೇ ಅಲ್ಲ ಅದು ಸ್ಫೂರ್ತಿದಾಯಕವಾದುದ್ದೂ ಹೌದು ! ಅದೊಂದು ನಮ್ಮನ್ನು ಹುರಿದುಂಬಿಸುವ ಮತ್ತು ಅಭಿಮಾನ ಪಡುವಂತೆ ಮಾಡುವ ಇತಿಹಾಸವೇ ಸರಿ.

ದಲಿತ ವರ್ಗದಿಂದ ಬಂದವರು ಯಾವುದೇ ಕೆಲಸದಲ್ಲಿದ್ದರೂ ನಿಷ್ಠೆಗೆ ಹೆಸರಾದವರು. ವರ್ಣವ್ಯವಸ್ಥೆಯಿಂದ ವ್ಯತಿತರಾಗಿ ನಲುಗಿ ಹೋದ ಅವರು, ಸೇನೆ ಸೇರಿ ಸಾಧಿಸಿದ ಸಿದ್ಧಿಗಳು ಒಂದೆರಡರಲ್ಲ. ಅವುಗಳನ್ನು ಒಂದೊಂದಾಗಿ ಮೆಲುಕು ಹಾಕಿದಾಗ ಮುಚ್ಚಿಟ್ಟ ಅಥವಾ ಮರೆತು ಹೋದ ಇತಿಹಾಸದ ದೊಡ್ಡದೊಂದು ಅಧ್ಯಾಯ ತೆರೆದುಕೊಳ್ಳುತ್ತದೆ.

ಅಸಹ್ಯವೆನ್ನಿಸುವಂತಹ ಅಸ್ಪøಶ್ಯತೆಯನ್ನು ಹೇರಿ ಪ್ರತಿಕ್ಷಣವೂ ಸಂಶಯಿತ ದೃಷ್ಟಿಯಿಂದ ನೋಡುವ ಪೇಶ್ವೆಗಳ ನಡೆಯನ್ನು ವಿರೋಧಿಸಿ, ಅದಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳಲು ತಮಗಾದ ಅವಮಾನವನ್ನು ಹೊಟ್ಟೆಯೊಳಗಿಟ್ಟುಕೊಂಡಿದ್ದ ಮಹಾರರು ಸ್ವಾಭಿಮಾನದಿಂದ ಪುಟಿದೆದ್ದು ಗೆಲುವು ಸಾಧಿಸುವುದಕ್ಕೆ ಐತಿಹಾಸಿಕವಾದ ಕೋರೆಗಾವ ಕದನ ಅವಕಾಶ ನೀಡಿತು.

ಬ್ರಿಟಿಷರು ಅಸ್ಪøಶ್ಯತೆಯ ವಿಚಾರದಿಂದ ದೂರವುಳಿದು ಕೇವಲ ವೀರತನವನ್ನೇ ಮುಖ್ಯವಾಗಿಟ್ಟುಕೊಂಡು ತಮ್ಮ ಸೇನೆಯಲ್ಲಿ ಮಹಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರವೇಶ ನೀಡಿ, ಅವರಿಗೆ ಸೇನಾ ಶಿಕ್ಷಣ ನೀಡಿದರು. ಈ ಮಹಾರರ ಅಭೂತಪೂರ್ವ ಕಲಿತನದ ಕಾರಣದಿಂದಲೇ ಬ್ರಿಟಿಷರು ಕೋರೆಗಾವ ಕದನವನ್ನು ಗೆಲ್ಲಲು ಸಾಧ್ಯವಾಯಿತು. ಇತಿಹಾಸದ ಯಾವುದೇ ಪ್ರಸಂಗಗಳು ಮಹಾರರ ಈ ಕಲಿತನಕ್ಕೆ ಸರಿಸಾಟಿಯಾಗಿ ನಿಲ್ಲಲಾರವು.

ಕೋರೆಗಾವದಲ್ಲಿ ಅಖಂಡವಾಗಿ ನಿಂತಿರುವ ವಿಜಯಸ್ತಂಭ ಇಂದಿಗೂ ಆ ವೀರ ಮಹಾರರ ನೆನಪನ್ನು ಹಚ್ಚ ಹಸಿರಾಗಿಟ್ಟಿದೆ.ಢೋಂಗಿ, ಪಾಖಂಡಿ, ಸಮಯಸಾಧಕತನ ಮತ್ತು ದೇವರು-ಧರ್ಮದ ಹೆಸರಿನಲ್ಲಿ ಮಹಾರರ ಬದುಕನ್ನೇ ಹರಾಮ ಮಾಡಿದ, ಸೂತ್ರದ ಗೊಂಬೆಯನ್ನಾಗಿಸಿದ ಈ ಸಮಾಜಕ್ಕೆ ಮಹಾರ ರಕ್ತದಲ್ಲಿರುವ ಉಮೇದಿನ ಝಲಕ್ ತೋರಿಸುವ ಸಂಧಿ ಸಿಕ್ಕಿತೆಂಬ ಒಂದೇ ಒಂದು ಕಾರಣದಿಂದ ಕೋರೆಗಾವ ಕದನ ನಡೆಯಿತು.

ಮಹಾರರ ಸ್ವಾಭಿಮಾನವನ್ನೇ ಹಾಳು ಮಾಡಿದ ಪೇಶ್ವೆಗಳ ವಿರುದ್ಧ ಹೋರಾಟ ಮಾಡಿದ ಕೋರೆಗಾವ ಕದನದಲ್ಲಿ ಬ್ರಿಟಿಷ್ ಸರಕಾರ ಜಯ ಗಳಿಸಲು ಮಹಾರ ವೀರರ ಪರಾಕ್ರಮವೇ ಕಾರಣ ಎಂಬುದನ್ನು ಮರೆಯಬಾರದು.

ಯಾರಿಗೆ ಮನುಷ್ಯರೆಂದು ಬದುಕಲು ಅವಕಾಶವನ್ನೇ ನೀಡಿರಲಿಲ್ಲವೋ, ಯಾರಿಗೆ ಒಳ್ಳೆಯ ಬಟ್ಟೆ ಅಥವಾ ಪಾತ್ರೆ ಬಳಸುವುದಕ್ಕೆ ನಿರ್ಬಂಧವಿತ್ತೋ, ಯಾರಿಗೆ ಬೀದಿಗಳಲ್ಲಿ ಅಡ್ಡಾಡಲೂ ಅವಕಾಶವಿರಲಿಲ್ಲವೋ, ಯಾರ ವೀರತ್ವ ಮತ್ತು ಶೌರ್ಯತ್ವಕ್ಕೆ ಅವಕಾಶ ದೊರೆಯುತ್ತಿರಲಿಲ್ಲವೋ, ಯಾರಿಗೆ ಅವಮಾನಿತರಾಗಿ ಬದುಕುವ ಅನಿವಾರ್ಯತೆಯನ್ನು ಸೃಷ್ಟಿಸಲಾಗಿತ್ತೋ ಅವರು ಅಂಥವುಗಳನ್ನೆಲ್ಲ ವಿರೋಧಿಸುವುದಕ್ಕಾಗಿಯೇ ಬ್ರಿಟಿಷ್ ಸೇನೆಯನ್ನು ಸೇರಿ ತಮ್ಮ ಪರಾಕ್ರಮದ ಒಂದು ಝಲಕ್‍ನ್ನು ತೋರಿಸುವುದಕ್ಕೆ ಸಾಧ್ಯವಾಯಿತು.

ಶಿರೂರದಿಂದ 27 ಮೈಲುಗಳ ಸತತ ಕಾಲ್ನಡಿಗೆ ಮತ್ತು ಹಸಿವು-ನೀರಡಿಕೆಗಳಿಂದ ವ್ಯಾಕುಲಗೊಂಡಿದ್ದರೂ ಬೆರಳೆಣಿಕೆಯಷ್ಟಿದ್ದ ಸ್ವಾಭಿಮಾನಿ ಮಹಾರ ಯೋಧರು ತಮಗಿಂತ 40 ಪಟ್ಟು ಹೆಚ್ಚಿದ್ದ ಸರ್ವಶಸ್ತ್ರಸಜ್ಜಿತ ಪೇಶ್ವೆ ಸೇನೆಯನ್ನು 12 ಗಂಟೆಗಳ ಕಾಲದ ಕದನದಲ್ಲಿ ದಾರುಣವಾಗಿ ಪರಾಭವಗೊಳಿಸಿ ಪೇಶ್ವೆಯ ಶಾಹಿತನವನ್ನು ಧೂಳಿಪಟ ಮಾಡಿದರು.

ಈ ಕದನದಲ್ಲಿ ಮೊದಲನೇ ಹಾಗೂ ಎರಡನೇ ರೆಜಿಮೆಂಟಿನ ಒಟ್ಟು 50 ಯೋಧರು ವೀರ ಮರಣವನ್ನಪ್ಪಿದರು. 205 ಯೋಧರು ಗಾಯಾಳುಗಳಾದರು. ಹುತಾತ್ಮರಾದವರಲ್ಲಿ 22 ಮಹಾರರು, 16 ಮರಾಠರು, 8 ರಜಪೂತರು ಇಬ್ಬರು ಹಿಂದೂಗಳು ಹಾಗೂ ತಲಾ ಒಬ್ಬೊಬ್ಬ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಯೋಧರು ಸೇರಿದ್ದಾರೆ.

ಇದಕ್ಕೆಲ್ಲ ಪೂರ್ವಿಕರು ಸ್ಫೂರ್ತಿಯೂ ಕಾರಣವಾಗಿತ್ತು. ಹಿಂದೆ ಶಿವಾಜಿ ಕಾಲದಿಂದಲೂ ಮಹಾರರು ತಮ್ಮ ವೀರ-ಶೌರ್ಯ-ಸಾಹಸಗಳಿಂದ ಪ್ರಖ್ಯಾತರಗಿದ್ದಾರೆ. ಪಾಚಗಡದ ರಾಯನಾಕ, ಸುಭನಾಕ ವಾಘನಾಕ, ಮದನಾಕ ಏಸನಾಕ, ಧೋಂಡನಾಕ ಪುಂಡನಾಕ, ಮೊದಲು ಸಾತಾರಕ್ಕೆ ಸೇರಿದ್ದ ಸಾಂಗ್ಲಿ ಜಿಲ್ಲೆಯ ತಾಸಗಾವ ತಾಲೂಕಿನ ಕಾಳಂಬಿ ಗ್ರಾಮದ ಜಾಗೀರದಾರನಾಗಿದ್ದ ಶೂರ ಮೊದಲನೆ ಶಿದನಾಕ, ರಾಯನಾಕ ಮಹಾರ ಮೊದಲಾದವರ ಪಟ್ಟಿಯೇ ಇದೆ. ಇದರ ಮುಂದುವರಿಕೆಯಾಗಿ ಕೋರೆಗಾವ ಕದನ ಕಲಿಗಳಾದ ಮಹಾರ ಯೋಧರು ಕಾಣಿಸಿಕೊಳ್ಳುತ್ತಾರೆ.

1822 ರಲ್ಲಿ ಕೋರೆಗಾವದಲ್ಲಿ ಭೀಮಾ ನದಿಯ ದಂಡೆಯ ಮೇಲೆ ವಿಜಯಸ್ತಂಭವನ್ನು ನಿರ್ಮಿಸಲಾಗಿದೆ. ವಿಜಯಸ್ತಂಭದ ಮೇಲೆ “One of the proudest triumphs of the British Army in the East” ಎಂದು ಬರೆಯಲಾಗಿದೆ. ಅಂದರೆ ಭಾರತದ ಪೂರ್ವ ಪ್ರದೇಶಗಳಲ್ಲಿ ತನ್ನದಾಗಿಸಿಕೊಂಡಿರುವ ಹಲವಾರು ವಿಜಯಗಳಲ್ಲಿಯೇ ಈ ವಿಜಯವು ಬ್ರಿಟಿಷ ಸೇನೆ ಹೆಮ್ಮೆ ಪಡುವಂತಿದೆ ಎಂಬುದು ಅಲ್ಲಿ ಉಲ್ಲೇಖಿತವಾಗಿದೆ.

ಸ್ತಂಭದ ಬದಿಗಳಲ್ಲಿ ಇಂಗ್ಲೀಷ್ ಮತ್ತು ದೇವನಾಗರಿ ಲಿಪಿಯಲ್ಲಿ ಹುತಾತ್ಮರದ ವೀರಯೋಧರ ಹೆಸರುಗಳು ಕೆತ್ತಲ್ಪಟ್ಟಿವೆ. ಸೀನನಾಕ ಕಮಲನಾಕ, ರಾಮನಾಕ ಏಸನಾಕ, ಗೋಂದನಾಕ ಕೋಢೆನಾಕ, ರಾಮನಾಕ ಏಸನಾಕ, ಭಾಗನಾಕ ಹರನಾಕ, ಅಂಬರನಾಕ ಕಾನನಾಕ, ರೂಪನಾಕ ಲಖನಾಕ, ಗಣನಾಕ ಬಾಳನಾಕ, ಕಾಳನಾಕ ಕೋಂಡನಾಕ, ವಪನಾಕ ರಾಮನಾಕ, ವಿಟನಾಕ ಧಾಮನಾಕ, ರಾಜನಾಕ ಗಣನಾಕ, ವಪನಾಕ ಹರನಾಕ, ರೈನಾಕ ವಾನನಾಕ, ಗಣನಾಕ ಧರಮನಾಕ, ದೇವನಾಕ ಆನನಾಕ, ಗೋಪಾಳನಾಕ ಬಾಳನಾಕ, ಹರನಾಕ ಹೀರನಾಕ, ಜೇಠನಾಕ ದೈನಾಕ, ಗಣನಾಕ ಲಖನಾಕ ಎಂಬ ಅಲ್ಲಿಯ ಹೆಸರುಗಳೇ ನಮ್ಮ ಮೈ ಮನಗಳನ್ನು ರೋಮಾಂಚಿತಗೊಳಿಸುತ್ತವೆ. ಮರೆತು ಹೋದ ಇತಿಹಾಸವನ್ನು ಕಣ್ಮುಂದೆ ಕಟ್ಟಿ ಕೊಡುತ್ತವೆ.
ಬಹುಶಃ ಇಂತಹ ಮಹಾರ ವೀರರನ್ನು ಕಂಡೇ ಸಂತ ತುಕಾರಾಮರು, “ಮಹಾರಾಸಿ ಶಿವೆ / ಕೋಪೆ ತೋ ಬ್ರಾಹ್ಮಣ ನವ್ಹೆ/” ಎಂದು ತಮ್ಮ ಅಭಂಗದಲ್ಲಿ ಹೇಳಿದ್ದಾರೆ. ಅಂದರೆ ಬ್ರಾಹ್ಮಣರಿಗಿಂತ ಮಹಾರರು ಮಹಾಮಹಿಮರು ಎಂಬುದೇ ಇಲ್ಲಿಯ ಭಾವ.

ಡಾ. ಬಾಬಾಸಾಹೇಬ ಅಂಬೇಡ್ಕರರು ತಮ್ಮ ಅನುಯಾಯಿಗಳೊಂದಿಗೆ ಶಿರೂರ ಸಮೀಪದ ಭೀಮಾ-ಕೋರೆಗಾವಕ್ಕೆ ಬಂದು ವೀರ-ಪರಾಕ್ರಮದದ ಗತ ಸಾಹಸವನ್ನು ಸಾರುವ ವಿಜಯ ಸ್ತಂಭಕ್ಕೆ 1ನೇ ಜನೇವರಿ 1927 ರಂದು ಗೌರವ ವಂದನೆ ಸಲ್ಲಿಸಿದರು. ಆ ದಿನವನ್ನು ಕೋರೆಗಾವ ಕದನದ ಮಹಾರ ಕಲಿಗಳ ಸ್ಮøತಿದಿನವನ್ನಾಗಿ ಆಚರಿಸಿದರು. ಇದಕ್ಕಿಂತ ಮೊದಲು ಇತಿಹಾಸದಲ್ಲಿ ಮುಚ್ಚಿಹೋಗಿದ್ದ ಅಥವಾ ಮುಚ್ಚಿ ಹಾಕಲ್ಪಟ್ಟ ವಿಜಯ ಸ್ತಂಭದತ್ತ ಯಾರೂ ಹಾಯುತ್ತಿರಲಿಲ್ಲ ಕೂಡ.

ಆದರೆ ಯಾವಾಗ ಡಾ. ಬಾಬಾಸಾಹೇಬ ಅಂಬೇಡ್ಕರರು ಸ್ಮøತಿದಿನವನ್ನು ಆಚರಿಸಿದರೋ ಅಂದಿನಿಂದ ಇಂದಿನವರೆಗೆ ಪ್ರತಿವರ್ಷ ಜನೇವರಿ 1 ರಂದು ದೇಶದ ವಿವಿಧ ಭಾಗಗಳಿಂದ ಬರುವ ಅಸಂಖ್ಯಾತ ಜನ ಸಮೂಹ ಸ್ಮøತಿ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.. ಡಾ. ಬಾಬಾಸಾಹೇಬ ಅಂಬೇಡ್ಕರರು ಯಾವುದೇ ಮಹತ್ವದ ಕೆಲಸವಿದ್ದರೂ ಅದನ್ನೆಲ್ಲ ಬದಿಗೊತ್ತಿ ಜನೇವರಿ ಒಂದರಂದು ಕೋರೆಗಾವಕ್ಕೆ ಬಂದು ವಿಜಯ ಸ್ತಂಭಕ್ಕೆ ಗೌರವ ವಂದನೆ ಸಲ್ಲಿಸುತ್ತಿದ್ದರು.

ಹೀಗೆಲ್ಲ ಇದ್ದರೂ ಕೂಡ ಕೆಲವು ಸಮಯಸಾಧಕರು ಕೋರೆಗಾವ ಕದನದ ಬಗ್ಗೆ ಹೇಳುವುದೇನೆಂದರೆ `ಈ ಕದನ ನಮ್ಮದೇ ದೇಶದಲ್ಲಿಯ ನಮ್ಮದೇ ಬಂಧುಗಳ ವಿರುದ್ಧವಾಗಿತ್ತು ! ಆ ಕದನದ ಫಲವಾದರೂ ಏನು ?’ ಹೀಗೆ ಹೇಳುವವರಿಗೆ ಒಂದು ಸವಾಲನ್ನು ಈ ಸಂದರ್ಭದಲ್ಲಿ ಹಾಕಲೇಬೇಕೆನಿಸುತ್ತದೆ ; ಅಲ್ಲ ಸ್ವಾಮಿ, ತಮ್ಮ ಬಂಧುಗಳನ್ನು ಯಾರಾದರೂ ಗುಲಾಮರನ್ನಾಗಿ ಮಾಡಿಕೊಳ್ಳುತ್ತಾರೆಯೇ ? ತಮ್ಮ ಬಂಧುವಿನ ಹೆಣ್ಣುಮಗಳೊಬ್ಬಳ ಮಾನವನ್ನು ಕಳೆಯುತ್ತಾರೆಯೇ ? ತಮ್ಮ ಬಂಧುಗಳನ್ನು ಯಾರಾದರೂ ಅನ್ನ-ನೀರಿಗಾಗಿ ಚಡಪಡಿಸುವಂತೆ ಮಾಡುತ್ತಾರೆಯೇ ? ಸಾರ್ವಜನಿಕ ಜಾಗದಲ್ಲಿ ಅಡ್ಡಾಡಲು ನಿರ್ಬಂಧ ವಿಧಿಸಬಹುದೇ ? ತಮ್ಮ ಬಾಂಧವರನ್ನು ಯಾರಾದರೂ ಹೇಳಹೆಸರಿಲ್ಲದಂತೆ ನಾಶ ಮಾಡುವ ಕುತಂತ್ರ ಮಾಡಬಹುದೇ ? ತಾವೇ ಕೆಸರು ಎರಚಿ, ಅಪಹಾಸ್ಯ ಮಾಡಿ ನಗಬಹುದೇ ? ಈ ಪ್ರಕರಣಗಳು ನಡೆಯುತ್ತಲೇ ಇವೆ ಎಂದಾದರೆ ಅವರು ನಮ್ಮ ಬಂಧುಗಳು ಹೇಗಾಗುತ್ತಾರೆ ?

ಕೇವಲ ಬೆರಳೆಣಿಕೆಯಷ್ಟಿದ್ದ ಮಹಾರ ವೀರ ಯೋಧರು, ಪೇಶ್ವೆಗಳ ಬಲಾಢ್ಯ ಸೇನೆಯನ್ನು ಈ ಕೋರೆಗಾವ ಕದನದಲ್ಲಿ ಹೀನಾಯವಾಗಿ ಸೋಲಿಸಿದ್ದು ಸೋಜಿಗವಲ್ಲ. ಪೇಶ್ವೆಗಳಿಂದ ಉಂಟಾದ ಸಾಮಾಜಿಕ ಅನಿಷ್ಟ, ಅನ್ಯಾಯ ಮತ್ತು ಅಸ್ಪøಶ್ಯತೆಗಳಿಂದ ತಮಗಾದ ಶೋಷಣೆಗೆ ಪ್ರತಿಯಾಗಿ ಪ್ರತಿಕಾರ ಸಾಧಿಸಿದ ಈ ನಡೆ ಮಹಾರರ ಸ್ವಾಭಿಮಾನವನ್ನು ಎತ್ತಿ ಹಿಡಿಯುತ್ತದೆ. ಕೋರೆಗಾವ ಕದನದ ಗೆಲುವು ಎಂದರೆ ಅನ್ಯಾಯದ ವಿರುದ್ಧ ಪಡೆದ ಗೆಲುವೇ ಆಗಿದೆ.

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರೂ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಿಸುತ್ತಾರೆ. “ಬ್ರಿಟಿಷರ ಪರವಾಗಿ ಮಹಾರ ಯೋಧರು ಯುದ್ಧ ಮಾಡಿದ್ದು ಅಭಿಮಾನ ಪಡುವ ಸಂಗತಿಯಲ್ಲದಿದ್ದರೂ ಮಹಾರ ಯೋಧರು ಬ್ರಿಟಿಷರ ಪರ ಯಾಕೆ ಹೋದರು ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡುವುದು ಸಹಜವೇ ಆಗಿದೆ. ಮಹಾರರು ಮತ್ತೇನು ಮಾಡಲು ಸಾಧ್ಯವಿತ್ತು ? ಹಿಂದುಗಳೆನಿಸಿಕೊಂಡವರು ಅವರನ್ನು ಕೀಳು ಎಂದು ಪರಿಗಣಿಸಿ ನಾಯಿ-ನರಿಗಳಿಗಿಂತಲೂ ಕಡೆಯಾಗಿ ವರ್ತಿಸಿದಾಗ ಆ ಅವಮಾನವನ್ನು ಸಹಿಸಿಕೊಂಡು ಎಷ್ಟು ದಿನ ಬದುಕುವುದು ? ಸ್ವಾಭಿಮಾನದ ನೆಲೆಯಲ್ಲಿ ಮತ್ತು ಹೊಟ್ಟೆಗೆ ಹಿಟ್ಟು ದೊರಕಿಸಿಕೊಳ್ಳಲು ಅವರು ಅನಿವಾರ್ಯವಾಗಿ ಬ್ರಿಟಿಷರ ಸೇನೆ ಸೇರಿದರೆಂಬುದನ್ನು ಪ್ರತಿಯೊಬ್ಬರು ಲಕ್ಷ್ಯದಲ್ಲಿಡಬೇಕು” ಎಂಬ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮಾತುಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಮಹಾರ ಯೋಧರು ಮುಂಚಿನಿಂದಲೂ ಅಂದರೆ ಶಿವಾಜಿಯ ಕಾಲದಿಂದಲೂ ಮರಾಠಾ ಸೇನೆಯಲ್ಲಿ ಪ್ರಾಮಾಣಿಕತೆಯಿಂದ, ಪರಾಕ್ರಮದಿಂದ ದುಡಿದವರು. ಆದರೆ ಎರಡನೇ ಬಾಜಿರಾವ ಗದ್ದುಗೆ ಏರಿದಾಗ ಅನುಭವಿಸಿದ ಜಾತಿಯತೆಯ ತಾರತಮ್ಯತೆ ದಲಿತರನ್ನು ಸಹಜವಾಗಿಯೇ ಕೆರಳಿಸಿತ್ತು. ಆ ಸಂದರ್ಭದಲ್ಲಿ ಅದನ್ನು ಹೇಳಲಾಗಿತ್ತು ಕೂಡ.

ಎರಡನೇ ಬಾಜಿರಾವನ ಬದಲಿಗೆ ಬೇರೆಯವರು ಯಾರಾದರೂ ಸಮರ್ಥರು ಪೇಶ್ವೆಗಳಾದರೆ ಮಾತ್ರ ತಾವು ತಮ್ಮ ತಾಯ್ನೆಲವನ್ನು ಪ್ರಾಣವನ್ನೇ ಬಲಿ ಕೊಟ್ಟಾದರೂ ಕೂಡ ಕಾಪಾಡಲು ಸಿದ್ಧವಿರುವುದಾಗಿ ಪರಾಕ್ರಮಿ ಶಿದನಾಕ ಮನವಿ ಮೂಲಕ ಪ್ರಕಟಿಸಿದ್ದ. ಪೇಶ್ವೆ ಈ ವಿನಂತಿಯನ್ನು ಅತ್ಯಂತ ತಿರಸ್ಕಾರದಿಂದ ತಳ್ಳಿ ಹಾಕಿದ.

ಆದ್ದರಿಂದಲೇ ಮಹಾರ ಯೋಧರು ಬ್ರಿಟಿಷ ಪಡೆ ಸೇರಿ ಪೇಶ್ವೆಯನ್ನು ಮುಗಿಸಲು ಮುಂದಾದರು. ಸಂಖ್ಯೆಯಲ್ಲಿ ಅಲ್ಪವಾಗಿದ್ದರೂ ಅತ್ಯಂತ ಕೆಚ್ಚಿನಿಂದ ಕಲಿತನ ಪ್ರದರ್ಶಿಸಿದ ಮಹಾರ ಯೋಧರು, ತಮ್ಮ ಮೇಲೆ ಅಮಾನವೀಯವಾದ ಬಂಧನಕಾರಿ ನಿಯಮಗಳಿಂದ ಅಸ್ಪøಶ್ಯತೆಯನ್ನು ಹೇರಿದ್ದ ಪೇಶ್ವೆ ಆಡಳಿತವನ್ನು ಕದನದಲ್ಲಿ ಮಣ್ಣು ಮುಕ್ಕಿಸಿದರು.

ಪ್ರತಿ ವರ್ಷ ಜನೇವರಿ ಒಂದರಂದು ದೇಶದ ಮೂಲೆ ಮೂಲೆಗಳಿಂದ ಬೃಹತ್ ಪ್ರಮಾಣದಲ್ಲಿ ಆಗಮಿಸುವ ದಲಿತರು ಮೊದಲು ವಿಜಯ ಸ್ತಂಭಕ್ಕೆ ಗೌರವ ವಂದನೆ ಸಲ್ಲಿಸುತ್ತಾರೆ. ನಂತರ ಮೈದಾನದ ಆಟಗಳು ಆರಂಭಗೊಳ್ಳುತ್ತವೆ. ಮಧ್ಯಾಹ್ನ ಸಹಭೋಜನ ಕೂಡ ಇರುತ್ತದೆ. ಭೋಜನದ ನಂತರ ಒಂದಿಷ್ಟು ವಿಶ್ರಾಂತಿ ಪಡೆದುಕೊಂಡು ಸಂಜೆಯ ಇಳಿ ಹೊತ್ತಿನ ಸಮಯದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಣೆಯಾಗುತ್ತದೆ. ಈ ಸಂದರ್ಭದಲ್ಲಿ ಸಭೆಯೂ ನಡೆಯುತ್ತದೆ.

ನಾವು ಆ ವೀರ ವಿಜಯಸ್ತಂಭದ ಹತ್ತಿರ ಹೋಗಿ ಗಂಟಲು ಹರಿಯುವಂತೆ ಘೋಷಣೆ ಕೂಗುತ್ತೇವೆ. ಇದನ್ನು ತಪ್ಪೆಂದು ನಾನು ಹೇಳುತ್ತಿಲ್ಲ. ಒಳ್ಳೆಯ ಸಂಗತಿಯೇ ಸರಿ ! ಆದರೆ ಅದೇ ಛಲದಿಂದ ; ಅದೇ ಮನಸ್ಸಿನಿಂದ ನಾವು ನಮ್ಮ ಪೂರ್ವಿಕರ ಪರಾಕ್ರಮವನ್ನು ಉಳಿಸಿಕೊಂಡು ಬರಬೇಕು ಎಂದು ಕೂಡ ನಮಗೆ ಆಗ ಅನ್ನಿಸಬೇಕಲ್ಲವೇ ? ಅನ್ನಿಸಿದರೂ ಆ ಪರಾಕ್ರಮ ಶಕ್ತಿ ಇಂದು ನಮ್ಮಲ್ಲಿ ಉಳಿದಿದೆಯೇ ? ಉಳಿಯದಿದ್ದರೆ ಅದಕ್ಕಾಗಿ ಚಿಂತಿಸುವ ಕನಿಷ್ಟ ಸೌಜನ್ಯವಾದರೂ ನಮಗೆ ಇರಬೇಡವೇ ? ಜೀವದ ಹಂಗು ತೊರೆದು ಅವರು ಅಂದರೆ ನಮ್ಮ ಪೂರ್ವಿಕರು ತಲಾ ನಲವತ್ತು ಸೈನಿಕರಿಗೆ ಒಬ್ಬ ಮಹಾರ ಯೋಧರಾಗಿ ಘನಘೋರ ಕದನದಲ್ಲಿ ವಿಜಯಿಯಾಗುತ್ತಾರೆ !

ಹಾಗಾದರೆ ಇಂದು ನಮ್ಮ ಯುದ್ಧ ಎಲ್ಲಿ ಆಗಬೇಕಿದೆ ? ಯಾರೊಂದಿಗೆ ಆಗಬೇಕಿದೆ ? 500 ಮಹಾರರು ಒಂದೇ ಜೀವವಾಗಿ ಹೋರಾಟ ಮಾಡಿದ್ದರಿಂದಲೇ ವಿಜಯಶ್ರೀ ಅವರಿಗೆ ಒಲಿದಳು. ಹಾಗಾದರೆ ಅಂಥ ಶಕ್ತಿ ಇಂದು ನಮ್ಮಲ್ಲಿ ಉಳಿದಿದೆಯೇ ? ನಾವು ಸ್ವಾರ್ಥಿ ಮತ್ತು ಢೋಂಗಿ ಮಂದಿಯಲ್ಲ ಅಲ್ಲವೇ ?
ನಮ್ಮ ಒಗ್ಗಟ್ಟಿನ (ಏಕತೆಯ) ಇತಿಹಾಸವನ್ನು ನಾವು ಮರೆತಿದ್ದೇವೆ ಅಲ್ಲವೇ ? ಇದರಿಂದಲೇ ಶೋಷಣೆ ಮಿತಿ ಮೀರುತ್ತದೆಯಲ್ಲವೇ ? ನಾವು ನಮ್ಮ ನಮ್ಮಲ್ಲಿಯೇ ಜಗಳವಾಡುತ್ತ ಕುಳಿತ್ತಿದ್ದೇವೆ ಎಂಬುದನ್ನು ಕಂಡಾಗ ಅನಿಸುತ್ತದೆ ; ಯಾರ್ಯಾರು ಕಲಿತರೋ ಅವರಲ್ಲಿಯ ಕೆಲವರು ತಮ್ಮ ಹೊಟ್ಟೆಯನ್ನಷ್ಟೇ ದೊಡ್ಡದಾಗಿಸಿಕೊಂಡರು ! ತಮ್ಮ ಸಮಾಜಕ್ಕೆ ತಾವೇನಾದರೂ ಋಣ ಸಂದಾಯ ಮಾಡಬೇಕಿದೆಯೇ ಎಂಬ ಅರಿವು ಅವರಲ್ಲಿ ಮಕಾಡೆ ಮಲಗಿ ಬಿಟ್ಟಿದೆ !

ನಾವು ನಮ್ಮ ಶೌರ್ಯದ ಇತಿಹಾಸವನ್ನೇ ಮರೆತಿದ್ದೇವೆ ; ಹತ್ತು ಜನ ಹತ್ತು ಕಡೆ ಮುಖ ಮಾಡಿ ನಿಂತಿದ್ದೇವೆ ! ಒಂದುಗೂಡುವ ; ಒಗ್ಗಟ್ಟು ಪ್ರದರ್ಶಿಸುವ ಮಾತೇ ಇಲ್ಲ ! ಅದರ ಪರಿಣಾಮವನ್ನೇ ನಾವು ಅನುಭವಿಸುತ್ತಿದ್ದೇವೆ. ಸಾಮಾನ್ಯನಾದ ನನ್ನನ್ನೂ ಸೇರಿಸಿ ನಮ್ಮವರೇ ಆಗಿರುವ ಮುಖಂಡರೂ ಇದಕ್ಕೆ ಹೊಣೆಗಾರರಾಗಿದ್ದಾರೆ ಎನಿಸುವುದಿಲ್ಲವೇ ?`ಅಸಹಾಯಕವಾಗಿ ಬದುಕುವುದಕ್ಕಿಂತ ಅವ್ವನ ಹೊಟ್ಟೆಯಲ್ಲಿಯೇ ಸತ್ತು ಹೋಗುವುದು ಮೇಲು’ ಎಂದು ಡಾ. ಬಾಬಾಸಾಹೇಬ ಅಂಬೇಡ್ಕರ್‍ರು ಹೇಳಿದ್ದರು.

ಇಂಥ ಮರ್ಮಭೇದಕ ಮಾತುಗಳೇನಾದರೂ ನಿಮಗೆ ತಟ್ಟಿದ್ದಾವೆಯೇ ? ಇಲ್ಲ ! ನಾವೆಲ್ಲ ತಟಸ್ಥರಾಗಿ ಸಂಬಳ ಪಡೆದು ಬೆಚ್ಚಗೆ ಹೊದ್ದುಕೊಂಡು ಮಲಗಿದ್ದೇವೆ ; ಎಚ್ಚರಾಗಿದ್ದೇವೆ ಎನ್ನುವ ಕೆಲವರು ವಿನಾಕರಣ ತಮ್ಮ ತಮ್ಮಲ್ಲಿ ಜಗಳ ಮಾಡಿಕೊಳ್ಳುತ್ತಿದ್ದಾರೆ ; ಇನ್ನೂ ಕೆಲವರು ಮತ್ಸರದಿಂದ ಪರಸ್ಪರ ಮಾತನಾಡುವುದನ್ನೇ ಬಿಟ್ಟುಬಿಟ್ಟಿದ್ದಾರೆ.

ಬಂಧುಗಳೇ,
ಈ ಸಂದರ್ಭದಲ್ಲಿ ನಾನು ವಿಶ್ವವಿದ್ಯಾಲಯ ಮಟ್ಟದಲ್ಲಿ ನಿಂತು ಒಂದು ಮಾತು ಹೇಳುತ್ತಿದ್ದೇನೆ. ನೀವೆಲ್ಲ ಸ್ವಾಭಿಮಾನಿ ದಲಿತರೇ ಆಗಿದ್ದರೆ, ಕಿಂಚಿತ್ತಾದರೂ ಪಡೆದುಕೊಂಡಿದ್ದರ ಋಣ ತೀರಿಸುವ ಕಾರ್ಯವನ್ನು ಯಾಕೆ ಮಾಡಬಾರದು ? ಶಿಕ್ಷಕೇತರ ಸಿಬ್ಬಂದಿಯನ್ನು ಬಿಡಿ ; ಯುಜಿಸಿ ಸಂಬಳ ಪಡೆಯುತ್ತಿರುವ ದಲಿತ ಪ್ರಾಧ್ಯಾಪಕರು ತಿಂಗಳಿಗೆ ಕೇವಲ ನೂರು ರುಪಾಯಿ ನೀಡಿ ಒಂದು ನಿಧಿಯನ್ನು ಆರಂಭಿಸಬೇಕು ; ಅಲ್ಲಿ ಸೇರುವ ಹಣ ದಲಿತ ವಿದ್ಯಾರ್ಥಿಗಳ ಕಲ್ಯಾಣಕ್ಕೆ ಸದುಪಯೋಗವಾಗಬೇಕು ಎನಿಸುವುದಿಲ್ಲವೆ ? ಒಳಜಾತಿಗಳನ್ನೇ ಮುಂದು ಮಾಡಿಕೊಂಡು ಪರಸ್ಪರ ದ್ವೇಷ-ಜಗಳ ಮರೆಯಬೇಕು ಎನಿಸುವುದಿಲ್ಲವೇ ? ವಿದ್ಯಾರ್ಥಿಗಳನ್ನೂ ಹಾದಿ ತಪ್ಪಿಸುವ ಚಾಳಿಯನ್ನು ಬಿಟ್ಟು ಕೂಡಿ ಬಾಳುವ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಿಲ್ಲವೇ ? ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯವಿದೆ.

ದಯವಿಟ್ಟು ಒಂದು ಮಾತನ್ನು ಮಾತ್ರ ನಾನು ಇಲ್ಲಿ ಹೇಳಬಯಸುತ್ತೇನೆ ; ಮೊಟ್ಟಮೊದಲು ನೀವು ನಿಮ್ಮ ನಿಮ್ಮ ಗೂಡುಗಳನ್ನು ಬಿಟ್ಟು ಹೊರಬನ್ನಿ ; ಪೊರೆಯನ್ನು ಹರಿದೊಗೆಯಿರಿ ಸೋದರ ಸಂಬಂಧಗಳನ್ನು ಬೆಸೆಯಲು ಮುಂದಾಗಿ ! ನಮ್ಮ ಪೂರ್ವಿಕರ ಇತಿಹಾಸದ ಅರಿವು ಇದ್ದುದ್ದೇ ಆದಲ್ಲಿ ಇದು ಅಸಾಧ್ಯವೇನೂ ಅಲ್ಲ ಎಂಬುದು ನನ್ನ ಅಚಲ ವಿಶ್ವಾಸವಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ನೆಲದನಿ

ಶ್ರೀಸಾಮಾನ್ಯ ಮತ್ತು ವಿಚಾರ ಕ್ರಾಂತಿ

Published

on

  • ಕುವೆಂಪು

ಅಂತರರಾಷ್ಟ್ರೀಯ ಪುಸ್ತಕ ವರ್ಷ ಅಂಗವಾಗಿ ವಯಸ್ಕರ ಶಿಕ್ಷಣ ಸಮಿತಿ ಪುಸ್ತಕ
ಪ್ರದರ್ಶನ ಏರ್ಪಡಿಸಿರುವುದು ಶ್ಲಾಘನೀಯ ಮತ್ತು ಅಭಿನಂದನಾರ್ಹ, ಈ ಪ್ರದರ್ಶನ
ಶ್ರೀಸಾಮಾನ್ಯರ ಅವಶ್ಯಕತೆಗೆ ಅನುರೂಪವಾಗಿರುತ್ತದೆ ಎಂದು ಭಾವಿಸುತ್ತೇನೆ.

ಭಾರತ ತನ್ನ ಸ್ವಾತಂತ್ರ್ಯದ ರಜತೋತ್ಸವವನ್ನು ನಡೆಸುತ್ತಿರುವ ಈ ಸಮಯದಲ್ಲಿ
ನಾವು ಬಡತನವನ್ನು ಎಷ್ಟರಮಟ್ಟಿಗೆ ಪರಿಹರಿಸಿದ್ದೇವೆ? ಜಾತಿ ಮತಗಳ ಭೇದ ಬುದ್ದಿಯನ್ನು
ಎಷ್ಟರಮಟ್ಟಿಗೆ ತೊಡೆದು ಹಾಕ್ಕಿದ್ದೇವೆ? ಉಳ್ಳವರ ಇಲ್ಲದವರ ನಡುವಣ ಅಂತರವನ್ನು
ಎಷ್ಟು ಕಡಿಮೆ ಮಾಡಿದ್ದೇವೆ? ಸಾಮಾನ್ಯರಲ್ಲಿ ಸಮಾಜವಾದಿ ಪ್ರಜಾಪ್ರಭುತ್ವದ ಜ್ಞಾನೋದಯವಾಗಲು ಏನೇನು ಕ್ರಮ ಕೈಗೊಂಡಿದ್ದೇವೆ ? ವೈಚಾರಿಕ ಬುದ್ದಿ ಮತ್ತುವೈಜ್ಞಾನಿಕ ದೃಷ್ಟಿ ಇವುಗಳನ್ನು ಸಾರ್ವಜನಿಕರ ಮನಸ್ಸಿನಲ್ಲಿ ಯಾವ ಪ್ರಮಾಣದಲ್ಲಿ
ಬೆಳೆಸಿದ್ದೇವೆ? ಎಂಬ ವಿಚಾರವಾಗಿ ಸಿಂಹಾವಲೋಕನ ಮಾಡುವುದರ ಜೊತೆಗೆ ಅನಕ್ಷರತೆಯನ್ನು ಎಷ್ಟರಮಟ್ಟಿಗೆ ನಿವಾರಿಸಿದ್ದೇವೆ? ಅಕ್ಷರಸ್ಥರನ್ನಾಗಿ ಮಾಡಿದವರಿಗೆ ಓದಲು
ಉಚಿತ ವಾಗುವಂತೆ ಎಂತಹ ಪುಸ್ತಕಗಳನ್ನು ಎಷ್ಟೆಷ್ಟು ಒದಗಿಸಿದ್ದೇವೆ? ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಈ ಕೊನೆ ವಿಷಯದ ಪರಿಶೀಲನೆಗೆ ವಯಸ್ಕರ
ಶಿಕ್ಷಣ ಸಮಿತಿ ಕೈಗೊಂಡಿರುವ ಪುಸ್ತಕ ಪ್ರದರ್ಶನ ಉತ್ತರ ಹೇಳಬೇಕಾಗುತ್ತದೆ.

“ಉತ್ತಮ ಸಾಹಿತ್ಯಕೃತಿ ಒಂದು ಆಚಾರ್ಯಚೇತನದ ಜೀವಿತ ಸಮಸ್ತದ ಸಾರಸರ್ವಸ್ವ; ಅದು ಐಹಿಕಕ್ಕೆ ಮಾತ್ರವಲ್ಲದೆ, ಆಮುಷ್ಮಿಕ ಕಲ್ಯಾಣಕ್ಕೂ
ಮಾರ್ಗದರ್ಶಿಯಾಗುತ್ತದೆ.”ಎಂದು ಆಂಗ್ಲೇಯ ಮಹಾಕವಿಯೊಬ್ಬನು ಸತ್ಕಾವ್ಯಗಳನ್ನು
ಕುರಿತು ಬಣ್ಣಿಸಿದ್ದಾನೆ. ಇದನ್ನೇ ಇನ್ನೊಂದು ರೀತಿಯಲ್ಲಿ ಭಾರತೀಯ ಕಾವ್ಯ ಮಾಮಾಂಸೆಯೂ ಸಮರ್ಥಿಸುತ್ತದೆ.

ಸಂಸಾರದ ವಿಷವೃಕ್ಷದಿ
ಹಣ್ಣೆರಡಿವೆ ಅಮೃತೋಪ:
ಕಾವ್ಯಾಮೃತದಾಸ್ವಾದನ
ಮೇಣ್ ಸಜ್ಜನ ಸಲ್ಲಾಪ!”

ಬುದ್ದಿಗೆ ಚಿಂತನ ಜ್ಯೋತಿಯನ್ನು ದಯಪಾಲಿಸುವುದರ ಜೊತೆಗೆ ಹೃದಯಕ್ಕೆ ಧೈರ್ಯಸ್ಥೈರ್ಯಕಾರಕವಾದ ಮತ್ತು ಆಶಾಪ್ರಚೋದಕವಾದ ರಸಾನಂದವನ್ನು ದಾನ
ಮಾಡುತ್ತದೆ.

ಇತರ ಎಲ್ಲಾ ವಿಷಯಗಳಲ್ಲಿಯೂ ಇರುವಂತೆ ಪುಸ್ತಕಗಳ ಎಲ್ಲಿಯೂ ಸತ್ ಮತ್ತು
ಅಸತ್ ಎರಡೂ ಇರುತ್ತವೆ. ಈ ಸತ್ಕಾವ್ಯ ನಮ್ಮನ್ನು ಊರ್ಧ್ವಮುಖ ಪ್ರವಾಸದತ್ತ ಕೊಂಡೊಯ್ದರು, ದುಷ್ಕಾವ್ಯ ನಮ್ಮನ್ನು ಅಧೋಮುಖ ಪ್ರವಾಸಿಗಳನ್ನಾಗಿ ಮಾಡುತ್ತದೆ.

ಕೆಳಕ್ಕೆ ತಳ್ಳುವ ಆಸುರೀ ಪುಸ್ತಕಗಳನ್ನು ಸಂಹರಿಸಿ, ಮೇಲಕ್ಕೆ ಒಯ್ಯುವ ದೈವೀ ಪುಸ್ತಕಗಳನ್ನು ಗುರುತಿಸಬೇಕು. ಅಕ್ಷರಾಭ್ಯಾಸ ದಿಂದ ಓದುವ ಹೊಸ ರುಚಿಯನ್ನು ಸಂಪಾದಿಸಿರುವ ಶ್ರೀಸಾಮಾನ್ಯನಿಗೆ ಮೊದ ಮೊದಲು, ಕ್ಯಾಬರೆ ನೃತ್ಯದಂತೆ, ಪಶುರುಚಿಗೆ ಆಕರ್ಷಣೀಯವಾಗಿ ತೋರಿದರೂ ತುದಿಗೆ ಕ್ಯಾನ್ಸರಿಗಿಂತಲೂ ಕ್ರೂರವಾಗುವ ಪುಸ್ತಕ ಸಾಮಗ್ರಿಯಿಂದ ಅಪಾಯವಾಗದಂತೆ ನೋಡಿಕೊಳ್ಳಬೇಕಾದುದು ಅನಕ್ಷರರನ್ನು ಸಾಕ್ಷರರನ್ನಾಗಿ ಮಾಡಿದವರ ಪವಿತ್ರ ಹೂಳಗಾರಿಕೆಯಾಗಿರುತ್ತದೆ. ಆದ್ದರಿಂದ ಪ್ರದರ್ಶನದಲ್ಲಿ ಅಸುರರಿಗೆ ಸ್ಥಾನವಿರದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಹಾರೈಸುತ್ತೇನೆ.

ಸಮನ್ವಯ ದೃಷ್ಟಿಯ ಸೆಕ್ಯೂಲರ್ ಅಥವಾ ಸಾರ್ವ ಲೌಕಿಕ ಕ್ಷೇಮ ರಾಷ್ಟ್ರ ಎಂದು ಘೋಷಿತವಾಗಿದೆ, ನಮ್ಮ ಭಾರತ. ಆದ್ದರಿಂದ ಆ ಘೋಷಣೆ ಕಾರ್ಯಕಾರಿಯಾಗಿ ಸಫಲವಾಗಬೇಕಾದರೆ ನಮ್ಮ ಶ್ರೀ ಸಾಮಾನ್ಯರಲ್ಲಿ ಮತದ ಮೌಢ್ಯತೆಗಳು ಮಾತ್ರವಲ್ಲದೆ, ಮತಭಾವದ ಮೌಢ್ಯತೆಯೂ ತೊಲಗಬೇಕು.

ವರ್ಣಾಶ್ರಮ, ಜಾತಿಪದ್ಧತಿ ಮೇಲು ಕೀಳು
ಭಾವನೆ ಮುಂತಾದ ಮಧ್ಯಯುಗದ ಕ್ರೂರ ಕರಾಳ ತತ್ವಗಳೆಲ್ಲ ವೈಜ್ಞಾನಿಕ ದೃಷ್ಟಿಯ ಅಗ್ನಿಕುಂಡ ದಲ್ಲಿ ಭಸ್ಮೀಕೃತವಾಗಬೇಕು. ಮತ ಮತ್ತು ರಾಜಕೀಯಗಳ ಅಂಧಕಾರವು ವಿಜ್ಞಾನ ಮತ್ತು ಆಧ್ಯಾತ್ಮ ಗಳ ಸೂರ್ಯೋದಯಕ್ಕೆ ಶರಣಾಗಿ, ತೊಲಗಿ, ಸರ್ವೋದಯ ಕಾಂತಿ ಹಬ್ಬಿ, ಶಾಂತಿ ಮೈದೋರಲಿ ಎಂಬ ಅಭೀಪ್ಸೆ ಸರ್ವರ ಹೃದಯದ ಪ್ರಾರ್ಥನೆಯಾಗಿ,ಆತೀತ ಕಲ್ಯಾಣ ಶಕ್ತಿಗಳ ಅವತರಣಕ್ಕೆ ಹಾದಿಯಾಗಲಿ ಎಂದು ಹಾರೈಸುತ್ತೇನೆ’.

(ಕುವೆಂಪು ಅವರ ‘ವಿಚಾರ ಕ್ರಾಂತಿಗೆ ಆಹ್ವಾನ‘ ಪುಸ್ತಕದಿಂದ ಈ ಲೇಖನ ಆಯ್ದುಕೊಳ್ಳಲಾಗಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending