Connect with us

ಭಾವ ಭೈರಾಗಿ

ಕವಿತೆ | ಭಾರತ ನಾಡಿನ ಜ್ಞಾನದ ರತುನ

Published

on

 

ಭಾರತ ನಾಡಿನ ಜ್ಞಾನದ ರತುನ
ಕೇಳೋ ಕತೆಯನ್ನ
ನಾ ಹೇಳೋ ಕತೆಯನ್ನ
ನಾಡನು ಕಟ್ಟಿದ ನಾಗ ಕುಲದ
ಭೀಮನ ಕತೆಯನ್ನ
ಜೈ ಭೀಮನ ಕತೆಯನ್ನ

ಮಹಾರಾಷ್ಟ್ರದ ರಾಜ್ಯದಲ್ಲಿ
ಮಹೌ ಎಂಬ ಊರಿನಲ್ಲಿ
ಭೀಮನು ಜನಿಸಿದ್ದ ಜ್ಞಾನದ ರಾಜ್ಯದಿ ಮೆರೆದಿದ್ದ
ಚೌಡರ್ ಕೆರೆಯ ನೀರಿನಲ್ಲಿ
ಕಾಳಾರಾಂ ದೇಗುಲದಲ್ಲಿ
ಕೆಚ್ಚೆದೆ ತೋರಿದ್ದ ಗೆಲುವಿನ ನಗೆಯನು ಬೀರಿದ್ದ
ಹಕ್ಕುಗಳೇ ತಾನಾಗಿ
ನಮ್ಮಯ ದಿಕ್ಕಾಗಿ
ಗಾಂಧೀಜಿಯ ಗರಡಿಯಲಿ
ಒಪ್ಪಂದಕೆ ಸಹಿ ಹಾಕಿ
ಶೋಷಿತ ಸಮತೆಗೆ ನಾಡಿನ ಮಮತೆಗೆ
ಭೀಮನು ಹೆಸರಾದ
ಜೈ ಭೀಮನು ಹೆಸರಾದ

ಮೂವತ್ತೇಳರ ಚುನಾವಣೆಯಲಿ ಮಹಾರಾಷ್ಟ್ರದ ಪ್ರಾಂತ್ಯದಲ್ಲಿ
ಭೀಮನು ಗೆದ್ದಿದ್ದ ಕಾರ್ಮಿಕ ಮಂತ್ರಿಯು ತಾನಾದ
ರಿಸರ್ವ್ ಬ್ಯಾಂಕಿನ ಸ್ಥಾಪನೆಯಲ್ಲಿ
ಭಾಕ್ರಾ ನಂಗಲ್ ಡ್ಯಾಮಿನಲ್ಲಿ
ಜ್ಞಾನವ ಮೆರೆದಿದ್ದ ತನ್ನಯ ಕೌಶಲ ತೋರಿದ್ದ
ಕಾರ್ಮಿಕರ ಹಕ್ಕಾಗಿ
ಬಡವರ ದಿಕ್ಕಾಗಿ
ಮಹಿಳೆಯರ ಉಸಿರಾಗಿ
ರೈತರಿಗೆ ನೆರವಾಗಿ
ಸಮಗ್ರ ಭಾರತ ಕಟ್ಟಲು ಭೀಮ
ಇಟ್ಟನು ಹೆಜ್ಜೆಯನು
ದಿಟ್ಟ ಕೆಚ್ಚೆದೆ ಹೆಜ್ಜೆಯನು

ಸಂವಿಧಾನದ ಚುನಾವಣೆಯಲಿ ಬಂಗಾಳದ ಪ್ರಾಂತ್ಯದಲ್ಲಿ
ಭೀಮನು ಜಯಿಸಿದನು
ಜೈ ಭೀಮನು ಜಯಿಸಿದನು
ಸ್ವಾತಂತ್ರ್ಯದ ಹರುಷದಲ್ಲಿ ದೇಶದ ಖುಷಿಯ ನಿಮಿಷದಲ್ಲಿ
ಮಂತ್ರಿಯು ತಾನಾದ
ಕಾನೂನು ಇಲಾಖೆ ಜೊತೆಯಾದ
ಮೂಲಭೂತ ಹಕ್ಕಾದ ಕರ್ತವ್ಯ ಜೊತೆ ಬೆಸೆದ
ನಿರ್ದೇಶಕ ತತ್ವಗಳ ಪೀಠಿಕೆ ತಾ ಬರೆದ
ಹೆಮ್ಮೆಯ ಪಡೆದ ಸಂವಿಧಾನದ
ಶಿಲ್ಪಿಯು ತಾನಾದ
ಸಂವಿಧಾನವ ತಾ ಬರೆದ

ಹಿಂದೂ ಸಂಹಿತೆ ಮಸೂದೆಯಲ್ಲಿ ಮಹಿಳೆಯರ ಹಕ್ಕುಗಳಲ್ಲಿ
ಭೀಮನು ಮುಳುಗಿದನು
ಜೈ ಭೀಮನು ಮುಳುಗಿದನು
ಬುದ್ಧನ ಧ್ಯಾನದ ಮೈತ್ರಿಯಲ್ಲಿ
ಬುದ್ಧನ ಧಮ್ಮದ ದಿಕ್ಕಿನಲ್ಲಿ
ಭೀಮನು ಚಲಿಸಿದನು ಜೈ ಭೀಮನು ಚಲಿಸಿದನು
ಹತ್ತು ಲಕ್ಷ ಜೊತೆಯಲ್ಲಿ
ಇತಿಹಾಸದ ಕತೆ ಅಲ್ಲಿ
ಬುದ್ಧ ಘೋಷ ಮೊಳಗಿರಲು
ಪ್ರಕೃತಿಯೇ ಮಿನುಗಿರಲು
ಬುದ್ಧನ ಜ್ಞಾನದ ಸತ್ಯದ ಮಾರ್ಗದಿ
ಭೀಮನು ತಾ ನಡೆದ
ಬುದ್ಧನ ಹಿಂದೆಯೇ ತಾ ನಡೆದ.

ರಘೋತ್ತಮ ಹೊ.ಬ

ಈ ಗೀತೆಯ ಗಾಯನದ ವಿಡಿಯೋ ನೋಡಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ

ಕವಿತೆ | ನೀ ಎಂಥ ಮಕ್ಳಿಗೆ ಜನ್ಮ ಕೊಟ್ಟೆ ನನ್ನವ್ವ..?

Published

on

  • ಮಹೇಶ ಶಿಂಗೆ

ಯ್ಯೋ ನನ್ನವ್ವ
ಎಂಥ ಗತಿ ಬಂತು ನಿನಗವ್ವ
ರಸ್ತೆ ಮಧ್ಯೆ ನಿನ ಬಟ್ಟೆ ಬಿಚತಾರವ್ವ.
ಅತ್ಯಾಚಾರಗೈದು,
ಮತ್ತೆ
ಭಾರತ ಮಾತಾ ಕೀ ಜೈ
ಅನ್ತಾರವ್ವ.

ದೇಶಭಕ್ತಿ ಬರೀ ತೊರಿಕೆ
ಆಗೊಯಿತವ್ವ
ಇಲ್ಲಿ ಅತ್ಯಾಚಾರ ಮಾಡಿದ್ರೆ
ನಡೆಯತ್ತವ್ವ
ಆದ್ರೆ
ಭಾರತ ಮಾತಾ ಕಿ ಜೈ
ಅಂತ ಹೇಳಲೇ ಬೇಕವ್ವ
ಹೇಳದಿದ್ರೇ ನನ್ನವ್ವ,
ದೇಶದ್ರೋಹಿ ಪಟ್ಟ
ಕಟ್ಟ ಬಿಡ್ತಾರವ್ವ.

ಇದೆಂತ ಮಕ್ಳನ
ಹೆತ್ತಿದೆ?
ನೀ ಹೇಳವ್ವ
ಅತ್ಯಾಚಾರಿಗೂ ಧರ್ಮದ
ಲೇಬಲ್ ಹಚ್ಚಿ,
ಬ್ಯಾಟರಿ ಹಿಡ್ದು ಹುಡುತಿದ್ದಾರವ್ವ.

ಅವಳು..
ಇವಳು…ಎನ್ನದೇ
ಮುದುಕಿ..
ಸಣ್ಮಕಳು ಅಂತ ಬಿಡದೇ,
ಜೊಲ್ಲು ನಾಯಿಯ ಚಟದ
ಕಾಮುಕರು
ರಸ್ತೆ ಮೇಲೆ
ನಿನ್ನ ಬೆತ್ತಲೆ ದೇಹ
ತಿಂದು ಬಿಸಾಕಿ ಬಿಡ್ತಾರವ್ವ..
ಅವ್ವ ನನ್ನವ್ವ
ನೀ ಹೆಂಥಾ ಮಕ್ಳಿಗೆ
ಜನ್ಮ ಕೊಟ್ಟೆ
ನೀ ಹೇಳವ್ವ?

ಅಣ್ಣ ಬಿಡಣ್ಣ
ದಮ್ಮಯ್ಯ ಬಿಡಣ್ಣ
ನಿನ್ನ ತಂಗಿ
ಅಂತ ತಿಳಿದಾದರೂ
ಸರಿ
ಬಿಡಣ್ಣ …
ನಿನ ಕೈ ಮುಗಿತಿನಿ
ನಿನ ಕಾಲಿಗೂ ಬಿಳ್ತಿನಿ
ನನ್ನ ಹಾಳು
ಮಾಡಬೇಡಣ್ಣ..
ಅಣ್ಣ..ಅಣ್ಣ…
ಅಂತ ಕಿರುಚಿದರೂ
ಗೋಗರೆದರೂ
ಮರುಗಿದರೂ
ಕರಗರೂ
ಆ ನೀಚ ನಿನ ಮಕ್ಳು
ಕಾಮುಕರು
ಅವ್ವ ನನ್ನವ್ವ
ನೀ ಹೆಂಥ
ಮಕ್ಳಿಗೆ ಜನ್ಮ ಕೊಟ್ಟೆ?
ನೀ ಹೇಳವ್ವ.

ಹೆಣ್ಣೆಂದರೆ
ಹಣ್ಣಂತ ತಿಳಿದರೆ..?
ಎಲ್ಲೆಂದರಲ್ಲಿ
ಕಾಣಿದರೆ ..
ಕಲ್ಲು ಬಿಸಾಕಿ
ಕೆಡವಿ ಸಿಪ್ಪೆ ಸುಲಿದು
ತಿಂದು ಬಿಡುವರೆ..?
ಎದೆ ಹಾಲ ಕುಡಿಸೊ
ತಾಯಿನೂ
ದಿಟ್ಟಿಸಿ ನೋಡುವ
ಮಕ್ಳನ ಹೆತ್ತ ಬಿಟ್ಟೆನವ್ವ.
ಅವ್ವ ನೀನ ಮೊಲೆಗೆ
ಜೋತು ಬಿದ್ದು
ಭಾರತ ಮಾತಾ ಕೀ ಜೈ
ಅಂತ
ಹೇಳ್ತಿದ್ದಾರವ್ವ..

ಅಂಜಿಕೆ ಮನದಲ್ಲಿ
ಮನೆ ಮಾಡಿ ಸುಡುತ್ತಿದೆ
ನನಗಿಗವ್ವ..
ನಿನ್ನಂಥೆ
ನನ್ನ ಹೆತ್ತ ತಾಯಿ ಹೆಣ್ಣವ್ವ..
ನನ್ನ ಒಡಹುಟ್ಟಿದವಳೂ
ನಿನ್ನಂಥೆ ಮುದ್ದು ಮುದ್ದಾಗಿದ್ದಾಳವ್ವ..
ನನ್ನ ಜೀವನ ಅರ್ಧಾಂಗಿ
ಅವಳೂ ನಿನ್ನಂಥೆ ಹೆಣ್ಣು ಕೇಳವ್ವ
ಪುಟ್ಟ ಪುಟ್ಟ ಹೆಜ್ಜೆಯ
ಗೆಜ್ಜೆಯ ನಾದ
ತಂದ,
ಮನೆಗೆಲ್ಲ ಸ್ವರ್ಗ ತಂದ
ನನ್ನ ಮುದ್ದಿನ ಮಗಳೂ ಹೆಣ್ಣು
ನೋಡವ್ವ..
ಕಣ್ಣು ಕಳೆದುಕೊಂಡು
ಇರಲು ಹೆಂಗೆ ಸಾಧ್ಯ ಐತಿ ಹೇಳವ್ವ…..?
ಅವ್ವ
ನೀ ಹೆಂಥ ಮಕ್ಳಿಗೆ
ಜನ್ಮ ಕೊಟ್ಟೆ
ಹೇಳವ್ವ..?

ಅತ್ಯಾಚಾರಿಗೂ ಧರ್ಮದ ಲೇಬಲ್ ಹಚ್ಚಿ
ಬ್ಯಾಟರಿ ಹಿಡ್ದು
ಅಧರ್ಮಿಯನನ್ನ ಹುಡುಕುತಿದ್ದಾರವ್ವ
ನೀ ಆ ವೇಳೆಗೆ ಪಟ್ಟ
ಯಾತನೆ ಎಲ್ಲ ಮರೆತು
ಧರ್ಮದ ಬ್ಯಾನರ ಹಿಡಿದೇ ಹೊಡದಾಡತಿದ್ದಾರವ್ವ.

ಅವ್ವ ನೀ ಹೆಂಥ ಮಕ್ಳಿಗೆ ಜನ್ಮ ಕೊಟ್ಟೆ
ನೀ ಹೇಳವ್ವ..?

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಭಾವ ಭೈರಾಗಿ

ಎಂದೂ ಮುಗಿಯದ ಪ್ರೀತಿಯ ಪಯಣ ಈ‌ ಗೆಳೆತನ..!

Published

on

ಕತ್ತಲೆಯಲ್ಲಿ ಕರಗುವ ಕನಸಿಗೆ ಬೆಳಕ ತರುವುದು ಗೆಳೆತನ. ನೋಯುವ ನೋವಿನ ಮನಸಿಗೆ ಒಲವ ತುಂಬುವುದು ಈ ಗೆಳೆತನ. ಬೆಂಕಿಯಂತೆ ಬೇಯುವ ಭಾವನೆಗೆ ಜೀವ ತುಂಬುವುದು ಗೆಳೆತನ. ಏಕಾಂತದಲ್ಲಿರುವ ಒಂಟಿತನಕ್ಕೆ ಹೊಸತನವೇ ಈ ಗೆಳೆತನ..!!

ಹೌದು..ನನ್ನ ಈ ಗೆಳೆತನ ಏಳು ನಿಮಿಷದಲ್ಲಿ ಏಳು ಹೆಜ್ಜೆಯನ್ನಿಟ್ಟು ಸಂಸಾರ ನಡೆಸಿದ ಹಾಗಲ್ಲ. ಪತಿ ಪತ್ನಿಯರಷ್ಟೇ ಅಲ್ಲ ಸಪ್ತಪದಿ ತುಳಿದು ಜೀವನಕ್ಕೆ ಕಾಲಿಡುವುದು. ನಮ್ಮ ಈ ಗೆಳೆತನದಲ್ಲು ಏಳು ವರ್ಷಗಳ ಕಾಲ ಏಳು ಹೆಜ್ಜೆಯನ್ನಿಟ್ಟು, ಪ್ರೀತಿ, ವಿಶ್ವಾಸ, ನೋವು, ಅಸುಹೆ ಹೀಗೆ ಎಲ್ಲದರ ನಡುವೆ ನಂಬಿಕೆಯೆಂಬ ಮೂರು ಗಂಟನ್ನು ಹಾಕಿಸಿಕೊಂಡು, ನಮ್ಮದು ಏಳೇಳು ಜನ್ಮಗಳ ಅನುಬಂಧವೆಂದು ಹಾಡಿ ನಲಿದವರು. ನಮ್ಮ ಭಾಂದವ್ಯ ನೋಡಿ ಕಾಲೇಜು ಅಧ್ಯಪಕರೆ ತ್ರಿಮೂರ್ತಿಗಳೆಂಬ ಪಟ್ಟವನ್ನು ಮುಡಿಸಿದ್ದಾರೆ. ಅನೇಕ ಸ್ನೇಹಿತರು ಮರುಗಿದವರಿದ್ದಾರೆ, ನಮ್ಮ ನಡುವೆ ಜಗಳ ತಂದಿಟ್ಟು ತಮಾಷೆ ನೋಡಿದವರು ಇದ್ದಾರೆ.. ಜಗಳವಾದಾಗ ವಿಚ್ಚೆದನ ಪತ್ರವನ್ನು ಬರೆದು ಮೂರು ತಿಂಗಳ ಕಾಲ ಮಾತಾಡೊದ್ದನ್ನ ನಿಲ್ಲಿಸಿದ್ದು ಉಂಟು.

ಪ್ರೇಮಿಗಳಲ್ಲಿ ಹೇಗೆ ನನ್ನವಳೆಂಬ ಸ್ವಾರ್ಥ ತುಳುಕಾಡುತ್ತೋ ಹಾಗೆ ನಮ್ಮಲ್ಲೂ ಸಹ. ನಮ್ಮನ್ನ ಬಿಟ್ಟು ಯಾರಾತ್ರನಾದ್ರು ಅತೀ ಹೆಚ್ಚು ಮಿಂಗಲ್ ಆದ್ವೋ ಮುಗಿತು ಆವತ್ತೆ ಪ್ರಾರಂಭವಾಯ್ತು ಅಂತ ಈ ಮುನಿಸು. ಅಬ್ಬಾ! ಈ ಮುನೇಶ್ವರ ಏನಾದ್ರು ಒಬ್ಬರಲ್ಲಿ ಮನೆ ಮಾಡಿದ್ನೋ ಆ ದಿನವೇ ಮೂಡ್ ಔಟ್ ಆಗಿಬಿಡ್ತಿತ್ತು. ಇವರ ಬಗ್ಗೆ ಹೇಳಬೇಕೆಂದರೆ, ಒಬ್ಬಳು ವಿಜಯಲಕ್ಷ್ಮಿ ತಾಯಿಯ ಹಾಗೆ ಪ್ರೀತಿಸಿ ಮುದ್ದಿಸುವವಳು, ಇನ್ನೊಬ್ಬಳು ಮಾಲತಿ ಸದಾ ನನ್ನಲ್ಲಿರುವ ತಪ್ಪುಗಳನ್ನು ತಿದ್ದಿ ಬುದ್ದಿ ಹೇಳುವವಳು.

ಕೊಟ್ಟು ಕೊಳ್ಳುವುದುಂಟು, ಹೇಳಿ ಕೇಳುವ ಗುಟ್ಟುಂಟು
ಜೊತೆಗೆ ತಿನ್ನುವ, ತಿನ್ನಿಸಿ ಮೆಲ್ಲುವ ತುಂಟಾಟವುಂಟು
ದೇಹವೆರಡರ ನಡುವೆ ಜೀವ ಒಂದಾಗಿರುವ ನಂಟು
ಪ್ರೀತಿ ಸ್ನೇಹದ ಬೆರಗಿನ ಅಂಟು, ನೂರೆಳೆಯ ಗಂಟು
ನಾ ತಪ್ಪು ಮಾಡಿದಾಗ ಇವರಿಬ್ಬರು ನಯವಾಗಿಯೋ ಮೆಲುಸಾಗಿಯೋ, ಬಿರುಸಾಗಿಯೋ ಗಡುಸಾಗಿಯೋ ಕಟುವಾಗಿಯೋ ಇದ್ದುದ್ದನ್ನು ಇದ್ದಂತೆ ಸಮಯೋಚಿತವಾಗಿ ತಿಳಿಹೇಳಿ, ತಪ್ಪು ದಾರಿ ಹಿಡಿಯದ ಹಾಗೆ ನೋಡಿಕೊಂಡವರು.

ಮಕ್ಕಳಿಗೆ ಅ,ಆ ಕಲಿಸಿದಂತೆ ನನ್ನ ಬರಹದಲ್ಲಿ ಆಗುತ್ತಿದ್ದ ತಪ್ಪುಗಳನ್ನು ಸಾಕಾಷ್ಟು ತಿದ್ದುಪಡಿಮಾಡಿದವರು. ನೊಂದಾಗ ತೊಡೆಯ ಮೇಲೆ ಮಲಗಿಸಿಕೊಂಡು ತಲೆಸವರಿ ಸಮಾಧಾನ ಮಾಡುವವರು. ಕೈತುತ್ತು ತಿನ್ನಿಸಿ ಅಮ್ಮನ ಪ್ರೀತಿಯನ್ನು ತೋರಿಸಿದವರು.

ಇಷ್ಟೆಲ್ಲಾ ಆದರೂ ಸಹ ಪರೀಕ್ಷೆ ಎಂದು ಬಂದರೆ ಪೈಪೋಟಿ ಬೀಳುತ್ತಿದದ್ದು ಅನ್ಯದವರೊಡನೆ ಅಲ್ಲಾ.. ಬದಲಾಗಿ ನಮ್ಮೂವರ ನಡುವೆಯೇ ಹೆಚ್ಚು. ಒಮ್ಮೆ ನನ್ನ ಗೆಳತಿ ವಿಜಯಲಕ್ಷ್ಮೀ ನನಗಿಂತ ಒಂದು ಮಾಕ್ರ್ಸ್ ಹೆಚ್ಚಿಗೆ ತೆಗೆದಿದ್ದಕ್ಕೆ ಸರ್‍ನೊಂದಿಗೆ ಬರೋಬರಿ ಮೂರು ತಾಸು ಜಗಳ ಮಾಡಿ ನಾಲ್ಕು ದಿನ ಮಾತು ಬಿಟ್ಟಿದನ್ನ ನೆನಪಿಸಿಕೊಂಡರೆ ಇವಾಗ್ಲು ನಗು ಬರುತ್ತದೆ. ಅದೇ ನಾವು ಒಮ್ಮೆ ಡಿಗ್ರಿ ಓದುವಾಗ ಏನು ಓದಿಲ್ಲವೆಂದು ಒಬ್ಬರಿಗೊಬ್ಬರು ಕಾಪಿ ಹೊಡೆದು ಸೇಮ್ ಮಾಕ್ರ್ಸ್ ಗಿಟ್ಟಿಸಿಕೊಂಡಿದ್ದು ಉಂಟು. ತರಗತಿಯಲ್ಲಿ ನಾವು ಮಾಡಿದ ತರಲೆಗಳು, ತುಂಟಾಟಗಳನ್ನ ಇವಾಗ್ಲು ನಮ್ಮ ಪ್ರಾಧ್ಯಾಪಕರು ನೆನಪಿಸುತ್ತಾರೆ.

ಹೀಗೆ ಹೇಳುತ್ತಾ ಹೋದರೆ ಈ ಲೇಖನಕ್ಕೆ ಅಂತಿಮವೆಂಬುದೆ ಇರುವುದಿಲ್ಲ. ಕೊನೆಯದಾಗಿ ಈ ನನ್ನ ಮುದ್ದು ಗೆಳತಿಯರ ಬಗ್ಗೆ ಹೇಳಬೇಕೆಂದರೆ, ನಮ್ಮ ಈ ಗೆಳೆತನ ದೇವರು ಬರೆದ ಸ್ನೇಹದ ದಾರ, ದಾರಕ್ಕೆ ಬೆಸೆದ ಭಾವನೆಗಳ ಹಾರ, ಭಾವನೆಗಳ ಜೊತೆಗೆ ಎಂದೆದೂ ಮುಗಿಯದ ಈ ಪ್ರೀತಿಯ ಪಯಣ.

ಪ್ರೀತಿ.ಟಿ.ಎಸ್
ಪತ್ರಿಕೋದ್ಯಮ ವಿದ್ಯಾರ್ಥಿನಿ
ದಾವಣಗೆರೆ ವಿಶ್ವವಿದ್ಯಾಲಯ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಭಾವ ಭೈರಾಗಿ

ಪ್ರಪಂಚದ ಸಾಮರಸ್ಯವೇ ಭಾವೈಕತೆಯ ಸಂಗಮ

Published

on

  • ಸುಮ ಜಿ. ಬತ್ತಿಕೊಪ್ಪ ಆನಂದಪುರಂ

ನಾದಿಕಾಲದಿಂದಲೂ ದೇಶಗಳ ನಡುವೆ ವ್ಯಾಪಾರ ವ್ಯವಹಾರ ವಿಷಯಗಳಲ್ಲಿ ಮತ್ತು ಸಾರ್ವಭೌಮತ್ವಕ್ಕಾಗಿ ಘರ್ಷಣೆಗಳು ನಡೆಯುತ್ತಲೇ ಇವೆ. ಇದೇ ವೇಳೆ ಪರಸ್ಪರ ಮಿತೃತ್ವದ ಮೂಲಕ ದೇಶಗಳನ್ನು ಬೆಸೆಯುವ ಕಾರ್ಯ ಸಹ ನಡೆಯುತ್ತಿವೆ. ದೇಶಗಳ ವಿಸ್ತರಣೆಗೆ ಅಪಾರ ಪ್ರಮಾಣದ ಸೈನಿಕ ಶಕ್ತಿಯನ್ನು ಕಳೆದುಕೊಂಡು ಕೊನೆಗೆ ಸೋತು ಸುಣ್ಣವಾಗಿ ಒಪ್ಪಂದಗಳ ಮೂಲಕ ಮಿತ್ರರಾಗಿರುವುದನ್ನು ಮತ್ತು ದೇಶ ದೇಶಗಳ ನಡುವೆ ಸಾಮರಸ್ಯವನ್ನ ಬೆಸೆದಿರುವುದನ್ನು ಇತಿಹಾಸದ ಪುಟಗಳಿಂದ ತಿಳಿಯಬಹುದಾಗಿದೆ.

ಸರ್ವಾಧಿಕಾರತ್ವ, ರಾಜಕೀಯ ಅಸ್ಥಿರತೆ, ಪ್ರತಿಷ್ಠೆ , ಸಂಪತ್ತಿನ ದಾಹ ಮದವೇರಿದಾಗಲೇ ಮಹಾ ಯುದ್ಧಗಳು ನಡೆದು ಅಪಾರ ಪ್ರಮಾಣದ ಮಾನವ ಹಾನಿ, ನಾಶನಷ್ಟ ಉಂಟಾಗಿರುವುದನ್ನು ಕಾಣಬಹುದು. ಇಂತಹ ಮನುಷ್ಯ ಕುಲದ ಘನ ಘೋರ ಘಟನೆಗಳು ಮರುಕಳಿಸದಂತೆ ಮಾಡಲು, ವೈವಿಧ್ಯತೆಗಳಿದ್ದರೂ, ಜನರ ಮನಸ್ಸುಗಳಲ್ಲಿ ಪರಸ್ಪರರ ಭಾವ, ವೇಷ, ಆಹಾರ ಮತ್ತು ಭೌಗೋಳಿಕ ಸಂಸ್ಕೃತಿ ಬಗ್ಗೆ ಪ್ರೀತಿ ಸಾಮರಸ್ಯವನ್ನು ತುಂಬುವುದೆ ನವೆಂಬರ್-29 ಅಂತರರಾಷ್ಟ್ರೀಯ ಸಾಮರಸ್ಯ ದಿನ ಮಹತ್ವವಾಗಿದೆ.

ಯೇಸು ಕ್ರಿಸ್ತ, ಮಹಮ್ಮದ ಪೈಗಂಬರ್ ಭಗವಾನ ಬುದ್ಧ ಬೇರೆ ಬೇರೆ ಭೌಗೋಳಿಕ ಹಿನ್ನಲೇ ಇದ್ದರೂ ಅವರು ವಿಶ್ವ ತುಂಬ ಹಂಚಿದ ಕರುಣೆ ಪ್ರೀತಿ ಮೈತ್ರಿ ಸಹೋದರತ್ವವನ್ನೂ ಇಂದು ಪ್ರಪಂಚದ ಪಸರಿಸಬೇಕಿದೆ. ಪ್ರಾಕೃತವಾಗಿ ಭಿನ್ನವಾಗಿದ್ದರು ಮನುಷ್ಯನ ಮನಸ್ಸು ಒಂದೆಯೇ ಅಗಿದೇ ಎಂಬುದು ಈ ಮಹಾನ್ ವ್ಯಕ್ತಿಗಳಿಂದ ತಿಳಿಯಬಹುದಾಗಿದೆ.
ಅಂತರಿಕವಾಗಿ ನಮ್ಮ ದೇಶದ ಒಳಗೂ ವಿವಿಧ ಮತ, ಧರ್ಮ ಜಾತಿ, ವಿಭಿನ್ನ ರೀತಿಯ ಭಾವ ಇದ್ದರೂ ಕಲೆ, ಸಾಹಿತ್ಯ, ಸಾಂಸ್ಕೃತಿಕ ಭಾವೈಕತೆಯೇ ನಮ್ಮ ಭಾರತ ದೇಶದ ಹಿರಿಮೆ.

ವಿಶಿಷ್ಠ ರಾಜಕೀಯ ಆರ್ಥಿಕ ಸಾಮಾಜಿಕ ಸಾಂಸ್ಕೃತಿಕವಾಗಿ ವಿವಿಧ ದೇಶ ವಿದೇಶಗಳ ನಡುವೆ ತನ್ನ ಏಕತೆಗೆ ದಕ್ಕೆಯಾಗದ ರೀತಿಯಲ್ಲಿ ಸಾಮರಸ್ಯವನ್ನ ಬೆಸೆಯುತ್ತಿದೆ. ಪ್ರಪಂಚದಲ್ಲಿಯೇ ಆನೇಕ ಧರ್ಮಗಳಿರುವ ಏಕೈಕ ದೇಶ ಭಾರತ.ಅನಾದಿಕಾಲದಿಂದಲೂ ಈ ಕಾಲದವರೆಗೂ ಬೌದ್ಧ, ಜೈನ , ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್ ಧರ್ಮಗಳ ಅದೆನೇ ಆಚಾರ ವಿಚಾರಗಳ ನಡುವೆ ಭಿನ್ನಭಿಪ್ರಾಯಗಳಿದ್ದರು ಪರಸ್ಪರ ಸಹೋದರರಂತೆ ಒಗ್ಗಟ್ಟಿನಿಂದ ಸ್ವತಂತ್ರವಾಗಿ ಬದುಕುತ್ತಿದ್ದಾರೆ.

ಭಾರತ ಸಂವಿಧಾನವು ಸಹ ನಮ್ಮ ದೇಶಕ್ಕೆ ಮತ್ತಷ್ಟು ಮೆರಗು ನೀಡಿದೆ. ಏಕೆಂದರೆ ದೇಶ ವಿದೇಶಿ ರಾಜರ ಆಕ್ರಮಣ ದಾಳಿ ಮತ್ತು ಬ್ರೀಟಿಷರ ದಾಸ್ಯದಲ್ಲಿದ್ದ ದೇಶ ಇಂದು ಸ್ವಾತಂತ್ರ್ಯ ಪಡೆದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ರಚಿಸಿ ಸರ್ವರಿಗೂ ಸಮ ಪಾಲು ಸಮ ಬಾಳು ನೀಡಿ ಪ್ರತಿಯೊಬ್ಬ ಭಾರತಿಯ ನಾಗರಿಕರನ್ನು ಗೌರವಿಸಿದೆ. ಪ್ರತಿಯೊಂದು ಧರ್ಮ ಮತ ಜಾತಿ ಮತ್ತು ಭಾವಗಳಿಗೆ ಸಮಾನವಾಗಿ ಕಾನೂನುತ್ಮಾಕ ರಕ್ಷಣೆ ನೀಡಿ ಪ್ರಜ್ಞಾವಂತರನ್ನಾಗಿಸಿದೆ. ಯಾವುದೆ ಧರ್ಮಗಳ ಭಾವನಾತ್ಮಕ ಭಾವನೆಗಳಿಗೆ ಧಕ್ಕೆಯಾಗದಂತೆ ಧಾರ್ಮಿಕ ಸ್ವಾತಂತ್ರ್ಯ ನೀಡಿದೆ.

ಕೆಲವೇ ತಿಂಗಳ ಹಿಂದೆ ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾದ ಗಡಿ ಭಾಗದ ವಿಸ್ತಾರಣೆ ಅಕ್ಷರ ಸಹ ಯುದ್ಧ ಸ್ಥಿತಿಯನ್ನ ನಿರ್ಮಾಣವಾಗಿತ್ತು ಇಂತಹ ಸಂದರ್ಭದಲ್ಲಿ ಅಂತರಾಷ್ಟ್ರೀಯ ವಿಶ್ವ ಸಂಸ್ಥೆ ಮತ್ತು ದೇಶ ವಿದೇಶಗಳ ಮಾತುಕತೆಗಳಿಂದ ಭಾರತ ಪಾಕಿಸ್ತಾನದ ನಡುವೆ ಬಹುಬೇಕು ಸಾಮರಸ್ಯವನ್ನ ಬೆಸೆಯಲಾಯಿತು. ಇತ್ತಿಚಿಗೆ ಸುಪ್ರಿಂ ಕೋರ್ಟ್ ನೀಡಿದ ಐತಿಹಾಸಿಕ ಬಾಬರಿ ಮಸಿದಿ ಮತ್ತು ರಾಮ ಮಂದಿರ ತೀರ್ಪಿಗೆ ದೇಶ ಸ್ಪಂದಿಸಿದ ರೀತಿ ಭಾರತದ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಒಟ್ಟಾರೆಯಾಗಿ ಪರಸ್ಪರ ದೇಶ ವಿದೇಶಗಳ ನಡುವೆ ಗೌರವಯುತವಾಗಿ ಮೈತ್ರಿಯಿಂದ ಬಾಳಿ ಬದುಕಬೇಕಿದೆ ಮತ್ತು ಮುಂದಿನ ತಲೆಮಾರುಗಳಿಗೆ ಸ್ಪೂರ್ತಿ ಅಗಬೇಕಿದೆ.

ನವೆಂಬರ್ 29ರಂದು ಅಂತಾರಾಷ್ಟ್ರೀಯ ಸಾಮರಸ್ಯ ದಿನಾಚರಣೆ ಅಂಗವಾಗಿ ಲೇಖನ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending