Connect with us

ಭಾಮಿನಿ

SavE GirL ChiLD

Published

on

ನಮ್ಮದಲ್ಲದ ತಪ್ಪಿಗೆ ನಾವೇಕೆ ನೋವಿಗೀಡಾಗಬೇಕು !!?

ಯವಿಟ್ಟು ನನ್ನ ಸಾಯಿಸ್ಬೇಡಿ… ಅಪ್ಪ ನಾನು ಈ ಭೂಮಿನ ನೋಡ್ಬೇಕು ನಿಮ್ ಜೊತೆ ಬದುಕಬೇಕು , ನಿಮ್ಮ ಮಗಳಾಗಿ ದೊಡ್ಡ ಸಾಧನೆ ಮಾಡ್ಬೇಕು. ಅಮ್ಮ ನಾನು ನಿನ್ನ ಮಡಿಲಲ್ಲಿ ಮಲಗಿ ಅಮ್ಮನ ಪ್ರೀತಿನ ಅನುಭವಿಸಬೇಕು.ನಿಮ್ಮ ಮುದ್ದಿನ ಮಗಳಾಗಿ ಬೆಳಿಬೇಕು. ಪ್ಲೀಸ್ ಅಮ್ಮ ಪ್ಲೀಸ್ ಅಪ್ಪ ನನ್ನ ಸಾಯಿಸಬೇಡಿ. ಹೌದು ಹೊಟ್ಟೆಯೊಳಗೆ ಸಾವಿನಂಚಿನಲ್ಲಿರುವ ಹೆಣ್ಣು ಕಂದಮ್ಮನ ನೋವಿನ ದನಿಯಿದು.

ಹೌದು . ಹೆಣ್ಣು ಭ್ರೂಣ ಹತ್ಯೆ ಈ ಪದವನ್ನ ಕೇಳಿದ ತಕ್ಷಣ ಕರುಳು ಕಿತ್ತು ಬರುತ್ತದೆ.ಮತ್ತೊಂದೆಡೆ ರಕ್ತ ಕುದಿಯುತ್ತದೆ. ಇನ್ನೂ ಪ್ರಪಂಚಕ್ಕೆ ಕಾಲಿಡದ ಮಗುವನ್ನು ಹೊಟ್ಟೆಯಲ್ಲೇ ಸಾಯಿಸುವುದಕ್ಕಿಂತ ಹೇಯ ಕೃತ್ಯ ಬಹುಶಃ ಮತ್ತಾವುದೂ ಇಲ್ಲ.ಅಷ್ಟಕ್ಕೂ ಆ ಮಗುವಿನ ತಪ್ಪೇನು ? ಗಂಡು ಮಗುವೇ ಬೇಕೆಂಬ ಕುರುಡು ನಂಬಿಕೆಗೆ ಹೆಣ್ಣು ಮಗುವನ್ನು ಬಲಿಪಶು ಮಾಡುವುದು ಎಷ್ಟು ಸರಿ ? ಹೆಣ್ಣು ಭ್ರೂಣ ಹತ್ಯೆಗೆ ನೇರ ಮತ್ತು ಮುಖ್ಯ ಕಾರಣವೆಂದರೆ, ಹೆಣ್ಣು ಮಗುವನ್ನು ಸಮಾಜದಲ್ಲಿ ಒಂದು ಸಾಮಾಜಿಕ ಹೊರೆಯೆಂದೇ ಪರಿಗಣಿಸಲಾಗುತ್ತದೆ. ವರದಕ್ಷಿಣೆ ಕುಟುಂಬದ ಮಾರ್ಯಾದೆ, ಅವಳನ್ನು ಮದುವೆ ಮಾಡಿಕೊಡಬೇಕೆಂಬ ತಾಪತ್ರಯ ಇಂತಹ ಕೆಲವು ಸಣ್ಣ ಕಾರಣಗಳಿಂದ ಹೆಣ್ಣು ಮಗುವೇ ಬೇಡ ಎಂಬ ಕೆಟ್ಟ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ನಿಮಗೆ ಹೆಣ್ಣು ತಾಯಿಯಾಗಿ ,ತಂಗಿಯಾಗಿ, ಹೆಂಡತಿಯಾಗಿ ಬೇಕು. ಆದರೆ ಮಗಳಾಗಿ ಏಕೆ ಬೇಡ. ಅವಳೂ ನಿಮ್ಮ ಕರುಳ ಬಳ್ಳಿಯೇ ಅಲ್ವಾ .ಅಷ್ಟಕ್ಕೂ ನಮ್ಮದಲ್ಲದ ತಪ್ಪಿಗೆ ನಾವೇಕೆ ನೋವಿಗೀಡಾಗಬೇಕು !??
ಕೇವಲ ಹಿಂದಿನವರಷ್ಟೇ ಅಲ್ಲ ಇಂದಿನ ವಿದ್ಯಾವಂತರಲ್ಲೂ ಕೆಲವು ಮಂದಿ ಗಂಡು ಮಕ್ಕಳೇ ಬೇಕೆಂದು ಹೆಣ್ಣು ಭ್ರೂಣ ಹತ್ಯೆಗೆ ಮುಂದಾಗಿರುವುದು ವಿಷಾದನೀಯ.ಸಮಾನತೆ ಸಮಾನತೆ ಎಂದು ಬಾಯಿ ಬಡಿದುಕೊಳ್ಳುವವರೆಲ್ಲಾ ಹೆಣ್ಣು ಭ್ರೂಣ ಹತ್ಯೆ ತಡೆಯಲು ಏಕೆ ಮುಂದಾಗುತ್ತಿಲ್ಲ.. ಎಲೆಕ್ಷನ್ ಸಮಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಬಿಡುಗಡೆ ಮಾಡುವ ಪ್ರಣಾಳಿಕೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ನಿಷೇಧಿಸುವ ಅಂಶ ಅಷ್ಟು ಪರಿಣಾಮಕಾರಿಯಾಗಿ ಯಾಕೆ ಯಾವ ಪಕ್ಷದ ಪ್ರಣಾಳಿಕೆಯಲ್ಲೂ ಘೋಷಣೆಯಾಗಿಲ್ಲ ?
ಆಸ್ಪತ್ರೆಗಳಲ್ಲಿ ಮಗುವಿನ ಲಿಂಗ ಪತ್ತೆ ಹಚ್ಚುವಂತಿಲ್ಲ ಎಂಬ ಬೋರ್ಡ್ ಗಳು ರಾರಾಜಿಸುತ್ತಿವೆ. ಆದರೆ ನಿಜವಾಗಲೂ ಅಲ್ಲಿ ಲಿಂಗ ಪತ್ತೆ ಮಾಡುತ್ತಿಲ್ಲವಾ…!!! ನಾನು ಗರ್ಭಿಣಿ ಮಹಿಳೆಯೊಬ್ಬಳನ್ನು ತುಂಬಾ ಹತ್ತಿರದಿಂದ ಕಂಡಾಗ ಒಂದು ಕಟು ಸತ್ಯದ ಅರಿವಾಯ್ತು. ಸ್ಕ್ಯಾನಿಂಗ್ ಗೆಂದು ಬರುವ ಕೇಸ್ ಗಳಲ್ಲಿ ಕನಿಷ್ಠ 5 ಮಹಿಳೆಯಾರಾದರೂ ಯಾವ ಮಗು ಅಂತ ಹೇಳಿ ಡಾಕ್ಟ್ರೇ ಅಂತಾರೆ ಡಾಕ್ಟರ್ ಗಳಿಗೆ ದುಡ್ಡಿನ ಆಮಿಷ ಒಡ್ತಾರೆ ದಂಬಾಲು ಬೀಳ್ತಾರೆ – [ ಬಹುತೇಕ ನಿಷ್ಠಾವಂತ ಡಾಕ್ಟರ್ಸ್ ಈ ಆಮಿಷಗಳಿಗೆ ಒಳಗಾಗುವುದಿಲ್ಲ ಎಂಬುದಂತು ಸತ್ಯ – ಅವರ ಬಗ್ಗೆ ನನಗೆ ಅಪಾರ ಗೌರವವಿದೆ ] .ಯಾಕಂದ್ರೆ ಈ ಸಲಾನೂ ನಂಗೆ ಹೆಣ್ಣು ಮಗುನೇ ಆದ್ರೆ ನನ್ನ ಗಂಡ ಮನೆಗೆ ಸೇರಿಸೊಲ್ಲ ಅಂತ ಹೇಳ್ತಾರೆ.ಹಾಗಾದರೆ ಇಲ್ಲಿ ಗಂಡು ಮಗುವೇ ಬೇಕೆಂದು ಬಯಸುತ್ತಿರುವಳು ತಾಯಿಯಲ್ಲ. ಆಕೆಯ ಗಂಡ ಮತ್ತು ಆತನ ಕುಟುಂಬಸ್ಥರು ಎಂಬುದು ಸ್ಪಷ್ಟ. ಅಷ್ಟಕ್ಕೂ ಗಂಡು ಮಕ್ಕಳಿಗೆ ಯಾಕಿಷ್ಟು ಪ್ರಾಶಸ್ತ್ಯ ?? ಹೆಣ್ಣು ಮಕ್ಕಳು ಗಂಡು ಮಕ್ಕಳಿಗಿಂತ ಯಾವುದರಲ್ಲಿ ಕಮ್ಮಿ ಇದ್ದಾರೆ ಹೇಳಿ. ಎಲ್ಲಾ ಕ್ಷೇತ್ರಗಳಲ್ಲೂ ಗಂಡು ಮಕ್ಕಳನ್ನು ಮೀರಿಸಿ ಬೆಳೆದಿದ್ದಾರೆ. ಸಾಕಷ್ಟುಸಾಧನೆ ಮಾಡಿದ್ದಾರೆ.ಅಷ್ಟೇ ಯಾಕೆ ದೇಶದ ಪ್ರಥಮ ಪ್ರಜೆ ಅಂದರೆ ರಾಷ್ಟ್ರಪತಿಯಾಗಿ ಆಡಳಿತ ನಡೆಸಿ ಇಡೀ ದೇಶವೇ ಹುಬ್ಬೇರಿಸುವಂತೆ ಮಾಡಿದ್ದ ಶ್ರೀಮತಿ ಪ್ರತಿಭಾ ದೇವಿ ಸಿಂಗ್ ಪಾಟೀಲ್ ಕೂಡ ಓರ್ವ ಹೆಣ್ಣು ಮಗಳೇ ಅಲ್ವಾ ।…

ಹೆಣ್ಣು ಭ್ರೂಣ ಹತ್ಯೆ ತಡೆಯಲು ಹಲವು ಕಾನೂನುಗಳನ್ನು ಜಾರಿಗೆ ತರಲಾಗಿದೆ ಆದರೆ ಆ ಕಾನೂನುಗಳು ಅಷ್ಟು ಪರಿಣಾಮಕಾರಿಯಾಗಿ ಜಾರಿಯಾಗದೇ ಇರುವುದು ಲಿಂಗಾನುಪಾತದ ಅಸಮಾನತೆಗೆ ಕಾರಣವಾಗಿದೆ. ಪಿಸಿ ಪಿಎನ್ ಡಿಟಿ ಕಾಯ್ದೆಯ ಪ್ರಕಾರ ಭ್ರೂಣ ಪತ್ತೆ ಮಾಡುವುದು ಕಾನೂನು ಬಾಹಿರ.. ಭ್ರೂಣ ಲಿಂಗ ಪತ್ತೆ ಮಾಡಿದ ವೈದ್ಯರು ಹಾಗೂ ಲಿಂಗ ಪತ್ತೆಗೆ ಪ್ರೇರೇಪಿಸಿದ ಗರ್ಭಿಣಿ ಸ್ತ್ರೀಯ ಕುಟುಂಬ ವರ್ಗದವರು ಕಾನೂನಿನಡಿ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಮೊದಲ ಬಾರಿಯ ಅಪರಾಧಕ್ಕೆ 3 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ ದಂಡ ವಿಧಿಸಲಾಗುತ್ತದೆ .ಜೊತೆಗೆ ಲಿಂಗ ಪತ್ತೆ ಮಾಡಿದ ವೈದ್ಯರ ಹೆಸರನ್ನು 5 ವರ್ಷದ ಅವಧಿವರೆಗೆ ರಾಜ್ಯ ವೈದ್ಯಕೀಯ ಮಂಡಳಿಯಿಂದ ಅವರ ಸದಸ್ಯತ್ವವನ್ನು ರದ್ದು ಪಡಿಸಲಾಗುತ್ತದೆ. ಇಷ್ಟೆಲ್ಲಾ ಕಾನೂನುಗಳಿದ್ದರೂ ಹೆಣ್ಣು ಭ್ರೂಣ ಹತ್ಯೆಯನ್ನು ಸಂಪೂಣರ್ಣವಾಗಿ ತಡೆಯಲು ಸಾಧ್ಯವಾಗಿಲ್ಲ ಯಾಕೆಂದರೆ ಹೆಣ್ಣು ಭ್ರೂಣ ಹತ್ಯೆ ತಡೆಯುವಲ್ಲಿ ಕೇವಲ ಕಾನೂನು ಗಳಷ್ಟೇ ಸಾಲದು, ಜನರ ದೃಷ್ಟಿಕೋನವೂ ಬದಲಾಗಬೇಕು.ಹೆಣ್ಣು ಮಕ್ಕಳ ಕುರಿತು ಅವರಿಗಿರುವ ನಿಲುವುಗಳು ಬದಲಾಗಬೇಕು.ಈ ಕುರಿತು ಸಾಮಾಜಿಕ ಜಾಗೃತಿ ಮೂಡಿಸಬೇಕು.ಎಲ್ಲಿಯವರೆಗೆ ನಾವು ಗಂಡಿಗೆ ಸಮಾನವಾದ ಪ್ರಾಮುಖ್ಯತೆಯನ್ನು ಹೆಣ್ಣಿಗೆ ಕೊಡುವುದಿಲ್ಲವೋ ಅಲ್ಲಿಯವರೆಗೆ ಹೆಣ್ಣು ಭ್ರೂಣ ಹತ್ಯೆ ತಪ್ಪಿಸುವುದು ಸಾಧ್ಯವಿಲ್ಲದ ಮಾತು. ಹೀಗೆಯೇ ಹೆಣ್ಣುಭ್ರೂಣದ ಮಾರಣಹೋಮ ಮುಂದುವರಿದರೆ ಮುಂದೊಂದು ದಿನ ಗಂಡು ಮಗುವನ್ನ ಹೆರಲು ಹೆಣ್ಣು ಮಕ್ಕಳೇ ಇರುವುದಿಲ್ಲ !!
ಆದ್ದರಿಂದ ಬನ್ನಿ ನಾವೆಲ್ಲರೂ ಈ ಹೆಣ್ಣು ಭ್ರೂಣ ಹತ್ಯೆ ಪಿಡುಗಿನ ವಿರುದ್ಧ ಒಟ್ಟಾಗಿ ನಿಂತು ಹೋರಾಡೋಣ.
ಕೊನೆಯದಾಗಿ ಎಲ್ಲರಿಗೂ ನಾನು ಕೇಳಿಕೊಳ್ಳುವುದೇನೆಂದರ…

Dear parents, Girls are capable of doing anything, just let them to born
believe in your daughters, surely one day they will make u proud.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಭಾಮಿನಿ

ನಾನ್ವೆಜ್ ಹುಡ್ಗಿ, ಪುಲ್ಚರ್ ಹುಡ್ಗ..!

Published

on

  • ಆಕಾಶ ಪ್ರಿಯ

ಎಲ್ಲ ಹುಡುಗ್ರು ತಮ್ ಹುಡ್ಗಿನ ಅಟ್ರಾಕ್ಟ್ ಮಾಡೋಕೆ ತಾಜ್ಮಹಲ್ ಕಟ್ತೀನಿ, ಚಂದ್ರನ ತಂದುಕೊಡ್ತೀನಿ ಅಂತ ಹೇಳಿದ್ರೆ ನೀನು Like poles repels opposite poles attract ಅಂತ sciene law ಹೇಳಿ ನಿನ್ ಜೊತೆ ಲವ್ ಅಲಿ ಬೀಳೋತರ ಮಾಡ್ದೆ. ಹೀಗೂ ಲವ್ ಪ್ರಪೋಸ್ ಮಾಡ್ತಾರೆ ಅಂತ ನಂಗ್ ಗೊತ್ತೇ ಇರ್ಲಿಲ್ಲ. ಹಾಗ್ ನೋಡಿದ್ರೆ ನಮ್ಮಿಬ್ಬರ ಮಧ್ಯೆ ಭೂಮಿ ಆಕಾಶಕ್ಕಿರೊ ಅಷ್ಟು ಅಂತರ.

ಏನೂ ಮ್ಯಾಚ್ ಆಗಲ್ಲ, ‘ಟೀ’ ಇಂದ ದಿನ ಸ್ಟ್ರಾಟ್ ಮಾಡೋ ನಾನು ‘ಕಾಫಿ’ನೇ ಬೇಕು ಅನ್ನೋ ನೀನು, ಪುಳಿಯೋಗರೆ ಪ್ರೇಮಿ ನಾನು, ಪುಳಿಯೋಗರೆ ಹೆಸ್ರು ಕೇಳಿದ್ರೆ ಊಟನೆ ಬಿಡೋ ಆಸಾಮಿ ನೀನು. ನಾನ್ವೆಜ್ ಹುಡ್ಗಿ ನಾನು; ಪುಲ್ಚರ್ ಹುಡ್ಗ ನೀನು. ನಾನ್ ಸ್ಟಾಪ್ ಮಾತಾಡೋ ಹುಡುಗಿ ನಾನು, 10 ಮಾತಾಡಿದ್ರೆ ಒಂದು ಮಾತಾಡೋ silent ಹುಡ್ಗ ನೀನು. ಅಪ್ಪಟ ಕನ್ನಡದ ಹುಡುಗಿ ನಾನು, ಸ್ವಲ್ಪ ಜಾಸ್ತಿ ಕನ್ನಡ ಮಾತಾಡಿದ್ರೆ ನಂಗ್ ಕನ್ನಡ ಅಷ್ಟೊಂದ್ ಬರಲ್ಲ, ಅದೇನು ಅಂತ ಕೇಳೋ ನೀನೂ ಕನ್ನಡದ ಹುಡುಗಾನೆ ಅನ್ನೋ ಖುಷಿ ನಂಗೆ.

ನಮ್ಮಿಬ್ಬರು ಮಧ್ಯೆ ಕಾಫಿ ಟೀನೇ ಮ್ಯಾಚ್ ಆಗಲ್ಲ ಇನ್ನು ಜೀವನ ಮ್ಯಾಚ್ ಆಗುತ್ತಾ ಅಂದಾಗ ಕಾಫಿ ನೀವ್ ಮಾಡ್ಕೊಡಿ ನಿಮ್ಗೆ ಟೀ ನಾನ್ ಮಾಡ್ಕೊಡ್ತೀನಿ ಅಂತ ಸಿಂಪಲ್ ಸಜೇಶನ್ ಕೊಟ್ಟ ಹುಡ್ಗ, ಇವತ್ತು ನಂಜೊತೆ 7 ಹೆಜ್ಜೆ ಇಟ್ಟು ನನ್ ಸಂಗಾತಿ ಆಗಿದಿಯ ಅಂದ್ರೆ ಇದಕ್ಕಿಂತ ಬೇರೆ ಖುಷಿ ಏನಿದೆ ಹೇಳು. ಮನಸ್ಸಿಗೂ ಬದುಕಿಗೂ ನೀನೊಬ್ಬನೇ ಜೊತೆಗಾರ.

ನೀನ್ ಹೇಳಿದ್ ಆ science law ಇಷ್ಟ ಆದಷ್ಟೂ ಬಹುಶಃ ಯಾರ್ ಹೇಳಿದ್ ಯಾವ ಕವನ ಕೂಡ ಇಷ್ಟ ಆಗ್ಲಿಲ್ಲ ನಂಗೆ. ಅದ್ಕೆ ಯಾರಿಗೂ ಸೋಲದೇ ಇರೋ ಜಂಬದ್ ಹುಡ್ಗಿಗೆ ನಿಂಗೆ ಸೋಲದೇ ಇರೋಕೆ ಆಗ್ಲಿಲ್ಲ.

ನಿನ್ ಮೇಲೆ ಎಷ್ಟ್ ಕೋಪ ಬಂದ್ರೂ ಒಂದ್ ಸೆಕೆಂಡ್ ಕೂಡ ಆ ಕೋಪ ಇರೋದೇ ಇಲ್ಲ, ನೀನು ಅಷ್ಟೇ ಏನೇ ಆದ್ರೂ ನನ್ ಬಿಟ್ ಇರಲ್ಲ ಮಗು ತರ ಹುಡ್ಕೊಂಡ್ ಬರ್ತೀಯ ಇನ್ನೇನ್ ಬೇಕು ಹೇಳು ಸುಖ ಸಂಸಾರಕ್ಕೆ.

ನೋಡಿ ಮೈ ಡಿಯರ್ ಗಂಡ ನಿಂಜೊತೆ ಇನ್ನೂ ತುಂಬಾ ವರ್ಷ ಜೊತೇಲಿ ಇರ್ಬೇಕು ನಾನು, ಅಮ್ಮನ ಪೋಸ್ಟ್ ಗೆ ಪ್ರಮೋಷನ್ ತಗೋಬೇಕು, ಆಮೇಲೆ ಅತ್ತೆ ಪೋಸ್ಟ್, ಆಮೇಲೆ ಅಜ್ಜಿ ಪೋಸ್ಟ್ ಗೆ ಪ್ರೊಮೋಷನ್ ತಗೋಬೇಕು. ಸೋ ಇದೆಲ್ಲಾ ಆಗ್ಬೇಕು ಅಂದ್ರೆ ಆಯಸ್ಸು ಜಾಸ್ತಿ ಬೇಕಲ್ವಾ . ಅದ್ಕೆ ಇನ್ ಕೇಸ್ ಆ ಯಮ ಏನಾದ್ರು ಬೇಗ ಬರ್ತೀನಿ ಅಂದ್ರೆ ಯಮಂಗೇ influence ಮಾಡಿ ಡೆತ್ ಡೇಟ್ ನಾ ಪೋಸ್ಟ್ ಪೋನ್ ಮಾಡುಸ್ಕೊತಿನಿ.ಓಕೆ ನಾ! ಆದ್ರೆ ನೀವ್ ಯಾವತ್ತೂ ನನ್ ಬಿಟ್ ಹೊಗ್ಬಾರ್ದು, ನಾನೂ ಹೋಗಲ್ಲ.

ಬಾಳ ಸಂಗಾತಿ ಆದವ್ರು ನೋವು, ಸಮಸ್ಯೆ ಬಂದಾಗ ಫ್ರೆಂಡ್ಸ್ ತರ ಇರ್ಬೇಕಂತೆ. ಪ್ರೀತಿ ಬಂದಾಗ ಲವರ್ಸ್ ತರ ಇರ್ಬೇಕಂತೆ. ಆ ಪ್ರೀತಿ ಜಾಸ್ತಿ ಆದಾಗ ಗಂಡ ಹೆಂಡ್ತಿ ತರ ಇರ್ಬೇಕಂತೆ. ನಮ್ಮದೂ ಇದೇ ಪಾಲಿಸಿ. ಇಬ್ರು ಮಧ್ಯೆ ಎಲ್ಲ ಮ್ಯಾಚ್ ಆದ್ರೆ ಮಾತ್ರ ಚೆನ್ನಾಗಿರಬಹುದು ಅನ್ನೋದನ್ನ ನಾನ್ ಒಪ್ಪಲ್ಲ. ಯಾಕಂದ್ರೆ, ನಾನು ನೀನು ಓದಿರೋದೆ ಬೇರೆ ಒಂದಕ್ಕೊಂದು ಸಂಬಂಧವೇ ಇಲ್ಲ, ತಿನ್ನೋದ್ರಿಂದ ಹಿಡಿದು ಯಾವುದ್ರಲ್ಲೂ ಇಬ್ರುದು ಒಂದೇ ಟೇಸ್ಟ್ ಇಲ್ಲ

ನಿನ್ನ-ನನ್ನ ಆಸೆ ಕನಸು,ವಯಸ್ಸು,ಉದ್ಯೋಗ ಯಾವುದು ಮ್ಯಾಚ್ ಆಗಲ್ಲ, ಆದ್ರೂ ನಾನ್ ನಿಂಜೊತೆ ತುಂಬಾ ಖುಷಿಯಾಗಿದಿನಿ ಮಗು. ಯಾಕ್ ಹೇಳು ಲೈಫ್ ಪಾಟ್ನರ್ಸ್ ಒಬ್ರು ಟೇಸ್ಟ್ ನಾ ಒಬ್ರು ಇಷ್ಟ ಪಡದಿದ್ರು ಪರ್ವಾಗಿಲ್ಲ ಒಬ್ಬರಿಗೊಬ್ಬರು ಗೌರವಿಸ್ ಬೇಕು ಅದ್ಕೆ. ಭಾವನೆಗಳನ್ನ ಹೇಳ್ದನೇ ಅರ್ಥ ಮಾಡ್ಕೋಬೇಕು ಅಂತೇನೂ ಇಲ್ಲ, ಶೇರ್ ಮಾಡ್ಕೊಳೋ ಗುಣ ಇದ್ರೆ ಸಾಕು. ಜೀವನ ಖುಷಿ-ಖುಷಿಯಾಗಿರುತ್ತೆ.

ಅಷ್ಟಕ್ಕೂ ನಾನ್ ಯಾಕ್ ನಿಮ್ನ ಮಗು ಅಂತ ಕರೀತಿನಿ ಅಂದ್ರೆ ಪ್ರತೀ ಗಂಡಿಗೂ ತನ್ನ ಹೆಂಡ್ತಿ ಎರಡನೇ ತಾಯಿ ಆಗಿರ್ತಾಳಂತೆ, ಪ್ರತೀ ಹೆಣ್ಣಿಗೂ ತನ್ ಗಂಡ ಮೊದಲನೇ ಮಗು ಆಗಿರ್ತಾನಂತೆ. ಅದ್ಕೆ ಮಗು ನಿನ್ನ ಯಾವತ್ತೂ ಬಿಟ್ ಹೋಗಲ್ಲ.

ಈ ಪ್ರೇಮಿಗಳ ದಿನಕ್ಕೆ ನಾನ್ ನಿಂಗ್ ಹೇಳೋದ್ ಏನಂದ್ರೆ ಈ ಪ್ರಪಂಚದಲ್ಲಿ ಇದುವರೆಗೂ ನಿನ್ನ ಯಾರೂ ಇಷ್ಟ ಪಡದೆ ಇರೋ ಅಷ್ಟು, ಮುಂದೇನು ಇಷ್ಟ ಪಡೋಕೆ ಆಗದಿರೋ ಅಷ್ಟು ಇಷ್ಟ ಪಡ್ತೀನಿ. ಬರೀ ಗಂಡ ಆಗಿ ಅಲ್ಲ, ಮಗು ತರ ನೋಡ್ಕೋತೀನಿ ನಿನ್ನ ಕೊನೆವರೆಗೂ.
ಇಷ್ಟ, ಪ್ರೀತಿ, ಬದುಕು,ಇದಿಷ್ಟೂ ನೀನೇ.

ತುಂಬಾ ಲವ್ ಯು ಮಗು.
-ಇಂತಿ ನಿನ್ ಹೆಂಡ್ತಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಭಾಮಿನಿ

‘ನನ್ನದಲ್ಲದ ಪಾಕಿಸ್ತಾನಕ್ಕೆ ಹೋಗು’ ಎಂದವರಿಗೆ ನನ್ನ ಧಿಕ್ಕಾರವಿದೆ : ಗಾಯಕಿ‌ ಸುಹಾನ ಸಯ್ಯದ್

Published

on

ಗಾಯಕಿ‌ ಸುಹಾನ ಸಯ್ಯದ್
  • ಝೀ ಕನ್ನಡ ವಾಹಿನಿಯ ಸರಿಗಮಪ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸುಹಾನ ಸಯ್ಯದ್ ಅವರ ಹಾಡನ್ನು ನೀವೆಲ್ಲ ಕೇಳಿ ಆನಂದಿಸಿರುತ್ತೀರಿ. ಅವರು ಹಾಡಿದ ‘ನೀನೆ ರಾಮ, ನೀನೆ ಶ್ಯಾಮ, ನೀನೆ ಅಲ್ಲಾ , ನೀನೇ ಏಸು’ ಎಂಬ ಗೀತೆಗೆ ಮುಸ್ಲಿಂ ಸಂಪ್ರದಾಯವಾದಿಗಳಿಂದ ವಿರೋಧವೂ ವ್ಯಕ್ತವಾಗಿತ್ತು. ಈಗ ನಾವು ಹೇಳ ಹೊರಟಿರುವುದೇನೆಂದರೆ, ಕೇಂದ್ರ ಸರ್ಕಾರವು ಜಾರಿಮಾಡಿರುವ ಎನ್ ಆರ್ ಸಿ , ಮತ್ತು ಸಿಎಎ ಕುರಿತಾಗಿ ಪರ ಮತ್ತು ವಿರೋಧಗಳು, ಪ್ರತಿಭಟನೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಸುಹಾನ ಅವರಿಗೆ ಅವರ ಫೇಸ್ ಬುಕ್ ಪೇಜ್ ನಲ್ಲಿ ಕೆಲವರು ಮಾಡಿರುವ ಕಮೆಂಟುಗಳಿಗೆ ಬೇಸರ ವ್ಯಕ್ತಪಡಿಸಿ, ಪೇಜ್ ನಲ್ಲಿ ತಮ್ಮ ಸರ್ವಧರ್ಮ ಪ್ರೇಮವನ್ನು ವ್ಯಕ್ತ ಪಡಿಸುತ್ತಾ, ಈ ರೀತಿಯಾಗಿ ಬರೆದುಕೊಂಡಿದ್ದಾರೆ. ಓದಿ ಅಭಿಪ್ರಾಯ ತಿಳಿಸಿ.

ನಾನು ಹುಟ್ಟಿದ್ದು ಬೆಳೆದದ್ದು ಎಲ್ಲ ಹಳ್ಳಿಯಲ್ಲಿ ಇಡೀ ಊರಿಗೆ ಒಂದೇ ಮುಸ್ಲಿಂ ಕುಟುಂಬದ ಮೂರು ಮನೆಗಳು ಅಷ್ಟೇ , ಮಿಕ್ಕವರೆಲ್ಲ ಹಿಂದೂಗಳು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆಯುವಾಗ ಇದ್ದ ಸ್ನೇಹಿತರೆಲ್ಲರೂ ಹಿಂದೂಗಳೇ. ಎಂಬಿಎ ಪದವಿ ಮುಗಿಯುವ ತನಕ ಬೆಸ್ಟ್ ಫ್ರೆಂಡ್ ಅನಿಸಿಕೊಂಡವರು ಎಲ್ಲರೂ ಹಿಂದೂಗಳೇ. ಈಗಲೂ ಸಹ.

ನಮ್ಮ ಮನೆಯಲ್ಲಿ ಎಲ್ಲರೂ ಎಲ್ಲಾ ದೇವಸ್ಥಾನಗಳಿಗೂ ಹೋಗ್ತೀವಿ. ಹಿಂದೂ ಸಹೋದರರ ಎಲ್ಲಾ ಶುಭ ಸಮಾರಂಭಗಳಲ್ಲಿ ಭಾಗವಹಿಸುತ್ತೀವಿ. ಹಾಗೆಯೇ, ನಾಗರಪಂಚಮಿ ದೀಪಾವಳಿ ಊರ ಜಾತ್ರೆ ಬಂದಾಗ ದೇವರಿಗೆ ನಮ್ಮ ಮನೆಯಿಂದ ಹಣ್ಣುಕಾಯಿ ತಪ್ಪದೇ ಒಪ್ಪಿಸುತ್ತೇವೆ.

ನನ್ನ ಅಜ್ಜಿ ವರದಹಳ್ಳಿಯ ಶ್ರೀಧರ ಸ್ವಾಮಿಗಳನ್ನು ತುಂಬಾ ನಂಬುತ್ತಾ ಇದ್ರಂತೆ ನನಗೂ ಕೂಡ ಮನಸ್ಸಿಗೆ ತುಂಬಾ ಬೇಸರವಾದಾಗ ಅಪ್ಪನ ಹತ್ತಿರ ವರದಹಳ್ಳಿಗೆ ಮತ್ತೆ ದರ್ಗಾಕ್ಕೆ ಹೋಗಿ ಬರೋಣ ಅಪ್ಪಾ!! ಅಂತ ಅಂದರೆ ಸಾಕು,. ಅಮ್ಮ, ನಾನು ಬರ್ತೀನಿ ನಡಿ ಅಂತಾರೆ.

ನಾನು ನಮಾಜ್ ಮಾಡ್ತೀನಿ ರಂಜಾನ್ ಉಪವಾಸ ಮಾಡ್ತೀನಿ ತೀರ್ಥಪ್ರಸಾದ ನಾನು ತಗೊಳ್ತೀನಿ ಕುಂಕುಮ ಹಚ್ಚಿಕೊಳ್ಳುತ್ತೀನಿ, ಕ್ರಿಸ್ಮಸ್ ಹಬ್ಬಕ್ಕೆ ಅಪ್ಪ-ಅಮ್ಮ ನಾನು ತಮ್ಮ ಪ್ರತಿವರ್ಷ ತಪ್ಪದೆ ಚರ್ಚಿಗೆ ಹೋಗಿ ಕ್ಯಾಂಡಲ್ ಹಚ್ಚಿ ಪ್ರೇಯರ್ ಮಾಡಿ ಬರ್ತೀವಿ..

ನನ್ನ ತಂದೆ ತಾಯಿ ಇಬ್ಬರೂ ಪ್ರಾಥಮಿಕ ಶಾಲಾ ಶಿಕ್ಷಕರು ಜಾತಿ,ಧರ್ಮ ನೋಡದೆ ಮಕ್ಕಳಿಗೆ ಭಗವದ್ಗೀತೆಯ ಶ್ಲೋಕಗಳನ್ನು ಹೇಳಿ ಕೊಡ್ತಾರೆ,
ರಾಮಾಯಣ, ಮಹಾಭಾರತದ ಕಥೆಗಳನ್ನ ಹೇಳ್ತಾರೆ. ನಾನೂ ಕೂಡಾ ಭಗವದ್ಗೀತೆಯನ್ನು ಓದಿದೀನಿ‌.

ಬೆಳಗ್ಗೆ ಎದ್ದಾಗ ಕರಾಗ್ರೇ ವಸತೇ, ಮಧ್ಯಾಹ್ನ ಅನ್ನಪೂರ್ಣೇ ಸದಾಪೂರ್ಣೇ, ರಾತ್ರಿ ಮಲಗುವಾಗ ರಾಮಂ ಸ್ಕಂದಂ ಹನುಮಂತಂ ಶ್ಲೋಕಗಳನ್ನು ಹೇಳಿದೀನಿ. ಬರಿ ಜೀ ಕನ್ನಡ ವಾಹಿನಿಯಲ್ಲಿ ಮಾತ್ರ ನನ್ನ ನೋಡಿದ್ದೀರಿ ಹೊರತು,ನಾನು ಯಕ್ಷಗಾನ ಕಲಾವಿದೆ ಅನ್ನೋದು ಗೊತ್ತಾ? ಎಷ್ಟು ಬಾರಿ ಸಂಗೀತ ಸ್ಪರ್ಧೆಯಲ್ಲಿ ನನ್ನ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದೀನಿ ತಿಳಿದಿದೆಯಾ? ಸಂಗೀತದ ಮೇಲೆ ನನಗಿರುವ ಆಸಕ್ತಿ ಹಾಗು ಕನ್ನಡ ಸಾಹಿತ್ಯದ ಮೇಲೆ ನನಗಿರುವ ಪ್ರೀತಿ,ಗೌರವ ಗೊತ್ತಾ???

ನಾನು ರಂಗಸ್ಥಳಕ್ಕೆ ಹೋಗುವ ಮುನ್ನ ಗಣಪತಿ ಪೂಜೆ ಮುಗಿಸಿ ಹೆಜ್ಜೆ ಹಾಕಿದ್ದು, ನಾಟಕಕ್ಕೆ ಬಣ್ಣ ಹಚ್ಚಿ ಅಭಿನಯಿಸುವ ಮುನ್ನ ಆಂಗಿಕಂ ಭುವನಂ ಎಂದು ಹಾಡಿ ಶಿವನೆ ಸತ್ಯ ಎಂದು ನಂಬಿಯೇ ರಂಗದ ಮೇಲೆ ಹೋಗಿದ್ದು, ಪೂಜಾ ಕುಣಿತ ಮಾಡುವಾಗಲೂ ಕರಗವನ್ನು,, ತಾಯಿಯ ಪೂಜೆ ಮಾಡಿದ ಮೇಲೆಯೇ ತಲೆಯ ಮೇಲೆ ಹೊತ್ತಿದ್ದು.

ಇನ್ನು, ಚಿಕ್ಕಂದಿನಿಂದಲೂ ಭಗತ್ ಸಿಂಗ್ ನ ಆದರ್ಶಗಳನ್ನು ಪಾಲಿಸುತ್ತಾ ಬಂದ ನನಗೆ ಯಾವುದೇ ವಿಷಯವನ್ನು ಪ್ರಶ್ನಿಸದೆ ಅನಿವಾರ್ಯ ಎಂದು ಒಪ್ಪಿಕೊಳ್ಳುವ ಮನಸ್ಥಿತಿ ಇಲ್ಲ. ಯಾವುದೋ ಒಂದು ರಾಜಕೀಯ ಪಕ್ಷ ಅಥವಾ ರಾಜಕೀಯ ನಾಯಕನನ್ನು ನಾನು ಎಂದಿಗೂ ಪೂಜಿಸಿಲ್ಲ.

ಎಲ್ಲಾ ರಾಜಕೀಯ ಪಕ್ಷದವರು ಪರಿಸ್ಥಿತಿಗಳನ್ನು
ಉಪಯೋಗಿಸಿಕೊಂಡು ತಮ್ಮ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತಾರೆ ಎನ್ನುವ ಅರಿವು ನನಗಿದೆ. ಸರಿ ಮಾಡಿದರೆ ಸರಿ, ತಪ್ಪು ಮಾಡಿದವರು ಯಾರೇ ಆಗಿರಲಿ ಅದು ತಪ್ಪೇ.. !!!

ಯಾವುದೋ ಮಾತಿಗೆ ಸಂಬಂಧವಿಲ್ಲದ ನನ್ನ ತಂದೆ-ತಾಯಿಯನ್ನು ವಿಷಯಕ್ಕೆ ಎಳೆದು ಮಾತನಾಡುವ ನಿಮಗೆ ಸಿಕ್ಕಂತಹ ಸಂಸ್ಕಾರ, ನನ್ನ ತಂದೆ ತಾಯಿಯೂ ಕೊಟ್ಟಿಲ್ಲ, ನನಗೆ ವಿದ್ಯೆ ಹೇಳಿಕೊಟ್ಟ ಗುರುಗಳೂ ಕೊಟ್ಟಿಲ್ಲ.

ನನ್ನದಲ್ಲದ ಪಾಕಿಸ್ತಾನಕ್ಕೆ ಹೋಗು ಎಂದು ಕಾಮೆಂಟ್ ಮಾಡಿದವರ ಮೇಲೆ ಧಿಕ್ಕಾರ, ಪ್ರಚಾರಕ್ಕೆ ಈ ಮಾತನ್ನು ಆಡುತ್ತಿರುವೆ ಅನ್ನೋ ನಿಮ್ಮ ಈ ಸಂಕುಚಿತ ಮನೋಭಾವದ ಮೇಲೆ ಅತಿಯಾದ ಕನಿಕರ ಇದೆ.

ನಾನು ತಪ್ಪು ಎಂದಾದಲ್ಲಿ ನನಗೆ ತಿದ್ದಿಕೊಳ್ಳಲು ಏನೂ ಅಭ್ಯಂತರವಿಲ್ಲ, ಹಾಗಾಗಿ ನಾನು ಹೇಳಿದ ಮಾತು ತಪ್ಪು ಅಂತ ಅನ್ನಿಸಿದ ಮೇಲೆಯೂ ಗೌರವ ಮತ್ತು ಪ್ರೀತಿಯಿಂದ ಮಾತನಾಡಿರುವ ನನ್ನ ನಿಜವಾದ ಹಿಂದೂ ಸಹೋದರರ ಮೇಲೆ ಅತಿಯಾದ ಗೌರವ ಕೂಡಾ ಇದೆ..

ಏನು ಸಾಧನೆ ಮಾಡದೆ ನಾಲ್ಕು ಜನರಿಗೆ ಒಳ್ಳೆಯದನ್ನು ಮಾಡದೆ ಫೇಸ್ಬುಕ್ನಲ್ಲಿ 24ಗಂಟೆ ಆಕ್ಟಿವ್ ಇದ್ದು, ಬಸ್ ಸ್ಟ್ಯಾಂಡ್ ಗಳಲ್ಲಿ ಕೂತು ಹರಟೆ ಹೊಡೆದು ಭೂಮಿಗೆ ಭಾರವಾಗಿರುವ ನೀವು , ಮೊದಲು ನಿಮ್ಮ ಯೋಗ್ಯತೆಯನ್ನು ತಿಳಿದು ನಂತರ ಬೇರೆಯವರ ಯೋಗ್ಯತೆಯ ಬಗ್ಗೆ ಕಾಮೆಂಟ್ ಮಾಡಿ..

ಇನ್ನು ದಾಖಲೆಗಳ ವಿಚಾರ ಬಂದರೆ ನನ್ನ ಬಳಿ ಹಾಗೂ ನನ್ನ ಕುಟುಂಬದವರ ಬಳಿ ಎಲ್ಲಾ ದಾಖಲೆಗಳು ಇವೆ ಆದರೆ ನಾನು ಪ್ರಶ್ನಿಸಿದ್ದು ನೀವು ಹೇಳಿರುವ ಐಡಿ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಪಾಸ್ಪೋರ್ಟ್ ಯಾವುದೇ ಆಧಾರಗಳಿಲ್ಲದೆ ಹೊಟ್ಟೆಗೆ ತಿನ್ನಲು ಅನ್ನ ಇಲ್ಲದೆ ಹಾಗೂ ಯಾವುದೇ ಸೌಕರ್ಯಗಳನ್ನು ನಂಬಿ ಬದುಕದ, ಭಾರತದ ಮೂಲ ನಿವಾಸಿಗಳಾದ ಕೆಲವು, ಬುಡಕಟ್ಟು ಹಾಗೂ ಅಲೆಮಾರಿ ಜನಗಳ ಪರವಾಗಿ ( ಎಲ್ಲಾ ಧರ್ಮಗಳನ್ನು ).

ನೀವು ಹೇಳಿದಂತೆ ನಿಜವಾಗಿಯೂ ಇವರಾರಿಗೂ ತೊಂದರೆ ಇಲ್ಲ ಎಂತಾದರೆ ನನಗೂ ನಿಮಗೂ ಹಾಗೂ ಎಲ್ಲರಿಗೂ ಸಂತೋಷದ ವಿಚಾರ. ಎಂದು ಬರೆದುಕೊಂಡಿದ್ದಾರೆ ಸುಹಾನ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಭಾಮಿನಿ

ಮಹಿಳೆಯರ ಮೇಲೆ ದೌರ್ಜನ್ಯಗಳನ್ನು ತಡೆಯುವುದು ಹೇಗೆ?

Published

on

ಹೈದರಾಬಾದ್ ಅಪರಾಧದಂತಹ ಭೀಭತ್ಸ ಪ್ರಕರಣದಲ್ಲಿ ಸಾರ್ವಜನಿಕ ಆಕ್ರೋಶ ಮತ್ತು ಅಸಹನೆ ಕಟ್ಟೊಡೆದು ಬರುವುದು ಸ್ವಾಭಾವಿಕ ಮತ್ತು ಸಕಾರಣವೇ ಆಗಿದೆ. ಆದರೆ ಮಹಿಳೆಯರ ಮೇಲೆ ಇಂಥ ಭೀಕರ ಅಪರಾಧಗಳು ಜರುಗದಂತೆ, ಹಾಗೂ ಮಹಿಳೆಯರು ಮತ್ತು ಮಕ್ಕಳ ಸುರಕ್ಷಿತತೆ ಖಾತ್ರಿಗೊಳಿಸಲು ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಬೇಕಾಗಿದೆ. ಮಹಿಳೆಯರ ವಿರುದ್ಧ ಲೈಂಗಿಕ ಹಿಂಸಾಚಾರದ ವಿರುದ್ಧ ಹೋರಾಟಗಳನ್ನು ಬಹು ಆಯಾಮಗಳಲ್ಲಿ ನಡೆಸಬೇಕಾಗಿದೆ.

ಪುರುಷಪ್ರಾಧಾನ್ಯ ಮತ್ತು ಸ್ರೀದ್ವೇಷದ ವಿರುದ್ಧ, ಮಹಿಳೆಯರನ್ನು ಸರಕಾಗಿ ಬಿಂಬಿಸುವುದರ ವಿರುದ್ಧ ಹೋರಾಟಗಳು, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಹಕ್ಕು ಮತ್ತು ಚಟುವಟಿಕೆಗಳನ್ನು ವಿಸ್ತರಿಸುವ ಸತತ ಹೋರಾಟಗಳನ್ನು ನಡೆಸಬೇಕಾಗಿದೆ. ತಕ್ಷಣದ ಕಾರ್ಯಭಾರವಂತೂ ಮಹಿಳೆಯರ ವಿರುದ್ಧ ಎಲ್ಲಾ ಅಪರಾಧದ ಪ್ರಕರಣಗಳಲ್ಲಿ ತ್ವರಿತ ವಿಚಾರಣೆ ಮತ್ತು ಶಿಕ್ಷೆಯನ್ನು ಖಾತ್ರಿಪಡಿಸುವುದು ಆಗಿದೆ.
ಪ್ರಕಾಶ ಕಾರಟ್

ಹೈದರಾಬಾದಿನ ಹೊರವಲಯದಲ್ಲಿ ಪಶುವೈದ್ಯೆಯಾಗಿರುವ 27 ವರ್ಷದ ಮಹಿಳೆಯ ಗ್ಯಾಂಗ್ ರೇಪ್ ಮತ್ತು ಕೊಲೆ, ನಮ್ಮ ದೇಶದಲ್ಲಿ ಮಹಿಳೆಯರು ಪ್ರತಿದಿನ ಎದುರಿಸುತ್ತಿರುವ ಹಿಂಸಾಚಾರವದ ಭೀಕರತೆಯನ್ನು ಮತ್ತೆ ಚಿತ್ರಿಸಿದೆ. ಈ ಅಪರಾಧದಲ್ಲಿ ಕಂಡು ಬಂದ ಮೃಗೀಯತೆ ಮತ್ತು ಕ್ರೌರ್ಯದ ವಿರುದ್ಧ ದೇಶದಾದ್ಯಂತ ತೀವ್ರ ಆಕ್ರೋಶ ಮತ್ತು ಪ್ರತಿಭಟನೆ ಕಟ್ಟೊಡೆದು ಬಂದಿದೆ.

ಹೈದರಾಬಾದ್ ಪ್ರಕರಣದ ನಂತರ ಮತ್ತು ಮೊದಲು sಗಳ ಪ್ರಕರಣಗಳ ವರದಿಗಳಿಂದ, ಇದೊಂದು ಪ್ರತ್ಯೇಕ ಪ್ರಕರಣವಲ್ಲ ಎಂಬುದು ಸ್ಪಷ್ಟವಾಗಿದೆ. ರಾಂಚಿಯಲ್ಲಿ ತನ್ನ ಸ್ನೇಹಿತೆಯೊಂದಿಗಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ ಗ್ಯಾಂಗ್ ರೇಪ್ ಮಾಡಲಾಗಿದೆ. ರಾಜಸ್ಥಾನದ ಟೊಂಕ್‌ನಲ್ಲಿ ಶಾಲೆಯಿಂದ ಮರಳುತ್ತಿದ್ದ 6 ವರ್ಷದ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯವೆಸಗಿ, ಅವಳ ಶಾಲಾ ಯುನಿಫೋರ್ಮಿನ ಬೆಲ್ಟ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ.

ಇವು ಹೈದರಾಬಾದ್ ಪ್ರಕರಣದ ಮೊದಲ ಘಟಿಸಿದರೆ, ಅದರ ಮರುದಿನ ಕೊಯಂಬತ್ತೂರಿನಲ್ಲಿ 11ನೇ ತರಗತಿಯ ವಿದ್ಯಾರ್ಥಿನಿಯನ್ನು ಅಪಹರಿಸಿ ಗ್ಯಾಂಗ್ ರೇಪ್‌ಗೆ ಗುರಿ ಮಾಡಲಾಗಿದೆ. ದೇಶದಾದ್ಯಂತ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲೆ ಇಂತಹ ಭೀಕರ ದಾಳಿಗಳು ವ್ಯಾಪಕವಾಗಿ ನಡೆಯುತ್ತಿವೆ.

ಹೈದರಾಬಾದ್ ಪ್ರಕರಣವು ಡಿಸಂಬರ್ 2012ರ ದೆಹಲಿಯ ದಂಗು ಬಡಿಸಿದ ನಿರ್ಭಯಾ ಪ್ರಕರಣವನ್ನು ನೆನಪಿಸುವಂತಿದೆ. ಏಳು ವರ್ಷಗಳ ನಂತರವೂ ಮಹಿಳೆಯರ ಸುರಕ್ಷಿತತೆಯ ಅಭಾವದ ಭಯಾನಕ ಸ್ಥಿತಿ ಕಿಂಚಿತ್ತೂ ಉತ್ತಮಗೊಂಡಂತ್ತಿಲ್ಲ.

ಹೈದರಾಬಾದ್ ಅಪರಾಧ ಎಬ್ಬಿಸಿರುವ ಆಕ್ರೋಶ ಮತ್ತು ಸಿಟ್ಟಿನಲ್ಲಿ, ಪಾರ್ಲಿಮೆಂಟಿನಲ್ಲಿ ಮತ್ತು ಹೊರಗೂ ಅತ್ಯಾಚಾರದ ಅಪರಾಧಿಗಳಿಗೆ ಇನ್ನೂ ಸಾರ್ವಜನಿಕ ನೇಣು, ನಿರ್ಬಿಜೀಕರಣ ಮುಂತಾದ ಇನ್ನೂ ಹೆಚ್ಚಿನ ಕಠಿಣ ಶಿಕ್ಷೆ ಕೊಡಬೇಕು ಎಂಬ ಒತ್ತಾಯಗಳು ಕೇಳಿ ಬಂದಿವೆ.

ಇಂತಹ ಭೀಭತ್ಸ ಪ್ರಕರಣದಲ್ಲಿ ಸಾರ್ವಜನಿಕ ಆಕ್ರೋಶ ಮತ್ತು ಅಸಹನೀಯತೆ ಕಟ್ಟೊಡೆದು ಬರುವುದು ಸ್ವಾಭಾವಿಕ ಮತ್ತು ಸಕಾರಣವೇ ಆಗಿದೆ. ಆದರೆ ಮಹಿಳೆಯರ ಮೇಲೆ ಇಂಥ ಭೀಕರ ಅಪರಾಧಗಳು ಜರುಗದಂತೆ, ಹಾಗೂ ಮಹಿಳೆಯರು ಮತ್ತು ಮಕ್ಕಳ ಸುರಕ್ಷಿತತೆ ಖಾತ್ರಿಗೊಳಿಸಲು ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಬೇಕಾಗಿದೆ.

ಲೋಕಸಭೆಯಲ್ಲಿ ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ಮತ್ತು ರಾಜ್ಯಸಭೆಯ ಮುಖ್ಯಸ್ಥ, ಮಹಿಳೆಯರ ಮೇಲೆ ಜರುಗುವ ಅಪರಾಧಗಳಿಗೆ ಇನ್ನಷ್ಟು ಕಠಿಣ ಶಿಕ್ಷೆ ವಿಧಿಸುವ ಎಲ್ಲಾ ಸಲಹೆ-ಸೂಚನೆಗಳನ್ನು ಪರಿಶೀಲಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಆದರೆ ನಮ್ಮ ಸಮಾಜವನ್ನು ಬಾಧಿಸುತ್ತಿರುವ ಈ ಭೀಕರ ಸಮಸ್ಯೆಗೆ ಇದು ಪರಿಹಾರವೇ? ನಿರ್ಭಯಾ ಪ್ರಕರಣದ ನಂತರ, ಅತ್ಯಾಚಾರ ಮತ್ತು ಕೊಲೆಯ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಯನ್ನು ಈಗಾಗಲೇ ವಿಧಿಸಲಾಗಿದೆ. 12 ವರ್ಷದ ಕೆಳಗಿನ ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಬದಲಾವಣೆಗಳನ್ನು ಮೋದಿ ಸರಕಾರ ತಂದಿದೆ.

ಆದರೆ ಸಮಸ್ಯೆಯಿರುವುದು ಕಾನೂನಿನಲ್ಲಿ ಎಷ್ಟು ಕಠಿಣ ಶಿಕ್ಷೆ ವಿಧಿಸಲಾಗಿದೆ ಎಂಬುದರಲ್ಲಿ ಅಲ್ಲ. ಬದಲಾಗಿ ನ್ಯಾಯ ವ್ಯವಸ್ಥೆ ಎಷ್ಟು ತ್ವರಿತವಾಗಿ ಅಪರಾಧದ ತನಿಖೆ, ವಿಚಾರಣೆ ನಡೆಸಿ ಶಿಕ್ಷೆಯ ತೀರ್ಪುಕೊಡಬಲ್ಲುದು ಎಂಬುದರಲ್ಲಿದೆ.

ರಾಷ್ಟ್ರೀಯ ಅಪರಾಧ ಸಂಶೋಧನೆ ಬ್ಯೂರೊದ 2017ರ ವರದಿಯ ಪ್ರಕಾರ, ಮಕ್ಕಳ ಮೇಲೆ ಅತ್ಯಾಚಾರ ಸೇರಿದಂತೆ ಅತ್ಯಾಚಾರದ ಪ್ರಕರಣಗಳು ತೀವ್ರ ವಿಳಂಬ ಎದುರಿಸುತ್ತಿವೆ. ಹಿಂದಿನ ವರ್ಷಗಳ 1.17 ಲಕ್ಷ ಪ್ರಕರಣಗಳು ಇತ್ಯರ್ಥವಾಗಿಲ್ಲ. 2017ರಲ್ಲಿ ತೀರ್ಪು ಬಂದ 18,099 ಪ್ರಕರಣಗಳಲ್ಲಿ ಕೇವಲ 5,822 ಅಂದರೆ ಶೇ. 23.2 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ.

ಅಪರಾಧಕ್ಕೆ ತ್ವರಿತ ಮತ್ತು ಖಾತ್ರಿ ಶಿಕ್ಷೆಯಾಗುತ್ತದೆ ಎಂಬುದು ಮಾತ್ರ ಅಪರಾಧವನ್ನು ತಡೆಯಬಲ್ಲುದು. ಕಾನೂನು ಪುಸ್ತಕಗಳಲ್ಲಿ ಕಠಿಣ ಶಿಕ್ಷೆ ಸೇರಿಸುತ್ತಾ ಹೋಗುವುದರಿಂದ ಅಪರಾಧಗಳನ್ನು
ತಡೆಯಲಾಗುವುದಿಲ್ಲ.

ಅತ್ಯಾಚಾರ ಸಂಸ್ಕೃತಿ ಮತ್ತು ಮಹಿಳೆಯರ ವಿರುದ್ಧ ಅಪರಾಧಗಳ ಬಗ್ಗೆ ನಿರ್ಭಯಗಳ ಮೂಲ, ಭಾರತೀಯ ಸಮಾಜದಲ್ಲಿ ಬೇರು ಬಿಟ್ಟಿರುವ ಪುರುಷಪ್ರಧಾನ ಮತ್ತು ಸ್ತ್ರೀದ್ವೇಷದ ಸಾಮಾಜಿಕ ಮೌಲ್ಯಗಳಲ್ಲಿದೆ. ಪುರುಷಪ್ರಧಾನ ಸಮಾಜದಲ್ಲಿ ಮಹಿಳೆಯನ್ನು ಅಡಿಯಾಳಾಗಿರಿಸುವುದ ಜತೆಗೆ, ನಮ್ಮ ಸಮೂಹ ಮಾಧ್ಯಮ ಮತ್ತು ಮನೋರಂಜನಾ ಉದ್ಯಮಗಳಲ್ಲಿ ಮಹಿಳೆಯರನ್ನು ಕಾಮದ ಗೊಂಬೆಯಾಗಿ ಚಿತ್ರಿಸುವ ಮಾರುಕಟ್ಟೆ ಮತ್ತು ಉಪಭೋಗ ಮೌಲ್ಯಗಳು ಇದನ್ನು ಬೆಳೆಸುತ್ತಿವೆ.

ಮಹಿಳೆಯರ ಸಮಾನತೆ ಮತ್ತು ಸ್ವಾಯತ್ತತೆಯನ್ನು ಮನ್ನಿಸಲು ನಿರಾಕರಣೆಯು, ನಮ್ಮ ಸಾಮಾಜಿಕ, ಧಾರ್ಮಿಕ ಮತ್ತು ಕೌಟುಂಬಿಕ ಕಟ್ಟು-ಕಟ್ಟಳೆಗಳಲ್ಲಿ ಆಳವಾಗಿ ಹುದುಗಿದೆ.

ಮಹಿಳೆಯರ ವಿರುದ್ಧ ಅಪರಾಧಗಳು ಜಗತ್ತಿನಾದ್ಯಂತ ಅದರಲ್ಲೂ ವಿಶೇಷವಾಗಿ ಭಾರತದಂತಹ ಪರಿಸ್ಥಿತಿ ಇರುವ ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ – ಹೆಚ್ಚುತ್ತಿವೆ. ಪುರುಷಪ್ರಾಧಾನ್ಯ ಮತ್ತು ಪುರುಷಯಜಮಾನಿಕೆಗಳು ಅತಿಯಾಗಿದ್ದು, ಜತೆಗೆ ಜನಾಂಗೀಯ ಮತ್ತು ಜಾತಿ ಶ್ರೇಣಿಗಳು ಈ ಮೂರೂ ಪ್ರಮುಖ ವಿಕಾಸಶೀಲ ದೇಶಗಳಲ್ಲಿ ಸೇರಿಕೊಂಡಿವೆ.

ಲೂಟಿಕೋರ ಬಂಡವಾಳಶಾಹಿಯಿಂದಾಗಿ ಆರ್ಥಿಕವಾಗಿಯೂ ಇವು ಅತ್ಯಂತ ಅಸಮಾನ ಸಮಾಜಗಳು. ದಕ್ಷಿಣ ಆಫ್ರಿಕಾದಲ್ಲಿ 3000 ಮಹಿಳೆಯರು ಕೊಲೆಯಾಗಿದ್ದಾರೆ. ಹೆಚ್ಚಿನ ಪ್ರಕರಣಗಳಲ್ಲಿ ಅವರ ಮೇಲೆ ಕೊಲೆಯ ಮೊದಲು ಭೀಕರ ದಾಳಿ ಅಥವಾ ಅತ್ಯಾಚಾರ ನಡೆದಿದೆ.

ಇದೇ ಸೆಪ್ಟೆಂಬರಿನಲ್ಲಿ ಕೇಪ್ ಟೌನಿನ 19 ವರ್ಷದ ವಿ.ವಿ. ವಿದ್ಯಾರ್ಥಿನಿಯ ರೇಪ್ ಮತ್ತು ಕೊಲೆಯ ವಿರುದ್ಧ, ದೇಶದಾದ್ಯಂತ ಪ್ರತಿಭಟನೆ ನಡೆದಿತ್ತು. ಮಹಿಳೆಯ ವಿರುದ್ಧ ಅಪರಾಧಗಳು ಒಂದು ರಾಷ್ಟ್ರೀಯ ಬಿಕ್ಕಟ್ಟು ಆಗಿದೆ ಎಂದು ಅಧ್ಯಕ್ಷ ರಾಮಫೋಸ ಒಪ್ಪಿಕೊಳ್ಳಬೇಕಾಗಿ ಬಂದಿತ್ತು.

ಬ್ರೆಜಿಲಿನಲ್ಲಿ ಮಹಿಳೆಯರ ವಿರುದ್ಧ ಅಪರಾಧ ಎಷ್ಟು ವ್ಯಾಪಕವಾಗಿದೆಯೆಂದರೆ, ಸಾರ್ವಜನಿಕ ಸುರಕ್ಷಿತತೆಗಾಗಿ ಬ್ರೆಜಿಲ್ ವೇದಿಕೆ ನಡೆಸಿದ ಸಮೀಕ್ಷೆಯಲ್ಲಿ ಪ್ರತಿ ಗಂಟೆಯಲ್ಲಿ 13 ವರ್ಷದ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳು ರೇಪ್ ಗೆ ಒಳಗಾಗುತ್ತಾರೆ ಎಂಬ ಭೀಕರ ವಾಸ್ತವವನ್ನು ಹೊರಗೆಡಹಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾಗಳಂತೆ ಬ್ರೆಜಿಲ್ ಸಹ ಅತ್ಯಂತ ಅಸಮಾನ ಸಮಾಜವಾಗಿದೆ.

ಅಲ್ಲಿ ಪುರುಷಪ್ರಾಧಾನ್ಯ ಮತ್ತು ಪುರುಷ-ಹೆಚ್ಚುಗಾರಿಕೆಯ ಭಾವನೆ ಅತ್ಯಂತ ತೀವ್ರ ರೂಪದಲ್ಲಿದೆ. ಮಹಿಳೆಯರ ಬಗ್ಗೆ ಹಿಂದುತ್ವದ ಪುರುಷಪ್ರಾಧಾನ್ಯ ಮತ್ತು ಗೋಸುಂಬೆತನದಂತೆ, ಅಧ್ಯಕ್ಷ ಬೊಲ್ಸೆನಾರೊ ಅವರ ಬಲಪಂಥೀಯ ಸರಕಾರ ಮಹಿಳೆಯರ ಹಕ್ಕುಗಳ ಬಗ್ಗೆ ಅತ್ಯಂತ ಪ್ರತಿಗಾಮಿ ಧೋರಣೆ ಹೊಂದಿದೆ.

ಮಹಿಳೆಯರ ಮೇಲೆ ದಾಳಿಗಳನ್ನು ವಿಶ್ಲೇಷಿಸುವಾಗ ಅವುಗಳನ್ನು ಇನ್ನಷ್ಟು ಉದ್ರೇಕಿಸುವ ಸಾಮಾಜಿಕ ಮತ್ತು ಆರ್ಥಿಕ ಅಂಶಗಳನ್ನು ಗಮನಿಸಬೇಕು.

ಹೆಣ್ಣುಮಕ್ಕಳು ಮತ್ತು ಮಹಿಳೆಯರನ್ನು ಸಮಾನರಾಗಿ ಕಾಣುವಂತೆ ಮತ್ತು ಅವರ ಸ್ವಾಯತ್ತತೆಯನ್ನು ಗೌರವಿಸುವಂತೆ, ಶಿಕ್ಷಣ ಸಂಸ್ಥೆಗಳಲ್ಲಿ ಹುಡುಗರು ಮತ್ತು ಗಂಡಸರಿಗೆ ಶಿಕ್ಷಣ ನೀಡಲು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ಇದರಿಂದ ಮಾತ್ರವೇ ಮಹಿಳೆಯರ ವಿರುದ್ಧ ಹಿಂಸಾಚಾರವನ್ನು ಪೋಷಿಸುವ ಪ್ರತಿಗಾಮಿ ಮೌಲ್ಯಗಳನ್ನು ಬದಲಾಯಿಸಲು ಸಾಧ್ಯ. ಆಗ ಮಾತ್ರ ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಲಿಂಗ ಸಮಾನತೆ ಖಾತ್ರಿಗೊಳಿಸಬಹುದು.

ನಿರ್ಭಯಾ ಪ್ರಕರಣದ ನಂತರ ನೇಮಿಸಲಾದ ನ್ಯಾಯಮೂರ್ತಿ ವರ್ಮಾ ಸಮಿತಿಯ ಹೆಚ್ಚಿನ ಶಿಫಾರಸುಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿ ಮಾಡುವುದರಲ್ಲಿ ವಿಫಲವಾಗಿರುವುದು ಸಹ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಅಸುರಕ್ಷಿತತೆಗೆ ಕಾರಣವಾಗಿದೆ. ಸುರಕ್ಷಿತ ಸಾರ್ವಜನಿಕ ಸಾಗಾಣಿಕೆ, ಬೀದಿ ದೀಪಗಳ ನಿರ್ವಹಣೆ, ಅಸುರಕ್ಷಿತ ಸ್ಥಳಗಳನ್ನು ಗುರುತಿಸಿ ಹೆಚ್ಚಿನ ಪೋಲಿಸ್ ಗಸ್ತು ಒದಗಿಸುವುದು ಮುಂತಾದ ಕ್ರಮಗಳನ್ನು ಆ ಸಮಿತಿ ಶಿಫಾರಸು ಮಾಡಿತ್ತು.

ಹಲವು ಸರಕಾರಗಳ ಸಚಿವರು, ಚುನಾಯಿತ ಪ್ರತಿನಿಧಿಗಳು ಮಹಿಳೆಯರನ್ನು ಕೀಳಾಗಿ ಕಾಣುವ ಅಥವಾ ಮಹಿಳೆಯರ ವಿರುದ್ಧ ಅಪರಾಧಗಳನ್ನು ಕ್ಷುಲ್ಲಕಗೊಳಿಸುವ ಹೇಳಿಕೆಗಳನ್ನು ಪದೇ ಪದೇ ಮಾಡುತ್ತಿದ್ದಾರೆ. ಮಹಿಳೆಯರ ಮೇಲೆ ಹಲವು ಹಂತಗಳಲ್ಲಿ ಭೀಕರ ದಾಳಿಗಳನ್ನು ನೆಪವಾಗಿಟ್ಟುಕೊಂಡು, ಸಾಂಪ್ರದಾಯಿಕ ಶಕ್ತಿಗಳು ಮಹಿಳೆಯರನ್ನು ಸಾರ್ವಜನಿಕ ಸ್ಥಳಗಳಿಗೆ ಹೊಗದಂತೆ ನಿರ್ಬಂಧಗಳನ್ನು ಹೇರಬೇಕು ಮತ್ತು ಮನೆಗೆ ಸೀಮಿತಗೊಳಿಸಬೇಕು ಎಂದು ವಾದಿಸುತ್ತಿದ್ದಾರೆ. ಈ ವಲಯಗಳಲ್ಲಿ ಅತ್ಯಾಚಾರ ಸಂತ್ರಸ್ತೆಯ ಉಡುಪು ಅಥವಾ ಜೀವನ ವಿಧಾನಗಳೇ ಅವಳ ವಿರುದ್ಧ ಅಪರಾಧಕ್ಕೆ ಕಾರಣ ಎಂದು ಅಪರಾಧಿ ಸ್ಥಾನದಲ್ಲಿರಿಸಲಾಗುತ್ತಿದೆ.

ಮಹಿಳೆಯರ ವಿರುದ್ಧ ಲೈಂಗಿಕ ಹಿಂಸಾಚಾರದ ವಿರುದ್ಧ ಹೋರಾಟಗಳನ್ನು ಈ ರೀತಿ ಬಹು ಆಯಾಮಗಳಲ್ಲಿ ನಡೆಸಬೇಕಾಗಿದೆ. ಪುರುಷಪ್ರಾಧಾನ್ಯ ಮತ್ತು ಸ್ರೀದ್ವೇಷದ ವಿರುದ್ಧ, ಮಹಿಳೆಯರನ್ನು ಸರಕಾಗಿ ಬಿಂಬಿಸುವುದರ ವಿರುದ್ಧ ಹೋರಾಟಗಳು, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಹಕ್ಕು ಮತ್ತು ಚಟುವಟಿಕೆಗಳನ್ನು ವಿಸ್ತರಿಸುವ ಸತತ ಹೋರಾಟಗಳನ್ನು ನಡೆಸಬೇಕಾಗಿದೆ.

ತಕ್ಷಣದ ಕಾರ್ಯಭಾರವಂತೂ ಮಹಿಳೆಯರ ವಿರುದ್ಧ ಎಲ್ಲಾ ಅಪರಾಧದ ಪ್ರಕರಣಗಳಲ್ಲಿ ತ್ವರಿತ ವಿಚಾರಣೆ ಮತ್ತು ಶಿಕ್ಷೆಯನ್ನು ಖಾತ್ರಿಪಡಿಸುವುದು ಆಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷಿತತೆಗೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರಕಾರಗಳ ಮೇಲೆ ಒತ್ತಡ ಹೇರುವುದು ಸಹ ತಕ್ಷಣದ ಆದ್ಯತೆಯಾಗಬೇಕು.

(ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Trending