Connect with us

ಭಾವ ಭೈರಾಗಿ

ನರಹತ್ಯೆ ಮತ್ತು ಜಗುಲಿ ಸಂಸ್ಕೃತಿ

Published

on

  • ಜಗದೀಶ್ ಕೊಪ್ಪ

ಮೊನ್ನೆ ಮಹಾರಾಷ್ಟ್ರದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸಾಧುಗಳನ್ನು ಹಾಗೂ ಚಾಲಕನನ್ನು ಮಕ್ಕಳ ಕಳ್ಳರೆಂದು ಭಾವಿಸಿ ಜನರು ಹತ್ಯೆ ಮಾಡಿದ್ದಾರೆ. ಈ ಸುದ್ದಿ ಪ್ರಸಕ್ತ ಭಾರತದ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಂತಿದೆ. ಕಳೆದ ಆರರೇಳು ವರ್ಷಗಳಿಂದ ಮಕ್ಕಳ ಕಳ್ಳರು, ಮಾತಗಾತಿಯರು, ಗೋವುಗಳ ಕಳ್ಳಸಾಗಾಣಿಕೆದಾರರು ಎಂಬ ಹಣೆಪಟ್ಟಿಯೊಂದಿಗೆ ನಿರ್ಗತಿಕರು, ಭಿಕ್ಷುಕರು, ಮಾನಸಿಕ ಅಸ್ವಸ್ಥರು ಮತ್ತು ಅಮಾಯಕರನ್ನು ಗ್ರಾಮ ಭಾರತದಲ್ಲಿ ನಿರ್ಧಯವಾಗಿ ಕೊಲ್ಲಲಾಗುತ್ತಿದೆ.

ಮನುಷ್ಯ ಮನಷ್ಯನನ್ನು ಕೊಲ್ಲುವುದು ಅನಾಗರೀಯಕತೆಯ ಕಾಲದಲ್ಲಿ ಮತ್ತು ಯುದ್ಧದಲ್ಲಿ ಎಂದು ತಿಳಿದುಕೊಂಡಿದ್ದ ನಮಗೆ ಈಗ ನಾವು ಬದುಕುತ್ತಿರುವ ಕಾಲಘಟ್ಟ ಯಾವುದು ಎಂಬ ಪ್ರಶ್ನೆ ಎದುರಾಗಿದೆ.ಈ ಪರಿಸ್ಥಿತಿ ಎಲ್ಲಿಯವರೆಗೆ ಬಂದಿದೆಯೆಂದರೆ, ಯಾವೊಬ್ಬ ಅಪರಿಚಿತ ವ್ಯಕ್ತಿಯೂ ಹಳ್ಳಿಗಳಿಗೆ ಕಾಲಿಡದಂತೆ ಅವನನ್ನು ಅಥವಾ ಅವಳನ್ನು ಅಸಹಾಯಕತೆಗೆ ದೂಡಿದೆ. ಭಾರತದ ನಿಜವಾದ ಆತ್ಮದಂತಿರುವ ಹಳ್ಳಿಗಳಿಗೆ ಮತ್ತು ಅಲ್ಲಿನ ಜನರ ಎದೆಯೊಳಕ್ಕೆ ಈ ಕ್ರೌರ್ಯದ ಹಾಗೂ ಅಪನಂಬಿಕೆಯ ವಿಷವನ್ನು ತುಂಬಿದವರು ಯಾರು? ಇದು ಉತ್ತರವಿಲ್ಲದ ಪ್ರಶ್ನೆ.

ನಾನು ಹಳ್ಳಿಗಾಡಿನ ಸಂಸ್ಕೃತಿಯಿಂದ ಬಂದವನು ಎಂದು ಎದೆಯುಬ್ಬಿಸಿ ಹೇಳಿಕೊಳ್ಳುವ ಕಾಲ ಒಂದಿತ್ತು ಆದರೆ, ಈಗ ಆ ಮಾತನ್ನು ಹೇಳಲು ನನಗೀಗ ಹಿಂಜರಿಕೆಯಾಗುತ್ತಿದೆ. ಇಂದಿನ ಹಳ್ಳಿಗಳು ಅಪನಂಬಿಕೆ, ದ್ವೇಷ ಮತ್ತು ದಳ್ಳುರಿಗಳ ಕೊಂಪೆಯಾಗಿವೆ. ನಗರ ಸಂಸ್ಕೃತಿಯ ಕಾಡ್ಗಿಚ್ಚಿನಿಂದ ಅರಬೆಂದ ನಿತ್ಯ ಹರಿದ್ವರ್ಣದ ಕಾಡಿನಂತೆ ಗೋಚರಿಸುತ್ತಿವೆ.

1981 ರಲ್ಲಿ ತಮಿಳುಭಾಷೆಯಲ್ಲಿ ಬಿಡುಗಡೆಯಾದ ಕೆ.ಬಾಲಚಂದರ್ ರವರ “ ತಣ್ಣೀರ್, ತಣ್ಣೀರ್” ಸಿನಿಮಾವನ್ನು ನಾನು ಪ್ರಥಮವಾಗಿ ನೋಡಿದ್ದು ತಿರುಪತಿಯ ಚಿತ್ರಮಂದಿರದಲ್ಲಿ.ಆ ಚಿತ್ರದ ನಾಯಕಿ ಹೇಳುವ ಒಂದು ಡೈಲಾಗ್ ಇವೊತ್ತಿಗೂ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಂಡು ಬಿಟ್ಟಿದೆ.
ಒಬ್ಬ ಖೈದಿ ರಾತ್ರೋ ರಾತ್ರಿ ಜೈಲಿನಿಂದ ತಪ್ಪಿಸಿಕೊಂಡು ನಡೆಯುತ್ತಾ ಅನೇಕ ಹಳ್ಳಿಗಳನ್ನು ದಾಟುತ್ತಾ ಹೋಗುತ್ತಿರುತ್ತಾನೆ. ಮಧ್ಯಾಹ್ನದ ವೇಳೆಗೆ ಹಸಿವು ಮತ್ತು ನೀರಡಿಕೆಯಿಂದ ಒಂದು ಹಳ್ಳಿಯನ್ನು ತಲುಪುತ್ತಾನೆ. ಆ ಹಳ್ಳಿ ಒಂದು ಕುಗ್ರಾಮ. ಕುಡಿಯುವ ನೀರಿಗಾಗಿ ಎಂಟತ್ತು ಕಿಲೊಮೀಟರ್ ದೂರ ಹೋಗಿ ಮಹಿಳೆಯರು ನೀರು ಹೊತ್ತು ತರಬೇಕಾದ ಸ್ಥಿತಿ. ಯಾರೊಬ್ಬರೂ ಅವನಿಗೆ ನೀರು ಕೊಡಲು ನಿರಾಕರಿಸುತ್ತಾರೆ.

ನಿರಾಸೆಯಿಂದ ಹಳ್ಳಿಯಿಂದ ಹೋಗುತ್ತಿರುವ ಸಮಯದಲ್ಲಿ ಖೈದಿಗೆ ಆಗ ತಾನೆ ಉರಿಬಿಸಿನಲ್ಲಿ ತಲೆಯ ಮೇಲೆ ಹಾಗೂ ಸೊಂಟದಲ್ಲಿ ನೀರು ಹೊತ್ತು ಹಳ್ಳಿಗೆ ಬರುತ್ತಿರುವ ಹೆಣ್ಣುಮಗಳು ಕಾಣುತ್ತಾಳೆ. ಅವಳ ಬಳಿ ತೆರಳಿ ನೀರಿಗಾಗಿ ಕೈಯೊಡ್ಡಿದ್ದಾಗ ಆಕೆ ಹೇಳುವ ಮಾತಿದು, “ ಅಣ್ಣಯ್ಯಾ, ಈ ಊರಿನಲ್ಲಿ ನೀನು ಹೆಂಗಸರ ಶೀಲ ಬೇಕಾದರೆ ಕೇಳು ಕೊಟ್ಟುಬಿಡುತ್ತಾರೆ ಆದರೆ, ನೀರು ಕೊಡಲಾರರು” ಒಂದು ಹಳ್ಳಿಯ ಕುಡಿಯುವ ನೀರಿನ ಅಭಾವ ಕುರಿತು ಕಟು ವಾಸ್ತವ ಸಂಗತಿಯನ್ನು ಹೀಗೂ ಹೇಳಬಹುದೆ ಎಂದು ನಮಗೆ ಆಶ್ಚರ್ಯವಾಗುತ್ತದೆ. ನಂತರ ಅನುಕಂಪದಿಂದ ಆತನ ಬೊಗಸೆಗೆ ನೀರು ಸುರಿಯುತ್ತಾಳೆ, ಆತನ ದಾಹವನ್ನು ನೀಗಿಸುತ್ತಾಳೆ.

ಆ ಹೆಣ್ಣುಮಗಳ ಅಂತಃಕರಣ ಮತ್ತು ಪ್ರೀತಿಗೆ ಮನಸೋತ ಖೈದಿ, ನೀರಿನ ಅಭಾವ ಕುರಿತು ಆಕೆಯನ್ನು ಕೇಳಿದಾಗ, ಎಂಟತ್ತು ಕಿ.ಮಿ.ದೂರದ ನಾಲೆಯನ್ನು ಹಳ್ಳಿಯತ್ತ ತಿರುಗಿಸಲು ಊರಿನ ಗಂಡಸರಿಗೆ ಮತ್ತು ರಾಜಕೀಯ ಪಕ್ಷಗಳಿಗೆ ಮನಸ್ಸಿಲ್ಲ ಎಂಬ ಸಂಗತಿ ನಾಯಕಿಯಿಂದ ತಿಳಿಯುತ್ತದೆ. ತನ್ನ ಹಿನ್ನಲೆಯನ್ನು ಹೇಳಿಕೊಳ್ಳದ ಖೈದಿ, ಆ ಹೆಣ್ಣುಮಗಳನ್ನು ತಂಗಿಯೆಂದು ಭಾವಿಸಿ, ಆಕೆಯ ಆಶ್ರಯದಲ್ಲಿ ಉಳಿದುಕೊಂಡು ಏಕಾಂಗಿಯಾಗಿ ನಾಲುವೆ ತೋಡಿ ಊರಿಗೆ ನೀರು ಹರಿಸುತ್ತಾನೆ. ಒಂದು ಬೊಗಸೆ ನೀರು ಮತ್ತು ಹೆಣ್ಣಿನ ಅಂತಃಕರಣ ಹೇಗೆ ಒಬ್ಬ ಖೈದಿಯ ಮನಪರಿವರ್ತನೆ ಮಾಡಬಲ್ಲದು ಎಂಬುದಕ್ಕೆ ಹಾಗೂ ಹಳ್ಳಿಗಳ ನಿಜವಾದ ಮಾನವೀಯ ಮುಖಕ್ಕೆ ಈ ಚಿತ್ರ ಇವೊತ್ತಿಗೂ ಸಾಕ್ಷಿಯಾಗಿದೆ.

ರಾಷ್ಟ್ರಪ್ರಶಸ್ತಿ ಪಡೆದ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿರುವ ಸರಿತಾಳ ಪಾತ್ರ ಆಕೆ ನಿಜಕ್ಕೂ ಭಾರತದ ಶ್ರೇಷ್ಠ ಅಭಿನೇತ್ರಿ ಎಂದು ಸಾಬೀತು ಪಡಿಸಿದೆ,
ನಾನು ಮತ್ತು ನನ್ನ ತಲೆಮಾರಿನ ಅನೇಕ ಬರಹಗಾರರು ಹುಟ್ಟಿ ಬೆಳೆದ ಹಳ್ಳಿಗಳು ಹೀಗೆಯೇ ಇದ್ದವು. ಎಲ್ಲರ ಮನೆಯ ಮುಂದೆ ಜಗುಲಿಗಳಿದ್ದವು. ಊರಿಗೆ ಬರುತ್ತಿದ್ದ ಮಡಿಕೆ ಮಾರುವವರುಮ ಕಸಬರಿಕೆ ಮಾರುವವರು, ಪಾತ್ರೆ ಹಾಗೂ ಬಟ್ಟೆಗಳನ್ನು ತಲೆಯ ಮೇಲೆ ಹೊತ್ತು ಮಾರುವವರು ನಮ್ಮ ಜಗುಲಿಯ ಮೇಲೆ ವಿಶ್ರಮಿಸಿಕೊಳ್ಳುತ್ತಿದ್ದರು. ಬಾಯಾರಿಯಾದಾಗ ಮಜ್ಜಿಗೆ, ಹಸಿವಾಗಿದ್ದಾಗ ಊಟ ಎಲ್ಲರ ಮನೆಗಳಲ್ಲಿ ಅವರಿಗೆ ದೊರೆಯುತ್ತಿತ್ತು. ಎಂತಹ ಬಡರೈತನ ಮನೆಯಲ್ಲಿಯೂ ಸಹ ಯಾರಾದರೂ ಬಂದರೆ ಇರಲಿ ಎಂದು ಅಗತ್ಯಕ್ಕಿಂತ ಎರಡು ಅಥವಾ ಮೂರು ಮುದ್ದೆಗಳನ್ನು ಹೆಚ್ಚಿಗೆ ಮಾಡಿ ಇಡುತ್ತಿದ್ದರು.

ಇನ್ನು, ಹಳ್ಳಿಗಾಡಿನ ಹೆಣ್ಣು ಮಕ್ಕಳಿಗೆ ಸೂಜಿ, ದಾರ, ಕರಿಮಣಿ, ಹೇರ್ ಪಿನ್, ಪೌಡರ್ ಇತ್ಯಾದಿಗಳನ್ನು ಸೂಟ್ ಕೇಸ್ ನಂತಹ ಪೆಟ್ಟಿಗೆಯಲ್ಲಿ ಇಟ್ಟುಕೊಂಡು, ಕಂಕುಳಲ್ಲಿ ಮಗು ಇಟ್ಟುಕೊಂಡು ಬರುತ್ತಿದ್ದ ಹೆಣ್ಣುಮಕ್ಕಳಿಗೆ ನಮ್ಮ ಅವ್ವಂದಿರು ಅಥವಾ ಅಕ್ಕ ತಂಗಿಯರು ಮಧ್ಯಾಹ್ನದ ವೇಳೆ ಅವರಿಗೆ ಊಟ ಹಾಕಿ, ಮಗುವಿಗೆ ಕುಡಿಯಲು ಹಾಲು ಒದಗಿಸುತ್ತಿದ್ದರು.
ಎಂತಹ ಬಡತನದ ನಡುವೆಯೂ ಸಹ ಬಡವರು ತಮ್ಮ ವೃತ್ತಿಯನ್ನು ಬಿಡುತ್ತಿರಲಿಲ್ಲ.

ಹಳ್ಳಿಗೆ ಹೋದರೆ, ಊಟಕ್ಕೆ ತೊಂದರೆಯಿಲ್ಲ ಎಂಬ ಭರವಸೆ ಅವರ ಬದುಕಿಗೆ ಬೆಳಕಿನ ದಾರಿಯಂತೆ ತೋರುತ್ತಿತ್ತು. ಹುಣಸೆ ಬೀಜ, ಬೇವು ಮತ್ತು ಹೊಂಗೆ ಬೀಜ ಕಲೆ ಹಾಕಲು ಬರುತ್ತಿದ್ದ ಮುಸ್ಲಿಂ ಮಂದಿ ಊರಿನ ಜನತೆಗೆಲಾ ಸಾಬಣ್ಣ ಆಗಿರುತ್ತಿದ್ದರು.ಅವರ ಹೆಣ್ಣು ಮಕ್ಕಳ ಮದುವೆಗೆ ಅಕ್ಕಿ, ತೆಂಗಿನ ಕಾಯಿ, ಬಾಳೆಹಣ್ಣು, ಆರ್ಥಿಕ ಸಹಾಯ ಇವೆಲ್ಲವೂ ಹಳ್ಳಿಗಳಿಂದ ಧಾರಾಳವಾಗಿ ಸಿಗುತ್ತಿತ್ತು. ಅಲ್ಲಿನ ಜಾತಿ, ಧರ್ಮಕ್ಕಿಂತ ಮಿಗಿಲಾಗಿ ಅವರೂ ಸಹ ನಮ್ಮಂತೆ ಮನನುಷ್ಯರು ಎಂಬ ಉದಾತ್ತ ಮಾನವೀಯ ಪ್ರಜ್ಞೆ ಅಶಿಕ್ಷಿತರಾದ ಹಳ್ಳಿಗರಲ್ಲಿ ಮನೆ ಮಾಡಿತ್ತು.

ಈಗ ಅಂತಹ ಪ್ರಜ್ಞೆಯನ್ನು ಮತ್ತು ಮನುಷ್ಯ ಸಂಬಂಧ ಕುರಿತಾದ ನಂಬಿಕೆಯನ್ನು ಎಲ್ಲಿ ಹುಡುಕಿ ತರೋಣ. ಊರುಗಳಲ್ಲಿದ್ದ ಜಗುಲಿ ಮನೆ ಮಾಯವಾಗಿವೆ, ಆರ್.ಸಿ.ಸಿ. ಮನೆ ಎದ್ದು ನಿಂತಿವೆ. ಅಪರಿಚತರು, ಭಿಕ್ಷುಕರು, ವ್ಯಾಪಾರಿಗಳು ರಾತ್ರಿಯ ವೇಳೆ ತಂಗುತ್ತಿದ್ದ ದೇವಸ್ಥಾನದ ಆವರಣ, ಶಾಲೆಗಳ ಹೊರಜಗುಲಿ ಇವುಗಳಿಗೆ ಕಾಂಪೌಂಡ್ ನಿರ್ಮಿಸಿ ಬೀಗ ಜಡಿಯಲಾಗಿದೆ. ಈ ಬೀಗ ಒಂದರ್ಥದಲ್ಲಿ ನಮ್ಮ ಮನಸ್ಸಿಗೆ ನಾವು ಹಾಕಿಕೊಂಡಿರುವ ಬೀಗಗಳಲ್ಲದೆ ಬೇರೇನೂ ಅಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ

ಕವಿತೆ | ಮೃಗಗಳಿಗಂಜಿ ಹೋದಳು..!

Published

on

  • ಟಿ.ಎಸ್. ರಾಜೇಂದ್ರ ಪ್ರಸಾದ್ ತೇಕಲವಟ್ಟಿ, ದಾವಣಗೆರೆ

ಣ್ಣೊಳಗೆ ಕಣ್ಣು ನೆಟ್ಟು ಪುಣ್ಯಕೋಟಿಯಂತೆ ಸೆರಗಲ್ಲಿ ನೋವಿನ ಮುಡಿತುಂಬ ಬಿಚ್ಚಿಟ್ಟು ಎದೆಯೊಳಗಿನ ಬೆಂಕಿಯಂತಹ ದಿಟವನು ನಡೆದು ಹೋದಳು ಅಕ್ಕನಂತೆ!

ಗುಟ್ಟುರಟ್ಟಾಗದಿರಲು ಕೈಯಲ್ಲಿ ಕೈ ಬೆಸೆದು ಮುಚ್ಚಿಟ್ಟು ಬೆರಳುಗಳಲ್ಲಿ ಬಾಷೆಯನು ಎದೆಯಲ್ಲಿ ನಿಜವನು ಬಚ್ಚಿಟ್ಟು ಮೃಗಜಲವಾಗಿ ಹರಡಿಕೊಂಡು!
ಉಳಿದುಕೊಂಡ ನೀರವ ಮೌನ ಕುಸಿದು ಕುಳಿತು
ಕಣ್ಣಲಿ ಮಂಜುಮುತ್ತಿ ಅಕ್ಷರಗಳೆಲ್ಲ ಒದ್ದೆಯಾದವು!

ಬಂಜೆಯಾದ ಅಪ್ಪ ಕಪ್ಪು ಹೇಳಿದ ಅವ್ವ ತುಪ್ಪ ಸುರಿದ ಹಗಲು ಉರುಳಾದ ಹರೆಯ ಕರುಳು ಕತ್ತರಿಸಿದ ಒಡಲು ಹೇಳಿ ಹೋಗುವಾಗ

“ಹುಟ್ಟಬಾರದು ಹೆಣ್ಣಾಗಿ.!” ನೋವಿನ ದನಿಯನ್ನು
ನೆನಪಾಗಿ ನೆಟ್ಟು ಮೃಗಗಳಿಗಂಜಿ ಹೋದಳು!

ನಂಜುಂಡೇಶ್ವರ ಕಲ್ಲಾಗಿ ಅರಳದಾಯಿತು ಮಲ್ಲಿಗೆ ಕರುವಿನ ಕೊರಳ ಕಟ್ಟಿ ಹೆತ್ತ ಕರುಳು ಮೃಗವಾಯಿತು ಕತ್ತುಕೊಟ್ಟು ದಿಗಿಲಾಗಿ ಮುತ್ತು ಬಿದ್ದು ಮಣ್ಣಾಗಿ ಮುಳ್ಳುಹೊದೆಯೊಳಗೆ ಬೆಂಕಿ ಹೊಗೆಯಾಡಿತು!

ಬರಿದಾಯಿತು ಬಯಲು
ಒಣಗಿದ ಮರದಡಿಯಲಿ ಅವಳ ಸಮಾಧಿಯ ಮೇಲೆ ಬಾಡಿಹೋದ ಹೂವುಗಳು ಬಿಕ್ಕಳಿಸುತ್ತಿದ್ದವು!

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಭಾವ ಭೈರಾಗಿ

ಬದುಕಿನ ಬೆಳಕಾದ ನುಡಿ ‘ದೀವಟಿಗೆ’

Published

on

  • ಪರಶುರಾಮ್. ಎ

ದೀವಟಿಗೆ‘ ಎಂಬ ಕವನ ಸಂಕಲನವನ್ನು ಮೈ,ನಾ ಎಂಬ ಕಾವ್ಯ ನಾಮದಿಂದ ಮೈಸೂರಿನ ನಾರಾಯಣರವರು ಬರೆದಿರುವ ಪುಸ್ತಕ. ತಮ್ಮ ಮೊದಲ ಕವನ ಸಂಕಲನದಲ್ಲಿ ಪ್ರಬುದ್ಧ ವಿಷಯಗಳನ್ನು ತಮ್ಮದೇ ಸ್ವಂತ ಶೈಲಿಯಲ್ಲಿ ಕವನಗಳನ್ನು ಈ ಪುಸ್ತಕದ ಮೂಲಕ ಕನ್ನಡಿಗರಿಗೆ ಕಟ್ಟಿ ಕೊಟ್ಟಿದ್ದಾರೆ.

ತಮ್ಮ ಸಾಹಿತ್ಯ ಸ್ನೇಹಿತರ ಬಳಗದಿಂದ ಆಶಯ ನುಡಿಗಳಿಂದ ಪುಸ್ತಕಕ್ಕೆ ಮೆರುಗು ಸಹ ಹೆಚ್ಚಿಸಲಾಗಿದ್ದು, ಆಶಯಕಾರರ ನಂಬಿಕಸ್ಥ ಕವನಗಾರ ನಾರಾಯಣ್ ನಂಬಿಕೆ ಉಳಿಸಿಕೊಂಡಿದ್ದಾರೆ. ಈ ದೀವಟಿಗೆ ಪುಸ್ತಕದಲ್ಲಿ ಒಟ್ಟು ೮೫ ಕವನಗಳಿದ್ದು ಎಲ್ಲವೂ ಸಾಹಿತ್ತಾಸಕ್ತರ ಎದೆ ಮುಟ್ಟುವಲ್ಲಿ ಯಶಸ್ವಿಯಾಗಿದೆ. ಮೋದಕ ಪ್ರಿಯ ಗಣಪ ಎಂಬ ಭಕ್ತಿಯಿಂದ ಶುರುವಾದ ಕವನಗಳು ರಾಜಕೀಯ ವಿಡಂಬನೆ, ಕನ್ನಡ ಅಭಿಮಾನ. ಸಂಬಂಧಗಳ ಸಾರ.

ಸಮಾಜ ಪರ ಕಾಳಜಿ, ಬದುಕಿನ ನೋವು ನಲಿವು ದುಃಖ ದುಮ್ಮಾನಗಳ ಏರಿಳಿತದ ಸಮ್ಮೇಳನವಿದೆ. ಕವಿಗೆ ಕಣ್ಣಿಗೆ ಕಂಡದೆಲ್ಲವೂ ಕವಿತೆಯಾಗಲಾರದು ಹಾಗೇಯೆ ಅನುಭವಿ ಗ್ರಹಿಸಿದರೆ ಅವುಗಳನ್ನು ಹೂ ಮಾಲೆ ಕಟ್ಟುವ ರೀತಿಯಲ್ಲಿ ಪದಮಾಲೆ ವರ್ಣಮಾಲೆಯನ್ನಾಗಿಸಿದರೆ ಕವನ ಸಾರ್ಥಕ.

ವಿವೇಕದ ಈ ಹೊತ್ತಿನ ದೀವಟಿಗೆಯೇ ಆಗಿದೆ ಎನಬಹುದಾದ ತಾಕತ್ತು ಉಳ್ಳ ಪುಸ್ತಕ. ಪುಸ್ತಕದಲ್ಲಿ ಒಂದೊಂದು ಕವನಗಳು ಸಹ ತಮ್ಮ ತಾಕತ್ತಿನ ಕಳೆಯನ್ನು ಓದುಗರಿಗೆ ಅರಿವು ಮೂಡಿಸಲು ಪ್ರಯತ್ನಿಸುತ್ತದೆ. ಆ ಅರಿವನ್ನು ಕವಿ ತಮ್ಮ ಮೊನಚಾದ ಪದ ಬಳಕೆಯಿಂದ ಎಚ್ಚರಿಸುತ್ತ ಸಾಗುತ್ತಾನೆ. ನಾರಾಯಣರು ಕನ್ನಡದ ಕವಿತೆಗಳ ಮೂಲಕ ಹೊಸ ಬಗೆಯ ಕಾವ್ಯಕ್ಕೆ ಕೈ ಹಾಕಿದ್ದಾರೆಂದೆ ಹೇಳಬಹುದು.

ದೇವನಾಟ ಪದ್ಯದಲ್ಲಿ ಕವಿ
ಹಸುಳೆ ಕಂದನ ಅಗಲಿ ತಾ ಅಸುನೀಗಿಹಳಮ್ಮ ನಡುರಸ್ತೆಯಲ್ಲಿ, ಇದನೋಡಿ ಮಿಡಿಯುತಿಹರು ಜನ ತಮ್ಮ ಫೇಸ್‌ಬುಕ್ಕು, ವಾಟ್ಸಪ್ ಸ್ಟೇಟಸ್ ನಲ್ಲಿ!” ಎಂಬ ಮಾರ್ಮಿಕ ವಿಡಂಬನೆಯೊಂದಿಗೆ ನಾವು ಇನ್ನೊಬ್ಬರ ನೋವಿಗೆ ಈಗ ಹೇಗೆ ಸಂತೈಸುತ್ತಿದ್ದೇವೆ ಎಂಬ ಕುಹಕದೊಂದಿಗೆ ಕಠೋರ ಸತ್ಯವು ಇದೆ. ಒಬ್ಬ ಪ್ರೇಮಿಯ ಕನವರಿಕೆ ಇದೆ

ತುಡಿತ, ಮಿಡಿತ ಕಾತುರಗಳ ಸಮ್ಮಿಳತವಿದೆ. ಅಮ್ಮನ ಮುದ್ದಿನ ಮಗನ ಮಮಕಾರವಿದೆ, ಅಮ್ಮನಲ್ಲಿನ ದೈವತ್ವದ ಚಿಗುರಿದೆ, ಅಪ್ಪನ ಭಯಂಕರ ಗೌರವ ಸಮಭಾವಗಳಿವೆ, ಅಕ್ಕನ, ಸ್ನೇಹಿತರ ಸಲುಗೆಯ ಸಮ್ಮಿಶ್ರಿತ ಭಾವನೆಯ ನದಿ ತಳುಕಾಗಿ ಅಂಟಿದೆ. ಪದದಿಂದ ಪದಕ್ಕೆ ಎನ್ನುವ ಹಾಗೆ ಮನದಿಂದ ಮನಕ್ಕೆ ಇವರ ಕವನ ಮೊದಲ ಓದಿಗೆ ನಾಟುವಂತಿದೆ.

ಹೃದಯ ವಿಶಾಲತೆಗೆ ಸೆಲೆಬ್ರೆಟಿಯನ್ನು ಸಾಮಾನ್ಯ ಪ್ರಜೆಯಂತೆ “ಪ್ರತಿಯೊಬ್ಬರೂ ಸೆಲೆಬ್ರಿಟಿಗಳೇ ಪ್ರದರ್ಶಿಸುವ ಮೀಡಿಯಾಗಳಲ್ಲಿ ಅಲ್ಲ ತಮಗಾಗಿ ಮಿಡಿಯುವ ಹೃದಯಗಳಲ್ಲಿ” ಎಂಬ ನವೀನ ಸತ್ಯತೆಯ ಹೊಳಪು ಪುಸ್ತಕದ ಉದ್ದಕ್ಕೂ ಸಾಗುತ್ತದೆ.

ಒಟ್ಟಾರೆ ತಮ್ಮ ಚೊಚ್ಚಲ ಕವನ ಸಂಕಲನದಲ್ಲಿಯೇ ಇಷ್ಟು ಪ್ರಬುದ್ಧ ಕವನಗಳನ್ನು ಕನ್ನಡಿಗ ಓದುಗರಿಗೆ ‘ದೀವಟಿಗೆ‘ ಯಾಗಿ ಮೈ,ನಾ ಖ್ಯಾತಿಯ ನಾರಾಯಣರು ತಮ್ಮ ಕವನದ ಮೂಲಕ ಗಮನ ಸೆಳೆಯುತ್ತಾರೆ. ತಮ್ಮ ದೈಹಿಕ ಅಂಗವಿಕಲತೆಯನ್ನು ಮೆಟ್ಟಿ ನಿಂತ ಛಲಗಾರ, ಕನ್ನಡದ ಸಾಹಿತ್ಯಕ್ಕೆ ಮತ್ತಷ್ಟು ತಮ್ಮ ಕೈಲಾದ ಸಾಹಿತ್ಯ ಸೇವೆಯನ್ನು ಪೂರೈಸಲಿ ಎಂದು ಶುಭಾಶಯಗಳು ಕನ್ನಡಿಗರೆಲ್ಲರೂ ಕೋರುವ, ಇವರ ಪುಸ್ತಕ ಪಯಣ ಸಾಗಲಿ ಎಂದು ಆಶಿಸೋಣ.

ಸುದ್ದಿದಿನ.ಕಾಂ|ವಾಟ್ಸಪ್|9980346243

Continue Reading

ಭಾವ ಭೈರಾಗಿ

ಕವಿತೆ | ಜೋಳಿಗೆಯಿಲ್ಲದ ಜಂಗಮ

Published

on

Art : Carol Nelson
  • ಜಿ. ಮುದ್ದುವೀರಸ್ವಾಮಿ ಹಿರೇಮಳಲಿ, ದಾವಣಗೆರೆ

ವನು ಹುಚ್ಚ

ಮಹಾನಗರದ ಬೀದಿಗಳಲ್ಲಿ
ಅಲೆಯುತ್ತಾನೆ
ಏನನ್ನೊ ಹುಡುಕುತ್ತ

ಅಲೆದಾಟ
ನಿಂತ ನೀರಲ್ಲ
ಎಲ್ಲಿಂದಲೊ ಆರಂಭ
ಗಮ್ಯವಿರದ
ನಿಲುಗಡೆ

ಸಾಗುವ ದಾರಿಯ ಇಕ್ಕೆಲಗಳ
ಕಸ ಕಡ್ಡಿ ಖಾಲಿ ನೀರಿನ ಬಾಟಲಿ
ಹರಿದ ಚಪ್ಪಲಿ
ಎಸೆಯುತ್ತ ರಸ್ತೆ ಮಧ್ಯದಿ….

ಹೆಸರಿರದ ಮರದಡಿ ವಿಶ್ರಾಂತಿ
ಬೊಡ್ಡೆಗೊರಗಿಸಿಟ್ಟ ಹಳೆ ದೇವರ
ಪಟಗಳ ವಿಚಾರಣೆ
ದೇವರ ದೈನೇಸಿತನಕೆ
ಮರುಕ: ಚರಂಡಿ ನೀರಿನಲಿ
ಅಸಹಾಯಕ ದೇವತೆಗಳ ಮೋಕ್ಷ

ಯಾರೊ ಕೊಟ್ಟದ್ದ ತಿಂದು
ಉಳಿದದ್ದ ದಿಕ್ಕು ದಿಕ್ಕಿಗೆಸೆದು
ಗುನುಗುತ್ತ ಲಹರಿ ಬಂದಂತೆ
ಪಯಣ

ಮೂಡು ಕೆಟ್ಟರೆ ನಿಂತ
ನಿಲುವಲ್ಲೆ
ವಾಚಾಮಗೋಚರ ಬೈಗುಳ
ಶತ್ರು ಅಗೋಚರ

ಕಸದ ರಾಶಿಯಲಿ ಸಿಕ್ಕ
ಕನ್ನಡ-ಇಂಗ್ಲಿಷ್ ಪತ್ರಿಕೆ
ತುಣುಕುಗಳ ಪಾರಾಯಣ
ಮೊಗದಲಿ ಸಂತೃಪ್ತ ಹಾಸ

ಅಂಗಿಮೇಲೊಂದಂಗಿ
ಅಂಡು ಕಾಣುವ ಚಡ್ಡಿ
ಸೀಗೆ ಪೆಳೆಯಂತಹ ಗಡ್ಡ
ಬದುಕು ನಿಗೂಢ!

ಬಂದಿರುವುದೆಲ್ಲಿಂದ
ಹೋಗ ಬೇಕಿರುವುದೆಲ್ಲಿಗೆ?
ಯಾವುದರ ಹುಡುಕಾಟ
ಜೋಳಿಗೆಯಿಲ್ಲದ ಜಂಗಮ
ನಮ್ಮೊಳಗಿನ ಆತ್ಮ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending