Connect with us

ಭಾವ ಭೈರಾಗಿ

ಸೋಲೆಂಬ ಸ್ನೇಹಿತನ ಸಾಂಗತ್ಯವೀರಬೇಕು ನೀವೇನಂತೀರಿ..!

Published

on

ನಾನು ಕೂಡ ಒಬ್ಬ ಓದುಗ,ವಿದ್ಯಾರ್ಥಿ ಈ ಲೇಖನದಲ್ಲಿ ಹೇಳಹೊರಟಿರುವುದು ಸಾಧನೆಗೆ ಸಾಕ್ಷಿ ಆಗಬಲ್ಲ ಸೋಲಿನ ಸಾಂಗತ್ಯದ ಸಹವಾಸದ ಬಗ್ಗೆ.ಏನಿದು ಸೋಲಿನ ಸಹವಾಸ ಬಯಸಬೇಕು ಎನ್ನುತ್ತಿದ್ದಾರೆ,ಅಂತ ಆಶ್ಚರ್ಯವಾಗುತ್ತಿದ್ದಿರಾ…..! ಹೌದು ಪ್ರತಿ ಸೋಲು ಕೂಡ ಸಾಧಕನಿಗೆ ಸಾಹಸದ ಮಾರ್ಗ ಕಲ್ಪಿಸಿ ಕೊಡುವಂತಹದ್ದು.ಅದನ್ನು ನಾವೆಲ್ಲರೂ ಒಪ್ಪಲೇಬೇಕು ಯಾಕೆಂದರೆ, ನೆನಪಿರಲಿ ಯಾವ ಗುರಿಸಾಧನೆಯೂ ಮನುಷ್ಯನ ಪ್ರಯತ್ನಕ್ಕಿಂತ ಮುಗಿಲಿಲ್ಲ. ಯಾವ ಪ್ರಯತ್ನ ಅಥವಾ ಸಾಧನೆಯು ಸತತ ಅಭ್ಯಾಸವಿಲ್ಲದೆ ಯಶಸ್ವಿಯಾಗಲಾರದು. ಹಾಗೆಯೇ ಈ ಮಾತನ್ನು ಕೂಡಾ ಗಮನಿಸಬೇಕು ನಮ್ಮೆಲ್ಲರಿಗೂ ಇಂದು ಬೇಕಾಗಿರುವುದು, ಸೋಲುಗಳಿಲ್ಲದ ಸಾಧನೆ ಆದರೆ ಪ್ರಯತ್ನ ಮಾತ್ರ ಕಡಿಮೆಯೇ ಹೀಗಾಗಿ ಅದು ಅಸಾಧ್ಯ ಎಂದು ಗೊತ್ತಿದ್ದರೂ,ನಾವು ನಮಗೆ ಬಂದ ಸೋಲನ್ನು ಇಷ್ಟಪಡುವುದಿಲ್ಲವೇಕೇ? ಆದರೆ ನನ್ನ ಈ ಪುಟ್ಟ ಜೀವನದಲ್ಲಿ ಅನುಭವಕ್ಕೆ ಬಂದಿರುವ ಪ್ರಕಾರ ಸೋಲುಗಳು ಸಮಸ್ಯೆಗಳು ಮಾರುವೇಷದಲ್ಲಿ ಬಂದು ನಿಲ್ಲುವ ಸುವರ್ಣ ಅವಕಾಶಗಳು ಎನಿಸುತ್ತದೆ.

ಆದರೆ ನೆನಪಿರಲಿ ಸೋಲುಗಳನ್ನು ಸಮಸ್ಯೆಗಳನ್ನು ಅವಕಾಶ ಎಂದು ನೋಡಿದವರು ಇಂದು ಜಗತ್ತಿನಲ್ಲಿ ಸಾಧಕರಾಗಿದ್ದಾರೆ,ಯಶಸ್ವಿ ವ್ಯಕ್ತಿಗಳಾಗಿದ್ದಾರೆ. ಸೋಲುಗಳನ್ನು ಶಪಿಸುತ್ತಲೇ ಕುಳಿತರೆ ಸಾಧನೆಗೆ ಸಮಾಧಿ ಸೃಷ್ಟಿಸಿದಂತಾಗುತ್ತದೆ. ಅದರ ಬದಲಾಗಿ ಸೋಲುಗಳನ್ನು ಪ್ರೀತಿಸಿ ಅದಕ್ಕೆ ಕಾರಣ ಗುರುತಿಸಿ ಮತ್ತೆ ಸಾಧನೆಗೆ ಸಿದ್ಧವಾದರೆ ಅದಕ್ಕಿಂತ ಮಿಗಿಲಾದ ಸಾಧನೆ ಸಂತೋಷ ಸಾಧಕನಿಗೆ ಬೇರೊಂದಿಲ್ಲ. ನಮ್ಮೆಲ್ಲರಲ್ಲೂ ಅಪಾರವಾದ ಸಾಮರ್ಥ್ಯ ಅಡಗಿದೆ ಎಂಬ ಮಾತನ್ನು ಬಹಳ ಹಿಂದಿನಿಂದಲೂ ಕೇಳುತ್ತಲೇ ಬಂದಿದ್ದೇವೆ.ಈ ಸಾಮರ್ಥ್ಯದ ಬಲದಿಂದ ನಮಗೇನು ಬೇಕೋ ಅದನ್ನು ಸಾಧಿಸಲು ಸಾಧ್ಯ. ಬದುಕಿನಲ್ಲಿ ಯಾವುದೋ ಒಂದು ಸೋಲು ಸಮಸ್ಯೆ ನಮ್ಮನ್ನ ಕಾಡುತ್ತಿದ್ದರೆ, ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದವರಂತೆ ಕೂಡುವ ಅಗತ್ಯವೇ ಇಲ್ಲ.ಕಾರಣ ಅದೊಂದು ವೇಷಮರೆಸಿಕೊಂಡು ಬಂದಂತಹ ಸುವರ್ಣಾವಕಾಶ ಎಂದುಕೊಳ್ಳಬೇಕಷ್ಟೇ.. ನಿಜ ಅದೊಂದು ಸಮಸ್ಯೆ ಎಂದು ಆರಂಭದಲ್ಲಿ ಎನಿಸಿಕೊಳ್ಳುತ್ತದೆ ಅನಿಸುತ್ತದೆ ನಿಜ.ಆ ಸಮಯಕ್ಕೆ ಬಂದ ಇದೊಂದು ಅನಿವಾರ್ಯ ಸ್ಥಿತಿ ಎಂದುಕೊಂಡು ಮರೆತು ಬಿಡಬೇಕು. ಬದುಕಿನಲ್ಲಿ ಸೋಲುಗಳೇ ಇಲ್ಲದೆ ಹೋದರೆ ಸಾಧನೆಗೆ ಬೆಲೆ ಇರುವುದಿಲ್ಲವಲ್ಲ. ಬದುಕಿಗೆ ಅರ್ಥವೇ ಇರುವುದಿಲ್ಲ ಎಂಬುವುದನ್ನು ಗಮನಿಸಬೇಕು.

ಬದುಕಿನಲ್ಲಿ ಸೋಲಿನ ಭಯ ಯಾವತ್ತೂ ಬೇಡ ಒಂದು ವೇಳೆ ನಿಮಗೆ ಆ ಭಯವಿದ್ದರೆ ಸೋಲಿಗೆ ಒಂದು ಮಾತನ್ನು ಹೇಳಿಬಿಡಿ “ನನ್ನ ಹಿಂದೆ ನಡೆಯಬೇಡ ನಾನು ನಿನ್ನನ್ನು ಮುನ್ನಡೆಸದಿರಬಹುದು, ಹಾಗೆ ನನ್ನ ಮುಂದೆ ನಡೆಯಬೇಡ ನಾನು ನಿನ್ನನ್ನು ಹಿಂಬಾಲಿಸದೆ ಇರಬಹುದು ನನ್ನ ಜೊತೆಯಲ್ಲಿಯೇ ನಡೆ ಮತ್ತು ನನ್ನ ಸ್ನೇಹಿತನಾಗು ಸಾಧನೆಗೆ ಸಾಕ್ಷಿಯಾಗು” ಆಗಲಾದರೂ ಸೋಲು ನಿಮ್ಮ ಸ್ನೇಹಿತನೇಂಬ ಬಲವಾದ ನಂಬಿಕೆ ಬರಬಹುದು ನಿಮಗೆ.ಅದರಿಂದಾಗಿಯಾದರು ನಿಮ್ಮ ಸತತ ಸಾಧನೆ ಸಾಗಬಲ್ಲದು ಅಲ್ವೇ….!

ಈ ಲೇಖನ ಬರೆಯಲು ಕಾರಣವೊಂದಿದೆ ಇತ್ತೀಚಿಗೆ ನಡೆದ ಕೆಲವು ಪರೀಕ್ಷೆಗಳಲ್ಲಿ ಗೆಲುವಿನ ದಡದಿಂದ ದೂರ ಉಳಿದ ಸ್ನೇಹಿತನೊಬ್ಬ ಕರೆ ಮಾಡಿ ಸೋಲು ತಂದ ಸಂಕಷ್ಟಗಳ ಬಗೆಗೆ ಸಂವಾದ ನಡೆಸಿಯೇ ಬಿಟ್ಟ ನಮ್ಮಿಬ್ಬರ ಮಾತುಗಳು ಮುಂದುವರೆದು ಕೊನೆಗೆ ಮೌನ ಆವರಿಸಿಬಿಟ್ಟಿತ್ತು. ತದನಂತರ ಏಕಾಂಗಿಯಾಗಿ ಮೌನ ತಾಳಿದ ನನ್ನ ಮನಸ್ಸು ಸೋತು ಸಾಧನೆಗೈದ ಸಾಧಕರತ್ತ ಚಿತ್ತ ಹರಿಸಿ ಸಾಧನೆಗೆ ಪ್ರತಿ ಸೋಲು ಕೂಡ ಸಾಕ್ಷಿ ಆಗಬಲ್ಲದು ಎಂಬ ಬರಹಕ್ಕೆ ಮುನ್ನುಡಿ ಹಾಡಿತ್ತು ಅದರದೇ ಆದ ಒಂದು ಪುಟ್ಟ ಸಂದೇಶವನ್ನು ನಿಮಗೆ ತಲುಪಿಸುವ ಹಂಬಲದಿಂದ ಇದನ್ನು ಅಕ್ಷರ ಪುಟಕ್ಕೆ ಆಹ್ವಾನ ನೀಡಿ ಬಿಟ್ಟೆ.ಕೊನೆಯಲ್ಲಿ ಹೇಳುವುದು ಇಷ್ಟೇ “ನಿನ್ನನ್ನು ನೀನು ನಂಬದೆ ಹೋದರೆ ಮುಕ್ಕೋಟಿ ದೇವತೆಗಳನ್ನು ನಂಬಿದರು ಪ್ರಯೋಜನವಿಲ್ಲ”.ಹಾಗಾಗಿ ನಿಮ್ಮ ಪ್ರಯತ್ನದ ಮೇಲೆ ನಂಬಿಕೆ ಇರಲಿ ಪ್ರತಿ ನಿಮ್ಮ ಸೋಲು ಕೂಡ ಹೊಸದೊಂದು ಸಾಧನೆಗೆ ಸಾಕ್ಷಿಯಾಗಿ ನಿಲ್ಲುತ್ತದೆ.ಹಾಗೆಯೇ ಸೋತು ಸಾಧಿಸುವ, ಸಾಧಿಸಿದ ಸಾಧನೆಗೆ ಸಿದ್ಧವಾದ ಹೃದಯಗಳಿಗೆ, ಮನಸ್ಸುಗಳಿಗೆ ನನದಿಷ್ಟು ಸಲಾಂ ಇದಕ್ಕೆ ನೀವೇನಂತೀರಿ ಅನುಭವಕ್ಕೋಂದಿಷ್ಟು ನೆನಪುಗಳು ಇರಲಿ ಅದು ನಮಗೂ ನಿಮಗೂ ಬದುಕಿಗೆ ಬೆಳಕು ನೀಡುವಂತಿರಲಿ ಮತ್ತೆ ಭೇಟಿಯಾಗೋಣ…….

ಸಂಗಮೇಶ.ಹತ್ತರಕಿಹಾಳ
ಕರ್ನಾಟಕ ವಿಶ್ವವಿದ್ಯಾಲಯ
ಧಾರವಾಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ

ಕವಿತೆ | ಚಿಕ್ಕಿಗಳು ಚಿತ್ತಾರ ಬಿಡಿಸ್ಯಾವ

Published

on

  • ಡಾ.ಕಾವ್ಯಶ್ರೀ, ಸಹಾಯಕ ಪ್ರಾಧ್ಯಾಪಕಿ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ

ನಿಂಬಿಯಾ ಬನದಾಗ ರಂಭಿ ನಿಂತಕ್ಕಿ ಯಾರೆ
ಮುತ್ತು ಉದುರ್ಯಾವ ನೆಲಕೆಲ್ಲ ಎಲೆ ಗೆಳೆತಿ
ಹಾಡು ಹುಟ್ಯಾವ ಮನದಾಗ

ಅತ್ತಿಯಾ ಮನೆಯಾಗ ತೊತ್ತಾಗಿ ದುಡಿಬ್ಯಾಡ
ಹೊತ್ತಾಗಿ ನೀಡಿದರ ಉಣಬ್ಯಾಡ ಎಲೆ ಗೆಳತಿ
ದಿಟ್ಟತನದಿಂದ ಬಾಳವ್ವ

ದೇವರ ಹೆಸರೇ಼ಳಿ ಹರಕೆಯಾ ಕುರಿಮಾಡಿ
ಬೆತ್ತಲೆ ಮೆರವಣಿಗೆ ಮಾಡ್ಯಾರ ಎಲೆ ಗೆಳತಿ
ಕತ್ತಲ ಅಡವ್ಯಾಗ ನೂಕ್ಯಾರ

ಬಾಳಿಯಾ ಬನದಾಗ ಬಾಲಿ ನೀ ಹೊರಟಾಗ
ಬಾ ಅಂತ ಹಿಡಿದು ಎಳದಾರ ಎಲೆ ಗೆಳೆತಿ
ಸರಪಳಿ ಕಟ್ಟಿ ಬಿಗಿದಾರ

ಕರಿಯಾ ಪಾಟಿಯ ಮ್ಯಾಲ ಬಿಳಿಯ ಅಕ್ಷರ ಬರೆದರ
ಬೆಳದಿಂಗಳು ಅಡಿರ್ಯಾದ ಆಗಸಕ ಎಲೆ ಗೆಳತಿ
ನಕ್ಕು ನಲಿದಾನ ಚಂದ್ರಾಮ

ಸರಪಳಿ ಹರಿದೊಗೆದು ವಿದ್ಯದ ಕೈ ಹಿಡಿದು
ದಿಟ್ಟ ತನದಿ ಬದುಕಿ ನಗಬೇಕ ಎಲೆ ಗೆಳತಿ
ಮುಡಿತುಂಬ ಮುತ್ತ ಮುಡಿಬೇಕು

ವಿದ್ಯೆಯೊಂದಿದ್ದರೆ ಆನೆ ಬಲವಿದ್ದಂತೆ
ಅಪ್ಪ ಗಂಡ ಮಗನ ಹಂಗಿಲ್ಲ ಎಲೆ ಗೆಳತಿ
ಸ್ವಾಭಿಮಾನದ ಬಾಳು ಬಾಳವ್ವ

ಮುಳ್ಳೆಲ್ಲ ಹೂವಾಗಿ ಹಾದ್ಯಗ ಹಾಸ್ಯಾವ
ಚಿಕ್ಕಿಗಳು ಚಿತ್ತಾರ ಬಿಡಿಸ್ಯಾವ ಎಲೆ ಗೆಳೆತಿ
ಹಸುರುಟ್ಟು ಮುಂದೆ ನಡೆಯವ್ವ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಭಾವ ಭೈರಾಗಿ

ಕವಿತೆ | ಮೃಗಗಳಿಗಂಜಿ ಹೋದಳು..!

Published

on

  • ಟಿ.ಎಸ್. ರಾಜೇಂದ್ರ ಪ್ರಸಾದ್ ತೇಕಲವಟ್ಟಿ, ದಾವಣಗೆರೆ

ಣ್ಣೊಳಗೆ ಕಣ್ಣು ನೆಟ್ಟು ಪುಣ್ಯಕೋಟಿಯಂತೆ ಸೆರಗಲ್ಲಿ ನೋವಿನ ಮುಡಿತುಂಬ ಬಿಚ್ಚಿಟ್ಟು ಎದೆಯೊಳಗಿನ ಬೆಂಕಿಯಂತಹ ದಿಟವನು ನಡೆದು ಹೋದಳು ಅಕ್ಕನಂತೆ!

ಗುಟ್ಟುರಟ್ಟಾಗದಿರಲು ಕೈಯಲ್ಲಿ ಕೈ ಬೆಸೆದು ಮುಚ್ಚಿಟ್ಟು ಬೆರಳುಗಳಲ್ಲಿ ಬಾಷೆಯನು ಎದೆಯಲ್ಲಿ ನಿಜವನು ಬಚ್ಚಿಟ್ಟು ಮೃಗಜಲವಾಗಿ ಹರಡಿಕೊಂಡು!
ಉಳಿದುಕೊಂಡ ನೀರವ ಮೌನ ಕುಸಿದು ಕುಳಿತು
ಕಣ್ಣಲಿ ಮಂಜುಮುತ್ತಿ ಅಕ್ಷರಗಳೆಲ್ಲ ಒದ್ದೆಯಾದವು!

ಬಂಜೆಯಾದ ಅಪ್ಪ ಕಪ್ಪು ಹೇಳಿದ ಅವ್ವ ತುಪ್ಪ ಸುರಿದ ಹಗಲು ಉರುಳಾದ ಹರೆಯ ಕರುಳು ಕತ್ತರಿಸಿದ ಒಡಲು ಹೇಳಿ ಹೋಗುವಾಗ

“ಹುಟ್ಟಬಾರದು ಹೆಣ್ಣಾಗಿ.!” ನೋವಿನ ದನಿಯನ್ನು
ನೆನಪಾಗಿ ನೆಟ್ಟು ಮೃಗಗಳಿಗಂಜಿ ಹೋದಳು!

ನಂಜುಂಡೇಶ್ವರ ಕಲ್ಲಾಗಿ ಅರಳದಾಯಿತು ಮಲ್ಲಿಗೆ ಕರುವಿನ ಕೊರಳ ಕಟ್ಟಿ ಹೆತ್ತ ಕರುಳು ಮೃಗವಾಯಿತು ಕತ್ತುಕೊಟ್ಟು ದಿಗಿಲಾಗಿ ಮುತ್ತು ಬಿದ್ದು ಮಣ್ಣಾಗಿ ಮುಳ್ಳುಹೊದೆಯೊಳಗೆ ಬೆಂಕಿ ಹೊಗೆಯಾಡಿತು!

ಬರಿದಾಯಿತು ಬಯಲು
ಒಣಗಿದ ಮರದಡಿಯಲಿ ಅವಳ ಸಮಾಧಿಯ ಮೇಲೆ ಬಾಡಿಹೋದ ಹೂವುಗಳು ಬಿಕ್ಕಳಿಸುತ್ತಿದ್ದವು!

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಭಾವ ಭೈರಾಗಿ

ಬದುಕಿನ ಬೆಳಕಾದ ನುಡಿ ‘ದೀವಟಿಗೆ’

Published

on

  • ಪರಶುರಾಮ್. ಎ

ದೀವಟಿಗೆ‘ ಎಂಬ ಕವನ ಸಂಕಲನವನ್ನು ಮೈ,ನಾ ಎಂಬ ಕಾವ್ಯ ನಾಮದಿಂದ ಮೈಸೂರಿನ ನಾರಾಯಣರವರು ಬರೆದಿರುವ ಪುಸ್ತಕ. ತಮ್ಮ ಮೊದಲ ಕವನ ಸಂಕಲನದಲ್ಲಿ ಪ್ರಬುದ್ಧ ವಿಷಯಗಳನ್ನು ತಮ್ಮದೇ ಸ್ವಂತ ಶೈಲಿಯಲ್ಲಿ ಕವನಗಳನ್ನು ಈ ಪುಸ್ತಕದ ಮೂಲಕ ಕನ್ನಡಿಗರಿಗೆ ಕಟ್ಟಿ ಕೊಟ್ಟಿದ್ದಾರೆ.

ತಮ್ಮ ಸಾಹಿತ್ಯ ಸ್ನೇಹಿತರ ಬಳಗದಿಂದ ಆಶಯ ನುಡಿಗಳಿಂದ ಪುಸ್ತಕಕ್ಕೆ ಮೆರುಗು ಸಹ ಹೆಚ್ಚಿಸಲಾಗಿದ್ದು, ಆಶಯಕಾರರ ನಂಬಿಕಸ್ಥ ಕವನಗಾರ ನಾರಾಯಣ್ ನಂಬಿಕೆ ಉಳಿಸಿಕೊಂಡಿದ್ದಾರೆ. ಈ ದೀವಟಿಗೆ ಪುಸ್ತಕದಲ್ಲಿ ಒಟ್ಟು ೮೫ ಕವನಗಳಿದ್ದು ಎಲ್ಲವೂ ಸಾಹಿತ್ತಾಸಕ್ತರ ಎದೆ ಮುಟ್ಟುವಲ್ಲಿ ಯಶಸ್ವಿಯಾಗಿದೆ. ಮೋದಕ ಪ್ರಿಯ ಗಣಪ ಎಂಬ ಭಕ್ತಿಯಿಂದ ಶುರುವಾದ ಕವನಗಳು ರಾಜಕೀಯ ವಿಡಂಬನೆ, ಕನ್ನಡ ಅಭಿಮಾನ. ಸಂಬಂಧಗಳ ಸಾರ.

ಸಮಾಜ ಪರ ಕಾಳಜಿ, ಬದುಕಿನ ನೋವು ನಲಿವು ದುಃಖ ದುಮ್ಮಾನಗಳ ಏರಿಳಿತದ ಸಮ್ಮೇಳನವಿದೆ. ಕವಿಗೆ ಕಣ್ಣಿಗೆ ಕಂಡದೆಲ್ಲವೂ ಕವಿತೆಯಾಗಲಾರದು ಹಾಗೇಯೆ ಅನುಭವಿ ಗ್ರಹಿಸಿದರೆ ಅವುಗಳನ್ನು ಹೂ ಮಾಲೆ ಕಟ್ಟುವ ರೀತಿಯಲ್ಲಿ ಪದಮಾಲೆ ವರ್ಣಮಾಲೆಯನ್ನಾಗಿಸಿದರೆ ಕವನ ಸಾರ್ಥಕ.

ವಿವೇಕದ ಈ ಹೊತ್ತಿನ ದೀವಟಿಗೆಯೇ ಆಗಿದೆ ಎನಬಹುದಾದ ತಾಕತ್ತು ಉಳ್ಳ ಪುಸ್ತಕ. ಪುಸ್ತಕದಲ್ಲಿ ಒಂದೊಂದು ಕವನಗಳು ಸಹ ತಮ್ಮ ತಾಕತ್ತಿನ ಕಳೆಯನ್ನು ಓದುಗರಿಗೆ ಅರಿವು ಮೂಡಿಸಲು ಪ್ರಯತ್ನಿಸುತ್ತದೆ. ಆ ಅರಿವನ್ನು ಕವಿ ತಮ್ಮ ಮೊನಚಾದ ಪದ ಬಳಕೆಯಿಂದ ಎಚ್ಚರಿಸುತ್ತ ಸಾಗುತ್ತಾನೆ. ನಾರಾಯಣರು ಕನ್ನಡದ ಕವಿತೆಗಳ ಮೂಲಕ ಹೊಸ ಬಗೆಯ ಕಾವ್ಯಕ್ಕೆ ಕೈ ಹಾಕಿದ್ದಾರೆಂದೆ ಹೇಳಬಹುದು.

ದೇವನಾಟ ಪದ್ಯದಲ್ಲಿ ಕವಿ
ಹಸುಳೆ ಕಂದನ ಅಗಲಿ ತಾ ಅಸುನೀಗಿಹಳಮ್ಮ ನಡುರಸ್ತೆಯಲ್ಲಿ, ಇದನೋಡಿ ಮಿಡಿಯುತಿಹರು ಜನ ತಮ್ಮ ಫೇಸ್‌ಬುಕ್ಕು, ವಾಟ್ಸಪ್ ಸ್ಟೇಟಸ್ ನಲ್ಲಿ!” ಎಂಬ ಮಾರ್ಮಿಕ ವಿಡಂಬನೆಯೊಂದಿಗೆ ನಾವು ಇನ್ನೊಬ್ಬರ ನೋವಿಗೆ ಈಗ ಹೇಗೆ ಸಂತೈಸುತ್ತಿದ್ದೇವೆ ಎಂಬ ಕುಹಕದೊಂದಿಗೆ ಕಠೋರ ಸತ್ಯವು ಇದೆ. ಒಬ್ಬ ಪ್ರೇಮಿಯ ಕನವರಿಕೆ ಇದೆ

ತುಡಿತ, ಮಿಡಿತ ಕಾತುರಗಳ ಸಮ್ಮಿಳತವಿದೆ. ಅಮ್ಮನ ಮುದ್ದಿನ ಮಗನ ಮಮಕಾರವಿದೆ, ಅಮ್ಮನಲ್ಲಿನ ದೈವತ್ವದ ಚಿಗುರಿದೆ, ಅಪ್ಪನ ಭಯಂಕರ ಗೌರವ ಸಮಭಾವಗಳಿವೆ, ಅಕ್ಕನ, ಸ್ನೇಹಿತರ ಸಲುಗೆಯ ಸಮ್ಮಿಶ್ರಿತ ಭಾವನೆಯ ನದಿ ತಳುಕಾಗಿ ಅಂಟಿದೆ. ಪದದಿಂದ ಪದಕ್ಕೆ ಎನ್ನುವ ಹಾಗೆ ಮನದಿಂದ ಮನಕ್ಕೆ ಇವರ ಕವನ ಮೊದಲ ಓದಿಗೆ ನಾಟುವಂತಿದೆ.

ಹೃದಯ ವಿಶಾಲತೆಗೆ ಸೆಲೆಬ್ರೆಟಿಯನ್ನು ಸಾಮಾನ್ಯ ಪ್ರಜೆಯಂತೆ “ಪ್ರತಿಯೊಬ್ಬರೂ ಸೆಲೆಬ್ರಿಟಿಗಳೇ ಪ್ರದರ್ಶಿಸುವ ಮೀಡಿಯಾಗಳಲ್ಲಿ ಅಲ್ಲ ತಮಗಾಗಿ ಮಿಡಿಯುವ ಹೃದಯಗಳಲ್ಲಿ” ಎಂಬ ನವೀನ ಸತ್ಯತೆಯ ಹೊಳಪು ಪುಸ್ತಕದ ಉದ್ದಕ್ಕೂ ಸಾಗುತ್ತದೆ.

ಒಟ್ಟಾರೆ ತಮ್ಮ ಚೊಚ್ಚಲ ಕವನ ಸಂಕಲನದಲ್ಲಿಯೇ ಇಷ್ಟು ಪ್ರಬುದ್ಧ ಕವನಗಳನ್ನು ಕನ್ನಡಿಗ ಓದುಗರಿಗೆ ‘ದೀವಟಿಗೆ‘ ಯಾಗಿ ಮೈ,ನಾ ಖ್ಯಾತಿಯ ನಾರಾಯಣರು ತಮ್ಮ ಕವನದ ಮೂಲಕ ಗಮನ ಸೆಳೆಯುತ್ತಾರೆ. ತಮ್ಮ ದೈಹಿಕ ಅಂಗವಿಕಲತೆಯನ್ನು ಮೆಟ್ಟಿ ನಿಂತ ಛಲಗಾರ, ಕನ್ನಡದ ಸಾಹಿತ್ಯಕ್ಕೆ ಮತ್ತಷ್ಟು ತಮ್ಮ ಕೈಲಾದ ಸಾಹಿತ್ಯ ಸೇವೆಯನ್ನು ಪೂರೈಸಲಿ ಎಂದು ಶುಭಾಶಯಗಳು ಕನ್ನಡಿಗರೆಲ್ಲರೂ ಕೋರುವ, ಇವರ ಪುಸ್ತಕ ಪಯಣ ಸಾಗಲಿ ಎಂದು ಆಶಿಸೋಣ.

ಸುದ್ದಿದಿನ.ಕಾಂ|ವಾಟ್ಸಪ್|9980346243

Continue Reading

Trending