Connect with us

ಲೋಕಾರೂಢಿ

ಭಾವಾವೇಶದ ಆರ್ಭಟವೂ ಸುಳ್ಳು ಸುದ್ದಿಯ ಕಾಟವೂ

Published

on

  • ನಾ. ದಿವಾಕರ

ಇಂದು ಮಧ್ಯಾಹ್ನ (ಬುಧವಾರ 01 ನೇ ತಾರೀಖು)  ಕೆಲಸದ ನಿಮಿತ್ತ ಸ್ನೇಹಿತರ ಮನೆಗೆ ಹೋಗಿದ್ದೆ. (ಏಕೆ ಹೋಗಿದ್ದಿರಿ ಎನ್ನಬೇಡಿ, ಮಾಸ್ಕ್ ಧರಿಸಿ ಹೋಗಿದ್ದೆ ಅವರೂ ಮಾಸ್ಕ್ ಧರಿಸಿದ್ದರು-ಸುರಕ್ಷಿತ ವಲಯ ಎಂದಿಟ್ಟುಕೊಳ್ಳಿ) ಅಲ್ಲಿ ಮಾತಿನ ನಡುವೆಯೇ ಅವರು ನೋಡುತ್ತಿದ್ದ ಪಬ್ಲಿಕ್ ಟಿವಿ ಸುದ್ದಿವಾಹಿನಿಯನ್ನು ನೋಡುವ ಅನಿವಾರ್ಯ ಸಂದರ್ಭ. ಮಧ್ಯಾಹ್ನವಲ್ಲವೇ, ಊಟ ನಿದ್ರೆಯ ಹೊತ್ತು. ರೋಚಕತೆ ಇರಬೇಕು. ಹಾಗಾಗಿ ಒಬ್ಬ ನಿರೂಪಕಿಯಿಂದ ಚೀನಾ ಕುರಿತ ರೋಚಕ, ರೋಮಾಂಚಕ ಸುದ್ದಿ ಬಿತ್ತರವಾಗುತ್ತಿತ್ತು.

ಈಗ ಭಾರತದ ಮಾಧ್ಯಮಗಳಿಗೆ ಮುಸ್ಲಿಮರ ಹೊರತಾಗಿ ಮತ್ತೊಂದು ಶತ್ರು ಹುಟ್ಟಿಕೊಂಡಿದ್ದರೆ ಅದು ಚೀನಾ. ಏಕೆಂದರೆ ಅದು ಕಮ್ಯುನಿಸ್ಟ್ ರಾಷ್ಟ್ರ ಎನ್ನುವ ಭ್ರಮೆ. ಚೀನಾ ಎಷ್ಟರ ಮಟ್ಟಿಗೆ ಕಮ್ಯುನಿಸ್ಟ್ ರಾಷ್ಟ್ರ ಎನ್ನುವುದು ಕಮ್ಯುನಿಸ್ಟರಿಗೇ ಗೊತ್ತು ಬಿಡಿ. ಆದರೂ ಅಲ್ಲಿ ಕಮ್ಯುನಿಸ್ಟ್ ಪಕ್ಷದ ಆಡಳಿತ ಇದೆ. ಕಮ್ಯುನಿಸಂ ಕುರಿತು ಗಂಧ ಗಾಳಿ ಅರಿಯದ ಟಿವಿ ನಿರೂಪಕರಿಗೆ ಚೀನಾ ಸರ್ಕಾರವನ್ನು ಹೀಯಾಳಿಸಿ, ಜರೆಯಲು ಕಮ್ಯುನಿಸಂ ಕುರಿತು ಪರಿಜ್ಞಾನ ಇರಬೇಕೆಂದಿಲ್ಲ. ಸಂಪಾದಕರು ಬರೆದುಕೊಟ್ಟದನ್ನು ಮತ್ತೆ ಮತ್ತೆ ಹೇಳುತ್ತಿದ್ದರೆ ಸಾಕು. ಕನ್ನಡ ಮಾಧ್ಯಮಗಳನ್ನು ನೋಡುವವರಿಗೆ ಇದು ಹೊಸತೇನಲ್ಲ.

ಆ ನಿರೂಪಕಿಯ ಮತ್ತು ವಾಹಿನಿಯ ಮುಖ್ಯ ಉದ್ದೇಶ ಚೀನಾ ದೇಶವನ್ನು ಖಳನಾಯಕನಂತೆ ಬಿಂಬಿಸುವುದು. ಚೀನಾ ಸುಳ್ಳು ಹೇಳುತ್ತಿದೆ ಎಂದು ನಿರೂಪಿಸುವುದು ಮತ್ತು ಕೊರೋನಾ ಹರಡುವುದಕ್ಕೆ ಚೀನಾ ಏಕೈಕ ಕಾರಣ ಎಂದು ಘೋಷಿಸುವ ಮೂಲಕ “ಭರತ ಪ್ರೇಮ”ವನ್ನು ಸಾಬೀತುಪಡಿಸುವುದು. ಆಕೆಯ ಸುದ್ದಿಯಂತೂ ರೋಚಕವಾಗಿತ್ತು. ವೂಹಾನ್ ಪ್ರಾಂತ್ಯದಲ್ಲೇ ಕೊರೋನಾ ವೈರಾಣುವಿಗೆ 40 ಸಾವಿರ ಜನ ಬಲಿಯಾಗಿದ್ದಾರೆ, ಚೀನಾದಲ್ಲಿ ಈವರೆಗೆ ಮೂರು ಲಕ್ಷ ಜನ ಕೊರೋನಾದಿಂದ ಸತ್ತಿದ್ದಾರೆ. ಪ್ರತಿದಿನ 1200 ಶವಗಳನ್ನು ಸುಡಲಾಗುತ್ತಿದೆ, ಆಸ್ಪತ್ರೆಗಳಲ್ಲಿ ಹೆಣದ ರಾಶಿಗಳೇ ಬಿದ್ದಿವೆ. ಚೀನಾ ಈ ಮಾಹಿತಿಯನ್ನು ಜಗತ್ತಿಗೆ ನೀಡದೆ ಮುಚ್ಚಿಡುವ ಮೂಲಕ ವಂಚನೆ ಮಾಡುತ್ತಿದೆ, ಇತ್ಯಾದಿ ಇತ್ಯಾದಿ.

ಏರು ದನಿಯ ನಿರೂಪಣೆಯಲ್ಲಿ ಇದ್ದ ಕೃತ್ರಿಮವನ್ನು ಗಮನಿಸುವುದು ಕಷ್ಟವೇನಿರಲಿಲ್ಲ. ಮತ್ತು ಈ ಉಗ್ರ ಭಾಷಣದ ನಡುವೆ ತೋರಿಸುತ್ತಿದ್ದ ಚಿತ್ರಗಳು ಬಹುಶಃ ಟೈವಾನ್, ಹಾಂಕಾಂಗ್‍ನಲ್ಲಿ ತಯಾರಿಸಲಾಗುವ ಚಲನಚಿತ್ರಗಳ ತುಣುಕುಗಳಂತಿತ್ತು. ಚೀನಾದ ಆಸ್ಪತ್ರೆಯಲ್ಲಿ ರೋಗಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡವನ್ನು ಚಿತ್ರೀಕರಿಸುವುದು ಎಂತಹ ಸಾಹಸ ಎನ್ನುವುದು ಎಲ್ಲರಿಗೂ ತಿಳಿದಿದ್ದೇ. ಈ ಸುದ್ದಿ ಸಮರ್ಥನೆಗೆ ಒಬ್ಬ ಚೀನಾದ ರಾಜಕಾರಣಿಯ ಮಾತುಗಳು. ಅವರ ಹೆಸರು ಮಾತ್ರ ಎಲ್ಲಿಯೂ ಕಾಣಲಿಲ್ಲ. ಆದರೂ ಪಬ್ಲಿಕ್ ಟಿವಿಯಲ್ಲಿ ಚಲನಚಿತ್ರದ ತುಣುಕುಗಳನ್ನೇ ನೈಜ ಚಿತ್ರಗಳಂತೆ ತೋರಿಸುತ್ತಿದ್ದುದು ಮೇಲ್ನೋಟಕ್ಕೆ ಸ್ಪಷ್ಟವಾಗಿತ್ತು.

ಒಂದು ಗಂಟೆಯ ಕಾರ್ಯಕ್ರಮದಲ್ಲಿ ಹೇಳಿದ್ದು ಹತ್ತು ಸಾಲುಗಳು, ಹತ್ತು ಬಾರಿ ಹೇಳಿದ್ದನ್ನೇ ಹೇಳುವ ಮೂಲಕ ಚೀನಾ ವಂಚಕ ದೇಶ ಎಂಬ ನಿಟ್ಟುರಿಸಿನೊಂದಿಗೆ ನಿರೂಪಕಿ ನಿರ್ಗಮಿಸಿದ್ದರು.
ಮನೆಗೆ ಬಂದು ವೆಬ್ ತಾಣದಲ್ಲಿ ಶೋಧಿಸಿದೆ. ಎಲ್ಲಿಯೂ ಈ ರೀತಿಯ ಸುದ್ದಿ ಕಾಣಲಿಲ್ಲ. ಗಾಳಿಸುದ್ದಿಯೂ ಸಹ ವೆಬ್ ತಾಣದಲ್ಲಿ ರಾರಾಜಿಸುವ ಇಂದಿನ ದಿನಗಳಲ್ಲಿ ಈ ಸುದ್ದಿಯೂ ಎಲ್ಲೋ ಒಂದು ಕಡೆ ಕಾಣಬೇಕಿತ್ತಲ್ಲವೇ. ಎಲ್ಲಿಯೂ ದೊರೆಯಲಿಲ್ಲ ಆಗ ನನಗನಿಸಿದ್ದು, ನಮ್ಮ ಕನ್ನಡ ಮಾಧ್ಯಮಗಳ ವ್ಯಸನ ಯಾವ ಹಂತ ತಲುಪಿದೆ, ಸುದ್ದಿ ವ್ಯಸನದ ಜೊತೆಗೆ ರೋಚಕತೆಯ ವ್ಯಸನವೂ ಸೇರಿಕೊಂಡು ಕನ್ನಡ ವಾಹಿನಿಗಳು ತಮ್ಮ ಸ್ವಂತಿಕೆಯನ್ನೇ ಕಳೆದುಕೊಂಡು ಬೆತ್ತಲಾಗಿವೆ ಎನಿಸಿಬಿಟ್ಟಿತು.

ಚೀನಾ=ಮುಸ್ಲಿಂ ಸೂತ್ರ ಎಷ್ಟು ಪರಿಣಾಮಕಾರಿಯಾಗಿ ಮಾಧ್ಯಮಗಳನ್ನು ಆವರಿಸಿದೆ ಎಂದು ಅರಿವಾಯಿತು. ಒಂದು ವೇಳೆ ಪಬ್ಲಿಕ್ ಟಿವಿಯ ಈ ಸುದ್ದಿ ಸತ್ಯವೇ ಆಗಿದ್ದರೆ ಸಾಕ್ಷಿ ಪುರಾವೆಗಳೊಂದಿಗೆ ಸಾಬೀತುಪಡಿಸಿ, ಅಂತಾರಾಷ್ಟ್ರೀಯ ನ್ಯಾಯ ಮಂಡಲಿಯ ಮುಂದೆ ಸಾಬೀತುಪಡಿಸಿ, ಚೀನಾ ಸರ್ಕಾರವನ್ನು ಕಟಕಟೆಯಲ್ಲಿ ನಿಲ್ಲಿಸಲಿ. ಅಡ್ಡಿಯಿಲ್ಲ. ಚೀನಾ ಯಾರಿಗೂ ಡಾರ್ಲಿಂಗ್ ಅಲ್ಲ. ತಪ್ಪು ಮಾಡಿ ಶಿಕ್ಷೆ ಅನುಭವಿಸಿದರೆ ಯಾವ ದೇಶದ ಕಮ್ಯುನಿಸ್ಟರೂ ವಿರಹ ವೇದನೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ.

1970ರ ದಶಕದ ಚೀನಾದ ಮಳೆ ಭಾರತದ ಛತ್ರಿ ಎನ್ನುವ ಲೇವಡಿಯ ಮಾತು ಇಂದು ಹಳಸಿ ಕೊಳೆತುಹೋದ ಸರಕು. ಚೀನಾದಲ್ಲಿ ಆಡಳಿತ ನಡೆಸುವ ಕಮ್ಯುನಿಸ್ಟ್ ಪಕ್ಷ ಯಾವ ದೇಶದ ಕಮ್ಯುನಿಸ್ಟ್ ಪಕ್ಷಕ್ಕೂ ಸೂತ್ರಧಾರಿಯೂ ಅಲ್ಲ, ಮಾರ್ಗದರ್ಶಿಯೂ ಅಲ್ಲ. ಮಾರ್ಕ್ಸ್ ವಾದಿಗಳಿಗೆ ಇದು ಪ್ರಸ್ತುತವೂ ಅಲ್ಲ. ಆದರೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ, ದಾಖಲೆ ಪುರಾವೆಗಳಿಲ್ಲದೆ ಒಂದು ಗಂಟೆಯ ಕಾಲ ಜನಸಾಮಾನ್ಯರ ದಿಕ್ಕುತಪ್ಪಿಸಿ, ಲಾಭ ಪಡೆಯುವ ಪಬ್ಲಿಕ್ ಟಿವಿ ತಾನು ನೀಡುವ ಸುದ್ದಿ ಸುಳ್ಳಾಗಿದ್ದರೆ ಜನರ ಮುಂದೆ ಮಂಡಿಯೂರಬೇಕಲ್ಲವೇ ? ಸವಾಲು ಸ್ವೀಕರಿಸಲೇಬೇಕೆಂದಿಲ್ಲ. ವಿವೇಚನೆ ಮತ್ತು ವಿವೇಕ ಬಳಸಿ ಸುದ್ದಿ ಬಿತ್ತರಿಸಿದರೆ ಜಗತ್ತಿಗೂ ಒಳಿತು, ಜನತೆಗೂ ಒಳಿತು.

ಮಧ್ಯಾಹ್ನದ ನಿದ್ರೆಯನ್ನು ಮುಗಿಸಿ ಸೆಕೆ ತಡೆಯಲಾರದೆ ಅಕ್ಕನೊಂದಿಗೆ ಮೊಬೈಲ್‍ನಲ್ಲಿ ಮಾತನಾಡುತ್ತಾ ಕಾಂಪೌಂಡಿನಲ್ಲಿ ನಿಂತಿದ್ದೆ. ಮಡದಿ ಮನೆಯೊಳಗೆ ಟಿವಿ ನೋಡುತ್ತಿದ್ದಳು. ಹಠಾತ್ತನೆ ಸೂರು ಕಿತ್ತು ಹೋಗುವಂತೆ ಅರಚಾಡುವ ಸದ್ದು ಟಿವಿಯಲ್ಲಿ ಕೇಳಿಸಿತು. ಸುದ್ದಿವಾಹಕನ ದನಿ ಎಷ್ಟು ಭೀಕರವಾಗಿತ್ತೆಂದರೆ, ಬಹುಶಃ ಯಾವುದೇ ಪ್ಯಾನಲ್ ಚರ್ಚೆಯಲ್ಲಿ ಜಗಳವಾಗುತ್ತಿದೆ ಎಂದು ಭಾವಿಸಿದೆ. ಇಂದಿನ ದಿನಗಳಲ್ಲಿ ಇದು ಸಾಮಾನ್ಯ ಸಂಗತಿ ಅಲ್ಲವೇ. ಆದರೂ ಏಕೆ ಇಷ್ಟೊಂದು ಜೋರುದನಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಒಳಬಂದು ನೋಡಿದೆ. ಬಿ ಟಿವಿಯಲ್ಲಿ ಸ್ಫೋಟಕ ಬ್ರೇಕಿಂಗ್ ಸುದ್ದಿ ಪ್ರಸಾರವಾಗುತ್ತಿತ್ತು. ಅರಚಾಡುತ್ತಿದ್ದ, ಸೂರು ಕಿತ್ತು ಹೋಗುವ ಹಾಗೆ ಕಿರುಚುತ್ತಿದ್ದ ನಿರೂಪಕ “ ವೈರಸ್ ಟೆರರಿಸಂ ” ಕುರಿತು ಮಾತನಾಡುತ್ತಿದ್ದುದನ್ನು ಕಂಡೆ. ಅವರ ಏರು ದನಿ ಹೇಗಿತ್ತೆಂದರೆ ಇನ್ನು ಕೆಲ ಕ್ಷಣಗಳಲ್ಲೇ ಜಟಾಪಟಿ ಯುದ್ಧವೇ ಆರಂಭವಾಗುತ್ತದೆ ಎನ್ನುವಂತಿತ್ತು.

ಯಾರನ್ನು ಪ್ರಶ್ನಿಸುತ್ತಿದ್ದರೋ ಗೊತ್ತಾಗಲಿಲ್ಲ, ನಿಜಾಮುದ್ದಿನ್ ತಬ್ಲೀಗಿ ಜಮಾತ್ ಧಾರ್ಮಿಕ ಸಮ್ಮೇಳನ ಅವರ ಕೆಂಗಣ್ಣಿಗೆ, ಜೋರು ಬಾಯಿಗೆ ಸಿಲುಕಿಬಿಟ್ಟಿತ್ತು.
ನಿಜ ನಿಜಾಮುದ್ದಿನ್ ಧಾರ್ಮಿಕ ಸಮ್ಮೇಳನವನ್ನು ಆಯೋಜಿಸಿದ್ದು ತಪ್ಪು ಆದರೆ ಅನುಮತಿ ನೀಡಿದ್ದೂ ತಪ್ಪಲ್ಲವೇ ? ಈ ಸಮ್ಮೇಳನದಲ್ಲಿ ಭಾಗವಹಿಸಿದ್ದವರಿಂದ ಕೊರೋನಾ ಸೋಂಕು ಹರಡಿರುವುದೂ ಸತ್ಯ. ಕೊರೋನಾ ಸೋಂಕಿತರು ಇದನ್ನು ಬಯಸಿರಲಿಲ್ಲ. ಧಾರ್ಮಿಕ ನಾಯಕರ ಮೌಢ್ಯಕ್ಕೆ ಬಲಿಯಾಗಿಯೂ ನೂರಾರು ಜನ ಸೋಂಕಿತರಾಗಿದ್ದಾರೆ.

ಈ ಸೋಂಕಿತರನ್ನು ಮಾನವೀಯ ದೃಷ್ಟಿಯಿಂದ ನೋಡುವ ವ್ಯವಧಾನ ಮತ್ತು ಸಂವೇದನೆ ಮಾಧ್ಯಮಗಳಿಗೆ ಇರಬೇಕಲ್ಲವೇ ? ಬಿ ಟಿವಿ, ಸುವರ್ಣ ವಾಹಿನಿಯವರಿಗೆ ಸೋಂಕಿತರು ಶಂಕಿತರಂತೆಯೂ, ಕೊರೋನಾದಿಂದ ಭೀತಿಗೊಳಗಾದವರು ಭಯೋತ್ಪಾದಕರಂತೆಯೂ ಕಾಣುತ್ತಿರುವುದು ದುರಂತ. ವೈರಸ್ ಟೆರರಿಸಂ ಕುರಿತು ಗಂಟೆಗಟ್ಟಲೆ ಬಿತ್ತರಿಸುವ ಮಾಧ್ಯಮಗಳ ಬಳಿ, ನಿಜಾಮುದ್ದಿನ್ ಸಮ್ಮೇಳನದ ಹಿಂದೆ ಯಾವುದಾದರೂ ಪಿತೂರಿ ಇರುವ ಸಾಕ್ಷಿ ಪುರಾವೆಗಳಿವೆಯೇ ? ಇದ್ದರೂ ಇಲ್ಲಿ ವಿಚಾರಣೆ ನಡೆಸಿ ತೀರ್ಪು ನೀಡಬೇಕಿರುವುದು ನ್ಯಾಯಾಂಗವೋ ಮಾಧ್ಯಮದ ನಿರೂಪಕರೋ? ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ನೂರಾರು, ಸಾವಿರಾರು ಅಮಾಯಕರನ್ನು ಭಯೋತ್ಪಾದಕರಂತೆ ಬಿಂಬಿಸುವ ನೀಚತನ ಏಕೆ ? ಇದು ಮಾಧ್ಯಮ ನೀತಿ ಸಂಹಿತೆಗೆ ಬಗೆಯುವ ದ್ರೋಹ ಅಲ್ಲವೇ ?
ಇರಲಿ, ಮಾಧ್ಯಮದ ಕೆಲಸವೇ ಸಾರ್ವಜನಿಕ ವಿಷಯಗಳನ್ನು ಬಗೆದು ನೋಡುವುದು.

ಆದರೆ ಬಗೆಯುವಾಗಲೂ ಸಂಯಮ ಇರಬೇಕಲ್ಲವೇ ? ಸುದ್ದಿಯನ್ನು ಬಗೆದು ನೋಡುವುದೆಂದರೆ ವೈದ್ಯರು ನಡೆಸುವ ಹೃದಯ ಶಸ್ತ್ರ ಚಿಕಿತ್ಸೆಯಂತಿರಬೇಕೇ ಹೊರತು ಉಗ್ರನರಸಿಂಹ ಹಿರಣ್ಯ ಕಷಿಪುವಿನ ಎದೆ ಬಗೆದಂತೆ ಇರಕೂಡದು. ಇರಲಿ ಬಿಡಿ, ಕನ್ನಡ ಸುದ್ದಿವಾಹಿನಿಗಳಿಗೆ ಇದು ಅರ್ಥವಾಗಲಿಕ್ಕಿಲ್ಲ. ಆದರೆ ವೈರಸ್ ಟೆರರಿಸಂ ಎಂದು ಸುದ್ದಿ ಬಿತ್ತರಿಸುವ ಮುನ್ನ ಮಾಧ್ಯಮದ ನಿರೂಪಕರು ತಮ್ಮ ಸ್ವಂತಿಕೆ ಮತ್ತು ಘನತೆ ಉಳಿಸಿಕೊಳ್ಳುವ ರೀತಿಯಲ್ಲಿ ಕೊಂಚ ಮಟ್ಟಿಗಾದರೂ ಸಂಯಮದಿಂದಿರಬೇಕಲ್ಲವೇ. ಮೈಮೇಲೆ ದೆವ್ವ ಬಂದವರಂತೆ ಅರಚಾಡುವುದು, ಅಂಡು ಸುಟ್ಟ ಬೆಕ್ಕಿನಂತೆ ಕುಳಿತಲ್ಲೇ ಕೂರಲಾಗದೆ ಸುದ್ದಿ ಹೇಳುವುದು ನೋಡುಗರನ್ನು ಗಲಿಬಿಲಿಗೊಳಿಸುತ್ತದೆ.

ನೋಡುಗರ ದಾರಿ ತಪ್ಪಿಸುತ್ತದೆ. ಮಾಧ್ಯಮಗಳ ಮೂಲ ಉದ್ದೇಶ ಏನು ? ದೇಶದಲ್ಲಿ ಏನು ನಡೆಯುತ್ತಿದೆ, ಹೇಗೆ ನಡೆಯುತ್ತಿದೆ ಮತ್ತು ಏಕೆ ನಡೆಯುತ್ತಿದೆ ಎಂದು ವರದಿ ಮಾಡುವುದು. ಕೊರೋನಾದಂತಹ ವಿಷಯಗಳು ಬಂದಾಗ ಕೊಂಚ ಮಟ್ಟಿಗೆ ಪರಿಶೋಧ ಅಗತ್ಯ. ಅದರೆ ಈ ಪರಿಶೋಧದೊಡನೆ ಅಧ್ಯಯನಶೀಲತೆ ಮತ್ತು ವ್ಯವಧಾನವುಳ್ಳ ಸಂಶೋಧನೆಯೂ ಅಗತ್ಯ ಅಲ್ಲವೇ ? ಇದು ಇಲ್ಲವಾದರೆ ಟಿವಿ ಸ್ಟುಡಿಯೋಗಳು ದೆವ್ವದ ಕೋಣೆಗಳಾಗುತ್ತವೆ. ಮಾಧ್ಯಮದ ಸ್ಟುಡಿಯೋಗಳೇ ನ್ಯಾಯಾಲಯದ ಕಟಕಟೆಯಾದರೆ ಸುದ್ದಿ ನಿರೂಪಕರೇ ನ್ಯಾಯಾಧೀಶರಾಗಿಬಿಡುತ್ತಾರೆ.

ಈ ಅಪಾಯವನ್ನು ಸರ್ಕಾರಗಳು ಏಕೆ ಗಮನಿಸುತ್ತಿಲ್ಲ ? ಲಗಾಮಿಲ್ಲದ ಕುದುರೆಯಂತೆ ಮಾಧ್ಯಮಗಳು ಸುದ್ದಿ ಬಿತ್ತರಿಸುತ್ತಿರುವಾಗ, ಸರ್ಕಾರಗಳು ತಮ್ಮ ಪಕ್ಷ ಹಿತಾಸಕ್ತಿಯನ್ನು ಬದಿಗಿಟ್ಟು, ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವತ್ತ ಗಮನಹರಿಸಬೇಕಲ್ಲವೇ ? ಕೊರೋನಾ ವೈರಾಣುವಿನ ದಾಳಿಗೆ ತತ್ತರಿಸುತ್ತಿರುವ ಜನಸಾಮಾನ್ಯರಲ್ಲಿ ಮಾನವೀಯ ಸಂವೇದನೆ ಮತ್ತು ಸಂಯಮ ಹೆಚ್ಚಾದಷ್ಟೂ ಸಮಾಜದ ಸ್ವಾಸ್ಥ್ಯ ಸುಸ್ಥಿರವಾಗಿರಲು ಸಾಧ್ಯ. ಇದನ್ನು ಹೆಚ್ಚಿಸುವ ಹೊಣೆಗಾರಿಕೆ ನಾಗರಿಕ ಸಮಾಜದ ಮೇಲಿರುವಂತೆಯೇ, ಮಾಧ್ಯಮ ಲೋಕದ ಮೇಲೂ ಇರುತ್ತದೆ.

ಮಾರಣಾಂತಿಕ ವೈರಾಣುವಿನ ನಡುವೆ ಆತಂಕದಿಂದ ಬದುಕುತ್ತಿರುವ ಜನಸಾಮಾನ್ಯರ ಮನದಾಳದಲ್ಲಿ ದ್ವೇಷದ ಬೀಜ ಬಿತ್ತುವ ಕೆಲಸ ಮಾಧ್ಯಮಗಳದ್ದಲ್ಲ. ಮಾಧ್ಯಮಗಳಿಗೆ ಯಾವುದೇ ನಿರ್ದಿಷ್ಟ ಸೈದ್ಧಾಂತಿಕ ಭೂಮಿಕೆ ಅಗತ್ಯವಿರುವುದಿಲ್ಲ. ಆದರೆ ವಾಸ್ತವವನ್ನು ಬಿಂಬಿಸುವ ವಸ್ತುನಿಷ್ಠ ನೆಲೆಗಟ್ಟು ಅತ್ಯಗತ್ಯವಾಗಿರುತ್ತದೆ. ಪತ್ರಿಕೋದ್ಯಮದ ಮೌಲ್ಯಗಳು ಅವಶ್ಯವಾಗಿರುತ್ತವೆ. ಕನ್ನಡದ ಸುದ್ದಿವಾಹಿನಿಗಳು ತಮ್ಮ ನೈತಿಕ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವವನ್ನು ಅರಿತು ಕಾರ್ಯನಿರ್ವಹಿಸಿದರೆ ನೋಡುಗರಿಗೂ ಒಳಿತು, ಸಮಾಜಕ್ಕೂ ಒಳಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕೋವಿಡ್-19 | ‘ಅತಿ‌ ಶ್ರೀಮಂತರಿಗೆ 2% ತೆರಿಗೆ ವಿಧಿಸಿ ‘, ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ; ನೀವೂ ಪಾಲ್ಗೊಳ್ಳಿ

Published

on

ಸೂಕ್ಷ್ಮ ಸಂವೇದನೆಯುಳ್ಳ ನಾಡಿನ ಪ್ರಜ್ಞಾವಂತರೆಲ್ಲ ಸೇರಿ ಕೊರೋನಾದಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ಅಲ್ಪಮಟ್ಟದಲ್ಲಾದರೂ ಸರಿದೂಗಿಸುವ ನಿಟ್ಟಿನಲ್ಲಿ, “ಅತಿ ಶ್ರೀಮಂತರಿಗೆ ಕೇವಲ 2% ಸಂಪತ್ತಿನ ತೆರಿಗ ವಿಧಿಸಿ” ಎಂದು ಕೇಂದ್ರ ಸರ್ಕಾರಕ್ಕೆ ಅಭಿಯಾನದ ಮೂಲಕ ಮನವಿ ಮಾಡಿದ್ದಾರೆ.

ಈ ಅಭಿಯಾನಕ್ಕೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮನವಿ ಮಾಡಿರುವ ಬರಹವನ್ನು ಫೇಸ್‍ಬುಕ್ ನ ತಮ್ಮ ಗೋಡೆಗಳ ಮೇಲೆ ಪೋಸ್ಟ್ ಮಾಡಿ, ಮನವಿ ಪತ್ರದ ಕೆಳಗೆ ತಮ್ಮ ತಮ್ಮ ಹೆಸರುಗಳನ್ನು ನಮೂದಿಸಿದ್ದಾರೆ.

ಈ ಕೆಳಕಂಡಂತಿದೆ ಮನವಿ ಪತ್ರ

ಮಾನ್ಯರೇ,

ಕೊರೋನಾ ಬಿಕ್ಕಟ್ಟನ್ನು ನಿಭಾಯಿಸಿ ಪ್ರಪಂಚ ಮಟ್ಟದಲ್ಲಿ ತಲೆಯೆತ್ತಿ ನಿಲ್ಲಲು ಮತ್ತು ಜನರ ಹಿತ ಕಾಪಾಡಲು ಸಾಂವಿಧಾನಿಕ ದಾರಿಯಾದ 1% ಅತಿಶ್ರೀಮಂತರಿಗೆ ಕೇವಲ 2% ಸಂಪತ್ತಿನ ತೆರಿಗೆ: ಈ ಅಭಿಯಾನದಲ್ಲಿ 2020 ಮೇ 1 ರ ಸಂಪತ್ತಿನ ತೆರಿಗೆ ಪಿಟಿಷನ್‍ಗೆ ಸಹಿ ಮಾಡುವ ಮೂಲಕ ಪಾಲ್ಗೊಳ್ಳಿ ಎಂದು ಮನವಿ ಮಾಡುತ್ತಿದ್ದೇವೆ.

ಭಾರತವು ಕಲ್ಯಾಣರಾಜ್ಯ (Welfare State) ಕಡೆಗೆ ಚಲಿಸಬೇಕೆಂಬ ಆಶಯಗಳು ಇದ್ದಾಗ 1957ರಲ್ಲೇ ಸಂಪತ್ತಿನ ಮೇಲೆ ತೆರಿಗೆ ಪರಿಕಲ್ಪನೆ ಜಾರಿಯಲ್ಲಿತ್ತಾದರೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿರಲಿಲ್ಲ. ಆದರೆ, 1991ರ ನಂತರ ಮಾರುಕಟ್ಟೆ ಶಕ್ತಿಗಳು ಆಳ್ವಿಕೆಯನ್ನು ನಿಯಂತ್ರಿಸತೊಡಗಿದ ಪರಿಣಾಮವಾಗಿ 2015 ರಲ್ಲಿ ಕೇಂದ್ರ ಸರ್ಕಾರವು ಸಂಪತ್ತಿನ ಮೇಲಿನ ತೆರಿಗೆ ಪರಿಕಲ್ಪನೆಯನ್ನೇ ರದ್ದುಮಾಡಿಬಿಟ್ಟಿತು.

ಆದರೀಗ, ಒಂದು ಲಕ್ಷ ದಾಟಿ ಓಡುತ್ತಿರುವ ಕೊರೋನಾ ಸೋಂಕಿನ ದಾಳಿಯಿಂದ ತತ್ತರಿಸುತ್ತಿರುವ ಭಾರತವು ಚೇತರಿಸಿಕೊಳ್ಳುವಂತಾಗಲು 1% ಅತಿಶ್ರೀಮಂತರಿಗೆ ಕೇವಲ 2% ಸಂಪತ್ತಿನ ತೆರಿಗೆ ವಿಧಿಸಿಯಾದರೂ ಕೊರೋನ ತಹಬಂದಿಗೆ ತರುವುದು ಇಂದಿನ ತುರ್ತಾಗಿದೆ. ವಿಪ್ರೋ ಸಂಸ್ಥೆಯ ಅಜೀಂ ಪ್ರೇಮ್‍ಜಿಯವರು ಈಗಾಗಲೇ ತಮ್ಮ ಒಟ್ಟು ಸಂಪತ್ತಿನ ಶೇ. 2% ರಷ್ಟನ್ನು ಕೊರೋನಾ ಬಿಕ್ಕಟ್ಟಿನ ನಿವಾರಣೆಗಾಗಿ ಬಿಟ್ಟುಕೊಟ್ಟಿರುವುದನ್ನು ಗಮನಿಸಿ ಹೇಳುವುದಾದರೆ ಈ ಸಾಧ್ಯತೆ ಅಂತಹ ಕಷ್ಟದಾಯಕವಾದುದ್ದೇನೂ ಅಲ್ಲ.

ಈ ವಿಚಾರದಲ್ಲಿ ಜನರಿಂದ ಆಯ್ಕೆಯಾದ ಮತ್ತು ಶಕ್ತಿಯುತವಾದ ಯಾವುದೇ ಸರ್ಕಾರವು ಹಿಂದೆ-ಮುಂದೆ ನೋಡದೆ ತುಂಬಾ ಶೀಘ್ರವಾಗಿ ನಿರ್ಧಾರ ಕೈಗೊಳ್ಳಬೇಕಾಗಿದೆ.

ಇಂದಿನ ಕೊರೋನಾ ಬಿಕ್ಕಟ್ಟಿನ ಭಯಂಕರ ಪರಿಸ್ಥಿತಿಯನ್ನು ಎದುರಿಸಲು ಇತ್ತೀಚೆಗೆ, ನಮ್ಮ ಪ್ರಧಾನ ಮಂತ್ರಿಗಳು ಘೋಷಿಸಿರುವ 20 ಲಕ್ಷ ಕೋಟಿ ಪ್ಯಾಕೇಜ್‍ನ ಒಳಹೊಕ್ಕು ನೋಡಿದರೆ, ಇದರಲ್ಲಿ..

  1. ಸ್ವಾಯತ್ತ ಸಂಸ್ಥೆಯಾದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ತನ್ನ ಹಣಕಾಸು (ಮಾನಿಟರಿ) ನೀತಿಗೆ ಅನುಗುಣವಾಗಿ ಪ್ರಕಟಿಸಿದ ಕ್ರಮಗಳನ್ನು ಹಾಗೂ ಬಡ್ಡಿದರ ಮತ್ತು ಬ್ಯಾಂಕ್ ನಿರ್ವಹಣೆ ಕುರಿತಾಗಿ ಮಾಡಿರುವ ಘೋಷಣೆಗಳನ್ನು ಸರ್ಕಾರ ತನ್ನದೇ ಎಂಬಂತೆ ಬಿಂಬಿಸಿಕೊಂಡಿದೆ!
  2. ಈ 20 ಲಕ್ಷ ಕೋಟಿ ಪ್ಯಾಕೇಜನ್ನು ಘೋಷಿಸುವ ಮುನ್ನವೇ ಬಜೆಟ್ಟಿನಲ್ಲಿ ಈ ಹಿಂದೆಯೇ ಮಾಡಿದ್ದ ಘೋಷಣೆಗಳನ್ನೂ ಮತ್ತು ಕೇಂದ್ರ ಸರ್ಕಾರ ಕಾಲಕಾಲಕ್ಕೆ ನಿಗದಿಪಡಿಸುತ್ತಾ ಬರುವ ಹಣಕಾಸನ್ನೂ ಕ್ರೋಢೀಕರಿಸಿ ಈ 20 ಲಕ್ಷ ಕೋಟಿ ಕೋವಿಡ್ ಪ್ಯಾಕೇಜಿನ ಭಾಗವಾಗಿ ಸೇರಿಸಲಾಗಿದೆ!
  3. ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಕೃಷಿ, ಮೀನುಗಾರಿಕೆಗೆ ಸಂಬಂಧಿಸಿದ 1 ಲಕ್ಷ 40 ಸಾವಿರ ಕೋಟಿ ರೂಪಾಯಿಗಳನ್ನು ಘೋಷಿಸಿರುವುದು ಇವತ್ತಿನ ತುರ್ತಿಗೆ ಪ್ರಯೋಜನಕ್ಕೆ ಬಾರಲಾಗದ ಒಂದು ಆಶಯ ಯೋಜನೆಯಾಗಿದೆ.
  4. ಸರ್ಕಾರ ಘೋಷಿಸಿರುವ 20 ಲಕ್ಷಕೋಟಿ ಪ್ಯಾಕೇಜಿನಲ್ಲಿ ಎಲ್ಲಾ ಕೂಡಿ ಕಳೆದು ವಾಸ್ತವವಾಗಿ ಸರ್ಕಾರ ಕೋವಿಡ್‍ನ ಆರ್ಥಿಕ ಮುಗ್ಗಟ್ಟು ಎದುರಿಸಲು ವಾಸ್ತವವಾಗಿ ಘೋಷಿಸಿರುವುದು ಹೆಚ್ಚೆಂದರೆ 2 ಲಕ್ಷ ಕೋಟಿ ರೂಪಾಯಿಗಳಾಗಬಹುದಷ್ಟೆ.

ಹೀಗೆಂದೇ ಎಲ್ಲಾ ಆರ್ಥಿಕ ತಜ್ಞರೂ, ವಿವಿಧ ಬ್ಯಾಂಕಿನ ಮುಖ್ಯಸ್ಥರೂ ಹೇಳುತ್ತಿದ್ದಾರೆ. ಸರ್ಕಾರವೂ ಇದನ್ನು ನಿರಾಕರಿಸಿಲ್ಲ. ಹೀಗಿದೆ ಇದರ ಕತೆ.ವಾಸ್ತವ ಹೀಗಿರುವಾಗ, ಈ ಕೊರೋನ ದುರಂತ ಸಂದರ್ಭದಲ್ಲಿನ ಸಮಾಜೋ-ಆರ್ಥಿಕ ಬಿಕ್ಕಟ್ಟನ್ನು ನಿಜವಾಗಿ, ಯಶಸ್ವಿಯಾಗಿ ಮತ್ತು ಮಾನವೀಯವಾಗಿ ನಿರ್ವಹಿಸುವ ಸಲುವಾಗಿ ದೇಶದ 1% ಅತಿಶ್ರೀಮಂತರಿಗೆ ಸಂಪತ್ತಿನ ಮೇಲೆ 2%, ಸಂಪತ್ತಿನ ತೆರಿಗೆ ಜಾರಿಗೆ ತನ್ನಿ ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲೋಸುಗ ದೇಶದ ಪ್ರಜ್ಞಾವಂತರು 2020 ಮೇ 1 ರಂದು ಪಿಟಿಷನ್ ಹಾಕಿದ್ದಾರೆ.

ಈ 2020 ಮೇ 1 ರ ಪಿಟಿಷನ್‍ಗೆ ಕರ್ನಾಟಕ ಜಾಗೃತ ಸಮುದಾಯವೂ ಜೊತೆಗೂಡಬೇಕೆಂದು ವಿನಂತಿಸುತ್ತೇವೆ. ಇದಕ್ಕಾಗಿ, ಇಲ್ಲಿ ಲಗತ್ತಿಸಿರುವ 2020 ಮೇ 1ರ ಪಿಟಿಷನ್‍ಗೆ ಮಾಧ್ಯಮ ಪ್ರಕಟಣೆ, ಸಾಮಾಜಿಕ ಜಾಲತಾಣ ಪ್ರಚಾರ ಹಾಗೂ ಸಹಿ ಮಾಡುವ ಮೂಲಕ ಬೆಂಬಲಿಸಬೇಕೆಂದು ಮತ್ತೊಮ್ಮೆ ಮನವಿ ಮಾಡುತ್ತೇವೆ.

ಕರ್ನಾಟಕದ ಪ್ರವರ್ತಕರು

• ಎ. ಆರ್. ವಾಸವಿ (ಸಾಮಾಜಿಕ ಮಾನವಶಾಸ್ತ್ರಜ್ಞೆ, ನಿವೃತ್ತ ಪ್ರಾದ್ಯಾಪಕರು NIAS, ಬೆಂಗಳೂರು )

• ವಿ.ಕೆ.ನಟರಾಜ್ (ವಿಶ್ರಾಂತ ಪ್ರಾದ್ಯಾಪಕರು, ಮೈಸೂರು ವಿಶ್ವವಿದ್ಯಾಲಯ)

• ಟಿ.ಆರ್.ಚಂದ್ರಶೇಖರ (ನಿವೃತ್ತ ಪ್ರಾದ್ಯಾಪಕರು, ಕನ್ನಡ ವಿವಿ, ಅಭಿವೃದ್ದಿ ಆರ್ಥಿಕ ತಜ್ಞರು)

• ಪುರುಷೋತ್ತಮ ಬಿಳಿಮಲೆ (ಕನ್ನಡ ಪ್ರಾದ್ಯಾಪಕರು, ಭಾರತೀಯ ಭಾಷೆಗಳ ಅದ್ಯಯನ ಕೇಂದ್ರ, ಜೆಎನ್‍ಯು)

• ದೇವನೂರ ಮಹಾದೇವ (ಲೇಖಕರು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು)

• ಎಸ್.ಆರ್.ಹಿರೇಮಠ ( ಸಂಚಾಲಕರು, ಸಿಟಿಜನ್ಸ್ ಫಾರ್ ಡೆಮಾಕ್ರಸಿ)

• ದು. ಸರಸ್ವತಿ (ಬರಹಗಾರರು, ಸಾಮಾಜಿಕ ಕಾರ್ಯಕರ್ತರು)

• ಚುಕ್ಕಿ ನಂಜುಂಡಸ್ವಾಮಿ (ಕೆ.ಆರ್.ಆರ್.ಎಸ್, ಅಮೃತ ಭೂಮಿ)

• ರೂಪ ಹಾಸನ (ಬರಹಗಾರರು, ಪ್ರೇರಣಾ ವಿಕಾಸ ವೇದಿಕೆ, ಹಾಸನ)

• ಸಪ್ತಗಿರಿ ಐಯ್ಯಂಗಾರ್ [ People’s Association In Grassroots Action and Movement]

• ಎ.ನಾರಾಯಣ (ಸಹ ಪ್ರಾದ್ಯಾಪಕರು, ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯ)

• ಕೆ.ಸಿ.ರಘು (ಆಹಾರ ತಜ್ಞರು)

• ಪ್ರಕಾಶ ಕಮ್ಮರಡಿ (ಕೃಷಿ ಆರ್ಥಿಕ ತಜ್ಞ ಮತ್ತು ಮಾಜಿ ಅದ್ಯಕ್ಷ ಕರ್ನಾಟಕ ಕೃಷಿ ಬೆಲೆ ಆಯೋಗ, ಬೆಂಗಳೂರು)

• ಡಾ. ರಜಾಕ್ ಉಸ್ತಾದ್ (ರಾಜ್ಯ ಉಪಾದ್ಯಕ್ಷರು ಹೈದರಬಾದ್ ಕರ್ನಾಟಕ ಹೋರಾಟ ಸಮಿತಿ)

• ವಿ.ಎಲ್.ನರಸಿಂಹಮೂರ್ತಿ, ಅಧ್ಯಾಪಕ

• ರೇಣುಕಾ ಎಚ್.ಎಸ್. ಉಪನ್ಯಾಸಕ

• ರೇಣುಕಾ ಚಿತ್ರದುರ್ಗ , ಪ್ರ.ದ.ಸ.

(ನಿಮ್ಮ ಹೆಸರನ್ನು ಸೇರಿಸಿ ಇದನ್ನು ನಿಮ್ಮ ವಾಲ್‌ನಲ್ಲಿ ಹಾಕಿಕೊಳ್ಳುವುದರ ಮೂಲಕ ಹೆಚ್ಚು ಜನರಿಗೆ ತಲುಪಿಸಿ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಾನ್ಯ ಮುಖ್ಯಮಂತ್ರಿಗಳೇ “ವಿಥೌಟ್ ಲಾಠಿ ಡ್ಯೂಟಿ” ಎಂಬ ಕಾನೂನು ಜಾರಿ ಮಾಡಿ

Published

on

  • ಕಾವ್ಯ ಪ್ರಿಯ ಶಿವು

ನಸೇವೆಯೇ ಜನಾರ್ದನ ಸೇವೆ ಸರಕಾರದ ಕೆಲಸ ದೇವರ ಕೆಲಸವೆಂದು ನಮ್ಮ ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧದ ಪೂರ್ವದಿಕ್ಕಿನ ಪ್ರವೇಶದ್ವಾರದ ಗೋಡೆಯ ಮೇಲೆ ಬರೆದಿರುವ ಉಕ್ತಿ. ದೇಶ ಸಂವಿಧಾನ ಕಾನೂನು ಸುವ್ಯವಸ್ಥೆ ರಕ್ಷಣೆ ಆಡಳಿತ ಅಧಿಕಾರ ಯಾರಿಗಾಗಿ ಜನಸೇವೆಗಾಗಿ ದೇಶದ ಅಭಿವೃದ್ಧಿಗಾಗಿ ದೇಶದ ಒಕ್ಕೂಟ ವ್ಯವಸ್ಥೆಯನ್ನು ಆಡಳಿತದ ಅನುಕೂಲಕ್ಕಾಗಿ ಅಧಿಕಾರವನ್ನು ವಿಭಜಿಸಿಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮನ್ನು ಅಳುತ್ತಾವೆ.

ಆಳುವ ದೊರೆ ದೇಶದ ಮತ್ತು ರಾಜ್ಯದ ಪ್ರಜೆಗಳನ್ನು ತನ್ನ ಮನೆಯ ಸದಸ್ಯರಂತೆ ಸ್ವಂತ ಮಕ್ಕಳಂತೆ ಸೋದರ ಸೋದರಿಯರಂತೆ ಜಾತಿಭೇದವಿಲ್ಲದೆ ಲಿಂಗಬೇಧವಿಲ್ಲದೆ ವರ್ಗಭೇದವಿಲ್ಲದೆ ಭಾರತೀಯರಾದ ನಾವೆಲ್ಲರೂ ಒಂದೇ ಎಂಬ ಐಕ್ಯತೆ ಮನೋಭಾವದಿಂದ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಮೌಲ್ಯವನ್ನು ಎತ್ತಿ ಹಿಡಿದು ಮತ್ತು ಅವನ ತಪ್ಪುಗಳನ್ನು ತಿದ್ದುವ ಮೂಲಕ ವಿಚಾರ ವಿನಿಮಯಳಲ್ಲಿ ಆದ ತಪ್ಪುಗಳನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳಬೇಕು. ಕಾಪಾಡುವ ನೈತಿಕತೆ ಇಲ್ಲದವನಿಗೆ ಶಿಕ್ಷ ಕೊಡುವ ನೈತಿಕತೆಯು ಕೂಡ ಇರುವುದಿಲ್ಲ. ಇಡೀ ದೇಶ ಕರೋನ ಎಂಬ ಕಾಯಿಲೆಗೆ ತತ್ತರಿಸಿಹೋಗಿದೆ.

ಜನಸಾಮಾನ್ಯರು ಮೂಲಭೂತ ಅಗತ್ಯತೆಗಳನ್ನು ಹುಡುಕಿಕೊಂಡು ಅನಿವಾರ್ಯವಾಗಿ ರೋಡಿಗೆ ಬರುವಂತಾಗಿದೆ. ಬಂದ ನಾಗರಿಕರನ್ನು ಕರ್ತವ್ಯ ನಿರತ ಪೊಲೀಸರು ಆತ್ಮೀಯವಾಗಿ ಅವರ ಜೊತೆಗೆ ಚರ್ಚಿಸಿ ಸತ್ಯಾಸತ್ಯತೆಗಳ ಬಗ್ಗೆ ಅವಲೋಕನ ಮಾಡಿ ಸರಿಯಾದ ರೀತಿಯಲ್ಲಿ ಸರಕಾರ ಕೈಗೊಂಡಿರುವ ಕಾನೂನುಗಳ ಬಗ್ಗೆ ಅರಿವು ಮೂಡಿಸಬೇಕು. ಹಾಗೂ ಒಂದು ವೇಳೆ ಒಬ್ಬ ಪ್ರಜೆ ತಪ್ಪು ಮಾಡಿದ್ದೆ ಆದರೆ ಅವನನ್ನು ಕೂಡಲೇ ಬಂಧಿಸಿ ಕಾನೂನಿನ ರೀತಿಯಲ್ಲಿ ಕ್ರಮಕೈಗೊಂಡು ತಪ್ಪಿಗೆ ಶಿಕ್ಷೆಯನ್ನು ವಿಧಿಸಲು ನ್ಯಾಯಾಂಗಕ್ಕೆ ಒಪ್ಪಿಸಬೇಕು. ತಪ್ಪು ಮಾಡಿದ ಅಪರಾಧಿಯ ಮೇಲೆ ಯಾವುದೇ ಕಾರಣಕ್ಕೂ ಕೈ ಮಾಡುವಂತಿಲ್ಲ.

ಬಂಧಿಸಿದ 24 ಗಂಟೆ ಒಳಗಡೆ ಅವನನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕು. ಹೀಗಿರುವಾಗ ಒಬ್ಬ ಅಮಾಯಕನ ಮೇಲೆ ನಾಲ್ಕು ಐದು ಜನ ಪೊಲೀಸರು ಸೇರಿಕೊಂಡು ಜೀವ ಹೋಗುವರೆಗೆ ಹೊಡೆದು ಸಾಯಿಸುವುದು ಎಂದರೆ ಎಂಥ ಅಮಾನವೀಯ ಕೃತ್ಯ. ನಮ್ಮ ದೇಶ ಪ್ರಪಂಚದ ಇತರೆ ರಾಷ್ಟ್ರಗಳಿಗೆ ಮಾದರಿ ರಾಷ್ಟ್ರ. ಉತ್ತರ ಕೊರಿಯಾ ಜಪಾನ್ ಜರ್ಮನಿ ಫ್ರಾನ್ಸ್ ಇಟಲಿ ಇತರೆ ಸರ್ವಾಧಿಕಾರಿ ಧೋರಣೆ ರಾಷ್ಟ್ರಗಳಂತೆ ನಮ್ಮಲ್ಲಿ ಅರಸೊತ್ತಿಗೆ ಆಳ್ವಿಕೆ ಇಲ್ಲ. ಇಲ್ಲಿ ಪ್ರಜೆಗಳೇ ಪ್ರಭುಗಳು ಪ್ರಜೆಗಳಿಂದ ಪ್ರಭು. ಅಧಿಕಾರ ಎಂಬುದು ದೇಶದ ಪ್ರಜೆಗಳು ರೂಪಿಸಿದ ಶಕ್ತಿಯೆಂದು ಸಂವಿಧಾನದ ಪಿತಾಮ ವಿಶ್ವರತ್ನ ಮಹಾಜ್ಞಾನಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ವ್ಯಾಖ್ಯಾನಿಸುತ್ತಾರೆ.

ಪ್ರತಿಯೊಂದಕ್ಕೂ ಕಾನೂನು ಇದೆ ಆ ಕಾನೂನನ್ನು ಯಾರು ಕೂಡ ಕೈಗೆತ್ತಿಕೊಳ್ಳಬಾರದು. ಒಂದು ವೇಳೆ ಅಂತ ದುಸ್ಸಾಹಸಕ್ಕೆ ಕೈ ಹಾಕಿದರೆ ಆ ವ್ಯಕ್ತಿ ಯಾರೇ ಆಗಿರಲಿ ಅಂಥವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕಾನೂನಿನ ಸೂಕ್ತ ಕ್ರಮಗಳನ್ನು ಜರುಗಿಸಿ ತಪ್ಪಿಗೆ ತಕ್ಕ ಶಿಕ್ಷೆಯನ್ನು ವಿಧಿಸಬೇಕು. ಪೊಲೀಸರಲ್ಲಿ ಮಾನಸಿಕ ಸಾಮರ್ಥ್ಯದ ಶಕ್ತಿ ಅತ್ಯಂತ ಕಡಿಮೆ ಪ್ರಮಾಣದಲ್ಲಿರುತ್ತದೆ. ಅವರಿಗೆ ಮಾನವೀಯತೆ ಮನುಷ್ಯತ್ವ ಭ್ರಾತೃತ್ವ ಜೀವನದ ಮೌಲ್ಯ ಎತ್ತಿಹಿಡಿಯುವ ನೈತಿಕ ಮೌಲ್ಯದ ಪಾಠ ಮಾಡಿಸಬೇಕು. ಬಾಯಿಬಿಟ್ಟರೆ ವೇದ ಉಪನಿಷತ್ತು ಭಗವದ್ಗೀತೆಯ ಸಂಸ್ಕೃತ ವಾಕ್ಯವನ್ನು ನಾಲಿಗೆ ಮೇಲೆ ಹರಿದಾಡುತ್ತವೆ.

ಇವರೇನು ತಾಯಿ ಗರ್ಭದಿಂದ ಜನಿಸಿ ಬಂದವರಲ್ಲವೇ. ಇವರಿಗೆ ಅಕ್ಕ-ತಂಗಿ ಅಣ್ಣ-ತಮ್ಮ ಹೆಂಡತಿ ಮಕ್ಕಳು ಬಂಧು ಭಗಿನಿಯರು ಇಲ್ಲದ ಅನಾಥರೇ. ಅವಾಚ್ಯ ಶಬ್ದಗಳನ್ನು ಬಳಸಿದರೆ ಅಂಥವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ ರಿಟ್ ಅರ್ಜಿಯ ಮೂಲಕ ಪರಿಹಾರವನ್ನು ಪಡೆದುಕೊಳ್ಳುವ ಅವಕಾಶ ನಮ್ಮ ನ್ಯಾಯಾಂಗದಲ್ಲಿ ಇದೆ. ನಮ್ಮ ದೇಶ ಸುಸಂಸ್ಕೃತವಾದ ದೇಶ ಇಲ್ಲಿ ಯಹೂದಿಗಳು ತತ್ವಜ್ಞಾನಿಗಳು ಚಿಂತಕರು ಸಾಹಿತಿಗಳು ಧಾರ್ಮಿಕ ಸುಧಾರಕರು ಸಾಮಾಜಿಕ ಚಿಂತಕರು ವಚನಕಾರರು ಕೀರ್ತನಕಾರರು ದಾಸರು ಸಂತರು ಶರಣರು ಸೂಫಿಗಳು ಕಾಲಜ್ಞಾನಿಗಳು ಹುಟ್ಟಿ ತಮ್ಮ ಜ್ಞಾನದ ಬೆಳಕನ್ನು ನೀಡಿ ಹೋಗಿದ್ದಾರೆ.

ಶಾಂತಿ ಸುವ್ಯವಸ್ಥೆ ಸಹಬಾಳ್ವೆ ಸೌಹಾರ್ದತೆ ಬ್ರಾತುತ್ವ ಮನುಷ್ಯ ಪ್ರೇಮ ಸಾಮರಸ್ಯ ಐಕ್ಯತೆಯ ಮನೋಭಾವನ್ನು ಬಿತ್ತಿ ಹೋಗಿದ್ದಾರೆ. ಇಂಥ ಮಹನೀಯರ ಜೀವನದ ಆದರ್ಶಗಳು ವಾರದಲ್ಲಿ ಒಂದು ದಿನವಾದರೂ ಉತ್ತರಕುಮಾರನ ಪೌರುಷತ್ವದ ಪೊಲೀಸರಿಗೆ ಪಾಠ ಮಾಡಬೇಕಾಗಿದೆ. ಏಕೆಂದರೆ ಇವರ ದರ್ಪ ದೌರ್ಜನ್ಯ ದಬ್ಬಾಳಿಕೆ ಆಡಳಿತ ಅಧಿಕಾರ ಚಲಾಯಿಸುವುದು ಹೇನ್ನಿದ್ದರೂ ನಿರ್ಗತಿಕರ ಮೇಲೆ ಬಡವರ ಮೇಲೆ ಶೋಷಿತರ ಮೇಲೆ ಕೂಲಿಕಾರ್ಮಿಕರ ಮೇಲೆ ಅನಾಥರ ಮೇಲೆ ಬಡವನ ಸಿಟ್ಟು ದವಡೆಗೆ ಮೂಲ ಎಂಬ ಗಾದೆಯಂತೆ ಶಕ್ತಿ ಹೀನರೇ ಇಲ್ಲಿ ಬಲಿಪಶುವಾಗಿದ್ದಾರೆ.

ಒಬ್ಬ ರಾಜಕಾರಣಿಯ ಮಗ ಉದ್ಯಮಿಯ ಮಗ ಒಬ್ಬ ಎಸ್ಪಿ ಅಥವಾ ಜಿಲ್ಲಾಧಿಕಾರಿಯ ಮಗ ಸಿನಿಮಾ ನಟರ ಮಗ ಅನ್ಯಾಯ ಕೊಲೆ ಸುಲಿಗೆ ಶೋಷಣೆ ಅತ್ಯಾಚಾರ ಕೋಮು ಸಂಘರ್ಷ ಗದ್ದಲಗಳು ಉಂಟು ಮಾಡಿದರೂ ಕಂಡರೂ ಕಾಣದಂತೆ ಬಾಲ ಮುದುರಿಕೊಂಡು ಹುಲ್ಲು ಕಿತ್ತಿದ ಹಾವಿನಂತೆ ತಲೆಯಾಡಿಸುವ ನಪುಂಸಕ ಪೊಲೀಸರ ವರ್ತನೆ ಹೆಚ್ಚಾಗುತ್ತಿದೆ. ಹಾಗಂತ ಎಲ್ಲಾ ಪೊಲೀಸರು ಕೆಟ್ಟವರಲ್ಲ ಹಾಗೆಯೇ ಎಲ್ಲಾ ಪೊಲೀಸರು ಒಳ್ಳೆಯವರು ಅಲ್ಲ. ಅಲ್ಪಬುದ್ಧಿ ವಿನಾಶಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಪೊಲೀಸರೇ ಜೀವಂತ ಉದಾಹರಣೆ. ಲಾಕ್ ಡೌನ್ ಎಂಬ ನೆಪದಲ್ಲಿ ಪೋಲಿಸ್ ಗೂಂಡಾ ವರ್ತನೆ ದೇಶದ್ಯಾಂತ ಕ್ರೂರ ಪ್ರವೃತ್ತಿಯ ನರ್ತನೆ ತಾಂಡವಾಡುತ್ತಿದೆ.

ಇಂಥ ಅವಹೇಳನಕಾರಿ ದುರ್ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿವೆ ನಾಡಿನ ಮತ್ತು ದೇಶದ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ದೃಶ್ಯಗಳು ಕಂಡರೂ ಕಾಣದಂತೆ ಆಡಳಿತವರ್ಗದ ಅಧಿಕಾರಿಗಳು ಮತ್ತು ರಾಜಕಾರಣಿಗಳು ಷಂಡರಂತೆ ಸಂಬಂಧವಿಲ್ಲದಂತೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಬೀದಿಗಳಲ್ಲಿ ಗಲ್ಲಿಗಳಲ್ಲಿ ಲಾಠಿಯೇಟು ತಿಂದವರು ಗಂಜಿಗೆ ಗತಿಯಿಲ್ಲದ ನಿರ್ಗತಿಕರು.

ದಿನನಿತ್ಯದ ಜೀವನಕ್ಕೆ ಅತ್ಯಗತ್ಯ ವಸ್ತುಗಳನ್ನು ಸಿಗದೇ ಇದ್ದ ಸಂದರ್ಭದಲ್ಲಿ ಅನಿವಾರ್ಯವಾಗಿ ಅವುಗಳನ್ನು ಹುಡುಕಿಕೊಂಡು ಬಂದ ಅಮಾಯಕರ ಮೇಲೆ ಏಕಾಏಕಿ ಮಾರಣಾಂತಿಕ ಹಲ್ಲೆ ಮಾಡುವುದು ಯಾವ ಪುರುಷಾರ್ಥ. ಇದನ್ನು ನೋಡಿಕೊಂಡು ಸುಮ್ಮನೆ ಕುಳಿತಿರುವ ಮಂತ್ರಿ ಮಹನೀಯರು ಪುರುಷ ಹೀನರು ಸಂಬಂಧಪಟ್ಟ ಮಂತ್ರಿಗಳು ಕೂಡಲೇ ಗೂಂಡಾ ಪ್ರವೃತ್ತಿಯ ಪೊಲೀಸ್ ವ್ಯಕ್ತಿಯ ಮೇಲೆ ಸೂಕ್ತವಾದ ಕಾನೂನು ಕ್ರಮಗಳನ್ನು ಕೈಗೊಂಡು ಅವನನ್ನು ಶಿಕ್ಷೆಗೆ ಒಳಪಡಿಸಿ ಸೇವೆಯಿಂದ ಖಾಯಂ ಆಗಿ ವಜಾಗೊಳಿಸಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಅರ್ಹತೆಗೆ ಅವಕಾಶ ಕೊಡಿ

Published

on

  • ಸಂಗಮೇಶ ಎನ್ ಜವಾದಿ

ವ್ಯಕ್ತಿಯೊಬ್ಬ ಒಂದು ಹುದ್ದೆ ಪಡೆಯಲು ಅರ್ಹತೆ ಸಾಕಾ ಅಥವಾ ಜಾತಿ,ಧರ್ಮ,ಹಣ ಹಾಗೂ ಶಿಫಾರಸ್ಸು ಬೇಕಾ ? ಎನ್ನುವ ಮಾತುಗಳು ಎಲ್ಲಡೇ ಈಗ ಕೇಳಿ ಬರುತ್ತಿವೆ ಅಲ್ಲವೇ ? ಹಾಗಾದರೆ ಅರ್ಹತೆ ಒಂದು ಇದ್ದರೆ ಸಾಕೇ ? ಎನ್ನುವ ಕೆಲ ಮಾತುಗಳು ತಮ್ಮ ಮುಂದೆ ಹಂಚಿಕೊಳ್ಳಲು ಪ್ರಮಾಣಿಕವಾಗಿ ಪ್ರಯತ್ನ ಮಾಡಿರುವೆ.

ಯಾವುದೇ ಒಂದು ಪಕ್ಷದ ಅಥವಾ ಸಮಾಜಿಕ ಸಂಘಟನೆಗಳ ಜವಾಬ್ದಾರಿ ಪಡೆಯುವ ಕುರಿತು ಮತ್ತು ವಿವಿಧ ಸಮಾಜ ಮುಖಿ ಸೇವೆಗಳ ಜವಾಬ್ದಾರಿಗಳ ಸ್ಥಾನಕ್ಕೆ ಸಧ್ಯ ನಡೆಯುತ್ತಿರುವ ಸ್ಪರ್ಧೆಯನ್ನು ಗಮನಿಸಿದರೆ ಈ ಪ್ರಶ್ನೆಗಳು ಮತ್ತೆ ಮತ್ತೆ ನಮ್ಮ ಕಣ್ಮುಂದೆ ಬರುತ್ತಿವೆ.ಹಾಗಾದರೆ ಅರ್ಹತೆ ಇದ್ದರು ಕೂಡಾ ಪ್ರಮುಖ ಸ್ಥಾನಕ್ಕೆ ಅದೊಂದೇ ಸಾಲದೇನೋ ಎಂದು ಜಾತಿಯ ಜೊತೆಗೆ ದೊಡ್ಡವರ ಶಿಫಾರಸ್ಸು ಸಹ ಸೇರಿಸಿಕೊಳ್ಳಲು ಪ್ರಯತ್ನಿಸಬೇಕಾದ ಸಂದರ್ಭವೊಂದು ಈಗ ಉಂಟಾಗಿದೆ ಎನ್ನಬಹುದು.

ಇಂತಹ ಸಮಸ್ಯೆಗಳು ಎದುರಿಸುತ್ತಿರುವವರು ಕೆಲವರು(ಬೆರಳಣಿಕೆಯಷ್ಟು) ಮಾತ್ರ ಎಂದೇ ಹೇಳಬೇಕು, ಆದಕಾರಣ ಇಂದಿನ ದಿನಗಳಲ್ಲಿ ನಿಸ್ವಾರ್ಥ ಸೇವೆಗೆ ಸಂದಿಗ್ಧತೆಯ ಸಮಯದ ಕಾಲವಿದು ಎಂದೇ ಹೇಳಬೇಕಾಗುತ್ತದೆ.

ಹೀಗಾಗಿ ಶಿಫಾರಸ್ಸು ಇಲ್ಲದೇ ಹೋರಾಟದ ನೆಲೆಯಿಂದ ಮುಂಚೂಣಿಗೆ ಬಂದವರಿಗೆ ಸಧ್ಯದ ದಿನಮಾನಗಳಲ್ಲಿ ಗೌರವ, ಬೆಲೆ ಇಲ್ಲ ಎನ್ನುವ ಸತ್ಯ ಸಂಗತಿಯ ಮಾತುಗಳು ಈಗ ಎಲ್ಲಾ ಕಡೆ ಕೇಳಿ ಬರುತ್ತಿವೆಯಾದರೂ ರಾಜಕೀಯದಲ್ಲಿ ಇದೊಂದೇ ಸಾಲದು, ಜಾತಿಯ ಬಲದ ಜೊತೆಗೆ ಹಣವೂ ಬೇಕೇ ಬೇಕೆಂಬುವುದು ಸುಳ್ಳಲ್ಲ , ಹಾಗಾಗಿ ಈ ಎಲ್ಲಾ ಸಂಗತಿಗಳನ್ನು ಸೊಕ್ಷ್ಮವಾಗಿ ಗಮನಿಸಿದರೆ ಬಡವರಿಗೆ, ನಿಷ್ಠಾವಂತ ಕಾರ್ಯಕರ್ತರಿಗೆ ಇಂದಿನ ದಿನಗಳಲ್ಲಿ ನ್ಯಾಯ ಮತ್ತು ಅಧಿಕಾರ ಸೀಗುವುದು ಕಷ್ಟ ಅನಿಸುತ್ತದೆ.

ವ್ಯಕ್ತಿಯ ಅರ್ಹತೆಯನ್ನಷ್ಟೇ ಪರಿಗಣಿಸಿ ಹುದ್ದೆಗಳನ್ನು ನೀಡುವಂತಿದ್ದರೆ, ಇತರ ಯಾವ ಅರ್ಹತೆಗಳೂ ಮುಖ್ಯವಾಗುವುದಿಲ್ಲ. ಆದರೆ, ರಾಜಕೀಯದಲ್ಲಿ ಅರ್ಹತೆಗೆ ಇರೋದು ಕೊನೆಯ ಸ್ಥಾನ. ವ್ಯಕ್ತಿಯ ಜಾತಿ, ವರಿಷ್ಠರೊಂದಿಗಿನ ಸಂಬಂಧ, ಹಣ ಮುಂತಾದವು ಮೊದಲ ಸ್ಥಾನದಲ್ಲಿ ಬರುತ್ತವೆ. ಹೀಗಾಗಿ ಬಹುತೇಕ ಅರ್ಹರು ಉನ್ನತ ಹುದ್ದೆಗಳಿಗೆ ಅರ್ಹರಾಗುವುದೇ ಇಲ್ಲ. ಆ ಅಪಾಯ ಈಗ ಅರ್ಹತೆ ಇದ್ದವರಿಗೆ ಎದುರಾಗಿದೆ ಅಲ್ಲವೇ ? ಏನೋ ಮಾಡುವುದು ಹೇಳಿ ಬಂಧುಗಳೆ !.

ಹಾಗೆ ನೋಡಿದರೆ, ಸಮಾಜ ಮುಖಿ ಸೇವೆಗಳ ಜವಾಬ್ದಾರಿ ಹೊರಲು ಎಲ್ಲರಿಗಿಂತ ಹೆಚ್ಚು ಅರ್ಹ ನಿಸ್ವಾರ್ಥ ಸೇವೆಯ, ಮನೋಭಾವ – ಮನೋಧರ್ಮದ ವ್ಯಕ್ತಿ ಎನ್ನುವುದು ಸತ್ಯ ಹೌದು ಅಲ್ಲವೇ. ಯಾವುದೇ ಗಾಡ್ ಫಾದರ್ ನೆರವಿಲ್ಲದೇ, ಕೇವಲ ಹೋರಾಟದ ನೆಲೆಗಟ್ಟಿನಿಂದಲೇ ರಾಜಕೀಯ ಹಾಗೂ ಸಮಾಜಿಕ ಕ್ಷೇತ್ರದ ಮೊಗಸಾಲೆಯನ್ನು ಪ್ರವೇಶಿಸಿ ನಾಡಿನ ಸೇವೆಯನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿರುವ ಪ್ರತಿಭೆಗಳನ್ನು ಗುರುತಿಸದೇ ಹೋದರೆ ಹೇಗೆ ?.

ಇವೆಲ್ಲಾ ಕಾರಣಗಳನ್ನು ಕಂಡರೆ
ಇಂದಿನ ಸ್ವಾರ್ಥ ಹೀನ ಪರಿಸ್ಥಿತಿ ನೋಡಿ ನಮಗೆ ಕನಿಕರ ಉಂಟಾಗುತ್ತಿದೆ ಮತ್ತು ಅರ್ಹತೆ ಇದ್ದರು ಹೋರಾಟ ನಡೆಸುವ ಅನಿವಾರ್ಯ ಪರಿಸ್ಥಿತಿ ಸಧ್ಯ
ಜೋರಾಗಿ ಕಂಡು ಬರುತ್ತಿರುವುದೇ ಅತ್ಯಂತ ಖೇದಕರ ವಿಷಯವಾಗಿದೆ. ಹಾಗಾಗಿ ಮೌಲ್ಯಾಧಾರಿತ ಸೈದ್ಧಾಂತಿಕ ನಿಲುವಿಗೆ ಬದ್ಧರಾಗುವ ಮೂಲಕ ಸೇವೆಯಲ್ಲಿ ಗುರುತಿಸಿಕೊಂಡವರು.

ದೇಶ/ಕನ್ನಡ ಪರ ನಿಲುವನ್ನು ನಿರ್ಭಿಡೆಯಿಂದ ಪ್ರಕಟಿಸುತ್ತ ಬಂದಂಥವರು. ಇನ್ನೂ ಚಿಕ್ಕ ವಯಸ್ಸು, ದೊಡ್ಡ ಉತ್ಸಾಹ ಇರುವ ಸೇವಕರು, ವಿವಿಧ ಸಂಘಟನೆಗಳ ಸಕ್ರಿಯ ಕಾರ್ಯಕರ್ತರ ಪಡೆಯನ್ನು ಹೊಂದುವ ಮೂಲಕ ನಿಸ್ವಾರ್ಥ ಸೇವೆಯಲ್ಲಿ ಮೂಂಚುಣಿಯಲ್ಲಿ ಇದ್ದವರು. ಸರ್ವ ಜನಾಂಗದ ಜನರ ಮೆಚ್ಚುಗೆಗೆ ಪಾತ್ರವಾಗಿರುವ ಹಾಗೂ ಸಂಘಟನೆಯನ್ನು ಬಲಪಡಿಸುವ ಉತ್ಸಾಹ, ಸಾಮರ್ಥ್ಯ ಹೊಂದಿರುವ ಕೆಚ್ಚೆದೆಯ ಪ್ರತಿಭೆಗಳು. ಅವರ ಸೇವೆಯ ನಿಷ್ಠೆಗೆ ಕೊರತೆಯಿಲ್ಲ ಜೊತೆಗೆ ಯಾವುದೇ ವಿವಾದಗಳಲ್ಲಿಯೂ ಸಿಲುಕದೇ ಇರುವ ಹೋರಾಟಗಾರರು‌ ಇವರಾಗಿದ್ದಾರೆ ಎನ್ನುವುದು ಮರೆಯಬೇಡಿ.

ಆದ್ದರಿಂದ ಪ್ರಮುಖ ಜವಾಬ್ದಾರಿ ಪಡೆಯಲು ಇದಕ್ಕಿಂತ ಹೆಚ್ಚಿನ ಅರ್ಹತೆಗಳು ಬೇಕಾ? ನಾಯಕನಾಗಬಲ್ಲವರಲ್ಲಿ ಇರುವಂತಹ ಸೂಕ್ಷ್ಮಪ್ರಜ್ಞೆ ಇವರಲ್ಲಿ ಪ್ರಮುಖವಾಗಿ ಎದ್ದು ಕಾಣುತ್ತಿದೆಯಲ್ಲಾ. ಸದಾ ಚುರುಕಾಗಿ ಓಡಾಡುತ್ತ, ಜನಪರ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಾ, ಸದಾ ಸಮಾಜ ಸೇವೆಯಲ್ಲಿ ತೋಡಗಿಸಿಕೊಂಡು, ನೂರಾರು ಹೋರಾಟಗಳು ಮಾಡುವ ಮೂಲಕ ನಾಡಿನಲ್ಲಿ ಮನೆಮಾತಾಗಿರುವವರನ್ನು ಗುರುತಿಸಿ ಜವಾಬ್ದಾರಿ ನೀಡುವುದು ಶ್ರೇಷ್ಠವಲ್ಲವೇ ಹಾಗೂ ಜೊತೆ ಜೊತೆಗೆ
ನಾಡು ಮತ್ತು ನುಡಿಗೆ ಸಂಬಂಧಿಸಿದ, ಇನ್ನಿತರ ಹಲವಾರು ಪ್ರಮುಖ ವಿಷಯಗಳ ಕುರಿತು ವ್ಯಾಪಕ ಹೋರಾಟಗಳನ್ನೂ ಮಾಡಿದವರಿಗೆ ಒಂದೊಳ್ಳೆಯ ಅವಕಾಶ ನೀಡುವುದು ಅತ್ಯುತ್ತಮ ವಲ್ಲವೇ!.

ಇಂತಹವರಿಗೆ ಜವಾಬ್ದಾರಿ ಕೊಡದೇ ಹೋದರೆ ಮತ್ಯಾರಿಗೆ ಜವಾಬ್ದಾರಿ ನೀಡುತ್ತಾರೆ.ಅರ್ಹತೆಯೊಂದೇ ಹುದ್ದೆಗೆ ಮಾನದಂಡವಾಗಬೇಕೆಂಬ ಛಲ ನಮ್ಮದು.ಅಂದಗಾಲೇ ಈ ಸಮಾಜ ಅಭಿವೃದ್ಧಿ ಪಥದಲ್ಲಿ ಸಾಗಲು ಶಕ್ತವಾಗುತ್ತದೆ. ಆದಕಾರಣ ಅಧಿಕಾರಸ್ಥ ಪಕ್ಷದಲ್ಲಿ ಸಾಕಷ್ಟು ಪ್ರಮುಖ ಹುದ್ದೆಗಳಿರುತ್ತವೆ. ಆ ಪೈಕಿ ಕೆಲವನ್ನಾದರೂ ಅರ್ಹತೆ ಆಧರಿಸಿ ನೀಡುವಂತಾಗಬೇಕು. ಮುಖ್ಯವಾಗಿ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು ಹಾಗೂ ಉತ್ಸಾಹಿಗಳಿಗೆ ಅಂತಹ ಹುದ್ದೆಗಳನ್ನು ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕು.

ಅದರಿಂದ ಪಕ್ಷಕ್ಕೂ/ಸಮಾಜಕ್ಕೂ/ಸಂಘಟನೆಗೂ ಅನುಕೂಲ ವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.ಸೊಕ್ತ ಅರ್ಹ ಅಭ್ಯರ್ಥಿಗಳನ್ನು ,ಹಿರಿಯರು ಗುರುತಿಸಿ ಗೌರವಿಸುವ ಕೆಲಸ ಶೀಘ್ರವಾಗಿ ಮಾಡುವ ಮೂಲಕ ಇಂತಹ ವ್ಯಕ್ತಿಯನ್ನು ಪ್ರೋತ್ಸಾಹಿಸಿ ಬೆಳೆಸಿದರೆ, ಅದರಿಂದ ಸಮಾಜ ಮತ್ತು ನಾಡಿಗೆ ಹೆಚ್ಚು ಅನುಕೂಲವಾಗುತ್ತದೆ. ಆ ವಿವೇಚನೆಯನ್ನು ಸಂಬಂಧ ಪಟ್ಟ ಹಿರಿಯರು ತೋರುವ ಮೂಲಕ ಯುವ ಪ್ರತಿಭೆಗಳಿಗೆ ಅವಕಾಶ ನೀಡಬೇಕು.

ಪ್ರಮುಖ ಜವಾಬ್ದಾರಿಗಳನ್ನು ಉತ್ತಮರಿಗೆ ನೀಡಿದರೆ, ಸ್ಥಗಿತಗೊಂಡಂತಿರುವ ಇತರ ಚಟುವಟಿಕೆಗಳು ಮತ್ತೆ ಚುರುಕಾಗಲು ಅವಕಾಶವಾಗುತ್ತದೆ.ಹೀಗಾಗಿ ಅರ್ಹತೆ ಪರಿಗಣಿಸಿ ಪ್ರಮುಖ ಸ್ಥಾನ ನೀಡುವುದು ಹಿರಿಯರಿಗೆ ಬಿಟ್ಟಿರುವ ವಿಚಾರ.

ಏಕೆಂದರೆ, ಅರ್ಹ ವ್ಯಕ್ತಿ ಯಾವ ಪಕ್ಷದಲ್ಲಿದ್ದರೂ ಉತ್ತಮ ಕೆಲಸವನ್ನೇ ಮಾಡುತ್ತಾರೆ. ಅಭಿವೃದ್ಧಿ ಮೂಲಕ ಹೊಸ ಸಂಚಲನೆಯೊಂದು ರಾಜ್ಯದಲ್ಲಿ ಸೃಷ್ಟಿಸುತ್ತಾರೆ ಎಂಬ ಬಲವಾದ ಭಾವನೆ ನಮ್ಮದು. ಆ ದಿಸೆಯಲ್ಲಿ ಸಂಬಂಧ ಪಟ್ಟ ಮಹನೀಯರು ಅನ್ಯತಾ ಭಾವಿಸದೇ, ಮುಕ್ತ ಮನಸ್ಸಿನಿಂದ ಯೋಚನೆ ಮಾಡಲಿ,ಮಾಡುವ ಮೂಲಕ ಪ್ರತಿಭೆಗಳಿಗೆ ಅವಕಾಶ ಕೊಡಲಿ ಎನ್ನುವ ಆಶಾವಾದ ನಮ್ಮದಾಗಿದೆ.

ಅರ್ಹತೆ ಎಂದರೆ (ನನ್ನ ದೃಷ್ಟಿಯಲ್ಲಿ)

ನಿಸ್ವಾರ್ಥ ಸೇವೆಯ ಅರ್ಹತೆಗಳ ಜೊತೆಗೆ ಅಭ್ಯರ್ಥಿಗಳು ಕೆಲವು ವಿಶೇಷ ಅರ್ಹತೆಗಳನ್ನು ಪಡೆದಿರಬೇಕು. ಮೊದಲನೆಯದು ವಿದ್ಯಾ ಅರ್ಹತೆ. ಈ ಅರ್ಹತೆ ಅಭ್ಯರ್ಥಿಯ ಶಿಕ್ಷಣಕ್ಕೆ ಸಂಬಂಧಿಸಿದುದು. ಪ್ರತಿಯೊಬ್ಬ ಅಭ್ಯರ್ಥಿಯೂ ನಿಯಮಿತ ವಿದ್ಯಾ ವ್ಯಾಸಂಗ ಮಾಡಿರಬೇಕು.

ಎರಡನೆಯದು ವೈಯಕ್ತಿಕ ಗುಣಗಳು, ಪ್ರಾಮಾಣಿಕತೆ, ನಿಷ್ಕಾಪಟ್ಯ, ನೈಪುಣ್ಯ, ಧೈರ್ಯ ಮತ್ತು ಸಂಘಟನಾ ಸಾಮರ್ಥ್ಯ ಹೊಂದುವುದು ಅತಿ ಅವಶ್ಯ. ಇವುಗಳನ್ನು ಕಂಡು ಹಿಡಿಯುವುದಕ್ಕೋಸ್ಕರ ಸಾಮೂಹಿಕ ಪರೀಕ್ಷೆ, ಮನಶಾಸ್ತ್ರೀಯ ಸಂಬಂಧ ಪರೀಕ್ಷೆ ಮುಂತಾದುವುಗಳನ್ನು ನಡೆಸುವುದು ಅವಶ್ಯಕತೆ ವಿದೆ.

ಮೂರನೆಯದು ಅನುಭವ ಮತ್ತು ಪ್ರಾಮಾಣಿಕತೆ ಇದರ ಪ್ರಕಾರ ಅಭ್ಯರ್ಥಿಗಳು ಕೆಲವು ಸಂದರ್ಭಗಳಲ್ಲಿ ಆ ಕೆಲಸದಲ್ಲಿ ಸಾಕಷ್ಟು ಪುರ್ವಾನುಭವ ಹೊಂದಿರಬೇಕು. ಇವುಗಳ ಜೊತೆಗೆ ವಿಶೇಷ ಸಮಾಜಿಕ ಜ್ಞಾನವೂ ಒಂದು ಹೆಚ್ಚಿನ ಅರ್ಹತೆಯಾಗಿ ಪರಿಗಣಿಸಲ್ಪಟ್ಟಿದೆ ಎನ್ನುವುದು ಅಲ್ಲಗಳೆಯುವಂತಿಲ್ಲ.

ಜೊತೆಗೆ ಇಂದು ಆಡಳಿತಾಂಗದಲ್ಲಿ ಹೆಚ್ಚು ಹೆಚ್ಚಾಗಿ ವೈಶಿಷ್ಟ್ಯ ನಿಸ್ವಾರ್ಥ ಸೇವಾ ಅನುಭವ ಹೊಂದುವುದು ಸೇರಿ ಆಡಳಿತ ಹಾಗೂ ಸಂಘಟನೆಯನ್ನು ಯಶಸ್ವಿ ದಿಕ್ಕಿನಲ್ಲಿ ಮುನ್ನಡೆಸಲು ವಿಶೇಷ ಜ್ಞಾನವನ್ನು ಪಡೆದಿರಲೇಬೇಕಾಗುತ್ತದೆ. ಆಡಳಿತದ ಯಾವುದೇ ಒಂದು ಹುದ್ದೆಗೆ ಹಲವಾರು ಅಭ್ಯರ್ಥಿಗಳು ಇರುತ್ತಾರೆ. ಅವರಲ್ಲಿ ಹೆಚ್ಚಿನ ಅರ್ಹತೆಗಳು ಆ ಹುದ್ದೆಯ ಆವಶ್ಯಕತೆಗಳಿಗೆ ಅನುಗುಣವಾಗಿ ಯಾರಿಗೆ ಇವೆಯೋ ಅವರು ನೇಮಕಗೊಳ್ಳಬೇಕಾದುದು ಸರಿಯಾದ ಕ್ರಮ.

ಇದರಿಂದ ಆಡಳಿತ ವ್ಯವಸ್ಥೆ ಸುಸೂತ್ರವಾಗಿ ನಡೆಯುತ್ತದೆ. ಸರ್ಕಾರದಲ್ಲಿ ಅಥವಾ ಸಂಘ – ಸಂಸ್ಥೆಯಲ್ಲಿ ಯಾವುದೇ ಒಂದು ಸ್ಥಾನ ಖಾಲಿಯಾದಾಗ ಅದಕ್ಕೆ ಕೆಲವು ಅರ್ಹತೆಗಳನ್ನು ಗೊತ್ತು ಮಾಡಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಪಡೆಯುವ ಮೂಲಕ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡು ಬರುವ ವ್ಯವಸ್ಥೆ ಆಗಬೇಕಾಗಿದೆ ಎನ್ನುವುದು ಸುಳ್ಳಲ್ಲ ಹಾಗಾದಾಗ ಮಾತ್ರ ಆ ಹುದ್ದೆಗೆ ಗೌರವ ಸೀಗುತ್ತದೆ.

ಕೊನೆಯ ಮಾತು

ಪ್ರಮಾಣಿಕವಾಗಿ – ನಿಷ್ಠಾವಂತರಾಗಿ ದುಡಿಯುವ ಯೋಗ್ಯ ವ್ಯಕ್ತಿಗಳನ್ನು ಗುರುತಿಸಿ ಜವಾಬ್ದಾರಿ ನೀಡುವುದು ಇಂದಿನ ದಿನಗಳಲ್ಲಿ ಅವಶ್ಯಕತೆ ಇದೆ. ಇದರಿಂದ ಸಮಾಜ ಮತ್ತು ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಸಹಕಾರಿ ಆಗುತ್ತದೆ. ಇದಲ್ಲದೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆ ಸರ್ವರಲ್ಲಿಯೊ ಮೂಡುವ ಮೂಲಕ ಭವ್ಯ ಭಾರತದ ಉನ್ನತಿಗೆ ಸಾಕ್ಷಿಯಾಗಲಿದೆ.

(-ಸಂಗಮೇಶ ಎನ್ ಜವಾದಿ
ಕೊಡಂಬಲ.ಬೀದರ ಜಿಲ್ಲೆ.
9663809340)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending