Connect with us

ನೆಲದನಿ

ಈವತ್ತಿನ ಗಾಂಧಿ…!

Published

on

(Photograph by Kanu Gandhi / © Gita Mehta, heir of Abha and Kanu Gandhi)
  • ರಾಜಾರಾಮ್ ತಲ್ಲೂರ್

ನಾವು ಈವತ್ತು ತಲುಪಿರುವ ಸ್ಥಿತಿಯನ್ನು ಸಮರ್ಥವಾಗಿ ಬಿಂಬಿಸಬಲ್ಲ ಗಾಂಧೀ ಚಿತ್ರವೊಂದಕ್ಕೆ ಹುಡುಕಾಡಿದಾಗ ನನಗೆ ಸಿಕ್ಕಿದ ಚಿತ್ರ ಇದು.

1944ರಲ್ಲಿ (ಫೆಬ್ರವರಿ 22) ಕಸ್ತೂರ್ಬಾ ಗಾಂಧಿ ತೀರಿಕೊಂಡಾಗ ಅವರ ಶರೀರದ ಎದುರು ದುಗುಡವೇ ಮೈವೆತ್ತು ಕುಳಿತಂತೆ ಕುಳಿತಿರುವ ಗಾಂಧಿ.

2015-16 ರ ಹೊತ್ತಿಗೆ ದೇಶದ ಪ್ರಧಾನಮಂತ್ರಿಗಳು ತಮ್ಮ ಭಾಷಣಗಳಲ್ಲೆಲ್ಲ ಗಾಂಧಿ 150 ತಲುಪುವ ಹೊತ್ತಿಗೆ ದೇಶ ಹಾಗಾಗಬೇಕು, ಹೀಗಾಗಬೇಕು ಎಂದೆಲ್ಲ ಕನಸುಗಳನ್ನು ಬಿತ್ತಿದ್ದರು. ಗಾಂಧಿಗೆ ಸ್ವಚ್ಛಭಾರತ ನೂರೈವತ್ತನೇ ಹುಟ್ಟುಹಬ್ಬಕ್ಕೆ ದೇಶದ ಕೊಡುಗೆ ಎಂದಿದ್ದರು.

ಆದರೆ ಈಗ 150 ಮುಖದೆದುರು ಬಂದು ನಿಂತಿದೆ. ಏನಾಗಿದೆ?
“ಹೌಡಿ…”ಯಲ್ಲಿ ಹೊಸ ರಾಷ್ಟ್ರಪಿತನ ಘೋಷಣೆ ಆಗಿದೆ. ಗೋಡ್ಸೆ ಕೂಡ ಎಷ್ಟು ದೊಡ್ಡ ದೇಶಭಕ್ತ ಎಂದು ತೋರಿಸಲು ಅವನ ಪಿಸ್ತೂಲು ಹರಾಜಿಗೆ ಹಾಕಿನೋಡಿ ಎಂಬ ಸಲಹೆ ಬಂದಿದೆ. ದೇಶ ಒಂದು ಒಕ್ಕೂಟವಾಗಿ ಹಿಂದೆಂದೂ ಕಾಣದಷ್ಟು ಹಿಂಸೆಯ, ವಿಘಟನೆಯ ಮನಸ್ಥಿತಿಯನ್ನು ಮೈದುಂಬಿಕೊಳ್ಳುತ್ತಿದೆ.

ಎಲ್ಲಕ್ಕಿಂತ ಮುಖ್ಯವಾಗಿ, 15-16ರಲ್ಲಿ ಈ ಸರ್ಕಾರ ಗಾಂಧಿ150ರ ಬಗ್ಗೆ ತೋರಿದ್ದ ಉತ್ಸಾಹದ 5%ಕೂಡ ಇಂದು ಗಾಂಧಿ150ರ ದಿನ ಕಾಣುತ್ತಿಲ್ಲ. ಆ ಎಲ್ಲ ಉತ್ಸಾಹ “ಹೌಡಿ…”ಗೇ ಮುಗಿದುಬಿಟ್ಟಿದೆ. ಇತ್ತ ಇನ್ನೊಂದು ಕಡೆ ಗಾಂಧಿಕಟ್ಟಿದ ಪಕ್ಷ ತಮ್ಮದೆಂದು ಕ್ಲೇಮ್ ಮಾಡುವ ಪಕ್ಷ ಕೂಡ ಗಾಂಧಿಗಿಂತ ಗಹನವಾದ ತನ್ನದೇ ತಾಪತ್ರಯಗಳಲ್ಲಿ ಮುಳುಗಿಬಿಟ್ಟಿದೆ.

ಇದೆಲ್ಲದರ ನಡುವೆ ಒಂದೇ ಸಮಾಧಾನ ಎಂದರೆ, ಗಾಂಧಿಯನ್ನು ಉಳಿಸಿಕೊಳ್ಳಲು ಇವರ್ಯಾರೂ ಬೇಕಾಗಿಲ್ಲ. ತನ್ನ ಬದುಕು-ವಿಚಾರಗಳ ಮೂಲಕವೇ ಗಾಂಧಿ ಅಜರಾಮರ.

ಸುದ್ದಿದಿ‌ನ.ಕಾಂ|ವಾಟ್ಸಾಪ್|9980346243

ನೆಲದನಿ

ಅಂಬೇಡ್ಕರರ ಕೊನೆಯ ಸಂದೇಶ

Published

on

  • ರಘೋತ್ತಮ ಹೊ.ಬ

ನಿಜ, ಇಂತಹದನ್ನು ಬರೆಯಲು ಕೈಗಢಗಢ ಎಂದು ನಡುಗುತ್ತದೆ. ಬಾಬಾಸಾಹೇಬರ ಕೊನೆಯ ಸಂದೇಶ ಎಂದು ಹೇಳಲು ಮೈ ಬೆವರುತ್ತದೆ. ಯಾಕೆಂದರೆ ಈ ಸಂದೇಶವನ್ನು ಓದುತ್ತಿದ್ದರೆ, ಮಗನೋರ್ವನಿಗೆ ತಂದೆಯು ತನ್ನ ಅಂತಿಮ ದಿನಗಳಲ್ಲಿ “ಮಗ ನೋಡಪ್ಪ ನಾನು ಕಷ್ಟಪಟ್ಟು ಇಷ್ಟೆಲ್ಲಾ ಮಾಡಿದ್ದೇನೆ. ಇನ್ನು ಇದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದು ನಿನ್ನ ಜವಾಬ್ದಾರಿ” ಎಂದು ಹೇಳುವಾಗ ಯಾವ ಪರಿಯ ದುಃಖ ಒತ್ತರಿಸಿಬರುತ್ತದೆಯೋ, ಆರ್ದ್ರ ಭಾವನೆ ಉಕ್ಕಿ ಹರಿಯುತ್ತದೆಯೋ ಅಂತಹ ಭಾವ ಉಂಟಾಗುತ್ತದೆ.

ನಿಜ, ಕೊಟ್ಯಂತರ ದಲಿತರ ಆಯುಷ್ಯದ ಒಂದೊಂದು ಕ್ಷಣವನ್ನು ನೀಡಿ ಅಂಬೇಡ್ಕರರನ್ನು ಉಳಿಸಿಕೊಳ್ಳಬಹುದಿತ್ತು. ಆದರೆ ಅದು ಸಾದ್ಯವಿಲ್ಲವಲ್ಲ! ಈ ನಿಟ್ಟಿನಲ್ಲಿ ಉಳಿದಿರುವುದು ಅವರ ಆ ಅಮರ ಸಂದೇಶ ಮಾತ್ರ. ಅಂದಹಾಗೆ ಬಾಬಾಸಾಹೇಬರ ಆ ಸಂದೇಶವನು ಅವರ ಆಪ್ತ ಕಾರ್ಯದರ್ಶಿ ಸರ್ ನಾನಕ್ ಚಂದ್ ರತ್ತು ತಮ್ಮ”Last few years of Dr. Ambedkar” ಕೃತಿಯಲ್ಲಿ ತುಂಬಾ ಆಪ್ತವಾಗಿ ದಾಖಲಿಸಿದ್ದಾರೆ. ಬಹುಶಃ ಅಂತಹ ದಾಖಲೆ ಬರೀ ದಲಿತ ಸಮುದಾಯವೊಂದಕ್ಕೆ ಅಲ್ಲ ಈ ಪ್ರಪಂಚದ ಪ್ರತಿಯೊಂದು ಶೋಷಿತ ವರ್ಗಕ್ಕೆ ವಿಮೋಚಕನೊಬ್ಬನು ತೋರುವ ದಿವ್ಯ ಮಾರ್ಗದಂತೆ ಕಾಣುತ್ತದೆ.

ಇರಲಿ, ಅದು 1956 ಜುಲೈ 31ರ ಮಂಗಳವಾರದ ಒಂದು ದಿನ. ಸಮಯ ಸಂಜೆ 5-30. ತಮ್ಮ ಆಪ್ತ ಕಾರ್ಯದರ್ಶಿ ರತ್ತುರವರಿಗೆ ಕೆಲವು ಪತ್ರಗಳನ್ನು dictate ಮಾಡಿದ ಬಾಬಾಸಾಹೇಬರು ಇದ್ದಕಿದ್ದಂತೆ upset ಆದರು! ಕೆಲಹೊತ್ತು ಏನನ್ನು ಮಾತನಾಡದ ಅಂಬೇಡ್ಕರರ ಈ ವರ್ತನೆ ಕಾರ್ಯದರ್ಶಿ ರತ್ತುವರಿಗೆ ಗಾಭರಿಯುಂಟುಮಾಡಿತು.

ತಕ್ಷಣ ಎಚ್ಚೆತ್ತುಕೊಂಡ ರತ್ತುರವರು ಅಂಬೇಡ್ಕರರ ತಲೆಯನ್ನು ನೇವರಿಸುತ್ತಾ ಕಾಲನ್ನು ಒತ್ತುತ್ತಾ ಅವರ ಹಾಸಿಗೆಯ ಒಂದು ಕಡೆ ಬಂದು ಸ್ಟೂಲ್‍ನ ಮೇಲೆ ಕುಳಿತುಕೊಂಡರು. ಹಾಗೆಯೇ ಭಯದಿಂದ ನಡುಗುತ್ತಾ ಅಂಬೇಡ್ಕರರನ್ನು “ಸರ್, ಕ್ಷಮಿಸಿ ನನಗೆ ಸತ್ಯ ತಿಳಿಯಬೇಕು. ಈಚಿನ ದಿನಗಳಲ್ಲಿ ನೀವು ತುಂಬಾ ದುಖಿಃತರಾಗಿರುತ್ತೀರಿ, ಖಿನ್ನರಾಗಿರುತ್ತೀರಿ, ಅಳುತ್ತಿರುತ್ತೀರಿ. ಯಾಕೆ ಹೀಗೆ?” ಎಂದು ಕೇಳಿಯೇ ಬಿಟ್ಟರು!

ರತ್ತುರವರ ಈ ಗಾಭರಿ ಅಂಬೇಡ್ಕರರಿಗೆ ಅರ್ಥವಾಗಿತ್ತು. ಸಾವರಿಸಿಕೊಂಡ ಅವರು ಆ ದಿನ ತಮ್ಮ ಆ ದುಖಃಕ್ಕೆ ಕಾರಣ ಮತ್ತು ಆ ಕಣ್ಣಿರಿನ ಹಿಂದಿನ ಸತ್ಯವನ್ನು ಬಿಚ್ಚಿಟ್ಟರು. ಅಂಬೇಡ್ಕರರ ಆ ನೋವಿನ ನುಡಿಗಳನ್ನು ಗೌರವದಿಂದ ದಾಖಲಿಸುವುದಾದರೆ “ನನ್ನ ದುಖಃಕ್ಕೆ ಕಾರಣ, ನನ್ನ ನೋವಿನ ಮೂಲ ನಿಮಗೆ ಅರ್ಥವಾಗುವುದಿಲ್ಲ.

ನನ್ನ ಮನಸ್ಸಿನಲ್ಲಿ ಕೊರೆಯುತ್ತಿರುವ ಮೊದಲ ಚಿಂತೆ ನನ್ನ ಜೀವಿತದಲ್ಲಿ ನನ್ನ ಜೀವನದ ಗುರಿಯನ್ನು ಮುಟ್ಟಲಾಗಲಿಲ್ಲವಲ್ಲ ಎಂಬುದು. ಏಕೆಂದರೆ ನನ್ನ ಜೀವಿತದ ಅವಧಿಯಲ್ಲೇ ನನ್ನ ಜನರು ಈ ದೇಶದ ಆಳುವ ವರ್ಗವಾಗುವುದನ್ನು ನಾನು ನೋಡಬಯಸಿದ್ದೆ. ರಾಜಕೀಯ ಅಧಿಕಾರವನ್ನು ಸಮಾನತೆಯ ಅಧಾರದ ಮೇಲೆ ಇತರರ ಜೊತೆ ಹಂಚಿಕೊಳ್ಳುವುದನ್ನು ನಾನು ಬಯಸಿದ್ದೆ. ಆದರೆ ಅಂತಹ ಸಾಧ್ಯತೆ ನನಗೀಗ ಕಾಣುತ್ತಿಲ್ಲ.

ಅದೂ ಅಲ್ಲದೆ ಅಂತಹ ಪ್ರಯತ್ನವನ್ನು ನಾನೇ ಮಾಡೋಣವೆಂದರೆ ನಾನೂ ಕೂಡ ಈಗ ಅನಾರೋಗ್ಯದ ಕಾರಣದಿಂದಾಗಿ ನಿಶ್ಯಕ್ತ ಮತ್ತು ನಿರಾಶನಾಗಿದ್ದೇನೆ” ಎನ್ನುತ್ತಾ ಅಂಬೇಡ್ಕರರು ತಮ್ಮ ದುಖಃದ ಮೊದಲ ಪುಟವನ್ನು ಬಿಚ್ಚಿಟ್ಟರು. ಮುಂದುವರಿದು ಅವರು “ಹಾಗೆ ಹೇಳುವುದಾರೆ ನಾನು ಇದುವರೆವಿಗೆ ಏನನ್ನು ಸಾಧಿಸಿ ಪಡೆದಿರುವೆನೋ ಆ ಸಾಧನೆಯ ಫಲವನ್ನು ಶಿಕ್ಷಣ ಪಡೆದ ನನ್ನ ಸಮುದಾಯದ ಕೆಲವೇ ಕೆಲವು ಮಂದಿ ಅನುಭವಿಸಿ ಮಜಾ ಮಾಡುತ್ತಿದ್ದಾರೆ. ತಮ್ಮ ಇನ್ನಿತರ ಶೋಷಿತ ಸಹೋದರರ ಬಗ್ಗೆ ಅವರು ಯಾವುದೇ ಅನುಕಂಪ, ಕಾಳಜಿ ತೋರುತ್ತಿಲ್ಲ.

ತಮ್ಮ ಈ ವಂಚನೆಯ ಕ್ರಿಯೆಯಿಂದಾಗಿ ಒಂದು ರೀತಿಯಲಿ ಅವರು ಅಯೋಗ್ಯರಾಗಿದ್ದಾರೆ. ವೈಯಕ್ತಿಕ ಹಿತಾಸಕ್ತಿಯನ್ನಷ್ಟೆ ಸಾಧಿಸಿಕೊಂಡು ತಮ್ಮಷ್ಟಕ್ಕೆ ಬದುಕುವ ಅವರು ಒಂದರ್ಥದಲಿ ನನ್ನ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ. ಅವರಲ್ಲಿ ಯಾರೂ ಕೂಡ ಸಮುದಾಯದ ಸೇವೆಯನ್ನು ಮಾಡಲು ಮುಂದೆ ಬರುತ್ತಿಲ್ಲ. ಒಟ್ಟಾರೆ ಅವರು ವಿನಾಶದ ಹಾದಿಯತ್ತ ಸಾಗುತ್ತಿದ್ದಾರೆ” ಎಂದು ಮೀಸಲಾತಿಯ ಲಾಭ ಪಡೆದು ನೌಕರಿಗಿಟ್ಟಿಸಿ ಸ್ವಾರ್ಥಿಗಳಾಗಿರುವ ತನ್ನ ಸಮುದಾಯದ ಸರ್ಕಾರಿ ನೌಕರರ ಬಗ್ಗೆ ಅಂಬೇಡ್ಕರರು ಅಂದು ಹೇಳಿದರು.

ಮುಂದುವರಿದು ಅವರು”ಆ ಕಾರಣಕ್ಕಾಗಿ ಇನ್ನು ಮುಂದೆ ನಾನು ಹಳ್ಳಿಗಳಲ್ಲಿನ ಶೋಷಣೆಯನ್ನು ಇನ್ನೂ ಅನುಭವಿಸುತ್ತಿರುವ, ಆರ್ಥಿಕ ದುಸ್ಥಿತಿಯಲ್ಲಿ ಇನ್ನು ಹಾಗೆಯೇ ಇರುವ ನನ್ನ ಅನಕ್ಷರಸ್ಥ ವಿಶಾಲ ಜನಸಮುದಾಯದತ್ತ ಗಮನಹರಿಸಬೇಕೆಂದಿದ್ದೇನೆ. ಆದರೆ? ನನಗಿರುವುದು? ಇನ್ನು ಕೆಲವೇ ದಿನಗಳು!” ಎಂದು ಆತಂಕ ವ್ಯಕ್ತಪಡಿಸುತ್ತಾರೆ.

ಮುಂದುವರಿದು ಅವರು “ನನ್ನ ಎಲ್ಲಾ ಕೃತಿಗಳನ್ನು ನನ್ನ ಜೀವಿತದ ಅವಧಿಯಲ್ಲೇ ಪ್ರಕಟಿಸಬೇಕೆಂದು ಬಯಸಿದ್ದೆ. “ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್”, “ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ” ಮತ್ತು “ಹಿಂದೂ ಧರ್ಮದ ಒಗಟುಗಳು” ಎಂಬ ಆ ನನ್ನ ಮಹೋನ್ನತ ಕೃತಿಗಳು ಇನ್ನೂ ಪ್ರಕಟಗೊಂಡಿಲ್ಲ. ಅಲ್ಲದೆ ಸದ್ಯಕ್ಕೆ ಅವುಗಳನ್ನು ಹೊರತರುವುದು ನನ್ನ ಕೈಯಲ್ಲಿ ಆಗುತ್ತಿಲ್ಲವಲ್ಲ ಎಂಬ ಅಸಹಾಯಕತೆ ಕೂಡ ನನ್ನನ್ನು ಕಾಡುತ್ತಿದೆ.

ನನ್ನ ನಂತರವಾದರೂ ಅವುಗಳು ಪ್ರಕಟಗೊಳ್ಳಬಹುದೆಂದು ಕೊಂಡರೆ ಅಂತಹ ಸಾಧ್ಯತೆ ಕೂಡ ನನಗೆ ಕಾಣುತ್ತಿಲ್ಲ. ನನ್ನ ಚಿಂತೆಗೆ ಇದೂ ಕೂಡ ಪ್ರಮುಖ ಕಾರಣ” ಎಂದು ತಮ್ಮ ಕೃತಿಗಳು ಪ್ರಕಟವಾಗದ್ದರ ಬಗ್ಗೆ ಬಾಬಾಸಾಹೇಬರು ನೋವು ತೋಡಿಕೊಳ್ಳುತ್ತಾರೆ. ನಿಜ, ನಂತರದ ಒಂದೆರಡು ದಶಕದ ನಂತರ ಅವರ ಕೃತಿಗಳು ಸರ್ಕಾರದ ವತಿಯಿಂದ ಪ್ರಕಟಗೊಂಡಿರಬಹುದು. ಆದರೆ ಅಂಬೇಡ್ಕರರು ಬದುಕಿದ್ದಾಗಲೇ ಅವು ಪ್ರಕಟಗೊಂಡಿದ್ದರೆ? ಅಂಬೇಡ್ಕರ್ ಎಂಬ “ಅಪ್ರತಿಮ ಲೇಖಕನಿಗೆ” ಅದರಿಂದ ಸಂಪೂರ್ಣ ಆನಂದ ಸಿಗುತ್ತಿತ್ತು. ಆದರೆ?

ಮುಂದುವರಿದು ತಮ್ಮ ಚಳುವಳಿಯ ಭವಿಷ್ಯದ ಬಗ್ಗೆ ಗಂಭೀರವಾಗಿ ಪ್ರಸ್ತಾಪಿಸುವ ಅವರು “ನನ್ನ ನಂತರ, ನನ್ನ ಜೀವಿತದ ಅವಧಿಯಲ್ಲೇ ಶೋಷಿತ ಸಮುದಾಯದ ಮಧ್ಯದಿಂದ ಬರುವವರೊಬ್ಬರು ನನ್ನ ಈ ಚಳುವಳಿಯನ್ನು ಮುನ್ನಡೆಸುವರೆಂದು ನಾನು ಬಯಸಿದ್ದೆ. ಆದರೆ ಈ ಸಂಧರ್ಭದಲ್ಲಿ ಅಂತಹವರಾರೂ ನನಗೆ ಕಾಣುತ್ತಿಲ್ಲ! ನನ್ನ ಸಹಪಾಠಿಗಳಲ್ಲಿ ಯಾರಲ್ಲಿ ನಾನು ಈ ಚಳುವಳಿಯನ್ನು ಮುನ್ನಡೆಸುವರೆಂದು ನಂಬಿಕೆ ಮತ್ತು ವಿಶ್ವಾಸವಿರಿಸಿದ್ದೆನೊ ಅವರು ತಮ್ಮ ಮೇಲೆ ಬೀಳಬಹುದಾದ ಈ ಅಗಾಧ ಜವಾಬ್ದಾರಿಯ ಬಗ್ಗೆ ಗಮನ ಹರಿಸುತ್ತಿಲ್ಲ.

ಬದಲಿಗೆ ಅವರು ತಮ್ಮ ತಮ್ಮಲ್ಲೇ ನಾಯಕತ್ವ ಮತ್ತು ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ. ನಿಜ ಹೇಳಬೇಕೆಂದರೆ ಈ ದೇಶಕ್ಕೆ ಮತ್ತು ನನ್ನ ಜನತೆಗೆ ಸೇವೆ ಸಲ್ಲಿಸಬೇಕೆಂಬ ಅಧಮ್ಯ ಆಸೆ ನನಗೆ ಇನ್ನೂ ಇದೆ. ಆದರೆ? ಪೂರ್ವಾಗ್ರಹಪೀಡಿತ, ಜಾತಿ ಎಂಬ ರೋಗವನ್ನು ಹೊದ್ದುಕೊಂಡಿರುವ ಜನರೇ ತುಂಬಿರುವ ಈ ದೇಶದಲ್ಲಿ? ನನ್ನಂತಹವರು ಜನಿಸುವುದು ಮಹಾಪಾಪ. ಹಾಗೆಯೇ ಈಗಿರುವ ವ್ಯವಸ್ಥೆಯಲ್ಲಿ ದೇಶಕ್ಕೆ ಸಂಬಧಪಟ್ಟಂತೆ ಯಾರಾದರೊಬ್ಬರು ತಮ್ಮ ವಯಕ್ತಿಕ ಅಭಿಪ್ರಾಯಗಳನ್ನು ಮಂಡಿಸುವುದು ತುಂಬಾ ಕಷ್ಟ. ಏಕೆಂದರೆ ಇಲ್ಲಿಯ ಜನರು ಈ ದೇಶದ ಪ್ರಧಾನಿ(ನೆಹರು)ಗೆ ಒಗ್ಗದಂತಹ ಯಾವುದೇ ವಿಚಾರಗಳನ್ನು ಕೇಳುವ ತಾಳ್ಮೆಯನ್ನು ಹೊಂದಿಲ್ಲ.

ಹೀಗೇ ಆದರೆ ಈ ದೇಶ ಇನ್ನೆಲ್ಲಿಗೆ ಹೋಗಿ ಮುಳುಗುತ್ತದೆಯೋ!” ಎಂದು ಅಂಬೇಡ್ಕರರು ನಿಟ್ಟುಸಿರು ಬಿಡುತ್ತಾರೆ. ಹೌದು, ಕಾಶ್ಮೀರಕ್ಕೆ ಸಂಬಂಧಿಸಿದಂತೆ, ಹಿಂದೂ ಕಾನೂನು ಸಂಹಿತೆಗೆ ಸಂಬಂದಿಸಿದಂತೆ ಅಂದಿನ ಪ್ರದಾನಿ ನೆಹರುರವರ ನಿಲುವಿನ ಬಗ್ಗೆ ಅಂಬೇಡ್ಕರರಿಗೆ ಅಸಮಾಧಾನವಿತ್ತು. ಹಾಗೆಯೇ ತಮ್ಮ ದೂರದೃಷ್ಟಿಯ ನಿಲುವನ್ನು ಒಪ್ಪದ ಈ ದೇಶದ ಜಾತೀಯ ಮನಸ್ಸುಗಳ ಬಗ್ಗೆಯೂ ಅಂಬೇಡ್ಕರರಿಗೆ ಅಷ್ಟೇ ಅಕ್ರೋಶವಿತ್ತು.

ಮುಂದುವರಿದು ಅವರು “ಅದೇನೇ ಇರಲಿ ನನ್ನ ವಿರುದ್ಧ ಟೀಕೆಗಳ ಸುರಿಮಳೆಯೇ ಸುರಿದರೂ ನಾನು ಅನೇಕ ಉತ್ತಮ, ಮೆಚ್ಚುವಂತಹ ಕಾರ್ಯಗಳನ್ನು ಮಾಡಿದ್ದೇನೆ. ಹಾಗೆಯೇ ನಾನು ಸಾಯುವವರೆಗೂ ಅಂತಹ ಕಾರ್ಯಗಳನ್ನು ಮಾಡುತ್ತಲೇ ಇರುತ್ತೇನೆ” ಎನ್ನುತ್ತಾ ಇದ್ದಕ್ಕಿದ್ದಂತೆ ಗದ್ಗದಿತರಾಗುತ್ತಾರೆ. ಕಣ್ಣಾಲಿಗಳು ನೀರು ತುಂಬಿಕೊಳ್ಳುತ್ತವೆ. ಆ ಕ್ಷಣ ಬಾಬಾಸಾಹೇಬರು ಅಕ್ಷರಶಃ ಗಳಗಳನೆ ಅಳುತ್ತಾರೆ.

ಹಾಗೆ ಅಳುತ್ತಾ ಸಹಾಯಕ ನಾನಕ್ ಚಂದ್ ರತ್ತುರತ್ತ ಒಮ್ಮೆ ನೊಡುತ್ತಾರೆ. ಸಹಜವಾಗಿ ರತ್ತುರವರು ಕೂಡ ಆ ಕ್ಷಣದಲ್ಲಿ ಬಾಬಾಸಾಹೇಬರ ದುಖಃದಲ್ಲಿ ಸಹಪಾಠಿಯಾಗಿರುತ್ತಾರೆ! ಬಾಬಾಸಾಹೇಬರಿಗೆ ಏನನ್ನಿಸಿತೋ? ಆ ಕಡೆ ಒಮ್ಮೆ, ಈ ಕಡೆ ಒಮ್ಮೆ ನೋಡುತ್ತಾ ಸ್ವಲ್ಪ ಸಾವರಿಸಕೊಂಡು ರತ್ತುರವನ್ನು ಸಮಾಧಾನಿಸುತ್ತಾ ಮೆಲ್ಲಗೆ ಹೇಳುತ್ತಾರೆ “ಧೈರ್ಯ ತಂದುಕೋ ರತ್ತು. ಎದೆಗುಂದಬೇಡ. ಎಂದಾದರೊಂದು ದಿನ ಈ ಜೀವನ ಕೊನೆಗೊಳ್ಳಲೇಬೇಕು!”

“ಜೀವನ…. ಕೊನೆ….” ಬಾಬಾಸಾಹೇಬರ ಈ ಮಾತುಕೇಳುತ್ತಲೆ ರತ್ತು ಅಘಾತಕ್ಕೊಳಗಾದರು. ಅವರ ಈ ಮಾತಿನ ಅರ್ಥವಾದರೂ ಏನು ಎಂದು ಗಾಭರಿಗೋಂಡರು. ಆ ಕ್ಷಣ ಏನು ಮಾಡಬೇಕೆಂದು ರತ್ತುರವರಿಗೆ ತೋಚದೆ ಇರುವಾಗ ಬಾಬಾಸಾಹೇಬರೇ ತಮ್ಮ ಕಣ್ಣ ನೀರು ವರೆಸಿಕೊಂಡು ಕೈಯನ್ನು ಸ್ವಲ್ಪ ಮೇಲೆ ಎತ್ತಿ ಹೀಗೆ ಹೇಳುತ್ತಾರೆ, “ನಾನಕ್ ಚಂದ್, ನನ್ನ ಜನರಿಗೆ ಹೇಳು, ನಾನು ಇದುವರೆವಿಗೂ ಏನನ್ನು ಸಾಧಿಸಿರುವೆನೋ ಅದನ್ನು ನನ್ನ ಜೀವನಪರ್ಯಂತ ನನ್ನ ಶತ್ರುಗಳ ಜೊತೆ ಕಾದಾಡುತ್ತಾ, ಅನಿಯತ ಸಮಸ್ಯೆಗಳನ್ನು ಎದುರಿಸುತ್ತಾ, ನಿರಂತರ ನೋವನ್ನು ಅನುಭವಿಸುತ್ತಾ ಪಡೆದಿದ್ದೇನೆ.

ತುಂಬಾ ಶ್ರಮವಹಿಸಿ ನಾನೀ ಹೋರಾಟದ ರಥವನ್ನು ಈಗ ಅದು ಎಲ್ಲಿದೆಯೋ ಅಲ್ಲಿಯವರೆಗೆ ತಂದಿದ್ದೇನೆ. ಏನೇ ಅಡೆತಡೆ ಬರಲಿ, ಅದರ ಮಾರ್ಗದಲ್ಲಿ ಎಂತಹದ್ದೇ ಏರುಪೇರುಗಳಾಗಲೀ, ತೊಂದರೆಗಳಾಗಲೀ ಆ ಹೋರಾಟದ ರಥ ಮುನ್ನಡೆಯಲೇ ಬೇಕು. ಅಕಸ್ಮಾತ್ ಈ ರಥವನ್ನು ನನ್ನ ಜನ ಮತ್ತು ನನ್ನ ಸಹಪಾಠಿಗಳು ಮುನ್ನಡೆಸಲು ಸಾಧ್ಯವಾಗದಿದ್ದರೆ ಈಗ ಅದು ಎಲ್ಲಿದೆಯೋ ಅದನ್ನು ಅಲ್ಲಿಯೇ ಇರಲು ಬಿಡಬೇಕು.

ಯಾವುದೇ ಸಂದರ್ಭದಲ್ಲಿಯೂ, ಯಾವುದೇ ಕಾರಣಕ್ಕೂ ಅದನ್ನು ಹಿಂದೆ ಸರಿಯಲು ಬಿಡಬಾರದು. ನನ್ನ ಅನಾರೋಗ್ಯದ ಸಂದರ್ಭದಲ್ಲಿ ಇದು ನನ್ನ ಜನರಿಗೆ ನಾನು ನೀಡುತ್ತಿರುವ ಸಂದೇಶ. ಬಹುಶಃ ನನ್ನ ಕೊನೆಯ ಸಂದೇಶ. ‘ಇದನ್ನು ನೀನು ಅವರಿಗೆ ಹೇಳು…’, ‘ಹೋಗು… ಅವರಿಗೆ ಹೇಳು…’, ‘ಹೋಗು… ಅವರಿಗೆ ಹೇಳು…” ಎನ್ನುತ್ತಾ ಅಂಬೇಡ್ಕರರು ‘ನಿದ್ರೆ’ಗೆ ಹೊರಳುತ್ತಾರೆ.

ಪ್ರಶ್ನೆಯೇನೆಂದರೆ ಬಾಬಾಸಾಹೇಬರ ಈ ಸಂದೇಶ ಈ ದೇಶದ ಶೋಷಿತ ದಲಿತ ಸಮುದಾಯಕ್ಕೆ ಅರ್ಥವಾಗಿದೆಯೇ? ಇತಿಹಾಸದ ಪುಟಗಳು ಅದಕ್ಕೆ ಉತ್ತರ ಹೇಳಬೇಕಷ್ಟೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ನೆಲದನಿ

ಹೊಲಯರು-ಮಾದರು ನಾಗರಿಕರೇ..?

Published

on

  • ಮನಂ

ಸುಮೇರಿಯನ್ ಭಾಷೆಯಲ್ಲಿ ‘ನ’ (Na)ಎಂದರೆ ‘ಮನುಷ್ಯ’ ಎಂದು ಅರ್ಥ ಅಂದರೆ ನರ ಎಂದು ಅರ್ಥ. ದ್ರಾವಿಡರಲ್ಲಿ ನರ ಎಂಬ ಪದದ ಬಳಕೆ ಇದೇ ಅರ್ಥದಲ್ಲಿ ಇದೆ. ನರರು ನಗರ ಕಟ್ಟುತ್ತಾರೆ. ನರರು ನಗರಕ್ಕಿಂತ ಮೊದಲು ಇದ್ದರು, ನಂತರವೂ ಬರುತ್ತಾರೆ. ‘ನ’ ಎಂಬ ಪದದಿಂದ ‘ನಗ’ ಅಥವಾ ‘ನಾಗ’ ಎಂಬ ಪದಗಳು ನಾಗರೀಕ ಎಂಬ ಅರ್ಥವ ಪಡೆದು ಉದಯಿಸಿವೆ.

ನಮ್ಮ ಭಾರತದಲ್ಲಿ ಇದ್ದಂತಹ ಪುರಾತನ ಜನಾಂಗಗಳು ಎಂದು ಹಲವಾರು ಗ್ರಂಥಗಳಲ್ಲಿ ನಮೂದಾದವರೇ ಈ ‘ನಾಗ’ ಜನಾಂಗದವರು. ತಾವು ಇಲ್ಲಿ ಒಂದು ವಿಷಯವ ಮನಗಾಣ ಬೇಕು ಅದೇನೆಂದರೆ ‘ಜನಾಂಗ’ ಎಂಬ ಪದದಲ್ಲಿರುವ ‘ನಾಂಗ’ ಎಂಬ ಪದವು ‘ನಾಗ’ ಎಂಬ ಪದಕ್ಕೆ ಸಮಾನಾರ್ಥಕ ಪದ ಏಕೆಂದರೆ ‘ನಾಗ’ ಎಂಬ ಪದವನ್ನು ಮಾಳವರು ಹಾಗೂ ಸುಮೇರಿಯನ್ ಜನರು ‘ನಾಂಗ’ ಎಂದು ನಾಸಿಕದಿಂದ ಉಚ್ಛರಿಸುತ್ತಾರೆ.

ಸುಮೇರಿಯನ್ ಭಾಷೆಯಲ್ಲಿ ‘ಮಾ’ ಎಂದರೆ ಬೆಲೆ, ‘ಮಾನ’ ಎಂದರೆ ಬೆಲೆಯುಳ್ಳ ಮನುಷ್ಯ.
ಮಳವಳ್ಳಿಯ ಮಾಳವರು ಈಗಲೂ ಬಳಸುವ ಒಂದು ಮಾತು; “ಜೋ, ಎನ್ ಭೋ ಮಾನ
ಆಡಿಜಾ?” (ನೀನು, ಯಾಕೆ ಬಹಳ ಸಿರಿವಂತನಂತೆ ನಟಿಸುವೆ?)

ಸುಮೇರಿಯನ್ ಭಾಷೆಯಲ್ಲಿ ಹಾಗೂ ದ್ರಾವಿಡ ಭಾಷೆಗಳಲ್ಲಿ ಉರ್ ಎಂಬ ಪದ. ಇದೆ. ಇದು ಊರು ಎಂಬ ಅರ್ಥವನ್ನು ನೀಡುತ್ತದೆ. ಅದೇ ರೀತಿ ‘ಉರ್’ ಎಂಬ ಸುಮೇರಿಯನ್ ಪದ ಮನುಷ್ಯ ಎಂಬ ಅರ್ಥವನ್ನು ಸಹ ನೀಡುತ್ತದೆ. ಅಂದರೆ ಊರವ ಎಂದು ಅರ್ಥ. ಮಾಳವರಲ್ಲಿ ಊರಬ ಎಂದರೆ ಊರಿನವಳು ಎಂದು ಅರ್ಥ ಹಾಗೆಯೇ ಊರಮ ಎಂದರೆ ಊರಿನವನು ಎಂದು ಅರ್ಥ.

ನಾನು ಇಲ್ಲಿ ಈ ವಿಷಯಗಳ ಮಂಡಿಸಿದ ಕಾರಣ ಇಷ್ಟೇ; ನಗರ ಎಂಬುದು ಮೂಲತಃ ಸಂಸ್ಕøತದಿಂದ ಬಂದಿಲ್ಲ. ನಾಗರೀಕ ಎಂಬ ಪದ ಕೂಡಾ ಮೂಲತಃ ಸಂಸ್ಕøತದ್ದಲ್ಲ. ನಾಗರಿಕತೆ ಕೂಡ ಸಂಸ್ಕøತದಿಂದ ಉದಯವಾಗಿಲ್ಲ. ಸುಮೇರಿಯನ್, ದ್ರಾವಿಡ ಮತ್ತು ಮಾಳವ ಭಾಷೆಗಳಲ್ಲಿ ಆ ಪದದ ಬೇರೆ-ಬೇರೆ ರೂಪಗಳು ಇವೆ.

ಹಾಗಾಗಿ ನಾಗರಿಕತೆಯನ್ನು ಮಾಳವರು, ದ್ರಾವಿಡರು, ಸುಮೇರಿಯನ್ನರು ಸಂಸ್ಕøತ ಮಾತಾಡುವವರಿಂದ ಕಲಿಯಲಿಲ್ಲ ಅವರಿಗೆ ಕಲಿಸಿದರು. ಲ್ಯಾಟಿನ್ ಮತ್ತು ಇಂಗ್ಲೀಷ್ನಲಿ urb ನಿಂದ ಬಂದ urbans, urbane, urban, ಪದಗಳು ಮಾಳವರ, ದ್ರಾವಿಡರ ಹಾಗೂ ಸುಮೇರಿಯನ್ನರ ಉರ್ (ur) ಪದಕ್ಕೆ ಹೋಲುವುದನ್ನು ಕಾಣಿರಿ.

ನಾಗರಿಕರು ಮೂಲತಃ ಯಾರು ಯೋಚಿಸಿರಿ.
ನಾಗರಭಾವಿ, ನಾಗನಹಳ್ಳಿ, ನಾಗನೂರು, ನಾಗಪುರ, ಮತ್ತು ಇತ್ಯಾದಿ ನಾಗ ಎಂಬ ಪದಗಳನ್ನೊಳಗೊಂಡ ಊರುಗಳು ದ್ರಾವಿಡರ ನಗರಗಳೆಂಬುದನ್ನು ಗಮನಿಸಿರಿ. ಈ ಊರುಗಳಲ್ಲಿ ಹೆಚ್ಚಾಗಿ ಹೊಲಯರು ಮಾತ್ರ ಇರುತ್ತಾರೆ. ಅಲ್ಲಿಯ ಹೆಚ್ಚಾನು-ಹೆಚ್ಚು ಜಮೀನುಗಳೆಲ್ಲಾ ಹೊಲಯರ ಹೆಸರುಗಳಲ್ಲಿ ಇರುತ್ತವೆ.

ಅನಾಗರಿಕರಾಗಿ ಬಾಳುತ್ತಿದ್ದ ಆದಿಮಾನವರು, ಶಿಲಾಮಾನವರು ಹಾಗೂ ಆಧುನಿಕ ಶಿಲಾಯುಗದ ಮಾನವರು ಕ್ರಮೇಣ ವ್ಯವಸಾಯ ಮಾಡುವುದನ್ನು ಕಲಿತು ತಾವಿದ್ದ ಗುಡ್ಡಗಳಿಂದ ಹಾಗೂ ಗುಹೆಗಳ ಪೊಟರೆಗಳಿಂದ, ಗವಿಗಳಿಂದ ಹೊರಕ್ಕೆ ಬಂದು ಕಾಡುಗಳನ್ನು ಕಡಿದು, ಹೊಲಗಳನ್ನು ಮಾಡಿದರು. ಆ ಹೊಲಗಳ ರಕ್ಷಣೆಗಾಗಿ ಹೊಲಗಳ ಪಕ್ಕವೆ ತಮ್ಮ ನೆಲೆಯೂರಿದರು. ಈ ರೀತಿ ಮೊದಲು ವ್ಯವಸಾಯಗಾರರಾದವರೇ ಪೊಲಯರು (ಹೊಲಯರು) ಹಾಗೂ ಅವರು ತಮ್ಮ ನೆಲೆಗೆ ಕಟ್ಟಿದ ಮನೆಗಳ ಅಥವಾ ಕಟ್ಟಡಗಳ ಗುಂಪುಗಳಿದ್ದ ಸ್ಥಳಕ್ಕೆ ಪಳ್ಳಿ(ಹಳ್ಳಿ) ಎನ್ನುವುದಕ್ಕೆ ಆರಂಭಿಸಿದರು.

ಆ ‘ಹಳ್ಳಿ’ ಪದವೇ ಇತರೇ ದ್ರಾವಿಡ ಭಾಷೆಗಳಲ್ಲಿ ಪಲ್ಲಿ, ಪಳ್ಳಿ, ಪಾಳೆಯಂ, ಪಾಳಂ, ಪಾಳ್ಯ ಎಂದೆಲ್ಲಾ ಆಗಿದೆ. ಪಳ್ಳಿ ಜನರು ಈ ಧರ್ಮಗಳ ಉದಯಕ್ಕಿಂತಲೂ ಮೊದಲಿನಿಂದ ಇದ್ದವರು. ಅವರು ತಾವಿದ್ದ ಸ್ಥಳಗಳಿಗೆ, ಇದ್ದ ಊರಿಗೆ ಅಥವಾ ತಾವು ಬಳಸುತ್ತಿದ್ದ ಕಟ್ಟಡಕ್ಕೆ ಪಳ್ಳಿ ಎಂದು ಕರೆಯುತ್ತಿದ್ದರು.

ಅವರು ಬುದ್ದ-ಜೈನ-ವೈದಿಕ ಧರ್ಮಗಳಿಗೆ ಅಶ್ರಯ ನೀಡಿದ ಮೇಲೆ ಆ ಧರ್ಮಗಳ ಕೇಂದ್ರಗಳಿಗೂ ತಮ್ಮ ಧಾರ್ಮಿಕ-ಸಾಂಸ್ಕøತಿಕ ಕೇಂದ್ರಕ್ಕೆ ಪಳ್ಳಿ ಎಂದು ಕರೆಯುತ್ತಿದ್ದಂತೆಯೇ ಕರೆಯತೊಡಗಿದರು.

ಸುಮೇರಿನ್ ಭಾಷೆಯಲ್ಲಿ ‘ಮಾ’ ಎಂದರೆ ಬೆಲೆ ಎಂದು ಅರ್ಥ. ‘ನ’ ಎಂದರೆ ವ್ಯಕ್ತಿ ಮನುಷ್ಯ ನಾಗರೀಕ, ಎಂಬ ಹಲವಾರು ಅರ್ಥಗಳಿವೆ ಎಂಬುದನ್ನು ತಾವೀಗ ತಿಳಿದಿರುವಿರಿ.

ಮಾನ್ (ಮಾನ) ಎಂದರೆ ಬೆಲೆಯುಳ್ಳ ಮನುಷ್ಯ ಪೆರುಮಾನ್, ಪೆರುಮಾಲ ಅಥವಾ ಪೆರುಮಾಳ್ ಎಂದರೆ ದೊಡ್ಡ ಬೆಲೆಯುಳ್ಳ ಮನುಷ್ಯ ಅಥವಾ ಆಳುವವನು ಅಂದರೆ ದೊಡ್ಡ ಮನುಷ್ಯ ಎಂದು ಅರ್ಥ.

“ದಕ್ಷಿಣದ ಭಾರತದ ಚೇರ, ಚೋಳ ಮತ್ತು ಪಾಂಡ್ಯ ರಾಜರಿಗೆ ಪೆರುಮಾಳ ಎಂಬುದು ಬಿರುದಾಗಿತ್ತು. ಪೊಲನಾಡಿನಲ್ಲಿ ಮಲ್ಲೂರು ಎಂಬ ಪಟ್ಟಣಕಟ್ಟಿದ ಪೆರುಮಾಲ ರಾಜನ ಹೆಸರು ಮಲ್ಲನ್.” ಎಂದು ಗುಸ್ತಾವ್ ಓಪರ್ಥ ಅವರು ಹೇಳಿರುತ್ತಾರೆ. (ವಿವರಗಳಿಗೆ ‘ದಿ ದ್ರಾವಿಡಿಯನ್ಸ್’ ಪುಟ 30 ನೋಡಿರಿ).

ಪೊಲನಾಡು ಎಂದರೆ ಹೊಲನಾಡು, ಹೊಲೆಯರ ಅಥವಾ ಪೊಲೆಯರ ನಾಡು ಎಂದು ಅರ್ಥ ಕೊಡುತ್ತದೆ. ಎಲ್ಲಿ ಹೊಲೆಯರು ಸಾಮ್ರಾಜ್ಯವ ಕಟ್ಟಿ ಆಳುತ್ತಿದ್ದರೋ ಆ ನಾಡು ಪೊಲೆಯರ ನಾಡು ಅಥವಾ ಪೊಲನಾಡು.

ಈ ಮೇಲಿನ ಚರ್ಚೆಯಿಂದ ನಾವು ಹೊಲಯರು-ಮಾದರು ಈ ಪ್ರಪಂಚದಲ್ಲಿ ಬೇರೆ ಯಾವುದೇ ಜನರು ನಾಗರೀಕರಾಗುವುದಕ್ಕಿಂತ ಮೊದಲು ನಾಗರೀಕರಾದರು ಎಂದು ಹೇಳಬಹುದು.

ಊರ್, ಊರು, ಪುರ, ಪಲ್ಲಿ, ಪಳ್ಳಿ, ಪಾಳೆಯಂ, ಪಾಳಂ, ಪಾಳ್ಯ ಹಾಗೂ ನಗರ ಎಂದು ಹೆಸರಿರುವ ಮಾನವರ ನೆಲೆಬೀಡುಗಳು ಈ ಹೊಲಯರು-ಮಾದರುಗಳು ಕಟ್ಟಿ-ಬೆಳೆಸಿದ ನೆಲೆಬೀಡುಗಳು ಎಂದು ಪುರಾವೆ ಸಹಿತ ಸಾಕ್ಷೀಕರಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ನೆಲದನಿ

ಸರ್ಕಾರದ ಎಲ್ಲಾ ಹಂತಗಳಲ್ಲಿ ಕನ್ನಡ ಭಾಷೆಯನ್ನು ಅಳವಡಿಸಿದ್ದ ‘ಧೀರ ಟಿಪ್ಪು ಸುಲ್ತಾನ್’..!

Published

on

  • ಡಾ.ವಡ್ಡಗೆರೆ ನಾಗರಾಜಯ್ಯ

ಮೈಸೂರು ರಾಜ್ಯ ಎಂದು ಆಗ ಕರೆಯಲಾಗುತ್ತಿದ್ದ ನಮ್ಮ (ಕರ್ನಾಟಕ) ಕನ್ನಡ ನಾಡಿನಲ್ಲಿ ದಲಿತರು ಮೊಟ್ಟ ಮೊದಲಿಗೆ ಭೂ ಒಡೆತನ ಅನುಭವಿಸಿದ್ದು ಟಿಪ್ಪು ಸುಲ್ತಾನನ ಕಾಲದಲ್ಲಿ. ದಲಿತರಿಗೆ ಭೂಮಿ ಮಂಜೂರು ಮಾಡಿದ ಟಿಪ್ಪು ಸುಲ್ತಾನನ ಆಡಳಿತದ ಕ್ರಮವನ್ನು ಮೆಚ್ಚಿಕೊಂಡಿರುವ ಎಡ್ಗರ್ ಥರ್ಸ್ಟನ್ ತನ್ನ The Castes and Tribes of Southern India ಕೃತಿ ಶ್ರೇಣಿಯಲ್ಲಿ ಮಾತನಾಡಿರುವಂತೆ ಹೇಳುವುದಾದರೆ “The Mysore system fully permits the Holeyas and Madigas to hold land in their own right, as subtenants they are to be found almost everywhere. The highest amount of land assessment paid by a single Holeya is Rs.279 in the Bangalore district”.

ಉತ್ತಮ ದಲಿತ ಸಿಪಾಯಿಗಳನ್ನು ಗುರುತಿಸಿ ತನ್ನ ಖಾಯಂ ಸೇನೆಯಲ್ಲಿ ಭರ್ತಿ ಮಾಡಿಕೊಂಡಿದ್ದ ಟಿಪ್ಪು, ಸೂರಪ್ಪ ಎಂಬ ಹೊಲೆಯ ಸಮುದಾಯದ ದಲಿತನಿಗೆ ತನ್ನ ಸೇನೆಯ ದಂಡನಾಯಕನ ಉನ್ನತ ಹುದ್ದೆಯನ್ನು ನೀಡಿದ್ದನು. ಟಿಪ್ಪು ಸೇನೆಯ ದಂಡನಾಯಕನಾಗಿದ್ದ ಸೂರಪ್ಪನನ್ನು ಕುರಿತು ಮ.ನ.ಜವರಯ್ಯ ಅವರು ಐತಿಹಾಸಿಕ ಕಾದಂಬರಿಯನ್ನು ಬರೆದಿದ್ದಾರೆ.

ಈಗಿನ ಸೀಮಾಂಧ್ರದಲ್ಲಿರುವ ಕಡಪ ಪಟ್ಟಣವು ಟಿಪ್ಪು ಸುಲ್ತಾನನ ಕಾಲದಲ್ಲಿ ಮೈಸೂರು ರಾಜ್ಯಕ್ಕೆ ಸೇರಿತ್ತು. ಕ್ರಿಶ.1784 ರಲ್ಲಿ ಮಾದಿಗರ ಸಾಂಸ್ಕೃತಿಕ ರಾಜಧಾನಿ ಎನ್ನಿಸಿದ್ದ ಕಡಪ ಪಟ್ಟಣದ ಆದಿಜಾಂಬವ ಮಾತಂಗ ಮಹಾ ಸಂಸ್ಥಾನದ ಅಭಿವೃದ್ಧಿಗಾಗಿ ದತ್ತಿಮಾನ್ಯಗಳನ್ನು ಒದಗಿಸಿದ್ದ ಟಿಪ್ಪು ಸುಲ್ತಾನ್, ದಲಿತರ ಧಾರ್ಮಿಕ ಘನತೆಯನ್ನು ಎತ್ತರಿಸಿದ್ದನು. ಆಗಿನ ಕಡಪ ಆದಿಜಾಂಬವ ಮಾತಂಗ ಮಹಾಸಂಸ್ಥಾನದ ಪೀಠಾಧ್ಯಕ್ಷರಾಗಿದ್ದ ಜಾಂಬವಗುರು ಚಂದಾಯಮುನಿಯವರಿಗೆ ತನ್ನ ರಾಜಮರ್ಯಾದೆಗಳ ಭಾಗವಾಗಿ ಪಲ್ಲಕಿ ಮೆರವಣಿಗೆ, ಕೆಂಪು ಛತ್ರಿ, ಕೆಂಪು ನಿಶಾನಿ (ಗಿಣಿವಸ್ತ್ರ, ಗರುಡ ನಿಶಾನಿ), ಅಫ್ತಾಗಿರಿ ರಕ್ಷಣೆ, ಚಾಮರ ಸೇವೆ, ತುರಾಯಿ ಪಾಗು ಮುಂತಾದ ಸೌಲಭ್ಯಗಳನ್ನು ಒದಗಿಸಿದ್ದನು.

ಪ್ರಗತಿಪರ ಭೂ ಸುಧಾರಣೆಗಳನ್ನು ವಾಣಿಜ್ಯ ಕಾಯ್ದೆಗಳನ್ನು ಜಾರಿಗೆ ತಂದ ಟಿಪ್ಪು ರೈತರ ಜಾತಿ, ಧರ್ಮ, ಪಂಥಗಳೇನೇ ಇದ್ದರೂ ಉಳುವವನಿಗೇ ಭೂಮಿ ಎಂದು ಸಾರಿದ ರೈತಪರ ಆಡಳಿತಗಾರ. ಕೃಷಿಕ್ಷೇತ್ರದ ಪ್ರಗತಿಗಾಗಿ ಕಾವೇರಿ ನದಿಗೆ ‘ಸದ್ದ್–ಇ-ಮೋಹಿ’ ಎಂಬ ನೀರಾವರಿ ಯೋಜನೆಯನ್ನು ರೂಪಿಸಿ ಅಡಿಗಲ್ಲು ಹಾಕಿದನು. ಇಲ್ಲಿಯೇ ಮುಂದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಂಬಾಡಿ ಅಣೆಕಟ್ಟೆ ಕಟ್ಟಿಸಿದರು. ಇಲ್ಲಿಯ ಬೃಂದಾವನ ಗಾರ್ಡನ್ ನ ಮುಖ್ಯದ್ವಾರದ ಬಳಿ ಇರುವ ಶಿಲಾಶಾಸನದ ಬರೆಹವು ಪರ್ಷಿಯನ್ ಲಿಪಿಯಲ್ಲಿದ್ದು ಕನ್ನಂಬಾಡಿ ಅಣೆಕಟ್ಟೆ ಯೋಜನೆಯನ್ನು ಟಿಪ್ಪುವೇ ಪ್ರಾರಂಭಿಸಿದನೆಂಬುದಕ್ಕೆ ಈಗಲೂ ಸಾಕ್ಷಿಯಾಗಿ ನಿಂತಿದೆ.

ಜನಸಾಮಾನ್ಯರ ವ್ಯವಹಾರ ಭಾಷೆಯಾಗಿ ಸರ್ಕಾರದ ಎಲ್ಲಾ ಹಂತಗಳಲ್ಲಿ ಕನ್ನಡ ಭಾಷೆಯನ್ನು ಅಳವಡಿಸಿದ್ದ ಟಿಪ್ಪು ಸುಲ್ತಾನ್, ಅಂತರಾಷ್ಟ್ರೀಯ ಮಟ್ಟದ ಆಡಳಿತ ಭಾಷೆಯನ್ನಾಗಿ ಪರ್ಷಿಯನ್ ಭಾಷೆಯನ್ನು ಅಳವಡಿಸಿಕೊಂಡಿದ್ದನು. ಅಂದಹಾಗೆ ಭಾರತೀಯ ಸನಾತನಿಗಳಿಗೆ ತಮ್ಮ ಧರ್ಮದ ಹೆಸರಿಲ್ಲದಿರುವಾಗ ‘ಹಿಂದೂ’ ಎಂಬ ಹೆಸರು ಪರ್ಷಿಯನ್ ಭಾಷಿಕರು ಕೊಟ್ಟ ಕೊಡುಗೆ ಎಂಬುದನ್ನು ಮರೆಯಬಾರದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending