Connect with us

ಲೋಕಾರೂಢಿ

ಈಗ ಯಾರು ಬೇಕಾದರೂ ಕಾಶ್ಮೀರಕ್ಕೆ ಹೋಗಬಹುದು..!?

Published

on

ಗ ಯಾರು ಬೇಕಾದರೂ ಕಾಶ್ಮೀರಕ್ಕೆ ಹೋಗಬಹುದು, ಸೈಟು ಮನೆ ಕೊಳ್ಳಬಹುದು, ಬಿಸ್ನೆಸ್ ನಡೆಸಬಹುದು ಎಂದು ಹಲವರು ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ. ಸ್ವಾತಂತ್ರ್ಯದ ನಂತರದಲ್ಲಿ ಭಾರತೀಯರಲ್ಲಿ ಬೆಳೆಸಲಾಗಿರುವ predator ಮನಸ್ಥಿತಿಯ ಪರಿಣಾಮ ಇದು.

ಇದೇ ಪ್ರಿಡೇಟರ್ ಮನಸ್ಥಿತಿಯಿಂದ ಬೆಂಗಳೂರು ಮತ್ತು ಕರ್ನಾಟಕಕ್ಕೆ ನುಗ್ಗಿರುವ ಮಾರ್ವಾಡಿಗಳು, ಆಂಧ್ರದ ರೆಡ್ಡಿಗಳು ಕನ್ನಡಿಗರಿಗೆ ಏನಾದರೂ ಉಳಿಸಿದ್ದಾರೆಯೇ ಎಂದು ನೋಡುವ ಸ್ಥಿತಿಯಲ್ಲಿ ನಾವಿದ್ದೇವೆ. ಅಂತಹ ಒಂದು ಕಿತ್ತು ತಿನ್ನುವ, ಕೊಂದು ಬೆಳೆಯುವ ಮನಸ್ಥಿತಿಯ ಬಲಿಪಶುಗಳಾಗಿ ಕನ್ನಡ ನಾಡು ಬಲಿಯಾಗಿದ್ದರೂ ಸಹ ಕಾಶ್ಮೀರವನ್ನು ಕಿತ್ತು ತಿನ್ನಬೇಕು ಎಂಬ ಮನಸ್ಥಿತಿಯನ್ನು ಒಪ್ಪಿಕೊಂಡಿದ್ದೇವೆ… ಆದರೆ ಅಲ್ಲಿಗೆ ಹೋಗುವವರು ಅದೇ ಮಾರ್ವಾಡಿ, ಬನಿಯಾಗಳೇ ಹೊರತು ಸಾಮಾನ್ಯ ಭಾರತೀಯರಲ್ಲ ಎಂಬ ಪರಿವೆಯೂ ಜನಕ್ಕಿಲ್ಲ.

ಅದು ಕಾಶ್ಮೀರ ಇರಲಿ, ನಾಗಾಲ್ಯಾಂಡ್, ಅಸ್ಸಾಂ, ಮಣಿಪುರ ಇರಲಿ, ಕರ್ನಾಟಕ, ತಮಿಳುನಾಡು, ಗುಜರಾತ್ ಇರಲಿ, ಕೊಡಗು, ತುಳುನಾಡೇ ಉರಲಿ ಇವೆಲ್ಲ ಚಾರಿತ್ರಿಕವಾಗಿ ತಮ್ಮದೇ ವಿಶಿಷ್ಟ ಗುಣಗಳನ್ನು ಹೊಂದಿರುವ, ವಿಭಿನ್ನ ಚಾರಿತ್ರಿಕ ಹಿನ್ನೆಲೆ ಇರುವ ರಾಷ್ಟ್ರೀಯತೆಗಳು (Nationalities) ಹಾಗೂ ಭಾರತ ಉಪಖಂಡ ಇಂತಹ ನೂರಾರು ರಾಷ್ಟ್ರೀಯತೆಗಳ ಒಂದು ಒಕ್ಕೂಟ (Union). ಇಲ್ಲಿ ಪರಸ್ಪರ ರಾಷ್ಟ್ರೀಯತೆಗಳ ನಡುವೆ ಸೌಹಾರ್ದ, ಸಾಮರಸ್ಯ, ಸಹಕಾರಿ ಸಂಬಂಧವೇರ್ಪಡಬೇಕು, ಆದರೆ ಆಯಾ ರಾಜ್ಯದ ಭವಿಷ್ಯ ನಿರ್ಣಯದ ಹಕ್ಕು ಮಾತ್ರ ಅವರ ಕೈಯಲ್ಲೇ ಇರಬೇಕು. ಮತ್ತೊಂದು ರಾಜ್ಯವಾಗಲೀ, ಕೇಂದ್ರ ವಾಗಲೀ, ಮತ್ತೊಂದು ದೇಶವಾಗಲೀ ಅದರ ಆಡಳಿತದ ವಿಷಯದಲ್ಲಿ ಅತಿಯಾಗಿ ಮೂಗು ತೂರಿಸಲು ಅವಕಾಶ ಇರಕೂಡದು. ನೆರೆಯ ದೇಶಗಳು ಆಕ್ರಮಣಕ್ಕೆ ಬಂದರೆ ಇಡೀ ಒಕ್ಕೂಟ ಒಂದಾಗಿ ನಿಲ್ಲಬೇಕು. ಮಿಕ್ಕಂತೆ ಹೆಚ್ಚಿನ ಸ್ವಾಯತ್ತತೆ, ಸ್ವಾವಲಂಬನೆ ಕಾಶ್ಮೀರದಿಂದ ಕರ್ನಾಟಕ, ತಮಿಳುನಾಡಿನವರೆಗಿನ ಎಲ್ಲ ರಾಜ್ಯಗಳಿಗೆ ಇರಬೇಕು. ಇದೇ ತತ್ವಕ್ಕೆ ಮನ್ನಣೆ ನೀಡಿ ಹಲವು ಕೇಂದ್ರಾಡಳಿತ ಪ್ರದೇಶಗಳು ಇಂದು ರಾಜ್ಯಗಳಾಗಿರುವುದನ್ನು ನೋಡಬಹುದು‌‌.ಇದಕ್ಕೆ ಸ್ಪಷ್ಟ ವಿರುದ್ಧ ಗತಿಯಲ್ಲಿ ಹೋಗುತ್ತಾ ಇರುವ ಮೋದಿ-ಶಾ ಸರ್ಕಾರದ ನಡೆ ಭಾರತೀಯರಲ್ಲಿ ಕಿತ್ತು ತಿನ್ನುವ, ಕೊಂದು ಬದುಕುವ ತತ್ವಕ್ಕೆ ಪ್ರೇರಣೆ ನೀಡಿದೆ ಅಷ್ಟೇ.

Article 370 ರಿಂದ ಭಾರತಕ್ಕೆ ಏನು ಲಾಭ ಎಂದು ಕೆಲವರು ಕೇಳುತ್ತಿದ್ದಾರೆ. ಅರೆ, ಅದು ಯಾರ ಲಾಭಕ್ಕಾಗಿ ಮಾಡಿದ್ದಲ್ಲ ಮಾರಾಯರೆ. ಕಾಶ್ಮೀರ ಭಾರತಕ್ಕೆ ಸೇರುವಾಗ ಕೇಂದ್ರ ಸರ್ಕಾರಕ್ಕೂ ಕಾಶ್ಮೀರಿ ಜನರಿಗೂ ಆದ ಒಪ್ಪಂದದ ಪ್ರಕಾರ 370ನೇ ವಿಧಿ ಕಾಶ್ಮೀರಿಗಳ ಹಕ್ಕು. ಅದು ಭಾರತ ನೀಡಿದ ಉಡುಗೊರೆಯಲ್ಲ. ಅದರ ಭವಿಷ್ಯ ನಿರ್ಧರಿಸಬೇಕಾಗಿದ್ದು ಮೋದಿ, ಶಾ ಅಥವಾ ಭಾರತದ ಇತರ ಜನರಲ್ಲ. ಸ್ವತಃ ಕಾಶ್ಮೀರದ ಜನತೆ, ಅಲ್ಲಿನ ಜನಪ್ರತಿನಿಧಿಗಳು… ಈಗ ಅವರೆಲ್ಲರ ಮೇಲೆ ತುರ್ತುಪರಿಸ್ಥಿತಿ ಹೇರಿ ಸರ್ಕಾರ ಕಾಶ್ಮೀರಿಗಳ ಹಕ್ಕನ್ನು ಕಿತ್ತುಕೊಂಡಿದೆ ಎಂದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿತ್ತು.

ಆದರೆ ಮೇಲೆ ಹೇಳಿದ predator ಮನಸ್ಥಿತಿ, ಇದನ್ನು ಪ್ರಚುರ ಪಡಿಸುವ ಟೀವಿ ಚಾನಲ್ ಗಳು ವಿರುದ್ಧ ದಿಕ್ಕಿನಲ್ಲಿ ಯೋಚಿಸುವಂತೆ, ಕಾಶ್ಮೀರದ ಹಕ್ಕನ್ನು ಕಿತ್ತುಕೊಂಡಿರುವುದನ್ನು ಸಂಭ್ರಮಿಸುವಂತೆ ಮಾಡುತ್ತಿವೆ… ಇಡೀ ದೇಶ ರೋಗಗ್ರಸ್ತವಾಗುತ್ತಿರುವುದರ ಸಿಂಪ್ಟಮ್ ಇದೆಂದು ಹೇಳಬಹುದು.

ಹರ್ಷಕುಮಾರ್ ಕುಗ್ವೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಲೋಕಾರೂಢಿ

ಕಾಡುಗೊಲ್ಲರ ಹಟ್ಟಿ ಮತ್ತು ದೇಶಕಾಲದ ಸಂಕಷ್ಟ

Published

on

  • ಕೇಸರಿ ಹರವೂ

ಕಾಡುಗೊಲ್ಲರಹಟ್ಟಿಗೆ ಸಂಸದರೊಬ್ಬರು ಪ್ರವೇಷಿಸಲು ಹೊರಟಾಗ ಅವರನ್ನು ಆ ಹಟ್ಟಿಯ ಗೊಲ್ಲರು ತಡೆದರು. ಆಗ ವರದಿಯಾಗಿರುವಂತೆ ಅದಕ್ಕೆ ಮುಖ್ಯ ಕಾರಣ ಆ ಸಂಸದರು ಪರಿಶಿಷ್ಠ ಜಾತಿಗೆ ಸೇರಿದ ಅಸ್ಪೃಶ್ಯರು ಎನ್ನುವುದು. ಇದು ಜಾತಿವ್ಯವಸ್ಥೆಯ ಕರಾಳ ನಿದರ್ಶನ, ಪರಿಶಿಷ್ಟ ಜಾತಿ ಮತ್ತು ವರ್ಗಗಳ ಸಂಘರ್ಷ ಎಂದು ಮೇಲ್ನೋಟಕ್ಕೆ ಕಾಣುತ್ತದೆ. ಆಮೇಲೆ ಅವರೇ ಆ ಸಂಸದರಿಗೆ ಪೂರ್ಣಕುಂಭ ಸ್ವಾಗತ ನೀಡಿದರು ಎನ್ನುವುದು ಬೇರೇ ವಿಷಯ. ಆದರೆ ಈ ಪ್ರಕರಣ ಅಷ್ಟಕ್ಕೇ ನಿಲ್ಲದೇ ಹಲವು ಆಯಾಮಗಳ ಚರ್ಚೆಗೆ ಆಸ್ಪದ ನೀಡುತ್ತದೆ.

ಸಾಮಾಜಿಕ ಮಾಧ್ಯಮಗಳಲ್ಲಿಯೂ ಸೇರಿದಂತೆ ಈ ಸುದ್ದಿಯ ಬೆನ್ನುಹತ್ತಿ ವಿವಿಧ ಬಗೆಯ ಚರ್ಚೆಗಳು ಆರಂಭವಾದವು. ಸಂಪ್ರದಾಯ, ನಂಬಿಕೆಗಳು, ಆಧುನಿಕತೆ, ಅಭಿವೃದ್ಧಿ, ಅಸ್ಪೃಷ್ಯತೆ ಮತ್ತು ನಿವಾರಣೆ, ಜಾತಿ ವ್ಯವಸ್ಥೆ ಮತ್ತು ನಿರ್ಮೂಲನ, ಸಮಸಮಾಜ, ಹೀಗೆ ಬೇರೆಬೇರೇ ನೆಲೆಗಳಲ್ಲಿ ಈ ಚರ್ಚೆಗಳು ಸಾಗಿದವು. ಇವು ಚರ್ಚಾರ್ಥಿಗಳ ನಿಲುವುಗಳ ಅನುಸಾರ ಸಾಮಾಜಿಕ, ರಾಜಕೀಯ ಬಣ್ಣಗಳನ್ನೂ ಪಡೆದಿವೆ. ಬಹುಶಃ ನಾವು ಯಾವ ಭೂಪ್ರದೇಶದ ಯಾವ ಕಾಲದಲ್ಲಿ ನಿಂತು ಮಾತಾಡುತ್ತಿದ್ದೇವೆ ಎಂದು ನೋಡಿಕೊಂಡು ಚರ್ಚೆ ಮುಂದುವರಿಸಬೇಕು ಎನಿಸುತ್ತದೆ.

ಬುಡಕಟ್ಟು ಸಮುದಾಯವೊಂದು ತನ್ನ ಲೋಕಕಾಣ್ಕೆಗೆ (worldview) ಇಂದಿಗೂ ಅಂಟಿಕೊಂಡು ತನ್ನ ಮೂಲ ಆಚಾರ, ವಿಚಾರ, ನಂಬಿಕೆ, ಸಂಪ್ರದಾಯಗಳನ್ನು ಪಾಲಿಸುತ್ತಿದೆಯಾದರೆ ಈ ಚರ್ಚೆ ಒಂದು ರೂಪ ಪಡೆಯುತ್ತದೆ. ತನ್ನತನಗಳಲ್ಲಿ ಕೆಲವನ್ನು ಉಳಿಸಿಕೊಂಡು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ತನಗೆ ಅನುಕೂಲವಾಗುವಷ್ಟರ ಮಟ್ಟಿಗೆ ಆಧುನಿಕತೆಗೆ, ನಾಗರೀಕತೆಗೆ ಮುಕ್ತವಾಗಿದೆ ಎಂದಾದರೆ ಇದೇ ಚರ್ಚೆ ಮತ್ತೊಂದು ಧಾಟಿಯಲ್ಲಿ ಸಾಗುತ್ತದೆ. ಆಧುನಿಕ ಸಮಾಜದಲ್ಲಿ ಮೊದಲನೆಯ ಸಾಧ್ಯತೆ ತೀರಾ ಕಡಿಮೆ. ಕಾಡುಗೊಲ್ಲ ಹಟ್ಟಿಯ ಜನ ಕೃಷಿ, ಆಹಾರ ಪದ್ಧತಿ, ಉಡುಗೆ, ವಸತಿ, ಶಿಕ್ಷಣ, ನಾಗರೀಕ ಸರಬರಾಜು, ಆರೋಗ್ಯ, ನೈರ್ಮಲ್ಯ, ಮೀಸಲಾತಿ ಮುಂತಾದ ಆಧುನಿಕ ನಾಗರೀಕ ವ್ಯವಸ್ಥೆಗಳಿಗೆ ಮತ್ತು ದೇಶದ ಸಾಮಾಜಿಕ-ಆರ್ಥಿಕ-ರಾಜಕೀಯ ವ್ಯವಸ್ಥೆಗೆ ತಮ್ಮನ್ನು ತಾವು ತೆರೆದುಕೊಂಡಿದ್ದಾರೆ ಎಂದರೆ, ಅವನ್ನೇ ಅವಲಂಬಿಸಿದ್ದಾರೆ ಎಂದರೆ ಇವರ ಸ್ಪೇಸ್ ಯಾವುದು? ಇವರ ತಾಣ ಈಗಲೂ ಕಾಡೇ ಮತ್ತು ಕಾಡಿನ ಅಂಚೇ? ಇವರು ನೆಚ್ಚಿಕೊಂಡಿದ್ದ ಕಾಡು ಮತ್ತು ಅಂಚು ಹಾಗೇ ಉಳಿದುಕೊಂಡು ಇವರ ಸ್ವಾವಲಂಬೀ ಬದುಕನ್ನು ಸಂಪೂರ್ಣ ಪೋಷಿಸುತ್ತಿದೆಯೇ? ಆಧುನಿಕ ಜಗತ್ತು ಅದನ್ನು ಹಾಗೆ ಉಳಿಸಿದೆಯೇ? ಇವರ ಜೀವನಕ್ರಮ ಈಗಲೂ ಇವರಿಗೇ ಸಲ್ಲುವಷ್ಟು ನಿಸರ್ಗ ವಿಶಿಷ್ಟವಾಗಿಯೇ ಇದೆಯೇ? ಇದ್ಯಾವುದೂ ಅಲ್ಲ ಎನ್ನುವುದಾದರೆ ಆಗ ಇವರು ನಿಶ್ಚಿತವಾಗಿಯೂ ತಮ್ಮ ಸ್ಪೇಸ್ ಅನ್ನು ಕಳಕೊಂಡು ಅಥವಾ ಬಿಟ್ಟುಕೊಟ್ಟು ಆಧುನಿಕ, ನಾಗರೀಕ ಸ್ಪೇಸ್ ಗೆ ಸ್ಥಳಾಂತರವಾಗಿದ್ದಾರೆ, ನಾಗರೀಕ ಕಾಲಕ್ಕೆ ಕಾಲಾಂತರಗೊಂಡಿದ್ದಾರೆ. ಈ ಸ್ಥಿತ್ಯಂತರಗಳು ಈ ಸಮುದಾಯಗಳಲ್ಲಿ ಜಾತಿವ್ಯವಸ್ಥೆಯ ಕೆಲವು ಕಟ್ಟುಪಾಡುಗಳೂ ಸೇರಿದಂತೆ ಹಲವು ರೀತಿಯ ಕೊಡುಕೊಳ್ಳುವಿಕೆಗಳನ್ನು ತಂದಿವೆ. ಇದನ್ನು ದೇಶವೂ, ಜನಾಂಗವೂ, ನಾಗರಿಕ ಸಮಾಜವೂ ಗುರುತಿಸಿಕೊಳ್ಳಬೇಕಾಗುತ್ತದೆ. ಇದು ಬುಡಕಟ್ಟು ಸಮಾಜಕ್ಕೆ ಮಾತ್ರವಲ್ಲ, ಸಾಂಪ್ರದಾಯಿಕ ಮತ್ತು ಆಧುನಿಕ ತಾಕಲಾಟಗಳಲ್ಲಿ ತೊಡಗಿರುವ ಎಲ್ಲ ಸಮಾಜಗಳಿಗೂ ಇದು ಅನ್ವಯಿಸುತ್ತದೆ.

ಅಂಡಮಾನಿನ ಸೆಂಟೆನೆಲೀಸ್ ಜನರಂತಹ ಸಮಾಜಗಳು ಮತ್ತು ಅವರ ಲೋಕಕಾಣ್ಕೆಗಳು ನಮ್ಮ ಆಧುನಿಕ ನಾಗರೀಕತೆಯ ಸ್ಪೇಸ್ ಅನ್ನೇ ಒಪ್ಪಿಕೊಳ್ಳುವುದಿಲ್ಲ. ಇವು ನಾಗರೀಕ ಮನುಷ್ಯನ ನವ್ಯಪೂರ್ವ ಮತ್ತು ನವ್ಯ ಜೀವನಕ್ರಮಗಳ ಕುರಿತ ಚರ್ಚೆಗೆ ತೆರೆದುಕೊಡುತ್ತವೆ. ನವೋತ್ತರ ಚಿಂತನೆಗಳಿಗೆ ಅಡಿಪಾಯ ಹಾಕುತ್ತವೆ. ಅದು ಬೇರೆಯೇ ಚರ್ಚೆ. ಅದನ್ನು ಚರ್ಚಿಸುವುದು ಇಲ್ಲಿಯ ಉದ್ದೇಶವಲ್ಲ. ಆದರೆ ನಾಗರೀಕತೆಗೆ ಅತ್ಯಂತ ನಿಕಟವಾಗಿ ಬದುಕುತ್ತಿರುವ ಕಾಡುಗೊಲ್ಲರಂಥಾ ಸಮಾಜಗಳ ವಿಷಯ ಬೇರೆಯೇ. ನಾಗರೀಕತೆಯ ನಿರಂತರ ವಿಸ್ತಾರದ ಹಂಬಲ ಹೊತ್ತ ಆಧುನಿಕ ಸಾಮಾಜಿಕ-ಅರ್ಥ ರಾಜಕೀಯ ಈ ಸಮುದಾಯಗಳನ್ನು ತಮ್ಮಷ್ಟಕ್ಕೆ ತಾವು ಇರಲು ಬಿಟ್ಟಿಲ್ಲ ಎನ್ನುವುದು ಒಂದು ಮಾತು. ಮಾನವನ ನಿರಂತರ ಆವಿಷ್ಕಾರ ಮತ್ತು ಪ್ರಗತಿಯ ಸಹಜ ವಾಂಛೆಯ ಕಾರಣದಿಂದಾಗಿ ಕೂಡ ಜನಾಂಗವೊಂದು ಆಂತರಿಕವಾಗಿಯೂ ತಾನಿರುವಂತೆಯೇ ಇರಲು ಬಯಸಿಲ್ಲ ಎನ್ನುವುದು ಅದರ ಹಿಂದೆಯೇ ಬರುವ ಮಾತು. ಕಾಡು ನಿರ್ವಹಣೆಗೆ ಮತ್ತು ಖೆಡ್ಡಾಕ್ಕೆ ಅನುಕೂಲವಾಗುವಂತೆ ಸೋಲಿಗರನ್ನು ಮತ್ತು ಜೇನುಕುರುಬರನ್ನು ಮೈಸೂರು ಅರಸರು ಒಲಿಸಿಕೊಂಡ ಬಗೆ ಅಲ್ಪಸ್ವಲ್ಪ ದ್ರವ್ಯ, ಸವಲತ್ತುಗಳನ್ನು ಕೊಡಮಾಡುವುದೇ ಆಗಿತ್ತು. ಹಾಗೆಯೇ, ತೀರಾ ಸಣ್ಣ ಸವಲತ್ತು ಕೂಡಾ ಈ ಜನಗಳನ್ನು ಅರಸರ ಲಾಭಾಸಕ್ತಿಗಳೊಂದಿಗೆ ಸಹಕರಿಸುವಂತೆ ಮಾಡಿತ್ತು.

ಈಗ ಕಾಡುಗೊಲ್ಲರ ಹಟ್ಟಿಯೊಳಕ್ಕೆ ಹೋಗಲು ಹೊರಟಿದ್ದ ಜನಪ್ರತಿನಿಧಿಯನ್ನು ಹಟ್ಟಿಯೊಳಕ್ಕೆ ಬಿಟ್ಟುಕೊಳ್ಳಲಿಲ್ಲ ಎನ್ನುವುದನ್ನು ಪ್ರಗತಿಪರ ಸಮಾಜ ಬಹುವಾಗಿ ಜಾತಿ ವ್ಯವಸ್ಥೆ, ನಾಗರೀಕತೆ ಮತ್ತು ಸಂವಿಧಾನ – ಈ ಅಂಶಗಳ ಮೂಲಕವೇ ಅರ್ಥೈಸಲು ಯತ್ನಿಸಿತು. ಸಮುದಾಯ ಸುಧಾರಣೆಯ ಆಶಯ ಹೊತ್ತು ಹೋದಾಗಲೂ ಜಾತಿ ವ್ಯವಸ್ಥೆ, ಅಸ್ಪೃಶ್ಯತೆಗಳೇ ಹೆಚ್ಚಾಗಿ ಪ್ರಗತಿಯನ್ನು ದೂರತಳ್ಳಿವೆ ಎನ್ನುವ ಆತಂಕವನ್ನೂ ಅದು ಹೊರಹಾಕಿತು. ಇಲ್ಲಿ ಆ ಜನಪ್ರತಿನಿಧಿ ಯಾವ ಪಕ್ಷ, ಸಿದ್ಧಾಂತಕ್ಕೆ ಸೇರಿದವರು ಎನ್ನುವುದಾಗಲೀ, ಸ್ಥಳೀಕರೇ, ಹೊರಗಿನವರೇ ಎನ್ನುವುದಾಗಲೀ ಅಷ್ಟು ಮುಖ್ಯವಲ್ಲ. ಬಹುಶಃ ಬೇರಾವುದೇ ಪಕ್ಷದ, ಪರಿಶಿಷ್ಠ ಜಾತಿಗೆ ಸೇರಿದ ಜನಪ್ರತಿನಿಧಿಯೊಬ್ಬರಿಗೆ ಈ ರೀತಿ ಆಗಿದ್ದರೂ ಸಮಾಜದ ಪ್ರತಿಕ್ರಿಯೆ ಇದೇ ರೀತಿ ಇರುತ್ತಿತ್ತು.

ಆದರೆ ನಾಗರೀಕ ಸಮಾಜದ ವ್ಯವಸ್ಥೆ ಇಂದು ದೇಶದಲ್ಲಿ ಯಾವ ರೀತಿ ಇದೆ? ನಮ್ಮಲ್ಲಿನ ಅನೇಕ ಹಳ್ಳಿಗಳಲ್ಲಿ ಇಂದಿಗೂ ದಲಿತರನ್ನು ದೇಗುಲಗಳಲ್ಲಿ ಬಿಟ್ಟುಕೊಳ್ಳುವುದಿಲ್ಲ. ಕೆಲವು ರಸ್ತೆಗಳಲ್ಲಿಯೂ ಬಿಟ್ಟುಕೊಳ್ಳುವುದಿಲ್ಲ. ಮನೆಗಳ ಒಳಕ್ಕೆ ಬಿಟ್ಟುಕೊಳ್ಳುವುದಿಲ್ಲ. ಮೇಲ್ಜಾತಿಯ ಮನೆಗಳಲ್ಲಿ ದಲಿತರನ್ನು ಬಿಡಿ, ಮಧ್ಯಮ ಜಾತಿಯವರನ್ನು ನಡುಮನೆಯೊಳಕ್ಕೂ ಬಿಟ್ಟುಕೊಳ್ಳುವುದಿಲ್ಲ. ಮಧ್ಯಮ ಜಾತಿಯವರು ದಲಿತರನ್ನು ಕೊಟ್ಟಿಗೆ, ಹಿತ್ತಲಲ್ಲಿ ಕೆಲಸ ಮಾಡಿಸಿಕೊಂಡು, ಮನೆಯ ಹೊರಗೇ ಮಾತಾಡಿಸಿ ಸಾಗಹಾಕುತ್ತಾರೆ. ದಲಿತರ ಮನೆಗಳಲ್ಲಿ ಇವರು ಯಾರೂ ಊಟಮಾಡುವುದಿಲ್ಲ. ಮಡಿ-ಮೈಲಿಗೆಗಳ ನಿರ್ಬಂಧ ಜಾತಿವ್ಯವಸ್ಥೆಯ ಯಾವ ಸ್ತರವನ್ನೂ ಬಿಟ್ಟಿಲ್ಲ ನಮ್ಮ ದೇಶದಲ್ಲಿ. ಭಾರತೀಯ ಮಾನವಶಾಸ್ತ್ರ ಅಧ್ಯಯನಗಳ ಪ್ರಕಾರ ಬುಡಕಟ್ಟು ಜನಾಂಗಗಳು ವರ್ಣಾಶ್ರಮ ವ್ಯವಸ್ಥೆಯೊಳಗೆ ಬರುವುದಿಲ್ಲ. ಅವರು ಜಾತಿಯ ಯಾವ ಸ್ತರಕ್ಕೂ ಸೇರಿರದೇ ಹೊರಗೇ ಉಳಿದವರು. ಆದರೆ ದೇಶ ಅವರನ್ನು ಮುಖ್ಯವಾಹಿನಿಗೆ ತರುವ ಸಲುವಾಗಿ ಪರಿಶಿಷ್ಠ ವರ್ಗವೆಂದು ಗುರುತಿಸಿದಾಗಿನಿಂದಲೂ ಅವರನ್ನು ಜಾತಿವ್ಯವಸ್ಥೆಯ ಒಂದು ಸ್ತರಕ್ಕೆ ತಂದು ನಿಲ್ಲಿಸುವ ಪ್ರಯತ್ನಗಳನ್ನು ನಮ್ಮ ಹಿಂದೂ ಸಮಾಜ ಸಡಗರದಿಂದ ಮಾಡುತ್ತಲೇ ಬಂದಿದೆ. ಜಾತಿವ್ಯವಸ್ಥೆಯೊಳಕ್ಕೆ ತಂದು ಸೇರಿಸಿದಾಗಷ್ಟೇ ಅವರು ಮುಖ್ಯವಾಹಿನಿಗೆ ಬಂದಂತಾಗುತ್ತದೆ ಎನ್ನುವುದು ಆ ಸಮಾಜದ ಅಘೋಷಿತ ಸಂಕಲ್ಪ. ಈ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ನವರಾಜಕೀಯ ತವಕ ಈ ಹುನ್ನಾರಗಳನ್ನು ಇನ್ನಷ್ಟು ತ್ವರಿತಗೊಳಿಸುತ್ತಿದೆ.

ನಾಗರೀಕ ನೋಂದಣಿ ಕಾರ್ಯಕ್ರಮವನ್ನು ಇಡೀ ದೇಶಕ್ಕೆ ವಿಸ್ತರಿಸುವ ಮಾತುಗಳು ಕೇಳಿಬರುತ್ತಿರುವ, ಸಂವಿಧಾನವನ್ನೂ ಉಲ್ಲಂಘಿಸಿ ಒಂದು ರಾಜ್ಯವನ್ನೇ ವಿಸರ್ಜಿಸಿ, ಅಲ್ಲಿಯ ಜನರನ್ನೇ ನಿರ್ಬಂಧಿಸಿ ಇಟ್ಟಿರುವ ಈ ಕಾಲದಲ್ಲಿ, ದೇಶಕ್ಕೊಂದೇ ಸಂವಿಧಾನ, ಧ್ವಜ, ಭಾಷೆ, ಧರ್ಮ ಎನ್ನುವ ಮನಸ್ಥಿತಿಯಿರುವ ಪ್ರಭುತ್ವವೇ ಇವನು ನಮ್ಮವ, ಅವನು ನಮ್ಮವನಲ್ಲ ಎನ್ನುತ್ತಿದೆ. ಇನ್ನು ಸಮಾಜದ ಅತ್ಯಂತ ತಳಸ್ತರದಲ್ಲಿರುವ ಸಮುದಾಯವೊಂದು ಹೀಗೆ ವರ್ತಿಸಿದರೆ ಅದರಲ್ಲಿ ಆಶ್ಚರ್ಯ ಪಡುವುದೇನಿದೆ?

ಈ ಘಟನೆಯಲ್ಲಿ ನೋಡಬೇಕಾದ ಮತ್ತೊಂದು ಕುತೂಹಲಕರ ಅಂಶವೆಂದರೆ, ಸರ್ಕಾರಗಳು ಸಮುದಾಯ ಸುಧಾರಣೆಗಾಗಿ ವ್ಯಯ ಮಾಡುವ ಬದಲಿಗೆ ಅದನ್ನು ಕಾರ್ಪೋರೇಟ್ ಸಂಸ್ಥೆಗಳ ತಲೆಗೆ ಕಟ್ಟುತ್ತಿವೆ. ಆ ಸಂಸ್ಥೆಗಳು ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿಯ (Corporate Social Responsibility) ಹೆಸರಲ್ಲಿ ತಮ್ಮ ಲಾಭದ ಅತ್ಯಲ್ಪ ಹಣವನ್ನು ಖರ್ಚುಮಾಡುತ್ತವೆ. ಆದರೆ ಅವು ತಮಗೆ ನಾಳೆ ಆಗಬೇಕಿರುವ ದೊಡ್ಡಲಾಭದ ಮುಂಗಾಣ್ಕೆಯಿಲ್ಲದೇ ಖರ್ಚು ಮಾಡುತ್ತವೆಯೇ? ಭೂಮಿ, ನೈಸರ್ಗಿಕ ಸಂಪನ್ಮೂಲ, ಮಾನವ ಸಂಪತ್ತು, ಇಲ್ಲವೇ ಸಾಮುದಾಯಿಕ ಪ್ರತಿರೋಧಕ್ಕೆ ತಡೆ – ಹೀಗೆ ಯಾವುದೋ ಒಂದರ ಅನುಕೂಲವನ್ನು ಪಡೆಯುವ ಅಥವಾ ಪ್ರತಿಕೂಲತೆಯನ್ನು ನಿವಾರಿಸಿಕೊಳ್ಳುವ ಬಯಕೆಯಿಲ್ಲದಿದ್ದರೆ ಕಾಡುಗೊಲ್ಲರಹಟ್ಟಿಯ ಸುಧಾರಣೆಗೆ ಏಕೆ ಕೈಹಾಕುತ್ತವೆ ಎನ್ನುವುದನ್ನು ನಾವು ಗ್ರಹಿಸಬೇಕಾಗುತ್ತದೆ. ಸಮುದಾಯ ಜವಾಬ್ದಾರಿಯ ನೆಪವೊಡ್ಡಿ ತನ್ನ ದೀರ್ಘಕಾಲೀನ ಲಾಭವನ್ನು ಬಯಸುವ CSR, ಸುಧಾರಣೆಯ ನೆಪವೊಡ್ಡಿ ಕಾರ್ಪೋರೇಟುಗಳಿಗೆ ಲಾಭಮಾಡಿಕೊಡಲು ಯತ್ನಿಸುವ ಜನಪ್ರತಿನಿಧಿ, ಪಾವಿತ್ರ್ಯದ ನೆಪವೊಡ್ಡಿ ಜನಪ್ರತಿನಿಧಿಯೊಬ್ಬರು ತಮ್ಮ ಹಟ್ಟಿಯೊಳಕ್ಕೆ ಬರದಂತೆ ತಡೆದು ಆ ಮೂಲಕ ತಮ್ಮ ಮೇಲುಸ್ತರವನ್ನು ದಾಖಲಿಸ ಬಯಸುವ ಒಂದು ಜನಸಮುದಾಯ, ಹೀಗೆ ತಳಕು ಹಾಕಿಕೊಂಡಿರುವ ಇವೆಲ್ಲ ನಾವು ಇಂದು ಬದುಕುತ್ತಿರುವ ದೇಶಕಾಲದ ದೊಡ್ಡ ಪ್ರತಿಮೆಯಾಗಿ ಕಾಣುತ್ತದೆ. ನೈತಿಕ ಅದಃಪತನದ ತ್ರಿಕೋನದಲ್ಲಿ ಸಿಲುಕಿರುವ ದೇಶವನ್ನು ಸೂಚಿಸುತ್ತದೆ. ನಾವು ಒಂದು ದೇಶವಾಗಿ ಎಂತಹ ಎರಡು ತಲೆ ಬದುಕನ್ನು ಬದುಕುತ್ತಿದ್ದೇವೆ ಎನ್ನುವುದನ್ನು ಸಾರಿ ಹೇಳುತ್ತದೆ. ನಮ್ಮ ಪ್ರಗತಿಪರ ಸಮಾಜ ಈ ಸಂಕೀರ್ಣ ಆಯಾಮಗಳನ್ನು ಕಾಣದ ಹೊರತು, ಅವುಗಳ ಸಮಗ್ರ ಸುಧಾರಣೆಯ ಚರ್ಚೆಯನ್ನು ಮುನ್ನೆಲೆಗೆ ತರದ ಹೊರತು, ಗೊಲ್ಲರಹಟ್ಟಿಯ ಘಟನೆಯೊಂದನ್ನೇ ಪ್ರತ್ಯೇಕಿಸಿ ನೋಡಿ, ಅದನ್ನು ಖಂಡಿಸುವ ಅಥವಾ ಸಮರ್ಥಿಸುವ ಕೆಲಸಕ್ಕೆ ಇಳಿಯಲಾಗುವುದಿಲ್ಲ.

ತೀವ್ರ ಆರ್ಥಿಕ ಹಿಂಜರಿತದಲ್ಲಿ ದೇಶ ಕಾಣತೊಡಗಿದ್ದ ಆರ್ಥಿಕ ಪ್ರಗತಿ ಕರಗಿಯೇ ಹೋಗುತ್ತಿರುವ ಕಾಲದಲ್ಲಿ, ದೇಶದ ಬಹುತ್ವಕ್ಕೇ ಆತಂಕ ಆವರಿಸುತ್ತಿದೆ. ಬರ, ನೆರೆಗಳಿಂದ ತತ್ತರಿಸಿಹೋಗಿರುವ ಜನರ ಸಹಾಯಕ್ಕೆ ಸರ್ಕಾರಗಳು ನಿಲ್ಲುತ್ತಿಲ್ಲದ ಕಾಲದಲ್ಲಿ, ಎಲ್ಲ ಚಟುವಟಿಕೆಗಳಲ್ಲೂ ರಾಜಕೀಯ ಲಾಭವನ್ನೇ ಎದುರುನೋಡುವ ಜನಪ್ರತಿನಿಧಿಗಳಿಂದ ದೇಶ ತುಂಬಿಹೋಗಿದೆ. ಎಲ್ಲ ನೈಸರ್ಗಿಕ ಸಂಪತ್ತೂ, ಕೌಶಲ್ಯವೂ ಕರಗಿಹೋಗುತ್ತಿರುವ ಕಾಲದಲ್ಲಿ, ಅರ್ಥವ್ಯವಸ್ಥೆ ಬಂಡವಾಳಶಾಹಿಯನ್ನು ಉತ್ತೇಜಿಸುತ್ತಾ, ಬಡವನನ್ನು ದೂರವೇ ಇಡುತ್ತಿವೆ. ದೇಶದ ಸಾರ್ವಭೌಮತ್ವವನ್ನೇ ಜಾಗತೀಕರಣಕ್ಕೆ ಒತ್ತೆಯಿಡುತ್ತಿರುವ ಕಾಲದಲ್ಲಿ, ನಿಜ ಸಮಸ್ಯೆಗಳಿಂದ ಜನರನ್ನು ಬೇರೆಯೇ ಅಕಲ್ಪಿತ ಚರ್ಚೆಗೆ ಎಳೆದೊಯ್ಯುತ್ತಿರುವ ಸ್ಪಿನ್ ಡ್ರೈವರುಗಳು ಉಛ್ರಾಯ ಮೆರವಣಿಗೆಯಲ್ಲಿದ್ದಾರೆ. ಇಂತಹ ವಿಷಮ ದ್ವಂದ್ವಗಳ ನಡುವೆಯೇ ನಮ್ಮದು ಹಿಂದೂರಾಷ್ಟ್ರವಾಗಬೇಕೆಂಬ ಹಂಬಲದಿಂದ ಹೊರಟಿರುವ ಈ ದೇಶದ ಜನ ಈ ಘಟನೆಯ ಬಗ್ಗೆ ಚರ್ಚಿಸುವ ಅರ್ಹತೆ ಮತ್ತು ಯೋಗ್ಯತೆಯನ್ನು ಖಂಡಿತಾ ಕಳಕೊಂಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೋಕಾರೂಢಿ

ಮಕ್ಕಳೇ ಹೆತ್ತವರನ್ನು ಕೊಲ್ಲುತ್ತಾರೆಂದರೆ..?!

Published

on

  • ವಿವೇಕಾನಂದ.ಹೆಚ್.ಕೆ

ಇತ್ತೀಚಿಗೆ ಒಬ್ಬ ಮಗ ಪಬ್ಜಿ ಎಂಬ ಮೊಬೈಲ್ ವಿಡಿಯೋ ಗೇಮ್ ಆಡಲು ಬಿಡದ ತಂದೆಯನ್ನೇ ಬರ್ಬರವಾಗಿ ಕೊಂದ. ಮತ್ತೊಂದು ಘಟನೆಯಲ್ಲಿ ಮಗಳು ತಮ್ಮ ಪ್ರೀತಿಗೆ ಅಡ್ಡಿಪಡಿಸಿದ ತಂದೆಯನ್ನೇ ಪ್ರಿಯಕರನೊಂದಿಗೆ ಸೇರಿ ಕೊಂದಳು. ಆಸ್ತಿ ಮತ್ತು ಕೌಟುಂಬಿಕ ಕಲಹದಿಂದ ಮಗನೊಬ್ಬ ತನ್ನ ತಂದೆಯ ಎರಡೂ ಕಣ್ಣುಗಳನ್ನು ಕಿತ್ತ ಘಟನೆ ಕೆಲವು ತಿಂಗಳುಗಳ ಹಿಂದೆ ನಡೆದಿತ್ತು.

ಇದು ಕೇವಲ ಕೆಲವು ಘಟನೆಗಳು ಮಾತ್ರ. ಆದರೆ ಒಟ್ಟಾರೆ ಸಮಾಜದಲ್ಲಿ ತಂದೆ ತಾಯಿ ಮಕ್ಕಳ ನಡುವಿನ ಒಂದು ಸಂಘರ್ಷಮಯ ಅಸಮಾಧಾನ ಆಂತರ್ಯದಲ್ಲಿ ಹೊಗೆಯಾಡುತ್ತಿದೆ. ಬಹುಮುಖ್ಯವಾಗಿ ತಂದೆ ಮತ್ತು ಗಂಡು ಮಗ/ಮಕ್ಕಳು, ತಾಯಿ ಮತ್ತು ಹೆಣ್ಣು ಮಗಳು/ಮಕ್ಕಳು ನಡುವೆ ಒಂದು ಸಾಮಾಜಿಕ ಸಂಘರ್ಷ ಜಾರಿಯಲ್ಲಿದೆ. ಅದರಲ್ಲೂ ಯೌವ್ವನದ ಸಮಯದಲ್ಲಿ ಈ ಜನರೇಷನ್ ಗ್ಯಾಪ್ ತುಂಬಾ ದೊಡ್ಡದಾಗುತ್ತಿದೆ. ಬಹಳಷ್ಟು ಪೋಷಕರು ಗೊಂದಲ ಮತ್ತು ಆತಂಕಕ್ಕೆ ಒಳಗಾಗಿದ್ದಾರೆ.

ಕೆಲವು ಒಳ್ಳೆಯ ಕೌಟುಂಬಿಕ ಸಂಬಂಧಗಳು ಈಗಲೂ ಉಳಿದಿರುವುದು ನಿಜ. ತಂದೆ ತಾಯಿ ಮಕ್ಕಳು ಅತ್ಯಂತ ಗೌರವಯುತವಾಗಿ ಒಬ್ಬರಿಗೊಬ್ಬರು ಪೂರಕವಾಗಿ ಪ್ರೀತಿಯಿಂದ ಚರ್ಚಿಸುತ್ತಾ ಅನ್ಯೋನ್ಯವಾಗಿ ಇದ್ದಾರೆ. ಅದನ್ನು ನೋಡಿದಾಗ ತುಂಬಾ ಸಂತೋಷವಾಗುತ್ತದೆ.

ಆದರೆ ಆ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇದರ ಬಗ್ಗೆ ಯೋಚಿಸಬೇಕಿದೆ. ಬಹಳಷ್ಟು ಜನರು ಯೋಚಿಸುವಂತೆ ಈಗಿನ ಯುವಜನಾಂಗವೇ ಇದಕ್ಕೆಲ್ಲಾ ಹೊಣೆ ಎಂಬುದು ಖಂಡಿತ ತಪ್ಪಾಗುತ್ತದೆ. ಇದನ್ನು ವೈಯಕ್ತಿಕ ನೆಲೆಯಲ್ಲಿ ನನ್ನ ಮಗ ಸರಿ ಇಲ್ಲ, ನನ್ನ ಮಗಳು ಸರಿ ಇಲ್ಲ, ನನ್ನ ತಂದೆ ಸರಿ ಇಲ್ಲ ಎಂದು ನೋಡದೆ ಇಡೀ ಸಾಮಾಜಿಕ ವ್ಯವಸ್ಥೆಯ ಬದಲಾವಣೆಗಳನ್ನು ಗಮನಿಸಬೇಕು. ಬಹುತೇಕರ ಮನೆಯಲ್ಲಿ ಈ ಸಮಸ್ಯೆ ಬೇರೆ ಬೇರೆ ರೂಪದಲ್ಲಿ ಇದೆ .
ನಮ್ಮ ಮನೆಯಲ್ಲಿ ಮಾತ್ರ ಎಂಬುದನ್ನು ದಯವಿಟ್ಟು ಬಿಟ್ಟುಬಿಡಿ.

ಮೊದಲಿಗೆ ಅರ್ಥಮಾಡಿಕೊಳ್ಳಬೇಕಾದ ವಿಷಯವೆಂದರೆ,
ವ್ಯವಸ್ಥೆಯೇ ಬದಲಾಗಿದೆ. ಸಂಪರ್ಕ ಕ್ರಾಂತಿ ಎಲ್ಲರನ್ನೂ ಬೆಸೆದಿದೆ. ಉದ್ಯೋಗ ಮತ್ತು ಹಣಕಾಸಿನ ಪರಿಸ್ಥಿತಿ ಸ್ವತಂತ್ರ ಚಿಂತನೆಗೆ ಅವಕಾಶ ಕಲ್ಪಿಸಿದೆ. ಪೋಷಕರು ಅಥವಾ ಮಕ್ಕಳ ಮೇಲಿನ ಅವಲಂಬನೆ ಕಡಿಮೆಯಾಗಿದೆ. ಮನೋರಂಜನೆ ಎಲ್ಲಾ ಮಿತಿಗಳನ್ನು ಮೀರಿದೆ. ಮಾನವೀಯ ಮೌಲ್ಯಗಳು ಮತ್ತು ವೈಯಕ್ತಿಕ ಸಂಬಂಧಗಳ ಗಾಡತೆಯಲ್ಲಿ ಮೊದಲಿನಷ್ಟು ನಿರೀಕ್ಷಿ ಇಟ್ಟುಕೊಳ್ಳುವಂತಿಲ್ಲ. ಒತ್ತಡದ ಜೀವನಶೈಲಿ ತಾಳ್ಮೆಯ ಮಟ್ಟ ಕುಸಿಯುವಂತೆ ಮಾಡಿದೆ. ಎಲ್ಲಾ ಕ್ಷೇತ್ರದಲ್ಲಿಯೂ ಬದಲಾವಣೆಗಳು ಮಿಂಚಿನಂತೆ ಆಗುತ್ತಿದೆ. ಈ ಎಲ್ಲಾ ಕಾರಣಗಳಿಂದ ಯುವ ಜನಾಂಗದ ಮನಸ್ಥಿತಿ ಮೊದಲಿನಂತೆ ಇಲ್ಲ.

ಹಿಂದೆಯೂ ಈ ಸಂಘರ್ಷ ಇತ್ತು. ಜನಸಂಖ್ಯೆಗೆ ಅನುಗುಣವಾಗಿ ನೋಡಿದಾಗಲೂ ಈ ಪ್ರಮಾಣ ತುಂಬಾ ಕಡಿಮೆಯಿತ್ತು. ಆಗ ಹಿಂಸಾತ್ಮಕ ರೂಪ ಬಹಳ ವಿರಳವಿತ್ತು. ಮಕ್ಕಳಿಗೆ ಬುದ್ದಿ ಹೇಳಬೇಕು, ಸಂಸ್ಕಾರ ಕಲಿಸಬೇಕು, ಮೊಬೈಲ್ ಕೊಡಬಾರದು, ಹೆದರಿಕೆ ಹುಟ್ಟಿಸಬೇಕು ಮುಂತಾದ ಕ್ರಮಗಳು ಹಳತಾಗಿವೆ. ಅದರಿಂದ ಹೆಚ್ಚಿನ ಪರಿಣಾಮ ಆಗುತ್ತಿಲ್ಲ.

ಮಕ್ಕಳ ಗ್ರಹಿಕೆಯ ಬುದ್ದಿಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಬಹುಬೇಗ ಸಮಾಜದ ಎಲ್ಲಾ ವಿಷಯಗಳು ಅವರಿಗೆ ತಿಳಿಯುವ ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಇದರಿಂದಾಗಿ ಅತಿಹೆಚ್ಚು ಅಪಾಯಕಾರಿ ಮತ್ತು ಪೋಷಕರಿಗೆ ತಲೆ ಬಿಸಿಯಾಗಿರುವುದು ಮಕ್ಕಳು ದುಶ್ಚಟಗಳ ದಾಸರಾಗುತ್ತಿರುವುದು. ಕೇವಲ ಸಿಗರೇಟು ಎಣ್ಣೆ ಮಾತ್ರವಲ್ಲದೆ ಹುಕ್ಕಾ ಬಾರ್, ಡ್ರಗ್ಸ್, ಬೆಟ್ಟಿಂಗ್ ಅವರ ಆಯ್ಕೆಗಳಾಗಿವೆ.

ನಂತರದಲ್ಲಿ ಮೊಬೈಲ್ ವೀಡಿಯೋ ಗೇಮ್ ಮತ್ತು ಬೈಕುಗಳ ಹುಚ್ಚು ಸಾಹಸ ಅವರನ್ನು ಆಕರ್ಷಿಸುತ್ತಿದೆ. ಇದನ್ನು ಹೊರತುಪಡಿಸಿ ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವ ಅತ್ಯಂತ ಗಾಢವಾಗಿ ಅವರನ್ನು ಸೆಳೆಯುವ ಚಟುವಟಿಕೆಗಳ ಬಗ್ಗೆ ಪೋಷಕರು ಚಿಂತೆಗೀಡಾಗಿದ್ದಾರೆ.

ಇದನ್ನು ಎದುರಿಸುವ ಬಗೆ ಹೇಗೆ ?

ಇದು ಅಷ್ಟು ಸುಲಭವಲ್ಲ. ಮೊದಲೇ ಹೇಳಿದಂತೆ ಇದು ವೈಯಕ್ತಿಕ ನೆಲೆ ಮೀರಿ ಸಾಮಾಜಿಕ ಸಮಸ್ಯೆಯಾಗಿ ಎಲ್ಲಾ ಕಡೆ ಹರಡಿದೆ. ಶಾಲೆ, ಸ್ನೇಹಿತರು, ಸಾಮಾಜಿಕ ಜಾಲತಾಣಗಳು ಮುಂತಾದ ಎಲ್ಲವೂ ಈ ಮಕ್ಕಳು ಹದಗೆಡಲು ಪೂರಕ ವಾತಾವರಣ ಕಲ್ಪಸಿರುವಾಗ ಅದನ್ನು ತಡೆಯುವುದು ಹೇಗೆ ?

ಮಕ್ಕಳ ಮೇಲೆ ಅತಿಯಾದ ನಿಯಂತ್ರಣ ಮತ್ತು ನಿರೀಕ್ಷೆ ಇಟ್ಟುಕೊಳ್ಳಬಾರದು.
ಆದರೆ ಅದೇ ಸಮಯದಲ್ಲಿ ಈಗಿರುವುದಕ್ಕಿಂತ ಎರಡು ಪಟ್ಟು ಪ್ರೀತಿ ಮತ್ತು ಮಕ್ಕಳ ಮೇಲಿನ ಕಾಳಜಿಯನ್ನು ದುಪ್ಪಟ್ಟು ಮಾಡಬೇಕು. ಇದು ಕೇವಲ ಕಾಟಾಚಾರಕ್ಕೆ ಆಗದೆ ಜವಾಬ್ದಾರಿಯುತವಾಗಿ ಆಗಬೇಕು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಒಂದು ವೇಳೆ ಮಕ್ಕಳು ಸರಿಯಾದ ದಾರಿಯಲ್ಲಿ ಮುನ್ನಡೆಯುತ್ತಿದ್ದಾರೆ ಎಂದರೆ ಅದರ ಅವಶ್ಯಕತೆ ಇಲ್ಲ. ದಾರಿ ತಪ್ಪಿದ್ದಾರೆ ಎಂದು ಮನವರಿಕೆಯಾದಾಗ‌ ಇದು ಅತ್ಯಂತ ಅವಶ್ಯ.

ಹದಿಹರೆಯದಲ್ಲಿ ಮಕ್ಕಳು ದುಶ್ಚಟ ಅಥವಾ ಪ್ರೀತಿಗೆ ಒಳಗಾಗಿದ್ದಾರೆ ಎಂದು ಪೋಷಕರಿಗೆ ತಿಳಿದಾಗ ಅವರು ವಿಲವಿಲ ಒದ್ದಾಡಿಬಿಡುತ್ತಾರೆ. ಸಮಾಜದ ನೀತಿ ನಿಯಮಗಳಿಗೆ ಹೆದರಿ ಅತ್ಯಂತ ಆಕ್ರೋಶ ಭರಿತರಾಗುತ್ತಾರೆ. ಸಮಸ್ಯೆಯ ಮೂಲ ಇರುವುದು ಇಲ್ಲಿಯೇ !

ಇದೊಂದು ಅಗ್ನಿ ಪರೀಕ್ಷೆ. ನಾವೇ ಹುಟ್ಟಿಸಿ ಪ್ರೀತಿಯನ್ನು ಧಾರೆ ಎರೆದು ಬೆಳೆಸಿದ ಮಗು ಈಗ ನಮ್ಮ ಕಣ್ಣ ಮುಂದೆಯೇ ಸಮಾಜದ ಒಪ್ಪಿತ ನಿಯಮಗಳಿಗೆ ವಿರುದ್ಧವಾಗಿ ಹಾಳಾಗುವ ವರ್ತನೆ ತೋರುತ್ತಿರುವಾಗ ನಾವು ತುಂಬಾ ತುಂಬಾ ತಾಳ್ಮೆಯ ಪ್ರಬುದ್ದತೆಯನ್ನು ಪ್ರದರ್ಶಿಸಬೇಕಾಗುತ್ತದೆ. ಇಲ್ಲದಿದ್ದರೆ ಮಕ್ಕಳ ಜೊತೆ ಇಡೀ ಕುಟುಂಬವೇ ನಾಶವಾಗುವ‌ ಸಾಧ್ಯತೆ ಇದೆ.

ನಮ್ಮ ಬಂಧು ಬಳಗ ಸ್ನೇಹಿತರು ನೆರೆಹೊರೆಯವರು ಈ ಸಂದರ್ಭದಲ್ಲಿ ನಮ್ಮ ನೆರವಿಗೆ ಬರದೆ ಕುಹುಕವಾಡುವ ಸಾಧ್ಯತೆಯೇ ಹೆಚ್ಚು. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಕೊರಗದೆ ದಿಟ್ಟತನದಿಂದ ಸಮಸ್ಯೆಯ ಮೂಲವನ್ನು ಕಂಡುಹಿಡಿದು ಮಗು ನನ್ನ ದೇಹದ ಒಂದು ಭಾಗ ಅದರ ಎಲ್ಲಾ ಒಳಿತು ಕೆಡಕುಗಳಿಗೆ ನಾನೂ ಸಹ ಜವಾಬ್ದಾರ ಎಂದು ನಮ್ಮ ಸಂಪೂರ್ಣ ಪ್ರಯತ್ನ ಹಾಕಬೇಕು. ಅದು ಬಿಟ್ಟು ಕೋಪದ ಮನಸ್ಥಿತಿಯಲ್ಲಿ ಮಕ್ಕಳನ್ನು ನಮ್ಮಿಷ್ಟದಂತೆ ದಂಡಿಸಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಿ ದುರಂತದ ಅಂತ್ಯ ಕಾಣಬೇಕಾಗುತ್ತದೆ.

ಇದು ತಾತ್ಕಾಲಿಕ ಪ್ರಯತ್ನವಾಗಬಾರದು. ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ನಿರಂತರತೆಯನ್ನು ಕಾಪಾಡಿಕೊಳ್ಳಬೇಕು.
ಬಹುಬೇಗ ನಿರಾಶರಾಗಬಾರದು. ಇದಲ್ಲದೆ ನಮ್ಮ ನಮ್ಮ ಅನುಭವದ ಆಧಾರದಲ್ಲಿ ಇನ್ನಷ್ಟು ಯೋಚಿಸಿ ಕ್ರಮ ಕೈಗೊಳ್ಳಬೇಕು. ಜೊತೆಗೆ ಇದನ್ನು ಮೊದಲೇ ಊಹಿಸಿ ಸಾಧ್ಯವಾದಷ್ಟು ಪ್ರೀತಿ ಮತ್ತು ಜವಾಬ್ದಾರಿಯ ಮುನ್ನೆಚ್ಚರಿಕೆ ತುಂಬಾ ತುಂಬಾ ಅವಶ್ಯ.

ಏನೇ ಆದರೂ ‌ಧೃತಿಗೆಡದೆ ಸಮಸ್ಯೆಗಳನ್ನು ಎದುರಿಸುವುದು ನಮ್ಮ ಬದುಕಿನ ಭಾಗವಾಗಿ ಮಾಡಿಕೊಂಡರೆ ದುರಂತಗಳ ಸಾಧ್ಯತೆಯನ್ನು ಇಲ್ಲವಾಗಿಸಬಹುದು. ಮತ್ತೊಮ್ಮೆ ಹೇಳುತ್ತೇನೆ. ಇದು ಸಾಮಾಜಿಕ ಸಮಸ್ಯೆ. ಇಂತಹ ಸಮಾಜದಲ್ಲಿ ಇದು ಸಾಮಾನ್ಯ. ಇದರಿಂದ ತಪ್ಪಿಸಿಕೊಳ್ಳಲು ಆಗದು. ಎದುರಿಸುವುದನ್ನು ಕಲಿಯಬೇಕು ಮತ್ತು ಬಂದದನ್ನು ಸ್ವೀಕರಿಸಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೋಕಾರೂಢಿ

ಗಣಿಗಾರಿಕೆಯ ಪ್ರಭಾವ

Published

on

ಗಣಿಗಾರಿಕೆ ಅಂತ ಬಂದಾಗ ನಮಗೆ ನೆನಪಾಗುವುದು ವ್ಯಾಪಾರ. ಜಗತ್ತಿನಲ್ಲಿ ಅತ್ಯಂತ, ಬಹುದೊಡ್ಡ ಲಾಭವನ್ನು ಮಾಡಿಕೊಳ್ಳುವ ಕೆಲಸ. ನಾವು ದೇಶದಲ್ಲಿ ಅತಿದೊಡ್ಡ ಶ್ರೀಮಂತರು ಯಾರೆಂದು ಗೂಗಲ್ನಲ್ಲಿ ನೋಡಿದರೆ, ಒಂದು ಸಾಫ್ಟ್ವೇರ್ ಕಂಪನಿಯವರು ಇರುತ್ತಾರೆ ಅಥವಾ ಈ ಗಣಿಗಾರಿಕೆಯ ಮುಖ್ಯಸ್ಥ ಇರುತ್ತಾನೆ.

ಗಣಿ ಗಾರಿಕೆಎಂದರೆ ಭೂಮಿಯಲ್ಲಿ ಇರುವ ಬೆಲೆಬಾಳುವ ವಸ್ತುಗಳನ್ನು ಅಗಿದು ಅದನ್ನು ಅತಿಹೆಚ್ಚು ಲಾಭಕ್ಕೆ ಮಾರುವುದು. ಉದಾಹರಣೆಗೆ- ಕಬ್ಬಿಣ, ವಜ್ರ ಇತ್ಯಾದಿ ಇನ್ನು ಬಹಳ ಇತರೆ ವಸ್ತುಗಳನ್ನು ಅಗಿದು ತೆಗೆದು ಅದಕ್ಕೆ ಸೂಕ್ತವಾದ ಆಕಾರವನ್ನು ಕೊಟ್ಟು ಮಾರುಕಟ್ಟೆಯಲ್ಲಿ ಮಾರುವುದು.

ಗಣಿಗಾರಿಕೆಯಿಂದಾಗುವ ಉಪಯೋಗಗಳು

  1. ಗಣಿಗಾರಿಕೆಯಿಂದ ದೇಶದ ಆರ್ಥಿಕ ಸ್ಥಿತಿ ಹೆಚ್ಚಾಗುವ ಸಾಧ್ಯತೆ ತುಂಬಾ ಇರುತ್ತದೆ.
  2. ಗಣಿಗಾರಿಕೆಯು ಹಳ್ಳಿಯ ಕಡೆ ಹೆಚ್ಚಾಗಿರುವ ಕಾರಣ , ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತಿದೆ.

ಇನ್ನು ಇತರೆ ಉಪಯೋಗಗಳು ತುಂಬಾ ಇವೆ. ನಮಗೆ ಗೋತ್ತೇಇದೆ, ಉಪಯೋಗಗಳಿಗಿಂತ ದುರುಪಯೋಗಗಳು ಜಾಸ್ತಿ ಇವೆ. ನಮಗೆ ಗೊತ್ತಿರುವುದರ ಹಾಗೆ ಕಳೆದ ಬಾರಿ ನಡೆದ ಕೇರಳ ಹಾಗೂ ನಮ್ಮ ರಾಜ್ಯದ ಕೊಡಗು ಜಿಲ್ಲೆಯಲ್ಲಿ ಮಣ್ಣಿನ ಶಿಖರ ಕುಸಿದು ಮಳೆ ಹೆಚ್ಚಾಗಿ ಫ್ಲಡ್ ಆಗಿರುವುದು ಹಾಗೂ ಈ ಬಾರಿ ಉತ್ತರಕನ್ನಡ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಿಂದಾಗುವಂತ ದುರಂತ ಘಟನೆಗಳು ರಾಜ್ಯದ ಜನರನ್ನು ಬೆಚ್ಚಿಬೀಳಿಸಿದೆ.

ಗಣಿ ಗಾರಿಕೆಯನ್ನು ಮಾಡುವಾಗ ಗುಡ್ಡ ಬೆಟ್ಟಗಳನ್ನು ಆಳವಾಗಿ ಅಗೆಯುತ್ತ ಹೋಗುತ್ತಾರೆ. ಆದರಿಂದ ಎಷ್ಟೋ ಮರ ಗಿಡಗಳನ್ನು ಕಡಿಯುತ್ತಾರೆ. ಆ ಜಾಗದಲ್ಲಿ ಇದ್ದಂತ ಕಾಡು ನಾಶವಾಗುತ್ತದೆ. ಗಿಡ ಮರಗಳನ್ನು ಕಡಿಯುವುದರಿಂದ ಕಾಡನ್ನು ನಾಶ ಮಾಡುವುದರಿಂದ ಗಣಿಗಾರಿಕೆಯನ್ನು ಹೆಚ್ಚು ಮಾಡುವುದರಿಂದ ನಮಗೆ ತುಂಬಾ ಅಪಾಯ ಉಂಟು ಮಾಡುತ್ತದೆ. ಮಾಲಿನ್ಯ ಹೆಚ್ಚಾಗುತ್ತದೆ, ಉಸಿರಾಟಕ್ಕೆ ಆಮ್ಲಜನಕ ಇಲ್ಲದಂತಾಗುತ್ತದೆ. ತಾಪಮಾನ ಹೆಚ್ಚಾಗುತ್ತದೆ, ಬರಗಾಲ ಬರುತ್ತದೆ.

ಈ ರೀತಿ ವಿಷಯವನ್ನು ತಿಳಿಸುತ್ತೀರಿವುದೇಕೆಂದರೆ ನಾವಾಗಿ ನಾವು ರೋಗಗಳಿಗೆ ತುತ್ತಾಗ ಬಾರದೆಂದು. ಒಂದು ವೇಳೆ ಆಮ್ಲಜನಕ ಇಲ್ಲದಂತಾಯಿತು ಅಥವಾ ಓಝೋನ್ ಪರದೆ ಪೂರ್ತಿಯಾಗಿ ನಾಶವಾಯಿತೆಂದರೆ ಅದರಿಂದ ಬರುವಂತ ರೋಗಗಳಿಗೆ ಮದ್ದುಗಳೇ ಇರುವುದಿಲ್ಲ. ಮಾನವ ಜೀವನ ಹೆಚ್ಚು ಬಿಸಿಲಿನಲ್ಲಿ ನರಕವನ್ನು ನೋಡಬೇಕಾಗುತ್ತದೆ.

ಇದರಿಂದ ನಾನು ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ, ನಾವು ಮರ ಗಿಡಗಳನ್ನು ಬೆಳೆಸಿದರೆ ಅವುಗಳು ನಮ್ಮನ್ನು ಬೆಳೆಸುತ್ತದೆ. ನಮ್ಮ್ ದೇಶದ ಒಟ್ಟು ಶಾಲಾ ಕಾಲೇಜುಗಳಿಂದ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ರಾಷ್ಟ್ರಿಯ ಹಬ್ಬಗಳ ದಿನದಂದು ಒಂದೊಂದು ಗಿಡ ನೆಟ್ಟರೆ, ಸ್ವತಂತ್ರ ಭಾರತದ ಆಯಸ್ಸನ್ನು ಹೆಚ್ಚಿಸಿದಂತಾಗುತ್ತದೆ.
ನನ್ನ ಈ ಒಂದು ಕಳಕಳಿ ನಿಮಗೆ ಸರಿ ಎನಿಸಿದರೆ ಅಥವಾ ಇಷ್ಟವಾದರೆ ತಕ್ಷಣವೇ ಗಿಡಗಳನ್ನು ಬೆಳೆಸಲು ಆರಂಭಿಸಿ .

ಅಂಕಿತ್.ಎಸ್
ದಾವಣಗೆರೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending