Connect with us

ಭಾವ ಭೈರಾಗಿ

ಕವಿತೆ | ಕುಡುಕ ಸೂಳೆಮಗನೊಬ್ಬನ ಭಕ್ತಿಗೀತೆ

Published

on

 

ನ್ನ ಬೇವಾರ್ಸಿ ಮಾತು ಬಿಡಿ,
ಸೂಫಿ ಸಂತರನ್ನು ಕೇಳಿ
ನಾಗಾ ಸಾಧುಗಳನೂ
ಡಿವಿಜಿಯಂಥ ಡಿವಿಜಿಯೆ ಮಿಕ್ಸ್ ಮಾಡಿದ
ಉಮರನ ಒಸಗೆಯ ಕೇಳಿ
ತರದೂದಿದ್ದರೆ ಆಮೇಲೆ ತಕರಾರ ಥಕಥೈ ಹೇಳಿ.

ಆ ಹಕ್ಕಿಯ ಆ ಕಾನಿನ ಆ ಬಾನಿನ ಆ ಹಾಡಿನ
ಆ ಜಾಡಿನ ಆ ನಾಡಿನ ಅಮಲೇರಿರಲು
ಕಡಿಯುವ ಈ ಬಾಳ ಕುಡಿಯುವೆ, ಬಿಸುಡವೆನದ ಕುಡಿದು ತೊಟ್ಟು ಕೊನೆಯ ತೊಟ್ಟೂ
ಕದ್ದೋಡುವೆನಿಲ್ಲಿಂದ ಈ ದರಿದ್ರ ಮರ್ತ್ಯದಿಂದ
ಆ ಸುಖ ಸುಂದರ ಅಮರ್ತ್ಯಕೆ
ದಿನದಿನದೀ ಗಾಣ-ನರಕದಿಂದ ಅನುದಿನದ ನಾಕಕೆ.

ಹೇಳಿ ಏನಿದೆ ಈ ತಾವಿನಲ್ಲಿ
ನೋವು ಸಾವು ಸಂಕಟದೊಂದೆ ಏಕತಾರಿ ಗೊಗ್ಗರು ಭೂಮಿಗೀತವಿಲ್ಲಿ
ಕ್ಷಣವೊಂದರ ಇಂದಿನೀ ಸೌಂದರ್ಯ ಸೊರಗಿ ಕರಗಿ ಪ್ರೇತವಾಗಿ
ನಾಳೆಗೇನು ಉಳಿಯಿತಿಲ್ಲಿ
ನನಗೇನಿದೆ ಹೇಳಿ ಕೆಲಸವಿಲ್ಲಿ.

ಎಲ್ಲಿ ಎಲ್ಲಿ ಹಳೆ ಹುಳಿ ಹೆಂಡವೆಲ್ಲಿ
ಅದನು ಕುಡಿಯಲಾರೆನೇ
ಕುಡಿದು ಮತ್ತನಾಗಿ ಕತ್ತಲಲ್ಲಿ ಕಾಣದಿರೆನೆ ಆ ಅಗೋಚರ ದಿವ್ಯವ
ಮದ್ಯ ಕುಡಿದ ಮಧ್ಯ ರಾತ್ರಿ ನಿದ್ದೆಯಲ್ಲಿ ಹಾಗೇ ಸುಮ್ಮನೆ ಬರಲಿ ಸೊಗದ ಕನಸಿನಂತೆ ಸುಖ ಮರಣ
ಎಂದು ಹಾರೈಸಿದ್ದದೆಷ್ಟು ದಿನ.

ಆದರೂ ನಾನು ಸತ್ತರೂ ಕತ್ತರಿಸುವ ಬಾಳು ಉಳಿದೆ ಉಳಿವುದಲ್ಲ ;
ನಮ್ಮನಣಕಿಸುವುದಲ್ಲ
ಅಮಲೆ ನನಗೆ ಪಾಠ ಕಲಿಸಿತಲ್ಲ
ಬೇಡ ಈ ಸಾವ ಪಯಣ
ಜೀವಿಸುವುದೆ ಸಾವ ಸೋಲಿಸುವ ಅಮಲು
ಇದೆ ನನ್ನ ಹೊಸ ಠರಾವು
ಎಂಬ ಕೀಟ್ಸನನ್ನೂ ಕೇಳಿರಲ್ಲ.

ಮದ್ಯ ಮಾರ್ಗ ಹಿಡಿಯಿರಲ್ಲ
ಅವಿವೇಕದತಿರೇಕದ ಅಮಲುಗಳ್ಯಾವುವೂ ಬಾಟ್ಲಿಗಳಂತಿರುವುದಿಲ್ಲ
ಬಾಟ್ಲಿ ಒಡೆದು, ಪಕ್ಕಕೆ ಮದ್ಯದಂಗಡಿಯ ನೂಕಿ
ಕೊಲೆ ಸುಲಿಗೆ ಮಾನಭಂಗ ಭ್ರಷ್ಟಾಚಾರ ನೀಗಿದೆವೆಂಬ
ನಶೆಯಿಂದ ಬೇಗ ಹೊರಬನ್ನಿರಲ್ಲ.

-ಪ್ರೊ. ಎಚ್.ಪಟ್ಟಾಭಿರಾಮ ಸೋಮಯಾಜಿ
ಮಂಗಳೂರು

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಭಾವ ಭೈರಾಗಿ

ಕವಿತೆ | ಮನದಲೆ ಬೆಂದು ಬಡವಾದೆ ಏಕೆ?

Published

on

 

ನುಂಗಿ ನೀರು ಕುಡಿವ
ರಾಜಕಾರಣಿಗಳ ಕಂಡು ಕಲಿಯಬಾರದಿತ್ತೇ?
ನುಂಗದೆ ನೀರು ಕುಡಿದು ಏಕೆ ದೂರಹೋದೆ
ಬಡವರ ಬಂಧುವಾದೆ ನೀನೇಕೆ ಬೆಂದುಹೋದೆ

ಸದ್ಗುಣ ಸಂಪನ್ನನಾಗಿ
ಸಂಪತ್ತು ಗಳಿಸಿ
ಸದ್ದು ಮಾಡದೆ ಎದ್ದು ಹೋದೆ ಏಕೆ?
ಹಗರಣವ ಹಂಚಿಕೊಳ್ಳದೆ
ಮನದಲೆ ಬೆಂದು ಬಡವಾದೆ ಏಕೆ?

ಹಲವರ ಕಣ್ಣೀರೊರೆಸಿದ ನೀನೇ
ಎಲ್ಲರ ಕಣ್ಣೀರ ಕೋಡಿ ಹರಿಸಿದೆ ಏಕೆ?
ಹವಾಲ, ಐಟಿಗಳ ಗಂಧವರಿಯದ ನನಗೆ
ನೀನು ಹೋದ ಬಗೆಯ ಕಂಡು
ನನಗೇಕೋ ಕೋಪ ಬರುತಿದೆ, ಸಿದ್ದಾರ್ಥ

ಬಿ ಆರ್ ಮಹಾಲಕ್ಷ್ಮಿ ರಾಜಣ್ಣ
ಮೇಲು ಹುಲುವತ್ತಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಭಾವ ಭೈರಾಗಿ

ಕವಿತೆ | ಹಳ್ಳಿಯ ಚೆಲುವೆಗೆ

Published

on

ಚಿತ್ರ ಕಲೆ : ಶ್ರೀಕಾಂತ್ ಧೋತ್ರೆ

 

ವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ |
ಅದಕೆ ನಮ್ಮಿಬ್ಬರಿಗೆ ನಾಳೆಯೇ ಮದುವೆ ||
ಬೆಳ್ಳಬೆಳ್ಳಗೆ ತೆಳ್ಳಗಿಹೆ ನೀನು
ಬೇಟೆಗಾರನ ಬಿಲ್ಲಿನಂತಿರುವೆ ನೀನು
ಒತ್ತಾಗಿ ಕಪ್ಪಾಗಿ ಬೆಳೆದಿರುವ ಹುಬ್ಬು
ಪಾರಿವಾಳದ ಕಣ್ಗೆ ನೆರಳನಿತ್ತಿಹುದು
ನವಿಲೂರಿನೊಳಗೆಲ್ಲ……..

ಉಟ್ಟ ರೇಸಿಮೆಗಿಂತ ನಿನ್ನ ಮೈ ನುಣುಪು
ಬೆಟ್ಟದರಗಿಳಿಗಿಂತ ನಿನ್ನ ನುಡಿ ಇಂಪು
ತುಂಬು ಹರೆಯದ ಹುಡುಗಿ ನೀನೊಲುಮೆಗೀಡು
ನಂಬಿ ನನ್ನನು ವರಿಸಿ ಸಂತಸದಿ ಬಾಳು
ನವಿಲೂರಿನೊಳಗೆಲ್ಲ……..

ಹಗಲೆಲ್ಲ ದುಡಿಯುವೆನು ಕೆಸರ ಗದ್ದೆಯಲಿ
ಶ್ರಮವೆಲ್ಲ ಹೊನ್ನಹುದು ವರ್ಷದಂತ್ಯದಲಿ
ನಿನ್ನ ಹೊಟ್ಟೆಯ ತುಂಬ ಅನ್ನ ನೊರೆಹಾಲು
ನನ್ನ ನುಡಿಯನು ಕೇಳು ; ನನ್ನೊಡನೆ ಬಾಳು
ನವಿಲೂರಿನೊಳಗೆಲ್ಲ……..

ನಿನ್ನೊಲುಮೆ ತಾರೆಗಳ ಹರಡಿರುವ ಬಾನು
ಮುಂಬೆಳಗು ತೆರೆದಿಟ್ಟ ತಾವರೆಯ ಸರಸಿ
ಪ್ರೀತಿಯೊಂದನೆ ನಿನ್ನ ಕೇಳುವುದು ನಾನು
ಮುಂದೆ ಹೋಗೆನ್ನದಿರು ನನ್ನ ಮನದರಸಿ
ನವಿಲೂರಿನೊಳಗೆಲ್ಲ………

(ಪ್ರೇಮ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ‘ಮೈಸೂರು ಮಲ್ಲಿಗೆ‘ ಕವನ ಸಂಕಲನದಿಂದ ಈ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.)

-ಕೆ.ಎಸ್‌.ನರಸಿಂಹಸ್ವಾಮಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಭಾವ ಭೈರಾಗಿ

ಕವಿತೆ | ಬ್ರಾಹ್ಮನಾಯಿ-ಶೂದ್ರಕೋಳಿ

Published

on

 


ಶೂದ್ರ ಕೋಳಿ ಮೇಯುತ್ತಿತ್ತು
ಗಲ್ಲಿಯಲ್ಲಿ;
ಬ್ರಾಹ್ಮ ನಾಯಿ ಹೊಂಚುತಿತ್ತು
– ಅಲ್ಲಿ ಇಲ್ಲಿ,
ಶೂದ್ರಕೋಳಿಗೇನು ಗೊತ್ತು,
ಪಾಪ, ನಾಯಿ ಬ್ರಾಹ್ಮ ಎಂದು?
ತಮ್ಮ ಮನೆಯ ನಾಯಿಯಂತೆ
ಎಂದು ಸುಮ್ಮ ಮೇಯುತ್ತಿತ್ತು.


ಬ್ರಾಹ್ಮನಾಯಿ ಅಪ್ಪಟ ಕಂತ್ರಿ.
ಆದರೇನು? ಕಪಟ ಕುತಂತ್ರಿ!
ಕೊರಳಿನಲ್ಲಿ ಜನ್ನ ಪಟ್ಟೆ;
ಒಡಲಲ್ಲಿ ಖಾಲಿ ಹೊಟ್ಟೆ!
ಮೆಲ್ಲ ಮೆಲ್ಲ ಸುಳಿದು ಸುತ್ತಿ
ಹತ್ತೆ ಬಂತು;
ಸಾಧು ಎಂದು ಶೂದ್ರ ಕೋಳಿ
ನೋಡು ನಿಂತು,
ಹಾರಿ ನೆಗೆದು ಹಿಡಿದುಕೊಂಡು
ಓಡಿ ಹೋಯ್ತು!
ಪಾಲ್ವಡಿನೊಂದ ಗೋಡೆ
ರಕ್ಷೆಯಾಯ್ತು:
ಪಾರ್ವನಾಯ್ದೆ ಶೂದ್ರ ಕೋಳಿ
ಭಕ್ಷ್ಯವಾಯ್ತು!


ಮರಿಯತನದಿ ಮೊದಲುಗೊಂಡು
ಸಾಕಿ ಸಲಹು ಒಲಿದ ತನ್ನ
ಪುಟ್ಟ ಮುದ್ದು ಹುಂಜಗಾಗಿ,
ಕರುಣ ತುಂಬಿದೆದೆಯ ದೇವಿ,
ಗೋಳೋ ಎಂದು ಹುಡುಗಿಯೊಂದು
ಅಳುತಲಿತ್ತು.
‘ಶುದ್ಧ ಶೂದ್ರ ಹುಡುಗಿ’ ಎಂದು
ಹಾರನೊಡನೆ ಹಾರಿ ನಿಂದು,
ಕೇಲಿಗಾಗಿ ಗೇಲಿ ಮಾಡಿ
ಬೀದಿ ಬಾಗಿಲಲ್ಲಿ ಕೂಡಿ
ಬ್ರಾಹ್ಮವೃಂದ ಚಂದ ನೋಡಿ –
ನಗುತಲಿತ್ತು!

ಕುವೆಂಪು

(‘ಕುವೆಂಪು ಕಾವ್ಯಯಾನ’ ಪುಸ್ತಕದಿಂದ ಈ ಕವಿತೆಯನ್ನು ಆಯ್ದುಕೊಳ್ಳಲಾಗಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending