Connect with us

ಲೋಕಾರೂಢಿ

ದೇಶದ ಬೆನ್ನೆಲುಬು ಕರಗಿದಾಗ…!

Published

on

ಪ್ರತಿಯೊಂದು ದೇಶದ ಆರ್ಥಿಕತೆ ಆಯಾ ದೇಶದ ಒಂದು ಪ್ರಮುಖವಾದ ವಲಯದ ಮೇಲೆ ಅವಲಂಬಿತವಾಗಿರುತ್ತದೆ. ಅಂತಹ ವಲಯಗಳ ಏರುಪೇರಿನ ಮೇಲೆ ದೇಶದ ಆರ್ಥಿಕತೆಯ ವಿಶ್ಲೇಷಣೆಗಳು ಬದಲಾಗುತ್ತಾ ಹೋಗುತ್ತವೆ. ಬ್ಯಾಂಕಿಂಗ್, ಇಂಡಸ್ಟ್ರೀಸ್, ಪ್ರವಾಸೋದ್ಯಮ ಹೀಗೆ ಪ್ರತಿಯೊಂದು ದೇಶಕ್ಕೂ ಅದರದ್ದೇ ಆದ ಮಹತ್ವಪೂರ್ಣ ವಲಯಗಳಿವೆ. ಭಾರತದ ವಿಷಯಕ್ಕೆ ಬಂದರೆ ನಮ್ಮದು ಸಂಪೂರ್ಣ ಕೃಷಿ ಆಧಾರಿತವಾದದ್ದು. ಕೃಷಿ ನಮ್ಮ ನಾಡಿನ ಜೀವಾಳ. ಕೃಷಿಕ ಯಾ ರೈತ ನಮ್ಮ ಹೆಮ್ಮೆ. ಗ್ರಾಮಗಳ ಬೀಡಾಗಿರುವ ನಮ್ಮ ದೇಶ ಹಲವಾರು ವಿಶಿಷ್ಟತೆಗಳನ್ನು ಕಾಯ್ದುಕೊಂಡಿರುವುದು ಇದೇ ಕಾರಣಕ್ಕೆ. 

ಅದೆಷ್ಟೋ ದೇಶಗಳ ಆರ್ಥಿಕತೆ ಮಕಾಡೆ ಮಲಗಿದಾಗಲೂ ಕೂಡ ಭಾರತ ಮಾತ್ರ ಎಂತಹ ಆರ್ಥಿಕ ಹೊಡೆತವನ್ನೂ ಸಮರ್ಥವಾಗಿ ಎದುರಿಸಿದ್ದು ಇದೇ ಕೃಷಿ ವಲಯದಿಂದಾಗಿ. ಇದೇ ಕಾರಣಕ್ಕೆ ನಮ್ಮ ದೇಶದ ರೈತನನ್ನು ‘ಬೆನ್ನೆಲುಬು ಬೆನ್ನೆಲುಬು’ ಎಂದು ಕರೆದು ಆತನ ಬೆನ್ನೆಲುಬೇ ಸವೆಯುವಂತೆ ಮಾಡಲಾಗಿದೆ.

ರೈತಾಪಿ ವರ್ಗ ಈ ದೇಶದಲ್ಲಿ ಅನಾದಿ ಕಾಲದಿಂದಲೂ ತನ್ನ ಅಸ್ತಿತ್ವವನ್ನು ಸಮರ್ಥವಾಗಿ ಛಾಪೊತ್ತುತ್ತಾ ಬಂದಿದೆ. ದೇಶದ ಸಾಂಸ್ಕøತಿಕ ರಂಗಕ್ಕೆ, ಸಂಪ್ರದಾಯ-ಪರಂಪರೆಗಳಿಗೆ ರೈತನ ಕೊಡುಗೆ ಅಪಾರವಾದದ್ದು. ಕೃಷಿಕ ತೋರುವ ನೈತಿಕ ರೀತಿ ರಿವಾಜುಗಳು ಉತ್ಕøಷ್ಟ ಮಟ್ಟದವು. ವಿಪರ್ಯಾಸ ನೋಡಿ, ಅಕ್ಷರಗಳ ಮೂಲಕ ಇಷ್ಟೆಲ್ಲ ಹೊಗಳಲ್ಪಡುವ ರೈತನ ಸ್ಥಿತಿ ಮಾತ್ರ ಇವತ್ತಿಗೆ ನಿಜಕ್ಕೂ ಚಿಂತಾಜನಕ. ಆರ್ಥಿಕ ಜರ್ಜರತೆ ಒಂದೆಡೆಯಾದರೆ, ಕೃಷಿಕೆ ಪೂರಕವಾದ ವಾತಾವರಣ ನಿಧಾನವಾಗಿ ನಿಧನವಾಗುತ್ತಿರುವುದು ರೈತರ ಚಿಂತೆಗೆ ಕಾರಣವಾಗಿದೆ. ದವಸ-ಧಾನ್ಯಗಳ ಬೆಲೆ ಗಗನಕ್ಕೇರುತ್ತಿದ್ದರೂ ರೈತನ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿಲ್ಲ! ಹಾಗಾದರೆ ದುಡ್ಡೆಲ್ಲ ಎಲ್ಲಿ ಹೋಗುತ್ತಿದೆ? ಬೆವರು ಸುರಿಸಿ ದುಡಿವ ರೈತನ ಬೆವರ ಹನಿ ಇಂಗಿ ಹೋಗುತ್ತಿರುವುದಾದರೂ ಎಲ್ಲಿ? ಈ ಎಲ್ಲ ಪ್ರಶ್ನೆಗಳನ್ನು ಕಾಲಕಾಲಕ್ಕೆ ಕೇಳುತ್ತಾ ಬಂದಿದ್ದರೂ ಉತ್ತರ ಕೊಡುವ ಧೈರ್ಯವನ್ನು ಯಾರೂ ತೋರುತ್ತಿಲ್ಲ. ಕೆಲವು ನೂರು ವರ್ಷಗಳ ಹಿಂದೆ ಭಾರತಕ್ಕೆ ಭೇಟಿ ನೀಡಿದ ವಿದೇಶಿ ಪ್ರವಾಸಿಗರ ಟಿಪ್ಪಣೆಗಳನ್ನು ಓದಿದರೆ ಆಗಿನ ಸಮಯದಲ್ಲಿ ಇಲ್ಲಿನ ರೈತರ ಸ್ಥಿತಿ ಎಷ್ಟು ಉತ್ತಮವಾಗಿತ್ತು ಎಂಬ ಮಾಹಿತಿ ಸಿಗುತ್ತದೆ. ಆದರೆ ಇಂದು ನಮ್ಮ ರೈತರ ಸ್ಥಿತಿ ಹೀಗೇಕೆ?

ಪ್ರತಿಬಾರಿ ಚುನಾವಣೆ ಎದುರಿಸುವ ಹೊತ್ತಿನಲ್ಲಿ ಪಕ್ಷಗಳು ಪ್ರಮುಖವಾಗಿ ಮುಂದಿಡುವ ಭರವಸೆಯೇ ‘ರೈತರ ಸಾಲ ಮನ್ನಾ’. ಇದೊಂದು ಓಟನ್ನು ಸೆಳೆಯುವ ಪ್ರಮುಖ ಅಸ್ತ್ರವಾಗಿದೆ. ರೈತರ ಇಂದಿನ ಅವಶ್ಯಕತೆ ಸಾಲಮನ್ನಾಕ್ಕಿಂತ ಹೆಚ್ಚಾಗಿ ಬೆಳೆದ ಬೆಳೆಗಳಿಗೆ ಉತ್ತಮವಾದ ಬೆಲೆ, ಬೆಳೆಗಳನ್ನು ಸಂರಕ್ಷಿಸಿಡಲು ಅಗತ್ಯವಾದ ಸೌಕರ್ಯಗಳು, ಬೆಳೆ ಬೆಳೆಯಲು ಆರ್ಥಿಕವಾಗಿ ಹೊರೆಯಾಗದಂತಹ ವಾತಾವರಣ. ಇದರ ಬದಲು ಕಣ್ಣೊರೆಸುವ ತಂತ್ರವಾಗಿ ಸಾಲಮನ್ನಾ ಮಾಡಿ, ಮತ್ತೆ ಚುನಾವಣೆ ಎದುರಾಗುವವರೆಗೆ ರೈತನೆಡೆಗೆ ಮುಖಮಾಡದ ಜನಪ್ರತಿನಿಧಿಗಳಿಗೆ ಏನನ್ನೋಣ? ಇದೆಲ್ಲಕ್ಕಿಂತ ಹೆಚ್ಚಿನದಾಗಿ ರೈತರ ಹೊಟ್ಟೆಯ ಮೇಲೆ ಹೊಡೆಯುತ್ತಿರುವುದು ‘ಇಂಡಸ್ಟ್ರಿಯಲೈಸೇಶನ್’ ಎಂಬ ಪೆಡಂಭೂತ! ಇಂಡಸ್ಟ್ರಿಯಲೈಸೇಶನ್ ಕುರಿತಂತೆ ತೋರುತ್ತಿರುವ ಅತಿಯಾದ ಆಸಕ್ತಿ ಕೃಷಿ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಲ್ಲಿ ಎರಡು ಮಾತಿಲ್ಲ. 

ಉದ್ಯೋಗ ಸೃಷ್ಟಿ ಎಂಬ ಆಸೆ ತೋರಿಸುತ್ತಾ ಇಂದು ಅವಶ್ಯಕತೆಗಿಂತ ಹೆಚ್ಚು ಇಂಡಸ್ಟ್ರಿಯಲೈಸೇಶನ್‍ಗೆ ಮಣೆ ಹಾಕಲಾಗುತ್ತಿದೆ. ಹೆಚ್ಚು ಹೆಚ್ಚು ಕೈಗಾರಿಕೆಗಳು ಒಳನುಸುಳಿದಂತೆ ಅವುಗಳಿಗೆ ಜಾಗ ನೀಡುವ ನೆಪದಲ್ಲಿ ಕೃಷಿ ಭೂಮಿ ಕಡಿಮೆಯಾಗುತ್ತಿದೆ. ರೈತಾಪಿ ಮಕ್ಕಳೂ ಸಹ ಕೈಗಾರಿಕೆಗಳಲ್ಲಿ ದಿನಗೂಲಿ ಲೆಕ್ಕದಲ್ಲಿ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ಹಾಗಾದರೆ ಉದ್ಯೋಗ ಸೃಷ್ಟಿ ಎಂದರೆ ಇದೇ ಏನು? ಸದ್ಯದ ಪರಿಸ್ಥಿತಿಯಲ್ಲಿ ದಿನಗೂಲಿ ಕೆಲಸ ಗಿಟ್ಟಿಸಿಕೊಂಡು ನಗುವ ಜನರು, ಮುಂದೊಂದು ದಿನ ಹಳಹಳಿಸುವ ಸ್ಥಿತಿ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ. ಈ ಎಲ್ಲ ಅಪಸವ್ಯಗಳನ್ನು ತಡೆಯಲು ಕೃಷಿರಂಗಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುವುದೊಂದೇ ದಾರಿ ಎನಿಸುತ್ತದೆ. ರೈತರ ಸಾಲ ಮನ್ನಾ ಮಾಡುವ ಬದಲು ಅದೇ ಹಣವನ್ನು ಬೆಳೆಗಳ ಮೌಲ್ಯವರ್ಧನೆಗೆ ಬಳಸಬಹುದು. ಇದರಿಂದಾಗಿ ರೈತರಿಗೂ ಒಳ್ಳೆಯ ಬೆಲೆ ದೊರಕಿ ಆರ್ಥಿಕವಾಗಿ ಸಬಲತೆ ಕಾಣಬಹುದು. ಸಾಧ್ಯವಾದಲ್ಲಿ ಹೋಬಳಿ ಮಟ್ಟದಲ್ಲೇ ಬೆಳೆಗಳನ್ನು ಸಂರಕ್ಷಿಸಿಡಲು ಅಗತ್ಯ ಸೌಕರ್ಯ ನೀಡಿದಲ್ಲಿ ಉತ್ತಮ ಬೆಲೆ ಬಂದಾಗ ರೈತ ತನ್ನ ದಾಸ್ತಾನನ್ನು ವಿಕ್ರಿ ಮಾಡಬಹುದು. ಜೊತೆಜೊತೆಗೆ, ರೈತ ಕೂಡ ಕೃಷಿಯನ್ನು ಒಂದು ಉದ್ಯಮ ಎಂದೇ ಪರಿಗಣಿಸಬೇಕು. ಆಗ ತಾನು ಮಾಡುವ ಕೆಲಸದಲ್ಲಿ ಒಂದು ಶಿಸ್ತನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಹಣಕಾಸು ನಿರ್ವಹಣೆಯನ್ನೂ ಸರಿಯಾದ ರೀತಿಯಲ್ಲಿ ಮಾಡಿ, ಲಾಭದಾಯಕವಾಗುವತ್ತ ಹೆಚ್ಚಿನ ಗಮನ ಹರಿಸಬೇಕು. 

ಕೃಷಿ ಅಗಾಧವಾದ ಸಾಧ್ಯತೆಗಳನ್ನು ಹೊಂದಿರುವ ಕ್ಷೇತ್ರ. ಅದನ್ನು ಸರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಇಂದಿನ ರೈತ ಯೋಚಿಸಬೇಕಿದೆ. ಹೊಸಬಗೆಯ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು, ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭವನ್ನು ಪಡೆಯಲು ಶ್ರಮಿಸಬೇಕಿದೆ. ಪೂರಕವಾಗಿ, ಸರ್ಕಾರವೂ ಕೂಡ ಸಾಲಮನ್ನಕ್ಕಷ್ಟೇ ಸೀಮಿತವಾಗದೇ ರೈತರ ಬಲವರ್ಧನೆಗೆ ಅವಿರತ ಕೆಲಸ ಮಾಡಬೇಕಿದೆ. ಕೃಷಿಕ್ಷೇತ್ರಕ್ಕಾಗಿಯೇ ಪ್ರತ್ಯೇಕ ಬಜೆಟ್ ಮಂಡನೆ ಮಾಡಿದರೂ ಒಳ್ಳೆಯದೇ. ಎಲ್ಲಕ್ಕಿಂತ ಹೆಚ್ಚಾಗಿ ಕೃಷಿಕ್ಷೇತ್ರದ ಬಲವರ್ಧನೆ ದೇಶದ ಆರ್ಥಿಕತೆಯ ಬಲವರ್ಧನೆಯೂ ಹೌದು ಎಂಬ ಸತ್ಯವನ್ನು ಜನಪ್ರತಿನಿಧಿಗಳು ಮನಗಾಣಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಲೋಕಾರೂಢಿ

ನಂಗೂ ಹಿಂಗೆ ಆಗಿತ್ತು..! ಗೌಡ್ರು ಮತ್ತು ಈಶನ ಮೀ ಟೂ ವೃತ್ತಾಂತ

Published

on

ಹೊಟ್ಟೆ ಬಹಳ ಹಸಿದಿತ್ತು. ಅದೇ ಸಂದರ್ಭ ನಮ್ಮ ಗೌಡ್ರು, ಹೇ ಬಾರೋ ಈಶ ಊಟ ಮಾಡೋ ಅಂತಾ ಕರೆದ್ರು.
ಹೊಟ್ಟೆ ಹಸಿದಿದ್ದರಿಂದ ತಡ ಮಾಡದೇ ಸೌಕಾರ್ ಮನೆ ಅಂಗಳದ ಅಂಚಿಗೆ ಬಡ ಬಡಾನೆ ಹೋಗಿ ಕುಳಿತೆ. ಗೌಡ್ರು ತನ್ನ ಹೆಂಡತಿಗೆ ಕೂಗಿ, ಹೇ ಈಶ ಬಂದವ್ನೆ ಕಣೇ ಏನಾದ್ರೂ ಊಟ ಉಳಿದಿದ್ರೆ ಕೊಡು ಅಂತಾ. ಅತ್ತ ಕಡೆಯಿಂದ ಸ್ವಲ್ಪ ತಡೀರಿ ಕೊಡ್ತೀನಿ ಅಂತಾ ಧ್ವನಿ ಕೇಳಿಬಂತು.
ಏ ಈಶ… ಊಟ ಕೊಡುವರೆಗೂ ಏನ್ ಮಾಡ್ತೀ, ಮನೆ ಸುತ್ತಮುತ್ತ ಸ್ವಲ್ಪ ಕಸ ಹೆಚ್ಚಾಗೈತೆ ಸ್ವಚ್ಛಗೊಳಿಸು, ಸ್ವಲ್ಪ ಕಟ್ಟಿಗೆ ಕಡಿ… ಅಷ್ಟರಲ್ಲಿ ಊಟ ಬರುತ್ತೆ ಅಂದ್ರು ನಮ್ಮ ಗೊಂಚಗಾರ್ರ‌್‌. ಇದು ನಮ್ ಹಳ್ಳೀಲಿ ಸರ್ವೇ ಸಾಮಾನ್ಯ. ಕೆಲಸ ಮಾಡಲ್ಲ ಅಂತ ಹೇಳಿದ್ರೆ ಹೊಟ್ಟೆಗೆ ಹಿಟ್ಟು ಸಿಗಕ್ಕಿಲ್ಲ. ಬಿಸಿಲ ಝಳ ಲೆಕ್ಕಿಸದೇ ತಕ್ಷಣ ಮನೆ ಸುತ್ತಮುತ್ತ ಸೌಕಾರ್ ಮೆಚ್ಚೋ ರೀತಿ ಸ್ವಚ್ಛಗೊಳಿಸಿದೆ. ಅಷ್ಟರಲ್ಲಿ ಮನೆಯೊಡತಿ ಏನ್ರಿ ಈಶನಿಗೆ ಕರೀರ‌್ರಿ ಊಟ ಕೊಡ್ತೀನಿ ಅಂತಾ ಕೂಗಿ ಹೇಳಿದ ಧ್ವನಿ ನನ್ ಕಿವಿಗೆ ಬಿತ್ತು.
ಅಷ್ಟ್ರಲ್ಲಿ ಎಲ್ಲ ಕೆಲಸ ಮುಗಿಸಿದ್ದೇ. ಕೈ ಕಾಲನ್ನು ಅರೆಬರೆ ತೊಳ್ಕೊಂಡು ತಡಕೆಗೆ ಸಿಗಿಸಿದ್ದ ತಟ್ಟೆ ತಗೊಂಡು ತಂಗಳು ಮುದ್ದೆಗೆ ಕೈವೊಡ್ಡಿದೆ. ಆ ಮಹಾತಾಯಿ ಕೊಟ್ಟ ಊಟವನ್ನ ಬಗಾಬಗನೇ ತಿಂದು ಕೈಮುಗಿದು ಮನೆಯತ್ತ ಹೆಜ್ಜೆ ಹಾಕಿದೆ. ಈ ರೀತಿ ಬಹಳಷ್ಟು ಬಾರಿ ನನ್ನ ಹಸಿದ ಹೊಟ್ಟೆಗೆ ನನ್ ಗೌಡ್ರು ಅನ್ನ ಹಾಕಿದ್ದಾರೆ. ಜತೆಗೆ ದೇಹ ದಂಡಿಸೋಕೆ ಕೆಲಸ ಕೊಟ್ಟೋರೆ.
ನನ್ನ ಹೈಕ್ಳು, ನನ್ನ ಸುತ್ತಲಿನ ಹುಡುಗರ ಮುಂದೆ ಗೌಡ್ರು ಮುದ್ದೆ ಕೊಡ್ತಾ ಇದ್ದ ವಿಷಯ ಎಷ್ಟೋ ವರ್ಷದ ನಂತರವೂ ಪದೇ ಪದೆ ಸ್ಮರಿಸುತ್ತಲೇ ಇದ್ದೆ… ಅವರು ದೊಡ್ಡವಾರದಾಗ್ಲೂ ಹೇಳ್ತಾ ಇದ್ದೆ… ಒಂದ್ ಸಾರಿ ಆ ಹುಡುಗ್ರು ಏ ನಿನಗೆ ಮೆದುಳು ಇರಕ್ಕಿಲ್ಲ. ನೀನು ಅವರ ಮನೆಯಲ್ಲಿ ನಿನಗೆ ಗೊತ್ತಿಲ್ದೆ ಮೈಮುರಿದು ಕೆಲಸ ಮಾಡಿದ್ದೀಯಾ, ಆಗ ಹಸಿವಿನಲ್ಲಿ ನಿನಗೆ ಕಂಡಿರಕ್ಕಿಲ್ಲ. ಕಂಡಿದ್ರೂ ಊಟ ಸಿಗಕ್ಕಿಲ್ಲ ಅಂತಾ ಭಯದಲ್ಲಿ ಮಾಡಿದ್ದೀಯಾ. ಅದನ್ನು ಆ ಗೌಡ ಬಳಸಿಕೊಂಡಿದ್ದಾನೆ. ಅದು ಒಂದು ರೀತಿ ಶೋಷಣೆ ಅಂದ್ರು, ನನ್ನ ಪಕ್ಕ ಇದ್ದ ನನ್ನ ವಾರಿಗೆಯವ ರಂಗ ಕೂಡ ಬೀಡಿ ಸೇತ್ತಾ ಅಯ್ಯೋ ನಮ್ಮ ಗೌಡ್ರು ಮನೆಯಲ್ಲಿ ‘‘ನಂಗೂ ಹಿಂಗೆ ಆಗಿತ್ತು’’ ಅಂತಾ ಹೇಳ್ದಾ.
ಈ ಸುದ್ದಿ ಊರೆಲ್ಲ ಹಬ್ಬಿ ಬಿಡ್ತು. ಸುತ್ತಮುತ್ತಲ ಹತ್ತಾರು ಹಳ್ಳಿಗಳಲ್ಲೂ ಕೆಲ ಮಂದಿ ಹೌದು ‘‘ನಂಗೂ ಆಗಿತ್ತು’’ ಅಂತಾ ಜಗಳಿಕಟ್ಟೆ ಮೇಲೆ ಚೌಕಾಬಾರ ಆಡ್ತಾ ಹೇಳಿಕೊಂಡ್ರು. ಒಂದಿಷ್ಟು ಜನ ನಾವು ಹೇಳಿದ್ದು ಸರಿ ಐತೆ, ಇನ್ಮುಂದೆ ಯಾರಿಗೂ ಹಿಂಗಾಗ್ಬಾರ‌್ದು ಅಂದ್ರು. ಬಹಳಷ್ಟು ಜನ ಇಷ್ಟು ವರ್ಷ ಆದ್ಮೇಲೆ ಇದನ್ಯಾಕೆ ಹೇಳ್ತಾವ್ನೇ, ಅವಾಗ ಬಾಯಿಗೆ ಏನ್ ಬಟ್ಟೆ ತುರ‌್ಕೊಂಡಿದ್ನಾ ಅಂತಾ ಧಮ್ಕಿ ಹಾಕಿದ್ರು. ಅವರಿಗೇನು ಗೊತ್ತು ಅಂದಿನ ನಮ್ಮ ಹಸಿವು, ಭಯದ ಪರಿಸ್ಥಿತಿ.
ನಾನೇನೂ ಉದ್ದೇಶಪೂರ್ವಕವಾಗಿ ಹೇಳಿಲ್ಲ. ಮುಂದೆ ಈ ರೀತಿ ಯಾರಿಗೂ ಆಗ್ದೀರಲಿ ಅಂತಾ ಹೇಳಿದ್ದೀನಿ ಅಂತಾ ನಾನು ಬಾಯಿ ಬಡಕೊಂಡ್ರೂ… ಗೌಡ್ರು ಪರ ಗುಂಪು ನನ್ನ ವಿರುದ್ಧ ಮಚ್ ಮಸಿತಲೇ ಇತ್ತು. ಜತೆಗೆ ‘‘ನನಗೂ ಹಿಂಗೆ ಆಗಿತ್ತು’’ ಅಂತ ಹೇಳಿದ ರಂಗನಂತ ಅನೇಕರ ವಿರುದ್ಧ ಜನ ಸಿಟ್ಟಿಗೆದ್ದಿದ್ದರು.
ಇದರಿಂದ ನನ್ನಂತೆ ಗೊತ್ತಿಲ್ಲದೆ ತಂಗಳು ಮುದ್ದೆಗೆ ಮೈಮುರಿದು ಅವರವರ ಗೊಂಚಗಾರ್ ಮನೆಯಲ್ಲಿ ಕೆಲಸ ಮಾಡಿ ಶೋಷಣೆಗೆ ಒಳಗಾಗಿದ್ದ ಜನ ‘‘ನಂಗೂ ಆಗಿತ್ತು’’ ಅಂತಾ ಹೇಳುವ ಧೈರ್ಯವನ್ನೇ ಮಾಡ್ಲಿಲ್ಲ. ಜತೆಗೆ ಇವರು ಕೂಡ ನನ್ಗೇನೆ ಬೈಯೋಕೆ ನಿಂತ್ರು.
ದೇವರಂತ ಗೌಡ್ರು ವಿರುದ್ಧ ಶೋಷಣೆ ಆರೋಪ ಹೊರಿಸ್ತಾನಲ್ಲ ಅಂತಾ ಎಲ್ರೂ ಸೇರಿ ಧಬಾಯಿಸಿದ್ರು.
ಇದನ್ನೆಲ್ಲ ಕಂಡು ಇಪ್ಪತ್ತೈದು ವರ್ಷದ ಹಿಂದೆ ಆಗಿದ್ದ ‘‘ಪರೋಕ್ಷ ಶೋಷಣೆ’’ ಬಗ್ಗೆ ಈಗ ಯಾಕಾದ್ರೂ ಹೇಳಿದ್ನಾ ಅಪ್ಪಾ ಅಂತಾ ನೊಂದುಕೊಂಡೇ. ನಮ್ ಜನಕ್ಕೆ ಸತ್ಯ ಹೇಳಿದ್ರೆ ಸಹಿಸಿಕೊಳ್ಳಕ್ಕೆ ಯಾಕ್ ಆಗಕ್ಕಿಲ್ಲ. ನಮ್ಮನ್ನೇ ಕಳ್ಳನ ರೀತಿ ನೋಡ್ತಾರಲ್ಲ. ಸದ್ಯ ನನ್ನ ಹೈಕ್ಳ ಮಾತು ಕೇಳಿ ಈಗ ಹೇಳಿದ್ದೇನೆ. ಗೌಡ್ರು ಮನೆಯಂಗಳದಲ್ಲಿ ತಂಗಳು ಮುದ್ದೆ ತಿಂದ ಸಂದರ್ಭ ಹೇಳಿದ್ರೆ… ಅಬ್ಬಾ ನೆನಸ್ಕೊಂಡ್ರೆ ಭಯನೇ ಆಗ್ತಾತೆ. ಆಗ ಹೇಳಿದ್ರೆ ಇಷ್ಟೋತ್ತಿಗೆ ನಾನು ಸತ್ ಇಪ್ಪತ್ತೈದು ವರ್ಷ ಆಗ್ತಾ ಇತ್ತೇನಪ್ಪಾ.
ಈ.ಮಹೇಶ್‌ಬಾಬು, ಜಿಲ್ಲಾಧ್ಯಕ್ಷರು, ಪತ್ರಕರ್ತರ ಸಂಘ, ಚಿತ್ರದುರ್ಗ
(ಮೊ.ನಂ: 9900882955)
ಕೃಪೆ : whatsapp
Continue Reading

ಲೋಕಾರೂಢಿ

ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಒಳ ಮೀಸಲಾತಿ

Published

on

ನ್ಯಾ.ಸದಾಶಿವ ವರದಿಯು ಪರಿಶಿಷ್ಟ ಜಾತಿಗಳ ಒಳಗೆ ಮೀಸಲಾತಿ ವರ್ಗೀಕರಣ ಮಾಡಬೇಕು ಎನ್ನುತ್ತದೆ. ಪರಿಶಿಷ್ಟರಲ್ಲೇ ಇರುವ ಸ್ಪೃಶ್ಯ ಮತ್ತು ಅಸ್ಪೃಶ್ಯ ಸಮುದಾಯಗಳ ನಡುವೆ ಹಾಗೂ ಎಡಗೈ ಬಲಗೈ ಪಂಗಡಗಳ ನಡುವೆ ಈ ವರ್ಗೀಕರಣ ನಡೆಯಬೇಕು ಎನ್ನುತ್ತದೆ. ಇದನ್ನು ಕೆಲವರು ಅವೈಜ್ಞಾನಿಕ ಎನ್ನುತ್ತಿದ್ದಾರೆ. ಅವರೇನೇ ಹೇಳಲಿ ಇಂತಗ ಸಂದರ್ಭದಲ್ಲಿ ನಮಗೆ ಬೆಳಕು ನೀಡಬಲ್ಲ ಚಿಂತನೆ ಬಾಬಾಸಾಹೇಬ್ ಅಂಬೇಡ್ಕರ್ ಅವರದ್ದು. ಅವರು ಸ್ಪೃಶ್ಯತೆ ಮತ್ತು ಅಸ್ಪೃಶ್ಯತೆಗಳು ಸಾಮಾಜಿಕ ಬದುಕಿನಲ್ಲಿ ಉಂಟು ಮಾಡುವ ಪರಿಣಾಮದ ಬಗ್ಗೆ ಆಳವಾಗಿ ಚಿಂತಿಸಿದವರು, ಬರೆದವರು.

ಅಂಬೇಡ್ಕರ್ ಅವರು ಅಸ್ಪೃಶ್ಯತೆ ಎಂಬ ಭಾರತದ ಜಾತಿ ವ್ಯವಸ್ಥೆಯಲ್ಲಿನ ಸಾಮಾಜಿಕ ಪದ್ಧತಿ ರೋಮ್ ನಲ್ಲಿ ಅಸ್ತಿತ್ವದಲ್ಲಿದ್ದ ಗುಲಾಮಗಿರಿ ವ್ಯವಸ್ಥೆಗಿಂತಲೂ ಕ್ರೂರ ಎನ್ನುತ್ತಾರೆ. “ಮುಕ್ತಸಮಾಜ ಅಲ್ಲದ ಗುಲಾಮಗಿರಿಯಲ್ಲಾದರೋ ಗುಲಾಮನು ತನ್ನ ಒಡೆಯನ ಆಸ್ತಿಯಾಗಿದ್ದ. ಈ ಕಾರಣದಿಂದ ಗುಲಾಮಿ ಒಡೆಯನು ತನ್ನ ಗುಲಾಮನ ಬಗ್ಗೆ ವಿಶೇಷ ಮುತುವರ್ಜಿ ವಹಿಸುತ್ತಿದ್ದ. ಅವನನ್ನು ಚನ್ನಾಗಿ ನೋಡಿಕೊಳ್ಳುತ್ತಿದ್ದ. ರೋಮ್ ನಲ್ಲಿ ಗುಲಾಮರನ್ನು ಮಲೇರಿಯಾ ಪೀಡಿತ ಸ್ಥಳಗಳಿಗೆ ಒಡೆಯರು ಕಳಿಸುತ್ತಿರಲಿಲ್ಲ. ಅಂತಹ ಕಡೆ ಗುಲಾಮರಲ್ಲದ ಮುಕ್ತ ಜನರೇ ಕೆಲಸ ಮಾಡುತ್ತಿದ್ದರು” ಎಂದು ಹೇಳುವ ಅಂಬೇಡ್ಕರ್ ಭಾರತದಲ್ಲಿ ಅಸ್ಪೃಶ್ಯತೆಯನ್ನು ಆ ಗುಲಾಮಗಿರಿಗೆ ಹೋಲಿಸಿ ಹೀಗೆ ಹೇಳುತ್ತಾರೆ.

“ಮೇಲೆ ಹೇಳಿದ ಮುಕ್ತವಲ್ಲದ ಗುಲಾಮಿ ವ್ಯವಸ್ಥೆಯಲ್ಲಿ ಗುಲಾಮರಿಗೆ ಇದ್ದ ಯಾವ ಅನುಕೂಲತೆಗಳೂ ಅಸ್ಪೃಶ್ಯತೆಯ ವ್ಯವಸ್ಥೆಯಲ್ಲಿ ಇಲ್ಲ. ಇಲ್ಲಿ ಅಸ್ಪೃಶ್ಯ ಎನಿಸಿಕೊಂಡ ವ್ಯಕ್ತಿಗೆ ನಾಗರಿಕತೆಯ ಉನ್ನತ ಕಲೆಗಳಲ್ಲಿ ಪ್ರವೇಶವಿಲ್ಲ ಹಾಗೂ ಸಂಸ್ಕೃತಿಯ ಬದುಕಿನ ಪರ್ಯಾವರಣಕ್ಕೆ ಅವನಿಗೆ ದಾರಿಯನ್ನು ಮುಚ್ಚಲಾಗಿರುತ್ತದೆ. ಅವನು ಕೇವಲ ಕಸ ಹೊಡೆಯುವ ಕೆಲಸ ಮಾತ್ರ ಮಾಡಬೇಕಿರುತ್ತದೆ. ಬೇರೆ ಯಾವುದನ್ನೂ ಅವನು ಮಾಡುವಂತಿಲ್ಲ. ಅವನ ಜೀವನೋಪಾಯಕ್ಕೆ ಯಾವ ಭದ್ರತೆಯನ್ನೂ ಅಸ್ಪೃಶ್ಯತೆ ಕಲ್ಪಿಸುವುದಿಲ್ಲ. ಒಬ್ಬ ಅಸ್ಪೃಶ್ಯನ ಹೊಟ್ಟೆ, ಬಟ್ಟೆ ವಸತಿಯ ಹೊಣೆಯನ್ನು ಯಾವೊಬ್ಬ ಹಿಂದೂವೂ ಹೊರುವುದಿಲ್ಲ. ಅಸ್ಪೃಶ್ಯನ ಆರೋಗ್ಯದ ಕಾಳಜಿಯೂ ಯಾರಿಗಿರುವುದಿಲ್ಲ. ವಾಸ್ತವವಾಗಿ ಅಸ್ಪೃಶ್ಯ ಒಬ್ಬ ಸತ್ತರೆ ಶುಭಸೂಚಕ ಎಂದೇ ಬಗೆಯಲಾಗುತ್ತದೆ. ಈ ಬಗ್ಗೆ, “ ಹೊಲೆಮಾದಿಗ ಸತ್ತ, ಮೈಲಿಗೆಯೂ ಹೋಯ್ತು” ಎಂಬ ಹಿಂದೂ ನಾಣ್ಣುಡಿಯೇ ಚಾಲ್ತಿಯಲ್ಲಿದೆ. ಹೀಗೆ ಮುಕ್ತವಲ್ಲದ ಗುಲಾಮಿ ವ್ಯವಸ್ಥೆಯ ಅನುಕೂಲತೆ ಇಲ್ಲದಿರುವುದು ಒಂದು ಕಡೆಯಾದರೆ ಅಸ್ಪೃಶ್ಯರಾದವರಿಗೆ ಮತ್ತೊಂದೆಡೆಯಲ್ಲಿ ಒಂದು ಮುಕ್ತ ಸಮಾಜ ವ್ಯವಸ್ಥೆಯ ಅನನುಕೂಲತೆಗಳೆಲ್ಲವೂ ಬಾಧಿಸುತ್ತವೆ. ಅದೇನೆಂದರೆ ಮುಕ್ತ ಸಮಾಜ ವ್ಯವಸ್ಥೆಯಲ್ಲಿ ಉಳಿವಿಗಾಗಿನ ಹೋರಾಟದಲ್ಲಿ ಬದುಕುಳಿಯುವ ಹೊಣೆ ಆಯಾ ವ್ಯಕ್ತಿಯದೇ ಆಗಿರುತ್ತದೆ. ಇದು ಮುಕ್ತ ಸಮಾಜ ವ್ಯವಸ್ಥೆಯ ಒಂದು ಅತಿದೊಡ್ಡ ಅನನುಕೂಲತೆ. ಇಂತಾ ಒಂದು ಹೊಣೆಯನ್ನು ಒಬ್ಬ ವ್ಯಕ್ತಿ ನಿಭಾಯಿಸಬಲ್ಲನೇ ಎಂಬುದು ಒಂದು ನ್ಯಾಯಯುತ ಆರಂಭ (fair start), ಸಮಾನ ಅವಕಾಶ ಮತ್ತು ನ್ಯಾಯವಾದ ವ್ಯವಹಾರ ಈ ಮೂರರ ಮೇಲೆ ನಿಂತಿರುತ್ತದೆ.

ಒಬ್ಬ ಅಸ್ಪೃಶ್ಯ ತಾನು ಮುಕ್ತ ಸಮಾಜದ ವ್ಯಕ್ತಿಯಾಗಿ ನ್ಯಾಯಯುತ ಆರಂಭವನ್ನೂ ಪಡೆದಿರುವುದಿಲ್ಲ, ಸಮಾನ ಅವಕಾಶವನ್ನೂ ಪಡೆದಿರುವುದಿಲ್ಲ ಹಾಗೂ ನ್ಯಾಯವಾದ ವ್ಯವಹಾರವನ್ನೂ ಪಡೆಯುವುದಿಲ್ಲ. ಈ ದೃಷ್ಟಿಯಿಂದ ಅಸ್ಪೃಶ್ಯತೆ ಎನ್ನುವುದು ಗುಲಾಮೀ ವ್ಯವಸ್ಥೆಗಿಂತಲೂ ಕಡೆ ಮಾತ್ರವಲ್ಲ ಗುಲಾಮಗಿರಿಗೆ ಹೋಲಿಸಿದಾಗ ನಿಸ್ಸಂದೇಹವಾಗಿ ಗುಲಾಮಿ ವ್ಯವಸ್ಥೆಗಿಂತ ಕ್ರೂರವಾದುದು. ಗುಲಾಮಗಿರಿಯಲ್ಲಾದರೋ ಒಡೆಯನಾದವನಿಗೆ ತನ್ನ ಗುಲಾಮನಿಗೆ ಕೆಲಸ ನೀಡುವ ಬಾಧ್ಯತೆಯಿರುತ್ತದೆ. ಮುಕ್ತ ಶ್ರಮದ ವ್ಯವಸ್ಥೆಯಲ್ಲಿ ಶ್ರಮಿಕರು ತಾವು ಕೆಲಸ ಪಡೆಯಲು ಇತರೆ ಶ್ರಮಿಕರೊಂದಿಗೆ ಪೈಪೋಟಿಗಿಳಿಯಬೇಕಾಗುತ್ತದೆ.ಉದ್ಯೋಗಾವಕಾಶಕ್ಕಾಗಿನ ಈ ಹಪಾಹಪಿಕೆಯಲ್ಲಿ ಅಸ್ಪೃಶ್ಯನೊಬ್ಬ ನ್ಯಾಯ ಪಡೆಯುವ ಅವಕಾಶವಾದರೂ ಎಲ್ಲಿರುತ್ತದೆ? ಸಂಕ್ಷಿಪ್ತವಾಗಿ ಹೇಳುವುದಾದರೆ ತನಗಿರುವ ಸಾಮಾಜಿಕ ಕಳಂಕದ ಕಾರಣದಿಂದ ಯಾವಾಗಲೂ ತನ್ನ ವಿರುದ್ಧವೇ ತೂಗುವ ನ್ಯಾಯದ ತಕ್ಕಡಿಯಲ್ಲಿ ಅಸ್ಪೃಶ್ಯ ಉದ್ಯೋಗ ಪಡೆಯುವಲ್ಲಿ ಕೊನೆಯವನೂ ಆಗಿರುತ್ತಾನೆ ಹಾಗೂ ಕೆಲಸದಿಂದ ಕಿತ್ತೆಸೆಯಲ್ಪಡುವಾಗ ಅವನೇ ಮೊದಲಿಗನಾಗಿರುತ್ತಾನೆ. ಅಸ್ಪೃಶ್ಯತೆ ಗುಲಾಮೀ ವ್ಯವಸ್ಥೆಗಿಂತ ಕ್ರೂರವೇಕೆಂದರೆ ಅಸ್ಪೃಶ್ಯನಿಗೆ ತನ್ನ ಜೀವನ ನಿರ್ವಹಣೆಗೆ ಬೇಕಾದ ಅವಕಾಶಗಳಿಗೆ ಮುಕ್ತ ಪ್ರವೇಶವನ್ನೇ ತೆರೆಯದೇ ಇದ್ದಾಗಲೂ ತನ್ನ ಬದುಕು ಉಳಿಸಿಕೊಳ್ಳುವ ಹೊಣೆಯನ್ನು ಅವನ ಮೇಲೆಯೇ
ಹೊರಿಸುತ್ತದೆ” (Ambedkar Volume 5)
ಬಾಬಾಸಾಹೇಬರ ಈ ಮಾತುಗಳನ್ನು ನೋಡಿದಾಗ ಅಸ್ಪೃಶ್ಯತೆಯ ಕರಾಳತೆ ಎಂತಹುದು ಎಂಬುದು ತಿಳಿಯುವ ಜೊತೆಗೆ ಶಿಕ್ಷಣ, ಉದ್ಯೋಗ ಇತ್ಯಾದಿ ಅವಕಾಶಗಳ ವಿಷಯದಲ್ಲಿ ಸ್ಪೃಶ್ಯ ಮತ್ತು ಅಸ್ಪೃಶ್ಯ ಸಮುದಾಯಗಳನ್ನು ಒಟ್ಡಿಗೇ ಪೈಪೋಟಿಗೆ ಬಿಡುವುದು ಅನ್ಯಾಯ ಮಾತ್ರವಲ್ಲ ಸಾಮಾಜಿಕ ಕ್ರೌರ್ಯ ಎಂಬುದೂ ತಿಳಿಯುತ್ತದೆ.

ಈಗ ಪರಿಶಿಷ್ಟರ ಮೀಸಲಾತಿ ವ್ಯವಸ್ಥೆಯಲ್ಲಿ ಜಾರಿಯಲ್ಲಿರುವುದು ಇದೇ ಸಾಮಾಜಿಕ ಕ್ರೌರ್ಯ. ಇದನ್ನು ಅರ್ಥ ಮಾಡಿಕೊಂಡೇ ಜಸ್ಟೀಸ್ ಸದಾಶಿವ ವರದಿಯಾಗಲೀ ಆಂದ್ರದ ಜಸ್ಟೀಸ್ ಉಷಾ ಮೆಹ್ರಾ ಸಮಿತಿಯ ವರದಿಯಾಗಲೀ ದಲಿತರಿಗೆ ಒಳ ಮೀಸಲಾತಿಗೆ ಕ್ರಮವಾಗಿ ಕರ್ನಾಟಕ ಸರ್ಕಾರ ಮತ್ತು ಕೆಂದ್ರ ಸರ್ಕಾಗಳಿಗೆ ಶಿಫಾರಸು ನೀಡಿರುವುದು. ಉಷಾ ಮೆಹ್ರಾ ಸಮಿತಿ ವರದಿಯಲ್ಲಿ ಸ್ಪಷ್ಟವಾಗಿ ಈ ಸಮುದಾಯಗಳಿಗೆ ಒಳ ಮೀಸಲಾತಿ ನೀಡಲು ಸಂವಿಧಾನದ 341 ನೇ ವಿಧಿಗೆ ಕೇಂದ್ರ ಸರ್ಕಾರ ತಿದ್ದುಪಡಿ ತರಬೇಕೆಂದು ತಿಳಿಸಿದೆ. ಹೀಗಾಗಿ ಕರ್ನಾಟಕ ಸರ್ಕಾರವು ಸದಾಶಿವ ಆಯೋಗದ ವರದಿಯನ್ನು ಒಪ್ಪಿಕೊಂಡು, ಕೂಡಲೇ ಕೇಂದ್ರ ಸರ್ಕಾರಕ್ಕೆ ತನ್ನ ಶಿಫಾರಸು ಕಳಿಸಬೇಕು, ಹಾಗೆಯೇ ಕೇಂದ್ರ ಸರ್ಕಾರ ಒಳ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಸಂವಿಧಾನ ತಿದ್ದುಪಡಿಗೆ ಮುಂದಾಗಬೇಕು.

– ಹರ್ಷಕುಮಾರ್ ಕುಗ್ವೆ
ಪತ್ರಕರ್ತ, ಉಡುಪಿ

Continue Reading

ಲೋಕಾರೂಢಿ

ಹುಲಿಯಂತಿರಬೇಕಾದ ನಾವು ಮಂದೆಯ ಕುರಿಗಳಾದೆವೇ? ಇದು ಅರಣ್ಯ ಹಕ್ಕಿನ ಕಥೆ

Published

on

ದೇಶ ಬದಲಾಗಬೇಕು’! ಹೌದು, ಬದಲಾವಣೆಯ ಪರ್ವ ಆರಂಭವಾಗಬೇಕು. ಆದರೆ ಎಂತಹ ಬದಲಾವಣೆ ಬೇಕು? ಬದಲಾವಣೆ ಎಲ್ಲಿಂದ ಆರಂಭವಾಗಬೇಕು ಮತ್ತು ಯಾವ ರೀತಿಯಲ್ಲಿ ಆರಂಭವಾಗಬೇಕು? ಎನ್ನುವ ಪ್ರಶ್ನೆಗಳಿಗೆ ದೇಶದ ಬದಲಾವಣೆಗೆ ತುಡಿಯುವ ವ್ಯಕ್ತಿಗಳ ಬಳಿ ಉತ್ತರವಿಲ್ಲ. ಹಾಗಾದರೆ ಇದು ಉತ್ತರವಿಲ್ಲದ ಪ್ರಶ್ನೆಯೇ? ಎಂದು ಯೋಚಿಸಿದಾಗ ಉತ್ತರರೂಪಕವಾಗಿ ಘೋಷಣೆಯಾಗುವ ಸರ್ಕಾರಿ ಕಾಯ್ದೆಗಳು ಮತ್ತು ಕಾರ್ಯಕ್ರಮಗಳು ಸೂಕ್ತ ವ್ಯಕ್ತಿಗಳನ್ನು ಸೂಕ್ತ ರೀತಿಯಲ್ಲಿ ತಲುಪುತ್ತಿಲ್ಲ ಎನ್ನುವ ಅಂಶ ಅರಿವಾಗುತ್ತದೆ. ಅಂತಹ ಒಂದು ಮಹತ್ವವಾದ ಕಾಯ್ದೆಯ ಕುರಿತು ನಾವಿಂದು ಗಂಭೀರವಾಗಿ ಚಿಂತನೆ ನಡೆಸುವ ಅಗತ್ಯವಿದೆ.

ಪಾರಂಪರಿಕವಾಗಿ ವನವಾಸಿಗಳಾದ ಬುಡಕಟ್ಟು ಜನಾಂಗದವರು ಮತ್ತು ಇತರೆ ಅರಣ್ಯವಾಸಿಗಳಿಗೆ ತಾವು ವಾಸಿಸುತ್ತಿರುವ ಅರಣ್ಯ ಕ್ಷೇತ್ರಗಳ ಸಂರಕ್ಷಣೆ, ನಿರ್ವಹಣೆ ಮತ್ತು ಬಳಕೆಗೆ ಸಂಬಂಧಪಟ್ಟಂತೆ 2006ರಲ್ಲಿ ‘ಅರಣ್ಯ ಹಕ್ಕು ಅಧಿನಿಯಮ 2006’ ಅಂಗೀಕೃತಗೊಂಡು, 2008ರಲ್ಲಿ ಜಾರಿಗೆ ಬಂತು. ವಿಪರ್ಯಾಸವೆಂದರೆ, ಯಾವ ಅಧಿನಿಯಮ ಅರಣ್ಯವಾಸಿಗಳ, ಬುಡಕಟ್ಟು ಜನಾಂಗದವರ ಸರ್ವತೋಮುಖ ಏಳಿಗೆಗೆ ಕಾರಣವಾಗಬೇಕಿತ್ತೋ ಅದಿಂದು ಕೇವಲ ‘ಅತಿಕ್ರಮಣ ಮಂಜೂರಾತಿ ಕಾಯ್ದೆ’ ಎಂದು ಜನಸಾಮಾನ್ಯರ ಗ್ರಹಿಕೆಗೊಳಗಾಗಿದೆ. ಕಾರಣ, ‘ಅರಣ್ಯ ಹಕ್ಕು ಕಾಯ್ದೆ 2006’ರಡಿ ಕಳೆದ ಮೂರು ತಲೆಮಾರುಗಳಿಂದಲೂ ವಾಸಿಸುತ್ತ ಬಂದವರು ಸಾಗುವಳಿ ಮಾಡಿರುವ ಕ್ಷೇತ್ರಗಳ ಮಂಜೂರಾತಿ ನಿಯಮಗಳನ್ನೂ ಒಳಗೊಂಡಿರುವುದು. ಆದರೆ ಈ ಕಾಯ್ದೆಯ ಮೂಲ ಉದ್ದೇಶ ಸ್ಥಳೀಯ ಜನರ ಸಹಭಾಗಿತ್ವದಲ್ಲಿ ಅರಣ್ಯ ಕ್ಷೇತ್ರವನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸುವುದಾಗಿದೆ.

ಸಹ್ಯಾದ್ರಿಯ ಹಸಿರನ್ನು ಉಸಿರಾಡುತ್ತಿರುವ ನಮಗೆ, ಸುತ್ತಮುತ್ತಲಿನ ಅರಣ್ಯದ ಸಂರಕ್ಷಣೆ ಮತ್ತು ಸಂವರ್ಧನೆಯು ನಮ್ಮ ಹಕ್ಕು, ಜವಾಬ್ದಾರಿ ಮತ್ತು ಕರ್ತವ್ಯವಾಗಿದ್ದು ನಮ್ಮ ಬದುಕಿನ ಅಗತ್ಯಗಳಲ್ಲೊಂದಾಗಿದೆ. ‘ಅರಣ್ಯ ಹಕ್ಕು ಕಾಯ್ದೆ 2006’ನ್ನು ಸದುಪಯೋಗ ಪಡಿಸಿಕೊಳ್ಳಲು, ನಮ್ಮ ಹಕ್ಕನ್ನು ಸಮಾಜಮುಖಿಯಾಗಿ ಉಪಯೋಗಿಸಿಕೊಂಡು ಅರಣ್ಯದ ಮೂಲ ಸಂಪತ್ತಿಗೆ ಹಾನಿಯಾಗದಂತೆ ಅದನ್ನೂ ಕೂಡ ನಮ್ಮ ಸಾಗುವಳಿ ಕ್ಷೇತ್ರದಂತೆ ಅಭಿವೃದ್ಧಿಪಡಿಸಿಕೊಂಡು ಅಲ್ಲಿನ ಆದಾಯವನ್ನು ಗ್ರಾಮ ಸಭೆಯ ಮೂಲಕ ಗ್ರಾಮದ ಸಾಮೂಹಿಕ ಅಗತ್ಯತೆಗಳಿಗೆ ಬಳಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ.

ಈ ಸಂದರ್ಭದಲ್ಲಿ ಕತೆಯೊಂದನ್ನು ಉಲ್ಲೇಖಿಸುವುದು ಸಮಯೋಚಿತ ಎಂದೆನಿಸುತ್ತದೆ–
‘ಅದೊಂದು ಕುರಿ ಮಂದೆ. ಅದೊಮ್ಮೆ ತುಂಬು ಗರ್ಭದ ಹುಲಿಯೊಂದು ಹಸಿವಿನಿಂದ ಬಳಲಿ ಆ ಕುರಿಮಂದೆಯ ಮೇಲೆ ದಾಳಿಯಿಡುತ್ತದೆ. ಮೊದಲೇ ಹಸಿದು ಬಸವಳಿದ ಗರ್ಭಿಣಿ ಹುಲಿ, ಕುರಿ ಮಂದೆಯ ಮೇಲೆ ದಾಳಿ ಮಾಡಿದಾಗ ಆಯತಪ್ಪಿ ಮರದ ಚೂಪಾದ ಮೊನೆಯ ಮೇಲೆ ಬಿದ್ದು ಅಸುನೀಗುತ್ತದೆ. ಹುಲಿ ಸಾಯುವ ಅರೆಘಳಿಗೆ ಮೊದಲು ಗರ್ಭದಿಂದ ಜಾರಿ ಹುಲಿಮರಿಯ ಜನನವಾಗುತ್ತದೆ. ನಂತರದ ದಿನಗಳಲ್ಲಿ ಕುರಿ ಮಂದೆಯೊಡನೆಯೇ ಬೆಳೆಯುವ ಹುಲಿಮರಿ ತಾನೂ ಕುರಿಯಂತೆ ‘ಮೇ..ಮೇ..’ ಎನ್ನುತ್ತಾ, ಮಾನಸಿಕವಾಗಿ ತನ್ನನ್ನು ತಾನು ಕುರಿಯೆಂದೇ ಭಾವಿಸಿ ಬದುಕು ಸಾಗಿಸುತ್ತಿರುತ್ತದೆ. ಹೀಗೆ ದಿನಗಳು ಉರುಳುತ್ತಿರುವಾಗ ಮತ್ತೊಂದು ಹುಲಿಯೊಂದು ಇದೇ ಕುರಿ ಮಂದೆಯ ಮೇಲೆ ದಾಳಿ ಮಾಡುತ್ತದೆ. ದಾಳಿ ಮಾಡಿದ ವ್ಯಾಘ್ರನಿಗೆ ಅತ್ಯಾಶ್ಚರ್ಯ! ಹುಲಿಯೊಂದು ಕುರಿಮಂದೆಯ ಮಧ್ಯೆ ಕುರಿಯಂತೆಯೇ ಬದುಕುತ್ತಿದೆ! ತಕ್ಷಣ ಅದು ಹುಲಿರೂಪದ ಕುರಿಯನ್ನು ‘ಹುಲಿಯಾಗಿಯೂ ಕುರಿಗಳ ಮಧ್ಯೆ ಏಕಿದ್ದೀಯ?’ ಎಂದು ಪ್ರಶ್ನಿಸುತ್ತದೆ. ತಾನು ಹುಲಿ ಎಂದು ನಂಬದ ಹುಲಿರೂಪದ ಕುರಿಯನ್ನು ಒಯ್ದು ನೀರಿನಲ್ಲಿ ಪ್ರತಿಬಿಂಬವನ್ನು ತೋರಿಸುತ್ತದೆ. ಆಗ ಆ ಕುರಿಮಂದೆಯ ಹುಲಿಗೆ ತನ್ನ ನಿಜ ಸಾಮಥ್ರ್ಯದ ಅರಿವಾಗುತ್ತದೆ, ತನ್ನ ವ್ಯಾಪ್ತಿಯ ಅಗಾಧತೆ ಅರ್ಥವಾಗುತ್ತದೆ.’

ಈ ಮೇಲಿನ ಕಥೆ ಹಕ್ಕುಗಳ ಗಂಭೀರತೆಯನ್ನು ಮರೆತು, ನಮ್ಮತನವನ್ನು ಬಿಟ್ಟು ಬದುಕುತ್ತಿರುವ ನಮ್ಮಗಳ ಈಗಿನ ಸ್ಥಿತಿಯ ಪ್ರತಿರೂಪದಂತಿದೆ. ಎಲ್ಲಿಯವರೆಗೆ ನಾವು ನಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಮುಂದಾಗುವುದಿಲ್ಲವೋ, ಅಲ್ಲಿಯವರೆಗೆ ನಾವು ಕುರಿಮಂದೆಯಲ್ಲಿನ ಹುಲಿಯಂತೆಯೇ ಇರಬೇಕಾಗುತ್ತದೆ. ಆದ್ದರಿಂದ ನಮ್ಮ ಹಕ್ಕುಗಳ ಪ್ರತಿಪಾದನೆಗಾಗಿ ಆ ಕುರಿತಾದ ವಿಷಯ ಶೇಖರಣೆ ಮತ್ತು ವಿಷಯದ ಒಳಸಾರ ನಮಗರ್ಥವಾಗಿರಬೇಕು.

ಅರಣ್ಯ ಸಂರಕ್ಷಣೆಯ ಕುರಿತಂತೆ ಅಧಿಕಾರಿಶಾಹಿ ಹಾಗೂ ಸಾರ್ವಜನಿಕರ ಒಳಗೊಳ್ಳುವಿಕೆಯಿಂದ ‘ಜಾಯಿಂಟ್ ಫಾರೆಸ್ಟ್ ಮ್ಯಾನೇಜ್‍ಮೆಂಟ್ ಕಮಿಟಿ’ ಅಥವಾ ‘ಗ್ರಾಮ ಅರಣ್ಯ ಸಮಿತಿ’ಯಂತವು ರೂಪಿತಗೊಂಡಿದ್ದವು. ಆದರೆ ಯಾವಾಗ ‘ಅರಣ್ಯ ಹಕ್ಕು ಸಮಿತಿ’ ರಚಿತವಾದವೋ ಸಾಂವಿಧಾನಿಕವಾಗಿ ‘ಗ್ರಾಮ ಅರಣ್ಯ ಸಮಿತಿ’ಗಳು ಅಸ್ತಿತ್ವ ಕಳೆದುಕೊಂಡವು. ದುರಂತವೆಂದರೆ, ಈಗಲೂ ಕೂಡ ‘ಅರಣ್ಯ ಹಕ್ಕು ಸಮಿತಿ’ಗಿಂತ ‘ಗ್ರಾಮ ಅರಣ್ಯ ಸಮಿತಿ’ಗಳ ಕೈ ಮೇಲಾಗಿರುವುದು. ಅರಣ್ಯ ಹಕ್ಕು ಸಮಿತಿ ಇರುವೆಡೆ ಗ್ರಾಮ ಅರಣ್ಯ ಸಮಿತಿಗಳಿಗೆ ಅಸ್ತಿತ್ವವಿಲ್ಲ ಎಂದಾದ ಮೇಲೆ ಅವುಗಳ ಕಾರ್ಯಾಚರಣೆ ಮುಂದುವರೆಯಲು ಕುಮ್ಮಕ್ಕು ಯಾರದ್ದು? ಇದು ಈ ಹೊತ್ತಿನ ಬಹುದೊಡ್ಡ ಪ್ರಶ್ನೆ.

ಕಾನೂನಿನನ್ವಯ ಗ್ರಾಮ ಸಭೆ ಅತಿ ಹೆಚ್ಚು ಜವಾಬ್ದಾರಿ ಮತ್ತು ಹಕ್ಕನ್ನು ಹೊಂದಿದ ಗ್ರಾಮ ಮಟ್ಟದ ಸಂಸ್ಥೆ. ಇದು ಪಂಚಾಯತ ಗ್ರಾಮ ಸಭೆಯಲ್ಲ. ಬದಲಿಗೆ ಚುನಾವಣಾ ಆಯೋಗದಿಂದ ಮಾನ್ಯತೆ ಪಡೆದ ಮತದಾರರ ಯಾದಿಯನ್ವಯ ಗ್ರಾಮದಲ್ಲಿನ ಎಲ್ಲ ಮತದಾರರನ್ನೂ ಒಳಗೊಂಡ ಸಭೆ . ಅರಣ್ಯ ಹಕ್ಕು ಸಮಿತಿ ಎನ್ನುವುದು ಗ್ರಾಮ ಸಭೆಯ ನಿಯಂತ್ರಣಕ್ಕೆ ಒಳಪಟ್ಟ ಸಮಿತಿ. ಈ ಸಮಿತಿಯಲ್ಲಿ ಗ್ರಾಮ ಸಭೆಯ ಸದಸ್ಯರಾಗಿರುವ ಮತ್ತು ಗ್ರಾಮ ಸಭೆಯಲ್ಲಿ ಆಯ್ಕೆಗೊಂಡವರು ಮಾತ್ರ ಸದಸ್ಯರಾಗಿರಲು ಸಾಧ್ಯ. ಪ್ರಮುಖ ಅಂಶವೆಂದರೆ, ಇದು ರಾಜ್ಯಾಂಗದತ್ತ ಅಧಿಕಾರವಾಗಿದೆ. ಗ್ರಾಮದ ಅರಣ್ಯದಲ್ಲಿ ಲಭ್ಯವಿರುವ ಕಿರು ಉತ್ಪನ್ನಗಳು ಈ ಗ್ರಾಮ ಸಭೆಯ ಒಡೆತನಕ್ಕೆ ಒಳಪಟ್ಟವು . ಇದಲ್ಲದೇ ತಮ್ಮ ಗ್ರಾಮದ ಪರಿಧಿಯಲ್ಲಿರುವ ಅರಣ್ಯಕ್ಷೇತ್ರದ ನಿರ್ವಹಣೆಯ ಹಕ್ಕು ಮತ್ತು ಜವಾಬ್ದಾರಿ ಗ್ರಾಮ ಸಭೆಯದ್ದಾಗಿದೆ .

ಬಿದಿರು, ಜೇನು, ಮಾವು, ಹಲಸು, ಮುರುಗಲು ಮತ್ತು ಇತರೆ ಔಷಧೀಯ ಉತ್ಪನ್ನಗಳು ಸೇರಿದಂತೆ, ಜಲಮೂಲದ ಮೇಲೂ ಸಹ ಗ್ರಾಮ ಸಭೆಗೆ ಅಧಿಕಾರಯುತವಾದ ಹಕ್ಕಿದೆ. ನಾಟಾ ಅಥವಾ ಕೊರೆದ ಕಟ್ಟಿಗೆ (ಟಿಂಬರ) ಮತ್ತು ವನ್ಯ ಜೀವಿಗಳ ಹೊರತಾಗಿ ಉಳಿದೆಲ್ಲ ಅರಣ್ಯೋತ್ಪನ್ನಗಳೂ ಉಪ ಅರಣ್ಯ ಉತ್ಪನ್ನಗಳೆಂದು ಪರಿಗಣಿಸಲ್ಪಟ್ಟಿವೆ. ಬಿದಿರು ಹುಲ್ಲಿನ ವರ್ಗಕ್ಕೆ ಸೇರಿದ್ದರಿಂದ ಅದು ನಾಟಾ ಅಥವಾ ಟಿಂಬರ ಎಂದು ಪರಿಗಣಿತವಾಗಿಲ್ಲ. ಆದ್ದರಿಂದ ಇದು ಕಿರು ಅರಣ್ಯ ಉತ್ಪನ್ನವೆಂದು ಪರಿಗಣಿತವಾಗಿದೆ . ಗ್ರಾಮ ಸಭೆಯ ಅನುಮತಿಯಿಲ್ಲದೇ ಇಲಾಖೆಯೂ ಸೇರಿದಂತೆ ಯಾರೊಬ್ಬರೂ ಈ ಉತ್ಪನ್ನಗಳನ್ನು ಮುಟ್ಟುವಂತಿಲ್ಲ . ಇವುಗಳ ಬಹಿರಂಗ ಹರಾಜನ್ನು ಗ್ರಾಮ ಸಭೆಯ ನೇತೃತ್ವದಲ್ಲಿ ನಡೆಸಿ, ಅದರಿಂದ ಬರುವ ಆದಾಯವನ್ನು ಗ್ರಾಮದ ಅಭಿವೃದ್ಧಿಗೆ ಬಳಸಿಕೊಳ್ಳಬಹುದಾಗಿದೆ .

‘ಅರಣ್ಯ ಹಕ್ಕು ಅಧಿನಿಯಮ 2006’ರ ಯಶಸ್ಸಿನ ಕುರಿತು ತಿಳಿಯಲು ಗುಜರಾತ್‍ನ ದೆಡಿಯಾಪಾಡಾ ತಾಲೂಕಿನ ಗ್ರಾಮಗಳನ್ನು ಭೇಟಿ ಮಾಡಬೇಕು. ಕೆಲವೇ ಕೆಲವು ವರ್ಷಗಳ ಹಿಂದೆ ಅಕ್ಷರಶಃ ಕಡುಬಡವರಾಗಿದ್ದವರೆಲ್ಲ ಇಂದು ಶ್ರೀಮಂತಿಕೆಯತ್ತ ಮುಖ ಮಾಡಿದ್ದಾರೆ. ಪ್ರತಿಯೊಬ್ಬರ ಮನೆಯಲ್ಲೂ ಟ್ರ್ಯಾಕ್ಟರ್, ಬೈಕ್‍ಗಳಿವೆ! ಇದಕ್ಕೆ ಕಾರಣವಾಗಿದ್ದು ಗ್ರಾಮ ಸಭೆ. ಅರಣ್ಯ ಉತ್ಪನ್ನಗಳ ಮಾರಾಟದಿಂದ ಗ್ರಾಮ ಸಭೆಗೆ ಬಂದ ಆದಾಯ 12 ಕೋಟಿ, ಎಲ್ಲಾ ಖರ್ಚನ್ನು ಕಳೆದು ಗ್ರಾಮ ಸಭೆ ಪಡೆದ ಲಾಭ ಬರೋಬ್ಬರಿ 6.5 ಕೋಟಿ! ಗ್ರಾಮ ಸಭೆಯ ಮಹತ್ವವನ್ನು ಅರಿತಲ್ಲಿ ಇಂತಹ ಬದಲಾವಣೆ ದೇಶದ ಪ್ರತಿಯೊಂದು ಗ್ರಾಮದಲ್ಲೂ ಸಾಧ್ಯ, ಪ್ರತಿಯೊಂದು ಗ್ರಾಮಗಳೂ ಬದಲಾವಣೆಯಾದಾಗ ದೇಶದ ಸಮಗ್ರ ಬದಲಾವಣೆ ಸಾಧ್ಯ!

ಕೊನೆಯದಾಗಿ, ಈ ಕಾನೂನಿನ ಪೀಠಿಕೆಯಲ್ಲಿ ‘ಅರಣ್ಯವಾಸಿಗಳಿಗಾದ ಐತಿಹಾಸಿಕ ಅನ್ಯಾಯವನ್ನು ನಿವಾರಿಸುವ ಬಗ್ಗೆ ಈ ಕಾನೂನನ್ನು ಜಾರಿಗೊಳಿಸಲಾಗುತ್ತಿದೆ’ ಎಂದಿದೆ. ಆದರೆ ದಶಕಕ್ಕೂ ಹೆಚ್ಚು ಕಾಲ ಈ ಕಾನೂನನ್ನು ಮುಚ್ಚಿಡುವುದು ಈ ಅನ್ಯಾಯವನ್ನು ಉದ್ದೇಶಪೂರ್ವಕವಾಗಿ ಮುಂದುವರಿಸಿದಂತಾಗುವುದಿಲ್ಲವೆ? ಗ್ರಾಮೀಣ ಜನರಿಗೆ ಲಭ್ಯವಾಗಲಿರುವ ಕೋಟ್ಯಂತರ ರೂಪಾಯಿ ಹಾನಿಯಾಗಲು ಕಾರಣ ಯಾರು? ಇದು ಜನಸಾಮಾನ್ಯನ ಪ್ರಶ್ನೆ. ಇದಕ್ಕೆ ವ್ಯತಿರಿಕ್ತವಾಗಿ ಈ ಹತ್ತು ವರ್ಷಗಳಲ್ಲಿ ‘ಪಾಲಿಸಿದವರಿಗೆ ಪಾಲು’ ಎಂಬ ಹೆಸರಿನಲ್ಲಿ ಕಾನೂನಿನಂತೆ ಅಸ್ತಿತ್ವದಲ್ಲೇ ಇರಲಾರದ ಸಂಸ್ಥೆಗಳಿಗೆ ಗ್ರಾಮ ಸಭೆಯ ಗಮನಕ್ಕೂ ತಾರದೆ ಕೋಟ್ಯಂತರ ರೂಪಾಯಿಗಳನ್ನು ಹಂಚಲಾಗಿದೆ . ಈ ಹಕ್ಕನ್ನು ಇಲಾಖೆಗೆ ದಯಪಾಲಿಸಿದವರು ಯಾರು? ಉತ್ತರ ಹುಡುಕುವ ಜರೂರತ್ತಿದೆ. ಮೇಲಿನ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ಈ ಕೆಲವೊಂದು ಅಂಶಗಳನ್ನು ಸ್ಪಷ್ಟೀಕರಣಕ್ಕಾಗಿ ನೀಡಲಾಗಿದೆ.

1. ಗ್ರಾಮ ಸಭೆಗೆ ಆಯಾ ಗ್ರಾಮಕ್ಕೆ ಸಂಬಂಧಪಟ್ಟಂತೆ ಅರಣ್ಯಕ್ಷೇತ್ರದ ಸಂರಕ್ಷಣೆ ಮತ್ತು ನಿರ್ವಹಣೆಯ ಹೊಣೆಗಾರಿಕೆ ಕೊಡಲ್ಪಟ್ಟಿದೆ.

2. ಸಾಮುದಾಯಿಕ ಹಕ್ಕನ್ನು ಗ್ರಾಮ ಸಭೆ ಅಥವಾ ಅದರ ಅಂಗ ಸಭೆಗೆ ದೊರಕಿಸಿಕೊಡುವುದು ಜಿಲ್ಲಾ ಮಟ್ಟದ ಸಮಿತಿಯ ಹೊಣೆಗಾರಿಕೆಯಾಗಿರುತ್ತದೆ.

3. ಅಗತ್ಯವಾದಲ್ಲಿ ಅರಣ್ಯಕ್ಕೆ ಹಾನಿಯಾಗಬಹುದಾದ ಸಂದರ್ಭದಲ್ಲಿ ಅರಣ್ಯ ಪ್ರವೇಶವನ್ನು ನಿರ್ಬಂಧಿಸುವ ಹಕ್ಕು ಗ್ರಾಮ ಸಭೆಗೆ ಇರುತ್ತದೆ. ಈ ವರ್ಷದ ಸಂದರ್ಭದಲ್ಲಿ ಬಿದಿರಿನ ತುಂಡುಗಳನ್ನು ಅರಣ್ಯದಲ್ಲಿ ಹಾಗೇ ಬಿಟ್ಟಿರುವುದರಿಂದ ಬರಲಿರುವ ಬೇಸಿಗೆಯಲ್ಲಿ ಅರಣ್ಯದಲ್ಲಿ ಬೆಂಕಿ ಅನಾಹುತವೇನಾದರೂ ಸಂಭವಿಸಿದಲ್ಲಿ ಹಸಿರಿನಿಂದ ಕಂಗೊಳಿಸುತ್ತಿರುವ ಈ ಕ್ಷೇತ್ರ ಬೆಂಗಾಡಾಗುವ ಭಯವಿದೆ.

4.ಕಿರುಅರಣ್ಯ ಉತ್ಪನ್ನಗಳ ಸಾಗಾಣಿಕೆಯ ಬಗ್ಗೆ ಸಾಗಾಣಿಕೆ ಪರವಾನಿಗೆಯನ್ನು ನೀಡುವ ಹಕ್ಕು ಗ್ರಾಮ ಸಭೆಗೆ ಇದೆ.

5.ಕಿರು ಅರಣ್ಯ ಉತ್ಪನ್ನಗಳನ್ನು ಜಾಹೀರ ಲಿಲಾವು ಮಾಡುವ ಹಕ್ಕು ಗ್ರಾಮ ಸಭೆಗೆ ಇದೆ.

6.ಅರಣ್ಯ ಹಕ್ಕು ಸಮಿತಿ ಬಂದ ಮೇಲೆ ‘ಜಾಯಿಂಟ್ ಫಾರೆಸ್ಟ್ ಮ್ಯಾನೇಜ್‍ಮೆಂಟ್ ಕಮಿಟಿ’ ಅಥವಾ ‘ಗ್ರಾಮ ಅರಣ್ಯ ಸಮಿತಿ’ ಮುಂತಾದ ಸಮಿತಿಗಳಿಗೆ ಅಸ್ತಿತ್ವವಿರುವುದಿಲ್ಲ. ಇವುಗಳಿಗೆ ಇಲಾಖೆಯ ವತಿಯಿಂದ ಪಾಲು ಅಥವಾ ಇತರ ಸಹಾಯಧನವನ್ನು ಕೊಡಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ಒಂದು ವೇಳೆ ಕೊಟ್ಟರೂ ಅದನ್ನು ಗ್ರಾಮ ಸಭೆಯ ಗಮನಕ್ಕೆ ತರಬೇಕಾಗುವುದು.

7. ರಾಜ್ಯ ಮತ್ತು ಕೇಂದ್ರದ ಕಾನೂನಿನಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ, ಕೇಂದ್ರದ ಕಾನೂನನ್ನೇ ಅನುಸರಿಸಬೇಕಾಗುತ್ತದೆ.

8. ಮಾರ್ಗದರ್ಶಿ ಸೂತ್ರ 6ರನ್ವಯ ಗ್ರಾಮ ಸಭೆ ರಾಜ್ಯ ಮಟ್ಟದ ಉಸ್ತುವಾರಿ ಸಮಿತಿಗೆ ವಿನಂತಿಸುವ ಹಕ್ಕನ್ನು ಹೊಂದಿದೆ.

9. ಗೌರವಾನ್ವಿತ ರಾಷ್ಟ್ರಪತಿಗಳ ಅಭಿಭಾಷಣದಲ್ಲಿ ಈ ಕಾಯ್ದೆಯ ಕುರಿತು ಪ್ರಸ್ತಾಪಿಸಲಾಗಿದೆ. ಅಂದರೆ ಸರಕಾರ ಈ ಕಾಯ್ದೆಯನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂಬುದರ ದ್ಯೋತಕವಾಗಿದೆ (31 ಜನವರಿ 2017ರಂದು ಗೌರವಾನ್ವಿತ ರಾಷ್ಟ್ರಪತಿಗಳು ಜಂಟಿ ಸಂಸತ್ ಅಧಿವೇಶನ ಉದ್ದೇಶಿಸಿ ಮಾಡಿದ ಭಾಷಣ).

ಈ ಮೇಲಿನ ಎಲ್ಲಾ ಸಂಗತಿ-ವಿಷಯಗಳನ್ನು ಗಮನಿಸಿದಾಗ ಈ ನಿಟ್ಟಿನಲ್ಲಿ ಗ್ರಾಮೀಣ ಹಕ್ಕುದಾರರಾದ ನಮ್ಮ ಹಾಗೂ ನಮ್ಮ ಪ್ರತಿನಿಧಿಗಳ ಹೊಣೆಗಾರಿಕೆ ಏನು? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇನ್ನಾದರೂ ಕೂಡ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡು ಮುಕ್ತ ಚರ್ಚೆಯನ್ನು ನಡೆಸಿ, ಮುಂದಿನ ಕ್ರಮಗಳು ಎಂತಿರಬೇಕು ಎಂಬ ಬಗ್ಗೆ ನಿರ್ಧಾರಕ್ಕೆ ಬರುವ ಅವಶ್ಯಕತೆಯಿದೆ.

ಸುದ್ದಿದಿನ|ವಾಟ್ಸಾಪ್|9986715401

Continue Reading
Advertisement

Trending