Connect with us

ನೆಲದನಿ

ಬಹುಮುಖಿ ಕಲಾಪ್ರತಿಭೆ : ‘ಈಶ್ವರ್ ಹತ್ತಿ’ ಅವರ ಬದುಕಿನ ಸುತ್ತ

Published

on

ನ್ನಡ ಸಾಹಿತ್ಯ ಮತ್ತು ಸಾಂಸ್ಕøತಿಕ ಲೋಕವು ತನ್ನ ಶ್ರೀಮಂತಿಕೆಯಲ್ಲಿ ಉತ್ತುಂಗ ಶಿಖರಕ್ಕೆರಿದೆ. ಇದು ಅತಿಶಯೋಕ್ತಿಯೆನಿಸಿದರೂ ವಾಸ್ತವಕ್ಕೆ ದೂರವಾದ ಮಾತಲ್ಲ. ಇಂದು ಕನ್ನಡ ನಾಡು ವಿವಿಧ ಸಾಂಸ್ಕøತಿಕ ವಲಯಗಳ ಮೂಲಕವಾಗಿ ಕಂಗೊಳಿಸುತ್ತಿದೆ. ಇದಕ್ಕೆ ಹಲವಾರು ನಿದರ್ಶನಗಳು ನಮ್ಮ ಮುಂದಿವೆ. ಕನ್ನಡ ನಾಡಿನ ಈ ಸಾಂಸ್ಕøತಿಕ ಶ್ರೀಮಂತಿಕೆಗೆ ಹಲವಾರು ಮಹಾನಿಯರು ಹೆಗಲುಕೊಟ್ಟು ದಣಿದಿದ್ದಾರೆ, ದುಡಿದಿದ್ದಾರೆ. ಇದರಿಂದಾಗಿ ಕನ್ನಡ ನಾಡು ಹಾಗೂ ಕನ್ನಡ ಸಾರಸ್ವತ ಲೋಕವು ಶ್ರೀಮಂತಿಕೆಯ ಆಗರವಾಗಿ ಕಂಗೊಳಿಸುತ್ತಿದೆ. ಇಂತಹ ಶ್ರೀಮಂತ ಸಾಂಸ್ಕøತಿಕ ಹಿರಿಮೆಗೆ ಹೆಗಲುಕೊಟ್ಟು ದುಡಿದವರಲ್ಲಿ ಬಹುಮುಖಿ ಕಲಾಪ್ರತಿಭೆಯಾದ ಈಶ್ವರ್ ಹತ್ತಿಯವರು ಒಬ್ಬರಾಗಿದ್ದಾರೆ. ಎಲೆ ಮರೆಯ ಕಾಯಿಯಂತಿರುವ ಶ್ರೀಯುತರ ಸಾಹಿತ್ಯ ಹಾಗೂ ಕಲಾ ಸೇವೆಯನ್ನು ಪರಿಚಯಿಸುವುದು ಪ್ರಸ್ತುತ ಲೇಖನದ ಬಹುಮುಖ್ಯ ಆಶಯವಾಗಿದೆ.

ಶ್ರೀಯುತ ಈಶ್ವರ್ ಹತ್ತಿಯವರು ಯಲಬುರ್ಗಾ ತಾಲ್ಲೂಕು ಗುನ್ನಾಳ ಗ್ರಾಮದಲ್ಲಿ ಶ್ರೀ ಹನುಮಪ್ಪ ಹಾಗೂ ಶ್ರೀಮತಿ ಕಳಕಮ್ಮ ದಂಪತಿಗಳ ಮಗನಾಗಿ ದಿನಾಂಕ: 1ನೇ ಮೇ 1955 ರಲ್ಲಿ ಜನ್ಮತಾಳಿದರು. ಗ್ರಾಮೀಣ ಬದುಕಿನ ಕೂಡು ಕುಟುಂಬದಲ್ಲಿ ಬೆಳೆದುಬಂದ ಇವರು, ತಮ್ಮ ಸೋದರ ಮಾವನವರಾದ ಕಲ್ಲಪ ಮಾಸ್ತರರ ಸಹಕಾರ ಹಾಗೂ ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆದರು. ಮುಂದೆ ಬದುಕಿನ ಹಾದಿಯ ರೂಪುರೇಷೆಗಳನ್ನು ತಮ್ಮ ಮಾವನವರಿಂದ ಪಡೆದುಕೊಂಡರು. ಎಂ.ಎ, ಎಲ್.ಎಲ್.ಬಿ ಪದವಿಯನ್ನು ಪಡೆದ ಈಶ್ವರ್ ಹತ್ತಿಯವರು ಇಂಜಿನಿಯರ್ ಇಲಾಖೆಯಲ್ಲಿ ‘ಸ್ಟೋರ್ ಸೂಪರಿಡೆಂಟ್’ ಆಗಿ ತಮ್ಮ ವೃತ್ತಿ ಜೀವನವನ್ನು ನಿರ್ವಹಿಸಿದರು. ಇವರು ಈ ವೃತ್ತಿಯ ಜೊತೆಯಲ್ಲಿ ಸಾಹಿತ್ಯಿಕ ಮತ್ತು ಸಾಂಸ್ಕøತಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡರು. ಇವರಲ್ಲಿ ಅಂತರ್ಗತವಾಗಿರುವ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಭೆಗೆ ಹಲವಾರು ಮಹಾನೀಯರು ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಶ್ರೀಯುತ ಈಶ್ವರ್ ಹತ್ತಿಯವರು ನಾಟಕ ಕಲಾವಿದರಾಗಿ ಮಾತ್ರವಲ್ಲದೆ ನಾಟಕ ರಚನಕಾರರಾಗಿಯೂ ಗುರುತಿಸಿಕೊಂಡವರು. ಇವರಲ್ಲಿ ನೆಲೆಯೂರಿದ ನಾಟಕ ಕಲೆಗೆ ಬಾಲ್ಯದಲ್ಲಿ ಪ್ರಮುಖ ಪ್ರೇರಕ ಶಕ್ತಿಯಾದವರು ಶ್ರೀಯುತರ ಹೆಣ್ಣಜ್ಜ (ತಾಯಿಯ ತಂದೆ) ಕಳಕಪ್ಪನವರು. ಇವರು ಸ್ವತಃ ನಾಟಕ ಕಲಾವಿದರಾಗಿ ಸಾಧನೆ ಮಾಡಿದವರಾಗಿದ್ದರು. ಇವರನ್ನು ಹತ್ತಿರದಿಂದ ಬಲ್ಲವರಾಗಿದ್ದ ಈಶ್ವರ್ ಹತ್ತಿಯವರು ತಮ್ಮ ಅಜ್ಜನ ನಟನ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಅವರಿಂದ ಸಾಕಷ್ಟು ತರಬೇತಿಯನ್ನು ಪಡೆದುಕೊಂಡಿದ್ದರು. ಹೀಗಾಗಿ ಮುಂದೆ ಇವರೊಬ್ಬ ಪ್ರಮುಖ ರಂಗಕಲಾವಿದರಾಗಲು ವೇದಿಕೆಯೊಂದನ್ನು ಸಿದ್ಧಗೊಳಿಸಿತ್ತು. ಬಾಲ್ಯದಲ್ಲಿ ಇವರ ಅಂತರಾಳದಲ್ಲಿ ಮೊಳಕೆಯೊಡೆದು ನಿಂತಿದ್ದ ಕಲಾ ಬೀಜಕ್ಕೆ ಪ್ರೋತ್ಸಾಹ ಹಾಗೂ ಅವಕಾಶಗಳು ಒದಗಿಬಂದಿದ್ದು ಗುಲಬರ್ಗಾದ ಶರಣ ಬಸವೇಶ್ವರ ಕಾಲೇಜಿನಲ್ಲಿ ಅಧ್ಯಯನ ಮಾಡುವ ಸಂದರ್ಭದಲ್ಲಿ. ಇಲ್ಲಿ ತಮ್ಮ ಸ್ನೇಹಿತರಾದ ಎಸ್.ಎಮ್.ಹಿರೇಮಠ್, ಎಂ.ಎಸ್.ಬಿಜಾಸ್ಪುರ್, ಮಲ್ಲಿನಾಥ್ ಗುಡ್ಡೆದ್, ವೀರಯ್ಯ ಹಿಪ್ಪರಿಗೆ, ಶಾಲಿನಿ, ಶೋಭಜೋಷಿ ಹಾಗೂ ಕೃಷ್ಣವೇಣಿ ಎಂಬ ಸ್ನೇಹಿತರು ಸಮಾನ ಮನಸ್ಕರಾಗಿದ್ದು, ಇವರೆಲ್ಲಾ ಸೇರಿಕೊಂಡು ರಂಗಭೂಮಿ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇಲ್ಲಿ ಹಲವಾರು ನಾಟಕಗಳನ್ನು ಪ್ರದರ್ಶನ ಮಾಡಿದರು. ಇದರ ಜೊತೆಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಕ್ರಿಯಾಶೀಲರಾಗಿ ತಮ್ಮನ್ನು ತೊಡಗಿಸಿಕೊಂಡರು. ಇದರಿಂದಾಗಿ ಈಶ್ವರ್ ಹತ್ತಿಯವರಲ್ಲಿ ಅಂತರ್ಗತವಾಗಿದ್ದ ರಂಗಾಭಿನಯ ಕಲೆಗೆ ಸೂಕ್ತವಾದ ವೇದಿಕೆಯೊಂದು ಲಭಿಸಿದಂತಾಯಿತು. ಈ ಹಿಂದೆ ಹೆಸರಾಂತ ಸಾಹಿತಿಗಳು ಹಾಗೂ ವಿಮರ್ಶಕರಾದ ಗಿರಡ್ಡಿ ಗೋವಿಂದರಾಜು ಹಾಗೂ ಇತರರ ತಂಡವು ಶರಣ ಬಸವೇಶ್ವರ ಮಹಾವಿದ್ಯಾಲಯ ಹಾಗೂ ಗುಲಬರ್ಗಾ ಪ್ರಾಂತ್ಯದಲ್ಲಿ ನಾಟಕವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಸಿದ್ಧಗೊಳಿಸಿದ್ದರು. ಇದು ಕೂಡ ಶ್ರೀಯುತ ಈಶ್ವರ್ ಹತ್ತಿಯವರನ್ನು ಹೆಚ್ಚು ಆಕರ್ಷಣೆಗೊಳಿಸಿತು. ಇದರಿಂದ ಶ್ರೀಯುತರ ಅಂತರಾಳದಲ್ಲಿ ಅಂತರ್ಗತವಾಗಿದ್ದ ಕಲಾ ಬೀಜವು ಮೊಳಕೆಯೊಡೆಯಲು ಪ್ರಚೋದಕ ಶಕ್ತಿಯಾಯಿತು. ಇವುಗಳಾಚೆ ಗುಲ್ಬರ್ಗಾದ ಶ್ರೀ ಶರಣ ಬಸವೇಶ್ವರ ಮಹಾವಿದ್ಯಾಲಯದ ಶೈಕ್ಷಣಿಕ ವಾತಾವರಣವು ಇವರನ್ನು ಒಬ್ಬ ಕಲಾವಿದರಾಗಿ ನಿರ್ಮಿಸಿತು.

ಶ್ರೀಯುತ ಈಶ್ವರ್ ಹತ್ತಿಯವರು ರಂಗಭೂಮಿಯಲ್ಲಿ ವಿಶೇಷವಾದ ಆಸಕ್ತಿಯನ್ನು ಮೈಗೂಡಿಸಿಕೊಂಡು, ಇದನ್ನು ಒಂದು ಪ್ರವೃತ್ತಿಯಾಗಿ ಮುಂದುವರೆಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಹಲವಾರು ರಂಗ ಪ್ರದರ್ಶನ ನೀಡಿ ಮೆಚ್ಚುಗೆಯನ್ನು ಗಳಿಸಿಕೊಂಡಿದ್ದರು. ರಂಗಭೂಮಿಯಲ್ಲಿ ತಾವು ಗಳಿಸಿದ ವಿದ್ವತ್ತನ್ನು ಪ್ರದರ್ಶಿಸುವ ನೆಲೆಯಲ್ಲಿ ಎಂಬತ್ತರ ದಶಕದಲ್ಲಿ ‘ಅಪೂರ್ಣ’ ಎಂಬ ನಾಟಕವನ್ನು ರಚಿಸಿ, ದಿನಾಂಕ: 2 ಅಕ್ಟೋಬರ್ 1982 ರಂದು ಗಾಂಧೀ ಜಯಂತಿಯ ದಿನದಂದು ಬೀದರಿನಲ್ಲಿ ಪ್ರದರ್ಶನ ನೀಡಲಾಗಿತ್ತು. ಬೀದರ್‍ನಲ್ಲಿ ‘ಹವ್ಯಾಸಿ ಕಲಾವಿದರ ಬಳಗ’ದಿಂದ ಪ್ರಥಮ ಪ್ರದರ್ಶನ ಕಂಡು ಯಶಸ್ವಿಯನ್ನು ಪಡೆದುಕೊಂಡ ಈ ನಾಟಕವು ಗುಲಬರ್ಗಾ, ಭೀಮರಾಯನಗುಡಿ, ಶಹಪೂರ, ರಾಯಚೂರು ಮುಂತಾದ ಕಡೆಗಳಲ್ಲಿ ನಾಡಿನ ಪ್ರತಿಭಾವಂತ ಕಲಾವಿದರಿಂದ ಪ್ರದರ್ಶನಗೊಂಡಿತು. ಈ ‘ಅಪೂರ್ಣ’ ನಾಟಕವು ತನ್ನದೇ ಆದ ವಿಶಿಷ್ಟತೆಯನ್ನು ಒಳಗೊಂಡಿದ್ದು, ವೈಚಾರಿಕ ಚಿಂತನೆಗಳನ್ನು ಅನುಭಾವಿಕ ನೆಲೆಯಲ್ಲಿ ಅನಾವರಣಗೊಳಿಸುತ್ತದೆ. ಗಂಭೀರವಾದ ಮತ್ತು ಚಿಂತನೆಗೆ ಒಳಪಡಿಸಬೇಕಾದ ವಿಷಯವನ್ನು ಮನರಂಜನಾತ್ಮಕ ನೆಲೆಯಲ್ಲಿ ಕಟ್ಟಿಕೊಟ್ಟಿರುವುದೆ ಇದರ ವಿಶೇಷವಾಗಿ ಕಂಡುಬರುತ್ತದೆ. ಇಲ್ಲಿ ಅಪೂರ್ಣತ್ವವನ್ನು ಪಡೆದುಕೊಂಡ ಮಾನವನು ತಾನು ಪರಿಪೂರ್ಣನಾಗಬೇಕು ಎಂದು ತುಡಿಯುತ್ತಲೆ ತನ್ನ ಬದುಕನ್ನು ಕಳೆದುಕೊಳ್ಳುವ ಅಂಶಗಳನ್ನು ಸೈದ್ಧಾಂತಿಕ ನೆಲೆಗಳಲ್ಲಿ ಕಟ್ಟಿಕೊಡಲಾಗಿದೆ. ಹೀಗಾಗಿ ಶ್ರೀಯುತರಲ್ಲಿ ಅಂತರ್ಗತವಾಗಿರುವ ವಿದ್ವತ್ತನ್ನು ಅಳೆಯುವುದಕ್ಕೆ ‘ಅಪೂರ್ಣ’ ಎಂಬ ಈ ನಾಟಕವೊಂದು ಮಾನದಂಡವಾಗಿ ನಿಲ್ಲುತ್ತದೆ ಎಂದರೆ ಅತಿಶಯೋಕ್ತಿಯಾಗಲಾರದು.

ಶ್ರೀಯುತ ಈಶ್ವರ್ ಹತ್ತಿಯವರಿಗೆ ಕೇವಲ ರಂಗಭೂಮಿ ಮಾತ್ರವಲ್ಲದೆ ಸಾಹಿತ್ಯದ ವಿವಿಧ ವಲಯಗಳು ಸಿದ್ಧಿಯಾಗಿವೆ. ಈ ಸಾಹಿತ್ಯ ಪ್ರಕಾರದಲ್ಲಿ ಇವರನ್ನು ಹೆಚ್ಚು ಆಕರ್ಷಿಸಿರುವ ವಲಯವೆಂದರೆ 12ನೇ ಶತಮಾನದ ಶರಣ ಚಳವಳಿ. ಸಮಸಮಾಜದ ಕನಸು ಕಂಡ ವಚನ ಸಾಹಿತ್ಯವು ಇವರನ್ನು ಹೆಚ್ಚು ಆಕರ್ಷಿಸಿತ್ತು. ಇದಕ್ಕೆ ಕಾರಣ ಶ್ರೀ ಶರಣ ಬಸವೇಶ್ವರ ಕಾಲೇಜಿನಲ್ಲಿ ಅಧ್ಯಯನ ಮಾಡುವ ಸಂದರ್ಭದಲ್ಲಿ ಇವರ ಮೇಲೆ ವಿಶಿಷ್ಟ ಪ್ರಭಾವ ಬೀರಿರುವ ಶರಣ ಬಸವೇಶ್ವರರ ಜೀವಪರ ನಿಲುವುಗಳು. ಇದರಿಂದ ಪ್ರಭಾವಿತರಾದ ಶ್ರೀಯುತರು ‘ದಾಸೋಹಿ ಶ್ರೀ ಶರಣಬಸವೇಶ ಕಾವ್ಯಂ’ ಎನ್ನುವ ಕೃತಿಯನ್ನು ರಚಿಸಿದ್ದಾರೆ. ಈ ಧೀರ್ಘವಾದ ಕಾವ್ಯವು ಖಂಡಕಾವ್ಯದ ಮಾದರಿಯಲ್ಲಿದ್ದು, ಇದು ಶಿವಶರಣ ಶ್ರೀ ಶರಣಬಸವರ ಜೀವನ ಮತ್ತು ಸಾಧನೆಯನ್ನು ಅನಾವರಣಗೊಳಿಸುತ್ತದೆ. ಹಾಗೆಯೇ ತಮ್ಮ ಗ್ರಾಮ ದೈವವಾದ ಗುನ್ನಾಳೇಶ್ವರನನ್ನು ಆರಾಧ್ಯ ದೈವವಾಗಿಸಿಕೊಂಡು, ಗುನ್ನಾಳೇಶ್ವರನನ್ನೇ ಅಂಕಿತನಾಮವಾಗಿರಿಸಿಕೊಂಡು ‘ಗುನ್ನಾಳೇಶ್ವರನ ವಚನಗಳು’ ಎಂಬ ವಿಶಿಷ್ಟವಾದ ಸಾಹಿತ್ಯ ಕೃತಿಯೊಂದನ್ನು ಕನ್ನಡ ಸಾರಸ್ವತ ಲೋಕಕ್ಕೆ ಸಮರ್ಪಿಸಿದ್ದಾರೆ. ಇದು ಕೂಡ 12ನೇ ಶತಮಾನದ ಶಿವಶರಣರ ವಚನಗಳ ಮಾದರಿಯಲ್ಲಿ ಮೂಡಿಬಂದಿದೆ. ಇದರ ಆಶಯವು ಕೂಡ ಶರಣ ಮಾರ್ಗವಾಗಿದೆ.

ಹೀಗೆ ಶ್ರೀಯುತ ಈಶ್ವರ್ ಹತ್ತಿಯವರು ಸಾಹಿತ್ಯ ಮತ್ತು ಸಾಂಸ್ಕøತಿಕ ವಲಯಗಳಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡು ಮುನ್ನಡೆಯುತ್ತಿದ್ದಾರೆ. ನಾಟಕಾಭಿನಯ ಮಾತ್ರವಲ್ಲದೆ ಸಿನಿಮಾ ಲೋಕದಲ್ಲಿಯೂ ಕೂಡ ಶ್ರೀಯುತರು ತಮ್ಮ ಅಭಿನಯವನ್ನು ಪ್ರದರ್ಶಿಸಿದ್ದಾರೆ. ‘ಮಹಾದಾಸೋಹಿ ಶರಣ ಬಸವ’ ಸಿನಿಮಾದಲ್ಲಿ ‘ದಮ್ಮುರೋಗದ ಜಂಗಮ’ನ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ತಮ್ಮ ಕಲಾ ಪಾಂಡಿತ್ಯವನ್ನು ಮೆರೆದಿದ್ದಾರೆ. ತಮ್ಮ ವೃತ್ತಿ ಜೀವನದಿಂದ ನಿವೃತ್ತಿಯನ್ನು ಪಡೆದುಕೊಂಡು ವಿಶ್ರಾಂತಿಯನ್ನು ಪಡೆಯಬೇಕಾದ ದಿನಗಳಲ್ಲಿಯೂ ಸಕ್ರಿಯವಾಗಿ ಸಾಹಿತ್ಯ ಮತ್ತು ಸಾಂಸ್ಕøತಿಕ ಲೋಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆ ಮೂಲಕವಾಗಿ ತಮ್ಮ ಕಲಾಭಿಮಾನವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಇಂದು ತಮ್ಮ ಶ್ರೀಮತಿಯವರಾದ ಅನ್ನಪೂರ್ಣಮ್ಮ, ತಮ್ಮ ನಾಲ್ಕು ಜನ ಮಕ್ಕಳಾದ ಜ್ಯೋತಿ, ಜಯಶ್ರೀ, ಜಯಲಕ್ಷ್ಮೀ, ಶರಣಬಸವ ಹಾಗೂ ಮೊಮ್ಮಕ್ಕಳೊಂದಿಗೆ ಅನ್ಯೋನ್ಯವಾದ ಜೀವನ ನಡೆಸುತ್ತಿದ್ದಾರೆ. ಇವರ ಈ ಸುಂದರ ಪಯಣ ಹೀಗೆ ಯಶಸ್ವಿನೆಡೆಗೆ ಸಾಗಲಿ ಎಂಬುದು ನಮ್ಮೆಲ್ಲರ ಹಾರೈಕೆ.

(ಡಾ. ಓಬಳೇಶ್, ಉಪನ್ಯಾಸಕರು, ದಾವಣಗೆರೆ, ಮೊ: 9538345639)

ಅಂತರಂಗ

ವಿಮರ್ಶೆ | ಮೇಘದೂತದಲ್ಲಿ ಕಾವ್ಯ ಪ್ರತಿಮೆ

Published

on

ಪೂರ್ವಸೂರಿಗಳೊಡನೆ’ ಪುಸ್ತಕ ಆಯ್ದ ಉಪನ್ಯಾಸಗಳ ಒಂದೇ ಕಟ್ಟು,ಇವುಗಳಲ್ಲಿ ಮೊದಲ ನಾಲ್ಕು ಸೀತಾ ಪರಿತ್ಯಾಗಕ್ಕೆ ಸಂಬಂಧಿಸಿವೆ, ಐಯ್ದನೆಯ ಹಾಗೂ ಕಡೆಯ ಉಪನ್ಯಾಸ ‘ಮೇಘದೂತದಲ್ಲಿ ಕಾವ್ಯ ಪ್ರತಿಮೆ’ ಎಂಬುದು.

ಮೂರ್ತಿರಾಯರು ಇವನ್ನು ಉಪನ್ಯಾಸ- ಭಾಷಣ ಎಂದು ಕರೆದಿದ್ದಾರೆ. ಈ ಉಪನ್ಯಾಸಗಳಲ್ಲಿರುವುದು ಪ್ರಾಯೋಗಿಕ ವಿಮರ್ಶೆಗೆ ಹತ್ತಿರವಾಗಿ ನಿಲ್ಲುವ ಸಾಹಿತ್ಯ, ಸಂವಾದ,(ಲೇಖಕರು ಶ್ರೇಷ್ಟ ಸಾಹಿತ್ಯ ಕೃತಿಗಳ ಸತತಾಭ್ಯಾಸದತ್ತವಾದ ಬುದ್ದಿ ಭಾವಗಳಿಂದ ಉದ್ದೀಪನಗೊಂಡವರು)
ಮೂರ್ತಿರಾಯರು ಮೇಘದೂತದಲ್ಲಿ ಬರುವ ಪ್ರತಿಮೆಗಳ ಸ್ವರೂಪ ಮತ್ತು ಯಶಸ್ವಿಯತೆಯನ್ನು ಸಂಗ್ರಹವಾಗಿ ಪ್ರಾಯೋಗಿಕ ವಿಮರ್ಶೆ ಮಾದರಿಯಲ್ಲಿ ವಿವೇಚಿಸುತ್ತಾರೆ.

ಮೇಘದೂತದಲ್ಲಿ ಪ್ರತಿಮೆಗಳು “ಸಮಯರೂಪಕಗಳ ನೆರವು ಪಡೆದು ಹೊಂದದಿರುವ ಅಂಶಗಳನ್ನು ಹೊಂದಿದೆ, ಒಗಟನ್ನು ಬಿಡಿಸಿ ಚಮತ್ಕಾರದಲ್ಲಿ ಮುಗಿಯುವಂಥವೂ ಇವೆಯೆಂಬುದನ್ನು ಮೊದಲು ತೋರಿಸುತ್ತಾರೆ, ಆಮೇಲೆ ಅದಕ್ಕಿಂತ ಆಕರ್ಷಕವಾದ, ಕಾವ್ಯೋಚಿತ ಹೊಳಪಿರುವ ಪ್ರತಿಮೆಗಳನ್ನು ಚರ್ಚಿಸುತ್ತಾರೆ ” ಆದರೂ ಇದನ್ನು ಉತ್ತಮ ದರ್ಜೆಯ ಕವಿತೆಗಳೆನ್ನಲಾಗುವುದಿಲ್ಲ, ಇದರಲ್ಲಿ ಕ್ಲಿಷೆಯ ಕಳಂಕವಿದೆ, ಇಲ್ಲಿರುವ ಚಿತ್ರಗಳು ಒಂದಾನೊಂದು ಕಾಲದಲ್ಲಿ ಹೊಚ್ಚಹೊಸ ಕಳೆಯಿಂದ ಮೆರೆದಿದ್ದಿರಬೇಕು, ಈ ಬಳಕೆಯಿಂದ ಮಂಡಿಸಲಾಗಿದೆ, ಕಾಳಿದಾಸ ಯಾರ ಟಂಕಸಾಲೆಯಲ್ಲೊ ಮುದ್ರಿತವಾದ, ಸ್ವಲ್ಪ ಸಮೆದೊ ಇರುವ ನಾಣ್ಯವನ್ನು ಬಳಸಿ ಅಷ್ಟರಲ್ಲೇ ತೃಪ್ತನಾಗಿದ್ದಾನೆ,ತಾನೆ ನಾಣ್ಯವನ್ನು ಎರೆಹೊಯ್ದು ರೂಪಿಸಿಲ್ಲ. ದೊಡ್ಡ ಕವಿಯಾದವನೊಬ್ಬ ಸೋಮಾರಿತನಕ್ಕೆ ತುತ್ತಾಗಿದ್ದಾಗ ಬರೆದ ಕಾವ್ಯಗಳು ಎನಿಸುತ್ತವೆ ಎಂದು ಮೂರ್ತಿರಾಯರು ನಿಲುವನ್ನು ತಾಳುವರು.

ಮತ್ತೆ ಮುಂದುವರಿದು ಮತ್ತೊಂದು ಹಂತದಲ್ಲಿ ” ತಂತಿಯನ್ನು ಮೀಟಿದಾಗ ಆ ನಾಧ ಹಿಂದೆ ಅನುರಣನ ಹೊರಡುವಂತೆ ಕಾಳಿದಾಸನ ಚಿತ್ರದಿಂದ ಅನುಚಿತ್ರ ಹೊರಡುವ ಪ್ರತಿಮೆಗಳನ್ನು ಗುರುತಿಸಲಾಗಿದೆ” ಕೊನೆಯಲ್ಲಿ ” ಇನ್ನೂ ಹೆಚ್ಚು ರಸಸಂಪತ್ತುಗಳು ಅರ್ಥದ ದೃಷ್ಟಿಯಿಂದಲೂ ಪ್ರತಿಮೆ ಸೃಷ್ಟಿ ವಿಧಾನದ ದೃಷ್ಟಿಯಿಂದಲೂ ಹೆಚ್ಚು ಆಸಕ್ತಿಯನ್ನು ಕೆರಳಿಸುವ ಸಂಕೀರ್ಣ ಪ್ರತಿಮೆಗಳನ್ನು ವಿಷ್ಲೇಷಿಸುತ್ತಾರೆ, ಗೌರಿಯ ಹುಬ್ಬು ಗಂಟ್ಟಿಕ್ಕಿದ ಮುಖವನ್ನು ನೋಡಿ ಹಾಸ್ಯಮಾಡಿ ದೊರೆ ನಗುವನು ನಗುತ್ತಾ ಚಂದ್ರಕಿರಣ ಸ್ಪರ್ಶದಿಂದಾಗಿ ಹೊಳೆಯುವ ಅಲೆಗೈಗಳಿಂದ ಶಿವನ ಜುಟ್ಟನ್ನು ಜಗ್ಗಿಸಿದವಳು ಆ ಗಂಗೆ- ಎಂದು ಯಕ್ಷನು ಮೇಘಕ್ಕೆ ಹೇಳುವ ಪರಿಚಯದ ಮಾತುಗಳ ಸೊಗಸು ಸ್ವಾರಸ್ಯಗಳನ್ನು ವಿವರಿಸುತ್ತಾರೆ.

” ಕಾಳಿದಾಸನ ಇತರ ಕಾವ್ಯಗಳಲ್ಲೂ , ನಾಟಕಗಳಲ್ಲೂ, ಶಿವನ ಪ್ರಸ್ತಾಪ ಬರುತ್ತದೆಯಷ್ಟೆ, ಅವುಗಳ ಆಧಾರದ ಮೇಲೆ ಅವನಿಗೆ ಶಿವನ ವಿಷಯದಲ್ಲಿ ಅಪರಿಮಿತವಾದ ಭಕ್ತಿಯಿತ್ತು ಎಂದು ಧಾರಾಳವಾಗಿ ಹೇಳಬಹುದು, ಶಿವ ಅವನಿಗೆ ಇಷ್ಟ ದೈವ, ವಿಶ್ವದಲ್ಲಿ ಅತ್ಯುನ್ನತವಾದುದ್ದರ ಭವ್ಯವಾದ ಪ್ರತೀಕ ಮುಖ್ಯವಾಗಿ ಶಿವ ಕಾಮನನ್ನು ಸುಟ್ಟವನು ಇಷ್ಟಾದರೂ ಕವಿ ಅವನನ್ನು ಈ ಸಂದರ್ಭದ ಮಟ್ಟಿಗೆ ಇಳಿಸಿ ಗಂಗೆಯನ್ನು ಏರಿಸಿದ್ದಾನೆ, ಶಿವ ಪಾರ್ವತಿಯರು ವಾಕ್ಕು ಮತ್ತು ಅರ್ಥ ಇವೆರಡರಲ್ಲಿ ಅಭಿನ್ನವಾದವರು, ಆದರೆ ಕಾಳಿದಾಸ ಪ್ರತಿಭೆಯ ಆಜ್ಞೆಗೆ ಮಣಿದು ಆ ಅಭಿನ್ನತೆಯನ್ನು ಒಡೆದದ್ದರಿಂದಾಗಿ ಚಿತ್ರ ಮತ್ತಷ್ಟು ಕಂಗೊಳಿಸುತ್ತದೆ, ದೈವಿಕವಾದದ್ದಕ್ಕೂ ಮಾನವೀಕವಾದದ್ದಕ್ಕೂ ಇರುವ ಅಂತರ ಕಡಿಮೆಯಾಗಿ ಆ ದಿವ್ಯ ದಂಪತಿಗಳು ನಮಗೆ ಹತ್ತಿರವಾಗುತ್ತಾರೆ”.

ಮೇಘದೂತದಲ್ಲಿ ಕಾವ್ಯ ಪ್ರತಿಮೆಗಳ ಆಯಾಮಗಳನ್ನು ತಿಳಿಸಿ ಬರೆಯುತ್ತಾರೆ, “ಮನಃಶಾಸ್ತ್ರ ಎಷ್ಟೇ ಮುಂದುವರೆದಿದ್ದರೂ ಅಜಾಗ್ರುತ ಮನಸ್ಸಿನ ಕ್ರಿಯೆಯನು ವಿಷ್ಲೇಶಿಸಿ, ವರ್ಗೀಕರಿಸಿ, ಅದರ ವಿವರಗಳನ್ನು ಮನದಟ್ಟು ಮಾಡಿಕೊಡಲಾರರು ಆಂದೋಲನದ ಪುನಃ ಸೃಷ್ಟಿಯನ್ನಂತೂ ಮಾಡಲಾರದು, ಕವಿಯ ಅಂತರಂಗದ ದೃಷ್ಟಿ ಮನಃಶ್ಯಾಸ್ತ್ರ ಪ್ರಕಾರ ತಯಾರು ಮಾಡಬಹುದಾದ ಸಾಧನೆಗಳಿಗಿಂತಲೂ‌ ಶಕ್ತಿಯುತವಾದದ್ದು, ಆದ್ದರಿಂದ ಮಾನವ ಹೃದಯದ ಪರಿಚಯಬೇಕು ಎನ್ನುವವರಿಗೆ ಕಾವ್ಯಾಧ್ಯಯನ ಯಶಸ್ವಿಯಾಗಿ ನೆರವು ಕೊಡಬಲ್ಲದು” (ಹಂಪನಾಗರಾಜಯ್ಯ)
ಹೀಗೆ ಮಾನವೀಯ ನೆಲೆಯ ಗ್ರಹಿಕೆಯಿಂದ ಶೋಧನ ಪ್ರವೃತ್ತಿಯಿಂದ ಉದ್ದೀಪನವಾಗಿರುವ ಕಾರಣದಿಂದ ಎ,ಎನ್ ಮೂರ್ತಿರಾಯರು ಇಲ್ಲಿ ವೈಜ್ಞಾನಿಕವಾಗಿ ಚಿಂತಿಸಿದ್ದಾರೆ.

ಸನಾತನ ಪರಿಸರದ ಬುದ್ದಿಭಾವಗಳು ತಳೆಯಬಹುದಾದ ಪೂರ್ವಗ್ರಹಿಕೆಗಳಾಗಲಿ, ಅತಿಭಾವುಕತೆಯಾಗಲಿ ಇಲ್ಲಿಲ್ಲ, ನಮ್ಮ ಪರಂಪರೆಯಲ್ಲಿ ತಳುಕು ಹಾಕಿಕೊಂಡಿರುವ ಮಿತಿಗಳನ್ನು ನಾವೇ ಪ್ರಶ್ನೆಮಾಡಬಹುದೆ ಎಂಬ ಉದ್ದಟತನವಿಲ್ಲ, ಇಂಗ್ಲೀಷ ಸಾಹಿತ್ಯದ ಓದಿನಿಂದ ಇಲ್ಲಿ ಲೇಖಕರ ವೈಚಾರಿಕ ಪ್ರಖರ ಆಕೃತಿಕವಾಗಿ ಬೆಳಗಿದೆ, ಗಿಡದಿಂದ ಮಗ್ಗುಹುಟ್ಟಿ ತೆಳುಗಾಳಿಗೆ ಅರಳಿ ಮಗಮಗಿಸುವ ಹಾಗೆ ಈ ವಿಮರ್ಶೆಯಲ್ಲಿ ಸಹಜತೆ ಲಾಸ್ಯವಾಡಿದೆ.

– ಸಾಗರಿ (ಪುಷ್ಪಲತ)

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ನೆಲದನಿ

ಬುಡಕಟ್ಟು ಮತ್ತು ಅಲೆಮಾರಿ ಸಮುದಾಯಗಳು

Published

on

ಕರ್ನಾಟಕ ಸಬಾಲ್ಟ್ರನ್ ಓದು ಮಾಲಿಕೆ: ಸಂಪುಟ 6

ರ್ನಾಟಕ ಸಬಾಲ್ಟ್ರನ್ ಓದು ಮಾಲಿಕೆ’ ಯ ಒಂದು ಸಂಪುಟವನ್ನು ನಾನು ಮತ್ತು ಡಾ.‌ಕುಂಸಿ ಉಮೇಶ್ ಅವರು ಸಂಪಾದಿಸಿ ಈ ಹಿಂದೆ ಸಾಹಿತ್ಯ ಅಕಾಡೆಮಿಗೆ ಸಲ್ಲಿಸಿದ್ದೆವು. ‘ಬುಡಕಟ್ಟು ಮತ್ತು ಅಲೆಮಾರಿ ಸಮುದಾಯಗಳು’ ಎಂಬ ಹೆಸರಲ್ಲಿ ಈ ಸಂಪುಟ ಮುದ್ರಣವಾಗಿ ಈಗ ಹೊರಬಂದಿದೆ.

ಪ್ರಸ್ತುತ ಸಂಪುಟವು ಬುಡಕಟ್ಟು ಮತ್ತು ಅಲೆಮಾರಿ ಸಮುದಾಯಗಳನ್ನು ಅಧ್ಯಯನ ಮಾಡುವ ಆಸಕ್ತರಿಗೆ ಉಪಯುಕ್ತವಾಗಬಲ್ಲದು. ಮುಖ್ಯವಾಗಿ, ಎಂಫಿಲ್, ಪಿಎಚ್, ಡಿ ವಿದ್ಯಾರ್ಥಿಗಳು, ಆಸಕ್ತ ಸಂಶೋಧಕರು ಮತ್ತು ಸಾಮಾಜಿಕ ಕಾರ್ಯಕರ್ತರಿಗೂ ಇದು ಕೈಪಿಡಿಯ ರೂಪದಲ್ಲಿ ನೆರವಾಗುತ್ತದೆ. ತಳಸ್ತರದ ಸಮುದಾಯಗಳನ್ನು ಅಧ್ಯಯನ ಮಾಡುವ ದೃಷ್ಟಿಕೋನವನ್ನು ವಿಶ್ಲೇಷಿಸುವ ಬರಹಗಳು ಇಲ್ಲಿವೆ.

ರಹಮತ್ ತರೀಕೆರೆ, ಹಿ ಚಿ ಬೋರಲಿಂಗಯ್ಯ, ಚಂದ್ರ ಪೂಜಾರಿ, ಟಿ ಆರ್ ಚಂದ್ರಶೇಖರ್, ದಿ. ಕಿಕ್ಕೇರಿ ನಾರಾಯಣ, ಟಿ ಎಸ್ ಚನ್ನೇಶ್ ಹೊನ್ನಾಳಿ, ಮಂಜುನಾಥ ಬೇವಿನಕಟ್ಟಿ, ಕ್ಷೀರಸಾಗರ, ಶೈಲಜ ಹಿರೇಮಠ, ಇವರ ಲೇಖನಗಳು ಈ ಸಂಪುಟದಲ್ಲಿವೆ. ಜೊತೆಗೆ ವರ್ತಮಾನವನ್ನು ಕಾಲದ ಅಗತ್ಯದಲ್ಲಿಟ್ಟು ವಿಶ್ಲೇಷಿಸುವ ಗೆಳೆಯರಾದ ಎಚ್ ಡಿ ಪ್ರಶಾಂತ, ಕಿರಣ್ ಗಾಜನೂರು, ಮೋಹನ್ ಚಂದ್ರಗುತ್ತಿ, ಹರ್ಷಕುಮಾರ್ ಕುಗ್ವೆ, ಅರುಣ್ ಜೋಳದ ಕೂಡ್ಲಿಗಿ, ಎಸ್ ಎಂ ಮುತ್ತಯ್ಯ, ಆರಡಿ ಮಲ್ಲಯ್ಯ, ಶಶಿಕಿರಣ್, ವೆಂಕಟಗಿರಿ ದಳವಾಯಿಯವರ ಬರಹಗಳು ಇಲ್ಲಿವೆ. ಇವುಗಳ ಜೊತೆ ಆನಂದ್ ತೇಲ್ತುಂಬ್ಡೆ, ವರ್ಜಿನಸ್ ಕಾಕಾ, ಸೀತಾಕಾಂತ್ ಮಹಾಪಾತ್ರ, ಹರಿಮೋಹನ್ ಮಾಥೂರ್, ಪೆಗ್ಗಿ ಫ್ರಾಯರ್, ಮಿಲಿಂದ್ ಬೋಕಿಲ್, ಮುಂತಾದ ಹಿರಿಯರ ಲೇಖನಗಳೂ ಇವೆ. ಒಟ್ಟಿನಲ್ಲಿ ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ವೈಧಾನಿಕ ಪ್ರಸ್ಥಾನಗಳನ್ನು ವಿಶ್ಲೇಷಿಸುವ ಅತ್ಯುತ್ತಮ ಬರಹಗಳನ್ನು ಇಲ್ಲಿ ಸಂಕಲಿಸಲಾಗಿದೆ.

ಇಂತಹ ಒಂದು ಯೋಜನೆಯನ್ನು ನಮಗೆ ವಹಿಸಿದ ಮೇಟಿ ಮಲ್ಲಿಕಾರ್ಜುನ ಅವರಿಗೆ ಮೊದಲು ಕೃತಜ್ಞತೆ ಸಲ್ಲಿಸಬೇಕು. ಅಕಾಡೆಮಿಯ ಅಂದಿನ ಮತ್ತು ಇಂದಿನ ಅಧ್ಯಕ್ಷರಾದ ಮಾಲತಿ ಪಟ್ಟಣಶೆಟ್ಟಿ, ಅರವಿಂದ ಮಾಲಗತ್ತಿ ಮತ್ತು ಸಿಬ್ಬಂದಿ ವರ್ಗಕ್ಕೆ ನಮಸ್ಕಾರಗಳು. ಬರಹಗಳನ್ನು ಮಾಡಿಕೊಟ್ಟ ಹಿರಿಯ ಮತ್ತು ಕಿರಿಯ ಮಿತ್ರರಿಗೆ, ಅನುವಾದ ಮಾಡಿಕೊಟ್ಟ ಗೆಳೆಯರಿಗೆ ಧನ್ಯವಾದಗಳು.

ಒಟ್ಟು 872 ಪುಟಗಳ ಪುಸ್ತಕವಿದು. ಬೆಲೆ: 380/- ರೂಪಾಯಿಗಳು. ಸಾಹಿತ್ಯ ಅಕಾಡೆಮಿಯ ಮಾರಾಟ ಮಳಿಗೆಗಳಲ್ಲಿ ಈ ಪುಸ್ತಕವನ್ನು ಖರೀದಿಸಬಹುದು.

– ಡಾ.ಎ.ಎಸ್.ಪ್ರಭಾಕರ್

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading

ನೆಲದನಿ

ವಿಶ್ವ ಮಾನವ ಸಂದೇಶ : ಕುವೆಂಪು

Published

on

೧೧೪ ನೇ ಕುವೆಂಪು ಜನ್ಮದಿನಾಚರಣೆ ಹಾಗೂ ವಿಶ್ವಮಾನವ ದಿನಾಚರಣೆಯ ಶುಭಾಶಯಗಳು

ಹುಟ್ಟುವ ಪ್ರತಿ ಮಗುವು ವಿಶ್ವಮಾನವನೇ!
ಆ ನಂತರ ಆ ಮಗುವನ್ನು “ಜಾತಿ,ಮತ”ದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಹಾಗಾಗ ಬಾರದು. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು, ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು. ಹಾಗಾಗಿ ಕುವೆಂಪು ಅವರ ಜಾತ್ಯಾತೀತ ಮನೋಭಾವದಿಂದ ಮೂಡಿ ಬಂದ ಆಶಯವೇ ವಿಶ್ವಮಾನವ ಸಂದೇಶವಾಗಿದೆ.

ಬುದ್ಧ, ಬಸವರ ಹಾಗೆ ಸಮಾಜದಲ್ಲಿ ವ್ಯಕ್ತಿ ಸ್ವತಂತ್ರವಾಗಿ, ವೈಚಾರಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕೆಂದು ಅವರು ಹೇಳುತ್ತಿದ್ದರು.

ವಿಶ್ವಮಾನವ ಗೀತೆ

ಓ ನನ್ನ ಚೇತನ,
ಆಗು ನೀ ಅನಿಕೇತನ!

ರೂಪರೂಪಗಳನು ದಾಟಿ,
ನಾಮಕೋಟಿಗಳನು ಮೀಟಿ,
ಎದೆಯ ಬಿರಿಯೆ ಭಾವದೀಟಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!

ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ತ್ವದೆಲ್ಲೆ ಮೀರಿ,
ನಿರ್ದಿಗಂತವಾಗಿ ಏರಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!

ಎಲ್ಲಿಯೂ ನಿಲ್ಲದಿರು;
ಮನೆಯನೆಂದೂ ಕಟ್ಟದಿರು;
ಕೊನೆಯನೆಂದೂ ಮುಟ್ಟದಿರು;
ಓ ಅನಂತವಾಗಿರು!
ಓ ನನ್ನ ಚೇತನ,
ಆಗು ನೀ ಅನಿಕೇತನ!

ಅನಂತ ತಾನ್ ಅನಂತವಾಗಿ
ಆಗುತಿಹನೆ ನಿತ್ಯಯೋಗಿ;
ಅನಂತ ನೀ ಅನಂತವಾಗು;
ಆಗು, ಆಗು, ಆಗು, ಆಗು,
ಓ ನನ್ನ ಚೇತನ,
ಆಗು ನೀ ಅನಿಕೇತನ!

-ಕುವೆಂಪು

ಪಂಚಮಂತ್ರ

೧. ಪ್ರತಿಯೊಂದು ಮಗುವೂ ಹುಟ್ಟುತ್ತಲೆ – ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು ‘ಅಲ್ಪಮಾನವ’ನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು.

೨. ಹುಟ್ಟುವಾಗ ‘ವಿಶ್ವಮಾನವನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು ‘ಬುದ್ಧ’ನನ್ನಾಗಿ, ಅಂದರೆ ವಿಶ್ವಮಾನವನನ್ನಾಗಿ, ಪರಿವರ್ತಿಸುವುದೆ ನಮ್ಮ ವಿದ್ಯೆ, ಸಂಸ್ಕೃತಿ, ನಾಗರಿಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಲೋಕ ಉಳಿದು, ಬಾಳಿ ಬದುಕಬೇಕಾದರೆ! ಪ್ರಪಂಚದ ಮಕ್ಕಳೆಲ್ಲ ‘ಅನಿಕೇತನ’ರಾಗಬೇಕು.

೩. ಮಾನವ ವಿಕಾಸದ ಹಾದಿಯಲ್ಲಿ ಆಯಾ ಕಾಲದ ಅಗತ್ಯವನ್ನು ಪೂರೈಸಲು ಮಹಾಪುರುಷರು ಸಂಭವಿಸಿ ಹೋಗಿದ್ದಾರೆ. ಅವರಲ್ಲಿ ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊಂಡು ಕಡೆಗೆ ಮತವಾಗಿ ಪರಿಮಿತವಾಯಿತು. ಮಾನವರನ್ನು ಕೂಡಿಸಿ ಬಾಳಿಸಬೇಕೆಂಬ ಸದುದ್ದೇಶದಿಂದ ಹುಟ್ಟಿ ಕೊಂಡ ಮಹಾತ್ಮರ ವಾಣಿ ಮತವಾಗಿ ಮಾದಕವಾಯಿತು. ಒಂದು ಯುಗಕ್ಕೆ ಅಗತ್ಯವೆನ್ನಿಸಿದ ಧರ್ಮ ಕಾಲಾನುಕಾಲಕ್ಕೆ ಮತವಾಗಿ ನಿರುಪಯುಕ್ತವೆನಿ, ಮತ್ತೊಂದು ಹೊಸ ಧರ್ಮಕ್ಕೆ ಎಡೆಗೊಟ್ಟುದೂ ಉಂಟು. ಹೀಗಾಗಿ ಅನೇಕ ಧರ್ಮಗಳು ಮತಗಳಾಗಿ ಜನತೆಯನ್ನು ಗುಂಪುಗುಂಪಾಗಿ ಜನತೆಯನ್ನು ಒಡೆದಿವೆ; ಯುದ್ಧಗಳನ್ನು ಹೊತ್ತಿಸಿವೆ, ಜಗತ್ತಿನ ಕ್ಷೋಭೆಗಳಿಗೆಲ್ಲ ಮೂಲಕಾರಣವೆಂಬಂತೆ! ವಿಜ್ಞಾನಯುಗದ ಪ್ರಾಯೋಗಿಕ ದೃಷ್ಟಿಗೆ ಇನ್ನು ಮೇಲೆ ಮತಮೌಢ್ಯ ಒಪ್ಪಿಗೆಯಾಗದು. ವಿನೋಬಾ ಭಾವೆಯವರು ಹಿಂದೆ ಹೇಳಿದಂತೆ ‘ಮತ ಮತ್ತು ರಾಜಕೀಯದ ಕಾಲ ಆಗಿ ಹೋಯಿತು. ಇನ್ನೇನಿದ್ದರೂ ಅಧ್ಯಾತ್ಮ ಮತ್ತು ವಿಜ್ಞಾನದ ಕಾಲ ಬರಬೇಕಾಗಿದೆ.’

೪. ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ*- ಈ ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ. ಅಂದರೆ, ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; “ಮನುಜಮತ”. ಆ ಪಥ ಈ ಪಥ ಅಲ್ಲ; “ವಿಶ್ವಪಥ”. ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ ಅದುವೇ “ಸರ್ವೋದಯ”. ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; “ಸಮನ್ವಯ”ಗೊಳ್ಳುವುದು. ಮಿತಮತದ ಆಂಶಿಕ ದೃಷ್ಟಿಯಲ್ಲ; ಭೌತಿಕ ಪಾರಮಾರ್ಥಿಕ ಎಂಬ ಭಿನ್ನ ದೃಷ್ಟಿಯಲ್ಲ; ಎಲ್ಲವನ್ನು ಭಗವದ್ ದೃಷ್ಟಿಯಿಂದ
ಕಾಣುವ “ಪೂರ್ಣದೃಷ್ಟಿ”.

೫. ಯಾವ ಭಾವನೆಗಳು ಜಗತ್ತಿನಲ್ಲಿ ಎಲ್ಲ ಮಾನವರಿಗೂ ಅನ್ವಯವಾಗಬಹುದೊ ಅಂತಹ ಭಾವನೆ ಅಂತಹ ದೃಷ್ಟಿ ಬರಿಯ ಯಾವುದೊ ಒಂದು ಜಾತಿಗೆ, ಮತಕ್ಕೆ, ಗುಂಪಿಗೆ, ಒಂದು ದೇಶಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ಸರ್ವಕಾಲಕ್ಕೂ ಅನ್ವಯವಾಗುವ ಇವು ಮೂಲಮೌಲ್ಯಗಳು. ಈ ಮೌಲ್ಯಗಳು ಮಾನವರನ್ನು ಕೂಡಿಸಿ ಬಾಳಿಸುವತ್ತ ನಡೆದಾವು. ಗುಂಪುಗಾರಿಕೆಗೆಂದೂ ಇವು ತೊಡಗುವುದಿಲ್ಲ; ಅದೇನಿದ್ದರೂ ರಾಜಕೀಯದ ಕರ್ಮ. ವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿಯೂ ಸಮಷ್ಟಿಯ ಉದ್ಧಾರದ ದೃಷ್ಟಿ ಇದರದು. ಈ ದೃಷ್ಟಿಗೆ ವ್ಯಕ್ತಿಗಳೆಷ್ಟೊ ಅಷ್ಟೂ ಸಂಖ್ಯೆಯ ಮತಗಳಿರು ವುದು ಸಾಧ್ಯ; ಅಷ್ಟೂ ವ್ಯಕ್ತಿಗಳು ಸಮಷ್ಟಿಯ ವಿಕಾಸಕ್ಕೆ ಸಾಧಕವಾಗುವುದೂ ಸಾಧ್ಯ. ಈ ‘ದರ್ಶನ’ವನ್ನೆ ‘ವಿಶ್ವಮಾನವ ಗೀತೆ’ ಸಾರುತ್ತದೆ.

ಸಪ್ತಸೂತ್ರ

ವಿಶ್ವಮಾನವರಾಗಲು ನಾವು ಸಾಧಿಸಲೇಬೇಕಾದ ಮೂಲಭೂತ ಸ್ವರೂಪದ ತತ್ತ್ವಪ್ರಣಾಳಿಕೆ

೧. “ಮನುಷ್ಯಜಾತಿ ತಾನೊಂದೆ ವಲಂ” ಎಂಬುದನ್ನು ನಿರುಪಾಧಿಕವಾಗಿ ಸ್ವೀಕರಿಸಬೇಕು.

೨. ವರ್ಣಾಶ್ರಮವನ್ನು ತಿದ್ದುವುದಲ್ಲ, ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು. ಅಂದರೆ ಬ್ರಾಹ್ಮಣ-ಕ್ಷತ್ರಿಯ, ವೈಶ್ಯ-ಶೂದ್ರ, ಅಂತ್ಯಜ, ಷಿಯಾ-ಸುನ್ನಿ, ಕ್ಯಾಥೊಲಿಕ್- ಪ್ರಾಟೆಸ್ಟಂಟ್, ಸಿಕ್-ನಿರಂಕಾರಿ ಇತ್ಯಾದಿ ವಿಭಜನೆಯನ್ನು ನಿರ್ನಾಮ ಮಾಡಬೇಕು.

೩. ಎಲ್ಲ ದೇಶಗಳಲ್ಲಿ ಮತ್ತು ಎಲ್ಲ ಮತಗಳಲ್ಲಿರುವ ಜಾತಿಪದ್ಧತಿಯನ್ನು ಸಂಪೂರ್ಣವಾಗಿ ನಿರಾಕರಿಸಿ, ವಿನಾಶಗೊಳಿಸಬೇಕು.

೪. ‘ಮತ’ ತೊಲಗಿ ‘ಅಧ್ಯಾತ್ಮ’ ಮಾತ್ರ ವೈಜ್ಞಾನಿಕ ತತ್ತ್ವವಾಗಿ ಮಾನ್ಯತೆ ಪಡೆಯಬೇಕು.

೫. ಮತ ‘ಮನುಜಮತ’ವಾಗಬೇಕು; ಪಥ ‘ವಿಶ್ವಪಥ’ವಾಗಬೇಕು; ಮನುಷ್ಯ ‘ವಿಶ್ವಮಾನವ’ನಾಗಬೇಕು.

೬. ಮತ ಗುಂಪು ಕಟ್ಟುವ ವಿಷಯವಾಗಬಾರದು. ಯಾರೂ ಯಾವ ಒಂದು ಮತಕ್ಕೆ ಸೇರದೆ, ಪ್ರತಿಯೊಬ್ಬನೂ ತಾನು ಕಂಡು ಕೊಳ್ಳುವ ‘ತನ್ನ’ ಮತಕ್ಕೆ ಮಾತ್ರ ಸೇರಬೇಕು. ಅಂದರೆ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟೇ ಸಂಖ್ಯೆಯ ಮತಗಳಿರುವಂತಾಗುತ್ತದೆ. ಯಾರೊಬ್ಬರೂ ಇನ್ನೊಬ್ಬರ ಮತಕ್ಕೆ ಸೇರಿ ಗುಂಪು ಕಟ್ಟಿ ಜಗಳ ಹಚ್ಚುವಂತಾಗಬಾರದು.

೭. ಯಾವ ಒಂದು ಗ್ರಂಥವೂ ‘ಏಕೈಕ ಪರಮ ಪೂಜ್ಯ’ ಧರ್ಮಗ್ರಂಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾದವುಗಳನ್ನೆಲ್ಲ ಓದಿ ತಿಳಿದು ತನ್ನ ‘ದರ್ಶನ’ವನ್ನು ತಾನೇ ನಿರ್ಣಯಿಸಿ ಕಟ್ಟಿಕೊಳ್ಳಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Continue Reading
Advertisement

Trending