Connect with us

ಲೋಕಾರೂಢಿ

ಗಣಿಗಾರಿಕೆಯ ಪ್ರಭಾವ

Published

on

ಗಣಿಗಾರಿಕೆ ಅಂತ ಬಂದಾಗ ನಮಗೆ ನೆನಪಾಗುವುದು ವ್ಯಾಪಾರ. ಜಗತ್ತಿನಲ್ಲಿ ಅತ್ಯಂತ, ಬಹುದೊಡ್ಡ ಲಾಭವನ್ನು ಮಾಡಿಕೊಳ್ಳುವ ಕೆಲಸ. ನಾವು ದೇಶದಲ್ಲಿ ಅತಿದೊಡ್ಡ ಶ್ರೀಮಂತರು ಯಾರೆಂದು ಗೂಗಲ್ನಲ್ಲಿ ನೋಡಿದರೆ, ಒಂದು ಸಾಫ್ಟ್ವೇರ್ ಕಂಪನಿಯವರು ಇರುತ್ತಾರೆ ಅಥವಾ ಈ ಗಣಿಗಾರಿಕೆಯ ಮುಖ್ಯಸ್ಥ ಇರುತ್ತಾನೆ.

ಗಣಿ ಗಾರಿಕೆಎಂದರೆ ಭೂಮಿಯಲ್ಲಿ ಇರುವ ಬೆಲೆಬಾಳುವ ವಸ್ತುಗಳನ್ನು ಅಗಿದು ಅದನ್ನು ಅತಿಹೆಚ್ಚು ಲಾಭಕ್ಕೆ ಮಾರುವುದು. ಉದಾಹರಣೆಗೆ- ಕಬ್ಬಿಣ, ವಜ್ರ ಇತ್ಯಾದಿ ಇನ್ನು ಬಹಳ ಇತರೆ ವಸ್ತುಗಳನ್ನು ಅಗಿದು ತೆಗೆದು ಅದಕ್ಕೆ ಸೂಕ್ತವಾದ ಆಕಾರವನ್ನು ಕೊಟ್ಟು ಮಾರುಕಟ್ಟೆಯಲ್ಲಿ ಮಾರುವುದು.

ಗಣಿಗಾರಿಕೆಯಿಂದಾಗುವ ಉಪಯೋಗಗಳು

  1. ಗಣಿಗಾರಿಕೆಯಿಂದ ದೇಶದ ಆರ್ಥಿಕ ಸ್ಥಿತಿ ಹೆಚ್ಚಾಗುವ ಸಾಧ್ಯತೆ ತುಂಬಾ ಇರುತ್ತದೆ.
  2. ಗಣಿಗಾರಿಕೆಯು ಹಳ್ಳಿಯ ಕಡೆ ಹೆಚ್ಚಾಗಿರುವ ಕಾರಣ , ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತಿದೆ.

ಇನ್ನು ಇತರೆ ಉಪಯೋಗಗಳು ತುಂಬಾ ಇವೆ. ನಮಗೆ ಗೋತ್ತೇಇದೆ, ಉಪಯೋಗಗಳಿಗಿಂತ ದುರುಪಯೋಗಗಳು ಜಾಸ್ತಿ ಇವೆ. ನಮಗೆ ಗೊತ್ತಿರುವುದರ ಹಾಗೆ ಕಳೆದ ಬಾರಿ ನಡೆದ ಕೇರಳ ಹಾಗೂ ನಮ್ಮ ರಾಜ್ಯದ ಕೊಡಗು ಜಿಲ್ಲೆಯಲ್ಲಿ ಮಣ್ಣಿನ ಶಿಖರ ಕುಸಿದು ಮಳೆ ಹೆಚ್ಚಾಗಿ ಫ್ಲಡ್ ಆಗಿರುವುದು ಹಾಗೂ ಈ ಬಾರಿ ಉತ್ತರಕನ್ನಡ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಿಂದಾಗುವಂತ ದುರಂತ ಘಟನೆಗಳು ರಾಜ್ಯದ ಜನರನ್ನು ಬೆಚ್ಚಿಬೀಳಿಸಿದೆ.

ಗಣಿ ಗಾರಿಕೆಯನ್ನು ಮಾಡುವಾಗ ಗುಡ್ಡ ಬೆಟ್ಟಗಳನ್ನು ಆಳವಾಗಿ ಅಗೆಯುತ್ತ ಹೋಗುತ್ತಾರೆ. ಆದರಿಂದ ಎಷ್ಟೋ ಮರ ಗಿಡಗಳನ್ನು ಕಡಿಯುತ್ತಾರೆ. ಆ ಜಾಗದಲ್ಲಿ ಇದ್ದಂತ ಕಾಡು ನಾಶವಾಗುತ್ತದೆ. ಗಿಡ ಮರಗಳನ್ನು ಕಡಿಯುವುದರಿಂದ ಕಾಡನ್ನು ನಾಶ ಮಾಡುವುದರಿಂದ ಗಣಿಗಾರಿಕೆಯನ್ನು ಹೆಚ್ಚು ಮಾಡುವುದರಿಂದ ನಮಗೆ ತುಂಬಾ ಅಪಾಯ ಉಂಟು ಮಾಡುತ್ತದೆ. ಮಾಲಿನ್ಯ ಹೆಚ್ಚಾಗುತ್ತದೆ, ಉಸಿರಾಟಕ್ಕೆ ಆಮ್ಲಜನಕ ಇಲ್ಲದಂತಾಗುತ್ತದೆ. ತಾಪಮಾನ ಹೆಚ್ಚಾಗುತ್ತದೆ, ಬರಗಾಲ ಬರುತ್ತದೆ.

ಈ ರೀತಿ ವಿಷಯವನ್ನು ತಿಳಿಸುತ್ತೀರಿವುದೇಕೆಂದರೆ ನಾವಾಗಿ ನಾವು ರೋಗಗಳಿಗೆ ತುತ್ತಾಗ ಬಾರದೆಂದು. ಒಂದು ವೇಳೆ ಆಮ್ಲಜನಕ ಇಲ್ಲದಂತಾಯಿತು ಅಥವಾ ಓಝೋನ್ ಪರದೆ ಪೂರ್ತಿಯಾಗಿ ನಾಶವಾಯಿತೆಂದರೆ ಅದರಿಂದ ಬರುವಂತ ರೋಗಗಳಿಗೆ ಮದ್ದುಗಳೇ ಇರುವುದಿಲ್ಲ. ಮಾನವ ಜೀವನ ಹೆಚ್ಚು ಬಿಸಿಲಿನಲ್ಲಿ ನರಕವನ್ನು ನೋಡಬೇಕಾಗುತ್ತದೆ.

ಇದರಿಂದ ನಾನು ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ, ನಾವು ಮರ ಗಿಡಗಳನ್ನು ಬೆಳೆಸಿದರೆ ಅವುಗಳು ನಮ್ಮನ್ನು ಬೆಳೆಸುತ್ತದೆ. ನಮ್ಮ್ ದೇಶದ ಒಟ್ಟು ಶಾಲಾ ಕಾಲೇಜುಗಳಿಂದ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ರಾಷ್ಟ್ರಿಯ ಹಬ್ಬಗಳ ದಿನದಂದು ಒಂದೊಂದು ಗಿಡ ನೆಟ್ಟರೆ, ಸ್ವತಂತ್ರ ಭಾರತದ ಆಯಸ್ಸನ್ನು ಹೆಚ್ಚಿಸಿದಂತಾಗುತ್ತದೆ.
ನನ್ನ ಈ ಒಂದು ಕಳಕಳಿ ನಿಮಗೆ ಸರಿ ಎನಿಸಿದರೆ ಅಥವಾ ಇಷ್ಟವಾದರೆ ತಕ್ಷಣವೇ ಗಿಡಗಳನ್ನು ಬೆಳೆಸಲು ಆರಂಭಿಸಿ .

ಅಂಕಿತ್.ಎಸ್
ದಾವಣಗೆರೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಲೋಕಾರೂಢಿ

ಪ್ರಜಾಪ್ರಭುತ್ವವಾದೀ ಹೋರಾಟದ ಮುಂಚೂಣಿಯಲ್ಲಿ ವಿದ್ಯಾರ್ಥಿಗಳು

Published

on

  • ಅವೈಚಾರಿಕತೆ ಮತ್ತು ಕಾರ್ಪೊರೇಟ್-ಹಣಕಾಸು ಕುಳಗಳ ನಡುವೆ ಏರ್ಪಟ್ಟಿರುವ ಮೈತ್ರಿ ಕೂಟವು ಬಿಜೆಪಿ ಸರ್ಕಾರಕ್ಕೆ ಬಲ ಒದಗಿಸುತ್ತಿರುವುದನ್ನು ನಾವು ಕಾಣುತ್ತೇವೆ. ವಾಸ್ತವವಾಗಿ, ಇಂತಹ ಮೈತ್ರಿ ಕೂಟಗಳೇ ಎಲ್ಲ ಫ್ಯಾಸಿಸ್ಟ್ ತೆರನ ಸರ್ಕಾರಗಳಿಗೂ ಬಲ ತುಂಬುವ ಶಕ್ತಿಗಳು. ಇಂತಹ ಒಂದು ಸರ್ಕಾರವನ್ನು ವರ್ಗ ಹೋರಾಟದ ಮೂಲಕ ಪ್ರತಿರೋಧಿಸುವ ಕಾರ್ಯಭಾರವು ಕಾರ್ಮಿಕರು, ರೈತರು, ಸಣ್ಣ ಉತ್ಪಾದಕರು, ಕೃಷಿ ಕಾರ್ಮಿಕರ ಹೆಗಲ ಮೇಲಿದ್ದರೂ ಸಹ, ವೈಚಾರಿಕ ಸಮುದಾಯವೂ ಒಟ್ಟಾಗಿ ನಿಂತು ಈ ಅವೈಚಾರಿಕತೆಯನ್ನು ಎದುರಿಸಬೇಕಿದೆ. ಯೌವನದ ಹೊಸ್ತಿಲಲ್ಲಿರುವ ವಿದ್ಯಾರ್ಥಿಗಳು ಅತಿ ಹೆಚ್ಚು ಹುರುಪುಳ್ಳವರೂ, ಉತ್ಸಾಹಿಗಳೂ ಮತ್ತು ಶಕ್ತಿಯುತ ಕ್ರಿಯಾಶೀಲರೂ ಆಗಿರುವುದರಿಂದ, ಹಿಂದುತ್ವದ ಅವೈಚಾರಿಕತೆಯ ವಿರುದ್ಧ ಶಕ್ತಿಶಾಲಿಯಾಗಿ ಹೋರಾಡಬಲ್ಲರು. ಇಂತಹ ಶಕ್ತಿಶಾಲಿ ಎದುರಾಳಿಯನ್ನು ನಿರಾಯಧರನ್ನಾಗಿಸುವುದೇ ಭಾಜಪದ ಗುರಿ. ಅದರ ಪಾಶವೀ ಹಲ್ಲೆಗೂ ಅಂಜದೆ,ಅಳುಕದೆ ವಿದ್ಯಾರ್ಥಿಗಳು, ಹೋರಾಡುತ್ತಿರುವುದು ಮನಸ್ಸನ್ನು ಉಲ್ಲಸಿತಗೊಳಿಸಿರುವ ಸಂಗತಿ.

ಪ್ರೊ.ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್

ವಿದ್ಯಾರ್ಥಿಗಳ ಉದ್ದೇಶ-ಕರ್ತವ್ಯ-ಪಾತ್ರಗಳ ಕುರಿತಂತೆ ಒಬ್ಬ ವಿದ್ಯಾರ್ಥಿಯ ಪರಿಕಲ್ಪನೆ, ಮತ್ತು, ಅದೇ ರೀತಿಯಲ್ಲಿ, ವಿಶ್ವವಿದ್ಯಾಲಯಗಳ ಉದ್ದೇಶ-ಕರ್ತವ್ಯ-ಪಾತ್ರಗಳ ಕುರಿತಂತೆ ಒಂದು ವಿಶ್ವವಿದ್ಯಾಲಯದ ಪರಿಕಲ್ಪನೆ, ಈ ಪರಿಕಲ್ಪನೆಗಳ ಬಗ್ಗೆ ದೇಶದ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳಲ್ಲಿ ಈಗ ಒಂದು ವೈಚಾರಿಕ ಸಂಘರ್ಷ ನಡೆಯುತ್ತಿದೆ. ಭಾಜಪ ಸರ್ಕಾರವು, ವಿದ್ಯಾರ್ಥಿಗಳು ಶಿಕ್ಷಣವನ್ನು ಕೊಳ್ಳುವವರಾಗಿ, ಸದಾ ಸ್ವಹಿತದಲ್ಲೇ ಮುಳುಗಿ ಸ್ವಾರ್ಥಿಗಳಾಗಿಯೇ ಉಳಿದು, ಉದ್ಯೋಗ ಮಾರುಕಟ್ಟೆಯಲ್ಲಿ ತಮ್ಮ ಶ್ರಮಶಕ್ತಿಯನ್ನು ಮಾರುವವರಾಗಿ ಇರಬೇಕೆಂದು ಬಯಸುತ್ತದೆ.

ಭಾಜಪದ ಈ ಪರಿಕಲ್ಪನೆಗೆ ಪರ್ಯಾಯವಾಗಿ ಇನ್ನೊಂದು ಪರಿಕಲ್ಪನೆಯೂ ಇದೆ. ಈ ಪರಿಕಲ್ಪನೆಯು, ವಿದ್ಯಾರ್ಥಿಯು ಒಬ್ಬ ಸಾಮಾಜಿಕ ಸಂವೇದನೆಯುಳ್ಳ ವ್ಯಕ್ತಿಯಾಗಿ ಮತ್ತು ನಮ್ಮ ಸಂವಿಧಾನದ ಪ್ರಜಾಸತ್ತಾತ್ಮಕ, ಧರ್ಮನಿರಪೇಕ್ಷ ಮತ್ತು ಮನುಷ್ಯ ಮನುಷ್ಯರ ನಡುವೆ ಸಮಾನತೆಯ ಮೌಲ್ಯಗಳ ಭಾರತವನ್ನು ಕಟ್ಟುವ ಕೈಂಕರ್ಯಕ್ಕಾಗಿ ಶಿಕ್ಷಣವನ್ನು ಬಳಸಿಕೊಳ್ಳುವ ವ್ಯಕ್ತಿಯಾಗಿ; ಮತ್ತು ಅದರ ಜೊತೆಯಲ್ಲಿ ಸರ್ಕಾರದ ನೀತಿಗಳೂ ಸೇರಿದಂತೆ ಎಲ್ಲ ಸಾಮಾಜಿಕ ವಿಷಯಗಳನ್ನೂ ವಿಮರ್ಶಾತ್ಮಕವಾಗಿ ಪರಿಶೀಲನೆಗೊಳಪಡಿಸುವ ವ್ಯಕ್ತಿಯಾಗಿ ಹೊರ ಹೊಮ್ಮಬೇಕು, ಎಂದು ಬಯಸುತ್ತದೆ.

ಅದೇ ರೀತಿಯಲ್ಲಿ, ವಿಶ್ವವಿದ್ಯಾಲಯದ ಬಗ್ಗೆಯೂ ಬೇರೆ ಬೇರೆ ಪರಿಕಲ್ಪನೆಗಳಿವೆ: ವಿಶ್ವವಿದ್ಯಾಲಯವು ಕೌಶಲ್ಯಗಳನ್ನು (ಶಿಕ್ಷಣ ಮತ್ತು ಕೌಶಲ್ಯಗಳು ಒಂದೇ ಅಲ್ಲ, ಶಿಕ್ಷಣವೇ ಬೇರೆ; ಕೌಶಲ್ಯವೇ ಬೇರೆ) ಮಾರುವ ಒಂದು ತಾಣವಾಗಿ ನೋಡುವ; ಅಥವಾ, ಪರ್ಯಾಯವಾಗಿ, ವಿಶ್ವವಿದ್ಯಾಲಯವು, ಕಲಿಕೆಯ ಜೊತೆಗೆ ನಮ್ಮ ಕಾಲದ ಜ್ವಲಂತ ಸಮಸ್ಯೆಗಳೊಂದಿಗೆ ವಿಮರ್ಶಾತ್ಮಕವಾಗಿ ಸಂವಾದಗಳಲ್ಲಿ ತೊಡಗುವ ತಾಣವಾಗಿ ನೋಡುವ ಪರಿಕಲ್ಪನೆಯೂ ಇದೆ. ವಿದ್ಯಾರ್ಥಿಗಳು, ಅದರಲ್ಲೂ ವಿಶೇಷವಾಗಿ, ನಮ್ಮ ದೇಶದ ಅಗ್ರ ಮಾನ್ಯ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಈ ಎರಡನೆಯ ಪರಿಕಲ್ಪನೆಗೆ ಸೇರುತ್ತಾರೆ – ನಮ್ಮ ಕಾಲದ ಜ್ವಲಂತ ಸಮಸ್ಯೆಗಳ ಬಗ್ಗೆ ಅವರು ತಮ್ಮ ಸಂವೇದನೆಯನ್ನು ವ್ಯಕ್ತಪಡಿಸಿದ್ದಾರೆ.

ಪೌರತ್ವ ಕಾಯ್ದೆಯ ತಿದ್ದುಪಡಿಯ ಬಗ್ಗೆ ಇತ್ತೀಚೆಗೆ ಭುಗಿಲೆದ್ದಿರುವ ಪ್ರತಿಭಟನೆಗಳಲ್ಲಿ ವಿದ್ಯಾರ್ಥಿಗಳು ಬಲು ದೊಡ್ಡ ಪಾತ್ರ ವಹಿಸಿದ್ದಾರೆ. ಅದಕ್ಕೂ ಹಿಂದೆ, ಕಳೆದ ಕೆಲವು ವರ್ಷಗಳಲ್ಲಿ, ಅನೇಕ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ವೈಚಾರಿಕ ಸಂಘರ್ಷ ವ್ಯಕ್ತಗೊಂಡಿದೆ: ಜೆಎನ್‌ಯು, ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯ, ಪುಣೆಯ ಫಿಲಂ & ಟಿ ವಿ ಟೆಕ್ನಾಲಜಿ ಇನ್‌ಸ್ಟಿಟೂಟ್; ಬರೋಡಾದ ಸಯ್ಯಾಜಿ ರಾವ್ ವಿಶ್ವವಿದ್ಯಾಲಯದ ಲಲಿತಕಲಾ ವಿಭಾಗ; ಇಂತಹ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಸಂವಿಧಾನದ ಮೌಲ್ಯಗಳನ್ನು ಆಳುವವರು ಪುರಸ್ಕರಿಸದ ಮತ್ತು ತಮ್ಮ ಹಕ್ಕುಗಳಿಗೆ ಚ್ಯುತಿಯಾದ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಗಳಲ್ಲಿ ತೊಡಗಿದ್ದರು. ಅದರಲ್ಲಿ ಆಶ್ಚರ್ಯವೇನಿಲ್ಲ.

ಆದರೆ, ವಿದ್ಯಾರ್ಥಿಗಳನ್ನು ಕೇವಲ ಕೌಶಲ್ಯಗಳನ್ನು ಕೊಳ್ಳುವ ಒಂದು ನಿಷ್ಕ್ರಿಯ ಸಮೂಹವಾಗಿ ಪರಿವರ್ತಿಸುವ ಪ್ರಯತ್ನದಲ್ಲಿ, ಭಾಜಪ ಸರ್ಕಾರವು ಯಾವ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಸಾಮಾಜಿಕವಾಗಿ ಸಂವೇದನಾಶೀಲತೆಗೆ ಹೆಸರಾಗಿದ್ದರೋ ಅಂತಹ ಈ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಮೇಲೆ ನಿಖರ ಗುರಿ ಇಟ್ಟು ದಾಳಿ ಮಾಡಿತು. ನಿಜವಾಗಿಯೂ, ಈ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಸಾಮಾಜಿಕ ಸಂವೇದನಾಶೀಲತೆಯ ಕೊಡುಗೆಯಿಂದಲೇ ಈ ವಿಶ್ವವಿದ್ಯಾಲಯಗಳು ಶ್ರೇಷ್ಠ ವಿದ್ಯಾ ಸಂಸ್ಥೆಗಳ ಎತ್ತರಕ್ಕೆ ಬೆಳೆದವು.

ಕ್ಯಾಂಪಸ್‌ಗಳು ರಾಜಕೀಯದಿಂದ ದೂರವಿರಬೇಕೆ?

ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು ರಾಜಕೀಯದಿಂದ ದೂರ ಇರುವಂತೆ ಮಾಡುವ ಸಲುವಾಗಿ ಸರ್ಕಾರವು ಅನೇಕ ವಿಧಾನಗಳನ್ನು ಅನುಸರಿಸಿದೆ. ಅವುಗಳಲ್ಲಿ ಬಹಳ ಮುಖ್ಯವಾದ ವಿಧಾನವೆಂದರೆ: ಶ್ರೀಮಂತ ಮತ್ತು ವೃತ್ತಿ-ಅಭಿಮುಖ ವಿದ್ಯಾರ್ಥಿಗಳು ಮಾತ್ರ ವಿಶ್ವವಿದ್ಯಾಲಯ ಪ್ರವೇಶಿಸಬೇಕು ಎಂಬ ಉದ್ದೇಶದಿಂದ ಶುಲ್ಕ ಹೆಚ್ಚಳ (ಜೆಎನ್‌ಯುನಲ್ಲಿ ಮಾಡಿದಂತೆ) ಮಾಡುವ ಮೂಲಕ ವಿದ್ಯಾರ್ಥಿಗಳ ಸಾಮಾಜಿಕ ಸಂಯೋಜನೆಯಲ್ಲಿ(ಅಂದರೆ, ಬೇರೆ ಬೇರೆಯ ಧರ್ಮ, ಜಾತಿ, ಲಿಂಗ, ಬಡ, ಪ್ರದೇಶ ಮುಂತಾದ ಹಿನ್ನೆಲೆಯಿಂದ ಬಂದವರು) ಬದಲಾವಣೆ, ವಿಶ್ವವಿದ್ಯಾಲಯಗಳಲ್ಲಿ ಮಾನವಿಕ ವಿಷಯಗಳು, ಸಮಾಜ ವಿಜ್ಞಾನ ಮತ್ತು ಮೂಲ ವಿಜ್ಞಾನಗಳು ಮುಂತಾದ ವಿಮರ್ಶಾತ್ಮಕ ಶಿಸ್ತುಗಳ ಮಹತ್ವವನ್ನು ಕುಗ್ಗಿಸುವ, ಹೊಸ ಶಾಖೆಗಳನ್ನು ಆರಂಭಿಸುವುದು; ಸಾಮಾಜಿಕವಾಗಿ ವಂಚಿತ ಸಮುದಾಯದ ವಿದ್ಯಾರ್ಥಿಗಳಿಗೆ ಮೀಸಲಾತಿ ಕಿತ್ತುಹಾಕಿ ಕ್ಯಾಂಪಸ್‌ಗಳ ಒಳಗೊಳ್ಳುವಿಕೆಯ ಸ್ವರೂಪವನ್ನು ಹಾಳುಗೆಡವಿರುವುದು.

ಇನ್ನೊಂದು ವಿಧಾನವೆಂದರೆ, ವಿದ್ಯಾರ್ಥಿಗಳು ಪ್ರತಿಭಟನೆಗಳಲ್ಲಿ ಭಾಗವಹಿಸದಂತೆ ತಡೆಯುವುದು, ಮತ್ತು ಸಂಘ ಪರಿವಾರಕ್ಕೆ ಒಪ್ಪಿಗೆಯಾಗದ ವ್ಯಕ್ತಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸದಂತೆ ವಿದ್ಯಾರ್ಥಿಗಳನ್ನು ತಡೆಯುವುದು. ಹೆಚ್ಚು ಹೆಚ್ಚಾಗಿ ಬಳಕೆಯಾಗುತ್ತಿರುವ ಮತ್ತೊಂದು ವಿಧಾನವೆಂದರೆ, ಪೋಲೀಸರನ್ನು ಕ್ಯಾಂಪಸ್‌ಗೆ ನುಗ್ಗಿಸಿ ವಿದ್ಯಾರ್ಥಿಗಳನ್ನು ಹಿಗ್ಗಾ ಮುಗ್ಗಾ ಥಳಿಸುವುದು ಮತ್ತು ಸರ್ಕಾರ ಅಥವಾ ಕುಲಪತಿಯನ್ನು ಫಜೀತಿಗೊಳಪಡಿಸುವ ಛಾತಿ ಇರುವ ವಿದ್ಯಾರ್ಥಿ ನಾಯಕರನ್ನು ಒಂದಲ್ಲಾ ಒಂದು ಉಗ್ರ ಕಾನೂನಿನಡಿಯಲ್ಲಿ ರಾಷ್ಟ್ರ-ವಿರೋಧಿ ಅಥವಾ ರಾಜದ್ರೋಹ ಅಥವಾ ಯಾವುದಾದರೂ ಸರಿಯೇ ಒಂದು ಕ್ರಿಮಿನಲ್ ಆಪಾದನೆಯ ಮೇಲೆ ಬಂಧಿಸಿ ಜೈಲಿನಲ್ಲಿ ಕೊಳೆಯುವಂತೆ ಮಾಡುವುದು.

ಈ ಎಲ್ಲ ವಿಧಾನಗಳನ್ನೂ ಸಂಘ ಪರಿವಾರ- ನಿಷ್ಠ ವ್ಯಕ್ತಿಗಳನ್ನು ಈ ಸಂಸ್ಥೆಗಳ ಮುಖ್ಯಸ್ತರಾಗಿ ನೇಮಿಸುವ ಮೂಲಕ ಜಾರಿ ಮಾಡಲಾಗುತ್ತಿದೆ. ಈ ವ್ಯಕ್ತಿಗಳಿಗೆ ವಿದ್ಯಾರ್ಥಿಗಳ ಬಗ್ಗೆ ಸ್ವಲ್ಪವೂ ಕರುಣೆ ಇಲ್ಲ, ತಾವು ಮುಖ್ಯಸ್ಥರಾಗಿರುವ ಸಂಸ್ಥೆಗಳ ಬಗ್ಗೆಯೇ ಗೌರವ, ಪ್ರೀತಿ, ಅಭಿಮಾನ, ಹೆಮ್ಮೆ, ಯಾವುದೂ ಇಲ್ಲ. ಅಷ್ಟೇ ಅಲ್ಲ, ಅವರು, ವಿಶ್ವವಿದ್ಯಾಲಯದ ಇಡೀ ಸಮುದಾಯದ ಯಾರೊಬ್ಬರಿಗೂ ಸಂಪರ್ಕಿಸಲು ಉದ್ದೇಶಪೂರ್ವಕವಾಗಿ ಒದಗದವರು.

ಉದಾಹರಣೆಗೆ ಹೇಳುವುದಾದರೆ, ಜೆಎನ್‌ಯುನ ವಿದ್ಯಾರ್ಥಿ ಸಂಘಕ್ಕೆ ಮನ್ನಣೆ ನೀಡಬೇಕು ಮತ್ತು ಅದರ ನಾಯಕರೊಂದಿಗೆ ಮಾತುಕತೆ ನಡೆಸಬೇಕು ಎಂಬುದಾಗಿ ಸರ್ಕಾರವೇ ನೇಮಕ ಮಾಡಿದ ತಜ್ಞರ ಸಮಿತಿಯ ಶಿಫಾರಸನ್ನು ಜೆಎನ್‌ಯು ಕುಲಪತಿ ಕಡೆಗಣಿಸಿದ್ದಾರೆ. ವಿದ್ಯಾರ್ಥಿ ಸಮುದಾಯದ ಕಣ್ಣೋಟವನ್ನು ಅಭಿವ್ಯಕ್ತಿಸುವ ವೇದಿಕೆಯಾದ ವಿದ್ಯಾರ್ಥಿ ಸಂಘವನ್ನು ಮನ್ನಣೆ ಮಾಡುವುದು ಬಿಜೆಪಿಗೆ ಹಿಡಿಸದ ಅಂಶ. ಅದು, ವಿದ್ಯಾರ್ಥಿ ಎಂದರೆ ಹೀಗೆಯೇ ಇರಬೇಕು ಎಂದು ಆದೇಶಿಸುವ ಭಾಜಪದ ಪರಿಕಲ್ಪನೆಗೆ ಹೊಂದುವುದಿಲ್ಲ.

ಒಂದು ಪ್ರಶ್ನೆ ಏಳುತ್ತದೆ: ನಮ್ಮ ವಿಶ್ವವಿದ್ಯಾಲಯಗಳಲ್ಲಿ ರಾಜಕೀಯದಿಂದ ದೂರ ಇರುವಂತೆ ಮತ್ತು ಹೇಳಿದಂತೆ ಕೇಳುವ ವಿದ್ಯಾರ್ಥಿಗಳಿಂದಲೇ ತುಂಬಿರುವಂತೆ ಮಾಡಲು ಸರ್ಕಾರವು ಅದೇಕೆ ಅಷ್ಟೊಂದು ಉತ್ಸುಕವಾಗಿದೆ? ಉತ್ತರ: ಏಕೆಂದರೆ, ಒಂದು ದಬ್ಬಾಳಿಕೆಯ ಸರ್ಕಾರಕ್ಕೆ ವಿಧೇಯತೆ ಇರಬೇಕೆಂದು ಬಯಸುವ ಸಮಾಜ ಮತ್ತು ರಾಜ್ಯಾಡಳಿತಗಳಿಗೆ ಅಂತಹ ವಿದ್ಯಾರ್ಥಿಗಳೇ ಅಗತ್ಯವಾಗಿ ಬೇಕಾಗುತ್ತಾರೆ. ನಮ್ಮ ವಿಶ್ವವಿದ್ಯಾಲಯಗಳಲ್ಲಿ ಮತ್ತು ಇತರ ಸಂಸ್ಥೆಗಳಲ್ಲಿ ಜಾರಿಯಾಗುತ್ತಿರುವ ಬದಲಾವಣೆಗಳ ಉದ್ದೇಶವೇ ಇಂತಹ ಸರ್ವಾಧಿಕಾರಶಾಹಿ ಆಳ್ವಿಕೆಗೆ ಬದಲಾವಣೆ ಹೊಂದಲು ಸಹಾಯಕವಾಗುವುದು.

ಅವೈಚಾರಿಕತೆಗೆ ಸವಾಲು

ಪ್ರಸ್ತುತದಲ್ಲಂತೂ ಅವೈಚಾರಿಕತೆ ಕುಣಿದು ಕುಪ್ಪಳಿಸುತ್ತಿದೆ. ಭಾಜಪ ಸರ್ಕಾರವು ಎರಡು ಅಪರೂಪದ ಶಕ್ತಿಗಳ ಸಂಗಮವನ್ನು ಪ್ರತಿನಿಧಿಸುತ್ತದೆ – ಒಂದು ಕಡೆಯಲ್ಲಿ ಕಾರ್ಪೊರೇಟ್-ಹಣಕಾಸು ಕುಳಗಳು ಮತ್ತು ಇನ್ನೊಂದೆಡೆಯಲ್ಲಿ ನಮ್ಮ ಪ್ರಜಾಪ್ರಭುತ್ವವಾದೀ ಮತ್ತು ಧರ್ಮನಿರಪೇಕ್ಷ ಸಂವಿಧಾನವನ್ನು ಕಿತ್ತೆಸೆಯುವ ಮೂಲಕ ದೇಶವನ್ನು ಒಂದು ಹಿಂದೂ ರಾಷ್ಟ್ರವಾಗಿ ಪರಿವರ್ತಿಸುವ ಗುರಿ ಹೊಂದಿದ ಹಿಂದುತ್ವ ಶಕ್ತಿಗಳು-ಇವೆರಡರ ಸಂಗಮ.

ಹಿಂದೂರಾಷ್ಟ್ರದ ಸಮರ್ಥನೆಯಾಗಿ ಹಿಂದುತ್ವ ಶಕ್ತಿಗಳು ಬಳಸುತ್ತಿರುವ ಇಡೀ ಕಥನವು ಅವೈಚಾರಿಕತೆಯ ಮೇಲೆ ನಿಂತಿದೆ. ಯಾವ ಅರ್ಥದಲ್ಲಿ ಅದು ಅವೈಚಾರಿಕವಾಗಿದೆ ಎಂದರೆ, ಹಿಂದುತ್ವವು ತನ್ನ ಯಥಾರ್ಥತೆ/ಸತ್ಯತೆ-ಮೌಲ್ಯವನ್ನು ಅಂಗೀಕೃತ ವಾಗುವಂತೆ ಮಾಡುವಲ್ಲಿ ಪುರಾವೆಯ ಪಾತ್ರವನ್ನು ಒಪ್ಪಿಕೊಳ್ಳುವುದಿಲ್ಲ. ಈ ರೀತಿಯಲ್ಲಿ, ಅವೈಚಾರಿಕತೆ ಮತ್ತು ಕಾರ್ಪೊರೇಟ್-ಹಣಕಾಸು ಕುಳಗಳ ನಡುವೆ ಒಂದು ಮೈತ್ರಿ ಕೂಟ ಏರ್ಪಟ್ಟಿರುವುದನ್ನು ಮತ್ತು ಈ ಮೈತ್ರಿ ಕೂಟವು ಭಾಜಪ ಸರ್ಕಾರಕ್ಕೆ ಬಲ ಒದಗಿಸುತ್ತಿರುವುದನ್ನು ನಾವು ಕಾಣುತ್ತೇವೆ. ವಾಸ್ತವವಾಗಿ, ಇಂತಹ ಮೈತ್ರಿ ಕೂಟಗಳೇ ಎಲ್ಲ ಫ್ಯಾಸಿಸ್ಟ್ ತೆರನ ಸರ್ಕಾರಗಳಿಗೂ ಬಲ ತುಂಬುವ ಶಕ್ತಿಗಳು.

ಇಂತಹ ಒಂದು ಸರ್ಕಾರವನ್ನು ವರ್ಗ ಹೋರಾಟದ ಮೂಲಕ ಪ್ರತಿರೋಧಿಸುವ ಕಾರ್ಯಭಾರವು ಕಾರ್ಮಿಕರು, ರೈತರು, ಸಣ್ಣ ಉತ್ಪಾದಕರು, ಕೃಷಿ ಕಾರ್ಮಿಕರ ಹೆಗಲ ಮೇಲಿದ್ದರೂ ಸಹ, ವೈಚಾರಿಕ ಸಮುದಾಯವೂ ಒಟ್ಟಾಗಿ ನಿಂತು ಈ ಅವೈಚಾರಿಕತೆಯನ್ನು ಎದುರಿಸಬೇಕಿದೆ. ಚಾಲ್ತಿಯಲ್ಲಿರುವ ಈ ಅವೈಚಾರಿಕತೆಯು, ಚರಿತ್ರೆಯನ್ನು ಪುರಾಣದ ಮೂಲಕ ವ್ಯಾಖ್ಯಾನಿಸುತ್ತದೆ, ವಾಸ್ತವಾಂಶಗಳಿಗೆ ಬದಲಾಗಿ ನಂಬಿಕೆಗಳಿಗೆ ಜೋತುಬೀಳುತ್ತದೆ, ವೈಜ್ಞಾನಿಕ ಮನೋಭಾವದ ಬದಲಾಗಿ ಮೂಢ ನಂಬಿಕೆಗಳನ್ನು ಹರಡುತ್ತದೆ. ಈ ರೀತಿಯಲ್ಲಿ ವೈಚಾರಿಕತೆಯನ್ನು ನಾಶಪಡಿಸುವ ಭೂಮಿಕೆಯನ್ನು ಅದು ನಿರ್ಮಿಸುತ್ತಿದೆ. ಏಕೆಂದರೆ, ಕೋಮುವಾದಿ-ಸರ್ವಾಧಿಕಾರಶಾಹೀ ಯೋಜನೆಗೆ ಈ ಭೂಮಿಕೆಯೇ ಬೆನ್ನೆಲುಬು.

ಯೌವನದ ಹೊಸ್ತಿಲಲ್ಲಿರುವ ವಿದ್ಯಾರ್ಥಿಗಳು ಅತಿ ಹೆಚ್ಚು ಹುರುಪುಳ್ಳವರೂ, ಉತ್ಸಾಹಿಗಳೂ ಮತ್ತು ಶಕ್ತಿಯುತ ಕ್ರಿಯಾಶೀಲರೂ ಆಗಿರುವುದರಿಂದ, ಅವರು ಬುದ್ಧಿಜೀವಿ ವರ್ಗದ ಮೂಲಾಂಶಗಳೂ ಆಗಿರುತ್ತಾರೆ. ಆದ್ದರಿಂದ, ಅವರು ಹಿಂದುತ್ವದ ಅವೈಚಾರಿಕತೆಯ ವಿರುದ್ಧ ಶಕ್ತಿಶಾಲಿಯಾಗಿ ಹೋರಾಡಬಲ್ಲರು. ಇಂತಹ ಶಕ್ತಿಶಾಲಿ ಎದುರಾಳಿಯನ್ನು ನಿರಾಯಧರನ್ನಾಗಿಸುವುದೇ ಭಾಜಪದ ಗುರಿ. ವೃತ್ತಿ-ಭವಿಷ್ಯದ ಬೆನ್ನತ್ತಿ ಹೋಗುವ ವಿದ್ಯಾರ್ಥಿಗಳಿಂದ ಹಿಂದುತ್ವ ಯೋಜನೆಗೆ ಅಪಾಯವಿಲ್ಲ. ಅಪಾಯ ಒಡ್ಡುವವರು ಯಾರು ಎಂದರೆ, ಸಾಮಾಜಿಕ ಸಂವೇದನೆ ವ್ಯಕ್ತಪಡಿಸುವ ವಿದ್ಯಾರ್ಥಿಗಳು ಮತ್ತು ಧರ್ಮನಿರಪೇಕ್ಷತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬದ್ಧರಾಗಿರುವ ವಿದ್ಯಾರ್ಥಿಗಳು. ಏಕೆಂದರೆ, ಯೌವನದ ಹುರುಪು, ಉತ್ಸಾಹ ಮತ್ತು ಛಲಗಳ ಜೊತೆಗೆ ಶಿಕ್ಷಣದ ಮೂಲಕ ಜ್ಞಾನ ಸಂಪನ್ನರೂ ಆಗಿರುವ ಅವರು ಹಿಂದುತ್ವದ ವಿರುದ್ಧ ಒಂದು ಬಲವಾದ ತಡೆಯಂತೆ ನಿಲ್ಲುತ್ತಾರೆ.

ಖಾಸಗೀಕರಣ-ವ್ಯಾಪಾರೀಕರಣದ ಆಯುಧ

ಶಿಕ್ಷಣವನ್ನು ಖಾಸಗೀಕರಣಗೊಳಿಸುವ ಮತ್ತು ವ್ಯಾಪಾರೀಕರಣಗೊಳಿಸುವ ಬಯಕೆಯು, ವಿದ್ಯಾರ್ಥಿಗಳನ್ನು ನಿರಾಯುಧರನ್ನಾಗಿ ಮಾಡುವ ಯೋಜನೆಯ ಭಾಗವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ವಸೂಲಿ ಮಾಡುವ ದುಬಾರಿ ಶುಲ್ಕದಿಂದಾಗಿ ದುಡ್ಡಿಲ್ಲದವರು ಶಿಕ್ಷಣದಿಂದ ಹೊರಗುಳಿಯುತ್ತಾರೆ ಮತ್ತು ಅಲ್ಲಿ ಸೇರಿಕೊಳ್ಳುವ ಶ್ರೀಮಂತರ ಮಕ್ಕಳಿಗೆ ಬಡವರ ಹೊಟ್ಟೆ ಬಟ್ಟೆಯ ಕಷ್ಟಗಳ ಬಗ್ಗೆ ಅರಿವಿಲ್ಲದಿರುವುದರಿಂದ ಅವರು ಸಾಮಾಜಿಕವಾಗಿ ಸಂವೇದನೆ ಇಲ್ಲದವರಾಗುತ್ತಾರೆ. ಹೊಟ್ಟೆ ಬಟ್ಟೆಯ ಕಷ್ಟಗಳನ್ನು ಅನುಭವಿಸಿದ ಮಕ್ಕಳಿಗೆ ಸಾಮಾಜಿಕ ಸಂವೇದನೆ ಮೂಡುವುದು ಸ್ವಾಭಾವಿಕ.

ಒಂದು ವೇಳೆ, ಜೆಎನ್‌ಯು ರೀತಿಯಲ್ಲಿ, ಸಾರ್ವಜನಿಕ ಶಿಕ್ಷಣಗಳಲ್ಲೂ ಶುಲ್ಕ ಹೆಚ್ಚಳ ಮಾಡಿದರೆ, ಈ ಸಂಸ್ಥೆಗಳ ಪಾಡೂ ಅದೇ ಆಗುತ್ತದೆ. ಬೇರೆಯವರಿಗಿಂತ ಕಡಿಮೆ ಸೌಕರ್ಯ, ಪ್ರಯೋಜನ, ರಕ್ಷಣೆ ಮುಂತಾದವುಗಳನ್ನು ಹೊಂದಿದ ಕುಟುಂಬ ಹಿನ್ನೆಲೆಯಿಂದಾಗಿ ಸಾಲ ಮಾಡಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಾಲದ ಹೊರೆಯ ಹಿಂಸೆ ಆವರಿಸಿರುವುದರಿಂದ, ಅವರಿಗೆ ಸಾಮಾಜಿಕವಾಗಿ ಅಥವಾ ರಾಜಕೀಯವಾಗಿ ಕ್ರಿಯಾಶೀಲರಾಗಿ ತೊಡಗಿಕೊಳ್ಳುವುದು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿ ಸಾಲಗಳು ರಾಜಕೀಯ ಕ್ರಿಯಾಶೀಲತೆಯ ಮೇಲೆ ಉಂಟುಮಾಡುವ ಪರಿಣಾಮಗಳ ಉತ್ತಮ ಚಿತ್ರಣ ಅಮೇರಿಕಾದಲ್ಲಿ ಸಿಗುತ್ತದೆ.

ಅಮೇರಿಕಾದಲ್ಲಿ, ವಿದ್ಯಾರ್ಥಿಗಳು ವಿಯಟ್ನಾಂ ಯುದ್ಧ-ವಿರೋಧ ಪ್ರತಿಭಟನೆ ನಡೆಸಿದ ಸಮಯದ ನಂತರದ ಅವಧಿಯಲ್ಲಿ, ಅಲ್ಲಿನ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳು ಹೋಲಿಕೆಯಲ್ಲಿ ಶಾಂತವಾಗಿ ಕಾಣುತ್ತವೆ. ಕ್ಯಾಂಪಸ್‌ಗಳು ಶಾಂತವಾಗಿ ಉಳಿದಿರುವುದಕ್ಕೆ, ಖಂಡಿತವಾಗಿಯೂ, ವಿದ್ಯಾರ್ಥಿಗಳ ಮೇಲಿರುವ ಸಾಲದ ಹೊರೆಯೇ ಕಾರಣ.

ಭಾರತದಲ್ಲಿ, ಅದೃಷ್ಟವಷಾತ್, ಸಂಘ ಪರಿವಾರದ ಶಿಸ್ತು ಹೇರುವ ವ್ಯಕ್ತಿಗಳ ಹರ ಸಾಹಸದ ಬಳಿಕವೂ, ವಿದ್ಯಾರ್ಥಿಗಳು ತಮ್ಮ ಸಾಮಾಜಿಕ ಸಂವೇದನೆಯನ್ನು ಕಳೆದುಕೊಂಡಿಲ್ಲ. ಆಗಿರುವುದು ಏನೆಂದರೆ, ಕ್ಯಾಂಪಸ್ ಡೆಮಾಕ್ರಸಿಯಿಂದ ಹಿಡಿದು, ಇಡೀ ಜನತೆಯನ್ನು ತಟ್ಟುವ ಸಮಸ್ಯೆಗಳಾದ ಸಿಎಎ ಮತ್ತು ಎನ್‌ಆರ್‌ಸಿಯವರೆಗೆ ವಿದ್ಯಾರ್ಥಿಗಳು ಕ್ರಿಯಾಶೀಲವಾಗಿ ತೊಡಗಿಕೊಂಡಿದ್ದಾರೆ. ಅವರ ಈ ಚಟುವಟಿಕೆಗಳಲ್ಲಿ ಎದ್ದು ಕಾಣುವ ಅಂಶವೆಂದರೆ, ತಮ್ಮ ತಮ್ಮ ನಡುವೆ ಬೆಸಗೊಳ್ಳುವಿಕೆಯು (ಒಳಗೊಳ್ಳುವಿಕೆಯ ಸ್ಪಂದನೆ), ಸಮಾಜವು ಯಾವ ರೀತಿಯ ಒಳಗೊಳ್ಳುವಿಕೆಯನ್ನು ಮೈಗೂಡಿಸಿಕೊಳ್ಳಬೇಕು ಎಂಬುದರ ದಿಕ್ಸೂಚಿಯಂತಿದೆ.

ಬೇರೊಂದು ಧಾರ್ಮಿಕ ಹಿನ್ನೆಲೆಯ ವಿದ್ಯಾರ್ಥಿಗಳು ಮುಸ್ಲಿಂ ವಿದ್ಯಾರ್ಥಿಗಳೊಂದಿಗೆ ಸಿಎಎ ಮತ್ತು ಎನ್‌ಆರ್‌ಸಿಯ ವಿರುದ್ಧವಾಗಿ ಹೋರಾಡುತ್ತಿರುವುದು, ಶ್ರೀಮಂತ ಹಿನ್ನೆಲೆಯ ವಿದ್ಯಾರ್ಥಿಗಳು ಶುಲ್ಕ ಹೆಚ್ಚಳದ ವಿರುದ್ಧವಾಗಿ ತಮ್ಮ ಬಡ ಸಹಪಾಠಿಗಳೊಂದಿಗೆ ಹೋರಾಡುತ್ತಿರುವ ಅಂಶಗಳು, ಆಪ್ತಗೆಳೆತನ ಮತ್ತು ಸೌಹಾರ್ಧತೆಯ ಅತ್ಯುತ್ತಮ ಉದಾಹರಣೆಗಳಾಗಿವೆ.

ವಿದ್ಯಾರ್ಥಿಗಳು ಶರಣಾಗಲು ನಿರಾಕರಿಸುತ್ತಿರುವುದರಿಂದ ಅವರನ್ನು ಪಳಗಿಸಲು ಪೋಲೀಸರು ಪಾಶವೀ ಹಲ್ಲೆ ನಡೆಸುತ್ತಿದ್ದಾರೆ. ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳ ಮೇಲೆ ಕೇಂದ್ರ ಗೃಹ ಸಚಿವರ ನೇರ ಹಿಡಿತದಲ್ಲಿರುವ ದಿಲ್ಲಿ ಪೋಲಿಸರು ಪಾಶವೀ ಹಲ್ಲೆ ನಡೆಸಿದ್ದಾರೆ. ಅಲಿಘರ್ ಮುಸ್ಲಿಂ ಯೂನಿವರ್ಸಿಟಿಯಲ್ಲಿ ಉತ್ತರ ಪ್ರದೇಶದ ಭಾಜಪದ ಯೋಗಿ ಆದಿತ್ಯನಾಥರ ಸರ್ಕಾರದ ಪೋಲಿಸರು ಪಾಶವೀ ಹಲ್ಲೆ ನಡೆಸಿದ್ದಾರೆ.

ಜೆಎನ್‌ಯುನಲ್ಲಿ, ಘಟನಾ ಸ್ಥಳದಲ್ಲಿ ವಿಶ್ವವಿದ್ಯಾಲಯದ ಸ್ವಂತ ರಕ್ಷಣಾ ಸಿಬ್ಬಂದಿಯ ನಿಗೂಢ ಅನುಪಸ್ಥಿತಿಯಲ್ಲಿ ಮತ್ತು ಆಂತರಿಕ ಮಾಹಿತಿ ಒದಗಿಸುವವರು ಬೆಟ್ಟು ಮಾಡಿ ತೋರಿಸಿದವರನ್ನು ಕ್ಯಾಂಪಸ್ ಹೊರಗಿನಿಂದ ಬಂದ ಮುಖ ಮುಸುಕು ಹೊದ್ದ ಪುಂಡರು ದಿಲ್ಲಿ ಪೋಲೀಸರ ಕಣ್ಣೆದುರಿನಲ್ಲೇ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

ಇಂತಹ ಪಾಶವೀ ಹಲ್ಲೆಗೂ ಅಳುಕದ ವಿದ್ಯಾರ್ಥಿಗಳು, ಆಧುನಿಕ ಭಾರತದ ಬುನಾದಿ ಹಾಕಿದ ಮೌಲ್ಯಗಳನ್ನು ಹಿಂದುತ್ವವು ಗುಪ್ತವಾಗಿ ಹಾಳುಗೆಡವಲು ಪ್ರಯತ್ನ ಮಾಡುತ್ತಿರುವ ಸನ್ನಿವೇಶದಲ್ಲಿ, ಭಾರತ ಸಂವಿಧಾನದ ಮೌಲ್ಯಗಳನ್ನು ರಕ್ಷಿಸಲು ವಿದ್ಯಾರ್ಥಿಗಳು ಹೋರಾಡುತ್ತಿರುವುದು ಮನಸ್ಸನ್ನು ಉಲ್ಲಸಿತಗೊಳಿಸಿರುವ ಸಂಗತಿ. ಇದು, ಪ್ರಸ್ತುತದಲ್ಲಿ ಎಷ್ಟೇ ಕಷ್ಟ ನಷ್ಟಗಳು ಎದುರಾದರೂ, ದೇಶದ ಭವಿಷ್ಯ ಸುರಕ್ಷಿತವಾಗಿರಬಲ್ಲದು ಎಂಬ ಭರವಸೆ ಹುಟ್ಟಿಸುತ್ತದೆ.

(‘ಜನಶಕ್ತಿ’ ವಾರ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೋಕಾರೂಢಿ

ಕಸಾಪಕ್ಕೆ ಗ್ರಹಣ ಹಿಡಿದಿರುವ ‘ಮನು ಬಳೆಗಾರ’ ಬಗ್ಗೆ ನೀವು ಏನು ಹೇಳ್ತೀರಾ ?

Published

on

ಬಿಡಿಗಾಸಿನ ಬೆಲೆಯೂ ಇಲ್ಲದ ಮನುಬಳೆಗಾರ್ ಅವರು ಉನ್ನತ ಹುದ್ದೆಯಲ್ಲಿದ್ದುಕೊಂಡೇ ಬಹುತೇಕ ಎಲ್ಲಾ ರಾಜಕಾರಣಿಗಳ ನಾಡಿ ಹೃದಯ ಬಡಿತ ಡೊಂಕ-ಡಸ್ಕು ತಿಳಿದು ತಿಂದುಂಡುಕೊಂಡೇ ಬೆಳೆದುಕೊಂಡು ಬಂದಿರೋ ಮಹಾನುಭಾವರು.

ಹಣ ಅಧಿಕಾರದ ದುರಾಸೆಗೆ ಯಾರ ಬೂಟನ್ನೂ ನೆಕ್ಕಲೂ ಹೇಸದ ನೀಚ ಆಧಿಕಾರಿಗಳ ಸಾಲಿಗೆ ಸೇರಲು ಅರ್ಹತೆ ಇರುವವರು ಈ ಮಹಾಪುರುಷರು.

ನಮ್ಮ ಹಿರಿಕಿರಿ ಕನ್ನಡ ಸಾಹಿತಿಗಳಿಗೆ ಏನೆಲ್ಲಾ ಆಮಿಷ ತೋರಿಸಿ ಎಲ್ಲರ ಬಾಯಿ ಮುಚ್ಚಿಸಿ ಕಸಾಪ ಅಧ್ಯಕ್ಷರ ಅಧಿಕಾರಾವಧಿ 3 ವರ್ಷ ಇದ್ದದ್ದ ತಿದ್ದಿ 5 ವರ್ಷಗಳ ಮಾಡಿಕೊಂಡು ಸಾಗುತ್ತಿರುವ ಅತ್ಯಂತ ಚಾಲಾಕೀ ಮನುಷ್ಯ.

ವರ್ಷದಿಂದಲೂ ನಾನು ಮತ್ತು ಒಂದಷ್ಟು ಗೆಳೆಯರು ದಾವಣಗೆರೆಯಲ್ಲಿ ‘ಕಸಾಪ ಆಜೀವ ಸದಸ್ಯರ ಸಮಾನ ಮನಸ್ಕ ವೇದಿಕೆ’ ಕಟ್ಟಿಕೊಂಡು ಈತನ ವಿರುದ್ಧ ಜಿಲ್ಲಾ ಕೋರ್ಟ್, ಹೈಕೋರ್ಟ್ ಮೆಟ್ಟಿಲೇರಿ, ಕಾಲ ಕಾಸು ಕಳೆದುಕೊಂಡು ಎಷ್ಟೆಲ್ಲಾ ಹೋರಾಡುತ್ತಲೇ ಬರುತ್ತಿದ್ದೇವೆ. ಆದರೆ ಈ ಮತ್ತೇರಿದ ಸಲಗನಿಗೆ ಅಂಕುಶ ಹಾಕಲಾಗುತ್ತಿಲ್ಲ.

ನಮ್ಮನ್ನು ಯಾವ ಹಿರಿಕಿರಿ ಬರಹಗಾರನೂ ಬೆಂಬಲಿಸಲಿಲ್ಲ. ಕನಿಷ್ಟ ನೈತಿಕ ಬೆಂಬಲ ಸಹ ನೀಡಲಿಲ್ಲ. ಇವರೆಲ್ಲರಿಗೂ ಬಳೆಗಾರ್ ಅದೇನೇನು ಆಮಿಷ ಒಡ್ಡಿದ್ದರೋ ಏನೋ ಆ ಭುವನೇಶ್ವರಿಯೇ ಬಲ್ಲಳು. ನಮ್ಮೊಡನಿದ್ದವರೂ ಮೆಲ್ಲಗೆ ಜಾರಿಕೊಂಡು ಈತನ ಪಟಾಲಂ ತೋರುವ ಆಮಿಷಗಳಿಗೆ ಬಲಿಯಾಗಿ ಹೋದರು.

ಈಗ ಶತಭಂಡತನದಿಂದ ಕಲ್ಬುರ್ಗಿಯಲ್ಲಿ 85 ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಹೊರಟಿರುವ ಈ ಮನು ವ್ಯಾದಿ ಸರ್ವಾಧಿಕಾರಿಗೆ ಸರಕಾರವು ಕೋಟಿಗಟ್ಟಳೆ ನೀಡುವ ಇಡುಗಂಟ ಮೇಲೇ ಕಣ್ಣಿದೆ.

ಈ 85 ಪುಸ್ತಕಗಳ ಪ್ರಕಟಿಸಿದರೆ ತನ್ನ ಬೊಕ್ಕಸಕ್ಕೆ ಕನಿಷ್ಟ ಒಂದು ಕೋಟಿಯಷ್ಟು ನಿಧಿ ಕಡಿಮೆಯಾಗುತ್ತದೆ ಎಂಬ ಸತ್ಯ ತಿಳಿದು ಪುಸ್ತಕ ಪ್ರಕಟಣೆಗೇ ಎಳ್ಳು ನೀರು ಬಿಟ್ಟಿದ್ದಾರೆ.

ಈತನ ಹಿಂದೆ 30 ಜಿಲ್ಲೆಗಳ ಅಧ್ಯಕ್ಷರುಗಳು ತಾಳ ಗೋಣು ಹಾಕುತ್ತ ಸಾಲುಗಟ್ಟಿ ನಿಂತಿದ್ದಾರೆ. ಪಾಪ ಅವರಿಗೆ ಈತ ಅದೇನು ಆಮಿಷ ಒಡ್ಡಿ ಬಾಯಿ ಮುಚ್ಚಿಸಿದ್ದಾರೊ ಏನೋ ಯಾರುಬಲ್ಲರು?! ಅವಧಿ ಮುಗಿದ ಮೇಲೆ ತಿಳಿಯುತ್ತದೆ ನಿಜಬಣ್ಣ.

ಈ ಸರ್ವಾಧಿಕಾರಿ ಮನುವನ್ನು ಹಿಡಿದು ನಿಲ್ಲಿಸಿ ಕೇಳುವವರು ಯಾರೂ ಇಲ್ಲದಾಗಿದೆ. ಬಹುತೇಕ ಎಲ್ಲ ರಾಜಕಾರಣಿಗಳ ಹುಳುಕನ್ನೂ ಬಲ್ಲ ಈತ ಯಾರಿಗೆ ಹೇಗೆ ಚಳ್ಳೆ ಹಣ್ಣು ತಿನ್ನಿಸಬೇಕೆಂಬುದ ಚೆನ್ನಾಗಿ ಬಲ್ಲ ನಿಸ್ಸೀಮ.

ನಮ್ಮ ಕನ್ನಡ ಸಾಹಿತ್ಯಲೋಕದ ವಾರಸುದಾರರಿಗೆ ಇದೀಗ ಜ್ಣಾನೋದಯವಾದಂತಿದೆ. ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಪ್ರಕಟಣೆ ಮಾಡುವುದಿಲ್ಲ ಎಂಬ ಹೇ(ಸಿ)ಳಿಕೆ ಹೊರಬೀಳುತ್ತಿದ್ದಂತೆಯೇ ಬಳೆಗಾರ ತಮ್ಮ ಮೂಗಿಗೆ ಹಚ್ಚಿದ್ದ ತುಪ್ಪ ವಾಸನೆ ಬರತೊಡಗಿದೆ.

ಯಾವುದೇ ಪ್ರಶಸ್ತಿ ಸನ್ಮಾನ ಮಾಡದೆ, ಕವಿಗೋಷ್ಠಿ ಅಧ್ತಕ್ಷ, ಸಮ್ಮೇಳನ ಅಧ್ಯಕ್ಷರನ್ನಾಗಿ ಮಾಡದೇ ಇರುವ ಕಾರಣ ಕೆಲವು ಸಾಹಿತಿಗಳು ತಮ್ಮ ಜಾಣ ನಿದ್ದೆಯಿಂದೆದ್ದು ಆಕಳಿಸುತ್ತ ಮನುವಿನ ಬೊಗಳೆತನದ ವಿರುದ್ಧ ಬಾಯಿ ಬಿಡುತ್ತಿದ್ದಾರೆ. ತಮಗೆ ಲಾಭವಾಗಿದ್ದರೆ ತೆಪ್ಪಗೆ ಅನುಭವಿಸಿ ಹೊಗಳುತ್ತಿದ್ದರು ಅನಿಸುತ್ತೆ.

ವೈಯಕ್ತಿಕ ಲಾಭಕ್ಕಾಗಿ ಕಸಾಪ ಮರ್ಯಾದೆ ತೆಗೆಯಲು ಮೂಖಸಾಕ್ಷಿಗಳಾಗಿ ನಿಂತ ಎಲ್ಲಾ ಸಾಹಿತ್ಯ ವೃಂದಕ್ಕೆ ಹಾಗೂ ಕಸಾಪ ಆಜೀವ ಸದಸ್ಯರಿಗೆ ಎನೆನ್ನಬೇಕು? ಕನ್ನಡ ಸಾಹಿತ್ಯ ಅಭಿಮಾನಿಗಳೆನ್ನೋಣವೋ ? ಅವಕಾಶವಾದಿಗಳೆನ್ನೋಣವೋ? ನಿರಭಿಮಾನಿಗಳೆನ್ನೋಣವೋ? ವೈಯಕ್ತಿಕ ಲಾಭ, ಸ್ವಾರ್ಥಸಾಧನೆಯ ಸಮಯಸಾಧಕತನವೆನ್ನೋಣವೋ?! ಕನ್ನಡ ನಾಡುನುಡಿಯ ಶಾರದಾ ಮಂದಿರ ಕಸಾಪಕ್ಕೆ ಗ್ರಹಣದಂತೆ ಹಿಡಿದಿರುವ ಮನು ಬಳೆಗಾರ ಬಗ್ಗೆ ನೀವು ಏನು ಹೇಳ್ತೀರಾ ?

ಆರ್. ಶಿವಕುಮಾರಸ್ವಾಮಿ ಕುರ್ಕಿ
ಮೊ: 8970948221

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೋಕಾರೂಢಿ

ಸಿಎಎ – ಎನ್ ಆರ್ ಸಿ ಗೊಂದಲ ಮತ್ತು ಪಾಕಿಸ್ತಾನ – ಭಾರತ ವಿಭಜನೆ

Published

on

  • ರಘೋತ್ತಮ ಹೊ.ಬ

ಪ್ರಸ್ತುತದ ಸಮಸ್ಯೆಗೆ ಕನ್ನಡಿ ಹಿಡಿಯುವ ಬಾಬಾಸಾಹೇಬ್ ಅಂಬೇಡ್ಕರ್ ರ ಈ ಕೃತಿ “Pakistan or The Partition of India” (ಪಾಕಿಸ್ತಾನ ಅಥವಾ ಭಾರತದ ವಿಭಜನೆ) ಪ್ರತಿಯೊಬ್ಬರೂ ಓದಬೇಕು. ಒಬ್ಬ ನ್ಯಾಯಾಧೀಶರ ಮಾದರಿಯಲ್ಲಿ ಒಂದು ಕಡೆ ಮುಸ್ಲಿಮರು ಮತ್ತೊಂದು ಕಡೆ ಹಿಂದೂಗಳು ಇಬ್ಬರನ್ನೂ ಕಕ್ಷಿದಾರರ ರೀತಿ ಇರಿಸಿ ಅಂಬೇಡ್ಕರ್ ಈ ಕೃತಿ ಬರೆಯುತ್ತಾ ಹೋಗುತ್ತಾರೆ.

ಸಮಚಿತ್ತದ ನ್ಯಾಯ. ಹೇಗೆಂದರೆ ಅಂಬೇಡ್ಕರರ ಈ ಕೃತಿಯನ್ನು ಹಿಂದೂಗಳು ಒಪ್ಪಲಿಲ್ಲ ಮುಸ್ಲಿಮರು ಕೂಡ ಒಪ್ಪಲಿಲ್ಲ. ಇಬ್ಬರೂ ಒಪ್ಪದ ಈ ಕೃತಿಯನ್ನು ಅಂಬೇಡ್ಕರರು ತನ್ನ ಬರಹದ ದಿಗ್ವಿಜಯ ಎನ್ನುತ್ತಾರೆ. 80 ವರ್ಷಗಳ ಹಿಂದೆ ಅವರು ಬರೆದ ಈ ಕೃತಿ ಒಂದು ರೀತಿಯ ಬಾಬಾಸಾಹೇಬರ ದೇಶಪ್ರೇಮದ ಕೊಡುಗೆಯಾಗಿದೆ.

ಆ ಮೂಲಕ ಈ ದೇಶದ ಬಗ್ಗೆ, ಇದರ ಒಳಿತಿನ ಬಗ್ಗೆ ಅಂಬೇಡ್ಕರರಿಗೆಷ್ಟು ಕಾಳಜಿ ಇತ್ತು, ಇದೆ ಎಂಬುದು ಈ ಕೃತಿಯಿಂದ ಸಾಬೀತಾಗುತ್ತದೆ. ಅದರಲ್ಲೂ CAA ಮತ್ತು NCR ಗೊಂದಲದ ಈ ದಿನಗಳಲ್ಲಿ ಪರಿಹಾರ ಪರಿಣಾಮ ಏನಾಗಬಹುದು ಎಂಬ ಬಗ್ಗೆ ತಿಳಿಯಲು ಪ್ರತಿಯೊಬ್ಬರೂ ಈ ಕೃತಿ ಓದಲೇಬೇಕು.

ಗೆಳೆಯರೊಬ್ಬರು “ಅಂಬೇಡ್ಕರ್ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕು ಎಂದಿದ್ದರು” ಎಂದು ಜನಸಾಮಾನ್ಯರಿಗೆ ತಪ್ಪು ಸಂದೇಶ ನೀಡಲು ಯತ್ನಿಸಿದ್ದಾರೆ. ಆ ಮೂಲಕ ಬಾಬಾಸಾಹೇಬರಿಗೆ ಕೆಟ್ಟ ಹೆಸರು ತರುವ ಕೆಲಸವನ್ನು ಸದರಿಯವರು ಮಾಡಲೆತ್ನಿಸಿದ್ದಾರೆ.

ಈ ನಿಟ್ಟಿನಲ್ಲಿ ಸದರಿಯವರ ಬೌದ್ಧಿಕ ದಿವಾಳಿತನಕ್ಕೆ ಏನನ್ನಬೇಕೋ ತಿಳಿಯುತ್ತಿಲ್ಲ. ಆದ್ದರಿಂದ ವಾಸ್ತವದ ಉತ್ತರ ತಿಳಿಯಲು ಪ್ರತಿಯೊಬ್ಬರೂ ಈ ಕೃತಿ ಓದಿ. ಆ ಮೂಲಕ ಒಂದು ದೇಶ ಧರ್ಮದ ಆಧಾರದ ಮೇಲೆ ಕಚ್ಚಾಡುತ್ತ ಕುಳಿತರೆ ಆ ದೇಶದ ಕತೆ ಏನಾಗಬಹುದು? ಈ ಹಿನ್ನೆಲೆಯಲ್ಲಿ ದೇಶಪ್ರೇಮಿಗಳೆಲ್ಲರೂ ಅಂಬೇಡ್ಕರ್ ರ ಅಪ್ರತಿಮ ದೇಶ ಪ್ರೇಮದ ಅಪರೂಪದ ಈ ಕಾಣ್ಕೆಯ ದರ್ಶನ ಪಡೆಯಿರಿ. ಆ ಮೂಲಕ ನಿಮ್ಮ ದೇಶಪ್ರೇಮವನ್ನೂ ಹೆಚ್ಚಿಸಿಕೊಳ್ಳಿ ಎಂಬುದು ಕಳಕಳಿಯ ಮನವಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending