Connect with us

ಲೋಕಾರೂಢಿ

ಹಿಂದುತ್ವ ಭಯೋತ್ಪಾದನೆ ಕುರಿತು ನಾಚಿಕೆಗೇಡಿನ ತೀರ್ಪು : ಪ್ರಕಾಶ ಕಾರಟ್

Published

on

 

“ಸಮಝೋತಾ, ಮಲೆಗಾಂವ್, ಮೆಕ್ಕಾ ಮಸೀದಿ ಮತ್ತು ಅಜ್ಮೇರ್ ಷರೀಫ್ ಸ್ಫೋಟ ಪ್ರಕರಣಗಳು ಹಿಂದೂ ಉಗ್ರಗಾಮಿಗಳು ಭಯೋತ್ಪಾದನೆ ದಾಳಿಗಳನ್ನು ಯೋಜಿಸಿದ್ದಾರೆ ಅಥವಾ ಕಾರ್ಯರೂಪಕ್ಕೆ ತಂದಿದ್ದಾರೆ ಎಂಬುದನ್ನು ಮೋದಿ ಸರಕಾರ ಗುರುತಿಸುವುದೂ ಇಲ್ಲ ಒಪ್ಪುವುದೂ ಇಲ್ಲ. ಮೋದಿ ಸರಕಾರದ ಪ್ರಕಾರ ಮುಸ್ಲಿಂ ಉಗ್ರಗಾಮಿಗಳು ಮಾತ್ರವೇ ಭಯೋತ್ಪಾದನೆ ಕೃತ್ಯಗಳನ್ನು ನಡೆಸುತ್ತಾರೆಯೇ ಹೊರತು ಹಿಂದೂ ಉಗ್ರಗಾಮಿಗಳಲ್ಲ. ಈ ಮೈನಡುಗಿಸುವ ಸಂದೇಶವನ್ನು ಸಾರಲು ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನೇ ಬುಡಮೇಲು ಮಾಡಲಾಗುತ್ತಿದೆ”.

 

ಮ್‌ಝೋತಾ ರೈಲು ಸ್ಫೋಟ ಪ್ರಕರಣದಲ್ಲಿ ಅಸೀಮಾನಂದ (ಮೂಲ ಹೆಸರು ನಬ ಕುಮಾರ್ ಸರ್ಕಾರ್) ಮತ್ತು ಇತರ ಮೂವರನ್ನು ನಿರ್ದೋಷಿ ಎಂದು ಘೋಷಿಸಿರುವುದು ಉಗ್ರ ಹಿಂದುತ್ವ ನಮೂನೆಯ ಭಯೋತ್ಪಾದಕರನ್ನು ಅವರು ಮಾಡಿದ ಅಪರಾಧಗಳಿಗಾಗಿ ಶಿಕ್ಷೆ ವಿಧಿಸಲು ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆ ಸಮರ್ಥವಾಗಿಲ್ಲ ಎನ್ನುವುದನ್ನು ಇನ್ನೊಮ್ಮೆ ನೆನಪಿಸಿದೆ. ಇದು ನಾಚಿಕೆಗೇಡಿನ ಸಂಗತಿ.

2006ಮತ್ತು 2008ರ ನಡುವೆ ಉಗ್ರ ಹಿಂದುತ್ವ ಗುಂಪುಗಳ ಜಾಲವು ಆರು ಭಯೋತ್ಪಾದನೆ ಕೃತ್ಯಗಳನ್ನು ನಡೆಸಿತ್ತು. ಅಸೀಮಾನಂದ, ಪ್ರಜ್ಞಾ ಠಾಕೂರ್ ಮತ್ತು ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್ ಈ ಕೃತ್ಯಗಳ ಪ್ರಮುಖ ಸಂಚುಕೋರರು.

ಆರ್‌ಎಸ್‌ಎಸ್-ವಿಎಚ್‌ಪಿ ಕಾರ್ಯಕರ್ತನಾದ ಅಸೀಮಾನಂದ ಈ ಹಿಂದೆ ಮೆಕ್ಕಾ ಮಸೀದಿ ಸ್ಫೋಟ ಮತ್ತು ಅಜ್ಮೇರ್ ದರ್ಗಾ ಸ್ಫೋಟ ಪ್ರಕರಣಗಳಲ್ಲಿಯೂ ನಿರ್ದೋಷಿ ಎಂದು ಘೋಷಿತನಾಗಿದ್ದ. ಮುಸ್ಲಿಂ ಪ್ರಾರ್ಥನಾ ಸ್ಥಳಗಳ ಮೇಲಿನ ಭಯೋತ್ಪಾದನಾ ದಾಳಿಗಳ ಪ್ರಮುಖ ಸಂಘಟಕ ಈತನೇ ಎಂದು ಪರಿಗಣಿಸಲಾಗಿದೆ. ಈ ಎರಡೂ ಪ್ರಕರಣಗಳ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸಿತ್ತು. ನರೇಂದ್ರ ಮೋದಿ ಆಡಳಿತದಡಿಯಲ್ಲಿ, ಹಿಂದುತ್ವ ಉಗ್ರಗಾಮಿ ಗುಂಪುಗಳಿಗೆ ಸಂಬಂಧಿಸಿದ ಉಗ್ರಗಾಮಿ ಪ್ರಕರಣಗಳನ್ನು ಕೀಳಂದಾಜು ಮಾಡಿದ ಕುಖ್ಯಾತಿಯನ್ನು ಎನ್‌ಐಎ ಹೊಂದಿದೆ. 2017ರಲ್ಲಿ ಒಂಬತ್ತು ಜನರ ಸಾವಿಗೆ ಕಾರಣವಾದ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಅಸೀಮಾನಂದ ಸಹಿತ ಎಲ್ಲಾ ಆರೋಪಿಗಳನ್ನು ಬಿಡುಗಡೆ ಮಾಡಲಾಯಿತು.
ಎನ್‌ಐಎ ನಿರ್ವಹಿಸಿದ ಅಜ್ಮೇರ್ ದರ್ಗಾ ಸ್ಫೋಟ ಪ್ರಕರಣದಲ್ಲಿ ಕೂಡ ಅಸೀಮಾನಂದ ಮತ್ತು ಇತರ ಆರು ಮಂದಿಯನ್ನು ನಿರ್ದೋಷಿ ಎಂದು ಸಾರಲಾಯಿತು. ಈ ಪ್ರಕರಣದಲ್ಲಿ ಮಾತ್ರವೇ ಇಬ್ಬರು ಆರ್‌ಎಸ್‌ಎಸ್ ಕಾರ್ಯಕರ್ತರನ್ನು ತಪ್ಪಿತಸ್ಥರೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಆದರೆ ಆ ಶಿಕ್ಷೆಗೆ ಹೈಕೋರ್ಟ್ ತಡೆ ನೀಡಿದೆ. 2008ರ ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ಞಾ ಠಾಕೂರ್ ವಿರುದ್ಧದ ಮೊಕಾ ಕಾನೂನು ಅನ್ವಯದ ಆರೋಪಗಳನ್ನು ಎನ್‌ಐಎ ಕೈಬಿಟ್ಟಿತು. ಆದರೆ ವಿಶೇಷ ನ್ಯಾಯಾಲಯವು ಕಾನೂನುಬಾಹಿರ ಚಟುವಟಿಕೆಗಳ ನಿಷೇಧ (ಯುಎಪಿಎ) ಕಾನೂನು ಅನ್ವಯ ಆಕೆ ವಿರುದ್ಧದ ಆರೋಪಗಳನ್ನು ಪುನಃ ಕೈಗೆತ್ತಿಕೊಂಡಿತು.

ಈ ಪ್ರಕರಣದಲ್ಲಿ ಮೃದು ಧೋರಣೆ ತಾಳುವಂತೆ ತನ್ನ ಮೇಲೆ ಎನ್‌ಐಎ ಒತ್ತಡ ಹೇರುತ್ತಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ರೋಹಿಣಿ ಸಾಲಿಯಾನ್ ದೂರಿದಾಗಲೇ ಈ ಪ್ರಕರಣದಿಂದ ಪ್ರಜ್ಞಾ ಠಾಕೂರ್ ಮತ್ತು ಶ್ರೀಕಾಂತ್ ಪುರೋಹಿತ್‌ರನ್ನು ದೋಷಮುಕ್ತಗೊಳಿಸಲು ಎನ್‌ಐಎ ಪ್ರಯತ್ನಿಸುತ್ತಿರುವುದು ಬಯಲಾಗಿತ್ತು. ಪ್ರಜ್ಞಾ ಮತ್ತು ಪುರೋಹಿತ್‌ಗೆ ಜಾಮೀನು ನೀಡುವುದನ್ನು ಎನ್‌ಐಎ ವಿರೋಧಿಸಲಿಲ್ಲ.

ಸಮಝೋತಾ ರೈಲು ಸ್ಫೋಟ ಪ್ರಕರಣ ಅತ್ಯಂತ ಘೋರ ಭಯೋತ್ಪಾದನೆ ಪ್ರಕರಣಗಳಲ್ಲಿ ಒಂದಾಗಿದೆ. ಇದೀಗ ಹೊರಬಿದ್ದಿರುವ ನ್ಯಾಯಾಂಗದ ತೀರ್ಪು ಈ ಭಯೋತ್ಪಾದನೆ ಘಟನೆಗೆ ಯಾರೊಬ್ಬರೂ ಹೊಣೆಗಾರರಲ್ಲ ಎಂಬ ಸಂದೇಶವನ್ನು ಸಾರುತ್ತದೆ. ಆರ್‌ಎಸ್‌ಎಸ್ ಸಂಯೋಜಿತ ಸಂಘಟನೆಗಳ ವ್ಯಕ್ತಿಗಳಿಗೂ ಈ ಪ್ರಕರಣಕ್ಕೂ ನಂಟು ಇದೆ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿದ್ದರೂ ಈ ರೀತಿ ಆಗಿದೆ. ಹರ್ಯಾಣ ಪೊಲೀಸ್ ಇಲಾಖೆಯ ವಿಶೇಷ ತನಿಖಾ ತಂಡ ಮೊದಲು ಈ ಪ್ರಕರಣದ ತನಿಖೆ ನಡೆಸಿತ್ತು. ಆ ತಂಡ ರೈಲಿನಲ್ಲಿ ಸ್ಫೋಟಗೊಳ್ಳದೆ ಉಳಿದಿದ್ದ ಬಾಂಬ್‌ನ ಭಾಗಗಳನ್ನು ವಶಪಡಿಸಿಕೊಂಡಿದ್ದು ಅದನ್ನು ಇಂದೋರ್‌ನಲ್ಲಿ ಖರೀದಿಸಿದವರು ಯಾರು ಎನ್ನುವುದನ್ನು ಪತ್ತೆ ಮಾಡಿತ್ತು. ಬಾಂಬ್‌ಅನ್ನು ಇರಿಸಿದ್ದ ಸೂಟ್‌ಕೇಸನ್ನು ಕೂಡ ತಂಡ ಪತ್ತೆ ಹಚ್ಚಿ ಅದನ್ನು ನಗರದ ಯಾವ ಅಂಗಡಿಯಲ್ಲಿ ಖರೀದಿಸಲಾಗಿತ್ತು ಎನ್ನುವುದನ್ನೂ ಕಂಡುಹಿಡಿದಿತ್ತು. ಅದನ್ನು ಖರೀದಿಸಿದ ಇಬ್ಬರು ವ್ಯಕ್ತಿಗಳನ್ನು ಅಂಗಡಿಯ ಸಹಾಯಕರು ಗುರುತು ಹಿಡಿದಿದ್ದರು.

ಈ ಎಲ್ಲಾ ಪ್ರಕರಣಗಳಲ್ಲಿನ ವಿಧಾನ ಒಂದೇ ರೀತಿಯಾಗಿದೆ- ದುರ್ಬಲ ಪ್ರಾಸಿಕ್ಯೂಷನ್, ಸಾಕ್ಷಿಗಳು ತಿರುಗಿ ಬಿದ್ದಿರುವುದು ಹಾಗೂ ಈ ಪ್ರಕರಣಗಳನ್ನು ಸರಿಯಾಗಿ ತನಿಖೆಗೊಳಪಡಿಸುವಲ್ಲಿ ಎನ್‌ಐಎ ಯಲ್ಲಿ ದೃಢತೆಯ ಕೊರತೆ. ಮೆಕ್ಕಾ ಮಸೀದಿ ಪ್ರಕರಣದಲ್ಲೇ ಆಗಲಿ ಅಜ್ಮೇರ್ ದರ್ಗಾ ಪ್ರಕರಣದಲ್ಲೇ ಆಗಲಿ ಅಸೀಮಾನಂದರನ್ನು ದೋಷಮುಕ್ತಗೊಳಿಸಿದ ಕೋರ್ಟ್ ಆದೇಶವನ್ನು ಎನ್‌ಐಎ ಪ್ರಶ್ನಿಸಲಿಲ್ಲ.

೪೩ ಪಾಕಿಸ್ತಾನಿ ಪ್ರಜೆಗಳ ಸಹಿತ 68ಜನರ ಸಾವಿಗೆ ಕಾರಣವಾದ ಸಮಝೋತಾ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ನ್ಯಾಯಾಲಯಕ್ಕೆ ಮನವಿ ಮಾಡುವುದಿಲ್ಲ ಎಂದು ಕೇಂದ್ರ ಗೃಹಸಚಿವ ರಾಜನಾಥ ಸಿಂಗ್ ಅವರೇ ಹೇಳಿದ್ದಾರೆ. ಇದು ಬಿಜೆಪಿ ಸರಕಾರದ ರಾಜಕೀಯ ಪಕ್ಷಪಾತತನವನ್ನು ತೋರಿಸುತ್ತದೆ. ಇದು ನ್ಯಾಯದ ವಿಡಂಬನೆ ಎಂದು ವರ್ಣಿಸಿದ ಪಾಕಿಸ್ತಾನ ಸರಕಾರಕ್ಕೆ ಪ್ರತಿಭಟನೆ ಸಲ್ಲಿಸಲು ಒಂದು ಅವಕಾಶವನ್ನು ಒದಗಿಸಿದೆ.

ಹಿಂದೂ ಉಗ್ರಗಾಮಿಗಳು ಭಯೋತ್ಪಾದನೆ ದಾಳಿಗಳನ್ನು ಯೋಜಿಸಿದ್ದಾರೆ ಅಥವಾ ಕಾರ್ಯರೂಪಕ್ಕೆ ತಂದಿದ್ದಾರೆ ಎಂಬುದನ್ನು ಮೋದಿ ಸರಕಾರ ಗುರುತಿಸುವುದೂ ಇಲ್ಲ ಒಪ್ಪುವುದೂ ಇಲ್ಲ ಎನ್ನುವುನ್ನು ಸಮಝೋತಾ, ಮಲೆಗಾಂವ್, ಮೆಕ್ಕಾ ಮಸೀದಿ ಮತ್ತು ಅಜ್ಮೇರ್ ಷರೀಫ್ ಸ್ಫೋಟ ಪ್ರಕರಣಗಳು ತೋರಿಸಿಕೊಟ್ಟಿವೆ. ಮೋದಿ ಸರಕಾರದ ಪ್ರಕಾರ ಮುಸ್ಲಿಂ ಉಗ್ರಗಾಮಿಗಳು ಮಾತ್ರವೇ ಭಯೋತ್ಪಾದನೆ ಕೃತ್ಯಗಳನ್ನು ನಡೆಸುತ್ತಾರೆಯೇ ಹೊರತು ಹಿಂದೂ ಉಗ್ರಗಾಮಿಗಳಲ್ಲ. ಈ ಮೈನಡುಗಿಸುವ ಸಂದೇಶವನ್ನು ಸಾರಲು ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನೇ ಬುಡಮೇಲು ಮಾಡಲಾಗುತ್ತಿದೆ.

( ಕೃಪೆ : ಜನಶಕ್ತಿಯ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟವಾದ ಲೇಖನ)

ಅನು: ವಿಶ್ವ

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಲೋಕಾರೂಢಿ

ಶೋಷಿತ ಸಮುದಾಯಗಳ ಏಳಿಗೆಗೆ ಆರ್ಥಿಕ ಶಕ್ತಿ ಗಳಿಸುವುದೇ ಅಂತಿಮ ಪರಿಹಾರ

Published

on

Photo courtesy : The Guardian

ಲ್ಲರೂ ಹೇಳುತ್ತಾರೆ ಶೋಷಿತ ಸಮುದಾಯಗಳ ಏಳಿಗೆಗೆ ರಾಜಕೀಯ ಶಕ್ತಿ ಮಾಸ್ಟರ್ ಕೀ ಎಂದು. ಆದರೆ ವಾಸ್ತವ ಎಂದರೆ ಸದ್ಯದ ಜಾಗತೀಕರಣ ಮತ್ತು ಉದಾರೀಕರಣದ ಯುಗದಲ್ಲಿ ಆರ್ಥಿಕ ಶಕ್ತಿ ವಿಮೋಚನೆಯ ಪ್ರಬಲ ಅಸ್ತ್ರವಾಗುತ್ತದೆ. ಏಕೆಂದರೆ ರಾಜಕೀಯ ಅಧಿಕಾರ ಎಲ್ಲರೂ ಗಳಿಸುವುದು ಅಸಾಧ್ಯ. ಅದೂ ಅಲ್ಲದೇ ಈಗಿನ ಜಂಟಿ ಚುನಾಯಕ ಯುಗದಲ್ಲಿ ಅದಕ್ಕಾಗಿ ಭಾರಿ ಸರ್ಕಸ್ ಮಾಡಬೇಕಾಗುತ್ತದೆ. ಹಾಗೆಯೇ ರಾಜಕೀಯದಲ್ಲಿ ಭಾಗವಹಿಸುವವರ ಸಂಖ್ಯೆ ಕೂಡ ಕಡಿಮೆ. ಎಲ್ಲರೂ ಅತ್ತ ಪ್ರಯತ್ನ ಪಡಲಾಗುವುದಿಲ್ಲ. ಆದರೆ ಆರ್ಥಿಕ ಕ್ಷೇತ್ರ ಹಾಗಲ್ಲ. ಎಲ್ಲರೂ ಪ್ರಯತ್ನ ಪಡಬಹುದು, ಗಳಿಸಬಹುದು. ಇದಕ್ಕೆ ತಾಜಾ ಉದಾಹರಣೆ ಮುಸ್ಲಿಂ ಸಮುದಾಯ.

ರಾಜಕೀಯ ಮಾಡಬೇಕೆಂದರೆ ಜಾತಿ ಬಹು ದೊಡ್ಡ ತಡೆಗೋಡೆಯಾಗುತ್ತದೆ. ನಿಜ ಆರ್ಥಿಕ ಕ್ಷೇತ್ರದಲ್ಲೂ ಅದು ತಡೆಯಾಗುತ್ತದೆ. ಆದರೆ ಆರ್ಥಿಕ ಕ್ಷೇತ್ರದಲ್ಲಿ ಅವಕಾಶಗಳು ಜಾಸ್ತಿ ಯಾರು ಬೇಕಾದರೂ ಅದರಲ್ಲಿ ಭಾಗವಹಿಸಬಹುದು. ಮುಖ್ಯವಾಗಿ ಪ್ರಾಮಾಣಿಕ ಪ್ರಯತ್ನ ಮತ್ತು ದುಡಿಮೆಯನ್ನು ಅದು ಬಯಸುತ್ತದೆ. ಹಾಗೆಯೇ ನಿರುದ್ಯೋಗ ಶೋಷಿತ ಸಮುದಾಯಗಳ ಬಹು ದೊಡ್ಡ ಸಮಸ್ಯೆ. ಅಂದಹಾಗೆ ಈ ಸಮಸ್ಯೆಯನ್ನು ಸರ್ಕಾರದ ಕೃಪೆಗೆ ಬಿಟ್ಟು ನಾವು ಏನನ್ನೂ ಸ್ವಂತ ಪ್ರಯತ್ನ ಪಡದಿದ್ದರೆ ವಿಮೋಚನೆ ಹೊಂದುವುದಾದರೂ ಹೇಗೆ? ಹಾಗೆಯೇ ಸರ್ಕಾರಿ ನೌಕರಿಗಳು ಈಚಿನ ದಿನಗಳಲ್ಲಿ ಶೋಷಿತ ಸಮುದಾಯಗಳ ಯುವಕರಿಗೆ ಗಗನಕುಸುಮವಾಗುತ್ತಿವೆ.

ಹೀಗಿರುವಾಗ ಪರ್ಯಾಯ ಯೋಚಿಸದೆ ಬದುಕು ಕಟ್ಟಿಕೊಳ್ಳುವುದಾದರೂ ಹೇಗೆ? ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯ ಹೋರಾಟಕ್ಕಿಂತ ಆರ್ಥಿಕ ಶಕ್ತಿ ಗಳಿಸುವ ಹೋರಾಟಕ್ಕೆ ಶೋಷಿತ ಸಮುದಾಯಗಳು ಹೆಚ್ಚು ಆದ್ಯತೆ ಕೊಡಬೇಕಿದೆ. ಆರ್ಥಿಕವಾಗಿ ಉದ್ಯೋಗ ಬೇಡುವವರಿಗಿಂತ ನಾವು ನೀಡುವವರಾಗಿ ಬದಲಾಗಬೇಕಿದೆ. ಆಗ ಅಂತಹ ಸಂದರ್ಭದಲ್ಲಿ ನಾವು ಗಳಿಸುವ ಆರ್ಥಿಕ ಶಕ್ತಿಯನ್ನು ರಾಜಕೀಯ, ಧಾರ್ಮಿಕ, ಸಾಮಾಜಿಕ ಎಲ್ಲಾ ಕ್ಷೇತ್ರಕ್ಕೂ ಬಳಸಬಹುದು. ಈ ನಿಟ್ಟಿನಲ್ಲಿ ಆರ್ಥಿಕ ಶಕ್ತಿ ಶೋಷಿತ ಸಮುದಾಯಗಳ ವಿಮೋಚನೆಯ ಅಸ್ತ್ರ ಎಂಬುದನ್ನು ನಾವೆಲ್ಲ ಅರಿಯಬೇಕಾಗಿದೆ, ಗಳಿಸಲು ಮುನ್ನುಗ್ಗಬೇಕಾಗಿದೆ.

ರಘೋತ್ತಮ ಹೊ.ಬ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೋಕಾರೂಢಿ

2019 ರ ನಂತರ ‘ಸಬ್ ಕಾ ವಿಶ್ವಾಸ್’-ಮಾತು ಮತ್ತು ಕೃತಿಯ ಮೊದಲ ನೋಟ

Published

on

ಐದು ವರ್ಷಗಳ ಹಿಂದೆ ಭಾರೀ ಬಹುಮತದಿಂದ ಗೆದ್ದಿದ್ದ ಬಿಜೆಪಿ-ಎನ್‌ಡಿಎ ಸರಕಾರದ ನೇತೃತ್ವ ವಹಿಸಲಿದ್ದ ನರೇಂದ್ರ ಮೋದಿಯವರು ಸಂಸದ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ತಮ್ಮ ಮೊದಲ ಭಾಷಣ ಮಾಡುವ ಮೊದಲು ಸಂಸದ್ ಭವನವನ್ನು ಅದರ ಮೆಟ್ಟಲಲ್ಲಿ ತಲೆಯಿಟ್ಟು ನಮಿಸಿ ಪ್ರವೇಶಿಸಿದ್ದರು. ಈ ಬಾರಿ ಇನ್ನಷ್ಟು ಬಹುಮತದಿಂದ ಮತ್ತೆ ಪ್ರಧಾನ ಮಂತ್ರಿಯಾಗುವ ಮೊದಲು ಅದೇ ಸೆಂಟ್ರಲ್ ಹಾಲ್‌ನಲ್ಲಿ ನವ-ಚುನಾಯಿತ ಎನ್‌ಡಿಎ ಸಂಸದರನ್ನು ಉದ್ದೇಶಿಸಿ ಮಾತಾಡುವ ಮೊದಲು ಭಾರತ ಗಣರಾಜ್ಯದ ಸಂವಿಧಾನಕ್ಕೆ ತಲೆಬಾಗಿ ನಮಿಸಿದರು ಎಂದು ವರದಿಯಾಗಿದೆ.

ನಂತರ ತಮ್ಮ ಭಾಷಣದಲ್ಲಿ ಅವರು ಎನ್‌ಡಿಎ ಸಂಸದರಿಗೆ ತಮಗೆ ಮತನೀಡಿದವರ ವಿಶ್ವಾಸವನ್ನು ಉಳಿಸಿಕೊಳ್ಳಬೇಕು ಮಾತ್ರವಲ್ಲ, ಮತ ನೀಡದವರ ವಿಶ್ವಾಸವನ್ನು ಕೂಡ ಗಳಿಸಿಕೊಳ್ಳಬೇಕು ಎಂದು ಬುದ್ದಿವಾದ ಹೇಳಿದರು. ವಿಶೇಷವಾಗಿ ಅಲ್ಪಸಂಖ್ಯಾತರ ವಿಶ್ವಾಸವನ್ನು ಗಳಿಸಬೇಕು, ಏಕೆಂದರೆ ಇದುವರೆಗೆ ಪ್ರತಿಪಕ್ಷದವರು ತಮ್ಮ ಹುಸಿ ಜಾತ್ಯತೀತತೆಯ ಹೆಸರಲ್ಲಿ ಅವರನ್ನು ವೋಟ್ ಬ್ಯಾಂಕ್ ಮಾಡಿಕೊಂಡು ಮೋಸ ಮಾಡಿದ್ದಾರೆ ಎಂದು ಹೇಳುತ್ತ ಅವರು ತಮ್ಮ ಕಳೆದ ಬಾರಿಯ ‘ಸಬ್ ಕಾ ಸಾಥ್ ,ಸಬ್ ಕಾ ವಿಕಾಸ್ ‘ಘೋಷಣೆಗೆ ‘ಸಬ್ ಕಾ ವಿಶ್ವಾಸ್’ ಎಂಬುದನ್ನು ಸೇರಿಸಿದ್ದಾರೆ.

ಇದಕ್ಕೆ ಸಂಸದ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಮಾತ್ರವಲ್ಲ, ಹೊರಗೂ ಭಾರೀ ಕರತಾಡನವಾಗಿದೆ. ಕೆಲವು ವಿಶ್ಲೇಷಕರು ಇದೀಗ ಒಬ್ಬ ಮುತ್ಸದ್ದಿಯ ಮಾತು ಎಂದು ಅಭಿಮಾನ ವ್ಯಕ್ತಪಡಿಸಿದರೆ, ಇನ್ನು ಕೆಲವರು ಮೋದಿಯವರು ತಮ್ಮ ಮೊದಲ ಐದು ವರ್ಷಗಳಿಂದ ನಿಜವಾಗಿಯೂ ಪಾಟ ಕಲಿತಿದ್ದಾರೆ ಎಂದರು, ಆದರೆ ಮತ್ತೆ ಕೆಲವರಿಗೆ ಗೊಂದಲ, ನಿಜವಾಗಿಯೂ ಪಾಟ ಕಲಿತಿದ್ದಾರೆಯೇ ಎಂದು. ಹಲವಾರು ಜುಮ್ಲಾಗಳ ಐದು ವರ್ಷಗಳ ನಂತರ ಇಂತಹ ಜಿಜ್ಞಾಸೆ ಸಹಜ ಎನ್ನುತ್ತಾರೆ ಮತ್ತೆ ಕೆಲವರು.

ಪ್ರಧಾನಿಗಳ ಈ ಹೊಸ ಘೋಷಣೆಯ ಬೆನ್ನಲ್ಲೇ, ಮೇ 23ರಂದು ಚುನಾವಣಾ ಫಲಿತಾಂಶಗಳು ಪ್ರಕಟವಾದ ಒಂದೇ ವಾರದೊಳಗೆ ಕನಿಷ್ಟ ಆರು ಇಂತಹ ‘ವಿಶ್ವಾಸ ಗಳಿಸುವ’ ಘಟನೆಗಳು ಮತ್ತು ಎರಡು ಬಿಜೆಪಿ ಸಂಸದರ ಹೇಳಿಕೆಗಳು ಈ ಗೊಂದಲ/ಜಿಜ್ಞಾಸೆಯನ್ನು ಮತ್ತಷ್ಟು ಹೆಚ್ಚಿಸಿವೆ.

  • ಮೇ 23: ಗುಜರಾತಿನ ವಡೋದರಾ ಜಿಲ್ಲೆಯ ಮಹುವಾಡ್ ಹಳ್ಳಿಯಲ್ಲಿ ಮೋದಿಯವರ ಭಾಷಣದ ರಾತ್ರಿಯಂದೇ ಸುಮಾರು 200 ಮೇಲ್ಜಾತಿ ಜನಗಳು ಪ್ರವೀಣ್ ಮಕ್ವಾನ ಮತ್ತು ತರುಲತ ಮಕ್ವಾನ ಎಂಬ ದಲಿತ ದಂಪತಿಗಳನ್ನು ಥಳಿಸಿದರು. ಕಾರಣ ಎರಡು ದಿನಗಳ ಹಿಂದೆ ಪ್ರವೀಣ್ ಮಕ್ವಾನ ಊರ ದೇವಸ್ಥಾನವನ್ನು ಅಧಿಕಾರಿಗಳು ದಲಿತರಿಗೆ ಮದುವೆ ಕಾರ್ಯಕ್ರಮಗಳನ್ನು ನಡೆಸಲು ಬಿಡುತ್ತಿಲ್ಲ ಎಂದು ದೂರಿದ್ದರು. ಪೋಲೀಸರು 11 ಮಂದಿಯನ್ನು ಬಂಧಿಸಿದ್ದಾರೆ.
  • ಮೇ 24:ಗೋರಕ್ಷಕರೆಂದು ಹೇಳಿಕೊಳ್ಳುವವರ ಐದು ಜನಗಳ ಒಂದು ಗುಂಪು ಮಧ್ಯಪ್ರದೇಶದ ಸಿಯೊನಿ ಜಿಲ್ಲೆಯಲ್ಲಿ ಮೂವರು ಮುಸ್ಲಿಮರು ಗೋಮಾಂಸ ಒಯ್ಯುತ್ತಿದ್ದರು ಎಂಬ ಗುಮಾನಿಯ ಮೇಲೆ ದಾಳಿ ಮಾಡಿತು. ಇಬ್ಬರು ಗಂಡಸರನ್ನು ಮರಕ್ಕೆ ಕಟ್ಟಿ ಥಳಿಸಿತು. ಆಮೇಲೆ ಅವರನ್ನು ಬಿಡಿಸಿ ಅವರ ಜತೆಗಿದ್ದ ಮಹಿಳೆಗೆ ಜೈಶ್ರೀರಾಮ್ ಎನ್ನುತ್ತ ಅವರೇ ಚಪ್ಪಲಿನಿಂದ ಹೊಡೆಯಬೇಕೆಂದು ಆದೇಶಿಸುತ್ತಿದ್ದ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆಯಂತೆ.
  • ಮೇ 25 : ಸಂಜೆ, ಹರ್ಯಾಣದ ಗುರುಗ್ರಾಮದಲ್ಲಿ ಮುಸ್ಲಿಮರು ಧರಿಸುವ ಟೋಪಿಯನ್ನು ಧರಿಸಿದ್ದ ಒಬ್ಬ 25 ವರ್ಷದ ಯುವಕನನ್ನು ಒಂದು ಗುಂಪು ಅಟ್ಟಿಸಿಕೊಂಡು ಬಂತು. ಟೋಪಿ ತೆಗೆಯಲು ಹೇಳಿತು. ಆತ, ಮಹಮ್ಮದ್ ಬರ್ಕತ್, ತಾನು ಮಸೀದಿಯಿಂದ ನಮಾಜು ಮುಗಿಸಿ ಬರುತ್ತಿದ್ದೇನೆ ಎಂದ. ಟೋಪಿ ತೆಗೆದು ಭಾರತ್ ಮಾತಾಕೀ ಜೈ ಮತ್ತುಜೈಶ್ರೀರಾಮ್ಎನ್ನಲು ಆತನನ್ನು ತಾಕೀತು ಮಾಡಲಾಯಿತು, ಅತನನ್ನು ಥಳಿಸಿ ಶರ್ಟ್ ಹರಿದು ಆ ಗುಂಪು ಓಡಿ ಹೋಯಿತು.
  • ಮೇ 25:ಝಾರ್ಖಂಡ್‌ನ ಜಮಷೇದ್‌ಪುರದ ಅಧ್ಯಾಪಕ ಜೀತ್ರಾಯ್ ಹಂಸ್‌ದಾ ಅವರನ್ನು ಪೋಲೀಸರು ಬಂಧಿಸಿದರು. ಕಾರಣ ಸಂತಾಲ್ ಬುಡಕಟ್ಟಿಗೆ ಸೇರಿದ ಈತ ಜೂನ್ 2017ರಲ್ಲಿ ಗೋಮಾಂಸದ ವಿರುದ್ಧ ಭಾವಾತಿರೇಕದ ಬಗ್ಗೆ ಫೇಸ್‌ಬುಕ್‌ನಲ್ಲಿ ಆತಂಕ ವ್ಯಕ್ತಪಡಿಸಿದ್ದರು, ಸಂತಾಲರು ಭಾರತೀಯರಾದರೆ, ಅವರು ಹಿಂದೂ ಆಚರಣೆಗಳನ್ನು ಅಂಗೀಕರಿಸುವಂತೆ ಬಲವಂತ ಮಾಡುವ ಕಾನೂನು ತರಬಾರದು ಎಂದು ಬರೆದಿದ್ದರಂತೆ. ಎಬಿವಿಪಿ ಇದರ ವಿರುದ್ದ ಗಲಭೆ ಎಬ್ಬಿಸಿ ಎಫ್‌ಐಆರ್ ಹಾಕಿಸಿದ್ದರು, ಆದರೆ ಆಗ ಬಂಧಿಸಿರಲಿಲ್ಲ, 2018ರಲ್ಲಿ ನಿರೀಕ್ಷಣಾ ಜಾಮೀನು ಸಿಗದಿದ್ದರೂ ಬಂಧಿಸಿರಲಿಲ್ಲ, ಸಂತಾಲರ ಮತ ಕಳೆದುಕೊಳ್ಳುವಂತಾಗಬಾರದೆಂದು ಚುನಾವಣೆ ಮುಗಿಯುವುದನ್ನೇ ಕಾಯುತ್ತಿದ್ದಂತಿತ್ತು ಎನ್ನಲಾಗಿದೆ.
  • ಮೇ 26: ಒಬ್ಬ ಡಿಟರ್ಜೆಂಟ್ ಸೇಲ್ಸ್‌ಮನ್ ತನ್ನ ಬೈಕಿನಲ್ಲಿ ಬಿಹಾರದ ಬೇಗುಸರಾಯ್ ಜಿಲ್ಲೆಯ ಒಂದು ಹಳ್ಳಿಯ ಮೂಲಕ ಹಾದು ಹೋಗುವಾಗ ರಾಜೀವ್ ಯಾದವ್ ಎಂಬಾತ ಆತನನ್ನು ನಿಲ್ಲಿಸಿ ಹೆಸರು ಕೇಳಿದ. ಮಹಮ್ಮದ್ ಕಾಸಿಂ ಎಂಬ ಮಾತು ಕೇಳುತ್ತಲೇ ಆತನ ಮೇಲೆ ಗುಂಡು ಹಾರಿಸಿಯೇ ಬಿಟ್ಟ, ಇನ್ನೊಂದು ಗುಂಡು ಹೊಡೆಯಲು ಆತ ಸಿದ್ಧಮಾಡಿಕೊಳ್ಳುತ್ತಿದ್ದಾಗ ಕಾಸಿಂ ಆತನನ್ನು ಬದಿಗೆ ತಳ್ಳಿ ಅಲ್ಲಿಂದ ತಪ್ಪಿಸಿಕೊಂಡು ಈಗ ಆಸ್ಪತ್ರೆಯಲ್ಲಿದ್ದಾನೆ. ಅಲ್ಲಿದ್ದ ಯಾರೂ ತನ್ನ ನೆರವಿಗೆ ಬರಲಿಲ್ಲ ಎನ್ನುತ್ತಾನೆ.

ಇದು ದೂರದ ಒಂದು ಹಳ್ಳಿಯ ಘಟನೆಯಾದರೆ, ಅದೇ ದಿನ ದೇಶದ ರಾಜಧಾನಿಯ ಕೇಂದ್ರ ಭಾಗದಲ್ಲಿ ಕಾರ್ಯನಿಮಿತ್ತ ಪುಣೆಯಿಂದ ಬಂದಿದ್ದ ಪ್ರಖ್ಯಾತ ಸ್ತ್ರೀರೋಗತಜ್ಞ ಡಾ. ಅರುಣ್ ಗದ್ರೆಯವರನ್ನೂ ಇದೇ ರೀತಿ ಯುವಕರ ಗುಂಪೊಂದು ತಡೆದು ನಿಲ್ಲಿಸಿ ಅವರ ಧರ್ಮ ಯಾವುದೆಂದು ಕೇಳಿ ಜೈಶ್ರೀರಾಮ್ ಎಂದು ಹೇಳುವಂತೆ ಆಗ್ರಹಿಸಿದರು. ಇದನ್ನು ಅವರು ಪುಣೆಗೆ ಹೋದ ಮೇಲೆ ಮೇ 28ರಂದು ತಿಳಿಸುತ್ತ ಇದೊಂದು ಕ್ಷುಲ್ಲಕಘಟನೆ, ಇದರಿಂದ ಯಾವ ತೀರ್ಮಾನಕ್ಕೂ ಬರಬೇಡಿ ಎಂದು ಹೇಳಿರುವುದಾಗಿ ವರದಿಯಾಗಿದೆ.

ಬಹುಶಃ ಪ್ರಧಾನಿಗಳೂ ಹಾಗೆಯೇ ಭಾವಿಸಿರಬೇಕು, ಏಕೆಂದರೆ ಈ ಯಾವ ಘಟನೆಯ ಬಗ್ಗೆಯೂ ಅವರು ಕಳೆದ ಐದು ವರ್ಷಗಳಂತೆ , ಈಗವಿಶ್ವಾಸಗಳಿಸಿಕೊಳ್ಳುವಮುತ್ಸದ್ದಿತನದಸಲಹೆನೀಡಿದಮೇಲೂಏನೂ ಹೇಳಿರುವುದು/ಟ್ವೀಟ್ಮಾಡಿರುವುದು ವರದಿಯಾಗಿಲ್ಲ.

ಈ ಆರು ಘಟನೆಗಳ 9 ವ್ಯಕ್ತಿಗಳಲ್ಲಿ 5ಜನ ಮುಸ್ಲಿಮರು, ಇಬ್ಬರು ದಲಿತರು ಮತ್ತು ಒಬ್ಬರು ಆದಿವಾಸಿ ಕುಟುಂಬದವರು. ಎಲ್ಲ ಘಟನೆಗಳೂ ನಡೆದಿರುವುದು ಉತ್ತರ ಮತ್ತು ಮಧ್ಯ ಭಾರತದಲ್ಲಿ, ಅದಕ್ಕಿಂತ ಹೆಚ್ಚಾಗಿ ಇತ್ತೀಚಿನ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಗಳಿಸಿದ ಪ್ರದೇಶಗಳಲ್ಲಿ. ಇವು ಕೇವಲ ಆಕಸ್ಮಿಕ ಸಂಗತಿಗಳೇ?

ಈ ನಡುವೆ, ಬಹುಶಃ ಪ್ರಧಾನಿಗಳ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡ ನವ ಚುನಾಯಿತ ಬಿಜೆಪಿಯ ದಿಲ್ಲಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಗುರುಗ್ರಾಮದ ಘಟನೆಯನ್ನು ಖಂಡಿಸುತ್ತ ಮಹಮ್ಮದ್ ಬರ್ಕತ್‌ನನ್ನು ಥಳಿಸಿದವರಿಗೆ ಮಾದರಿ ಶಿಕ್ಷೆ ಕೊಡಬೇಕೆಂದು ಆಗ್ರಹಿಸಿದ್ದಾರೆ. ತಮಾಷೆಯೆಂದರೆ ಬಹಳಷ್ಟು ಆತನ ಬಿಜೆಪಿ ಗೆಳೆಯರು ಅವರ ಬೆಂಬಲಕ್ಕೆ ಬಂದಿಲ್ಲ, ಆತನಿಗೆ ಅನುಭವ ಸಾಲದು ಎಂದು ದೂರವುಳಿದರು ಎಂದು ವರದಿಯಾಗಿದೆ.

ಅತ್ತ ಉತ್ತರಪ್ರದೇಶದ ಅಲಿಘಡ್‌ನಿಂದ ಪುನರಾಯ್ಕೆಗೊಂಡಿರುವ ಬಿಜೆಪಿ ಸಂಸದ ಸತೀಶ್ ಗೌತಮ್ ಮಾತ್ರ ತನ್ನ ಸರ್ವೋಚ್ಚ ಮುಖಂಡರ ಮಾತನ್ನು ಗಂಭೀರವಾಗಿ ಪರಿಗಣಿಸಿದಂತೆಯೇ ಇಲ್ಲ. ಕೋಟ್ಯಂತರ ಮಂದಿ ನರೇಂದ್ರ ಮೋದಿಯವರ ಜಾಣ ಮುಖಂಡತ್ವಕ್ಕೆ ಅನುಮೋದನೆಯ ಮುದ್ರೆ ಒತ್ತಿದ ಮೇಲೂ ಅಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಬಿಜೆಪಿಗೆ ವಿರೋಧ ವ್ಯಕ್ತಪಡಿಸುವುದನ್ನು ಮುಂದುವರೆಸಿದರೆ ಆ ವಿಶ್ವವಿದ್ಯಾಲಯದ ಉಪಕುಲಪತಿಗಳು ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರಂತೆ.

ಈ ಬಗ್ಗೆಯೂ ಪ್ರಧಾನಿಗಳ ಟಿಪ್ಪಣಿ ಕೇಳಬಂದಿಲ್ಲ. ಈ ಸಂದರ್ಭದಲ್ಲಿ ಆಮೆರಿಕಾದ ಪ್ರಖ್ಯಾತ ಪತ್ರಿಕೆ ಟೈಮ್ ಅವರನ್ನು ಕೆಲವುದಿನಗಳಹಿಂದೆಯಷ್ಟೇ‘ಮಹಾ ವಿಭಜನಕಾರ ‘ಎಂದು ಹೇಳಿರುವುದನ್ನು ನೆನಪಿಸಿಕೊಳ್ಳುತ್ತ, ನಮ್ಮ ಪ್ರಧಾನಿಗಳಿಗೆ ವಿದೇಶಗಳಲ್ಲಿ, ಅದರಲ್ಲೂ ಪಾಶ್ಚಿಮಾತ್ಯರ ನಡುವೆ ತಮ್ಮ ಇಮೇಜಿನ ಬಗ್ಗೆ ಭಾರೀ ಕಾಳಜಿ ಎಂದು ಒಬ್ಬ ಟಿಪ್ಪಣಿಗಾರರು ನೆನಪಿಸಿದ್ದಾರೆ. ಬಹುಶಃ ಇದು ಮೇಲೆ ಹೇಳಿದ ಗೊಂದಲವನ್ನು ಸ್ವಲ್ಪ ತಿಳಿಗೊಳಿಸಬಹುದು. ಈಗ ಅದೇ ಪತ್ರಿಕೆಯಲ್ಲಿ ಮಹಾ ಒಗ್ಗಟ್ಟು ತಂದವರು ಎಂಬರ್ಥದ ಮತ್ತೊಂದು ಲೇಖನ ಪ್ರಕಟವಾಗಿದೆ!

ಇಲ್ಲಿ ಇನ್ನೊಂದು ಪ್ರಶ್ನೆಯೂ ಎದ್ದಿದೆ. ಇದುವರೆಗೆ ‘ಜಾತ್ಯತೀತತೆ’ ಮೋದಿಯವರ ಪಕ್ಷಕ್ಕೆ ನಕಲಿಎಂಬವಿಶೇಷಣದಜೊತೆಗೆಇರುತ್ತಿತ್ತು,ಅಲ್ಪಸಂಖ್ಯಾತರ ತುಷ್ಟೀಕರಣವಾಗಿತ್ತು. ಈಗ ಅಲ್ಪಸಂಖ್ಯಾತರೂ ವಂಚಿತರು ಎಂದುಒಪ್ಪಿಕೊಳ್ಳುತ್ತಸಬ್ ಕಾ ವಿಶ್ವಾಸ್ ಘೋಷಣೆ ಕೊಟ್ಟಿರುವಾಗ ಅದು ತುಷ್ಟೀಕರಣವಾಗಿ ಉಳಿದಿಲ್ಲ ಎಂದರ್ಥವಲ್ಲವೇ ಎಂದು ಒಬ್ಬ ವಿಶ್ಲೇಷಕರು ಆಶಾವಾದ ವ್ಯಕ್ತಪಡಿಸಿದ್ದಾರೆ. ಆದರೆ ಕಳೆದ ಒಂದು ವಾರದ ಘಟನೆಗಳು ಇಂತಹ ಆಶಾವಾದ ಹುಟ್ಟಿಸಿವೆಯೇ?.

(ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೋಕಾರೂಢಿ

ರಾಷ್ಟ್ರೀಯವಾದದ ಅನಶ್ತೇಶಿಯಾ

Published

on

ಕಳೆದ ಕೆಲವು ವರ್ಷಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಐಟಿ ಸೆಲ್ ಗಳು ಹೇಗೆ ಕೆಲಸ ಮಾಡಿವೆ ಎಂಬ ಒಂದು ಸಮೀಕ್ಷೆ ಮತ್ತು ಅವಲೋಕನ ನಡೆಸಿದರೆ ಕರ್ನಾಟಕದಲ್ಲಿ ಬಿಜೆಪಿ ಹೇಗೆ ಈ ಪ್ರಮಾಣದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಯಿತು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಸುಲಭ.

ಬಿಜೆಪಿ ಮತ್ತು ಸಂಘ ಪರಿವಾರ ತನ್ನ ಐಟಿ ಸೆಲ್ ನ್ನು ಪಕ್ಷದ ಅಂಗಸಂಘಟನೆಗಳಿಂದ ಹೊರತಾದ ವಿಷಯವಾಗಿ ನೋಡಲಿಲ್ಲ ಹಾಗೆಯೇ ಇದು ಐಟಿ ಸೆಲ್ ಎಂದರೆ ಪಕ್ಷ ಸಂಘಟನೆಗಿಂತ ಹೊರತಾದ ಒಂದು ವಿಷಯವಾಗಿಯೂ ನೋಡಲಿಲ್ಲ. ಬದಲಿಗೆ ಬದಲಾಗಿರುವ ಕಾಲಘಟ್ಟದಲ್ಲಿ ಸಂಘಪರಿವಾರ ಕಟ್ಟುವ ಹೊಸ ಹೊಸ ನರೇಟಿವ್ ಗಳನ್ನು ದೊಡ್ಡ ಮಟ್ಟದಲ್ಲಿ ಯುವ ಸಮೂಹಕ್ಕೆ ತಲುಪಿಸುವ ದಾರಿಯಾಗಿ ಅದು ಐಟಿ ಸೆಲ್ ನ್ನು ನೋಡಿತು. ಹೀಗಾಗಿ ಪಕ್ಷ ಸಂಘಟನೆಯ ಜೊತೆಜೊತೆಗೆ 24×7 ಆಧಾರದಲ್ಲಿ ವ್ಯವಸ್ಥಿತ, ಕೇಂದ್ರೀಕೃತ ಹಾಗೂ ಸಂಯೋಜಿತ ಐಟಿಸೆಲ್ ಕಟ್ಟಿತು.

ಅದು ಎಷ್ಟು ಪರಿಣಾಮಕಾರಿಯಾಗಿ ಇದನ್ನು ಮಾಡಿತು ಎನ್ನಲು ಒಂದು ಉದಾಹರಣೆ ನೀಡುವುದಾದರೆ, ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಅನ್ನಭಾಗ್ಯ ಮತದಾರರ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದು ಖಾತ್ರಿಯಾದಾಗ ಬಿಜೆಪಿ ಐಟಿಸೆಲ್ “ಅನ್ನಭಾಗ್ಯದಲ್ಲಿ ಕೇಂದ್ರ ಸರ್ಕಾರದ ಹಣವಿದೆ” ಎಂಬ ಸುಳ್ಸುದ್ದಿಯನ್ನು ಅಥವಾ ಕಟ್ಟುಕಥೆಯನ್ನು ರಾತ್ರೋರಾತ್ರಿ ಹರಿಬಿಟ್ಟಿತು. ಹಾಗೂ ಬಹುಪಾಲು ಯುವ ಸಮೂಹ ಇದನ್ನು ನಿಜ ಎಂದೇ ನಂಬಿಸುವಲ್ಲಿ ಐಟಿಸೆಲ್ ಯಶಸ್ವಿಯಾಯಿತು. ಇದನ್ನು ಹಾಗಲ್ಲ ಹೀಗೆ ಎಂದು ತಮ್ಮ ಕಾರ್ಯಕರ್ತರಿಗೆ ತಿಳಿಹೇಳುವ ಕನಿಷ್ಟ ಯಂತ್ರಾಂಗ ಕಾಂಗ್ರೆಸ್ ಬಳಿ ಇರಲಿಲ್ಲ.

ಹಾಗೆಯೇ ಬಿಜೆಪಿಯ ಇತ್ತೀಚಿನ ನುಡಿಗಟ್ಟುಗಳಾದ “ಹೊಸ ಭಾರತ” “ಗುಲಾಮರು” “ಲುಟಾಯೆನ್ ಗ್ಯಾಂಗ್” “ತುಕಡೇ ತುಕಡೇ ಗ್ಯಾಂಗ್” ಇತ್ಯಾದಿ ಪದಪುಂಜವನ್ನು ಬಹಳ ಯೋಜಿತ ರೀತಿಯಲ್ಲಿ ಯುವಜನರ ಮನಸ್ಸಿನಲ್ಲಿ ಚುಚ್ಚಿದ್ದು ಐಟಿಸೆಲ್.

ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ ಮತ್ತಿತರ ಪಕ್ಷಗಳ ಐಟಿ ಸೆಲ್ ಗಳು ಹೇಗೆ ಕೆಲಸ ಮಾಡಿದವೆಂದರೆ ಅವರ ಐಟಿ ಸೆಲ್ ಗಳಿಗೂ ಪಕ್ಷ ಸಂಘಟನೆಗೂ ಸ್ವಲ್ಪವೂ ಸಂಬಂಧವಿರಲಿಲ್ಲ, ಸಂಯೋಜನೆಯಿರಲಿಲ್ಲ, ಪರಸ್ಪರ ಸಹಕಾರವಿರಲಿಲ್ಲ. ಕರ್ನಾಟಕದ ಐಟಿ ಸೆಲ್ ಹೊಣೆ ವಹಿಸಿಕೊಂಡವರು ಟ್ವಿಟರ್ ಮೂಲಕ ಟ್ವೀಟ್ ಮಾಡುವುದೇ ಐಟಿ ಸೆಲ್ ಕೆಲಸ ಅಂದುಕೊಂಡರೇ ವಿನಃ ಹಳ್ಳಿಗಳಲ್ಲಿ ಇರುವ ಟ್ವಿಟರ್ ಗೊತ್ತಿರದ, ಕೇವಲ ವಾಟ್ಸಾಪ್ ಇರುವ ಯುವ ಕಾರ್ಯಕರ್ತರಿಗೆ ರಾಹುಲ್ ಗಾಂಧಿಯ ವಿಚಾರಗಳನ್ನು ತಲುಪಿಸಬೇಕು ಎನ್ನುವ ಯಾವ ಅಂದಾಜೂ ಹೊಂದಿರಲಿಲ್ಲ.

ಅಸಲಿಗೆ ಕಾಂಗ್ರೆಸ್ ನಲ್ಲಿ ಒಂದು ಐಟಿ ಸೆಲ್ ಇರಲಿಲ್ಲ. ಪರಸ್ಪರ ಕಚ್ಚಾಡುವ ಹಲವಾರು ಐಟಿ ಸೆಲ್ ಬಣಗಳು ಇದ್ದವು. ತಮ್ಮ ತಮ್ಮ ಬಣಗಳ ಮುಖಂಡರು ಹೇಳಿದ್ದಷ್ಟೇ ಮುಖ್ಯವಾಗಿತ್ತು. ಫೇಸ್‌ಬುಕ್‌ ನಂತಹ ಮಾಧ್ಯಮದಲ್ಲಿ ಕಾಂಗ್ರೆಸ್ ನಾಯಕರ ಅನುಯಾಯಿಗಳ ಹಲವಾರು ಪಡೆಗಳಿದ್ದವೇ ವಿನಃ ಅವುಗಳಿಗೆ ಯಾವ ಕೇಂದ್ರವೂ ಇರಲಿಲ್ಲ ಕಂಟ್ರೋಲೂ ಇರಲಿಲ್ಲ.
ಚುನಾವಣೆ ತಿಂಗಳಿದ್ದಾಗ ಮಾತ್ರ ಐಟಿ ಸೆಲ್ ಕೆಲಸಕ್ಕೆಂದು ಒಂದಷ್ಟು ಹಣ ನೀಡಿಬಿಟ್ಟರೆ, ಒಂದಷ್ಟು ಕಾರ್ಯಕರ್ತರನ್ನು ನಿಯೋಜಿಸಿದರೆ ಸಾಕು ಎಂಬಂತೆ ಕಾಂಗ್ರೆಸ್ ಭಾವಿಸಿತ್ತೆಂದರೆ ಅದಕ್ಕೆ ತಾವು ಯಾವುದರ ವಿರುದ್ಧ ಹೋರಾಡುತ್ತಿದ್ದೇವೆ ಎಂಬ ಪ್ರಜ್ಞೆ ಇತ್ತೇ?
ಇದರ ಪರಿಣಾಮ ಏನಾಯಿತೆಂದರೆ, ಮತದಾರರಲ್ಲಿ ಸಾಕಷ್ಟು ಸಂಚಲನ ಉಂಟು ಮಾಡಬಹುದಾಗಿದ್ದ “ನ್ಯಾಯ್” ನಂತಹ, ಕಾಂಗ್ರೆಸ್ ಪ್ರಣಾಳಿಕೆಯ ಪ್ರಮುಖ ಅಂಶ ಕೇವಲ ಕಾಂಗ್ರೆಸ್ ಕಾರ್ಯಕರ್ತರಲ್ಲಿಯೇ ಉಳಿಯಿತೇ ಹೊರತು ಹಳ್ಳಿಗಳ, ನಗರಗಳ ಯುವಕರಿಗಾಗಲೀ, ಇತರ ಮತದಾರರಿಗಾಗಲೀ ತಲುಪಲೇ ಇಲ್ಲ.

ಅಕಸ್ಮಾತ್ ಇದೇ ನ್ಯಾಯ್ ಯೋಜನೆ ಮೋದಿಯದ್ದಾಗಿದ್ದರೆ ಕೇವಲ ಎರಡು ದಿನ ಸಾಕಾಗಿತ್ತು ಅವರು ಅದನ್ನು ಮನೆಮನೆಗೆ ಕೇವಲ ಐಟಿಸೆಲ್ ಮೂಲಕ ತಲುಪಿಸಿಬಿಡುತ್ತಿದ್ದರು… ಅಂತಹ ಡಿಮಾನಿಟೈಸೇಶನ್ ನಂತಹ ಅನಾಹುತಕಾರಿ ಯೋಜನೆಯನ್ನೇ ದೇಶಕ್ಕೆ ಒಳ್ಳೆಯದು ಮಾಡುತ್ತದೆ ಎಂದು ಮೋದಿ ನಂಬಿಸಿದ್ದೇ ಐಟಿ ಸೆಲ್ ಮೂಲಕ ಅಲ್ಲವೇ?
ಇನ್ನು ಜೆಡಿಎಸ್ ಐಟಿ ಸೆಲ್ ವಿಷಯಕ್ಕೆ ಬಂದರೆ ಅದು ಪಕ್ಷ ಸಂಘಟನೆಗೆ ಪೂರಕವಾಗಿ ಕಾಂಗ್ರೆಸ್ ಗಿಂತಲೂ ಪರಿಣಾಮಕಾರಿಯಾಗಿ ಅಸೆಂಬ್ಲಿ ಚುನಾವಣೆಯಲ್ಲಿ ಕೆಲಸ ಮಾಡಿತ್ತು. ಆದರೆ ವ್ಯಕ್ತಿ ನಿಷ್ಠೆ ಮಾತ್ರವೇ ಮುಖ್ಯವಾಗಿಸಿಕೊಂಡ ಜೆಡಿಎಸ್ ಐಟಿಸೆಲ್ ರಾಷ್ಟ್ರದ ಹಿತಾಸಕ್ತಿಯಿಂದ ಬಿಜೆಪಿಯ ಯಾವುದೇ ನರೇಟಿವ್ ನ್ನು ಸೈದ್ಧಾಂತಿಕವಾಗಿ ಪ್ರತಿರೋಧಿಸುವ ಕೆಲಸ ಮಾಡಲೇ ಇಲ್ಲ. ಹೆಚ್ಚೆಂದರೆ ಅದು ಕುಮಾರಣ್ಣನನ್ನು, ನಿಖಿಲ್ ಕುಮಾರಸ್ವಾಮಿಯನ್ನು ಸಮರ್ಥಿಸುವುದೇ ರಾಷ್ಟ್ರೀಯ ಹಿತಾಸಕ್ತಿ ಆಗಿ ಮಾಡಿಕೊಂಡಿತ್ತು.

ಹೀಗೆ ಒಂದು ಕಡೆ ಬಿಜೆಪಿ ಐಟಿ ಸೆಲ್ ಮೊದಲಿಂದಲೂ ಆಕ್ರಮಣಕಾರಿ ನಿಲುವಿನಿಂದ ಕೆಲಸ ಮಾಡುತ್ತಿದ್ದರೆ ಮಿಕ್ಕ ಪಕ್ಷಗಳು ಪ್ರತಿ-ದಾಳಿ ದೂರದ ಮಾತು ಆತ್ಮ ರಕ್ಷಣೆಯನ್ನೂ ಸರಿಯಾಗಿ ನಡೆಸಲು ಸಾಧ್ಯವಿರದ ಸ್ಥಿತಿ ಉಂಟಾಗಿತ್ತು.

ಇದರ ನಡುವೆ ಕರ್ನಾಟಕದಲ್ಲಿ ಕಾಂಗ್ರೆಸ್, ಜೆಡಿಎಸ್ ಸದಸ್ಯರಲ್ಲದ ನೂರಾರು ಜನರು ಸಾಮಾಜಿಕ ಮಾಧ್ಯಮದಲ್ಲಿ ನಿರ್ವಹಿಸಿರುವ ಪಾತ್ರ ಶ್ಲಾಘನೀಯವಾದುದು… ಅತ್ಯಂತ ಕ್ರಿಯೇಟಿವ್ ಆದಂತಹ ಬರೆಹಗಳು, fact ಗಳು , ವ್ಯಂಗ್ಯಚಿತ್ರಗಳು ಸಂಘಪರಿವಾರದ ಹುನ್ನಾರಗಳನ್ನು ಬಯಲುಗೊಳಿಸಿವೆ.

ಆದರೆ ಇದ್ಯಾವುದೂ ಸಾಮಾನ್ಯ ಮತದಾರರನ್ನು ತಲುಪಲೇ ಇಲ್ಲ. ಮತದಾರರನ್ನು ತಲುಪಿದ್ದು “ಮತ್ತೊಮ್ಮೆ ಮೋದಿ” ಗುಂಪಿನ ವಿಚಾರಗಳು, ಪೋಸ್ಟರ್, ವಿಡಿಯೋಗಳು ಮಾತ್ರ.

ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಮತದಾರರನ್ನು ಪ್ರಜೆಗಳ ಸ್ಥಾನದಿಂದ ಕಿತ್ತು ಲಕ್ಷಾಂತರ ಮೋದಿಗಳನ್ನಾಗಿಸುವ ಕೆಲಸ ವ್ಯವಸ್ಥಿತವಾಗಿ ನಡೆಯಲಿದೆ. ಪ್ರಜಾಪ್ರಭುತ್ವವನ್ನು ಜನಪ್ರಿಯ ಸರ್ವಾಧಿಕಾರಿ ವ್ಯವಸ್ಥೆಯಾಗಿ ಮಾರ್ಪಡಿಸುವ, ಚಾಕುವಿನಿಂದ ಜನರ ಹೊಟ್ಟೆಗೆ ಇರಿಯುವುದೂ ಸಹ ವೈದ್ಯರ ಅಪರೇಶನ್ ನಂತೆ ಭಾಸವಾಗಿಸುವ ಕೆಲಸ ಐಟಿ ಸೆಲ್ ನೀಡುವ “ರಾಷ್ಟ್ರೀಯವಾದದ ಅನಶ್ತೇಶಿಯಾ”ದ ಮೂಲಕವೇ ನಡೆಯಲಿದೆ…

ಈಗಲೇ ಎಚ್ಚೆತ್ತುಕೊಂಡರೆ ದೇಶದ ಭವಿಷ್ಯವನ್ನು ಕಾಪಾಡುವ ಅವಕಾಶ ಅಲ್ಪ ಸ್ವಲ್ಪ ಉಳಿದುಕೊಂಡಿದೆ.

ಹರ್ಷಕುಮಾರ್ ಕುಗ್ವೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending