Connect with us
http://www.suddidina.com/category/political-news

ಲೋಕಾರೂಢಿ

‘ಅತ್ಯಾಚಾರ’ ಮಾನವ ನಿರ್ಮಿತ ವಿಕೃತಿ

Published

on

ಪುಟ್ಟ ಕಂದಮ್ಮ ಅದು. ನಲಿಯುತ್ತಾ-ಕಲಿಯುತ್ತಾ ಇರಬೇಕಾದ ವಯಸ್ಸಿನಲ್ಲಿ ಕುಟುಂಬದ ಕೆಲಸಕಾರ್ಯಗಳಿಗೆ ಹೆಗಲಾಗುತ್ತಿದ್ದವಳು. ಆಕೆಯ ಮೊಗದಲ್ಲಿನ ಮುಗ್ಧತೆ ಎಂತಹವರಲ್ಲಾದರೂ ಮುದ್ದು ಉಕ್ಕಿಸುವಂತಿತ್ತು. ಆದರೆ ಕಾಮುಕ ಕಣ್ಣುಗಳಿಗೆ ಆಕೆ ಭೋಗದ ವಸ್ತುವಾಗಿ ಕಂಡಳು. ಯಾವುದೋ ದ್ವೇಷಕ್ಕೆ ಆಕೆ ಪ್ರತೀಕಾರವಾಗಿ ತೋರಿದಳು. ಒಂದಲ್ಲಾ ಎರಡಲ್ಲ ಸತತ ಎಂಟು ದಿನಗಳ ಕಾಲ ಆಕೆಯ ಮೇಲೆ ಅಮಾನುಷವಾಗಿ ವಿಕೃತ ಮನಸ್ಸಿನ ಮೃಗಗಳು ಎರಗಿದವು. ಯಾವ ವ್ಯಕ್ತಿ ಮಾನ ಪ್ರಾಣ ರಕ್ಷಣೆ ಮಾಡುವ ಜವಾಬ್ದಾರಿ ಉಳ್ಳವನಾಗಿದ್ದನೋ ಆತನೇ ಆಕೆಯನ್ನು ಕಾಮಿಸಿದ್ದ. ಮತ್ತೊಬ್ಬ ದುರುಳ ತನ್ನ ಮೊಮ್ಮಗಳ ವಯಸ್ಸಿನ ಬಾಲೆಯ ಮೇಲೆ ಕಾಮಾಗ್ನಿ ಸುರಿಸಿದ್ದ.

ನಿರ್ಭಯಾ ಕೊಲೆ ಪ್ರಕರಣದ ನಂತರದ ದಿನಗಳಲ್ಲಿ ದೇಶಾದ್ಯಂತ ಅತಿಹೆಚ್ಚು ಸದ್ದು ಮಾಡುತ್ತಿರುವ ಪ್ರಕರಣವಿದು. ಅತ್ಯಾಚಾರ ನಡೆಸುವುದರ ಜೊತೆಗೆ ಹತ್ಯೆಯನ್ನೂ ನಡೆಸಿ ‘ಹತ್ಯಾಚಾರ’ದಂತಹ ಪಾತಕವೆಸಗುವ ರಕ್ಕಸರು ತಮ್ಮ ಕ್ರೌರ್ಯ ಮೆರೆಯುತ್ತಿದ್ದರೆ, ದೇಶದ ಜನತೆ ಅತ್ಯಾಚಾರದ ಪ್ರಕರಣಗಳಲ್ಲಿ ಕಾನೂನಿನೆಡೆಗಿನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತವೇ ಇವೆ. ಆದರೆ ಬಹುತೇಕ ಅತ್ಯಾಚಾರ ಪ್ರಕರಣಗಳು ಸಮಾಜಕ್ಕೆ ಅಂಜಿ, ಮಾನ-ಮರ್ಯಾದೆಯ ಹೆಸರಿನಲ್ಲಿ ಮುಚ್ಚಿಹೋಗುತ್ತವೆ. ದಾಖಲಾದ ಪ್ರಕರಣಗಳ ಸಂಖ್ಯೆ ಎಷ್ಟಿದೆಯೋ, ಅದಷ್ಟೇ ಪ್ರಮಾಣದಲ್ಲಿ ದಾಖಲಾಗದ ಪ್ರಕರಣಗಳೂ ಇವೆಯೆಂದರೆ ನಂಬಲೇಬೇಕು. ಹೆಣ್ಣಿಗೆ ದೇಹಪ್ರಕೃತಿಯೇ ಆಕೆಗೆ ಶಾಪವಾಗಿರುವುದು ವಿಪರ್ಯಾಸ. ‘ಶೀಲ’ವೇ ಹೆಣ್ಣಿನ ಪರಮೋಚ್ಛ ಆಸ್ತಿ ಎಂದು ನಮ್ಮ ಸಮಾಜ ಭಾವಿಸುತ್ತದೆ. ಪ್ರತೀಕಾರ ತೀರಿಸಿಕೊಳ್ಳಲು ದುರುಳರು ಇದನ್ನೊಂದು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಾರೆ. ಇನ್ನು ಹಸುಳೆಯ ಮೇಲೆ, ಮಕ್ಕಳ ಮೇಲೆ ಅತ್ಯಾಚಾರ ಎಸಗುವುದಿದೆಯಲ್ಲ, ಅದು ಯಾವ ಕಾರಣಕ್ಕೂ ಕ್ಷಮಾರ್ಹವಲ್ಲ.

‘ನ್ಯಾಶನಲ್ ಕ್ರೈಂ ರೆಕಾಡ್ರ್ಸ್ ಬ್ಯೂರೋ’ 2013ರಲ್ಲಿ ನೀಡಿದ ವರದಿಯ ಪ್ರಕಾರ 2012ರಲ್ಲಿ 24,923 ಅತ್ಯಾಚಾರ ಪ್ರಕರಣಗಳು ದೇಶಾದ್ಯಂತದಿಂದ ಬೆಳಕಿಗೆ ಬಂದಿವೆ. ಆಘಾತಕಾರಿ ಸಂಗತಿಯೇನು ಗೊತ್ತಾ? ಇಷ್ಟು ಪ್ರಕರಣಗಳಲ್ಲಿ 24,470 ಪ್ರಕರಣಗಳಲ್ಲಿ ಅಂದರೆ ಶೇ.98ರಷ್ಟು ಪ್ರಕರಣಗಳಲ್ಲಿನ ಆರೋಪಿಗಳು ಪರಿಚಯಸ್ಥರೇ ಆಗಿರುವುದು! ಆದ್ದರಿಂದಲೇ ಬಹುತೇಕ ಪ್ರಕರಣಗಳು ಸಂತ್ರಸ್ತೆಯ ಕಣ್ಣೀರಿನಲ್ಲೇ ಕೊಚ್ಚಿ ಹೋಗುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ನಡೆದ ದೌರ್ಜನ್ಯವನ್ನು ಖಂಡಿಸಿ, ದೂರು ದಾಖಲಿಸಿ, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗುವಂತೆ ಮಾಡಲು ಪಣ ತೊಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಮಾಧ್ಯಮಗಳ ಬೆಂಬಲ, ಜನರ ಸಹಕಾರ ಶೋಷಿತರಿಗೆ ಆಸರೆಯಾಗಿದೆ. ಎನ್‍ಸಿಆರ್‍ಬಿಯ 2015ರ ಅಂಕಿಅಂಶಗಳ ಪ್ರಕಾರ ಮಧ್ಯಪ್ರದೇಶದಲ್ಲಿ ಅತಿಹೆಚ್ಚು ಅತ್ಯಾಚಾರ ಪ್ರಕರಣಗಳು ನಡೆದಿವೆ.

ಇಲ್ಲಿಯವರೆಗೆ ಅತ್ಯಾಚಾರದ ವಿಷಯದಲ್ಲಿ ಕಾನೂನು ಸಹ ಕಠೋರವಾಗಿರಲಿಲ್ಲ. ಯಾವುದೇ ಸ್ವರೂಪದ ಅತ್ಯಾಚಾರ ಪ್ರಕರಣದ ಆರೋಪಿಗೆ ಗರಿಷ್ಠ ಜೀವಮಾನಪರ್ಯಂತದ ಜೈಲು ಶಿಕ್ಷೆ ವಿಧಿಸಬಹುದಿತ್ತು ಹಾಗೂ ಕನಿಷ್ಠ ಏಳು ವರ್ಷದ ಜೈಲು ಶಿಕ್ಷೆಯಿತ್ತು. ಆ ನಂತರ 2012ರಲ್ಲಿ ಯಾವಾಗ ನಿರ್ಭಯಾ ಪ್ರಕರಣಕ್ಕೆ ದೇಶ ಹೊತ್ತಿ ಉರಿಯಿತೋ, ಆಗ ಕ್ರಿಮಿನಲ್ ಕಾನೂನಿನಲ್ಲಿ ಕೆಲವೊಂದು ಬದಲಾವಣೆ ಮಾಡಲಾಯಿತು. ಅತ್ಯಾಚಾರದ ವೇಳೆ ಸಂತ್ರಸ್ತೆ ಮೃತಪಟ್ಟರೆ ಯಾ ದೈಹಿಕವಾಗಿ ಜರ್ಜರಿತಳಾದರೆ ಆರೋಪಿಗಳನ್ನು ಗಲ್ಲಿಗೇರಿಸುವ ಮಹತ್ತರ ಅಂಶ ಸೇರ್ಪಡೆಯಾಯಿತು. ಇದೀಗ ಪೋಕ್ಸೋ ಕಾಯಿದೆಯಲ್ಲಿ ಬದಲಾವಣೆ ತಂದು, ಸುಗ್ರೀವಾಜ್ಞೆ ಹೊರಡಿಸಿರುವ ಕೇಂದ್ರ ಸರ್ಕಾರ ಅಪ್ರಾಪ್ತರ ಅದರಲ್ಲೂ 12 ವರ್ಷದೊಳಗಿನ ಮಕ್ಕಳ ಮೇಲೆ (ಹೆಣ್ಣಾಗಿರಲಿ-ಗಂಡಾಗಿರಲಿ) ಅತ್ಯಾಚಾರ ನಡೆಸುವ ದುರುಳರಿಗೆ ಮರಣ ದಂಡನೆಗೆ ಅವಕಾಶ ನೀಡಿದೆ. ಇದು ಅತ್ಯಾಚಾರಿ ಮನಃಸ್ಥಿತಿಯನ್ನು ತಡೆಯುವಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕು.

ಇದನ್ನೆಲ್ಲ ನೋಡುತ್ತಿದ್ದರೆ, ಮಕ್ಕಳಿಗೆ ಲೈಂಗಿಕ ಶಿಕ್ಷಣದ ಅವಶ್ಯಕತೆ ಎಷ್ಟಿದೆ ಎನ್ನುವ ಅರಿವಾಗುತ್ತದೆ. ಚಿಕ್ಕ ಮಕ್ಕಳಿಗೆ ಲೈಂಗಿಕ ಶಿಕ್ಷಣವಾ? ಎಂದು ಮೂಗು ಮುರಿಯುವ ಮೊದಲು, ಭವಿಷ್ಯದಲ್ಲಿ ಅದು ಉಂಟು ಮಾಡುವ ಪರಿಣಾಮಗಳ ಕುರಿತು ಯೋಚಿಸಬೇಕಿದೆ. ಅವೈಜ್ಞಾನಿಕವಾಗಿ ಹುಟ್ಟಿಕೊಳ್ಳುವ ವಿಕೃತ ಮನಸ್ಸುಗಳನ್ನು ಈ ಮೂಲಕ ಖಂಡಿತ ತಡೆಗಟ್ಟಲು ಸಾಧ್ಯ. ಎಲ್ಲಕ್ಕಿಂತ ಹೆಚ್ಚಾಗಿ ಮಹಿಳೆಯರನ್ನು ಗೌರವಿಸುವ, ಮಾನವೀಯ ಗುಣಮೌಲ್ಯಗಳನ್ನು ಬಿತ್ತರಿಸುವ ನೈತಿಕ ಶಿಕ್ಷಣ ಇಂದಿನ ಜರೂರತ್ತು. ಹೆಣ್ಣನ್ನು ಭೋಗದ ಪರಿಧಿಯಾಚೆ ನಿಲ್ಲಿಸಿ, ಆಕೆಯ ಮಹತ್ವವನ್ನು ಸಾರುವ ಕೆಲಸ ಪ್ರತಿಯೊಂದು ಮಾಧ್ಯಮದ ಮೂಲಕ ಆಗಬೇಕು, ಜನರನ್ನು ತಲುಪಿ ಸ್ವಸ್ಥ ಸಮಾಜ ಬೆಳೆದು ನಿಲ್ಲಬೇಕು.

ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401

ಲೋಕಾರೂಢಿ

ಸಂವಿಧಾನ ಬದಲಾಯಿಸಿದರೆ ಏನಾಗುತ್ತೆ ? ಮಿಸ್ ಮಾಡ್ದೆ ಈ ಲೇಖನ ಓದಿ

Published

on

ಹಿಂದುತ್ವ, ಹಿಂದೂರಾಷ್ಟ್ರ ಎಂದು ಸಾವರ್ಕರ್, ಗೊಳ್ವಲ್ಕರ್ ಪಾದಗಳಿಗೆ ಅಡ್ಡ ಬೀಳಲು ಹೋಗುತ್ತಿರುವ ನಮ್ಮ ಕೆಲವು ಯುವಕರು ಈ ಲೇಖನವನ್ನು ಒಂದಲ್ಲದಿದ್ದರೆ ನಾಲ್ಕು ನಾಲ್ಕು ಸಾರಿ ಓದಿ. ನಿಮ್ಮ ಮನಸ್ಸು ತೃಪ್ತಿಯಾಗುವವರೆಗೂ ಓದಿ. ಆಗಲಾದರೂ ವಾಸ್ತವ ಅರ್ಥವಾದರೆ ಸಾಕು.

ಬಿಜೆಪಿಯ ಅನೇಕ ಮುಖಂಡರು ಸಂವಿಧಾನ ಬದಲಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಅವರ ಪ್ರಕಾರ ಸಂವಿಧಾನ ಬದಲಿಸುವುದು ಎಂದರೆ ಈಗಿರುವ ಅಂಬೇಡ್ಕರ್ ನಿರ್ಮಿತ ಸಂವಿಧಾನ ಬದಲಿಸಿ, ಮನುಧರ್ಮ ಆಧಾರತಿ ಸಂವಿಧಾನ ಜಾರಿಗೊಳಿಸುವುದು. ಆಗ ಏನಾಗುತ್ತದೆ ಎಂದು ತಿಳಿಯಲು ಈ ಲೇಖನ ಓದಿ.

1949 ರಲ್ಲಿ ಅಂದರೆ ನಮ್ಮ ದೇಶದ ಸಂವಿಧಾನ ಜಾರಿಯಾಗುವ ಒಂದು ವರ್ಷ ಮೊದಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ತನ್ನ ಮುಖವಾಣಿ ಪತ್ರಿಕೆಯಲ್ಲಿ ಹೀಗೆ ಬರೆದಿತ್ತು.“ಡಾ.ಬಿ.ಆರ್.ಅಂಬೇಡ್ಕರ್ ಕರಡು ಸಮಿತಿಯ ಅಧ್ಯಕ್ಷರಾಗಿ ರಚಿಸಿರುವ ಸಂವಿಧಾನದಲ್ಲಿ ಭಾರತೀಯತೆ ಇಲ್ಲವಾಗಿದೆ. ಈ ದೇಶದ ನೆಲದ ಕಾನೂನಾದ ಮನುಸ್ಮ್ರತಿಯಿಂದ ಏನೂ ಪಡೆದಿಲ್ಲ. ಹೀಗಾಗಿ ಈ ಸಂವಿಧಾನ ನಮಗೆ ಒಪ್ಪಿತವಲ್ಲ”

ಸಂಘಪರಿವಾರ ಗುರೂಜಿ ಎಂದು ಸಂಬೋಧಿಸುವ ಮಾ.ಸ.ಗೋಲ್ವಲ್ಕರ್ ಹೀಗೆಂದಿದ್ದ. “ಹಿಂದುಗಳಿಗೆ ಪ್ರಜಾಪ್ರಭುತ್ವ ತತ್ವಗಳು ಹೊರಗಿನವು. ಇಡೀ ಮನುಕುಲದ ಅತಿ ಶ್ರೇಷ್ಟ ಮತ್ತು ಮಹಾನ್ ಕಾನೂನು ರಚನೆಕಾರ ಮನು”. ಹಾಗೆಯೇ ಸಂಘಪರಿವಾರದ ಮತ್ತೊಬ್ಬ ಸಂಸ್ಥಾಪಕ, ಹಿಂದುತ್ವ ಪದ ಹುಟ್ಟುಹಾಕಿದವ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರಿಗೆ ತಪ್ಪೊಪ್ಪಿಗೆ ಬರೆದು ಕೊಟ್ಟಿದ್ದ ಸಾವರ್ಕರ್ ಹೀಗೆ ಹೇಳಿದ್ದ. ”ವೇದಗಳ ನಂತರ ಅತ್ಯಂತ ಪೂಜನೀಯ ಗ್ರಂಥ ಮನುಸ್ಮ್ರತಿ ಹಾಗೂ ದೇಶವನ್ನು ಅದರ ಆಧಾರದಲ್ಲಿ ನಡೆಸಬೇಕು”. ಮೊನ್ನೆ ಮೊನ್ನೆ ಕನ್ನಡದ ಸಾಹಿತಿ ಎಸ್ ಎಲ್ ಭೈರಪ್ಪ ಸಹ ಇದನ್ನೇ ಹೇಳಿದ್ದಾರೆ.

“ಭಾರತದ ಸಂವಿಧಾನದಲ್ಲಿ ಪರಂಪರೆ ಇಲ್ಲ- ಇದರಲ್ಲಿ ಇರುವ ತತ್ವಗಳು ಪಾಶ್ಚಾತ್ಯವಾದವು” ಎಂದು. 1950 ರ ಜನವರಿ 25 ರಂದು ಅಂದರೆ ಭಾರತ ಗಣರಾಜ್ಯವಾಗುವ ಒಂದು ದಿನ ಮೊದಲು RSS ಪತ್ರಿಕೆ Organizer ನಲ್ಲಿ “ಮನು ನಮ್ಮ ಹೃದಯವನ್ನಾಳುತ್ತಾನೆ” ಎಂಬ ಶೀರ್ಷಿಕೆಯಲ್ಲಿ ನಿವೃತ್ತ ನ್ಯಾಯಾಧೀಶ ಶಂಕರ ಸುಬ್ಬಾ ಐಯರ್ ಎಂಬಾತ ಆರೆಸ್ಸೆಸ್ ಪರವಾಗಿ ಲೇಖನ ಬರೆದು *ಮನುಸ್ಮ್ರತಿಯನ್ನೇ ದೇಶದ ಸಂವಿಧಾನವಾಗಿ ಜಾರಿ ಮಾಡಬೇಕು* ಎಂದು ಬರೆದಿದ್ದ. ನಿಮಗೆ ತಿಳಿದಿರಬಹುದು. ಬಾಬಾಸಾಹೇಬ್ ಅಂಬೇಡ್ಕರ್ ಮಹಾಡ್ ಸಮ್ಮೇಳನದಲ್ಲಿ ಮನುಸ್ಮ್ರತಿಯನ್ಜು ಸಾರ್ವಜನಿಕವಾಗಿ ಸುಟ್ಟು ಹಾಕಿದ್ದರು.ಹಾಗಾದರೆ ಈ ಮನು ಸ್ಮೃತಿ ಯಲ್ಲಿ ನಿಜಕ್ಕೂ ಏನಿದೆ? ಇದರಲ್ಲಿ ತಿಳಿಸಲಾದ ಕೆಲವು ಸಂಗತಿಗಳು ಹೀಗೆವೆ. ಓದಿ ನಿಮ್ಮ ತೀರ್ಮಾನಗಳಿಗೆ ನೀವು ಬನ್ನಿ.

ಅತ್ಯಂತ ಪ್ರಾಚೀನ ವೇದವಾದ ಋಗ್ವೇದದಲ್ಲಿ ಕಾಲಾನಂತರ ಬ್ರಾಹ್ಮಣರು ಪುರುಷ ಸೂಕ್ತ ಎಂಬ ಅಧ್ಯಾಯವನ್ನು ಸೇರಿಸಿದರು. ಅದರಲ್ಲಿರುವ 16 ಶ್ಲೋಕಗಳಲ್ಲಿ ಒಂದು ಹೀಗಿದೆ. “ಬ್ರಾಹ್ಮಣೋಸ್ಯ ಮುಖಮಸಿತ್/ ಬಾಹು ರಾಜನ್ಯ ಕೃತಃ/ಉರು ತಾಡಸ್ಯ ಯಾದ್ವೈಶ್ಯಾ:/ಪಾದ್ಯೋಗಂ ಶೂದ್ರೋ ಆಜಾಯತಾ” – ಭಾರತದಲ್ಲಿ ಜಾತಿ ವಿಷಬೀಜ ಬಿತ್ತಲು ಈ ಶ್ಲೋಕವನ್ನೇ ಬ್ರಾಹ್ಮಣರು ಬಳಸಿಕೊಂಡು ಬಂದಿದ್ದಾರೆ. ಯಾವುದೇ ಸಮಾರಂಭ, ಧಾರ್ಮಿಕ ಕಾರ್ಯಕ್ರಮದಲ್ಲಿ ಪುರೋಹಿತರು ಈ ಶ್ಲೋಕವನ್ನು ತಪ್ಪದೇ ಹೇಳುತ್ತಾರೆ. ಪುರುಷ ಸೂಕ್ತದ ಇದೇ ಶ್ಲೋಕವನ್ನು ಮನುಧರ್ಮ ಶಾಸ್ತ್ರದಲ್ಲಿ ಮನು ಕೂಡಾ ಮನುಧರ್ಮ ಶಾಸ್ತ್ರದಲ್ಲಿ ಪುನರುಚ್ಛರಿಸಿದ್ದಾನೆ. ಮನು ಹೇಳಿರುವುದು ಹೀಗೆ.

 1. ಲೋಕಗಳ ಉದ್ದಾರಕ್ಕಾಗಿ ಬ್ರಹ್ಮನು ತನ್ನ ಮುಖದಿಂದ ಬ್ರಾಹ್ಮಣನ ನ್ನೂ , ಭುಜದಿಂದ ಕ್ಷತ್ರಿಯನನ್ನೂ, ತೊಡೆಯಿಂದ ವೈಶ್ಯನನ್ನೂ, ಪಾದದಿಂದ ಶೂದ್ರ ನನ್ನೂ ಸೃಷ್ಟಿಸಿದನು ( ಅಧ್ಯಾಯ -1:31)
 2. ಮಹಾಪ್ರಭುವಾದ ಬ್ರಹ್ಮನು, ಪ್ರಸ್ತುತ ಮೂರು ವರ್ಣಗಳವರ್ಣಗಳ ( ಬ್ರಾಹ್ಮಣ, ಕ್ಷತ್ರಿಯ, ವೈಶ್ಯ) ನಿಸ್ವಾರ್ಥ ಸೇವೆ ಮಾಡುವುದೇ ಶೂದ್ರನ ಕರ್ತವ್ಯವೆಂದು ಆದೇಶಿಸಿದ್ದಾನೆ (ಅಧ್ಯಾಯ – 1:91)
 3. ಹುಟ್ಟುವಾಗಲೇ ಬ್ರಾಹ್ಮಣನು ಭೂಮಿಯಲ್ಲಿ ಆಳುವ ಅಧಿಕಾರ ಪಡೆದುಕೊಂಡು ಹುಟ್ಟಿರುತ್ತಾನೆ. ಮತ್ತು ಧರ್ಮ, ಸಂಪತ್ತಿನ ರಕ್ಷಣೆಗಾಗಿ ಅವನು ಸಕಲ ಜೀವಿಗಳ ಒಡೆಯನಾಗಿರುತ್ತಾನೆ (ಅಧ್ಯಾಯ -1:99)
 4. ಈ ಭೂಮಿಯಲ್ಲಿ ಸೇರಿರುವುದೆಲ್ಲವೂ ಬ್ರಾಹ್ಮಣನಿಗೆ ಸೇರಿದ್ದಾಗಿವೆ. ಬ್ರಾಹ್ಮಣ ನು ಶ್ರೇಷ್ಡವಾದ ಜನ್ಮವನ್ನು ಪಡೆದದ್ದರಿಂದ ಇವೆಲ್ಲವನ್ನೂ ಹೊಂದಲು ಅವನೇ ಅರ್ಹನಾಗಿರುತ್ತಾನೆ (ಅಧ್ಯಾಯ -1:100)
 5. ಬ್ರಾಹ್ಮಣನಿಗೆ ಶುಭ ಸೂಚಕವಾದ, ಕ್ಷತ್ರಿಯನಿಗೆ ಶಕ್ತಿ ಸೂಚಕವಾದ, ವೈಶ್ಯನಿಗೆ ಧನ ಸೂಚಕವಾದ ಹಾಗೂ ಶೂದ್ರನಿಗೆ ಅಸಹ್ಯ ಸೂಚಕವಾದ ಹೆಸರುಗಳನ್ನು ಇಡಬೇಕು (ಅಧ್ಯಾಯ -2:31)
 6. ಬ್ರಾಹ್ಮಣರಿಗೆ ಇಷ್ಟವಾಗುವ ಎಲ್ಲ ರುಚಿಕರ ಪದಾರ್ಥಗಳನ್ನು ಅವರಿಗೆ ನೀಡಬೇಕು. ಅವರ ಜೊತೆ ಪರಬ್ರಹ್ಮ ವಿಚಾರವನ್ನು ಚರ್ಚಿಸಬೇಕು. ಇದರಿಂದ ಪಿತೃಗಳಿಗೆ ಪ್ರೀತಿಯುಂಟಾಗುತ್ತದೆ (ಅಧ್ಯಾಯ -3:231)
 7. ಹಂದಿಯು ಮೂಸುವುದರಿಂದ, ಕೋಳಿಯ ರೆಕ್ಕೆಯ ಗಾಳಿ ತಾಕುವುದರಿಂದ, ನಾಯಿ ನೋಡುವುದರಿಂದ ಹಾಗೂ ಶೂದ್ರನ ಸ್ಪರ್ಶದಿಂದ ಬ್ರಾಹ್ಮಣ ಭೋಜನವು ನಾಶವಾಗಿ ಹೋಗುತ್ತದೆ (ಅಧ್ಯಾಯ – 3:241)
 8. ಶೂದ್ರರಾಜನ ರಾಜ್ಯದಲ್ಲಿ, ಅಧರ್ಮಿಗಳಿರುವ ಪ್ರದೇಶದಲ್ಲಿ ವೇದವಿರೋಧಿಗಳಾದ ಪಾಷಂಡಿಗಳ ಪ್ರಾಂತದಲ್ಲಿ, ಅಂತ್ಯಜರ ಸನಿಹದಲ್ಲಿ ಬ್ರಾಹ್ಮಣರು ವಾಸ ಮಾಡಬಾರದು (ಅಧ್ಯಾಯ -4:61)
 9. ಶೂದ್ರನಿಗೆ ವಿದ್ಯೆ ಕಲಿಸಬಾರದು. ಯಜ್ಞದ ಹವಿಸ್ಸಿನ ಶೇಷವನ್ನು ಕೊಡಬಾರದು. ಧರ್ಮೋಪದೇಶ ಮಾಡಬಾರದು. ವ್ರತಾಚರಣೆ ಹೇಳಿಕೊಡಬಾರದು. (ಅಧ್ಯಾಯ – 4:80)
 10. ಬ್ರಾಹ್ಮಣರನ್ನು ವಧಿಸಲು ದ್ವಿಜಾತಿಯವರು ದಂಡಗಳನ್ನೆತ್ತಿದರೆ ಬರಿ ಎತ್ತಿದ ಮಾತ್ರಕ್ಕೆ ನೂರು ವರ್ಷಗಳ ತನಕ ತಾಮಿಸ್ರವೆಂಬ ನರಕದಲ್ಲಿ ಬೀಳುತ್ತಾರೆ (ಅಧ್ಯಾಯ – 4:165)
 11. ಬೇಕು ಬೇಕೆಂದೇ ಯಾರಾದರೂ ಕೋಪಕೊಂಡು ಬ್ರಾಹ್ಮಣನಿಗೆ ಹೊಡೆದರೂ ಸಾಕು ಅವರು ಇಪ್ಪತ್ತೊಂದು ಜನ್ಮ ಕಳೆಯುವ ತನಕ ಹೀನಯೋನಿಗಳಲ್ಲಿ ಹುಟ್ಟುತ್ತಾನೆ (ಅಧ್ಯಾಯ -4:166)
 12. ಪುರಾಣಕಾಲದಲ್ಲಿ ಮಾಡಿದ ಯಜ್ಞಗಳಲ್ಲಿ ಬ್ರಾಹ್ಮಣ ಹಾಗೂ ಕ್ಷತ್ರಿಯರು ಮಾಡಿದಂತ ಯಾಗಗಳಲ್ಲಿ, ಶಾಸ್ತ್ರ ಗಳಲ್ಲಿ ತಿನ್ನಬಹುದೆಂದು ಹೇಳಿದ ಮೃಗಪಕ್ಷಿಗಳನ್ನು ಬಲಿನೀಡಿ ಅವುಗಳ ಮಾಂಸದಿಂದ ಪುರೋಡಾಶನವನ್ನು ( ಹವಿಸ್ಸನ್ನು) ಮಾಡಿದ್ದರು ( ಅ-5:23)
 13. ಬ್ರಾಹ್ಮಣರಿಗೆ ಅಪೇಕ್ಷೆಯುಂಟಾದಾಗ ಯಜ್ಞವಿಧಿಗಳಲ್ಲಿ ಮಂತ್ರಜಲದಿಂದ ಪ್ರೋಕ್ಷಿತವಾದ ಮಾಂಸವನ್ನು ಹಾಗೂ ಶಾಸ್ತ್ರವಿಧಿಗಳಲ್ಲಿ ಹೇಳಲಾದ ರೀತಿಯಿಂದ ಶ್ರಾದ್ಧದೂಟದಲ್ಲಿನ ಮಾಂಸವನ್ನು ತಿನ್ನಬಹುದು. ಹಾಗೆಯೇ ಆಹಾರ ಸಿಗದೆ ಪ್ರಾಣ ಸಂಕಟ ಉಂಟಾದಾಗ ಅನಿವಾರ್ಯವಾಗಿ ಮಾಂಸವನ್ನು ತಿನ್ನಬಹುದು (ಅಧ್ಯಾಯ -5:27)
 14. ಈ ಜಗತ್ತಿನಲ್ಲಿರುವ ಸಮಸ್ತ ಸ್ಥಾವರ ಜಂಗಮ ಜೀವ ಜಂತುಗಳನ್ನು, ಚರಾಚರ ವಸ್ತುಗಳನ್ನು ತಿನ್ನಲಿಕ್ಕೆಂದೇ ಪರಮಾತ್ಮ ನು ಸೃಷ್ಟಿಸಿದ್ದಾನೆ (ಅಧ್ಯಾಯ – 5:28)
 15. ಹೀಗೆ ಯಜ್ಞ, ಶ್ರಾದ್ಧ ಹಾಗೂ ಮಧುಪರ್ಕ ಇತ್ಯಾದಿ ಕಾರ್ಯಗಳಿಗಾಗಿ ಮಾತ್ರ ವೇದಜ್ಞನಾದ ಬ್ರಾಹ್ಮಣ ನು ಪಶುವನ್ನು ಕೊಂದರೆ ಅವನು ತನ್ನ ಜತೆಗೆ ಆ ಪಶುವಿಗೂ ಉತ್ತಮ ಗತಿಯನ್ನು ಉಂಟು ಮಾಡುತ್ತಾನೆ (ಅಧ್ಯಾಯ – 5:42)
 16. ಪತಿಯನಡತೆಯು ಚೆನ್ನಾಗಿಲ್ಲವಾದರೂ, ಅವನು ಕಾಮಾತುರನಾಗಿ ಅನ್ಯ ಹೆಂಗಸಲ್ಲಿ ಮನಸ್ಸಿಟ್ಟರೂ, ದುರ್ಗುಣಿಯಾಗಿದ್ದರೂ ಸಾಧ್ವಿಯಾದ ಆ ಹೆಂಗಸು ಆ ತನ್ನ ಪತಿಯನ್ನು ದೇವರೆಂದೇ ಭಾವಿಸಿ ಅವನ ಸೇವೆ ಮಾಡಬೇಕು (ಅಧ್ಯಾಯ – 5:154)
 17. ವಿದ್ಯೆ ಕಲಿತು ಗುರುಕುಲದಿಂದ ಹೊರಬರುವ ಬ್ರಾಹ್ಮಣ ವಿದ್ವಾಂಸರನ್ನು ರಾಜನು ಸತ್ಕರಿಸಬೇಕು. ವಿದ್ಯಾವಂತ ಬ್ರಾಹ್ಮಣರಿಗೆ ನೀಡುವ ನಿಧಿಯು ಅಕ್ಷಯವಾದ ಫಲವನ್ನು ಉಂಟುಮಾಡುತ್ತದೆ (ಅಧ್ಯಾಯ -7:82)
 18. ಯಾವ ರಾಜನ ನ್ಯಾಯಸಭೆಯಲ್ಲಿ ಶೂದ್ರನು ಧರ್ಮವಿಚಾರ ವಿಮರ್ಶೆ ಮಾಡುತ್ತಾನೋ, ಆ ರಾಜನ ದೇಶವು ಕೆಸರಿನಲ್ಲಿ ಬಿದ್ದ ಹಸುವಿನಂತಾಗಿ ಬಿಡುತ್ತದೆ. ಅಂತಹ ರಾಜನು ನೋಡು ನೋಡುತ್ತಿದ್ದಂತೆಯೇ ಕಷ್ಟ ಪಡುತ್ತಾನೆ (ಅಧ್ಯಾಯ -8:21)
 19. ಯಾವ ರಾಜ್ಯವು ಹೆಚ್ಚಾಗಿ ಶೂದ್ರರಿಂದ ತುಂಬಿರುತ್ತದೋ, ನಾಸ್ತಿಕರಿಂದ ಆಕ್ರಮಿಸಲ್ಪಡುತ್ತದೋ, ಬ್ರಾಹ್ಮಣರಹಿತವಾಗಿರುತ್ತದೋ ಆ ರಾಜ್ಯವು ದುರ್ಭಿಕ್ಷ ರೋಗಗಳಿಂದ ಜರ್ಜರಿತವಾಗಿ ಬೇಗನೆ ನಾಶವಾಗಿ ಬಿಡುತ್ತದೆ (ಅಧ್ಯಾಯ -8:22)
 20. ಪರಸ್ಪರ ವಿರುದ್ಧ ಸಾಕ್ಷಿಗಳು ಹೇಳಲ್ಪಟ್ಟಾಗ ರಾಜನು ಬಹುಮತದ ಅಭಿಪ್ರಾಯ ಮನ್ನಿಸಬೇಕು. ಸಮಾನ ಇಬ್ಬರಲ್ಲಿ ಪರಸ್ಪರ ವಿರುದ್ಧ ಸಾಕ್ಷಿ ನುಡಿದರೆ ಗುಣವಂತನ ಸಾಕ್ಷಿ ಮನ್ನಿಸಬೇಕು. ಗುಣವಂತರಲ್ಲಿ ವಿರೋಧ ಸಾಕ್ಷಿ ಉಂಟಾದಾಗ ರಾಜನು ಬ್ರಾಹ್ಮಣ ಶ್ರೇಷ್ಟನ ಸಾಕ್ಷಿನಂಬಬೇಕು (ಅಧ್ಯಾಯ -8:73)
 21. ಬ್ರಾಹ್ಮಣನನ್ನು ಬೈದರೆ ಕ್ಷತ್ರಿಯನಿಗೆ ನೂರು ಪಣಗಳ ದಂಡ, ವೈಶ್ಯನಿಗೆ ನೂರೈವತ್ತು ಅಥವಾ ಇನ್ನೂರು ಪಣಗಳ ದಂಡ. ಬ್ರಾಹ್ಮಣನನ್ನು ಬೈದ ಶೂದ್ರನಿಗೆ ವಧೆ ಶಿಕ್ಷೆ (ಮರಣ ದಂಡನೆ) ವಿಧಿಸಬೇಕು. (ಅಧ್ಯಾಯ – 8:627)
 22. ಉಪನಯನ ಸಂಸ್ಕಾರ ಹೊಂದಲು ಅರ್ಹತೆಯಿಲ್ಲದ ಶೂದ್ರನು ದ್ವಿಜಾತಿಯವರಾದ ಬ್ರಾಹ್ಮಣ ಕ್ಷತ್ರಿಯ ವೈಶ್ಯರನ್ನು ಹೀನವಾದ ಕೆಟ್ಟ ಮಾತುಗಳಿಂದ ಬೈದರೆ ಕೆಳ ಜಾತಿಯಲ್ಲಿ ಹುಟ್ಟಿದ ಆ ಶೂದ್ರನ ನಾಲಿಗೆಯನ್ನು ಛೇಧಿಸತಕ್ಕದ್ದು. ಏಕೆಂದರೆ ಅವನುಕೆಳ ಜಾತಿಯವನು (ಅಧ್ಯಾಯ -8:270)
 23. ಬ್ರಾಹ್ಮಣ, ಕ್ಷತ್ರಿಯ ವೈಶ್ಯ ಇವರ ಜಾತಿಯ ಹೆಸರುಗಳನ್ನೆತ್ತಿ ಹೀನಾಮಾನವಾಗಿ ಬೈದಂತ ಆ ಶೂದ್ರನ ಬಾಯಲ್ಲಿ ಕಾದ ಕಬ್ಬಿಣದ ಹತ್ತಂಗುಲ ಉದ್ದದ ಸರಳನ್ನಿಡಬೇಕು (ಅಧ್ಯಾಯ – 8:271)
 24. ಬ್ರಾಹಣರಿಗೆ ಅಹಂಕಾರದಂದ ಧರ್ಮವನ್ನು ಬೋಧಿಸುವ ಶೂದ್ರನಿಗೆ ರಾಜನು ಬಾಯಲ್ಲಿಹಾಗೂ ಕಿವಿಯಲ್ಲಿ ಕಾದ ಎಣ್ಣೆಯನ್ನು ಹಾಕಿಸಬೇಕು (ಅಧ್ಯಾಯ -8:272)
 25. ಬ್ರಾಹ್ಮಣ ಮೊದಲಾದ ಶ್ರೇಷ್ಟ ಜಾತಿಯವರನ್ನು ತನ್ನ ಕೈಕಾಲು ಮುಂತಾದ ಯಾವುದಾದರೂ ಅಂಗದಿಂದ ಅಂತ್ಯಜನು ( ಶೂದ್ರನು) ಹೊಡೆದರೆ ಅವನ ಆ ಅಂಗವನ್ನು ( ಕೈ ಕಾಲು ಇತ್ಯಾದಿಯನ್ನು ) ಕತ್ತರಿಸಬೇಕು. ಇದು ಮನುವು ಹೇಳಿದ ಶಾಸನವು (ಅಧ್ಯಾಯ -8:279)
 26. ಬ್ರಾಹ್ಮಣನ ಜತೆಗೆ ಒಂದೇ ಆಸನದಲ್ಲಿ ಕುಳಿತ ಅಂತ್ಯಜನಿಗೆ ಅಥವಾ ಶೂದ್ರನಿಗೆ ಸೊಂಟದಲ್ಲಿ ಬರೆ ಎಳೆದು ಊರಿನಿಂದ ಹೊರಗೆ ಹಾಕಬೇಕು ಅಥವಾ ಅವನ ಕುಂಡೆಯನ್ನು ಕತ್ತರಿಸಬೇಕು ( ಆಗ ಅವನು ಸಾಯಬಾರದು) (ಅಧ್ಯಾಯ – 8:281)
 27. ಶೂದ್ರನು ಬೇಕೆಂತಲೇ ಸೊಕ್ಕಿನಿಂದ ಬ್ರಾಹ್ಮಣನ ಮೇಲೆ ಉಗುಳಿದರೆ ಅವನ ತುಟಿ ಕತ್ತರಿಸಬೇಕು. ಮೂತ್ರ ಚೆಲ್ಲಿ ಅವಮಾಬಿಸಿದರೆ ಅವನ ಶಿಶ್ನ ಕತ್ತರಿಸಬೇಕು. ಬೇಕೆಂತಲೇ ಹೂಸು ಬಿಟ್ಟು ಅವಮಾನಿಸಿದರೆ ಅವನ ಗುದವನ್ನು ಕತ್ತರಿಸಬೇಕು (ಅಧ್ಯಾಯ -8:282)
  ತನಗಿಂತ ಮೇಲು ಜಾತಿಯವನೊಡನೆ ಸಂಭೋಗ ಬಯಸಿ ಕೂಡಿಕೊಂಡ ಕನ್ಯೆಗೆ ದಂಡ ಹಾಕಬಾರದು. ತನಗಿಂತ ಕೀಳು ಜಾತಿಯವನೊಡನೆ ಸಂಭೋಗ ಬಯಸಿದ ಕನ್ಯೆಯನ್ನು ಮನೆಯಲ್ಲಿಯೇ ಗೃಹಬಂಧನದಲ್ಲಿರಿಸಬೇಕು (ಅಧ್ಯಾಯ -8:365)
 28. ಓರ್ವ ವೈಶ್ಯನು ಓರ್ವ ಬ್ರಾಹ್ಮಣ ಸ್ತ್ರೀಯನ್ನು ಭೋಗಿಸಿದರೆ ಅವರ ಸರ್ವಸ್ವವನ್ನೂ ಕಸಿದುಕೊಂಡು ಅವನಿಗೆ ಒಂದು ವರ್ಷ ಸೆರೆಮನೆವಾಸ ವಿಧಿಸಬೇಕು. ಕ್ಷತ್ರಿಯನು ಬ್ರಾಹ್ಮಣ ಸ್ತ್ರೀಯನ್ನು ಕೆಡಿಸಿದರೆ ಅವನ ತಲೆಗೆ ಮೂತ್ರ ಹಚ್ಚಿ ಬೋಳಿಸಬೇಕು (ಅಧ್ಯಾಯ -8:375)
 29. ಪತಿ ಮೊದಲಾದವರಿಂದ ರಕ್ಷಿತಳಾಗಿರುವ ಬ್ರಾಹ್ಮಣ ಸ್ತ್ರೀಯನ್ನು ಕ್ಷತ್ರಿಯ ವೈಶ್ಯರು ಭೋಗಿಸಿದರೆ ಅವರಿಗೂ ಶೂದ್ರರಿಗೆ ವಿಧಿಸಿದಂತೆ ಸರ್ವಸ್ವಾಪರಹಾರದ ದಂಡ ಹಾಕಿ ಹುಲ್ಲಿನ ಬಣವೆಯಲ್ಲಿಟ್ಟು ಬೆಂಕಿಹಚ್ಚಿ ಅವರನ್ನು ಸುಡಬೇಕು (ಅಧ್ಯಾಯ -8:377)
 30. ಇಂತಹ ಅಪರಾಧ ಮಾಡಿದ ಬ್ರಾಹ್ಮಣನಿಗೆ ತಲೆ ಬೋಳಿಸಿ ಅವಮಾನಿಸಿದರೆ ಸಾಕು. ಅದು ಅವನ ಮಟ್ಟಿಗೆ ಮರಣದಂಡನೆಗೆ ಸಮನಾದ ಶಿಕ್ಷೆಯಾಗಿರುವುದು. ಉಳಿದವರಿಗೆ ಮಾತ್ರ ಮರಣದಂಡನೆಯನ್ನೇ ವಿಧಿಸಬೇಕು (ಅಧ್ಯಾಯ -8:379)
 31. ಒಬ್ಬ ಬ್ರಾಹ್ಮಣನು ಎಲ್ಲ ವಿಧದ ಅಪರಾಧ, ಪಾಪ ಮಾಡಿದರೂ ಅವನನ್ನು ಕೊಲ್ಲಬಾರದು. ಅವನ ಸರ್ವಸ್ವ ಅಪಹರಿಸಿ ಅವನನ್ನು ದೇಶದಿಂದ ಹೊರಕ್ಕೆ ಹಾಕಬೇಕು (ಅಧ್ಯಾಯ -8:380)
 32. ಶಯ್ಯೆ, ಆಸನ, ಅಲಂಕಾರ, ಇವುಗಳ ಮೋಹ, ಕಾಮ, ಕ್ರೋಧ, ಅಪ್ರಾಮಾಣಿಕತೆ, ಪತಿದ್ರೋಹ ಮತ್ತು ದುರ್ನಡತೆ ಇವೆಲ್ಲಾ ಸಾಮಾನ್ಯವಾಗಿ ಸ್ತ್ರೀಯಲ್ಲಿರುವ ಸ್ವಾಭಾವಿಕ ಗುಣಗಳು (ಅಧ್ಯಾಯ -9:17)
 33. ಸ್ತ್ರೀಯರಿಗೆ ಮಂತ್ರಪೂರ್ವಕವಾದ ಧರ್ಮ ಸಂಸ್ಕಾರಗಳಿಲ್ಲ ಎಂದು ಶಾಸ್ತ್ರ ಹೇಳುತ್ತದೆ. ಇಂದ್ರಿಯಗಳನ್ನು ನಿಗ್ರಹಿಸಲು ಮಂತ್ರಸಾಧನಗಳು ಸ್ತ್ರೀಯರಿಗೆ ಹೇಳಲ್ಪಟ್ಟಿಲ್ಲವಾದ್ದರಿಂದ ಅವರು ಸದಾ ಅಶುದ್ಧರಾಗಿಯೇ ಇರುತ್ತಾರೆ ಎಂಬುದು ಧರ್ಮದ ವಿಚಾರವಾಗಿದೆ. (ಅಧ್ಯಾಯ: 9:19)
 34. ಮೂವತ್ತು ವಯಸಿನ ಪುರುಷ ಹನ್ನೆರಡು ವಯಸ್ಸಿನ ಸುಂದರ ಕನ್ಯೆಯನ್ನು ಮದುವೆಯಾಗಬೇಕು. ಇಲ್ಲವೇ ಇಪ್ಪತ್ತನಾಲ್ಕು ವರ್ಷದವನು ಎಂಟು ವರ್ಷದ ಕನ್ಯೆಯನ್ನು ಮದುವೆ ಮಾಡಿಕೊಳ್ಳಬೇಕು. ಅದಕ್ಕಿಂತ ಮೊದಲೇ ವಿವಾಹವಾದವನು ತೊಂದರೆ ಅನುಭವಿಸುತ್ತಾನೆ (ಅಧ್ಯಾಯ: 9:94)
 35. ರಾಜನು ತನ್ನ ಮೇಲೆ ಎಷ್ಟೇ ಸಂಕಷ್ಟಗಳ ಬಂದೆರಗಿದರೂ ಬ್ರಾಹ್ಮಣರ ಮೇಲೆ ಕೋಪಗೊಳ್ಳಬಾರದು. ಏಕೆಂದರೆ ಬ್ರಾಹ್ಮಣನ ಶಾಪದಿಂದ ರಾಜನ ಸರ್ವಸ್ವವೂ ನಷ್ಟವಾಗಿಬಿಡುವುದು (ಅಧ್ಯಾಯ -9:313)
 36. ಬ್ರಾಹ್ಮಣರು ಕೋಪಗೊಂಡರೆ ಹೊಸ ಲೋಕಗಳನ್ನೇ ಸೃಷ್ಟಿಸಬಲ್ಲರು. ಹೊಸ ಲೋಕಪಾಲರನ್ನು ನೇಮಿಸಬಲ್ಲರು.ದೇವತೆಗಳ ದೈವತ್ವವನ್ನೇ ಅಳಿಸಿಬಿಡಬಲ್ಲರು. ಅಂಥ ಬ್ರಾಹ್ಮಣರನ್ನು ರೇಗಿಸಿ ಯಾವ ರಾಜ ತಾನೇ ಸಮೃದ್ಧಿ ಹೊಂದಬಲ್ಲನು? (ಅಧ್ಯಾಯ -9:315)
 37. ಬ್ರಾಹ್ಮಣನ ಸೇವೆಯೇ ಶೂದ್ರನ ವಿಶಿಷ್ಟ ಕರ್ತವ್ಯವಾಗಿದೆ. ಅವನು ಬೇರೆ ಕೆಲಸ ಮಾಡಿದರೆ ಅವನಿಗೆ ಯಾವ ಫಲವೂ ಸಿಗುವುದಿಲ್ಲ (ಅಧ್ಯಾಯ -10:123)
 38. ಹಣ ಸಂಪಾದನೆ ಮಾಡುವ ಸಾಮರ್ಥ್ಯವು ಇದ್ದರೂ ಶೂದ್ರನು ಹಣ ಸಂಪಾದಿಸಬಾರದು. ಹಣ ಸಂಪಾದನೆ ಮಾಡಿದರೆ ಶೂದ್ರನು ಬ್ರಾಹ್ಮಣರನ್ನು ಕಡೆಗಣಿಸುತ್ತಾನೆ (ಅಧ್ಯಾಯ -10:129)

ಇಂದು ಬಹಳಷ್ಟು ಶೂದ್ರ ಯುವಕರು ಕಂಕಣ ಬದ್ಧರಾಗಿ ಹಿಂದುತ್ವಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ. ಅವರಿಗೆ ಮನುಧರ್ಮ ವನ್ನು ಆಧರಿಸಿದ ಹಿಂದುತ್ವ ಯಶಸ್ವಿಯಾದರೆ ಎಂತಹ ವ್ಯವಸ್ಥೆಯನ್ನುವ RSS/ BJP ತರಲಿವೆ ಎಂಬುದು ತಿಳಿಯಲಿ. ನಮ್ಮ ಭಾರತದಲ್ಲಿ ಜನಜೀವನ ಮತ್ತು ಸಂಸ್ಕೃತಿ ಹಾಗೂ ಧರ್ಮಗಳು ಶುರುವಾಗಿದ್ದು ನಲವತ್ತು ಸಾವಿರ ವರ್ಷಗಳ ಹಿಂದೆ. 9 ಸಾವಿರ ವರ್ಷಗಳ ಹಿಂದೆ ವಿಶ್ವ ಪ್ರಸಿದ್ಧ ಹರಪ್ಪಾ ನಾಗರಿಕತೆ ಆರಂಭವಾಗಿತ್ತು.
ಇಷ್ಟು ಕಾಲದವರೆಗೂ ಈ ದೇಶದಲ್ಲಿ ಬ್ರಾಹ್ಮಣರಾಗಲೀ ಅವರ ಪೂರ್ವಿಕರಾಗಲೀ ಇರಲೇ ಇಲ್ಲ.

ಕೇವಲ ಮೂರೂವರೆ ಸಾವಿರ ವರ್ಷಗಳ ಹಿಂದೆ ಇಲ್ಲಿಗೆ ದಾಳಿ ನಡೆಸಿ ಈ ದೇಶದ ಧರ್ಮ ಸಂಸ್ಕೃತಿಗಳ ಮೇಲೆ ತಮ್ಮ ವೈದಿಕ ಸಂಸ್ಕೃತಿ, ಬ್ರಾಹ್ಮಣ ಧರ್ಮವನ್ನು ಹೇರಿದರು. ಅಸ್ಪೃಶ್ಯತೆ ಜಾರಿಗೊಳಿಸಿದರು.

ಇವತ್ತು ಅದನ್ನೇ ಭಾರತೀಯತೆ, ಪರಂಪರೆ ಎಂದು ಕರೆದು ವೈದಿಕ ಪೂರ್ವದಲ್ಲಿ ಇದ್ದ ಪ್ರಜಾಪ್ರಭುತ್ವ ಪದ್ಧತಿಯನ್ನು ಪಾಶ್ವಿಮಾತ್ಯ ತತ್ವ ಎನ್ನುತ್ತಿದ್ದಾರೆ.

ನಾವೀಗ ಎಚ್ಚೆತ್ತುಕೊಳ್ಳದಿದ್ದರೆ ಭಾರತದ ಸರ್ವನಾಶ ಖಂಡಿತ.

( ಮನುಸ್ಮೃತಿ ಕುರಿತು ಹೆಚ್ಚಿನ ಆಸಕ್ತಿಯಿದ್ದವರು ಶೇಷ ನವರತ್ನ ಅವರು ಸಂಸ್ಕೃತದಿಂದ ಯಥಾವತ್ತಾಗಿ ಕನ್ನಡಕ್ಕೆ ಅನುವಾದಿಸಿರುವ (ಸಂಸ್ಕೃತ ಶ್ಲೋಕಗಳ ಸಮೇತ) 200 ಪುಟಗಳ ಮನುಸ್ಮೃತಿ ಪುಸ್ತಕವನ್ನು ತರಿಸಿಕೊಂಡು ಓದಬಹುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೋಕಾರೂಢಿ

ನಿರುದ್ಯೋಗ, ಬಡತನ ಮತ್ತು ಮೋದಿ ವರ್ಷಗಳು

Published

on

 • ಭಾರತದಲ್ಲಿ ಉದ್ಯೋಗಿ ಮತ್ತು ನಿರುದ್ಯೋಗಿ ಎಂಬ ಸರಳ ವಿಂಗಡಣೆ ಸಾಧ್ಯವಿಲ್ಲ. ಆದ್ದರಿಂದ ಉದ್ಯೋಗದ ಪ್ರಮಾಣವನ್ನು ತಿಳಿಯುವ ಒಂದು ವಿಧಾನವೆಂದರೆ ‘ಉದ್ಯೋಗ ವರಮಾನ’ವನ್ನು ಪರಿಶೀಲಿಸುವುದು. ಇದನ್ನು ಅಳೆಯುವ ಒಂದು ವಿಧಾನವೆಂದರೆ, ಆಹಾರ ಸೇವನೆಯಲ್ಲಿ ಕಾಳುಗಳ ತಲಾ ಲಭ್ಯತೆ. ಇದು ದುಡಿಯುವ ಜನ ವಿಭಾಗಗಳಿಗೆ ಮೋದಿ ಆಳ್ವಿಕೆಯ ವರ್ಷಗಳಲ್ಲಿ ಸತತವಾಗಿ ಇಳಿಯುತ್ತ ಬಂದಿದೆ. ಅಂದರೆ ಬಡತನವನ್ನು ಅಳೆಯುವ ಕ್ಯಾಲೊರಿ ಸೇವನೆಯ ಪ್ರಮಾಣವೂ ಇಳಿಯುತ್ತ ಬಂದಿದೆ. ಆದರೆ ಮೋದಿ ಸರಕಾರ, ನಿಜವಾಗಿಯೂ ಬಡತನ ಮತ್ತು ನಿರುದ್ಯೋಗವನ್ನು ಅನುಭವಿಸುತ್ತಿರುವ ಜನತೆಗೆ ಅವರ ಪರಿಸ್ಥಿತಿಗಳಿಗೆ ಸಂಬಂಧಪಟ್ಟ ಅಂಕಿ-ಅಂಶಗಳು ಗೊತ್ತಾಗದಂತೆ ತಡೆಹಿಡಿಯುವ ಮೂಲಕ, ಸರ್ವಾಧಿಕಾರಶಾಹಿತ್ವವನ್ನು ಮಾತ್ರವಲ್ಲ, ತಮಗೆ ಬಡತನ, ನಿರುದ್ಯೋಗ ಇಲ್ಲ ಎಂದು ಜನರು ಯೋಚಿಸುವಂತೆ ಮಾಡಬಹುದು ಎಂದು ನಂಬುವ ಮೂರ್ಖತನವನ್ನೂ ಪ್ರದರ್ಶಿಸಿದೆ.

ಶಿಮ್ಲಾದ ಕಾರ್ಮಿಕ ಬ್ಯೂರೋದಿಂದ ಹಿಡಿದು ಭಾರತೀಯ ಆರ್ಥಿಕ ವೀಕ್ಷಣಾ ಕೇಂದ್ರ(ಸಿಎಂಐಇ), ಮತ್ತು ಆಕ್ಸ್‌ಫಾಮ್ ವರೆಗೆ ಹಲವಾರು ಸಂಸ್ಥೆಗಳು ಭಾರತದಲ್ಲಿ ಈಗ ಗಂಭೀರವಾಗಿರುವ ನಿರುದ್ಯೋಗ ಪರಿಸ್ಥಿತಿಯತ್ತ ಗಮನ ಸೆಳೆದಿವೆ. ಆದರೆ ಸರ್ಕಾರ ಇದನ್ನು ನಿರಂತರವಾಗಿ ನಿರಾಕರಿಸುತ್ತಾ ಬಂದಿರುವುದೇ ಅಲ್ಲದೇ, ತಾನು ಒಪ್ಪದ ಅಧಿಕೃತವಾದ ಅಂಕಿ ಅಂಶಗಳನ್ನೇ ಮುಚ್ಚಿಹಾಕಿದೆ.

ಈಗಿನ ಸರ್ಕಾರದ ಸ್ಥಿತಿ ಕಥೆಗಳಲ್ಲಿ ಬರುವ ಪರದೆ ಹಿಂದೆ ಬಿಚ್ಚಿಟ್ಟು ಕೊಂಡಿರುವ ಕಳ್ಳನ ರೀತಿಯದಾಗಿದೆ. ಅವನ ಬೂಟುಗಳು ಪರದೆಯ ಕೆಳಗೆ ಕಾಣುತ್ತಿರುವಂತೆ ಬೇರೆ ಬೇರೆ ಕಡೆಗಳಲ್ಲಿ ಸಿಗುವ ಅಂಕಿ ಅಂಶಗಳು ಸತ್ಯವನ್ನು ಹೊರಗೆಡಹುತ್ತಿವೆ. ಈ ವಿವಿಧ ಸ್ಥಳಗಳೆಂಬುದು ಯಾವುದೋ ದೂರದ ಮೂಲಗಳಲ್ಲ, ಸರಕಾರದ ವಾರ್ಷಿಕ ಆರ್ಥಿಕ ಸರ್ವೇಯಲ್ಲಿ ಪ್ರಮುಖವಾದ ಕೋಷ್ಟಕಗಳಲ್ಲಿ ಪ್ರಕಟವಾಗಿರುವಂತವುಗಳೇ.

ನಿರುದ್ಯೋಗದ ವಿಷಯ ಬಹಳ ನಾಜೂಕಿನದ್ದು, ಅದೂ ಭಾರತದಲ್ಲಿ. ಆದ್ದರಿಂದ ಈ ಬಗ್ಗೆ ಎಚ್ಚರವಹಿಸಬೇಕು. ಇಲ್ಲಿರುವುದು ಉದ್ಯೋಗಿ ಮತ್ತು ನಿರುದ್ಯೋಗಿ ಎಂಬ ಸರಳ ವ್ಯತ್ಯಾಸವಲ್ಲ. ಇದು ವಾಸ್ತವವಾಗಿ, ಅರೆ ಉದ್ಯೋಗ, ಕೆಲವು ಗಂಟೆಗಳ ಉದ್ಯೋಗ, ತಾತ್ಕಾಲಿಕ ಉದ್ಯೋಗ, ಹಂಗಾಮಿ ಉದ್ಯೋಗ ಇವೆಲ್ಲದರ ಮಿಶ್ರಣವಾಗಿರುತ್ತದೆ. ಕೆಲವಷ್ಟೇ ಜನರಿಗೆ ಮಾತ್ರ ಅವರ ಇಷ್ಟದಂತೆ ಪೂರ್ಣ ಪ್ರಮಾಣದ ಉದ್ಯೋಗ ಲಭಿಸಿರುತ್ತದೆ.

ಆದ್ದರಿಂದ ಉದ್ಯೋಗದ ಪ್ರಮಾಣ ಏರಿದೆಯೆಂದರೆ ಎಷ್ಟರ ಮಟ್ಟಿನ ಉದ್ಯೋಗ ಎಂದು ನೋಡಬೇಕಾಗಿದೆ. ಮತ್ತು ಇದು ತಿಳಿಯುವ ಒಂದು ವಿಧಾವೆಂದರೆ ನಿಜ ವರಮಾನದ ಹೆಚ್ಚಳ ಎಷ್ಟಾಗಿದೆ ಎಂಬುದನ್ನು ಪರಿಶೀಲಿಸುವುದು.

ಆರ್ಥಿಕ ತಜ್ಞರು ಈ ಹೆಚ್ಚಳವನ್ನು ಅಳೆಯಲು ಉದ್ಯೋಗ ವರಮಾನ ಎಂಬ ಪದವನ್ನು ಬಳಸುತ್ತಾರೆ. ನಿರುದ್ಯೋಗ ಎಂದರೆ ಒಟ್ಟು ದುಡಿಯುವ ಜನಗಳಲ್ಲಿ ಒಂದು ನಿರ್ದಿಷ್ಟ ಮಿತಿಗಿಂತ ಕಡಿಮೆ ವರಮಾನ ಪಡೆಯುವವರ ಅನುಪಾತ ಎಂದು ಕಾಣಬಹುದು. ನಿರುದ್ಯೋಗ ಕಡಿಮೆಯಾದಾಗ ಸುಮಾರಾಗಿ ಹೇಳುವುದಾದರೆ, ದುಡಿಯುವ ಜನವಿಭಾಗಗಳ ತಲಾ ವರಮಾನ ಹೆಚ್ಚಾಗಬೇಕಾಗುತ್ತದೆ. ಅದರಂತೆ ನಿರುದ್ಯೋಗ ಹೆಚ್ಚಾದಾಗ ದುಡಿಯುವ ವ್ಯಕ್ತಿಗಳ ತಲಾ ವರಮಾನ ಸಹಜವಾಗಿಯೇ ಕುಸಿಯುತ್ತದೆ. ಆದ್ದರಿಂದ ನಾವು ಉದ್ಯೋಗದ ಹಂತಗಳಿಗೂ ದುಡಿಯುವ ಜನರಿಗೂ ಮತ್ತು ಅವರ ತಲಾ ವರಮಾನಕ್ಕೂ ಸಂಬಂಧವಿರುವುದನ್ನು ಅಧಾರ ಸೂತ್ರವಾಗಿ ಪರಿಗಣಿಸಬಹುದು. ಮೋದಿ ಸರ್ಕಾರದ ಅವಧಿಯಲ್ಲಿ ದುಡಿಯುವ ಜನರ ನಿಜ ತಲಾ ವರಮಾನದ ಸ್ಥಿತಿ-ಗತಿಯೇನು ಎಂಬುದು ಈಗ ನಮ್ಮ ಮುಂದಿರುವ ಪ್ರಶ್ನೆ.

ದುಡಿಯುವ ಜನತೆಯ ತಲಾ ನಿಜ ವರಮಾನವನ್ನು ಅಳೆಯಲು ಸರಳವಾದ ಮಾರ್ಗವಿದೆ. ಜನರು ಯಾವಾಗ ಸ್ಥಿತಿವಂತರಾಗುತ್ತಾರೋ ಆಗ ಅವರು ಹೆಚ್ಚು ಹೆಚ್ಚು ವಿವಿಧ ಪ್ರಕಾರದ ವಸ್ತುಗಳನ್ನು ಕೊಳ್ಳುತ್ತಾರೆ. ಜನರು ಸ್ಥಿತಿವಂತರಾಗುವಾಗ ಹೆಚ್ಚಿನ ಬೇಡಿಕೆ ಪಡೆಯುವ ಸರಕುಗಳನ್ನು ಸಕಾರಾತ್ಮಕ ಹಿಗ್ಗುವಿಕೆ ಹೊಂದಿರುವ ಸರಕುಗಳು ಎನ್ನಲಾಗುತ್ತದೆ. ಕಾಳುಗಳು ಇಂತಹ ವಸ್ತುಗಳಲ್ಲಿ ಪ್ರಮುಖವಾದ್ದು. ವರಮಾನ ಹೆಚ್ಚಾದಾಗ ಇವುಗಳ ಬಳಕೆ ಹೆಚ್ಚಾಗುತ್ತದೆ, ಇದು ನೇರವಾಗಿ ಆಗಲಿಕ್ಕಿಲ್ಲ. ನಿಜ, ಬಡವರ ಮಟ್ಟಿಗೆ ಇದು ನೇರವಾಗಿಯೇ ಹೆಚ್ಚುತ್ತದೆ. ಆದರೆ ಸ್ಥಿತಿವಂತರಲ್ಲಿ ಕೂಡ ಪರೋಕ್ಷವಾಗಿ ಕಾಳುಗಳ ಬಳಕೆ ಸಂಸ್ಕರಿಸಿದ ಆಹಾರ ಪಧಾರ್ಥಗಳು ಮತ್ತು ಪ್ರಾಣಿ ಜನ್ಯ ವಸ್ತುಗಳ ರೂಪದಲ್ಲಿ ಹೆಚ್ಚುತ್ತದೆ.

ಸರ್ಕಾರದ ವಾರ್ಷಿಕ ಆರ್ಥಿಕ ಸರ್ವೇಕ್ಷಣೆಯಲ್ಲಿ ಪ್ರತಿ ವರ್ಷ ಲಭ್ಯವಿರುವ ಕಾಳುಗಳ ವಿವರ ಸಿಗುತ್ತದೆ. ಆದರೆ ಅದರ ಬಳಕೆಯ ಒಟ್ಟು ವಿವರ ಲಭ್ಯವಿರುವುದಿಲ್ಲ. ಆದರೆ ನಾವು ಲಭ್ಯತೆ ಮತ್ತು ಬಳಕೆ ಜತೆ-ಜತೆಯಲ್ಲೇ ಸಾಗುತ್ತವೆ ಎಂದು ಭಾವಿಸಬಹುದು. ಆರ್ಥಿಕ ಸರ್ವೇಕ್ಷಣೆಯ ಜನಸಂಖ್ಯೆಯ ಅಂದಾಜು ಖಚಿತವಾಗಿರುವುದಿಲ್ಲ, ಜನಗಣತಿ ನಡೆಯದ ವರ್ಷಗಳಲ್ಲಿ ಹಿಂದಿನ ಸಾಲಿನ ಸಂಖ್ಯೆಗಳಿಗೆ ಒಂದು ಖಚಿತವಾದ ಸಂಖ್ಯೆಯನ್ನು ಸೇರಿಸಲಾಗುತ್ತದೆ. ವಾಸ್ತವವಾಗಿ ಒಂದು ನಿರ್ದಿಷ್ಟ ಸಂಖ್ಯೆಯನ್ನಲ್ಲ, ಒಂದು ನಿರ್ದಿಷ್ಟ ಪ್ರಮಾಣವನ್ನು ಹಿಂದಿನ ವರ್ಷದ ಜನಸಂಖ್ಯೆಗೆ ಸೇರಿಸಬೇಕು. ನಾವು ಇಲ್ಲಿ ಈ ರೀತಿಯ ಹೊಂದಾಣಿಕೆ ಮಾಡಿಕೊಂಡು ಒಟ್ಟು ಜನಸಂಖ್ಯೆಯ ಕಾಳುಗಳ ತಲಾ ಲಭ್ಯತೆಯನ್ನು ಆರ್ಥಿಕ ಸರ್ವೇಯ ಅಂಕಿಅಂಶಗಳನ್ನು ಆಧಾರವಿಟ್ಟುಕೊಂಡು ಲೆಕ್ಕ ಹಾಕಬಹುದು.

ಹೀಗೆ ಲೆಕ್ಕ ಹಾಕಿದಾಗ, ಮೋದಿ ಸರ್ಕಾರದ ಅವಧಿಯ ಪ್ರತಿ ವರ್ಷದಲ್ಲೂ ಕಾಳುಗಳ ತಲಾ ಲಭ್ಯತೆ ಸ್ಪಷ್ಟವಾಗಿ ದೇಶದಲ್ಲಿ 1991 ರಲ್ಲಿ ನವ-ಉದಾರವಾದಿ ಆರ್ಥಿಕ ಧೋsರಣೆಗಳನ್ನು ಆರಂಭಿಸಿದಾಗ ಇದ್ದುದಕ್ಕಿಂತ ಕಡಿಮೆಯಾಗಿದೆ. ಇದು ಮೋದಿಯವರ ಹಿಂದಿನ ಅವಧಿಗೂ ಸಲುತ್ತದೆ. ಆದರೆ ನಾವು ನೆನಪಿಸಿಕೊಳ್ಳಬೇಕಿರುವುದು ಮೋದಿಯವರು ನಿರುದ್ಯೋಗದ ಪ್ರಮಾಣದ ಇಳಿಕೆಯ ಭರವಸೆ ಕೊಟ್ಟು ಅಧಿಕಾರಕ್ಕೆ ಬಂದರು ಎಂಬುದನ್ನು. ನಿರುದ್ಯೋಗ ಈ ಐದು ವರ್ಷಗಳಲ್ಲಿ 1991ರ ಮೊದಲು ಇದ್ದುದಕ್ಕೆ ಹೋಲಿಸಿದರೆ, ಇಳಿಯುವ ಬದಲು ತುಂಬಾ ಹೆಚ್ಚಿದೆ.

ಕತೆ ಇಲ್ಲಿಗೆ ಮುಗಿಯುವುದಿಲ್ಲ. ನಿರುದ್ಯೋಗದ ಪ್ರಮಾಣ ಮೋದಿ ಸರ್ಕಾರದ ಅವಧಿಯಲ್ಲಿ ಪ್ರತಿ ಹಿಂದಿನ ಅವಧಿಗಿಂತ ಹೆಚ್ಚುತ್ತ ಬಂದಿದೆ. 2014ಕ್ಕೆ ಹೋಲಿಸಿದಾಗಲೂ ಕಾಳುಗಳ ತಲಾ ಲಭ್ಯತೆ ಇಳಿಯುತ್ತಲೇ ಬಂದಿದೆ. ಪರಿಣಾಮವಾಗಿ ಉದ್ಯೋಗ ವರಮಾನ ಪ್ರತಿ ವರ್ಷವೂ ಕಡಿಮೆಯಾಗುತ್ತಲೇ ಬಂದಿದೆ.

ಈಗ ಲಭ್ಯವಿರುವ ತಾತ್ಕಾಲಿಕ ಅಂಕಿಅಂಶಗಳಂತೆ 2017 ರಲ್ಲಿ ಕಾಳುಗಳ ಲಭ್ಯತೆ ಒಟ್ಟು ಜನಸಂಖ್ಯೆಗೆ 2014 ರಲ್ಲಿ ಇದ್ದುದಕ್ಕೆ ಸರಿಸಮವಾಗಿದದ್ದರೂ ನಮ್ಮ ದೃಷ್ಟಿಯಿರುವುದು ದುಡಿಯುವ ಜನರಿಗೆ ಲಭ್ಯತೆಯ ಪ್ರಮಾಣದ ಮೇಲೆ, ಏಕೆಂದರೆ ಅದು ಉದ್ಯೋಗ ವರಮಾನದ ಮಾಪನವಾಗಿರುತ್ತದೆ. ದೇಶದಲ್ಲಿ ವರಮಾನದ ಅಸಮಾನತೆ ವೇಗವಾಗಿ ಹೆಚ್ಚುತ್ತಿರುವಾಗ ಜನಸಂಖ್ಯೆಯ ಉಳ್ಳವರ ಭಾಗದವರು ಹೆಚ್ಚು ಬೇಳೆಕಾಳುಗಳನ್ನು ನೇರವಾಗಿ ಮತ್ತು ಪರೋಕ್ಷವಾಗಿ ತಲಾ ವರಮಾನ ಹೆಚ್ಚಾಗದಂತೆ ಬಳಸುತ್ತಾರೆ. ಅಂದರೆ ಕಾಳುಗಳ ತಲಾ ಲಭ್ಯತೆ ದುಡಿಯುವ ಜನ ವಿಭಾಗಗಳಿಗೆ 2017 ರಲ್ಲಿ 2014 ಕ್ಕಿಂತ ಕಡಿಮೆಯಾಗಿದೆ ಎಂದೇ ಅರ್ಥ. ಮೋದಿ ಸರ್ಕಾರದ ಅವಧಿಯ ಪ್ರತಿ ವರ್ಷದಲ್ಲೂ ಬೇಳೆಕಾಳುಗಳ ಲಭ್ಯತೆ ದುಡಿಯುವ ಜನತೆಗೆ 2014ನೇ ಸಾಲಿನ ಮಟ್ಟಕ್ಕಿಂತ ಕಡಿಮೆಯಾಗಿರುವುದು ಕಂಡುಬರುತ್ತದೆ. ಸಂಕ್ಷಿಪ್ರವಾಗಿ ಹೇಳುವುದಾದರೆ, ವರಮಾನ ನಿರುದ್ಯೋಗವನ್ನು ನವ-ಉದಾರವಾದಿ ಧೋರಣೆಗಳ ಅವಧಿಯ ಹಿಂದಿನ ಮಟ್ಟಕ್ಕೆ ಇಳಿಸುವ ಬದಲು, ಮೋದಿಯವರ ಆಳ್ವಿಕೆಯಲ್ಲಿ ನಿಜವಾಗಿ ಕುಸಿಯುತ್ತಿರುವ ವರಮಾನ ನಿರುದ್ಯೋಗವೇ ಕಾಣಬಂದಿದೆ.

ತಲಾ ಕಾಳು ಲಭ್ಯತೆಯ ಕುಸಿತದ ಅವಧಿ ಇನ್ನೂ ಹಲವು ಪರಿಣಾಮ ಸೃಷ್ಟಿಸಿದೆ. ಬಡತನವನ್ನು ಭಾರತದಲ್ಲಿ ಪರಿಗಣಿಸುವುದು ಆಹಾರದ ಕ್ಯಾಲೋರಿ ಸೇವನೆ ಪ್ರಕಾರವಾಗಿದ್ದು ಗ್ರಾಮಾಂತರ ಪ್ರದೇಶಗಳಲ್ಲಿ ತಲಾ ೨೨೦೦ ಕ್ಯಾಲೋರಿ ಮತ್ತು ನಗರ ಪ್ರದೇಶಗಳಿಗೆ ತಲಾ 2100 ಕ್ಯಾಲೋರಿ ನಿಗದಿ ಪಡಿಸಿರುತ್ತಾರೆ. ಸಾಮಾನ್ಯ ಜನರಿಗೆ ಈ ಕ್ಯಾಲೋರಿಗಳು ಲಭ್ಯವಾಗುವುದು ಕಾಳುಗಳ ಮುಖಾಂತರ (ಪ್ರಾಣಿಜನ್ಯ ಪ್ರೊಟೀನ್ ಎಲ್ಲರಿಗೂ ಲಭ್ಯವಾಗದ ಕಾರಣ). ಕಾಳುಗಳ ಲಭ್ಯತೆಯ ಕುಸಿತದಿಂದ 2014 ಗೆ ಹೋಲಿಸಿದಾಗ ಉಳ್ಳವರಿಗೆ ಯಾವ ರೀತಿಯ ಕುಸಿತವೂ ಅನುಭವಕ್ಕೆ ಬಂದಿರುವುದಿಲ್ಲ ಬದಲಿಗೆ ಅವರ ಬಳಕೆ ಹೆಚ್ಚೇ ಆಗಿರುತ್ತದೆ ಎಂಬುದನ್ನು ಮತ್ತೊಮ್ಮೆ ಗಮನದಲ್ಲಿಟ್ಟುಕೊಂಡರೆ, ಬಡತನದ ಮಟ್ಟವೂ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಹೆಚ್ಚಾಗಿದೆ ಎಂದೇ ಕಂಡು ಬರುತ್ತದೆ.

ಈ ಕುಸಿತದ ತೀವ್ರತೆಯನ್ನು ತಿಳಿಯಬೇಕಾದರೆ, ಭಾರತದಲ್ಲಿ ಈ ಮೊದಲೂ ಕೂಡ ಕಾಳುಗಳ ತಲಾ ಲಭ್ಯತೆ ಚೈನಾ ದೇಶದಲ್ಲಿನ ತಲಾ ಲಭ್ಯತೆಯ ಅರ್ಧದಷ್ಟು ಮಾತ್ರ ಎಂಬುದನ್ನು ಗಮನಿಸಬೇಕು. ಎನ್‌ಎಸ್‌ಎಸ್ ಕಾಲ್ಯೋರಿ ಮತ್ತು ಪ್ರೊಟೀನ್ ಸೇವನೆಯ ಮಾಹಿತಿಯನ್ನು ನಿಯಮಿತವಾಗಿ ಪ್ರಕಟಿಸುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಅದನ್ನು ನಿಲ್ಲಿಸಲಾಗಿದೆ. ಈ ರೀತಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡದಿರುವುದೇ ಒಂದು ವಿಶಿಷ್ಟ ಸರ್ವಾಧಿಕಾರಶಾಹಿಯ ಲಕ್ಷಣ.

ಇದು ಜನರನ್ನು ತಪ್ಪುಹಾದಿಗೆ ಎಳೆಯುವುದೇ ಅಲ್ಲದೆ ಪ್ರಜಾತಂತ್ರದಲ್ಲಿ ಜನತೆಯೇ ಸರ್ವೋಚ್ಚರಾಗಿದ್ದು, ಅವರಿಗೆ ಮಾಹಿತಿಯ ಹಕ್ಕು ಇದೆ ಎಂಬುದನ್ನು ಕೂಡ ನಿರಾಕರಿಸುತ್ತದೆ. ಸಂವಿಧಾನದ ಪ್ರಕಾರ ಸರಕಾರ ಇರುವುದು ಜನತೆಯ ಸೇವೆಗಾಗಿ, ಆದ್ದರಿಂದ ಅವರಿಂದ ಯಾವ ಮಾಹಿತಿಯನ್ನೂ ತಡೆದಿಡುವಂತಿಲ್ಲ. ಇದು ಸರ್ಕಾರದ ಅಸಾಧಾರಣ ಮೂರ್ಖತೆಯ ಕೃತ್ಯವೂ ಆಗಿದೆ. ಏಕೆಂದರೆ, ನಿಜವಾಗಿಯೂ ಬಡತನ ಮತ್ತು ನಿರುದ್ಯೋಗವನ್ನು ಅನುಭವಿಸುತ್ತಿರುವ ಜನತೆಗೆ ಅವರ ಪರಿಸ್ಥಿತಿಗಳಿಗೆ ಸಂಬಂಧಪಟ್ಟ ಅಂಕಿ-ಅಂಶಗಳನ್ನು ತಡೆ ಹಿಡಿಯುವ ಮೂಲಕ ತಮಗೆ ಬಡತನ, ನಿರುದ್ಯೋಗ ಇಲ್ಲ ಎಂದು ಅವರು ಯೋಚಿಸುವಂತೆ ಮಾಡಬಹುದು ಎಂದು ಈ ಸರಕಾರ ನಂಬಿದೆ!

ಪ್ರೊ. ಪ್ರಭಾತ್ಪಟ್ನಾಯಕ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೋಕಾರೂಢಿ

ಮೋದಿ ಹತಾಶೆ ನಡುದಾರಿಯಲ್ಲೇ ಶಿಖರ ಮುಟ್ಟುತ್ತಿದೆ : ಯೆಚುರಿ

Published

on

ಚುನಾವಣೆಯಲ್ಲಿ ತಮಗೆ ಸೋಲುಂಟಾಗಬಹುದು ಎಂಬ ಭೀತಿಯಿಂದ ನರೇಂದ್ರ ಮೋದಿ ಈಗ ಜನತೆಯ ಬೆಂಬಲ ಗಳಿಸುವ ಮಾರ್ಗವಾಗಿ ಭಯೋತ್ಪಾದನೆಯ ವಿರುದ್ಧ ಹೋರಾಟದ ಮಾತಾಡುತ್ತ, ನಮ್ಮ ಸಶಸ್ತ್ರ ಪಡೆಗಳ ತ್ಯಾಗ-ಬಲಿದಾನಗಳನ್ನು ಬಳಸಿಕೊಳ್ಳುವ ಅತ್ಯಂತ ನೀತಿಗೆಟ್ಟ ಆಕ್ರಮಣಕಾರೀ ಪ್ರಚಾರಕ್ಕೆ ಇಳಿದಿದ್ದಾರೆ. ಈ ಪ್ರಕ್ರಿಯೆಯಲ್ಲಿ ಅವರು ಮತ್ತು ಬಿಜೆಪಿ-ಆರೆಸ್ಸೆಸ್ ಕೂಟ ಚುನಾವಣಾ ಆಯೋಗ ಹಾಕಿಕೊಟ್ಟಿರುವ ಮಾದರಿ ಆಚಾರ ಸಂಹಿತೆಯನ್ನು ಯಾವುದೇ ನಾಚಿಕೆಯಿಲ್ಲದೆ ಉಲ್ಲಂಘಿಸುತ್ತಿದ್ದಾರೆ.

ಈ ಸಾರ್ವತ್ರಿಕ ಚುನಾವಣೆಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಡೆಸುತ್ತಿರುವ ಕರ್ಣಕರ್ಕಶ ಪ್ರಚಾರದಲ್ಲಿ ಒಂದು ಹತಾಶೆಯ ಭಾವ ಬಯಲಾಗುತ್ತಿದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಹೇಳಿದ್ದಾರೆ.

ನಿಜಸಂಗತಿಯೆಂದರೆ, ನರೆಂದ್ರ ಮೋದಿಯವರ ನೇತೃತ್ವದಲ್ಲಿ, ಬಿಜೆಪಿ-ಆರೆಸ್ಸೆಸ್‌ಗೆ ಜನಗಳ ಬದುಕಿನ ಮಟ್ಟದಲ್ಲಿ ಆಗಿರುವ ತೀವ್ರ ಕುಸಿತದ ಬಗ್ಗೆ ಸಾರ್ವಜನಿಕ ಆಕ್ರೋಶವನ್ನು ಎದುರಿಸಲಾಗುತ್ತಿಲ್ಲ. ಚುನಾವಣೆಯಲ್ಲಿ ತಮಗೆ ಸೋಲುಂಟಾಗಬಹುದು ಎಂಬ ಭೀತಿಯಿಂದ ನರೇಂದ್ರ ಮೋದಿ ಈಗ ಜನತೆಯ ಬೆಂಬಲ ಗಳಿಸುವ ಮಾರ್ಗವಾಗಿ ಭಯೋತ್ಪಾದನೆಯ ವಿರುದ್ಧ ಹೋರಾಟದ ಮಾತಾಡುತ್ತ, ನಮ್ಮ ಸಶಸ್ತ್ರ ಪಡೆಗಳ ತ್ಯಾಗ-ಬಲಿದಾನಗಳನ್ನು ಬಳಸಿಕೊಳ್ಳುವ ಅತ್ಯಂತ ನೀತಿಗೆಟ್ಟ ಆಕ್ರಮಣಕಾರೀ ಪ್ರಚಾರಕ್ಕೆ ಇಳಿದಿದ್ದಾರೆ.

ಈ ಪ್ರಕ್ರಿಯೆಯಲ್ಲಿ ಅವರು ಮತ್ತು ಬಿಜೆಪಿ-ಆರೆಸ್ಸೆಸ್ ಕೂಟ ಚುನಾವಣಾ ಆಯೋಗ ಹಾಕಿಕೊಟ್ಟಿರುವ ಮಾದರಿ ಆಚಾರ ಸಂಹಿತೆಯನ್ನು ಯಾವುದೇ ನಾಚಿಕೆಯಿಲ್ಲದೆ ಉಲ್ಲಂಘಿಸುತ್ತಿದ್ದಾರೆ ಎಂದು ಯೆಚುರಿ ಪಕ್ಷದ ಕೇಂದ್ರಪತ್ರಿಕೆ ಪೀಪಲ್ಸ್ ಡೆಮಾಕ್ರಸಿಯಲ್ಲಿ ಬರೆದಿರುವ ಲೇಖನದಲ್ಲಿ ಹೇಳಿದ್ದಾರೆ. ಚುನಾವಣಾ ಆಯೋಗ ತನ್ನದೇ ಮಾರ್ಗಸೂಚಿಗಳ ಇಂತಹ ಉಲ್ಲಂಘನೆಗಳಿಗೆ ಏಕೆ ಅವಕಾಶ ಮಾಡಿಕೊಡುತ್ತಿದೆ ಎಂದು ಕಾರಣಗಳನ್ನು ಹುಡುಕುವ ಅಗತ್ಯವೇನಾದರೂ ಇದೆಯೇ ಎಂದು ಈ ಬಗ್ಗೆ ಈಗಾಗಲೇ ನೇರವಾಗಿ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿರುವ (ಈ ಸಂಚಿಕೆಯ ಪುಟ ೨ ನೋಡಿ) ಯೆಚುರಿ ತಮ್ಮ ಲೇಖನದಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.

ತಮ್ಮ ಲೇಖನದ ಕೊನೆಯಲ್ಲಿ ಯೆಚುರಿಯವರು ಮೋದಿ ಈಗ ನಡೆಸಿರುವ ನೀತಿಗೆಟ್ಟ ಪ್ರಚಾರದಲ್ಲಿ ಎತ್ತುತ್ತಿರುವ ಭಾವಾವೇಶದ ಪ್ರಶ್ನೆಗಳನ್ನು ಹೀಗೆ ಪರಿಶೀಲಿಸುತ್ತಾರೆ:

ಮೋದಿ ದಾವೆ: ಗಡಿಯಾಚೆಯ ಭಯೋತ್ಪಾದನೆಯನ್ನು ನಿರ್ಮೂಲ ಮಾಡಿದ್ದೇವೆ.

ವಾಸ್ತವತೆ: ಗಡಿಯಾಚೆಯಿಂದ ಭಯೋತ್ಪಾದನೆಯನ್ನು ಪ್ರಚೋದಿಸುವ ಪಾಕಿಸ್ತಾನದ ಪ್ರಯತ್ನಗಳನ್ನು ಸೋಲಿಸುವ ಸಾಮರ್ಥ್ಯವುಳ್ಳ ೫೬ ಅಂಗುಲ ಎದೆಯನ್ನು ಹೊಂದಿದ್ದೇನೆ ಎಂದು ಕೊಚ್ಚಿಕೊಳ್ಳುತ್ತ ಮೋದಿ ಪ್ರಧಾನ ಮಂತ್ರಿಯಾದದ್ದು. ಇಂದು ತಾನು ಭಯೋತ್ಪಾದಕರಲ್ಲಿ ಭೀತಿಯ ಭಾವವನ್ನು ಉಂಟುಮಾಡುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಭಾವೋನ್ಮತ್ತತೆಯಿಂದ ಪ್ರಚಾರ ಮಾಡುತ್ತಿದ್ದಾರೆ.

ಆದರೆ ನಿಜಸಂಗತಿಯಾದರೂ ಏನು?

2009-14 ಗೆ ಅವಧಿಗೆ ಹೋಲಿಸಿದರೆ, 2014-19ರಲ್ಲಿ ನರೇಂದ್ರ ಮೋದಿ ಅಡಿಯಲ್ಲಿ ಭಾರತದಲ್ಲಿ ಭಯೋತ್ಪಾದಕ ದಾಳಿಗಳ ಸಂಖ್ಯೆ 109ರಿಂದ 626ಕ್ಕೇರಿತು. ಮತ್ತು ಪಾಕಿಸ್ತಾನದಿಂದ ಕದನವಿರಾಮ ಉಲ್ಲಂಘನೆಗಳು 563 ರಿಂದ 5596 ಕ್ಕೆ ಏರಿದವು. ಹುತಾತ್ಮರಾದ ನಮ್ಮ ಭದ್ರತಾಪಡೆಗಳ ಸಿಬ್ಬಂದಿಯ ಸಂಖ್ಯೆ 139 ರಿಂದ 483 ಕ್ಕೇರಿತು; ಭಯೋತ್ಪಾದಕ ದಾಳಿಗಳಿಂದ ಸಾವಿಗೀಡಾದ ನಾಗರಿಕರ ಸಂಖ್ಯೆ 12 ರಿಂದ 210 ಕ್ಕೆ ಏರಿತು.

ಮೋದಿ ಸರಕಾರದ ಜಮ್ಮು ಮತ್ತು ಕಾಶ್ಮೀರ ಧೋರಣೆಯಿಂದಾಗಿ ಉಗ್ರರ ಪಡೆಗಳಿಗೆ ಸೇರಿಕೊಳ್ಳುವ ಸ್ಥಳೀಯ ಯುವಜನರ ಸಂಖ್ಯೆ ಕೂಡ 2014 ರಲ್ಲಿ ಕೇವಲ 16 ಇದ್ದದ್ದು 2018ರಲ್ಲಿ 191 ಕ್ಕೇರಿತು.

ಉರಿಯಲ್ಲಿನ ಮಿಲಿಟರಿ ನೆಲೆಯ ಮೇಲೆ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಸೇನೆ ಮಿಂಚಿನ ಪ್ರಹಾರ(ಸರ್ಜಿಕಲ್ ಸ್ಟ್ರೈಕ್) ನಡೆಸಿತು. ಮೋದಿ ಮತ್ತು ಬಿಜೆಪಿ ಸರಕಾರ ಗಡಿಯಾಚೆಯ ಭಯೋತ್ಪಾದಕತೆಗೆ ಅನುಕೂಲಮಾಡಿಕೊಡುವುದನ್ನು ಧ್ವಂಸ ಮಾಡಿರುವುದಾಗಿಯೂ, ಇನ್ನು ಮುಂದೆ ಗಡಿಯಾಚೆಯಿಂದ ಭಯೋತ್ಪಾದಕ ದಾಳಿ ನಡೆಯುವುದಿಲ್ಲ ಎಂದೂ ಹೇಳಿಕೊಂಡರು. ನಂತರ ಬಂತು ನಮ್ಮ 40 ಸಿಆರ್‌ಪಿಎಫ್ ಸೈನಿಕರನ್ನು ಬಲಿ ತೆಗೆದುಕೊಂಡ ಪುಲ್ವಾಮ ಭಯೋತ್ಪಾದಕ ದಾಳಿ.

ಅದಾದ ನಂತರ ಭಾರತೀಯ ವಾಯು ಪಡೆ ಪಾಕಿಸ್ತಾನದ ಒಳಗೆ ಬಾಲಕೋಟ್‌ನಲ್ಲಿ ಭಯೋತ್ಪಾದಕ ನೆಲೆಗಳ ಮೇಲೆ ಯಶಸ್ವಿಯಾಗಿ ಗುರಿಯಿಟ್ಟಾಗ, ಭಾರತ ಭವಿಷ್ಯದ ಎಲ್ಲ ಭಯೋತ್ಪಾದಕ ದಾಳಿಗಳನ್ನು ನಿರ್ಮೂಲವಲ್ಲದಿದ್ದರೂ ಅಸ್ತವ್ಯಸ್ತಗೊಳಿಸಿದೆ ಎಂದು ನಮಗೆ ಹೇಳಲಾಯಿತು. ಬಾಲಕೋಟ್ ನಂತರವೂ ಭಯೋತ್ಪಾದಕ ದಾಳಿಗಳು ಮುಂದುವರೆದಿವೆ, ಇನ್ನಷ್ಟು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಜಮ್ಮು ಪ್ರದೇಶದ ಜನನಿಬಿಡ ಪ್ರದೇಶಗಳಲ್ಲಿ ಬಾಂಬುಗಳನ್ನಿಟ್ಟ ಭಯೋತ್ಪಾದಕ ದಾಳಿಗಳಿಂದಾಗಿ ನಾಗರಿಕರು ಗಾಯಗೊಂಡಿದ್ದಾರೆ.

ಇದು ಮೋದಿಯವರ 56 ಅಂಗುಲ ಎದೆಯ ವಾಸ್ತವತೆ!

ಮತ್ತೊಂದು ದಾವೆ: ಮೋದಿಯೆಂದರೆ ಪಾಕಿಸ್ತಾನಕ್ಕೆ ಭಯ.

ವಾಸ್ತವತೆ: ಎಲ್ಲ ಬಣ್ಣಗಳ ಮೂಲಭೂತವಾದಗಳು ಪರಸ್ಪರ ಪೋಷಿಸುತ್ತವೆ ಎಂಬುದು ಸಾಬೀತಾಗಿರುವ ಸಂಗತಿ. ಪಾಕಿಸ್ತಾನಕ್ಕೆ ಬಿಜೆಪಿ/ಆರೆಸ್ಸೆಸ್ ಮತ್ತು ಮೋದಿಯೆಂದರೆ ಭಯ ಎನ್ನುವುದು ಸಂಪೂರ್ಣವಾಗಿ ವಾಸ್ತವತೆಗೆ ವಿರುದ್ದವಾದ ದಾವೆ. ನಿಜ ಹೇಳಬೇಕೆಂದರೆ, ಮುಸ್ಲಿಂ ಮೂಲಭೂತವಾದ ಮತ್ತು ಹಿಂದೂ ಕೋಮುವಾದ ಪರಸ್ಪರ ಪೋಷಿಸಿಕೊಳ್ಳುತ್ತವೆ ಮತ್ತು ಪರಸ್ಪರರಿಂದ ಶಕ್ತಿ ಪಡೆಯುತ್ತವೆ.

ಈ ಹಿಂದೆ 1999ರಲ್ಲಿ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರಕಾರ ಲೋಕಸಭೆಯಲ್ಲಿ ಬಹುಮತ ಕಳಕೊಂಡ ನಂತರ ನಡೆದ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ಲಷ್ಕರ್-ಎ-ತಯ್ಯಬ ದವರನ್ನು, ಭಾರತದ ಸಾರ್ವತ್ರಿಕ ಚುನಾವಣೆಗಳಲ್ಲಿ ಯಾರು ಗೆಲ್ಲಬೇಕು ಎಂದು ಬಯಸುತ್ತೀರಿ ಎಂದು ಕೇಳಲಾಯಿತು. ಅದಕ್ಕೆ ಆ ಸಂಘಟನೆಯ ಮಾಹಿತಿ ಕಾರ್ಯದರ್ಶಿಯ ಉತ್ತರ ಹೀಗಿತ್ತು: ಬಿಜೆಪಿ ನಮಗೆ ಅನುಕೂಲಕರ. ಒಂದೇ ವರ್ಷದಲ್ಲಿ ಅವರು ನಮ್ಮನ್ನು ಒಂದು ಪರಮಾಣು ಮತ್ತು ಕ್ಷಿಪಣಿ ಶಕ್ತಿಯನ್ನಾಗಿ ಮಾಡಿದ್ದಾರೆ. ಬಿಜೆಪಿಯ ಹೇಳಿಕೆಗಳಿಂದಾಗಿ ಲಷ್ಕರ್-ಎ-ತಯ್ಯಬ ಉತ್ತಮ ಸ್ಪಂದನೆಯನ್ನು ಪಡೆಯುತ್ತಿದೆ. ಈಗ ಪರಿಸ್ಥಿತಿ ಹಿಂದೆ ಇದ್ದುಕ್ಕಿಂತಲೂ ಬಹಳ ಉತ್ತಮವಾಗಿದೆ. ಅವರು ಮತ್ತೆ ಅಧಿಕಾರಕ್ಕೆ ಬರಲಿ ಎಂದು ನಾವು ದೇವರನ್ನು ಪ್ರಾರ್ಥಿಸುತ್ತೇವೆ. ಆಗ ನಾವು ಇನ್ನೂ ಬಲಿಷ್ಟರಾಗಿ ಮೂಡಿ ಬರುತ್ತೇವೆ(ಹಿಂದುಸ್ತಾನ್ ಟೈಮ್ಸ್, ಜುಲೈ 19, 1999).

ಸ್ಪೈ ಕ್ರಾನಿಕಲ್ಸ್ ಎಂಬ ಇಬ್ಬರು ಮಾಜಿ ಗುಪ್ತಚರ ಮುಖ್ಯಸ್ಥರು, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ನ ಮಾಜಿ ಮಹಾನಿರ್ದೇಶಕ ಲೆ |ಜ |(ನಿವೃತ್ತ) ಅಸದ್ ದುರ್ರಾನಿ ಮತ್ತು ಭಾರತದ ಗುಪ್ರಚರ ಸಮಸ್ಥೆ ಆರ್‌ಎಡಬ್ಲ್ಯು ನ ಮುಖ್ಯಸ್ಥ ಎ.ಎಸ್. ದುಲಾತ್ ಜಂಟಿಯಾಗಿ ಬರೆದಿರುವ ಪುಸ್ತಕ, ಭಾರತೀಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಐಎಸ್‌ಐ ಆದ್ಯತೆಯ ಆಯ್ಕೆ ಎನ್ನುತ್ತದೆ. ಮೋದಿ ಪ್ರದಾನ ಮಂತ್ರಿಯಾಗಿ ಚುನಾಯಿತರಾದ್ದಕ್ಕೆ ಪಾಕಿಸ್ತಾನದ ಪ್ರತಿಕ್ರಿಯೆಯೆಂದರೆ ಅದು ಭಾರತಕ್ಕೆ ಒಳ್ಳೆಯದು ಎಂದು. ಮೋದಿ ಭಾರತವನ್ನು ನೋಡಿಕೊಳ್ಲಲಿ, ಅದರ ಪ್ರತಿಷ್ಠೆಯನ್ನು ಧ್ವಂಸ ಮಾಡಲಿ, ಮತ್ತು ಬಹುಶಃ ಅದರ ಆಂತರಿಕ ಸಮತೋಲನವನ್ನು ಕೂಡ. ಹೀಗೆ ಭಾರತದ ಚುನಾವಣೆಗಳಲ್ಲಿ ಗೆಲ್ಲಬೇಕಾದವರನ್ನು ಕುರಿತಂತೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಆಯ್ಕೆ ಸ್ಪಷ್ಟ.

ಸುಮಾರಾಗಿ, ಇದನ್ನೇ ದೃಢಪಡಿಸುತ್ತ, ಇದೇ 2019ರ ಎಪ್ರಿಲ್ 10 ರಂದು, ನಮ್ಮಲ್ಲಿ ಮೊದಲ ಹಂತದ ಮತದಾನದ ಒಂದು ದಿನದ ಹಿಂದೆಯಷ್ಟೇ, ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ತಮ್ಮ ಅನುಮೋದನೆಯನ್ನು ಕೊಟ್ಟರು. ಹಲವಾರು ವಿದೇಶಿ ಮಾಧ್ಯಮಗಳ ಪತ್ರಕರ್ತರ ಮುಂದೆ ಮಾತಾಡುತ್ತ ಅವರು ಮೋದಿಯವರು ಗೆಲ್ಲುತ್ತಾರೆ ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಿದರು, ಏಕೆಂದರೆ, ಅದರಿಂದ ಭಾರತ-ಪಾಕಿಸ್ತಾನ ಶಾಂತಿಗೆ ಒಂದು ಉತ್ತಮ ಅವಕಾಶ ಸಿಗುತ್ತದೆ ಎಂದರು.

ಮೋದಿಯವರೇ, ಭಾರತದಲ್ಲಿ ಯಾರು ಗೆಲ್ಲಬೇಕೆಂದು ಪಾಕಿಸ್ತಾನ ಬಯಸುತ್ತದೆ ಎಂಬುದಕ್ಕೆ ಇನ್ನೇನಾದರೂ ಹೇಳಬೇಕಾದ ಅಗತ್ಯ ಇದೆಯೇ? ಭಾರತದಲ್ಲಿ ಹಿಂದುತ್ವ ಕೋಮುವಾದ ಬಲಿಷ್ಟವಾದಷ್ಟು ಪಾಕಿಸ್ತಾನದಲ್ಲಿ ಮುಸ್ಲಿಂ ಮೂಲಭೂತವಾದ ಬಲಿಷ್ಟಗೊಳ್ಳುತ್ತದೆ. ನಿಜ ಹೇಳಬೇಕೆಂದರೆ ಇವರು ಹೇಳಿ ಮಾಡಿಸಿದ ಜೋಡಿ.

ಭಾರತೀಯ ಜನತೆ ಖಂಡಿತವಾಗಿಯೂ ಈ ಭಾವೋನ್ಮಾದ ಬಡಿದೆಬ್ಬಿಸುವ ಹಿಂದಿರುವ ತಂತ್ರವನ್ನು ಕಾಣುತ್ತಾರೆ, ಕಳೆದ ಐದು ವರ್ಷಗಳಲ್ಲಿ ತಮ್ಮ ದೈನಂದಿನ ಬದುಕಿನ ಅನುಭವಗಳ ಆಧಾರದಲ್ಲಿ ತಮ್ಮ ಮತವನ್ನು ಚಲಾಯಿಸುತ್ತಾರೆ ಎಂದು ತಮ್ಮ ಲೇಖನದ ಕೊನೆಯಲ್ಲಿ ಹೇಳುತ್ತ, ಯೆಚುರಿಯವರು, ಈ ಬಿಜೆಪಿ ಸರಕಾರದ ಸೋಲು ಸನ್ನಿಹಿತವಾಗಿದೆ, ಅದು ಚುನಾವಣೆಗಳ ನಂತರ, ಒಂದು ಪರ್ಯಾಯ ಜಾತ್ಯತೀತ ಸರಕಾರದ ರಚನೆಗೆ ದಾರಿ ಮಾಡಿಕೊಡುತ್ತದೆ ಎಂದಿದ್ದಾರೆ.

(ಲೇಖನ ಕೃಪೆ : ಜನಶಕ್ತಿ ಮೀಡಿಯಾ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending